ವಿಷಯಕ್ಕೆ ಹೋಗು

ಪಾಕಿಸ್ತಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪಾಕಿಸ್ತಾನ್ ಇಂದ ಪುನರ್ನಿರ್ದೇಶಿತ)
ಪಾಕಿಸ್ತಾನ ಇಸ್ಲಾಮಿ ಗಣರಾಜ್ಯ
اسلامی جمہوریۂ پاکستان
ಇಸ್ಲಾಮಿ ಜಮ್‌ಹೂರಿಯ-ಇ-ಪಾಕಿಸ್ತಾನ್
Flag of ಪಾಕಿಸ್ತಾನ
Flag
ರಾಷ್ಟ್ರಚಿಹ್ನೆ of ಪಾಕಿಸ್ತಾನ
ರಾಷ್ಟ್ರಚಿಹ್ನೆ
Motto: ಇಮಾನ್, ಇತ್ತೆಹಾದ್, ತನ್‍ಜೀಮ್
(ಉರ್ದು ಭಾಷೆಯಲ್ಲಿ: "Faith, Unity, Discipline")
Anthem: Qaumi Tarana
Location of ಪಾಕಿಸ್ತಾನ
Capitalಇಸ್ಲಾಮಾಬಾದ್
Largest cityಕರಾಚಿ
Official languagesಉರ್ದು, ಆಂಗ್ಲ
GovernmentIslamic Federal Republic
Independence 
From United Kingdom
• Water (%)
೩.೧
Population
• ೨೦೦೪ estimate
೧೬೩,೯೮೫,೩೭೩[] (೬th)
GDP (PPP)೨೦೦೫ estimate
• Total
$೪೦೪.೬ billion (೨೬th)
• Per capita
$೨,೬೨೮ (೧೨೮th)
HDI (೨೦೦೧)೦.೫೨೭
Error: Invalid HDI value · ೧೩೫th
CurrencyRupee (Rs.) (PKR)
Time zoneUTC+೫:೦೦ (PST)
• Summer (DST)
UTC+೬:೦೦ (not observed)
Calling code೯೨
Internet TLD.pk

ಪಾಕಿಸ್ತಾನ - ಭಾರತೀಯ ಉಪಖಂಡದಲ್ಲಿನ ದೇಶಗಳಲ್ಲೊಂದು. ದಕ್ಷಿಣ ಏಷ್ಯದ ಒಂದು ದೇಶ. ಪಾಕಿಸ್ತಾನ್ ಇಸ್ಲಾಮಿಕ್ ಗಣರಾಜ್ಯವೆಂದು ಇದರ ಅಧಿಕೃತ ಹೆಸರು. ಪೂರ್ವ ಪಶ್ಚಿಮ ವಾಯವ್ಯ ಹಾಗೂ ಉತ್ತರದಲ್ಲಿ ಇರಾನ್ ಮತ್ತು ಆಫ್ಘಾನಿಸ್ತಾನ, ಈಶಾನ್ಯದಲ್ಲಿ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಭಾರತದ ಜಮ್ಮು-ಕಾಶ್ಮೀರ ಪ್ರದೇಶ, ಪೂರ್ವ ಮತ್ತು ಆಗ್ನೇಯದಲ್ಲಿ ಭಾರತ, ದಕ್ಷಿಣದಲ್ಲಿ ಅರಬ್ಬಿ ಸಮುದ್ರ ಇವೆ. ಉ.ಅ.240 -370 ನಡುವೆ ಹಬ್ಬಿರುವ ಈ ದೇಶದ ವಿಸ್ತೀರ್ಣ 7,96,095 ಚ.ಕಿ.ಮೀ. ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿ ಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಭಾಗವನ್ನು ಇದರಲ್ಲಿ ಸೇರಿಸಿಲ್ಲ. ಪೂರ್ವ ಪಶ್ಚಿಮವಾಗಿ 1287ಕಿ,ಮೀ., ಉತ್ತರ ದಕ್ಷಿಣವಾಗಿ 1505 ಕಿ.ಮೀ. ಇದೆ. ಇದರ ಭೂವಿಸ್ತೀರ್ಣ 778,720 ಚ.ಕಿ.ಮೀ. ಇದ್ದು ಜಲಭಾಗದ ವಿಸ್ತೀರ್ಣ 25,220ಚ.ಕಿ.ಮೀ. ಒಟ್ಟು 803,940 ಚ.ಕಿ.ಮೀ. ಭೂವಿಸ್ತೀರ್ಣವಿರುವ ಇದಕ್ಕೆ 1046 ಚ.ಕಿ.ಮೀ. ಸಮುದ್ರ ತೀರವಿದೆ. ಜನಸಂಖ್ಯೆ 16,24,19,946 (ಜುಲೈ 2005) ರಾಜಧಾನಿ ಇಸ್ಲಾಮಾಬಾದ್. ಪಾಕಿಸ್ತಾನದಲ್ಲಿ ನಾಲ್ಕು ಪ್ರಾಂತ್ಯಗಳಿವೆ :

  • ಬಲೂಚಿಸ್ತಾನ ( ರಾಜಧಾನಿ ಕ್ವೆಟ್ಟ)
  • ವಾಯುವ್ಯ ಸರಹದ್ದು ಪ್ರಾಂತ್ಯ (ಕೇಂದ್ರಾಡಳಿತ ಪಂಗಡ ಪ್ರದೇಶಗಳ ಹೊರತು) ರಾಜಧಾನಿ ಪೆಷಾವರ್
  • ಪಂಜಾಬ್ ( ರಾಜಧಾನಿ ಲಾಹೋರ್)
  • ಸಿಂಧ್ ( ರಾಜಧಾನಿ ಕರಾಚಿ)

ಈ ಪ್ರಾಂತ್ಯಗಳಲ್ಲಿ ಒಟ್ಟು 13 ವಿಭಾಗಗಳು. 51 ಜಿಲ್ಲೆಗಳು ಮತ್ತು ಪಂಗಡ ಪ್ರದೇಶಗಳು ಇವೆ.

ಭೌತಿಕ ಭೂಗೋಳ- ಭೂವಿಜ್ಞಾನ

[ಬದಲಾಯಿಸಿ]

ಪಾಕಿಸ್ತಾನದ ವಿಸ್ತೀರ್ಣ 7,96,095 ಚದರ ಕಿಲೋಮೀಟರುಗಳು. ಇಲ್ಲಿ ಭೂವೈಜ್ಞಾನಿಕವಾಗಿ ಪ್ರಾಚೀನ ಜೀವಕಲ್ಪದ ಕೇಂಬ್ರಿಯನ್ ಯುಗದಿಂದ ತೊಡಗಿ ನವ ಜೀವಕಲ್ಪದ ನವೀನ ಯುಗದ ತನಕದ ಶಿಲಾಸಮುದಾಯವನ್ನು ಕಾಣಬಹುದು. ಆದರೆ ಪ್ರಾಚೀನ ಜೀವಕಲ್ಪದ ಆರ್ಡೋವಿಸಿಯನ್, ಸೈಲೂರಿಯನ್, ಡಿವೋನಿಯನ್ ಮತ್ತು ಕೆಳ ಕಾರ್ಬಾನಿಫೆರಸ್ ಯುಗಗಳ ಶಿಲಾಸಮೂಹ ಉತ್ತರ ಹಿಮಾಲಯವನ್ನುಳಿದರೆ ಭಾರತದಲ್ಲಾಗಲಿ ಪಾಕಿಸ್ತಾನದಲ್ಲಾಗಲಿ ರೂಪುಗೊಂಡಿಲ್ಲವೆಂದೇ ಹೇಳಬಹುದು. ಇದರಿಂದಾಗಿ ಪ್ರಾಚೀನ ಜೀವಕಲ್ಪದ ಸುಮಾರು ಮುಕ್ಕಾಲು ಭಾಗ ಭೂ ಚರಿತ್ರೆ ಈ ಎರಡೂ ದೇಶಗಳಲ್ಲಿ ಅಲಭ್ಯ.

ಪ್ರಾಚೀನ ಜೀವಕಲ್ಪದ ಮೊದಲ ಯುಗ ಕೇಂಬ್ರಿಯನ್. ಈ ಯುಗದ ಶಿಲಾ ಸಮುದಾಯ ಪಾಕಿಸ್ತಾನದ ಸಾಲ್ಟ್‍ರೇಂಜಿನಲ್ಲಿ ಅತ್ಯಂತ ಶ್ರೇಷ್ಠವಾಗಿ ರೂಪುಗೊಂಡಿದ್ದು ಭಾರತದ ಕೇಂಬ್ರಿಯನ್ ಯುಗಕ್ಕೆ ಇದು ಆದರ್ಶಪ್ರಾಯ ಪ್ರದೇಶವೆನ್ನಿಸಿದೆ. ರಚನಾ ಶಿಲಾಶಾಸ್ತ್ರ ಮತ್ತು ಭೌತ ಭೂವಿಜ್ಞಾನವನ್ನು ಈ ಪ್ರದೇಶದಲ್ಲಿ ಅತ್ಯಂತ ಸಮಂಜಸ ರೀತಿಯಲ್ಲಿ ಅಭ್ಯಸಿಸಬಹುದು. ಇಲ್ಲಿ ಪ್ರಾಚೀನ ಜೀವಿಗಳ ಅವಶೇಷಗಳು ಉತ್ಕ್ರಷ್ಟ ರೀತಿಯಲ್ಲಿ ಇರುವುದರ ಜೊತೆಗೆ ಈ ಪ್ರದೇಶದಲ್ಲಿ ಕಂಡುಬರುವ ಬರಡಾದ ಕೋಡುಗಲ್ಲುಗಳು ಮತ್ತು ಬತ್ತಿದ ತೊರೆಗಳು ಸ್ಥಳದ ಭೂಚಲನೆ ಮತ್ತು ವ್ಯತ್ಯಸ್ತಸ್ಥಿತಿಗಳನ್ನು ಸಾರುವ ಸಮರ್ಪಕ ಭೂದಾಖಲೆಗಳಾಗಿದ್ದು ಈ ಪ್ರದೇಶಕ್ಕೆ ಭೂವಿಜ್ಞಾನದ ಪ್ರದರ್ಶನಾಲಯ ಎಂಬ ಹೆಸರನ್ನು ಅರ್ಥಪೂರ್ಣವಾಗಿ ತಂದಿವೆ.

ಸಾಲ್ಟ್‍ರೇಂಜಿನಲ್ಲಿ ಮಟ್ಟಸ ಬೆಟ್ಟದ ಸಮೂಹವೇ ಉಂಟು. ಪೂರ್ವ ರೇಖಾಂಶ 710 ಮತ್ತು 740 ಯ ಮಧ್ಯದಲ್ಲಿ ಜೀಲಮ್ ಮತ್ತು ಸಿಂಧೂ ನದಿಯ ಮಧ್ಯದಲ್ಲಿ ಸರಪಳಿಯಂತೆ ಇದು ಹಾದಿದೆ. ಜೀಲಮ್ ನದಿಯ ಪಶ್ಚಿಮಕ್ಕೆ ಹೆಚ್ಚು ಕಡಿಮೆ ಪೂರ್ವ-ಪಶ್ಚಿಮವಾಗಿ ಓರಣವಾಗಿರುವ ಈ ಶ್ರೇಣಿ ಪಶ್ಚಿಮಕ್ಕೆ ಸಾಗಿದಂತೆ ವಯೋಮಾನದಲ್ಲಿ ಕಿರಿದಾಗುತ್ತ ಹೋಗುತ್ತದೆ. ಉತ್ತರದಲ್ಲಿ ಪಟವಾರ್ ಪ್ರಸ್ಥಭೂಮಿಯ ವರೆಗೆ ವ್ಯಾಪಿಸಿದ್ದು ಸಾಧಾರಣವಾಗಿ 675 ಮೀ ಎತ್ತರದವರೆಗೆ ಚಾಚಿದೆ.

ಸಾಲ್ಟ್‍ರೇಂಜಿನಲ್ಲಿ ಕೇಂಬ್ರಿಯನ್ ಶಿಲಾಸಮುದಾಯ ಲವಣ ಶಿಲಾಶ್ರೇಣಿಯಿಂದ ಪ್ರಾರಂಭವಾಗಿ ಊದಾಮರಳು ಶಿಲೆ, ನಿಯೊಬಲಸ್ ಪದರಗಳು, ಮೆಗ್ನೀಸಿಯಮ್ ಮರಳು ಶಿಲಾಸ್ತರಗಳನ್ನು ಹೊಂದಿ ಕೃತಕ ಲವಣ ಸ್ಫಟಿಕದ ಜೇಡುಶಿಲೆಯೊಂದಿಗೆ ಮುಕ್ತಾಯವಾಗುತ್ತದೆ. ಖೆವ್ರಬಳಿ ಜಿಪ್ಸಮ್ ಲವಣಗಳಿಗಾಗಿ ಈಗಾಗಲೇ ಗಣಿಗಾರಿಕೆಯನ್ನು ತೊಡಗಲಾಗುತ್ತಿದೆ. ಇಲ್ಲಿಯ ಲವಣಶಿಲೆಗಳು ನೂರು ಮೀಟರುಗಳಷ್ಟು ಮಂದವಾಗಿದ್ದು ವರ್ಷಂಪ್ರತಿ 150,000 ಟನ್ ಲವಣವನ್ನು ಪೂರೈಸುತ್ತಿವೆ. ನಿಯೊಬಲಸ್ ಪದರಗಳಲ್ಲಿ ಬ್ರೇಕಿಯೊಪೋಡ ಹಾಗೂ ಕೇಂಬ್ರಿಯನ್ ಯುಗದ ಸೂಚಿ ಜೀವಿಗಳಾದ ತ್ರಿಪಾಳಿಗಳ ಅವಶೇಷಗಳಿವೆ. ಇವು ಪ್ರಾಗ್ಜೀವ ವಿಜ್ಞಾನಿಗಳ ಗಮನ ಸೆಳೆದಿವೆ. ಸಾಲ್ಟ್‍ರೇಂಜಿನ ಅತ್ಯಂತ ಕೆಳಸ್ತರವಾದ ಲವಣ ಶಿಲೆಗಳ ಮೇಲೆ ಊದಾಬಣ್ಣದ ಮರಳು ಶಿಲೆ ಸಂಚಯಿಸಿದೆ. ಇವೆರಡರ ಸಂಬಂಧ ಸಾಮಾನ್ಯ ಸಂಚಯನ ಶಿಲಾ ಸಂಬಂಧದಂತಿರದೆ ವಿಭಿನ್ನವಾಗಿದ್ದು ಲವಣ ಶಿಲಾಶ್ರೇಣಿಯ ವಯೋಮಾನ ನಿರ್ಧಾರದಲ್ಲಿ ವ್ಯಾಪಕವಾದ ವಾದ ವಿವಾದಕ್ಕೆ ಎಡೆಗೊಟ್ಟಿದೆ. ಈ ಶ್ರೇಣಿಯನ್ನು ಕೇಂಬ್ರಿಯನ್ ಯುಗಕ್ಕೆ ಸೇರಿಸಬೇಕೆ ಇದು ಹೊಂದಿರುವ ಜೀವ್ಯವಶೇಷದ ಆಧಾರದ ಮೇಲೆ ನವ ಜೀವಕಲ್ಪದ ಇಯೊಸೀನ್ ಯುಗಕ್ಕೆ ಸೇರಿಸಬೇಕೆ ಎಂಬ ಜಿಜ್ಞಾಸೆ ಭೂವಿಜ್ಞಾನ ಚರಿತ್ರೆಯಲ್ಲೇ ಅಭೂತಪೂರ್ವ ಎನ್ನಬಹುದಾದ ವಾದಕ್ಕೆ ಎಡೆ ಮಾಡಿ ಪ್ರಪಂಚದ ಹೆಸರಾಂತ ಭೂವಿಜ್ಞಾನಿಗಳು ಇದರಲ್ಲಿ ಪಾಲ್ಗೊಳ್ಳುವಂತಾಯಿತು. ಲವಣಶಿಲೆ ಅತ್ಯಂತ ಮೃದುವಾಗಿದೆ. ಇದು ಗಟ್ಟಿಯಾದ ಊದಾಮರಳು ಶಿಲೆಯ ಅಡಿ ಒತ್ತರಿಸಲ್ಪಟ್ಟು ಈಗಿನ ಸ್ಥಾನ ಪಡೆದಿದೆ. ಹೀಗಾಗಿ ಇದರ ವಯಸ್ಸು ಕೇಂಬ್ರಿಯನ್ ಯುಗವಾಗಿರಲು ಸಾಧ್ಯವಾಗದು ಎಂಬುದು ಒಂದು ಮತ. ಈ ವಾದವನ್ನು ಪುಷ್ಟೀಕರಿಸಲು ಈ ಪ್ರದೇಶಕ್ಕೆ ಹತ್ತಿರವಿರುವ ಕೊಹಟ್ ಪ್ರದೇಶದ ಇಯೊಸೀನ್ ಯುಗದ ಲವಣ ಗುಂಪನ್ನು ಉದಾಹರಿಸುತ್ತಾರೆ. ಅಲ್ಲದೆ ಪ್ರಖ್ಯಾತ ಭೂಸಸ್ಯ ವಿಜ್ಞಾನಿ ಬೀರ್‍ಬಲ್ ಸಾಹನಿ ಈ ಪ್ರದೇಶದ ಮಾದರಿ ಶಿಲೆಯನ್ನು ಸಂಗ್ರಹಿಸಿ ಅಭ್ಯಸಿಸಿ ಇದರಲ್ಲಿರುವ ಸಸ್ಯಗಳ ಬೀಜ ಮುಂತಾದ ಅಂಶಗಳಿಂದಾಗಿ ಸಾಲ್ಟ್‍ರೇಂಜಿನ ಲವಣಶಿಲಾ ಶ್ರೇಣಿ ಇಯೋಸೀನ್ ಯುಗಕ್ಕೆ ಸೇರುತ್ತದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನ್ಯ ಶಿಲೆಗಳಲ್ಲಿ ಸಂಗ್ರಹಿಸಿದ್ದ ಈ ಅವಶೇಷಗಳು ಮೂಲತಃ ಲವಣ ಶಿಲಾ ಶ್ರೇಣಿಗೆ ಸೇರಿದ ಜೀವ್ಯವಶೇಷಗಳಲ್ಲಿ ಅಂತರ್ಜಲದಿಂದ ಸಾಗಿಸಲ್ಪಟ್ಟು ಲವಣ ಶಿಲೆಗಳಿಗೆ ಪ್ರವಹಿಸಿದಂಥವು. ಅಲ್ಲದೆ ಸಂಚಯನ ಶಿಲಾಸಂಬಂಧವಿರುವ ಲವಣಶ್ರೇಣಿಗಳು ಅನೇಕ ಭಾಗಗಳಲ್ಲಿ ವ್ಯಕ್ತಪಟ್ಟಿವೆಯಾದ್ದರಿಂದ ಲವಣ ಶಿಲಾಶ್ರೇಣಿಯ ವಯಸ್ಸು ಕೇಂಬ್ರಿಯನ್ ಎಂಬುದು ಮತ್ತೊಂದು ಗುಂಪಿನ ವಾದ. ಕೇಂಬ್ರಿಯನ್ ಹಾಗೂ ಇಯೊಸೀನ್ ಯುಗಗಳೆರಡಕ್ಕೂ ಸೇರಿದ ಲವಣ ಶಿಲೆಗಳು ಈಗ ಸಾಲ್ಟ್‍ರೇಂಜಿನಲ್ಲಿ ಬೆಳಕಿಗೆ ಬಂದಿವೆ.

ಸಿಂಧ್ ಕಣಿವೆಯ ಬಸ್‍ಮಾಯ್ ಅಪನತಿ (ಆ್ಯಂಟಿಕ್ಲೈನ್) ಮಡಿಕೆಯ ಕೇಂದ್ರ ಭಾಗದ ಭೂ ವೈಜ್ಞಾನಿಕ ಪರಿಶೋಧನೆ ಈ ಪ್ರಾಂತ್ಯದಲ್ಲಿರಬಹುದಾದ ಆರ್ಡೊವಿಸಿಯನ್ ಯುಗದ ಶಿಲಾಸಮೂಹವನ್ನು ಬೆಳಕಿಗೆ ತರುವ ನಿರೀಕ್ಷೆ ಇದೆ. ಇದರ ಹೊರತು ಆರ್ಡೊವಿಸಿಯನ್ ಯುಗದ ಶಿಲೆಗಳು, ಸೈಲೂರಿಯನ್ ಮತ್ತು ಡಿವೋನಿಯನ್ ಶಿಲಾ ಸಮುದಾಯ ಪಾಕಿಸ್ತಾನದ ಮತ್ತಾವ ಭಾಗದಲ್ಲೂ ಪ್ರಕಟವಾಗಿಲ್ಲ.

ಕಾರ್ಬಾನಿಫೆರಸ್ ಯುಗದ ಪ್ರಾರಂಭದಲ್ಲಿ ಭಾರತ ಉಪಖಂಡ ಮೊದಲಬಾರಿ ಹಿಮಯುಗವನ್ನು ಅನುಭವಿಸಿತು. ನೀರ್ಗಲ್ಲು ನದಿಗಳು ಹೊತ್ತುಸಾಗಿಸಿದ ಗುಂಡುಗಳು ರಾಜಾಸ್ಥಾನ, ಬಿಹಾರ ಮತ್ತು ಒರಿಸ್ಸ ಪ್ರಾಂತ್ಯಗಳಲ್ಲಿ ಕಂಡುಬರುತ್ತವೆ. ಇಂಥ ಗುಂಡು ಶಿಲೆಗಳು ಪಾಕಿಸ್ತಾನದ ಸಾಲ್ಟ್‍ರೇಂಜಿನಲ್ಲಿ ಕೃತಕ ಲವಣ ಸ್ಫಟಿಕದ ಜೇಡು ಶಿಲಾ ನಿಕ್ಷೇಪಗಳ ಮೇಲೆ ಸಂಚಯಿಸಿವೆ. ಕಾರ್ಬಾನಿಫೆರಸ್ ಯುಗದ ಅಂತ್ಯದ ವೇಳೆಗೆ ಭೂ ಚಲನೆಯಿಂದಾಗಿ ಸಾಲ್ಟ್‍ರೇಂಜಿನ ಬೆಟ್ಟ ಶ್ರೇಣಿಗಳು ಸಂಚಯನದ ತಗ್ಗುಗಳಾಗಿ ಪರಿವರ್ತಿತವಾದುವು. ಈ ಯುಗದಿಂದ ಪ್ರಾರಂಭವಾಗಿ ನವಜೀವ ಕಲ್ಪದ ಇಯೋಸಿನ್ ಯುಗದ ಅಂತ್ಯದವರೆಗೆ ತಗ್ಗು ಅಸ್ತಿತ್ವದಲ್ಲಿದ್ದು ಈ ಅವಧಿಯ ಸಂಚಯನಗಳೆಲ್ಲವನ್ನೂ ಒಳಗೊಂಡಿರುವುದು ವ್ಯಕ್ತವಾಗುತ್ತದೆ. ಇವು ಸಾಲ್ಟ್‍ರೇಂಜಿನ ಪಶ್ಚಿಮಕ್ಕಷ್ಟೇ ಸೀಮಿತವಾಗಿವೆ. ಪೂರ್ವದಲ್ಲಿ ಪರ್ಮಾಕಾರ್ಬಾನಿಫೆರಸ್ ಯುಗದ ಶಿಲೆಗಳು ಕಣ್ಮರೆಯಾಗಿದ್ದು ಕೇಂಬ್ರಿಯನ್ ಯುಗದ ಶಿಲೆಗಳು ಇಯೋಸಿನ್ ಯುಗದ ಶಿಲೆಗಳೊಡನೆ ಸಂಪರ್ಕಿಸಿವೆ. ಇಲ್ಲಿ ಬೃಹತ್ ಸ್ತರಭಂಗದಿಂದಾಗಿ ಇಯೋಸಿನ್ ಯುಗದ ನಮ್ಯೂಲಿಟಿಕ್ ಸುಣ್ಣ ಶಿಲೆಗಳು ಒತ್ತರಿಸಲ್ಪಟ್ಟಿರುವುದೇ ವಿಭಿನ್ನ ಯುಗದ ಶಿಲೆಗಳ ನಡುವೆ ಇಂಥ ವೈಜ್ಞಾನಿಕ ಭೂವೈಜ್ಞಾನಿಕ ಸಂಬಂಧ ಕಂಡುಬರುವುದಕ್ಕೆ ಕಾರಣ.

