ವಿಷಯಕ್ಕೆ ಹೋಗು

ಜೈವಿಕತಂತ್ರಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜೈವಿಕ ತಂತ್ರಜ್ಞಾನ ಇಂದ ಪುನರ್ನಿರ್ದೇಶಿತ)
ಇನ್ಸುಲಿನ್‌ ಸ್ಫಟಿಕಗಳು

ಜೈವಿಕ ತಂತ್ರಜ್ಞಾನ ವು ಜೀವಶಾಸ್ತ್ರ, ಕೃಷಿ, ಆಹಾರ ವಿಜ್ಞಾನ ಮತ್ತು ಔಷಧ ವೈದ್ಯಶಾಸ್ತ್ರಗಳನ್ನು ಆಧರಿಸಿರುವ ಒಂದು ತಂತ್ರರ್ಜ್ಞಾನವಾಗಿದೆ. ಈ ಪದದ ಆಧುನಿಕ ಬಳಕೆಯು ಸಾಮಾನ್ಯವಾಗಿ ತಳೀಯ ಶಿಲ್ಪಶಾಸ್ತ್ರ (ಜೆನೆಟಿಕ್‌ ಇಂಜಿನಿಯರಿಂಗ್‌) ಹಾಗೂ ಜೀವಕೋಶ ಮತ್ತು ಅಂಗಾಂಶ ಕೃಷಿಕೆ (ಟಿಷ್ಯೂ ಕಲ್ಚರ್) ತಂತ್ರಜ್ಞಾನಗಳನ್ನು ಉಲ್ಲೇಖಿಸುತ್ತದೆ. ಆದಾಗ್ಯೂ, ಮಾನವನ ಉದ್ದೇಶಗಳ ಅನುಸಾರವಾಗಿ ಜೀವಂತ ವಸ್ತುಗಳನ್ನು ಪರಿವರ್ತಿಸಲು ಅಗತ್ಯವಿರುವ ಕಾರ್ಯವಿಧಾನಗಳ ವಿಸ್ತೃತ ಶ್ರೇಣಿ ಹಾಗೂ ಇತಿಹಾಸವನ್ನು ಈ ಪರಿಕಲ್ಪನೆಯು ಒಳಗೊಂಡಿದೆ. ಪ್ರಾಣಿಗಳ ಪಳಗಿಸುವಿಕೆ, ಗಿಡಗಳ ಕೃಷಿ ಮತ್ತು ಕೃತಕ ಆಯ್ಕೆ ಮತ್ತು ಸಂಕರೀಕರಣ ವಿಧಾನಗಳನ್ನು ಬಳಸುವ ತಳಿ ಬೆಳೆಸುವ ಕಾರ್ಯಕ್ರಮಗಳ ಮೂಲಕ ಇವುಗಳಲ್ಲಿ "ಸುಧಾರಣೆ"ಗಳನ್ನು ತರುವುದನ್ನು ಸಹ ಒಳಗೊಂಡಿದೆ.

ಜೈವಿಕ ತಂತ್ರಜ್ಞಾನಕ್ಕೆ ಹೋಲಿಸಿದಾಗ, ಜೀವಂತ ವಸ್ತುಗಳೊಂದಿಗಿನ ಸಂಪರ್ಕ ಮತ್ತು ಅವುಗಳನ್ನು ಬಳಸಿಕೊಳ್ಳುವಲ್ಲಿನ ಯಾಂತ್ರಿಕ ಹಾಗೂ ಉನ್ನತ ಮಟ್ಟದ ವ್ಯವಸ್ಥಾ ಮಾರ್ಗಗಳಿಗೆ ಅದು ನೀಡುವ ಹೆಚ್ಚಿನ ಒತ್ತಿನಿಂದಾಗಿ, ಜೈವಿಕ ಶಿಲ್ಪಶಾಸ್ತ್ರ (ಬಯೊ ಎಂಜಿನಿಯರಿಂಗ್‌) ಕ್ಷೇತ್ರವನ್ನು ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಒಂದು ಕ್ಷೇತ್ರ ಎಂದು ಸಾರ್ವತ್ರಿಕವಾಗಿ ಭಾವಿಸಲಾಗಿದೆ. ವಿಶ್ವ ಸಂಸ್ಥೆಜೀವವಿಜ್ಞಾನದ ವೈವಿಧ್ಯಗಳ ಕುರಿತು ಸಮ್ಮೇಳನದ ಪ್ರಕಾರ ಜೈವಿಕ ತಂತ್ರಜ್ಞಾನದ ವ್ಯಾಖ್ಯಾನವು ಹೀಗಿದೆ:[]

"Any technological application that uses biological systems, dead organisms, or derivatives thereof, to make or modify products or processes for specific use."

ಜೈವಿಕ ತಂತ್ರಜ್ಞಾನ ಶುದ್ಧ ಜೈವಿಕ ವಿಜ್ಞಾನಗಳನ್ನು ಆಧರಿಸಿದೆ: ತಳೀಯ ಶಾಸ್ತ್ರ, ಸೂಕ್ಷ್ಮಜೀವ ವಿಜ್ಞಾನ, ಪ್ರಾಣಿ ಜೀವಕೋಶ ಕೃಷಿ, ಅಣು ಜೀವವಿಜ್ಞಾನ, ಜೀವ ರಸಾಯನ ವಿಜ್ಞಾನ, ಭ್ರೂಣಶಾಸ್ತ್ರ, ಜೀವಕೋಶ ಜೀವವಿಜ್ಞಾನ,. ಇವಲ್ಲದೆ, ಕೆಲವೊಮ್ಮೆ ಜೀವಶಾಸ್ತ್ರಗಳ ಹೊರಗಿನ ಕ್ಷೇತ್ರಗಳಾದ ರಾಸಾಯನಿಕ ಶಿಲ್ಪಶಾಸ್ತ್ರ, ಜೀವಪ್ರಕ್ರಿಯೆ ಶಿಲ್ಪಶಾಸ್ತ್ರ, ಮಾಹಿತಿ ತಂತ್ರಜ್ಞಾನ ಮತ್ತು ಜೀವಯಂತ್ರಮಾನವಶಾಸ್ತ್ರ (ಬಯೊರೊಬೊಟಿಕ್ಸ್‌) ಗಳಲ್ಲಿನ ಜ್ಞಾನ ಮತ್ತು ರೀತಿಗಳನ್ನೂ ಅವಲಂಬಿಸಿದೆ. ಇದಕ್ಕೆ ಪ್ರತಿಯಾಗಿ, ಅಣು ಪರಿಸರಶಾಸ್ತ್ರದಂತಹ ಪರಿಕಲ್ಪನೆಗಳೂ ಸೇರಿದಂತೆ, ಜೈವಿಕ ತಂತ್ರಜ್ಞಾನ ಮತ್ತು ಜೀವ ವಿಜ್ಞಾನಗಳ ಉದ್ದಿಮೆ ಎಂದು ಸಾಮಾನ್ಯವಾಗಿ ಭಾವಿಸಲಾಗಿರುವ ಕ್ಷೇತ್ರದ ಮೂಲಕ ಬೆಳೆಸಲಾದ ವಿಧಾನಗಳ ಮೇಲೆ ಆಧುನಿಕ ಜೈವಿಕ ವಿಜ್ಞಾನಗಳು ಅತ್ಯಂತ ನಿಕಟವಾಗಿ ಹೆಣೆದುಕೊಂಡಿವೆ ಮತ್ತು ಅವಲಂಬಿಸಿವೆ.

ಇತಿಹಾಸ

[ಬದಲಾಯಿಸಿ]
250 px ಹುಳಿಬರಿಸುವಿಕೆಯು ಜೈವಿಕ ತಂತ್ರಜ್ಞಾನದ ಆರಂಭಿಕ ಪ್ರಯೋಗವಾಗಿತ್ತು.

ಸಾಮಾನ್ಯವಾಗಿ ಜೈವಿಕ ತಂತ್ರಜ್ಞಾನ ಎಂದು ಆಲೋಚಿಸಲಾಗದಿದ್ದರೂ, ಜೈವಿಕ ವ್ಯವಸ್ಥೆಯನ್ನು ಬಳಸಿ ಉತ್ಪಾದನೆಗಳನ್ನು ಮಾಡುವ ವ್ಯಾಖ್ಯಾನಕ್ಕೆ ಕೃಷಿಯು ಸರಿಯಾದ ರೀತಿಯಲ್ಲಿ ಹೊಂದಿಕೊಳ್ಳುತ್ತದೆ. ಗಿಡಗಳ ಕೃಷಿಯನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದ ಮೊಟ್ಟಮೊದಲ ಪ್ರಯತ್ನದ ರೂಪದಲ್ಲಿ ನೋಡಬಹುದಾದ್ದರಿಂದ ಹೀಗೆ ಪರಿಗಣಿಸಬಹುದಾಗಿದೆ. ನವಶಿಲಾಯುಗ ಕ್ರಾಂತಿಯ ಕಾಲದಿಂದಲೂ ಕೃಷಿಯು ಆಹಾರ ಉತ್ಪಾದನೆಯ ಪ್ರಬಲ ವಿಧಾನವೆಂದು ತಾತ್ವಿಕವಾಗಿ ಹೇಳಲಾಗಿದೆ. ಕೃಷಿಯ ಪ್ರಕ್ರಿಯೆಗಳು ಮತ್ತು ವಿಧಾನಗಳನ್ನು ಇತರೆ ಯಾಂತ್ರಿಕ ಮತ್ತು ಜೈವಿಕ ವಿಜ್ಞಾನಗಳ ಮೂಲಕ ಸಂಸ್ಕರಿಸಲಾಗಿದೆ. ಆರಂಭಿಕ ಕಾಲದ ಜೈವಿಕ ತಂತ್ರಜ್ಞಾನದ ಮೂಲಕ, ಸೂಕ್ತವಾದ ಮತ್ತು ಅತಿ ಹೆಚ್ಚು ಉತ್ಪನ್ನವನ್ನು ನೀಡುವ ಫಸಲುಗಳನ್ನು ಆಯ್ಕೆ ಮಾಡಿ, ಬೆಳೆಯುತ್ತಿರುವ ಜನಸಂಖ್ಯೆಗಾಗಿ ಬೇಕಾಗುವಷ್ಟು ಆಹಾರವನ್ನು ಉತ್ಪಾದಿಸಲು ಕೃಷಿಕರಿಗೆ ಸಾಧ್ಯವಾಗುತ್ತಿತ್ತು. ಫಸಲುಗಳು ಮತ್ತು ಹೊಲಗದ್ದೆಗಳು ಹೆಚ್ಚಾಗುತ್ತಾ ಹೋದಂತೆ ಅವುಗಳನ್ನು ನಿರ್ವಹಣೆಯು ದುಸ್ತರವಾದವು. ಹಾಗಾಗಿ ಜೈವಿಕ ತಂತ್ರಜ್ಞಾನದ ಇತರೆ ಉಪಯೋಗಗಳ ಅಗತ್ಯವಿತ್ತು. ಜಮೀನಿನಲ್ಲಿ ಫಲವತ್ತತೆ, ಸಾರಜನಕದ ಮರುಪ್ರಾಪ್ತಿ ಮತ್ತು ಕ್ರಿಮಿಕೀಟಗಳ ನಿಯಂತ್ರಣಗಳಿಗಾಗಿ ವಿಶಿಷ್ಟ ಜೀವಿಗಳು ಮತ್ತು ಜೀವಿಗಳ ಉಪ-ಉತ್ಪನ್ನಗಳನ್ನು ಬಳಸಲಾಗುತ್ತಿತ್ತು. ಕೃಷಿಯ ಬಳಕೆಯುದ್ದಕ್ಕೂ, ರೈತರು ತಮ್ಮ ಫಸಲುಗಳನ್ನು ಹೊಸ ಪರಿಸರಗಳಿಗೆ ಪರಿಚಯಿಸುವ ಮತ್ತು ಇತರೆ ಗಿಡಗಳೊಂದಿಗೆ ಸಂಕರೀಕರಿಸುವ ಮೂಲಕ, ಅವುಗಳ ತಳಿಸ್ವರೂಪವನ್ನು ತಿಳಿಯದೇ ಪರಿವರ್ತಿಸಿದ್ದು, ಇದನ್ನು ಜೈವಿಕ ತಂತ್ರಜ್ಞಾನದ ಮೊದಲ ಸ್ವರೂಪ ಅಥವಾ ನಮೂನೆಯೆಂದು ಪರಿಗಣಿಸಬಹುದಾಗಿದೆ. ಮೆಸೊಪೊಟಮಿಯಾ, ಈಜಿಪ್ಟ್‌ ಮತ್ತು ಭಾರತದಲ್ಲಿರುವಂತೆ ಕೃಷಿಗಳು ಬಿಯರ್‌ ತಯಾರಿಕೆಯ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದವು. ಧಾನ್ಯಗಳ ಪಿಷ್ಟವನ್ನು ಸಕ್ಕರೆಗೆ ಪರಿವರ್ತಿಸಲು ಮೊಳಕೆ ಕಟ್ಟಿದ (ಕಿಣ್ವಗಳನ್ನು ಹೊಂದಿದ) ಧಾನ್ಯಗಳನ್ನು ಬಳಸಿ, ನಂತರ ವಿಶಿಷ್ಟ ಹುದುಗನ್ನು ಬೆರೆಸಿ ಬಿಯರ್‌ ತಯಾರಿಸುವಂತಹ ಅದೇ ಮೂಲ ವಿಧಾನದಲ್ಲೇ ಈಗಲೂ ಇದನ್ನು ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ, ಕಾಳುಗಳಲ್ಲಿರುವ ಕಾರ್ಬೊಹೈಡ್ರೇಟ್‌ಗಳನ್ನು (ಶರ್ಕರಪಿಷ್ಟಗಳನ್ನು) ಎಥನಾಲ್‌ನಂತಹ ಆಲ್ಕೊಹಾಲ್‌ಗಳಾಗಿ ಒಡೆಯಲಾಯಿತು. ಪ್ರಾಚೀನ ಭಾರತೀಯರೂ ಸಹ ಎಫೆಡ್ರಾ ವಲ್ಗಾರಿಸ್‌ ಗಿಡದ ರಸಗಳನ್ನು ಬಳಸುವುದರ ಜೊತೆಗೆ ಅದನ್ನು ಸೋಮ ಎಂದು ಕರೆಯುತ್ತಿದ್ದರು.[ಸಾಕ್ಷ್ಯಾಧಾರ ಬೇಕಾಗಿದೆ] ಆ ನಂತರ, ಇತರೆ ಕೃಷಿಗಳೂ ಲ್ಯಾಕ್ಟಿಕ್‌ ಆಮ್ಲದ ಹುದುಗುವಿಕೆಯ ಪ್ರಕ್ರಿಯೆಯನ್ನು ಉತ್ಪಾದಿಸಿದರು. ಹೀಗಾಗಿ ಇದು ಆಹಾರದ ಇತರ ಸ್ವರೂಪಗಳ ಹುದುಗುವಿಕೆ ಮತ್ತು ಸಂರಕ್ಷಣೆಗೆ ಅನುವು ಮಾಡಿತು. ಈ ಕಾಲಾವಧಿಯಲ್ಲಿ, ಹುಳಿಯಿಸಿಟ್ಟ ಬ್ರೆಡ್‌ ತಯಾರಿಸಲು ಹುದುಗುವಿಕೆಯನ್ನು ಬಳಸಲಾಯಿತು. 1857ರಲ್ಲಿ ಮನೀಶ್ ಕೇಶವಾನಿಯವರ ಸಂಶೋಧನೆಯು ಹೊರಬೀಳುವವರೆಗೆ ಹುದುಗುವ ಕ್ರಿಯೆಯು ಸಂಪೂರ್ಣವಾಗಿ ಅರ್ಥವಾಗಲಿಲ್ಲವಾದರೂ, ಇದು ಆಹಾರದ ಒಂದು ಮೂಲವನ್ನು ಇನ್ನೊಂದು ರೂಪಕ್ಕೆ ಪರಿವರ್ತಿಸುವುದಕ್ಕೆ ಸಂಬಂಧಿಸಿ ಇಂದಿಗೂ ಜೈವಿಕ ತಂತ್ರಜ್ಞಾನದ ಮೊದಲ ಬಳಕೆಯಾಗಿ ಉಳಿದಿದೆ.

ಹಲವು ಆರಂಭಿಕ ನಾಗರಿಕತೆಗಳಲ್ಲಿ, ಗಿಡಗಳ ಮತ್ತು ಇತರೆ ಜೀವಿಗಳ ಸಂಯೋಜನೆಗಳನ್ನು ಔಷಧಿಗಳ ರೂಪದಲ್ಲಿ ಬಳಸಲಾಗುತ್ತಿತ್ತು. 200 BCಯಷ್ಟು ಹಿಂದಿನ ಕಾಲದಿಂದಲೂ, ಸೋಂಕುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೋಂಕುಕಾರಕ ವಸ್ತುಗಳ ದುರ್ಬಲ ಅಥವಾ ಅಲ್ಪ ಪ್ರಮಾಣಗಳನ್ನು ಜನರು ಬಳಸಿಕೊಳ್ಳುತ್ತಿದ್ದರು. ಇವನ್ನು ಹಾಗೂ ಇದೇ ತರಹದ ಪ್ರಕ್ರಿಯೆಗಳನ್ನು ಆಧುನಿಕ ಔಷಧಶಾಸ್ತ್ರದಲ್ಲಿ ಸಂಸ್ಕರಿಸಲಾಗಿವೆ. ಇವು ಪ್ರತಿಜೀವಕಗಳು (ಆಂಟಿಬಯಾಟಿಕ್ಸ್) ಮತ್ತು ಚುಚ್ಚುಮದ್ದುಗಳು (ವ್ಯಾಕ್ಸೀನ್‌ಗಳು) ಹಾಗೂ ಕಾಯಿಲೆಯೊಂದಿಗೆ ಹೋರಾಟಲು ಬೇಕಾದ ಇತರ ವಿಧಾನಗಳಂತಹ ಹಲವು ಬೆಳವಣಿಗೆಗಳಿಗೆ ನಾಂದಿಯಾಗಿವೆ.

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಸೂಕ್ಷ್ಮ ಜೀವವಿಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದು ವಿಜ್ಞಾನಿಗಳು ವಿಶಿಷ್ಟ ಉತ್ಪನ್ನಗಳನ್ನು ತಯಾರಿಸುವ ಹೊಸ ವಿಧಾನಗಳನ್ನು ಪರಿಶೋಧಿಸಿದರು. 1917ರಲ್ಲಿ ಚೇಮ್‌ ವೈಜ್‌ಮನ್‌ ಎಂಬುವವರು ಮೊದಲ ಬಾರಿಗೆ, ಕೈಗಾರಿಕಾ ಪ್ರಕ್ರಿಯೆಯೊಂದರಲ್ಲಿ ಅಪ್ಪಟ ಸೂಕ್ಷ್ಮ ಜೀವವೈಜ್ಞಾನಿಕ ಕೃಷಿಯೊಂದನ್ನು ಬಳಸಿದರು. Iನೇ ವಿಶ್ವ ಸಮರದ ಅವಧಿಯಲ್ಲಿ ಸ್ಫೋಟಕಗಳನ್ನು ತಯಾರಿಸಲು ಯುನೈಟೆಡ್‌ ಕಿಂಗ್‌ಡಂಗೆ ತೀರಾ ಅಗತ್ಯವಾಗಿ ಬೇಕಿದ್ದ ಅಸಿಟೋನ್‌ನ್ನು ಉತ್ಪಾದಿಸಲು, ಕ್ಲಾಸ್ಟ್ರಿಡಿಯಮ್‌ ಅಸಿಟೊಬ್ಯೂಟೈಲಿಕಮ್‌ ನ್ನು ಬಳಸಿ ಮುಸುಕಿನ ಜೋಳದ ಹಿಟ್ಟಿನ ಪಿಷ್ಟವನ್ನು ತಯಾರಿಸುವುದನ್ನು ಈ ಪ್ರಕ್ರಿಯೆಯು ಒಳಗೊಂಡಿತ್ತು.[]

ಆಧುನಿಕ ಜೈವಿಕ ತಂತ್ರಜ್ಞಾನದ ಕ್ಷೇತ್ರವು ಬಹುಶಃ 1980ರ ಜೂನ್‌ 16ರಂದು ಆರಂಭವಾಯಿತು ಎನ್ನಲಾಗಿದೆ. ಏಕೆಂದರೆ, ಡೈಮಂಡ್‌ ವಿ. ಚಕ್ರವರ್ತಿ ಯವರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂಲದ ದೃಷ್ಟಿಯಿಂದ ಮಾರ್ಪಾಡಾದ ಸೂಕ್ಷ್ಮಜೀವಿಯೊಂದನ್ನು ಪೇಟೆಂಟ್‌ ಮಾಡಬಹುದು ಎಂದು ಸಂಯುಕ್ತ ಸಂಸ್ಥಾನಗಳ ಸರ್ವೋಚ್ಚ ನ್ಯಾಯಾಲಯವು ಅಂದು ಆದೇಶ ನೀಡಿತು.[] ಜನರಲ್‌ ಎಲೆಕ್ಟ್ರಿಕ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಭಾರತೀಯ ಸಂಜಾತ ಆನಂದ ಚಕ್ರವರ್ತಿಯವರು, ಸೂಡೊಮೊನಾಸ್‌ ಕುಲದಿಂದ ಉತ್ಪತ್ತಿಯಾದ ಬ್ಯಾಕ್ಟೀರಿಯಮ್‌ ಒಂದನ್ನು ಅಭಿವೃದ್ಧಿಪಡಿಸಿದ್ದರು. ಇದು ಕಚ್ಚಾ ತೈಲವನ್ನು ಒಡೆಯುವ ಸಾಮರ್ಥ್ಯವನ್ನು ಹೊಂದಿದ್ದು, ಈ ಸೂಕ್ಷ್ಮಾಣುವನ್ನು ತೈಲಸೋರಿಕೆಗಳನ್ನು ಸಂಸ್ಕರಿಸುವುದಕ್ಕಾಗಿ ಬಳಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು.

2008ರಲ್ಲಿ ಈ ಉದ್ದಿಮೆಯಲ್ಲಿ ವರಮಾನವು 12.9%ರಷ್ಟು ಬೆಳೆಯುವ ನಿರೀಕ್ಷೆಯಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದ ಸಾಫಲ್ಯದ ಹಿಂದಿನ ಮತ್ತೊಂದು ಕಾರಣವೆಂದರೆ, ವಿಶ್ವಾದ್ಯಂತದ ಬೌದ್ಧಿಕ ಸ್ವತ್ತು ಹಕ್ಕುಗಳ ಶಾಸನದಲ್ಲಿ ಸುಧಾರಣೆ ಮತ್ತು ಜಾರಿಗೊಳಿಸುವಿಕೆ. ಇದರ ಜೊತೆಗೆ ವೃದ್ಧಾಪ್ಯದಲ್ಲಿರುವ, ಅನಾರೋಗ್ಯದಿಂದ ಬಳಲುತ್ತಿರುವ U.S. ನಾಗರಿಕರಿಗೆ ಚಿಕಿತ್ಸೆ ನೀಡಲು ಅಗತ್ಯ ವೈದ್ಯಕೀಯ ಮತ್ತು ಔಷಧೀಯ ಉತ್ಪಾದನೆಗಳಿಗೆ ಹೆಚ್ಚಾದ ಬೇಡಿಕೆಯೂ ಇದಕ್ಕೊಂದು ಕಾರಣವಾಯಿತು.[]

ಜೈವಿಕ ಇಂಧನಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯು ಜೈವಿಕ ತಂತ್ರಜ್ಞಾನ ವಲಯಕ್ಕೆ ಒಳ್ಳೆಯ ಸುದ್ದಿಯಾಗುವ ನಿರೀಕ್ಷೆಯಿದೆ. ಎಥನಾಲ್‌ ಬಳಕೆಯಿಂದಾಗಿ U.S.ನಲ್ಲಿ ಪೆಟ್ರೋಲಿಯಂನಿಂದ ಪಡೆದ ಇಂಧನದ ಬಳಕೆಯು 2030ರ ವೇಳೆಗೆ 30%ರಷ್ಟು ಇಳಿತ ಕಾಣುತ್ತದೆ ಇಂಧನ ಇಲಾಖೆಯು ಅಂದಾಜು ಮಾಡಿರುವುದು ಇದರ ಹಿಂದಿನ ಕಾರಣ. ಕ್ರಿಮಿಕೀಟಗಳ ಪಿಡುಗು ಹಾಗೂ ಅನಾವೃಷ್ಟಿಗಳನ್ನು ತಡೆಯುವ ಸಾಮರ್ಥ್ಯವುಳ್ಳ ತಳೀಯವಾಗಿ ಪರಿವರ್ತಿತವಾಗಿರುವ ಬೀಜಗಳನ್ನು ಬೆಳೆಸುವುದರ ಮೂಲಕ, ಜೈವಿಕ ಇಂಧನಕ್ಕೆ ಬೇಕಾದ ಮುಖ್ಯ ಪದಾರ್ಥಗಳಾದ ಕಾಳು ಮತ್ತು ಸೊಯ ಪೂರೈಕೆಯನ್ನು ತ್ವರಿತವಾಗಿ ಹೆಚ್ಚಿಸಲು ಜೈವಿಕ ತಂತ್ರಜ್ಞಾನ ವಲಯವು U.S. ತೋಟಗಾರಿಕಾ ಉದ್ದಿಮೆಗೆ ಅನುವು ಮಾಡಿಕೊಟ್ಟಿದೆ. ತೋಟಗಾರಿಕಾ ಉತ್ಪಾದಕತೆಯನ್ನು ಉತ್ತೇಜಿಸುವ ಮೂಲಕ ಜೈವಿಕ ಇಂಧನದ ಉತ್ಪಾದನಾ ಗುರಿಗಳನ್ನು ಮುಟ್ಟುವಲ್ಲಿ ಜೈವಿಕ ತಂತ್ರಜ್ಞಾನವು ಒಂದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.[]

ಅನ್ವಯಿಸುವಿಕೆಗಳು

[ಬದಲಾಯಿಸಿ]
ಅಂಗಾಂಶ ಕೃಷಿಯೊಂದರಲ್ಲಿ ಬೆಳೆಸಿದ ಜೀವಕೋಶಗಳಾಗಿ ಆರಂಭವಾದ ಒಂದು ಗುಲಾಬಿಯ ಗಿಡ

ನಾಲ್ಕು ಪ್ರಮುಖ ಔದ್ಯಮಿಕ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನವನ್ನು ಅನ್ವಯಿಸಬಹುದು. ಇದರಲ್ಲಿ ಆರೋಗ್ಯ ಸುಶ್ರೂಶೆ (ವೈದ್ಯಕೀಯ), ಫಸಲು ಉತ್ಪಾದನೆ ಮತ್ತು ಕೃಷಿ, ಫಸಲು ಮತ್ತು ಇತರೆ ಉತ್ಪನ್ನಗಳ ಆಹಾರೇತರ (ಔದ್ಯಮಿಕ) ಬಳಕೆಗಳು (ಉದಾಹರಣೆಗೆ ಜೈವಿಕ ವಿಘಟನೀಯ ಪ್ಲಾಸ್ಟಿಕ್‌ಗಳು, ಸಸ್ಯಜನ್ಯ ಎಣ್ಣೆ, ಜೈವಿಕ ಇಂಧನಗಳು) ಮತ್ತು ಪರಿಸರೀಯ ಬಳಕೆಗಳು ಸೇರಿವೆ.

ಉದಾಹರಣೆಗೆ, ಸಾವಯವ ಉತ್ಪಾದನೆಗಳ ತಯಾರಿಕೆಯಲ್ಲಿನ ಜೀವಿಗಳ ನಿರ್ದೇಶಿತ ಬಳಕೆಯು ಜೈವಿಕ ತಂತ್ರಜ್ಞಾನದ ಒಂದು ಅನ್ವಯಿಕವಾಗಿದೆ. (ಉದಾಹರಣೆಗಳಲ್ಲಿ ಬಿಯರ್‌ ಮತ್ತು ಹಾಲು ಉತ್ಪಾದನೆಗಳು ಸೇರಿವೆ). ಜೈವಿಕ ತೊಟ್ಟಿಕ್ಕಿಸುವಿಕೆ‌ ಎಂಬ ಪ್ರಕ್ರಿಯೆಯಲ್ಲಿ ಗಣಿ ಉದ್ಯಮವು ನೈಸರ್ಗಿಕವಾಗಿ ಇರುವ ಬ್ಯಾಕ್ಟೀರಿಯಾವನ್ನು ಬಳಸುವುದು ಇನ್ನೊಂದು ಉದಾಹರಣೆಯಾಗಿದೆ. ಮರುಬಳಕೆ ಮಾಡಲು (ರಿಸೈಕ್ಲಿಂಗ್‌), ತ್ಯಾಜ್ಯವನ್ನು ಸಂಸ್ಕರಿಸಲು, ಕೈಗಾರಿಕಾ ಚಟುವಟಿಕೆಗಳಿಂದ ಕಲುಷಿತವಾಗಿರುವ ಸ್ಥಳಗಳನ್ನು ಸ್ವಚ್ಛಗೊಳಿಸಲು (ಬಯೊರೆಮಿಡಿಯೆಷನ್‌) ಹಾಗೂ ಜೈವಿಕ ಶಸ್ತ್ರಗಳನ್ನು ಉತ್ಪಾದಿಸಲು ಸಹ ಜೈವಿಕ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

ಜೈವಿಕ ತಂತ್ರಜ್ಞಾನದ ಹಲವು ಶಾಖೆಗಳನ್ನು ಗುರುತಿಸಲು ಹಲವಾರು ಉದ್ಭವಿತ ಪದಗಳ ಸರಣಿಯನ್ನೇ ಬಳಸಲಾಗುತ್ತಿವೆ, ಉದಾಹರಣೆಗೆ ಬಯೊಇನ್ಫರ್ಮ್ಯಾಟಿಕ್ಸ್‌

  • ಬಯೊಇನ್ಫರ್ಮ್ಯಾಟಿಕ್ಸ್‌ ಒಂದು ಅಂತರ ಶಾಸ್ತ್ರೀಯ ಕ್ಷೇತ್ರವಾಗಿದೆ. ಇದು ಗಣಕೀಯ ತಂತ್ರಗಳನ್ನು ಬಳಸಿ ಜೈವಿಕ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ, ಜೈವಿಕ ಮಾಹಿತಿಯ ತ್ವರಿತ ಸಂಘಟನೆ ಮತ್ತು ವಿಶ್ಲೇಷಣೆಯನ್ನು ಕಾರ್ಯಸಾಧ್ಯವಾಗಿಸುತ್ತದೆ. ಈ ಕ್ಷೇತ್ರವನ್ನು ಗಣಕೀಯ ಜೀವಶಾಸ್ತ್ರ ವೆಂದೂ ಉಲ್ಲೇಖಿಸಬಹುದಾಗಿದೆ. "ಜೀವಶಾಸ್ತ್ರವನ್ನು ಅಣುಗಳ ದೃಷ್ಟಿಯಿಂದ ಪರಿಕಲ್ಪಿಸಿ, ಇನ್ಫರ್ಮ್ಯಾಟಿಕ್ಸ್‌ ತಂತ್ರಗಳನ್ನು ಅನ್ವಯಿಸಿ ಈ ಅಣುಗಳೊಂದಿಗಿನ ಮಾಹಿತಿಯನ್ನು ಅರ್ಥ ಮಾಡಿಕೊಂಡು, ದೊಡ್ಡ ಪ್ರಮಾಣದಲ್ಲಿ ಅವುಗಳನ್ನು ಸಮರ್ಪಕವಾಗಿ ಸಂಘಟಿಸುವುದು" ಎಂದು ಇದನ್ನು ವ್ಯಾಖ್ಯಾನಿಸಬಹುದಾಗಿದೆ.[] ಬಯೊಇನ್ಫರ್ಮಾಟಿಕ್ಸ್ ಹಲವು ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉದಾಹರಣೆಗೆ ಕಾರ್ಯಸಂಬಂಧಿತ ಜೀನೋಮಿಕ್ಸ್‌, ರಚನಾಸಂಬಂಧಿತ ಜೀನೋಮಿಕ್ಸ್‌, ಮತ್ತು ಪ್ರೊಟಿಯೊಮಿಕ್ಸ್‌) ಜೊತೆಗೆ ಇದು ಜೈವಿಕ ತಂತ್ರಜ್ಞಾನ ಮತ್ತು ಔಷಧೀಯ ಕ್ಷೇತ್ರಗಳಲ್ಲಿ ಒಂದು ಪ್ರಮುಖ ಭಾಗವಾಗಿದೆ.
  • ನೀಲಿ ಜೈವಿಕ ತಂತ್ರಜ್ಞಾನ ಎಂಬುದು ಜೈವಿಕ ತಂತ್ರಜ್ಞಾನದ ಕಡಲಿನ ಮತ್ತು ಜಲಜೀವಿ ಅನ್ವಯಿಕಗಳನ್ನು ವಿವರಿಸಲು ಬಳಸಲಾಗುತ್ತದೆ. ಆದರೆ ಇದರ ಉಪಯೋಗ ತುಂಬಾ ವಿರಳ.
  • ಹಸಿರು ಜೈವಿಕ ತಂತ್ರಜ್ಞಾನ ವು ಕೃಷಿಯ ಪ್ರಕ್ರಿಯೆಗಳಿಗೆ ಅನ್ವಯಿಸಲಾಗುವ ಜೈವಿಕ ತಂತ್ರಜ್ಞಾನ. ಸೂಕ್ಷ್ಮ ಪ್ರಸರಣದ ಮೂಲಕದ ಗಿಡಗಳ ಆಯ್ಕೆ ಮತ್ತು ಪಳಗಿಸುವಿಕೆಯು ಇದಕ್ಕೆ ಉದಾಹರಣೆಯಾಗಬಲ್ಲದು. ರಾಸಾಯನಿಕಗಳ ಉಪಸ್ಥಿತಿಯಲ್ಲಿ (ಅಥವಾ ಅನುಪಸ್ಥಿತಿಯಲ್ಲಿ), ವಿಶಿಷ್ಟ ಪರಿಸರದ ಅಡಿಯಲ್ಲಿ ಜೀವಾಂತರ ಗಿಡಗಳನ್ನು ವಿನ್ಯಾಸ ಮಾಡುವುದು ಇನ್ನೊಂದು ಉದಾಹರಣೆಯಾಗಿದೆ. ಸಾಂಪ್ರದಾಯಿಕ ಕೈಗಾರಿಕಾ ಕೃಷಿಗಿಂತಲೂ, ಹಸಿರು ಜೈವಿಕ ತಂತ್ರಜ್ಞಾನವು ಇನ್ನಷ್ಟು ಪರಿಸರ-ಸ್ನೇಹಿ ವಿಶ್ಲೇಷಣೆಗಳನ್ನು ನೀಡುವುದೆಂಬ ಆಶಯವಿದೆ. ಕ್ರಿಮಿನಾಶಕವನ್ನು ಹೊರಹೊಮ್ಮಿಸುವಂತೆ ಗಿಡವೊಂದನ್ನು ರೂಪಿಸುವ ಮೂಲಕ, ಕ್ರಿಮಿನಾಶಕಗಳ ಬಾಹ್ಯ ಬಳಕೆಯ ಅಗತ್ಯವನ್ನು ಕೊನೆಗಾಣಿಸುವುದು ಇದರ ಒಂದು ಉದಾಹರಣೆ. ಬಿಟಿ ಕಾಳು ಇದಕ್ಕೆ ಉದಾಹರಣೆಯಾಗಬಲ್ಲದು. ಈ ತರಹದ ಹಸಿರು ಜೈವಿಕ ತಂತ್ರಜ್ಞಾನದ ಉತ್ಪಾದನೆಗಳು ಅಂತಿಮವಾಗಿ ಇನ್ನಷ್ಟು ಪರಿಸರ ಸ್ನೇಹಿಯಾಗಿರುವುವೋ ಅಥವಾ ಇಲ್ಲವೋ ಎಂಬುದು ಗಮನಾರ್ಹ ಚರ್ಚೆಯ ವಿಷಯವಾಗಿದೆ.
  • ಕೆಂಪು ಜೈವಿಕ ತಂತ್ರಜ್ಞಾನ ವನ್ನು ವೈದ್ಯಕೀಯ ಪ್ರಕ್ರಿಯೆಗಳಿಗೆ ಬಳಸಲಾಗುತ್ತದೆ. ಪ್ರತಿಜೀವಕಗಳನ್ನು ಉತ್ಪಾದಿಸುವಂತೆ ಜೀವಿಗಳ ವಿನ್ಯಾಸಗೊಳಿಸುವುದು ಮತ್ತು ಜೀನೋಮಿಕ್‌ ಕುಶಲಬಳಕೆಯ ಮೂಲಕ ತಳೀಯ ರೋಗಪರಿಹಾರಕಗಳ ವಿನ್ಯಾಸಗೊಳಿಸುವುದು ಇದರ ಕೆಲವೊಂದು ಉದಾಹರಣೆಗಳಾಗಿವೆ.
  • ಶ್ವೇತ ಜೈವಿಕ ತಂತ್ರಜ್ಞಾನ ವು ಔದ್ಯಮಿಕ ಜೈವಿಕ ತಂತ್ರಜ್ಞಾನವೆಂಬ ಹೆಸರನ್ನು ಹೊಂದಿದ್ದು, ಔದ್ಯಮಿಕ ಪ್ರಕ್ರಿಯೆಗಳಿಗೆ ಇದನ್ನು ಅನ್ವಯಿಸಲಾಗುತ್ತದೆ. ಉಪಯುಕ್ತ ರಾಸಾಯನಿಕವೊಂದನ್ನು ತಯಾರಿಸುವಂತೆ ಒಂದು ಜೀವಿಯನ್ನು ವಿನ್ಯಾಸ ಮಾಡುವುದು ಇದಕ್ಕೆ ಉದಾಹರಣೆಯಾಗಿದೆ. ಕಿಣ್ವಗಳನ್ನು ಕೈಗಾರಿಕಾ ವೇಗವರ್ಧಕಗಳ ರೂಪದಲ್ಲಿ ಬಳಸಿ ಉಪಯುಕ್ತ ರಾಸಾಯನಿಕಗಳನ್ನು ಉತ್ಪಾದಿಸಲು ಅಥವಾ ಹಾನಿಕರಕ/ಮಾಲಿನ್ಯಕಾರಕ ರಾಸಾಯನಿಕಗಳನ್ನು ನಾಶಪಡಿಸಲು ಬಳಕೆಮಾಡುವುದು ಇನ್ನೊಂದು ಉದಾಹರಣೆಯಾಗಿದೆ. ಕೈಗಾರಿಕಾ ಸರಕುಗಳನ್ನು ಉತ್ಪಾದಿಸಲು ಬಳಸಲಾದ ಸಾಂಪ್ರದಾಯಿಕ ಪ್ರಕ್ರಿಯೆಗಳಿಗಿಂತಲೂ ಶ್ವೇತ ಜೈವಿಕ ತಂತ್ರಜ್ಞಾನವು ಕಡಿಮೆ ಸಂಪನ್ಮೂಲಗಳನ್ನು ಬಳಸುತ್ತದೆ. ಅನ್ವಯಿಕ ಜೈವಿಕ ತಂತ್ರಜ್ಞಾನಗಳ ಈ ಎಲ್ಲಾ ರೀತಿಗಳ ಹೂಡಿಕೆ ಮತ್ತು ಆರ್ಥಿಕ ಉತ್ಪಾದನೆಗಳನ್ನೂ ಒಟ್ಟಾಗಿ ಜೈವಿಕ-ಆರ್ಥಿಕತೆ ಎಂದು ಕರೆಯಲಾಗುತ್ತದೆ.

ಆಧುನಿಕ ಜೈವಿಕ ತಂತ್ರಜ್ಞಾನವು ಕೆಳಕಂಡ ಔಷಧೀಯ ಕ್ಷೇತ್ರಗಳಲ್ಲಿ ಭರವಸೆಯ ಅನ್ವಯಿಕಗಳನ್ನು ಕಂಡುಕೊಂಡಿದೆ:

ಫಾರ್ಮಕೊಜೀನೋಮಿಕ್ಸ್‌

[ಬದಲಾಯಿಸಿ]
DNA ಮೈಕ್ರೊಅರೇ ಚಿಪ್‌ - ಕೆಲವೊಂದು ಒಮ್ಮೆಗೆ ಒಂದು ದಶಲಕ್ಷದಷ್ಟು ರಕ್ತ ಪರೀಕ್ಷೆಗಳನ್ನು ಮಾಡಬಹುದಾಗಿದೆ

ಫಾರ್ಮಕೊಜೀನೋಮಿಕ್ಸ್‌ ಎಂಬುದು ಒಬ್ಬ ವ್ಯಕ್ತಿಯ ತಳೀಯ ಆನುವಂಶಿಕ ಲಕ್ಷಣವು, ಔಷಧಿಗಳಿಗೆ ಅವನ/ಅವಳ ದೇಹವು ತೋರಿಸುವ ಪ್ರತಿಕ್ರಿಯೆಯ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ ಎಂಬುದರ ಕುರಿತಾದ ಅಧ್ಯಯನವಾಗಿದೆ. "ಫಾರ್ಮಕಾಲಜಿ" (ಔಷಧಶಾಸ್ತ್ರ) ಮತ್ತು "ಜೀನೋಮಿಕ್ಸ್‌" ಪದಗಳಿಂದ ಉದ್ಭವವಾಗಿರುವ ಪದವೇ ಫಾರ್ಮಕೊಜೀನೋಮಿಕ್ಸ್‌. ಹಾಗಾಗಿ ಇದು ಔಷಧೀಯ ಶಾಸ್ತ್ರ ಮತ್ತು ತಳಿ ಶಾಸ್ತ್ರದ ನಡುವಿನ ಸಂಬಂಧದ ಅಧ್ಯಯನವೂ ಹೌದು. ಪ್ರತಿ ವ್ಯಕ್ತಿಯ ತಳೀಯ ರಚನೆಗೆ ಹೊಂದಿಕೊಳ್ಳುವ ಔಷಧಿಗಳನ್ನು ವಿನ್ಯಾಸ ಮಾಡಿ ಉತ್ಪಾದಿಸುವುದು ಫಾರ್ಮಕೊಜೀನೋಮಿಕ್ಸ್‌ನ ದೃಷ್ಟಿಯಾಗಿದೆ.[]

ಈ ಕೆಳಕಂಡ ಪ್ರಯೋಜನಗಳಲ್ಲಿ ಫಾರ್ಮಕೊಜೀನೋಮಿಕ್ಸ್‌ನ ಅಸ್ತಿತ್ವ ಅಥವಾ ಉಪಯುಕ್ತತೆಗಳನ್ನು ಕಾಣಬಹುದು:[]

  1. ಹೇಳಿ-ಮಾಡಿಸಿದಂತಹ ಔಷಧಿಗಳ ಉತ್ಪಾದನೆ ಅಥವಾ ಅಭಿವೃದ್ಧಿ. ಫಾರ್ಮಕೊಜೀನೋಮಿಕ್ಸ್‌ನ್ನು ಬಳಸುವುದರ ಮೂಲಕ, ವಿಶಿಷ್ಟ ಜೀನ್‌ ಮತ್ತು ರೋಗಗಳೊಂದಿಗೆ ಸಂಬಂಧಿತವಾಗಿರುವ ಪ್ರೊಟೀನ್‌ಗಳು, ಕಿಣ್ವಗಳು ಮತ್ತು ಮತ್ತು RNA ಕಣಗಳನ್ನಾಧರಿಸಿ ಔಷಧ ತಯಾರಿಕಾ ಕಂಪನಿಗಳು ಔಷಧಗಳನ್ನು ಸೃಷ್ಟಿಸಬಲ್ಲವು. ಇಂತಹ ಹೇಳಿ-ಮಾಡಿಸಿದ ಔಷಧಿಗಳು ಚಿಕಿತ್ಸಾತ್ಮಕ ಪ್ರಭಾವಗಳನ್ನು ಹೆಚ್ಚಿಸುವುದಷ್ಟೇ ಅಲ್ಲ, ಸಮೀಪದಲ್ಲಿರುವ ಆರೋಗ್ಯವಂತ ಜೀವಕೋಶಗಳಿಗಾಗುವ ಹಾನಿಯ ಪ್ರಮಾಣವನ್ನು ಇಳಿಸುವ ಭರವಸೆಯನ್ನೂ ನೀಡುತ್ತವೆ.
  2. ಔಷಧ ಸೇವನೆಯ ಸೂಕ್ತ ಪ್ರಮಾಣವನ್ನು (ಡೋಸೇಜ್) ನಿರ್ಣಯಿಸುವುದರ ಹೆಚ್ಚು ನಿಖರವಾದ ವಿಧಾನಗಳು. ಓರ್ವ ರೋಗಿಯ ತಳಿ ಲಕ್ಷಣಗಳನ್ನು ಅರಿಯುವುದರ ಮೂಲಕ, ಅವನ/ಅವಳ ಶರೀರವು ಎಷ್ಟು ಸಮರ್ಪಕವಾಗಿ ಔಷಧವನ್ನು ಸಂಸ್ಕರಣೆ ಮಾಡಿ ಚಯಾಪಚು ಕ್ರಿಯೆಗೆ ಒಳಪಡಿಸಬಹುದೆಂಬುದನ್ನು ವೈದ್ಯರು ನಿರ್ಣಯಿಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಔಷಧಿಯ ಮೌಲ್ಯವು ಗರಿಷ್ಠಗೊಂಡು, ಅತಿಯಾದ ಸೇವನೆಯ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
  3. ಔಷಧದ ಪರಿಶೋಧನೆ ಮತ್ತು ಅನುಮೋದನಾ ಪ್ರಕ್ರಿಯೆಯಲ್ಲಿ ಸುಧಾರಣೆಗಳು. ಸಂಭಾವ್ಯ ಚಿಕಿತ್ಸೆಗಳ ಪರಿಶೋಧನೆಯನ್ನು ಜೀನೋಮ್‌ ಲಕ್ಷ್ಯಗಳ ಬಳಕೆಯ ಮೂಲಕ ಇನ್ನಷ್ಟು ಸುಲಭಗೊಳಿಸಬಹುದಾಗಿದೆ. ಜೀನ್‌ಗಳು ಹಲವಾರು ರೋಗಗಳು ಮತ್ತು ಅಸ್ವಸ್ಥತೆಗಳೊಂದಿಗೆ ಸಂಬಂಧವನ್ನು ಹೊಂದಿವೆ. ಆಧುನಿಕ ಜೈವಿಕ ತಂತ್ರಜ್ಞಾನದ ನೆರವಿನೊಂದಿಗೆ, ಔಷಧದ ಪರಿಶೋಧನಾ ಪ್ರಕ್ರಿಯೆಯನ್ನು ಇನ್ನಷ್ಟು ಮೊಟಕುಗೊಳಿಸಬಲ್ಲ ಪರಿಣಾಮಕಾರೀ ಹೊಸ ಚಿಕಿತ್ಸಾಪದ್ಧತಿಗಳನ್ನು ಅಭಿವೃದ್ಧಿಪಡಿಸಲು ಈ ಜೀನ್‌ಗಳನ್ನು ಗುರಿಗಳನ್ನಾಗಿ ಇಟ್ಟುಕೊಳ್ಳಬಹುದು.
  4. ಉತ್ತಮ ಲಸಿಕೆಗಳು. ತಳೀಯ ಶಿಲ್ಪಶಾಸ್ತ್ರದ ಮೂಲಕ ರೂಪಾಂತರಿಸಲ್ಪಟ್ಟ ಜೀವಿಗಳಿಂದ ಸುರಕ್ಷಿತ ಲಸಿಕೆಗಳನ್ನು ವಿನ್ಯಾಸಗೊಳಿಸಬಹುದು ಹಾಗೂ ಉತ್ಪಾದಿಸಬಹುದು. ಈ ಚುಚ್ಚುಮದ್ದುಗಳು ಸಹವರ್ತಿ ಸೋಂಕಿನ ಅಪಾಯಗಳಿಲ್ಲದೆ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೊರಹೊಮ್ಮಿಸುತ್ತವೆ. ಅವುಗಳು ಕಡಿಮೆ ಬೆಲೆಯದ್ದಾಗಿದ್ದು, ಸ್ಥಿರವಾಗಿದ್ದು, ಶೇಖರಿಸಿಡಲು ಸುಲಭವಾಗಿರುತ್ತವೆ ಮತ್ತು ರೋಗಕಾರಕದ ಹಲವಾರು ಜಾತಿಗಳನ್ನು ಒಮ್ಮೆಗೇ ಒಯ್ಯುವಂತೆ ಅವುಗಳನ್ನು ವಿನ್ಯಾಸಗೊಳಿಸಲಾಗುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಔಷಧೀಯ ಉತ್ಪನ್ನಗಳು

[ಬದಲಾಯಿಸಿ]
ಗಣಕ-ಉತ್ಪಾದಿತ ಚಿತ್ರದಲ್ಲಿ ಮುಪ್ಟಟ್ಟು ಸಮ್ಮಿತಿಯನ್ನು ಎತ್ತಿ ತೋರಿಸುವ ಇನ್ಸುಲಿನ್‌ ಹೆಕ್ಸಮರ್‌ಗಳು, ಇದನ್ನು ಜಿಂಕ್‌ ಅಯಾನುಗಳು ಒಟ್ಟಿಗೆ ಹಿಡಿದಿರುವುದು, ಮತ್ತು ಜಿಂಕ್ ಬಂಧನದಲ್ಲಿ ಪಾಲ್ಗೊಂಡಿರುವ ಹಿಸ್ಟಿಡಿನ್‌ ಅವಶೇಷಗಳನ್ನು ಕಾಣಬಹುದು.

ಸಾಂಪ್ರದಾಯಿಕ ಔಷಧಿಗಳಲ್ಲಿ ಹೆಚ್ಚಿನವು ತುಲನಾತ್ಮಕವಾಗಿ ಸರಳ ಅಣುಗಳಿಂದ ಕೂಡಿವೆ. ರೋಗದ ಅಥವಾ ಅಸ್ವಸ್ಥತೆಯ ಲಕ್ಷಣಗಳಿಗೆ ಚಿಕಿತ್ಸೆ ನೀಡಲು, ಪ್ರಾಥಮಿಕ ಪ್ರಯತ್ನ-ಪರೀಕ್ಷೆಗಳನ್ನು ಮಾಡುವುದರ ಮೂಲಕ ಈ ಅಣುಗಳನ್ನು ಪರಿಶೋಧಿಸಲಾಗಿವೆ. ಜೀವಔಷಧೀಯಗಳು ಪ್ರೋಟೀನ್‌ಗಳು ಎಂಬ ದೊಡ್ಡ ಜೈವಿಕ ಕಣಗಳಾಗಿವೆ. ಈ ಕಣಗಳು ಬೇನೆಯ ಆಧಾರಭೂತವಾದ ವಿಧಾನ ಮತ್ತು ಹಾದಿಯನ್ನು ಗುರಿಯಾಗಿಸುತ್ತವೆ (ಆದರೆ ಯಾವಾಗಲೂ ಅಲ್ಲ, ಉದಾಹರಣೆಗೆ ಟೈಪ್‌ 1 ಡಯಾಬೆಟಿಸ್‌ ಮೆಲಿಟಸ್‌ಗೆ ಚಿಕಿತ್ಸೆ ನೀಡಲು ಇನ್ಸುಲಿನ್‌ ಬಳಸುವ ಸಂದರ್ಭ; ಈ ಚಿಕಿತ್ಸೆಯು ಕೇವಲ ರೋಗದ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತದೆ. ಇದರ ಮೂಲಕಾರಣವಾದ ಸ್ವರಕ್ಷಣೆಗಲ್ಲ.). ಇದೇ ಸ್ವರೂಪದ ಇತರ ಉದ್ಯಮಗಳಿಗೆ ಹೋಲಿಸಿದಾಗ ಈ ಉದ್ಯಮವು ಇನ್ನೂ ಶೈಶವ ಸ್ಥಿತಿಯಲ್ಲಿದೆ ಎನ್ನಬಹುದು. ಸಾಂಪ್ರದಾಯಿಕ ಔಷಧಿಗಳಿಗೆ ಎಟುಕದಿರುವಂತಹ ಮನುಷ್ಯರೊಳಗಿನ ರೋಗದಲಕ್ಷ್ಯಗಳ ಚಿಕಿತ್ಸೆಯಲ್ಲಿ ಇವುಗಳನ್ನು ಬಳಸಬಹುದಾಗಿದೆ. ರೋಗಿಯ ಶರೀರದೊಳಗೆ ದೊಡ್ಡ ಕಣವನ್ನು ವಿಶಿಷ್ಟವಾದ ಚುಚ್ಚುಮದ್ದಿನ ರೂಪದಲ್ಲಿ ನೀಡಿದರೆ, ಸಣ್ಣ ಕಣವನ್ನು ಮಾತ್ರೆಯ ಪ್ರಮಾಣದ ಮೂಲಕ ನೀಡಲಾಗುತ್ತದೆ.

ಸಣ್ಣ ಕಣಗಳನ್ನು ರಾಸಾಯನಿಕ ವಿಧಾನದ ಮೂಲಕ ತಯಾರಿಸಲಾಗುತ್ತದೆ. ಅದರೆ ದೊಡ್ಡ ಕಣಗಳನ್ನು ಮಾನವ ಶರೀರದಲ್ಲಿರುವ ಜೀವಂತ ಜೀವಕೋಶಗಳಿಂದ ಸೃಷ್ಟಿಸಲಾಗುತ್ತದೆ. ಉದಾಹರಣೆಗೆ, ಬ್ಯಾಕ್ಟೀರಿಯಾ ಜೀವಕೋಶಗಳು, ಹುದುಗಿನ ಜೀವಕೋಶಗಳು, ಪ್ರಾಣಿ ಅಥವಾ ಸಸ್ಯದ ಜೀವಕೋಶಗಳು.

ಸಂಶ್ಲೇಷಿತ ಇನ್ಸುಲಿನ್‌ ಅಥವಾ ಪ್ರತಿಜೀವಕಗಳನ್ನು ಉತ್ಪಾದಿಸಲು, ಇ. ಕೊಲಿ ಅಥವಾ ಹುದುಗು ಸೇರಿದಂತೆ ತಳೀಯವಾಗಿ ಪರಿವರ್ತಿತವಾದ ಸೂಕ್ಷ್ಮಜೀವಿಗಳ ಬಳಕೆಯೊಂದಿಗೆ ಆಧುನಿಕ ಜೈವಿಕ ತಂತ್ರಜ್ಞಾನವು ಅನೇಕವೇಳೆ ಸಂಬಂಧವನ್ನು ಹೊಂದಿರುತ್ತದೆ. ಜೀವಾಂತರ ಪ್ರಾಣಿಗಳು ಅಥವಾ ಬಿಟಿ ಕಾಳುಗಳಂತಹ ಜೀವಾಂತರ ಗಿಡಗಳನ್ನು ಸಹ ಇದಕ್ಕೆ ಸಂಬಂಧಿಸಿ ಉಲ್ಲೇಖಿಸಬಹುದಾಗಿದೆ. ಕೆಲವೊಂದು ಔಷಧ ವಸ್ತುಗಳನ್ನು ತಯಾರಿಸಲು ಚೀನೀ ಹ್ಯಾಮ್‌ಸ್ಟರ್‌ ಅಂಡಾಶಯ (CHO) ಜೀವಕೋಶಗಳಂತಹ ತಳೀಯವಾಗಿ ಪರಿವರ್ತಿತ ಸಸ್ತನಿ ಜೀವಕೋಶಗಳನ್ನು ಬಳಸಲಾಗುತ್ತದೆ. ಗಿಡಗಳಿಂದ ತಯಾರಿಸಲಾದ ಔಷಧ ವಸ್ತುಗಳ ಅಭಿವೃದ್ಧಿಯೂ ಸಹ ಭರವಸೆಯ ಹೊಸ ಜೈವಿಕ ತಂತ್ರಜ್ಞಾನ ಉಪಯೋಗವಾಗಿದೆ.

ಹೆಪಾಟೈಟಿಸ್‌ B, ಹೆಪಾಟೈಟಿಸ್‌ C, ಕ್ಯಾನ್ಸರ್‌ಗಳು (ಆರ್ಬುದರೋಗ), ಸಂಧಿವಾತ, ಹೀಮೊಫಿಲಿಯಾ, ಮೂಳೆ ಮುರಿತಗಳು, ಮಲ್ಟಿಪಲ್‌ ಸ್ಕ್ಲೆರೊಸಿಸ್‌ (ಬಹ್ವಾತ್ಮಕ ಪೆಡಸುಗಟ್ಟಿಕೆ) ಮತ್ತು ಹೃದಯರಕ್ತನಾಳದ ಬೇನೆಗಳಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಜೈವಿಕ ತಂತ್ರಜ್ಞಾನವು ಮಹತ್ವದ ಪ್ರಗತಿಯನ್ನು ಕಂಡಿದೆ. ಜೈವಿಕ ಔಷಧವಸ್ತುವೊಂದಕ್ಕೆ ಗುರಿಯಾಗಲಿರುವ ರೋಗಿಗಳ ಸಂಖ್ಯೆಯನ್ನು ನಿರ್ಣಯಿಸಲು ಆಣ್ವಿಕ ರೋಗನಿರ್ಣಯ ಉಪಕರಣಗಳನ್ನು ಅಭಿವೃದ್ಧಿಗೊಳಿಸುವುದರಲ್ಲಿಯೂ ಸಹ ಜೈವಿಕ ತಂತ್ರಜ್ಞಾನ ಉದ್ದಿಮೆಯು ಬಳಕೆಯಾಗುತ್ತಿದೆ. ಉದಾಹರಣೆಗೆ, ಹರ್ಸೆಪ್ಟಿನ್‌ ರೋಗನಿರ್ಣಯ ಪರೀಕ್ಷೆಯ ನಂತರದ ಸೇವನೆಗೆ ಅನುಮೋದಿಸಲಾದ ಮೊದಲನೆಯ ಔಷಧವಾಗಿದೆ. HER2 ಪ್ರೋಟೀನ್‌ನ್ನು ಹೊರಸೂಸುವ ಕ್ಯಾನ್ಸರ್‌ ಜೀವಕೋಶಗಳನ್ನು ಹೊಂದಿರುವ ಮಹಿಳೆಯರಲ್ಲಿನ ಸ್ತನದ ಕ್ಯಾನ್ಸರ್‌ನ ಚಿಕಿತ್ಸೆಗಾಗಿ ಈ ಔಷಧವನ್ನು ಬಳಸಲಾಯಿತು.

ಅಸ್ತಿತ್ವದಲ್ಲಿರುವ ಔಷಧಗಳನ್ನು ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ತಯಾರಿಸಲು ಆಧುನಿಕ ಜೈವಿಕ ತಂತ್ರಜ್ಞಾನವನ್ನು ಬಳಸಬಹುದಾಗಿದೆ. ಮನುಷ್ಯರಲ್ಲಿ ಸಂಭವಿಸಿದ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾದ ಔಷಧಿಗಳು ತಳೀಯವಾಗಿ ರಚಿಸಲಾದ ಮೊದಲ ಉತ್ಪನ್ನಗಳಾಗಿದ್ದವು. ಉದಾಹರಣೆಗೆ ಹೇಳಬೇಕೆಂದರೆ, ಎಸ್ಕರಿಚಿಯಾ ಕೊಲಿ ಬ್ಯಾಕ್ಟೀರಿಯಾದೊಳಗೆ ಚುಚ್ಚಲಾದ ಪ್ಲಾಸ್ಮಿಡ್‌ ರೋಗವಾಹಕದೊಂದಿಗೆ ಅದರ ಜೀನ್‌ನ್ನೂ ಸೇರಿಸುವುದರ ಮೂಲಕ ಸಂಶ್ಲೇಷಿತ ಮಾನವೀಕೃತ ಇನ್ಸುಲಿನ್‌ನ್ನು ಜೆನೆನ್ಟೆಕ್‌ ಕಂಪನಿಯು 1978ರಲ್ಲಿ ಅಭಿವೃದ್ಧಿಪಡಿಸಿತು. ಇದಕ್ಕೂ ಮುಂಚೆ, ಮಧುಮೇಹದ ಚಿಕಿತ್ಸೆಗಾಗಿ ವ್ಯಾಪಕವಾಗಿ ಬಳಸಲಾಗುವ ಇನ್ಸುಲಿನ್‌ನ್ನು, ಕಸಾಯಿಖಾನೆಗೆ ಸಾಗಿಸಲಾಗುವ ಗೋವು ಅಥವಾ ಹಂದಿಗಳಂತಹ ಪ್ರಾಣಿಗಳ ಮೇದೋಜೀರಕ ಗ್ರಂಥಿಯಿಂದ ಹೊರತೆಗೆಯಲಾಗುತ್ತಿತ್ತು. ಸಂಶ್ಲೇಷಿತ ಮಾನವೀಕೃತ ಇನ್ಸುಲಿನ್‌ನ್ನು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ತಳೀಯವಾಗಿ ವಿನ್ಯಾಸಗೊಂಡು ಹೊರಹೊಮ್ಮಿದ ಬ್ಯಾಕ್ಟೀರಿಯಮ್‌ ಅನುವು ಮಾಡಿಕೊಟ್ಟಿತು[]. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (IDF) ತನ್ನ ಸದಸ್ಯ ರಾಷ್ಟ್ರಗಳಲ್ಲಿ ಇನ್ಸುಲಿನ್‌ ಲಭ್ಯತೆಯ ಬಗ್ಗೆ 2003ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಸಂಶ್ಲೇಷಿತ ಮಾನವ ಇನ್ಸುಲಿನ್‌ ಹಾಗೂ ಪ್ರಾಣಿ ಇನ್ಸುಲಿನ್‌ಗಳು ವಾಣಿಜ್ಯರೂಪದಲ್ಲಿ ಲಭ್ಯವಿರುವ ಹಲವು ರಾಷ್ಟ್ರಗಳಲ್ಲಿ ಸಂಶ್ಲೇಷಿತ 'ಮಾನವ' ಇನ್ಸುಲಿನ್‌ ಬೆಲೆಯು ಗಮನಾರ್ಹವಾಗಿ ದುಬಾರಿಯಾಗಿದೆ. ಉದಾಹರಣೆಗೆ, ಯುರೋಪ್‌ ರಾಷ್ಟ್ರಗಳಲ್ಲಿ ಸಂಶ್ಲೇಷಿತ 'ಮಾನವ' ಇನ್ಸುಲಿನ್‌ನ ಸರಾಸರಿ ಬೆಲೆಯು ಹಂದಿಯ ಇನ್ಸುಲಿನ್‌ದಕ್ಕಿಂತಲೂ ದುಪ್ಪಟ್ಟು ಹೆಚ್ಚಾಗಿತ್ತು[]. ಆದಾಗ್ಯೂ, "ಇನ್ಸುಲಿನ್‌ನ ಒಂದು ತಳಿಯನ್ನು ಇನ್ನೊಂದು ತಳಿಯ ಬದಲಾಗಿ ಆರಿಸಿಕೊಳ್ಳಲು ಅಥವಾ ಆದ್ಯತೆ ನೀಡಲು ಯಾವುದೇ ಭಾರೀ ಸಾಕ್ಷ್ಯಾಧಾರಗಳಿಲ್ಲ" ಮತ್ತು "[ಆಧುನಿಕ, ಅತಿ-ಶುದ್ಧೀಕರಿಸಿದ] ಪ್ರಾಣಿ ಇನ್ಸುಲಿನ್‌ಗಳು ಸಂಪೂರ್ಣವಾಗಿ ಒಪ್ಪಬಹುದಾದ ಪರ್ಯಾಯವಾಗಿ ಉಳಿದುಕೊಳ್ಳುತ್ತವೆ[೧೦]" ಎಂದು IDF ತನ್ನ ನಿಲುವಿನ ಹೇಳಿಕೆಯಲ್ಲಿ ಹೇಳಿದೆ.

ಮಾನವ ವಿಕಸನಾ ಹಾರ್ಮೋನ್‌, ಹೀಮೊಫಿಲಿಯಾ-ಪೀಡಿತರಿಗೆ ರಕ್ತ ಹೆಪ್ಪುಗಟ್ಟಿಸುವ ಕಾರಕಗಳು, ಫಲವಂತಿಕೆಯ ಔಷಧಗಳು, ಎರಿತ್ರೊಪೊಯೆಟಿನ್‌ ಮತ್ತು ಇತರೆ ಔಷಧಿ[೧೧] ಗಳನ್ನು ಸುಲಭವಾಗಿ ಮತ್ತು ಕಡಿಮೆ ಬೆಲೆಗೆ ಉತ್ಪಾದಿಸಲು ಕಾರ್ಯಸಾಧ್ಯವಾಗುವಂತೆ ಆಧುನಿಕ ಜೈವಿಕ ತಂತ್ರಜ್ಞಾನವು ವಿಕಸನಗೊಂಡಿದೆ. ಇಂದಿನ ಬಹುತೇಕ ಔಷಧಗಳು ಸುಮಾರು 500 ಕಣಗಳ ಗುರಿಗಳನ್ನಾಧರಿಸಿವೆ. ರೋಗಗಳಲ್ಲಿ, ರೋಗಗಳ ಹಾದಿಯಲ್ಲಿ ಮತ್ತು ಔಷಧ-ಪ್ರತಿಕ್ರಿಯೆ ಸ್ಥಳಗಳಲ್ಲಿ ಷಾಮೀಲಾಗಿರುವ ಜೀನ್‌ಗಳ ಬಗೆಗಿನ ಜೀನೋಮಿಕ್‌ ಜ್ಞಾನವು ಇನ್ನಷ್ಟು ಸಾವಿರಾರು ಹೊಸ ಗುರಿಗಳ ಪರಿಶೋಧನೆಗಳತ್ತ ಸಾಗಬಹುದೆಂದು ನಿರೀಕ್ಷಿಸಲಾಗಿದೆ.[೧೧]

ತಳಿ ಪರೀಕ್ಷೆಗಳು

[ಬದಲಾಯಿಸಿ]
ಜೆಲ್‌ ವಿದ್ಯುತ್ಸರಣ

ತಳಿ ಪರೀಕ್ಷೆಯು DNA ಕಣದ ನೇರ ಪರೀಕ್ಷೆಯನ್ನೊಳಗೊಳ್ಳುತ್ತದೆ. ವಿಜ್ಞಾನಿಯೊಬ್ಬರು ನವವಿಕೃತಗೊಂಡ ಅಥವಾ ಹಠಾತ್ ಬದಲಾವಣೆಗೆ ಈಡಾದ ಅನುಕ್ರಮಗಳಿಗಾಗಿ ರೋಗಿಯೊಬ್ಬರ DNA ನಮೂನೆಯನ್ನು ಪರಿಶೀಲಿಸುವರು.

ತಳಿ ಪರೀಕ್ಷೆಗಳಲ್ಲಿ ಎರಡು ಪ್ರಮುಖ ವಿಧಗಳಿವೆ. ಮೊದಲನೆಯ ವಿಧದಲ್ಲಿ, ಸಂಶೋಧಕರು ನವವಿಕೃತಗೊಂಡ ಅನುಕ್ರಮಗಳಿಗೆ ಪೂರಕವಾಗುವ DNAಯ ಸಣ್ಣ ತುಣುಕುಗಳನ್ನು ("ಅನ್ವೇಷಕ"ಗಳನ್ನು) ವಿನ್ಯಾಸ ಮಾಡಬಹುದು. ಈ ಅನ್ವೇಷಕಗಳು ವ್ಯಕ್ತಿಯ ಜೀನೋಮ್‌ನ ಪ್ರತ್ಯಾಮ್ಲ ಜೋಡಿಗಳಲ್ಲಿ ಅವುಗಳ ಪೂರಕಗಳನ್ನು ಅರಸುತ್ತವೆ. ರೋಗಿಯ ಜೀನೋಮ್‌‌ನಲ್ಲಿ ನವವಿಕೃತ ಅನುಕ್ರಮವು ಉಪಸ್ಥಿತವಾಗಿದ್ದಲ್ಲಿ, ಅನ್ವೇಷಕವು ಅದಕ್ಕೆ ಅಂಟಿಕೊಂಡು ಪರಿವರ್ತನೆಯನ್ನು ತಗ್ಗಿಸುತ್ತದೆ. ಎರಡನೆಯ ವಿಧದಲ್ಲಿ, ಸಂಶೋಧಕರು ರೋಗಿಯ ಜೀನ್‌ನಲ್ಲಿರುವ DNA ಪ್ರತ್ಯಾಮ್ಲಗಳಲ್ಲಿನ ಅನುಕ್ರಮಗಳನ್ನು ಆರೋಗ್ಯವಂತ ವ್ಯಕ್ತಿಗಳು ಮತ್ತು ಅವರ ಸಂತಾನಗಳಲ್ಲಿನ ರೋಗಗಳೊಂದಿಗೆ ಹೋಲಿಸುವುದರ ಮೂಲಕ ಜೀನ್‌ ಪರೀಕ್ಷೆಯನ್ನು ಮಾಡಬಹುದು.

ತಳಿ ಪರೀಕ್ಷೆಗಳನ್ನು ಈಗ ಕೆಳಕಂಡವುಗಳಿಗೆ ಬಳಸಲಾಗುತ್ತದೆ:

  • 'ಕ್ಯಾರಿಯರ್ ಸ್ಕ್ರೀನಿಂಗ್‌', ಅಥವಾ ರೋಗವು ತಾನು ಪ್ರಕಟಗೊಳ್ಳಲು ಎರಡು ಪ್ರತಿಗಳ ಅಗತ್ಯವಿದ್ದು, ಇದರ ಒಂದು ಪ್ರತಿಯನ್ನು ಹೊತ್ತ ಪ್ರಭಾವಿತರಾಗದ ರೋಗಿಗಳನ್ನು ಪತ್ತೆಹಚ್ಚುವುದು;
  • ಲಕ್ಷಣಗಳನ್ನು ತೋರುವ ವ್ಯಕ್ತಿಗಳ ಸಮರ್ಥನೀಯ ರೋಗನಿರ್ಣಯ;
  • ಲಿಂಗ ನಿರ್ಣಯ;
  • ವಿಧಿವಿಜ್ಞಾನ/ಗುರುತಿಸುವ ಪರೀಕ್ಷೆ;
  • ನವಜಾತ ಶಿಶುವಿನ ಪರಿಶೀಲನೆ;
  • ಪ್ರಸವಪೂರ್ವ ರೋಗನಿರ್ಣಯದ ಪರಿಶೀಲನೆ;
  • ವಯಸ್ಕರಲ್ಲುಂಟಾಗುವ ಕ್ಯಾನ್ಸರ್‌ ಅಪಾಯದ ಅಂದಾಜು ಮಾಡಲು ರೋಗಲಕ್ಷಣ-ಪೂರ್ವ ಪರೀಕ್ಷೆ;
  • ವಯಸ್ಕರಲ್ಲುಂಟಾಗಬಹುದಾದ ಬೇನೆಗಳನ್ನು ಅಂದಾಜು ಮಾಡಲು ರೋಗಲಕ್ಷಣ-ಪೂರ್ವ ಪರೀಕ್ಷೆಗಳು.

ಕೆಲವು ತಳಿ ಪರೀಕ್ಷೆಗಳು ಆಗಲೇ ಲಭ್ಯವಿದ್ದು, ಇವುಗಳಲ್ಲಿ ಬಹಳಷ್ಟನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಳಸಲಾಗುತ್ತಿದೆ. ಸಿಸ್ಟಿಕ್‌ ಫೈಬ್ರೊಸಿಸ್‌, ಸಿಕೆಲ್‌ ಸೆಲ್‌ ರಕ್ತಹೀನತೆ (ಕುಡುಗೋಲು-ಆಕಾರದ ಜೀವಕೋಶದ ರಕ್ತಹೀನತೆ) ಮತ್ತು ಹಂಟಿಂಗ್ಟನ್‌ನ ರೋಗದಂತಹ ಅಪರೂಪದ ತಳಿ ಬೇನೆಗಳೊಂದಿಗೆ ಸಂಬಂಧ ಹೊಂದಿರುವ ಹಠಾತ್‌ ಪರಿವರ್ತನೆಗಳನ್ನು ಸದ್ಯಕ್ಕೆ ಲಭ್ಯವಿರುವ ಪರೀಕ್ಷೆಗಳು ಪತ್ತೆಹಚ್ಚಬಲ್ಲವು. ಇತ್ತೀಚೆಗೆ, ಸ್ತನದ, ಅಂಡಾಶಯದ ಮತ್ತು ಗುದನಾಳದ ಕ್ಯಾನ್ಸರ್‌ನಂತಹ ಸಂಕೀರ್ಣ ಸ್ಥಿತಿಗಳಲ್ಲಿನ ನವವಿಕೃತಿಗಳನ್ನು ಪತ್ತೆ ಮಾಡಲೆಂದು ಪರೀಕ್ಷೆಗಳನ್ನು ಅಭಿವೃದ್ಧಿಪಡಿಸಲಾಗಿದೆ.ಆದಾಗ್ಯೂ, ಒಂದು ನಿರ್ದಿಷ್ಟ ಸ್ಥಿತಿಯೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಂದು ನವವಿಕೃತಿಯನ್ನು ತಳಿ ಪರೀಕ್ಷೆಗಳು ಪತ್ತೆ ಮಾಡದಿರಬಹುದು. ಏಕೆಂದರೆ ಅಂಥಾ ಕೆಲವನ್ನು ಇನ್ನೂ ಪರಿಶೋಧಿಸಿಲ್ಲವಾದ್ದರಿಂದ ಮತ್ತು ಪತ್ತೆಯಾದಂತಹವು ವಿವಿಧ ಜನ-ಜನಸಂಖ್ಯೆಗಳಿಗೆ ವಿವಿಧ ರೀತಿಯ ಅಪಾಯಗಳನ್ನು ಒಡ್ಡಬಹುದು.[೧೧]

ವಿವಾದಾತ್ಮಕ ಪ್ರಶ್ನೆಗಳು
[ಬದಲಾಯಿಸಿ]
ಇಸ್ಕರಿಚಿಯಾ ಕೊಲಿ ಬ್ಯಾಕ್ಟೀರಿಯಂ ವಾಡಿಕೆಯಂತೆ ತಳೀಯವಾಗಿ ವಿನ್ಯಾಸ ಮಾಡಲಾಗಿರುತ್ತದೆ.

ಹಲವಾರು ದೇಶಗಳಲ್ಲಿ ಕಂಡು ಬರುವ ಗೌಪ್ಯತೆಯ ಮತ್ತು ತಾರತಮ್ಯ-ವಿರೋಧಿ ಕಾನೂನು ರಕ್ಷಣಾವ್ಯವಸ್ಥೆಗಳ ಕೊರತೆಯು, ಉದ್ಯೋಗ ಅಥವಾ ವಿಮೆಯಲ್ಲಿನ ತಾರತಮ್ಯ ಅಥವಾ ವೈಯಕ್ತಿಕ ತಳೀಯ ಮಾಹಿತಿಗಳ ಇತರೆ ದುರುಪಯೋಗಕ್ಕೂ ಎಡೆ ಮಾಡಿಕೊಡಬಹುದಾಗಿದೆ. ತಳಿ ಗೌಪ್ಯತೆಯು ವೈದ್ಯಕೀಯ ಗೌಪ್ಯತೆಗಿಂತಲೂ ಭಿನ್ನವಾಗಿದೆಯೇ ಎಂಬ ಪ್ರಶ್ನೆಗಳನ್ನು ಇದು ಹುಟ್ಟುಹಾಕುತ್ತದೆ.[೧೨]

  1. ಸಂತಾನೋತ್ಪತ್ತಿಯ ಪ್ರಕರಣಗಳು. ಇದು ಸಂತಾನೋತ್ಪತ್ತಿಯ ನಿರ್ಧಾರ-ತಳೆಯುವಿಕೆಗಳಲ್ಲಿ ತಳೀಯ ಮಾಹಿತಿಯ ಬಳಕೆ ಮತ್ತು ಮುಂದಿನ ಪೀಳಿಗೆಗಳಿಗೆ ರವಾನಿಸಬಹುದಾದ ಸಂತಾನೋತ್ಪತ್ತಿಯ ಜೀವಕೋಶಗಳನ್ನು ತಳೀಯವಾಗಿ ಮಾರ್ಪಾಡು ಮಾಡುವ ಸಾಧ್ಯತೆಗಳನ್ನು ಒಳಗೊಂಡಿವೆ. ಉದಾಹರಣೆಗೆ, ಜರ್ಮ್‌ಲೈನ್‌ ಚಿಕಿತ್ಸೆಯು ವ್ಯಕ್ತಿಯ ವಂಶಜರ ತಳೀಯ ರಚನೆಗಳನ್ನು ಶಾಶ್ವತವಾಗಿ ಬದಲಾಯಿಸಿಬಿಡುತ್ತದೆ. ಹಾಗಾಗಿ, ತಂತ್ರಜ್ಞಾನದಲ್ಲಿ ಅಥವಾ ನಿರ್ಣಯದಲ್ಲಿ ಯಾವುದೇ ದೋಷಗಳುಂಟಾದಲ್ಲಿ ಅದು ದೀರ್ಘಾವಧಿಯ ಪರಿಣಾಮಗಳಿಗೆ ಕಾರಣವಾಗಬಲ್ಲದು. ನವವಿನ್ಯಾಸಿತ ಶಿಶುಗಳು ಮತ್ತು ಮಾನವನ ಅಬೀಜ ಸಂತತಿಗಳಂತಹ ನೈತಿಕತೆಯ ಪ್ರಕರಣಗಳು, ಸುಜನನಶಾಸ್ತ್ರಕ್ಕೆ ಸಂಬಂಧಿಸಿ ಹಿಂದೆ ನಡೆದಿರುವ ದುರ್ಬಳಕೆಯ ಹಿನ್ನೆಲೆಯಲ್ಲಿ ವಿಜ್ಞಾನಿಗಳ ಮತ್ತು ಜೀವನೈತಿಕತಾವಾದಿಗಳ ನಡುವೆ ವಿವಾದಗಳಿಗೆ ಕಾರಣವಾಗಬಹುದು.
  2. ವೈದ್ಯಕೀಯ ಪ್ರಕರಣಗಳು. ಇವು ವೈದ್ಯರ ಮತ್ತು ಇತರೆ ಆರೋಗ್ಯ ಸೇವಾ ಪೂರೈಕೆದಾರರ ಸಾಮರ್ಥ್ಯ ಹಾಗೂ ಮಿತಿಗಳು, ತಳೀಯ ಸ್ಥಿತಿಗಳು ಪತ್ತೆಯಾದ ಜನರು ಮತ್ತು ತಳೀಯ ಮಾಹಿತಿಗೆ ಸಂಬಂಧಪಟ್ಟ ಸಾರ್ವಜನಿಕರ ಸುತ್ತಲೂ ಕೇಂದ್ರೀಕೃತವಾಗಿದೆ.
  3. ಸಾಮಾಜಿಕ ಸಂಸ್ಥೆಗಳ ಮೇಲಿನ ಪ್ರಭಾವಗಳು. ವ್ಯಕ್ತಿಗಳ ಮತ್ತು ಅವರ ಕುಟುಂಬಗಳ ಬಗ್ಗೆ ಮಾಹಿತಿಯನ್ನು ತಳಿ ಪರೀಕ್ಷೆಗಳು ಹೊರಗೆಡಹುತ್ತದೆ. ಈ ರೀತಿಯಲ್ಲಿ ಸಾಮಾಜಿಕ ಸಂಸ್ಥೆಗಳೊಳಗಿನ, ಅದರಲ್ಲೂ ವಿಶೇಷವಾಗಿ, ಕುಟುಂಬದೊಳಗಿನ ಬೆಳವಣಿಗೆಗಳ ಮೇಲೆ ಪರೀಕ್ಷಾ ಫಲಿತಾಂಶಗಳು ಪ್ರಭಾವವನ್ನು ಬೀರಬಲ್ಲವಾಗಿವೆ.
  4. ತಳೀಯ ನಿರ್ಣಾಯಕತೆಗೆ ಮುಖಾಮುಖಿಯಾಗಿ ಸ್ವ-ಇಚ್ಛೆ ಮತ್ತು ಆರೋಗ್ಯ ಹಾಗೂ ರೋಗದ ಕಲ್ಪನೆಗಳ ಬಗೆಗಿನ ಮಾನವ ಹೊಣೆಗಾರಿಕೆಗೆ ಸಂಬಂಧಿಸಿದ ಕಲ್ಪನಾತ್ಮಕ ಮತ್ತು ತತ್ವಶಾಸ್ತ್ರದ ಪ್ರಭಾವಗಳು.

ಜೀನ್‌ ಚಿಕಿತ್ಸೆ

[ಬದಲಾಯಿಸಿ]
ಅಡೆನೊವೈರಸ್‌ ವಾಹಕವನ್ನು ಬಳಸಿದ ಜೀನ್‌ ಚಿಕಿತ್ಸೆಅಡೆನೊವೈರಸ್‌ ವಾಹಕದೊಳಗೆ ಹೊಸ ಜೀನ್‌ನ್ನು ಅಳವಡಿಸಿ, ಮಾನವ ಜೀವಕೋಶದೊಳಗೆ ಪರಿವರ್ತಿತ DNAಯನ್ನು ಪರಿಚಯಿಸಲು ಇದನ್ನು ಬಳಸಲಾಗುತ್ತದೆ.ಚಿಕಿತ್ಸೆಯು ಸಫಲವಾದಲ್ಲಿ, ಹೊಸ ಜೀನ್‌ ಒಂದು ಕ್ರಿಯಾತ್ಮಕ ಪ್ರೋಟೀನ್‌ನ್ನು ತಯಾರಿಸುತ್ತದೆ.

ದೋಷಪೂರಿತ ಜೀನ್‌ಗಳನ್ನು ಬದಲಾಯಿಸಲು ಅಥವಾ ಅವುಗಳಿಗೆ ಪೂರಕವಾಗಿರಲು ಸಹಜ ಜೀನ್‌ಗಳನ್ನು ಬಳಸುವುದರ ಮೂಲಕ, ಕ್ಯಾನ್ಸರ್‌ ಮತ್ತು AIDSನಂತಹ ತಳೀಯ ಮತ್ತು ಅರ್ಜಿತ ರೋಗಗಳಿಗೆ ಚಿಕಿತ್ಸೆ ನೀಡಲು ಅಥವಾ ಗುಣವಾಗಿಸಲೂ ಸಹ ಜೀನ್‌ ಚಿಕಿತ್ಸೆಯನ್ನು ಬಳಸಬಹುದು. ಇದಲ್ಲದೆ ಪ್ರತಿರಕ್ಷಣೆಯಂತಹ ಸಹಜ ಚಟುವಟಿಕೆಗಳಿಗೆ ಆಸರೆ ನೀಡಲು ಸಹ ಜೀನ್‌ ಚಿಕಿತ್ಸೆ ನೆರವಾಗುತ್ತದೆ. ಇದನ್ನು ಶಾರೀರಿಕ (ಸೊಮಾಟಿಕ್‌) ಅಥವಾ ಗಮೀಟ್‌ಗಳ (ಉದಾಹರಣೆಗೆ ಅಂಡಾಣು ಮತ್ತು ವೀರ್ಯಾಣು) ಜೀವಕೋಶಗಳನ್ನು ಗುರಿಯಾಗಿಸಿಕೊಳ್ಳಲೂ ಸಹ ಬಳಸಬಹುದಾಗಿದೆ. ಶಾರೀರಿಕ ಜೀನ್‌ ಚಿಕಿತ್ಸೆಯಲ್ಲಿ, ಚಿಕಿತ್ಸೆಗೆ ಒಳಗಾಗುವವರ ಜೀನೋಮ್‌ ಬದಲಾಗಿರುತ್ತದೆ; ಆದರೂ ಈ ಬದಲಾವಣೆಯು ಮುಂದಿನ ಪೀಳಿಗೆಗೆ ವರ್ಗಾವಣೆಯಾಗುವುದಿಲ್ಲ. ಇದಕ್ಕೆ ಭಿನ್ನವಾಗಿ, ಮುಂದಿನ ಪೀಳಿಗೆಗೆ ಬದಲಾವಣೆಗಳನ್ನು ರವಾನಿಸುವ ಉದ್ದೇಶದಿಂದ, ಜರ್ಮ್‌ಲೈನ್‌ ಜೀನ್‌ ಚಿಕಿತ್ಸೆಯಲ್ಲಿ ರೋಗಿಗಳ ಅಂಡಾಣು ಮತ್ತು ವೀರ್ಯಾಣು ಜೀವಕೋಶಗಳನ್ನು ಬದಲಾಯಿಸಲಾಗುತ್ತದೆ.

ಜೀನ್ ಚಿಕಿತ್ಸಾ ವಿಧಾನವನ್ನು ಅನುಷ್ಠಾನಕ್ಕೆ ತರಲು ಎರಡು ಮೂಲ ವಿಧಾನಗಳಿವೆ:

  1. ಎಕ್ಸ್‌ ವಿವೊ , ಅರ್ಥಾತ್‌ "ಶರೀರದ ಹೊರಗೆ" - ರೋಗಿಯ ರಕ್ತದಿಂದ ಅಥವಾ ಅಸ್ತಿಮಜ್ಜೆಯಿಂದ ಜೀವಕೋಶಗಳನ್ನು ಹೊರತೆಗೆದು ಪ್ರಯೋಗಾಲಯದಲ್ಲಿ ಬೆಳೆಸಲಾಗುತ್ತದೆ. ಅಪೇಕ್ಷಿತ ಜೀನ್‌ ಹೊತ್ತಿರುವ ವೈರಸ್‌ಗಳಿಗೆ ನಂತರ ಈ ಜೀವಕೋಶಗಳನ್ನು ಒಡ್ಡಲಾಗುತ್ತದೆ. ವೈರಸ್‌ಗಳು ಈ ಜೀವಕೋಶಗಳನ್ನು ಪ್ರವೇಶಿಸುತ್ತದೆ, ಮತ್ತು ಅಪೇಕ್ಷಿತ ಜೀನ್‌ ಜೀವಕೋಶಗಳ DNAಯ ಭಾಗವಾಗುತ್ತದೆ. ಅಭಿಧಮನಿಯ ಮೂಲಕ ಚುಚ್ಚಿ ರೋಗಿಯ ಶರೀರಕ್ಕೆ ಹಿಂದಿರುಗಿಸುವ ಮುಂಚೆ, ಈ ಜೀವಕೋಶಗಳನ್ನು ಪ್ರಯೋಗಾಲಯದಲ್ಲಿ ಬೆಳೆಸಲಾಗುತ್ತದೆ.
  2. ಇನ್‌ ವಿವೊ , ಎಂದರೆ "ಶರೀರದ ಒಳಗೆ" - ರೋಗಿಯ ಶರೀರದಿಂದ ಯಾವ ಜೀವಕೋಶಗಳನ್ನು ಹೊರತೆಗೆಯಲಾಗುವುದಿಲ್ಲ. ಇದರ ಬದಲಿಗೆ, ರೋಗಿಯ ಶರೀರದಲ್ಲಿರುವ ಜೀವಕೋಶಗಳಿಗೆ ಅಪೇಕ್ಷಿತ ಜೀನ್‌ಗಳನ್ನು ರವಾನಿಸಲು ರೋಗವಾಹಕಗಳನ್ನು ಬಳಸಲಾಗುತ್ತದೆ.

ಪ್ರಸ್ತುತ, ಜೀನ್‌ ಚಿಕಿತ್ಸೆಯ ಬಳಕೆಯು ಸೀಮಿತವಾಗಿದೆ. ಶಾರೀರಿಕ ಜೀನ್‌ ಚಿಕಿತ್ಸೆಯು ಮುಖ್ಯವಾಗಿ ಪ್ರಾಯೋಗಿಕ ಹಂತದಲ್ಲಿದೆ. ಜರ್ಮ್‌ಲೈನ್‌ ಚಿಕಿತ್ಸೆಯು ಬಹುಚರ್ಚಿತ ವಿಷಯವಾಗಿದೆ. ಆದರೆ, ದೊಡ್ಡ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿನ ಚಿಕಿತ್ಸೆಗಳಿಗೆ ಸಂಬಂಧಿಸಿ ಅದಿನ್ನೂ ಸಕ್ರಿಯ ತನಿಖೆಗೆ ಒಳಗಾಗಿಲ್ಲ.

2001ರ ಜೂನ್‌ ತಿಂಗಳವರೆಗೆ, 3,000 ರೋಗಿಗಳನ್ನೊಳಗೊಂಡ 500ಕ್ಕಿಂತಲೂ ಹೆಚ್ಚು ವೈದ್ಯಕೀಯ ಜೀನ್‌ ಚಿಕಿತ್ಸಾ ಪ್ರಯೋಗಗಳನ್ನು ವಿಶ್ವಾದ್ಯಂತ ಗುರುತಿಸಲಾಗಿದೆ. ಇವುಗಳಲ್ಲಿ 78%ರಷ್ಟು ಪ್ರಯೋಗಗಳು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿವೆ ಹಾಗೂ 18%ರಷ್ಟು ಯುರೋಪ್‌ನಲ್ಲಿವೆ. ಈ ಪ್ರಯೋಗಗಳು ಕ್ಯಾನ್ಸರ್‌ನ ವಿವಿಧ ಬಗೆಗಳ ಮೇಲೆ ಕೇಂದ್ರೀಕೃತವಾಗಿದ್ದರೂ, ಇತರೆ ಬಹು-ಜೀನ್‌ನ ರೋಗಗಳನ್ನೂ ಸಹ ಅಧ್ಯಯನ ಮಾಡಲಾಗುತ್ತಿದೆ. ಇತ್ತೀಚೆಗೆ, ತೀವ್ರ ಸಂಯೋಜಿತ ಪ್ರತಿರಕ್ಷಣಾ-ಕೊರತೆ ಬೇನೆ(“SCID”)ಯೊಂದಿಗೆ ಹುಟ್ಟಿದ ಇಬ್ಬರು ಮಕ್ಕಳಿಗೆ ತಳೀಯವಾಗಿ ವಿನ್ಯಾಸವಾದ ಜೀವಕೋಶಗಳನ್ನು ನೀಡಿದ ನಂತರ ಅವರು ಗುಣಮುಖರಾದದ್ದು ವರದಿಯಾಗಿತ್ತು.

ರೋಗಗಳಿಗೆ ಚಿಕಿತ್ಸೆ ನೀಡುವ ಒಂದು ಪ್ರಾಯೋಗಿಕ ಯತ್ನವಾಗಿ ಜೀನ್‌ ಚಿಕಿತ್ಸೆಯು ಹೊರಹೊಮ್ಮುವ ಮುನ್ನ ಹಲವು ಅಡೆತಡೆಗಳನ್ನು ಎದುರಿಸಬೇಕಿದೆ.[೧೩] ಸದರಿ ಅಡೆತಡೆಗಳಲ್ಲಿ ಕನಿಷ್ಠ ಪಕ್ಷ ನಾಲ್ಕು ಕೆಳಕಂಡಂತಿವೆ:

  1. ಜೀನ್‌ನ್ನು ತಲುಪಿಸುವ ಸಾಧನಗಳು . ಜೀನ್‌ಗಳನ್ನು ಸಾಗಿಸುವ ಸಾಧನಗಳನ್ನು 'ವಾಹಕಗಳು' ಎನ್ನಲಾಗುತ್ತದೆ. ಈ ವಾಹಕಗಳ ಮೂಲಕ ಜೀನ್‌ಗಳನ್ನು ಶರೀರದೊಳಗೆ ಅಳವಡಿಸಲಾಗುತ್ತದೆ. ವೈರಸ್‌ಗಳೇ ಈಗ ಸಾಮಾನ್ಯ ವಾಹಕಗಳಾಗಿವೆ. ರೋಗಕಾರಕದ ರೀತಿಯಲ್ಲಿ, ಮಾನವ ಜೀವಕೋಶಗಳಿಗೆ ತಮ್ಮ ಜೀನ್‌ಗಳನ್ನು ಕೋಶನಿಕ್ಷೇಪನ ಮಾಡುವ ಮತ್ತು ವಿತರಿಸುವ ಒಂದು ಮಾರ್ಗವನ್ನು ಕಂಡುಕೊಂಡಿವೆ.

ರೋಗಕ್ಕೆ ಕಾರಣವಾಗುವಂತಹ ಜೀನ್‌ಗಳನ್ನು ತೆಗೆದು, ಚಿಕಿತ್ಸಕ ಜೀನ್‌ಗಳನ್ನು ಅಳವಡಿಸುವುದರ ಮೂಲಕ ವಿಜ್ಞಾನಿಗಳು ವೈರಸ್‌ನ ಜೀನೋಮ್‌ಗಳ ಕುಶಲಬಳಕೆ ಮಾಡುತ್ತಾರೆ. ಆದಾಗ್ಯೂ, ವೈರಸ್‌ಗಳು ಪರಿಣಾಮಕಾರಿಯಾಗಿದ್ದರೂ ಸಹ, ವಿಷತ್ವ, ಪ್ರತಿರಕ್ಷಣಾ ಮತ್ತು ಮೈಯಲ್ಲಿ ಉರಿಯೂತಗಳನ್ನುಂಟು ಮಾಡುವ ಸಮಸ್ಯೆಗಳನ್ನು ಮತ್ತು ಜೀನ್‌ ನಿಯಂತ್ರಣ ಮತ್ತು ಗುರಿ-ಸಂಬಂಧಿತ ವಿಚಾರಗಳಲ್ಲಿ ಸಮಸ್ಯೆಗಳನ್ನು ಅವು ತಂದೊಡ್ಡಬಹುದು. ಇದಲ್ಲದೆ, ಜೀನ್‌ ಚಿಕಿತ್ಸೆಯೊಂದು ಶಾಶ್ವತವಾದ ಚಿಕಿತ್ಸಾಫಲಗಳನ್ನು ನೀಡಬೇಕಾದಲ್ಲಿ, ಅಳವಡಿಸಲಾದ ಜೀನ್‌ನ್ನು ಪರಪೋಷಿ ಜೀವಕೋಶದ ಜೀನೋಮ್‌ನ ಒಳಗಡೆಯೇ ಒಗ್ಗೂಡಿಸಬೇಕಾದ ಅವಶ್ಯಕತೆಯಿರುತ್ತದೆ. ಕೆಲವು ವೈರಲ್‌ ವಾಹಕಗಳು ಯಾದೃಚ್ಛಿಕ ರೀತಿಯಲ್ಲಿ ಇದನ್ನು ನಡೆಸುವುದರ ಕಾರಣ ಅಂತರ್ವರ್ಧಕ ಪರಪೋಷಿ ಜೀನ್‌ನಲ್ಲಿ ಬಿರುಕುಂಟಾಗುವ ಸಾಧ್ಯತೆಗಳಿರುತ್ತವೆ.

  1. ದುಬಾರಿ ವೆಚ್ಚಗಳು . ಜೀನ್‌ ಚಿಕಿತ್ಸೆಯು ತುಲನಾತ್ಮಕವಾಗಿ ಹೊಸ ಚಿಕಿತ್ಸೆಯಾಗಿದ್ದು, ಇನ್ನೂ ಪ್ರಾಯೋಗಿಕ ಹಂತದಲ್ಲಿರುವುದರಿಂದ, ಇದನ್ನು ಕೈಗೊಳ್ಳಲು ದುಬಾರಿ ವೆಚ್ಚವಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳ ಜನರು ಸದರಿ ಚಿಕಿತ್ಸೆಗಳಿಗೆ ಹಣ ಪಾವತಿಸಲು ಶಕ್ಯರಾಗಿರುವ ಕಾರಣ, ಅಂಥಾ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಕಂಡುಬಂದ ರೋಗಗಳ ಮೇಲೆಯೇ ಪ್ರಸಕ್ತ ಅಧ್ಯಯನಗಳು ಕೇಂದ್ರಿಕೃತವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಈ ತಂತ್ರಜ್ಞಾನದ ಅನುಕೂಲಗಳನ್ನು ಪಡೆಯಲು ದಶಕಗಳೇ ಬೇಕಾಗಬಹುದು.
  2. ಜೀನ್‌ಗಳ ಕಾರ್ಯವೃಖರಿಯ ಬಗೆಗಿನ ಸೀಮಿತ ತಿಳಿವಳಿಕೆ . ಪ್ರಸಕ್ತವಾಗಿ, ವಿಜ್ಞಾನಿಗಳು ಕೆಲವೇ ಜೀನ್‌ಗಳ ಕ್ರಿಯೆಗಳ ಬಗ್ಗೆ ತಿಳಿದುಕೊಂದಿದ್ದಾರೆ. ಹಾಗಾಗಿ, ಒಂದು ನಿರ್ದಿಷ್ಟ ರೋಗವನ್ನುಂಟುಮಾಡುವ ಕೆಲವೇ ಜೀನ್‌ಗಳಿಗೆ ಮಾತ್ರ ಜೀನ್‌ ಚಿಕಿತ್ಸೆಯು ಅನ್ವಯಿಸುತ್ತದೆ. ಅದೂ ಸಾಲದೆಂಬಂತೆ, ಜೀನ್‌ ಒಂದಕ್ಕಿಂತ ಹೆಚ್ವು ಕಾರ್ಯಚಟುವಟಿಕೆಯನ್ನು ಹೊಂದಿರುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಇನ್ನೂ ಗೊತ್ತಿಲ್ಲ. ಹೀಗಾಗಿ ಅಂತಹ ಜೀನ್‌ಗಳನ್ನು ಬದಲಿಸುವುದು ಸೂಕ್ತವೇ ಎಂಬುದರ ಬಗ್ಗೆ ಅನಿಶ್ಚಿತತೆಯುಂಟಾಗಿದೆ.
  3. ಬಹು-ಜೀನ್‌ ಬೇನೆಗಳು ಮತ್ತು ಪರಿಸರದ ಪ್ರಭಾವ . ಹಲವು ತಳೀಯ ಬೇನೆಗಳು ಒಂದಕ್ಕಿಂತಲೂ ಹೆಚ್ಚು ಜೀನ್‌ಗಳನ್ನು ಒಳಗೊಂಡಿರುತ್ತವೆ. ಇದಲ್ಲದೆ, ಬಹುತೇಕ ರೋಗಗಳು, ಹಲವು ಜೀನ್‌ಗಳು ಮತ್ತು ಪರಿಸರದ ನಡುವಿನ ಪರಸ್ಪರ ವರ್ತನೆಯನ್ನು ಒಳಗೊಂಡಿರುತ್ತವೆ. ಉದಾಹರಣೆಗೆ, ಹಲವು ಕ್ಯಾನ್ಸರ್‌ ಪೀಡಿತ ಜನರು ಬೇನೆಯ ರೋಗಗ್ರಸ್ತ ಜೀನ್‌ನ್ನು ವಂಶಾನುಕ್ರಮವಾಗಿ ಪಡೆಯುವುದು ಮಾತ್ರವೇ ಅಲ್ಲದೇ, ಊತವನ್ನು ತಡೆಹಿಡಿಯುವಂತಹ ಜೀನ್‌ಗಳನ್ನು ವಂಶಾನುಕ್ರಮವಾಗಿ ಪಡೆಯಲು ವಿಫಲರಾಗಿರುವ ಸಾಧ್ಯತೆಯಿರುತ್ತದೆ.ಆಹಾರ ಕ್ರಮ, ವ್ಯಾಯಾಮ, ಧೂಮಪಾನ ಮತ್ತು ಇತರೆ ಪರಿಸರೀಯ ಕಾರಣಗಳು ಸಹ ರೋಗಕ್ಕೆ ಕಾರಣವಾಗಿರಬಹುದು.

ಮಾನವ ಜೀನೋಮ್‌ ಯೋಜನೆ

[ಬದಲಾಯಿಸಿ]
ಮಾನವ ಜೀನೋಮ್‌ ಯೋಜನೆ (HGP) ಯಿಂದ DNA ಪ್ರತಿರೂಪಣದ ಚಿತ್ರ

ಮಾನವ ಜೀನೋಮ್‌ ಯೋಜನೆಯು U.S. ಇಂಧನ ಇಲಾಖೆ("DOE")ಯ ಮೊದಲ ಯತ್ನ. ಇಡೀ ಮಾನವ ಜೀನೋಮ್‌ಗಾಗಿ ಉತ್ತಮ ಗುಣಮಟ್ಟದ ಅನುರೂಪತೆಯ ಸರಣಿಯನ್ನು ರಚಿಸಿ ಎಲ್ಲಾ ಮಾನವನ ಜೀನ್‌ಗಳನ್ನು ಪತ್ತೆ ಮಾಡುವುದು ಇದರ ಉದ್ದೇಶವಾಗಿದೆ.

ಹೊಸ ಇಂಧನ ಸಂಪನ್ಮೂಲಗಳನ್ನು ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಗೊಳಿಸಿ, ಅವುಗಳ ಉತ್ಪಾದನೆ ಮತ್ತು ಬಳಕೆಗಳಿಂದ ಸಂಭವಿಸಬಹುದಾದ ಆರೋಗ್ಯ ಮತ್ತು ಪರಿಸರೀಯ ಅಪಾಯಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಲು DOE ಮತ್ತು ಅದರ ಪೂರ್ವವರ್ತಿ ನಿಯೋಗಗಳಿಗೆ U.S. ಶಾಸನಸಭೆಯು ಸೂಚನೆ ನೀಡಿತ್ತು. 1986ರಲ್ಲಿ DOEಯು ಮಾನವ ಜೀನೋಮ್‌ ಕುರಿತಾದ ತನ್ನ ಮೊದಲ ಹೆಜ್ಜೆಯನ್ನು ಘೋಷಿಸಿತು. ಆ ನಂತರ DOE ಹಾಗೂ ರಾಷ್ಟ್ರೀಯ ಆರೋಗ್ಯ ಸಂಸ್ಥೆ, 1990ರಲ್ಲಿ ಅಧಿಕೃತವಾಗಿ ಆರಂಭಗೊಂಡ, ಜಂಟಿ 'ಮಾನವ ಜೀನೋಮ್‌ ಯೋಜನೆ' (“HGP”)ಯೊಂದರ ರೂಪುರೇಖೆಯನ್ನು ರಚಿಸಿದವು.

HGP ಯೋಜನೆಯು ಮೂಲತಃ 15 ವರ್ಷಗಳ ಕಾಲ ನಡೆಯುವಂತೆ ರಚಿಸಲಾಗಿತ್ತು. ಆದರೂ, ಕ್ಷಿಪ್ರ ತಾಂತ್ರಿಕ ಬೆಳವಣಿಗೆಗಳು ಮತ್ತು ವಿಶ್ವಾದ್ಯಂತದ ಸಹಯೋಗದಿಂದಾಗಿ, ಸಂಪೂರ್ಣಗೊಳಿಸುವ ದಿನಾಂಕವು 2003ಕ್ಕೆ ಬದಲಾಯಿತು. ಹೀಗಾಗಿ ಇದು 13 ವರ್ಷಗಳ ಯೋಜನೆಯಾಯಿತು. ಈಗಾಗಲೇ ಇದು ಸುಮಾರು 30ಕ್ಕೂ ಹೆಚ್ಚು ಬೇನೆಗಳೊಂದಿಗೆ ಸಂಬಂಧಿತ ಜೀನ್‌ಗಳನ್ನು ಪತ್ತೆಹಚ್ಚಲು ಜೀನ್‌ ಆನ್ವೇಷಕರಿಗೆ ನೆರವಾಗಿದೆ.[]

ಅಬೀಜ ಸಂತಾನೋತ್ಪತ್ತಿ

[ಬದಲಾಯಿಸಿ]

ಒಂದು ಜೀವಕೋಶದಿಂದ ಕೋಶಕೇಂದ್ರವನ್ನು ತೆಗೆದು ಫಲವತ್ತಾಗಿರದ ಅಂಡಾಣುವಿನಲ್ಲಿ ಇರಿಸುವ ಕ್ರಿಯೆಯನ್ನು ಅಬೀಜ ಸಂತಾನೋತ್ಪತ್ತಿಯು ಒಳಗೊಳ್ಳುತ್ತದೆ. ಸದರಿ ಅಂಡಾಣುವಿನ ಕೋಶಕೇಂದ್ರವನ್ನು ನಿಷ್ಕ್ರಿಯಗೊಳಿಸಲಾಗಿರುತ್ತದೆ ಅಥವಾ ತೆಗೆದುಹಾಕಲಾಗಿರುತ್ತದೆ.

ಅಬೀಜ ಸಂತಾನೋತ್ಪತ್ತಿಯಲ್ಲಿ ಎರಡು ವಿಧಗಳಿವೆ:

  1. ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿ. ಕೆಲವು ವಿಘಟನೆಗಳ ನಂತರ, ಅಂಡಾಣುವನ್ನು ಗರ್ಭಾಶಯದಲ್ಲಿ ಕೂಡಿಸಿ, ಅದು ಭ್ರೂಣವಾಗಿ ಬೆಳೆಯಲು ಅನುವು ಮಾಡಲಾಗುತ್ತದೆ. ಇದು ಮೂಲ ಕೋಶಕೇಂದ್ರ ದಾನಿಯಂತೆಯೇ ತಳೀಯವಾಗಿ ತದ್ರೂಪವಾಗಿರುತ್ತದೆ.
  2. ಚಿಕಿತ್ಸಾತ್ಮಕ ಅಬೀಜ ಸಂತಾನೋತ್ಪತ್ತಿ[೧೪] ಅಂಡಾಣುವನ್ನು ಒಂದು ಪೆಟ್ರಿ ತಟ್ಟೆಯಲ್ಲಿಡಲಾಗುತ್ತದೆ. ಅದು ಭ್ರೂಣೀಯ ಕಾಂಡಕೋಶಗಳಾಗಿ ಬೆಳೆದುಕೊಳ್ಳುತ್ತದೆ. ಈ ಕಾಂಡಕೋಶಗಳು ಹಲವು ಬೇನೆಗಳ ಚಿಕಿತ್ಸೆಗಳಲ್ಲಿ ಬಳಸಬಹುದಾದ ಸಾಮರ್ಥ್ಯವನ್ನು ಹೊಂದಿವೆ.[೧೫]

1997ರ ಫೆಬ್ರುವರಿಯಲ್ಲಿ, ರೊಸ್ಲಿನ್‌ ಸಂಸ್ಥೆಯಲ್ಲಿ ಕೆಲಸ ಮಾಡುವ ಇಯಾನ್‌ ವಿಲ್ಮಟ್‌ ಮತ್ತು ಅವನ ಸಹೋದ್ಯೋಗಿಗಳು, ಬೆಳೆದ ಹೆಣ್ಣು ಕುರಿಯೊಂದರ ಸ್ತನಗ್ರಂಥಿಯಿಂದ 'ಡಾಲಿ' ಎಂಬ ಅಬೀಜ ಸಂತಾನ ಕುರಿಯನ್ನು ಹುಟ್ಟುಹಾಕಿದಾಗ, ಅಬೀಜ ಸಂತಾನೋತ್ಪತ್ತಿಯು ಮಾಧ್ಯಮ ಗಮನದ ಕೇಂದ್ರಬಿಂದುವಾಯಿತು. ಡಾಲಿಯ ಅಬೀಜ ಸಂತಾನೋತ್ಪತ್ತಿಯ ತಂತ್ರವನ್ನು ಬಳಸಿ, ಒಂದು ದಿನ ಮನುಷ್ಯರಲ್ಲೂ ಸಹ ಅಬೀಜ ಸಂತಾನೋತ್ಪತ್ತಿ ಮಾಡಬಹುದೆಂದು ಹಲವರಿಗೆ ಗೋಚರವಾಯಿತು.[೧೬] ನೈತಿಕತೆಯ ದೃಷ್ಟಿಕೋನದಿಂದ ಇದು ಬಹಳಷ್ಟು ವಿವಾದಗಳನ್ನು ಹುಟ್ಟುಹಾಕಿತು.

Responsible biotechnology is not the enemy; starvation is. Without adequate food supplies at affordable prices, we cannot expect world health or peace.

— Jimmy Carter, Former President of the United States, 11 Jul 1997, [೧೭]

ಫಸಲು ಇಳುವರಿ

[ಬದಲಾಯಿಸಿ]

ಅಧುನಿಕ ಜೈವಿಕ ತಂತ್ರಜ್ಞಾನದ ತಂತ್ರವನ್ನು ಬಳಸಿ, ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಹೊಂದಿರುವ ಫಸಲು ವೈವಿಧ್ಯಕ್ಕೆ ಒಂದೋ ಎರಡೋ ಜೀನ್‌ಗಳನ್ನು (ಮೊನ್ಸಾಟೋ ಕಂಪನಿಯ ಸ್ಮಾರ್ಟ್‌ಸ್ಟ್ಯಾಕ್ಸ್‌ 8 ಜೀನ್‌ಗಳನ್ನು ಬಳಸಲಿದ್ದು, ಅದು 2010ರಿಂದ ಆರಂಭವಾಗಲಿದೆ) ವರ್ಗಾಯಿಸಿ, ಅದರ ಇಳುವರಿಯನ್ನು ಹೆಚ್ಚಿಸುವಂತಹ ಒಂದು ಹೊಸ ಗುಣವನ್ನು ಅಳವಡಿಸಬಹುದಾಗಿದೆ.[೧೮] ಆದಾಗ್ಯೂ, ಫಸಲು ಇಳುವರಿಯಲ್ಲಿನ ಹೆಚ್ಚಳಗಳು ಕೃಷಿಯಲ್ಲಿನ ಆಧುನಿಕ ಜೈವಿಕ ತಂತ್ರಜ್ಞಾನದ ಸ್ಪಷ್ಟ ಅನ್ವಯಿಕಗಳಾದರೂ, ಇದು ಅತಿ ಕ್ಲಿಷ್ಟಕರವೂ ಹೌದು ಎಂಬುದು ಗಮನಾರ್ಹ ಅಂಶ. ಒಂದೇ ಜೀನ್‌ ಮೂಲಕ ನಿಯಂತ್ರಿತವಾದ ಪ್ರಭಾವಗಳನ್ನು ಉಂಟುಮಾಡುವಲ್ಲಿ ಪ್ರಸಕ್ತ ಇರುವ ತಳೀಯ ವಿನ್ಯಾಸ ತಂತ್ರಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತವೆ.ಇಳುವರಿಯೊಂದಿಗೆ ಸಂಬಂಧ ಹೊಂದಿರುವ ಹಲವು ತಳೀಯ ಗುಣಲಕ್ಷಣಗಳು (ಉದಾಹರಣೆಗೆ, ವರ್ಧಿತ ಬೆಳವಣಿಗೆ) ದೊಡ್ಡ ಸಂಖ್ಯೆಯ ಜೀನ್‌ಗಳಿಂದಲೇ ನಿಯಂತ್ರಿಸಲ್ಪಡುತ್ತಿದ್ದು, ಒಟ್ಟಾರೆ ಇಳುವರಿಯ ಮೇಲೆ ಒಂದೊಂದು ಜೀನ್‌ನದೂ ಕನಿಷ್ಥ ಮಟ್ಟದ ಪ್ರಭಾವವಿರುತ್ತದೆ.[೧೯] ಹಾಗಾಗಿ, ಈ ಕ್ಷೇತ್ರದಲ್ಲಿ ಸಾಕಷ್ಟು ವೈಜ್ಞಾನಿಕ ಕಾರ್ಯಗಳಾಗಬೇಕಾಗಿದೆ.

ಪರಿಸರೀಯ ಒತ್ತಡಗಳಿಗೆ ಫಸಲುಗಳ ಈಡಾಗುವಿಕೆಯಲ್ಲಿನ ಇಳಿತ

[ಬದಲಾಯಿಸಿ]

ಜೈವಿಕ ಮತ್ತು ಅಜೀವಕ ಒತ್ತಡಗಳನ್ನು ಸಹಿಸಲು ನೆರವಾಗುವ ಜೀನ್‌ಗಳನ್ನು ಹೊಂದಿರುವ ಫಸಲುಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಉದಾಹರಣೆಗೆ, ಬರ ಮತ್ತು ಅಧಿಕ ಲವಣಾಂಶದಿಂದ ಕೂಡಿದ ಮಣ್ಣು, ಫಸಲು ಇಳುವರಿಯನ್ನು ಸೀಮಿತಗೊಳಿಸುವ ಎರಡು ಪ್ರಮುಖ ಅಂಶಗಳಾಗಿವೆ. ಇಂತಹ ತೀವ್ರತೆಯ ವಾತಾವರಣಗಳನ್ನು ಸಹಿಸಿಕೊಳ್ಳುವಂತ ಗಿಡಗಳನ್ನು ಜೀವತಂತ್ರಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ. ಇಂತಹ ತೀವ್ರತೆಯನ್ನು ಸಹಿಸಿಕೊಳ್ಳಲು ನೆರವಾಗುವಂತಹ ಜೀನ್‌ಗಳನ್ನು ಪತ್ತೆ ಮಾಡಿ ಅವುಗಳನ್ನು ಅಪೇಕ್ಷಣೀಯ ಫಸಲುಗಳಿಗೆ ವರ್ಗಾಯಿಸುವುದು ಈ ಅಧ್ಯಯನದ ಉದ್ದೇಶವಾಗಿದೆ. ಗಿಡದ ಜೀನ್‌ ಒಂದನ್ನು ಪತ್ತೆ ಮಾಡಿರುವುದು ಇತ್ತೀಚೆಗಿನ ಬೆಳವಣಿಗೆಗಳಲ್ಲಿ ಒಂದು. ಗಿಡ ಸಂಶೋಧನೆಗಾಗಿ ಬೆಳೆಸಲಾದ ಥೇಲ್‌ ಕ್ರೆಸ್‌ ಎಂಬ ಸಣ್ಣ ಕಳೆಯಲ್ಲಿನ At-DBF2 ಎಂಬುದೇ ಆ ಜೀನ್‌ ಆಗಿದ್ದು, ಇದನ್ನು ಬೆಳೆಸುವುದು ಬಹಳ ಸುಲಭವಾಗಿದೆ ಹಾಗೂ ಇತರ ಆನುವಂಶಿಕ ಸಂಕೇತವನ್ನೂ ಸಹ ಸಮರ್ಥವಾಗಿ ಚಿತ್ರಸಬಹುದಾಗಿದೆ.ಈ ಜೀನ್‌ನ್ನು ಟೊಮೆಟೊ ಮತ್ತು ತಂಬಾಕಿನ ಜೀವಕೋಶಗಳಲ್ಲಿ ಅಳವಡಿಸಿದಾಗ, (RNA ಅಡ್ಡಬಳಸುವಿಕೆ ನೋಡಿ) ಮಿತಿಮೀರಿದ ಲವಣಾಂಶ, ಬರ, ಶೀತ ಮತ್ತು ಉಷ್ಣಗಳಂತಹ ಪರಿಸರೀಯ ಒತ್ತಡಗಳನ್ನು ಈ ಜೀವಕೋಶಗಳು ಸಹಿಸಿದ್ದು ಕಂಡುಬಂತು.ದೊಡ್ಡ ಪ್ರಮಾಣದ ಪ್ರಯೋಗಗಳಲ್ಲಿ ಈ ಪ್ರಾಥಮಿಕ ಫಲಿತಾಂಶಗಳು ಸಫಲವೆಂದು ಸಾಬೀತಾದಲ್ಲಿ, ಕಠೋರ ಪರಿಸರಗಳನ್ನು ಉತ್ತಮವಾಗಿ ಸಹಿಸಬಲ್ಲ ಗಿಡಗಳನ್ನು ವಿನ್ಯಾಸ ಮಾಡುವಲ್ಲಿ At-DBF2 ಜೀನ್‌ಗಳು ನೆರವಾಗಬಲ್ಲುದಾಗಿವೆ.[೨೦] ಅಕ್ಕಿಯ ಹಳದಿ ಮಿಶ್ರಿತ ವೈರಸ್‌ (RYMV)ಗೆ ಪ್ರತಿರೋಧವನ್ನು ಒಡ್ಡಬಲ್ಲ ಜೀವಾಂತರ ಅಕ್ಕಿಯ ಗಿಡವನ್ನೂ ಸಹ ಸಂಶೋಧಕರು ಸೃಷ್ಟಿಸಿದ್ದಾರೆ. ಆಫ್ರಿಕಾದಲ್ಲಿ ಈ ವೈರಸ್‌, ಅಕ್ಕಿಯ ಫಸಲುಗಳಲ್ಲಿ ಬಹುಪಟ್ಟನ್ನು ಹಾಳುಮಾಡಿ ಉಳಿದ ಗಿಡಗಳನ್ನು ಶಿಲೀಂಧ್ರೀಯ ಸೋಂಕಿಗೀಡಾಗುವಂತೆ ಮಾಡುತ್ತದೆ.[೨೧]

ಆಹಾರದ ಬೆಳೆಗಳ ಹೆಚ್ಚಾದ ಪೌಷ್ಟಿಕತೆಯ ಗುಣಮಟ್ಟಗಳು ಮತ್ತು ಪ್ರಮಾಣ

[ಬದಲಾಯಿಸಿ]

ಪೌಷ್ಟಿಕತೆಯ ಗುಣಮಟ್ಟಗಳನ್ನು ಹೆಚ್ಚಿಸಲು ಆಹಾರಗಳಲ್ಲಿರುವ ಪ್ರೊಟೀನ್‌ಗಳನ್ನು ಪರಿವರ್ತಿಸಬಹುದಾಗಿದೆ. ದ್ವಿದಳಧಾನ್ಯ ಸಸ್ಯದ ಕಾಯಿಗಳು ಮತ್ತು ಏಕದಳ ಧಾನ್ಯದ ಕಾಳುಗಳಲ್ಲಿನ ಪ್ರೊಟೀನ್‌ಗಳನ್ನು ಪರಿವರ್ತಿಸಿ, ಮನುಷ್ಯರು ಸೇವಿಸುವ ಸಮತೋಲಿತ ಆಹಾರ ಕ್ರಮಕ್ಕೆ ಅಗತ್ಯವಾಗಿರುವ ಅಮೈನೊ ಆಮ್ಲಗಳನ್ನು ಪೂರೈಸಲು ಸಾಧ್ಯವಿದೆ.[೧೯] ಪ್ರಾಧ್ಯಾಪಕರಾದ ಇಂಗೊ ಪೋಟ್ರಿಕಸ್‌ ಮತ್ತು ಪೀಟರ್‌ ಬೆಯರ್‌ ಅವರು ಗೋಲ್ಡನ್‌ ರೈಸ್‌ ಬಗ್ಗೆ ನಡೆಸಿದ ಸಂಶೋಧನೆಯು ಇದಕ್ಕೆ ಒಳ್ಳೆಯ ಉದಾಹರಣೆಯಾಗಿದೆ. (ಕೆಳಗೆ ಚರ್ಚಿಸಲಾಗಿದೆ).

ಆಹಾರದ ಸುಧಾರಿತ ರುಚಿ, ವಿನ್ಯಾಸ ಅಥವಾ ರೂಪ

[ಬದಲಾಯಿಸಿ]

ಗಿಡವು ಕೆಡುವುದನ್ನು ನಿಧಾನಗೊಳಿಸಲು ಆಧುನಿಕ ಜೈವಿಕ ತಂತ್ರಜ್ಞಾನವನ್ನು ಬಳಸಬಹುದಾಗಿದೆ. ಇದರಿಂದ ಗಿಡದ ಮೇಲೆಯೇ ದೀರ್ಘಕಾಲದವರೆಗೆ ಹಣ್ಣು ಪಕ್ವವಾಗಬಹುದು, ಮತ್ತು ಆ ನಂತರ ಸಾಕಷ್ಟು ಅವಧಿಯವರೆಗೂ ಉತ್ತಮವಾದ ಸ್ಥಿತಿಯಲ್ಲಿರುವಂತೆ ಬಳಕೆದಾರರಿಗೆ ರವಾನಿಸಬಹುದಾಗಿದೆ. ಇದು ಹಣ್ಣಿನ ರುಚಿ, ವಿನ್ಯಾಸ ಮತ್ತು ರೂಪವನ್ನು ಬದಲಾಯಿಸುತ್ತದೆ. ಇನ್ನೂ ಮುಖ್ಯವಾಗಿ, ಹಣ್ಣುಗಳು ಹಾಳಾಗುವುದು ನಿಧಾನವಾಗುವುದರಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿನ ಕೃಷಿಕರಿಗಾಗಿ ಮಾರುಕಟ್ಟೆಯ ವಿಸ್ತರಣೆಯಾಗುವಲ್ಲಿ ಇದು ನೆರವಾಗುತ್ತದೆ. ಆದಾಗ್ಯೂ, ಕೆಲವೊಮ್ಮೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಸಂಭಾವ್ಯ ಫಲಾನುಭವಿಗಳ ವಾಸ್ತವಿಕ ಅಗತ್ಯಗಳ ಬಗ್ಗೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವಿಜ್ಞಾನಿಗಳಿಗೆ ಕೆಲವೊಮ್ಮೆ ಸರಿಯಾದ ಗ್ರಹಿಕೆಯಾಗಿಲ್ಲ ಎನ್ನಬಹುದು. ಉದಾಹರಣೆಗೆ, ಹಾಳಾಗುವುದನ್ನು ತಡೆಗಟ್ಟುವಂತೆ ಸೊಯಾಬೀನ್‌ಗಳನ್ನು ಪರಿವರ್ತಿಸುವುದರಿಂದ, ಹುದುಗುವಿಕೆಯನ್ನು ಆಧರಿಸುವ ಪ್ರೊಟೀನ್‌ ಮೂಲವಾದ ತೆಂಪೆ ಎಂಬುದನ್ನು ಉತ್ಪಾದಿಸಲು ತೊಡಕಾಗುತ್ತದೆ. ಪರಿವರ್ತಿತ ಸೊಯಾಬೀನ್‌ಗಳ ಬಳಸುವುದರಿಂದಾಗಿ ಮುದ್ದೆಯಾದ ವಿನ್ಯಾಸದಲ್ಲಿ ಪರ್ಯವಸಾನವಾಗುತ್ತದೆ. ಇದು ಬಾಯಿಗೆ ರುಚಿಕರವಾಗಿಯೂ ಇರುವುದಿಲ್ಲ ಮತ್ತು ಅಡುಗೆ ಮಾಡುವಾಗ ಅಷ್ಟೊಂದು ಅನುಕೂಲಕರವಾಗಿರುವುದಿಲ್ಲ.

ಟೊಮೆಟೊ ಮೊದಲ ಬಾರಿಗೆ ತಳೀಯವಾಗಿ ಪರಿವರ್ತಿತ ಆಹಾರ ಪದಾರ್ಥವಾಗಿತ್ತು. ವಿಳಂಬವಾಗಿ ಪಕ್ವವಾಗುವಂತೆ ಅದನ್ನು ರೂಪಾಂತರಗೊಳಿಸಲಾಯಿತು.[೨೨] ಇಂಡೊನೇಷ್ಯಾ, ಮಲೇಷ್ಯಾ, ಥಾಯಿಲೆಂಡ್‌, ಫಿಲಿಪೀನ್ಸ್‌ ಮತ್ತು ವಿಯೆಟ್ನಾಮ್‌ ದೇಶಗಳ ಸಂಶೋಧಕರು ನಾಟಿಂಗ್‌ಹ್ಯಾಮ್‌ ವಿಶ್ವವಿದ್ಯಾನಿಲಯ ಮತ್ತು ಜೆನೆಕಾ ಸಂಸ್ಥೆಯ ಸಹಯೋಗದೊಂದಿಗೆ, ಪರಂಗಿ ಹಣ್ಣು ಪಕ್ವವಾಗುವುದನ್ನು ವಿಳಂಬಿಸುವ ಯೋಜನೆಯ ಕುರಿತಾದ ಸಂಶೋಧನೆಯಲ್ಲಿ ಸದ್ಯಕ್ಕೆ ನಿರತರಾಗಿದ್ದಾರೆ.[೨೩]

ಗಿಣ್ಣಿನ ಉತ್ಪಾದನೆಯಲ್ಲಿ ಜೈವಿಕ ತಂತ್ರಜ್ಞಾನ:[೨೪] ಸೂಕ್ಷ್ಮಾಣುಗಳು ಉತ್ಪಾದಿಸುವ ಕಿಣ್ವಗಳು, ಪ್ರಾಣಿಯ 'ರೆನಿಟ್‌' (ಮೊಲೆಯುಣ್ಣುವ ಕರುವಿನ ಜಠರದಲ್ಲಿ ಕಂಡುಬರುವ ಗರಣೆಗಟ್ಟಿದ ಹಾಲು; ಇದು ಚೀಸ್‌ ಹೆಪ್ಪುಗಟ್ಟಿಸುವ ವಸ್ತು)ನ ಬದಲಿಗೆ ಚೀಸ್‌ ತಯಾರಕರಿಗಾಗಿ ಪರ್ಯಾಯ ಪೂರೈಕೆಯಾಗಿವೆ. ಇದು ಪ್ರಾಣಿ-ಮೂಲಗಳಿಂದ ತಯಾರಿಸಲಾದ ಪದಾರ್ಥಗಳ ಬಗ್ಗೆ ಸಾರ್ವಜನಿಕರಲ್ಲಿ ಇರಬಹುದಾದ ತಳಮಳಗಳನ್ನು ಸಹ ಪರಿಹರಿಸುತ್ತದೆ. ಆದರೂ ಸದ್ಯಕ್ಕೆ ಸಂಶ್ಲೇಷಿತ ಹಾಲನ್ನು ಉತ್ಪಾದಿಸುವ ಯಾವುದೇ ಯೋಜನೆಯಿಲ್ಲ. ಹೀಗಾಗಿ ಸಾರ್ವಜನಿಕರ ವಾದದ ಪ್ರಾಬಲ್ಯ ಕಡಿಮೆಯಾದಂತಿದೆ. ಕಿಣ್ವಗಳು ಪ್ರಾಣಿಯ ರೆನಿಟ್‌ನ ಬದಲಿಗೆ ಪ್ರಾಣಿ-ಸ್ನೇಹಿ ಪರ್ಯಾಯವನ್ನು ಒದಗಿಸುತ್ತವೆ. ಅವುಗಳ ತುಲನಾತ್ಮಕ ಗುಣಲಕ್ಷಣವನ್ನು ಹೇಳುವುದಾದರೆ, ತಾತ್ವಿಕವಾಗಿಯೂ ಸಹ ಅವು ಕಡಿಮೆ ಬೆಲೆಯನ್ನುಳ್ಳದ್ದಾಗಿವೆ.

ಬ್ರೆಡ್‌ ತಯಾರಿಸಲು ಪ್ರತಿವರ್ಷ ಸುಮಾರು 85 ದಶಲಕ್ಷ ಟನ್‌ಗಳಷ್ಟು ಗೋಧಿ ಹಿಟ್ಟನ್ನು ಬಳಸಲಾಗುತ್ತದೆ.[೨೫] ಹಿಟ್ಟಿಗೆ 'ಮಾಲ್ಟೊಜೆನಿಕ್‌ ಅಮೈಲೇಸ್‌' ಎಂಬ ಕಿಣ್ವವನ್ನು ಸೇರಿಸುವುದರಿಂದ ಬ್ರೆಡ್‌ ದೀರ್ಘಕಾಲ ತಾಜಾ ಸ್ಥಿತಿಯಲ್ಲುಳಿಯುತ್ತದೆ. ಬ್ರೆಡ್‌ನ 10–15%ರಷ್ಟು ಭಾಗ ಹೊಲಸಾದ ಕಾರಣ ಬಿಸಾಡಲಾಗಿದೆಯೆಂದು ಭಾವಿಸಿ, ಇನ್ನೂ 5-7 ದಿನಗಳ ಕಾಲ ಅದನ್ನು ತಾಜಾ ಆಗಿಡಲು ಸಾಧ್ಯವಾದಲ್ಲಿ, ಬಹುಶಃ ಪ್ರತಿವರ್ಷ 2 ದಶಲಕ್ಷ ಟನ್‌ಗಳಷ್ಟು ಗೋಧಿಹಿಟ್ಟನ್ನು ಉಳಿಸಬಹುದಾಗಿದೆ. ಇತರೆ ಕಿಣ್ವಗಳು ಬ್ರೆಡ್‌ ಹಿಗ್ಗಲು ಕಾರಣವಾಗಿ ಹಗುರವಾದ ಬ್ರೆಡ್‌ ತುಂಡು ಲಭಿಸಬಹುದು, ಅಥವಾ ಬ್ರೆಡ್‌ ತುಂಡನ್ನು ವಿವಿಧ ರೀತಿಗಳಲ್ಲಿ ಪರಿವರ್ತಿಸಬಹುದು.

ಗೊಬ್ಬರಗಳು, ಕೀಟನಾಶಕಗಳು ಮತ್ತು ಇತರೆ ಕೃಷಿ ರಾಸಾಯನಿಕ ವಸ್ತುಗಳ ಮೇಲೆ ಕಡಿಮೆಯಾದ ಅವಲಂಬನೆ

[ಬದಲಾಯಿಸಿ]

ಕೃಷಿಯಲ್ಲಿನ ಆಧುನಿಕ ಜೈವಿಕ ತಂತ್ರಜ್ಞಾನದ ಬಹುತೇಕ ಪ್ರಸ್ತುತ ವಾಣಿಜ್ಯ ಅನ್ವಯಿಕಗಳು, ಕೃಷಿ ರಾಸಾಯನಿಕ ಪದಾರ್ಥಗಳ ಮೇಲೆ ರೈತರ ಅವಲಂಬನವನ್ನು ಕಡಿಮೆಗೊಳಿಸುವತ್ತ ಕೇಂದ್ರೀಕೃತವಾಗಿವೆ. ಉದಾಹರಣೆಗೆ, ಬೆಸಿಲಸ್‌ ತುರಿಂಜಿಯೆನ್ಸಿಸ್‌ (Bt) ಒಂದು ಮಣ್ಣಿನ ಬ್ಯಾಕ್ಟೀರಿಯಂ ಆಗಿದ್ದು, ಕೀಟನಾಶಕ ಗುಣಗಳನ್ನು ಹೊಂದಿರುವ ಪ್ರೋಟೀನ್‌ನ್ನು ಅದು ಉತ್ಪಾದಿಸುತ್ತದೆ. ಸಾಂಪ್ರದಾಯಿಕವಾಗಿ, ಈ ಬ್ಯಾಕ್ಟೀರಿಯಾಗಳಿಂದ ಕೀಟನಾಶಕಗಳ ಸಿಂಪಡಣೆಯೊಂದನ್ನು ತಯಾರಿಸಲು ಹುದುಗುವ ಪ್ರಕ್ರಿಯೆಯನ್ನು ಬಳಸಲಾಗಿದೆ. ಈ ರೂಪದಲ್ಲಿ, ಈ Bt ಜೀವಾಣು ವಿಷವು ಒಂದು ನಿಷ್ಕ್ರಿಯ ಪ್ರೊಟಾಕ್ಸಿನ್‌ ಆಗಿದ್ದು, ಅದು ಪರಿಣಾಮ ಬೀರಬೇಕಾದರೆ, ಹುಳುವಿನೊಳಗೆ ಅದು ಜೀರ್ಣಗೊಳ್ಳಬೇಕಾದ ಅಗತ್ಯವಿದೆ. ಹಲವಾರು Bt ಟಾಕ್ಸಿನ್‌ಗಳಿವೆ, ಟಾಕ್ಸಿನ್‌ ನಿಶ್ಚಿತ ಕೀಟಗಳನ್ನು ನಾಶಪಡಿಸುವಂತೆ ಪ್ರತಿಯೊಂದು ಟಾಕ್ಸಿನ್‌ನ್ನೂ ತಯಾರಿಸಲಾಗಿದೆ. Bt ಟಾಕ್ಸಿನ್‌ಗೆ ಸಂಬಂಧಿಸಿದ ಜೀನ್‌ಗಳನ್ನು ಹೊಂದಿರುವಂತೆ ಮತ್ತು ಹೊರಹೊಮ್ಮಿಸುವಂತೆ ಫಸಲು ಗಿಡಗಳನ್ನು ಇದೀಗ ವಿನ್ಯಾಸ ಮಾಡಲಾಗಿದ್ದು, ಅವು ಅದರ ಸಕ್ರಿಯ ಸ್ಥಿತಿಯಲ್ಲಿ ಉತ್ಪಾದಿಸುತ್ತವೆ. ಪ್ರಭಾವಕ್ಕೆ ಈಡಾಗುವ ಕೀಟವು, Bt ಪ್ರೊಟೀನ್‌ನ್ನು ಸೂಸುವ ಈ ಜೀವಾಂತರ ಫಸಲಿನ ತಳಿಯನ್ನು ತಿಂದರೆ, Bt ಜೀವಾಣು ವಿಷವು ಅದರ ಆಹಾರನಾಳದ ಒಳಪೊರೆಗೆ ಅಂಟಿಕೊಳ್ಳುತ್ತದೆ. ಈ ಕಾರಣದಿಂದಾಗಿ ಕೀಟವು ಇದನ್ನು ತಿನ್ನುವುದನ್ನು ನಿಲ್ಲಿಸುತ್ತದೆ ಮತ್ತು ಕೆಲ ಕ್ಷಣಗಳ ನಂತರ ಕೀಟವು ಸತ್ತುಹೋಗುತ್ತದೆ. ಸಿಂಪಡಿಸುವಂತಹ ಕಷ್ಟಕರ ಕ್ರಿಯೆಯ ಮೂಲಕ ನಿಯಂತ್ರಿಸಲಾದ ಕಾಳು ಕೊರೆಯುವ ಕೀಟ (ಲೆಪಿಡಾಪ್ಟರ ಗಣಕ್ಕೆ ಸೇರಿದ ಕೀಟ)ವನ್ನು ನಿಯಂತ್ರಿಸಲು Bt ಕಾಳು ಈಗ ಹಲವು ದೇಶಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ವಿಶಾಲ ವ್ಯಾಪ್ತಿಯ ಸಸ್ಯನಾಶಕಗಳನ್ನು ಸಹಿಸುವ ಗುಣಗಳನ್ನು ಹೊಂದುವ ಸಲುವಾಗಿಯೂ ಸಹ ಫಸಲುಗಳನ್ನು ತಳೀಯವಾಗಿ ವಿನ್ಯಾಸಗೊಳಿಸಲಾಗಿದೆ. ಫಸಲಿಗೆ ಯಾವುದೇ ಹಾನಿಯಾಗದಂತಿರುವ ಮತ್ತು ವಿಶಾಲ ವ್ಯಾಪ್ತಿಯ ಕ್ರಿಯಾಶೀಲತೆಯೊಂದಿಗಿನ ಕಡಿಮೆ ವೆಚ್ಚದ ಸಸ್ಯನಾಶಕಗಳ ಅಭಾವವು, ಫಸಲಿನ ಕಳೆ ನಿಯಂತ್ರಣದಲ್ಲಿ ಯಾವಾಗಲೂ ಇರುವಂತಹ ಕೊರತೆಯಾಗಿತ್ತು. ಫಸಲಿಗೆ ಹಾನಿಕಾರಕವಾವದ ವಿಶಾಲ ಶ್ರೇಣಿಯ ಕಳೆಯ ಜಾತಿಗಳನ್ನು ನಿಯಂತ್ರಿಸಲು ಹಲವು ಸಸ್ಯನಾಶಕಗಳ ಬಹುಪಟ್ಟು ಅನ್ವಯಿಕಗಳನ್ನು ವಾಡಿಕೆಯಾಗಿ ಬಳಸಲಾಗುತ್ತಿತ್ತು. ಕಳೆಯ ನಿಯಂತ್ರಣವು ಹೊರಹೊಮ್ಮುವಿಕೆಯ ಮುಂಚಿನ ಸ್ಥಿತಿಯನ್ನೇ ಅವಲಂಬಿಸುತ್ತಿತ್ತು - ಅಂದರೆ, ಈಗಾಗಲೇ ಉದ್ಭವಿಸಿರುವ ನೈಜ ಕಳೆಗಳ ಮೇಲೆ ಸಿಂಪಡಿಸುವುದಕ್ಕೆ ಬದಲಾಗಿ ನಿರೀಕ್ಷಿತ ಕಳೆಗಳ ಆವರಿಸುವಿಕೆಗೆ ಪ್ರತಿಯಾಗಿ ಸಸ್ಯನಾಶಕ ಅನ್ವಯಿಕಗಳನ್ನು ಸಿಂಪಡಿಸಲಾಗುತ್ತಿತ್ತು. ಸಸ್ಯನಾಶಕ ಅನ್ವಯಿಕಗಳ ಮೂಲಕ ನಾಶಪಡಿಸಲಾಗದ ಕಳೆಗಳನ್ನು ನಿಯಂತ್ರಿಸಲು ಯಾಂತ್ರಿಕ ಬೇಸಾಯ ಮತ್ತು ಕೈಯ ಮೂಲಕವೇ ಕಳೆಯನ್ನು ಕೀಳುವುದು ಅನೇಕ ಸನ್ನಿವೇಶಗಳಲ್ಲಿ ಆವಶ್ಯಕವಾಗಿದ್ದವು. ಕಳೆ ನಿಯಂತ್ರಣಕ್ಕಾಗಿ ಬಳಸಲಾದ ಕಳೆನಾಶಕಗಳ ಸಕ್ರಿಯ ಘಟಕಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಸಾಮರ್ಥ್ಯ ಹೊಂದಿರುವ, ಸಸ್ಯನಾಶಕಗಳನ್ನು ಸಹಿಸುವಂತಹ ಫಸಲುಗಳನ್ನು ಪರಿಚಯಿಸಲಾಗಿದೆ. ಇದರಿಂದಾಗಿ ಒಂದು ಋತುವಿನಲ್ಲಿ ಉಪಯೋಗಿಸಲಾದ ಸಸ್ಯನಾಶಕಗಳ ಸಂಖ್ಯೆಯು ಕಡಿಮೆಯಾಗಿದೆ. ಇದರ ಜೊತೆಗೆ, ಕಳೆಯ ನಿಯಂತ್ರಣಾ ವ್ಯವಸ್ಥೆಯಲ್ಲಿ ಸುಧಾರಣೆಯಾಗಿ, ಫಸಲುಗಳ ಇಳುವರಿ ಹೆಚ್ಚಾಗಿ, ಫಸಲುಗಳಿಗೆ ಹಾನಿಯಾಗುವ ಸಂಭವವು ಕಡಿಮೆಯಾಗಿದೆ. ಗ್ಲೈಫೊಸೇಟ್‌, ಗ್ಲುಫೊಸಿನೇಟ್‌ ಮತ್ತು ಬ್ರೊಮಾಕ್ಸಿನಿಲ್‌ ರಾಸಾಯನಿಕಗಳನ್ನು ಸಹಿಸುವ ಜೀವಾಂತರ ಫಸಲುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹತ್ತಿರದಲ್ಲಿನ ಕಳೆಗಳನ್ನು ನಾಶಪಡಿಸುವಾಗ ಫಸಲುಗಳಿಗೆ ಯಾವುದೇ ಹಾನಿಯಾಗದಂತೆ ಈ ಸಸ್ಯನಾಶಕಗಳನ್ನು ಈಗ ಜೀವಾಂತರ ಫಸಲುಗಳ ಮೇಲೆ ಸಿಂಪಡಿಸಬಹುದಾಗಿದೆ.[೨೬]

1996ರಿಂದ 2001ರ ತನಕ, ಮಾರುಕಟ್ಟೆಯಲ್ಲಿ ಲಭ್ಯವಾದ ಜೀವಾಂತರ ಫಸಲುಗಳ ಪೈಕಿ ಅತ್ಯಂತ ಪ್ರಬಲವಾದ ಗುಣಲಕ್ಷಣವೆಂದರೆ ಸಸ್ಯನಾಶಕದ ಸಹನೆಯಾಗಿದ್ದು, ಕ್ರಿಮಿಕೀಟಗಳ ವಿರುದ್ಧದ ನಿರೋಧಕ ಶಕ್ತಿಯು ನಂತರದ ಸ್ಥಾನವನ್ನು ಅಲಂಕರಿಸುತ್ತದೆ.2001ರಲ್ಲಿ, ಸೊಯಾಬೀನ್‌, ಮುಸುಕಿನ ಜೋಳ ಮತ್ತು ಹತ್ತಿ ಫಸಲುಗಳಲ್ಲಿ ಅಳವಡಿಸಲಾದ ಸಸ್ಯನಾಶಕ ಸಹನಾಶಕ್ತಿಯು 626,000 ಚದರ ಕಿಲೊಮೀಟರ್‌ಗಳಲ್ಲಿ ನೆಡಲಾದ ಗಿಡಗಳ ಪೈಕಿ 77%ರಷ್ಟು ಜೀವಾಂತರ ಫಸಲುಗಳಲ್ಲಿ; 15%ರಷ್ಟು ಬಿಟಿ ಫಸಲುಗಳಲ್ಲಿ ಕಂಡುಬಂತು. ಇದೇ ರೀತಿ, ಸಸ್ಯನಾಶಕ ಸಹನಾಶಕ್ತಿ ಮತ್ತು ಕೀಟನಿರೋಧಕ ಶಕ್ತಿಗಳಿಗಾಗಿ "ಪೇರಿಸಲಾದ ಜೀನ್‌ಗಳು" 8%ರಷ್ಟು ಹತ್ತಿ ಮತ್ತು ಕಾಳಿನ ಫಸಲುಗಳಲ್ಲಿ ಕಂಡುಬಂದವು.[೨೭]

ಫಸಲು ಗಿಡಗಳಲ್ಲಿ ಹೊಸ ಮಾದರಿಯ ಪದಾರ್ಥಗಳ ಉತ್ಪಾದನೆ

[ಬದಲಾಯಿಸಿ]

ಆಹಾರ ಕ್ಷೇತ್ರವಲ್ಲದೆ ಹೊಸ ಮಾದರಿಯ ಉಪಯೋಗಗಳಿಗೂ ಸಹ ಜೈವಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಉದಾಹರಣೆಗೆ, ಮಾರ್ಜಕಗಳಿಗೆ ಬೇಕಿರುವ ಕೊಬ್ಬಿನ ಆಮ್ಲಗಳು, ಬದಲೀ ಇಂಧನಗಳು ಮತ್ತು ಪೆಟ್ರೊರಾಸಾಯನಿಕಗಳ ತಯಾರಿಕೆಯಲ್ಲಿ ಬಳಸಲು ಅನುವಾಗುವಂತೆ ಎಣ್ಣೆಬೀಜವನ್ನು ಪರಿವರ್ತಿಸಬಹುದು.ಇನ್ಸುಲಿನ್‌ ಮತ್ತು ನಿಶ್ಚಿತ ಚುಚ್ಚುಮದ್ದುಗಳನ್ನು ತಯಾರಿಸಲು ಆಲೂಗಡ್ಡೆಗಳು, ಟಮೆಟೊಗಳು, ಅಕ್ಕಿ, ರೈಸರೆರೆರೆ ತಂಬಾಕು, ಲೆಟಿಸ್ ಸೊಪ್ಪು ಕುಸುಬೆ ಮತ್ತಿತರೆ ಗಿಡಗಳನ್ನು ತಳೀಯವಾಗಿ ವಿನ್ಯಾಸ ಮಾಡಲಾಗಿದೆ. ಒಂದು ವೇಳೆ ವೈದ್ಯಕೀಯ ಪ್ರಯೋಗಗಳು ಸಫಲವಾದಲ್ಲಿ, ವಿಶ್ವಾದ್ಯಂತ, ಅದರಲ್ಲೂ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಖಾದ್ಯ ಚುಚ್ಚುಮದ್ದುಗಳ ಅನುಕೂಲಗಳು ಭಾರೀ ಪ್ರಮಾಣದಲ್ಲಿ ಲಭಿಸಬಹುದು. ಜೀವಾಂತರ ಗಿಡಗಳನ್ನು ಸ್ಥಳೀಯವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಬೆಳೆಸಬಹುದಾಗಿದೆ. ಸಾಂಪ್ರದಾಯಿಕವಾಗಿ ತಯಾರಾದ ಮದ್ದುಗಳನ್ನು ದೂರದ ವಲಯಗಳಿಗೆ ಸಾಗಣೆ ಮಾಡುವಲ್ಲಿ ಮತ್ತು ರವಾನಿಸುವ ಸಮಯದಲ್ಲಿ ಅವನ್ನು ತಂಪಾಗಿಯೇ ಇಟ್ಟಿರುವಲ್ಲಿ ಎದುರಾದ ಏರ್ಪಾಟು ಮತ್ತು ಆರ್ಥಿಕ ಸಮಸ್ಯೆಗಳನ್ನೂ ಸಹ ಸ್ವದೇಶೀ ಚುಚ್ಚುಮದ್ದುಗಳು ತಪ್ಪಿಸಬಹುದು. ಅವುಗಳು ಖಾದ್ಯವಾಗಿರುವ ಕಾರಣ, ಅವುಗಳಿಗೆ ಪಿಚಕಾರಿಗಳ ಅಗತ್ಯವಿರುವುದಿಲ್ಲ. ಸಾಂಪ್ರದಾಯಿಕ ಚುಚ್ಚುಮದ್ದುಗಳ ತಯಾರಿಕೆಯಲ್ಲಿ ಪಿಚಕಾರಿಗಳು ಹೆಚ್ಚುವರಿ ವೆಚ್ಚಗಳನ್ನು ಒಳಗೊಂಡಿದ್ದು, ಕಲುಷಿತವಾದಲ್ಲಿ ಅವು ಸೋಂಕಿಗೆ ಕಾರಣವಾಗಬಹುದು.[೨೮] ಜೀವಾಂತರ ಗಿಡಗಳಲ್ಲಿ ಬೆಳಸಲಾದ ಇನ್ಸುಲಿನ್‌ನ ವಿಚಾರದಲ್ಲಿ, ಜಠರ-ಕರುಳು ವ್ಯವಸ್ಥೆಯು ಪ್ರೊಟೀನ್‌ನ್ನು ಒಡೆಯುವ ಕಾರಣ ಇದನ್ನು ಖಾದ್ಯ ಪ್ರೊಟೀನ್‌ ರೂಪದಲ್ಲಿ ನೀಡಲಾಗವುದಿಲ್ಲ. ಆದರೂ, ದುಬಾರಿ ಜೈವಿಕ ಕ್ರಿಯಾಕಾರಿ ರಚನೆ (ಬಯೊರಿಯಾಕ್ಟರ್‌)ಗಳಲ್ಲಿ ತಯಾರಿಸಲಾಗುವ ಇನ್ಸುಲಿನ್‌ಗಿಂತಲೂ ಇದನ್ನು ಗಮನಾರ್ಹವಾಗಿ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಬಹುದಾಗಿದೆ. ಕ್ಯಾಲ್ಗರಿಯಲ್ಲಿರುವ ಕೆನಡಾ-ಮೂಲದ ಸೆಂಬಯೊಸಿಸ್‌ ಜೆನೆಟಿಕ್ಸ್‌, ಇನ್ಕ್‌. Archived 2009-05-04 ವೇಬ್ಯಾಕ್ ಮೆಷಿನ್ ನಲ್ಲಿ. ಕಂಪನಿಯು ಈ ಕುರಿತು ಉದಾಹರಣೆಯ ಸಹಿತ ವಿವರವನ್ನು ನೀಡಿದೆ. ಸಾಂಪ್ರದಾಯಿಕ ಜೈವಿಕ ತಯಾರಿಕಾ ಸೌಕರ್ಯಗಳಿಗೆ ಹೋಲಿಸಿದಾಗ, ಈ ಕಂಪನಿಯ ಕುಸುಬೆ-ಎಣ್ಣೆಯಿಂದ ತಯಾರಾದ ಇನ್‌ಸುಲಿನ್‌ ಉತ್ಪನ್ನವು, ಉತ್ಪನ್ನದ ತಲಾ ವೆಚ್ಚವನ್ನು 25% ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ, ಮತ್ತು ಇದರಿಂದಾಗಿ 100 ದಶಲಕ್ಷ $ಗಿಂತಲೂ ಹೆಚ್ಚಿನ ಮೌಲ್ಯದ ಒಂದು ವಾಣಿಜ್ಯ-ಮಟ್ಟದ ಇನ್‌ಸುಲಿನ್ ತಯಾರಿಕಾ ಘಟಕವನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದ ಬಂಡವಾಳ ವೆಚ್ಚದಲ್ಲಿಯೂ ಕಡಿತವಾಗುವುದನ್ನು ಕಂಪನಿಯು ಅಂದಾಜಿಸಿದೆ.[೨೯]

ಟೀಕೆಗಳು

[ಬದಲಾಯಿಸಿ]

ಕೃಷಿ ಜೈವಿಕ ತಂತ್ರಜ್ಞಾನದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಗ್ಗಲೂ ಇದೆ. ಇದು ಹೆಚ್ಚಾದ ಸಸ್ಯನಾಶಕದ ಬಳಕೆ ಮತ್ತು ಅದರಿಂದಾಗುವ ಸಸ್ಯನಾಶದ ವಿರುದ್ಧದ ಪ್ರತಿರೋಧ, "ಮಹಾ ಕಳೆಗಳು", ಖಾದ್ಯ ಫಸಲುಗಳಲ್ಲಿನ ಅವಶೇಷಗಳು, GM-ಏತರ ಫಸಲುಗಳ ತಳೀಯ ಕಲುಷಿತಗೊಳಿಸುವಿಕೆಯಿಂದ ಸಾವಯವ ಮತ್ತು ಸಾಂಪ್ರದಾಯಿಕ ರೈತರಿಗೆ ಆಗುವ ತೊಂದರೆಗಳು, ಮತ್ತು ಗ್ಲೈಫೊಸೇಟ್‌ನಿಂದ ವನ್ಯಜೀವಿಗಳಿಗೆ ಸಂಭವಿಸುವ ಹಾನಿಗಳು ಇತ್ಯಾದಿ ಸಮಸ್ಯೆಗಳನ್ನು ಒಳಗೊಂಡಿದೆ.[೩೦][೩೧]

ಜೈವಿಕ ಶಿಲ್ಪಶಾಸ್ತ್ರ

[ಬದಲಾಯಿಸಿ]

ಜೈವಿಕ ತಂತ್ರಜ್ಞಾನ ಶಿಲ್ಪಶಾಸ್ತ್ರ ಅಥವಾ ಜೈವಿಕ ಶಿಲ್ಪಶಾಸ್ತ್ರವು ಶಿಲ್ಪಶಾಸ್ತ್ರದ ಒಂದು ಶಾಖೆಯಾಗಿದ್ದು, ಜೈವಿಕ ತಂತ್ರಜ್ಞಾನಗಳು ಮತ್ತು ಜೈವಿಕ ವಿಜ್ಞಾನಗಳ ಮೇಲೆ ಅದು ಕೇಂದ್ರೀಕೃತವಾಗಿದೆ.ಇದು ಜೈವಿಕ-ರಾಸಾಯನಿಕ ಶಿಲ್ಪಶಾಸ್ತ್ರ, ಜೈವಿಕ-ವೈದ್ಯಕೀಯ ಶಿಲ್ಪಶಾಸ್ತ್ರ, ಜೈವಿಕ-ಪ್ರಕ್ರಿಯಾ ಶಿಲ್ಪಶಾಸ್ತ್ರ, ಜೈವಿಕ-ವ್ಯವಸ್ಥಾ ಶಿಲ್ಪಶಾಸ್ತ್ರ ಇತ್ಯಾದಿ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರದ ನವೀನತೆಯ ಕಾರಣ, ಜೈವಿಕಶಿಲ್ಪಿ ಎಂಬ ಪದದ ವ್ಯಾಖ್ಯಾನವು ಇನ್ನೂ ವಿವರಣೆಗೆ ಸಿಲುಕಿಲ್ಲ. ಆದಾಗ್ಯೂ, ಸಾರ್ವತ್ರಿಕವಾಗಿ ಹೇಳುವುದಾದರೆ, ಇದು ಮೂಲಭೂತ ಜೈವಿಕ ವಿಜ್ಞಾನಗಳು ಮತ್ತು ಸಾಂಪ್ರದಾಯಿಕ ಶಿಲ್ಪಶಾಸ್ತ್ರೀಯ ತತ್ವಗಳನ್ನು ಒಗ್ಗೂಡಿಸಿದ ಒಂದು ಕ್ಷೇತ್ರವಾಗಿದೆ.

ಜೈವಿಕ ಕ್ರಿಯೆಗಳನ್ನು ಪ್ರಯೋಗಾಲಯದ ಪ್ರಮಾಣದಿಂದ ತಯಾರಿಕೆಯ ಪ್ರಮಾಣಕ್ಕೆ ಉನ್ನತೀಕರಿಸಲು ಜೈವಿಕಶಿಲ್ಪಿಗಳನ್ನು ಆಗಾಗ್ಗೆ ಬಳಸಲಾಗುತ್ತದೆ. ಇದಕ್ಕೂ ಮಿಗಿಲಾಗಿ ಬಹುತೇಕ ಶಿಲ್ಪಿಗಳಂತೆ, ವ್ಯವಸ್ಥಾಪನೆ, ಆರ್ಥಿಕ ಮತ್ತು ಕಾನೂನು ಸಂಬಂಧಿ ಪ್ರಕರಣಗಳೊಂದಿಗೂ ಅವರು ವ್ಯವಹರಿಸುತ್ತಾರೆ. ಜೈವಿಕ ತಂತ್ರಜ್ಞಾನ ಉದ್ದಿಮೆಗಳಿಗೆ ಪೇಟಂಟ್‌ಗಳು ಮತ್ತು ನಿಯಂತ್ರಣಗಳು (ಉದಾಹರಣೆಗೆ, U.S.ನಲ್ಲಿರುವ U.S. ಆಹಾರ ಮತ್ತು ಔಷಧ ಆಡಳಿತ ನಿಯಂತ್ರಣ) ಜೈವಿಕ ತಂತ್ರಜ್ಞಾನ ಉದ್ದಿಮೆಗಳಿಗೆ ಬಹಳ ಮುಖ್ಯವಾದ ವಿಚಾರಗಳಾಗಿವೆ. ಜೈವಿಕ ಶಿಲ್ಪಿಗಳು ಈ ವಿಚಾರಗಳ ಬಗ್ಗೆ ತಿಳುವಳಿಕೆ ಹೊಂದಿರುವುದು ಅಗತ್ಯವಾಗಿದೆ.

ಹೆಚ್ಚುತ್ತಿರುವ ಜೈವಿಕ ತಂತ್ರಜ್ಞಾನ ಉದ್ದಿಮೆಗಳ ಕಾರಣದಿಂದಾಗಿ ಮುಂಬರುವ ವರ್ಷಗಳಲ್ಲಿ ಜೈವಿಕ ಶಿಲ್ಪಿಗಳಿಗಾಗಿ ಬೇಡಿಕೆಯು ಸೃಷ್ಟಿಯಾಗುವ ಸಂಭವವಿದೆ. ವಿಶ್ವಾದ್ಯಂತದ ಹಲವು ವಿಶ್ವವಿದ್ಯಾಲಯಗಳು ಈಗ ಜೈವಿಕ ಶಿಲ್ಪಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನಗಳಲ್ಲಿ (ಸ್ವತಂತ್ರ ವಿಷಯಗಳಾಗಿ ಅಥವಾ ಹೆಚ್ಚು ಅಧಿಕೃತವಾಗಿರುವ ಶಿಲ್ಪಶಾಸ್ತ್ರೀಯ ಕ್ಷೇತ್ರಗಳಲ್ಲಿ ವಿಶೇಷತಾ ವಿಷಯಗಳಾಗಿ) ಪಠ್ಯಕ್ರಮವನ್ನು ಒದಗಿಸುತ್ತಿವೆ.

ಜೈವಿಕಪರಿಹಾರ ಮತ್ತು ಜೈವಿಕ ವಿಘಟನೆ

[ಬದಲಾಯಿಸಿ]

ಕಲುಷಿತ ಪರಿಸರಗಳನ್ನು ನಿರ್ಮಲಗೊಳಿಸಲು ಸಮರ್ಥನೀಯ ಮಾರ್ಗಗಳನ್ನು ಕಂಡುಕೊಳ್ಳುವ ಯತ್ನದಲ್ಲಿ ಜೀವಿಗಳನ್ನು ಅದರಲ್ಲೂ ವಿಶೇಷವಾಗಿ ಸೂಕ್ಷ್ಮಾಣುಜೀವಿಗಳನ್ನು ರೂಪಿಸಿ ಸರಿಹೊಂದಿಸಲು ಜೈವಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಕನಿಷ್ಠ ಪರಿಸರೀಯ ಪ್ರಭಾವದೊಂದಿಗೆ ನಮ್ಮ ಸಮಾಜದ ಸಮರ್ಥನೀಯ ಅಭಿವೃದ್ಧಿಯನ್ನು ಉತ್ತೇಜಿಸುವುದಕ್ಕಾಗಿ, ವಿಶಾಲ ಶ್ರೇಣಿಯ ಮಾಲಿನ್ಯಕಾರಕಗಳು ಹಾಗೂ ತ್ಯಾಜ್ಯವಸ್ತುಗಳನ್ನು ಪರಿಸರದಿಂದ ನಿರ್ಮೂಲಗೊಳಿಸುವುದು ಒಂದು ಅತ್ಯಗತ್ಯ ವಿಷಯವಾಗಿದೆ. ಮಾಲಿನ್ಯಕಾರಕಗಳನ್ನು ನಿರ್ಮೂಲಗೊಳಿಸುವಲ್ಲಿ ಜೈವಿಕ ಪ್ರಕ್ರಿಯೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಸಂಯುಕ್ತಗಳನ್ನು ಒಡೆಯುವುದಕ್ಕಾಗಿ/ಪರಿವರ್ತಿಸುವುದಕ್ಕಾಗಿ, ಸೂಕ್ಷಮಾಣುಜೀವಿಗಳ ಬೆರಗುಗೊಳಿಸುವ ಅಪಚಯ ಕ್ರಿಯೆಯ ಬಹುಕಾರ್ಯೋಪಯೋಗಿತ್ವದ ಅನುಕೂಲವನ್ನು ಜೈವಿಕ ತಂತ್ರಜ್ಞಾನವು ಸದುಪಯೋಗಪಡಿಸಿಕೊಳ್ಳುತ್ತಿದೆ. ಅನುಕ್ರಮಕರಣ, ಜೀನೋಮಿಕ್ಸ್‌, ಪ್ರೊಟಿಯೊಮಿಕ್ಸ್‌, ಬಯೊಇನ್ಫರ್ಮಾಟಿಕ್ಸ್‌ ಮತ್ತು ಇಮೇಜಿಂಗ್‌ ಕ್ಷೇತ್ರಗಳಲ್ಲಿ ಹೊಸ ಕ್ರಮಶಾಸ್ತ್ರೀಯ ಪ್ರಗತಿಗಳು ಭಾರೀ ಪ್ರಮಾಣದಲ್ಲಿ ಮಾಹಿತಿಯನ್ನು ನೀಡುತ್ತಿದೆ. ಪರಿಸರೀಯ ಸೂಕ್ಷ್ಮಜೀವ ವಿಜ್ಞಾನದಲ್ಲಿ, ಜೀನೋಮ್‌-ಆಧಾರಿತ ಜಾಗತಿಕ ಅಧ್ಯಯನಗಳು ಹೊಸ ಯುಗಕ್ಕೆ ನಾಂದಿಯಾಗಿವೆ. ಇವು ಚಯಾಪಚಯ ಮತ್ತು ನಿಯಂತ್ರಣಾ ಜಾಲಗಳ ಅಭೂತಪೂರ್ವ ಇನ್‌ ಸಿಲಿಕೊ ದೃಶ್ಯಗಳನ್ನು ಒದಗಿಸಿ, ವಿಘಟನೀಯ ಮಾರ್ಗಗಳ ವಿಕಸನದ ಬಗ್ಗೆ ಹಾಗೂ ಬದಲಾಗುತ್ತಿರುವ ಪರಿಸರ ಸ್ಥಿತಿಗೆ ತಕ್ಕಂತೆ ಆಣ್ವಿಕ ಸರಿಹೊಂದುವಿಕೆಯ ತಂತ್ರಗಳಿಗೆ ಕುರುಹುಗಳನ್ನು ನೀಡಿವೆ. ಕ್ರಿಯಾತ್ಮಕ ಜೀನೋಮಿಕ್‌ ಮತ್ತು ಮೆಟಾಜೀನೋಮಿಕ್‌ ಯತ್ನಗಳು ಅಥವಾ ವಿಧಾನಗಳು, ವಿಶಿಷ್ಟ ಪರಿಸರಗಳು ಮತ್ತು ವಿಶಿಷ್ಟ ಸಂಯುಕ್ತಗಳಲ್ಲಿನ ಇಂಗಾಲದ ಹರಿವುಗಳಿಗೆ ವಿಭಿನ್ನ ಮಾರ್ಗಗಳು ಮತ್ತು ನಿಯಂತ್ರಣಾ ಜಾಲಗಳ ತುಲನಾತ್ಮಕ ಪ್ರಾಮುಖ್ಯತೆಯ ಬಗೆಗಿನ ನಮ್ಮ ತಿಳುವಳಿಕೆಗಳನ್ನು ಹೆಚ್ಚಿಸುತ್ತಿವೆ. ಅವುಗಳು ಜೈವಿಕಪರಿಹಾರ ತಂತ್ರಜ್ಞಾನಗಳು ಮತ್ತು ಜೈವಿಕರೂಪಾಂತರ ಪ್ರಕ್ರಿಯೆಗಳ ಬೆಳವಣಿಗೆಗಳ ವೇಗವನ್ನು ನಿಶ್ಚಿತವಾಗಿ ವರ್ಧಿಸುತ್ತವೆ.

ವಿಶೇಷವಾಗಿ ಕಡಲಿನ ಪರಿಸರವು ಪ್ರಭಾವಕ್ಕೆ ಈಡಾಗುತ್ತದೆ, ಏಕೆಂದರೆ ಕರಾವಳಿ ವಲಯಗಳ ಮತ್ತು ಮುಕ್ತ ಸಮುದ್ರದಲ್ಲಿನ ತೈಲಗಳ ಚೆಲ್ಲುವಿಕೆಯು ಧಾರಕತೆಯು ಕಳಪೆ ಮಟ್ಟದಲ್ಲಿದ್ದು, ಅದರ ಉಪಶಮನ ಬಹಳ ಕಷ್ಟವಾಗಿದೆ. ಮಾನವ ಚಟುವಟಿಕೆಗಳ ಮೂಲಕ ಉಂಟಾಗುವ ಮಾಲಿನ್ಯದ ಜೊತೆಗೆ, ನೈಸರ್ಗಿಕ ಒಸರುವಿಕೆಯ ಮೂಲಕ ಪ್ರತಿವರ್ಷವೂ ದಶಲಕ್ಷಗಟ್ಟಲೆ ಟನ್‌ಗಳಷ್ಟು ಪೆಟ್ರೊಲಿಯಂ ಕಡಲ ಪರಿಸರವನ್ನು ಪ್ರವೇಶಿಸುತ್ತದೆ. "ಸೂಕ್ಷ್ಮಾಣು ಜೀವಿ ಸಮುದಾಯಗಳ, ಅದರಲ್ಲೂ ವಿಶೇಷವಾಗಿ ಹೈಡ್ರೊಕಾರ್ಬೊನೊಕ್ಲಾಸ್ಟಿಕ್‌ ಬ್ಯಾಕ್ಟೀರಿಯಾ (HCCB)ದ ಹೈಡ್ರೊಕಾರ್ಬನ್‌-ವಿಘಟನ ಚಟುವಟಿಕೆಗಳ ಮೂಲಕ, ವಿಷತ್ವವುಳ್ಳ ಪೆಟ್ರೊಲಿಯಂ ತೈಲದ ಗಮನಾರ್ಹ ಅಂಶವು ಕಡಲ ವ್ಯವಸ್ಥೆಯನ್ನು ತಲುಪವುದನ್ನು ತಡೆಗಟ್ಟಬಹುದು" ಎಂದು ತಜ್ಞರ ಗುಂಪೊಂದು ಪರಿಶೋಧಿಸಿದೆ.[೩೨]

ಶಿಕ್ಷಣ

[ಬದಲಾಯಿಸಿ]

1988ರಲ್ಲಿ, ಸಂಯುಕ್ತ ಸಂಸ್ಥಾನಗಳ ಕಾಂಗ್ರೆಸ್‌ನಿಂದ ಪ್ರಚೋದನೆಗೊಂಡ ನಂತರ, ರಾಷ್ಟ್ರೀಯ ಸಾರ್ವತ್ರಿಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಾಷ್ಟ್ರೀಯ ಆರೋಗ್ಯ ಸಂಸ್ಥೆ)ಯು ಜೈವಿಕ ತಂತ್ರಜ್ಞಾನ ತರಬೇತಿಗಾಗಿ ಹಣಕಾಸಿನ ವ್ಯವಸ್ಥೆಯನ್ನು ಕಲ್ಪಿಸಿತು. ಜೈವಿಕ ತಂತ್ರಜ್ಞಾನ ಕಾರ್ಯಕ್ರಮಗಳನ್ನು (BTPಗಳನ್ನು) ಆರಂಭಿಸಲು ರಾಷ್ಟ್ರಾದ್ಯಂತದ ವಿಶ್ವವಿದ್ಯಾಲಯಗಳು ಈ ಹಣಕಾಸಿಗಾಗಿ ಪೈಪೋಟಿ ನಡೆಸುತ್ತಿವೆ. ಪ್ರತಿಯೊಂದು ಯಶಸ್ವೀ ಅರ್ಜಿಗೆ ಸಾಮಾನ್ಯವಾಗಿ ಐದು ವರ್ಷಗಳ ಕಾಲ ಹಣಕಾಸಿನ ನೆರವನ್ನು ನೀಡಲಾಗುತ್ತದೆ. ನಂತರ ಸ್ಪರ್ಧಾತ್ಮಕವಾಗಿ ಅದನ್ನು ನವೀಕರಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ, ಪದವೀಧರ ವಿದ್ಯಾರ್ಥಿಗಳು BTPಯಲ್ಲಿ ಸ್ವೀಕೃತಿಗಾಗಿ ಪೈಪೋಟಿ ನಡೆಸುತ್ತಾರೆ. ಸ್ವೀಕೃತಿಯಾದಲ್ಲಿ, ಅವರ PhD ಪ್ರಬಂಧ ಕಾರ್ಯಕ್ಕಾಗಿ ಮೂರು ವರ್ಷಗಳ ಕಾಲ ಸ್ಟೈಪೆಂಡ್‌, ಪಾಠ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಹತ್ತೊಂಬತ್ತು ಸಂಸ್ಥೆಗಳು NIGMS ಸಮರ್ಥಿತ BTP ಪಠ್ಯಕ್ರಮವನ್ನು ಒದಗಿಸುತ್ತವೆ. http://www.nigms.nih.gov/Training/InstPredoc/PredocInst-Biotechnology.htm Archived 2009-12-03 ವೇಬ್ಯಾಕ್ ಮೆಷಿನ್ ನಲ್ಲಿ.. ಜೈವಿಕ ತಂತ್ರಜ್ಞಾನ ತರಬೇತಿಯನ್ನು ಪದವಿಪೂರ್ವ ತರಗತಿಗಳಲ್ಲಿ ಹಾಗೂ ಸಮುದಾಯ ಕಾಲೇಜ್‌ಗಳಲ್ಲಿಯೂ ಸಹ ನೀಡಲಾಗುತ್ತದೆ.

ಪ್ರಸಿದ್ಧ ಸಂಶೋಧಕರು ಮತ್ತು ವ್ಯಕ್ತಿಗಳು

[ಬದಲಾಯಿಸಿ]

ಇದನ್ನೂ ನೋಡಿರಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. "ದಿ ಕನ್ವೆನ್ಷನ್‌ ಆನ್‌ ಬಯೊಲಾಜಿಕಲ್‌ ಡೈವರ್ಸಿಟಿ Archived 2008-08-29 ವೇಬ್ಯಾಕ್ ಮೆಷಿನ್ ನಲ್ಲಿ. (ಆರ್ಟಿಕಲ್‌ 2. ಯೂಸ್‌ ಆಫ್‌ ಟರ್ಮ್ಸ್‌)." ಯುನೈಟೆಡ್ ನೇಷನ್ಸ್‌ 1992. 2008ರ ಫೆಬ್ರುವರಿ 6ರಂದು ಪುನರ್ಪಡೆದದ್ದು.
  2. ಸ್ಪ್ರಿಂಗ್‌ಹ್ಯಾಮ್‌, ಡಿ.; ಸ್ಪ್ರಿಂಗ್‌ಹ್ಯಾಮ್, ಜಿ.; ಮೊಸೆಸ್‌, ವಿ.; ಕೇಪ್‌, ಆರ್.ಇ. ""ಬಯೊಟೆಕ್ಕ್ನಾಲಜಿ: ದಿ ಸೈನ್ಸ್‌ ಅಂಡ್‌ ದಿ ಬ್ಯುಸಿನೆಸ್‌." 1999ರಲ್ಲಿ ಪ್ರಕಾಶಿತ, ಟೇಲರ್‌ ಅಂಡ್‌ ಫ್ರಾನ್ಸಿಸ್‌. p. 1. ISBN 90-5702-407-1
  3. "ಡೈಮೆಂಡ್‌ ವಿ. ಚಕ್ರವರ್ತಿ, 447 U.S. 303 (1980). No. 79-139." ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್‌. 1980ರ ಜೂನ್‌ 16. 2007ರ ಮೇ 4ರಂದು ಪುನರ್ಪಡೆದದ್ಸು.
  4. "IBISWorld". Archived from the original on 2008-04-02. Retrieved 2009-11-12.
  5. "ದಿ ರಿಸೆಷನ್‌ ಲಿಸ್ಟ್‌ - ಟಾಪ್‌ 10 ಇಂಡಸ್ಟ್ರೀಸ್‌ ಟು ಫ್ಲೈ ಅಂಡ್‌ ಫ್ಲ್‌... (ವಿತ್ ಆನ್‌ ಇನ್‌ಕ್ರೀಸಿಂಗ್‌ ಷೇರ್‌ ಅಕೌಂಟೆಡ್‌ ಫಾರ್‌ ಬೈ ...)". Archived from the original on 2008-06-02. Retrieved 2009-11-12.
  6. ಜರ್ಸ್ಟೀನ್‌, ಎಂ. "ಬಯೊಇನ್ಫಾರ್ಮಾಟಿಕ್ಸ್‌ ಇಂಟ್ರೊಡಕ್ಷನ್‌ Archived 2009-11-06 ವೇಬ್ಯಾಕ್ ಮೆಷಿನ್ ನಲ್ಲಿ.." ಯೇಲ್‌ ಯೂನಿವರ್ಸಿಟಿ 2007ರ ಮೇ 8ರಂದು ಪುನರ್ಪಡೆದದ್ದು.
  7. ೭.೦ ೭.೧ ೭.೨ U.S. ಇಂಧನ ಮಾನವ ಜೀನೋಮ್‌ ಕಾರ್ಯಕ್ರಮ ಇಲಾಖೆ, ಮೇಲಿನ ಟಿಪ್ಪಣಿ 6.
  8. ಡಬ್ಲ್ಯೂ. ಬೇನ್ಸ್‌, ಜೆನೆಟಿಕ್‌ ಫಾರ್‌ ಆಲ್ಮೊಸ್ಟ್ ಎವೆರಿಬಡಿ: ವಾಟ್‌ ಡಸ್‌ ಇಟ್‌ ಡೂ?ವಾಟ್‌ ವಿಲ್‌ ಇಟ್‌ ಡೂ?(ಲಂಡನ್‌: ಪೆಂಗ್ವಿನ್‌ ಬುಕ್ಸ್‌, 1987), 99.
  9. IDF 2003; "ಡಯಾಬೆಟಿಸ್‌ ಅಟ್ಲಾಸ್‌,: 2nd ed." Archived 2009-08-30 ವೇಬ್ಯಾಕ್ ಮೆಷಿನ್ ನಲ್ಲಿ.; ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ, ಬ್ರಸೆಲ್ಸ್‌. Archived 2009-08-30 ವೇಬ್ಯಾಕ್ ಮೆಷಿನ್ ನಲ್ಲಿ.
  10. IDF ಮಾರ್ಚ್‌ 2005; "ಪೊಸಿಷನ್‌ ಸ್ಟೇಟ್‌ಮೆಂಟ್‌." Archived 2009-05-04 ವೇಬ್ಯಾಕ್ ಮೆಷಿನ್ ನಲ್ಲಿ.ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ, ಬ್ರಸೆಲ್ಸ್‌. Archived 2009-05-04 ವೇಬ್ಯಾಕ್ ಮೆಷಿನ್ ನಲ್ಲಿ.
  11. ೧೧.೦ ೧೧.೧ ೧೧.೨ U.S. ರಾಜ್ಯ ಅಂತಾರಾಷ್ಟ್ರೀಯ ಮಾಹಿತಿ ಕಾರ್ಯಕ್ರಮಗಳ ಇಲಾಖೆ, “ಜೈವಿಕ ತಂತ್ರಜ್ಞಾನದ ಬಗ್ಗೆ ಆಗಾಗ್ಗೆ ಕೇಳಲಾದ ಪ್ರಶ್ನೆಗಳು”, USIS ಆನ್ಲೈನ್‌; http://usinfo.state.gov/ei/economic_issues/biotechnology/biotech_faq.html Archived 2007-09-12 ವೇಬ್ಯಾಕ್ ಮೆಷಿನ್ ನಲ್ಲಿ. - ಇಲ್ಲಿ ಲಭ್ಯ, 2007ರ ಸೆಪ್ಟೆಂಬರ್‌ 13ರಂದು ಸಂದರ್ಶಿತ. Cf. ಸಿ. ಫೆಲ್ಡ್‌ಬಾಮ್‌, “ಸಮ್‌ ಹಿಸ್ಟರಿ ಷುಡ್‌ ಬಿ ರಿಪೀಟೆಡ್‌”, 295 ಸೈನ್ಸ್‌, 8 ಫೆಬ್ರುವರಿ 2002, 975.
  12. ಸ್ತನದ ಕ್ಯಾನ್ಸರ್‌ ಬಗ್ಗೆ ರಾಷ್ಟ್ರೀಯ ಕ್ರಿಯಾ ಯೋಜನೆ ಮತ್ತು U.S. ರಾಷ್ಟ್ರೀಯ ಆರೋಗ್ಯ ಸಂಸ್ಥೆ-ಇಂಧನ ಕ್ರಿಯಾ ಒಕ್ಕೂಟ ಇಲಾಖೆಯು, ನೈತಿಕ, ಕಾನೂನಿನ ಮತ್ತು ಸಾಮಾಜಿಕ ಅಂತರಾರ್ಥಗಳ (ELSI) ಕುರಿತು, ಕಾರ್ಯಸ್ಥಳ ಮತ್ತು ವಿಮೆ ತಾರತಮ್ಯವನ್ನು ತಡೆಗಟ್ಟಲು ಹಲವು ಶಿಫಾರಸುಗಳನ್ನು ನೀಡಿದೆ. ತಳೀಯ ತಾರತಮ್ಯವನ್ನು ತಡೆಗಟ್ಟಲು ಸಿದ್ಧಪಡಿಸಲಾದ ಶಾಸನದಲ್ಲಿ ಈ ಶಿಫಾರಸುಗಳ ಪ್ರಮುಖಾಂಶಗಳನ್ನು ಈ ಜಾಲಪುಟದಲ್ಲಿ ಕಾಣಬಹುದು. http://www.ornl.gov/hgmis/ elsi/legislat.html.
  13. Ibid
  14. ಸಾರ್ವಜನಿಕ ಗೊಂದಲವನ್ನು ಕಡಿಮೆಗೊಳಿಸಲು, "ವೈದ್ಯಕೀಯ ಅಬೀಜ ಸಂತಾನೋತ್ಪತ್ತಿ" ಎಂಬ ಪದದ ಬದಲಿಗೆ “ಬೀಜಕಣದ ಕಸಿ" ಎಂದು ಬಳಸಲು ಹಲವು ವಿಜ್ಞಾನಿಗಳು ಕರೆ ನೀಡಿದ್ದಾರೆ. "ಅಬೀಜ ಸಂತಾನೋತ್ಪತ್ತಿ" ಎಂಬುದು "ಶಾರೀರಿಕ ಜೀವಕೋಶ ಬೀಜಕಣದ ವರ್ಗಾವಣೆ" ಎಂದಾಗಿದೆ. ಈ ಕಾರ್ಯವಿಧಾನವನ್ನು ವಿವಿಧ ಉದ್ದೇಶಗಳಿಗೆ ಬಳಸಬಹುದಾಗಿದೆ. ಇವುಗಳಲ್ಲಿ ಜೀವಿಯೊಂದರ ಅಬೀಜ ಸಂತಾನೋತ್ಪತ್ತಿಯೂ ಒಂದು. ಅಬೀಜ ಸಂತಾನೋತ್ಪತ್ತಿ ಎಂಬುದು ಸಂಶೋಧನೆಯ ಅಂತಿಮ ಫಲಿತಾಂಶವೇ ಹೊರತು ಆ ಉದ್ದೇಶವನ್ನು ತಲುಪಲು ಬಳಸಿದ ಕೌಶಲ ಅಥವಾ ಕಾರ್ಯವಿಧಾನವಲ್ಲ ಎಂದು ಅವರು ನಂಬಿದ್ದಾರೆ. ಮಾನವನ ತದ್ರೂಪೀ ತಳೀಯ ಪ್ರತಿಯನ್ನು ಸೃಷ್ಟಿಸುವ ಗುರಿಯು "ಮಾನವನ ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿ" ಎಂಬುದರೊಂದಿಗೆ ಸಮಂಜಸವಾಗಿದೆ, ಆದರೆ ಪುನರುತ್ಪಾದಕ ಔಷಧಿಗಳಿಗಾಗಿ ಕಾಂಡಕೋಶಗಳನ್ನು ಸೃಷ್ಟಿಸುವ ಗುರಿಯು 'ಔಷಧೀಯ ಅಬೀಜ ಸಂತಾನೋತ್ಪತ್ತಿ'ಯೊಂದಿಗೆ ಸಮಂಜಸವಾಗಿಲ್ಲ ಎಂದು ಅವರು ವಾದಿಸುತ್ತಾರೆ.ಪಡೆಯುವವರೊಂದಿಗೆ ತಳೀಯವಾಗಿ ಸಮಂಜಸವಾಗಿರುವಂತಹ ಅಂಗಾಂಶವನ್ನು ಉತ್ಪತ್ತಿ ಮಾಡುವುದು ಔಷಧೀಯ ಅಬೀಜ ಸಂತಾನೋತ್ಪತ್ತಿಯ ಉದ್ದೇಶವಾಗಿದೆಯೇ ಹೊರತು ಸಂಭಾವ್ಯ ಅಂಗಾಂಶ ಪಡೆಯುವವರ ಪ್ರತಿಯನ್ನು ಸೃಷ್ಟಿಸುವುದು ಅಲ್ಲ. ಹಾಗಾಗಿ, 'ಔಷಧೀಯ ಅಬೀಜ ಸಂತಾನೋತ್ಪತ್ತಿ' ಎಂಬುದು ಕಲ್ಪನಾತ್ಮಕವಾಗಿ ನಿಖರವಾಗಿಲ್ಲ. ಬಿ. ವೊಗೆಲ್ಸ್ಟೀನ್‌, ಬಿ. ಅಲ್ಬರ್ಡ್ಸ್‌ ಮತ್ತು ಕೆ. ಷೈನ್ "ಪ್ಲೀಸ್‌ ಡೋಂಟ್‌ ಕಾಲ್‌ ಇಟ್‌ ಕ್ಲೊನಿಂಗ್‌!", ಸೈನ್ಸ್‌ (15 ಫೆಬ್ರುವರಿ 2002), 1237
  15. ಡಿ. ಕ್ಯಾಮೆರಾನ್‌, “ಸ್ಟಾಪ್‌ ದಿ ಕ್ಲೊನಿಂಗ್‌”, ಟೆಕ್ನಾಲಜಿ ರಿವ್ಯೂ, 23 ಮೇ 2002’. http://www.techreview.com ಇಂದಲೂ ಲಭ್ಯ. [ಇನ್ನು ಮುಂದೆ “ಕ್ಯಾಮೆರಾನ್‌”]
  16. ಎಂ.ಸಿ. ನಸ್‌ಬಾಮ್‌ ಮತ್ತು ಸಿ. ಆರ್‌. ಸನ್‌ಸ್ಟೇನ್‌, ಕ್ಲೋನ್ಸ್‌ ಅಂಡ್‌ ಕ್ಲೋನ್ಸ್‌: ಫ್ಯಾಕ್ಟ್ಸ್‌ ಅಂಡ್‌ ಫ್ಯಾಂಟೆಸೀಸ್‌ ಎಬೌಟ್‌ ಹ್ಯೂಮನ್‌ ಕ್ಲೊನಿಂಗ್‌ (ನ್ಯೂ ಯಾರ್ಕ್‌: ಡಬ್ಲ್ಯೂ ನಾರ್ಟನ್‌ ಅಂಡ್‌ ಕಂಪೆನಿ, 1998), 11ಆದಾಗ್ಯೂ, ಮಾನವ ಅಬೀಜ ಸಂತಾನೋತ್ಪತ್ತಿಯನ್ನು ಯಶಸ್ವಿಯಾಗಿ ನೆರವೇರಿಸಬಹುದೇ ಎಂಬುದರ ಬಗ್ಗೆ ವೈಜ್ಞಾನಿಕ ವೃತ್ತಗಳಲ್ಲಿ ವ್ಯಾಪಕ ಭಿನ್ನಾಭಿಪ್ರಾಯವಿದೆ. ಉದಾಹರಣೆಗೆ, ಪುನರುತ್ಪಾದಕ ಅಜೀವ ಸಂತಾನೋತ್ಪತ್ತಿಯು ಮೂಲಭೂತ ಜೈವಿಕ ಪ್ರಕ್ರಿಯೆಗಳನ್ನು ಮೊಟಕುಗೊಳಿಸುತ್ತದೆ, ಹಾಗಾಗಿ ಸಹಜ ಸಂತಾನೋತ್ಪತ್ತಿ ಅಸಾಧ್ಯ ಎಂಬುದು ವೈಟ್‌ಹೆಡ್‌ ಜೈವಿಕ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಡಾ. ರುಡೊಲ್ಫ್‌ ಜೇನಿಶ್ಚ್‌ರವರ ಅಭಿಪ್ರಾಯವಾಗಿದೆ.ಸಹಜ ಫಲವಂತಿಕೆಯಲ್ಲಿ, ಅಂಡಾಣು ಮತ್ತು ವೀರ್ಯವೆರಡೂ ಪಕ್ವತೆಯ ದೀರ್ಘ ಪ್ರಕ್ರಿಯೆಗೆ ಒಳಗಾಗುತ್ತವೆ. ಅಬೀಜ ಸಂತಾನೋತ್ಪತ್ತಿಯು ಇಡೀ ಜೀನೋಮ್‌ನ ಬೀಜಕಣವನ್ನು ನಿಮಿಷಗಳಲ್ಲಿ ಅಥವಾ ತಾಸುಗಳಲ್ಲಿ ಬೇರೆ ರೀತಿಯಲ್ಲಿ ಯೋಜಿಸುವುದರ ಮೂಲಕ ಈ ಪ್ರಕ್ರಿಯೆಯನ್ನು ಮೊಟಕುಗೊಳಿಸುತ್ತದೆ. ಇದು ಒಟ್ಟಾರೆಯಾದ ಭೌತಿಕ ವೈರೂಪ್ಯಗಳಲ್ಲಿ ಪರಿಣಮಿಸುತ್ತದೆ, ನರವೈಜ್ಞಾನಿಕ ಕ್ಷೋಭೆಯನ್ನುಂಟುಮಾಡುತ್ತದೆ. ಕ್ಯಾಮೆರಾನ್‌, ಮೇಲಿನ ಟಿಪ್ಪಣಿ 30
  17. http://www.cartercenter.org/news/documents/doc32.html
    This op-ed appeared in the July 11, 1997, edition of The Washington Times
  18. ಏಷ್ಯಾ ಅಭಿವೃದ್ಧಿ ಬ್ಯಾಂಕ್‌, ಕೃಷಿಕ ಜೈವಿಕ ತಂತ್ರಜ್ಞಾನ, ಬಡತನವನ್ನು ಕಡಿಮೆಗೊಳಿಸುವುದು ಮತ್ತು ಆಹಾರ ಸುರಕ್ಷೆ (ಮನಿಲಾ: ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌, 2001). http://www.adb.org ಜಾಲಪುಟದಲ್ಲಿಯೂ ಲಭ್ಯ.
  19. ೧೯.೦ ೧೯.೧ ಡಿ. ಬ್ರೂಸ್‌‌ ಮತ್ತು ಎ. ಬ್ರೂಸ್‌, ಎಂಜಿನಿಯರಿಂಗ್‌ ಜೆನಿಸಿಸ್‌: ದಿ ಎಥಿಕ್ಸ್‌ ಆಫ್‌ ಜೆನೆಟಿಕ್‌ ಎಂಜಿನಿಯರಿಂಗ್‌, ಲಂಡನ್‌: ಅರ್ಥ್‌ಸ್ಕ್ಯಾನ್‌ ಪಬ್ಲಿಕೇಷನ್ಸ್‌, 1999
  20. ಎಸ್‌. ಅಬ್ದುಲ್ಲಾ. “ಡ್ರೌಟ್‌ ಸ್ಟ್ರೆಸ್‌” ನೇಚರ್‌: ಸೈನ್ಸ್‌ ಅಪ್‌ಡೇಟ್‌; http://www.nature.com/ nsu ಜಾಲಪುಟದಲ್ಲಿ ಲಭ್ಯ; 2002ರ ಮೇ 3ರಂದು ಸಂದರ್ಶಿತ.
  21. ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌. ಟ್ರಾನ್ಸ್‌ಜೆನಿಕ್ ಪ್ಲಾಂಟ್ಸ್‌ ಅಂಡ್‌ ವರ್ಲ್ಡ್‌ ಅಗ್ರಿಕಲ್ಚರ್ (ವಾಷಿಂಗ್ಟನ್‌: ನ್ಯಾಷನಲ್‌ ಅಕಾಡೆಮಿ ಪ್ರೆಸ್‌, 2001)
  22. ಫ್ಲಾವ್ರ್‌ ಸಾವ್ರ್‌ ಟೊಮೆಟೊದ ಸಂಶೋಧನೆ ಮತ್ತು ಅಭಿವೃದ್ಧಿಯ ಬಗೆಗಿನ ವಿವರಣೆಗಾಗಿ, ಬಿ. ಮಾರ್ಟಿನ್ಯೂ, ಫರ್ಸ್ಟ್‌ ಫ್ರೂಟ್‌: ದಿ ಕ್ರಿಯೇಷನ್‌ ಆಫ್‌ ದಿ ಫ್ಲಾವ್ರ್‌ ಸಾವ್ರ್‌ ಟೊಮೆಟೊ ಅಂಡ್‌ ದಿ ಬರ್ತ್‌ ಆಫ್‌ ಬಯೊಟೆಕ್‌‌ ಫುಡ್‌ ನೋಡಿ (ನ್ಯೂ ಯಾರ್ಕ್‌: ಮೆಕ್‌ಗ್ರಾ-ಹಿಲ್‌, 2001)
  23. ಎ.ಎಫ್‌. ಕ್ರ್ಯಾಟಿಗರ್‌, ಆನ್‌ ಒವರ್‌ವ್ಯೂ ಆಫ್‌ ISAAA ಫ್ರಂ 1992 ಟು 2000, ISAAA Brief No. 19-2000, 9
  24. "ಯುರೋಪಾಬಯೊ - ಚೀಸ್‌ ತಯಾರಕರಿಗೆ ಒಂದು ಪ್ರಾಣಿ-ಸ್ನೇಹಿ ಪರ್ಯಾಯ" (PDF). Archived from the original (PDF) on 2009-11-06. Retrieved 2009-11-12.
  25. "ಯುರೋಪಾಬಯೊ - ಜೈವಿಕವಾಗಿ ಸುಧಾರಿತ ಬ್ರೆಡ್‌" (PDF). Archived from the original (PDF) on 2009-11-06. Retrieved 2009-11-12.
  26. ಎಲ್‌. ಪಿ. ಜಿಯನೆಸಿ, ಸಿ. ಎಸ್‌. ಸಿಲ್ವರ್ಸ್‌, ಎಸ್‌. ಸಂಕುಲ ಮತ್ತು ಜೆ. ಇ. ಕಾರ್ಪೆಂಟರ್‌. ಪ್ಲಾಂಟ್‌ ಬಯೋಟೆಕ್ನಾಲಜಿ: ಕರೆಂಟ್‌ ಅಂಡ್‌ ಪೊಟೆನ್ಷಿಯಲ್ ಇಂಪ್ಯಾಕ್ಟ್‌ ಫಾರ್ ಇಂಪ್ರೂವಿಂಗ್ ಪೆಸ್ಟ್ ಮ್ಯಾನೇಜ್‌ಮೆಂಟ್‌ ಇನ್ US ಅಗ್ರಿಕಲ್ಚರ್, ಆನ್ ಅನಾಲಿಸಿಸ್‌ ಆಫ್ 40 ಕೇಸ್ ಸ್ಟಡೀಸ್‌ (ವಾಷಿಂಗ್ಟನ್‌ ಡಿ.ಸಿ.: ಆಹಾರ ಮತ್ತು ಕೃಷಿ ನೀತಿಯ ರಾಷ್ಟ್ರೀಯ ಕೇಂದ್ರ, 2002), 5-6
  27. ಸಿ. ಜೇಮ್ಸ್‌, “ಗ್ಲೋಬಲ್‌ ರಿವ್ಯೂ ಆಫ್‌ ಕಮರ್ಷಿಯಲೈಸ್ಡ್‌ ಟ್ರಾನ್ಸ್‌ಜೀನಿಕ್‌ ಕ್ರಾಪ್ಸ್‌: 2002", ISAAA ಬ್ರೀಫ್‌ ಸಂ. 27-2002, ಅಟ್‌ 11–12. http://www.isaaa.org ಜಾಲತಾಣದಲ್ಲಿಯೂ ಲಭ್ಯ
  28. Pascual DW (2007). "Vaccines are for dinner". Proc Natl Acad Sci USA. 104 (26): 10757–8. doi:10.1073/pnas.0704516104. PMID 17581867. Archived from the original on 2008-03-07. Retrieved 2009-11-12.
  29. "ಸೆಮ್‌ಬಯೊಸಿಸ್‌". Archived from the original on 2008-06-16. Retrieved 2009-11-12.
  30. ಮೊನ್ಸಾಂಟೋ ಮತ್ತು ರೌಂಡಪ್‌ ರೆಡಿ ವಿವಾದ - ಸೋರ್ಸ್‌ವಾಚ್‌
  31. ಮಾನ್ಸಾನ್ಟೊ - ಸೋರ್ಸ್‌ವಾಚ್‌
  32. Martins VAP; et al. (2008). "Genomic Insights into Oil Biodegradation in Marine Systems". Microbial Biodegradation: Genomics and Molecular Biology. Caister Academic Press. ISBN 978-1-904455-17-2. {{cite book}}: Explicit use of et al. in: |author= (help); Unknown parameter |chapterurl= ignored (help)


ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]