ವಿಷಯಕ್ಕೆ ಹೋಗು

ಸ್ತ್ರೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಂಗನೆ ಇಂದ ಪುನರ್ನಿರ್ದೇಶಿತ)


Woman
Left to right from top:
ಸ್ತ್ರೀಯ ಜೀವನದ ಘಟ್ಟಗಳು - ತೊಟ್ಟಿಲಿನಿಂದ ಗೋರಿಯವರೆಗೆ, ೧೮೪೯

ಸ್ತ್ರೀ ಅಥವಾ ಮಹಿಳೆ ಪದವು ಸಂಸ್ಕೃತದ್ದು, ಕನ್ನಡದಲ್ಲಿ ಈ ಪದಕ್ಕೆ 'ಹೆಣ್ಣು' ಎಂಬ ಅರ್ಥವಿದೆ. ಇದು ನಾಗರಿಕ ಗೌರವದ ಮತ್ತು ಪುರುಷ ಪದದ ಸಮಾನ ಪದವಾಗಿದ್ದು ವಯಸ್ಕ ಹೆಣ್ಣನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀ[]ಯಾಗಿದ್ದಾಳೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹುದಾಗಿದೆ. ಸ್ತ್ರೀ[] ಅವಿನಾಶಿ, ಸಂಜೀವಿನಿ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯ[][] ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ಮಹಿಳೆಯನ್ನು ಹಿಂದಿನಿಂದಲೂ ಅಬಲೆಯೆಂದೇ ಕಡೆಗಣಿಸಲಾಗುತ್ತಿತ್ತು. ಮಾನವರಲ್ಲಿ ಗಂಡು ಅಥವಾ ಹೆಣ್ಣು ಎಂಬ, ನಿಸರ್ಗಬದ್ಧವಾಗಿ ಅಂಗಾಂಗ ವಿನ್ಯಾಸದಲ್ಲಿ ಭಿನ್ನತೆಯ ದೇಹಧಾರಣೆಯಾಗುತ್ತದೆ. ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧರವಾಗುತ್ತದೆ. ಬಾಹ್ಯ ಶರೀರdjdvjegsvhhsc

ರಚನೆ ಹಾಗೂ ಸಂತಾನೋತ್ಪತಿಯ ಕ್ರಿಯೆಗಳಲ್ಲಿ ಹೆಣ್ಣು ಹಾಗು ಗಂಡು ವಿಶೇಷವಾದ ಗುಣಗಳನ್ನು ಹೊಂದಿದ್ದಾರೆ.

ಹೆಣ್ಣು ಕವನ

[ಬದಲಾಯಿಸಿ]

ಕಡ್ಲೆಂಗೋಡು ಶಂಕರಭಟ್ಟರು ತಮ್ಮ "ಹೆಣ್ಣು" ಎಂಬ ಕವನದಲ್ಲಿ ಸ್ತ್ರೀಯನ್ನು ಕುರಿತು ಹೀಗೆ ಹೇಳಿದ್ದಾರೆ.


ಅವಳ ಹೆಸರ ಹೇಳಬೇಡ
ಊರನರಸಿ ದಣಿಯಬೇಡ
ಹೆಣ್ಣೇ ಅವಳ ಹೊತ್ತ ಹೆಸರು
ಹೆಣ್ಣೇ ಅವಳ ಹೆತ್ತ ಬಸಿರು



ಡಾ.ಜಿ.ಎಸ್.ಶಿವರುದ್ರಪ್ಪ ಆವರ ಕವನ ಸ್ತ್ರೀ
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ


---
ಹಸಿರ ಉಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ


---

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳೂ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ


---
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ

ಭಾರತೀಯ ವೃದ್ಧ. ಮಹಿಳೆ ಯಾರು?

.......................?



ವೇದ/ಪುರಾಣ/ಮಹಾಕಾವ್ಯಗಳಲ್ಲಿ

[ಬದಲಾಯಿಸಿ]

ವೇದಗಳ ಕಾಲದಲ್ಲಿದ್ದ ಗಾರ್ಗಿ, ಮೈತ್ರೈಯಿಯರ ಬೌದ್ದಿಕ ಸಾಧನೆ ಸ್ಮರಣಿಯವಾದುದು. ಪುರಾಣ ಕಾಲದ 'ಆದಿಶಕ್ತಿ' ದುಷ್ಟಶಿಕ್ಷಕಿಯಾಗಿ, ಶಿಷ್ಟರಕ್ಷಕಿಯಾಗಿ, ಸರ್ವಶಕ್ತಿಯನ್ನು ಮೆರೆದಿರುವುದನ್ನು ಕಾಣಬಹುದಾಗಿದೆ. ಹಿಂದೂ ಮಹಾಕಾವ್ಯಗಳಾದ ರಾಮಾಯಣ-ಮಹಾಭಾರತ ಕೃತಿಗಳ ರಚನೆಗೆ ಸ್ತ್ರೀ ಕಾರಣೀಭೂತಳಾಗಿದ್ದಾಳೆ. ಹಲವು ಶಾಸ್ತ್ರಗಳಲ್ಲಿ ಈಕೆಯನ್ನು ಜಗಜನನಿಯೆಂದು ಹೇಳಲಾಗುತ್ತದೆ. ಹಾಗಾಗಿ ಹಿರಿಯರು - "ಕಾರ್ಯೇಷು ದಾಸಿ, ಸಲಹೇಷು ಮಂತ್ರಿ, ಭೋಜೇಷು ಮಾತ, ಶಯನೇಷು ರಂಭಾ ನಾರಿ ಕ್ಷಮಯಾಧರಿತ್ರಿ" ಎಂದಿದ್ದಾರೆ. ಮನು ತನ್ನ ಮನುಸ್ಪೃತಿಯಲ್ಲಿ' ಯತ್ರನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ' ಎಂದಿದ್ದಾನೆ. ವೇದಕಾಲದಲ್ಲಿ ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯವಿತ್ತು. ಸ್ತ್ರೀಯರು ಬ್ರಹ್ಮವಾದಿನಿಯರಾಗಿ ಬ್ರಹ್ಮ ಸಭೆಗಳಲ್ಲಿ ಪುರುಷರ ಸಮಾನವಾಗಿ ವಾದ ಮಾಡಬಲ್ಲವರಾಗಿದ್ದರು ಎಂದು ಹೇಳಿ ಅಪಾಲಾ, ಲೋಪಾಮುದ್ರೆ, ಮೈತ್ರೇಯಿ,ಗಾರ್ಗಿ, ಉಭಯಭಾರತಿ ಇತ್ಯಾದಿ ಬೆರಳಣಿಕೆ ಸ್ತ್ರೀಯರನ್ನು ಉದಾಹರಣೆಯಾಗಿ ನೀಡುತ್ತಾರೆ. ಆದರೆ ಇವರ್ಯಾರು ಸಾಮಾನ್ಯ ಮಹಿಳೆಯರು ಆಗಿರಲಿಲ್ಲ. ಇವರೆಲ್ಲ ಉನ್ನತವರ್ಗದ ಉಚ್ಹ ವರ್ಣದ ಋಷಿ ಪತ್ನಿಯರಾಗಿದ್ದರು ಅಷ್ಟಕ್ಕೂ ಅವರಲ್ಲಿ ಗಾರ್ಗಿ ಮೈತ್ರೆಯರು ತಮಗೇಕೆ ಬ್ರಹ್ಮ ವಿದ್ಯೆ ನೀಡುತ್ತಿಲ್ಲವೆಂದು ಋಷಿ ಪತಿಯೊಂದಿಗೆ ವಾದವೇ ಹೂಡಿದ್ದರು. ವೇದಕಾಲದಲ್ಲಿ ಸಾಮಾನ್ಯ ವರ್ಗ, ವರ್ಣದ ಮಹಿಳೆಯರ ಸ್ಥಿತಿಗತಿ ಏನಾಗಿತ್ತು ಎಂಬುವುದಕ್ಕೆ ಮಾಹಿತಿಗಳು ಇಲ್ಲ. ನಮ್ಮ ಪರಂಪರೆಯಲ್ಲಿಯೂ ಸಹ ಮುಖ್ಯ ದೇವತೆಗಳು 'ಸ್ತ್ರೀ' ದೇವತೆಗಳೇ. ಶಕ್ತಿಗೆ ಅದಿದೇವತೆ 'ಪಾರ್ವತಿ' ಧನಕ್ಕೆ ಅದಿದೇವತೆ 'ಲಕ್ಷ್ಮಿ' ಮತ್ತು ವಿದ್ಯೆಗೆ ಅದಿದೇವತೆ 'ಸರಸ್ವತಿ' . ನಮ್ಮ ದೇಶದಲ್ಲಿ ಹರಿಯುವ ಒಂದೇ ಒಂದು ನದಿಯನ್ನು ಹೊರತು ಎಲ್ಲಾ ನದಿಗಳೂ ' ಸ್ತ್ರೀ' ನದಿಗಳೇ. ಗಂಗಾ, ಕಾವೇರಿ, ಕೃಷ್ಣಾ, ನರ್ಮದಾ, ಅಲಕನಂದಾ, ಗೋದಾವರಿ, ತುಂಗಾ, ಭದ್ರಾ ಹೀಗೆ ಎಲ್ಲಾ ನದಿಗಳೂ 'ಸ್ತ್ರೀ'ಗಳೇ! ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಅಭಿಪ್ರಾಯಕ್ಕೆ ಭಾರತೀಯ ಸಂಸ್ಕೃತಿ ಬದ್ದವಾಗಿದೆ.

ಮನುವಿನ ದೃಷ್ಟಿಯಲ್ಲಿ ಮಹಿಳೆ

[ಬದಲಾಯಿಸಿ]

ಮಹಿಳೆಯನ್ನು ಕುರಿತು ಮನು ಹೀಗೆ ನುಡಿದಿದ್ದಾನೆ.-“ಮಾತ್ರಾಸ್ಪಸ್ತ್ರಾ ಮಹಿತ್ರಾವಾದ ವಿವಿಕ್ತಸನೋ ಭವೇತ” ಬಲವಾನಿಂದ್ರಿಯ ಗ್ರಾಮೋವಿದ್ವಾಂಸಮಡಿಕರ್ಷತಿ” (215) ಮನುವಿನ ದ್ರಷ್ಟಿಯಲ್ಲಿ ಮಹಿಳೆ ಶಿಕ್ಷಣವನ್ನು ಕಲಿಯುವುದು ಬೇಡವಾಗಿತ್ತು. ಗುಲಾಮಳಾಗಿಯೇ ಅವಳು ಸಮಾಜದಲ್ಲಿ ಮುಂದುವರಿಯಬೇಕಿತ್ತು. ಅವಳು ಅಕ್ಷರಲೋಕ ಪ್ರವೇಶ ಮಾಡಿದರೆ ಅವಳು ತ್ರತೀಯ ಜಗತ್ತಿನಲ್ಲಿ ನಡೆಯುವ ಸಮಾಚಾರ ತಿಳಿದುಕೊಂಡು. ಮುಂದುವರೆದರೆ ಪುರುಷನ ತೋಳತೆಕ್ಕೆಯಿಂದ ದೂರಹೋಗಿ ಸ್ವಚ್ಛಂದವಾಗಿ ಹಾರಾಡುವುದು ಕಲಿತು ಕೊಂಡು, ಸ್ವಂತ ವಿಚಾರ ಮಾಡುವುದನ್ನು ಕಲಿಯುತ್ತಾಳೆ. ಮತ್ತು ತನ್ನ ವ್ಯಕ್ತಿತ್ವವನ್ನು ತಾನೇ ರೂಪಿಸಿಕೊಂಡು ಸಬಲಳಾಗುತ್ತಾಳೆ. ಈ ಮಹಿಳಾ ಸಬಲೀಕರಣ ಮನುವಿಗೆ ಬೇಡವಾಗಿತ್ತು.

ಸನಾತನ ಹಿಂದೂ ಮಹಿಳೆ

[ಬದಲಾಯಿಸಿ]
  • ಅಹಿಂಸೆ, ತ್ಯಾಗ, ಬಲಿದಾನದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರಲ್ಲಿಯೂ ಸನಾತನ ಹಿಂದೂ ಮಹಿಳೆಯ ಚಿತ್ರವೇ ಉಳಿದುಕೊಂಡಿತ್ತು. ಹನ್ನೆರಡನೆಯ ಶತಮಾನದ ನಂತರ ಸಾಮೂಹಿಕವಾಗಿ ಮಹಿಳೆಯರು ಹೊರಬಂದು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿದುಡಿದಂತೆ ಆಧುನಿಕ ಕಾಲದಲ್ಲಿ ಗಾಂಧೀಜಿಯ ಒತ್ತಾಸೆಯಿಂದಲೇ ಮಹಿಳೆಯರು ಮನೆಯ ಹೊಸಿಲು ದಾಟಿ ಹೊರ ಬಂದು ರಾಷ್ಟ್ರೀಯ ಚಳುವಳಿಯಲ್ಲಿ ತೊಡಗಿಕೊಳ್ಳುವಂತಾಯಿತೆಂಬುದು ಹೆಮ್ಮೆಯ ಸಂಗತಿ. * ಆದರೆ ಗಾಂಧೀಜಿಗೆ ಒಂದು ನಿಶ್ಚಿತವಾದ ಗುರಿಸಾಧನೆಯಲ್ಲಿ ಸ್ತ್ರೀಶಕ್ತಿಯ ಅವಶ್ಯಕತೆ ಕಾಣಿಸಿಕೊಂಡಿರುವುದರಿಂದ ಸ್ತ್ರೀಯರಿಗೆ ಸಾಮಾಜಿಕವಾಗಿ ಹೊರಬರುವಂತೆ ಒತ್ತಾಯಿಸಲಾಯಿತೇ ಹೊರತು ಹೆಣ್ಣಿನ ಉದ್ಧಾರಕ್ಕಾಗಿಯಲ್ಲ. ಅಂತರಿಕವಾಗಿ ಗಾಂಧೀಜಿಯಲ್ಲಿ ಸನಾತನ ಸಂಸ್ಕೃತಿಯ ಚೌಕಟ್ಟಿನೊಳಗಿರುವ ಹೆಣ್ಣಿನ ಬಗ್ಗೆ ಗೌರವಾಧಾರಗಳಿದ್ದವೇ ಹೊರತು ಚೌಕಟ್ಟಿನಾಚೆಗೆ ಬದುಕಲು ಇಚ್ಚಿಸುವ ಮಹಿಳೆಯರ ಕುರಿತ ಹಾಗೆ ಸದಭಿಪ್ರಾಯವಿರಲಿಲ್ಲ.
  • ಗಾಂಧೀಜಿಯ ಸನಾತನ ಮನಸ್ಸು ಹೆಣ್ಣನ್ನು ಗೌರವಿಸುತ್ತದೆ, ಪೂಜಿಸುತ್ತದೆ. ಆದರೆ ಸಮಾನ ನೆಲೆಯಲ್ಲಿ ಬರುವುದನ್ನು, ಇರುವುದನ್ನು ಸಹಿಸಿಕೊಳ್ಳಲಿಲ್ಲ. ವರ್ಣಾಶ್ರಮ ಪದ್ಧತಿಯನ್ನು ಒಪ್ಪಿದ ಗಾಂಧೀಜಿ ಗೃಹಿಣಿಗೆ ಗೃಹದಾಚೆಗೆ ಬದುಕಿಲ್ಲವೆಂದೇ ಭಾವಿಸಿರುವರು. ಹೆಣ್ಣು ಗಂಡಿನ ಸಮಾನತೆಯ ಬಗ್ಗೆ ಗಾಂಧೀಜಿಯಲ್ಲಿ ಗೊಂದಲಗಳಿದ್ದವು. ಸ್ತ್ರೀ ಬದುಕಿಗೆ ಒಳಪಟ್ಟು ಮಾತನಾಡುವಾಗಲೆಲ್ಲ ಗಾಂಧೀಜಿಯ ಗಂಟಲಲ್ಲಿ ಮನು ಕಾಣಿಸಿಕೊಳ್ಳುತ್ತಾನೆ.

ಎರಡು ವರ್ಗವಾಗಿ

[ಬದಲಾಯಿಸಿ]

ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆ[]ಗೆ ಇದೆ ಎಂದಾದರೆ, ಖಂಡಿತವಾಗಿ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ. ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ, ಸನ್ಮಾನ, ಸಾಂತ್ವನ ಗುಣಗಳು ಆಕೆಗೆ ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಿರುತ್ತದೆ.ನಮ್ಮ ದೇಶದಲ್ಲಿ ಕೌಟುಂಬಿಕ ಪದ್ಧತಿ, ಸಂಸ್ಕೃತಿ, ಸಂಸ್ಕಾರಗಳು, ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಾಬ್ದಾರಿ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ನೀತಿ ನಿಯಮಗಳು, ಕಟ್ಟುಪಾಡುಗಳನ್ನು ಹಾಕಲಾಗುತ್ತದೆ. ಮನುಷ್ಯನ ಎಲ್ಲಾ ಚಟುವಟಿಕೆಗಳು ಅಂಗಾಂಗಗಳ ಪರಸ್ಪರ ಕಾರ್ಯಾಚರಣೆಯನ್ನು ಅವಲಂಬಿಸಿದ್ದು ದೇಹ ಮತ್ತು ಮನಸ್ಸಿನ ಹೊಂದಾಣಿಕೆಯನ್ನು ವರ್ತನಾಕ್ರಿಯೆಗಳ ಮೂಲಕ ಸಾಧಿಸುತ್ತದೆ. ಬಹಪಾಲು ವರ್ತನೆಗಳು ದೇಹದೊಳಗಿನ ಮತ್ತು ಹೊರಗಿನ ಪ್ರೇರಣೆಗಳನ್ನು ನೀಗಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತದೆ. ಸ್ವತಂತ್ರ ರೀತಿಯಲ್ಲಿ ಮನೆಯಿಂದ ಹೊರಗೆ ಹೋಗಿ ವ್ಯವಹಾರ ನಡೆಸುವುದು ಪುರುಷ ಪ್ರಧಾನ ಸಮಾಜದಲ್ಲಿ ಅತ್ಯಂತ ಕಷ್ಟವೇ ಆಗಿತ್ತು. ಕೆಲವು ಧರ್ಮಗಳ ಪ್ರಕಾರ ಸ್ತ್ರೀಯರಿಗೆ ಆತ್ಮವಿಲ್ಲ. ಕೆಲವು ಧರ್ಮಗಳಲ್ಲಿ ಸ್ತ್ರೀಯರಿಗೆ ಮೋಕ್ಷವಿಲ್ಲ. ಬೌದ್ಧ ಧರ್ಮದಲ್ಲಿಯೂ ಮೊದಮೊದಲು ಸ್ತ್ರೀಯರಿಗೆ ಅವಕಾಶವಿರಲಿಲ್ಲ ಮಹಿಳೆಯನ್ನು ಮುಖ್ಯವಾಗಿ ಎರಡು ವರ್ಗವಾಗಿ ನೋಡ ಬೇಕಾಗುತ್ತದೆ. ಒಂದು ಗ್ರಾಮೀಣ ಮಹಿಳೆ. ಇನ್ನೊಂದು ನಗರ ಪ್ರದೇಶದ ಮಹಿಳೆ. ಪಾತ್ರ ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಇವರಿಬ್ಬರಲ್ಲಿ ವ್ಯತ್ಯಾಸಗಳಿವೆ. ಶಿಕ್ಷಣದ ಮಟ್ಟ ಮತ್ತು ಕುಟುಂಬದ ಪರಿಸರ, ಅದಕ್ಕೆ ಅನುಸರಿಸಿ ಜೀವನವನ್ನು ನೋಡುವ ಮತ್ತು ಅನುಭವಿಸಲು ಇಚ್ಚಿಸುವ ಮನೋಭಾವದಲ್ಲಿ ಇಬ್ಬರಿಗೂ ವ್ಯತ್ಯಾಸವಿದೆ.

ಸಾಮಾಜಿಕವಾಗಿ

[ಬದಲಾಯಿಸಿ]

ಸ್ತ್ರೀ ಕನಸೂ ಹೌದು, ವಾಸ್ತವವೂ ಹೌದು. ಪ್ರಕೃತಿಗೂ - ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಈಕೆ ಭೂಮಿಯಾಗಿ, ಮುಗಿಲಾಗಿ, ಮೇರುಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀಯನ್ನು ಸಮೃದ್ದಿಯ ಸಂಕೇತವೆಂದು ಪರಿಭಾವಿಸಲಾಗಿದೆ. ಇಡಿ ವಿಶ್ವವೇ ಆರೋಗ್ಯಕರ ಮನೋಭಾವ ಹೊಂದಲು ಸಹಕಾರ ಶಕ್ತಿ ಸ್ತ್ರೀಯಾಗಿದ್ದಾಳೆ. ನಿಸರ್ಗದಲ್ಲಿ ಹಲವು ಬಗೆಯ ವೈವಿಧ್ಯತೆಗಳಿರುವಂತೆ ಸ್ತ್ರೀಯರಲ್ಲೂ ಹಲವು ವಿಧದ ಮಹಿಳೆಯರನ್ನು ಕಾಣಬಹುದು. ಚರಿತ್ರೆಯಲ್ಲಿ ಹಿಂದೆ ಮಾತೃಪ್ರಧಾನ ಕುಟುಂಬಗಳಿದ್ದುದನ್ನು ನಾವು ಸ್ಮರಿಸಬಹುದಾಗಿದೆ. ವಚನಕಾರರು ಹೆಣ್ಣನ್ನು 'ಮಾಯೆ'ಯೆಂದು ಕರೆದಿದ್ದಾರೆ.

ಹೆಣ್ಣು ಮಾಯೆ, ಹೊನ್ನು ಮಾಯೆ, ಮಣ್ಣು ಮಾಯೆ
ಹೆಣ್ಣು ಮಾಯೆಯಲ್ಲ
ಹೊನ್ನು ಮಾಯೆಯಲ್ಲ
ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆ ಮಾಯ ಕಾಣಾ- ಅಲ್ಲಮ ಪ್ರಭು

ಮಹಿಳೆಯ ಶಾರೀರಿಕ ರಚನೆ

[ಬದಲಾಯಿಸಿ]

ಗಂಡಸಿಗೆ ಹೊಲಿಸಿದಾಗ ಹೆಣ್ಣಿನ ದೇಹವನ್ನು ನ್ಯೂನತೆಯ ಗೂಡನ್ನಾಗಿ ಕಲ್ಪಿಸಲಾಗುತ್ತದೆ.[] ಭೌತಿಕ ವಸ್ತುಗಳನ್ನು ಬಳಸಿ ತಮ್ಮ ದೇಹವನ್ನು ಕೆಲಸಕಾರ್ಯಗಳಲ್ಲಿ ತೊಡಗಿಸುವಾಗ ಹುಡುಗಿಯರಲ್ಲಿ ಅಳುಕು ಮನೋಭಾವ, ಹಿಂಜರಿಯುವಿಕೆ ಹಾಗೂ ಹಿಂದು ಮುಂದು ನೋಡುವ ಡೋಲಾಯಮಾನ ಸ್ಥಿತಿ ಕಾಣಿಸಿಕೊಂಡು, ಸಂಕಲ್ಪ ಶಕ್ತಿ ಕಡಿಮೆಯಿದೆ ಎಂದು ಭಾವಿಸುತ್ತಾರೆ. ಮಾಡಬೇಕಾದ ಕೆಲಸವನ್ನು ಮಾಡಿ ಪೂರೈಸುವ ಸಾಧನವೆಂದು ದೇಹವನ್ನು ಕಲ್ಪಿಸುವ ಬದಲಾಗಿ, ಹೆಣ್ಣುಗಳು ತಮ್ಮ ಶರೀರವನ್ನು ಒಂದು ತೊಡರು, ಕೋಟಲೆ ಎಂದು ಕಲ್ಪಿಸುವುದುಂಟು. ಮಾದರಿ ಹೆಣ್ಣನ್ನು ಉಪಭೋಗಿ ನೆಲೆಯಲ್ಲಿ ಗ್ರಹಿಸುವುದು. ಅವಳ ದೇಹ, ಆ ದೇಹದ ಸೌಂದರ್ಯ, ಅದರ ಧಾರಣ ಶಕ್ತಿ, ಅದರ ಪ್ರಾಯೋಗಿಕ ಉಪಯುಕ್ತತೆ ಈ ಎಲ್ಲವನ್ನೂ ಪಿತೃಪ್ರಧಾನ ವ್ಯವಸ್ಥೆ, ತನ್ನ ಅಪೇಕ್ಷೆ ಮತ್ತು ಅನುಕೂಲಕ್ಕೆ ತಕ್ಕಂತೆ ನಿರ್ವಚನಗಳನ್ನು ಕಟ್ಟಿಕೊಂಡಿದೆ.

ಮಹಿಳಾ ಶೋಷಣೆ

[ಬದಲಾಯಿಸಿ]
  • ಜಾಗತೀಕರಣದಿಂದ ಮಹಿಳೆ ಅನೇಕ ಪ್ರಯೋಜನ ಪಡೆದಿದ್ದರೂ, ಶೋಷಣೆ[]ಯಿಂದ ಮುಕ್ತವಾಗಿಲ್ಲ. 2011 ರ ಅಂಕಿಅಂಶಗಳ ಪ್ರಕಾರ ನಮ್ಮ ದೇಶದಲ್ಲಿ 6 ವರ್ಷದೊಳಗಿನ 1000 ಗಂಡು ಮಕ್ಕಳಿಗೆ 914 ಹೆಣ್ಣುಮಕ್ಕಳಿದ್ದಾರೆ.
  • ಹುಟ್ಟಿದ 12 ಮಿಲಿಯನ್ ಹೆಣ್ಣು ಮಕ್ಕಳಲ್ಲಿ, 3 ಮಿಲಿಯನ್ ಮಕ್ಕಳು ತಮ್ಮ 15 ನೆಯ ಹುಟ್ಟು ಹಬ್ಬವನ್ನು ಕಾಣುವುದಿಲ್ಲ. 1 ಮಿಲಿಯನ್ ಹೆಣ್ಣು ಮಕ್ಕಳು ಹುಟ್ಟಿದ ಮೊದಲ ವರ್ಷದೊಳಗೇ ಕಾಣೆಯಾಗುತ್ತಾರೆ. ಪ್ರತಿ 6 ನೇ ಹೆಣ್ಣು ತಾನು ಹೆಣ್ಣೆಂಬ ಕಾರಣಕ್ಕೆ ಕೊಲ್ಲಲ್ಪಡುತ್ತಾಳೆ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹೆಣ್ಣಿಗೆ ಈಗಲೂ ರಕ್ಷಣೆಯಿಲ್ಲ.
  • ಹೆಣ್ಣಿನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ಬರಬೇಕಾದರೆ, ಅವಳಿಗೆ ಬಾಲ್ಯದಿಂದಲೇ ತನ್ನ ಅಧಿಕಾರ, ಹಕ್ಕುಗಳ ಅರಿವಿರ ಬೇಕಾಗುತ್ತದೆ. ಈ ಅರಿವು ಮೂಡಿಸುವ ಜವಾಬ್ದಾರಿ ಪೋಷಕರದ್ದು. ಮಾನವ ಸಂಪನ್ಮೂಲದಲ್ಲಿ ಸುಮಾರು ಅರ್ಧ ಪಾಲು ಹೆಣ್ಣುಗಳದ್ದು.
  • ಆದರೆ, ಶಾಲಾ ಕಲಿಕೆಯಲ್ಲಿ ಅವಕಾಶ ವಂಚಿತಳಾಗಿರುವುದರಿಂದ ಅವಳ ಸಾಮಾಜಿಕ ಬೆಳವಣಿಗೆಯ ಗತಿಯೂ ಕುಂದಿದೆ. ಹೆಣ್ಣೊಬ್ಬಳು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿ ಕೊಳ್ಳಬೇಕಾದರೆ ಅವಳು ಶಿಕ್ಷಿತಳಾಗಬೇಕು. ಹೆಣ್ಣು ಮಕ್ಕಳೆಲ್ಲ ಶಿಕ್ಷಿತರಾದಾಗ ಮಾತ್ರ, ಸಂವಿಧಾನದ ಕಲ್ಪನೆಯ ಭಾರತವನ್ನು ನಾವು ತಲುಪಲು ಸಾಧ್ಯ.
  • ಅಪರಿಚಿತ ಯುವತಿಯರು, ಬಡ ಕುಟುಂಬಕ್ಕೆ ಸೇರಿದವರು ಅತ್ಯಾಚಾರಕ್ಕೀಡಾಗಿ, ಕೊಲೆಯಾದ ಬಹುತೇಕ ಪ್ರಕರಣಗಳಲ್ಲಿ, ಹೆಚ್ಚಾಗಿ ಇಂಥ ಪ್ರಕರಣಗಳನ್ನು ‘ಅಸಹಜ ಮರಣ’ ಎಂದು ಪ್ರಕರಣ ದಾಖಲಿಸಿ ಕೈತೊಳೆದುಕೊಳ್ಳುವ ಪೊಲೀಸ್ ಅಧಿಕಾರಿಗಳೇ ಅಧಿಕ. ಕೆಲವೊಮ್ಮೆ ‘ಕೊಲೆ’ ಎಂದು ಕೇಸು ದಾಖಲಿಸಲ್ಪಡುತ್ತದೆ.
  • ಹೆಣ್ಮಕ್ಕಳು ನಿಗೂಢವಾಗಿ ಕಾಣೆಯಾದಾಗ, ಅಪಹರಣಕ್ಕೀಡಾದಾಗ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿ ಹುಡುಕಾಡುವ ಕೆಲಸ ಮಾಡಬೇಕಾದ ಪೊಲೀಸ್ ಅಧಿಕಾರಿಗಳು, ‘ಅವಳು ಯಾರೊಂದಿಗಾದರು ಹೋಗಿರಬಹುದು, ಹೋಗಿ ಎರಡು ದಿನ ಹುಡುಕಿ. ಸಿಗದಿದ್ದರೆ ಆಮೇಲೆ ಬನ್ನಿ, ನೋಡೋಣ’ ಎಂದು ಮನೆಯವರನ್ನು ಸಾಗಹಾಕುವ ಪ್ರಕರಣಗಳಿವೆ.

ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ

[ಬದಲಾಯಿಸಿ]
  • ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ[]ದ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯ[] ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವುದು ವಿಷಾದನೀಯ. ಶೇ 10ರಷ್ಟು ಅತ್ಯಾಚಾರ ಪ್ರಕರಣಗಳು 14ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ, ಶೇ 16ರಷ್ಟು ಪ್ರಕರಣಗಳು 16ರಿಂದ 18 ವಯಸ್ಸಿನ ಬಾಲಕಿಯರ ಮೇಲೆ ಮತ್ತು ಶೇ 57ರಷ್ಟು ಪ್ರಕರಣಗಳು 18ರಿಂದ 30 ವಯಸ್ಸಿನವರ ಮೇಲೆ ನಡೆದಿರುತ್ತದೆ.
  • ಯೂನಿಸೆಫ್ ಸಮೀಕ್ಷೆಯ ಪ್ರಕಾರ, 19ರ ವಯಸ್ಸಿನ ಶೇ 57ರಷ್ಟು ಯುವಕರು ಮತ್ತು ಶೇ 55ರಷ್ಟು ಮಹಿಳೆಯರು ಹೆಂಡತಿಗೆ ಗಂಡ ಹೊಡೆಯುವುದು ಸ್ವಾಭಾವಿಕ ಎನ್ನುತ್ತಾರೆ. ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿ ಜಿಲ್ಲೆಯಾದ್ಯಂತ ಸಾಕಷ್ಟು ಅತ್ಯಾಚಾರ, ಮಹಿಳೆಯರ ಶೋಷಣೆ, ದೌರ್ಜನ್ಯ, ನಾಪತ್ತೆ, ವರದಕ್ಷಿಣೆ ಪ್ರಕರಣಗಳು ದಾಖಲಾಗಿವೆ. ಆದರೆ, ಬೆರಳೆಣಿಕೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ.
  • ಇತ್ತೀಚೆಗೆ ರಾಷ್ಟ್ರೀಯ ಅಪರಾಧಿ ದಾಖಲೆಗಳ ಸಂಸ್ಥೆ [ಎನ್.ಸಿ.ಆರ್.ಬಿ.] 2012 ರಲ್ಲಿ ನಮ್ಮ ದೇಶದಲ್ಲಿ ಮಹಿಳೆಯ ಮೇಲೆ ಜರುಗಿದ ದೌರ್ಜನ್ಯಗಳ ಬಗ್ಗೆ ಅಂಕಿ ಅಂಶಗಳನ್ನು ಹೊರಹಾಕಿತು. 2012 ರಲ್ಲಿ ಮಹಿಳೆಯ ಮೇಲೆ ಜರುಗಿದ ಒಟ್ಟು ದೌರ್ಜನ್ಯಗಳ ಪ್ರಮಾಣ 2,44,270 ರಷ್ಟಿದೆ. ಆದರೆ 2011 ರ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ಪ್ರಮಾಣದಲ್ಲಿ ಸುಮಾರು 15620 ಪ್ರಕರಣಗಳು ಹೆಚ್ಚಾಗಿವೆ.
  • ಇನ್ನು ಈ ಬಗೆಯ ದೌರ್ಜನ್ಯಗಳಲ್ಲಿ ಮೊಟ್ಟ ಮೊದಲ ಸ್ಥಾನ ಪಶ್ಚಿಮ ಬಂಗಾಲದ್ದಾಗಿದ್ದರೆ [30942] ಎರಡು ಹಾಗೂ ಮೂರನೇಯ ಸ್ಥಾನದಲ್ಲಿ ಆಂದ್ರಪ್ರದೇಶ ಮತ್ತು ಉತ್ತರ ಪ್ರದೇಶಗಳಿವೆ. ಇನ್ನು 53 ಪ್ರಮುಖ ನಗರಗಳನ್ನಿಟ್ಟುಕೊಂಡು ಮಾತನಾಡುವುದಾದರೆ ದೆಹಲಿ ಮೊದಲ ಸ್ಥಾನದಲ್ಲಿದ್ದರೆ ಬೆಂಗಳೂರು ಎರಡನೆಯ ಸ್ಥಾನದಲ್ಲಿದೆ.
  • ದೆಹಲಿಯಲ್ಲಿ ಕಳೆದ ವರ್ಷ 5194 ಮಹಿಳಾ ದೌರ್ಜನ್ಯ[]ದ ಪ್ರಕರಣಗಳು ದಾಖಲಾಗಿದ್ದರೆ ಬೆಂಗಳೂರಲ್ಲಿ 2263 ರಷ್ಟು ಪ್ರಕರಣಗಳು ಬಯಲಾಗಿವೆ. ಬಲತ್ಕಾರದ ಪ್ರಕರಣಗಳಂತೂ ಬೆಚ್ಚಿ ಬೀಳಿಸುವಂತೆ ಎಲ್ಲ ವಯೋಮಾನದ ಮಹಿಳಾ ಸಮೂಹವನ್ನು ಬಾಧಿಸುತ್ತಿದೆ. ಕಳೆದ ವರ್ಷ ಸುಮಾರು 24923 ರಷ್ಟು ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ.

ಮಹಿಳಾ ಹಕ್ಕುಗಳು

[ಬದಲಾಯಿಸಿ]
  • ೨೧ನೇ ಶತಮಾನದಲ್ಲಿ ಮೂಲಭೂತ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಅಭಿವ್ಯಕ್ತಿಯ ಹಕ್ಕು, ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು ಈ ಎಲ್ಲವು ಆಕೆಗೆ ತಿಳಿದಿವೆ. ಸಂವಿಧಾನದಲ್ಲಿ ಮಹಿಳೆಗೆ ಮೀಸಲಾತಿಯೂ ದೊರೆತಿದೆ. ಎಲ್ಲಾ ಮಹಿಳೆಯರಿಗೂ ತಮ್ಮ ಹಕ್ಕುಗಳ ಬಗೆಗಿನ ಅರಿವು ಅತೀ ಅಗತ್ಯ. ಅಂತಹ ಅರಿವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತದೆ.
  • ಸಂವಿಧಾನದಲ್ಲೂ ವಿಧೇಯಕ ಮಂಡನೆಗಳು ತಿದ್ದುಪಡಿಯಾಗಿ ಶೇಕಡಾ ೨೨% ರಿಯಾಯಿತಿಯನ್ನು ನೀಡುವ ಕಾನೂನು ಜಾರಿಗೆ ಬಂದಾಗಿದೆ. ನಾಗರಿಕ ಸಮಾಜದಲ್ಲಿ ಮಹತ್ತರ ಬದಲಾವಣೆ ನಡೆಯುತ್ತಿದ್ದರೂ ಹೆಣ್ಣುಮಕ್ಕಳ ಶೋಷಣೆ ತಪ್ಪಿಸಲಾಗಿಲ್ಲ. ಬಲವಾದ ಕಾನೂನುಗಳ ನೆರವಿದ್ದರೂ ಪ್ರಸ್ತುತ ಮಹಿಳೆಯರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ನೋಡುವ ಪ್ರವೃತ್ತಿ ಬದಲಾಗಿಲ್ಲ.
  • ಈ ಹಿನ್ನೆಲೆಯಲ್ಲಿ ಮಹಿಳಾ ಹಕ್ಕುಗಳು ಮತ್ತು ಅಧಿಕಾರಗಳ ರಕ್ಷಣೆಯನ್ನು ಮಾಡುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ದತ್ತವಾಗಬೇಕಿರುವ ಹಕ್ಕು ಅಧಿಕಾರಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ವಿಶ್ವಸಂಸ್ಥೆಯ ಇತ್ತೀಚಿನ ಸಮೀಕ್ಷಾ ವರದಿಯೊಂದರ ಪ್ರಕಾರ, ಭಾರತದಲ್ಲಿ ಚುನಾವಣೆ ಎದುರಿಸುವ ಶೇ 49ರಷ್ಟು ಮಹಿಳಾ ಅಭ್ಯರ್ಥಿಗಳು ಒಂದಲ್ಲ ಒಂದು ವಿಧದಲ್ಲಿ ಬೈಗುಳ, ನಿಂದನೆಗಳನ್ನು ಎದುರಿಸಿದ್ದಾರೆ.
  • ಮಹಿಳೆಯನ್ನು ಲೈಂಗಿಕವಾಗಿ ಅಪೇಕ್ಷಿಸುವುದು ಅಥವಾ ಆಕೆಗೆ ಸಾರ್ವಜನಿಕ ಬೆಂಬಲವನ್ನು ಕಡಿಮೆಮಾಡುವ ಉದ್ದೇಶದಿಂದ ಆಕೆಯ ಚಾರಿತ್ರ್ಯ ಹರಣ ಮಾಡುವಂತಹ ಪ್ರಯತ್ನಗಳು ರಾಜಕೀಯದಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿವೆ. ಇವು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿನ ರಾಜಕೀಯದಲ್ಲಿ ಮಹಿಳೆ ವಿರುದ್ಧ ನಡೆಯುವ ಹಿಂಸೆಯ ಸ್ವರೂಪಗಳಲ್ಲಿ ಕೆಲವು ಎಂದು ಈ ಸಮೀಕ್ಷೆ ಹೇಳಿದೆ.
  • ಸ್ತ್ರೀ ಶಿಕ್ಷಣ, ಸ್ತ್ರೀ ಉದ್ಯೋಗ, ಮಹಿಳಾ ಸಂಘಟನೆ, ಮಹಿಳಾ ಕಾನೂನುಗಳು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿವೆ. 1888ರಲ್ಲಿ ಮೈಸೂರಿನಿಂದ ಹೊರಡುತ್ತಿದ್ದ ‘ಕರ್ನಾಟಕ ವಾಣಿ ವಿಲಾಸ ಪತ್ರಿಕೆ’ಯನ್ನು ಮಹಿಳಾ ಪತ್ರಿಕೆಯಾಗಿ ಗುರುತಿಸಲಾಗಿದೆ. ಅಲ್ಲಿಂದ ಮುಂದಕ್ಕೆ ಮಹಿಳೆಯರನ್ನು ಪತ್ರಿಕೆಯ ಓದುಗರಾಗಿ ಹಾಗೂ ಬರಹಗಾರರಾಗಿ ಗುರುತಿಸಿಕೊಂಡ ಕನ್ನಡ ಪತ್ರಿಕೋದ್ಯಮವು ಮಹಿಳಾ ಪತ್ರಿಕೋದ್ಯಮಕ್ಕೆ ಸಾಕಷ್ಟು ಅವಕಾಶ ಕಲ್ಪಿಸಿತು.
  • ತಮ್ಮ ಪತ್ರಿಕೆಗಳೇ ಮಹಿಳಾ ವಿಷಯಗಳ ಕುರಿತ ಬರಹಗಳಿಗೆ ವಿಶೇಷ ಸ್ಥಾನವನ್ನು ಕಲ್ಪಿಸುತ್ತ, ಮಹಿಳಾ ಅಂಕಣಗಳನ್ನು ಆರಂಭಿಸಿತು. ಅವುಗಳ ನಿರ್ವಹಣಾ ಜವಾಬ್ದಾರಿಯನ್ನು ಮಹಿಳೆಯರಿಗೇ ನೀಡಿತು. ಪರಿಣಾಮವಾಗಿ ತಿರುಮಲಾಂಬ, ಕಲ್ಯಾಣಮ್ಮ, ಶ್ಯಾಮಲಾದೇವಿ, ಜಯಲಕ್ಷ್ಮಮ್ಮ, ಸರಸ್ವತಿ ಬಾಯಿ ರಾಜವಾಡೆ ಮುಂತಾದವರು ಪತ್ರಿಕಾ ಸಂಪಾದಕರಾಗಿ, ಅಂಕಣಕಾರರಾಗಿ ಮುಂಚೂಣಿಗೆ ಬಂದರು.

ಮಹಿಳಾ ಜಾಗೃತಿ

[ಬದಲಾಯಿಸಿ]
  • ಕೆಲವು ವರ್ಷಗಳ ಹಿಂದೆ ಮಣಿಪುರದಲ್ಲಿ ಅಲ್ಲಿನ ಮಹಿಳೆಯರು ‘ಬನ್ನಿ, ನಮ್ಮನ್ನು ಅತ್ಯಾಚಾರ ಮಾಡಿ. ನಿಮ್ಮ ಗುರಿ ಈಡೇರಿಸಿಕೊಳ್ಳಿ’ ಎಂಬ ಘೋಷಣೆಯೊಂದಿಗೆ ತಮ್ಮ ರಾಜ್ಯದಲ್ಲಿ ಬೀಡುಬಿಟ್ಟ ತಮ್ಮದೇ ದೇಶದ ಸೈನಿಕರ ವಿರುದ್ಧ ಸೈನಿಕ ಪಡೆಯ ಕಚೇರಿಯ ಮುಂದುಗಡೆಯೇ ಬೆತ್ತಲಾಗುವ ಮೂಲಕವೇ ಪ್ರತಿಭಟನೆ ನಡೆಸಿದ್ದರು.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯನ್ನು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಗೆ ಬೇಕಾಗಿದ್ದ ಉತ್ತೇಜನ ಮತ್ತು ಶೀಘ್ರಗತಿ ನೀಡಲು, 1985 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಅಂಗವಾಗಿ ಸ್ಥಾಪಿಸಲಾಯಿತು. ಇದರ ಮುಖ್ಯ ಉದ್ದೇಶ ಮಹಿಳೆಯರ ಮಕ್ಕಳ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರಯತ್ನಗಳಿಗೆ ಮಾರ್ಗದರ್ಶನ ಹಾಗೂ ಸಂಯೋಜನೆಯನ್ನು ನೀಡುವುದು.
  • ಈ ಕ್ಷೇತ್ರದಲ್ಲಿ ಮುಖ್ಯ ಪಾತ್ರ ವಹಿಸುವುದಲ್ಲದೇ, ಸಚಿವಾಲಯವೂ ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ಕೆಲವು ನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಕಲ್ಯಾಣ ಹಾಗೂ ಲಿಂಗತ್ವ ಸೂಕ್ಷ್ಮತೆಯನ್ನು ಮೂಡಿಸುವ ಅಂಶಗಳನ್ನು ಈ ಕಾರ್ಯಕ್ರಮ ಒಳಗೊಂಡಿದೆ. ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಶಕ್ತರಾಗಿ ರಾಷ್ಟ್ರೀಯ ಅಭಿವೃದ್ದಿಯಲ್ಲಿ ಪುರುಷರೊಂದಿಗೆ ಸಮಾನ ಪಾಳುದಾರರನ್ನಾಗಿಸುವುದೇ ಈ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ.
  • ರಾಷ್ಟ್ರೀಯ ಮಹಿಳಾ ಆಯೋಗ ( ಎನ್. ಸಿ. ಡಬ್ಲ್ಯೂ), . ರಾಷ್ಟ್ರೀಯ ಮಹಿಳಾ ಕೋಶ (ಆರ್.ಎಂ.ಕೆ), ಕೌಟುಂಬಿಕ ಕಲ್ಯಾಣ ಈ ಸಂಸ್ಥೆಗಳು ಅನುದಾನವನ್ನು ಸಂಪೂರ್ಣವಾಗಿ ಭಾರತದ ಕೇಂದ್ರ ಸರ್ಕಾರದಿಂದ ಪಡೆಯುತ್ತಿದ್ದು, ಇಲಾಖೆಗೆ ತನ್ನ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಸಹಕಾರ ನೀಡುತ್ತವೆ. ಅಲ್ಲದೆ ಇಲಾಖೆಯ ಕೆಲವೊಂದು ಕಾರ್ಯಕ್ರಮಗಳನ್ನು/ಯೋಜನೆಗಳನ್ನು ಅನುಷ್ಠಾನ ಮಾಡುಕೊಳ್ಳುವಲ್ಲಿ ಕೂಡ ಸಹಕರಿಸುತ್ತವೆ. ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸಲು 1992 ರಲ್ಲಿ ಉನ್ನತ ಮಟ್ಟದ ಕಾಯ್ದೆಬದ್ಧ ಅಂಗವಾಗಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ಸ್ಥಾಪಿಸಲಾಯಿತು.

ಮಹಿಳಾ ದಿನಾಚರಣೆ

[ಬದಲಾಯಿಸಿ]

[೧೦]

  • ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ[೧೧] ಪ್ರತಿ ವರ್ಷ ಮಾರ್ಚ್ ೮ ರಂದು ಆಚರಿಸಲ್ಪಡುತ್ತದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಬಂಡವಾಳಶಾಹಿ ಶೋಷಣೆಯ ವಿರುದ್ಧ ಮಹಿಳಾ ವಿಮೋಚನೆಗಾಗಿ ನಡೆದ ಸಮಾಜವಾದಿ ಹೋರಾಟದ ಪರಂಪರೆ ಎನ್ನುವುದನ್ನು ಮರೆಯಬಾರದು.
  • ನೂರ ಮೂರು ವರ್ಷಗಳ ಹಿಂದೆ 1910ರ ಆಗಸ್ಟ್ 27ರಂದು ಕ್ರಾಂತಿಕಾರಿ ನಾಯಕರಾದ ಕ್ಲಾರಾ ಜೆಟ್ಕಿನ್ ಅವರ ಸಂಗಾತಿಗಳಾದ ಅಲೆಕ್ಸಾಂಡ್ರಿಯಾ ಕೊಲಾಂಥೈ ಮತ್ತು ಇತರರೊಂದಿಗೆ ಕೊಪನ್ಹೇಗನ್ನಲ್ಲಿ ಸಂಘಟಿಸಿದ್ದ ಅಂತಾರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನದಲ್ಲಿ `ಅಂತಾರಾಷ್ಟ್ರೀಯ ಮಹಿಳಾ ದಿನ’ ಆಚರಿಸುವ ಕುರಿತ ನಿರ್ಣಯ ಮಂಡಿಸಿದರು. ಆ ನಂತರ ಅಮೆರಿಕದಲ್ಲಿ ಸಮಾಜವಾದಿ ಮಹಿಳೆಯರು ಅದಾಗಲೆ 1908ರಲ್ಲಿ ರಾಷ್ಟ್ರೀಯ ಮಹಿಳಾ ದಿನವನ್ನು ಮೊಟ್ಟ ಮೊದಲು ಆಚರಿಸಿದರು.
  • ಭಾರತದಲ್ಲಿ ಮೊದಲ ಬಾರಿಗೆ 1931ರಲ್ಲಿ ಲಾಹೋರ್ನಲ್ಲಿ ಸಂಘಟಿಸಿದ್ದ `ಸಮಾನತೆಗಾಗಿ ಏಷ್ಯಾದ ಮಹಿಳಾ’ ಸಮಾವೇಶದಲ್ಲಿ ಈ ದಿನಾಚರಣೆ ಆಚರಿಸಲಾಯಿತು. ಮಹಿಳೆಯರಿಗೆ ಸಮಾನತೆ ನೀಡ ಬೇಕೆಂಬುದರ ಜೊತೆಗೆ ಮಹಿಳೆಯರ ಸಮಾನತೆಯನ್ನು ದೇಶಗಳ ಸ್ವಾತಂತ್ರ್ಯಗಳೊಂದಿಗೂ ಜೊತೆಗೂಡಿಸಲಾಯಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಬಂಡವಾಳಶಾಹಿ, ಪುರುಷ ಪ್ರಧಾನ ಸಮಾಜದ ಸಂಕೋಲೆಗಳ ವಿರುದ್ಧ ಮತ್ತು ಮಹಿಳಾ ಉನ್ನತೀಕರಣದ ಸಂಕೇತವಾಗಿದೆ.
  • ಭಾರತದಲ್ಲಿ ಇತ್ತೀಚಿಗೆ ಮಹಿಳೆ[೧೨]ಯರು ವಾಸಿಸಲು ಅಪಾಯಕಾರಿ ವಾತಾವರಣ ನಿರ್ಮಾಣವಾಗುತ್ತಿರುವ ಕಾರಣ ಹೆಚ್ಚು ಗಮನಾರ್ಹವಾದ ವಿಷಯವಾಗಿದೆ. ಈ ಆಘಾತಕಾರಿ ವಿಷಯ ೨೦೧೧ರಲ್ಲಿ ಥಾಮ್ಸನ್ ರಾಯಿಟರ್ಸ್ ಪೌಂಡೇಶನ್ ಒಂದು ಸಮೀಕ್ಷೆಯನ್ನು ಮಾಡಿ ಮಹಿಳೆಯರಿಗೆ ಸುರಕ್ಷಿತವಲ್ಲದ ಸ್ಥಳಗಳಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ ಎಂಬ ಆಘಾತಕಾರಿ ವಾಸ್ತವವನ್ನು ತೆರೆದಿಟ್ಟಿದೆ.

ಮಹಿಳಾ ಮೀಸಲಾತಿ

[ಬದಲಾಯಿಸಿ]
  • 1954ರಲ್ಲಿ `ಜೀವನದ ಎಲ್ಲಾ ವಲಯಗಳಲ್ಲೂ ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳ‘ ಮೇಲೆ ಗಮನ ಕೇಂದ್ರೀಕರಿಸುವ ಗುರಿಯೊಂದಿಗೆ ಭಾರತೀಯ ಮಹಿಳಾ ಒಕ್ಕೂಟ (ಎನ್ಎಫ್ಐಡಬ್ಲ್ಯು) ಸ್ಥಾಪನೆಗೊಂಡಿತು. ಮಹಿಳಾ ಸಮಾನತೆಯ ಪ್ರಶ್ನೆ ಭಾರತದ ಸ್ವಾತಂತ್ರ್ಯಕ್ಕಾಗಿ ಧೀರ ಹೋರಾಟಗಳ ಆರಂಭದೊಂದಿಗೇ ಬೆಸೆದುಕೊಂಡಿರುವ ಪ್ರಶ್ನೆ. ಹೋರಾಟದ ಹಿನ್ನೆಲೆ1975ನ್ನು ವಿಶ್ವಸಂಸ್ಥೆ ಅಂತರ್ರಾಷ್ಟ್ರೀಯ ಮಹಿಳಾ ವರ್ಷ ಎಂದು ಘೋಷಿಸಿತು.
  • ಅದಕ್ಕೆ ಸಿದ್ಧತೆಯಾಗಿ ಎಲ್ಲಾ ಸದಸ್ಯ ದೇಶಗಳೂ ಮಹಿಳೆಯರ ಸ್ಥಾನಮಾನ ಕುರಿತಂತೆ ಒಂದು ವರದಿ ತಯಾರಿಸಬೇಕು, ಅದನ್ನು ಆ ವರ್ಷ ಬಿಡುಗಡೆ ಮಾಡಬೇಕು ಎಂದು ಹೇಳಲಾಯಿತು. ಇದರೊಂದಿಗೇ ಭಾರತದೊಳಗೂ ಮಹಿಳೆಯರ ಹಕ್ಕುಗಳನ್ನು ಉತ್ತಮ ಪಡಿಸಬೇಕು ಮತ್ತು ಸಮಾನತೆಗಾಗಿ ಹೆಚ್ಚು ಸತ್ವಯುತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬೇಡಿಕೆ ಹೆಚ್ಚತೊಡಗಿತು.
  • ಇದರ ಪರಿಣಾಮವೇ ಸಪ್ಟಂಬರ್ 1971ರಲ್ಲಿ ಮಹಿಳೆಯರ ಸ್ಥಾನಮಾನ ಕುರಿತಂತೆ ಒಂದು ಸಮಿತಿಯ ರಚನೆ. 1975ರಲ್ಲಿ ಅದರ ವರದಿಯನ್ನು ಪ್ರಕಟಗೊಳಿಸಲಾಯಿತು. ಈ ವರದಿ ಭಾರತೀಯ ಮಹಿಳೆ ಅನುಭವಿಸುತ್ತಿದ್ದ ವಿಪರೀತ ಅನ್ಯಾಯಗಳು ಮತ್ತು ನಗ್ನ ಪಕ್ಷಪಾತಗಳನ್ನು ವ್ಯವಸ್ಥಿತವಾಗಿ ಬಯಲಿಗೆಳೆಯಿತು.
  • 1988ರಲ್ಲಿ `ಮಹಿಳೆಯರ ರಾಷ್ಟ್ರೀಯ ಯೋಜನಾ ಕಣ್ಣೋಟ‘(ನ್ಯಾಶನಲ್ ಪಸರ್ಪೆಕ್ಟಿವ್ ಪ್ಲಾನ್ ಫಾರ್ ವಿಮೆನ್) ಎಲ್ಲಾ ಹಂತಗಳಲ್ಲಿ ಚುನಾಯಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಇರಬೇಕು ಎಂದು ಸೂಚಿಸಿತು. ಈ ಬೇಡಿಕೆಯ ಸುತ್ತ ರೂಪುಗೊಂಡ ರಾಜಕೀಯ ಒಮ್ಮತದ ಫಲವಾಗಿ 1993ರಲ್ಲಿ ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿಗಳ ಮೂಲಕ ಪಂಚಾಯತೀ ರಾಜ್ಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಬಂತು.
  • ಮಹಿಳಾ ಮೀಸಲಾತಿ [೧೩] ಮಸೂದೆಯು ಇತ್ತೀಚೆಗೆ 2010 ಮಾರ್ಚ್ 9 ರಂದು ರಾಜ್ಯಸಭೆಯಲ್ಲಿ 186 ಸದಸ್ಯರ ಬೆಂಬಲ ಓರ್ವರ ವಿರೋಧದಿಂದ ಸಮ್ಮತಿ ಪಡೆಯಿತು.
  • ಹದಿನಾಲ್ಕು ದೀರ್ಘ ವರ್ಷಗಳು ಮತ್ತು ಸಂಸತ್ತಿನಲ್ಲಿ ಮೂರು ಬಾರಿ ವಿಫಲಗೊಳಿಸಿದ ನಂತರ ಅಂತಿಮವಾಗಿ ಲೋಕಸಭೆ ಮತ್ತು ಚುನಾಯಿತ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಅಂಗೀಕಾರಗೊಂಡಿತು. ಮಹಿಳೆಯರಿಗಾಗಿ ಮೀಸಲಾತಿಗಳು ಮಹಿಳೆಯರು 33% ರಷ್ಟು ಮೀಸಲಾತಿಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಡೆಯುತ್ತಾರೆ.
  • ಇದು ಸ್ಥಳೀಯ ಗ್ರಾಮ ಸರ್ಕಾರ ಅಥವಾ ಮುನ್ಸಿಪಲ್ ಚುನಾವಣೆಗಳ ಮೂಲಕ ಇದು ಅಸ್ತಿತ್ವಕ್ಕೆ ಬರುತ್ತವೆ. ಒಂದು ಸುದೀರ್ಘ ಯೋಜನೆಯಡಿ ಇದನ್ನು ಸಂಸತ್ತು ಮತ್ತು ಶಾಸಕಾಂಗಗಳಲ್ಲೂ ಅಗಿರುವ ಉದ್ದೇಶ ಹೊಂದಲಾಗಿದೆ. ಇನ್ನೂ ಹೆಚ್ಚೆಂದರೆ ಮಹಿಳೆಯರಿಗೆ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲಾಗುತ್ತದೆ ಇಂತಹ ಆದ್ಯತೆ ಬಗ್ಗೆ ಕೆಲವು ಪುರುಷರು ಇದನ್ನು ಲಿಂಗತಾರತಮ್ಯವೆಂದು ಕರೆಯುತ್ತಾರೆ.
  • ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಸೂಕ್ತ ಕ್ರಮವಲ್ಲ ಎನ್ನುವವರೂ ಇದ್ದಾರೆ. ಭಾರತದಲ್ಲಿನ ಹಲವು ಕಾನೂನು ಕಾಲೇಜುಗಳಲ್ಲಿ ಮಹಿಳೆಯರಿಗೆ 30% ರಷ್ಟು ಮೀಸಲಾತಿ ಇದೆ. ಸದ್ಯದ ಪ್ರಗತಿಪರ ರಾಜಕಾರಣದಲ್ಲಿ ಮಹಿಳೆಯರಿಗೆ ಆದ್ಯತೆ ಮೇರೆಗೆ ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸ್ಥಾನದ ಅಗತ್ಯವನ್ನು ಭಾರತದಲ್ಲಿ ಕಂಡುಕೊಳ್ಳಲಾಗಿದೆ.ಇದರಿಂದ ದೇಶದ ಎಲ್ಲಾ ನಾಗರಿಕರಿಗೆ ಸಮಾನವಕಾಶದ ಸಂದರ್ಭ ಒದಗಲಿದೆ.
  • ಮೀಸಲಾತಿಯಿಂದ ಸ್ಥಾನಗಿಟ್ಟಿಸಿದ ಮಹಿಳಾ ರಾಜಕಾರಣಿಯರನ್ನು ಆಳುವುದು ಅವರ ಮನೆಯವರು. ಮೀಸಲಾತಿ ಮಹಿಳೆ ಮೇಯರ್ ಆಗಿದ್ದರೆ, ಬೈ ಡೀಫಾಲ್ಟ್ ಮೇಯರ್ ಆಕೆಯ ಪತಿ ಅಥವಾ ಇತರ ಯಾರಾದರೂ ಅನುಭವ ಇರುವ ಗಂಡಸು. ಬಿಹಾರದಲ್ಲಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಲಾಲೂಪ್ರಸಾದ್ ಯಾದವ್ ಜೈಲಿಗೆ ಹೋಗುವ ಸಂದರ್ಭದಲ್ಲಿ ತನ್ನ ಪತ್ನಿ ರಾಬ್ರಿದೇವಿಯನ್ನು ತಂದು ಮುಖ್ಯಮಂತ್ರಿ ಪಟ್ಟದಲ್ಲಿ ಕುಳ್ಳಿರಿಸಿದಂತೆ.

ಮಹಿಳೆಯರ ಬಗ್ಗೆ ಸರ್ವಜ್ಞನ ವಚನಗಳು...


  • ೧.ಅಜ್ಜೀಯಿಲ್ಲದ ಮನೆಯೂ ಮಜ್ಜಿಗಿಲ್ಲದ ಊಟ

ಕೊಜ್ಜಿಯರಿಲ್ಲದ ಮನೆಯು ಇವು ಮೂರೂ ಲಜ್ಜೆಗೇಡೆಂದ ಸರ್ವಜ್ಞ....

  • ೨.ತಾಯಿಯೆಂಬೆನಲ್ಲದೆ ತಾಯಿ ನಾನೆಂಬೆನೆ ?

ತಾಯಿಯೆಂದಾನು ನುಡಿದೇನು ಪರಸ್ತ್ರೀಯ ತಾಯಿಯೆಂದೆಂಬೆ ಸರ್ವಜ್ಞ....

  • ೩.ಸತ್ಯಕ್ಕೆ ಸರಿಯಲ್ಲ ಮಿಥ್ಯಕ್ಕೆ ನೆಲೆಯಿಲ್ಲ

ಹೆತ್ತಮ್ಮನಿಗಿಂತ ಹಿತರಿಲ್ಲ ನರರೊಳಗೆ ನಿತ್ಯರೇ ಇಲ್ಲ ಸರ್ವಜ್ಞ....

  • ೪.ಅನ್ಯ ಸತಿಯನು ಕಂಡು ತನ್ನ ಹೆತ್ತವಳೆಂದು

ಮನ್ನಿಸಿ ನಡೆವ ಪುರುಷಂಗೆ ಇಹಪರದಿ ಮುನ್ನ ಭಯವಿಲ್ಲ ಸರ್ವಜ್ಞ....

  • ೫.ಆಲಕ್ಕೆ ಹೂವಿಲ್ಲ ಶೀಲಕ್ಕೆ ಸರಿಯಿಲ್ಲ

ನಾಲಿಗೆಯೊಂದು ಎಲುಬಿಲ್ಲ ಧೃಡಮನವು ಬಾಲೆಯರಿಗಿಲ್ಲ ಸರ್ವಜ್ಞ....

  • ೬.ಒಪ್ಪವುಳ್ಳ ಹೆಣ್ಣಲ್ಲಿ ತಪ್ಪ ಸಾಧಿಸಬೇಡ

ಕರ್ಪೂರದ ಮೇಲೆ ಕಸವಿರಲು ಅದನೊಪ್ಪರೊಪ್ಪದವರುಂಟೇ ಸರ್ವಜ್ಞ....

  • ೭.ಜ್ಯೋತಿಯಿಲ್ಲದ ಮನೆಯು ರೀತಿಯಿಲ್ಲದ ಸತಿಯೊ

ನೀತಿಯಿಲ್ಲದ ಮಿತ್ರನು ಭಿಕ್ಷದ ಪಾತ್ರೆಯೊಡೆದಂತೆ ಸರ್ವಜ್ಞ...

  • ೮.ಹೆಣ್ಣಿಂದಲೇ ಇಹವು ಹೆಣ್ಣಿಂದಲೇ ಪರವು

ಹೆಣ್ಣಿಂದಲೇ ಸಕಲ ಸಂಪದವು ಹೆಣ್ಣೊಲ್ಲ ದಣ್ಣಗಳು ಯಾರು ಸರ್ವಜ್ಞ...

  • ೯.ಹೆಣ್ಣು ಮುನಿದರೆ ತಿದ್ದುವಣ್ಣಗಳ ನಾ ಕಾಣೆ

ಹೆಣ್ಣೊಳಾಮೃತವು ವಿಷವುಂಟು ಉಣಬಲ್ಲ ಅಣ್ಣಗಳು ಯಾರು ಸರ್ವಜ್ಞ...

  • ೧೦.ಹೆಣ್ಣನ್ನು ಹೊನ್ನನ್ನು ಹಣ್ಣಾದ ಮರಗಳನು

ಕಣ್ಣಿನಲಿ ಕಂಡು ಮನದಲಿ ಬಯಸದಿಹ ಅಣ್ಣಗಳು ಯಾರು ಸರ್ವಜ್ಞ...

ಗಾದೆಗಳಲ್ಲಿ ಸ್ತ್ರೀ

[ಬದಲಾಯಿಸಿ]
  1. ಒಲಿದರೆ ನಾರಿ; ಮುನಿದರೆ ಮಾರಿ
  2. ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು
  3. ಹೆಣ್ಣೊಂದು ಕಲಿತರ ಶಾಲೆಯೊಂದು ತೆರೆದಂತೆ
  4. ಕಲಿತ ಹೆಣ್ಣು ಮನೆಯ ಕಣ್ಣು
  5. ಅಕ್ಷರ ಕಲಿತ ನಾರಿ ದೇಶದ ಪ್ರಗತಿಗೆ ದಾರಿ

ಆಧುನಿಕ ಸ್ತ್ರೀ

[ಬದಲಾಯಿಸಿ]

ಆಧುನಿಕ ಸ್ತ್ರೀಯನ್ನು ನಾಲ್ಕು ಹಂತಗಳಲ್ಲಿ ಗುರ್ತಿಸಬಹುದು.

  1. ಕೌಟುಂಬಿಕ ವಲಯ
  2. ಸಾಧನೆಯ ಹಾದಿಯಲ್ಲಿ
  3. ಅಸಹಾಯಕತೆ
  4. ಪಾಶ್ವಾತ್ಯ ಸಂಸ್ಕೃತಿಯ ದಾಸ್ಯತೆ

ಕೌಟುಂಬಿಕ ವಲಯ

[ಬದಲಾಯಿಸಿ]

ಕೌಟುಂಬಿಕ ವಲಯದಲ್ಲಿರುವ ವ್ಯಕ್ತಿಗಳಿಗೆ ಹೆಣ್ಣು ಆಸಕ್ತಿಯ, ಆತ್ಮ ಸಂಗಾತದ ವಿಷಯ. ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಹೆಂಡತಿಯಾಗಿ, ನಾದಿನಿಯಾಗಿ, ಅತ್ತಿಗೆಯಾಗಿ, ಅತ್ತೆಯಾಗಿ, ಗೆಳತಿಯಾಗಿ, ಪ್ರೇಮಿಯಾಗಿ ಆಕೆ ನಿರ್ವಹಿಸುವ ಪಾತ್ರಗಳು ಅದ್ಬುತ, ವರ್ಣನಾತೀತ. ಏಕೆಂದರೆ ಸ್ತ್ರೀ ಒಂದು ಸಮುದಾಯವನ್ನು ಸಮರ್ಥವಾಗಿ ಪ್ರತಿನಿಧಿಸುವ ಸಾಮರ್ಥ್ಯ ಹೊಂದಿರುವಂತಹವಳು. ಕೌಟುಂಬಿಕ ವಲಯದ ಸ್ತ್ರೀ ಕುಟುಂಬದ ಕಟ್ಟುಪಾಡುಗಳಿಗೆ ಒಳಗಾಗಿ ಜೀವನ ನಡೆಸುತ್ತಿದ್ದಾಳೆ. ಭಾರತೀಯ ಸಂಸ್ಕೃತಿಯ ರಾಯಭಾರಿಯಂತಿರುವ ಆಕೆ ತನ್ನ ಕುಟುಂಕ್ಕಾಗಿ ಏನೆಲ್ಲ ತ್ಯಾಗ ಮಾಡಲು ಸಿದ್ದಳಾಗಿರುತ್ತಾಳೆ.[೧೪]

ಸಾಧನೆಯ ಹಾದಿಯಲ್ಲಿ

[ಬದಲಾಯಿಸಿ]

ಸ್ತ್ರೀ ನಾಲ್ಕು ಗೋಡೆಗಳ ನಡುವೆ ಕಾಲಕಳೆಯುವ ಕಾಲವೀಗ ಕಣ್ಮರೆಯಾಗಿ, ಪುರುಷಪ್ರಧಾನ ಸಮಾಜದಲ್ಲಿ ಪುರುಷರಷ್ಟೇ ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆಯೆಂದು ಹಲವಾರು ರೀತಿಯ ಸಾಧನೆಗಳನ್ನು ಮಾಡುವುದರ ಮೂಲಕ ತೋರಿಸಿ ಕೊಟ್ಟಿದ್ದಾಳೆ. ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯುತ್ತಾ ಜಗತ್ತಿನ ದೃಷ್ಟಿಯನ್ನು ತನ್ನೆಡೆ ಸೆಳೆದಿದ್ದಾಳೆ. ಪ್ರತಿಭೆ, ಕಲೆ, ಸಾಹಿತ್ಯ, ಸಾಹಸ ಪ್ರವೃತ್ತಿಯಂತಹ ಸಾಧನೆಯಲ್ಲಿ ತೊಡಗಿ ವಿಶ್ವದ ಗೌರವಕ್ಕೆ ಪಾತ್ರಳಾಗಿದ್ದಾಳೆ.[೧೫] ತನ್ನ ಹಲವಾರು ಉತ್ತಮ ಗುಣ, ನಡತೆಗಳಿಂದ ಸರ್ವಸಂಪನ್ನಳೆನಿಸಿ ಪೂಜನೀಯಳು ಆಗಿದ್ದಾಳೆ.[೧೬] ಉದಾ: ಸರೋಜಿನಿ ನಾಯ್ಡು, ಕಲ್ಪನಾ ಚಾವ್ಹ್ಲ, ಸುನೀತಾ ವಿಲಿಯಂ, ಮದರ್ ತೆರೇಸ, ಕಿರಣ್ ಬೇಡಿ, ಇಂದಿರಾ ಗಾಂಧಿ ಮುಂತಾದವರು.

ಅಸಹಾಯಕತೆ

[ಬದಲಾಯಿಸಿ]

ಇಂದಿನ ಸ್ತ್ರೀ ತನ್ನ ಮೇಲಾಗುತ್ತಿರುವ ಅನ್ಯಾಯ, ಅನಾಚಾರ, ಅತ್ಯಾಚಾರ ಮತ್ತು ಭ್ರೂಣ ಹತ್ಯೆಯನ್ನು ತಡೆಯುವಲ್ಲಿ ವಿಫಲಳಾಗುತ್ತಿದ್ದಾಳೆ. ದೇಶದೆಲ್ಲೆಡೆ ನಡೆಯುತ್ತಿರುವ ಸ್ತ್ರೀ ದೌರ್ಜನ್ಯವನ್ನು ತಡೆಯುವ ದಾರಿ ಕಾಣದೆ ಅಸಹಾಯಕಳಾಗಿದ್ದಾಳೆ. ತಾನಿರುವ ವಲಯಗಳಲ್ಲಿ ನಡೆಯುವ ಶೋಷಣೆಗೆ ಸಿಲುಕಿ ಜರ್ಝರಿತಳಾಗಿದ್ದಾಳೆ. ಪ್ರೀತಿ, ಸ್ನೇಹ, ಆತ್ಮವಿಶ್ವಾಸದ ಬದುಕು ಈಗೀಗ ದುಸ್ತರವಾಗುತ್ತಿದೆ. ಕಾನೂನು ಸ್ತ್ರೀಯರ ಪರವಾಗಿದ್ದರೂ, ತನಗಿರುವ ಮಿತಿಗಳಿಂದ ಹೊರಬಾರಲಾರದೆ ಮನದೊಳಗೆ ಕುಗ್ಗುತ್ತಿದ್ದಾಳೆ.[೧೭]

ಪಾಶ್ವಾತ್ಯ ಸಂಸ್ಕೃತಿಯ ದಾಸ್ಯತೆ

[ಬದಲಾಯಿಸಿ]

ಆಧುನಿಕ ಸ್ತ್ರೀಯಲ್ಲಿ ಕೆಲವರು ಅಶಾಂತಿ, ಅಶಿಸ್ತು ಮತ್ತು ಅಜಾಗರೂಕ ನಡವಳಿಕೆಯಿಂದ ಸಮಾಜದೊಳಗಿನ ಶಿಸ್ತು, ಕಟ್ಟುಪಾಡುಗಳನ್ನು ಸಡಿಲಗೊಳಿಸುತ್ತಿದ್ದಾರೆ. ಅತೃಪ್ತಿ ಅವರಲ್ಲಿ ಮನೆಮಾಡಿ ಇಡೀ ವ್ಯವಸ್ಥೆಯನ್ನು ಹಾಳುಗೆಡಹುವ ಮಟ್ಟಕ್ಕೆ ಹೋಗುತ್ತಾ ಪಾಶ್ಚಾತ್ಯ ಸಂಸ್ಕೃತಿಯೆಡೆ ವಾಲುತ್ತಿದ್ದಾರೆ. ಸ್ತ್ರೀ ಸಮಾನತೆ, ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರಿಗಳಾಗಿ, ತಾವು ಗಂಡಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಎಂಬಂತೆ, ಮದ್ಯಪಾನ, ಧೂಮಪಾನ ಮಾಡುತ್ತಾ ಅರೆಬಟ್ಟೆಯನ್ನು ತೊಟ್ಟು ಎಗ್ಗಿಲ್ಲದಂತೆ ನಡೆದುಕೊಂಡು ಪ್ರಶ್ನಿಸಿದವರ ಮೇಲೆ ಇಲ್ಲಸಲ್ಲದ ಕೇಸುಗಳನ್ನು ಹಾಕುತ್ತಾ ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿದ್ದಾರೆ. ಕಾನೂನಿನ ದುರುಪಯೋಗ ಮಾಡಿಕೊಂಡು ಗುಂಡಾ ಪ್ರವೃತ್ತಿಯನ್ನು ಮೆರೆಯುತ್ತಿದ್ದಾರೆ. ಇಂದು ಮದುವೆ, ನಾಳೆ ಡೈವೋರ್ಸ್ ಎಂಬಂತಾಗಿದೆ. ತಾಳ್ಮೆ, ಸಂಯಮ ಇಲ್ಲವಾಗಿ ಅಹಂ, ದರ್ಪ, ದೌಲತ್ತನ್ನು ಪ್ರದರ್ಶಿಸುತ್ತಿದ್ದಾಳೆ.

ಮಹಾತ್ಮ ಜ್ಯೋತಿ ಬಾಪೂಲೆ

[ಬದಲಾಯಿಸಿ]
  • ಇವರು ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿ ಸಂಘಟನೆಗಳನ್ನು ಸಂಘಟಿಸಿದರು. ೧೮೪೮ ರಲ್ಲಿ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸೇರಿ ಸಾವಿತ್ರಿ ಬಾಪೂಲೆ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಸಾವಿತ್ರಿ ಬಾಪೂಲೆ ಮೊಟ್ಟಮೊದಲ ಮಹಿಳಾ ಶಿಕ್ಷಕಿ, ವಿದ್ಯೆ ಕೊಟ್ಟ ಸರಸ್ವತಿ.
  • ಮಹಿಳಾ ಶಿಕ್ಷಣದ ಬಗ್ಗೆ ಮೊಟ್ಟಮೊದಲಿಗೆ ರೂಢಿಗತ, ಸಾಂಪ್ರದಾಯಿಕ ಶಕ್ತಿಗಳನ್ನು ಎದುರು ಹಾಕಿಕೊಂಡು ಸ್ತ್ರೀಯರಿಗೆ ಶಾಲೆ ತೆರೆದು ಶಿಕ್ಷಣ ನೀಡಿದ್ದಷ್ಟೇ ಅಲ್ಲ ವಿಧವಾ ವಿವಾಹವನ್ನು ಎತ್ತಿ ಹಿಡಿಯುತ್ತ ಬಹುಪತ್ನಿತ್ವದ ಬಗ್ಗೆ ಖಂಡಿಸುತ್ತ, ಸಾಮಾಜಿಕ ಅನಿಷ್ಟಗಳಿಗೆ ವೈಚಾರಿಕ ಪರ್ಯಾಯಗಳನ್ನು ವಾಸ್ತವದಲ್ಲಿ ತಂದ ಧೀಮಂತ ವ್ಯಕ್ತಿತ್ವ ಜ್ಯೋತಿಬಾ ಅವರದು.
  • ದೇಶದಲ್ಲಿದ್ದ ಅಸ್ಪೃಶ್ಯತಾ ಆಚರಣೆಯ ನಡುವೆ ಜ್ಯೋತಿ ಬಾಪುಲೆ ಮತ್ತು ಅವರ ಪತ್ನಿ ಸಾವಿತ್ರಿ ಬಾಪುಲೆ[೧೮] ತಳ ಸಮುದಾಯದವರಿಗೆ ಶಿಕ್ಷಣ ನೀಡುವ ಕೆಲಸಕ್ಕೆ ಮುಂದಾದರು. ಮಹಾತ್ಮ ಜ್ಯೋತಿ ಬಾಪೂಲೆ ಮತ್ತು ಸಾವಿತ್ರಿ ಬಾಪೂಲೆ ಅವರು ದೇಶದಲ್ಲೇ ಮೊದಲ ಬಾರಿಗೆ ಹೆಣ್ಣು ಮಕ್ಕಳಿಗೆ ಹಲವಾರು ಶಾಲೆಗಳನ್ನು ತೆರೆದರು. ಅದರಲ್ಲಿ ಯಶಸ್ವಿಯೂ ಆದರು.
  • ಹಾಗಾಗಿ ಇಂದಿನ ಮಹಿಳೆಯರಾರೂ ಶಿಕ್ಷಣ ವಿಷಯದಲ್ಲಿ ಇವರಿಬ್ಬರನ್ನು ಮರೆಯುವಂತೆಯೇ ಇಲ್ಲ. ೧೮೭೬ರಲ್ಲಿ ಅವರು ಪ್ರಾರಂಭಿಸಿದ “ವಿಕ್ಟೋರಿಯ ಅನಾಥಾಲಯ” ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾದ ಅನೇಕ ವಿಧವೆಯರಿಗೆ ಆಶ್ರಯ ನೀಡಿ ಅನೇಕ ವಿಧವೆಯರ ಮಕ್ಕಳು ಶಿಕ್ಷಣ ಮತ್ತು ಪಡೆಯಲು ಸಹಾಯ ಮಾಡಿತು.
  • ಪುಣೆಯಲ್ಲಿ ತನ್ನದೇ ಜಾತಿಯ ವಂಚಕನೊಬ್ಬನ ಬಲಿಗೆ ಬಿದ್ದ ಬ್ರಾಹ್ಮಣ ವಿಧವೆಯೊಬ್ಬಳಿಗೆ ಅಲ್ಲಿನ ಬ್ರಾಹ್ಮಣ ಸಮಾಜ ಸಾಯಿಸಲು ಹವಣಿಸುತ್ತಿತ್ತು. ಫುಲೆ ದಂಪತಿ ಆಕೆಗೆ ತಮ್ಮ ಮನೆಯಲ್ಲಿ ರಕ್ಷಣೆ ನೀಡಿ ಅವಳಿಗೆ ಜನಿಸಿದ ಯಶವಂತನೆಂಬ ಬಾಲಕನನ್ನು ದತ್ತು ಪಡೆದು ಸಾಕಿ ಸಲಹಿ ವೈದ್ಯನನ್ನಾಗಿ ಮಾಡುತ್ತಾರೆ.
  • ಸಾವಿತ್ರಿ, ವಿಶ್ವದ ಪ್ರಥಮ ಮಹಿಳಾ ಚಳುವಳಿಗಾರ್ತಿ ಎಂದು ವಿಶ್ವ ವಿಖ್ಯಾತ ಚಿಂತಕಿ ಟಿಫಾನಿ ವೇಯ್ನ್ ತಮ್ಮ “Feminist Writings from Ancient Times to the Modern World: A Global Sourcebook and History.” ಪುಸ್ತಕದಲ್ಲಿ ಹೇಳಿದ್ದಾರೆ.

ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಮಹಿಳಾ ಪರ ಆಲೋಚನೆ

[ಬದಲಾಯಿಸಿ]
  • ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡನು ಮನೆಯವರು ಮಹಿಳೆಯನ್ನು ಶೋಷಣೆ ಮಾಡುವುದನ್ನು ಸೂಕ್ಷ್ಮವಾಗಿ ಗಮನಿಸಿದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಆಲೋಚನೆ ಹೀಗಿದೆ. “ಗಂಡನು ಹೆಣ್ಣಿಗೆ ಧಾರ್ಮಿಕ ಮನುಷ್ಮ್ರತಿ ವಿಧಿ ಎಂದೂ ಕಾಣುವುದಾಗಲಿಲ್ಲ. ಬದಲಾಗಿ ಹೆಣ್ಣನ್ನು ಗಂಡಿಗೆ ಕಟ್ಟಿ ಗಂಡನ್ನು ತಡೆಗಟ್ಟುವುದಿಲ್ಲ. ಬದಲಾಗಿ ತನಗಿಷ್ಟವಿಲ್ಲವಾದರೆ ಅವನು ಹೆಂಡತಿಯನ್ನು ಬಿಡುವುದಕ್ಕೆ ಮಾತ್ರವಲ್ಲದೆ ಅವಳನ್ನು ಮಾರಾಟ ಮಾಡುವುದಕ್ಕೆ ಮನು ಅನುಮತಿ ನೀಡುತ್ತಾನೆ.
  • ಅದಾಗಿ ಮನುವಿನ ಮೂಲೋದ್ದೇಶವೇನೆಂದರೆ ಮಹಿಳೆ ಹೆಂಡತಿಯಾಗಿರಬೇಕೇ ಹೊರತು ಸಮಾನಳಾಗಿರಲು ಅಗತ್ಯವಿಲ್ಲವೆನ್ನುತ್ತಾರೆ. ಡಾ.ಬಿ.ಆರ್.ಅಂಬೇಡ್ಕರವರು ಮಹಿಳಾ ಮೀಸಲಾತಿಯ ಪರವಾಗಿ, ಅವಳ ಉಜ್ವಲ ಭವಿಷ್ಯವನ್ನು ಕುರಿತು ಸಾಂವಿಧಾನಿಕವಾಗಿ ಚಿಂತಿಸಿದರು. ಅವರು ಚುನಾಯಿತ ಸದಸ್ಯರಾಗಿ ಪಾರ್ಲಿಮೆಂಟಿನಲ್ಲಿ ಹಿಂದು ಕೋಡ್ ಬಿಲ್ ನ್ನು ಮಂಡಿಸುವುದರ ಮೂಲಕ, ಸ್ವತಂತ್ರ ಭಾರತದ ನಾರಿಯ ಬಂಧನವನ್ನು ಮುಕ್ತ ಮಾಡಲು ಪ್ರಯತ್ನಿಸಿದರು.
  • ಮಹಿಳಾ ಪರ ವಿಚಾರಗಳನ್ನು ಮಂಡಿಸುವುದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಬಲವಾದ ಆಧಾರಗಳಿದ್ದವು. ಮಹಿಳಾ ಮೀಸಲಾತಿಯ ಕುರಿತು ಆಕೆಯ ಆಸ್ತಿ ಹಕ್ಕಿನ ಕುರಿತು ಗೌತಮ ಬುದ್ಧ, ಜ್ಯೋತಿಬಾಫುಲೆ, ಮುಂತಾದ ಮಹಾತ್ಮರು ಸಂದರ್ಭಾನುಸಾರವಾಗಿ ಮಾತಾಡಿದ್ದರು.
  • ಜೊತೆಗೆ ಬೇರೆ ಬೇರೆ ದೇಶಗಳಲ್ಲಿಯ ಸಮಾಜ ಮುಖಿ ಮಹಿಳಾ ಮುಖಿ ಚಿಂತನೆಗಳನ್ನು ಅಧ್ಯಯನ ಮಾಡಿದ ಡಾ.ಬಾಬಾಸಾಹೇಬರು ಭಾರತದ ಮಹಿಳೆಯ ಹಕ್ಕು ಬಾಧ್ಯತೆಗಳನ್ನು ಕುರಿತು ಮಹತ್ವಪೂರ್ಣ ವಿಚಾರವನ್ನು ವ್ಯಕ್ತಪಡಿಸಿದರು. ಅವರು ಸಂವಿಧಾನದಲ್ಲಿ ಬರೆದಿಟ್ಟ ಮಹಿಳಾ ಪರ ಚಿಂತನೆಗಳು ಪ್ರಸ್ತುತ ಸಂದರ್ಭದಲ್ಲಿ ಕ್ರಮೇಣ ಜಾರಿಗೆ ಬರುತ್ತಿರುವುದು ಭಾರತೀಯರು ಸಂವಿಧಾನಕ್ಕೆ ಕೊಟ್ಟಿರುವ ಗೌರವವೆಂದೇ ತಿಳಿದುಕೊಳ್ಳಬೇಕಾಗುತ್ತದೆ.
  • 1986 ರಲ್ಲಿ ಕೇಂದ್ರದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದಾಗ, ಸಂವಿಧಾನದ 81ನೇ ತಿದ್ದುಪಡಿ ಮಸೂದೆಯ ಶಾಸನಸಭೆ ಮತ್ತು ಲೋಕಸಭೆಗೆ ಶೇ.25 ಮಹಿಳಾ ಮೀಸಲಾತಿ ಕೊಡಬೇಕೆಂಬ ವಿಷಯವನ್ನು ರೂಪಿಸಲಾಯಿತು. ಮಹಿಳಾ ಮೀಸಲಾತಿ ವಿಧೇಯಕ ನಾಲ್ಕು ಅಂಶಗಳನ್ನು ಒಳಗೊಂಡಿದೆ.
  1. ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ ಲೋಕಸಭೆ, ವಿಧಾನಸಭೆಗಳ ಒಟ್ಟು ಸ್ಥಾನಗಳ ಮೂರನೆಯ ಒಂದು ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡುವುದು.
  2. ಈ ಮೀಸಲಾತಿಯು ಅನಿರ್ದಿಷ್ಟಾವಧಿ ತನಕ ವಿಸ್ತರಿಸುತ್ತದೆ.
  3. ಮಹಿಳಾ ಮೀಸಲು ಕ್ಷೇತ್ರಗಳನ್ನು ಚೀಟಿ ಎತ್ತುವ ಮೂಲಕ ನಿರ್ಧರಿಸಲಾಗುತ್ತದೆ. ಪ್ರತಿ ಚುನಾವಣೆಯಲ್ಲಿ ಮೀಸಲಾತಿ ಕ್ಷೇತ್ರವನ್ನು ಬದಲಾಯಿಸಲಾಗುತ್ತದೆ.
  4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗಾಗಲೇ ಸಂವಿಧಾನದಲ್ಲಿ ಕಲ್ಪಿಸಿರುವ ರಾಜಕೀಯ ಮೀಸಲಾತಿಯಲ್ಲಿ ಮೂರನೆಯ ಒಂದು ಸ್ಥಾನವನ್ನು ಆ ಜಾತಿ, ಪಂಗಡಗಳ ಮಹಿಳೆಯರಿಗೆ ಮೀಸಲಿಡಬೇಕು.

ಮಹಿಳಾ ಮೀಸಲಾತಿ ಕುರಿತು ಸ್ಪಷ್ಟವಾಗಿ ಸಂವಿಧಾನದಲ್ಲಿಯೇ ಹೇಳುವುದರಿಂದ ನಾವು ರಾಜಕೀಯ ಮತ್ತು ಚುನಾವಣೆಯ ಸಂದರ್ಭದಲ್ಲಿ ಈ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಕಾರ್ಯಾಚರಣೆಗೆ ತರಬೇಕಾಗುತ್ತದೆ. ಹೀಗಾದಾಗ ಮಾತ್ರ ಮಹಿಳಾ ಮೀಸಲಾತಿ ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ ಇಲ್ಲ.

ಯಶಸ್ವೀ ಮಹಿಳೆಯರು

[ಬದಲಾಯಿಸಿ]
  • ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಝಾನ್ಸಿರಾಣಿಲಕ್ಷ್ಮೀಬಾಯಿ ಮುಂತಾದವರನ್ನು ಉದಾಹರಿಸಬಹುದು. ಅವರೆಲ್ಲ ತಾವೇ ಸ್ವತ: ಜನೋಪಯೋಗಿ ಕೆಲಸಗಳಲ್ಲಿ ತೊಡಗಿ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಆದರೆ ಈ ಮೇಲಿನ ಉದಾಹರಣೆಗಳು ಅಪತ್ಕಾಲದಲ್ಲಿ ಮಹಿಳೆ ರಾಜ್ಯದ ಅಧಿಕಾರವನ್ನು ಹಿಡಿದು ರಾಜ ಸೂತ್ರವನ್ನು ನಡೆಸಿದವಳೆಂಬುದನ್ನು ಮರೆಯುವಂತಿಲ್ಲ.
  • ಭಾರತೀಯ ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡಿರುವ ಮಹಿಳೆ ಇಂದಿರಾಗಾಂಧಿ. ಇವರೊಬ್ಬ ಯಶಸ್ವೀ ರಾಜಕಾರಣಿಯಾಗಿದ್ದಲ್ಲಿ, ಇವರು ಹತ್ತು ವರ್ಷಗಳಿಗೂ ಮಿಕ್ಕು ಸುದೀರ್ಘ ಕಾಲ ರಾಷ್ಟ್ರವನ್ನು ಆಳಿದ್ದಲ್ಲಿ, "ಸಂಸತ್ತಿನಲ್ಲಿರುವ ಏಕೈಕ ಗಂಡಸು ಇಂದಿರಾಗಾಂಧಿ" ಎಂದು ಕರೆಸಿಕೊಂಡಿದ್ದರೆ ಅದಕ್ಕೆ ಮೀಸಲಾತಿ ಕಾರಣವಲ್ಲ. ಇಂದಿರಾಗಾಂಧಿ ಪಡೆದಿದ್ದ ಶಿಕ್ಷಣ ಮತ್ತು ರಾಜಕೀಯ ಕುಟುಂಬದಲ್ಲಿ ಹುಟ್ಟಿಬೆಳೆದು ಅವರು ನಿಕಟವಾಗಿ ರಾಜಕೀಯದ ಒಳಹೊರಗುಗಳನ್ನು ಬಲ್ಲವರಾಗಿದ್ದಿದು ಇದಕ್ಕೆ ಕಾರಣ.
  • ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ಆಂಗ್ ಸಾನ್ ಸೂಕಿ ಅಥವಾ ಪಾಕಿಸ್ತಾನದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಇಲ್ಲವೇ, ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಯ ಪ್ರತಿಭಾ ಪಾಟೀಲ್- ಇವರೆಲ್ಲ ಹೊಂದಿರುವ ಶಿಕ್ಷಣ ಮತ್ತು ಅನುಭವಗಳು ಅವರನ್ನು ಯಶಸ್ವೀ ಮಹಿಳೆಯರ ಸ್ಥಾನದಲ್ಲಿ ನಿಲ್ಲಿಸಿದೆ.
  • ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿ ಅತ್ಯಂತ ಸಣ್ಣವಯಸ್ಸಿನಲ್ಲಿ ಅಂತರಿಕ್ಷದಲ್ಲೇ ಭಸ್ಮವಾದ ಮಹಿಳೆ ಕಲ್ಪನಾ ಚಾವ್ಲ. ಈಕೆ ಅಂತಹಾ ಸಿರಿವಂತ ಕುಟುಂಬದಿಂದ ಬಂದವರಲ್ಲ. ಚಿಕ್ಕಬಾಲಕಿಯಾಗಿದ್ದಾಗ ಆವರು ಕಂಡ ಕನಸು, ಅವರೊಳಗಿನ ಮಹತ್ವಾಕಾಂಕ್ಷೆಯ ತುಡಿತ, ಗುರಿಸಾಧನೆಯ ಹಠ ಮತ್ತು ಅದಕ್ಕೆ ನೀರೆರೆದ ಅವರ ಸುತ್ತಮುತ್ತಲ ಮಂದಿ ಅವರ ಕನಸು ಸಾಕಾರವಾಗಲು ಕಾರಣ.
  • ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಮಾಯಾವತಿ ಯಶಸ್ವಿರಾಜಕಾರಣಿ. ಆದರೆ ಇದಕ್ಕೆ ಅವರ ಜಾತಿ ಅಥವಾ ಮೀಸಲಾತಿ ಮಾತ್ರ ಕಾರಣವಲ್ಲ. ಅವರು ಪಡೆದಿರುವ ಉತ್ತಮ ಶಿಕ್ಷಣವೂ ಕಾರಣ. ಐಎಎಸ್ ಅಧಿಕಾರಿಣಿಯಾಗಬೇಕೆಂದು ಬಯಸಿದ್ದ ಅವರು ರಾಜಕೀಯಕ್ಕೆ ಇಳಿದದ್ದು ಕಾಕತಾಳೀಯ. ಸುಶಿಕ್ಷಿತ ಮಹಿಳಾ ರಾಜಕಾರಣಿಗಳು ಮತ್ತು ಇತರ ರಾಜಕಾರಣಿಗಳ ಕಾರ್ಯವೈಖರಿಯನ್ನು ಗಮನಿಸಿದಾಗ ಮೀಸಲಾತಿ ಬರಿಯ ಸ್ಥಾನವನ್ನು ಗಿಟ್ಟಿಸಲು ಮಾತ್ರ ಸಹಾಯಕವಾಗುತ್ತದೆ ಎಂಬ ಅಂಶ ವೇದ್ಯವಾಗುತ್ತದೆ.

ಪರಿಹಾರ

[ಬದಲಾಯಿಸಿ]
  • ಹೆಣ್ಣು ಗಂಡಿನ ಎಲ್ಲ ಮೂಲಭೂತ ವ್ಯತ್ಯಾಸಗಳನ್ನು ಸಮಾನತೆಯ ಮಾಪನದಲ್ಲಿ ಅಳೆಯುವುದು ಸರಿಯಲ್ಲ. ಹೆಣ್ಣಿನ ದೈಹಿಕ ಸೂಕ್ಷ್ಮತೆ, ದೈಹಿಕ ರಚನೆ, ಋತುಚಕ್ರ ಮೊದಲಾದವುಗಳಿಗಾಗಿ ಕೆಲವು ವಿಶೇಷ ಸವಲತ್ತುಗಳಿಗೆ ಅವಳು ಹಕ್ಕುದಾರಳು ಎಂಬುದನ್ನು ಗಂಡು ಮರೆಯಬಾರದು. ಹೆಣ್ಣು ಮಗುವಿನ ದೈಹಿಕ ಸೂಕ್ಷ್ಮತೆಯನ್ನು ಅವಳ ದೌರ್ಬಲ್ಯವೆಂದು ಪರಿಗಣಿಸಬಾರದು.
  • ಈ ಕಾರಣಗಳಿಗಾಗಿಯೇ, ಶಾಲೆಗಳಲ್ಲಿ ಅವಳಿಗೆ ಯೋಗ, ಕರಾಟೆ, ಕ್ರೀಡೆ, ರಂಜನೆ ಹಾಗೂ ಹವ್ಯಾಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಮಾನವ ಸಂಪನ್ಮೂಲದಲ್ಲಿ ಸುಮಾರು ಅರ್ಧ ಪಾಲು ಹೆಣ್ಣುಗಳದ್ದು. ಆದರೆ ಶಾಲಾ ಕಲಿಕೆಯಲ್ಲಿ ಅವಕಾಶ ವಂಚಿತಳಾಗಿರುವುದರಿಂದ ಅವಳ ಸಾಮಾಜಿಕ ಬೆಳವಣಿಗೆಯ ಗತಿಯೂ ಕುಂದಿದೆ.
  • ಹೆಣ್ಣೊಬ್ಬಳು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿಕೊಳ್ಳಬೇಕಾದರೆ ಅವಳು ಶಿಕ್ಷಿತಳಾಗಬೇಕು. ಯಾವುದೇ ವಿಧದ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರದ ವಿರುದ್ಧ ದನಿ ಎತ್ತುವುದು ಮತ್ತು ನ್ಯಾಯ ಪಡೆಯುವುದು ಪ್ರತಿಯೊಬ್ಬ ಹೆಣ್ಣು ಮಗಳ ಹಕ್ಕು.

ಹೊರ ಸಂಪರ್ಕ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "ಸ್ತ್ರೀ... ಹೆಣ್ತನ..." ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ.............. 2010-07-09. Retrieved 2023-09-17.
  2. "ಸ್ತ್ರೀ ಪರಂಪರೆ ಶ್ರೀಮಂತವಾದುದು: ಮೀನಾ ಚಂದಾವರ್ಕರ್". Kannadaprabha. 2015-12-13. Retrieved 2023-09-17.
  3. ೩.೦ ೩.೧ "ಮಹಿಳೆ ಸುದ್ದಿಗಳು: ಇತ್ತೀಚಿನ ಮಹಿಳೆ ಕುರಿತ ಸುದ್ದಿಗಳು , ಅಪ್ಡೇಟ್ಸ್ , ವಿಡಿಯೋಗಳು ಮತ್ತು ಚಿತ್ರಗಳು". https://. 1970-01-01. Retrieved 2023-09-17.
  4. http:// vijaykarnataka. indiatimes. com/home/ women/ articlelist/11180444.cms
  5. http://kannada.indiansutras.com/topic/%E0%B2%AE%E0%B2%B9%E0%B2%BF%E0%B2%B3%E0%B3%86
  6. http: //www.udayavani.com/ kannada/news/%E0%B2%9A% E0%B2%BF%E0%B2%A4%E0%B3 %8D%E0%B2%B0%E0%B2 %A6%E0%B3%81 %E0%B2%B0%E0%B3%8D%E0%B2%97/86265/%E0%B2%AE%E0%B2%B9%E0%B2%BF%E0%B2%B3%E0%B2%BE-%E0%B2%B6%E0%B3%8B%E0%B2%B7%E0%B2%A3%E0%B3%86-%E0%B2%A4%E0%B2%A1%E0%B3%86-%E0%B2%87%E0%B2%82%E0%B2%A6%E0%B2%BF%E0%B2%A8-%E0%B2%85%E0%B2%97%E0%B2%A4%E0%B3%8D%E0%B2%AF-%E0%B2%B8%E0%B2%B2%E0%B2%97%E0%B3%86%E0%B2%B0%E0%B2%BF
  7. "ಆರ್ಕೈವ್ ನಕಲು". Archived from the original on 2021-12-04. Retrieved 2016-11-25.
  8. http://www.udayavani.com/tags/%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0-%E0%B2%AE%E0%B3%87%E0%B2%B2%E0%B2%BF%E0%B2%A8-%E0%B2%A6%E0%B3%8C%E0%B2%B0%E0%B3%8D%E0%B2%9C%E0%B2%A8%E0%B3%8D%E0%B2%AF
  9. https://www.facebook.com/mysore.cpim/posts/1456630531281160
  10. http://sampada.net/%E0%B2%AC%E0%B3%8D%E0%B2%B2%E0%B2%BE%E0%B2%97%E0%B3%8D-%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81/980
  11. http://ananth.org/commemorating-international-womens-day/?lang=KN
  12. http://mgkangod.blogspot.in/2013/01/blog-post_23.html
  13. http://kannada Archived 2013-08-08 ವೇಬ್ಯಾಕ್ ಮೆಷಿನ್ ನಲ್ಲಿ.. oneindia.com/topic/%E0%B2%AE%E0%B3%80%E0%B2 %B8%E0%B 2%B2%E0%B2%BE%E0%B2%A4%E0%B2%BF
  14. http://avadhimag.com/2014/11/22/%E0%B2%B8%E0%B3%8D%E0%B2%A4%E0%B3%8D%E0%B2%B0%E0%B3%80-%E0%B2%B8%E0%B2%AE%E0%B2%BE%E0%B2%A8%E0%B2%A4%E0%B3%86%E0%B2%AF-%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8-%E0%B2%AE%E0%B2%A4/
  15. "ಲಡಾಯಿ ಪ್ರಕಾಶನ". ಲಡಾಯಿ ಪ್ರಕಾಶನ. 2019-11-01. Retrieved 2023-09-17.
  16. "ನಾನೆಂಬ ಸ್ತ್ರೀ". ಅನುರಾಗ. 2015-12-12. Retrieved 2023-09-17.
  17. "ಆರ್ಕೈವ್ ನಕಲು". Archived from the original on 2016-03-04. Retrieved 2016-01-08. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  18. ಮರಿಸ್ವಾಮಿ, ಬಸವರಾಜು (2016-01-03). "ಸಾಮಾಜಿಕ ಚಳವಳಿಯ ಹರಿಕಾರೆ ಸಾವಿತ್ರಿಬಾಯಿ ಫುಲೆ". Vartha Bharati. Retrieved 2023-09-17.


"https://kn.wikipedia.org/w/index.php?title=ಸ್ತ್ರೀ&oldid=1270401" ಇಂದ ಪಡೆಯಲ್ಪಟ್ಟಿದೆ