ಉತ್ಕೃಷ್ಟ ಜೀವ್ಯವಶೇಷಗಳನ್ನು ಒಳಗೊಂಡಿರುವ ಸಾಲ್ಟ್‍ರೇಂಜಿನ ಪಶ್ಚಿಮ ಭಾಗವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಕೆಳಭಾಗ ಮರಳು ಶಿಲಾಸ್ತರದಿಂದ ಕೂಡಿದ್ದು ಇದರ ಮೇಲೆ ಸುಣ್ಣ ಶಿಲೆ ಸಂಚಯಿಸಿದೆ. ಇದರಲ್ಲಿ ಸಾಗರಜೀವಿ ಬ್ರೇಕಿಯೊಪೋಡದ ಪ್ರಭೇದವಾದ ಪ್ರಡಕ್ಟಸ್ ಜೀವ್ಯವಶೇಷಗಳು ಹೇರಳವಾಗಿವೆ ಎಂದೇ ಇದರ ಹೆಸರು ಪ್ರಡಕ್ಟಸ್ ಸುಣ್ಣಶಿಲೆ. ಪರ್ಮಿಯನ್ ಯುಗದ ಸಾಗರ ಜನಿತ ಶಿಲಾ ಸಮುದಾಯದ ಪೈಕಿ ಸಾಲ್ಟ್‍ರೇಂಜಿನ ಈ ಸುಣ್ಣ ಶಿಲಾನಿಕ್ಷೇಪಗಳು ಮಾದರಿ ನಿಕ್ಷೇಪಗಳೆಂದೇ ಪರಿಗಣಿಸಲ್ಪಟ್ಟಿವೆ.

ಸಾಲ್ಟ್‍ರೇಂಜ್ ಉಳಿದರೆ ಪರ್ಮಾಕಾರ್ಬಾನಿಫೆರಸ್ ಯುಗದ ಶಿಲಾ ಸಮುದಾಯವನ್ನು ಹಜಾರದಲ್ಲಿ ಕಾಣಬಹುದು. ಇಲ್ಲಿ ಅಟಾಕ್ ಮತ್ತು ಡೋಗ್ರಾ ಸ್ಲೇಟುಗಳ ಸಮಕಾಲೀನ ಶಿಲೆಗಳೆನ್ನಿಸಿರುವ ಪುರಾಣ ಯುಗದ ಬುಡಮೇಲಾದ ಸ್ಲೇಟುಗಳ ತುದಿಯನ್ನು ಗುಂಡುಪೆಂಟೆ ಶಿಲೆಗಳು ಆಕ್ರಮಿಸಿವೆ. ನೀರ್ಗಲ್ಲು ನದಿಗಳು ಉಜ್ಜಿರುವ ಗುರುತುಗಳು ಈ ಶಿಲೆಗಳಲ್ಲಿವೆ. ಹೀಗೆ ಇವು ಕಾರ್ಬಾನಿಫೆರಸ್ ಯುಗಕ್ಕೆ ಸೇರಿರುವ ಸ್ಪಷ್ಟ ನಿದರ್ಶನವನ್ನು ಪ್ರದರ್ಶಿಸುತ್ತವೆ.

ಮಧ್ಯ ಜೀವಕಲ್ಪದ ಪ್ರಥಮ ಯುಗವಾದ ಟ್ರಯಾಸಿಕ್ಕಿನ ಶಿಲಾ ಸಮುದಾಯ ಪ್ರಧಾನವಾಗಿ ಬಲೂಚಿಸ್ಥಾನ, ಹಜಾರ ಮತ್ತು ಸಾಲ್ಟ್‍ರೇಂಜ್‍ಗಳಲ್ಲಿ ಕಂಡುಬರುತ್ತದೆ. ಬಲೂಚಿಸ್ಥಾನದಲ್ಲಿ ಮೇಲಣ ಟ್ರಯಾಸಿಕ್ ಶಿಲಾ ಸಮುದಾಯ ಪ್ರಕಟವಾಗಿದೆ. ಆದರೆ ಸಾಲ್ಟ್‍ರೇಂಜ್‍ನಲ್ಲಿ ಕೆಳ ಟ್ರಯಾಸಿಕ್ ಮತ್ತು ಮಧ್ಯಟ್ರಯಾಸಿಕ್ ಯುಗದ ಕೆಳಭಾಗ ವಿವರಿಸಲ್ಪಟ್ಟಿದೆ.

ಬಲೂಚಿಸ್ಥಾನದ ಕ್ವೆಟ್ಟಾ ಮತ್ತು ಜೋಬ್ ಜಿಲ್ಲೆಗಳಲ್ಲಿ ಮೇಲಣ ಟ್ರಯಾಸಿಕ್ ಶಿಲಾಸಮುದಾಯ ಉಂಟು. ಇಲ್ಲಿ ಅದು ಹೊರಚಾಚುಗಳಾಗಿ ಪ್ರಕಟವಾಗಿದೆ. ಸಾವಿರಾರು ಮೀಟರುಗಳಷ್ಟು ಮಂದವಿರುವ ಜೇಡು, ಸ್ಲೇಟು ಮತ್ತು ಇವುಗಳೊಂದಿಗೆ ಬೆರೆತಿರುವ ಸುಣ್ಣ ಶಿಲೆಗಳಲ್ಲಿ ಶೀರ್ಷಾಪಾದಿಯಾದ ಅಮೊನೈಟ್ ಜೀವ್ಯವಶೇಷಗಳಿವೆ. ಇವು ಅನನುರೂಪವಾಗಿ ಸುಣ್ಣಶಿಲೆಯ ಮೇಲೆ ನಿಂತಿವೆ.

ಹಜಾರದ ಟ್ರಯಾಸಿಕ್ ಶಿಲಾ ಸಮುದಾಯ ದಕ್ಷಿಣ ಮತ್ತು ಆಗ್ನೇಯ ದಿಕ್ಕುಗಳಲ್ಲಿ ವ್ಯಾಪಕವಾಗಿ ರೂಪುಗೊಂಡಿದೆ. ಈ ಯುಗದ ಶಿಲೆಗಳು ನೇರವಾಗಿ ಪರ್ಮಾಕಾರ್ಬಾನಿಫೆರಸ್ ಯುಗದ ಸಂಚಿತ ಶಿಲೆಗಳ ಮೇಲೆ ಕೂತಿರುವುದನ್ನು ಕಾಣಬಹುದು. ಅದರಲ್ಲೂ ಹಜಾರದ ಸಿರಬಂದ್ ಪರ್ವತ (ಅಬ್ಬಾಸ್ ಪರ್ವತದ ದಕ್ಷಿಣಕ್ಕಿರುವ ಒಂಟಿ ಪರ್ವತ) ಪರ್ಮೊಕಾರ್ಬಾನಿಕ್ ಫೆರಸ್ ಯುಗದ ಶಿಲೆಗಳಿಂದ ಪ್ರಾರಂಭಿಸಿ ನಮ್ಯೂಲಿಟಿಕ್ ಸುಣ್ಣಶಿಲೆಗಳವರೆಗೆ ಸಂಚಿತ ಶಿಲೆಗಳನ್ನು ಪೇರಿಸಿಕೊಂಡಿರುವುದನ್ನು ಕಾಣಬಹುದು. ಇದರಂತೆ ಹಜಾರದ ದಕ್ಷಿಣ ಗಡಿಸೀಮೆ ಮತ್ತು ಅಟಾಕ್ ಜಿಲ್ಲೆಯ ಕಾಲಚಿತ್ತಾ ಬೆಟ್ಟ ಸಾಲಿನಲ್ಲಿ ಟ್ರಯಾಸಿಕ್ ಯುಗದ ಸುಣ್ಣ ಶಿಲೆಗಳು ನಗ್ನವಾಗಿರುವ ನಮ್ಯೂಲಿಟಿಕ್ ಸುಣ್ಣ ಶಿಲೆಗಳ ಏಕಾವನತ ಮಡಿಕೆಗಳ ಮೇಲೆ ಗುಡ್ಡದೋಪಾದಿಯಲ್ಲಿ ಸಂಚಯಿಸಿವೆ.

ಸಾಲ್ಟ್‍ರೇಂಜಿನಲ್ಲಿ ಟ್ರಯಾಸಿಕ್ ಶಿಲಾಸಮುದಾಯ ಚಿದೇರು ಬೆಟ್ಟಗಳಿಂದ ಆರಂಭವಾಗಿ ಪಶ್ಚಿಮದಲ್ಲಿ ಸಿಂಧೂ ನದಿಯಾಚೆಗೆ ಸಾಗಿದೆ. ಕೇವಲ ಕೆಳಟ್ರಯಾಸಿಕ್ ಮತ್ತು ಮಧ್ಯಟ್ರಯಾಸಿಕ್ಕಿನ ಕೆಳಭಾಗದ ಶಿಲೆಗಳನ್ನು ಮಾತ್ರ ಹೊಂದಿರುವ ಈ ಭಾಗದಲ್ಲಿ ಶೀರ್ಷಪಾದಿಗಳ ಜೀವ್ಯಾವಶೇಷಗಳು ಪರಿಪೂರ್ಣ ಬೆಳವಣಿಗೆಯನ್ನು ತೋರುತ್ತದೆ. ಆದರೆ ಸಿಂಧೂ ನದಿಗೆ ಅಡ್ಡಲಾಗಿ ಬೆಳೆದಿರುವ ಸಾಲ್ಟ್‍ರೇಂಜ್ ಭಾಗದಲ್ಲಿ ಟ್ರಯಾಸಿಕ್ ಶಿಲೆಗಳು ಪೂರ್ಣ ಪ್ರಮಾಣದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಅಮೊನೈಟ್ ಪ್ರಭೇದವಾದ ಸೆರಟೈಟ್ ಜೀವಿಗಳ ಅವಶೇಷ ಹೇರಳವಾಗಿರುವುದರಿಂದ ಈ ಸ್ತರಗಳನ್ನು ಸೆರಟೈಟ ಪದರಗಳೆಂದೇ ಗುರುತಿಸಲಾಗಿದೆ. ಇವುಗಳ ಮಂದ ಸುಮಾರು ಮೂವತ್ತು ಮೀ.ಗಳಷ್ಟು ಉಂಟು. ಈ ಸ್ತರಗಳನ್ನು ಮೂವತ್ತ ರಿಂದ ಅರವತ್ತು ಮೀ. ಮಂದದ ಮರಳು ಶಿಲೆ, ಕ್ರೈನಾಯಿಡ್ ಜೀವ್ಯಾವಶೇಷವಿರುವ ಸುಣ್ಣ ಶಿಲೆ ಹಾಗೂ ಶೀರ್ಷಪಾದಿಗಳಿಂದ ತುಂಬಿರುವ ಮಧ್ಯ ಟ್ರಯಾಸಿಕ್ ಯುಗದ ಡಾಲೋಮೈಟ್ ಶಿಲೆಗಳು ಮುಚ್ಚಿವೆ. ಸಾಲ್ಟ್‍ರೇಂಜ್ ಮಧ್ಯ ಟ್ರಯಾಸಿಕ್ ಯುಗದ ಅನಂತರ ಸಾಗರದ ಹಿಂಜರಿತವನ್ನು ಅನುಭವಿಸಿರುವ ಕುರುಹುಗಳನ್ನು ಈ ಪ್ರದೇಶದ ಭೂ ಚರಿತ್ರೆ ತಿಳಿಸುತ್ತದೆ. ಮೇಲಣ ಟ್ರಯಾಸಿಕ್ ಯುಗದ ಹಾಗೂ ಜುರಾಸಿಕ್ ಯುಗದ ಮೊದಲ ಭಾಗದ ತನಕ ಇದೇ ಪರಿಸ್ಥಿತಿ ಇದ್ದದ್ದು ವ್ಯಕ್ತವಾಗುತ್ತದೆ.

ಮಧ್ಯ ಜೀವಕಲ್ಪದ ಎರಡನೆಯ ಯುಗವಾದ ಜ್ಯುರಾಸಿಕ್ಕನ ಸಾಗರಜನಿತ ಸಂಚಯನಗಳು ಬಹುರಾಷ್ಟ್ರಗಳಲ್ಲಿ ವಿವರಿಸಲ್ಪಟ್ಟಿವೆ. ಭಾರತದಲ್ಲಿ ರಾಜಾಸ್ತಾನ ಹಾಗೂ ಕಚ್‍ನಲ್ಲಿ ಇಂಥ ಸಂಚಯನಗಳು ಕಂಡುಬರುತ್ತವೆ. ಪಾಕಿಸ್ತಾನದ ಸಾಲ್ಟ್‍ರೇಂಜ್ ಮತ್ತು ಬಲೂಚಿಸ್ಥಾನಗಳಲ್ಲಿ ಇಂಥವೇ ಸಂಚಯನಗಳು ಲಭ್ಯವಿವೆ. ಅವುಗಳಲ್ಲೂ ಬಲೂಚಿಸ್ಥಾನದಲ್ಲಿ ಈ ಯುಗದ ಸಂಚಯನಗಳು ಭೌಗೋಳಿಕವಾಗಿ ಹಾಗೂ ಭೂವೈಜ್ಞಾನಿಕವಾಗಿ ಹೆಚ್ಚು ವ್ಯಾಪ್ತಿಗಳಿಸಿವೆ. ಈ ಯುಗದಲ್ಲಿ ಸಮಸ್ತಭೂಮಿಯ ಸಸ್ಯಪ್ರಾಣಿಗಳ ಸಂತತಿಯಲ್ಲಾದ ಬದಲಾವಣೆಯನ್ನು ಈ ಶಿಲಾ ಸಂಚಯನಗಳು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.

ಹಜಾರದ ಉತ್ತರ ಮತ್ತು ದಕ್ಷಿಣ ಭಾಗಗಳೆರಡರಲ್ಲೂ ಜ್ಯುರಾಸಿಕ್ ಶಿಲೆಗಳು ಕಂಡುಬರುತ್ತವೆ. ಆದರೆ ಇವೆರಡರ ನಡುವೆ ಜೀವ್ಯಾವಶೇಷ ಮತ್ತು ಶಿಲಾ ಸ್ವರೂಪಗಳಲ್ಲಿ ಅಪಾರ ವ್ಯತ್ಯಾಸಗಳಿವೆ. ಉತ್ತರ ಹಜಾರದಲ್ಲಿ ಮರಳುಪೂರಿತ ಶಿಲೆಗಳು ಪ್ರಧಾನವಾಗಿದೆ. ದಕ್ಷಿಣದಲ್ಲಿ ಈ ಯುಗದ ಶಿಲೆಗಳು ಅಟಾಕ್ ಜಿಲ್ಲೆಯ ಕಾಲಚಿತ್ತಾ ಬೆಟ್ಟಸಾಲಿನಲ್ಲಿ ಏಕಪ್ರಕಾರವಾಗಿ ಬಾಗಿರುವ ಮಡಿಕೆಗಳಲ್ಲಿ ಹೊರಚಾಚುಗಳಾಗಿ ವ್ಯಕ್ತಪಟ್ಟಿವೆ.

ಯೂರೋಪಿನ ಲಯಾಸ್ ಮತ್ತು ಲೂಲೈಟ್ ಕಾಲಕ್ಕೆ ಸಂಬಂಧಿಸಿದ ಜ್ಯುರಾಸಿಕ್ ಶಿಲೆಗಳು ಬೃಹತ್ ತಗ್ಗಿನಲ್ಲಿ ರೂಪುಗೊಂಡ ಸಂಚಯನಗಳಾಗಿ ಬಲೂಚಿಸ್ತಾನದಲ್ಲಿ ಕಂಡುಬರುತ್ತದೆ. ಸುಣ್ಣ ಜೀವ್ಯವಶೇಷಯುಕ್ತ ಜಿಗುಟು ಸುಣ್ಣ ಶಿಲೆ, ಜೇಡು ಈ ಪ್ರದೇಶದಲ್ಲಿ ಸುಮಾರು 910 ಮೀ. ಮಂದವಾಗಿದ್ದು ಲಯಾಸ್ ಕಾಲದ ಕೆಳಸ್ತರ ಯೂರೋಪಿನಲ್ಲಿ ಕಂಡುಬರುವಂತೆ ಪ್ರಧಾನವಾಗಿ ಶೀರ್ಷಪಾದಿಗಳ ಅವಶೇಷದಿಂದ ಕೂಡಿದೆ.

ಸಿಂಧ್ ಮುಂಚೂಣಿವಲಯವಿರುವ ಪೂರ್ವ ಬಲೂಚಿಸ್ತಾನ ಮಧ್ಯಜೀವಕಲ್ಪದ ಎಲ್ಲ ಯುಗಗಳ ಸಂಚಯನವನ್ನು ತಾಕ್ತ್-ಇ-ಸುಲೈಮಾನ್ ಪರ್ವತದಿಂದ ಮೆಕ್ರಾನ್‍ತೀರದವರೆಗೆ ಉನ್ನತ ಪ್ರದೇಶಗಳಲ್ಲಿ ವ್ಯಕ್ತಪಡಿಸುತ್ತದೆ. ಈಗಿನ ಹಿಮಾಲಯ ಪರ್ವತ ಭಾಗದಲ್ಲಿದ್ದ ಟೆಥಿಸ್ ಸಾಗರ ಬಲೂಚಿಸ್ತಾನಕ್ಕೂ ಚಾಚಿದ್ದುದರ ಫಲವಾಗಿ ಮಧ್ಯಜೀವಕಲ್ಪದ ಸಂಚಿತ ಶಿಲೆಗಳು ಹಿಮಾಲಯ ಪರ್ವತದಲ್ಲಿ ಕಂಡುಬರುವಂತೆಯೇ ಬಲೂಚಿಸ್ತಾನದಲ್ಲೂ ಕಂಡುಬರುತ್ತವೆ. ಇಲ್ಲಿನ ಈ ಸಂಚಯನ ಸಮಾಂತರವಾದ ಅಭಿನತಿ (ಸಿನ್ ಕ್ಲೈನ್) ಹಾಗೂ ಅಪನತಿ (ಆ್ಯಂಟಿಕ್ಲೈನ್) ಮಡಿಕೆಗಳಾಗಿ ಅದುಮಲ್ಪಟ್ಟಿದೆ.

ಸಾಲ್ಟ್‍ರೇಂಜ್‍ನಲ್ಲಿ ಪ್ರಮುಖವಾಗಿ ಮಧ್ಯ ಹಾಗೂ ಮೇಲಣ ಜ್ಯುರಾಸಿಕ್ ಶಿಲೆಗಳು ವಿವಿಧ ವರ್ಣಪಟ್ಟಿಗಳಿರುವ ಮರಳುಶಿಲೆ, ಹಳದಿ ಸುಣ್ಣ ಶಿಲೆಗಳಿಂದ ಕೂಡಿದ್ದು, ಇವನ್ನು ಕಚ್‍ನ ಚಿನ್ನದ ಲುಲೈಟ್ ನಿಕ್ಷೇಪಕ್ಕೆ ಹೋಲಿಸಬಹುದಾಗಿದೆ. ಈ ಯುಗದ ಅತ್ಯುತ್ತಮ ಸಂಚಯನ ಸಾಲ್ಟ್‍ರೇಂಜ್‍ನ ವಾಯವ್ಯಭಾಗದಲ್ಲಿ ನಮ್ಮಾಲ್ ಮತ್ತು ಕೈರಾಬಾದ್ ಪ್ರದೇಶಗಳಲ್ಲಿ ರೂಪುಗೊಂಡಿದೆ. ಈ ಭಾಗದಲ್ಲಿ ಸಂಚಯನ 350 ಮೀ.ಗಳಷ್ಟು, ಕಾಲಾಭಾಗ್ ಬಳಿ 460 ಮೀ.ಗಳಷ್ಟು, ಷೇಕ್‍ಬುಡೀಗ್ ಬೆಟ್ಟ ಮತ್ತು ಸುರ್ಗಾರ್ ಶ್ರೇಣಿ ಬಳಿ 600 ಮೀ.ಗಳಷ್ಟು ಮಂದವಿದೆ. ಸುರ್ಗಾರ್ ಬಳಿ ಐಸಾಖೇಲ್‍ನ ವಾಯವ್ಯ ಭಾಗ ಸಂಪೂರ್ಣವಾಗಿ ಜ್ಯುರಾಸಿಕ್ ಮತ್ತು ನವಜೀವ ಕಲ್ಪದ ಇಯೋಸಿನ್ ಯುಗದ ಶಿಲೆಗಳಿಂದ ಆವೃತವಾಗಿದೆ. ಈ ಸಮುದಾಯದ ಕೆಳಸ್ತರದಿಂದ ವರ್ಷಂಪ್ರತಿ ಒಂದು ಸಾವಿರ ಟನ್‍ಗಳಷ್ಟು ಲಿಗ್ನೈಟನ್ನು ಉತ್ಪಾದಿಸಲಾಗುತ್ತಿದೆ. ಇದರಲ್ಲಿ ದೊರೆಯುವ ಸಸ್ಯಜೀವ್ಯವಶೇಷಗಳು ಗೋಂಡ್ವಾನ ಕಾಲದ ಜಬ್ಬಲ್‍ಪುರ ಹಂತವನ್ನು ಪ್ರತಿನಿಧಿಸುತ್ತವೆ.

ಮಧ್ಯಜೀವಕಲ್ಪದ ಕೊನೆಯ ಯುಗವಾಗಿ ಕ್ರಿಟೇಷಿಯಸ್‍ನಲ್ಲಿ ಜಲಪ್ರಳಯವಾಗಿ ಭೂಮಿಯ ಬಹುಭಾಗ ಸಾಗರದ ಪಾಲಾದದ್ದು ಶಿಲೆ ಹಾಗೂ ಜೀವ್ಯವಶೇಷಗಳೆರಡರಿಂದಲೂ ವ್ಯಕ್ತವಾಗುತ್ತದೆ. ಭಾರತ ಪರ್ಯಾಯ ದ್ವೀಪದಲ್ಲಿ ತಮಿಳುನಾಡಿನಲ್ಲಿ ಉತ್ತತ್ತೂರು, ಅರಿಯಲೂರು, ನಿನ್ನೀಯೂರು ಮತ್ತು ತಿರುಚ್ಚಿರಾಪಳ್ಳಿ ಪ್ರದೇಶ ಸಾಗರದಿಂದ ಆವೃತವಾಗಿದ್ದ ಕುರುಹುಗಳು ಇಂದಿಗೂ ಲಭ್ಯವಿದೆ. ಇದೇ ಕಾಲದಲ್ಲಿ ಉತ್ತರ ಹಿಮಾಲಯ, ಹಜಾರ, ಸಿಂಧ್, ಬಲೂಚಿಸ್ತಾನ, ಸಾಲ್ಟ್‍ರೇಂಜ್, ಅಸ್ಸಾಂ, ಬರ್ಮಗಳ ಬಹುಭಾಗ ಟೆಥಿಸ್ ಸಾಗರದಿಂದ ಆಕ್ರಮಿಸಲ್ಪಟ್ಟು ಈ ಭಾಗಗಳಲ್ಲಿ ಕ್ರಿಟೇಷಿಯಸ್ ನಿಕ್ಷೇಪಗಳನ್ನು ಸಂಚಯಿಸಿದೆ. ವ್ಯಾಪ್ತಿಯಲ್ಲೂ ಈ ಸಂಚಯನಗಳು ಗಮನ ಸೆಳೆಯುತ್ತವೆ. ಹಜಾರದ ಕ್ರಿಟೇಷಿಯಸ್ ಸಂಚಯನ ಮಹಾತಗ್ಗಿನ ಪಶ್ಚಿಮ ಕೊನೆಯನ್ನು ಪ್ರತಿನಿಧಿಸುತ್ತದೆ. ಸಿಂಧ್‍ನ ಲಾಕಿಶ್ರೇಣಿ ಕ್ರಿಟೇಷಿಯಸ್ ಯುಗದ ಮಾದರಿ ಜೀವಿ ಅಥವಾ ಸೂಚ್ಯಜೀವಿ ಎನ್ನಿಸಿದ್ದ ಹಿಪ್ಯೂರೈಟೀಸಿನ ಜೀವ್ಯವಶೇಷವನ್ನು ಹೊಂದಿದ್ದು ಈ ಸಂಚಯನದ ಸಮಕಾಲೀನ ನಿಕ್ಷೇಪಗಳನ್ನು ಇರಾನ್ ಮತ್ತು ಏಷ್ಯ ಮೈನರಿನಲ್ಲಿ ಕಾಣಬಹುದು.

ಸಿಸ್-ಇಂಡಸ್-ಸಾಲ್ಟ್‍ರೇಂಜ್‍ನಲ್ಲಿ ಕ್ರಿಟೇಷಿಯಸ್ ಯುಗದ ಸಂಚಯನ ಅಲ್ಪ ಗಾತ್ರದಲ್ಲಿ ಪ್ರಕಟವಾಗಿದೆ. ಇಲ್ಲಿಯ ಜೀವ್ಯಾವಶೇಷ ಸಂಚಿತ ಶಿಲೆಗಳು ಸಿಂಧೂನದಿಯಾಚೆ ಚಿಚಾಲಿಗುಡ್ಡ, ಮಾಕೇರ್‍ವಾಲ್ ಮತ್ತು ಕಾಲಾಬಾಗಿನ ಸುತ್ತಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿವೆ.

