ವಿಷಯಕ್ಕೆ ಹೋಗು

ಗ್ರಹಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗ್ರಹಣಗಳು ಇಂದ ಪುನರ್ನಿರ್ದೇಶಿತ)
ಇದೇ ಹೆಸರಿನ ಕಾದಂಬರಿಯ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.
೧೯೯೯ರ ಸೂರ್ಯಗ್ರಹಣದ ಅವಧಿಯಲ್ಲಿ ಖಗ್ರಾಸತೆ. ಪರಿಧೀಯ ಅಂಚುಗಳ ಉದ್ದಕ್ಕೂ ಸೌರ ಉಬ್ಬುಗಳು (ಕೆಂಪು ಬಣ್ಣದಲ್ಲಿ) ಮತ್ತು ವ್ಯಾಪಕವಾದ ಪ್ರಭಾವಲಯದ ತಂತುಗಳನ್ನು ಕಾಣಬಹುದು.

ಗ್ರಹಣವು ಒಂದು ಬಾಹ್ಶಾಕಾಶದ ವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ಒಂದು ಖಗೋಳಶಾಸ್ತ್ರೀಯ ಘಟನೆ. ಅಂದರೆ ಒಂದು ಆಕಾಶಕಾಯ ಇನ್ನೊಂದು ಆಕಾಶ ಕಾಯದ ನೆರಳಿನಿಂದ ಆಂಶಿಕವಾಗಿ ಇಲ್ಲವೇ ಪೂರ್ಣವಾಗಿ ಅಸ್ಫುಟವಾಗುವಿಕೆ (ಎಕ್ಲಿಪ್ಸ್, ಸೆಲೆಸ್ಟಿಯಲ್). ಸೌರಮಂಡಲದಂತಹ ಒಂದು ತಾರಾಮಂಡಲದಲ್ಲಿ ಗ್ರಹಣ ಉಂಟಾದಾಗ, ಒಂದು ಬಗೆಯ ಸಂಯೋಗದ (ಸರಳ ರೇಖೆಯಲ್ಲಿ ಒಂದೇ ಗುರುತ್ವಾಕರ್ಷಣ ವ್ಯವಸ್ಥೆಯಲ್ಲಿನ ಮೂರು ಅಥವಾ ಹೆಚ್ಚು ಬಾಹ್ಯಾಕಾಶ ಕಾಯಗಳ ಹೊಂದಿಕೆ) ರಚನೆಯಾಗುತ್ತದೆ. ಗ್ರಹಣ ಪದವನ್ನು ಹಲವುವೇಳೆ, ಒಂದು ಸೂರ್ಯ ಗ್ರಹಣ (ಚಂದ್ರನ ನೆರಳು ಭೂಮಿಯ ಮೇಲ್ಮೈಯನ್ನು ಹಾದುಹೋಗುವ ಘಟನೆ), ಅಥವಾ ಒಂದು ಚಂದ್ರಗ್ರಹಣವನ್ನು (ಚಂದ್ರವು ಭೂಮಿಯ ನೆರಳಿನಲ್ಲಿ ಚಲಿಸುವ ಘಟನೆ) ವಿವರಿಸಲು ಬಳಸಲಾಗುತ್ತದೆ.

ಸೂರ್ಯ ಹಗಲಿನಲ್ಲಿಯೂ, ಚಂದ್ರ ಕೆಲವೊಮ್ಮೆ ಹಗಲಿನಲ್ಲಿಯೂ ಕೆಲವೊಮ್ಮೆ ರಾತ್ರಿಯಲ್ಲಿಯೂ ಕಾಣುವನು.

