ವಿಷಯಕ್ಕೆ ಹೋಗು

ಅಡಮಾನ ಸಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಡಮಾನ ಇಂದ ಪುನರ್ನಿರ್ದೇಶಿತ)

ಅಡಮಾನ ಸಾಲವು ಸ್ಥಿರಾಸ್ತಿ ಖರೀದಿಸುವ ಉದ್ದೇಶದಿಂದ ನಿಧಿ ಸಂಗ್ರಹಿಸಲು ನಿಜ ಆಸ್ತಿಯ ಖರೀದಿದಾರರಿಂದ ಬಳಸಲ್ಪಡುತ್ತದೆ; ಅಥವಾ ಪರ್ಯಾಯವಾಗಿ ಒತ್ತೆಯಿಡಲಾಗುತ್ತಿರುವ ಆಸ್ತಿಯ ಮೇಲೆ ಧಾರಣೆ ಹಾಕುವಾಗ ಯಾವುದೇ ಉದ್ದೇಶಕ್ಕಾಗಿ ನಿಧಿ ಸಂಗ್ರಹಿಸಲು ಆಸ್ತಿಯ ಮಾಲೀಕರಿಂದ ಬಳಸಲ್ಪಡುತ್ತದೆ. ಸಾಲಗಾರನ ಸ್ವತ್ತಿನ ಮೇಲೆ ಸಾಲವು ಭದ್ರಪಟ್ಟಿರುತ್ತದೆ. ಇದರರ್ಥ ಒಂದು ಕಾನೂನು ವಿಧಾನವನ್ನು ಸಿದ್ಧಪಡಿಸಲಾಗುತ್ತದೆ. ಇದು ಸಾಲ ತೀರಿಸುವ ಉದ್ದೇಶದಿಂದ ಆಧಾರವಾಗಿಟ್ಟ ಆಸ್ತಿಯನ್ನು ಸುಪರ್ದಿಗೆ ತೆಗೆದುಕೊಂಡು ಮಾರಾಟಮಾಡಲು ಸಾಲದಾತನಿಗೆ ಅನುಮತಿಸುತ್ತದೆ. ಇದು ಸಾಲಗಾರನು ಸಾಲ ತೀರಿಸಲು ತಪ್ಪಿದ ಅಥವಾ ಅದರ ನಿಯಮಗಳನ್ನು ಪಾಲಿಸಲು ವಿಫಲನಾದ ಸಂದರ್ಭದಲ್ಲಿ ಮಾತ್ರ ಆಗುತ್ತದೆ. ಅಡಮಾನ ಪದವನ್ನು ಒಂದು ಲಾಭ (ಸಾಲ) ಕ್ಕಾಗಿ ಮೇಲಾಧಾರದ ರೂಪದಲ್ಲಿ ಸಾಲಗಾರನು ಪರಿಗಣಿಕೆ ನೀಡುವುದು ಎಂದೂ ವಿವರಿಸಬಹುದು.