ನವಜೀವಕಲ್ಪದ ಶಿಲಾ ಸಮುದಾಯ ಸಾಮಾನ್ಯವಾಗಿ ಪರ್ವತರೂಪದಲ್ಲಿ ಕಂಡುಬರುವುದೇ ಹೆಚ್ಚು. ಸಿಂಧ್ ಮತ್ತು ಬಲೂಚಿಸ್ಥಾನದ ದಕ್ಷಿಣ ತುದಿಯಿಂದ ಪ್ರಾರಂಭವಾಗಿ ಭಾರತದ ಪಶ್ಚಿಮ ಮಂಚೂಣಿ ವಲಯಗಳ ಮೂಲಕ ಹಾದು ಟ್ರಾನ್ಸ್ ಇಂಡಸ್ ಶ್ರೇಣಿಗಳ ಮೂಲಕ ಹಜಾರ-ಕಾಶ್ಮೀರದ ಭಾಗವನ್ನು ಪ್ರವೇಶಿಸಿ ವಿಶಾಲವಾಗುತ್ತದೆ. ಇಲ್ಲಿಂದ ನವಜೀವಕಲ್ಪದ ಜಾಡು ಪಂಜಾಬ್, ಕುಮಾವನ್, ನೇಪಾಳಗಳ ಮೂಲಕ ಬ್ರಹ್ಮಪುತ್ರ ನದಿಯ ಕಂದರದಲ್ಲಿ ವಿಲೀನವಾಗುತ್ತದೆ. ಈ ಎಲ್ಲಾ ಭಾಗಗಳಲ್ಲೂ ನವಜೀವಕಲ್ಪದ ಶಿಲಾ ಸಮುದಾಯ ಇಯೊಸೀನ್ ಯುಗದಿಂದ ಪ್ರಾರಂಭಿಸಿ ಪ್ಲೀಸ್ಟೊಸೀನ್ ಯುಗದ ತನಕ ವ್ಯಾಪಿಸಿರುವುದು ಕಂಡುಬರುತ್ತದೆ. ಜೀವ್ಯಾವಶೇಷ ಹಾಗೂ ವ್ಯಾಪ್ತಿಯ ದೃಷ್ಟಿಯಿಂದ ನವಜೀವಕಲ್ಪ ಹೆಚ್ಚು ಮಹತ್ವ ಗಳಿಸಿದೆ.

ಉತ್ತರ ಇಂಡಿಯದ ನವಜೀವಕಲ್ಪದ ಭೂವಿಜ್ಞಾನವನ್ನು ಸಂಪೂರ್ಣವಾಗಿ ಪ್ರತಿನಿಧಿಸುವ ಪ್ರದೇಶವೆಂದರೆ ಪಟ್ವಾರ್ ಪ್ರಸ್ಥಭೂಮಿ. ಇದು ಸಿಂಧೂ ನದಿಯ ಪೂರ್ವಕ್ಕೆ ಸಾಲ್ಟ್‍ರೇಂಜ್‍ನಿಂದ ಹಜಾರ ಜಿಲ್ಲೆಯ ಬೆಟ್ಟಗಳ ಪಾದದವರೆಗೆ ಸುಮಾರು 5,000 ಕಿ.ಮೀ.ಗಳಷ್ಟು ಹಬ್ಬಿದೆ. ಸಮುದ್ರಮಟ್ಟದಿಂದ 365-580 ಮೀ. ಎತ್ತರದಲ್ಲಿದೆ. ಈ ಭಾಗದಲ್ಲಿ ನವಜೀವಕಲ್ಪದ ಆಲಿಗೊಸೀನ್ ಯುಗದ ಶಿಲೆಗಳ ಹೊರತು ಎಲ್ಲಾ ಯುಗಗಳ ಶಿಲೆಗಳು ರಾಣಿಕೋಟ್ (ಇಯೊಸೀನ್) ಹಂತದಿಂದ ಪ್ರಾರಂಭಿಸಿ ಪ್ಲೀಸ್ಟೊಸೀನ್ ಯುಗದ ತನಕ ವ್ಯಾಪಿಸಿದೆ. ಇವುಗಳ ಒಟ್ಟಾರೆ ಮಂದ 7,600 ಮೀ.ಗಳಷ್ಟು ಉಂಟು. ಇಲ್ಲಿಯ ಜೀವ್ಯಾವಶೇಷಗಳಿಂದ ನವಜೀವಕಲ್ಪದ ಜೀವಿಗಳ ಚರಿತ್ರೆ ಪೂರ್ತಿಯಾಗಿ ಬೆಳಕಿಗೆ ಬರುತ್ತದೆ. ಈ ಸಂಚಯನವಿಡೀ ಬೃಹತ್ ತಗ್ಗಿನಲ್ಲಾಗಿದೆ. ಇದರ ಉದ್ದ 240 ಕಿಮೀ, ಅಗಲ 110 ಕಿ.ಮೀ. ಎಂದು ಭೂ ವಿಜ್ಞಾನಿಗಳು ಅಂದಾಜುಮಾಡಿದ್ದಾರೆ. ಇದರ ತಳದಲ್ಲಿ ಮಧ್ಯ ಜೀವಕಲ್ಪದ ನಮ್ಯುಲಿಟಿಕ್ ಸುಣ್ಣ ಶಿಲೆ 300 ಮೀ.ಗಳಷ್ಟಿದೆ. ಮೇಲೆ 1800 ಮೀ.ಮಂದದ ಕೊಳಚೆನೀರಿನ ಸಂಚಯನಗಳು ತುಂಬಿವೆ. ಮರ್ರೀ ಸಂಚಯನಗಳೆಂದು ಇವುಗಳಿಗೆ ಹೆಸರುಂಟು. ನದಿನೀರು ಹೊತ್ತುತಂದ ಹಾಗೂ ಗಾಳಿಬೀಸಿ ತಂದ ನಿಕ್ಷೇಪಗಳು (ಸಿವಾಲಿಕ್ ಸಂಚಯನಗಳು) ಮರ್ರೀ ಶ್ರೇಣಿಯ ಮೇಲುಭಾಗವನ್ನು ಆಕ್ರಮಿಸಿವೆ. ಇವುಗಳ ಮಂದ ಸುಮಾರು 5,000 ಮೀ.ಸಿವಾಲಿಕ್ ಸಂಚಯನವನ್ನು ಪ್ಲಿಸ್ಟೊಸೀನ್ ಯುಗದ ಮರಳು ಆವರಿಸಿದೆ. ಪಟ್ವಾರ್ ಮಹಾತಗ್ಗು ಸಿಂಧೂ ಗಂಗಾನದಿಗಳ ಬೃಹತ್ ತಗ್ಗಿನ ಒಂದು ಭಾಗ ಮಾತ್ರ ಎಂಬುದು ಭೂವಿಜ್ಞಾನಿಗಳ ಅಭಿಮತ. ಇದರ ವಿಶಾಲವಾದ ದಕ್ಷಿಣ ಭಾಗವೇ ರಾಜಾಸ್ತಾನದ ತಗ್ಗು ಪ್ರದೇಶವೆಂದು ದೃಢೀಕರಿಸಲಾಗಿದೆ.

ಸಿಂಧ್ ಪ್ರಾಂತ್ಯ ಮತ್ತು ಬಲೂಚಿಸ್ತಾನವನ್ನು ಪ್ರತ್ಯೇಕಿಸುವ ಕಿರ್ತಾರ್, ಲಾಕಿ, ಬುಗ್ತಿ, ಸುಲೈಮಾನ್ ಬೆಟ್ಟಗಳಲ್ಲಿಯೂ ನವಜೀವಕಲ್ಪದ ಶಿಲಾಸಮೂಹ ಪ್ರಕಟವಾಗಿದೆ. ರಾಣಿಕೋಟ್ ಹಂತದಿಂದ ಪ್ರಾರಂಭವಾಗುವ ಈ ನಿಕ್ಷೇಪಗಳು ಪಟ್ವಾರ್ ಪ್ರಸ್ಥಭೂಮಿಯ ನಿಕ್ಷೇಪಗಳಂತೆ ಕೆಳ ಪ್ಲೀಸ್ಟೊಸೀನ್ ಯುಗದತನಕ ವ್ಯಾಪಿಸಿವೆ.

ಅಭಿವೃದ್ಧಿಯ ದೃಷ್ಟಿಯಿಂದ ಸ್ತನಿಗಳ ವಿಕಾಸ ಉಚ್ಛ್ರಾಯ ಸ್ಥಿತಿಯಲ್ಲಿದ್ದುದನ್ನು ಸಿವಾಲಿಕ್ ಬೆಟ್ಟಗಳ ಜೀವ್ಯಾವಶೇಷಗಳು ಸಾರುತ್ತವೆ. ಮಧ್ಯಮಿಯೊಸೀನ್ ಮತ್ತು ಕೆಳಪ್ಲೀಸ್ಟೋಸಿನ್ ಕಾಲದಲ್ಲಿ ಈ ಬೆಟ್ಟಗಳು ರೂಪುಗೊಂಡಿವೆ. ಸಿಂಧ್ ಮತ್ತು ಸಾಲ್ಟ್‍ರೇಂಜ್ ಪ್ರದೇಶದಲ್ಲಿ ಸಿವಾಲಿಕ್ ಬೆಟ್ಟಗಳ ಪರಿಪೂರ್ಣ ಬೆಳವಣಿಗೆಯನ್ನು ಕಾಣಬಹುದು. ಸಿಂಧೂ ನದಿಯ ಮೆಕ್ಕಲು ಪ್ರದೇಶ 200,000 ಚದರ ಕಿ.ಮೀ ವ್ಯಾಪ್ತಿಗಳಿಸಿದ್ದು, ಇದರಡಿಯಲ್ಲಿ ನವಜೀವಕಲ್ಪದ ಶಿಲಾಸ್ತರ ಇದೆಯೆಂದು ಜಿಯೋಡೆಟಿಕ್ ಸಮೀಕ್ಷೆಯಿಂದ ವ್ಯಕ್ತಪಟ್ಟಿದೆ.

ನವಜೀಕಲ್ಪದ ಮಿಯೊಸೀನ್ ಯುಗದಲ್ಲಿ ಉತ್ತುಂಗ ಪರ್ವತ ಹಿಮಾಲಯದ ಉತ್ಥಾನ ಪ್ರಾರಂಭವಾಯಿತು. ಆ ಕಾಲದಲ್ಲಿ ಇಡೀ ಈ ಪ್ರದೇಶ ಹಿಮಾಲಯದ ಮುನ್ತಗ್ಗು ಪ್ರದೇಶವಾಗಿದ್ದು ಅಂದಿನಿಂದಲೂ ಸಂಚಯನ ಪ್ರದೇಶವಾಗಿ ಮಾರ್ಪಟ್ಟಿದೆ. ಆದರೆ ಕೆಳ ಪ್ಲೀಸ್ಟೊಸೀನ್ ಯುಗದಲ್ಲಿ ಹಿಮಾಲಯ ತನ್ನ ಉತ್ಥಾನದ ಪರಮೋಚ್ಛಮಟ್ಟ ತಲುಪಿದಾಗ ಇದರಲ್ಲಿ ಹುಟ್ಟಿದ ನದಿಗಳು ಮುಂದಿನ ತಗ್ಗಿನಲ್ಲಿ ಮೆಕ್ಕಲನ್ನು ತುಂಬಲು ಪ್ರಾರಂಭಿಸಿದುವು. ಹಿಮಾಲಯದ ಮೇಲೇರಿಕೆಗೂ ಈ ಮುನ್ತಗ್ಗು ಪ್ರದೇಶಕ್ಕೂ ಭೂ ವೈಜ್ಞಾನಿಕವಾದ ಸಂಬಂಧವಿದೆ ಎಂಬುದು ಭೂ ವಿಜ್ಞಾನಿಗಳ ಅಭಿಮತ.

ಮೇಲ್ಮೈ ಲಕ್ಷಣ

[ಬದಲಾಯಿಸಿ]

ಪಾಕಿಸ್ತಾನದ ಮೇಲ್ವೈ ಲಕ್ಷಣ ವೈವಿಧ್ಯಪೂರಿತವಾದ್ದು, ಪಾಕಿಸ್ತಾನದ ದಕ್ಷಿಣ ಸರಹದ್ದಿನಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತ ಹಾದುಹೋಗುತ್ತದೆ. ಈ ದೇಶದ ಉತ್ತರದಲ್ಲಿ ಹಿಮಾಲಯ ಪರ್ವತ ಶ್ರೇಣಿಗಳು ಹಾಯ್ದಿವೆ. ದಕ್ಷಿಣದಲ್ಲಿ ಮರುಭೂಮಿಗಳು ಹಬ್ಬಿವೆ. ಉತ್ತರ ಮತ್ತು ಪಶ್ಚಿಮಭಾಗಗಳಲ್ಲಿ ಪರ್ವತಗಳಿಂದ ಕೂಡಿರುವ ಈ ದೇಶದಲ್ಲಿ 6,705 ಮೀ.ಗಳಿಗೂ ಎತ್ತರವಾದ 60 ಶಿಖರಗಳಿವೆ. ಪ್ರಪಂಚದ ಅತ್ಯಂತ ದೊಡ್ಡ ನದಿಗಳಲ್ಲೊಂದಾದ ಸಿಂಧೂ ಇಲ್ಲಿ ಹರಿಯುತ್ತದೆ. ಹೀಗೆ ವಿಭಿನ್ನ ಭೌತಲಕ್ಷಣಗಳಿಂದ ಕೂಡಿರುವ ಈ ದೇಶವನ್ನು 6 ನೈಸರ್ಗಿಕ ವಿಭಾಗಗಳಾಗಿ ವಿಂಗಡಿಸಬಹುದು: 1.ಉತ್ತರದ ಪರ್ವತಗಳು, 2.ಉಪಪರ್ವತ ಪ್ರಸ್ಥಭೂಮಿ, 3.ಸಿಂಧೂಬಯಲು, 4.ಬಲೂಚಿಸ್ತಾನ ಪ್ರಸ್ಥಭೂಮಿ, 5.ಪಶ್ಚಿಮದ ಸರಹದ್ದು ಪರ್ವತಗಳು, 6.ಮರುಭೂಮಿ ಪ್ರದೇಶಗಳು.

ಉತ್ತರದ ಪರ್ವತಗಳು

[ಬದಲಾಯಿಸಿ]

ಹಿಮಾಲಯ ಮತ್ತು ಹಿಮಾಲಾಯಾಂತರ ಪರ್ವತವಲಯ ಇಡೀ ಉತ್ತರ ಭಾಗವನ್ನು ವ್ಯಾಪಿಸಿವೆ. ವಾಯವ್ಯಕ್ಕೆ ಹಿಂದೂಕುಷ್ ಶ್ರೇಣಿಯ ಆಚೆಗೆ ಪ್ರಪಂಚದ ಛಾವಣಿ ಎನಿಸಿದ ಪಾಮಿರ್ ದಿಣ್ಣೆಯಿದೆ. ಇಲ್ಲಿ ಸೋವಿಯತ್ ಒಕ್ಕೂಟ ಮತ್ತು ಪಾಕಿಸ್ತಾನ ಭೂ ಪ್ರದೇಶಗಳು ಆಫ್ಘಾನಿಸ್ತಾನದ ಕಿರಿದಾದ ಭೂ ಪ್ರದೇಶದಿಂದ ಪ್ರತ್ಯೇಕಗೊಂಡಿದೆ. ಉತ್ತರ ಪರ್ವತವಲಯ ಕೆಲವೆಡೆಗಳಲ್ಲಿ 320 ಕಿಮೀಗಳಷ್ಟು ಅಗಲವಾಗಿವೆ. ಇಲ್ಲಿ 6,096 ಮೀ.ಗಳಿಗಿಂತ ಎತ್ತರವಾದ ಶಿಖರಗಳು ಅಲ್ಲಲ್ಲಿ ಎದ್ದು ನಿಂತಿವೆ.

ಈ ಪರ್ವತವಲಯ ಪಾಕಿಸ್ತಾನದ ವಾಯುಗುಣದ ಮೇಲೆ ಗಾಢ ಪ್ರಭಾವ ಬೀರಿದೆ. ಇದು ದಕ್ಷಿಣದಿಂದ ಬೀಸುವ ಮಳೆಯ ಮಾರುತಗಳನ್ನು ತಡೆದು ಇಲ್ಲಿ ಹೆಚ್ಚಿನ ಮಳೆ ಬೀಳಲು ಕಾರಣವಾಗಿದೆ. ಇದರ ಪೂರ್ವಭಾಗ ಮಂಜುಗಡ್ಡೆ ಮತ್ತು ನೀರ್ಗಲ್ಲ ನದಿಗಳಿಂದ ಕೂಡಿದೆ. ಇಲ್ಲಿಯ ಮಂಜುಗಡ್ಡೆಗಳು ಬೇಸಗೆಯಲ್ಲಿ ಕರಗುವುದರಿಂದ ಸಿಂಧೂ ನದಿ ಮತ್ತು ಅದರ ಉಪನದಿಗಳು ಸದಾ ತುಂಬಿ ಹರಿಯುತ್ತವೆ. ಈ ವಲಯದಲ್ಲಿ ಪರ್ವತಗಳ ವಿವಿಧ ಪಂಕ್ತಿಗಳು ಹಬ್ಬಿವೆ. ಉಪಪರ್ವತ ವಲಯ : ಪರ್ವತವಲಯ ಮತ್ತು ಸಿಂಧೂ ನದಿ ಬಯಲಿನ ನಡುವೆ ಇರುವ ಪ್ರದೇಶವನ್ನು 4 ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು: 1.ಸಿಂಧೂ ಆಚೆಗಿನ ಬಯಲು, 2.ಪೊಟ್ವಾರ್ ಪ್ರಸ್ತಭೂಮಿ, ಸಾಲ್ಟ್ ಶ್ರೇಣಿ ಮತ್ತು 4.ಸಿಯಾಲ್‍ಕೋಟ್ ಜಿಲ್ಲೆ.

1. ಸಿಂಧು ಆಚೆಗಿನ ಬಯಲು : ಈ ಪ್ರದೇಶ ಸಿಂಧೂ ನದಿಯ ಪಶ್ಚಿಮಕ್ಕಿರುವ ಪೇಷಾವರ್ ಕಣಿವೆ, ಕೊಹಾಟ್ ಬಯಲು, ಬನ್ನು ಪ್ರಸ್ಥಭೂಮಿ ಇವನ್ನೊಳಗೊಂಡಿದೆ. ಇವುಗಳಲ್ಲಿ ಪೇಷಾವರ್ ಮತ್ತು ಮರ್ಧನ್ ಜಿಲ್ಲೆಗಳನ್ನೊಳಗೊಂಡ ಪೇಷಾವರ್ ಕಣಿವೆ ಅತ್ಯಂತ ಫಲವತ್ತಾದ ವಲಯ. ಇಲ್ಲಿಯ ಹೆಚ್ಚು ಭಾಗ ಒಣಪ್ರದೇಶ. ಇದು ಕುರುಚಲು ಕಾಡುಗಳಿಂದ ಮತ್ತು ತೆಳುಹುಲ್ಲು ನೆಲದಿಂದ ಕೂಡಿದೆ. ಇಲ್ಲಿಯ ಭೂಮಿ ಸಾಮಾನ್ಯವಾಗಿ 305-366 ಮೀ. ಎತ್ತರವಾಗಿದೆ. ಈಚೆಗೆ ವ್ಯಾಪಕ ನೀರಾವರಿ ಯೋಜನೆಯಿಂದ ಲಕ್ಷಾಂತರ ಎಕರೆಗಳು ಸಾಗುವಳಿಯಾಗಿವೆ. ಪೇಷಾವರ್ ಕಣಿವೆಗಿಂತ ಸ್ವಲ್ಪ ಎತ್ತರದಲ್ಲಿರುವ ಕೋಹಾಟ್ ಪ್ರದೇಶದಲ್ಲಿ ಅಲ್ಲಲ್ಲಿ ಸುಣ್ಣದ ಕಲ್ಲಿನ ಏಣುಗಳುಂಟು. ಈ ಪ್ರದೇಶ ಏರುತಗ್ಗಾಗಿದೆ. ಅಲ್ಲಲ್ಲಿ ಹೊಳೆಗಳಿಂದ ಕಣಿವೆಗಳುಂಟಾಗಿದೆ. ಇವು ಆಳದಲ್ಲಿ ಹರಿಯುವುದರಿಂದ ನೀರಾವರಿಗೆ ಅನುಕೂಲವಾಗಿಲ್ಲ. ಮಳೆ ಸುಮಾರು 406 ಮಿ.ಮೀ.

ಕೋಹಾಟ್ ಬಯಲಿನ ದಕ್ಷಿಣಕ್ಕಿರುವ ಬನ್ನು ಬಯಲು ಹೆಚ್ಚಾಗಿ ಗುಡ್ಡ ಬೆಟ್ಟಗಳಿಂದ ಕೂಡಿದೆ. ಕೆಲವೆಡೆ ಗೋಡುಮಣ್ಣಿರುವುದನ್ನು ಬಿಟ್ಟರೆ ಉಳಿದಂತೆ ನೆಲ ಮರಳು ಅಥವಾ ಪುಡಿಗಲ್ಲಿನಿಂದ ಕೂಡಿದ್ದು, ವಾರ್ಷಿಕ ಮಳೆ ಸುಮಾರು 279 ಮಿ.ಮೀ ಮಾತ್ರ.

2.ಪೊಟ್ವಾರ್ ಪ್ರಸ್ಥಭೂಮಿ : ಇದು ಸಿಂಧೂ ನದಿಯ ಪೂರ್ವಕ್ಕೆ ಪಂಜಾಬಿನಲ್ಲಿದೆ. ಇದು ಸುಮಾರು 12,800 ಚ.ಕಿಮೀ ವಿಸ್ತಾರವಾಗಿದೆ. ಇದರ ಎತ್ತರ 366 ಮೀ-579 ಮೀ. ಏರುತಗ್ಗುಗಳಿರುವ ಈ ಬಯಲಿನಲ್ಲಿ ಮರಳುಕಲ್ಲು ಹೆಚ್ಚು. ಗಾಳಿಯಿಂದ ಅಲ್ಲಲ್ಲಿ ವಿವಿಧ ಪ್ರಮಾಣದಲ್ಲಿ ಬಂಕೆ ಮಣ್ಣು ಮತ್ತು ಜೇಡುಮಣ್ಣುಗಳು ಸಂಗ್ರಹವಾಗಿವೆ. ಇಲ್ಲಿ 381-635 ಮಿಮೀ ಮಳೆಯಾಗುತ್ತದೆ. ಮಳೆಗಾಲದಲ್ಲಿ ತೊರೆಗಳು ಭೂಮಿಯನ್ನು ಕೊರೆದು ಮಣ್ಣನ್ನು ಕೊಚ್ಚುತ್ತವೆ. ವ್ಯವಸಾಯಕ್ಕೆ ನೆಲ ಅಷ್ಟು ಅನುಕೂಲಕರವಾಗಿಲ್ಲ. ಇಲ್ಲಿ ಸೋವಾನ್ ನದಿ ಹರಿಯುತ್ತದೆ.

3.ಸಾಲ್ಟ್ ಶ್ರೇಣಿ : ಇದು ಪೊಟ್ವಾರ್ ಪ್ರಸ್ಥಭೂಮಿಯಲ್ಲಿ ದಕ್ಷಿಣಕ್ಕೆ ಮತ್ತು ಪಂಜಾಬ್ ಬಯಲುಗಳ ಉತ್ತರಕ್ಕೆ ಇದೆ. ಇಲ್ಲಿಯ ನೆಲದ ಸರಾಸರಿ ಎತ್ತರ ಸಮುದ್ರಮಟ್ಟದಿಂದ 670 ಮೀ. ಇಲ್ಲಿಯ ಅತ್ಯುನ್ನತ ಶಿಖರ ಸಕೆಸರ್‍ನ ಎತ್ತರ 1,500 ಮೀ. ಉಪಪರ್ವತ ವಲಯ ಮತ್ತು ಸಿಂಧೂ ಬಯಲನ್ನು ಪ್ರತ್ಯೇಕಿಸಿರುವ ಈ ಎತ್ತರ ಪ್ರದೇಶ ತೀರ ಬರಡು. ಸಿಂಧೂ ನದಿಯ ಉಪನದಿಗಳು ಹರಿಯುವ ಈ ಪ್ರದೇಶದಲ್ಲಿ ನೆರೆಯ ಬಯಲುಗಳಿವೆ. ಹಳೆಯ ಕಾಲದ ಕಾಲುವೆಗಳಿವೆ. ಪ್ರವಾಹಗಳ ಕೊರೆತದಿಂದಾಗಿ ತಗ್ಗುದಿಣ್ಣೆಗಳು ಹುಟ್ಟಿಕೊಂಡಿವೆ. ಕೆಲವು ರಮಣೀಯ ಸರೋವರಗಳಿವೆ. ಸಸ್ಯವರ್ಗ ವಿರಳ.

4. ಸಿಯಾಲ್‍ಕೋಟ್ ಜಿಲ್ಲೆ : ಇದು ಈಶಾನ್ಯ ಭಾಗದ ಕಿರಿದಾದ ಉಪಪರ್ವತ ವಲಯ. ಭಾರತದ ಸರಹದ್ದಿನಲ್ಲಿರುವ ಈ ಜಿಲ್ಲೆ ಫಲವತ್ತಾದ ವ್ಯವಸಾಯ ಪ್ರದೇಶ. ಇಲ್ಲಿ ಮಣ್ಣಿನ ಸವೆತ ಹೆಚ್ಚು. ಭೂಗರ್ಭಜಲ ಸಂಪನ್ಮೂಲ ಯಥೇಚ್ಛವಾಗಿದೆ. ಸಾಂದ್ರ ವ್ಯವಸಾಯ ರೂಢಿಯಲ್ಲಿದೆ. ಜನಸಾಂದ್ರತೆ ಅಧಿಕ, ಸುಮಾರು 650ರಿಂದ 900 ಮಿಮೀ ವರೆಗೆ ಮಳೆಯಾಗುತ್ತದೆ.

ಸಿಂಧೂ ಬಯಲು

[ಬದಲಾಯಿಸಿ]

ಪಟ್ವಾರ್ ಪ್ರಸ್ಥಭೂಮಿಯ ಅಂಚಿನಿಂದ ದಕ್ಷಿಣಕ್ಕೆ ಅರಬ್ಬಿ ಸಮುದ್ರದವರೆಗೂ ಈ ಪ್ರದೇಶ ಹಬ್ಬಿದೆ. ಇದು ಫಲವತ್ತಾದ ಮೆಕ್ಕಲು ಮಣ್ಣಿನಿಂದ ಕೂಡಿದ್ದು, ಇದನ್ನು ಉತ್ತರ ವಲಯ ಮತ್ತು ದಕ್ಷಿಣ ವಲಯ ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಉತ್ತರದಲ್ಲಿ ಸಿಂಧೂ ಮತ್ತು ಅದರ ಉಪನದಿಗಳು ಈ ಬಯಲನ್ನು ಸೀಳಿಕೊಂಡು ಹರಿಯುತ್ತವೆ. ನದಿಗಳ ನಡುವೆ ಭೂಮಿ ಎತ್ತರವಾಗಿದೆ. ಅಲ್ಲಲ್ಲಿ ಮರಳುದಿಣ್ಣೆಗಳಾಗಿವೆ. ಪಂಜಾಬ್ ಪ್ರದೇಶದಲ್ಲಿ ಹರಿಯುವ ಐದು ನದಿಗಳು ಒಂದಾಗಿ ಸೇರಿ ಮಿಥಾನ್‍ಕೋಟ್ ಬಳಿ ಸಿಂಧೂನದಿಯೊಡನೆ ಸಂಗಮಿಸುತ್ತವೆ. ಈ ನದಿಗಳಿಂದಾಗಿರುವ ದೋಆಬ್‍ಗಳ ಪೈಕಿ ಅತ್ಯಂತ ದೊಡ್ಡದು ಸಿಂಧ್ ಸಾಗರ್. ಅದು ಸಿಂಧೂ ಮತ್ತು ಚೀನಾಬ್ ನದಿಗಳ ನಡುವಿನ ಇತರ ಉಪನದಿಗಳ ನಡುವೆ ಇರುವ ದೋಆಬ್‍ಗಳು ಫಲವತ್ತಾಗಿವೆ. ಆಧುನಿಕ ನೀರಾವರಿ ವ್ಯವಸ್ಥೆಯಿಂದಾಗಿ ಈ ಬಯಲು ಪಾಕಿಸ್ತಾನದ ಅತ್ಯಂತ ಸಂಪದ್ಭರಿತ ವ್ಯವಸಾಯ ಕ್ಷೇತ್ರವಾಗಿದೆ. ಸಿಂಧೂ ಬಯಲಿನ ದಕ್ಷಿಣ ವಲಯ ಸಿಂಧ್ ಪ್ರಾಂತ್ಯದಲ್ಲಿದೆ. ಪಶ್ಚಿಮಕ್ಕೆ ಕಿರ್ತಾರ್ ಮತ್ತು ಸುಲೇಮಾನ್ ಪರ್ವತಶ್ರೇಣಿಗಳು, ಪೂರ್ವಕ್ಕೆ ಭಾರತದ ಥಾರ್ ಮರುಭೂಮಿ ವಲಯ ಇವು ಇದರ ಮೇರೆಗಳು. ಇಲ್ಲಿ ಭೂಮಿ ಸಡಿಲವಾಗಿದೆ. ಸಿಂಧೂ ನದಿ ಇಲ್ಲಿ ಆಗಾಗ ಪಾತ್ರ ಬದಲಾಯಿಸುತ್ತದೆ. ಮರಳಿನಿಂದ ಕೂಡಿದ ಈ ವಿಸ್ತಾರವಾದ ಬಯಲಿನಲ್ಲಿ ಫಲವತ್ತಾದ ಮರಳು ಮತ್ತು ಜೇಡಿಮಣ್ಣು ಹೆಚ್ಚು. ಸಿಂಧೂನದಿ ಕಣಿವೆಯಲ್ಲಿ ಮೃದುವಾದ ಕೆಂಪು ಮಿಶ್ರಿತ ಹಾಗೂ ಜೇಡಿ ಮರಳು ಮಿಶ್ರಿತ ಮಣ್ಣಿದೆ. ಇಲ್ಲಿ ಎತ್ತರದ ಶಿಖರಗಳುಂಟು. ಪರ್ವತವಲಯ ಬರಡು ನೆಲ. ಪೂರ್ವದಲ್ಲಿರುವ ಮರುಭೂಮಿಗಳು ತಗ್ಗಾದ ಮರಳು ದಿಣ್ಣೆಗಳಿಂದಲೂ ಸಮತಟ್ಟು ಬಯಲುಗಳಿಂದಲೂ ಕೂಡಿವೆ. ಸಿಂಧೂ ನದಿಯ ಪಶ್ಚಿಮಕ್ಕಿರುವ ಮಾಂಛಾರ್ ಜೌಗು ಸರೋವರ ಸಂಪೂರ್ಣವಾಗಿ ನೀರಿನಿಂದ ತುಂಬಿದಾಗ 518 ಚ.ಕಿಮೀಗಳಷ್ಟು ವಿಸ್ತಾರವಾಗಿರುತ್ತದೆ. ದಕ್ಷಿಣ ಏಷ್ಯದಲ್ಲಿ ಇದು ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ. ಸಿಂಧೂ ನದಿಯ ಮುಖಜಭೂಮಿ ಅನೇಕ ಕಿಮೀ ಗಳಷ್ಟು ಅಗಲವಾಗಿದೆ. ಮುಖಜಭೂಮಿಯ ದಕ್ಷಿಣ ತೀರದಲ್ಲಿ ಸಮುದ್ರದ ಅಲೆಗಳು ಮತ್ತು ನದೀ ಪ್ರವಾಹಗಳಿಂದಾಗಿ ಕೆಲವೊಮ್ಮೆ ನದಿಯಲ್ಲಿ ಹಿನ್ನೀರು 32 ಕಿಮೀ ಗಳಷ್ಟು ದೂರ ಒಳಪ್ರದೇಶದ ಕಡೆ ಏರಿ ನಿಲ್ಲುತ್ತದೆ.

ಬಲೂಚಿಸ್ತಾನ ಪ್ರಸ್ಥಭೂಮಿ

[ಬದಲಾಯಿಸಿ]

ಇದು ಸಿಂಧೂ ಬಯಲಿನಿಂದ ಪಶ್ಚಿಮಕ್ಕೆ ಕೋಡಿನಾಕಾರದಲ್ಲಿ ಮುಂಚಾಚಿ ಇರಾನಿನೊಂದಿಗೆ ಸಂಪರ್ಕಿಸುವ ವಿಸ್ತಾರ ಪ್ರದೇಶವನ್ನೊಳಗೊಂಡಿದೆ. ಈ ಪ್ರಸ್ಥಭೂಮಿಯನ್ನು ಪೂರ್ವದಲ್ಲಿ ಸುಲೇಮಾನ್ ಮತ್ತು ಕಿರ್ತಾರ್ ಶ್ರೇಣಿಗಳು ಸಿಂಧೂ ಬಯಲಿನಿಂದ ಬೇರ್ಪಡಿಸಿವೆ. ವಾಯವ್ಯಕ್ಕೆ ತೋಬಕಾಕರ್ ಮತ್ತು ಈಶಾನ್ಯಕ್ಕೆ ಗೋಮಲ್ ನದಿ ಇದರ ಪರಿಮಿತಿಗಳೆನ್ನಬಹುದು. ಪಶ್ಚಿಮಕ್ಕೆ ಇರಾನಿನ ಮಹಾಪ್ರಸ್ಥಭೂಮಿಯ ಭಾಗದಂತಿರುವ ಇದು ಪಾಕಿಸ್ತಾನದ ಗಡಿಯವರೆಗೂ ವ್ಯಾಪಿಸಿದೆ. ಪೂರ್ವದ ಕಿರ್ತಾರ್ ಮತ್ತು ಸುಲೇಮಾನ್ ಶ್ರೇಣಿಗಳು ಉತ್ತರ ದಕ್ಷಿಣವಾಗಿ ಹಬ್ಬಿದ್ದರೆ ದಕ್ಷಿಣ ತೀರಪ್ರದೇಶದ ಮಕ್ರಾನ್ ಬೆಟ್ಟಸಾಲು ಪೂರ್ವ-ಪಶ್ಚಿಮವಾಗಿ ಹಬ್ಬಿದೆ. ಕಾಕರ್ ಬೆಟ್ಟಸಾಲು ಈಶಾನ್ಯ-ನೈಋತ್ಯವಾಗಿ ವ್ಯಾಪಿಸಿದೆ. ಸುಲೇಮಾನ್ ಶ್ರೇಣಿಯಲ್ಲಿರುವ ತಖ್ತ್-ಇ-ಸುಲೇಮಾನ್ ಪರ್ವತದ ಎತ್ತರ 3.353 ಮೀ. ಉಳಿದೆಡೆ 1,829-2,134 ಮೀ. ಎತ್ತರದ ಶಿಖರಗಳು ಅಲ್ಲಲ್ಲಿವೆ. ಸುಲೇಮಾನ್ ಮತ್ತು ತೋಬಕಾಕರ್ ಶ್ರೇಣಿಗಳ ನಡುವೆ ಝೋಬ್ ಮತ್ತು ಬೆಜಿ ಉಪನದಿಗಳ ಜಲಾನಯನ ಪ್ರದೇಶಗಳಿವೆ. ಆಗ್ನೇಯದಲ್ಲಿರುವ ಕಿರ್ತಾರ್ ಶ್ರೇಣಿ ದಕ್ಷಿಣದಲ್ಲಿ 1,219 ಮೀಗಳಿಂದ ಹಿಡಿದು ಉತ್ತರದಲ್ಲಿ 2,438 ಮೀ. ವರೆಗೆ ಎತ್ತರವಾಗಿದೆ. ಕಿರ್ತಾರ್‍ನ ಉತ್ತರ ವಲಯದ ಅತ್ಯಂತ ಎತ್ತರದ ಭಾಗವಾದ ಮತ್ತು ಬಲೂಚಿಸ್ತಾನ ಪ್ರಸ್ಥಭೂಮಿಯ ಮಧ್ಯದಲ್ಲಿರುವ ಕಲಾತ್ ಪೀಠಭೂಮಿಯ ಎತ್ತರ 2,134,-2,438 ಮೀ. ಪಶ್ಚಿಮದ ಸೀಯಾಹಾನ್ ಶ್ರೇಣಿ ಮತ್ತು ವಾಯವ್ಯದ ಜಾಗೈ ಬೆಟ್ಟಗಳ ಕಡೆ ಭೂಮಿಯ ಎತ್ತರ ಕಡಿಮೆಯಾಗುತ್ತ ಹೋಗಿದೆ. ಇಲ್ಲಿ ಸಮತಟ್ಟಾದ ಮರುಭೂಮಿ ಬಯಲುಗಳಿವೆ. ಪಶ್ಚಿಮದ ಬೋಲಾನ್ ಮತ್ತು ಖೋಜಾಕ್ ಕಣಿವೆಗಳಿಂದಾಗಿ ಮೇಲಣ ಪ್ರಸ್ಥಭೂಮಿಯಿಂದ ಕೆಳಗಿನ ಪ್ರಸ್ಥಭೂಮಿ ಬೇರ್ಪಟ್ಟಿದೆ.

ಬಲೂಚಿಸ್ಥಾನ ಪ್ರಸ್ಥಭೂಮಿ ಅತ್ಯಂತ ಬರಡು ಪ್ರದೇಶ. ಇಲ್ಲಿ ಜನಸಾಂದ್ರತೆ ಬಲು ವಿರಳ. ಇದು ಇಡೀ ಪಾಕಿಸ್ತಾನದಲ್ಲೇ ತೀರ ಕಡಿಮೆ. ವ್ಯವಸಾಯಕ್ಕೆ ಅಷ್ಟು ಯೋಗ್ಯವಲ್ಲದ ಈ ಪ್ರದೇಶದಲ್ಲಿ ಪ್ರಾಣಿಗಳನ್ನು ಸಾಕುವುದು ಮುಖ್ಯ ಕಸುಬು.

ಪಶ್ಚಿಮ ಸರಹದ್ದಿನ ಪರ್ವತಗಳು

[ಬದಲಾಯಿಸಿ]

ಇವು ಬಲೂಚಿಸ್ತಾನ ಪ್ರಸ್ಥಭೂಮಿಯ ಉತ್ತರಕ್ಕಿರುವ ಗೋಮಲ್ ನದಿಯಿಂದ ಮುಂದೆ ಆಫ್ಘಾನಿಸ್ತಾನದ ಗಡಿಯ ಉದ್ದಕ್ಕೂ ಹಿಂದೂಕುಷ್ ಪರ್ವತಶ್ರೇಣಿಯ ಬುಡದವರೆಗೆ ವ್ಯಾಪಿಸಿದೆ. ಹಿಂದೂಕುಷ್‍ನ ಎತ್ತರ ಪರ್ವತ ವಲಯದ ದಕ್ಷಿಣಕ್ಕೆ ಕಾಬೂಲ್ ನದಿಯವರೆಗೂ ಈಶಾನ್ಯ-ನೈಋತ್ಯಾಭಿಮುಖವಾಗಿ ಪರ್ವತ ಸಾಲುಗಳು ಹಬ್ಬಿವೆ. ಕಾಬೂಲ್ ನದಿಯ ಉತ್ತರಕ್ಕೆ ಮತ್ತು ಸ್ವಾಟ್ ನದಿಯ ಪಶ್ಚಿಮಕ್ಕೆ 1,524-1,829 ಮೀ. ಎತ್ತರವಿರುವ ಮೊಹಮಂಡ್ ಬೆಟ್ಟಗಳಿವೆ. ಸ್ವಾಟ್ ನದಿಯ ಪೂರ್ವಕ್ಕಿರುವ ಮಾಲಕಂಡ್ ಶ್ರೇಣಿಸ್ವಾಟ್ ಕಣಿವೆಯನ್ನು ಪೆಷಾವರ್ ಕಣಿವೆಯಿಂದ ಬೇರ್ಪಡಿಸುತ್ತದೆ. ಕಾಬೂಲ್ ನದಿಯ ದಕ್ಷಿಣದಲ್ಲಿರುವ ಸಾಕರಮ್ ಆ ಪ್ರದೇಶದ ಅತ್ಯಂತ ಎತ್ತರವಾದ ಶಿಖರ (4,761 ಮೀ).

ಕಾಬೂಲ್ ನದಿಯತ್ತ ಹಬ್ಬಿರುವ ಕಿರಿಯ ಬೆಟ್ಟಸಾಲುಗಳ ದಕ್ಷಿಣದಲ್ಲಿ ಆಫ್ಘಾನಿಸ್ತಾನದ ಗಡಿಯ ಬಳಿ ಇತಿಹಾಸಪ್ರಸಿದ್ಧ ಖೈಬರ್ ಕಣಿವೆ ಇದೆ. ಕಾಬೂಲ್ ನದಿಯ ದಕ್ಷಿಣಕ್ಕೆ ಸಫೆದ್‍ಕೋ ಶ್ರೇಣಿ ಹಬ್ಬಿದೆ. ಸಫೆದ್‍ಕೋ ಶ್ರೇಣಿಯ ಗರಿಷ್ಠ ಎತ್ತರ 4,761 ಮೀ. ಈ ಶ್ರೇಣಿಯನ್ನು ಮೇಲಿನ ಕುರ್ರಮ್ ಕಣಿವೆಯಲ್ಲಿ ಹಬ್ಬಿರುವ, ನೈಋತ್ಯ ಬೆಟ್ಟಸಾಲುಗಳು ತುಂಡರಿಸುತ್ತವೆ. ಖೈಬರ್ ಮತ್ತು ಬೋಲಾನ್ ಕಣಿವೆಗಳ ಮಧ್ಯೆ ಗೋಮಲ್ ಕಣಿವೆ ಇದೆ. ಈ ವಲಯದಲ್ಲಿ ಗೋಮಲ್, ತೋಚಿ ಮತ್ತು ಕುರ್ರಂ ನದಿಗಳು ಹರಿಯುತ್ತವೆ.

ಒಟ್ಟಿನಲ್ಲಿ ಪಶ್ಚಿಮ ಸರಹದ್ದು ಪರ್ವತಗಳ ವಲಯ ಕಣಿವೆಗಳಿಂದಲೂ ಮತ್ತು ಪರ್ವತ ಸಾಲುಗಳಿಂದಲೂ ಕೂಡಿದೆ. ಮಾನ್‍ಸೂನ್ ವಲಯದ ಹೊರಗಿರುವ ಈ ಪ್ರದೇಶದಲ್ಲಿ ಮಳೆ ಕಡಿಮೆ. ಸರಾಸರಿ 304-635 ಮಿಮೀ. ಇಲ್ಲಿ ಸಸ್ಯ ಜೀವನ ಸಮೃದ್ಧವಾಗಿಲ್ಲ. ಕಣಿವೆಗಳಲ್ಲಿ ನದಿಗಳ ದಡಗಳಲ್ಲಿ ಇಳಿಜಾರು ತಟ್ಟುಗಳನ್ನು ಮಾಡಿರುವಲ್ಲಿ ಮತ್ತು ಬೆಟ್ಟಗಳ ತಪ್ಪಲಲ್ಲಿ ಮಾತ್ರ ವ್ಯವಸಾಯ ಸಾಧ್ಯ. ಪ್ರಾಣಿ ಸಾಕಣೆ ಮುಖ್ಯ ಕಸಬು. ಹೇಸರಗತ್ತೆ ಇಲ್ಲಿಯ ಮುಖ್ಯ ಹೇರು ಪ್ರಾಣಿ. ಮರುಭೂಮಿ ಪ್ರದೇಶಗಳು, ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ ಪೂರ್ವ-ಪಶ್ಚಿಮವಾಗಿ ಅಲ್ಲಲ್ಲಿ ಕಿರು ಮರುಭೂಮಿಗಳಿವೆ. ಅವುಗಳಲ್ಲಿ ಸಿಂಧ್ ಸಾಗರ್ ದೋಆಬ್ ಮುಖ್ಯವಾದ್ದು. ಅದರ ಮಧ್ಯದಲ್ಲಿರುವ ಥಾಲ್ ಶುದ್ಧ ಮರುಭೂಮಿಯ ಲಕ್ಷಣಗಳಿಂದ ಕೂಡಿದೆ. ಭಾವಲ್‍ಪುರದ ಚೊಲಿಸ್ತಾನ ಇನ್ನೊಂದು ದೊಡ್ಡ ಮರುಭೂಮಿ. ಇನ್ನೂ ದಕ್ಷಿಣಕ್ಕೆ ಸಿಂಧ್ ಪ್ರಾಂತ್ಯದಲ್ಲಿ ಥಾರ್ ಮರುಭೂಮಿ ಇದೆ. ಇದು ಪಶ್ಚಿಮ ಭಾರತದ ಥಾರ್ ಮರುಭೂಮಿಯ ವಿಸ್ತøತ ಪ್ರದೇಶ. ಬಲೂಚಿಸ್ಥಾನದ ಪಶ್ಚಿಮಭಾಗದಲ್ಲೂ ಮರುಭೂಮಿಗಳಿವೆ.

ನದಿಗಳು

[ಬದಲಾಯಿಸಿ]

ಪಾಕಿಸ್ತಾನದ ಬಹುಭಾಗ ಮರಳು ಬಯಲು ಮತ್ತು ಬರಡು ಪ್ರದೇಶದಿಂದ ಕೂಡಿದ್ದರೂ ಪ್ರಪಂಚದಲ್ಲೇ ಅಸಾಧಾರಣವೆನ್ನುವಂತೆ ಇಲ್ಲಿ ಅನೇಕ ನದಿಗಳು ತುಂಬಿ ಹರಿಯುತ್ತವೆ. ಹಿಂದೂಕುಷ್ ಮತ್ತು ಹಿಮಾಲಯ ಪರ್ವತ ವಲಯಗಳು ಇಲ್ಲಿಯ ನದಿಗಳಿಗೆ ಸತತವಾಗಿ ಜಲವನ್ನೂಡಿಸುತ್ತವೆ. ಸಿಂಧೂ ಮತ್ತು ಅದರ ಉಪನದಿಗಳು ಬಹುಮಟ್ಟಿಗೆ ಪಾಕಿಸ್ತಾನದ ಸಮಗ್ರ ನದಿ ವ್ಯವಸ್ಥೆಯಾಗಿ ಪರಿಣಮಿಸಿವೆ.

ಸಿಂಧೂ ನದಿ ಟಿಬೆಟ್‍ನಲ್ಲಿ ಹುಟ್ಟಿ ವಾಯವ್ಯಾಭಿಮುಖವಾಗಿ ಕಾಶ್ಮೀರವನ್ನು ಹಾಯುತ್ತದೆ. ಅಲ್ಲಿಯ ಕಾರಕೋರಂ ಶ್ರೇಣಿಯಲ್ಲಿ ಬೃಹತ್ ನೀರ್ಗಲ್ಲ ಹೊಳೆಗಳನ್ನು ಕೂಡಿಕೊಂಡು ದಕ್ಷಿಣಾಭಿಮುಖವಾಗಿ ತಿರುಗಿ ಪಾಕಿಸ್ತಾನವನ್ನು ಈಶಾನ್ಯ ಭಾಗದಲ್ಲಿ ಪ್ರವೇಶಿಸುತ್ತದೆ. ಒಟ್ಟು 2,900 ಕಿಮೀಗಳ ಉದ್ದವಿರುವ ಈ ನದಿ ಬೆಟ್ಟ ಗುಡ್ಡಗಳ ಮಧ್ಯೆ ವೇಗವಾಗಿ ಹರಿದು ಮುಂದೆ ತರ್ಬೆಲ ಅಣೆಕಟ್ಟು ಪ್ರದೇಶವನ್ನು ದಾಟುತ್ತದೆ. ಅಟ್ಟಾತ್‍ಗೆ ಸ್ವಲ್ಪ ಮೇಲ್ಭಾಗದಲ್ಲಿ ಆಫ್ಘಾನಿಸ್ತಾನದಿಂದ ಹರಿದು ಬರುವ ಕಾಬೂಲ್ ನದಿ ಸಿಂಧೂ ನದಿಯನ್ನು ಕೂಡುತ್ತದೆ. ಇದು ಕಾಲಾಬಾಗ್ ಬಳಿ ಸಾಲ್ಟ್ ಶ್ರೇಣಿಯನ್ನು ಸೀಳಿಕೊಂಡು ಪಂಜಾಬಿನ ಬಯಲನ್ನು ಪ್ರವೇಶಿಸುತ್ತದೆ.

ಸಿಂಧೂ ನದಿ ಪಂಜಾಬಿನ ಬಯಲಿಗೆ ಬರುವಾಗ ಮಂದಗಮನದಿಂದ ದೊಡ್ಡ ಪಾತ್ರದಲ್ಲಿ ತುಂಬಿ ಹರಿಯುತ್ತದೆ. ಇಲ್ಲಿ ಅದಕ್ಕೆ ಪೂರ್ವದ ಕಡೆ ಝೀಲಂ, ಚೀನಾಬ್, ರಾವಿ, ಬೀಯಾಸ, ಸಟ್ಲೆಜ್ ಮೊದಲಾದ ಉಪನದಿಗಳು ಸೇರುತ್ತವೆ. ಇವು ಸೇರಿದ ಮೇಲೆ ಸಿಂಧೂ ಬೃಹತ್ ಸ್ವರೂಪ ತಳೆದು ಹರಿಯುತ್ತದೆ.

ಪಾಕಿಸ್ತಾನದ ಪಶ್ಚಿಮಭಾಗದಲ್ಲಿ ಹರಿಯುವ ಸ್ವಾಟ್ ನದಿ ಸಿಂಧುವಿನ ಉಪ ನದಿಯಾದ ಕಾಬೂಲ್ ನದಿಯನ್ನು ಸೇರುತ್ತದೆ. ಪೂರ್ವ ಆಫ್ಘಾನಿಸ್ತಾನದಿಂದ ಹರಿದು ಬರುವ ಗೋಮಲ್ ನದಿ ಡೇರ ಇಸ್ಮೇಲ್ ಖಾನ್ ಬಳಿ ಸಿಂಧೂ ನದಿಯನ್ನು ಸೇರುತ್ತದೆ. ಇದರ ಮುಖ್ಯ ಉಪನದಿ ಝೂಬ್, ವಾಯವ್ಯ ಗಡಿ ಪ್ರಾಂತ್ಯದಲ್ಲಿ ಹರಿಯುವ ತೋಚಿ ನದಿ ಕುರ್ರಂ ನದಿಯೊಡಗೂಡಿ ಬನ್ನು ಪ್ರದೇಶದಲ್ಲಿ ಸಿಂಧೂ ನದಿಯನ್ನು ಸೇರುತ್ತದೆ.

ಸಿಂಧ್ ಪ್ರಾಂತ್ಯದಲ್ಲಿ ಈ ನದಿ ತಗ್ಗಿನಲ್ಲಿ ನಿಧಾನವಾಗಿ ಹರಿಯುತ್ತದೆ. ಇದರಿಂದ ನದಿಯ ಪಾತ್ರದಲ್ಲಿ ಮೆಕ್ಕಲು ಮಣ್ಣು ಶೇಖರವಾಗಿ ಅದು ಮರಳು ಬಯಲಿಗಿಂತ ಎತ್ತರವಾಗಿದೆ. ನದಿ ಆಗಾಗ ಪಾತ್ರ ಬದಲಾಯಿಸುವುದರಿಂದ ಇಲ್ಲಿಯ ಬಯಲುಗಳ ಮೇಲ್ಮೈ ಸ್ವರೂಪದ ಮೇಲೆ ಪರಿಣಾಮವುಂಟಾಗುವುದಲ್ಲದೆ ಅಪಾರ ಹಾನಿ ತಟ್ಟುವುದುಂಟು. ಟಟ್ಟಾ ಬಳಿ ನದಿ ಕವಲೊಡೆದು ಕರಾಚಿಗೆ ದಕ್ಷಿಣದಲ್ಲಿ ಸಮುದ್ರ ಸೇರುತ್ತದೆ.

ಪಾಕಿಸ್ತಾನದ ಉದ್ದಕ್ಕೂ ಕಾಲುವೆ ತೋಡಿದಂತೆ ಹರಿಯುವ ಸಿಂಧೂ ಮತ್ತು ಅದರ ಉಪನದಿಗಳು ಅಲ್ಲಿಯ ಜನಜೀವನದ ಮೇಲೆ ಅಗಾಧ ಪರಿಣಾಮ ಬೀರಿವೆ. ಈ ವಲಯದ ಹೊರಗಿರುವ ಬಲೂಚಿಸ್ತಾನದ ಪಶ್ಚಿಮ ಮತ್ತು ದಕ್ಷಿಣ ಭಾಗದ ಕೆಲವು ಸಣ್ಣ ನದಿಗಳು ಅರಬ್ಬಿ ಸಮುದ್ರವನ್ನು ಸೇರುತ್ತವೆ. ಅವುಗಳ ಪೈಕಿ ಹಿಂಗೋಲ್ ಅಥವಾ ನಾಲ್ ಮತ್ತು ದಷ್ತ್ ಮುಖ್ಯವಾದವು. ಇನ್ನು ಕೆಲವು ತೊರೆಗಳು ಪಶ್ಚಿಮಕ್ಕೆ ಹರಿದು ದೊಡ್ಡ ನೀರುದಾಣಗಳನ್ನು ಅಥವಾ ಜೌಗುಸರೋವರಗಳನ್ನು ನಿರ್ಮಿಸಿವೆ.

ಮಣ್ಣು

[ಬದಲಾಯಿಸಿ]

ಪಾಕಿಸ್ತಾನದ ಮಣ್ಣಿನ ಬಹುಭಾಗ ಒಣ ಮಣ್ಣಿನ ವರ್ಗಕ್ಕೆ ಸೇರಿದೆ. ಅದರಲ್ಲಿ ಕಾರ್ಬೊನೇಟ್ ಅಂಶ ಹೆಚ್ಚಿದ್ದು, ಜೈವಿಕ ವಸ್ತು ಕಡಿಮೆ ಪ್ರಮಾಣದಲ್ಲಿದೆ. ಇದು ಕಡಿಮೆ ಮತ್ತು ಅನಿಶ್ಚಿತ ಮಳೆ ಬೀಳುವ ಭೂಮಿಯ ಲಕ್ಷಣ. ಎತ್ತರದ ಪರ್ವತ ವಲಯದಲ್ಲಿ ಹೆಚ್ಚಾಗಿ ಸುಣ್ಣದಕಲ್ಲು ಮತ್ತು ಮರಳಗಲ್ಲು ಮಿಶ್ರಿತಮಣ್ಣು ಕಂಡುಬರುತ್ತವೆ. ಬನ್ನು ಪ್ರದೇಶದಲ್ಲಿ ಮೃದು ಮರಳು ಹರಡಿದೆ. ಡೇರ ಇಸ್ಮೇಲ್ ಖಾನ್ ಭಾಗದಲ್ಲಿ ಪುಡಿಗಲ್ಲು ಮತ್ತು ಮೆಕ್ಕಲು ಮಣ್ಣಿದೆ. ಹಾಗೂ ಸುಣ್ಣದಕಲ್ಲು ವ್ಯಾಪಿಸಿದೆ. ಸಿಯಾಲ್‍ಕೋಟ್ ಜಿಲ್ಲೆಯಲ್ಲಿ ಫಲವತ್ತಾದ ಮಣ್ಣುಂಟು.

ಸಿಂಧೂ ಬಯಲಿನಲ್ಲಿ ಸಿಂಧೂ ನದಿ ಆಗಾಗ ಪಾತ್ರ ಬದಲಾಯಿಸುವುದರಿಂದ ಅಲ್ಲಿ ಕೆಲವು ಕಡೆ ಪ್ರವಾಹದ ಮೆಕ್ಕಲುಮಣ್ಣು ಹರಡಿದೆ. ಸಿಂಧ್‍ನ ಸಿಬಿ ಮತ್ತು ನಾರಾ ಪ್ರದೇಶಗಳಲ್ಲಿ ಸಸ್ಯಾಂಗವಿರುವ ಮತ್ತು ಗೊಬ್ಬರ ಮಣ್ಣಿರುವ ನೆಲವುಂಟು. ಥಾರ್ ಮರುಭೂಮಿ ಪ್ರದೇಶ ಮತ್ತು ಸಿಂಧ್ ಸಾಗರ್ ದೋಅಬ್‍ನ ಜೇಡು ಬೆರೆತ ಮರಳು ಮಣ್ಣಿನಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಅಂಶ ಗಣನೀಯವಾಗಿದೆ. ಸಿಂಧ್‍ನ ತೀರಪ್ರದೇಶದಲ್ಲಿ ಮತ್ತು ಜೌಗು ಹಾಗೂ ಸರೋವರಗಳ ದಡದಲ್ಲಿ ಲವಣಮಿಶ್ರಿತ ಮಣ್ಣುಂಟು.

ಮರುಭೂಮಿ ಪ್ರದೇಶಗಳಲ್ಲಿ ಮತ್ತು ಬಲೂಚಿಸ್ತಾನದ ಬಹುಭಾಗದಲ್ಲಿ ಗಾಳಿಯಿಂದ ತೂರಿಬಂದ ಪುಡಿಮಣ್ಣಿನ ಶೇಖರಣೆಗಳಿವೆ. ಅದು ಬಂಕೆ ಮಣ್ಣು ಅಥವಾ ಬಂಕೆ ಮಣ್ಣು ಮಿಶ್ರಿತ ಮೆಕ್ಕಲುಮಣ್ಣಿನಿಂದ ಕೂಡಿದೆ. ವಿಸ್ತಾರ ಪ್ರದೇಶಗಳಲ್ಲಿ ಶುದ್ಧ ಮರಳು ಇದೆ. ಪಾಕಿಸ್ತಾನದಲ್ಲಿ ನದಿ ಕಣಿವೆಗಳು ಮತ್ತು ಬೆಟ್ಟದ ತಪ್ಪಲುಗಳನ್ನು ಬಿಟ್ಟರೆ ಉಳಿದ ಎಡೆ ಇರುವ ಮಣ್ಣು ವ್ಯವಸಾಯಕ್ಕೆ ಅಷ್ಟು ಉತ್ಕøಷ್ಟವಾಗಿಲ್ಲ. ಹೊಸ ಮಣ್ಣಿನಲ್ಲಿ ನೀರಾವರಿ ಬೆಳೆ ಸಾಗುವಳಿ ಮಾಡಿದಾಗ ಉತ್ತೇಜನಕಾರಕ ಫಲ ದೊರೆತಿದೆ. ಮಣ್ಣು ಸಂರಕ್ಷಣೆ ಮತ್ತು ನೀರಾವರಿ ಯೋಜನೆಗಳು ಇಲ್ಲಿಯ ನೆಲದ ಉಪಯುಕ್ತತೆಯನ್ನು ಹೆಚ್ಚಿಸಿವೆ.

ವಾಯುಗುಣ

[ಬದಲಾಯಿಸಿ]

ಪಾಕಿಸ್ತಾನ ಕರ್ಕಾಟಕ ಸಂಕ್ರಾಂತಿ ವೃತ್ತದ ಉತ್ತರಕ್ಕೆ ಏಷ್ಯದ ಮುಖ್ಯ ಭೂ ಭಾಗದಲ್ಲಿ ಬರುವುದರಿಂದ ಇಲ್ಲಿಯದು ಖಂಡಾಂತರ ಲಕ್ಷಣದ ವಾಯುಗುಣ, ಇದರ ಗಣನೀಯಭಾಗ ಮಾನ್‍ಸೂನ್ ಮಾರುತವಲಯಕ್ಕೆ ಸೇರಿದ್ದರೂ ಉಪಖಂಡದ ಇತರ ಭಾಗಗಳಿಗೆ ಹೋಲಿಸಿದರೆ ಇಲ್ಲಿ ಮಳೆ ತುಂಬ ಕಡಿಮೆ. ಹಿಮಾಲಯದ ದಕ್ಷಿಣದ ಇಳಿಜಾರು ಮತ್ತು ಉಪಪರ್ವತ ವಲಯದಲ್ಲಿ ಸರಾಸರಿ 750-900 ಮಿಮೀ. ಮಳೆಯಾಗುತ್ತದೆ. ಪಟ್ವಾರ್ ಪ್ರಸ್ಥಭೂಮಿಯಲ್ಲಿ 500 ಮಿಮೀ. ಮಳೆಯಾಗುತ್ತದೆ. ಅಲ್ಲಿಂದ ದಕ್ಷಿಣಕ್ಕೆ ಬಹು ಬರಡು ಪ್ರದೇಶವಿದೆ. ಗುಡ್ಡಗಾಡಿನಲ್ಲಿ 50.8 ರಿಂದ 406.4 ಮಿಮೀ ವರೆಗೆ ಮಳೆ ಬಿದ್ದರೆ, ತೀರ ಪ್ರದೇಶದಲ್ಲಿ 101.6 ರಿಂದ 279.4 ಮಿಮೀ ವರೆಗೆ ಮಳೆ ಬೀಳುತ್ತದೆ. ಸಿಂಧ್‍ನ ಪಶ್ಚಿಮಭಾಗದಲ್ಲಿ ಮತ್ತು ಜಾಕೋಬಾದ್‍ನಲ್ಲಿ 127 ಮಿಮೀ ಗಿಂತ ಕಡಿಮೆ ಮಳೆಯಾಗುತ್ತದೆ. ಪಾಕಿಸ್ತಾನದ ಬಹುಭಾಗ ಒಣಪ್ರದೇಶ.

ಪಾಕಿಸ್ತಾನದ ಶ್ರಾಯೀಣ ಮತ್ತು ದೈನಿಕ ಉಷ್ಣತೆಗಳಲ್ಲಿ ತೀವ್ರ ವ್ಯತ್ಯಾಸಗಳಾಗುತ್ತದೆ. ವಿಶೇಷವಾಗಿ ಸಿಂಧ್ ಪ್ರದೇಶದಲ್ಲಿ ಬೇಸಗೆಯಲ್ಲಿ ಉಷ್ಣತೆ ಗರಿಷ್ಠ ಮಟ್ಟ ಮುಟ್ಟುತ್ತದೆ. ಇಡೀ ಉಪಖಂಡದ ಗರಿಷ್ಠ ಉಷ್ಣತೆಯಾದ 52 ಡಿಗ್ರಿ ಸೆ. ಜಾಕೋಬಾದ್‍ನಲ್ಲಿ ದಾಖಲಾಗಿದೆ. ಬಲೂಚಿಸ್ತಾನ್ ಪ್ರಸ್ಥಭೂಮಿಯಲ್ಲಿ ಉಷ್ಣತೆ ಅಧಿಕ. ತೀರದ ಬಯಲುಗಳಲ್ಲಿ ಬೇಸಗೆಯಲ್ಲಿ ಆಗಾಗ ಉಷ್ಣತೆ 46 ಡಿಗ್ರಿ ಸೆ. ದಾಟುತ್ತದೆ. ದಿನದ ಉಷ್ಣತೆಯಲ್ಲಿ ತೀವ್ರ ವ್ಯತ್ಯಾಸಗಳು ಕಂಡುಬರುತ್ತವೆ. ಬೇಸಗೆಯಲ್ಲಿ ಹಗಲಿನಲ್ಲಿ ಬಯಲುಗಳ ಮೇಲೆ ಲೂ ಎಂಬ ಬಿಸಿಮಾರುತಗಳು ಬೀಸುತ್ತವೆ. ದೂಳಿನಿಂದ ಕೂಡಿದ ಬಿರುಗಾಳಿ ಬೀಸಿ ಸಿಡಿಲುಗುಡುಗು ಸಮೇತ ಮಳೆ ತರುವುದುಂಟು. ಇದರಿಂದ ತಾತ್ಕಾಲಿಕವಾಗಿ ಉಷ್ಣತೆ ಕಡಿಮೆಯಾಗುತ್ತದೆ. ಚಳಿಗಾಲ ತಂಪಾಗಿರುತ್ತದೆ. ಕಲಾಟೆ ಮತ್ತು ಕ್ವೆಟ್ಟಾಗಳಲ್ಲಿ ಸ್ವಲ್ಪ ಹಿಮ ಬೀಳುತ್ತದೆ.

ಸಸ್ಯಜೀವನ

[ಬದಲಾಯಿಸಿ]

ಕಿಸ್ತಾನದ ಉತ್ತರದ ಪರ್ವತಶ್ರೇಣಿಗಳನ್ನು ಬಿಟ್ಟರೆ ಉಳಿದೆಡೆ ಸಸ್ಯವರ್ಗ ಬಡವಾಗಿದೆ. ಎತ್ತರದ ಪರ್ವತದ ಇಳಿಜಾರುಗಳಲ್ಲಿ ಓಕ್ ಮತ್ತು ಪೈನ್ ಮರಗಳಿಂದ ಕೂಡಿದ ದಟ್ಟವಾದ ಕಾಡುಗಳಿವೆ. ಕುರುಚಲು ಕಾಡುಗಳಿರುವಲ್ಲಿ ಗಡುಸಾದ ನೀಳಹುಲ್ಲು ಮತ್ತು ಪೊದೆಗಳು ವ್ಯಾಪಿಸಿವೆ. ಪಂಜಾಬಿನ ಮರ್ರಿ ಬೆಟ್ಟಗಳಲ್ಲಿ ಉಪೋಷ್ಣ ವಲಯ ಮತ್ತು ಸಮಶೀತೋಷ್ಣ ವಲಯ ಕಾಡುಗಳಿವೆ. ಬಯಲುಗಳಲ್ಲಿ ದೊಡ್ಡ ಮರಗಳು ವಿರಳ. ಬಲೂಚಿಸ್ತಾನದಲ್ಲಿ ಮತ್ತು ಸಾಲ್ಟ್ ಶ್ರೇಣಿ ಹಾಗೂ ಪಶ್ಚಿಮ ಸರಹದ್ದಿನ ಪರ್ವತಗಳ ಸಸ್ಯವರ್ಗದಲ್ಲಿ ಬಹುಮಟ್ಟಿಗೆ ಜೀರೋಫೈಟಿಕ್ ಸಸ್ಯಗಳಿವೆ. ಇಲ್ಲಿ ಪಿಸ್ತಾ, ಆಲಿವ್, ಆಷ್, ವಿಲೋ ಮರಗಳಿವೆ. ಬೆಟ್ಟದ ಇಳಿಜಾರುಗಳಲ್ಲಿ ಜಾಲಿ ಜಾತಿಯ ಮರ ಮತ್ತು ಹುಲ್ಲು ಬೆಳೆದಿವೆ. ಸಿಂಧೂ ಕಣಿವೆಯಲ್ಲಿ ಜಾಲಿ ಜಾತಿ ಮರಗಳು ಮತ್ತು ಉಳಿದೆಡೆ ತಾಳೆ ಜಾತಿ ಮರಗಳು ಇವೆ.

ಮೀಸಲು ಕಾಡುಗಳಲ್ಲಿ ಪ್ಲಾಂಟೇಷನ್‍ಗಳಿವೆ. ಕೆಲವೆಡೆ ಹಣ್ಣಿನ ಮರಗಳ ತೋಪುಗಳುಂಟು. ಮಾವು, ದ್ರಾಕ್ಷಿ ಸಸ್ಯಗಳಿವೆ. ಇತ್ತೀಚೆಗೆ ತಂದು ಬೆಳೆಸಿದ ಬಾಳೆ, ಕಿತ್ತಳೆ ವಿಶಿಷ್ಟ ಹಣ್ಣಿನ ಸಸ್ಯಗಳಾಗಿವೆ. ಗುಡ್ಡಗಳಲ್ಲಿ ಗಿಡಮೂಲಿಕೆ, ಗೆಡ್ಡೆಗಳು ಹೇರಳವಾಗಿವೆ. ಬಲೂಚಿಸ್ತಾನದಲ್ಲಿ ಕ್ಷಾಮಕಾಲದಲ್ಲಿ ಹುಲ್ಲುಬೀಜಗಳನ್ನು ತಿನ್ನುತ್ತಿದ್ದರು. ಸಿಂಧೂ ಮತ್ತು ಅದರ ಉಪನದಿಗಳಿಂದ ವ್ಯಾಪಕವಾಗಿ ನೀರಾವರಿ ನಡೆದಿರುವುದರಿಂದ ಬೋಳು ಬಯಲುಗಳಲ್ಲಿ ಕಬ್ಬು, ಗೋಧಿ, ಹತ್ತಿ ಮತ್ತು ಬತ್ತದ ಬೆಳೆಗಳು ವ್ಯಾಪಕವಾಗಿವೆ.

ಪ್ರಾಣಿಜೀವನ

[ಬದಲಾಯಿಸಿ]

ಎತ್ತರದ ಪರ್ವತಗಳಲ್ಲಿ ಕಾಡುಪ್ರಾಣಿಗಳು ಅಧಿಕ. ಕಂದು ಕರಡಿ, ಹಿಮಾಲಯದ ಕಪ್ಪು ಕರಡಿ, ಜಿಂಕೆ, ಹಿಮಸಾರಂಗ, ಸೈಬೀರಿಯನ್ ಕಾಡು ಮೇಕೆ ಮತ್ತು ವಿವಿಧ ತಳಿಗಳ ಕಾಡುಕುರಿಗಳು ಇವೆ. ಕೆಲವು ಕಾಡುಗಳಲ್ಲಿ ಜಿಂಕೆ, ಮುಳ್ಳುಹಂದಿ, ಕಾಡುಹಂದಿ, ತೋಳ, ನರಿ, ಕಾಡುಬೆಕ್ಕು ಮೊದಲಾದ ಪ್ರಾಣಿಗಳು ಮತ್ತು ಬಾವಲಿಗಳುಂಟು.

ಸಿಂಧ್‍ನಲ್ಲಿರುವ ಮ್ಯಾಂಚಾರ್ ಸರೋವರದಲ್ಲಿ ಅಪಾರ ಸಂಖ್ಯೆಯಲ್ಲಿ ನೀರುಹಕ್ಕಿಗಳಿವೆ. ಕಾಡುಬಾತು, ಹೆಬ್ಬಾತು, ಮರಬಾತು, ಕೊಕ್ಕರೆ ಮೊದಲಾದ ದೊಡ್ಡ ಪಕ್ಷಿಗಳುಂಟು. ವಿವಿಧ ದಂಶಕ ಪ್ರಾಣಿಗಳು ಮತ್ತು ಉರಗಗಳು ದೇಶಾದ್ಯಂತ ಇವೆ. ಮಲಗಿದಾಗ ತನ್ನ ಬಲಿಯ ಉಸಿರೆಳೆದು ಕೊಲ್ಲುತ್ತದೆಂದು ನಂಬಲಾದ ಮಂಡಲದ ಹಾವು ಇದೆ.

ಸಿಂಧೂ ನದಿಯ ಹಿನ್ನೀರಿನಲ್ಲಿ ಮತ್ತು ನಾರಾ ಕಾಲುವೆಯಲ್ಲಿ ಮೊಸಳೆಗಳುಂಟು. ಬಲೂಚಿಸ್ತಾನದ ಹಿಂಗಲ್ ನದಿಯ ಮೊಸಳೆಗಳಿವೆ. ನದಿಗಳಲ್ಲಿ ವಿಪುಲವಾಗಿ ಮೀನುಗಳುಂಟು. ಸಮುದ್ರದಲ್ಲಿ ತಿಮಿಂಗಿಲ, ಹಂದಿ ಮೀನು, ಷಾರ್ಕ್, ಸೋಲ್ ಸಾರ್ಡಿನ್ ಮೊದಲಾದ ಮೀನುಗಳಿವೆ.

ಪಾಕಿಸ್ತಾನದಲ್ಲಿ ಪ್ರಾಣಿಗಳನ್ನು ಸಾಕುವುದು ಮುಖ್ಯ ಕಸಬುಗಳಲ್ಲೊಂದು. ದನ, ಎಮ್ಮೆ, ಕುರಿ, ಒಂಟೆ, ಕತ್ತೆ, ಕುದುರೆ, ಹೇಸರಗತ್ತೆ ಮೊದಲಾದವನ್ನು ಸಾಕುತ್ತಾರೆ. ಹೇಸರಗತ್ತೆ ಮತ್ತು ಎತ್ತುಗಳನ್ನು ಸಾಗಣೆಗೆ ಬಳಸುತ್ತಾರೆ. ಒಂಟೆಗಳನ್ನು ಸಂಚಾರಕ್ಕೆ ಮತ್ತು ಸಾಂದರ್ಭಿಕವಾಗಿ ಉಳುವುದಕ್ಕೆ ಬಳಸುತ್ತಾರೆ.

ಆರ್ಥಿಕತೆ

[ಬದಲಾಯಿಸಿ]

ಪಾಕಿಸ್ತಾನ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ, ಕೃಷಿಯೇ ಇದರ ಬೆನ್ನೆಲುಬು. ಕೃಷಿ ಕ್ಷೇತ್ರದಲ್ಲಿ ಅಪಾರವಾದ ಸಮಸ್ಯೆಗಳನ್ನೆದುರಿಸುತ್ತಿರುವ ಮತ್ತು ಕೈಗಾರಿಕೆಯಲ್ಲಿ ಹಿಂದುಳಿದಿರುವ ರಾಷ್ಟ್ರ ಪಾಕಿಸ್ತಾನ.

ಪಾಕಿಸ್ತಾನದ ಜನಸಂಖ್ಯೆಯಲ್ಲಿ ಸೇ.25ರಷ್ಟು ಜನ ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ. ಉಳಿದ ಸೇ.75ರಷ್ಟು ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 20001ರ ಜನಗಣತಿಯ ಪ್ರಕಾರ, 1 ಲಕ್ಷ ಜನಸಂಖ್ಯೆಯನ್ನು ಮೀರಿದ 28 ಪಟ್ಟಣಗಳು ಪಾಕಿಸ್ತಾನದಲ್ಲಿದ್ದುವು. 1961ರಿಂದೀಚೆಗೆ ಪಟ್ಟಣಗಳಲ್ಲಿನ ಜನಸಂಖ್ಯೆ ವಿಪರೀತವಾಗಿ ಬೆಳೆಯುತ್ತ ಇದೆ. ಸರ್ಕಾರ ಕೈಗಾರಿಕೆಗೆ ನೀಡುತ್ತಿರುವ ಪ್ರೋತ್ಸಾಹ ಇದಕ್ಕೆ ಮುಖ್ಯ ಕಾರಣ.

ವಿಶ್ವಸಂಸ್ಥೆಯ ಮಾಹಿತಿಯ ಪ್ರಕಾರ ಪಾಕಿಸ್ತಾನ ವಿಶ್ವದ ಅತ್ಯಂತ 20 ಬಡರಾಷ್ಟ್ರಗಳಲ್ಲಿ ಒಂದು. 1970ರಲ್ಲಿ ಈ ದೇಶದಲ್ಲಿಯ ಸರಾಸರಿ ತಲಾ ಆದಾಯ 140 ಡಾಲರ್‍ಗಳಷ್ಟಿತ್ತು. ಆರ್ಥಿಕತೆ ತೀವ್ರವಾಗಿ ಹಿಂದುಳಿದಿರುವ ಕೃಷಿ ಕ್ಷೇತ್ರವನ್ನು ಅವಲಂಬಿಸಬೇಕಾಗಿರುವುದರಿಂದ ಪಾಕಿಸ್ತಾನ ಬಡರಾಷ್ಟ್ರವಾಗಿಯೇ ಮುಂದುವರಿದಿದೆ. ಪಾಕಿಸ್ತಾನದ ಆರ್ಥಿಕ ಇತಿಹಾಸ ಆ ದೇಶದ ಕೃಷಿ ಕ್ಷೇತ್ರ ಹೇಗೆ ಸತತವಾಗಿ ಕಷ್ಟಗಳನ್ನೆದುರಿಸಬೇಕಾಯಿತು ಎಂಬುದನ್ನು ಪ್ರಕಟಿಸುತ್ತದೆ. ಮಳೆಯ ಅನಿಶ್ಚಯತೆ, ವಿಶ್ವಮಾರುಕಟ್ಟೆಯಲ್ಲಿ ಕೃಷಿ ವಸ್ತುಗಳ ಬೆಲೆ ಇಳಿತಾಯ ಇವು ಪಾಕಿಸ್ತಾನವನ್ನು ಕಷ್ಟಕ್ಕೆ ಸಿಲುಕಿಸಿದ ಮುಖ್ಯವಾದ ಅಂಶಗಳಾಗಿವೆ. ಕೃಷಿಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸಾರ್ವತ್ರಿಕವಾಗಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದಕ್ಕಾಗಿ ಪಾಕಿಸ್ತಾನ ಅನೇಕ ಪಂಚವಾರ್ಷಿಕ ಯೋಜನೆಗಳನ್ನು ಕೈಗೊಂಡು ಮುಗಿಸಿದೆ. ಆದರೆ ಈ ಯೋಜನೆಗಳೆಲ್ಲವೂ ಸಂಪೂರ್ಣವಾಗಿ ಯಶಸ್ಸನ್ನು ಸಾಧಿಸಿಲ್ಲ. ಹೀಗಾಗಿ ಪಾಕಿಸ್ತಾನದಲ್ಲೂ ಆರ್ಥಿಕ ಅಭಿವೃದ್ಧಿ ತುಂಬ ಮಂದಗತಿಯಿಂದ ಸಾಗಿದೆ.

ಪಾಕಿಸ್ತಾನದ ಆರ್ಥಿಕತೆಯಲ್ಲಿ ಕೃಷಿಯೇ ಅತ್ಯಂತ ಪ್ರಧಾನವಾದ ಕ್ಷೇತ್ರ 1971-72ರಲ್ಲಿ ಕೃಷಿ, ಅರಣ್ಯ ಮತ್ತು ಮತ್ಸ್ಯ ಕ್ಷೇತ್ರ ಉತ್ಪನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ ಸೇ.41ರಷ್ಟು ಇತ್ತು. ದೇಶದ ಸೇ.80ರಷ್ಟು ಜನ ಕೃಷಿಯನ್ನೇ ಆಧರಿಸಿದ್ದಾರೆ. ವ್ಯವಸಾಯಕ್ಕೆ ಲಭ್ಯವಿರುವ ಭೂಮಿಯನ್ನು ಕುರಿತ ವಿವರಗಳನ್ನು ಕೋಷ್ಟಕ 1 ರಲ್ಲಿ ಕೊಟ್ಟಿದೆ.

1947ರ ಅನಂತರ ಕೃಷಿಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಸಾಧಿಸಲು ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಕೃಷಿ ಉತ್ಪನ್ನದ ಸೂಚ್ಯಂಕ 1948-49ರಲ್ಲಿ 89 ಇದ್ದದ್ದು 1974-75ರ ವೇಳೆಗೆ 186ನ್ನು ಮುಟ್ಟಿತ್ತು. ಆಹಾರ ಪದಾರ್ಥಗಳ ಉತ್ಪಾದನೆಯ ಸೂಚ್ಯಂಕ ಇದೇ ಅವಧಿಯಲ್ಲಿ 100ರಿಂದ 180ಕ್ಕೂ ಆಹಾರೇತರ ಕೃಷಿ ವಸ್ತುಗಳ ಉತ್ಪನ್ನದ ಸೂಚ್ಯಂಕ 100ರಿಂದ 178ಕ್ಕೂ ಏರಿವೆ.

1950ರ ದಶಕದಲ್ಲಿ ಕೃಷಿಕ್ಷೇತ್ರದಲ್ಲಿ ಸೇ. 1.5ರ ದರದಲ್ಲಿ ವಾರ್ಷಿಕ ಬೆಳವಣಿಗೆಯಾಯಿತು. ಎರಡನೆಯ ಪಂಚವಾರ್ಷಿಕ ಯೋಜನೆಯ ಅವಧಿಯಾದ 1960-65ರಲ್ಲಿ ಈ ಕ್ಷೇತ್ರದಲ್ಲಿ ಸೇ. 3.4 ರಂತೆಯೂ 1965-70ರ ಮೂರನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ (1965-70) ಸೇ. 4.1 ರಂತೆಯೂ ವಾರ್ಷಿಕ ಬೆಳವಣಿಗೆಗಳು ಸಾಧಿಸಿದುವು. ಆದರೆ 1970-75ರ ಅವಧಿಯಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡು, ಅದರ ಬೆಳೆವಣಿಗೆಯ ದರ ವರ್ಷಕ್ಕೆ ಸೇ.1ಕ್ಕಿಂತ ಕಡಿಮೆಯಾಯಿತು. ಸರಿಯಾಗಿ ಮಳೆ ಬಾರದ್ದೂ ಆ ಕ್ಷೇತ್ರದಲ್ಲಿ ಹೂಡಿಕೆ ಕಡಿಮೆಯಾದ್ದೂ ಕೃಷಿ ಕ್ಷೇತ್ರದ ಬೆಳೆವಣಿಗೆ ಬಹಳ ಹಿಂದೆ ಬೀಳಲು ಮುಖ್ಯ ಕಾರಣಗಳು.

1972ರ ಮಾರ್ಚ್‍ನಲ್ಲಿ ಸರ್ಕಾರ ಕೈಗೊಂಡ ಭೂಸುಧಾರಣಾ ಯೋಜನೆ ಕೃಷಿ ಕ್ಷೇತ್ರದಲ್ಲಿ ಬಹಳ ಮಹತ್ವದ್ದು. ಭೂಮಿ ಕೆಲವರ ಸ್ವತ್ತಾಗಿದ್ದುದನ್ನು ತಪ್ಪಿಸಿ ಭೂ ಹೀನರಿಗೆ ಇದನ್ನು ಹಂಚುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಈ ಯೋಜನೆಯ ಪ್ರಕಾರ ಭೂ ಒಡೆತನದ ಗರಿಷ್ಠ ಹಾಗೂ ಕನಿಷ್ಠ ಪರಿಮಿತಿಗಳನ್ನು ಗೊತ್ತುಮಾಡಲಾಯಿತು. ಇದರ ಪರಿಣಾಮವಾಗಿ ಸರ್ಕಾರ 9.5 ಲಕ್ಷ ಎಕರೆ ಹೆಚ್ಚುವರಿ ಜಮೀನನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಇದರಲ್ಲಿ 4.39ಲಕ್ಷ ಎಕರೆ ಜಮೀನನ್ನು ಭೂಹೀನರು ಮತ್ತು ಸಣ್ಣ ರೈತರಿಗೆ ಹಂಚಲಾಯಿತು. ಈ ಕಾರ್ಯಕ್ರಮ ಇನ್ನೂ ಮುಂದುವರಿದಿದೆ. ಭೂಸುಧಾರಣೆಯಿಂದ ಕೃಷಿ ಉತ್ಪಾದನೆ ಉತ್ತಮವಾಗುವುದೆಂದು ನಿರೀಕ್ಷಿಸಲಾಗಿದೆ.

ಪಂಚವಾರ್ಷಿಕ ಯೋಜನೆಗಳ ಮೂಲಕ ಪಾಕಿಸ್ತಾನದ ಕೃಷಿಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತರಲು ಯತ್ನಿಸಲಾಗಿದೆ. ಕೃಷಿ ವಿಧಾನದಲ್ಲಿ ಬದಲಾವಣೆ, ಹೆಚ್ಚು ನೀರಾವರಿ ಸೌಲಭ್ಯವನ್ನು ಒದಗಿಸುವುದು ಇವು ಮುಖ್ಯವಾದ ಕ್ರಮಗಳು. ಪಾಕಿಸ್ತಾನದ ಕೃಷಿಕರು ಪ್ರಾಚೀನ ಕಾಲದ ಕೃಷಿವ್ಯವಸ್ಥೆಗೆ ಅಂಟಿಕೊಂಡಿರುವುದರಿಂದ ಕೃಷಿಕ್ಷೇತ್ರದಲ್ಲಿ ತೀವ್ರ ಬದಲಾವಣೆಗಳನ್ನುಂಟು ಮಾಡುವುದು ಕಷ್ಟವಾಗಿದೆ. ಆದರೂ ಕೃಷಿ ವಿಧಾನದಲ್ಲಿ ಬದಲಾವಣೆಗಳು ಕ್ರಮಕ್ರಮವಾಗಿ ಕಾಣಿಸಿಕೊಳ್ಳುತ್ತಿವೆ. ಈ ಬದಲಾವಣೆಗೆ ಸರ್ಕಾರದ ಪ್ರಯತ್ನ ಅತ್ಯಂತ ಮುಖ್ಯ ಕಾರಣ. ವೈಜ್ಞಾನಿಕ ಬೇಸಾಯ, ನೀರಾವರಿ ಸೌಲಭ್ಯದ ಹೆಚ್ಚಳ, ಕೃಷಿಗೆ ಯಂತ್ರದ ಅಳವಡಿಕೆ, ಉತ್ತಮ ಬೀಜಗಳ ಪ್ರಯೋಗ, ರಾಸಾಯನಿಕಗಳ ಬಳಕೆಯ ಪ್ರಯತ್ನಗಳು 1950-1975ರ ಅವಧಿಯಲ್ಲಿ ನಡೆದಿವೆ. ಸಾರ್ವತ್ರಿಕವಾಗಿ ಕೃಷಿ ಕ್ಷೇತ್ರದಲ್ಲಿ ಪಾಕಿಸ್ತಾನ ಸಂಪೂರ್ಣವಾಗಿ ಸ್ವಾವಲಂಬಿಯಾಗಿಲ್ಲದಿದ್ದರೂ ಕೆಲವು ಬೆಳೆಗಳ ವಿಷಯದಲ್ಲಿ ಅದು ಸ್ವಾವಲಂಬನೆ ಸಾಧಿಸಿದೆ. 1970ರ ವೇಳೆಗೆ ಪಾಕಿಸ್ತಾನ ಗೋಧಿಯ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆ ಸಾಧಿಸಿಕೊಂಡು, ಅದನ್ನು ರಫ್ತು ಮಾಡುವ ಸ್ಥಿತಿ ತಲುಪಿತ್ತು. ವಾಸ್ತವವಾಗಿ 1960-70ರ ದಶಕದಲ್ಲಿ ಪಾಕಿಸ್ತಾನದಲ್ಲಿ ಹಸಿರುಕ್ರಾಂತಿ ಆಯಿತೆಂದು ಹೇಳಲಾಗಿದೆ. ಈ ಅವಧಿಯಲ್ಲಿ ಅದರ ಅತ್ಯಂತ ಮುಖ್ಯ ಬೆಳೆಗಳಲ್ಲೊಂದಾದ ಗೋಧಿಯ ಉತ್ಪಾದನೆ 40 ಲಕ್ಷ ಟನ್‍ಗಳಿಂದ 64 ಲಕ್ಷ ಟನ್‍ಗಳಿಗೆ ಏರಿತು. ಹತ್ತಿ ಉತ್ಪಾದನೆ 20 ಲಕ್ಷ ಬೇಲ್‍ಗಳಿಂದ 40 ಲಕ್ಷ ಬೇಲ್‍ಗಳಿಗೆ ಏರಿತು. ಆದರೂ ಅಂತರರಾಷ್ಟ್ರೀಯ ಸರಾಸರಿ ಮಟ್ಟಗಳಿಗೆ ಹೋಲಿಸಿದರೆ ಪಾಕಿಸ್ತಾನದ ಈ ಬೆಳೆಗಳ ಉತ್ಪಾದನೆ ಗಣನೀಯವಾಗಿಲ್ಲ.

ಕೃಷಿ ಕ್ಷೇತ್ರದಲ್ಲಿ ಇನ್ನೂ ಅಪಾರವಾದ ಬದಲಾವಣೆಗಳ ಅಗತ್ಯವಿದೆ. ಈ ಕ್ಷೇತ್ರದ ಸಮಸ್ಯೆಗಳು ತುಂಬ ಜಟಿಲವಾಗಿದ್ದು, ಅವನ್ನು ಕ್ರಮಕ್ರಮವಾಗಿ ಪರಿಹರಿಸಿಕೊಳ್ಳಬೇಕಾಗಿದೆ. ಪಾಕಿಸ್ತಾನದ ಪಂಚವಾರ್ಷಿಕ ಯೋಜನೆಗಳ ಮೂಲಕ ಕೃಷಿ ಕ್ಷೇತ್ರದಲ್ಲಿ ವಿನಿಯೋಜನೆಯನ್ನು ಹೆಚ್ಚು ಮಾಡಿ, ಅದರ ಸಮಸ್ಯೆಗಳನ್ನು ಬಗೆಹರಿಸಿ, ಉತ್ಪಾದನೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆದಿವೆ. ಗ್ರಾಮೀಣ ಅರ್ಥವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಾಣಿ ಸಾಕಣೆ ಪಾಕಿಸ್ತಾನದ ಅತ್ಯಂತ ಮುಖ್ಯ ಉದ್ಯಮಗಳಲ್ಲಿ ಒಂದು, 1971-72ರಲ್ಲಿ ಈ ಕ್ಷೇತ್ರದ ಉತ್ಪನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ ಸೇ 12ರಷ್ಟು ಇತ್ತು. ಉಣ್ಣೆ ಕೈಗಾರಿಕೆ ಮತ್ತು ಚರ್ಮದ ಕೈಗಾರಿಕೆಗೆ ಕಚ್ಚಾ ಸಾಮಗ್ರಿಯನ್ನು ಒದಗಿಸುವುದರಲ್ಲಿ ಈ ಕ್ಷೇತ್ರದ್ದು ಪ್ರಮುಖ ಪಾತ್ರ. ಮತ್ಸ್ಯ ಉತ್ಪಾದನೆಯೂ ಪಾಕಿಸ್ತಾನದಲ್ಲಿ ಒಂದು ಪ್ರಮುಖ ಉದ್ಯಮ. 1969ರ ಸುಮಾರು 18,000 ಟನ್‍ಗಳಷ್ಟು ಮೀನುಗಳನ್ನು ಹಿಡಿಯಲಾಯಿತು. ಅಲ್ಲಿಂದೀಚೆಗೆ ಈ ಉದ್ಯಮದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಲಾಗುತ್ತಿದೆ. ಇಂದು ಪಾಕಿಸ್ತಾನದಲ್ಲಿ 180,000ಚ.ಕಿ.ಮೀ. (1998) ಬೇಸಾಯದ ಭೂಕ್ಷೇತ್ರವಿದೆ. ಒಟ್ಟು ಕೃಷಿ ಕ್ಷೇತ್ರದಲ್ಲಿ ಸೇ. 27.87 ಕೃಷಿ ಭೂಮಿಯೂ, ಸೇ. 0.87 ಪರಂಪರಾಗತ ಬೆಳೆಗಳನ್ನು ಸೇ 71.26 (2001) ರಷ್ಟು ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಕೈಗಾರಿಕೆ

[ಬದಲಾಯಿಸಿ]

ಕೃಷಿಯನ್ನು ಬಿಟ್ಟರೆ ಪಾಕಿಸ್ತಾನದ ಅರ್ಥವ್ಯವಸ್ಥೆಯನ್ನು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿರುವ ಕ್ಷೇತ್ರವೆಂದರೆ ಕೈಗಾರಿಕೆ. 1970ರಲ್ಲಿ ಕೈಗಾರಿಕೋದ್ಯಮದಿಂದ ರಾಷ್ಟ್ರೀಯ ಉತ್ಪನ್ನಕ್ಕೆ ಸೇ. 17ರಷ್ಟು ಸಂದಿತು. ಆದರೆ ದೇಶದ ಒಟ್ಟು ಶ್ರಮದ ಕೇವಲ ಸೇ. 10ರಷ್ಟಕ್ಕೆ ಮಾತ್ರ ಕೈಗಾರಿಕೆಗಳು ಉದ್ಯೋಗ ಒದಗಿಸುತ್ತಿವೆ. ಕೈಗಾರಿಕಾ ಕ್ಷೇತ್ರದಲ್ಲಿ ದೊಡ್ಡ ಕೈಗಾರಿಕೆಗಳು ಪ್ರಧಾನ ಪಾತ್ರ. ಕೈಗಾರಿಕೆಗಳ ಒಟ್ಟು ಉತ್ಪಾದನೆಯಲ್ಲಿ ಸೆ.65ರಷ್ಟು ಭಾಗ ದೊಡ್ಡ ಕೈಗಾರಿಕೆಗಳಿಂದಲೇ ಬರುತ್ತಿದೆ. ಪಾಕಿಸ್ತಾನದಲ್ಲಿ ಕೈಗಾರಿಕಾ ಪ್ರಗತಿ 1950ರಿಂದಲೂ ವೇಗವಾಗಿ ನಡೆಯುತ್ತ ಬಂದಿದೆ. ಪ್ರಾರಂಭದಲ್ಲಿ ಅನುಭೋಗ ಸರಕುಗಳ ಉತ್ಪಾದನೆಗೆ ಪ್ರಾಧಾನ್ಯ ನೀಡಿದ್ದರಿಂದ ಈ ಗುಂಪಿನ ಕೈಗಾರಿಕೆಗಳೇ ಪ್ರಮುಖವಾಗಿ ಅಭಿವೃದ್ಧಿಗೊಂಡವು. ಆದರೆ ಅನಂತರ ಈ ಪ್ರಾಧಾನ್ಯ ಬಂಡವಾಳ ಸರಕುಗಳ ಉತ್ಪಾದನೆಗೆ ದೊರೆಯಿತು. 1960ರ ಅನಂತರ ಹೆಚ್ಚಾಗಿ ಬಂಡವಾಳ ಸರಕುಗಳ ಕೈಗಾರಿಕೆಗಳು ಪ್ರಾರಂಭವಾಗಿ ಅಭಿವೃದ್ಧಿಹೊಂದಿವೆ. ಪಾಕಿಸ್ತಾನದ ಪ್ರಥಮ ಉಕ್ಕಿನ ಕೈಗಾರಿಕೆ 1980ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕರಾಚಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕೈಗಾರಿಕೆಗೆ ಸೋವಿಯೆತ್ ದೇಶದ ನೆರವಿದೆ. ಇದು ಉತ್ಪಾದನೆ ಆರಂಭಿಸಿದಾಗ ವರ್ಷಕ್ಕೆ 10 ಲಕ್ಷ ಟನ್ ಉಕ್ಕನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಕ್ರಮೇಣ ಇದನ್ನು 20 ಲಕ್ಷ ಟನ್‍ಗಳಿಗೆ ಏರಿಸುವ ನಿರೀಕ್ಷೆಯಿದೆ. ಸದ್ಯದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಹತ್ತಿಗಿರಣಿಗಳದು ಅತ್ಯಂತ ಮುಖ್ಯವಾದ ಸ್ಥಾನ. ರಾಷ್ಟ್ರೀಯ ಉತ್ಪನ್ನದಲ್ಲಿ ಕೈಗಾರಿಕಾಕ್ಷೇತ್ರದ ಭಾಗದಲ್ಲಿ ಇವುಗಳ ಪಾಲು ಸೇ.33 ಹತ್ತಿ ಗಿರಣಿಗಳಿಂದ ಸುಮಾರು 15 ಲಕ್ಷ ಜನರಿಗೆ ಉದ್ಯೋಗ ದೊರಕಿದೆ. ಈ ದೃಷ್ಟಿಯಿಂದಲೂ ಇವಕ್ಕೆ ಪ್ರಥಮ ಸ್ಥಾನ. 1960-70ರಲ್ಲಿ ನೂಲು ಮತ್ತು ಬಟ್ಟೆಯ ಉತ್ಪಾದನೆ ಗಮನಾರ್ಹವಾಗಿ ಏರಿದೆ. 1960-61ರಲ್ಲಿ ನೂಲಿನ ಉತ್ಪಾದನೆ 16 ಕೋಟಿ ಕಿಲೋಗ್ರಾಂ ಆಗಿತ್ತು. 1970-71ರ ವೇಳೆಗೆ ಇದು 36ಕೋಟಿ ಕಿಲೋಗ್ರಾಂಗಳಿಗೆ ಏರಿತು. ಇದೇ ಅವಧಿಯಲ್ಲಿ ಬಟ್ಟೆಯ ಉತ್ಪಾದನೆ 56 ಕೋಟಿ ಮೀಟರ್‍ಗಳಿಂದ 72 ಕೋಟಿ ಮೀಟರ್‍ಗಳಿಗೆ ಹೆಚ್ಚಿತು. ಬಾಂಗ್ಲಾದೇಶದ ಪ್ರತ್ಯೇಕತೆಯಿಂದಾಗಿ ಪಾಕಿಸ್ತಾನದ ಸೆಣಬಿನ ಕೈಗಾರಿಕೆಗೆ ಭಾರೀ ಪೆಟ್ಟು ತಗಲಿದೆ. ಈ ಉದ್ಯಮದಲ್ಲಿ ಪಾಕಿಸ್ತಾನಕ್ಕೆ ಇದ್ದ ವಿಶ್ವ ಪ್ರಾಧಾನ್ಯ ಈಗ ಇಲ್ಲವಾಗಿದೆ. ಆದ್ದರಿಂದ ಹತ್ತಿ ಬಟ್ಟೆ ಉತ್ಪಾದನೆಯನ್ನು ಬಿಟ್ಟರೆ ಈಗ ಪಾಕಿಸ್ತಾನದ ಪ್ರಮುಖ ಕೈಗಾರಿಕೆಗಳೆಂದರೆ ಉಣ್ಣೆ, ಸಕ್ಕರೆ, ಕಾಗದ, ಹೊಗೆಸೊಪ್ಪು ಮತ್ತು ಚರ್ಮ ಕೈಗಾರಿಕೆಗಳು. ಇವು ಕೈಗಾರಿಕಾ ಕ್ಷೇತ್ರದ ಒಟ್ಟು ಉದ್ಯೋಗಸ್ಥರಲ್ಲಿ ಸೇ. 20ರಷ್ಟು ಮಂದಿಗೆ ಉದ್ಯೋಗವನ್ನು ಒದಗಿಸುತ್ತಿವೆ. 1950ರ ದಶಕದಲ್ಲಿ ವಿದೇಶೀ ವಿನಿಮಯದ ಕೊರತೆ ಪಾಕಿಸ್ತಾನಕ್ಕೆ ವಿಪರೀತವಾದುದರಿಂದ, ಅದು ಆಮದನ್ನು ಅನಿವಾರ್ಯವಾಗಿ ಕಡಿತ ಮಾಡಬೇಕಾಯಿತು. ಹೀಗಾಗಿ ಆಮದು ಬದಲಿ ವಸ್ತುಗಳ ಕೈಗಾರಿಕೆಗೆ ಪಾಕಿಸ್ತಾನ ಹೆಚ್ಚಿನ ಪ್ರಾಧಾನ್ಯ ನೀಡುವುದಕ್ಕೆ ಪ್ರಾರಂಭಿಸಿತು. ಆದರೂ ಪಾಕಿಸ್ತಾನ ಇಂದಿಗೂ ಬಂಡವಾಳ ಸರಕುಗಳನ್ನೂ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿಗಳನ್ನೂ ಹೆಚ್ಚಾಗಿ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. ಕೈಗಾರಿಕೆಗೆ ಅಗತ್ಯವಾದ ಸಂಪನ್ಮೂಲಗಳು ಹೆಚ್ಚಾಗಿ ಲಭ್ಯವಿಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ಪಾಕಿಸ್ತಾನ ಕೈಗಾರಿಕಾ ಕ್ಷೇತ್ರದಲ್ಲಿ ಖಾಸಗಿ ಒಡೆತನವನ್ನು ಮಾನ್ಯ ಮಾಡಿದ್ದರೂ ಕ್ರಮಕ್ರಮವಾಗಿ ಸರ್ಕಾರಿ ವಲಯ ಉದ್ಯಮಗಳು ವಿಸ್ತರಿಸುತ್ತಿವೆ. ಭುಟ್ಟೋ ಆಡಳಿತದ ಅವಧಿಯಲ್ಲಂತೂ ಉದ್ಯಮಗಳ ರಾಷ್ಟ್ರೀಕರಣ ವ್ಯಾಪಕವಾಗಿಯೇ ನಡೆಯಿತು. ತನ್ನ ಪಂಚವಾರ್ಷಿಕ ಯೋಜನೆಗಳಲ್ಲಿ ಸರ್ಕಾರಿ ವಲಯದ ಕೈಗಾರಿಕೆಗಳ ಮೇಲಿನ ಹೂಡಿಕೆಯನ್ನು ಹೆಚ್ಚು ಮಾಡಿಕೊಂಡು ಆ ವಲಯದ ಕೈಗಾರಿಕೆಗಳನ್ನು ವಿಸ್ತರಿಸಿದೆ. 1974-75ರ ವೇಳೆಗೆ ಸರ್ಕಾರಿ ವಲಯದ ಕೈಗಾರಿಕೆಗಳ ಪಾತ್ರ ರಾಷ್ಟ್ರೀಯ ಆರ್ಥಿಕತೆಯಲ್ಲಿ ಗಣನೀಯವಾಗಿತ್ತು. ಸರ್ಕಾರಿ ವಲಯದ ಕೈಗಾರಿಕೆಗಳು ಬೋರ್ಡ್ ಆಫ್ ಇಂಡಸ್ಟ್ರಿಯಲ್ ಮ್ಯಾನೇಜ್‍ಮೆಂಟ್‍ನ ಅಧೀನದಲ್ಲಿವೆ. 1973-74ಕ್ಕೆ ಹೋಲಿಸಿದಂತೆ 1974-75ರಲ್ಲಿ ಸರ್ಕಾರಿ ವಲಯದ ಕೈಗಾರಿಕೆಗಳ ಉತ್ಪಾದನೆ ಸೇ. 21.8ರಷ್ಟು ಹೆಚ್ಚಾಗಿತ್ತು. ಇದೇ ಅವಧಿಯಲ್ಲಿ ಈ ಕೈಗಾರಿಕೆಗಳ ಲಾಭ ರೂ. 17.48 ಕೋಟಿಯಿಂದ ರೂ. 25,45 ಕೋಟಿಗೆ ಏರಿತು. ಮುಂದಿನ ಕೆಲವು ವರ್ಷಗಳಲ್ಲಿ ಸರ್ಕಾರಿ ವಲಯದ ಕೈಗಾರಿಕೆಗಳು ಬಹಳ ವಿಸ್ತಾರವಾಗುವ ಸಾಧ್ಯತೆಯಿದೆ. ಈ ವಿಸ್ತರಣೆಯ ಅಂಗವಾಗಿ ಉಕ್ಕು, ಸಿಮೆಂಟ್, ಭಾರೀ ಇಂಜನಿಯರಿಂಗ್, ಪೆಟ್ರೋ-ರಸಾಯನ ಮತ್ತು ಆಟೊಮೊಬೈಲ್ ಉದ್ಯಮಗಳ ಮೇಲೆ ಮುಂದಿನ ಹಲವು ವರ್ಷಗಳಲ್ಲಿ ರೂ. 288 ಕೋಟಿ ಹೂಡಿಕೆಯ ಯೋಜನೆಯನ್ನು ಬೋರ್ಡ್ ಆಫ್ ಇಂಡಸ್ಟ್ರಿಯಲ್ ಮ್ಯಾನೇಜ್‍ಮೆಂಟ್ ರೂಪಿಸಿಕೊಂಡಿದೆ.

ಖಾಸಗಿ ವಲಯದ ಕೈಗಾರಿಕೆಗಳು ಕೇವಲ ಕೆಲವರ ಸ್ವಾಮ್ಯದಲ್ಲಿರುವುದು ಪಾಕಿಸ್ತಾನದ ಕೈಗಾರಿಕಾ ಕ್ಷೇತ್ರದ ಮುಖ್ಯ ಲಕ್ಷಣಗಳಲ್ಲಿ ಒಂದು. ಏಕಸ್ವಾಮ್ಯ ಕೆಲವೇ ಕುಟುಂಬಗಳಲ್ಲಿ ಕೇಂದ್ರೀಕೃತವಾಗಿದೆ. ಈ ಹಿಡಿತವನ್ನು ತಡೆಗಟ್ಟಲು 1960ರಿಂದಲೂ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಇದು ಗಮನಾರ್ಹವಾಗಿಯೇ ಮುಂದುವರಿದು ಕೊಂಡು ಬಂದಿದೆ.

ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯನ್ನು ಕ್ಷಿಪ್ರಗೊಳಿಸಲು ವಿದೇಶಿ ಹೂಡಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಮುಖ್ಯವಾಗಿ ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಜರ್ಮನಿ ಮತ್ತು ಜಪಾನ್ ದೇಶಗಳು ಪಾಕಿಸ್ತಾನದ ನಾನಾ ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿದೆ. 2004ರ ಅಂಕಿ ಅಂಶದ ಗಣನೆಯ ಪ್ರಕಾರ ಕೈಗಾರಿಕೋತ್ಪನ್ನ ಸೇ. 13.1ರಷ್ಟು ಹೆಚ್ಚಳಗೊಂಡಿದೆ.

ಗಣಿಗಾರಿಕೆ

[ಬದಲಾಯಿಸಿ]

ಕಲ್ಲಿದ್ದಲು ಪಾಕಿಸ್ತಾನದ ಪ್ರಮುಖ ಖನಿಜ. ಆದರೆ ಗುಣಮಟ್ಟ ಅಷ್ಟು ಉತ್ತಮವಾದ್ದಲ್ಲ. ಅದಕ್ಕೆ ಬೇಡಿಕೆಯೂ ಕಡಿಮೆ. ಈ ಕಾರಣದಿಂದ ಕಲ್ಲಿದ್ದಲು ಗಣಿಗಳಲ್ಲಿ ಅತ್ಯಂತ ದಕ್ಷಮಟ್ಟದ ವರೆಗಿನ ಉತ್ಪಾದನೆ ನಡೆಯುತ್ತಿಲ್ಲ. ಪಾಕಿಸ್ತಾನದ ಕಬ್ಬಿಣದ ಅದುರು ಉತ್ತಮ ಗುಣಮಟ್ಟದ್ದಲ್ಲ. ವ್ಯಾಪಕವಾದ ಕಲ್ಲಿದ್ದಲು ಗಣಿಗಳು ಪಂಜಾಬಿನ ಕಾಲಾಬಾಗ್ ಪ್ರದೇಶದಲ್ಲಿವೆ. ಈ ಪ್ರದೇಶದಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿಸುವ ಯೋಜನೆ ಇದೆ. ಉತ್ತಮವಾದ ಕಬ್ಬಿಣದ ಅದುರು ಬಲೂಚಿಸ್ತಾನ ಪ್ರಾಂತ್ಯದಲ್ಲಿ ಲಭ್ಯವಿದೆಯೆಂದು ಗುರುತಿಸಲಾಗಿದೆ. ಆದರೆ ಈ ನಿಕ್ಷೇಪಗಳಿಂದ ಭಾರೀ ಪ್ರಮಾಣದ ಅದಿರು ಲಭ್ಯವಾಗುವ ಸಾಧ್ಯತೆ ಕಡಿಮೆಯೆಂದು ಭಾವಿಸಲಾಗಿದೆ. ಅತ್ಯಂತ ಸುಲಭವಾಗಿ ಮತ್ತು ಹೇರಳವಾಗಿ ಸುಣ್ಣಕಲ್ಲು ಲಭ್ಯವಿದೆ. ಇದು ಮುಂದೆ ಬೆಳೆಯಬಹುದಾದ ಸಿಮೆಂಟ್ ಉದ್ಯಮಕ್ಕೆ ಅತ್ಯಂತ ಸಹಾಯಕವಾಗುವ ಸಾಧ್ಯತೆಯಿದೆ. ಪಾಕಿಸ್ತಾನದ ಇತರ ಮುಖ್ಯ ಖನಿಜಗಳು ಕ್ರೋಮೈಟ್, ಬಾಕ್ಸೈಟ್ ಸೆಲಿಸ್ಟೈಟ್, ಅಂಟಿಮೋನಿ, ಆರ್‍ಗೋನೈಟ್, ಜಿಪ್ಸಮ್, ಕಲ್ಲುಪ್ಪು ಮತ್ತು ಅಮೃತಶಿಲೆ, ಪಾಕಿಸ್ತಾನದ ತೈಲನಿಕ್ಷೇಪಗಳು ಅತ್ಯಲ್ಪ. ಆದರೆ, ಅನೇಕ ನಿಸರ್ಗ ಅನಿಲ ನಿಕ್ಷೇಪಗಳು ಅತ್ಯಂತ ಶ್ರೀಮಂತವಾದವಾಗಿವೆ. ಸೂಯ್ ಎಂಬಲ್ಲಿಯ ನಿಸರ್ಗ ಅನಿಲ ನಿಕ್ಷೇಪಗಳು ತುಂಬ ಶ್ರೀಮಂತವಾಗಿವೆ.

ವಿದ್ಯುಚ್ಛಕ್ತಿ

[ಬದಲಾಯಿಸಿ]

ಜಲವಿದ್ಯುತ್ ಉತ್ಪಾದನೆಯಲ್ಲಿ ಪಾಕಿಸ್ತಾನ ಹೆಚ್ಚಿನ ಪ್ರಗತಿಯನ್ನೇನೂ ಸಾಧಿಸಿಲ್ಲವಾದ್ದರಿಂದ ಶಾಖ ವಿದ್ಯುತ್ ಉತ್ಪಾದನೆಯನ್ನೇ ಹೆಚ್ಚಾಗಿ ಅವಲಂಬಿಸಬೇಕಾಗಿದೆ. 1970ರಲ್ಲಿ ಅತ್ಯಂತ ಹೆಚ್ಚಿನ ಜಲವಿದ್ಯುತ್ ಉತ್ಪಾದಿಸುತ್ತಿದ್ದ ಕೇಂದ್ರವೆಂದರೆ ಝೀಲಮ್ ನದಿಗೆ ಅಡ್ಡಲಾಗಿ ಕಟ್ಟಿರುವ ಮಂಗ್ಲಾ ಕಟ್ಟೆಯ ವಿದ್ಯುತ್ ಉತ್ಪಾದನ ಕೆಂದ್ರ. ಇದರ ಸಾಮಥ್ರ್ಯ 6.5 ಲಕ್ಷ ಕಿ.ವಾ. 1980ರ ವೇಳೆಗೆ ಇದರ ಉತ್ಪಾದನೆ 10 ಲಕ್ಷ ಕಿ.ವಾಗೆ ಏರುವ ನಿರೀಕ್ಷೆಯಿದೆ. 1968ರಲ್ಲಿ ಪ್ರಾರಂಭವಾದ ತಾರ್‍ಬೆಲಾ ಕಟ್ಟೆಯ ವಿದ್ಯುತ್ ಉತ್ಪಾದನಾ ಕೇಂದ್ರವೂ 21 ಲಕ್ಷ ಕಿ.ವಾ. ವಿದ್ಯುತ್ತನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ. ಆದರೆ ಈ ಗಾತ್ರದ ಉತ್ಪಾದನೆಯಿಂದಲೂ ರಾಷ್ಟ್ರಕ್ಕೆ ಅಗತ್ಯವಾದ ವಿದ್ಯುತ್ತಿನ ಪೂರೈಕೆ ಸಂಪೂರ್ಣವಾಗಿ ಲಭಿಸದಿರುವುದರಿಂದ ಪಾಕಿಸ್ತಾನ ಅತ್ಯಂತ ಹೆಚ್ಚಾಗಿ ಶಾಖ ವಿದ್ಯುತ್ ಕೇಂದ್ರಗಳನ್ನೇ ಅವಲಂಬಿಸಬೇಕಾಗಿದೆ. ಜಲ ಹಾಗೂ ಶಾಖ ವಿದ್ಯುತ್ ಉತ್ಪಾದನ ಕೇಂದ್ರಗಳಲ್ಲದೆ, ಕರಾಚಿಯ ಹೊರ ಭಾಗದಲ್ಲಿ 1,37,000 ಕಿ.ವಾ. ಉತ್ಪಾದನಾ ಸಾಮಥ್ರ್ಯದ ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಣು ವಿದ್ಯುತ್, ಶಾಖೋತ್ಪನ್ನ ಮತ್ತು ಜಲೋತ್ಪನ್ನ ಒಟ್ಟು ವಿದ್ಯುತ್ 75.27 ಬಿಲಿಯನ್ ಕಿವಾ. (2003) ಇದ್ದು, 52.66 ಬಿಲಿಯನ್ ಕಿವಾ ವಿದ್ಯುತ್‍ನ ಬೇಡಿಕೆ (2003) ರಲ್ಲಿ ಇದ್ದಿತು. ಹಣಕಾಸು: ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಎಂಬುದು ಪಾಕಿಸ್ತಾನದ ಕೇಂದ್ರೀಯ ಬ್ಯಾಂಕು. 1972ರಲ್ಲಿ ಇದರ ನಿಯಂತ್ರಣಕ್ಕೆ 25 ಅನುಸೂಚಿತ ಬ್ಯಾಂಕುಗಳು ಒಳಪಟ್ಟಿದ್ದುವು. ಪಾಕಿಸ್ತಾನದಲ್ಲಿ ನಾಲ್ಕು ಹಣಕಾಸು ಸಂಸ್ಥೆಗಳು ಅಲ್ಪಾವಧಿ, ದೀರ್ಘಾವಧಿ ಮತ್ತು ಕಟ್ಟಡ ಕಾರ್ಯಗಳಿಗೆ ಅಗತ್ಯವಾದ ಬಂಡವಾಳವನ್ನು ಒದಗಿಸುತ್ತಿವೆ. ಅವು ಪಾಕಿಸ್ತಾನ ಕೈಗಾರಿಕಾ ಉದರಿ ಮತ್ತು ವಿನಿಯೋಜನ ನಿಗಮ(ಪಾಕಿಸ್ತಾನ್ ಇಂಡಸ್ಟ್ರಿಯಲ್ ಕ್ರೆಡಿಟ್ ಅಂಡ್ ಇನ್‍ವೆಸ್ಟ್ ಮೆಂಟ್ ಕಾರ್ಪೊರೇಷನ್), ಪಾಕಿಸ್ತಾನ ಕೈಗಾರಿಕಾಭಿವೃದ್ಧಿ ಬ್ಯಾಂಕ್ (ದಿ ಇಂಡಸ್ಟ್ರಿಯಲ್ ಡೆವೆಲಪ್‍ಮೆಂಟ್ ಬ್ಯಾಂಕ್ ಆಫ್ ಪಾಕಿಸ್ತಾನ್), ಪಾಕಿಸ್ತಾನ ಕೃಷಿ ಅಭಿವೃದ್ಧಿ ಬ್ಯಾಂಕ್ (ಅಗಿಕಲ್ಚರಲ್ ಡೆವೆಲಪ್‍ಮೆಂಟ್ ಬ್ಯಾಂಕ್ ಆಫ್ ಪಾಕಿಸ್ತಾನ್) ಗೃಹ ನಿರ್ಮಾಣ ಹಣಕಾಸು ನಿಗಮ (ಹೌಸ್‍ಬಿಲ್ಡಿಂಗ್ ಫೈನಾನ್ಸ್ ಕಾರ್ಪೊರೇಷನ್). ವಿದೇಶಿ ವ್ಯಾಪಾರ: ಪಾಕಿಸ್ತಾನದ ವಿದೇಶಿ ವ್ಯಾಪಾರ ಹೆಚ್ಚು ಬೆಳೆವಣಿಗೆ ಸಾಧಿಸಿಲ್ಲ. ಪ್ರಾರಂಭದಿಂದಲೂ ಪಾಕಿಸ್ತಾನ ಕೃಷಿಮೂಲ ವಸ್ತುಗಳನ್ನು ರಫ್ತು ಮಾಡುತ್ತ, ಕಚ್ಚಾ ಸಾಮಗ್ರಿ ಮತ್ತು ಬಂಡವಾಳ ಸರಕುಗಳನ್ನು ಆಮದು ಮಾಡಿಕೊಳ್ಳುತ್ತ ಬಂದಿದೆ. ರಫ್ತಿಗಿಂತ ಯಾವಾಗಲೂ ಆಮದು ಹೆಚ್ಚಾಗಿರುವುದರಿಂದ ಮೊದಲಿನಿಂದಲೂ ಪಾಕಿಸ್ತಾನ ವಿದೇಶಿ ವಿನಿಮಯದ ಕೊರತೆಯನ್ನು ಎದುರಿಸುತ್ತಲೇ ಬಂದಿದೆ. ಬಾಂಗ್ಲಾದೇಶ ಪ್ರತ್ಯೇಕವಾಗುವುದಕ್ಕೆ ಮುಂಚೆ ಪಾಕಿಸ್ತಾನದ ಅತ್ಯಂತ ಮುಖ್ಯವಾದ ರಫ್ತು ಸರಕುಗಳು ಸಣಬು, ಹತ್ತಿ, ಉಣ್ಣೆ, ಚರ್ಮ ಮತ್ತು ಚಹ ಆಗಿದ್ದುವು. ಒಟ್ಟು ರಫ್ತಿನ ಆದಾಯದ ಸೇ. 90ರಷ್ಟು ಇವುಗಳಿಂದ ಸಂಪಾದನೆಯಾಗುತ್ತಿತ್ತು. ಆದರೆ ಬಾಂಗ್ಲಾ ಪ್ರತ್ಯೇಕತೆಯಿಂದ ಪಾಕಿಸ್ತಾನ ಸಣಬು ಮತ್ತು ಚಹ ರಫ್ತನ್ನು ಕಳೆದುಕೊಳ್ಳಬೇಕಾಯಿತು. ಪಾಕಿಸ್ತಾನದ ಈಗಿನ ಮುಖ್ಯ ರಫ್ತು ವಸ್ತುಗಳು ಹತ್ತಿ ಮತ್ತು ಹತ್ತಿ ಬಟ್ಟೆ, ಅಕ್ಕಿ, ಚರ್ಮ, ಮೀನು ಮತ್ತು ಜಮಖಾನೆ, ಮುಖ್ಯ ಆಮದುಗಳು ಯಂತ್ರ ಸಲಕರಣೆ, ರಾಸಾಯನಿಕ, ರಸಗೊಬ್ಬರ, ಖಾದ್ಯ ತೈಲ, ಕಬ್ಬಿಣ, ಉಕ್ಕು ಹಾಗೂ ವಿದ್ಯುತ್ ಉಪಕರಣ. ವಿದೇಶಿ ವ್ಯಾಪಾರ ಹಾಗೂ ಆಮದು ರಫ್ತುಗಳು

ಸಾರಿಗೆ

[ಬದಲಾಯಿಸಿ]

1973ರ ವೇಳೆಗೆ ಪಾಕಿಸ್ತಾನದಲ್ಲಿ 8,742 ಕಿಮೀ. ರೈಲ್ವೆ ಮಾರ್ಗಗಳಿದ್ದುವು. 2003ರ ಹೊತ್ತಿಗೆ ಒಟ್ಟು 8163ಕಿ.ಮೀ. ದೂರದ ರೈಲುಮಾರ್ಗವಿತ್ತು. 2004ರಲ್ಲಿ 131 ವಿಮಾನ ನಿಲ್ದಾಣಗಳೂ, 2001ರ ಅಂಕಿ ಅಂಶದ ಪ್ರಕಾರ ಒಟ್ಟು 257,683ಕಿ.ಮೀ. ರಸ್ತೆಗಳೂ ಇದ್ವವು. ಕರಾಚಿಯ ಬಂದರು ಪಾಕಿಸ್ತಾನದಲ್ಲಿ ಅತ್ಯಂತ ಮುಖ್ಯವಾದ್ದು. ಮಕ್ರಾನ್ ಕರಾವಳಿಯಲ್ಲಿ ಮತ್ತೊಂದು ಬಂದರನ್ನು ನಿರ್ಮಿಸಲು ಯೋಜಿಸಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಹಡಗು ಸಾರಿಗೆ ಕಾರ್ಪೊರೇಷನ್ 25 ರಾಷ್ಟ್ರಗಳೊಡನೆ ಹಡಗು ಸಂಪರ್ಕ ಹೊಂದಿದ್ದು ವಿದೇಶಿ ವ್ಯಾಪಾರದಲ್ಲಿ ಗಣನೀಯ ಪಾತ್ರವಹಿಸುತ್ತಿದೆ; ಅದರ ಒಡೆತನದಲ್ಲಿ 60 ವ್ಯಾಪಾರ ಹಡಗುಗಳು ಇವೆ.

ಆರ್ಥಿಕ ಯೋಜನೆ

[ಬದಲಾಯಿಸಿ]

ಪಾಕಿಸ್ತಾನ ಆರ್ಥಿಕ ಯೋಜನೆಯ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶವನ್ನಿಟ್ಟುಕೊಂಡಿದೆ. ಅದರ ಪ್ರಥಮ ಆರ್ಥಿಕ ಯೋಜನೆ 1955ರಲ್ಲಿ ಪ್ರಾರಂಭವಾಯಿತು. ಅದರ ವೆಚ್ಚ ರೂ. 971.1 ಕೋಟಿ. ರಾಷ್ಟ್ರೀಯ ವರಮಾನದಲ್ಲಿ ಸೇ.15ರಷ್ಟು ಏರಿಕೆ, ತಲಾ ವರಮಾನದಲ್ಲಿ ಸೇ.7 ರಷ್ಟು ಆಧಿಕ್ಯ. 20 ಲಕ್ಷ ಉದ್ಯೋಗಗಳ ಸೃಷ್ಟಿ, ವಿದೇಶಿ ವ್ಯಾಪಾರದಲ್ಲಿಯ ಕೊರತೆಯ ಸುಧಾರಣೆ-ಇವು ಆ ಯೋಜನೆಯ ಮುಖ್ಯ ಗುರಿಗಳು. ಮೊದಲನೆಯ ಯೋಜನೆಯ ಅವಧಿಯಲ್ಲಿ ಈ ಗುರಿಗಳನ್ನು ಸಾಧಿಸಲಾಗಲಿಲ್ಲ.

ಒಂದನೆಯ ಯೋಜನೆಯದಕ್ಕಿಂತ ಸೇ.50ರಷ್ಟು ಹೆಚ್ಚಿನ ವೆಚ್ಚದ ಎರಡನೆಯ ಯೋಜನೆ 1960 ರಲ್ಲಿ ಆರಂಭವಾಯಿತು. ಆ ಯೋಜನೆಯ ವೆಚ್ಚ ರೂ. 1,900 ಕೋಟಿ. ಅದರಲ್ಲಿ ರೂ.1,150 ಕೋಟಿ ಸರ್ಕಾರಿ ವಲಯದ ವೆಚ್ಚ ರೂ.751 ಕೋಟಿ ಖಾಸಗಿ ವಲಯದ್ದು, ಇದು ಒಂದನೆಯ ಯೋಜನೆಗಿಂತ ಹೆಚ್ಚಿನ ಯಶಸ್ಸನ್ನು ಸ್ಥಾಪಿಸಿತು. ರಾಷ್ಟ್ರೀಯ ಉತ್ಪನ್ನದ ಉದ್ದೇಶಿತ ವಾರ್ಷಿಕ ಬೆಳವಣಿಗೆಯ ದರವನ್ನೂ (ಸೇ.4.7) ಮೀರಿ ಸೇ.5.5ರ ವಾರ್ಷಿಕ ಬೆಳೆವಣಿಗೆ ದರ ಸಾಧಿಸಿತು. ಕೃಷಿ ಉತ್ಪನ್ನದಲ್ಲಿ ಸೇ.3.5 ಮತ್ತು ಕೈಗಾರಿಕಾ ಉತ್ಪನ್ನದಲ್ಲಿ ಸೇ.10ರ ವಾರ್ಷಿಕ ಬೆಳೆವಣಿಗೆ ಸಾಧ್ಯವಾಯಿತು.

1965-70ರ ಮೂರನೆಯ ಯೋಜನೆ ಆ ರಾಷ್ಟ್ರದ ದೀರ್ಘಾವಧಿ ಯೋಜನೆಯ ಮೊದಲನೆಯ ಘಟ್ಟವೆಂದು ಹೇಳಲಾಗಿದೆ. 1965ರ ವೇಳೆಗೆ ಸಾಧಿಸಬೇಕಾದ ಗುರಿಗಳ ದೃಷ್ಟಿಯಿಂದ ಯೋಜನೆಯನ್ನು ತಯಾರಿಸಲಾಗಿತ್ತು. 1985 ವೇಳೆಗೆ ರಾಷ್ಟ್ರೀಯ ವರಮಾನವನ್ನು ನಾಲ್ಕರಷ್ಟಕ್ಕೆ ಏರಿಸುವುದು, 200 ಡಾಲರ್‍ಗಳಿಗೆ ತಲಾ ವರಮಾನದ ಏರಿಕೆ, ಸ್ವಾವಲಂಬನೆಯತ್ತ ಮುನ್ನಡೆ, ಪೂರ್ಣೋದ್ಯೋಗದ ಸಾಧನೆ, ಅನಕ್ಷರತೆಯ ನಿರ್ಮೂಲನ-ಇವು ಈ ದೀರ್ಘಕಾಲದ ಗುರಿಗಳು. ಈ ಯೋಜನೆಯ ಅವಧಿಯಲ್ಲಿ ಅನೇಕ ಆರ್ಥಿಕ ಹಾಗೂ ರಾಜಕೀಯ ಸಂಕಷ್ಟಗಳುಂಟಾದುವು. ವಿದೇಶಿ ನೆರವು ಇಳಿಯಿತು. ಪೂರ್ವ ಪಾಕಿಸ್ತಾನದಲ್ಲಿ (ಬಾಂಗ್ಲಾದೇಶ) ತೊಂದರೆ, ಅನಾವೃಷ್ಟಿ, ರಾಜಕೀಯ ಕ್ಷೋಭೆ ಮುಂತಾದವು ಯೋಜನೆಯ ವಿಫಲತೆಗೆ ಕಾರಣಗಳು.

1970ರಲ್ಲಿ ನಾಲ್ಕನೆಯ ಪಂಚವಾರ್ಷಿಕ ಯೋಜನೆ ಆರಂಭವಾಯಿತು. ಸ್ವಾವಲಂಬನೆಯನ್ನು ಸಾಧಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಈ ದೃಷ್ಟಿಯಿಂದ 1970-75ರ ಅವಧಿಯಲ್ಲಿ ಸೇ.6.5ರ ವಾರ್ಷಿಕ ಬೆಳವಣಿಗೆಯನ್ನು ಸಾಧಿಸಬೇಕೆಂದು ನಿರ್ಧರಿಸಲಾಯಿತು. ಯೋಜನೆಯ ವೆಚ್ಚ ರೂ 7,500 ಕೋಟಿ ಎಂದು ನಿಗದಿ ಮಾಡಲಾಯಿತು. ಇದರಲ್ಲಿ ರೂ.4,900 ಕೋಟಿ ಸರ್ಕಾರಿ ವಲಯಕ್ಕೆ ಮೀಸಲಾಗಿತ್ತು. ಆದರೆ 1970-72ರ ರಾಜಕೀಯ ಕ್ಷೋಭೆ, ಬಾಂಗ್ಲಾ ವಿಮೋಚನೆ ಇವುಗಳಿಂದಾಗಿ ಯೋಜನೆ ಕಾರ್ಯಗತವಾಗಲಿಲ್ಲ. ಇದರ ಸ್ಥಾನದಲ್ಲಿ ವಾರ್ಷಿಕ ಯೋಜನೆಗಳು ಜಾರಿಗೆ ಬಂದುವು.

ನಿಧಾನವಾದ ಆರ್ಥಿಕ ಬೆಳವಣಿಗೆ, ಅಸಮಾನ ವರಮಾನ ವಿತರಣೆ, ತೀವ್ರವಾದ ಬಡತನ, ವಿದೇಶಿ ವ್ಯಾಪಾರದಲ್ಲಿ ಪ್ರತಿಕೂಲ ಸಿಲ್ಕು, ಶೀಘ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆ ಮುಂತಾದ ಅನೇಕ ಸಮಸ್ಯೆಗಳನ್ನು ಇಂದು ಪಾಕಿಸ್ತಾನ ಎದುರಿಸುತ್ತಿದೆ. (ಸಿ.ಕೆ.ಆರ್.) ಜನಜೀವನ ಮತ್ತು ಸಮಾಜ

ಸಮಾಜ, ಕಲೆ, ರಂಜನೆ

[ಬದಲಾಯಿಸಿ]

ಪಾಕಿಸ್ತಾನ ಭೂಭಾಗ ಮಧ್ಯಪ್ರಾಚ್ಯ. ಮಧ್ಯ ಏಷ್ಯ ಮತ್ತು ದಕ್ಷಿಣ ಏಷ್ಯಗಳು ಕೂಡುವ ಸ್ಥಳದಲ್ಲಿದೆ. ಪ್ರಾಚೀನ ಕಾಲದಿಂದಲೂ ವಿವಿಧ ಜನಾಂಗಗಳೂ ಪಂಗಡಗಳೂ ಈ ಪ್ರದೇಶದಲ್ಲಿ ನೆಲಸಿವೆ. ಕೆಲವು ತಮ್ಮ ಛಾಯೆಯನ್ನು ಬಿಟ್ಟುಹೋಗಿವೆ. ಸ್ಥೂಲವಾಗಿ ಇಲ್ಲಿಯ ಜನರನ್ನು ಐದು ಜನಾಂಗಗಳಾಗಿ ವಿಂಗಡಿಸಬಹುದು; ದ್ರಾವಿಡ, ಆಸ್ಟ್ರೊಲಾಯ್ಡ್, ಇಂಡೊ-ಆರ್ಯನ್, ಮಂಗೊಲಾಯ್ಡ್ ಮತ್ತು ಯೂರೋಪಾಯ್ಡ್.

ಇಲ್ಲಿಯ ಸಮಾಜವ್ಯವಸ್ಥೆ ಪಿತೃಪ್ರಧಾನವಾದ್ದು. ಹೆಚ್ಚು ಜನರು ದೊಡ್ಡ ಕುಟುಂಬಗಳಲ್ಲಿದ್ದಾರೆ. ಸ್ತ್ರೀಯರು ಉನ್ನತ ಉದ್ಯೋಗಗಳಲ್ಲಿದ್ದರೂ ಸಮಾಜದಲ್ಲಿ ಅವರ ಸ್ಥಾನ ಅಷ್ಟು ಉತ್ತಮವಾಗಿಲ್ಲ. ಶ್ರೀಮಂತ ರೈತರು ಮತ್ತು ಜಮೀದ್ಧಾರರಲ್ಲೂ ಪಟ್ಟಣಗಳ ಮಧ್ಯಮವರ್ಗಗಳಲ್ಲೂ ಪರದಾ ಪದ್ಧತಿ ಇದೆ. ಬಡವರು ಮತ್ತು ವಿದ್ಯಾವಂತ ಶ್ರೀಮಂತರಲ್ಲಿ ಈ ಪದ್ಧತಿ ಕಡಿಮೆಯಾಗುತ್ತಿದೆ. ಬಹುಪಾಲು ಜನರು ಮುಸ್ಲಿಮರು, ಇವರಲ್ಲಿ ನಿರ್ದಿಷ್ಟ ಸಮೂಹಗಳ ಜನರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಪ್ರವೀಣರಾಗಿದ್ದಾರೆ.

ಪಾಕಿಸ್ತಾನದ ಸಿಂಧ್, ಪಂಜಾಬ್, ಬಲೂಚಿಸ್ತಾನ ಮತ್ತು ವಾಯವ್ಯ ಸರಹದ್ದು ಪ್ರಾಂತ್ಯಗಳು ಪ್ರತ್ಯೇಕ ಆಡಳಿತ ಘಟಕಗಳಾಗಿರುವಂತೆಯೇ ಐತಿಹಾಸಿಕವಾಗಿ, ಸಾಮಾಜಿಕವಾಗಿ ವಿಶಿಷ್ಟತೆ ಪಡೆದಿವೆ. ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ 1930ರ ದಶಕದಿಂದ ಈಚೆಗೆ ನೀರಾವರಿ ಸೌಲಭ್ಯ ಹೆಚ್ಚಿದಂತೆಲ್ಲ ಆರ್ಥಿಕ ಕ್ರಾಂತಿ ಸಂಭವಿಸಿ ಜೀವನ ಭದ್ರತೆ ನೆಲೆಯೂರಿದೆ. ತೀರಪ್ರದೇಶದಲ್ಲಿ ಮೀನುಗಾರಿಕೆ ಮುಂದುವರಿದಿದೆ. ಕರಾಚಿಯಂಥ ಬೃಹತ್ ನಗರದಿಂದಾಗಿ ಸಿಂಧ್ ಪ್ರಾಂತ್ಯದ ನಗರ ಜನಸಂಖ್ಯೆ 45% ರಷ್ಟಿದೆ (1970). ಪಂಜಾಬ್ ತೀವ್ರಗತಿಯಲ್ಲಿ ಮುನ್ನಡೆಯುತ್ತಿದೆ. ಸಿಂಧ್‍ನಲ್ಲಿ ಕುಸ್ತಿ ಸಮಾರಂಭಗಳು ಜನಪ್ರಿಯ ಮನೋರಂಜನೆಯ ಕಾರ್ಯ ಕ್ರಮಗಳು. ಎತ್ತಿನಗಾಡಿ ಪಂದ್ಯ ಮತ್ತು ಹುಂಜದ ಕಾಳಗಗಳೂ ಕೆಲವು ಪ್ರದೇಶಗಳಲ್ಲಿ ಜನಪ್ರಿಯವಾಗಿವೆ. ಇಲ್ಲಿಯ ಸಂಗೀತ ಪ್ರಾಚೀನ ಕಾಲದಿಂದಲೂ ಪ್ರಸಿದ್ಧ.

ಬಲೂಚಿಸ್ತಾನ ಬಹು ವಿರಳ ಜನವಸತಿ ಇರುವ ಪ್ರಾಂತ್ಯ. ಗ್ರಾಮಾಂತರ ಪ್ರದೇಶ ಬರಡು. ಇಲ್ಲಿಯ ಹೆಚ್ಚಿನ ಜನಸಂಖ್ಯೆ ಅಲೆಮಾರಿ ಸ್ವರೂಪದ್ದು. ಬಲೂಚಿಗಳು ಮತ್ತು ಪಠಾಣರು ಇಲ್ಲಿಯ ಮುಖ್ಯ ಪಂಗಡಗಳು. ಇವರಲ್ಲಿ ಪಂಗಡಜೀವನ ಇದೆ. ಗುಂಪಿನ ನಾಯಕರಾಗಿ ಸರ್ದಾರ್ ಅಥವಾ ಖಾನ್ ಇರುತ್ತಾನೆ. ಗುಂಪುಗಳಿಗೆ ಅವುಗಳದೇ ಸಾಮಾಜಿಕ ಸಂಹಿತೆ ಇರುತ್ತದೆ. ಕುದುರೆ ಜೂಜು, ಕುಸ್ತಿ, ಮೇಳಗಳು ಜನಪ್ರಿಯವಾಗಿವೆ. ಬಲೂಚಿಗಳಿಗೆ ಬಲೂಚಿ ದಫ್ತರ್ ಎನ್ನುವ ಪ್ರಾಚೀನ ಮಹಾಕಾವ್ಯವುಂಟು. ಅದನ್ನು ವೃತ್ತಿಗಾಯಕರು ಹಾಡುತ್ತಾರೆ. ಇತರ ಜನಪದ ವೀರಗಾಥಗಳಿವೆ. ವಾಯವ್ಯ ಸರಹದ್ದು ಪ್ರಾಂತ್ಯ ಹಿಂದುಳಿದಿದೆ. ಇಲ್ಲಿ ಪಠಾಣರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇಲ್ಲಿಯ ಸರಹದ್ದು ಮತ್ತು ನೆಲಸು ಜಿಲ್ಲೆಗಳ ನಡುವೆ ಪಂಗಡ ಸ್ವಯಮಾಡಳಿತ ಪ್ರದೇಶಗಳಿವೆ. ಅಲ್ಲಿ ವಾಸಿಸುವವರಿಗೆ ಪಾಕಿಸ್ತಾನದ ಆಂತರಿಕ ಕಾನೂನುಗಳು ಅನ್ವಯವಾಗುವುದಿಲ್ಲ. ಪಂಗಡದ ನ್ಯಾಯಪಾಲನೆ ಮತ್ತಿತರ ವ್ಯವಹಾರಗಳನ್ನು ಜಿರ್ಗಹ ಅಥವಾ ಹಿರಿಯರ ಮಂಡಳಿ ನೋಡಿಕೊಳ್ಳುತ್ತದೆ. ಇಲ್ಲಿ ವಿದ್ಯಾಪ್ರಗತಿ ನಿಧಾನ. ಸಾಮಾಜಿಕ ಬದಲಾವಣೆಗೆ ಪಂಗಡದ ಪ್ರತಿಭಟನೆ ಇದೆ. ಪಠಾಣರು ಧರ್ಮನಿಷ್ಠರೆಂದೂ ಸ್ವಾತಂತ್ರ್ಯ ಪ್ರಿಯರೆಂದೂ ಹೆಸರಾದವರು. ಪ್ರತಿ ಹಳ್ಳಿಗೂ ಒಂದಾದರೂ ಅತಿಥಿಗೃಹವಿದೆ. ನೃತ್ಯ ಜನಪ್ರಿಯ ಮನೋರಂಜನೆ. ಖವಾಲಿ ಭಕ್ತಿಗೀತೆಗಳು ಪಾಕಿಸ್ತಾನದಲ್ಲಿ ಜನಪ್ರಿಯವಾಗಿವೆ. ಕಾವ್ಯವಾಚನ ಇನ್ನೊಂದು ಜನಪ್ರಿಯ ಸಾಂಸ್ಕøತಿಕ ಚಟುವಟಿಕೆ. ಧರ್ಮ : ಪಾಕಿಸ್ತಾನ ಮುಖ್ಯವಾಗಿ ಮುಸ್ಲಿಮರ ದೇಶ. ಅಲ್ಲಿಯ ಜನಸಂಖ್ಯೆಯಲ್ಲಿ 88.1% ಮುಸ್ಲಿಮರು, 5.8% ಅನುಸೂಚಿತ ಹಿಂದೂ ವರ್ಗಗಳು 4.9% ಸವರ್ಣೀಯ ಹಿಂದೂಗಳು, 0.8% ಕ್ರೈಸ್ತರು ಮತ್ತು 0.4% ಬೌದ್ಧರು. ಮುಸ್ಲಿಮರಲ್ಲಿ ಸುನ್ನಿ ಪಂಥದವರು ಬಹುಸಂಖ್ಯಾತರು. ಅಲ್ಪಸಂಖ್ಯೆಯಲ್ಲಿರುವ ಕೆಲವು ಸಣ್ಣ ಪಂಥಗಳನ್ನು ಬಿಟ್ಟರೆ ಮುಸ್ಲಿಮ್‍ರಲ್ಲಿ ಬಹುಮಟ್ಟಿಗೆ ಪುರೋಹಿತ ವರ್ಗವಿಲ್ಲ. ಧರ್ಮಶ್ರದ್ಧೆಯುಳ್ಳ ಯಾವ ಮುಸ್ಲಿಮನಾದರೂ ಇಮಾಮ್ ಅಥವಾ ಮಸೀದಿಯ ಮುಖ್ಯನಾಗಬಹುದು. ಧರ್ಮಪಾರಂಗತರಾದವರಿಗೆ ಮುಲ್ಲಾ, ಮೌಲಾನ ಎಂಬ ಬಿರುದು ಕೊಡುತ್ತಾರೆ. ಸಮಾಜದಲ್ಲಿ ಗೌರವ ಪಡೆದ ಪೀರರ ಸಂಘಟನೆ ಮತ್ತು ಶಿಷ್ಯಪರಂಪರೆ ಇವೆ. ಪಾಕಿಸ್ತಾನ ಧರ್ಮಪ್ರಧಾನ ರಾಜ್ಯ. ಅದನ್ನು ಇಸ್ಲಾಮೀ ಗಣರಾಜ್ಯವೆಂದು ಸರ್ಕಾರ ಘೋಷಿಸಿದೆ. ಅನ್ಯಮತೀಯರಿಗೆ ಧಾರ್ಮಿಕ ಸ್ವಾತಂತ್ರ್ಯವಿದೆ. ಮುಖ್ಯ ಸ್ಥಳಗಳು : ಪಾಕಿಸ್ತಾನ ಪ್ರಾಗೈತಿಹಾಸಿಕ ಕಾಲದ ಸಂಪದ್ಭರಿತ ಅವಶೇಷಗಳಿಂದಲೂ ಅನೇಕ ಐತಿಹಾಸಿಕ ಸ್ಥಳಗಳಿಂದಲೂ ಕೂಡಿದೆ. ಸಿಂಧೂ ಕಣಿವೆ ನಾಗರಿಕತೆಯ ಕಾಲದ ನಗರ ನಿವೇಶನಗಳಾದ ಹರಪ್ಪ, ಮೊಹೆಂಜೊದಾರೋ ಮತ್ತು ಇತರ ಸ್ಥಳಗಳು ಜಗತ್ಪ್ರಸಿದ್ಧವಾಗಿವೆ. ಪಾಕಿಸ್ತಾನದ ಈಶಾನ್ಯ ಭಾಗದಲ್ಲಿ ಪ್ರಾಚೀನ ವಿದ್ಯಾಕೇಂದ್ರವಾದ ತಕ್ಷಶಿಲೆಯ ನಿವೇಶನವಿದೆ. ಮಾಣಿಕ್ಯಾಲಯ, ಪಾವರ್ ಮೊದಲಾದ ಸ್ಥಳಗಳಲ್ಲಿ ಬೌದ್ಧ ಸ್ಮಾರಕಗಳಿವೆ. ಅರೋರ್, ಮುಲ್ತಾನ್, ಜಲಾಲ್‍ಪುರ, ಮಾಲೊತ್, ಹೈದರಾಬಾದ್, ಖೈರ್‍ಪುರ, ಭಾವಲ್‍ಪುರ, ನಂದನ, ಖುಷಾಬ್ ಮೊದಲಾದ ಚಾರಿತ್ರಿಕ ಸ್ಥಳಗಳಿವೆ. ಶಿವಗಂಗಾ, ಹಸನ್ ಅಬ್ದುಲ್, ಕತಸ್ ಸೆಹ್ವಾನ್ ಮೊದಲಾದ ಧಾರ್ಮಿಕಸ್ಥಳಗಳಿವೆ. ಪಾಕಿಸ್ತಾನದ ಮುಖ್ಯ ನಗರಗಳ ಜನಸಂಖ್ಯೆ (2000) ಇಸ್ಲಾಮಾಬಾದ್ (ರಾಜಧಾನಿ) (2,04,364), ಕರಾಚಿ (52,08,170), ಲಾಹೋರ್ (29,52,689), ಹೈದರಾಬಾದ್ (7,51,529) ರಾವಲ್ಪಿಂಡಿ (7,94,843) ಮುಲ್ತಾನ್ (7,36,925), ಪೆಷಾವರ್ (5,06,896), ಸರ್ಗೋದ (2,91,362) ಸಕ್ಕೂರ್ (1,90,551) ಕ್ವೆಟ್ಟ (2,85,719), ಗುರ್ಜನ್‍ವಾಲಾ (6,37,591), ಸಿಯಾಲ್‍ಕೋಟ್ (3,02,009), ಬಹವಲ್‍ಪುರ (1,80,263) ಆರೋಗ್ಯ: ಆರೋಗ್ಯ ಸೌಲಭ್ಯ ಒದಗಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ. 13,400 ವೈದ್ಯರು ಮತ್ತು 4,700 ದಾದಿಯರಿದ್ದಾರೆ (1970), ಜನರಲ್ ಆಸ್ಪತ್ರೆಗಳು, ಡಿಸ್ಪೆನ್ಸರಿಗಳು ಮತ್ತು ಆರೋಗ್ಯಕೇಂದ್ರಗಳನ್ನು ರಾಷ್ಟ್ರಾದ್ಯಂತ ಸ್ಥಾಪಿಸಲಾಗಿದೆ. ಕ್ಷಯರೋಗ ಆಸ್ಪತ್ರೆಗಳು, ಕುಷ್ಠರೋಗ ಆಸ್ಪತ್ರೆಗಳಿವೆ. ದಾದಿಯರ ತರಬೇತಿ ಸಂಸ್ಥೆಗಳಿವೆ. ಕರಾಚಿಯಲ್ಲಿ ಆರೋಗ್ಯ ಶಿಕ್ಷಣ ಬ್ಯೂರೊ ಇದೆ. ಆದರೆ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನೂ ಆರೋಗ್ಯ ಸೌಲಭ್ಯಗಳ ಕೊರತೆಯುಂಟು. ಬಡವರಲ್ಲಿ, ಮಕ್ಕಳಲ್ಲಿ ಪೌಷ್ಟಿಕ ಅಂಶದ ಕೊರತೆ ಮತ್ತು ನೈರ್ಮಲ್ಯದ ಕೊರತೆ ಇವೆ.

ಸಂವಿಧಾನ, ಆಡಳಿತ ಸಂವಿಧಾನದ ಇತಿಹಾಸ

[ಬದಲಾಯಿಸಿ]

ಬ್ರಿಟಿಷ್ ಸಂಸತ್ತಿನಲ್ಲಿ ಅಂಗೀಕರಿಸಲಾದ ಭಾರತ ಸ್ವಾತಂತ್ರ್ಯ ಅಧಿನಿಯಮದ ವಿಧಿಗಳಿಗೆ ಅನುಸಾರವಾಗಿ ಆಗಿನ ವಿಶಾಲ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳಾಗಿ ವಿಭಜಿಸಿದಾಗ, 1947ರ ಆಗಸ್ಟ್ 14 ರಂದು, ಪಾಕಿಸ್ತಾನ ಅಸ್ತಿತ್ವಕ್ಕೆ ಬಂತು. ಪೂರ್ವ ಮತ್ತು ಪಶ್ಚಿಮ ಪ್ರಾಂತ್ಯಗಳನ್ನು ಒಳಗೊಂಡ ಪಾಕಿಸ್ತಾನ ಕಾಮನ್‍ವೆಲ್ತಿನ ಒಂದು ಸಾರ್ವಭೌಮ ರಾಷ್ಟ್ರವಾಗಿತ್ತು. 1956ರ ಮಾರ್ಚ್ 23ರಂದು ಜಾರಿಗೆ ಬಂದ ಸಂವಿಧಾನಕ್ಕೆ ಅನುಸಾರವಾಗಿ ಪಾಕಿಸ್ತಾನ ಇಸ್ಲಾಂ ಗಣರಾಜ್ಯವೆಂಬ ಹೆಸರಿನ ಸಂಯುಕ್ತ ಗಣರಾಜ್ಯವಾಯಿತು. 1958ರ ಅಕ್ಟೋಬರ್ 7 ರಂದು ಅಧ್ಯಕ್ಷ ಇಸ್ಕಂದರ್ ಮಿರ್ಜಾ ಪಾಕಿಸ್ತಾನದ ಸಂಸತ್ತನ್ನು ವಿಸರ್ಜಿಸಿ, ಸಂವಿಧಾನವನ್ನು ರದ್ದು ಮಾಡಿದರು. ಅವರು ಅಕ್ಟೋಬರ್ 27ರಂದು ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದರು. ಆಗ ಆ ಸ್ಥಾನಕ್ಕೆ ಜನರಲ್ ಮಹಮದ್ ಅಯೂಬ್ ಖಾನ್ ಬಂದರು. ಅದಕ್ಕೂ ಮೊದಲೇ ಅವರು ಲಷ್ಕರಿ ಶಾಸನದ ಮುಖ್ಯ ಆಡಳಿತಗಾರರೂ ಸೇನಾ ಮಹಾ ದಂಡನಾಯಕರೂ ಆಗಿದ್ದರು. ಅವರಿಗೆ ಸಹಾಯಕವಾಗಿ ಅಧ್ಯಕ್ಷೀಯ ಸಚಿವ ಸಂಪುಟವಿತ್ತು. 1960ರ ಫೆಬ್ರವರಿಯಲ್ಲಿ ಸ್ಥಳೀಯ ಸಮಿತಿಗಳ ಸುಮಾರು 80,000 ಸದಸ್ಯರು ಅಧ್ಯಕ್ಷ ಅಯೂಬರಲ್ಲಿ ವಿಶ್ವಾಸ ವ್ಯಕ್ತಪಡಿಸಿ, ಅವರು ಮುಂದಿನ 5 ವರ್ಷಗಳ ಕಾಲ ಅಧಿಕಾರದಲ್ಲಿರಲು ಮತ ನೀಡಿದರು. ಸಂವಿಧಾನ ಸಭೆ ಅಸ್ತಿತ್ವಕ್ಕೆ ಬಂತು. 1962ರ ಮಾರ್ಚ್ 1 ರಂದು ಅಧ್ಯಕ್ಷ ಅಯೂಬ್ ಹೊಸ ಸಂವಿಧಾನ ಘೋಷಿಸಿದರು. ಹೊಸ ಸಂವಿಧಾನ ಪ್ರಕಾರ ಪಾಕಿಸ್ತಾನದಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳೆಂಬ ಎರಡು ಪ್ರಾಂತ್ಯಗಳಿದ್ದುವು. ಉರ್ದು ಮತ್ತು ಬಂಗಾಲಿ ಆಡಳಿತ ಭಾಷೆಗಳಾಗಿದ್ದುವು. ಇಸ್ಲಾಮಾಬಾದ್ ರಾಜಧಾನಿ, ಢಾಕ್ಕಾ ಸಂಸದೀಯ ರಾಜಧಾನಿಯಾಗಿತ್ತು. ದೇಶಕ್ಕೆ ಪಾಕಿಸ್ತಾನ್ ