ವಿಷಯಕ್ಕೆ ಹೋಗು

ಟಿಬೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಟಿಬೆಟ್‌ ಇಂದ ಪುನರ್ನಿರ್ದೇಶಿತ)
ಐತಿಹಾಸಿಕ/ಸಾಂಸ್ಕೃತಿಕ ಟಿಬೆಟ್
  ಭಾರತ ಗಣರಾಜ್ಯದೊಳಗಿರುವ ಟಿಬೆಟ್ ಪ್ರಾಂತ್ರ್ಯ
  ಪ್ರತ್ಯೇಕತಾವಾದಿಗಳ ನಿಲುವಿನಂತೆ ಐತಿಹಾಸಿಕ ಟಿಬೆಟ್
  ಭಾರತ ಗಣರಾಜ್ಯದಿಂದ ನಿರ್ಧಿಷ್ಟ ಟಿಬೆಟಿನವರ ಪ್ರದೇಶ
  ಅಕ್ಸಾಯ್ ಚಿನ್ ಗೆ ಸೇರುವ, ಭಾರತವು ತನ್ನದೆನ್ನುವ ಚೀನಿ ಆಡಳಿತದಲ್ಲಿರುವ ಪ್ರದೇಶ
  ಭಾರತದ ಆಡಳಿತದಲ್ಲಿರುವ ಚೀನಿಯರು ಟಿಬೆಟ್ಟಿನ ಭಾಗವಾಗಿ ತಮ್ಮದೆನ್ನುವ ಪ್ರದೇಶ
  ಟಿಬೆಟ್ಟಿನ ಸಂಸ್ಕೃತಿಯಿಂದ ಪ್ರಭಾವಿತ ಇತರ ಪ್ರದೇಶಗಳು

ಟಿಬೆಟ್ ಮಧ್ಯ ಏಷ್ಯಾದಲ್ಲಿ ಟಿಬೆಟ್ಟಿನ ಜನರ ಮೂಲವಾದ ಒಂದು ಪ್ರಸ್ಥಭೂಮಿ. ಸರಾಸರಿ ೪,೯೦೦ ಮೀ. ಎತ್ತರದಲ್ಲಿರುವ ಇದು ಭೂಮಿಯ ಅತ್ಯಂತ ಎತ್ತರದ ಪ್ರದೇಶ. ಈ ಪ್ರದೇಶದ ಸಾಂಪ್ರದಾಯಿಕ ರಾಜಧಾನಿ ಲ್ಹಾಸ. ಇದು ಚೀನಾ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಚೀನೀ ಸಮಾಜವಾದಿ ಗಣರಾಜ್ಯದ ಒಂದು ಸ್ವಯಮಾಡಳಿತ ಪ್ರದೇಶವಾಗಿದೆ.


ಟಿಬೆಟ್ - ಮಧ್ಯ ಏಷ್ಯದಲ್ಲಿ ಸ್ಥೂಲವಾಗಿ ಪೂ.ರೇ. 74°-100°ಮತ್ತು ಉ.ಅ. 27°-37° ನಡುವೆ ಹಬ್ಬಿರುವ ಪ್ರಸ್ಥಭೂಮಿಯ ಮೇಲೆ ಇದೆ. ಉತ್ತರದಲ್ಲಿ ಷಿಂಜೀಯಾಂಗ್ ವೀಗುರ್ ಹಾಗೂ ಚಿಂಗೈ, ಪೂರ್ವದಲ್ಲಿ ಸೆಚ್‍ವಾನ್, ಆಗ್ನೇಯದಲ್ಲಿ ಯೂನ್ನಾನ್ ಮತ್ತು ಬರ್ಮ, ದಕ್ಷಿಣದಲ್ಲಿ ಭಾರತ, ನೇಪಾಳ, ಮತ್ತು ಭೂತಾನ, ಪಶ್ಚಿಮದಲ್ಲಿ ಭಾರತ-ಇವು ಇದರ ಮೇರೆಗಳು. ವಿಸ್ತೀರ್ಣ 4,71,660 ಚ.ಮೈ. (12,21,601 ಚ.ಕಿಮೀ.). ಜನಸಂಖ್ಯೆ 14,00,000 (1968 ಅಂ.). ರಾಜಧಾನಿ ಲಾಸ.

ಭೂವಿಜ್ಞಾನ

[ಬದಲಾಯಿಸಿ]

ಟಿಬೆಟ್ ಪ್ರಸ್ಥಭೂಮಿ ಮೆಸೊಝಾಯಿಕ್ ಮತ್ತು ಸೀನೊಝಾಯಿಕ್ ಭೂಯುಗಗಳಲ್ಲಿ ರೂಪುಗೊಂಡ ಪ್ರದೇಶ ; ಭೂವೈಜ್ಞಾನಿಕವಾಗಿ ಈಚಿನದು. ಲಕ್ಷಾಂತರ ವರ್ಷಗಳ ಹಿಂದೆ ಪರ್ವತಗಳಿರಲಿಲ್ಲ. ಇಡೀ ಪ್ರದೇಶ ವಿಶಾಲ ಸಮುದ್ರವಾಗಿತ್ತು. ಬಹು ದೀರ್ಘಕಾಲಾವಧಿಯಲ್ಲಿ ಹಿಮಾಲಯ ಪರ್ವತಶ್ರೇಣಿಗಳು ಮೇಲೆದ್ದುವು. ಈಗಲೂ ಇವು ಬೆಳೆಯುತ್ತವೆ. ಮುದ್ದೆಗಟ್ಟಿದ ಶಿಲೆಯ ಸಮತಲ ಸ್ತರಗಳು ಕಾಲಗತಿಯಲ್ಲಿ ಒತ್ತಡಕ್ಕೆ ಒಳಗಾದ ಉರುಟುಕಲ್ಲುಗಳಿಂದಲೂ ಸಾಗರಿಕ ಪಳೆಯುಳಿಕೆಗಳಿಂದ ಕೂಡಿದ ಸುಣ್ಣಕಲ್ಲುಗಳಿಂದಲೂ ರಚಿತವಾಗಿವೆ. ಜಾನ್‍ಡಾಂಗ್ ಪ್ರದೇಶದ ಸರೋವರಗಳು ಪ್ರಾಚೀನ ಸರೋವರದ ಶೇಷಗಳು. ಕೂನ್‍ಲೂನ್ ಪರ್ವತ ಸಂಕೀರ್ಣ ಹಿಮಾಲಯನ್ ಪರ್ವತ ವ್ಯವಸ್ಥೆಗಿಂತ ಪ್ರಾಚೀನವಾದ್ದು. ಇದು ಪೇಲಿಯೊ ಜೋಯಿಕ್ ಯುಗದ್ದು. ಹಿಮಾಲಯದ ರೂಪಾಂತರಿತ ಸುಣ್ಣಕಲ್ಲುಗಳೂ ಬೆಣಚುಕಲ್ಲುಗಳೂ ಜುರಾಸಿಕ್ ಯುಗದವು. ಹಿಮನದೀ ಅವಧಿಗಳಲ್ಲಿ ಇಡೀ ಉನ್ನತಪ್ರದೇಶವನ್ನು ನೀರ್ಗಲ್ಲ ಫಲಕಗಳು ಕವಿದಿದ್ದಿರಬಹುದು. ಪ್ಲೀಸ್ಟೋಸೀನ್ ಸಂಚಯನಗಳು ಹಲವು ಎಡೆಗಳಲ್ಲಿ ಅತೀವ ಮಂದವಾಗಿವೆ.

ಭೌತಲಕ್ಷಣ

[ಬದಲಾಯಿಸಿ]

ಟಿಬೆಟ್ ಒಂದು ಉನ್ನತ ಪ್ರಸ್ಥಭೂಮಿಯ ಮೇಲೆ ಇದೆ. ಅದರ ಸುತ್ತಲೂ ಉನ್ನತ ಪರ್ವತರಾಶಿಗಳು. ಟಿಬೆಟ್ಟಿನಲ್ಲಿ ಪರ್ವತಗಳು ವಾಯವ್ಯದಿಂದ ಆಗ್ನೇಯಕ್ಕೆ ಹಬ್ಬಿವೆ. ಅವುಗಳನಡುವೆ ಆಳವಾದ ಇಲ್ಲವೇ ತೆಟ್ಟೆಯಾದ ಅನೇಕ ಕಣಿವೆಗಳಿವೆ. ಉನ್ನತ ಹಿಮಾಲಯ ಶ್ರೇಣಿಗಳು ಟಿಬೆಟ್ಟಿನ ದಕ್ಷಿಣದಲ್ಲಿ ಉದ್ದಕ್ಕೂ ಹಬ್ಬಿ , ಹಿಂದೂ ಸಾಗರದ ಉಷ್ಣ ಮಾನ್ಸೂನ್ ಮಾರುತವನ್ನು ತಡೆಯುತ್ತವೆ. ಹಿಮಾಲಯ ವ್ಯವಸ್ಥೆಯ ಉದ್ದ ಸು. (1500) ಮೈ. ಅದರ ಉತ್ತರಕ್ಕೆ ಟಿಬೆಟ್ಟಿನಲ್ಲಿ ಹಬ್ಬಿರುವ ಶ್ರೇಣಿಗಳು ನಾಲ್ಕು : ಲಡಾಕ್, ಕೈಲಾಸ್, ಕಾರಕೋರಂ ಮತ್ತು ಕೂನ್ ಲೂನ್. ಲಡಾಕ್ ಶ್ರೇಣಿಯ ಅತ್ಯುನ್ನತ ಶಿಖರ ಗುರ್ಲಮಾಂಧಾತ ಅಥವಾ ಕ್ವಾಲಾಮಾಂಟಾಟ (25,355`). ಇದು ಮಾನಸಸರೋವರದಿಂದ (12) ಮೈ. ದೂರದಲ್ಲಿದೆ. ಮಾನಸಸರೋವರಕ್ಕೆ ಉತ್ತರದಲ್ಲಿರುವ ಕೈಲಾಸ ಶ್ರೇಣಿಯಲ್ಲಿ ಹಲವು ಶಿಖರಗಳ ಗೊಂಚಲೇ ಇದೆ. ಅವುಗಳಲ್ಲಿ ಹಲವು ಶಿಖರಗಳು (20,000`) ಗೂ ಎತ್ತರವಾಗಿವೆ. ಪೊ.ರೇ. 77°ಯಿಂದ 93° ವರೆಗೆ ಹಬ್ಬಿರುವ ಕೂನ್ ಲೂನ್ ಶ್ರೇಣಿ ಟಿಬೆಟ್ ಪ್ರಸ್ಥಭೂಮಿಯ ಉತ್ತರದ ಅಂಚಿನಲ್ಲಿದೆ. ಪೂರ್ವ ಟಿಬೆಟ್ಟಿನ ಪರ್ವತಗಳು ದಕ್ಷಿಣೋತ್ತರವಾಗಿ ಹಬ್ಬಿವೆ. ಇವು ಬಹುಕಾಲ ಚೀನೀ ಸಂಸ್ಕೃತಿಯ ಸಂಪರ್ಕಕ್ಕೆ ಅಡ್ಡಿಯಾಗಿ ಪರಿಣಮಿಸಿದ್ದುವು. ಆದರೆ ದಕ್ಷಿಣದ ಆದ್ರ್ರ ಮಾರುತಗಳು ಇಲ್ಲಿಯ ನದೀಕಣಿವೆಗಳ ಮೂಲಕ ಉತ್ತರಾಭಿಮುಖವಾಗಿ ಬೀಸಲು ಅಡ್ಡಿಯುಂಟಾಗಿಲ್ಲ.

ಏಷ್ಯದ ಮಹಾನದಿಗಳಲ್ಲಿ ಹಲವು ಹುಟ್ಟುವುದು ಟಿಬೆಟ್ಟಿನ ಪರ್ವತಸೀಮೆಯಲ್ಲಿ. ಯಾಂಗ್ಟ್‍ಸೀ ನದಿ ಉಲಾನ್ ಲೂಲದಲ್ಲಿ ಉಗಮಿಸುತ್ತದೆ. ಮೇಕಾಂಗ್ ಮತ್ತು ಹಳದಿ ನದಿಗಳು ಡಾಂಗ್-ಲಾ ಶ್ರೇಣಿಯಲ್ಲಿ ಉಗಮಿಸುತ್ತವೆ. ಸಾಲ್ವೀನ್ ನದಿಯ ಹುಟ್ಟು ಲಾಸದ ಉತ್ತರಕ್ಕೆ ನ್ಗಾಚುಕದ ಬಳಿಯಲ್ಲಿ. ಇರವಾಡೀ ನದಿ ಕೈಲಾಸಪರ್ವತದ ಪೂರ್ವ ಅಂಚಿನಲ್ಲಿ ಹುಟ್ಟುತ್ತದೆ. ಸಿಂಧು, ಸಟ್ಲೆಜ್ ಮತ್ತು ಬ್ರಹ್ಮಪುತ್ರ ನದಿಗಳು ಕೈಲಾಸಪರ್ವತದ ದಕ್ಷಿಣದಲ್ಲಿ ಮಾನಸಸರೋವರದ ಬಳಿ ಹುಟ್ಟುತ್ತವೆ. ಟಿಬೆಟ್ಟಿನ ಅತ್ಯಂತ ಉದ್ದದ ನದಿ ಬ್ರಹ್ಮಪುತ್ರ (ಟ್ಸಾಂಗ್ ಪೋ) ಭಾರತವನ್ನು ಪ್ರವೇಶಿಸುವುದಕ್ಕೆ ಮೊದಲು ಅಲ್ಲಿ (800) ಮೈ. ಹರಿಯುತ್ತದೆ. ಅದರ ಅನೇಕ ಉಪನದಿಗಳ ಪೈಕಿ ಮುಖ್ಯವಾದವು ಕ್ಯೀ-ಚೂ ಅಥವಾ ಲಾ ಸಾ, ಷಾಮ್‍ಡ, ನ್ಯಾಂಗ್ ಚೂ, ಯಿಗ್ರಾಂಗ್ ಮತ್ತು ನಾಗಾಂಗ್.

ಕೈಲಾಸ ಮತ್ತು ಕೂನ್ ಲೂನ್ ಶ್ರೇಣಿಗಳ ನಡುವೆ ಇರುವ ಚಾಂಗ್ ಕಾಂಗ್ ಪ್ರದೇಶದಲ್ಲಿ ಅಸಂಖ್ಯಾತ ಸರೋವರಗಳಿವೆ. ಆದರೆ ಟಿಬೆಟ್ಟಿನ ಅತ್ಯಂತ ದೊಡ್ಡ ಸರೋವೆಗಳ ಪೈಕಿ ಮೂರು-ಚಿಂಗ್‍ಹೈ (ಕೋ-ಕೋ ನೋರ್), ಮಾನಸಸರೋವರ ಮತ್ತು ಯಾಮ್‍ಡ್ರಾಕ್ ಟ್ಸಾ (ಯಾಂಗ್ - ಜೋ - ಯುಂಗ್)- ಈ ಪ್ರದೇಶದ ಹೊರಗಡೆ ಇವೆ.

ಭೌಗೋಳಿಕ ಪ್ರದೇಶಗಳು

[ಬದಲಾಯಿಸಿ]

ಟಿಬೆಟ್ಟನ್ನು ಸ್ಥೂಲವಾಗಿ ಐದು ಭೌಗೋಳಿಕ ಪ್ರದೇಶಗಳಾಗಿ ವಿಂಗಡಿಸಲಾಗಿದೆ : (1) ವೇ ಪ್ರದೇಶ ಟಿಬೆಟ್ಟಿನ ಮಧ್ಯ ಭಾಗ, ಆಧುನಿಕ ಟಿಬೆಟ್ಟಿನ ಸಾಂಸ್ಕೃತಿಕ ಹಾಗೂ ರಾಜಕೀಯ ಕೇಂದ್ರ. ಬ್ರಹ್ಮಪುತ್ರದ ಉಪನದಿಗಳಾದ ಕ್ಯೀ ಚ್ಯೂ (ಲಾ ಸಾ) ಮತ್ತು ಯಾರ್ಲಂಗ್‍ಗಳ ಬಯಲುಗಳು ಈ ಪ್ರದೇಶಕ್ಕೆ ಸೇರಿವೆ. ಲಾಸ, ಟಿಬೆಟ್ಟಿನ ರಾಜಧಾನಿ ಯಾರ್ಲಂಗ್- ಇವು ವೇ ಪ್ರದೇಶದಲ್ಲಿವೆ. (2) ವೇ ಪ್ರದೇಶಕ್ಕೆ ಪಶ್ಚಿಮದಲ್ಲಿರುವುದು ಟ್ಸಾಂಗ್ ಜಿಲ್ಲೆ. ಅದರ ಮುಖ್ಯ ಪಟ್ಟಣ ಷಿಗಾಟ್ಸೆ. ಇದಕ್ಕೆ ಉತ್ತರದಲ್ಲಿ ಟಿಬೆಟ್ ಜನರ ಧಾರ್ಮಿಕ ಹಾಗೂ ರಾಜಕೀಯ ಕೇಂದ್ರವಾದ ಟ್ರಿಷಿ ಲ್ಹುಂಪೊ ಇದೆ. (3) ಇನ್ನೂ ಪಶ್ಚಿಮಕ್ಕೆ ಇರುವುದು ಎನ್ಗಾರಿ ಪರ್ವತಸೀಮೆ. ಹಿಮಾಚ್ಛಾದಿತ ಶೃಂಗಗಳಿಂದಲೂ ಆಳವಾದ ನದೀಕಮರಿಗಳಿಂದಲೂ ಕೂಡಿದ ಈ ಪ್ರದೇಶದಲ್ಲಿ ಹೆಚ್ಚು ಜನಸಾಂದ್ರತೆಯಿಲ್ಲ. ಇಲ್ಲಿಯ ಅಲೆಮಾರಿ ಜನರು ಮೇವನ್ನು ಅರಸುತ್ತ ತಮ್ಮ ಸಾಕುಪ್ರಾಣಿಗಳನ್ನು ಹೊಡೆದುಕೊಂಡು ಕಣಿವೆಯಿಂದ ಕಣಿವೆಗೆ ಸಂಚರಿಸುತ್ತಿರುತ್ತಾರೆ. (4) ಜಾಂಗ್ ಡಾಂಗ್ ಪ್ರದೇಶ ಉತ್ತರದ ವಿಶಾಲ ಬಯಲು. ಇದು ಹಿಮಗಟ್ಟಿದ ಬಂಜರು. ಇಲ್ಲಿ ಬಹು ವಿರಳವಾಗಿ ಜನ ವಾಸಿಸುತ್ತಾರೆ. (5) ಟಿಬೆಟ್ಟಿನ ಅತ್ಯಂತ ಫಲವತ್ತಾದ ನೆಲವೆಂದರೆ ಪೂರ್ವಭಾಗದ ಖಾಮ್ ಪ್ರದೇಶ. ಇಲ್ಲಿ ಜನಸಾಂದ್ರತೆ ಅತ್ಯಧಿಕ. ಇದು ಇತರ ಪ್ರದೇಶಗಳಿಗಿಂತ ತಗ್ಗಿನಲ್ಲಿದೆ. ಇಲ್ಲಿ ಮಳೆಯೂ ಹೆಚ್ಚು. ಇಲ್ಲಿಯ ನದಿಗಳ ಕಮರಿಗಳ ಅಂಚಿನಲ್ಲಿ ದಟ್ಟಡವಿಗಳಿವೆ. ನದಿಗಳ ಕೆಳದಂಡೆ ಪ್ರದೇಶಗಳು ಸಾಗುವಳಿಗೆ ಒಳಪಟ್ಟಿವೆ.

ವಾಯುಗುಣ

[ಬದಲಾಯಿಸಿ]

ಸಮುದ್ರದಿಂದ ಇರುವ ದೂರದಿಂದಾಗಿ ಟಿಬೆಟ್ಟಿನಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹೋದಂತೆ ಅವಪಾತ ಕಡಿಮೆ. ಹಿಮಾಲಯ ಪರ್ವತಗಳು ಮಾನ್ಸೂನ್ ಮೋಡಗಳನ್ನು ತಡೆದು ಅಲ್ಲೇ ಬಹುತೇಕ ಮಳೆ ಸುರಿಸುತ್ತವೆ. ಹಿಮಾಲಯದ ದಕ್ಷಿಣ ಪಾಶ್ರ್ವಗಳಲ್ಲಿ ವಾರ್ಷಿಕ ಮಳೆ (200".) ಅಳಿದುಳಿದು ಕಣಿವೆಗಳಲ್ಲಿ ಮುಂದೆ ಸಾಗಿದ ಮೋಡಗಳು ಕೈಲಾಸ ಪರ್ವತಗಳ ಮೇಲೆ ಮಳೆ ಸುರಿಸುತ್ತವೆ. ಅಲ್ಲಿಂದಾಚೆಗೆ ಶುಷ್ಕ ವಾಯುಗುಣ. ಟಿಬೆಟ್ಟಿನ ಬಹುಭಾಗದ ಮೇಲೆ ವಾರ್ಷಿಕವಾಗಿ (8") ಗಿಂತ ಕಡಿಮೆ ಮಳೆ ಅಥವಾ ಹಿಮ. ಔನತ್ಯದಿಂದಾಗಿ ಉಷ್ಣತೆ ಕಡಿಮೆ. ವಾಯುಗುಣ ತುಂಬ ತೀವ್ರ. ವರ್ಷದ ಬಹುಕಾಲ ಅತ್ಯಂತ ಬಲವಾಗಿ ಬೀಸುವ ಗಾಳಿಯಿಂದ ಶೈತ್ಯ ಕೊರೆಯುತ್ತದೆ. ಇಪ್ಪತ್ನಾಲ್ಕು ಗಂಟೆಗಳಲ್ಲಿ ಉಷ್ಣತೆ ಬಹಳ ತೀವ್ರವಾಗಿ ವ್ಯತ್ಯಾಸವಾಗುತ್ತದೆ. ವರ್ಷವೆಲ್ಲ ವಾಯುಗುಣ ಬದಲಾಗುತ್ತಲೇ ಇರುತ್ತದೆ. ಬೆಳಗ್ಗೆ ಮತ್ತು ಸಂಜೆ ಕೊರೆಯುವ ಚಳಿ. ಉಷ್ಣತೆ ಸಾಮಾನ್ಯವಾಗಿ -18° ಇಳಿಯುತ್ತದೆ. ಮಧ್ಯಾಹ್ನ ಅದು 38°ಗೆ ಏರಬಹುದು. ಆಗ ಬಿಸಿಲು ಬಲು ಚುರುಕು. ಟಿಬೆಟ್ ಪ್ರಸ್ಥಭೂಮಿಯಲ್ಲಿ ವರ್ಷಕ್ಕೆ 3-4 ತಿಂಗಳುಗಳು ಮಾತ್ರ ಹಿಮಗಟ್ಟುವುದಿಲ್ಲ. ಬೇಸಿಗೆಯಲ್ಲೂ ಹಿಮ ಬೀಳುವುದುಂಟು. 12,000`ಗಿಂತ ಕಡಿಮೆ ಮಟ್ಟದಲ್ಲಿ, ನದೀಕಣಿವೆಗಳಲ್ಲಿ ಮತ್ತು ದಕ್ಷಿಣ ಟಿಬೆಟ್ಟಿನಲ್ಲಿ ವಾಯುಗುಣ ಹಿತಕರವಾಗಿರುತ್ತದೆ. ಗಾಳಿ ಶುಷ್ಕ. ದೂಳಿನ ಬಿರುಗಾಳಿ ಇಲ್ಲದ್ದರಿಂದ ಆಕಾಶ ಶುಭ್ರವಾಗಿರುತ್ತದೆ. ಸಸ್ಯಪ್ರಾಣಿಜೀವನ: ಟಿಬೆಟ್ಟಿನ ಮೂರನೆಯ ಎರಡು ಭಾಗವನ್ನು ಆಕ್ರಮಿಸಿಕೊಂಡಿರುವ ಉತ್ತರದ ಮೈದಾನದಲ್ಲಿ ಮರಗಳಿಲ್ಲ. ಅಲ್ಲಿ ಮಳೆ ಇಲ್ಲ. ಒಣ ಗಾಳಿ ಬೀಸುತ್ತದೆ. ಬಹಳ ಚಳಿ. ಇದು ಸರಾಸರಿಯಲ್ಲಿ ಸಮುದ್ರಮಟ್ಟದಿಂದ 15,000'ಗಿಂತ ಎತ್ತರದಲ್ಲಿದೆ. ಎನ್‍ಗಾರಿ ಜಿಲ್ಲೆಯ ಸಟ್ಲೆಜ್ ನದೀ ಬಯಲು, ದಕ್ಷಿಣದ ಚುಂಬಿ ಕಣಿವೆ-ಈ ಪ್ರದೇಶಗಳಲ್ಲಿ ದಟ್ಟ ಅರಣ್ಯಗಳಿವೆ. ಶಂಕುಧಾರಿ ದೈತ್ಯಸ್ವರೂಪಿ ಮರಗಳು, ಓಕ್, ಅಕ್ರೋಟು, ಮೇಪಲ್, ಪಾಪ್ಲರ್, ಸ್ಟ್ರೂಸ್, ತಾಳೇಪ್ರದೇಶ ಮುಂತಾದ ಮರಗಳಿವೆ. ಕಾಡುಗಳಲ್ಲಿ ಪೈಮು (ಹೃದಯವಿಷ), ಹರಿಕುಶ, ರೇವಲ್‍ಚಿನ್ನಿ, ಕೇಸರಿ, ಬಜೆ ಮುಂತಾದ ಮೂಲಿಕೆಗಳುಂಟು. ಟಿಬೆಟ್ಟಿನ ಸಾಕುಪ್ರಾಣಿಗಳು ಕುರಿ, ಮೇಕೆ, ಯಾಕ್, ಕುದುರೆ, ಕತ್ತೆ. ಯಾಕ್ ಹೇರುಪ್ರಾಣಿ. ಅದು ಕಡಿದಾದ ಪರ್ವತಭಾಗಗಳಲ್ಲಿ ಪ್ರಯಾಣಮಾಡಬಲ್ಲದು. ಆದರೆ ಅದು ವ್ಯವಸಾಯಕ್ಕೆ ಯೋಗ್ಯವಲ್ಲ. ಹಿಂದೆ ಪ್ರಸಿದ್ದವಾಗಿದ್ದ ಬಲಯುತವಾದ ಜಾತಿಯ ಕುದುರೆಗಳು ಈಗ ಟಿಬೆಟ್ಟಿನಲ್ಲಿಲ್ಲ. ಸವಾರಿಕುದುರೆಗಳನ್ನು ಚೀನದ ಚಿಂಗ್‍ಹೈ ಪ್ರಾಂತ್ಯದಿಂದ ತರಿಸಿಕೊಳ್ಳುತ್ತಾರೆ. ಟಿಬೆಟ್ಟಿನ ವನ್ಯಮೃಗಗಳು ಕಾಡುಯಾಕ್, ಕಾಡುಕುದುರೆ, ಕಾಡುಕತ್ತೆ, ಹಿಮಚಿರತೆ, ಲಿಂಕ್ಸ್, ಕಂದು ಅಥವಾ ಕರಿಕರಡಿ, ಗೆಜೆóಲ್, ಸಾರಂಗ, ಮಾರ್ಮಾಟ್, ಜಿಂಕೆ, ಕಸ್ತೂರಿಮೃಗ, ಬಾತುಕೋಳಿ, ಉಳಿಸಿಂಡ, ಮರಕುಟಿಗ, ಪಾರಿವಾಳ, ಗುಬ್ಬಚ್ಚಿ ಮುಂತಾದವು. ಟಿಬೆಟ್ಟಿನ ಪೂರ್ವಭಾಗದಲ್ಲಿ ಸುಂದರವಾದ ಜೀವಂಜೀವಗಳಿವೆ,

ಜನಜೀವನ

[ಬದಲಾಯಿಸಿ]

ಟಿಬೆಟನರು ಪಶ್ಚಿಮ ಚೀನ ಪರ್ವತಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳಿಗೆ ಬಹಳ ಹತ್ತಿರದ ಸಂಬಂಧ ಹೊಂದಿದವರು. ಟಿಬೆಟನ್ ಭಾಷೆಗೂ ಉತ್ತರ ಬರ್ಮದ ಕೂಕಿ ಮತ್ತು ಷಾನ್ ಜನ ಆಡುವ ಭಾಷೆಗಳಿಗೂ ಹೋಲಿಕೆಗಳಿವೆ. ಟಿಬೆಟನರ ಪ್ರಧಾನ ಲಕ್ಷಣಗಳು ಕಪ್ಪು ಕೂದಲು, ಕಂದು ಬಣ್ಣ ಮತ್ತು ಕಂದುಕಣ್ಣು. ಲಡಖ್ ಭಾಗದಿಂದ ಹಿಡಿದು ಚೀನದ ವಾಯುವ್ಯ ಪ್ರಾಂತದವರೆಗೆ ಈ ಜನ ಅಲ್ಲಲ್ಲಿ ಹರಡಿದ್ದಾರೆ. ಇವರಲ್ಲಿ ಮೂರು ಪ್ರಮುಖ ಬಣಗಳಿವೆ : ಟಿಬೆಟ್ಟಿನ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿರುವ ಬೋದ್‍ಪೋ. ಪೂರ್ವ ಟಿಬೆಟ್ಟಿನ ಖಂಪ, ವಾಯವ್ಯ ಚೀನದ ಅಮ್‍ದೊ. ಎಲ್ಲರು ಬೌದ್ದ ಧರ್ಮೀಯರು. ಅವರ ಭಾಷೆ ಒಂದೇ, ಪೂರ್ವ ಟಿಬೆಟ್ಟಿನವರು ಸ್ವಲ್ಪ ಎತ್ತರವಾಗಿರಬಹುದು.

ಬಾಹ್ಯ ಪ್ರಪಂಚದಿಂದ ದೂರವಾದ, ಪರ್ವತಗಳ ನಡುವಣ, ಟಿಬೆಟ್‍ನಲ್ಲಿ ವಿಶಿಷ್ಟ ಪದ್ದತಿಗಳಿವೆ. ಜನ ಉದ್ದ ತೋಳಿನ ನಿಲುವಂಗಿ, ಕುರಿ ಚರ್ಮದ ಅಂಗಿ, ತಲೆಗೆ ವಿವಿಧ ಆಕಾರಗಳ ಹ್ಯಾಟ್ ಧರಿಸುತ್ತಾರೆ. ಪುರುಷರು ಸರ ಮತ್ತು ಕರ್ಣಾಭರಣಗಳನ್ನು ತೊಡುವುದುಂಟು. ಸ್ತ್ರೀಯರು ವಿವಿಧ ಆಭರಣಗಳನ್ನು ಧರಿಸುತ್ತಾರೆ. ಅವರಿಗೆ ಶಿರಾಭರಣಗಳೂ ಇವೆ. ಕೂದಲನ್ನು ಹಲವಾರು ಕಿರುಜಡೆಗಳಾಗಿ ಹೆಣೆದು ಒಟ್ಟಿಗೆ ಸೇರಿಸಿ ಶೃಂಗರಿಸಿಕೊಳ್ಳುವ ಶೈಲಿ ಅವರದು. ಲಾಮ ಪುರೋಹಿತರು ಮಂತ್ರಿಸಿಕೊಡುವ ತಾಯಿತಗಳನ್ನು ಕೊರಳಲ್ಲಿ ಧರಿಸುತ್ತಾರೆ. ವಿವಾಹಿತ ಸ್ತ್ರೀಯರಿಗೆ ಹೆಚ್ಚು ಗೌರವವಿದೆ. ಆದರೆ ಧರ್ಮಾಚರಣೆಗಳಲ್ಲಿ ಅವರಿಗೆ ಸ್ಥಾನವಿಲ್ಲ. ಜೆಲುಗ್ಪ ಸಂನ್ಯಾಸಿಗಳ ಹೊರತು ಇತರ ಲಾಮಗಳು ವಿವಾಹಮಾಡಿಕೊಳ್ಳಬಹುದು. ಬಹುಪತಿ ವಿವಾಹ ರೂಢಿಯಲ್ಲಿದೆ. ಸಹೋದರರು ಒಬ್ಬಳನ್ನೇ ವಿವಾಹಮಾಡಿಕೊಳ್ಳುತ್ತಾರೆ.

ಶ್ರೀಮಂತರ ಭವನಗಳು ಕಲಾಕೃತಿಗೆ ಪ್ರಸಿದ್ದವಾಗಿವೆ. ಸಾಮಾನ್ಯರ ಮನೆಗಳ ಚಾವಣಿ ಮಣ್ಣಿನದು. ಗೋವಳರು ಯಾಕ್ ಪ್ರಾಣಿಯ ಕೂದಲಿಂದ ತಯಾರಿಸಿದ ಉಣ್ಣೆಯ ಡೇರೆಗಳಲ್ಲಿ ವಾಸಿಸುತ್ತಿದ್ದರು.

ಜನರ ಆಹಾರ ಯಾಕ್ ಪ್ರಾಣಿಯ ಮಾಂಸ, ಬಾರ್ಲಿ, ಬೆಣ್ಣೆ, ಚಹ, ಇವರು ಮೀನು ಮತ್ತು ಕೋಳಿಗಳನ್ನು ತಿನ್ನುವುದಿಲ್ಲ. ಮೊಟ್ಟೆಗೆ ಅಭ್ಯಂತರವಿಲ್ಲ. ತಗ್ಗು ಪ್ರದೇಶದ ಜನರ ಆಹಾರ ಅಕ್ಕಿ, ಹಣ್ಣು, ತರಕಾರಿ, ಗೋದಿ, ಬಾರ್ಲಿಯಿಂದ ಮದ್ಯ ತಯಾರಿಸುತ್ತಾರೆ.

ಆರ್ಥಿಕತೆ

[ಬದಲಾಯಿಸಿ]

ಟಿಬೆಟ್ಟಿನ ಬಹುಭಾಗ ಬಂಜರು ಮತ್ತು ಮಂಜುಗಟ್ಟಿದ ನೆಲ. ನದಿಗಳ ಜಲಾನಯನ ಪ್ರದೇಶಗಳಲ್ಲಿ ಹಾಗೂ ಆಗ್ನೇಯದ ಫಲವತ್ತಾದ ತಗ್ಗು ನೆಲದಲ್ಲಿ ವ್ಯವಸಾಯ ನಡೆಯುತ್ತದೆ. ಮುಖ್ಯ ಬೆಳೆಗಳು ಬಾರ್ಲಿ, ಟರ್ನಿಪ್, ಗೋದಿ, ಇತರ ಧಾನ್ಯಗಳು. ಆಗ್ನೇಯದಲ್ಲಿ ಬತ್ತವನ್ನು ಬೆಳೆಯುತ್ತಾರೆ. ಬ್ರಹ್ಮಪುತ್ರ ಕಣಿವೆ ಟಿಬೆಟ್ಟಿನ ಕಣಜ. ಅಲ್ಲಿಯ ವ್ಯವಸಾಯೋತ್ಪನ್ನ ಶೇಕಡ (60)ರಷ್ಟು ಜನರಿಗೆ ಆಧಾರವಾಗಿದೆ. (1950)ರಲ್ಲಿ ಚೀನೀ ವಿಜ್ಞಾನಸಂಸ್ಥೆ ಪರಿಶೋಧನೆ ನಡೆಸಿ ಭೂಮಿ ಮತ್ತು ವಾಯುಗುಣಗಳಿಗೆ ಅನುಗುಣವಾದ ಬೆಲೆಗಳ ಬಗ್ಗೆ ಸಲಹೆ ನೀಡಿತು.

(1950)ರ ಅನಂತರ ಟಿಬೆಟ್ಟಿನಲ್ಲಿ ಖನಿಜ ನಿಕ್ಷೇಪಗಳ ಪರಿಶೋಧನೆ ನಡೆದಿದೆ. ಇಲ್ಲಿ ತೈಲ, ಕಲ್ಲರಗು, ಕಬ್ಬಿಣ, ಮ್ಯಾಂಗನೀಸ್, ಉಪ್ಪು, ಸೋಡ, ಟಿಂಕಣ, ಗಂಧಕ, ಸ್ಪಟಿಕ, ಅಭ್ರಕ, ಗ್ರಾಫೈಟ್, ಜಿಪ್ಸಂ, ಜೇಡ್ ಶಿಲೆ, ಪಿಂಗಾಣಿ ಮಣ್ಣು ಮುಂತಾದ ಖನಿಜಗಳ ನಿಕ್ಷೇಪಗಳಿವೆ. ಮೇಕಾಂಗ್ ನದಿಯ ಅಂಚಿನಲ್ಲಿ (25) ಮೈ. ದೂರದಷ್ಟು ಪ್ರದೇಶದಲ್ಲಿ ಕಬ್ಬಿಣದ ಅದಿರು ಸಿಕ್ಕಿದೆ. ಎನ್ಗಚೂಕ ಪ್ರದೇಶದಲ್ಲಿ ಕಲ್ಲಿದ್ದಲು ಹಾಗೂ ಕಬ್ಬಿಣ ಅದಿರು ತೆಗೆಯಲಾಗುತ್ತಿದೆ.

ಟಿಬೆಟ್ ಗೃಹಕೈಗಾರಿಕೆ ಹಾಗೂ ಕುಶಲಕಲೆಗಳಿಗೆ ಪ್ರಸಿದ್ದವಾಗಿದೆ. ಈಚೆಗೆ ಜವಳಿ, ಕಬ್ಬಿಣ, ಉಕ್ಕು, ವಿದ್ಯುತ್ತು ಮುಂತಾದ ದೊಡ್ಡ ಉದ್ಯಮಗಳು ಟಿಬೆಟ್ಟಿನಲ್ಲಿ ಸ್ಥಾಪಿತವಾಗಿದೆ.

ಟಿಬೆಟ್ಟಿನ ಮುಖ್ಯ ನಿರ್ಯಾತ ವಸ್ತುಗಳು ಉಣ್ಣೆ, ಬೋರಾಕ್ಸ್, ಉಪ್ಪು, ಮೂಲಿಕೆಗಳು, ಪ್ರಾಣಿಮೂಲವಸ್ತುಗಳು. ಚಹ, ರೇಷ್ಮೆ, ಯಂತ್ರಸರಕು ಅಮದಾಗುತ್ತವೆ.

ಹಿಂದೆ ಟಿಬೆಟ್ಟಿನಲ್ಲಿ ಸಾರಿಗೆಸೌಲಭ್ಯಗಳಿರಲಿಲ್ಲ. ಜನರು ಕಾಲುನಡಿಗೆಯಿಂದ ಅಥವಾ ಪ್ರಾಣಿಗಳ ಮೇಲೆ ದಾರಿ ಕ್ರಮಿಸಬೇಕಾಗಿತ್ತು. ಕಮ್ಯೂನಿಸ್ಟ್ ಆಡಳಿತದಲ್ಲಿ ಹಲವು ಮೋಟಾರು ರಸ್ತೆಗಳನ್ನು ನಿರ್ಮಿಸಲಾಗಿದೆ. ಚಿಂಗ್‍ಹೈ ಮತ್ತು ಷೀಕಾಂಗ್ ಹೆದ್ದಾರಿಗಳು ಮುಖ್ಯವಾದವು. (1956)ರಲ್ಲಿ ವಿಮಾನ ಸಂಚಾರ ಪ್ರಾರಂಭವಾಯಿತು. ಲಾಸ ಮತ್ತು ಜೆಂಜೋ ನಡುವೆ ವಿಮಾನಗಳು ಹಾರುತ್ತವೆ. ಚಾಮ್‍ಡೊ, ಷಿಗಾಟ್ಸೆ ಮತ್ತು ಗಾರ್ಟೋಕ್‍ಗಳಲ್ಲಿ ಸೈನಿಕ ವಿಮಾನ ನಿಲ್ದಾಣಗಳಿವೆ.

ಟಿಬೆಟ್‍ನಲ್ಲಿ ರೈಲುಮಾರ್ಗಗಳಿಲ್ಲ. ಷೀನಿಂಗ್-ನಾಗ್ ಚೂಡ್ಷಾಂಗ್ ನಡುವೆ (807) ಮೈ. ಉದ್ದದ ರೈಲುಮಾರ್ಗ ಹಾಕಲು ಸರ್ವೆಕ್ಷಣ ನಡೆದಿದೆ. ಈ ರೈಲು ಮಾರ್ಗ ಸಮುದ್ರಮಟ್ಟಕ್ಕೆ ಸರಾಸರಿ (12,000') ಎತ್ತರದಲ್ಲಿ ಸಾಗುತ್ತದೆ. (ವಿ.ಜಿ.ಕೆ.)

ಇತಿಹಾಸ

[ಬದಲಾಯಿಸಿ]

ವಾಮನಾವತಾರವನ್ನು ತಾಳಿದ್ದ ಅವಲೋಕಿತೇಶ್ವರನ ಸಂತತಿಗೆ ತಾವು ಸೇರಿದವರೆಂಬಯದು ಟಿಬೆಟ್ಟಿನ ಜನರ ಹಳೆಯ ನಂಬಿಕೆ. ಪುರಾಕೃತ ಫಲದಿಂದ ದೈತ್ಯಳಾಗಿದ್ದ ಒಬ್ಬಾಕೆ, ತನ್ನನ್ನು ಮದುವೆಯಾಗಬೇಕೆಂದು ಅವಲೋಕಿತೇಶ್ವರನನ್ನು ಪ್ರಾರ್ಥಿಸಿದಳು. ದಯಾಮಯನಾದ ಆತ ತನ್ನ ಗುರುವಿನ ಸಲಹೆ ಪಡೆದು ಆಕೆಯನ್ನು ಮದುವೆಯಾದ. ಅವರಿಗೆ ಆರು ಮಕ್ಕಳು ಜನಿಸಿದರು. ತಂದೆ ಪವಿತ್ರವಾದ ಆಹಾರವನ್ನು ಮಕ್ಕಳಿಗೆ ಉಣಬಡಿಸಿದ. ಅದರಿಂದ ಕ್ರಮೇಣ ಆ ಮಕ್ಕಳು ವಾನರರೂಪವನ್ನು ಕಳೆದುಕೊಂಡುವು-ಎಂಬುದು ಸಾಂಪ್ರಕಾಯಿಕ ಕತೆ. ಟಿಬೆಟ್ಟಿನವರು ಮೂಲತಃ ಮಂಗೋಲಿಯನ್ ಜನಾಂಗದವರು. ಇವರು ಅಸ್ಸಾಂ, ಬರ್ಮ ದೇಶಗಳಿಂದ ಟಿಬಟ್ಟಿಗೆ ಬಂದು ನೆಲಸಿದವರು. ಇವರ ಭಾಷೆ ಬರ್ಮೀ ಭಾಷೆಯೊಂದಿಗೆ ನಿಕಟಬಾಂಧವ್ಯ ಹೊಂದಿದೆ.

ಈ ದೇಶದ ಪ್ರಾಚೀನ ಇತಿಹಾಸ ಹೆಚ್ಚು ತಿಳಿಯದು. ಷಿಪ್ರಯೆ ಅಥವಾ ಪುಗ್ಯೆ ಈ ದೇಶದ ಮೊದಲ ಅರಸನೆಂದು ಅತ್ಯಂತ ಪ್ರಾಚೀನ ವರದಿಗಳಲ್ಲಿ ಹೇಳಿದೆ. ಈತನ ಕಾಲದಲ್ಲಿ ಬೊನ್ ಎಂಬ ಸರ್ವಚೇನವಾದಿ ಧರ್ಮ ಅಸ್ತಿತ್ವದಲ್ಲಿತ್ತು. ಕ್ರಿ.ಪೂ. 1ನೆಯ ಶತಮಾನದಿಂದ ಕ್ರಿ.ಶ. 7ನೆಯ ಢತಮಾನದ ವರೆಗೂ ಅನೇಕ ಅರಸರು ಟಿಬಟ್ಟನ್ನು ಆಳಿದರು. ಅವರ ಕಾಲದಲ್ಲಿ ಕಲ್ಲಿದ್ದಲಿನ ಬಳಕೆ ಆರಂಭವಾಯಿತು. ನೀರಾವರಿ ಸೌಲಭ್ಯಗಳು ಎರ್ಪಟ್ಟುವು; ಅನೇಕ ಕೆರೆಗಳೂ ಕೊಳಗಳೂ ನಿರ್ಮಿತವಾದುವು; ಹೇಸರಗತ್ತೆಗಳನ್ನು ಸಾಕುವ ಪದ್ಧತಿ ಬೆಳೆಯಿತು; ಗಣೆ ಉದ್ಯಮಗಳು ಅಭಿವೃದ್ಧಿಹೊಂದಿದವು-ಎಂಬ ವಿವರಗಳು ಸಾಧಾರವಾದವಲ್ಲ. ಟಿಬಟ್ ಸಂಸ್ಕೃತಿಯ ಅಸ್ತಿಭಾರ ಹಾಕಿದ ಸಾಂಗ್-ತ್ಸೆನ್ ಗ್ಯಾಂಪೊ 620ರಿಂದ 645ರವರೆಗೆ ಆಳಿ, ಬರ್ಮದ ಉತ್ತರಭಾಗ ಮತ್ತು ಚೀನದ ಪಶ್ಚಿಮ ಪ್ರದೇಶಗಳ ವರೆಗೆ ತನ್ನ ರಾಜ್ಯವನ್ನು ವಿಸ್ತರಿಸಿದ. ಚೀನದ ಸಮ್ರಾಟ ತನ್ನ ಕುಮಾರಿಯನ್ನು ಈತನಿಗೆ ಕೊಟ್ಟು ಮದುವೆ ಮಾಡಬೇಕಾಯಿತು. ನೇಪಾಳದ ರಾಜಕುಮಾರಿಯೊಬ್ಬಳು ಇವನ ಇನ್ನೊಬ್ಬ ಪತ್ನಿ. ಆ ವೇಳೆಗಾಗಲೇ ಬೌದ್ಧ ಧರ್ಮ ಟಿಬಟ್ಟನ್ನು ಪ್ರವೇಶಿಸಿತ್ತು. ಬೌದ್ಧ ಧರ್ಮಾವಲಂಬಿಗಳಾಗಿದ್ದ ತನ್ನ ಇಬ್ಬರು ಪತ್ಮಿಯರ ಪ್ರಭಾವಕ್ಕೆ ಈತ ಒಳಗಾಗಿ ಬೌದ್ಧಧರ್ಮವನ್ನು ಅಲ್ಲಿ ಪ್ರಸರಿಸಲು ಶ್ರಮಿಸಿದ. ಭಾರತದಿಂದ ಬೌದ್ಧಗ್ರಂಥಗಳನ್ನು ತರಲಾಯಿತು. ಅದುವರೆಗೂ ಆಡುಮಾತಾಗಿದ್ದ ಟಿಬಟ್ಟ್ ಭಾಷೆಗೆ ಲಿಪಿಯೊಂದು ಹುಟ್ಟಿದ್ದು ಕೂಡ ಆ ಗ್ರಂಥಗಳ ಅಧ್ಯಯನ ಅಧ್ಯಾಪನಳಿಗಾಗಿಯೇ. ಬೌದ್ಧಧರ್ಮ ರಾಜಧರ್ಮವೆನಿಸಿಕೊಂಡಿತು. ಗ್ಯಾಂಪೊ ತನ್ನ ರಾಜ್ಯಕ್ಕೆ ಭದ್ರವಾದ ಆಡಳಿತ ವ್ಯವಸ್ಥೆಯನ್ನು ನೀಡಿದ. ಭಾರತ ಮತ್ತು ಚೀನಗಳ ಹಲವಾರು ಕಲೆಗಳನ್ನೂ ಪದ್ಧತಿಗಳನ್ನೂ ತನ್ನ ರಾಜ್ಯದಲ್ಲಿ ಆರಂಭಿಸಿದ. ಲಾಸದಲ್ಲಿ ತನಗಾಗಿ ದೊಡ್ಡ ಅರಮನೆಯೊಂದನ್ನು ಕಟ್ಟಿಸಿದ. ಟಿಬೆಟ್ಟಿನ ಇತಿಹಾಸದಲ್ಲಿ ಈತನದು ಪ್ರಥಮ ಸ್ಥಾನ.

755-797ರಲ್ಲಿ ಆಳಿದವನು ಖ್ರಿಸೋಂಗ್ ಡೆ-ತ್ಸೆನ್. ಈತ ಭಾರತದಿಂದ ಪದ್ಮಸಂಭವನೆಂಬ ಬೌದ್ಧ ಭಿಕ್ಷುವನ್ನು ಬರಮಾಡಿಕೊಂಡ. ಮುಂದಿನ ಶತಮಾನದಲ್ಲಿ ರಾಲ್-ಪಾ-ಚಾನ್ ಬೌದ್ಧ ಸಂಘಗಳನ್ನು ವ್ಯವಸ್ಥೆಗೊಳಿಸಿದ. ಭಿಕ್ಷುಗಳ ಪ್ರಭಾವ ಹೆಚ್ಚಿತು. ಅನೇಕ ಬೌದ್ಧಾಲಯಗಳು ಮಿರ್ವಿತವಾದುವು. ಭಾರತದಿಂದ ಅನೇಕ ಬೌದ್ಧಪಂಡಿತರು ಟಿಬೆಟ್ಟಿಗೆ ಬಂದು ಧಾರ್ಮಿಕ ಗ್ರಂಥಗಳನ್ನು ಭಾಷಾಂತರಿಸಿದರು; ಧರ್ಮಪ್ರಚಾರ ಮಾಡಿದರು.

ಗ್ಯಾಂಪೋನ ಕಾಲದಿಂದಲೂ ಟಿಬೆಟ್-ಚೀನಗಳ ನಡುವೆ ಕದನಗಳಾಗುತ್ತಲೇ ಇದ್ದುವು. ಗ್ಯಾಂಪೋನ ಮರಣಾನಂತರ ಚೀನೀಯರು ಲಾಸವನ್ನು ಆಕ್ರಮಿಸಿದರು. ಆದರೆ ಡೆ-ತ್ಸೆನನ ಕಾಲದಲ್ಲಿ ಚೀನೀಯರು ಪರಾಭವವನ್ನನುಭವಿಸಿ ಟಿಬೆಟ್ಟಿಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಬೇಕಾಯಿತು. ಅನಂತರ ಬಂದ ಪಾ ಚನ್ ತನ್ನ ರಾಜ್ಯವನ್ನು ಇನ್ನಷ್ಟು ವಿಸ್ತರಿಸಿದ. ಆದರೆ ಈತನ ಸೋದರ ಲಾಂಗ್-ದರ್-ಮ ಬೌದ್ಧಮತದ ವಿರೋಧಿಯಾಗಿದ್ದ. ಅಣ್ಣನ ಬೌದ್ಧಧರ್ಮದ ಒಲವನ್ನು ಸಹಿಸದೆ ಅವನನ್ನು ಕೊಂದು ಸಿಂಹಾಸನವನ್ನೇರಿದ. ಆದರೆ ಮೂರು ವರ್ಷಗಳೊಳಗಾಗಿಯೇ ಈತನೂ ಕೊಲ್ಲಲ್ಪಟ್ಟ (842). ಟಬೆಟ್ಟಿನ ಇತಿಹಾಸ ದಲ್ಲೆ ಅರಸುಮನೆಯನಗಳ ಆಳ್ವಿಕೆ ಇದರೊಂದಿಗೆ ಮುಗಿಯಿತು. ಅನೇಕ ಪೆಳೆಯಗರರು ತಲೆಯತ್ತಿ ಪ್ರಬಲರದರು.ಲಾಂಗ್-ದರ್-ಮನ ವಂಶಜರು ಪಶ್ಚಿಮ ಟಿಬೆಟ್ಟನಲ್ಲಿ (ಗುಗೆ, ಲಡಖ್) ಪ್ರಬಲರಾದರು. ಪಾಳೆಯಗಾರರ ಪರಸ್ಪರ ಕಲಹಗಳ ಪರಿಣಾವiವಾಗಿ ರಾಜಕೀಯ ಅವ್ಯವಸ್ಥೆ ತಲೆದೋರಿತು.

ಅನಂತರದ ಎರಡು ಶತಮಾನಗಳ ಇತಿಹಾಸ ಸ್ಪಷ್ಟವಾಗಿ ತಿಳಿಯದು. ಚೀನದಲ್ಲಿ ಆಳುತ್ತಿದ್ದ ಟಾಂಗ್ ಮನೆತನದ ಅರಸರು ಟಬೆಟ್ಟಿ£ ಅರಾಜಕತೆಯ ಪ್ರಯೋಜನ ಪಡೆದು, ಟಬೆಟ್ಟಿನ ವಶದಲ್ಲಿದ್ದ ಚೀನೀ ಪ್ರದೇಶಗಳನ್ನು ಗೆದ್ದುಕೊಂಡರು. 1207ರಲ್ಲಿ ಮಂಗೋಲರ ಜೆಂಗಿಸ್ ಖಾನ ಟಬೆಟಿ ಹಾಗೂ ಚೀನಗಲನ್ನು ಆಕ್ರಮಿಸಿದ. ಟಬೆಟ್ ಅವನ ಸಾರ್ವಭೌಮತ್ವವನ್ನು ಒಪ್ಪಿತು. ಚೀನದ ಕ್ಯಾನ್ಸೂ ಪ್ರಾಂತ್ಯದ ಅಧಿಪತಿಯಾಗಿದ್ದ ಗೋದನ್ 1239ರಲ್ಲಿ ಟಬೆಟ್ಟಿನ ಮೇಲೆ ದಾಳಿಮಾಡಿದ. ಆಗ ಟಿಬೆಟಿನ ಪ್ರಜೆಗಳು ಪ್ರಜಾನುರಾಗಿಯಾಗಿದ್ದ ಸಾಕ್ಯಪಂಡಿತನೆಂಬ ಸಾಕ್ಯ ಸಂಘದ ಲಾಮನನ್ನು ಆಶ್ರಯಿಸು ಆತನ ನೆರವನ್ನು ಅಪೇಕ್ಷಿಸಿದರು. ಮಂಗೋಲರ ನಾಯಕ ಆತನನ್ನು ತನ್ನ ಪ್ರತಿನಿಧಿಯಾಗಿ ನೇಮಿಸಿ ಟಿಬೆಟ್ಟಿನ ಆಡಳಿತ ಸೂತ್ರಗಳನ್ನು ಅವನಿಗೆ ವಹಿಸಿದ. 1251ರಲ್ಲಿ ಗೋದನ್ ಮರಣ ಹೊಂದಿದ ಬಳಿಕ ಟಿಬೆಟ್ಟು ಕ್ಯೂಬ್ಲೈಖಾನನ ವಶಕ್ಕೆ ಬಂತು. ಇದೇ ವೇಳೆಗೆ ಸಾಕ್ಯಪಂಡಿತನೂ ಮರಣ ಹೊಂದಿದ್ದ. ಈತನ ಸೋದರಳಿಯ ಫಗ್ಪನನ್ನು ಕ್ಯೋಬ್ಲೈಖಾನ್ ಗೌರವಿಸಿ ರಾಜಪ್ರಧಾನಿಯಾಗಿ ನೇಮಿಸಿ ಅವನಿಗೆ ತಿಸ್ರಿ ಎಂಬ ಬಿರುದು ನೀಡಿದ. ಭೌದ್ಧಧರ್ವವನ್ನು ರಾಜಧರ್ಮವೆಂದು ಸಾರಿದ. ಟಿಬೆಟ್ಟು ಮಂಗೋಲರ ಅಧೀನಕ್ಕೆ ಒಳಪಟ್ಟಿತು. ತಿಸ್ರಿಗಳು ಅರಸನ ಪ್ರತಿನಿಧಿಗಳಾಗಿ ಮಧ್ಯ ಟಿಬೆಟ್ಟಿನ ಅಧಿಪತಿಗಳಾದರು. ಆದರೆ ಹೀಗೆ ನೇಮಕಗೊಂಡ ತಿಸ್ರಿಗಳೆಲ್ಲ ಸಾಕ್ಯಪಂಡಿತನ ವಂಶಸ್ಥರೇ. ಅವರಲ್ಲಿಯ ದ್ವೇಷಾಸೂಯೆಗಳ ಪರಿಣಾವiವಾಗಿ ಕ್ರಮೇಣ ತಿಸ್ರಿಗಳ ಪ್ರಭಾವ ಕುಗ್ಗೊತು. ಕ್ಯೋಬ್ಲೈಖಾನ್ ಚೀನದ ಚಕ್ರವರ್ತಿಯಾದ. ಆದರೆ ಅಲ್ಲಿಯ ಜನರು ಈ ಪರಕೀಯನನ್ನು ಮತ್ತು ಈತನ ವಂಶವಾದ ಯೂವಾನ್ ಮನೆತನದ ಅರಸರನ್ನು ಹೊರದೂಡಲು ಯತ್ನಿಸಿ 1368ರಲ್ಲಿ ಯಶಸ್ವಿಯಾದರು. ಚೀನದಲ್ಲಿ ಮಿಂಗ್ ಅರಸರ ಆಳ್ವಿಕೆ ಆರಂಭವಾಯಿತು. ಯೂವಾನ್ ಅರಸರಂತೆ ಟಿಬೆಟ್ಟಿನ ಮೇಲಣ ಪ್ರಭುತ್ವವನ್ನು ಈ ಅರಸರು ಉಳಿಸಿಕೊಳ್ಳಲಾಗಲಿಲ್ಲ. ಸಾಕ್ಯಕುಲದ ಪ್ರತಿಸ್ಪರ್ಧಿಗಳಾಗಿದ್ದ ಪಗ್ಮೋತ್ರು ಕುಲದವರು ತಿಸ್ರೀಗಳನ್ನು ಕಡೆಗಣಿಸಿದರು. ಮಿಂಗ್ ಮನೆತನದ ಅರಸರು ನಾಮಮಾತ್ರಕ್ಕೆ ಟಿಬೆಟ್ಟಿನ ಪ್ರಭುಗಳಾಗಿದ್ದರೂ ವಾಸ್ತವವಾಗಿ ಪಗ್ಮೋತ್ರುಗಳೂ ಅನಂತರ ಬಂದ ರಿಂಪುಂಗ್ ಮತ್ತು ಟ್ಸಾಂಗ್ ಕುಲಗಳವರೂ ಟಿಬೆಟಿನ ಅರಸಾದರು. ಈ ಕುಲಗಳ ಲಾಮಗಳ ಚೀನಕ್ಕೆ ಹೋಗಿಬರುವಷ್ಟಕ್ಕೆ ಬೀನದೊಂದಿಗೆ ಇವರ ಸಂಬಂಧ ಸೀಮಿತವಾಗಿತ್ತು. ಈ ವೇಳೆಗೆ ಭಾರತದಲ್ಲಿ ಬೌದ್ಧಧರ್ಮದ ತಾಂತ್ರಿಕ ಪದ್ಧತಿ ಪ್ರಭಾವಶಾಲಿಯಾಗಿತ್ತು. ಅದು ನೆರೆಯ ಪ್ರದೇಶಗಳಿಗೂ ಹಬ್ಬಿತು. ಪ್ರಕೃತಿಪೂಜಕರಾದ ಟಿಬೆಟ್ ಜನರು ತಾಂತ್ರಿಕ ಪದ್ಧತಿಗಳನ್ನು ತಮ್ಮ ಸಂಪ್ರದಾಯದೊಂದಿಗೆ ಹೊಂದಿಸಿಕೊಂಡು ವಿಶಿಷ್ಟವಾದ ಒಂದು ಧರ್ಮವನ್ನು ಬೇಳೆಸಿಕೊಂಡರು. ಈ ಧರ್ಮದ ಪ್ರಭಾವ ಆಳವಾಗಿ ಬೇರೂರಿ, ಧಾರ್ಮಿಕ ಗುರುಗಳೇ ಆಳರಸರೂ ಆದರು. 14ನೆಯ ಶತಮಾನದ ವರೆಗೂ ಕೆಂಪುಟೋಪಿಯ ಬೌದ್ಧ ಗುರುಗಳು ಸಮಾಜದಲ್ಲಿ ಪ್ರಮುಖ ಸ್ಥಾನ ಪಡೆದಿದ್ದರು. ಇವರು ಮದುವೆಯಾಗಬಹುದಿತ್ತು. ಮದ್ಯ ಸೇವಿಸಬಹುದಾಗಿತ್ತು. ಆದರೆ ಗೆಲುಗ್ಪ ಕುಲಕ್ಕೆ ಸೇರಿದ ತ್ಸಾಂಗ್-ಖಾ-ಪಾ (ಸು. 1357-1419) ಎಂಬ ಸುಧಾರಕನೊಬ್ಬ ಹಳದಿ ಟೋಪಿಯ ಹೊಸ ಪಂಥವನ್ನು ಆರಂಭಿಸಿದ. ಹೆಚ್ಚು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದ. ಈತನ ಉತ್ತರಾಧಿಕಾರಿ ಗ್ಯಾಂಡೆನ್ ತ್ರುಪ್ಪ 1474ರಲ್ಲಿ ಮರಣಹೊಂದಿದ. ಎರಡು ವರ್ಷಗಳ ಬಳಿಕ ಹುಟ್ಟಿದ ಬಾಲಕನೊಬ್ಬನನ್ನು ಆತನ ಆತ್ಮ ಪ್ರವೇಶಿಸಿತೆಂದು ಭಾವಿಸಿ ಆ ಹುಡುಗನನ್ನು ತ್ರುಪ್ಪನ ಉತ್ತರಾಧಿಕಾರಿಯೆಂದು ಜನ ಸ್ವೀಕರಿಸಿದರು. ಅಂದಿನಿಂದ ಈ ಧಾರ್ಮಿಕ ಗುರು ಅವತಾರಪುರುಷನೆಂಬ ಭಾವನೆ ಉಂಟಾಯಿತು. ಸೋ ನಮ್ ಗ್ಯಾಟ್ಸೋಗೆ ಮಂಗೋಲರ ನಾಯಕ ಅಲ್ತನ್‍ಖಾನ್ ದಲೈ ಲಾಮ ಎಂಬ ಬಿರುದನ್ನಿತ್ತ. ಅಂದಿನಿಂದ ಈ ಧಾರ್ಮಿಕ ಗುರುವಿಗೆ ದಲೈ ಲಾಮ ಎಂಬ ಹೆಸರೇ ಬಂದಿತು. ಲೊಬ್ ಸ್ಯಾಂಗ್ ಗ್ಯಾಟ್ಸೊ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಹಿಂದಿನ ಧಾರ್ಮಿಕ ಪರಂಪರೆಗೆ ಸೇರಿದ ಪಂಗಡದವರೊಂದಿಗೆ ಹೋರಾಡಬೇಕಾಯಿತು. ಆತ ಇದಕ್ಕಾಗಿ ಮಂಗೋಲರನೆರವನ್ನು ಪಡೆದ. ಕೆಂಪುಟೋಪಿ ಪಂಗಡದವರನ್ನು ಹಿಮ್ಮೆಟ್ಟಿಸಿದ. ಆ ಬಳಿಕ ಟಿಬೆಟ್ಟಿನ ಒಡೆತನ ಈ ದಲೈ ಲಾಮನಿಗೆ ದೊರಕಿತು. ಲ್ಹಾಸದಲ್ಲಿ ಪೊಟಾಲ ಅರಮನೆಯನ್ನು ಕಟ್ಟಿಸಲು ಅಸ್ತಿಭಾರ ಹಾಕಿದವನು ಈತನೇ.

ದಲೈ ಲಾಮನನ್ನು ಟಿಬೆಟ್ ದೇಶದಲ್ಲಿ ಬೋಧಿಸತ್ತ್ವನೆಂದು ಭಾವಿಸಿ ಪೂಜಿಸುವ ಪದ್ಧತಿ ಬೆಳೆಯಿತು. ನಿರ್ವಾಣ ಪದವಿಗೆ ಏರಿದರೂ ಸಮಾಜ ಕಲ್ಯಾಣಕ್ಕಾಗಿ ಪುನಃ ಅವತಾರವನ್ನು ತಾಳುವವರು ಬೋಧಿಸತ್ತ್ವರು. ಟಿಬೆಟ್ಟಿನ ದಲೈ ಲಾಮಗಳು ಪ್ರಜೆಗಳ ಅರಸರೂ ಧಾರ್ಮಿಕ ಗುರುಗಳೂ ಆಗಿದ್ದರು. ರಾಜಕೀಯ ಮತ್ತು ಧಾರ್ಮಿಕ ಅಧಿಕಾರಗಳು ಅವರಲ್ಲಿ ಕೇಂದ್ರೀಕೃತವಾಗಿದ್ದುವು. ಐದನೆಯ ದಲೈ ಲಾಮ ಅಧಿಕಾರಕ್ಕೆ ಬಂದಾಗ ಈ ಅವತಾರದ ಸಿದ್ಧಾಂತಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರಕಿತು. ಒಬ್ಬ ದಲೈ ಲಾಮ ಮರಣ ಹೊಂದುವ ಮೊದಲು ಮುಂದೆ ಇಂತಹ ಕಡೆ ಅವತಾರ ಹೊಂದುವುದಾಗಿ ತಿಳಿಸುತ್ತಿದ್ದ. ಅದಕ್ಕಾಗಿ ಕೆಲವು ಗುರುತುಗಳನ್ನು ಸೂಚಿಸುತ್ತಿದ್ದ. ಆತ ನಿಧನನಾದ 3-4 ವರ್ಷಗಳ ಬಳಿಕ ಸೇರಾ, ದ್ರೆಪುಂಗ್, ಗಂಡೆನ್, ನೆಚುಂಗ್ ಮತ್ತು ಸಾಮ್ಯೆಗಳ ಪುರಾತನ ಮಠಗಳ ಸಂನ್ಯಾಸಿಗಳ ಮುಂದಿನ ದಲೈ ಲಾಮ ಜನಿಸಿರಬಹುದಾದ ಸ್ಥಳವನ್ನು ಹುಡುಕುತ್ತಿದ್ದರು. ಅವರೇ ಆತನನ್ನು ಆರಿಸುತ್ತಿದ್ದರು. ಆತನನ್ನು ಲಾಸದ ಪೊಟಾಲ ಅರಮನೆಗೆ ಕರೆತಂದು ಅಲ್ಲಿ ಆತನ ವಿದ್ಯಾಭ್ಯಾಸಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಲಾಗುತ್ತಿತ್ತು. 18 ವರ್ಷಗಳು ತುಂಬಿದ ಬಳಿಕ ಹೊಸ ದಲೈ ಲಾಮ ತನ್ನ ಅಧಿಕಾರಸೂತ್ರಗಳನ್ನು ವಹಿಸಿಕೊಳ್ಳುತ್ತಿದ್ದ. ಟಿಬೆಟ್ಟನರು ದಲೈ ಲಾಮನನ್ನು ಅಮೂಲ್ಯರಕ್ಷಕ, ಅಮೂಲ್ಯ ಚಕ್ರವರ್ತಿ ಎಂದು ಅರ್ಥಬರುವ ಕ್ಯಮ್ ಗೋನ್ ರಿಂ-ಪೋ-ದೆ, ಗ್ಯೆ ವಾ-ರಿಂ-ಪೋ ಚೆ ಎಂದು ಕರೆಯುತ್ತಾರೆ. ದಲೈ ಲಾಮ (ತಲೆಲಾಮ) ಎಂಬುದು ಮಂಗೋಲರೂ ಚೀನಿಯರೂ ಬಳಸುವ ಪದ.

ದಲೈ ಲಾಮನಿಗೆ ತಾತ್ತ್ವಿಕವಾಗಿ ನಿರಂಕುಶ ಅಧಿಕಾರವಿದ್ದರೂ ಆಚರಣೆಯಲ್ಲಿ ಕೆಲವು ಅಡೆತಡೆಗಳಿದ್ದುವು. ರಾಜನೂ ಗುರುವೂ ಆಗಿದ್ದ ದಲೈ ಲಾಮ ಅಧಿಕಾರಸೂತ್ರಗಳನ್ನು ವಹಿಸುವ ವರೆಗೂ ರಾಜ್ಯಸಭೆಯಿಂದ ನಿಯೋಜಿತನಾದ ರಾಜಪ್ರತಿನಿಧಿ ಆಢಳಿತದ ಹೊಣೆ ಹೊರುತ್ತಿದ್ದ. ಆತನ ಅನಂತರದ ಸ್ಥಾನ ಪ್ರಧಾನಿಯದು. ಈತ ಲೌಕಿಕ ವ್ಯಕ್ತಿ. ಒಬ್ಬನೇ ಪ್ರಧಾನಿಯಿರಬೇಕೆಂಬ ನಿಯಮವಿರಲಿಲ್ಲ. ಆದರೆ ಈತ ಆಡಳಿತ ಸಭೆಯ ಸದಸ್ಯನಾಗಿರಲಿಲ್ಲ. ಆ ಸಭೆ ಮಾಡಿದ ಸಲಹೆಗಳನ್ನು ತನ್ನದೇ ಆದ ಟೀಕೆಗಳೊಂದಿಗೆ ದಲೈ ಲಾಮನಿಗೆ ಕಳುಹಿಸುವ ಕರ್ತವ್ಯ ಈತನದಾಗಿತ್ತು. ಟಿಬೆಟ್ ಸರ್ಕಾರದಲ್ಲಿ ಕಷಗ್ ಎಂಬುದು ಆಡಳಿತ ಸಭೆ. ಇದನ್ನು ಮಂತ್ರಿಮಂಡಲ ಎನ್ನವುದು ಕಷ್ಟ. ಒಬ್ಬೊಬ್ಬ ಮಂತ್ರಿಗೆ ಸೇರಿದಂತೆ ಇಲಾಖೆಗಳನ್ನು ಪ್ರತ್ಯೇಕಿಸಲಾಗಿರಲಿಲ್ಲ. ಅವರದು ಜಂಟಿ ಜವಾಬ್ದಾರಿ. ಅವರು ತಮ್ಮ ಸಲಹೆಗಳನ್ನು ಅನುಮೋದನೆಗೆಂದು ದಲೈ ಲಾಮನಿಗೆ ಸಲ್ಲಿಸುತ್ತಿದ್ದರು. ಆಡಳಿತಸಭೆ ನ್ಯಾಯಮಂಡಲಿಯೂ ಆಗಿತ್ತು.

ಆಡಳಿತಸಭೆಯ ಅಧೀನದಲ್ಲಿ ಹಲವಾರು ವಿಶಿಷ್ಟ ಅಧಿಕಾರಿಗಳಿದ್ದರು. (ತ್ಸಿ-ಪೊನ್). ದೇಶದ ಆದಾಯ-ವೆಚ್ಚಗಳ ಲೆಕ್ಕಪತ್ರಗಳನ್ನಿಡುವ. ಕಂದಾಯಗಳನ್ನು ನಿರ್ಧರಿಸುವ ಹೊಣೆ ಇವರದು. ರಾಜನಿಗೆ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ನೆರವು ನೀಡಲು ಚಿಕ್ಯಾಂಪ್ ಖೆಂಪೊ ಎಂಬ ಸಂನ್ಯಾಸಿ ಇರುತ್ತಿದ್ದ. ಈತ ದಲೈ ಲಾಮನ ಸ್ವಂತ ಖಜಾನೆಯ ಹಾಗೂ ಪೊಟಾಲದ ಖಜಾನೆಯ ಅಧಿಕಾರಿಯಾಗಿದ್ದ. ಯಿಕ್ ಟ್ಸಾಂಗ್ ಎಂಬುದು ನಾಲ್ವರು ಸಂನ್ಯಾಸಿಗಳ ಸಭೆ. ಮಠಗಳ ಆಡಳಿತದ ಹೊಣೆಯನ್ನು ಇವರು ಹೊತ್ತಿದ್ದರು. ಇವರು ರಾಷ್ಟ್ರೀಯ ಸಭೆಯ ಅಧ್ಯಕ್ಷಸ್ಥಾನ ವಹಿಸುತ್ತಿದ್ದರು. ರಾಷ್ಟ್ರೀಯ ಸಭೆ ಅವಶ್ಯವಿದ್ದಾಗ ಮಾತ್ರ ಸೇರುತ್ತಿತ್ತು. ಇದು ಸಮಕಾಲೀನ ಸಮಸ್ಯೆಗಳನ್ನು ಚರ್ಚಿಸಲು ರೂಪಿತವಾಗಿದ್ದ ಸಭೆ. ಉನ್ನತ ಅಧಿಕಾರಿಗಳು, ಲಾಸದ ಮಠಗಳಲ್ಲಿಯ ಸಂನ್ಯಾಸಿಗಳ ಪ್ರತಿನಿಧಿಗಳು ಈ ಸಭೆಯ ಸದಸ್ಯರಾಗಿದ್ದರು. ದಲೈ ಲಾಮ ನಿಧನಹೊಂದಿದಾಗ ಇನ್ನೊಬ್ಬನನ್ನು ಆ ಸ್ಥಾನಕ್ಕೆ ಆರಿಸುವ ವರೆಗೆ ರಾಜಪ್ರತಿನಿಧಿಯಾಗಿ ಆಳಬೇಕಾಗಿದ್ದವನನ್ನು ನೇಮಿಸುವ ಅಧಿಕಾರ ಈ ಸಭೆಗೆ ಇತ್ತು. ಐದನೆಯ ದಲೈ ಲಾಮನಿಗೆ ಕೋಕೋ ನೋರ್ ಪ್ರದೇಶದ ಮಂಗೋಲರ ನಾಯಕನಾದ ಗುಸ್ರಿಖಾನನ ಬೆಂಬಲವಿತ್ತು. ಚೀನದಲ್ಲಿ ಆಗ ಮಾಂಚೂಗಳು ಕ್ರಮೇಣ ಪ್ರಾಬಲ್ಯಕ್ಕೆ ಬರುತ್ತಿದ್ದರು. ಗುಸ್ರಿಖಾನ ಮಾಂಚೂಗಳೊಂದಿಗೆ ರಾಜಕೀಯ ಸಂಬಂಧ ಹೊಂದಿದ್ದ. ಗುಸ್ರಿಖಾನನ ಅಧೀನಕ್ಕೆ ಟಿಬೆಟ್ ಬಂದಾಗ ಆತ ಐದನೆಯ ದಲೈ ಲಾಮನನ್ನು ಆ ಪದವಿಗೆ ಏರಿಸಿದ. ಆತ ಬಕುಕಿರುವ ತನಕ (1655) ದಲೈ ಲಾಮ ಆತನ ಆಜ್ಞಾಧಾರಕನಂತಿದ್ದ. ಆದರೆ ಅನಂತರ ದಲೈ ಲಾಮ ಟಿಬೆಟ್ಟಿನ ವ್ಯವಹಾರಗಳಲ್ಲಿ ಸಂಪೂರ್ಣ ಸ್ವಾತಂತ್ರ್ಯ ಪಡೆದ. ಈತ ಒಂದು ಕಡೆ ಚೀನದ ಮಾಂಚೂಗಳನ್ನೂ, ಇನ್ನೊಂದು ಕಡೆ ಮಂಗೋಲರನ್ನೂ ಅನುಸರಿಸಿದ. ಆದರೆ 1682ರಲ್ಲಿ ಈ ದಲೈ ಲಾಮ ಮರಣಹೊಂದಿದಾಗ ಈತನ ಪ್ರಧಾನಿಯಾಗಿದ್ದ ಸಾಂಗ್ಯೆ ಗ್ಯಾಟ್ಸೊ ದಲೈ ಲಾಮನ ನಿಧನದ ವಾರ್ತೆಯನ್ನು ಮುಚ್ಚಿಟ್ಟು ಆಡಳಿತದ ಸೂತ್ರಗಳನ್ನು ಸ್ವತಃ ವಹಿಸಿದ. ಆದರೆ ಮಂಗೋಲ ಲ್ಹಾಬ್ಜಾಂಗ್ ಖಾನದ ಇದನ್ನು ಸಹಿಸಲಿಲ್ಲ. ಆತ ಚೀನದ ಚಕ್ರವರ್ತಿ ಕಾಂಗ್ ಹ್ಸಿಯ ನೆರವನ್ನು ಪಡೆದು ಸಾಂಗ್ಯೆ ಗ್ಯಾಟ್ಸೊನನ್ನು ಸೋಲಿಸಿ ತಾನೇ ಆರಿಸಿದ ಒಬ್ಬ ಲಾಮನನ್ನು ಟಿಬೆಟ್ಟಿನ ಕಲೈ ಎಂದು ನೇಮಿಸಿದ. ಆದರೆ ಟಿಬೆಟ್ಟಿನ ಪ್ರಜೆಗಳು ಇದನ್ನು ಮಾನ್ಯ ಮಾಡಲಿಲ್ಲ. ಕಾಂಗ್ ಹ್ಸಿ ಈ ಪರಿಸ್ಥಿತಿಯ ಪ್ರಯೋಜನ ಪಡೆದು ಟಿಬೆಟ್ ಜನರ ಕೋರಿಕೆಯನ್ನು ಮಾನ್ಯವಾಡಿ ಲ್ಹಾಬ್ಜಾಂಗನನ್ನು ಹೊರದೂಡಿದ. ಈ ವೂಲಕ ಚೀನದ ಚಕ್ರವರ್ತಿ ಟಿಬೆಟ್ಟಿನ ರಾಜಕೀಯದಲ್ಲಿ ಪ್ರವೇಶಿಸಿದ. ಲಾಸದಲ್ಲಿ ತನ್ನ ಸೈನ್ಯದ ಒಂದು ತುಕೆಇಯನ್ನು ನಿಲ್ಲಿಸಿದ. ದಲೈ ಲಾಮನ ಪ್ರಭಾವ ಕುಗ್ಗಿತು. ಟಿಬೆಟ್ಟಿನ ಆಡಳಿತ ನಿರ್ವಹಿಸಲು ಆಂಬನರನ್ನು ಚೀನೀ ಚಕ್ರವರ್ತಿ ನೇಮಿಸಿದ. ಪೋಲ ತೇಜಿ ಎಂಬಾತ ನೂತನ ಆಡಳಿತಾಧಿಕಾರಿಯಾದ. ಈತ ವಿಚಕ್ಷಣೆಯಿಂದ ಆಡಳಿತ ಸೂತ್ರಗಳನ್ನು 18 ವರ್ಷಗಳ ಕಾಲ ನಿರ್ವಹಿಸಿ ಮಾಂಚೂ ಅರಸರು ನಾಮಮಾತ್ರಕ್ಕೆ ಟಿಬೆಟ್ಟಿನ ಪ್ರಭುಗಳಾಗಿರುವಂತೆ ಮಾಡಿದ. ಈ ಸಮಯದಲ್ಲೇ ದಲೈ ಲಾಮನ ಪ್ರತಿಸ್ಪರ್ಧಿ ಎನ್ನಿಸುವಂತೆ ಪಂದೆನ್ ಲಾಮನನನು ನಿಯಮಿಸುವ ಪದ್ಧತಿ ಆರಂಭವಾಯಿತು. ಪೋಲ ತೇಜ 1747ರಲ್ಲಿ ನಿಧನಹೊಂದಿದ. ಆತನ ಮಗ ಗ್ಯುರ್ಮೆ ನಂಗ್ಯಾಲ್ ಊತ್ತರಾಧಿಕಾರಿಯಾದ. ಆದರೆ ಆತ ತಂದೆಯ ನೀತಿಯನ್ನು ಪಾಲಿಸದೆ ಚೀನೀ ಅಧಿಕಾರಿಗಳೊಂದಿಗೆ ವೈರ ಕಟ್ಟಿಕೊಂಡ. ಅಂಬೆನರು ಗ್ಯುರ್ಮೆಯನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಕೊಲೆಮಾಡಿದರು. ಆಗ ಚೀನೀ ಚಕ್ರವರ್ತಿ ಚಿಯೆನ್ ಲುಂಗ್ ಮತ್ತೊಮ್ಮೆ ಟಿಬೆಟ್ಟಿನ ರಾಜಕೀಯದಲ್ಲಿ ಪ್ರವೇಶಿಸಿದ. ಇದರ ಪರಿಣಾಮವಾಗಿ ಮತ್ತೊಮ್ಮೆ ದಲೈ ಲಾಮ ತನ್ನ ಹಿಂದಿನ ಅಧಿಕಾರಗಳನ್ನು ಪಡೆಕುಕೊಂಡ. ಈತ ಏಳನೆಯ ದಲೈ ಲಾಮ ಕೆಸಂಗ್ ಗ್ಯಾಟ್ಸೊ. ಈತ 1757ರಲ್ಲಿ ನಿಧನ ಹೊಂದಿದ. ಆನಂತರ ಬಂದ ದಲೈ ಲಾಮಗಳು ತಮ್ಮ ಪ್ರತಿನಿಧಿಗಳಿಗೇ ಅಧಿಕಾರ ದಹಿಸಿಕೊಟ್ಟರು. ಸುಮಾರು 120 ವರ್ಷಗಳ ಕಾಲ ಈ ಪರಿಸ್ಥಿಸಿ ಮುಂದುವರಿಯಿತು. ಏದನೆಯ ದಲೈ ಲಾಮ ತನ್ನ ಗುರು ಲೊಬ್ಜಾಂಗ್ ಜೋಕ್ಯಿ ಗ್ಯಾಲ್ಟೆಸೆನ್ ನನ್ನು ಟಾಷಿಲುಂಪೊ ಮಠದ ಸಂನ್ಯಾಸಿಯಾಗಿ ನೇಮಿಸಿ, ಆತ ಧ್ಯಾನಿ ಬುದ್ಧ ಅಮಿತಭನ ಅವತಾರವೆಂದು ಘೋಷಿಸಿದ್ದ. ಈತನೇ ಪಂಚೆನ್ ಲಾಮ ಎನಿಸಿಕೊಂದ. ದಲೈ ಲಾಮನ ಗುರುವಿನ ಸ್ಥಾನದಲ್ಲಿದ್ದ ಈತ ಸಹಜವಾಗಿಯೇ ಲೌಕಿಕ ವಿಷಯಗಳೊಡನೆ ಯಾವ ಸಂಬಂಧವನ್ನೂ ಹೊಂದಿರೆದೆ, ಆಧ್ಯಾತ್ಮಿಕವಾಗಿ ದಲೈ ಲಾಮನಿಗಿಂತ ಉನ್ನತ ಮಟ್ಟದಲ್ಲಿರುವವನೆಂದು ಭಾವಿಸಲಾಗಿತ್ತು.

ಈ ಮಧ್ಯೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಆರಂಭವಾಗಿತ್ತು. ವಾರನ್ ಹೇಸ್ಟಿಂಗ್ಸ್ ಟಿಬೆಟ್ಟಿನೊಡನೆ ವಾಣಿಜ್ಯ ಸಂಪರ್ಕಗಳನ್ನು ಬೆಳೆಸಲು ಯತ್ನಿಸಿದ. ಅದಕ್ಕಾಗಿ ಜಾರ್ಜ್ ಬೋಗ್ಲ್ ಎಂಬ ಅಧಿಕಾರಿಯನ್ನು ಭೂತಾನದ ಮೂಲಕ ಟಿಬೆಟ್ಟಿಗೆ ಕಳಿಸಿದ. ಆತ ಪಂಚೆನ್ ಲಾಮನನ್ನು ಟಾಷಿ ಲುಂಪೋದಲ್ಲಿ ಕಂಡು ಅವನೊಡನೆ ವ್ಯವಹಾರಗಳನ್ನು ಕುರಿತು ಚರ್ಚಿಸಿದ. 1788ರಲ್ಲಿ ನೇಪಾಳದ ಗೂರ್ಖರು ಟಿಬೆಟ್ಟಿನ ಜಿûಕಾಟ್ಸೆಯನ್ನು ಮುತ್ತಿದರು. ಆದರೆ ಮಾಂಚೂ ಅರಸರು ಅವರನ್ನು ಹೊರದೂಡಿದರು (1792). 1855ರಲ್ಲಿ ಇನ್ನೊಮ್ಮೆ ಗೂರ್ಖರು ಟಿಬೆಟ್ಟನ್ನು ಮುತ್ತಿದಾಗ ಟಿವೆಟ್ಟನಲ್ಲಿ ಮಾಂಚೂಗಳ ಪ್ರಭಾವ ಕಡಿಮೆಯಾಗಿದ್ದ ಕಾರಣ ಗೂರ್ಖರು ಜಯಶೀಲರಾದರು. ಟಿಬೆಟ್ ಸರ್ಕಾರ 10,000 ರೂಪಾಯಿಗಳನ್ನು ಪ್ರತಿವರ್ಷವೂ ಗೂರ್ಖರಿಗೆ ಕೊಡಬೇಕೆಂಬ, ಗೂರ್ಖ ವರ್ತಕರಿಂದ ಸುಂಕಗಳನ್ನು ಪಡೆಯಬಾರದೆಂಬ ಒಪ್ಪಂದವಾಯಿತು.

ಲಾರ್ಡ್ ಕರ್ಜನ್ 1904ರಲ್ಲಿ ಪ್ರಾನ್ಸಿಸ್ ಯಂಗ್ ಹಸ್ಬೆಂಡ್ ನೇತೃತ್ವದಲ್ಲಿ ಸೈನ್ಯವೊಂದನ್ನು ಟಿಬೆಟ್ಟಿನ ಮೇಲೆ ಕಳಿಸಿದ. 13ನೆಯ ದಲೈ ಲಾಮ ಆಗ ಟಿಬೆಟ್ಟಿನಿಂದ ಬೀನಕ್ಕೆ ಓಡಿಹೋದ. ಆದರೆ ಬ್ರಿಟಿಷ್ ಸರ್ಕಾರ ಕರ್ಜನ್ನನ ಈ ನೀತಿಯನ್ನು ಅನುಮೊಡಿಸಲಿಲ್ಲ. ದೀನ ದೇಶಕ್ಕೆ ಟಿಬಟ್ ಮೇಲೆ ಪ್ರಭುತ್ವವಿದೆ ಎಂಬುದನ್ನು ಒಪ್ಪಿತು. ಆಂತರಿಕ ಆಡಳಿತಗಳಲ್ಲಿ ಮಾತ್ರ ಟಿಬೆಟ್ ಸ್ವತಂತ್ರವೆಂದು ಬ್ರಿಟನ್ ಭಾವಿಸಿತು.

1911ರಲ್ಲಿ ಬೀನದಲ್ಲಿ ನಡೆದ ಕ್ರಾಂತಿಯ ಪರಿಣಾಮವಾಗಿಟಿಬೆಟ್ಟಿನ ಇತಿಹಾಸದಲ್ಲಿ ನೂತನ ಘಟ್ಟವೊಂದು ಆರಂಭವಾಯಿತು. ದಲೈ ಲಾಮ ಚೀನದೊಡನೆ ತನ್ನ ಸಂಬಂಧಗಳನ್ನು ಕಡಿದುಕೊಂಡು. ಬ್ರಿಟನ್ ಹಾಗೂ ರಷ್ಯ ದೇಶಗಳೊಡನೆ ಹೊಸ ಬಾಂಧವಯ ಬೆಳೆಸಬೇಕೆಂದೂ ಸ್ವತಂತ್ರವಾಗಿರಬೇಕೆಂದೂ ಯೊಚಿಸಿದ. ಆದರೆ ಬ್ರಿಟನ್ ಇದಕ್ಕೆ ಬೆಂಬಂಲ ನೀಡಲಿಲ್ಲ. ಚೀನಿ ಗಣರಾಜ್ಯ ಟಿಬೆಟ್ಟಿನ 13ನೆಯ ದಲೈಯನ್ನು ದಲೈ ಲಾಮನೆಂದು ಮಾನ್ಯವಾಡಿತಯ. 1913ರಲ್ಲಿ ಬ್ರಿಟನ್, ಚೀನ ಹಾಗೂ ಟಿಬೆಟ್ ಪ್ರತಿನಿಧಿಗಳು ಸಿಮ್ಲಾದಲ್ಲಿ ಸಭೆಸೇರಿದರು. ಹೆನ್ರಿಕ್ ಮ್ಯಾಕ್‍ಮೋಹನ್ ಇದರ ಅಧ್ಯಕ್ಷತೆ ವಹಿಸಿದ. ಚೀನ-ಟಿಬೆಟ್ ಗಳ ನಡುವಣ ಹಾಗೂ ಭಾರತ-ಟಿಬೆಟ್ ನಡುವಣ ಮೇರೆಗಳನ್ನು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಚೀನ ಈ ಒಪ್ಪಂದವನ್ನು ಅನುಮೋದಿಸಲಿಲ್ಲ. ದಲೈ ಲಾಮ ಹಾಗೂ ಪಂಚೆನ್ ಲಾಮಗಳ ನಡುವಣ ಭಿನ್ನಾಭಿಪ್ರಾಯವೂ ಇದಕ್ಕೊಂದು ಕಾರಣವಾಯಿತು. 9ನೆಯ ಪಂಚೆನ್ ಲಾಮ ಚೀನಕ್ಕೆ ಓಡಿಹೋದ. ಜನರಲ್ ಚಿಯಾಂಗ್ ಕೈ-ಷೆಕ್ ಟಿಬೆಟ್ಟನ್ನು ಚೀನದ ಭಾಗವೆಂದು ಘೋಷಿಸಿ ಅದನ್ನು ವಶಪಡಿಸಿಕೊಳ್ಳಲು ಯತ್ನಿಸಿದ. ಆದರೆ ಇದೂ ಫಲಿಸಲಿಲ್ಲ. 1947ರಲ್ಲಿ ಭಾರತ ಸ್ವತಂತ್ರವಾದಾಗ ಟಿಬೆಟ್ಟಿನಲ್ಲಿದ್ದ ಬ್ರಿಟಿಷ್ ಕಚೇರಿ ಭಾರತದ ಕಚೇರಿಯಾಗಿ ಮಾರ್ಪಟ್ಟಿತು. ಅಂದಿನಿಂದ ಬ್ರಿಟನಿನ ಸ್ಥಾನದಲ್ಲಿ ಭಾರತ ಟಿಬೆಟ್ಟಿನೊಡನೆ ವ್ಯವಹಾರಗಳನ್ನು ಮುಂದುವರಿಸಿತು. 1949ರಲ್ಲಿ ಚೀನದಲ್ಲಿ ಕಮ್ಯೂನಿಸ್ಟ್ ಸರ್ಕಾರ ಸ್ಥಾಪಿತವಾಯಿತು. ಇದು ಟಿಬೆಟ್ಟನ್ನು ಚೀನದೊಡನೆ ವಿಲೀನಗೊಳಿಸುವ ಹಂಚಿಕೆ ಹೂಡಿತು. ಟಿಬೆಟ್ಟಿನ ಎಲ್ಲ ಪ್ರದೇಶಗಳಿಗೂ ರಸ್ತೆಗಳನ್ನು ನಿರ್ಮಿಸುವ ಕಾರ್ಯವನ್ನೂ ಮಾಡದ ಟಿಬೆಟ್ಟಿನ ಎಲ್ಲ ಪ್ರಜೆಗಳನ್ನೂ ಕಾರ್ಯೋನ್ಮುಖರಾಗುವಂತೆ ಮಾಡಿತು. ಪರಂಪರಾನುಗತವಾಗಿ ಬೆಳೆದು ಬಂದಿದ್ದ ಪದ್ಧತಿಗಳನ್ನು ತ್ಯಜಿಸಿ, ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ಸುಧಾರಣೆಗಳನ್ನು ಜಾರಿಗೆ ತರಲಾಯಿತು. ಇದರ ಪರಿಣಾಮವಾಗಿ ಹಲವರು ದಂಗೆ ಎದ್ದರು. ಚೀನೀ ಸರ್ಕಾರ ಆ ದಂಗೆಯನ್ನು ಅಡಗಿಸಬೇಕೆಂದು ದಲೈ ಲಾಮಗೆ ಆದೇಶ ನೀಡಿತಾದರೂ ದಲೈ ಅದಕ್ಕೆ ಒಪ್ಪಲಿಲ್ಲ. ಚೀನೀ ಸರ್ಕಾರ ದಲೈ ಲಾಮನ ನಿವಾಸವನ್ನೂ ದ್ರೆಪುಂಗ್ ಮತ್ತು ಸೆರಾ ಸಂಘಗಳನ್ನೂ ಮುತ್ತಿ ಹಾನಿ ಉಂಟು ಮಾಡಿತು. ದಲೈ ಲಾಮ ತನ್ನ ಪರವಾರದೊಂದಿಗೂ ಮೂವರು ಸಂಪುಟ ದರ್ಜೆಯ ಮಂತ್ರಿಗಳು ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೂ ಭಾರತಕ್ಕೆ ಓಡಿಹೋದರು.ಭಾರತ ಸರ್ಕಾರ ಅವರಿಗೆ ರಾಜಕೀಯ ಆಶ್ರಯು ನೀಡಿತು. ಚೀನೀ ಸರ್ಕಾರ ಲಾಸದ ಸರ್ಕಾರವನ್ನು ಅಂತ್ಯಗೊಳಿಸಿ ಪಂಚೆನ್ ಲಾಮನನ್ನು ಪೀಕಿಂಗಿನ ರಾಷ್ಟ್ರೀಯ ಪ್ರಜಾಸರ್ಕಾರದ ಉಪಾಧ್ಯಕ್ಷರನಾಗಿ ನೇಮಿಸಿ ಲಾಸಕ್ಕೆ ಕಳುಹಿಸಿತು (1959). ವಿಶ್ವಸಂಸ್ಥೆ ಚೀನೀ ಸರ್ಕಾರದ ಈ ಕ್ರಮವನ್ನು ಖಂಡಿಸಿತಾದರೂ ಅದರಿಂದ ಏನೂ ಪರಿಣಾಮ ಆಗಲಿಲ್ಲ. ಟಿಬೆಟ್ಟು ಚೀನೀ ಸಮಾಜವಾದಿ ಗಣರಾಜ್ಯದ ಸ್ವಯಮಾಡಳಿತ ಪ್ರದೇಶವಾಯಿತು.

ಟಿಬೆಟನ್ ಕಲೆ

[ಬದಲಾಯಿಸಿ]

ಭಾರತೀಯ ಮತ್ತು ಚೀನೀ ಕಲೆಗಳು ಟಿಬೆಟಿನ ಕಲೆಗೆ ಮೂಲ ಆಕರಗಳಾಗಿದ್ದರೂ ಆ ದೇಶ ತನ್ನತನವನ್ನು ಉಳಿಸಿಕೊಂಡಿದೆ. ಕಾಶ್ಮೀರಿ ಕಲೆ ಪಾಲ ಮತ್ತು ಸೇನಾ ಶೈಲಿಗಳು ಭಾರತದಲ್ಲಿ ಕುಂಠಿತವಾಗಿ ಕಣ್ಮರೆಯಾದ ಮೇಲೆಯೂ ಟಿಬೆಟಿನಲ್ಲಿ ಅವನ್ನು ಬೆಳೆಸಿಕೊಂಡು ಬರಲಾಗಿದೆ. ಟಿಬೆಟನ್ ಕಲೆ ಮುಖ್ಯವಾಗಿ ಮತಗಳಿಗೆ ಸಂಬಂಧಿಸಿದ್ದು. ಬೌದ್ಧಮತ ಭಾರತದಿಂದ ಇಲ್ಲಿಗೆ ಬಂದು ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುವುದಕ್ಕೆ ಮುಂಚೆ ಇಲ್ಲಿಯೇ ಇದ್ದ ಮತಕ್ಕೆ ಬಾನ್ ಎಂದು ಹೆಸರು. ಈ ಮತಕ್ಕೆ ಸಂಬಂಧಿಸಿದ ಕಲೆಗೆ ಬಾನ್‍ಪೊ ಶೈಲಿ ಎನ್ನುತ್ತಾರೆ. ಈ ಬಾನ್‍ಪೊ ಮಾದರಿಯ ದೇವಾಲಯಗಳ ಆಕಾರ ಹೇಗಿತ್ತೆಂಬುದು ತಿಳಿಯದಾದರೂ ಪಶ್ವಿಮ ಟಿಬೆಟ್‍ನಲ್ಲಿರುವ ಕಿಂಗ್ ಲುಂಗ್ ಎಂಬಲ್ಲಿರುವ ಗುಂಡಾದ ಕಟ್ಟಡವನ್ನು ಆ ಶೈಲಿಯದೆಂದು ಸೂಚಿಸುತ್ತಾರೆ. ಈ ಕಾಲದ ದೊರೆಗಳ ಗೋರಿದಿಬ್ಬಗಳು ಬೇರೆ ಬೇರೆ ಪ್ರಮಾಣಗಳಲ್ಲಿದ್ದರೂ ಪ್ರತಿಯೊಂದರಲ್ಲೂ ಒಂದು ಸಮಾಧಿ ಕೋಣೆಯಿದ್ದು ಅದರೆ ಮೇಲೆ ನಿಲ್ಲಿಸಿರುವ ಕಂಬವೊಂದು ಮಾತ್ರ ಮೇಲೆ ಗೋಚರಿಸುತ್ತದೆ. ಈ ಕಂಬಗಳ ಮೇಲೆ ಶಾಸನಗಳೂ ಚೀನೀ ಮಾದರಿಯ ಅಲಂಕರಣಗಳೂ ಇರುವುದುಂಟು. ಲ್ಹೇ ಎಂಬಲ್ಲಿರುವ ದುರ್ಗ ಮುಖ್ಯವಾದ ವಾಸ್ತು ಮಾದರಿಗಳಲ್ಲೊಂದು. ಈ ಬೃಹತ್ ಕಟ್ಟಡಗಳನ್ನು ಹಸಿ ಇಟ್ಟಿಗೆಯಿಂದ ಕಟ್ಟಿ ನಯಗೊಳಿಸಿ ಸುಣ್ಣ ಬಳಿಯಲಾಗಿರುತ್ತದೆ. ಬಾನ್‍ಪೊ ಶಿಲ್ಪ ಮಾದರಿಯ ವಿಷಯ ಹೆಚ್ಚು ತಿಳಿದು ಬಂದಿಲ್ಲ. ಆ ಕಾಲಕ್ಕೆ ಸೇರಿದುದೆಂದು ಸೂಚಿಸಬಹುದಾದ ಕೆಲವು ಶಿಲ್ಪ ಮಾದರಿಗಳು ಚೀನೀ ಶಿಲ್ಪ ಮಾದರಿಗಳಿಂದ ಪ್ರಭಾವಿತಗೊಂಡಿವೆ. ಬಾನ್‍ಪೊ ದೇವಾಲಯಗಳಿರುವ ಚಿತ್ರಕಲೆ ಹೆಚ್ಚಾಗಿ ಕಿರುಚಿತ್ರಣಗಳನ್ನು ಹೊಂದಿದ್ದು ಪೌರಾಣಿಕ ಕತೆಗಳನ್ನು ಚಿತ್ರಿಸುತ್ತವೆ. ಅವುಗಳಲ್ಲಿ ಕಥಾನಾಯಕರ ಚಿತ್ರಗಳು ಕೂಡ ಕಿರುಪ್ರಮಾಣದಲ್ಲೇ ಇರುತ್ತವೆ. ಇದನ್ನು ಬಾನ್‍ಪೊ ಸಂತ ಜೆನ್ ರಾಬ್ ಮಿಟೊನ ಕತೆಯನ್ನು ವಿವರಿಸಲು ಚಿತ್ರದಲ್ಲಿ ಕಾಣಬಹುದು.

ಬೌದ್ಧಧರ್ಮ ಇಲ್ಲಿ ವ್ಯಾಪಕಾಗಿ ಹರಡಿದ ಮೇಲೆ ಭಾರತೀಯ ಕಲೆಗಳಿಂದ ಪ್ರಭಾವಿತಗೊಂಡ ಕಲೆಗಳು ವಿಶೇಷವಾಗಿ ಪ್ರವರ್ಧಮಾನಕ್ಕೆ ಬಂದವು. ಸುಮಾರು 7ನೆಯ ಶತಮಾನದಲ್ಲಿದ್ದ ಸ್ರಾಂಗ್ ಬೀನ್ ಸ್ಗಾಮ್ ಪೋ ಎಂಬುವನೇ ಟಿಬೆಟ್‍ನ ಮೊದಲ ಬೌದ್ಧ ದೊರೆಯೆಂಬ ಐತಿಹ್ಯವಿದೆ.

ಗೋಡೆ, ತಟ್ಟು, ರೇಷ್ಮೆ ಬಟ್ಟೆ ಅಥವಾ ಮರದ ಹಲಗೆಗಳ ಮೇಲೆ ಮೂಡಿಸಿರುವ ವರ್ಣಚಿತ್ರಗಳು ಟಿಬೆಟ್ಟಿನಲ್ಲಿ ಅತ್ಯಂತ ಹೊರವಾಗಿದ್ದು ಇತರ ಕಲೆಗಳನ್ನು ಮೀರಿಸಿವೆ. ಇವುಗಳಲ್ಲಿ ಮುಖ್ಯವಾಗಿ ಬುದ್ಧ, ಬೋಧಿಸತ್ತ್ವರು, ಗುರುಗಳು-ಇವರನ್ನು ಚಿತ್ರಿಸಿರುವುದರೊಂದಿಗೆ ತಾಂತ್ರಿಕ ಘಟನೆಗಳನ್ನು ಹೇರಳವಾಗಿ ಚಿತ್ರಿಸಲಾಗಿದೆ. ಟಿಬೆಟ್ ಚರಿತ್ರಕಾರ ತಾರಾನಾಥ ತಿಳಿಸಿರುವಂತೆ ಈ ಚಿತ್ರಕಾರರು ಭಾರತೀಯ ಚಿತ್ರಕಾರರಿಂದ ತರಬೇತಿ ಹೊಂದಿದ್ದರು. ಆದ್ದರಿಂದಲೇ ಈ ಚಿತ್ರಗಳಲ್ಲಿ ಭಾರತೀಯ ಸಂಪ್ರದಾಯದ ಛಾಯೆ ಇದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವುದಾದರೆ ಅಜಂತಾ ಸಂಪ್ರದಾಯದ ಛಾಯೆಯನ್ನು ಮುಖ್ಯವಾಗಿ ಅವಲೋಕಿತೇಶ್ವರ, ಕ್ಷಿತಿಗರ್ಭರ ಚಿತ್ರಗಳಲ್ಲಿ ಗುರುತಿಸಬಹುದು. ಮುಂದೆ ನೇಪಾಳೀ ಶೈಲಿಯ ಪ್ರಭಾವ ಹೆಚ್ಚಾಯಿತು. ಹೀಗೆ ಬೇರೆಬೇರೆ ಪ್ರಭಾವಗಳು ಟಿಬೆಟ್ ಚಿತ್ರಕಲೆಯ ಮೇಲೆ ಬಿದ್ದರೂ ಅದು ತನ್ನದೇ ಆದ ಕೆಲವು ವೈóóಶಿಷ್ಟ್ಯಗಳನ್ನು ಉಳಿಸಿಕೊಂಡು ಬಂದಿತು. ಇದರಲ್ಲಿ ಕಲಾದೃಷ್ಟಿಗಿಂತ ಮತಪ್ರಕ್ರಿಯೆಗಳ ಪ್ರಕಟಣೆಗೇ ಪ್ರಾಧಾನ್ಯ. ಆರಾಧನೆಯ ಪ್ರತೀಕವಾಗಿ ಚಿತ್ರರಚನೆಯಾದ್ದರಿಂದ ಇವುಗಳಲ್ಲಿ ಚಿತ್ರಕಾರರ ಭಾವಾಭಿವ್ಯಕ್ತಿಗಿಂತ ಶಾಸ್ತ್ರ ರೀತಿಯ ರಚನೆ ಮುಖ್ಯವಾಗಿದ್ದು ಕಟ್ಟುಪಾಡುಗಳು ಹೆಚ್ಚು. ಚಿತ್ರಗಳಲ್ಲಿ ಗಾಢವರ್ಣ ಸಂಯೋಜನೆ ಎದ್ದು ಕಾಣುತ್ತದೆ. ಇವುಗಳಲ್ಲಿ ಬಣ್ಣಕ್ಕೆ ಹೆಚ್ಚು ಅರ್ಥವಿದೆ. ಬುದ್ಧರು ಹಾಗೂ ಬೋಧಿಸತ್ತ್ವರಿಗೆ ಸಂಬಂಧಿಸಿದ ಇತರ ದೇವತೆಗಳು ಒಬ್ಬೊಬ್ಬರಿಗೂ ಒಂದೊಂದು ಗೊತ್ತಾದ ಬಣ್ಣವಿರುವುದರಿಂದ ಬಣ್ಣದ ಆಯ್ಕೆಯಲ್ಲಿಯೂ ಚಿತ್ರಕಾರ ನಿಸ್ಸಹಾಯಕ. ಕಟ್ಟುನಿಟ್ಟಾಗಿ ಈ ಪದ್ಧತಿಯನ್ನು ಪಾಲಿಸಬೇಕಾದುದರಿಂದ ಭಾರತೀಯ ವ್ಯಕ್ತಿಚಿತ್ರಕಲೆಯಲ್ಲಿ ಭಾವಾಭಿವ್ಯಂಜನೆಗೆ ದೊರೆತಿರುವಷ್ಟು ಅವಕಾಶ ಇಲ್ಲಿ ಇವನಿಗಿಲ್ಲ. ಆದರೂ ಚಿತ್ರವಿಚಿತ್ರವಾದ ಅಲಂಕರಣಗಳನ್ನು ತುಂಬಿಸುವುದರಲ್ಲಿ ಚಿತ್ರಕಾರನಿಗೆ ಸ್ವಾತಂತ್ರ್ಯವಿದ್ದುದರಿಂದ ಟಿಬೆಟ್ಟಿನ ಚಿತ್ರಕಲೆಯಲ್ಲಿ ಅಲಂಕರಣಕಲೆ, ಸೂಕ್ಷ್ಮ ಚಿತ್ರಣಕಲೆ ಹೆಚ್ಚು ನವುರಾಗಿ ಬೆಳೆದುವು. ಟಿಬೆಟ್ಟಿನ ಜನಜೀವನ, ಪ್ರಕೃತಿ ಚಿತ್ರಣ, ಹಸಿರು ಹುಲ್ಲುಗಾವಲು, ಜೂಜೋಡುವ ಕುದುರೆಸವಾರರು, ಉನ್ನತ ಪರ್ವತಶಿಖರಗಳು, ಅನಂತನೀಲಾಕಾಶದಲ್ಲಿ ತೇಲಾಡುವ ಮೋಡಗಳು-ಇವುಗಳಲ್ಲಿ ತನ್ನ ಪ್ರತಿಭೆಯನ್ನು ಚಿತ್ರಕಾರ ಸೂರೆಗೈದಿದ್ದಾನೆ. ಈ ರೀತಿಯ ಚಿತ್ರಗಳು ಸೊಸ್ಕ್ಯಪನ ಕಾಲದಲ್ಲಿಯೇ ಕಂಡುಬರುತ್ತವೆ ಮತ್ತು ಇವುಗಳಲ್ಲಿ ಎದ್ದು ಕಾಣುವ ಚೀನೀಕಲೆಯ ಪ್ರಭಾವ ಮುಂದೆ ಬೆಳೆಯುತ್ತ ಹೋಗುತ್ತದೆ. ಆದರೂ ಚೀನೀ ಚಿತ್ರಗಳಲ್ಲಿರುವ ನವುರು ಇಲ್ಲಿ ಕಡಿಮೆಯೆ. ಈ ಪುರಾತನ ಚಿತ್ರಗಳ ಮತ್ತೊಂದು ವೈಶಿಷ್ಟ್ಯವೆಂದರೆ ಚಿತ್ರಿತ ಮೇಲ್ಮೈಯ ಯಾವ ಭಾಗವನ್ನೂ ಬಿಡದೆ ಚಿತ್ರಗಳಿಂದ ಗಿಡಿದು ತುಂಬಿರುವುದು. ಇದರಿಂದ ಈ ಚಿತ್ರಕಲೆಗೆ ಮೂಲವಾದ ಚೀನೀ ಅಥವಾ ಭಾರತೀಯ ಚಿತ್ರಗಳೊಂದಿಗೆ ಇವನ್ನು ಹೋಲಿಸಲಾಗದು. ದೊಡ್ಡದಾದ ದೇವಾಲಯ ಅಥವಾ ಅರಮನೆಗಳ ಭಿತ್ತಿಚಿತ್ರಗಳ ಮೇಲೆ ಚಿತ್ರಕಾರನ ಹೆಸರು ಒಮ್ಮೊಮ್ಮೆ ಇರುವುದುಂಟು.

ಟಿಬೆಟ್ಟಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಗ್ರಂಥಗಳ ಚಿತ್ರಿತಹಸ್ತಪ್ರತಿಗಳು ಭಾರತ ಮತ್ತು ನೇಪಾಳೀ ಮಾದರಿಗಳನ್ನನುಸರಿಸಿವೆ. ಮೇಲ್ಪುಟಗಳಲ್ಲಿ ಮಾತ್ರವಲ್ಲದೆ ಪುಟಪುಟಗಳಲ್ಲಿಯೂ ಕಿರುಚಿತ್ರಗಳನ್ನು ಕಾಣಬಹುದು. ಈ ಹಸ್ತಪ್ರತಿಗಳಿಗೆ ರಕ್ಷಣಾಕವಚಗಳಾಗಿ ಉಪಯೋಗಿಸಿರುವ ಮರದ ಹಲಗೆಗಳ ಮೇಲೆ ತೆಳುವಾಗಿ ನವುರಾಗಿ ಮೂಡಿರುವ ಉಬ್ಬು ಕಂಡರಣೆಯಲ್ಲಿ ಅಸಾಧಾರಣವಾದ ಪರಿಕರ್ಮಕೌಶಲವನ್ನು ಕಾಣಬಹುದು. ಇವುಗಳಿಗಾಗಿ ಭಾರತ ನೇಪಾಳಗಳಿಂದ ಮಾದರಿಗಳನ್ನು ಇಲ್ಲಿಗೆ ತರಿಸಿಕೊಂಡುದೂ ಉಂಟು.

ಉಬ್ಬಿದಂತಿರುವ ಸೂಡು ಚಿತ್ರಕಲೆಯನ್ನೂ ಟಿಬೆಟ್ಟಿನ ಚಿತ್ರಕಾರರು ಬಳಸಿದ್ದಾರೆ. ಇವು ಚಪ್ಪಟೆ ಚಿತ್ರಗಳಿಗಿಂತ ಹೆಚ್ಚು ಸುಂದರವಾಗಿದ್ದು ಮುಖಭಾವಗಳು ಎದ್ದು ಕಾಣುವುದಲ್ಲದೆ ಹೂಬಳ್ಳಿ ಸುರುಳಿಗಳಲ್ಲಿ ಬಣ್ಣಗಳ ಆಯ್ಕೆ ನವೀನವಾಗಿದೆ. ಪುಷ್ಟಾಲಂಕರಣಗಳು ನವುರಾಗಿವೆ. ಪವಿತ್ರಸ್ಥಳಗಳನ್ನು ಚಿತ್ರಿಸುವುದರಲ್ಲಿ ಈ ಚಿತ್ರಕಾರರಿಗೆ ಆಸಕ್ತಿ ಹೆಚ್ಚು. ಲಾಸದಲ್ಲಿನ ದೇವಮಂದಿರಗಳನ್ನು ಚಿತ್ರಿಸಿರುವ ಇಂಥ ಒಂದು ಚಿತ್ರದಲ್ಲಿ ಸಣ್ಣಸಣ್ಣ ಗುಡಿಗಳನ್ನೂ ವಿವರಪೂರ್ಣವಾಗಿ ಚಿತ್ರಿಸಿರುವುದನ್ನು ನೋಡಬಹುದು. ಟಿಬೆಟ್ಟಿನಲ್ಲಿ ಹೇರಳವಾಗಿ ಕಾಣಸಿಗುವುವೆಂದರೆ ಲೋಹಮೂರ್ತಿಗಳು. ಇವು ಸಾಮಾನ್ಯವಾಗಿ ಮಿಶ್ರಲೋಹದಿಂದ ಮಾಡಿರುವ ಟೊಳ್ಳುಮೂರ್ತಿಗಳು. ಅಷ್ಟ ಧಾತುಗಳಿಂದ ಮಾಡಿದ ಬೆಲೆಬಾಳುವ ಮೂರ್ತಿಗಳೂ ಉಂಟು. ಲೋಹಮೂರ್ತಿಗಳಿಗೆ ಗಿಲೀಟುಮಾಡುವ ಪದ್ಧತಿ ಹೆಚ್ಚು ವ್ಯಾಪಕವಾಗಿತ್ತು. ಶಿಲಾಮೂರ್ತಿಗಳು ಕಡಿಮೆಯೇ. ಗಚ್ಚಿನ ಮೂರ್ತಿಗಳೂ ಮರದ ಭೂಮಿಕೆಯ ಮೇಲೆ ಮಣ್ಣು ಹುಲ್ಲು ಬೆರೆತ ಜೇಡಿಯಿಂದ ಮಾಡಿ ಆಕಾರ ಕೊಟ್ಟು ಗಚ್ಚಿನ ತೆಳು ಲೇಪನದ ಮೇಲೆ ಬಣ್ಣಬಳಿದು ಮೂರ್ತಿಗಳೂ ಇವೆ.

ಬೌದ್ಧಮತದಂತೆ ಶಿಲ್ಪವೂ ಭಾರದಿಂದಲೇ ಇಲ್ಲಿಗೆ ಬಂದುದು ಸರಿಯಷ್ಟೆ. ಅನೇಕ ಮೂರ್ತಿಗಳನ್ನು ಭಾರತಕ್ಕೆ ಭೇಟಿಕೊಟ್ಟಿದ್ದ ಭಿಕ್ಷುಗಳು ಹಾಗೂ ಇತರರು ತಮ್ಮೊಡನೆ ತಂದರೆಂಬ ಹೇಳಿಕೆ ಇದೆ. ಟಿಬೆಟ್ಟಿನ ಅತ್ಯಂತ ಪ್ರಾಚೀನವಾದ ಬೌದ್ಧ ಮೂರ್ತಿ ಮಗಧದಿಂದ ಬಂದುದೆಂದು, ಅದು ಚೀನಕ್ಕೆ ಮೊದಲು ಬಂದಿದ್ದು ಅಲ್ಲಿನ ರಾಜಕುವರಿಯೊಬ್ಬಳು ಟಿಬೆಟಿನ ಮೊದಲ ಬೌದ್ಧ ದೊರೆಯನ್ನು ಮದುವೆಯಾದಾಗ ಅದನ್ನು ಇಲ್ಲಿಗೆ ತಂದುದಾಗಿ ಒಂದು ಐತಿಹ್ಯವಿದೆ. ಲಾಸದ ಜೊಖಾಂಗ್‍ನಲ್ಲಿ ಈಗಲೂ ಆ ಮೂರ್ತಿಯಿದ್ದು ಬೌದ್ಧಶಿಲ್ಪಗಳಲ್ಲಿ ಶ್ರೇಷ್ಠವಾದುದೆಂದು ಹೆಸರು ಪಡೆದಿದೆ. ಹತ್ತಿರ ಹತ್ತಿರದ ನೆರಿಗೆಯನ್ನುಳ್ಳ ಉಡುಪನ್ನು ತೊಟ್ಟಿರುವಂತೆ ತೋರಿಸಿರುವುದೇ ಇದರ ವೈಶಿಷ್ಟ್ಯ. ಜೋಕಾನ್‍ನಲ್ಲಿರುವ ಅವಲೋಕಿತೇಶ್ವರನ ಮೂರ್ತಿಯನ್ನು ದಕ್ಷಿಣ ಭಾರತದಿಂದ ಟಿಬೆಟಿಗೆ ತಂದಿರಬೇಕೆಂಬ ಅಭಿಪ್ರಾಯವಿದೆ. ಕಾಶ್ಮೀರದಿಂದ ಹಲವು ಶಿಲ್ಪಿಗಳು ಟಿಬೆಟ್ಟಿಗೆ ಹೋಗಿ ಕೆಲಸ ಮಾಡಿರುವುದೂ ಉಂಟು. ಹಾಗೆಯೇ ಬ್ರಾನ್‍ಯಾನಲ್ಲಿರುವ ಕೆಲವು ಲೋಹ ಮೂರ್ತಿಗಳು ಪಾಲಶೈಲಿಯಲ್ಲಿವೆ. ಮುಂದೆ ಟಿಬೆಟ್ಟಿನ ಶಿಲ್ಪ ನೇಪಾಳೀ ಮಾದರಿಗೆ ಹೆಚ್ಚು ಹೊಂದಿಕೊಂಡಿತು. ಲಕ್ ಎಂಬ ಊರು ಮೂರ್ತಿಗಳನ್ನು ತಯಾರಿಸುವ ಕೇಂದ್ರವಾಗಿತ್ತು. ಚಿತ್ರಕಲೆಯಂತೆ ಮೂರ್ತಿಶಿಲ್ಪವೂ ಹೆಚ್ಚು ಸಂಪ್ರದಾಯ ಬದ್ಧವಾಗಿದ್ದುದರಿಂದ ಬುದ್ಧನ ಮೂರ್ತಿಗಳಲ್ಲಿ ಅಲೌಕಿಕತೆಗಿಂತ ಸಾಂಪ್ರದಾಯಿಕವಾಗಿ ಸೆಡೆತುಕೊಂಡಿರುವ ಲಕ್ಷಣಗಳು ಹೆಚ್ಚು. ಆದರೆ ತಾಂತ್ರಿಕ ದೇವತೆಗಳಲ್ಲಿ ಹೆಚ್ಚು ಕ್ರಿಯಾಶೀಲತೆಯನ್ನು ಕಾಣಬಹುದು. ದ್ವಾರಪಾಲಕರ ಮೂರ್ತಿಗಳಂಥ ಕೆಲವು ಮೂರ್ತಿಗಳಲ್ಲಿ ಚೀನೀಕಲೆಯ ಪ್ರಭಾವ ವ್ಯಕ್ತವಾಗುತ್ತದೆ. ಆದರೆ ತಾಂತ್ರಿಕ ದೇವತೆಗಳ ಮೂರ್ತಿಗಳನ್ನು ರಚಿಸುವುದರಲ್ಲಿ ನೇಪಾಳೀ ಶೈಲಿಯ ಪ್ರಭಾವವಿದ್ದರೂ ತನ್ನದೇ ಆದ ಟಿಬೆಟ್ ಶೈಲಿಯನ್ನು ಅವುಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಮಹಾಯಾನ ವಜ್ರಯಾನಗಳಿಗೆ ಸಂಬಂಧಿಸಿದಂತೆ ಅನೇಕ ಮೂರ್ತಿಗಳಿದ್ದು ಅವುಗಳ ರಚನೆ ರೀತಿ, ರೂಪ, ಭಾವ ಮುಂತಾದ ಮೂರ್ತಿವಿವರವನ್ನು ತಿಳಿಸುವ ಗ್ರಂಥಗಳ ಕಟ್ಟುಪಾಡಿಗೆ ಒಳಗಾಗಿದೆ. ಹೇರಳವಾಗಿ ರಚಿತವಾಗಿರುವ ಮೂರ್ತಿಗಳೆಂದರೆ ಅವಲೋಕಿತೇಶ್ವರ, ತಾರ ಮತ್ತು ಮಂಜಶ್ರೀ. ಅವಲೋಕಿತೇಶ್ವರನ ಹಲವು ಬಗೆಯ ಮೂರ್ತಿಗಳುಂಟು. ನಾಲ್ಕು ಕೈಗಳಿರುವ ಮೂರ್ತಿಯಿಂದ ಹಿಡಿದು ಹನ್ನೊಂದು ತಲೆಗಳು, ಸಹಸ್ರಬಾಹುಗಳು, ಅಥವಾ ಸಹಸ್ರನೇತ್ರಗಳುಳ್ಳ ಮೂರ್ತಿಯವರೆಗೂ ಬಗೆಬಗೆಯಾದ ಮೂರ್ತಿಗಳುಂಟು. 10 ರಿಂದ 12 ಮೀಟರುಗಳಷ್ಟು ಎತ್ತರವಾದ ಬೋಧಿಸತ್ತ್ವ ಅವಲೋಕಿತೇಶ್ವರನ ಹನ್ನೊಂದು ತಲೆಗಳುಳ್ಳ ಲೋಹಮೂರ್ತಿಗಳು ಅನೇಕ ಇವೆ. ಟಿಬೆಟಿನ ಕಲಾಕಾರರು ವರ್ಣಚಿತ್ರಗಳಿಗಿಂತ ಶಿಲ್ಪಗಳಲ್ಲಿ ಮಾನವ ಪ್ರತಿಕೃತಿಗಳನ್ನು ರೂಪಿಸುವುದರಲ್ಲಿ ಸಿದ್ಧಿಪಡೆದಿದ್ದಾರೆ. ಇಲ್ಲಿ ದೊರೆತಿರುವ ಬೌದ್ಧಯತಿಗಳ, ಗುರುಗಳ ಮೂರ್ತಿಶಿಲ್ಪ ಅಸಂಖ್ಯಾತ. ದೇವತೆಗಳ ಮೂರ್ತಿಗಳಿಗಿಂತ ಈ ಪ್ರತಿಕೃತಿಗಳು ಹೆಚ್ಚು ಸ್ವಾಭಾವಿಕವಾಗಿವೆ. ಇಂಥ ಪ್ರತಿಮೆಗಳನ್ನು ಜೇಡಿ ಅಥವಾ ಗಚ್ಚಿನಲ್ಲಿಯೂ ಮಾಡಿ ಅವಕ್ಕೆ ಬಣ್ಣಹಾಕಿರುವುದೂ ಉಂಟು. ಸಾಪರಂಗ್‍ನಲ್ಲಿರುವ ಕೆಲವು ದೇವಾಲಯಗಳಲ್ಲಿ ಈ ರೀತಿಯ ಸುಂದರವಾದ ಮೂರ್ತಿಗಳನ್ನು ನೋಡಬಹುದು. ಮತ್ತು ಇದೇ ರೀತಿ ಚಾಸಾದ ದೇವಾಲಯದಲ್ಲಿಯೂ ಸಾಲಾಗಿ ನಿಂತಿರುವ ಭವ್ಯವಾದ ಉಡಿಗೆಯನ್ನು ಧರಿಸಿರುವ ಬೋದಿಸತ್ತ್ವ ಮೂರ್ತಿಗಳ ಸಾಲೇ ಇವೆ. ಇವು ಪ್ರಮಾಣಬದ್ಧವಾಗಿವೆ; ಸಣ್ಣ ಸಣ್ಣ ಅಲಂಕರಣಗಳನ್ನು ಇವುಗಳಲ್ಲಿ ಹೆಚ್ಚು ಶ್ರದ್ಧೆಯಿಂದ ಪೂರೈಸಲಾಗಿದೆ. ಅತ್ಯಂತ ಹೊಳಪು ಬರುವಂತೆ ನಯಗೊಳಿಸಿರುವ ಈ ಮೂರ್ತಿಗಳು ಟಿಬೆಟಿನ ಶಿಲ್ಪಕಲೆಗೆ ಒಳ್ಳೆಯ ಮಾದರಿಗಳು, ಪೂರ್ಣರೂಪದ ಶಿಲಾಮೂರ್ತಿಗಳು ಇಲ್ಲಿ ಅಪರೂಪವಾಗಿರುವುದಕ್ಕೆ ಕಾರಣ ಭಾರತದಿಂದ ಸುಲಭವಾಗಿ ಸಾಗಿಸಬಹುದಾದ ಲೋಹಮೂರ್ತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಗೆ ತಂದುದು ಮತ್ತು ಅವುಗಳನ್ನೇ ಮಾದರಿಯಾಗಿಟ್ಟುಕೊಂಡು ಲೋಹಶಿಲ್ಪಗಳನ್ನು ಬೆಳೆಸಿದುದು.

ಲಾಸದಲ್ಲಿರುವ ರೋಮಾಚ ಮತ್ತಿತರ ದೇವಾಲಯಗಳನ್ನು ಸ್ರಾಂಸ್ಟಾನ್ ಪೊ ಎಂಬ ಬೌದ್ಧ ದೊರೆ ಮತ್ತು ಅವನ ರಾಣಿಯರು ಕಟ್ಟಿಸಿದರೆಂಬ ಐತಿಹ್ಯ ಇದೆ. ಮಂಡಲಾಕಾರದ ತಲವಿನ್ಯಾಸವಿರುವ ಈ ದೇವಾಲಯಗಳ ಭಾರತದ ಓದಂತಿ ಪುರದ ದೇವಾಲಯಗಳ ಮಾದರಿಯಲ್ಲಿರುವುದಾಗಿ ಹೇಳುತ್ತಾರೆ. ಈ ಕೆಲವು ದೇವಾಲಯಗಳಲ್ಲಿ ಅದೇ ಕಾಲದ ಭಿತ್ತಿಚಿತ್ರಗಳನ್ನು ನೋಡಬಹುದು. ಲಾಖಾನ್ ದೇವಾಲಯಗಳು ದೀರ್ಘ ಚತುರಸ್ರಾಕಾರದಲ್ಲಿದ್ದು ಬುದ್ಧನ ಅವಶೇಷಗಳಿಗಾಗಿ ನಿರ್ಮಿತವಾದವು. ದೊಡ್ಡ ದೇವಾಲಯಗಳ ಸುತ್ತಲೂ ಮಠಗಳುಂಟು. ಬೃಹತ್ ಆಕಾರದ ಲೋಹಮೂರ್ತಿಗಳಿಗಾಗಿ ಕಟ್ಟಿರುವ ದೇವಾಲಯಗಳು ಹಲವು ಅಂತಸ್ತುಗಳಲ್ಲಿದ್ದು ಆ ಮೂರ್ತಿಗಳನ್ನು ಬೇರೆ ಬೇರೆ ಹಂತಗಳಲ್ಲಿ ದರ್ಶನಮಾಡಲು ಅನುಕೂಲವಾಗಿವೆ.

ಭಾರತದ ಸ್ತೂಪದ ಮಾದರಿಯಲ್ಲಿರುವ ಕಟ್ಟಡಗಳು ಮಹಾಯಾನ ಬೌದ್ಧಮತ ಟಿಬೆಟಿನಲ್ಲಿ ಹರಡಿದಾಗ ಕಟ್ಟಿದುವು. ಬೃಹದಾಕಾರದಲ್ಲಿರುವ ಇವು ತಮ್ಮದೇ ಆದ ಶೈಲಿಯಲ್ಲಿದ್ದು ಉನ್ನತವಾದ ಜಗತಿಯ ಮೇಲೆ ನಿರ್ಮಿತವಾಗಿವೆ. ಕೆಲವು ವೇಳೆ ಈ ಜಗತಿಯಲ್ಲಿಯೇ ಒಂದು ಗುಡಿಯಿರುವುದೂ ಉಂಟು. ತುದಿಯಲ್ಲಿ ಗುಂಡಾದ ಗೊಮ್ಮಟ, ಆದರ ಮೇಲೆ ಛತ್ರಿಗಳೂ ಇರುತ್ತವೆ. ಚೌಕಾಕಾರದ ತಳವಿನ್ಯಾಸದ ಕಟ್ಟಡಗಳಲ್ಲಿ ಹೊರಗೋಡೆಗೂ ಒಳಗುಡಿಗೂ ನಡುವೆ ಪ್ರದಕ್ಷಿಣಾಪಥವೂ ಇರುವುದುಂಟು. ಇವುಗಳ ಮೇಲ್ಭಾಗದಲ್ಲಿ ಗಿಲೀಟುಮಾಡಿದ ತಾಮ್ರದ ಹೊದಿಕೆಯಿರುವುದು ಸಾಮಾನ್ಯ. ದುರ್ಗ ಹಾಗೂ ಅರಮನೆಗಳ ಬೃಹತ್ ಕಟ್ಟಡಗಳಲ್ಲಿ ವೈವಿಧ್ಯ ತರಲು ಗಚ್ಚಿನ ಅಚ್ಚ ಕೆಂಪು ಪಟ್ಟಿಗಳನ್ನು ಬಿಡಿಸಿರುವುದುಂಟು.

ಟಿಬೆಟ್ ಜನರ ಅಲಂಕಾರಪ್ರಿಯತೆಯ ಪರಿಣಾಮವಾಗಿ ಹಲವು ರೀತಿಯ ಕುಶಲಕಲೆಗಳು ಅಲ್ಲಿ ಬೆಳೆದುಬಂದಿವೆ. ತಾಮ್ರದ ಕೂಜಗಳು ಕತ್ತಿಯ ಹಿಡಿಗಳು ತಾಮ್ರದ ಚಹಪಾತ್ರೆಗಳು ಮುಂತಾದವುಗಳು ಮೇಲೆಲ್ಲ ನವುರಾಗಿ ನಾಜೂಕಾಗಿ ಅಲಂಕರಣಗಳನ್ನು ಕಂಡರಿಸಿರುವುದು ಇಲ್ಲಿನ ವೈಶಿಷ್ಟ್ಯ.

ಟಿಬೆಟ್ಟಿನ ಜನ ತಮ್ಮ ಭಾಷೆಯನ್ನು ಪೋಕೆ (Bod-Skei ) ಎಂದು ಕರೆಯುತ್ತಾರೆ. ಈ ಭಾಷೆ ಟಿಬೆಟ್ಟಿನ ಭೌಗೋಳಿಕ ಪರಿಧಿಗೆ ಮಾತ್ರ ಮಿತಗೊಂಡಿಲ್ಲ. ಪ್ರಾಚೀನ ಕಾಲದಲ್ಲಿ ಇದು ಏಷ್ಯದ ಪ್ರಸ್ಥಭೂಮಿಗಳೆಲ್ಲವುಗಳ ಪ್ರಚಲಿತಭಾಷೆಯಾಗಿತ್ತು. ಈ ದಿವಸದಲ್ಲಿ ಆಮ್‍ಡೋ ಮತ್ತು ಖಾಮ್‍ಗಳನ್ನೊಳಗೊಂಡ ಟಿಬೆಟ್ಟಿನ ಜೊತೆಗೆ ಸಿಕ್ಕಿಂ, ಭೂತಾನ, ಭಾರತದೇಶದ ಹಿಮಾಲಯಗಳು (ಲಡಾಕ್ ಮತ್ತು ಲೋಹಿತ್) ಹಾಗೂ ಮಂಗೋಲಿಯದ ಕೆಲವು ಭಾಗಗಳಲ್ಲಿ ಈ ಭಾಷೆಯನ್ನು ಜನರಾಡುತ್ತಾರೆ. ಇದರಲ್ಲಿ ಸ್ಥಳೀಯ ವ್ಯತ್ಯಾಸಗಳು ಕಂಡುಬರುತ್ತವೆ.

ಪೋಕೆಯ ಮೂಲಗಳೂ ಬಾಂಧವ್ಯಗಳೂ ಇನ್ನೂ ಖಚಿತವಾಗಿ ನಿರ್ಧಾರವಾಗಿಲ್ಲ. ತಿಬೆಟನ್ ಭಾಷೆ ಟಿಬೆಟೋ-ಬರ್ಮೀ ಪಂಗಡಕ್ಕೆ ಸೇರಿದೆಯೆಂದು ಊಹಿಸಲಾಗಿದೆ. ಈ ಪಂಗಡಕ್ಕೆ ಟಿಬೆಟನ್ ಉಪಭಾಷೆಗಳಲ್ಲದೆ, ಕೆಲವು ಹಿಮಾಲಯದ ಉಪಭಾಷೆಗಳೂ ಉತ್ತರ ಅಸ್ಸಾಂ ಹಾಗೂ ಭಾರತದ ಈಶಾನ್ಯದ ಗಡಿಯ ಪ್ರದೇಶಗಳ ಉಪಭಾಷೆಗಳೂ ಕಾಚಿನ್ ಮತ್ತು ಬರ್ಮೀ ಭಾಷೆಗಳೂ ಸೇರಿವೆ.

ಈ ಟಿಬೆಟೋ-ಬರ್ಮೀ ಭಾಷೆಗಳೂ ಸಹ ಚೀನೀ ಮತ್ತು ತೈ ಭಾಷೆಗಳಿಗೆ ಸಂಬಂಧಿಸಿವೆ ಎಂದು ಪರಿಭಾವಿತವಾಗಿವೆ. ಇವೆರಡು ಗುಂಪುಗಳನ್ನೂ ಒಟ್ಟಿಗೆ ಚೀನೀ-ಟಿಬೆಟನ್ ಎಂದು ಕರೆಯುತ್ತಾರೆ. ಉಚ್ಚಾರಣೆ, ಶಬ್ದಸಮೂಹ ಮತ್ತು ವ್ಯಾಕರಣಗಳಲ್ಲಿ ಹೊರತೋರಿಕೆಯಲ್ಲಿ ಸಾಮ್ಯ ಕಂಡುಬಂದರೂ ವಾಕ್ಯ ರಚನಾ ವಿಧಾನದಲ್ಲಿ ಇವೆರಡಕ್ಕೂ ಮೂಲಭೂತ ವ್ಯತ್ಯಾಸ ಗೋಚರಿಸುತ್ತದೆ.

ಏಳನೆಯ ಶತಮಾನದ ಮಧ್ಯಭಾಗದವರೆಗೆ, ಎಂದರೆ ಬೌದ್ಧಮತ (ಮಹಾಯಾನ ಮತ) ಟಿಬೆಟ್ಟಿನ ರಾಷ್ಟ್ರಧರ್ಮವಾಗಿ ಪರಿಣಮಿಸಿದ ವೇಳೆಗೆ ಪೋಕೆಗೆ ತನ್ನದಾದ ಯಾವ ಲಿಪಿಯೂ ಇರಲಿಲ್ಲ. ದೊಡ್ಡದಾಗಿ ಬೆಳೆದಿದ್ದ ಮಹಾಯಾನ ಸಾಹಿತ್ಯವನ್ನು ಅವಶ್ಯವಾಗಿ ಸಂಸ್ಕೃತದಿಂದ ಟಿಬೆಟನ್ ಭಾಷೆಗೆ ಪರಿವರ್ತಿಸಬೇಕಾಗಿ ಬಂದುದರಿಂದ ಅದಕ್ಕೊಂದು ಲಿಪಿ ಬೇಕಾಯಿತು. ಸಂಸ್ಕೃತ ಲಿಪಿಯ ಮಾದರಿಯಂತೆ ಒಂದು ಅಕ್ಷರಮಾಲಿಕೆ ರಚಿತವಾಯಿತು; ಕಾಶ್ಮೀರ, ನೇಪಾಳ ಮತ್ತು ಬಂಗಾಳಗಳಲ್ಲಿ ಬ್ರಾಹ್ಮೀಲಿಪಿ ಯಾವ ರೂಪವನ್ನು ಪಡೆಯಿತೋ ಆ ರೂಪವನ್ನು ಅನುಸರಿಸಿ ಲಿಪಿಗಳನ್ನು ಸಿದ್ಧಗೊಳಿಸಲಾಯಿತು (ಪಟ್ಟಿ ನೋಡಿ). ಟಿಬೆಟನ್ ಅಕ್ಷರಮಾಲಿಕೆಯ ಲಿಖಿತರೂಪ ಖೊಟನೀಸ್ ಲಿಪಿಗೆ ತುಂಬ ಋಣಿಯಾಗಿರುವಂತಿದೆ. ಈ ಲಿಪಿಯ ಮೂಲ ಸಹ ಭಾರತವೇ.

ಸಂಸ್ಕೃತಕ್ಕೂ ಟಿಬೆಟನ್‍ಗೂ ಇರುವ ಸಂಬಂಧ ಅಕ್ಷರಮಾಲಿಕೆ ಅಥವಾ ಲಿಪಿಯೊಂದರಲ್ಲೆ ಅಲ್ಲ, ಇದಕ್ಕಿಂತ ಹೆಚ್ಚಿನ ಬಾಂಧವ್ಯ ಇವುಗಳ ಸಾಹಿತ್ಯಗಳಲ್ಲಿ ಬೆಳೆದಿದೆ.

ಸಾಹಿತ್ಯ

[ಬದಲಾಯಿಸಿ]

ಟಿಬೆಟನ್ ಸಾಹಿತ್ಯದ ಯಾವ ವರ್ಣನೆಯಾದರೂ ಸರಿಯೆ ಅದನ್ನು ಕಂಜೂರ್ (bkah-hgyur) ಮತ್ತು ತಂಜೂರ್ (Bstan-hgyur) ಗಳಿಂದ ಪ್ರಾರಂಭಿಸಬೇಕಾಗುತ್ತದೆ. ಕಂಜೂರ್ ಎಂದರೆ ಬುದ್ಧನ ಮಾತು; ತಂಜೂರ್ ಎಂದರೆ ಶಾಸ್ತ್ರಗ್ರಂಥಗಳು. ಏಕೆಂದರೆ ಟಿಬೆಟನ್ ಜನರ ಜೀವನಕ್ರಮದ ಪ್ರತಿಯೊಂದು ಅಂಶವನ್ನೂ ಧರ್ಮ ವ್ಯಾಪಿಸಿದೆ ಎಂಬ ಒಂದು ಕಾರಣದಿಂದ ಮಾತ್ರವಲ್ಲದೆ ಈ ಪವಿತ್ರ ಸಾಹಿತ್ಯ ಸಂಗ್ರಹ ನಿಜವಾಗಿ ಒಂದು ವಿಶ್ವಕೋಶವಾಗಿದೆ ಎಂಬ ಇನ್ನೊಂದು ಕಾರಣವೂ ಇದೆಯಾದ್ದರಿಂದ. ಆದ್ದರಿಂದ ಈ ಸಂಗ್ರಹದಲ್ಲಿ ಆನುಷಂಗಿಕವಾಗಿ ಐಹಿಕ ವಿಷಯಗಳೂ ಇವೆ. ಉದಾಹರಣೆಗೆ, ವ್ಯಾಕರಣ, ಛಂದಸ್ಸು, ಕಲೆ, ವೈದ್ಯ, ರಾಜನೀತಿ ಮತ್ತು ನೀತಿ ಇವುಗಳ ಮೇಲೆಲ್ಲ ನಿರೂಪಣೆಗಳಿವೆ.

ಕಂಜೂರ್ ಅಥವಾ ಬುದ್ಧನ ಮಾತು ಅನೇಕ ಭಾಗಗಳಾಗಿ ವಿಂಗಡವಾಗಿದೆ. ವಿನಯ, ಪಾರಮಿತ, ಅವತಂಸಕ, ರತ್ನಕೂಟ, ಸೂತ್ರ, ನಿರ್ವಾಣ ಮತ್ತು ತಂತ್ರ ಇವು ಆ ಭಾಗಗಳು, ಕಂಜೂರ್ 100ರಿಂದ 108 ಸಂಪುಟಗಳಲ್ಲಿದೆ (ನರಥಂಗ್, ಶೋ, ಡೆರಗ್, ಮುಂತಾದ ಸಂಪಾದಿತ ಗ್ರಂಥಗಳ ಪ್ರಕಾರ).

ತಂಜೂರ್ ಅಥವಾ ಶಾಸ್ತ್ರಗಳನ್ನು ಮೂರು ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು: ಸ್ತೋತ್ರಗಳು, ತಂತ್ರವ್ಯಾಖ್ಯಾನಗಳು ಮತ್ತು ಇತರ ಕೃತಿಗಳು. ಕೊನೆಯವಲ್ಲಿ ಪ್ರಮಾಣ, ನ್ಯಾಯ, ವ್ಯಾಕರಣ, ಶಿಲ್ಪಶಾಸ್ತ್ರ, ರಾಜನೀತಿ ಮುಂತಾದವು ಇವೆ. ತಂಜೂರ್ ಮೊತ್ತದಲ್ಲಿ 225 ಸಂಪುಟಗಳಷ್ಟಿದೆ.

ಕಂಜೂರ್ ಮತ್ತು ತಂಜೂರ್‍ಗಳ 90% ಭಾಗ ಸಂಸ್ಕೃತ ಭಾಷಾಂತರ; ಅಪಭೃಂಶದ ಕೆಲವು ಭಾಷಾಂತರಗಳೂ ಇವೆ. ತಂಜೂರಿನಲ್ಲಿ ಟಿಬೆಟನ್ ಭಾಷೆಯ ಕೆಲವು ಸ್ವಂತ ಕೃತಿಗಳೂ ಇವೆ. ಈ ದೊಡ್ಡ ಸಂಗ್ರಹದಲ್ಲಿ ಅಚ್ಚು ಕಟ್ಟಾದ ವಿಷಯಾನುಕ್ರಮಣಿಕೆ ಮತ್ತು ವಿಷಯಗಳ ಅಕ್ಷರಾನುಕ್ರಮಣಿಕೆಗಳಿವೆ. ಯಾವ ವಿಷಯವನ್ನು ತಿಳಿದುಕೊಳ್ಳಬೇಕಾದರೂ ಟಿಬೆಟನ್ ವಿದ್ವಾಂಸ ಈ ಗ್ರಂಥವನ್ನು ಮೊದಲು ನೋಡುತ್ತಾನೆಂಬುದರಲ್ಲಿ ಆಶ್ಚರ್ಯವೇನಿಲ್ಲ. ಹಾಗೆಂದುಕೊಂಡು ಟಿಬೆಟನ್ ಸಾಹಿತ್ಯ ಬರೀ ಧರ್ಮಗ್ರಂಥಗಳಿಂದಲೂ ಭಾಷಾಂತರಗಳಿಂದಲೂ ತುಂಬಿದೆ ಎಂದು ಭಾವಿಸಿದರೆ ತಪ್ಪಾದೀತು.

ಅಲ್ಲಿನ ಸ್ವೋಪಜ್ಞಕೃತಿಗಳು ಇವಕ್ಕಿಂತ ಹೇರಳವಾಗಿಯೂ ವೈವಿಧ್ಯಪೂರ್ಣವಾಗಿಯೂ ಇವೆ. ಧಾರ್ಮಿಕ ಮತ್ತು ಐಹಿಕ ವಿಷಯಗಳ ಸುಪರಿಷ್ಕøತವಾಗಿ ವೃದ್ಧಿಹೊಂದಿದ್ದವಲ್ಲದೆ ಸಾಹಿತ್ಯದಲ್ಲಿ ಅವು ಬಹು ಪ್ರಶಸ್ತವಾದ ರೂಪಗಳನ್ನೂ ಪಡೆದಿವೆ. ಸಾಹಿತ್ಯದ ಮೊತ್ತದಲ್ಲಿ ಪದ್ಯ, ವ್ಯಾಕರಣ, ಛಂದಸ್ಸು, ಅಕ್ಷರ ಸಂಯೋಜನ, ಶಬ್ದಕೋಶ, ಅರ್ಥಕೋಶ ಮುಂತಾದವು ಸೇರಿವೆ. ಲೇಖನಗಳ ಅನೇಕ ಭಾಗ ಚರಿತ್ರೆ ಮತ್ತು ಭೂಗೋಳಕ್ಕೆ ಸಂಬಂಧಿಸಿದೆ, ಸಣ್ಣ ವಿಶ್ವಕೋಶಗಳು ಸಹ ಇವೆ. ಶಾಸ್ತ್ರ ಭಾಗದಲ್ಲಿ, ವೈದ್ಯ, ರಸಾಯನಶಾಸ್ತ್ರ, ಖನಿಜಶಾಸ್ತ್ರ ಜೊತೆಗೆ ಗಣಿತ ಮತ್ತು ಖಗೋಳ ವಿಜ್ಞಾನಗಳಿವೆ. ಭಾರತೀಯವಲ್ಲದೆ ಇತರ ಧಾರ್ಮಿಕ ಕೃತಿಗಳು ಸಾಮಾನ್ಯವಾಗಿ ಚೋಜಂಗ್ (ಛಿhos-hbಥಿuಟಿ), ಎಂದರೆ, ಮಹಾಯನ ಹರಡಿರುವ ವಿವಿಧಭಾಗಗಳಲ್ಲಿ ಧರ್ಮದ ಬೆಳೆವಣಿಗೆಯ ಇತಿಹಾಸ ಮತ್ತು ನಮ್‍ಥಾರ್ (ಖಟಿಚಿmಣhಚಿಡಿ), ಎಂದರೆ, ಸಾಧು ಅಥವಾ ಯೋಗಿಯೊಬ್ಬನ ಜೀವನ ಚರಿತ್ರೆ.. ಸುಂಬಂಗಳೇ (ಉsum-hbಥಿum) ಅವತಾರಗಳು. ಸಾಧುಗಳು ಮತ್ತು ಟಿಬೆಟನ್ ಮಾತಾಡುವ ಪ್ರದೇಶಗಳಲ್ಲಿನ ಪ್ರತಿಭಾವಂತ ವಿದ್ವಾಂಸರು ಇವರ ವಿಷಯಕವಾದ ಕೃತಿ ಸಂಗ್ರಹಗಳೇ ಭಾಷಾಂತರ ಸಾಹಿತ್ಯವನ್ನು ಸಂಖ್ಯೆಯಲ್ಲೂ ಪ್ರಮಾಣದಲ್ಲೂ ಮೀರಿಸಿವೆ.

ಮಿಲೇರಪನ ಕವಿತೆಗಳಲ್ಲದೆ ಮಿಕ್ಯಾವ ಸ್ವೋಪಜ್ಞಕೃತಿಗಳೂ ಟಿಬೆಟನ್ ಭಾಷೆಯಲ್ಲಿಲ್ಲದಿದ್ದರೂ ಸರಿಯೆ ಆ ಕವಿತೆಗಳೇ ಸಾಕು ಟಿಬೆಟನ್ ಸಾಹಿತ್ಯಕ್ಕೆ ಪ್ರಪಂಚದಲ್ಲಿ ಸನ್ಮಾನ್ಯ ಸ್ಥಾನವನ್ನು ದೊರಕಿಸಿಕೊಡುವುದಕ್ಕೆ.

ಟಿಬೆಟನ್ ಸಾಹಿತ್ಯ ನಿಧಿಗಳು ಸಂಸ್ಕೃತ ಸಾಹಿತ್ಯದ ಅಭ್ಯಾಸಕ್ಕೆ ವಿಶೇಷವಾಗಿ ಸಹಕಾರಿಯಾಗಿವೆ. ಭಾಷಾಂತರಗಳು ಮೂಲಕ್ಕೆ ಸರಿಯಾಗಿರುವುದರಿಂದ ಅವುಗಳ ಮೂಲಕ ಬೌದ್ಧ ಸಂಸ್ಕೃತ ಸಾಹಿತ್ಯವನ್ನೆಲ್ಲ ಸಂಪೂರ್ಣವಾಗಿ ಕಂಚೂರಿನಲ್ಲಿ ಅಳವಡಿಸಲಾಗಿದೆ. ಮತಕ್ಕೂ ಆಚಾರಕ್ಕೂ ಸಂಬಂಧಪಟ್ಟ ನಿಯಮಾವಳಿಗಳ ಪಾಠಗಳು, ಬುದ್ಧಚರಿತ, ಲಲಿತವಿಸ್ತಾರ, ಬೋಧಿಸತ್ತ್ವವಂದನ ಕಲ್ಪಲತಾ ಮುಂತಾದ ಗ್ರಂಥಗಳೂ ಹೀಗೆ ಸಂಪೂರ್ಣವಾಗಿ ಭಾಷಾಂತರಿತವಾದವು. ಜನರಿಗೆಲ್ಲರಿಗೂ ಸಮಸ್ತ ಪಂಥಗಳಲ್ಲೂ ಸರ್ವಕಾಲದಲ್ಲೂ ಬೇಕಾಗುವ ಅನಘ್ರ್ಯವಾದ ಆರು ಮಹಾಯಾನ ಭೂಷಣದ (ನಾಗಾರ್ಜುನ, ಆರ್ಯದೇವ, ಅಸಂಗ, ವಸುಬಂಧು, ದಿಜ್ಞಾಗ ಮತ್ತು ಧರ್ಮಕೀರ್ತಿ) ಗ್ರಂಥಗಳು ಟಿಬೆಟನ್ ಭಾಷೆಗೆ ಪರಿವರ್ತಿತವಾಗಿವೆ. ಅಶ್ವಘೋಷ, ಗುಣಪ್ರಭ ಮತ್ತು ಶಾಕ್ಯಪ್ರಭ ಎಂಬ ಈ ಮೂರು ಪ್ರಥಮ ಶ್ರೇಣಿಯ ತಾರಾಪುಂಜದ ಕೀರ್ತಿಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಬುದ್ಧಪಾಲಿತ, ಭವವಿವೇಕ, ಕಮಲಶೀಲ, ವಿಮಲಮಿತ್ರ, ಚಂದ್ರ ಕೀರ್ತಿ ಅಥವಾ ಯಸೋಮಿತ್ರ- ಇವರ ಗ್ರಂಥಗಳು ಭಾಷಾಂತರಿತವಾಗಿವೆ. ಮಾನವ ಹಿತತತ್ತ್ವದ ಬಹುಶ್ರೇಷ್ಠ ಪ್ರತಿಪಾದಕನಾದ ಶಾಂತಿದೇವ ಈ ಬಳಗಕ್ಕೆ ಸೇರಿದ್ದಾನೆ. ಟಿಬೆಟ್ಟಿನವರಿಗೆ ವಿಶೇಷಾಭಿಮಾನಕ್ಕೆ ಪಾತ್ರವಾದ ಶಾಂತರಕ್ಷಿತ ಮತ್ತು ಅತೀಶ ದೀಪಂಕರ ಇವರ ಕೃತಿಗಳೂ ಸೇರಿವೆ. ಈ ಪ್ರಕಾರವಾಗಿ ಪಾರಮಿತ ಸಾಹಿತ್ಯವೆಲ್ಲ, ಮಾಧ್ಯಮಿಕ ಮತ್ತು ಶೂನ್ಯತಾ ಮೇಲಣ ವ್ಯಾಖ್ಯಾನಗಳು ಮತ್ತು ಇತರ ಲೇಖನ ಶ್ರೇಣಿಗಳ ಸಮೇತ, ಎಚ್ಚರಿಕೆಯಿಂದ ಸಂಗ್ರಹಿತವಾಗಿದೆ ಮತ್ತು ಅನುವಾದಿತವಾಗಿದೆ. ಇದರಲ್ಲಿ ಪಾಂಥಿಕ ಅಂಧಾಭಿಮಾನ ಇಲ್ಲ. ತಂಜೂರಿನಲ್ಲಿ ಭಗವದ್ಗೀತೆಯ ಹಲವಾರು ಶ್ಲೋಕಗಳು ಸೇರಿವೆ. ಭಾಷಾಂತರ ಕಾರ್ಯ ಏಳನೆಯ ಶತಮಾನದ ಮಧ್ಯಭಾಗದಿಂದ ಹಿಡಿದು ಸುಮಾರು ಸಾವಿರ ವರ್ಷಗಳ ಕಾಲ ನಡೆದಿದೆ. ಈ ಭಾಷಾಂತರಕಾರರು ಟಿಬೆಟ್ ಮತ್ತು ಭಾರತ ದೇಶಗಳ ಶ್ರೇಷ್ಠ ಭಾಷಾವಿಜ್ಞಾನಿಗಳು. ಕೆಲವು ಸಮಯಗಳಲ್ಲಿ ಪದ್ಮಸಂಭವ, ಶಾಂತರಕ್ಷಿತ ಮತ್ತು ಅತೀಶ ದೀಪಂಕರರಂಥ ಮಹಾಯೋಗಿಗಳು ಸ್ವತಃ ಈ ಭಾಷಾಂತರ ಕಾರ್ಯದಲ್ಲಿ ಪಾಲುಗೊಂಡಿದ್ದಾರೆ. ಈ ಪ್ರಕಾರವಾಗಿ ಭಾಷಾಂತರಿತವಾದ ಲೌಕಿಕ ಗ್ರಂಥಗಳ ಪೈಕಿ ಅಷ್ಟಾಧ್ಯಾಯೀ, ಮೇಘದೂತ, ಕಾವ್ಯಾದರ್ಶ, ಅಮರಕೋಶ, ಆಯುರ್ವೇದಾರಸಮುಚ್ಚಯ, ನಾಗಾನಂದ ಮತ್ತು ಪತ್ರಿಮಾಮಾನಲಕ್ಷಣಗಳು ಸೇರಿವೆ.

ಇಡೀ ಪ್ರಪಂಚದ ಭಾಷಾಂತರಗಳ ಇತಿಹಾಸದಲ್ಲೇ ವಿಲಕ್ಷಣವಾಗಿ ಶೋಭಿಸುವ ರೀತಿಯಲ್ಲಿ ಈ ಭಾಷಾಂತರಗಳು ನಡೆದಿವೆ. ಪದಕ್ಕೆ ಪ್ರತಿ ಪದದಂತೆ ಭಾಷಾಂತರವಾಗಿದ್ದರೂ ಟಿಬೆಟನ್ ವಾಕ್ಯರಚನಾಕ್ರಮವನ್ನು ಇವು ಕಟ್ಟುನಿಟ್ಟಾಗಿ ಅನುಸರಿಸಿ ಆ ಭಾಷೆಯ ಸಾಹಿತ್ಯಕ್ಕೂ ಸಂಸ್ಕೃತಿಗೂ ಹೊರತೆನಿಸಿದಂತಿವೆ. ಪರಿಣಾಮ ಬೆರಗು ಹುಟ್ಟಿಸುವಂಥದು. ಸಂಸ್ಕೃತದಿಂದ ಟಿಬೆಟನ್ನಿಗೆ ಭಾಷಾಂತರವಾದ ಯಾವುದಾದರೂ ಗ್ರಂಥವನ್ನು ಪುನಃಸಂಸ್ಕೃತಕ್ಕೆ ಪರಿವರ್ತಿಸುವುದಾದರೆ, ಅದು ಮೂಲಕೃತಿಯನ್ನೇ ಹೆಚ್ಚು ಕಡಿಮೆ ಸಂಪೂರ್ಣವಾಗಿ ಪುನರುದ್ಧರಿಸುತ್ತದೆ. ಇದರಿಂದ ಅನೇಕ ಸಂಸ್ಕೃತದ ಸಂದಿಗ್ಧಪಾಠಗಳು ವಿಶದೀಕೃತವಾಗಿ ಸರಯಾದ ಪಾಠ ದೊರೆಯಲು ಅವು ಸಹಾಯಕವಾಗಿವೆಯಲ್ಲದೆ ಅವನ್ನು ಸರಿಯಾಗಿ ಅರ್ಥೈಸುವುದಕ್ಕೂ ಸಹಾಯಕವಾಗಿವೆ. ಮಧ್ಯ ಏಷ್ಯದ ಇತರ ಭಾಗಗಳಲ್ಲಿ ಮರಳಿನಲ್ಲಿ ಹೂತುಹೋಗಿದ್ದ ಪ್ರಸಿದ್ಧ ಸಂಸ್ಕೃತ ಗ್ರಂಥಭಾಗಗಳು ಹೇಗೆ ಪತ್ತೆಯಾದವೋ ಅದೇ ರೀತಿಯಲ್ಲಿ ತುರುಕರ ದಾಳಿಗಳಿಂದ ಭಾರತದಲ್ಲಿ ನಷ್ಟವಾದ ಸಂಸ್ಕೃತ ಗ್ರಂಥಗಳು ಟಿಬೆಟ್ಟಿನ ಬೌದ್ಧ ವಿಹಾರಗಳಲ್ಲಿ ಪತ್ತೆಯಾಗಿವೆ. ಈ ರೀತಿಯಲ್ಲಿ ಆ ಮಗ್ಯಾರ್ ಮಹಾವಿದ್ವಾಂಸ (ಛಿosmಚಿ-ಜe-ಞoಡಿos) ಹೇಳಿದಹಾಗೆ, ಟಿಬೆಟ್ಟಿನ ಸಾಹಿತ್ಯವೆಲ್ಲ ಸಂಪೂರ್ಣವಾಗಿ ಭಾರತೀಯ ಮೂಲದಿಂದ ಹುಟ್ಟಿರುವಂಥಾಗಿದ್ದರೆ, ಭಾರತೀಯ (ಸಂಸ್ಕೃತ) ಸಾಹಿತ್ಯದ ಸಮಗ್ರ ವ್ಯಾಸಂಗಕ್ಕೆ ಟಿಬೆಟನ್ ಸಾಹಿತ್ಯದ ತಿಳಿವಳಿಕೆ ಅಗತ್ಯವಾಗಿ ಬೇಕಾಗುತ್ತದೆ. ಈಗಲೂ ಅನೇಕ ಅಜ್ಞಾತ ಸಂಸ್ಕೃತ ಶಬ್ದಗಳು (ಮೂಲದಲ್ಲಾಗಲಿ ಭಾಷಾಂತರದಲ್ಲಾಗಲಿ) ಟಿಬೆಟನ್ ವಿಹಾರಗಳ ಪುಸ್ತಕಾಲಯಗಳಲ್ಲಿ ಶೇಖರಗೊಂಡಿವೆ. ಜೊತೆಗೆ ನಮ್ಮ ತಿಳಿವಳಿಕೆಗೆ ಬಂದಿರುವ ಅನೇಕ ಭಾಷಾಂತರಗಳ ಅನ್ವೇಷಣ ಸಹ ನಡೆಯಬೇಕಾಗಿದೆ

ಟಿಬೆಟನ್ ಬೌದ್ಧಮತ

[ಬದಲಾಯಿಸಿ]

ಟಿಬೆಟ್ಟಿನ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಬೆಳೆಯಿತಾದುದರಿಂದ ಅಲ್ಲಿನ ಬೌದ್ಧಮತ ಆ ಸಂಸ್ಕೃತಿಯ ಛಾಯೆ ಪಡೆದು, ಬೇರೆ ದೇಶಗಳಲ್ಲಿ ಬೆಳೆದ ಬೌದ್ಧಮತಗಳಿಂದ ಕೆಲವು ಅಂಶಗಳಲ್ಲಿ ಭಿನ್ನವಾಗಿದೆ. ಬೌದ್ಧಮತ ಪ್ರಚಾರಕರು ತಾವು ಪ್ರವೇಶಿಸಿದ ದೇಶದ ಸಂಸ್ಕೃತಿಯೊಡನೆ ಸುಲಭವಾಗಿ ಹೊಂದಿಕೊಳ್ಳುವ ಗುಣಗಳನ್ನು ಪಡೆದಿದ್ದರು. ಭಾರತದ ವೈದಿಕ ಮತದವರಂತಲ್ಲದೆ ಬೌದ್ಧರು ಜಾತಿಭೇದಗಳನ್ನೂ ಆಹಾರಭೇದಗಳನ್ನೂ ಗಣಿಸಲಿಲ್ಲವಾದುದರಿಂದ ಆ ಮತದವರು ತಾವು ಹೋದ ಸ್ಥಳಗಳ ಜನರೊಡನೆ ಬರೆಯಲು ಅನುಕೂಲವಾಯಿತು. ಬೌದ್ಧಭಿಕ್ಷುಗಳು ಸಾಮಾನ್ಯವಾಗಿ ವಿನಯಶೀಲರು. ಪಾಪಿಗಳಲ್ಲೂ ಅಶಕ್ತರಲ್ಲೂ ಹಿಂದುಳಿದವರಲ್ಲೂ ಅಪಾರ ಅನುಕಂಪವಿದ್ದವರು, ಅಂಥವರ ಸೇವೆಯೇ ತಮ್ಮ ಮತದ ಒಂದು ಮುಖ್ಯ ನಿಯಮವಾಗಿ ಭಾವಿಸಿದವರು. ಆದುದರಿಂದ ಅವರು ಹೋದ ಕಡೆಗಳಲ್ಲಿ ಅವರಿಗೆ ಆದರದ ಸ್ವಾಗತ ದೊರೆಯುತ್ತಿತ್ತು. ಈ ಕಾರಣದಿಂದ ಬೌದ್ಧಮತ ಅಶೋಕನ ಕಾಲದಿಂದ ಆಚೆ ಸಿಂಹಳ ದ್ವೀಪ, ಮಧ್ಯ ಏಷ್ಯ, ಚೀನ, ಮಲಯ, ಕೊರಿಯ, ಟಿಬೆಟ್, ಜಪಾನ್ ಮುಂತಾದ ಪೂರ್ವದೇಶಗಳಲ್ಲಿ ವ್ಯಾಪಿಸಿತು. ಚೀನದಲ್ಲಿ ಅದು ಕೂಂಗ್‍ಫೂಟ್ಸೆ ಮತ್ತು ಲಾವೊಟ್ಸೆ ತತ್ತ್ವದ ಸಾರಾಂಶಗಳನ್ನು ಹೀರಿಕೊಂಡುದರಿಂದ ಚೀನೀಯರು ಅದನ್ನು ಪರದೇಶದ ಮತವೆಂದು ಗಣಿಸದೆ ತಮ್ಮ ದೇಶದ ಮತವೆಂದೇ ಭಾವಿಸಿದರು. ಮೌಟ್ಸು ಎಂಬ ಚೀನೀ ತಾತ್ತ್ವಿಕ ಕೂಂಗ್‍ಫೂಟ್ಸೆ ಮತ್ತು ತಾವೊ ತತ್ತ್ವಗಳನ್ನು ಬೌದ್ಧಮತದೊಡನೆ ಹೋಲಿಸಿ ಬೌದ್ಧಮತ ಎಲ್ಲ ವಿಧದಲ್ಲೂ ಕೂಂಗ್‍ಫೂಟ್ಸೆ ಮತ್ತು ತಾವೊ ತತ್ತ್ವಗಳಿಗಿಂತ ಉತ್ತಮವೆಂದು ಸಾರಿದ. eóÉನ್ ಬೌದ್ಧಮತ ಜಪಾನಿನ ರಾಷ್ಟ್ರಮತವಾಯಿತು. ಅಂತೆಯೇ ಟಿಬೆಟ್ಟಿನಲ್ಲೂ ಬೌದ್ಧಮತ ಆ ರಾಷ್ಟ್ರದ ಮತವಾಯಿತು. ಬೌದ್ಧಮತ ಯಾವಾಗ ಟಿಬೆಟ್ಟನ್ನು ಪ್ರವೇಶಿಸಿತು, ಅದು ಅಲ್ಲಿ ಹೇಗೆ ಬೆಳೆಯಿತು ಎಂಬುದನ್ನು ಸಂಗ್ರಹವಾಗಿ ಇಲ್ಲಿ ನಿರೂಪಿಸಿದೆ.

ಬೌದ್ಧಮತ ಪ್ರಚಾರ ಟಿಬೆಟ್ಟಿನಲ್ಲಿ ಕ್ರಿ.ಶ. ಏಳನೆಯ ಶತಮಾನಕ್ಕಿಂತ ಹಿಂದೆ ನಡೆದಿದ್ದರೂ ಅದಕ್ಕೆ ಲಿಖಿತ ದಾಖಲೆಗಳಿಲ್ಲ. ಏಕೆಂದರೆ ಅದಕ್ಕಿಂತ ಮುಂಚೆ ಟಿಬೆಟ್ಟಿನ ಭಾಷೆ ಲಿಪಿರೂಪ ಪಡೆದಿರಲಿಲ್ಲ. ಕ್ರಿ.ಶ. ಏಳನೆಯ ಶತಮಾನಕ್ಕೆ ಹಿಂದೆ ಥೊ-ಥೊ-ರಿ ರಾಜನ ಆಳಿಕೆಯ ಕಾಲದಲ್ಲಿ ಬೌದ್ಧಭಿಕ್ಷುಗಳು ಆ ರಾಜನಿಗೆ ಬೌದ್ಧಮತದ ಗ್ರಂಥಗಳನ್ನು ಕೊಟ್ಟರೆಂದೂ ಅಂದಿನ ಟಿಬೆಟನ್ನರು ಬರೆವಣಿಗೆಯನ್ನು ಅರಿಯದವರಾದ್ದರಿಂದ ಆ ಗ್ರಂಥಗಳಿಂದ ಅವರಿಗೆ ಯಾವ ಪ್ರಯೋಜನವೂ ಆಗಲಿಲ್ಲವೆಂದೂ ಟಿಬೆಟ್ಟಿನಲ್ಲಿ ಕಥೆಗಳಿವೆ. ಟಿಬೆಟ್ಟಿನ ಭಾಷೆ ಲಿಪಿರೂಪವನ್ನು ಕಂಡದ್ದು ಸ್ರೋನ್-ಬ್ಟಸನ್ ರಾಜನ ಕಾಲದಲ್ಲಿ (ಕ್ರಿ.ಶ. 617). ಅವನ ಇಬ್ಬರು ಹೆಂಡತಿಯರಲ್ಲಿ ಭ್ರುಕುಟಿ ಎಂಬುವಳು ನೇಪಾಳದ ರಾಜನ ಮಗಳು, ವೆನ್-ಚೆಂಗ್ ಎಂಬಾಕೆ ಚೀನೀ ಚಕ್ರವರ್ತಿಯ ಮಗಳು. ಅವರಿಬ್ಬರೂ ಹುಟ್ಟು ಬೌದ್ಧರು. ಅವರು ಟಿಬೆಟ್ಟಿಗೆ ಬಂದಾಗ, ಅಕ್ಷೋಭ. ಮೈತ್ರೇಯ ಮತ್ತು ಸಾಕ್ಯಮುನಿಗಳ ವಿಗ್ರಹವನ್ನು ತಮ್ಮ ಜೊತೆಯಲ್ಲಿ ತಂದು ಪೂಜಿಸುತ್ತಿದ್ದರು. ಸ್ರೋನ್-ಬ್ಟಸನ್ ಭಾರತಕ್ಕೆ ಕಳುಹಿಸಿದ ಹದಿನಾರು ಟಿಬೆಟನ್ನರು ಭಾರತದ ವಿದ್ವಾಂಸರ ಸಹಾಯ ಪಡೆದು ಟಿಬೆಟನ್ ಲಿಪಿಯನ್ನೂ ವ್ಯಾಕರಣವನ್ನೂ ರೂಪಿಸಿದರು ಮತ್ತು ಆ ವಿದ್ವಾಂಸರ ನೆರವು ಪಡೆದು ಭಾರತದ ಕೆಲವು ಬೌದ್ಧಗ್ರಂಥಗಳನ್ನು ಮೊಟ್ಟಮೊದಲಿಗೆ ಟಿಬೆಟನ್ ಭಾಷೆಗೆ ತರ್ಜುಮೆ ಮಾಡಿದರು. ಬೌದ್ಧಮತದ ಹತ್ತು ನಿಯಮಗಳಿಗೆ ಅನುಸಾರವಾಗಿ ಸ್ರೋನ್-ಬ್ಟಸನ್ ಕಾನೂನುಗಳನ್ನು ಏರ್ಪಡಿಸಿದ. ಲಾಸದಲ್ಲಿ ಪ್ರಖ್ಯಾತವಾದ ರೋಮಾಚ ಮತ್ತು ಜೋಕ್ ಹಾಂಗ್ ಬೌದ್ಧದೇವಾಲಯಗಳನ್ನು ಕಟ್ಟಿಸಿದ.

ಆದರೂ ಅವನ ಕಾಲದ ಅನಂತರ ಬೌದ್ಧಮತದ ಪ್ರಾಮುಖ್ಯ ಕುಂದಿತು. ಟಿಬೆಟ್ಟಿನ ಪ್ರಾಚೀನ ಬೊನ್ ಮತದವರು ಬೌದ್ಧಮತವನ್ನು ಅಲ್ಲಿಂದ ಮೂರು ಶತಮಾನಗಳ ಕಾಲ ಒಂದೇ ಸಮನಾಗಿ ತೀವ್ರವಾಗಿ ಪ್ರತಿಭಟಿಸಿದರು. ಎಂಟನೆಯ ಶತಮಾನದ ಉತ್ರರಾರ್ಧದಲ್ಲಿ ಆಳಿದ ಖ್ರಿ-ಸ್ರೋನ್-ಲ್ಡೆ-ಬ್ಟಸನ್ ರಾಜ (ಕ್ರಿ.ಶ. 255-97) ನಲಂದ ಬೌದ್ಧ ವಿಶ್ವವಿದ್ಯಾನಿಲಯದಿಂದ ಶಾಂತರಕ್ಷಿತ ಭಿಕ್ಷುವನ್ನು ಟಿಬೆಟ್ಟಿಗೆ ಕರೆಸಿಕೊಂಡ. ಆತ ಟಿಬೆಟ್ಟಿನಲ್ಲಿ ಸಂಚರಿಸಿ ಬೌದ್ಧರ ಹತ್ತು ಸುದ್ಗುಣಗಳು ಮತ್ತು ಕಾರ್ಯಕಾರಣಚಕ್ರವನ್ನು ಟಿಬೆಟ್ಟಿನವರಿಗೆ ಬೋಧಿಸಿ ಅವರನ್ನು ಬೌದ್ಧ ಮತಕ್ಕೆ ಪರಿವರ್ತಿಸಲು ಪ್ರಯತ್ನಿಸಿದ. ಆಗ ದೇಶದಲ್ಲಿ ಹಟಾತ್ತನೆ ಬಿರುಗಾಳಿಯೂ ಸಾಂಕ್ರಾಮಿಕ ರೋಗಗಳೂ ಕಾಣಿಸಿಕೊಂಡದ್ದಕ್ಕೆ ಟಿಬೆಟ್ಟಿನ ಜನ ತಮ್ಮ ಬೋನ್ ಸಂಪ್ರದಾಯಕ್ಕೆ ವಿರುದ್ಧವಾದ ಬೌದ್ಧಮತ ಪ್ರಚಾರ ಕಾರಣವೆಂದು ಭಾವಿಸಿ ರೊಚ್ಚೆದ್ದರು. ಶಾಂತರಕ್ಷಿತ ತಾನು ಬೋಧಿಸಿದ ಬೌದ್ಧಶಾಖೆಯ ಧರ್ಮ ಟಿಬೆಟ್ಟಿನ ಜನರಿಗೆ ಒಗ್ಗದ ಧರ್ಮವೆಂದು ತಿಳಿದು ಟಿಬೆಟ್ಟಿನಿಂದ ಭಾರತಕ್ಕೆ ಹಿಂತಿರುಗಿದ. ಟಿಬೆಟ್ಟಿನವರಿಗೆ ತಾಂತ್ರಿಕ ಬೌದ್ಧಮತ ಹಿಡಿಸಬಹುದೆಂದು ನಂಬಿ ಆ ಶಾಖೆಯ ಪ್ರಸಿದ್ಧ ಭಿಕ್ಷುವಾದ ಪದ್ಮಸಂಭವನನ್ನು ಕರೆಸಿಕೊಳ್ಳಬೇಕೆಂದು ರಾಜನಿಗೆ ಸಲಹೆ ಕೊಟ್ಟ. ಅವನ ಸಲಹೆಯಂತೆ ರಾಜ ಪದ್ಮಸಂಭವನನ್ನು ಕರೆಸಿಕೊಂಡು ಅವನಿಂದ ಜನರಿಗೆ ಉಪದೇಶ ಕೊಡಿಸಿದ. ತಾಂತ್ರಿಕ ಬೌದ್ಧಮತ ಟಿಬೆಟ್ಟಿನ ಜನರಿಗೆ ತುಂಬ ಮೆಚ್ಚಿಗೆಯಾಯಿತು. ಕ್ರಮೇಣ ಅದು ಆ ನೆಲದಲ್ಲಿ ಬೇರೂರಿಕೊಂಡು ಅಂದಿನ ಟಿಬೆಟ್ಟಿನ ರಾಷ್ಟ್ರಮತವಾಯಿತು. ರಾಜ ಬಿಹಾರದ ಓದಂತಿಪುರದ ಭಿಕ್ಷುಗಳ ವಿಹಾರದ ಮಾದರಿಯಲ್ಲಿ ಬ್ಸಸಮ್-ಯಾಸ್ ವಿಹಾರವನ್ನು ಸ್ಥಾಪಿಸಿದ. ಅನಂತರದಲ್ಲಿ ಶಾಂತರಕ್ಷಿತನನ್ನು ಪುನಃ ಟಿಬೆಟ್ಟಿಗೆ ಕರೆಸಿಕೊಂಡು ಬೌದ್ಧಗ್ರಂಥಗಳ ಭಾಷಾಂತರ ಕೆಲಸವನ್ನು ಮುಂದುವರಿಸಿದುದಲ್ಲದೆ ಅವನ ಸಹಾಯದಿಂದ ಬೌದ್ಧಗ್ರಂಥಗಳ ಸೂಚಿಯನ್ನು ಬರೆಸಿದ.

ಶಾಂತರಕ್ಷಿತ ಗತಿಸಿದ ಅನಂತರ ಶೂನ್ಯವಾದಿ ಚೀನೀ ಬೌದ್ಧರ ಪ್ರಚಾರದಿಂದ ಟಿಬೆಟ್ಟಿನಲ್ಲಿ ಶೂನ್ಯವಾದ ತಲೆ ಎತ್ತಿತು. ಅದನ್ನು ತಡೆಗಟ್ಟಲು ಖ್ರಿ-ಸ್ರೊನ್ ರಾಜ ಶಾಂತರಕ್ಷಿತನ ಪ್ರಸಿದ್ಧ ಶಿಷ್ಯನಾದ ಕಮಲಶೀಲನನ್ನು ನಲಂದದಿಂದ ಟಿಬೆಟ್ಟಿಗೆ ಕರೆಸಿಕೊಂಡ. ಶೂನ್ಯವಾದಿಗಳಿಗೂ ಕಮಲಶೀಲನಿಗೂ ದೀರ್ಘವಾಗ್ವಾದ ನಡೆದು ಶೂನ್ಯವಾದಿಗಳು ಪರಾಭವಗೊಂಡರು. ವಾದದಲ್ಲಿ ಸೋತ ಶೂನ್ಯವಾದಿಗಳು ಕಮಲಶೀಲನನ್ನು ಕೊಲ್ಲಿಸಿದರು. ಇದನ್ನು ನೋಡಿ ಖ್ರಿ-ಸ್ರೋನ್ ಹತಾಶನಾಗಿ ಪ್ರಾಣಬಿಟ್ಟ.

ಅವನ ಮಗ ಮು-ನೆ-ಬ್ಟಸನ್-ಪೊ ಬೌದ್ಧಮತದ ಕಾರುಣ್ಯ ಮತ್ತು ಸರ್ವಸಮತಾಭಾವಗಳಿಂದ ಪ್ರೇರಿತನಾಗಿ ರಾಜ್ಯದ ಸಂಪತ್ತನ್ನು ಜನರಲ್ಲಿ ಸಮನಾಗಿ ಹಂಚಲು ಪ್ರಯತ್ನಿಸಿದ. ಕಾಯಕದಿಂದ ಬಾಳುವುದೇ ಗೌರವಯುತ ಬಾಳೆಂದು ಘೋಷಿಸಿದ. ಶ್ರೀಮಂತರ ಕೋಪಗೊಂಡು ಅವನಿಗೆ ವಿಷಹಾಕಿಸಿ ಕೊಲ್ಲಿಸಿ ಅವನ ಸೋದರ ಖ್ರಿ-ಲ್ಡೆ-ಸ್ರೋನ್-ಬ್ಟಸನ್ನನನ್ನು ರಾಜನನ್ನಾಗಿ ಮಾಡಿಕೊಂಡರು. ಆ ರಾಜ ಮಹಾವ್ಯುತ್ಪತ್ತಿ ಎಂಬ ಸಂಸ್ಕೃತ ಮತ್ತು ಟಿಬೆಟನ್ ಭಾಷೆಗಳ ನಿಘಂಟನ್ನು ಕ್ರಿ.ಶ. 814ರಲ್ಲಿ ಬರೆಸಿದ. ಖ್ರಿ-ಲ್ಡೆ-ಸ್ರೋನ್-ಬ್ಟಸನ್ ತನ್ನ ಹಿರಿಯ ಮಗ ಗ್ಲಣ್-ಡರ್-ಮನನ್ನು ಬಿಟ್ಟು ತನ್ನ ಕಿರಿಯ ಮಗ ರಾಲ್-ಪ ಚೆನ್ನನನ್ನು (816-838) ರಾಜನನ್ನಾಗಿ ಮಾಡಿದ. ಆತನ ಆಳಿಕೆಯಲ್ಲಿ ಬೌದ್ಧಮತ ತುಂಬ ಬೆಳೆಯಿತು. ಆತ ಬೌದ್ಧಭಿಕ್ಷುಗಳಿಗೆ ತಾವು ಏರ್ಪಡಿಸಿದ ವಿಹಾರಗಳ ಸುತ್ತಮುತ್ತ ಇದ್ದ ಪ್ರದೇಶದ ಆಳಿಕೆಯ ಅಧಿಕಾರವನ್ನು ಕೊಟ್ಟ. ಶ್ರೀಮಂತರಿಗೆ ಅದು ಹಿಡಿಸದಿದ್ದುದರಿಂದ ಅವರು ಅವನನ್ನು ಕೊಲ್ಲಿಸಿ ಗ್ಲಣ್-ಡರ್-ಮನನ್ನು ರಾಜನನ್ನಾಗಿ ಮಾಡಿಕೊಂಡರು. ಆತನ ಆಳಿಕೆಯಲ್ಲಿ ಬೌದ್ಧಮತಕ್ಕೆ ಬಲವಾದ ಪೆಟ್ಟು ಬಿತ್ತು. ಆತ ಭಿಕ್ಷುಗಳನ್ನು ಮಠಗಳಿಂದ ಓಡಿಸಿ ಅವನ್ನು ಮುಚ್ಚಿಸಿದ; ಬುದ್ಧನ ವಿಗ್ರಹಗಳನ್ನು ಕಿತ್ತು ನೆಲದಲ್ಲಿ ಹೂಳಿಸಿದ. ರಾಜರಿದ್ದರೆ ಬೌದ್ಧಮತಕ್ಕೆ ಉಳಿಗಾಲವಿಲ್ಲವೆಂದು ತಿಳಿದ ಜನ ಗ್ಲಣ್-ಡರ್-ಮನನ್ನು ಕೊಂದು ರಾಜಪ್ರಭುತ್ವವನ್ನು ಕೊನೆಗಾಣಿಸಿದರು. ಲಾಸದ ಕೊನೆಯ ರಾಜನ ಮಗ ಡ್ಪ್‍ಲ್ ಹ್ಕೊರ್-ಬ್ಟಸನ್ (ಕ್ರಿ.ಶ. 906-73) ಲಾಸವನ್ನು ಬಿಟ್ಟು ಟಿಬೆಟ್ಟಿನ ಪಶ್ಚಿಮ ಭಾಗಕ್ಕೆ ಓಡಿಹೋಗಿ ಅಲ್ಲಿ ತನ್ನ ರಾಜ್ಯವನ್ನು ಸ್ಥಾಪಿಸಿದ. ಅವನ ಮಕ್ಕಳು ಮತ್ತು ಮರಿಮಕ್ಕಳು ಲಡಾಕ್, ಸ್ಫರಾಂಗ್ ಮತ್ತು ಗುಗೆ ಭಾಗಗಳಲ್ಲಿ ಬೌದ್ಧಮತ ಹರಡಲು ಉತ್ತೇಜನ ಕೊಟ್ಟರು. ಪಶ್ಚಿಮ ಟಿಬೆಟ್ಟಿನ ರಾಜರಲ್ಲಿ ತುಂಬ ಪ್ರಸಿದ್ಧನಾದ ಹ್ಕೆ ಹೋರ್-ಲ್ಡೆ ಬೌದ್ಧಮತದಲ್ಲಿ ವಿಶೇಷ ಆಸಕ್ತಿ ತೋರಿಸಿದ. ಪರಿಣಾಮವಾಗಿ ಅವನನ್ನು ಜನ ಜ್ಞಾನಪ್ರಭನೆಂದು ಕರೆದರು. ಅವನು ವಿಕ್ರಮಶೀಲ ವಿಹಾರದಿಂದ ಆಚಾರ್ಯ ಅತೀಶನನ್ನು (ದೀಪಂಕರ ಶ್ರೀಜ್ಞಾನ) ತನ್ನ ದೇಶಕ್ಕೆ ಕರೆಸಿಕೊಂಡು ಅವನು ಮೂಲಕ ಬೌದ್ಧಮತ ಪ್ರಚಾರ ಮಾಡಿಸಿದ. ಕಾಲಾಂತರದಲ್ಲಿ ಅವನೂ ಅವನ ಇಬ್ಬರು ಮಕ್ಕಳು ಬೌದ್ಧಭಿಕ್ಷುಗಳಾದರು.

ಅತೀಶ ಟಿಬೆಟ್ಟಿಗೆ ಬಂದಮೇಲೆ ಟಿಬೆಟ್ಟಿನಲ್ಲಿ ಅನೇಕ ಬೌದ್ಧಶಾಖೆಗಳು ಬೆಳೆದವು. ಟಿಬೆಟ್ಟಿನ ಹಳೆಯ ಕಾಲದ ರಿನ್ನಿಣ್-ಮ್-ಪ ಎಂಬ ಬೌದ್ಧಸಂಘದವರು ದೇವತೆಗಳನ್ನೂ ದುಷ್ಟಶಕ್ತಿಗಳನ್ನೂ ಪೂಜಿಸುತ್ತಿದ್ದರು. ಅತೀಶ ಆ ಸಂಘದ ಧರ್ಮವನ್ನು ಯೋಗಾಚಾರ ತತ್ತ್ವಕ್ಕನುಗುಣವಾಗಿ ಮಾರ್ಪಡಿಸಿದ. ಅದಕ್ಕೆ ಅವನ ಶಿಷ್ಯ ಹಬ್ರೋಮ್-ಸ್ಟನ್ ಬ್ಕಾಆಹ್-ಗ್ಡಮ್ಸ್-ಪ ಎಂಬ ಹೆಸರನ್ನು ಕೊಟ್ಟ. ಅಲ್ಲಿಂದ ಮುಂದೆ ಟಿಬೆಟ್ಟಿನ ಬೌದ್ಧರಲ್ಲಿ ಮಂತ್ರಮಾಟಗಳ ಆಚರಣೆ ಕುಗ್ಗಿತು. ಬ್ಕಆಹ್-ಗ್ಡಮ್ಸ್-ಪ ಸಂಪ್ರದಾಯದವರು ಅನುಸರಿಸುತ್ತಿದ್ದ ಅನೇಕ ಆಡಂಬರದ ಸಂಸಾರಗಳನ್ನು ಟ್ಸೋನ್-ಖ-ಪ (14ನೆಯ ಶತಮಾನ) ಎಂಬ ಸುಧಾರಕ ಸರಳಗೊಳಿಸಿದ. ಇವನು ಸ್ಥಾಪಿಸಿದ ಸಂಪ್ರದಾಯವೇ ಟಿಬೆಟ್ಟಿನ ಪ್ರಧಾನ ಸಂಪ್ರದಾಯವಾಯಿತು. ಅದನ್ನು ಟಿಬೆಟ್ಟಿನ ಧಾರ್ಮಿಕ ಹಾಗೂ ರಾಜಕೀಯ ಮುಖಂಡರಾದ ದಲೈ ಲಾಮಾಗಳು ಎತ್ತಿಹಿಡಿದರು. ಮಿ-ಲ-ರಸ್-ಪ ಎಂಬ ಟಿಬೆಟ್ಟಿನ ಪ್ರಸಿದ್ಧ ಕವಿ ಚೀನೀಯರ ಧಾನ್ಯಬೌದ್ಧ ತತ್ತ್ವದಿಂದ ಸ್ಫೂರ್ತಿಪಡೆದು ಬ್ಕಆಹ್-ರಗ್ಯುಡ್ಡ್-ಪ ಎಂಬ ಬೌದ್ಧಶಾಖೆಯನ್ನು ಬಲಪಡಿಸಿದ. ಕಾಲಾಂತರದಲ್ಲಿ ಈ ಶಾಖೆ ಒಡೆದು ಕರ್ಮಪ್ರಧಾನವಾದ ಕರ್ಮ-ಪ ಮತ್ತು ಧಾನ್ಯಪ್ರಧಾನವಾದ ಹಬ್ರುಗ್-ಪ ಎಂಬ ಎರಡು ಶಾಖೆಗಳಾದವು. ಬಸ್ಟನ್ (1290-1364) ಎಂಬ ಪ್ರಖ್ಯಾತ ವಿದ್ವಾಂಸ ಮುಖ್ಯವಾದ ಬೌದ್ಧಧರ್ಮಗ್ರಂಥಗಳ ಮೇಲೆ ಭಾಷ್ಯಗಳನ್ನು ಬರೆದುದಲ್ಲದೆ ಅದುವರೆಗೆ ಭಾಷಾಂತರವಾಗಿದ್ದ ಬುದ್ಧನ ವಚನಗಳಗೆ ಸಂಬಂಧಪಟ್ಟ ನೂರು ಸಂಪುಟಗಳನ್ನು ಬ್ಕ ಆಹ್-ಹ್ಗಯೂರ್ ಎಂದೂ ಉಳಿದ ಇನ್ನೂರ ಇಪ್ಪತ್ತೈದು ಸಂಪುಟಗಳನ್ನು ಬ್ಸಟನ್-ಹಯೂರ್ ಎಂದೂ ಕರೆದ. ಇವು ಇಂದಿಗೂ ಬೌದ್ಧಧರ್ಮ ಪ್ರಮಾಣಸಾಹಿತ್ಯವಾಗಿ ಉಳಿದಿವೆ. ಟ್ಸೋನ್-ಬ-ಪ (1358) ಎಂಬ ಸುಧಾರಕ ಟಿಬೆಟ್ಟಿನ ಆಧುನಿಕ ಬೌದ್ಧ ಶಾಖೆಯ ಜನಕ. ಅವನು ಸ್ಥಾಪಿಸಿದ ಶಾಖೆಗೆ ಡ್ಗೆ-ಲಗ್ಸ್-ಪ (ಸತ್ ಚಾರಿತ್ರ್ಯ ಶಾಖೆ) ಎಂದು ಹೆಸರು. ಈ ಶಾಖೆಯವರು ಸತ್ ಚಾರಿತ್ರ್ಯವೇ ಬೌದ್ಧ ಧರ್ಮದ ಪ್ರಾಣವೆಂದು ಭಾವಿಸಿದರು. ಟ್ಸೋನ್-ಖ-ಪ 1408ರಲ್ಲಿ ಲಾಸ ಸಮಿಪದಲ್ಲಿ ಸುಪ್ರಸಿದ್ಧ ಗನ್‍ಡೆನ್ ಸಂನ್ಯಾಸಿಮಠವನ್ನು ಸ್ಥಾಪಿಸಿದ. ಅನಂತರದಲ್ಲಿ ಲಾಸದ ಬಳಿ ಅಷ್ಟೇ ಪ್ರಸಿದ್ಧವಾದ ಡೇಪಂಗ್ ಮತ್ತು ಸೆರ ಮಠವೂ ಟ್ಸಾಂಗ್ ಪ್ರಾಂತ್ಯದಲ್ಲಿ ಟಷಿ-ಲ್ಹುಂಪೊ ಎಂಬ ಮಠವೂ ಅವನ ಶಿಷ್ಯರಿಂದ ಸ್ಥಾಪಿತವಾದವು. ಈ ಮಠಗಳು ಮಂಗೋಲಿಯ ಮತ್ತು ಸೈಬಿರಿಯ ಪ್ರಾಂತಗಳಲ್ಲಿ ಬೌದ್ಧಮತವನ್ನು ಪ್ರಚಾರ ಮಾಡಿದುವು. ಮೊದಲಲ್ಲಿ ಕೆಲವು ಪ್ರಾಂತಗಳಿಗೆ ಮಾತ್ರ ದಲೈ-ಲಾಮಾ ಮಠಾಧ್ಯಕ್ಷನಲ್ಲದೆ ರಾಜಕೀಯ ಅಧ್ಯಕ್ಷನೂ ಆಗಿದ್ದ. ಮಂಗೋಲಿಯದ ರಾಜ ಗುಸ್ರಿ ಖಾನ್ ಐದನೆಯ ದಲೈ-ಲಾಮಾನನ್ನು(1615-1680) ಇಡೀ ಟಿಬೆಟ್ಟಿನ ರಾಷ್ಟ್ರಾಧ್ಯಕ್ಷನೆಂದು ಘೋಷಿಸಿದ. ಅಲ್ಲಿಂದ ಮೊನ್ನೆಮೊನ್ನೆಯವರೆಗೂ ದಲೈ-ಲಾಮಾಗಳು ಟಿಬೆಟ್ಟಿನ ರಾಷ್ಟ್ರಾಧ್ಯಕ್ಷರಾಗಿದ್ದರು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟಿಬೆಟ್&oldid=1098859" ಇಂದ ಪಡೆಯಲ್ಪಟ್ಟಿದೆ