ಗ್ರಹಣಕ್ಕೆ ಒಳಗಾಗುವ ಕಾಯ ಸ್ವಯಂಪ್ರಭಾಯುತವಾಗಿದ್ದು ಅಪಾರ ಕಾಯವೊಂದರ ನೆರಳಿನಿಂದ ಅಸ್ಫುಟವಾಗುವುದು ಒಂದು ಬಗೆಯ ಗ್ರಹಣ; ಬದಲು ಅದು ಪ್ರತಿಫಲಿತ ಬೆಳಕಿನಿಂದ ಹೊಳೆಯುವುದಾಗಿದ್ದು ಅಪಾರ ಕಾಯವೊಂದು ಇದಕ್ಕೂ ಇದರ ಬೆಳಕಿನ ಆಕಾರಕ್ಕೂ ನಡುವೆ ಸರಿಯುವಾಗ ಅಸ್ಫುಟವಾಗುವುದು ಇನ್ನೊಂದು ಬಗೆಯ ಗ್ರಹಣ. ಮೊದಲನೆಯ ಪ್ರರೂಪದ ಗ್ರಹಣಕ್ಕೆ ಆಚ್ಛಾದನೆ (ಅಕ್ಕಲ್ಟೇಷನ್) ಎಂದು ಹೆಸರು. ಇದಕ್ಕೆ ಸೂರ್ಯಗ್ರಹಣ ಮತ್ತು ನಕ್ಷತ್ರಗ್ರಹಣ ನಿದರ್ಶನಗಳು. ಸೂರ್ಯಗ್ರಹಣದಲ್ಲಿ ವೀಕ್ಷಕನಿಗೂ ಸೂರ್ಯನಿಗೂ ನಡುವೆ ಚಂದ್ರ ಸರಿಯುತ್ತದೆ. ನಕ್ಷತ್ರಗ್ರಹಣದಲ್ಲಾದರೋ ವೀಕ್ಷಕನಿಗೂ ನಕ್ಷತ್ರಕ್ಕೂ ನಡುವೆ ಚಂದ್ರ ಇಲ್ಲವೇ ಒಂದು ಗ್ರಹ ಸರಿಯುತ್ತದೆ. ಗ್ರಹಣಕಾರಕ ಯಮಳ ನಕ್ಷತ್ರಗಳು (ಎಕ್ಲಿಪ್ಸಿಂಗ್ ಬೈನರಿ ಸ್ಟಾರ್ಸ್) ಕೂಡ ಈ ಬಗೆಯ ಗ್ರಹಣಕ್ಕೆ ನಿದರ್ಶನಗಳು. ಎರಡನೆಯ ಪ್ರರೂಪದ ಗ್ರಹಣಕ್ಕೆ ಚಂದ್ರ ಗ್ರಹಣ ಅದರಂತೆಯೇ ಗ್ರಹಗಳ ಉಪಗ್ರಹಗಳ ಗ್ರಹಣಗಳು ಕೂಡ ಉದಾಹರಣೆಗಳು. ರೂಢಿಯಲ್ಲಿ ಗ್ರಹಣ ಎನ್ನುವ ಪದದ ಬಳಕೆ ಭೂಮಿಯಿಂದ ಕಾಣುವಂತೆ ಸೂರ್ಯ ಮತ್ತು ಚಂದ್ರಗ್ರಹಣಗಳನ್ನು ಕುರಿತು. ಇದಲ್ಲದೆ ಶುಕ್ರ ಮತ್ತು ಬುಧ, ಸೂರ್ಯನ ಮುಂದೆ ಹಾದುಹೋಗುವ ಅಪೂರ್ವ ಘಟನೆಗಳನ್ನು ಸಂಕ್ರಮ ಎಂದು ಕರೆಯಲಾಗಿದೆ.

ಗ್ರಹಣಗಳನ್ನು ಭಯಪೂರಿತ ಮನಸ್ಸಿನಿಂದ ಬರಮಾಡಿಕೊಳ್ಳುವ ಬದಲು ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸತ್ಯಾನ್ವೇಷಕರಂತೆ ನಿರೀಕ್ಷಿಸಬೇಕು. ಗ್ರಹಣಗಳು ಆಕಾಶಕಾಯಗಳ ಬಗೆಗಿನ ನೂತನ ಸತ್ಯಗಳನ್ನು ಆವಿಷ್ಕರಿಸಲು ಅತ್ಯಂತ ವಿರಳ ಅವಕಾಶವನ್ನು ಒದಗಿಸುತ್ತವೆ.

ಸೂರ್ಯ ಗ್ರಹಣಗಳು

[ಬದಲಾಯಿಸಿ]
Sun-moon configurations that produce a total (A), annular (B), and partial (C) solar eclipse

ಭೂಮಿ ಸ್ವಂತಾಕ್ಷದ ಸುತ್ತ ಆವರ್ತಿಸುತ್ತ ಮತ್ತು ಸೂರ್ಯನ ಸುತ್ತ ಪರಿಭ್ರಮಿಸುತ್ತ ಇರುವ ಒಂದು ಅಪಾರ ಕಾಯ; ಚಂದ್ರ ಸ್ವಂತಾಕ್ಷದ ಸುತ್ತ ಆವರ್ತಿಸುತ್ತ ಮತ್ತು ಭೂಮಿಯ ಸುತ್ತ ಪರಿಭ್ರಮಿಸುತ್ತ ಇರುವ ಇನ್ನೊಂದು ಅಪಾರ ಕಾಯ. ಭೂಮಿ ಸಾಗುವ ಕಕ್ಷಾತಲ ಖಗೋಳವನ್ನು ಛೇದಿಸುವ ಮಹಾವೃತ್ತಕ್ಕೆ ಕ್ರಾಂತಿವೃತ್ತ ಎಂದು ಹೆಸರು. ಈ ಮಹಾವೃತ್ತದ ಮೇಲೆ ಭೂಮಿಯ ಸುತ್ತ ಸೂರ್ಯ ಪರಿಭ್ರಮಿಸುತ್ತಿರುವಂತೆ ಭೂಮಿಯ ಮೇಲಿನ ವೀಕ್ಷಕನಿಗೆ ಭಾಸವಾಗುವುದು. ಚಂದ್ರನ ಕಕ್ಷಾತಲ ಖಗೋಳವನ್ನು ಇನ್ನೊಂದು ಮಹಾವೃತ್ತದಲ್ಲಿ ಛೇದಿಸುತ್ತದೆ. ಈ ಮಹಾವೃತ್ತದ ಮೇಲೆ ಭೂಮಿಯ ಸುತ್ತ ಚಂದ್ರ ಪರಿಭ್ರಮಿಸುತ್ತಿರುವಂತೆ ಭೂಮಿಯ ಮೇಲಿನ ವೀಕ್ಷಕನಿಗೆ ಭಾಸವಾಗುವುದು. ಕ್ರಾಂತಿವೃತ್ತತಲವೂ ಚಂದ್ರಕಕ್ಷಾವೃತ್ತತಲವೂ ಎರಡು ಬಿಂದುಗಳಲ್ಲಿ (O, O) ಪರಸ್ಪರ ಸಂಧಿಸುತ್ತವೆ; ಇವೆರಡು ತಲಗಳೂ ಪರಸ್ಪರ 50 8' ಗಳಷ್ಟು ಬಾಗಿಕೊಂಡಿವೆ. O ಮತ್ತು O ಬಿಂದುಗಳಿಗೆ ಪಾತ ಬಿಂದುಗಳು ಅಥವಾ ಸರಳವಾಗಿ ಪಾತಗಳು (ನೋಡ್ಸ್) ಎಂದು ಹೆಸರು. ಚಂದ್ರ ಮತ್ತು ಸೂರ್ಯರು ಆಯಾ ಕಕ್ಷೆಯ ಮೇಲೆ ಅನುರೂಪ ಕಕ್ಷಾವೇಗಗಳಿಂದ ಸಂಚರಿಸುತ್ತಿರುವಾಗ ಭೂಮಿಯ ಮತ್ತು ಚಂದ್ರನ ನೆರಳುಗಳು ನಿರಂತರ ಚಲನೆಯಲ್ಲಿರುತ್ತವೆ. ಮಾತ್ರವಲ್ಲ ವಾಸ್ತವಿಕವಾಗಿ ಈ ಮೂರು ಕಾಯಗಳ ವಿನ್ಯಾಸಗಳೂ ನಡುವಿನ ಅಂತರಗಳೂ ಬದಲಾಗುತ್ತಲೇ ಇರುವುದರಿಂದ ನೆರಳುಗಳ ಗಾತ್ರಗಳು ಕೂಡ ಬದಲಾಗುತ್ತಲೇ ಇರುತ್ತವೆ. ನಿರಂತರವಾಗಿ ನಡೆಯುತ್ತಿರುವ ಈ ವಿದ್ಯಮಾನದಲ್ಲಿ ಚಂದ್ರನ ನೆರಳು ಭೂಮಿಯ ಮೇಲೆ ಪತನವಾದಾಗ ಸೂರ್ಯಗ್ರಹಣ ಸಂಭವಿಸುವುದು. ಚಂದ್ರನ ಛಾಯೆ ಭೂಮಿಯ ಮೇಲೆ ಬಿದ್ದು, ಛಾಯೆ ಬೀಳುವ ಭೂಭಾಗದಲ್ಲಿ ನಾವು ಇದ್ದಾಗ ಮಾತ್ರ ಸೂರ್ಯಗ್ರಹಣ ಗೋಚರಿಸುತ್ತದೆ. ಹಾಗೆಯೇ ಭೂಮಿಯ ನೆರಳು ಚಂದ್ರನ ಮೇಲೆ ಪತನವಾದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರಕಕ್ಷೆ ಕ್ರಾಂತಿವೃತ್ತಕ್ಕಿಂತ ಭಿನ್ನವಾಗಿರುವುದರಿಂದ ಹಾಗೂ ಚಂದ್ರ ಮತ್ತು ಸೂರ್ಯರ ಕಕ್ಷಾವೇಗಗಳು ಭಿನ್ನವಾಗಿರುವುದರಿಂದ ಗ್ರಹಣಗಳು ಪದೇ ಪದೇ ಸಂಭವಿಸುವ ಘಟನೆಗಳಲ್ಲ, ವಿರಳಘಟನೆಗಳು. ಸೂರ್ಯ ಮತ್ತು ಚಂದ್ರ ಎರಡೂ ಪಾತಬಿಂದುಗಳ ಸನಿಹದಲ್ಲಿರುವಾಗ ಮಾತ್ರ ಗ್ರಹಣ ಸಂಭಾವ್ಯ. ಸೂರ್ಯ ಗ್ರಹಣವಾದರೆ ಚಂದ್ರ ಮತ್ತು ಸೂರ್ಯ ಭೂಮಿಯಿಂದ ಒಂದೇ ದಿಶೆಯಲ್ಲಿ ಇರುವುದರಿಂದ ಅವುಗಳ ರೇಖಾಂಶಗಳು ಸಮ. ಆದ್ದರಿಂದ ಅಂದು ಅಮಾವಾಸ್ಯೆಯೂ ಹೌದು.[] ಚಂದ್ರಗ್ರಹಣವಾದರೆ ಚಂದ್ರ ಮತ್ತು ಸೂರ್ಯ ಭೂಮಿಯಿಂದ ವಿರುದ್ಧ ದಿಶೆಗಳಲ್ಲಿ ಇರುವುದರಿಂದ ಅವುಗಳ ರೇಖಾಂಶ ವ್ಯತ್ಯಾಸ 180 ಡಿಗ್ರಿ ಆದ್ದರಿಂದ ಅಂದು ಹುಣ್ಣಿಮೆಯೂ ಹೌದು. ಹೀಗೆ ಗ್ರಹಣಗಳು ಚಂದ್ರ ಮತ್ತು ಸೂರ್ಯರು ಪಾತ ಬಿಂದುಗಳ ಸಮೀಪವಿರುವ ಅಮಾವಾಸ್ಯೆ ಇಲ್ಲವೇ ಹುಣ್ಣಿಮೆ ದಿವಸಗಳಂದು ಮಾತ್ರ ಸಂಭವಿಸುತ್ತವೆ. ಈ ಷರತ್ತುಗಳ ಪೈಕಿ ಯಾವುದೇ ಒಂದು ಪೂರೈಕೆ ಆಗದಿದ್ದರೆ ಗ್ರಹಣ ಸಂಭವಿಸುವುದಿಲ್ಲ.

ಸೂರ್ಯಗ್ರಹಣದಲ್ಲಿ ನಾಲ್ಕು ವಿಧಗಳಿವೆ. ಅವುಗಳೆಂದರೆ,

  1. ಪೂರ್ಣ ಸೂರ್ಯಗ್ರಹಣ
  2. ಭಾಗಶಃ ಸೂರ್ಯಗ್ರಹಣ
  3. ಕಂಕಣ ಸೂರ್ಯಗ್ರಹಣ
  4. ಸಂಕರ ಸೂರ್ಯಗ್ರಹಣ

ಕ್ರಾಂತಿವೃತ್ತತಲದ ಮೇಲೆಯೇ ಚಂದ್ರಕಕ್ಷೆಯೂ ಇದ್ದಿದ್ದರೆ ಪ್ರತಿ ಅಮಾವಾಸ್ಯೆಯಂದು ಸೂರ್ಯಗ್ರಹಣವೂ ಪ್ರತಿ ಹುಣ್ಣಿಮೆಯಂದು ಚಂದ್ರಗ್ರಹಣವೂ ಆಗುತ್ತಿದ್ದುವು. ಹೀಗಾಗದಿರುವುದಕ್ಕೆ ಮುಖ್ಯಕಾರಣಗಳು ಎರಡು:

  • ಒಂದು, ಚಂದ್ರಕಕ್ಷಾತಲ ಕ್ರಾಂತಿವೃತ್ತತಲಕ್ಕೆ ಬಾಗಿಕೊಂಡಿರುವುದು;
  • ಎರಡು, ಪಾತಬಿಂದುಗಳ ಹಿನ್ನಡೆ (ರಿಟ್ರೊಗ್ರೇಡ್ ಮೋಷನ್).

ಇವು ವಾರ್ಷಿಕವಾಗಿ 20 ಡಿಗ್ರಿಗಳಷ್ಟು ಪ್ರದಕ್ಷಿಣ ದಿಶೆಯಲ್ಲಿ ಸಂಚರಿಸುತ್ತ ಸುಮಾರು 18 ವರ್ಷಗಳಿಗೊಮ್ಮೆ ಮೊದಲಿನ ಸ್ಥಾನಗಳನ್ನು ಹೊಂದುತ್ತವೆ. ಈ ಕಾರಣಗಳಿಂದಲೆ ಪ್ರತಿ ಅಮಾವಾಸ್ಯೆ (ಚಂದ್ರ ಮತ್ತು ಸೂರ್ಯರ ರೇಖಾಂಶ ವ್ಯತ್ಯಾಸ ಶೂನ್ಯವಾಗುವ ಘಟನೆ) ಮತ್ತು ಹುಣ್ಣಿಮೆಗಳಂದು (ರೇಖಾಂಶ ವ್ಯತ್ಯಾಸ 180 ಡಿಗ್ರಿ ಆಗುವ ಘಟನೆ) ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದಿಲ್ಲ ಅಥವಾ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದಿಲ್ಲ ಮತ್ತು ಗ್ರಹಣಗಳು ಸಂಭವಿಸುವುದಿಲ್ಲ. ಇದರ ಪರಿಣಾಮವೆಂದರೆ ಯಾವುದಾದರೂ ಒಂದು ವರ್ಷದಲ್ಲಿ ಆಗಬಹುದಾದ ಗ್ರಹಣಗಳ ಒಟ್ಟು ಸಂಖ್ಯೆ ಏಳಕ್ಕಿಂತ ಹೆಚ್ಚಾಗಿರುವುದಿಲ್ಲ ಮತ್ತು ಎರಡೇ ಎರಡರಷ್ಟು ಕಡಿಮೆಯಾಗಿರಬಹುದು. ಗರಿಷ್ಠ ಸಂಖ್ಯೆಯಾದ ಏಳರಲ್ಲಿ ಐದು ಸೂರ್ಯ ಗ್ರಹಣಗಳು ಮತ್ತು ಎರಡು ಚಂದ್ರಗ್ರಹಣಗಳು; ಇಲ್ಲವೇ ನಾಲ್ಕು ಸೂರ್ಯಗ್ರಹಣಗಳು ಮತ್ತು ಮೂರು ಚಂದ್ರಗ್ರಹಣಗಳು ಇವೆ. ಕನಿಷ್ಠ ಸಂಖ್ಯೆಯಾದ ಎರಡರಲ್ಲಿ ಎರಡೂ ಸೂರ್ಯಗ್ರಹಣಗಳೇ. ಅಂದಮಾತ್ರಕ್ಕೆ ಯಾವುದೇ ಒಂದು ಸ್ಥಳದಲ್ಲಿರುವ ವೀಕ್ಷಕನಿಗೆ ಇವೆಲ್ಲವೂ ಕಾಣಲೇಬೇಕೆಂದೇನೂ ಇಲ್ಲ. ಭೂಮಿಯ ಮೇಲಿನ ಒಂದು ಸ್ಥಳದಿಂದ ಕಾಣಬಹುದಾದ ಗ್ರಹಣ ಮತ್ತು ಅದರ ವಿನ್ಯಾಸ (ಆಂಶಿಕವೋ ಪೂರ್ಣವೋ ಎಂಬ ಅಂಶ) ಗ್ರಹಣ ಸಂಭವಿಸುವಾಗ ಆ ಸ್ಥಳದ ಸ್ಥಾನವನ್ನು (ಅಂದರೆ ಅಕ್ಷಾಂಶ ರೇಖಾಂಶಗಳನ್ನು) ಅವಲಂಬಿಸಿ ಇವೆ.

ಚಂದ್ರಗ್ರಹಣ

[ಬದಲಾಯಿಸಿ]
Umbra, penumbra and antumbra cast by an opaque object occulting a larger light source

ಭೂಮಿಯ ಸೂರ್ಯವಿಮುಖ ಪಾರ್ಶ್ವದಲ್ಲಿ ಶಂಕ್ವಾಕಾರದ ನೆರಳು ಉಂಟಾಗಿರುತ್ತದೆ. ಇದಕ್ಕೆ ಭೂಮಿಯ ನೆರಳಿನ ಶಂಕು ಅಥವಾ ದಟ್ಟ ನೆರಳಿನ ಶಂಕು (ಅಂಬ್ರ) ಎಂದು ಹೆಸರು. ಏಅಉ ಮತ್ತು ಐಆಉ ವಲಯದಲ್ಲಿ ಭಾಗಶಃ ನೆರಳಿರುತ್ತದೆ. ಇದಕ್ಕೆ ಅರೆನೆರಳಿನ ಶಂಕು (ಪಿನಂಬ್ರ) ಎಂದು ಹೆಸರು. ಈ ವಲಯದಿಂದ ನೋಡುವಾತನಿಗೆ ಸೂರ್ಯನ ಕೆಲವು ಭಾಗ ಮಾತ್ರ ಕಾಣುವುದಷ್ಟೆ. ಉಳಿದ ಭಾಗವನ್ನು ಭೂಮಿ ಮರೆ ಮಾಡಿರುತ್ತದೆ. ವೃತ್ತ ಭೂಮಿಯ ಸುತ್ತು ಇರುವ ಚಂದ್ರನ ಕಕ್ಷೆಯನ್ನು ಸೂಚಿಸುವುದು.

ಸೂರ್ಯ, ಭೂಮಿ ವ್ಯಾಸಗಳನ್ನೂ ಅವುಗಳ ಕೇಂದ್ರಗಳ ನಡುವಿನ ಸರಾಸರಿ ಅಂತರವನ್ನೂ ತೆಗೆದುಕೊಂಡು ಲೆಕ್ಕ ಹಾಕಿದರೆ ಶಂಕ್ವಾಕಾರದ ದಟ್ಟ ನೆರಳಿನ ಉದ್ದ ಭೂವ್ಯಾಸದ ಸುಮಾರು 108 ಪಾಲು ದೊಡ್ಡದು ಎಂದು ತಿಳಿಯುವುದು. ಅಂದರೆ ದಟ್ಟ ನೆರಳಿನ ಶೃಂಗ ಉ ಭೂಕೇಂದ್ರದಿಂದ ಸರಾಸರಿ ಸುಮಾರು 858,000 ಮೈಲಿಗಳಷ್ಟು ದೂರದಲ್ಲಿರುತ್ತದೆ. ಚಂದ್ರ ಮತ್ತು ಭೂ ಕೇಂದ್ರಗಳ ನಡುವಿನ ಅಂತರ ಭೂ ವ್ಯಾಸದ ಸುಮಾರು 30 ರಷ್ಟು ಉಂಟು. ಇದು ಸರಾಸರಿ ಸುಮಾರು 239,000 ಮೈಲಿಗಳೆನ್ನಬಹುದು. ಆದ್ದರಿಂದ ಭೂಮಿಯ ಉಪಗ್ರಹವಾದ ಚಂದ್ರ ಭೂಮಿ ತನ್ನ ಹಿಂದಕ್ಕೆಡೆಯುವ ದಟ್ಟ ನೆರಳಿನ ಶಂಕುವಿನ ಮೂಲಕ ಹಾದುಹೋಗುವ ಸಂಭಾವ್ಯತೆ ಉಂಟು. ದಟ್ಟ ನೆರಳಿನ ಭಾಗದ ಒತ್ತಿಗೆ ಅರೆನೆರಳಿನ ಭಾಗಗಳು ಇವೆ. ಆದ್ದರಿಂದ ಚಂದ್ರ ದಟ್ಟ ನೆರಳಿನ ಭಾಗವನ್ನು ಪ್ರವೇಶಿಸುವ ಮುನ್ನ ಮತ್ತು ಅದನ್ನು ಹಾದು ಹೋದ ತರುವಾಯ ಅರೆನೆರಳಿನ ಭಾಗದ ಮೂಲಕ ಹೋಗಲೇಬೇಕು.

ಚಂದ್ರನ ಮೇಲೆ ಬೀಳುವ ಭೂಮಿಯ ಛಾಯೆಯನ್ನು ಭೂಮಿಯ ಮೇಲಿಂದ ನೋಡಲು ನಾವಿರುವ ಭೂಭಾಗ ಚಂದ್ರನ ಕಡೆಗಿರಬೇಕು ಹಾಗೂ ನಮಗೆ ಕಾಣುತ್ತಿರುವ ಚಂದ್ರನ ಭಾಗ ಸೂರ್ಯನ ಕಡೆಗಿರಬೇಕು. ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯ ಸುತ್ತ ಸಂಚರಿಸುವಾಗ ಭೂಮಿಯ ನೆರಳಿನೊಳಕ್ಕೆ ಬಂದರೆ ಆಗ ಚಂದ್ರಗ್ರಹಣವಾಗುತ್ತದೆ. ಈ ಗ್ರಹಣವಾಗಬೇಕಾದರೆ ಸೂರ್ಯ, ಭೂಮಿ ಮತ್ತು ಚಂದ್ರ ಇವು ಮೂರೂ ಸುಮಾರಾಗಿ ಒಂದೇ ಸರಳ ರೇಖೆಯಲ್ಲಿರಬೇಕು. ಚಂದ್ರ ತನ್ನ ಪಥದ ಒಂದು ಪಾತಬಿಂದುವಿನಲ್ಲೋ (ರಾಹು ಇಲ್ಲವೆ ಕೇತು) ಇಲ್ಲವೇ ಅದರ ಹತ್ತಿರವೋ ಇದ್ದು ಸೂರ್ಯನೊಂದಿಗೆ ವಿಯುತಿಯಲ್ಲಿದ್ದರೆ (ಅಪೊಸಿಷನ್) ಅಂದರೆ ಹುಣ್ಣಿಮೆಯಾಗಿದ್ದರೆ ಆಗ ಚಂದ್ರ ಗ್ರಹಣವಾಗುತ್ತದೆ. ಚಂದ್ರಪಥ ನೇರವಾಗಿ ದಟ್ಟ ನೆರಳಿನ ಮಧ್ಯೆ ಹಾದು ಹೋಗಬಹುದು ಇಲ್ಲವೇ ಸ್ವಲ್ಪ ಮೇಲೆ ಅಥವಾ ಕೆಳಗೆ ಹೋಗಬಹುದು. ಇವು ಪಾತರೇಖೆಯ ವಿನ್ಯಾಸವನ್ನು ಅವಲಂಬಿಸಿರುತ್ತವೆ. ಅರೆನೆರಳಿನ ಮೂಲಕ ಚಂದ್ರ ಹಾದು ಹೋಗುವಾಗ ಚಂದ್ರ ಬಿಂಬಿಸುವ ಬೆಳಕು ಸ್ವಲ್ಪ ಮಂಕಾಗಬಹುದು. ದಟ್ಟ ನೆರಳಿನ ಹತ್ತಿರ ಹೋದ ಹಾಗೆಲ್ಲ ಈ ಬೆಳಕು ಕಡಿಮೆಯಾಗುತ್ತ ಹೋಗಿ ಆ ಭಾಗವನ್ನು ಪ್ರವೇಶಿಸುತ್ತಿರುವಾಗ ಚಂದ್ರನ ಸ್ವಲ್ಪ ಭಾಗಕ್ಕೆ ಬೆಳಕು ಕಡಿದುಹೋದ ಹಾಗಾಗುತ್ತದೆ. ಇದಕ್ಕೆ ಚಂದ್ರನ ಪಾರ್ಶ್ವಗ್ರಹಣ ಎಂದು ಹೆಸರು. ದಟ್ಟ ನೆರಳಿನ ಭಾಗದಲ್ಲಿ ಪೂರ್ತ ಮುಳುಗಿದರೆ ಚಂದ್ರನ ಪೂರ್ಣಗ್ರಹಣವಾಗುತ್ತದೆ. ಚಂದ್ರ ತನ್ನ ಪಥದಲ್ಲಿ ಮುಂದುವರಿದಂತೆ ಪೂರ್ಣ ಗ್ರಹಣವು ಪಾರ್ಶ್ವಗ್ರಹಣವಾಗಿ ಮೋಕ್ಷಗೊಂಡು ಅರೆನೆರಳಿನ ಭಾಗದಲ್ಲಿ ಮುಳುಗಿ ಹೊರಬರುತ್ತದೆ. ಪೂರ್ಣಗ್ರಹಣವಾಗುವುದಕ್ಕೆ ಮುಂಚೆ ಮತ್ತು ಆದ ಮೇಲೆ ಪಾರ್ಶ್ವಗ್ರಹಣವಾಗುತ್ತದೆ ಎಂಬುದನ್ನು ಗಮನಿಸಬೇಕು. ಭೂಮಿಯ ದಟ್ಟ ನೆರಳಿನ ಭಾಗವನ್ನು ಚಂದ್ರ ಸ್ಪರ್ಶಿಸಿ ಮುಂದಕ್ಕೆ ಸರಿದಾಗ ಮಾತ್ರ ಚಂದ್ರಗ್ರಹಣವಾಗಿದೆ ಎನ್ನುತ್ತಾರೆ. ಅರೆ ನೆರಳಿನ ಭಾಗದಲ್ಲಿದ್ದಾಗ ಆಗುವ ಗ್ರಹಣಕ್ಕೆ ಜನರು ಅಷ್ಟೇನೂ ಪ್ರಾಮುಖ್ಯ ನೀಡುವುದಿಲ್ಲ. ಅದನ್ನು ಆಸಕ್ತಿಯಿಂದ ವೀಕ್ಷಿಸುವುದೂ ಇಲ್ಲ. ಭೂಮಿಯನ್ನು ಚಂದ್ರ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತಿರುವುದರಿಂದ ಗ್ರಹಣವಾಗುವಾಗ ಚಂದ್ರನ ಪೂರ್ವಭಾಗದಲ್ಲಿ ಸ್ಪರ್ಶವೂ ಪಶ್ಚಿಮ ಭಾಗದಲ್ಲಿ ಮೋಕ್ಷವೂ ಆಗುತ್ತವೆ. ಭೂಮಿಯಿಂದಾದ ನೆರಳಿನ ಸೀಳ್ನೋಟವನ್ನು ಮತ್ತು ಗ್ರಹಣವಾಗುವಾಗ ಚಂದ್ರ ವಿವಿಧ ಭಾಗಗಳಲ್ಲಿರುವುದನ್ನು ಚಿತ್ರದಲ್ಲಿ ತೋರಿಸಿದೆ. ಚಂದ್ರ ಕ್ಷಿತಿಜಕ್ಕಿಂತ ಮೇಲಿದ್ದಾಗ ಗ್ರಹಣವಾದರೆ ಅದನ್ನು ನೋಡಲು ಸಾಧ್ಯವಾಗುವ ಭೂಮಿಯ ಮೇಲಿನ ಭಾಗ ಹೆಚ್ಚು. ಇದು ಭೂಮಿಯ ಮೇಲ್ಮೈಯ ಸುಮಾರು ಅರ್ಧಕ್ಕಿಂತ ಹೆಚ್ಚು ಭಾಗಗಳಿಂದ ಕಾಣಿಸುತ್ತದೆ. ಅದೂ ಅಲ್ಲದೆ ಎಲ್ಲ ಕಡೆಗಳಿಂದಲೂ ಒಂದೇ ತರಹ ಗ್ರಹಣ ಕಾಣಿಸುತ್ತದೆ.

ಗ್ರಹಣಗಳ ವಿಧ

[ಬದಲಾಯಿಸಿ]

ಪಾತರೇಖೆಯ ವಿನ್ಯಾಸವನ್ನು ಅನುಸರಿಸಿ ಗ್ರಹಣವನ್ನು ವಿಭಾಗಿಸಬಹುದು.

  1. ಅರೆನೆರಳಿನ ಗ್ರಹಣ: ಭೂಮಿಯ ದಟ್ಟ ನೆರಳಿನ ಭಾಗವನ್ನು ಮುಟ್ಟದೆಯೇ ಚಂದ್ರ ಹೊರಗೆ ಬರುವುದು.
  2. ಪಾರ್ಶ್ವಗ್ರಹಣ: ಅರೆ ನೆರಳಿನ ಮೂಲಕ ಹೋಗಿ ದಟ್ಟ ನೆರಳಿನ ಕೆಲ ಭಾಗವನ್ನು ಹಾದು ಹೊರಕ್ಕೆ ಬರುವುದು.
  3. ಪೂರ್ಣಗ್ರಹಣ: ದಟ್ಟ ನೆರಳಿನ ಮಧ್ಯೆ ಅಥವಾ ಅಂಚಿನಲ್ಲಿ ಪೂರ್ತಿ ಮುಳುಗಿ ಹೊರಗೆ ಬರುವುದು.
  • ದಟ್ಟ ನೆರಳಿನ ಮಧ್ಯೆ ನೇರ ಹಾದು ಹೋಗುವಾಗ ಚಂದ್ರಗ್ರಹಣ ಕಾಣಿಸುವ ಗರಿಷ್ಠ ಕಾಲಾವಧಿ ಸುಮಾರು 2 ಗಂಟೆಗಳು. ದಟ್ಟ ನೆರಳಿನ ಸುತ್ತ ಆವರಿಸಿರುವ ಅರೆ ನೆರಳಿನ ಭಾಗವನ್ನೂ ಗಣನೆಗೆ ತೆಗೆದುಕೊಂಡರೆ ಗ್ರಹಣದ ಗರಿಷ್ಠ ಕಾಲಾವಧಿ ಸುಮಾರು 4 ಗಂಟೆಗಳು.[] ಆದ್ದರಿಂದ ಚಂದ್ರಗ್ರಹಣವನ್ನು ಬಹಳ ಹೊತ್ತು ನೋಡವುದಕ್ಕಾಗುತ್ತದೆ. ಯಾವುದಾದರೂ ಒಂದು ವರ್ಷದಲ್ಲಾಗುವ ಒಟ್ಟು ಚಂದ್ರಗ್ರಹಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಅದರಲ್ಲಿ ಪೂರ್ಣ ಚಂದ್ರಗ್ರಹಣಗಳೇ ಹೆಚ್ಚಾಗಿ ಆಗುತ್ತವೆ. ಪೂರ್ಣ ಚಂದ್ರಗ್ರಹಣವಾದ ಕೆಲವು ಸಂದರ್ಭಗಳಲ್ಲಿ ಗ್ರಹಣವಾದ ಚಂದ್ರನ ಮೇಲ್ಮೈ ಹೊಳಪಿನಿಂದ ಇರಬೇಕಾಗಿದ್ದುದು ಭೂಮಿಯ ಮೇಲಾದ ವಿಪ್ಲವದಿಂದ ಮಂಕಾಗಿ ಕಂಡುದೂ ಉಂಟು. 1884ರ ಅಕ್ಟೋಬರ್ 4ರಲ್ಲಿ ಚಂದ್ರಗ್ರಹಣವಾದಾಗ ಜ್ವಾಲಾಮುಖಿ ಒಗೆದ ಧೂಳು ಮತ್ತು ಬೂದಿಯಿಂದ ಭೂಮಿಯ ವಾತಾವರಣ ಆವರಿಸಲ್ಪಟ್ಟಿದ್ದರಿಂದ ಚಂದ್ರನ ಮೇಲೆ ಗ್ರಹಣ ಕಾಲದಲ್ಲಿ ಬಹಳ ಕತ್ತಲು ಮೂಡಿತ್ತು. ಇದೇ ರೀತಿಯಲ್ಲಿ 1902, 1913 ಮತ್ತು 1950 ರಲ್ಲೂ ಆಯಿತು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Harrington, pp. 4–5
  2. Karttunen, Hannu (2007). Fundamental Astronomy. Springer. p. 139. ISBN 9783540341444.


ಗ್ರಂಥಸೂಚಿ

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗ್ರಹಣ&oldid=1253693" ಇಂದ ಪಡೆಯಲ್ಪಟ್ಟಿದೆ