ಭೋಗ್ಯ ಸಾಲಗಾರರು ತಮ್ಮ ಮನೆಯನ್ನು ಒತ್ತೆಯಿಡುವ ವ್ಯಕ್ತಿಗಳಾಗಿರಬಹುದು ಅಥವಾ ವಾಣಿಜ್ಯ(ವ್ಯಾಪಾರ) ಆಸ್ತಿಯನ್ನು ಒತ್ತೆಯಿಡುವ ಉದ್ಯಮಗಳಾಗಿರಬಹುದು (ಉದಾಹರಣೆಗೆ, ತಮ್ಮ ಸ್ವಂತ ಉದ್ಯಮ ಆವರಣಗಳು, ಹಿಡುವಳಿದಾರರಿಗೆ ಕೊಟ್ಟ ವಸತಿ ಆಸ್ತಿ ಅಥವಾ ಹೂಡಿಕೆ ಬಂಡವಾಳ). ಸಾಲದಾತನು ಸಂಬಂಧಪಟ್ಟ ದೇಶವನ್ನು ಅವಲಂಬಿಸಿ ಸಾಮಾನ್ಯವಾಗಿ ಬ್ಯಾಂಕ್, ಕ್ರೆಡಿಟ್ ಒಕ್ಕೂಟ ಅಥವಾ ಕಟ್ಟಡ ಸಂಘದಂತಹ ಒಂದು ಹಣಕಾಸು ಸಂಸ್ಥೆಯಾಗಿರುತ್ತದೆ, ಮತ್ತು ಸಾಲದ ವ್ಯವಸ್ಥೆಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಮಧ್ಯವರ್ತಿಗಳ ಮೂಲಕ ಮಾಡಬಹುದು. ಸಾಲದ ಗಾತ್ರ, ಸಾಲದ ಮುಕ್ತಾಯ, ಬಡ್ಡಿ ದರ, ಸಾಲವನ್ನು ಪಾವತಿಸುವ ವಿಧಾನ, ಮತ್ತು ಬೇರೆ ಗುಣಲಕ್ಷಣಗಳಂತಹ ಅಡಮಾನ ಸಾಲದ ವೈಶಿಷ್ಟ್ಯಗಳು ಗಣನೀಯವಾಗಿ ಬದಲಾಗಬಹುದು. ಆಧಾರವಾಗಿಟ್ಟ ಆಸ್ತಿಯ ಮೇಲೆ ಸಾಲದಾತನ ಹಕ್ಕುಗಳು ಸಾಲಗಾರನ ಇತರ ಸಾಲದಾತರ ಮೇಲೆ ಆದ್ಯತೆ ತೆಗೆದುಕೊಳ್ಳುತ್ತವೆ. ಇದರರ್ಥ ಸಾಲಗಾರನು ದಿವಾಳಿಯಾದರೆ ಅಥವಾ ಪಾಪರ್ ಆದರೆ, ಆಧಾರವಾಗಿಟ್ಟ ಆಸ್ತಿಯ ಮಾರಾಟದಿಂದ ಅಡಮಾನ ಸಾಲದಾತನಿಗೆ ಮೊದಲು ಪೂರ್ಣವಾಗಿ ಮರುಪಾವತಿ ಮಾಡಿದ ನಂತರ, ಇತರ ಸಾಲದಾತರಿಗೆ ಸಾಲವನ್ನು ಪಾವತಿ ಮಾಡಲಾಗುತ್ತದೆ.

ಒತ್ತೆ[ಬದಲಾಯಿಸಿ]

ಒತ್ತೆ: ಕರಾರು ನೆರವೇರಿಕೆ, ಸಾಲ ಸಲುವಳಿ ಮೊದಲಾದವಕ್ಕೆ ಹೊಣೆಯಾಗಿ, ಕರಾರು ತಪ್ಪಿದ್ದರೆ ದಂಡವಾಗಿ ತೆಗೆದುಕೊಳ್ಳಬಹುದೆಂದು ಒಪ್ಪಿ, ಒಬ್ಬ ಇನ್ನೊಬ್ಬನಲ್ಲಿ ವಸ್ತುವನ್ನಿಡುವ ವ್ಯವಹಾರ (ಪ್ಲೆಜ್). ಹೀಗೆ ಇಟ್ಟ ವಸ್ತುವನ್ನೂ ಈ ಹೆಸರಿನಿಂದ ಕರೆಯುವ ವಾಡಿಕೆಯುಂಟು. ಅಡವು, ಈಡು, ಗಿರವಿ, ನ್ಯಾಸ, ಓಲು ಇವೂ ಪರ್ಯಾಯ ಪದಗಳಾಗಿ ಬಳಕೆಯಲ್ಲಿವೆ. ಈಚೆಗೆ ಒತ್ತೆ ಮತ್ತು ಗಿರವಿ ಎಂಬ ಶಬ್ದಗಳನ್ನು ಇಂಗ್ಲಿಷಿನ ಮಾರ್ಗೇಜ್ ಶಬ್ದದ ಅರ್ಥದಲ್ಲೂ ಬಳಸಲಾಗುತ್ತಿದೆ. ಈ ಶಬ್ದಗಳ ಪರಿಮಿರ್ತಾಥಕ್ಕೆ ಬ್ರಿಟಿಷರ ಆಳ್ವಿಕೆಯ ಕಾಲದ ಇಂಗ್ಲಿಷ್ ನ್ಯಾಯದ ಪ್ರಭಾವ ಕಾರಣ.

ಭಾರತದಲ್ಲಿ[ಬದಲಾಯಿಸಿ]

ಪುರಾತನ ಕಾಲದಿಂದಲೂ ಭಾರತದಲ್ಲಿ ಒತ್ತೆ ಇಡುವ ಪದ್ಧತಿ ಇತ್ತು ಎಂಬುದಕ್ಕೆ ಭಾರತೀಯ ಪ್ರಾಚೀನ ಸಾಹಿತ್ಯ ಮತ್ತು ಕೌಟಿಲ್ಯಅರ್ಥಶಾಸ್ತ್ರಗಳಲ್ಲಿ ನಿದರ್ಶನಗಳಿವೆ. ಆಗ ಚರ-ಸ್ಥಿರ ಆಸ್ತಿಗಳನ್ನೂ ದನಕರುಗಳನ್ನೂ ಅಲ್ಲದೆ ಮನುಷ್ಯರನ್ನು ಕೂಡ ಒತ್ತೆ ಇಡಲಾಗುತ್ತಿತ್ತು. ಮನುಷ್ಯರನ್ನು ಅಡವಿಟ್ಟಾಗ, ಹಾಗೆ ಅಡಿವಿನ ವಸ್ತುಗಳಾದ ಮನುಷ್ಯರನ್ನು, ಅದರಲ್ಲೂ ಸ್ತ್ರೀಯರನ್ನು ಮತ್ತು ಕನ್ಯೆಯರನ್ನು ಅಡವು ಇಟ್ಟುಕೊಂಡವನು ಹೇಗೆ ನಡೆಯಿಸಿಕೊಳ್ಳಬೇಕು ಎಂಬ ಬಗ್ಗೆ ನಿಯಮಗಳು ಇದ್ದುವು. ಇತರ ವಸ್ತುಗಳ ಒತ್ತೆಯ ಬಗ್ಗೆಯೂ ನಿಯಮಗಳು ಇದ್ದುವು. ಅಂಥ ನಿಯಮಗಳನ್ನು ಅತಿಕ್ರಮಿಸಿದರೆ ದಂಡನೆಗಳು ಇದ್ದುವು. ಅಡವಾಗಿದ್ದ ವ್ಯಕ್ತಿ ಓಡಿಹೋದರೆ, ಕರಾರಿನ ಪ್ರಕಾರ ನಡೆದುಕೊಳ್ಳದಿದ್ದರೆ, ಆ ಸಂಬಂಧದ ಹಣವನ್ನು ಕೂಡಲೇ ವಾಪಸು ಕೊಡಬೇಕಾಗುತ್ತಿತ್ತು. ಮನುಷ್ಯರನ್ನು ಒತ್ತೆ ಇಡುವ ಪರಿಪಾಟಿ ಕಾಲಕ್ರಮೇಣದಲ್ಲಿ ನಿಂತುಹೋಯಿತು. ಸ್ಥಿರಾಸ್ತಿಯ ಪರಭಾರೆ ಅಥವಾ ಹಸ್ತಾಂತರ, ಕರಾರುಗಳು, ಹಣದ ಲೇವಾದೇವಿ, ಒತ್ತೆ ಇಟ್ಟುಕೊಂಡು ಕೊಡುವ ಸಾಲ-ಈ ಕುರಿತ ಕಾಯಿದೆಗಳು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಜಾರಿಗೆ ಬಂದುವು. ಇವುಗಳಲ್ಲಿ ಒತ್ತೆಯ ವಿವರಣೆಯಿದೆ.

ನಿಯಮಗಳು[ಬದಲಾಯಿಸಿ]

ಒತ್ತೆಯನ್ನು ಕುರಿತ ನಿಯಮಗಳನ್ನು ಕರಾರುಗಳ ಬಗೆಗಿನ ಕಾಯಿದೆಯಲ್ಲಿ ಹೇಳಲಾಗಿದೆ. ಯಾವೊಬ್ಬ ವ್ಯಕ್ತಿಯ ಹತ್ತಿರ ಆತನಿಂದ ಪಡೆದ ಸಾಲದ ಹಣಕ್ಕೆ ಇಲ್ಲವೆ ಕೊಟ್ಟ ವಚನ ಪರಿಪಾಲನೆಯ ನಿಮಿತ್ತ ಈಡು ಅಥವಾ ಜಾಮೀನಿನಂತೆ ಚರಸ್ವತ್ತನ್ನು ವಹಿಸಿಕೊಡುವುದಕ್ಕೆ ಒತ್ತೆ ಎನ್ನಲಾಗುತ್ತದೆ. ಮಾರಾಟಕ್ಕೆ ವಸ್ತುವಾಗಬಲ್ಲ ಯಾವ ಚರಸ್ವತ್ತನ್ನೂ ಸಾಮಾನ್ಯವಾಗಿ ಒತ್ತೆ ಇಡಬಹುದು. ಹುಂಡಿ, ಷೇರು ಮುಂತಾದವನ್ನೂ ಒತ್ತೆ ಇಡಲು ಸಾಧ್ಯ. ನಗದು ಹಣ ಮಾತ್ರ ಒತ್ತೆಗೆ ಆಧಾರವಾಗಲಾರದು. ಈಡು ಇಟ್ಟ ವಸ್ತುವನ್ನು ಒತ್ತೆ ಇಟ್ಟುಕೊಳ್ಳುವವನ ಸ್ವಾಧೀನಕ್ಕೆ ವಹಿಸಿ ಕೊಡುವುದು ಒತ್ತೆಯ ಮುಖ್ಯ ಲಕ್ಷಣಗಳಲ್ಲಿ ಒಂದು. ಅದನ್ನು ವಾಸ್ತವವಾಗಿಯಲ್ಲದೆ ವಿಧಿಪುರ್ವಕವಾಗಿಯೂ ಕೊಡಬೇಕು. ಆದರೆ ಕೇವಲ ಸ್ವಾಧೀನದಲ್ಲಿರÀÄವ ಕಾರಣಕ್ಕಾಗಿ, ಯಾವೊಂದು ಸ್ವತ್ತನ್ನೂ ಒತ್ತೆಯ ಮಾಲು ಎಂದು ಹೇಳಲು ಬರುವುದಿಲ್ಲ. ಅನೇಕ ಕಾರಣಗಳಿಗಾಗಿ ಒಬ್ಬರ ಸ್ವತ್ತು ಇನ್ನೊಬ್ಬರ ಸ್ವಾಧೀನದಲ್ಲಿರಬಹುದು. ಸಾಲದ ಹಣವನ್ನು ಪಡೆಯುವಾಗ, ಇಲ್ಲವೆ ಕರಾರಿನ ಮೇರೆಗೆ ಪರಿಮಿತಕಾಲದಲ್ಲಿ ಒತ್ತೆಯ ಮಾಲಿನ ಸ್ವಾಧೀನವನ್ನು ಒತ್ತೆ ಇಟ್ಟುಕೊಳ್ಳುವವನಿಗೆ ವಹಿಸಿಕೊಡಬೇಕು. ಸ್ವತ್ತನ್ನೇ ವಹಿಸಿಕೊಡುವ ಆವಶ್ಯಕತೆ ಇಲ್ಲ. ಸ್ವತ್ತಿನ ಆಧಾರ ಪತ್ರಗಳನ್ನು, ಇಲ್ಲವೆ ರೈಲ್ವೆ ರಸೀದಿ ಮುಂತಾದವುಗಳನ್ನು ಸ್ವಾಧೀನಕ್ಕೊಪ್ಪಿಸುವುದರ ಮೂಲಕ ಸ್ವತ್ತನ್ನು ಒತ್ತೆ ಇಡಬಹುದು.

ಒತ್ತೆ ಇಟ್ಟ ಸ್ವತ್ತಿನ ಸಾಮಾನ್ಯ ಒಡೆತನ ಒತ್ತೆದಾರನಲ್ಲಿ (ಒತ್ತೆ ಇಟ್ಟವ) ಇದ್ದರೂ ಒತ್ತೆಧಾರಿಗೆ (ಒತ್ತೆ ಇಟ್ಟುಕೊಂಡವ) ವಿಶೇಷ ಒಡೆತನ ಬರುತ್ತದೆ. ಕರಾರುಗಳ ಬಗೆಗಿನ ಕಾಯಿದೆ ಮತ್ತು ಸ್ಥಿರಾಸ್ತಿಯ ಹಸ್ತಾಂತರದ ಬಗೆಗಿನ ಕಾಯಿದೆ, ಇವೆರಡರಲ್ಲೂ ಚರಾಸ್ತಿಯ ಅಡವುಗಳಿಗೆ ಸಂಬಂಧಪಟ್ಟಂತೆ ಏನೂ ಹೇಳಿಲ್ಲವಾದ ಕಾರಣ, ಇಂಥ ಚರಾಸ್ತಿಯ ಅಡವುಗಳನ್ನು ಭಾರತದ ನ್ಯಾಯಾಲಯಗಳು ಕ್ರಮಬದ್ದ ಅಡವುಗಳು ಎಂದು ಪರಿಗಣಿಸಿವೆ. ಇಂಥ ಅಡವು ಮತ್ತು ಒತ್ತೆ ಇವುಗಳಲ್ಲಿರುವ ಮುಖ್ಯ ವ್ಯತ್ಯಾಸಗಳು ಎರಡು. ಅಡವು ಇಟ್ಟಾಗ, ಒತ್ತೆಯ ಸಂದರ್ಭದಲ್ಲಿದ್ದ ಹಾಗೆ, ಅಡವಿನ ಸ್ವತ್ತನ್ನು ಅಡವು ಇಟ್ಟುಕೊಳ್ಳುವವನ ಸ್ವಾಧೀನಕ್ಕೆ ವಹಿಸಿಕೊಡಲೇ ಬೇಕಾಗಿಲ್ಲ. ಅಡವು ಇಟ್ಟ ವಸ್ತುಗಳ ಬಗೆಗಿನ ಹಲವು ಹಕ್ಕುಗಳು ಕೆಲವು ಷರತ್ತುಗಳಿಗಧೀನವಾಗಿ, ಅಡವಿಟ್ಟುಕೊಂಡವನಿಗೆ ಹಸ್ತಾಂತರವಾಗುತ್ತವೆ. ಒತ್ತೆ ಇಟ್ಟಾಗ, ಒತ್ತೆಯ ಮಾಲನ್ನು ಮಾರುವ ಅಧಿಕಾರದ ಹೊರತು ಬೇರೆ ಹಕ್ಕುಗಳ ಹಸ್ತಾಂತರವಾಗುವುದಿಲ್ಲ.

ಆರ್ಹತೆ[ಬದಲಾಯಿಸಿ]

ಒತ್ತೆ ಇಡುವುದಕ್ಕೆ ಎಲ್ಲರೂ ಅರ್ಹರಿರುವುದಿಲ್ಲ. ಕರಾರುಗಳನ್ನು ಮಾಡಿಕೊಳ್ಳಲು ಶಕ್ತರಾಗಿರುವವರು, ಒತ್ತೆ ಇಡಲ್ಪಡುವ ವಸ್ತುವಿನ ಒಡೆತನವಿರುವವರು ಅಥವಾ ಹಾಗೆ ಒಡೆತನವಿರುವವರ ವ್ಯವಹಾರಗಳನ್ನು ನೋಡಿಕೊಳ್ಳುವ ಕಾರಭಾರಿಗಳು ಮತ್ತು ವರ್ತಕ ಮಂಡಳಿಯ ಪಾಲುಗಾರರು ಒತ್ತೆ ಇಡಬಹುದು. ಗಂಡಂದಿರ ಸ್ವತ್ತನ್ನು ಪತ್ನಿಯರೂ, ಅಧಿಕಾರವಿಲ್ಲದ ಪಕ್ಷದಲ್ಲಿ ಮಾಲೀಕನ ಸ್ವತ್ತನ್ನು ಸೇವಕರೂ, ಒತ್ತೆಯಿಡಲಾಗುವುದಿಲ್ಲ. ಹಲವು ಸಂದರ್ಭಗಳಲ್ಲಿ ವಾಣಿಜ್ಯ ಮುತಾಲಿಕರು (ಪ್ರತಿನಿಧಿಗಳು) ಒತ್ತೆ ಇಡಬಹುದು. ಕಮಿಷನ್ನಿನ ಮೇಲೆ ಮಾರಾಟಮಾಡುವವರಿಂದ ಸದುದ್ದೇಶದಿಂದ ಒತ್ತೆ ಇಟ್ಟುಕೊಂಡಿದ್ದರೆ ತಪ್ಪೇನಿಲ್ಲ. ದಳ್ಳಾಳಿಗಳು ಇಡುವ ಒತ್ತೆಗಳಿಗೂ ಈ ತತ್ತ್ವ ಅನ್ವಯವಾಗುತ್ತದೆ. ಒತ್ತೆ ಇಡುವವನ ಸ್ವಾಧೀನಕ್ಕೆ ಒತ್ತೆಯ ಮಾಲು ಹೇಗೆ ಬಂತು ಎಂಬುದರ ಸರಿಯಾದ ಮಾಹಿತಿ ಇಲ್ಲದಾಗ ಮತ್ತು ಸದುದ್ದೇಶ ಪುರಿತನಾಗಿ ಒತ್ತೆ ಇಟ್ಟುಕೊಂಡಿದ್ದರೆ, ಅಂಥ ಒತ್ತೆಯ ಕರಾರಿಗೆ ಒತ್ತೆಯ ಮಾಲಿನ ಒಡೆಯನೂ ಬಾಧ್ಯನಾಗುತ್ತಾನೆ. ಯಾವೊಬ್ಬ ವ್ಯಕ್ತಿಗೆ ಒತ್ತೆಯ ಮಾಲಿನಲ್ಲಿ ಪರಿಮಿತಿ ಹಿತವಿದ್ದರೂ ಆತ ಅದನ್ನು ಒತ್ತೆ ಇಟ್ಟಾಗ, ಅಂಥ ವ್ಯಕ್ತಿಯ ಹಿತದ ಮಟ್ಟಿಗೆ ಒತ್ತೆ ಸಿಂಧುವಾಗಿರುತ್ತದೆ.

ಒತ್ತೆದಾರ ಸಾಲದ ಹಣವನ್ನು ಮತ್ತು ತತ್ಸಂಬಂಧದ ಬಡ್ಡಿಯನ್ನು ಕೊಡುವವರೆಗೆ ಅಥವಾ ಕೊಟ್ಟ ವಚನವನ್ನು ಪುರೈಸುವವರೆಗೆ ಮತ್ತು ಒತ್ತೆಯ ಮಾಲನ್ನು ಸ್ವಾಧೀನದಲ್ಲಿಟ್ಟುಕೊಂಡಿದ್ದಾರೆ ಆ ಸಂಬಂಧವಾಗಿ ಅಥವಾ ಅಂಥ ಸ್ವತ್ತಿನ ರಕ್ಷಣೆಯ ಸಂಬಂಧವಾಗಿ ತಗಲಿದ ಖರ್ಚುವೆಚ್ಚಗಳನ್ನು ಕೊಡುವವರೆಗೆ, ಒತ್ತೆಧಾರಿ ಒತ್ತೆಯ ಸ್ವತ್ತಿನ ಸ್ವಾಧೀನಕ್ಕೆ ಬಾಧ್ಯನಾಗಿರುತ್ತಾನೆ. ಸ್ವತ್ತಿನ ರಕ್ಷಣೆಯ ಸಮಬಂಧದಲ್ಲಿ ತಗಲಿದ ವಿಶೇಷ ವೆಚ್ಚಗಳನ್ನು ಕೂಡ ಒತ್ತೆದಾರ ಕೊಡಬೇಕು. ಒತ್ತೇದಾರ ವಚನ ಪರಿಪಾಲಿಸಿದರೆ ಇಲ್ಲವೆ ಸಾಲ ತೆಗೆದುಕೊಂಡಿದ್ದರೆ ಸಂದಾಯ ಮಾಡಬೇಕಾದುದನ್ನು ಸಲ್ಲಿಸಿದರೆ, ಒತ್ತೆ ಇಟ್ಟ ವಸ್ತುಗಳನ್ನು ವಾಪಸು ಪಡೆಯಲು ಬಾಧ್ಯನಾಗುತ್ತಾನೆ; ಒಂದು ವೇಳೆ ಬರಬೇಕಾದ ಒತ್ತೆಯ ಮಾಲು ವಾಪಸು ಬಾರದಿದ್ದರೆ, ಅವನು ಅದರ ವಾಪಸಾತಿಗಾಗಿ ದಾವೆ ಹಾಕಬಹುದು.

ಸಾಧಾರಣವಾಗಿ ಕರಾರುಗಳು ಇಲ್ಲದಿದ್ದಲ್ಲಿ ಒಂದು ಕಾರಣಕ್ಕೆ ಅಥವಾ ಮೊತ್ತಕ್ಕೆ ಒತ್ತೆ ಇಡಲಾದ ಸ್ವತ್ತನ್ನು ಬೇರೊಂದು ಕಾರಣಕ್ಕೆ ಅಥವಾ ಆಮೇಲೆ ತೆಗೆದುಕೊಂಡ ಸಾಲಕ್ಕೆ ಒತ್ತೆಯ ಮಾಲೆಂದು ಪರಿಗಣಿಸಲಾಗುವುದಿಲ್ಲ. ಆದರೆ ಅಂಥ ಸಂದರ್ಭಗಳಲ್ಲಿ ಆಮೇಲೆ ತೆಗೆದುಕೊಂಡ ಸಾಲಗಳಿಗೂ ಮೊದಲಿನ ಸಾಲದ ಒತ್ತೆಯ ಮಾಲಿಗೂ ಸಂಬಂಧವಿದೆ ಎಂದು ಊಹಿಸಬಹುದು.

ಒತ್ತೆ ಇಟ್ಟವನು ವಚನಭ್ರಷ್ಟನಾದರೆ, ಸಾಲದ ಹಣವನ್ನು ಸಲ್ಲಿಸದಿದ್ದರೆ, ಒತ್ತೆ ಇಟ್ಟುಕೊಂಡವನನ್ನು ಒತ್ತೆಯ ಕರಾರು ಪುರೈಕೆಗಾಗಿ ದಾವೆ ಹಾಕಬಹುದು. ಇಲ್ಲವೆ ಅವನಿಗೆ ಅವಕಾಶಕೊಟ್ಟು ಆಮೇಲೆ ಒತ್ತೆಯ ಮಾಲನ್ನು ಮಾರಬಹುದು. ಕರಾರು ಏನೇ ಇದ್ದರೂ ಅವಕಾಶ ಮಾತ್ರ ಕೊಡಲೇಬೇಕು. ಒತ್ತೆ ಇಟ್ಟವನ ಒಪ್ಪಿಗೆಯ ಮೇರೆಗೆ ಮಾರಾಟ ಮಾಡುವುದಾದರೆ, ಅವಕಾಶ ಕೊಡುವ ಪ್ರಶ್ನೆ ಬರುವುದಿಲ್ಲ. ಕೊಡಬೇಕಾದ ಸಮಯಕ್ಕೆ ಸಾಲವನ್ನು ಹಿಂತಿರುಗಿಸಲಿಲ್ಲ ಅಥವಾ ಕೊಟ್ಟ ವಚನ ಪಾಲಿಸಲಿಲ್ಲ-ಎಂಬ ಕಾರಣದಿಂದ ಒತ್ತೆಯ ಮಾಲನ್ನು ಬಿಡಿಸಿಕೊಳ್ಳುವ ಹಕ್ಕನ್ನು ಒತ್ತೆದಾರ ಕಳೆದುಕೊಳ್ಳುವುದಿಲ್ಲ. ಗಡು ತೀರಿದ್ದರೂ ಒತ್ತೆದಾರನ ಕರ್ತವ್ಯದಲ್ಲಿ ಲೋಪ ಉಂಟಾಗಿದ್ದರೂ ಸ್ವತ್ತಿನ ಮಾರಾಟದ ಬಗ್ಗೆ ಸೂಚನೆ ಕಳಿಸಿದ್ದರೂ ಕಡೆಯ ಗಳಿಗೆಯಲ್ಲಿ, ಆದರೆ ಸ್ವತ್ತಿನ ಮಾರಾಟಕ್ಕೆ ಮುಂಚೆ, ಒತ್ತೆದಾರ ತಾನು ನ್ಯಾಯಬದ್ದವಾಗಿ ಕೊಡಬೇಕಾದ ಎಲ್ಲ ಬಾಕಿಯನ್ನೂ ಕೊಟ್ಟು ಒತ್ತೆಯ ಮಾಲನ್ನು ಬಿಡಿಸಿಕೊಳ್ಳಬಹುದು.

ಮಾರಾಟ ಮಾಡಿದ ಮೇಲೆ ಬಂದ ಹಣ ತನಗೆ ಸಲ್ಲಬೇಕಾದ ಹಣಕ್ಕಿಂತ ಕಡಿಮೆ ಇದ್ದರೆ ಬರಬೇಕಾದ ಉಳಿದ ಹಣವನ್ನು ಪಡೆಯಲು ಕ್ರಮ ಜರುಗಿಸಬಹುದು. ಬಂದ ಹಣ ಹೆಚ್ಚಿದರೆ, ಒತ್ತೆದಾರನಿಗೆ ಮಿಕ್ಕ ಹಣವನ್ನು ಸಂದಾಯ ಮಾಡಬೇಕು. ಒತ್ತೆಧಾರಿ ಒತ್ತೆಯ ಮಾಲನ್ನು ನ್ಯಾಯಾಲಯದ ಮೂಲಕ ಮಾರಾಟ ಮಾಡಿಸಿದರೆ ಅದರಲ್ಲಿ ಆತನೂ ಖರೀದಿದಾರನಾಗಬಹುದು. ಒತ್ತೆ ಇಟ್ಟ ಸರಕನ್ನು ಬೇರೆ ಬಗೆಯಲ್ಲಿ ಮಾರಾಟ ಮಾಡಿದರೆ ಆಗ ಆತ ಖರೀದಿ ದಾರನಾಗುವಂತಿಲ್ಲ. ಅಮೃತಸರದಲ್ಲಿ ಒಂದು ಪದ್ದತಿ ರೂಢಿಯಲ್ಲಿದೆ: ಒಬ್ಬ ವ್ಯಕ್ತಿ ಇನ್ನೊಬ್ಬನ ಬಳಿ ತನ್ನ ಸರಕನ್ನು ಇಡಗೊಟ್ಟು ಅವನಿಂದ ಹಣವನ್ನು ಸಾಲವಾಗಿ ಪಡೆದರೆ ಈ ಸಾಲವನ್ನು ಅವನಲ್ಲಿ ಬಿಟ್ಟಿರುವ ಸರಕಿನ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆಯೆಂದು ಭಾವಿಸಲಾಗುತ್ತದೆ. ಸಾಲ ಕೊಟ್ಟವನಿಗೆ ಒತ್ತೆಧಾರಿಯ ಎಲ್ಲ ಹಕ್ಕುಗಳೂ ಬರುತ್ತವೆ.

ಒತ್ತೆಯ ಕರಾರು ಸಾಲಸಲುವಳಿ ಇಲ್ಲವೆ ವಚನಪಾಲನೆ ಆದೊಡನೆಯೇ ಕೊನೆಗೊಳ್ಳುತ್ತದೆ. ಸಾಲವನ್ನು ಬೇರಾವುದೇ ಬಗೆಯಲ್ಲಿ ವಾಸ್ತವವಾಗಿಯಾಗಲಿ ನ್ಯಾಯ ಪ್ರವರ್ತನೆಯಿಂದಾಗಲಿ ತೀರಿಸಿದಾಗಲೂ ಕೊನೆಗೊಳ್ಳುತ್ತದೆ. ಒತ್ತೆ ಇಟ್ಟ ಸ್ವತ್ತಿಗೆ ಬದಲಾಗಿ ಬೇರೆ ಸ್ವತ್ತನ್ನು ಒತ್ತೆ ಇಟ್ಟಾಗಲೂ ಮೊದಲಿನದಕ್ಕಿಂತ ಹೆಚ್ಚಿನ ಈಡು ಒದಗಿಸಿದಾಗಲೂ ಕೊನೆಗೊಳ್ಳುತ್ತದೆ.

ಒತ್ತೆ ಇಟ್ಟುಕೊಂಡವನು ಒತ್ತೆ ಇಟ್ಟ ಸ್ವತ್ತನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಅಗತ್ಯ. ಅವನು ಅದನ್ನು ಬಳಸುವಂತಿಲ್ಲ. ಹಾಗೇನಾದರೂ ಬಳಸಿದರೆ ಅದರಿಂದಾದ ನಷ್ಟವನ್ನವನು ಕಟ್ಟಿಕೊಡಲು ಬಾಧ್ಯನಾಗುತ್ತಾನೆ. ಒತ್ತೆ ಇಟ್ಟ ಸ್ವತ್ತುಗಳಿಸಿದ ಆದಾಯ, ಅದರಿಂದ ಬಂದ ಉತ್ಪನ್ನಗಳೇನಾದರೂ ಇದ್ದರೆ ಅವನ್ನು ಸಾಲ ತೀರಿದ ಮೇಲೆ ಒತ್ತೆ ಇಟ್ಟವನಿಗೆ ಕೊಡಬೇಕು.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: