ಗೂಲಿಸ್ತಾನ್ ಕೌಲು

ಗೂಲಿಸ್ತಾನ್ ಕೌಲು ಎನ್ನುವುದು ಈಗಿನ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ, ಕ್ವೆಟ್ಟದ ವಾಯುವ್ಯಕ್ಕೆ, ಅದರಿಂದ 65 ಕಿ.ಮೀ. ದೂರದಲ್ಲಿರುವ ಗೂಲಿಸ್ತಾನ್ ಎಂಬ ಗ್ರಾಮದ ಬಳಿ ರಷ್ಯಾ ಮತ್ತು ಪರ್ಷಿಯಗಳು 1813ರ ಅಕ್ಟೋಬರ್ 12ರಂದು ಮಾಡಿಕೊಂಡ ಒಪ್ಪಂದ.
ಷರತ್ತುಗಳು
[ಬದಲಾಯಿಸಿ]ಸುಮಾರು ಹನ್ನೆರಡು ವರ್ಷಗಳ ಕಾಲ ಸತತವಾಗಿ ಯುದ್ಧ ಮಾಡಿ ಮೊದಮೊದಲು ಒಂದೆರಡು ಕಡೆ ಜಯ ಗಳಿಸಿದರೂ ಆಮೇಲೆ ಸೋಲಿನ ಪರಂಪರೆಯನ್ನೇ ಅನುಭವಿಸಬೇಕಾಗಿ ಬಂದ ಪರ್ಷಿಯ ರಷ್ಯದೊಡನೆ ಈ ಶಾಂತಿಕೌಲನ್ನು ಮಾಡಿಕೊಂಡು ಈ ಷರತ್ತುಗಳಿಗೆ ಒಪ್ಪಿಗೆ ನೀಡಿತು:
- ಡೆರ್ಬೆಂಟ್, ಬಾಕೂ, ಷಿರ್ವಾನ್, ಷಾಕಿ, ಕಾರಾಬಾಗ್ ಮತ್ತು ತಾಲಿಷ್‌ನ ಕೆಲವು ಭಾಗಗಳು - ಇಷ್ಟನ್ನು ರಷ್ಯಕ್ಕೆ ಪರ್ಷಿಯ ವಹಿಸಿಕೊಡಬೇಕು.
- ಜಾರ್ಜಿಯ, ದಾಗೆಸ್ತಾನ್, ಮಿಂಗ್ರೇಲಿಯ, ಇಮರಿಷಿಯ, ಅಬ್ಕೇಷಿಯ ಇವುಗಳ ಮೇಲಿನ ಸಾರ್ವಭೌಮಾಧಿಕಾರವನ್ನು ರಷ್ಯಕ್ಕೆ ಪರ್ಷಿಯ ವರ್ಗಾಯಿಸಿ ಕೊಡಬೇಕು.
- ಕ್ಯಾಸ್ಪಿಯನ್ ಸಮುದ್ರದಲ್ಲಿ ಪರ್ಷಿಯ ತನ್ನ ನೌಕಾಬಲವನ್ನು ಇಡಕೂಡದು.[೧]
- ಇದಕ್ಕೆ ಪ್ರತಿಫಲವಾಗಿ ರಷ್ಯ ಪರ್ಷಿಯದ ದೊರೆ ಫತೆ ಅಲಿ ಷಹನ ಉತ್ತರಾಧಿಕಾರಿ ಅಬ್ಬಾಸ್ ಮಿರ್ಜಾನಿಗೆ ಪರ್ಷಿಯ ದೇಶದ ಗಾದಿಯನ್ನು ದೊರಕಿಸಿಕೊಡಲು ಸಹಾಯ ಮಾಡತಕ್ಕದ್ದು.
ಪರಿಣಾಮಗಳು
[ಬದಲಾಯಿಸಿ]ಮಧ್ಯಪ್ರಾಚ್ಯದಲ್ಲಿ ಪ್ರಬಲ ಶಕ್ತಿಯಾಗಿದ್ದ ಪರ್ಷಿಯದ ರಾಜಕೀಯ ಚಿತ್ರವನ್ನೇ ಈ ಕೌಲು ಬದಲಾಯಿಸಿತು. ಮೇಲುನೋಟಕ್ಕೆ ಪ್ರಬಲವಾಗಿ ಕಂಡರೂ ರಷ್ಯಕ್ಕೆ ನೆಪೋಲಿಯನನ ದಂಡಯಾತ್ರೆಗಳ ಭಯ ತಪ್ಪಿರಲಿಲ್ಲ. ಇದಕ್ಕಾಗಿಯೇ ಅದು ಇಂಗ್ಲೆಂಡಿನೊಡನೆ 1812ರಲ್ಲಿ ಕೌಲೊಂದನ್ನು ಮಾಡಿಕೊಂಡಿತ್ತು.[೨] ದಕ್ಷಿಣದ ಪ್ರಬಲ ರಾಷ್ಟ್ರವಾದ ಪರ್ಷಿಯದೊಡನೆ ಹೇಗಾದರೂ ಶಾಂತಿ ಕೌಲು ಮಾಡಿಕೊಳ್ಳಬೇಕೆಂಬ ಅದರ ಉದ್ದೇಶ ಗೂಲಿಸ್ತಾನ್ ಕೌಲಿನಿಂದ ಫಲಿಸಿತು. ಆಗ ಅದು ತನ್ನ ಗಮನವನ್ನು ಪಶ್ಚಿಮದತ್ತ ಹರಿಸಲು ಅನುಕೂಲವಾಯಿತು. ಮೊದಲೇ ಉತ್ತರಾಧಿಕಾರಕ್ಕಾಗಿ ಅಂತಃಕಲಹದಲ್ಲಿ ತೊಡಗಿದ್ದ ಅಬ್ಬಾಸ್ ಮಿರ್ಜಾ ಮತ್ತು ಸೋದರರು ತಮ್ಮ ರಾಷ್ಟ್ರದ ಹಿತಾಸಕ್ತಿಯನ್ನು ಕಡೆಗಣಿಸಿದರು. ಅಬ್ಬಾಸ್ ಮಿರ್ಜಾ ಪ್ರಬಲವಾಗಿ ರಷ್ಯದೊಡನೆ ಮಾಡಿಕೊಂಡ ಒಪ್ಪಂದ ಪರ್ಷಿಯಕ್ಕೆ ಮಾರಕವಾಯಿತು. ಕಳೆದುಕೊಂಡಿದ್ದ ಭಾಗಗಳನ್ನು ಮತ್ತೆ ಬ್ರಿಟಿಷರ ಸಹಾಯದಿಂದ ಗಳಿಸಿಕೊಳ್ಳುವೆನೆಂಬ ಅವನ ಆಶೆ ಹಗಲುಗನಸಾಯಿತು. ಅಂತೂ ಗೂಲಿಸ್ತಾನ್ ಕೌಲು ಮುಂದೆ ಹತ್ತು ಹನ್ನೆರಡು ವರ್ಷಗಳ ಕಾಲ ಯುದ್ಧವಿಲ್ಲದಂತಾಗಲು ಕಾರಣವಾಯಿತು. 1826ರ ತನಕ ಪರ್ಷಿಯ - ರಷ್ಯಗಳ ಮಧ್ಯೆ ಯುದ್ಧವಾಗದಿದ್ದರೂ 1814ರಲ್ಲಿ ಬ್ರಿಟಿಷರು ಟೆಹರಾನ್ ಕೌಲು ಮಾಡಿಕೊಂಡು ಮತ್ತೆ ಪರ್ಷಿಯದ ಸ್ನೇಹಿತರಾದರು. ಇದರಿಂದ ಪರ್ಷಿಯ ರಷ್ಯದೊಡನೆ ತನ್ನ ರಾಜಕೀಯ ಸಂಬಂಧ ಕಡಿದುಕೊಳ್ಳಬೇಕಾಯಿತು. ಮತ್ತಾವ ಐರೋಪ್ಯ ರಾಷ್ಟ್ರವೂ ಬ್ರಿಟಿಷರ ಅನುಮತಿಯಿಲ್ಲದೆ ಪರ್ಷಿಯವನ್ನು ಪ್ರವೇಶಿಸದಂತಾಯಿತು. ಪೂರ್ವದ ಶತ್ರುವಾದ ಆಫ್ಘಾನಿಸ್ತಾನದೊಡನೆ ಪರ್ಷಿಯ ಆಗಾಗ್ಗೆ ಸಣ್ಣ ಪುಟ್ಟ ಕದನಗಳನ್ನು ಮಾಡುವಲ್ಲಿ ಮಾತ್ರ ತನ್ನ ಗಮನವನ್ನು ಕೇಂದ್ರೀಕರಿಸಿತು.
ಉಲ್ಲೇಖಗಳು
[ಬದಲಾಯಿಸಿ]- ↑ John F. Baddeley, The Russian Conquest of the Caucasus, Longman, Green and Co., London: 1908, p. 90
- ↑ Norie 1827, p. 560.
ಗ್ರಂಥಸೂಚಿ
[ಬದಲಾಯಿಸಿ]- Norie, John William (1827), The naval gazetteer, biographer, and chronologist; containing a history of the late wars, from their commencement in 1793 to their final conclusion in 1815; and continued, as to the biographical part, to the present time, j. w. Noire & Co, p. 560
