ವಿಷಯಕ್ಕೆ ಹೋಗು

ಶಾಂತಿನಾಥ ಬಸದಿ, ಜಿನನಾಥಪುರ

ನಿರ್ದೇಶಾಂಕಗಳು: 12°51′40.9″N 76°29′11.6″E / 12.861361°N 76.486556°E / 12.861361; 76.486556
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜಿನನಾಥಪುರ ಇಂದ ಪುನರ್ನಿರ್ದೇಶಿತ)
ಶಾಂತಿನಾಥ ಬಸದಿ, ಜಿನನಾಥಪುರ
ಶಾಂತಿನಾಥ ಬಸದಿ, ಜಿನನಾಥಪುರ
ಶಾಂತಿನಾಥ ಬಸದಿಯ ಪಾರ್ಶ್ವ ನೋಟ
ಧರ್ಮ ಮತ್ತು ಸಂಪ್ರದಾಯ
ಧರ್ಮಜೈನ ಧರ್ಮ
ಅಧಿ ನಾಯಕ/ದೇವರುಶಾಂತಿನಾಥ ತೀರ್ಥಂಕರ
ಸ್ಥಳ
ಸ್ಥಳಹಾಸನ, ಕರ್ನಾಟಕ
Karnataka
Karnataka
ನಕ್ಷೆಯಲ್ಲಿ ಬಸದಿ ಇರುವ ಜಾಗದ ಗುರುತು
Karnataka
Karnataka
ಶಾಂತಿನಾಥ ಬಸದಿ, ಜಿನನಾಥಪುರ (India)
Geographic coordinates12°51′40.9″N 76°29′11.6″E / 12.861361°N 76.486556°E / 12.861361; 76.486556
ವಾಸ್ತುಶಿಲ್ಪ
ವಿಷ್ಣುವರ್ಧನ
ಸ್ಥಾಪನೆಕ್ರಿ.ಶ. ೧೧೧೭
ಕುಳಿತ ಭಂಗಿಯಲ್ಲಿ ಬಸದಿಯ ಅಧಿನಾಯಕ ಶಾಂತಿನಾಥ ತೀರ್ಥಂಕರನ ವಿಗ್ರಹ

ಶಾಂತಿನಾಥ ತೀರ್ಥಂಕರ ಬಸದಿ ಒಂದು ಜೈನ ಮಂದಿರವಾಗಿದ್ದು ಇದು ಚನ್ನರಾಯಪಟ್ಟಣ ತಾಲ್ಲೂಕಿನ, ಶ್ರವಣಬೆಳಗೊಳದ ಚಿಕ್ಕಬೆಟ್ಟಕ್ಕೆ ಉತ್ತರದಲ್ಲಿರುವ ಒಂದು ಹಳ್ಳಿ- ಜಿನನಾಥಪುರದಲ್ಲಿ(ಸ್ಥಳೀಯ ಹೆಸರು ಜಿನ್ನಾಥಪುರ) ಇದೆ. ಹನ್ನೆರಡನೆಯ ಶತಮಾನದ ಆದಿಭಾಗದಲ್ಲಿ ಹೊಯ್ಸಳ ವಿಷ್ಣುವರ್ಧನನ ಹಿರಿಯ ದಂಡನಾಯಕನಾಗಿದ್ದ ಗಂಗರಾಜ ಬೆಳಗೊಳ ತೀರ್ಥಕ್ಕೆ ಹೊಂದಿಕೊಂಡಂತೆ ಜಿನನಾಥಪುರವೆಂಬ ಹಳ್ಳಿಯನ್ನು ಮಾಡಿದನೆಂದು ಶಾಸನವೊಂದು ತಿಳಿಸುತ್ತದೆ.

ಬಸದಿಯ ಇತಿಹಾಸ

[ಬದಲಾಯಿಸಿ]

ಊರಿನ ಪಶ್ಚಿಮಕ್ಕಿರುವ ಶಾಂತಿನಾಥ ಬಸದಿ ಇಲ್ಲಿಯ ಮುಖ್ಯ ಆಕರ್ಷಣೆ. ಬಳಪದ ಕಲ್ಲಿನಲ್ಲಿ ಹೊಯ್ಸಳ ಶೈಲಿಯಲ್ಲಿರುವ ಬಸದಿಯನ್ನು ಕಟ್ಟಿಸಿದವನು ಮೊದಲು ಕಲಚೂರ್ಯರಲ್ಲಿ ಮಂತ್ರಿಯಾಗಿದ್ದು ಅನಂತರ ಹೊಯ್ಸಳ ರಾಜ, ಇಮ್ಮಡಿ ಬಲ್ಲಾಳನಲ್ಲಿ ದಂಡನಾಯಕನಾಗಿದ್ದ ವಸುಧೈಕಂಬಾಧವ ರೇಚಣ. ಇದರ ನಿರ್ಮಾಣ ಕಾಲ ಸು. ಕ್ರಿ.ಶ ೧೨೦೦. ಬಸದಿಯನ್ನು ರೇಚಣ ದಂಡನಾಯಕ ಮಾಡಿಸಿದನೆಂದು ಹೊರಭಿತ್ತಿಯ ಮೇಲಿನ ಶಾಸನ ತಿಳಿಸುತ್ತದೆ. ಅವನು ಶಾಂತಿನಾಥ ದೇವರ ಪ್ರತಿಷ್ಠೆಯನ್ನು ಮಾಡಿ ತನ್ನ ಗುರುಗಳಾದ ಸಾಗರಣಂದಿ ಸಿದ್ಧಾಂತ ದೇವರಿಗೆ ಬಿಟ್ಟುದಾಗಿ ಗರ್ಭಗೃಹ ಮೂರ್ತಿಯ ಪೀಠದ ಮೇಲಿನ ಶಾಸನ ತಿಳಿಸುತ್ತದೆ.

ಬಸದಿಯ ವಿನ್ಯಾಸ ಮತ್ತು ಶಿಲ್ಪಕಲೆ

[ಬದಲಾಯಿಸಿ]

ತಲವಿನ್ಯಾಸದ ಹೊರ ಆಕಾರವನ್ನೇ ಅನುಸರಿಸುವ ಜಗತಿಯ ಮೇಲೆ ನಿರ್ಮಿತವಾಗಿರುವ ಈ ಬಸದಿಗೆ ಗರ್ಭಗೃಹ, ಸುಕನಾಸಿ ಮತ್ತು ನವರಂಗಗಳಿವೆ. ಸುಂದರವಾದ ಈ ಬಸದಿಯ ಗರ್ಭಗೃಹದ ಮೇಲೆ ಅಷ್ಟೇ ಸುಂದರವಾಗಿದ್ದ ಗೋಪುರವೂ ಇದ್ದಿರಬೇಕು. ಆದರೆ ಈಗ ಅದರ ಕುರುಹುಗಳೇನೂ ಉಳಿದು ಬಂದಿಲ್ಲ. ತಲವಿನ್ಯಾಸದ ಚೌಕಾಕಾರವಾಗಿದ್ದರೂ ಹೊರಭಿತ್ತಿಯನ್ನು ಕಚ್ಚು ಕಚ್ಚಾಗಿ ಹಲವು ಮುಖಗಳನ್ನಾಗಿ ವಿಭಾಗಿಸಿ ಈ ಮುಖಗಳು ಮುಂಚಾಚಿಯೋ ಒಳಸರಿದೋ ಇರುವಂತೆ ನಿರ್ಮಿಸಿದೆ. ಮುಂಚಾಚಿದ ಮುಖಗಳ ಮೇಲೆ ಅರೆಗಂಬಗಳ ನಡುವೆ ಅರೆಮಂಟಪವಿದೆ. ಅದರ ಮೇಲೆ ಮುತ್ತಿನ ತೋರಣವನ್ನುಳ್ಳ ಕಾರ್ನೀಸುಗಳುಂಟು. ಮೇಲೆ 5 ಅಂತಸ್ತಿನ ಅರೆಗೋಪುರಗಳಿವೆ. ಮಂಟಪಗಳಲ್ಲಿ ಜಿನನ ಅಥವಾ ಯಕ್ಷ ಯಕ್ಷಿಯರ ಮೂರ್ತಿಗಳುಂಟು. ಒಳಸರಿದ ಮುಖಗಳಲ್ಲಿ ಅರೆಗಂಬದ ಮೇಲೆ ಅರೆಗೋಪುರ, ಅದರ ಮೇಲೆ ಕೀರ್ತಿಮುಖ, ಕೀರ್ತಿಮುಖದ ಎರಡು ಕೋರೆಗಳಿಂದಲೂ ಇಳಿಬಿದ್ದಿರುವ ಬಳ್ಳಿಸುರುಳಿಗಳಿವೆ. ಅರೆಗಂಬದ ಮುಂದೆ ಮೂರ್ತಿಶಿಲ್ಪವಿದೆ. ಒಂದೊಂದು ದಿಕ್ಕಿನ ಗೋಡೆಯ ಮಧ್ಯದ ಅರೆಮಂಟಪದ ಇಕ್ಕೆಲಗಳಲ್ಲೂ ಲತಾವಿತಾನಗಳ ಕೆಳಗೆ ಹಲವು ಭಂಗಿಗಳಲ್ಲಿರುವ, ಗೀತ ವಾದ್ಯ ನೃತ್ಯಗಳಲ್ಲಿ ನಿರತರಾದ ಗಂಡು ಹೆಣ್ಣುಗಳನ್ನೋ ಯಕ್ಷ ಯಕ್ಷಿಯರನ್ನೋ ಸರಸ್ವತಿ, ಬ್ರಹ್ಮ, ಮೋಹಿನಿ, ಮನ್ಮಥರನ್ನೋ ಕಾಣಬಹುದು. ನಾಟ್ಯದ ಕೆಲವು ಭಂಗಿಗಳಂತೂ ಮೋಹಕವಾಗಿವೆ. ಕಾಲಿಗೆ ಗೆಜ್ಜೆಯ ಪಟ್ಟಿಯೊಂದನ್ನು ಕಟ್ಟಿ ಅರೆಬಾಗಿ ತ್ರಿಭಂಹಿಯಲ್ಲಿರುವ, ಅಕ್ಕಪಕ್ಕದವರ ತಾಳ ಮದ್ದಳೆಯ ಲಯಕ್ಕೆ ಸರಿಯಾಗಿ ಹೆಜ್ಜೆಹಾಕುತ್ತ ಚಾಮರ ಹಾಕುತ್ತಿರುವ ನರ್ತಕನೊಬ್ಬನ ಮೂರ್ತಿಯನ್ನು ಇಲ್ಲಿ ಗಮನಿಸಬಹುದು.

ವಿತಾನಗಳ ಮೇಲೆ ಅರೆಗಂಬಗಳ ನಡುವೆ ಸುರುಳಿಸುರುಳಿಯಾಗಿ ಅಲೆಯಲೆಯಾಗಿ ಮೇಲೆ ಹಬ್ಬಿ ಹೋಗುತ್ತಿರುವಂತೆ ಬಿಡಿಸಿರುವ ಬಳ್ಳಿಗಳು ಇಲ್ಲಿಯ ವೈಶಿಷ್ಟ್ಯ. ಇವನ್ನು ಹೊಯ್ಸಳ ಶಿಲ್ಪದಲ್ಲೂ ಅಪರೂಪವೆನಿಸುವಷ್ಟು ಅತ್ಯಂತ ಸೂಕ್ಷ್ಮವಾಗಿಯೂ ನವುರಾಗಿಯೂ ಬಿಡಿಸಲಾಗಿದೆ. ಮೂವತ್ತಕ್ಕೂ ಹೆಚ್ಚು ಅರೆಗೋಪುರಗಳಲ್ಲಿ ಒಂದೊಂದೂ ಒಂದೊಂದು ಬಗೆಯಾಗಿದೆ. ಮಣಿತೋರಣಗಳಿಂದ, ಕೀರ್ತಿ ಮುಖಗಳ ಸಾಲಿನಿಂದ, ಬಳ್ಳಿಸುರುಳಿಯ ಪಟ್ಟಿಕೆಯಿಂದ ಅಲಂಕೃತವಾದ ತಿರುಗಣೆಯಲ್ಲಿ ಕಡೆದ ಹೊಯ್ಸಳ ರೀತಿಯ ಕಂಬಗಳು ನವರಂಗದ ಒಳಹೋಗುತ್ತಿದ್ದಂತೆಯೇ ಕಣ್ಣನ್ನು ಸೆಳೆಯುತ್ತವೆ. ಒಂದು ಕಂಬವನ್ನು ಮಾತ್ರ ಪೂರ್ತಿಗೊಳಿಸಿಲ್ಲ. ನವರಂಗದ ಎರಡು ಕಡೆಯೂ, ಎದುರುಬದುರಾಗಿ, ಗೋಡೆಗೆ ಸೇರಿದಂತೆ ಇರುವ, ಕುಸುರಿ ಕೆಲಸದಿಂದ ತುಂಬಿಹೋಗಿರುವ ಎರಡು ಅರೆ ಮಂಟಪಗಳುಂಟು. ನವರಂಗದ ಒಳಚಾವಣಿಯಲ್ಲಿ ಆಳವಾದ, ಹಲವು ಆಕೃತಿಗಳಲ್ಲಿರುವ ಭುವನೇಶ್ವರಿಗಳಲ್ಲಿಯೂ ಶಿಲ್ಪಚತುರತೆಯನ್ನು ಕಾಣಬಹುದು. ಗರ್ಭಗೃಹದಲ್ಲಿರುವ ಗಂಭೀರಮುಖಮುದ್ರೆಯುಳ್ಳ ನೇರ ನಿಲುವಿನ ಶಾಂತಿನಾಥನ ಮೂರ್ತಿ ಸುಂದರವಾದ್ದು. ಒಟ್ಟಿನಲ್ಲಿ ಶಾಂತಿನಾಥ ಬಸದಿಯಷ್ಟು ಸೂಕ್ಷ್ಮಾಲಂಕರಣದಿಂದ ಕೂಡಿದ ಬಸದಿ ಕರ್ನಾಟಕದಲ್ಲೇ ಬೇರೊಂದು ಇಲ್ಲವೆಂದು ಹೇಳಬಹುದು.

ಜಿನನಾಥಪುರದ ಇತರ ಆಕರ್ಷಣೆಗಳು

[ಬದಲಾಯಿಸಿ]

ಊರ ಮುಂದೆ ಹುಟ್ಟು ಬಂಡೆಯ ಮೇಲೆ ನಿರಾಡಂಬರವಾದ ಬಸದಿಯೊಂದು ನಿಂತಿದೆ. ಗರ್ಭಗೃಹ, ಸುಕನಾಸಿ ಮತ್ತು ದೊಡ್ಡದಾದ ನವರಂಗಗಳಿಂದ ಕೂಡಿ ಎತ್ತರವಾದ ಜಗತಿಯ ಮೇಲೆ ನಿಂತಿರುವ, ಸರಳವಾದ ಹೊರಗೋಡೆಗಳುಳ್ಳ ಈ ಬಸದಿಯನ್ನು ಗಂಗರಾಜನ ಹಿರಿಯಣ್ಣನಾದ ಬಮ್ಮ ಚಮೂಪತಿಯ ಮಗ ಏಚ ಚಮೂಪ ಕಟ್ಟಿಸಿದ. ಆದರೆ ಅವನು ಗರ್ಭಗೃಹದಲ್ಲಿ ಪ್ರತಿಷ್ಠೆ ಮಾಡಿಸಿದ ಜಿನಬಿಂಬ ಈಗ ಇಲ್ಲ. ಅದರ ಪೀಠ ಮಾತ್ರ ಅಲ್ಲಿಯ ನವರಂಗದಲ್ಲಿದೆ. ಅದು ಯಾವ ಜಿನನ ಮೂರ್ತಿಯಾಗಿತ್ತೆಂಬುದೂ ತಿಳಿಯದು. ಅದಕ್ಕೆ ಬದಲಾಗಿ ಈಗ ಅಮೃತಶಿಲೆಯ ದೊಡ್ಡದಾದ ಪಾರ್ಶ್ವನಾಥನ ಮೂರ್ತಿಯಿದೆ. ಅದನ್ನು 1889ರಲ್ಲಿ ಭುಜಬಲಯ್ಯ ಎನ್ನುವವರು ಪ್ರತಿಷ್ಠೆ ಮಾಡಿಸಿದರು. ಗರ್ಭಗೃಹದಲ್ಲೂ ಸುಕನಾಸಿಯಲ್ಲೂ ಬೇರೆಡೆಗಳಿಂದ ತಂದು ಇಟ್ಟಿರುವ ಚತುರ್ವಿಂಶತಿ ತೀರ್ಥಂಕರರು, ಪಂಚ ಪರಮೇಷ್ಠಿಗಳು, ನವದೇವತಾಬಿಂಬ, ನಂದೀಶ್ವರ ಮುಂತಾದ ಸುಂದರವಾದ ಲೋಹಮೂರ್ತಿಗಳಿವೆ.

ಊರಿಗೆ ನೈಋತ್ಯದಲ್ಲಿ ಸಮಾಧಿಮಂಟಪವೊಂದುಂಟು. ಐದು ಅಡಿ ಎತ್ತರವಿರುವ, ಚೌಕನಾದ, ನಾಲ್ಕು ಕಡೆಗಳಲ್ಲೂ ಮುಚ್ಚಿರುವ ಈ ಮಂಟಪದ ಮೇಲೆ ಒಂದು ಕಿರುಗೋಪುರ ಇದೆ. 13ನೆಯ ಶತಮಾನದಲ್ಲಿ ಬಾಲಚಂದ್ರದೇವನ ಮಗನೊಬ್ಬ ತೀರಿಕೊಂಡಾಗ ಅವನ ದಹನಸ್ಥಾನದಲ್ಲಿ ನಿರ್ಮಿಸಿದ ಶಿಲಾಕೂಟವಿದೆಂದು ಅದರ ಮೇಲಿನ ಶಾಸನ ತಿಳಿಸುತ್ತದೆ.

ಹೊಯ್ಸಳ ನರಸಿಂಹನ ಮಂತ್ರಿ ಹುಳ್ಳಪ ಈ ಊರಿನಲ್ಲಿ ಒಂದು ಕಲ್ಲಿನ ದಾನ ಶಾಲೆಯನ್ನು ಕಟ್ಟಿಸಿದನೆಂದು ಶ್ರವಣಬೆಳಗೊಳದ ಒಂದು ಶಾಸನ ತಿಳಿಸುತ್ತದೆ. ಆದರೆ ಈಗ ಅದು ಉಳಿದುಬಂದಿಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖ

[ಬದಲಾಯಿಸಿ]