ವಿಷಯಕ್ಕೆ ಹೋಗು

ಕೃಷ್ಣ ಕೊಲ್ಹಾರ ಕುಲಕರ್ಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಇಂದ ಪುನರ್ನಿರ್ದೇಶಿತ)

ಕೃಷ್ಣ ಕೊಲ್ಹಾರ ಕುಲಕರ್ಣಿರವರು ಸಂಶೋಧಕ, ಇತಿಹಾಸಜ್ಞ, ಸೃಜನಾತ್ಮಕ ಬರಹಗಾರ ಹಾಗೂ ಸಾಮಾಜಿಕ ಕಾರ್ಯಕರ್ತರು.

ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಕೊಲ್ಹಾರದಲ್ಲಿ ಅಕ್ಟೋಬರ್ ೧೬ರ ೧೯೪೦ರಲ್ಲಿ. ತಂದೆ ಹನುಮಂತರಾಯರು, ತಾಯಿ ಗಂಗಾಬಾಯಿ.

ಶಿಕ್ಷಣ

[ಬದಲಾಯಿಸಿ]
  • ಕೊಲ್ಹಾರ, ವಿಜಾಪುರಗಳಲ್ಲಿ ಎಸ್‌.ಎಸ್‌.ಎಲ್‌.ಸಿ ಯ ನಂತರ, ತಂದೆಯ ಸಾವಿನಿಂದ ವಿದ್ಯೆಗೆ ವಿದಾಯ ಹೇಳಿ ಸೇರಿದ್ದು, ಅಂಚೆ ಮತ್ತು ತಂತಿ ಇಲಾಖೆ. ಮುಂಬಯಿ, ರಾಯಚೂರು, ಬೆಳಗಾವಿ, ಮೈಸೂರು, ವಿಜಾಪುರ, ಹಾಸನ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿ ೧೯೯೨ ರಲ್ಲಿ ಸ್ವ-ಇಚ್ಛೆಯಿಂದ ನಿವೃತ್ತಿ .ಪಡೆದರು
  • ಮೈಸೂರಿನಲ್ಲಿದ್ದಾಗ ಮುಕ್ತವಿಶ್ವವಿದ್ಯಾಲಯದಿಂದ ಆಕರ್ಷಿತರಾಗಿ ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಸ್ಕೃತಿಯ ಚರಿತ್ರೆಯಲ್ಲಿ ಪಡೆದ ಎಂ.ಎ. ಪದವಿ. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾ.ಕೃಷ್ಣಮೂರ್ತಿ ಕಿತ್ತೂರರ ಮಾರ್ಗದರ್ಶನದಲ್ಲಿ ‘ಕಾಖಂಡಕಿ ಶ್ರೀಮಹಿಪತಿದಾಸರು’ ಪ್ರೌಢ ಪ್ರಬಂಧ ಮಂಡಿಸಿ ಪಡೆದ ಪಿಎಚ್‌.ಡಿ. ಪದವಿ.
  • ಹೊಸದಿಲ್ಲಿಯ ಭಾರತೀಯ ಇತಿಹಾಸ ಅನುಸಂಧಾನದ ಹಿರಿಯ ಶಿಷ್ಯವೇತನದಲ್ಲಿ ಅದಿಲ್‌ಶಾಹಿ ಕಾಲದ ಹಿಂದು-ಮುಸ್ಲಿಂ ಸಂಬಂಧ ಕುರಿತು ಮಾಡಿದ ಸಂಶೋಧನೆ, ಪ್ರಬಂಧ ರಚನೆ.
  • ೧೯೯೫-೯೭ ರ ನಡುವೆ ಬಿಜಾಪುರದ ವಿದ್ಯಾವರ್ಧಕ ಸಂಘದ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಕಾಲ ಸೇವೆ.

ಸಾಹಿತ್ಯ

[ಬದಲಾಯಿಸಿ]
  • ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಳವಾದ ಅಭ್ಯಾಸ, ದಾಸಸಾಹಿತ್ಯದಲ್ಲಿ ಶ್ರೀ ಪುರಂದರದಾಸರ ನಂತರ ವಿಜಯದಾಸರ ಕಾಲ ಪ್ರಾರಂಭವಾಗುವ ತನಕ (ಸುಮಾರು ೧೫೦ ವರ್ಷಗಳು) ಅಜ್ಞಾತ ಕಾಲವೆಂದು ಪರಿಗಣಿತವಾಗಿದ್ದ ಕಾಲದಲ್ಲೂ ದಾಸಪಂಥದ ಚಟುವಟಿಕೆಗಳು ನಡೆಯುತ್ತಿದ್ದುದೆಂದು ಪ್ರತಿಪಾದಿಸಿದ್ದು-
  • ಇತಿಹಾಸಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಅದಿಲ್‌ಶಾಹಿಗಳ ಇತಿಹಾಸದ ಆಳವಾದ ಅಭ್ಯಾಸ- ಅದಿಲ್ ಶಾಹಿ ಇತಿಹಾಸಕ್ಕೆ ಸಂಬಂಧಿಸಿದಂತೆ ‘ಕಿತಾಬ್‌ನೌರಸ್‌’, ‘ವಿಸ್ಮಯ ಇದು ಬಿಜಾಪುರ’ ‘ಅದಿಲ್‌ಶಾಹಿ ಆಸ್ಥಾನ ಸಾಹಿತ್ಯ’, ‘ಬುಸಾತಿನೆ-ಸಲಾತಿನ’, ಬಿಜಾಪುರದ ಅದಿಲ್‌ಶಾಹಿ ಮುಂತಾದ ಪುಸ್ತಕಗಳ ಪ್ರಕಟಣೆ.
  • ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳ, ಕಾರ್ಯಾಗಾರಗಳ ಸಂಘಟಣೆ, ಕರ್ನಾಟಕ ಸರಕಾರದ ಗೆಜೆಟಿಯರ್ ಇಲಾಖೆಗಾಗಿ ಬಿಜಾಪುರ ಜಿಲ್ಲಾ ಗೆಜೆಟಿಯರ್ ಸಂಪಾದನೆಗೆ ವಿಶೇಷ ಸಲಹಾ ಸಮಿತಿ ಸದಸ್ಯರಾಗಿ-
  • ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಯೋಜನೆಯ ಸಂಪಾದಕ ಸಮಿತಿ ಸದಸ್ಯರಾಗಿದ್ದು, ೪ ಸಂಪುಟಗಳ ಸಂಪಾದಕರಾಗಿ-
  • ವಚನ ಪಿತಾಮಹ ಡಾ .ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ಅಧ್ಯಯನ ಸಮಿತಿ ಸದಸ್ಯರಾಗಿ ಮತ್ತು ಪಿಎಚ್‌.ಡಿ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ-
  • ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ, ಕನ್ನಡ ಅನುಷ್ಠಾನ ಸಮಿತಿ ಸದಸ್ಯರಾಗಿ ಚಾರಿತ್ರಿಕ ಅವಶೇಷಗಳ ರಕ್ಷಣೆಗಾಗಿ ಭಾರತೀಯ ಕಲೆ ಮತ್ತು ಪರಂಪರೆಯ ರಾಷ್ಟ್ರೀಯ ಪ್ರತಿಷ್ಠಾನದ ಸದಸ್ಯರಾಗಿ-ಹೀಗೆ ಹಲವು ಹತ್ತು ಸಾಹಿತ್ಯಕ ಮತ್ತು ರಚನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗಿ.
  • ಕನ್ನಡ, ಹಿಂದಿ, ಮರಾಠಿ, ದಖನಿ , ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಪಡೆದ ಪರಿಣತಿ. ಈ ಭಾಷೆಗಳಿಂದ ಕನ್ನಡಕ್ಕೆ ಹಲವಾರು ಗ್ರಂಥಗಳ ಅನುವಾದ. ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಮರಾಠಿಯಿಂದ ‘ತುಕರಾಮ’, ಹಂಪಿ ವಿಶ್ವವಿದ್ಯಾಲಯಕ್ಕಾಗಿ ‘ಬುಸಾತಿನೆ-ಸಲಾತಿನ’ ಅನುವಾದಗಳ ಜೊತೆಗೆ ಭಾರತೀಯ ವಿದ್ಯಾಭವನಕ್ಕಾಗಿ ‘ ಮಹಾತ್ಮಗಾಂಧಿ’ ಕೆಲವು ಸಂಪುಟಗಳ ಅನುವಾದಗಳು.
  • ಸೃಜನಾತ್ಮಕ ಬರಹಗಾರರಾಗಿ ಸಂಯುಕ್ತ ಕರ್ನಾಟಕ ಮತ್ತು ಉಷಾಕಿರಣ ಪತ್ರಿಕೆಗಳಿಗೆ ಅಂಕಣಕಾರರಾಗಿದಷ್ಟೇ ಅಲ್ಲದೆ ನಾಡಿನ ಪ್ರಮುಖ ಪತ್ರಿಕೆಗಳಿಗೆ ಬರೆದ ನೂರಾರು ಲೇಖನಗಳು. ಹಲವಾರು ಜನ ಹಿತ ಕಾರ್ಯಕ್ರಮಕಗಳಲ್ಲೂ ಭಾಗಿ.
  • ಕೃಷ್ಣ ಮೇಲ್ದಂಡೆ ಯೋಜನೆ, ಆಲಮಟ್ಟಿ ಅಣೆಕಟ್ಟೆ-ಪುನರ್ವಸತಿ ಯೋಜನೆಗಳ ಕುರಿತು ಸರಕಾರದ, ಸರಕಾರೇತರ ಸಂಸ್ಥೆಗಳ ಸಭೆ ಸಮಾರಂಭಗಳಲ್ಲಿ ವಹಿಸಿದ ಪ್ರಮುಖ ಪಾತ್ರ. ಮಹಾರಾಷ್ಟ್ರದಲ್ಲಿ ಭೀಮಾನದಿಗೆ ಕಟ್ಟಿದ ಅಣೆಕಟ್ಟೆಯಿಂದ ಕರ್ನಾಟಕಕ್ಕೆ ನೀರಿಗಾಗಿ ಆದ ತೊಂದರೆ ನೀಗಲು ಸುಪ್ರೀಂಕೋರ್ಟಿನಿಂದ ಆದೇಶ ಹೊರಡಿಸುವುದರಲ್ಲಿ ವಹಿಸಿದ ಸಕ್ರಿಯ ಪಾತ್ರ. ಇವುಗಳ ಜೊತೆಗೆ ಕರ್ನಾಟಕ ನೀರು-ನೀರಾವರಿ-ಪುನರ್ವಸತಿಗಳ ಬಗ್ಗೆ ಬೆಳಕು ಚೆಲ್ಲಲು ಪತ್ರಿಕೆಗಳಿಗೆ ಬರೆದ ನೂರಾರು ಲೇಖನಗಳು, ಪ್ರಕಟಿಸಿದ ಹಲವಾರು ಪುಸ್ತಕಗಳು.
  • ಕನ್ನಡದ ಉಳಿವಿಗಾಗಿ ಮುಂಬಯಿಯಲ್ಲಿ ಕನ್ನಡ ಗೆಳೆಯರ ಬಳಗ ಮತ್ತು ವಾಚನಾಲಯ, ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ , ರಾಯಚೂರಿನಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಆಯೋಜಿಸಿದ ಹಲವಾರು ಕಾರ್ಯಕ್ರಮಗಳು. ಕರ್ನಾಟಕ ರಾಜ್ಯ ಅಂಚೆ ಮತ್ತು ತಂತಿ ಇಲಾಖೆಯ ಬರಹಗಾರರ , ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ, ‘ಪ್ರತಿಭಾ’ ಮಾಸ ಪತ್ರಿಕೆಯ ಸಂಪಾದಕರಾಗಿ , ರಾಜ್ಯಮಟ್ಟದ ಸಮ್ಮೇಳನ, ಸಂಘಟನೆಗಳ ಕಾರ್ಯಕ್ರಮಗಳು. []

ಸಂಶೋಧನೆ

[ಬದಲಾಯಿಸಿ]
  • ಜಾನಪದ ಕಲಾವಿದರನ್ನು ಗುರುತಿಸಲು ಸಂಘಟಿಸಿದ ಹಲವಾರು ಕಾರ್ಯಕ್ರಮಗಳು, ಧ್ವನಿಸುರುಳಿ ಬಿಡುಗಡೆ, ಆಕಾಶವಾಣಿ ದೂರದರ್ಶನಗಳಿಗಾಗಿ ರೂಪಕಗಳ ರಚನೆ-ಪ್ರಸಾರ ರಚಿಸಿರುವ ಗ್ರಂಥಗಳು ಹಲವಾರು.
  • ಸೋನಾರ್ ಬಾಂಗ್ಲಾ, ದ್ವಿತೀಯ ಮಹಾಯುದ್ಧ, ಕಿತಾಬೆ ನೌರಸ, ಆದಿಲ್‌ಶಾಹಿ ಆಸ್ಥಾನ ಸಾಹಿತ್ಯ , ಬಿಜಾಪುರದ ಅದಿಲ್‌ಶಾಹಿ ಮುಂತಾದ ಇತಿಹಾಸ ಸಂಬಂಧಿ ಗ್ರಂಥಗಳು;
  • ವಿಜಯದಾಸರು, ಮಹಿಪತಿದಾಸ, ಮಹಿಪತಿದಾಸರ ಸಾಹಿತ್ಯದಲ್ಲಿ ಯೋಗದರ್ಶನ, ಮಾಧ್ವಮಠಗಳು, ಮಹಿಪತಿದಾಸರ ಕೀರ್ತನೆಗಳು, ಹರಿದಾಸರು ಕಂಡ ಉತ್ತರಾಧಿಮಠ, ಹರಿದಾಸರು ಕಂಡ ಜಯತೀರ್ಥರು ಮುಂತಾದ ಹರಿದಾಸ ಸಾಹಿತ್ಯ ಕೃತಿಗಳು;
  • ಮನೆಮುಳುಗಿತು, ರತ್ನಾಕರ ಮೊದಲಾದ ಕಾದಂಬರಿಗಳು;
  • ಶ್ರೀ ಸತ್ಯಧ್ಯಾನ ದರ್ಶನ, ತಿಂಮಾಯಣ, ವಿಜಯ ಪ್ರಮೋದ, ನಾ.ಶ್ರೀ. ರಾಜಪುರೋಹಿತರ ಸಂಶೋಧನ ಲೇಖನಗಳು ಮೊದಲಾದ ಸಂಪಾದಿತ ಕೃತಿಗಳಲ್ಲದೆ ನಾಟಕ, ಕಥಾಸಂಕಲನಗಳು ಸೇರಿ ಒಟ್ಟು ೫೦ ಕ್ಕೂ ಹೆಚ್ಚು ಕೃತಿ ಪ್ರಕಟಿತ.[]

ಪ್ರಶಸ್ತಿ

[ಬದಲಾಯಿಸಿ]
  • ಸಂಶೋಧನ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಗಳಗನಾಥ-ರಾಜ ಪುರೋಹಿತ ಪ್ರತಿಷ್ಠಾನದಿಂದ ರಾಜಪುರೋಹಿತ ಪ್ರಶಸ್ತಿ.
  • ಅನುವಾದ ಸಾಹಿತ್ಯ ಅಕಾಡಮಿಯಿಂದ ಜೀವಮಾನದ ಸಾಧನೆಗಾಗಿ ಅನುವಾದ ಸಾಹಿತ್ಯ ಅಕಾಡಮಿ ಪ್ರಶಸ್ತಿ.
  • ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆಯ ಗೌರವ , ಸನ್ಮಾನಗಳು ದೊರೆತಿವೆ.
  • ಡಾ.ಸುಮಿತ್ರಾ ದಶರಥ ಸಾವಂತರ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರ ಬದುಕು-ಬರೆಹ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್‌.ಡಿ. ಪದವಿ ಪ್ರದಾನ ಮಾಡಿದೆ.
  • ದಾಸ ಸಾಹಿತ್ಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಹಾಗೂ ಅನನ್ಯ ಕೊಡುಗೆ ಸಲ್ಲಿಸಿದ ಕೃಷ್ಣ ಕೊಲ್ಹಾರ ಕುಲಕರ್ಣಿರವರಿಗೆ ರಾಜ್ಯ ಸರ್ಕಾರವು ಕನಕಶ್ರೀ ಪ್ರಶಸ್ತಿಯನ್ನು ನೀಡಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2020-11-25. Retrieved 2018-07-27.
  2. http://kanaja.in/?tribe_events=%E0%B2%A1%E0%B2%BE-%E0%B2%95%E0%B3%83%E0%B2%B7%E0%B3%8D%E0%B2%A3-%E0%B2%95%E0%B3%8A%E0%B2%B2%E0%B3%8D%E0%B2%B9%E0%B2%BE%E0%B2%B0-%E0%B2%95%E0%B3%81%E0%B2%B2%E0%B2%95%E0%B2%B0%E0%B3%8D%E0%B2%A3