ಜುವೈರಿಯ ಬಿಂತ್ ಹಾರಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಮ್ಮುಲ್ ಮೂಮಿನೀನ್

ಜುವೈರಿಯ ಬಿಂತ್ ಹಾರಿಸ್
جويرية بنت الحارث
ವೈಯಕ್ತಿಕ
ಜನನಕ್ರಿ.ಶ. 608
ಮರಣಕ್ರಿ.ಶ. 676
ಧರ್ಮಇಸ್ಲಾಂ ಧರ್ಮ
ಸಂಗಾತಿ
ಹೆತ್ತವರು
  • ಹಾರಿಸ್ ಬಿನ್ ಅಬೂ ದರಾರ್ (father)
ವಂಶಾವಳಿಬನೂ ಮುಸ್ತಲಕ್ ಗೋತ್ರ

ಜುವೈರಿಯ ಬಿಂತ್ ಹಾರಿಸ್ (ಅರಬ್ಬಿ: جويرية بنت الحارث) (ಕ್ರಿ.ಶ 608 – 676) — ಮುಹಮ್ಮದ್ ಪೈಗಂಬರರ ಎಂಟನೇ ಪತ್ನಿ.

ವಂಶಾವಳಿ[ಬದಲಾಯಿಸಿ]

ಜುವೈರಿಯ ಬಿಂತ್ ಹಾರಿಸ್ ಬಿನ್ ಅಬೂ ದರಾರ್ ಬಿನ್ ಹಾರಿಸ್ ಬಿನ್ ಆಯಿದ್ ಬಿನ್ ಮಾಲಿಕ್ ಬಿನ್ ಮುಸ್ತಲಕ್ ಬಿನ್ ಸಅದ್ ಬಿನ್ ಖುಝಾಅ ಬಿನ್ ಆಮಿರ್ ಬಿನ್ ಲುಹೈ ಬಿನ್ ಕಮ್ಅ ಬಿನ್ ಇಲ್ಯಾಸ್ ಬಿನ್ ಮುದರ್ ಬಿನ್ ನಿಝಾರ್ ಬಿನ್ ಮಅದ್ದ್ ಬಿನ್ ಅದ್ನಾನ್.

ಜನನ ಮತ್ತು ಬೆಳವಣಿಗೆ[ಬದಲಾಯಿಸಿ]

ಕ್ರಿ.ಶ. 627 ನೇ ವರ್ಷದಲ್ಲಿ ಅರೇಬಿಯಾದ ಪ್ರಮುಖ ಭಾಗಗಳು ಇಸ್ಲಾಮಿನ ತೆಕ್ಕೆಗೆ ಬಂದವು. ಮದೀನ ಅಭ್ಯುದಯ ಹೊಂದುವ ಒಂದು ಸಾಮ್ರಾಜ್ಯವಾಗಿ ಮಾರ್ಪಟ್ಟಿತು. ಮದೀನಾದ ಸುತ್ತುಮುತ್ತಲಿನಲ್ಲಿ ಅನೇಕ ಗೋತ್ರಗಳು ವಾಸವಾಗಿದ್ದವು. ಅವುಗಳಲ್ಲಿ ಒಂದು ಬನೂ ಖುಝಾಅ ಗೋತ್ರ. ಬನೂ ಮುಸ್ತಲಕ್ ಇದರ ಒಂದು ಉಪಗೋತ್ರ. ಹಾರಿಸ್ ಬಿನ್ ಅಬೂ ದರಾರ್ ಬನೂ ಮುಸ್ತಲಕ್ ಗೋತ್ರದ ಮುಖಂಡರಾಗಿದ್ದರು. ಅವರಿಗೆ ಒಬ್ಬ ಸುಂದರ ಮಗಳಿದ್ದಳು. ಹೆಸರು ಜುವೈರಿಯ.

ಜುವೈರಿಯ ಬನೂ ಮುಸ್ತಲಕ್ ಗೋತ್ರದಲ್ಲಿ ಐಷಾರಾಮಿ ಜೀವನದಲ್ಲಿ ಬೆಳೆದಳು. ಒಬ್ಬ ರಾಜಕುಮಾರಿಗೆ ಇರಬೇಕಾದ ಎಲ್ಲಾ ಸವಲತ್ತುಗಳು ಮತ್ತು ಆಡಂಬರಗಳು ಅವಳಿಗಿದ್ದವು. ಅವಳು ಮಹಾ ಬುದ್ಧಿವಂತೆ ಮತ್ತು ಚಾಣಾಕ್ಷಮತಿ ಕೂಡ. ಭಾಷೆ ಮತ್ತು ಸಾಹಿತ್ಯದ ಎಲ್ಲಾ ಶೈಲಿಗಳನ್ನು ಕರಗತ ಮಾಡಿಕೊಂಡಿದ್ದಳು. ಅವಳು ಅದೇ ಗೋತ್ರದ ಮುಸಾಫಿಅ ಬಿನ್ ಸಫ್ವಾನ್ ಎಂಬವನನ್ನು ವಿವಾಹವಾಗಿದ್ದಳು.

ಬನೂ ಮುಸ್ತಲಕ್ ಯುದ್ಧ[ಬದಲಾಯಿಸಿ]

ಬನೂ ಮುಸ್ತಲಕ್ ಗೋತ್ರದವರು ಮುಸ್ಲಿಮರ ವಿರುದ್ಧ ದಾಳಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂಬ ಸುದ್ದಿ ತಿಳಿದಾಗ ಮುಹಮ್ಮದ್ ತಾವೇ ಮುಂದಾಗಿ ಅವರ ಮೇಲೆ ದಾಳಿ ಮಾಡಲು ನಿರ್ಧರಿಸಿದರು. ಅದಕ್ಕಾಗಿ ಅವರು ಸುಮಾರು ಏಳು ನೂರು ಯೋಧರನ್ನು ಸಜ್ಜುಗೊಳಿಸಿದರು. ಮುಹಮ್ಮದ್ ಸ್ವತಃ ಈ ಯುದ್ಧದಲ್ಲಿ ಪಾಲ್ಗೊಂಡರು. ಮುಸ್ಲಿಮ್ ಸೈನ್ಯವು ಮರೀಸೀಅ ಎಂಬ ಸ್ಥಳವನ್ನು ತಲುಪಿದಾಗ ಅವರು ಬನೂ ಮುಸ್ತಲಕ್ ಗೋತ್ರದವರಿಗೆ ಇಸ್ಲಾಂ ಸ್ವೀಕರಿಸಲು ಆಮಂತ್ರಣ ನೀಡಿದರು. ಆದರೆ ಅವರು ಈ ಆಹ್ವಾನವನ್ನು ಸ್ವೀಕರಿಸದೆ ಮುಸ್ಲಿಮರ ಮೇಲೆ ದಾಳಿ ಮಾಡಿದರು. ಮುಂದೆ ನಡೆದ ಘೋರ ಕದನದಲ್ಲಿ ಮುಸ್ಲಿಮರು ಶತ್ರುಗಳನ್ನು ಎಲ್ಲಾ ಕಡೆಗಳಿಂದ ಸುತ್ತುವರಿದು ಸೋಲಿಸಿದರು. ಈ ಯುದ್ಧದಲ್ಲಿ 10 ಜನರು ಹತರಾಗಿ 700 ಜನರನ್ನು ಸೆರೆ ಹಿಡಿಯಲಾಯಿತು. ಸೆರೆಯಾದವರಲ್ಲಿ ಮಹಿಳೆಯರೂ ಇದ್ದರು. ಜುವೈರಿಯರ ಗಂಡ ಮುಸಾಫಿಅ ಈ ಯುದ್ಧದಲ್ಲಿ ಸತ್ತರು.

ಮುಹಮ್ಮದ್‌ರೊಂದಿಗೆ ವಿವಾಹ[ಬದಲಾಯಿಸಿ]

ಸೆರೆ ಹಿಡಿಯಲಾದ 700 ಖೈದಿಗಳಲ್ಲಿ ಜುವೈರಿಯ ಕೂಡ ಇದ್ದರು. ಖೈದಿಗಳನ್ನು ಜೀಟಿ ಹಾಕಿ ಯೋಧರಿಗೆ ಹಂಚುವುದು ವಾಡಿಕೆಯಾಗಿತ್ತು. ಅವರು ಯೋಧರ ಗುಲಾಮರಾಗುತ್ತಿದ್ದರು. ಗುಲಾಮರಾಗಿ ಬದುಕಲು ಇಷ್ಟವಿಲ್ಲದವರು ಪರಿಹಾರ ನೀಡಿ ವಿಮೋಚನೆ ಪಡೆಯಬಹುದಾಗಿತ್ತು. ಜುವೈರಿಯ ಸಾಬಿತ್ ಬಿನ್ ಕೈಸ್ ಎಂಬ ಯೋಧನ ಗುಲಾಮಳಾದಳು. ಆದರೆ ರಾಜಕುಮಾರಿಯಂತೆ ಬದುಕಿದ್ದ ಜುವೈರಿಯಗೆ ಒಬ್ಬ ಯೋಧನ ಗುಲಾಮಳಾಗಿ ಬದುಕುವುದು ಇಷ್ಟವಿರಲಿಲ್ಲ. ಆಕೆ ಪರಿಹಾರ ನೀಡುವ ಷರತ್ತಿನ ಮೇಲೆ ಆ ಯೋಧನೊಡನೆ ವಿಮೋಚನಾ ಪತ್ರಕ್ಕೆ ಸಹಿ ಹಾಕಿದರು. ಆದರೆ ಪರಿಹಾರ ನೀಡಲು ಆಕೆಯ ಬಳಿ ಏನೂ ಇರಲಿಲ್ಲ.

ಆಕೆ ನೇರವಾಗಿ ಮುಹಮ್ಮದರ ಬಳಿಗೆ ಬಂದು ಹೇಳಿದರು, “ಓ, ಮುಹಮ್ಮದ್‌ರವರೇ! ನಾನು ಜುವೈರಿಯ ಬಿಂತ್ ಹಾರಿಸ್, ಬನೂ ಮುಸ್ತಲಕ್ ಗೋತ್ರದ ಮುಖಂಡನ ಮಗಳು. ನನಗೆ ಕಷ್ಟಕಾಲ ಬಂದಿದೆ. ಅದು ನಿಮಗೂ ಗೊತ್ತು. ನಾನು ವಿಮೋಚನಾ ಪತ್ರಕ್ಕೆ ಸಹಿ ಹಾಕಿದ್ದೇನೆ. ಆದರೆ ಪರಿಹಾರ ನೀಡಲು ನನ್ನ ಬಳಿ ಏನೂ ಇಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ." ಮುಹಮ್ಮದ್‌ರಿಗೆ ಆಕೆಯ ಮೇಲೆ ಕನಿಕರ ಮೂಡಿತು. ರಾಜಕುಮಾರಿಯಂತೆ ಬದುಕಿದ್ದ ಒಬ್ಬ ಆಡಳಿತಗಾರನ ಮಗಳು ಭಿಕ್ಷೆ ಬೇಡುತ್ತಾ ಕೈ ಚಾಚುವುದನ್ನು ಕಂಡು ಅವರಿಗೆ ಮರುಕವುಂಟಾಯಿತು. ಅವರು ಹೇಳಿದರು: "ನಾನು ನಿನಗೆ ಅದಕ್ಕಿಂತ ಉತ್ತಮ ಸಲಹೆ ನೀಡುತ್ತೇನೆ. ನಾನು ನಿನ್ನ ಪರವಾಗಿ ಪರಿಹಾರವನ್ನು ನೀಡಿ ನಿನ್ನನ್ನು ನನ್ನ ಪತ್ನಿಯಾಗಿ ಮಾಡಿಕೊಳ್ಳುತ್ತೇನೆ. ನಿನಗೆ ಒಪ್ಪಿಗೆಯೇ?" ಮದೀನ ಸಾಮ್ರಾಜ್ಯದ ಆಡಳಿತಗಾರ ಮುಹಮ್ಮದ್‌ರನ್ನು ವಿವಾಹವಾಗಲು ಜುವೈರಿಯ ಹಿಂಜರಿಯಲಿಲ್ಲ. ವಿವಾಹವಾಗುವಾಗ ಆಕೆಗೆ ಇಪ್ಪತ್ತರ ಹರೆಯ.

ಜುವೈರಿಯರ ಪ್ರಭಾವ[ಬದಲಾಯಿಸಿ]

ಮುಹಮ್ಮದ್‌ ಜುವೈರಿಯರನ್ನು ವಿವಾಹವಾದ ಸುದ್ದಿ ತಿಳಿದಾಗ ಬನೂ ಮುಸ್ತಲಕ್ ಗೋತ್ರದ ಖೈದಿಗಳನ್ನು ಗುಲಾಮರಾಗಿ ಮಾಡಿಕೊಂಡಿದ್ದ ಮುಸ್ಲಿಂ ಯೋಧರು ಅವರೆಲ್ಲರನ್ನೂ ಯಾವುದೇ ಪರಿಹಾರ ಪಡೆಯದೆ ಬಂಧಮುಕ್ತಗೊಳಿಸಿದರು. ಏಕೆಂದರೆ ಮುಹಮ್ಮದರ ಪತ್ನಿಯ ಸಂಬಂಧಿಕರನ್ನು ಗುಲಾಮರಾಗಿ ಮಾಡಿಕೊಳ್ಳುವುದು ಅವರಿಗೆ ಸರಿಕಾಣಲಿಲ್ಲ. ಜುವೈರಿಯರ ಪ್ರಭಾವದಿಂದ ಬನೂ ಮುಸ್ತಲಕ್ ಗೋತ್ರದ ಸುಮಾರು ಒಂದು ನೂರಕ್ಕಿಂತಲೂ ಹೆಚ್ಚು ಮನೆಗಳ ಖೈದಿಗಳು ಸ್ವತಂತ್ರರಾದರು.

ಮರಣ[ಬದಲಾಯಿಸಿ]

ಕ್ರಿ.ಶ. 676 ರಲ್ಲಿ (ಹಿ.ಶ. 56 ರಬೀಉಲ್ ಅವ್ವಲ್ ತಿಂಗಳಲ್ಲಿ) ಜುವೈರಿಯ ತಮ್ಮ 65ನೇ ವಯಸ್ಸಿನಲ್ಲಿ ಇಹಲೋಕ ವಾಸ ಮುಗಿಸಿದರು. ಅವರನ್ನು ಮದೀನದ ಬಕೀಅ್ ಕಬರಸ್ಥಾನದಲ್ಲಿ ದಫನ ಮಾಡಲಾಯಿತು.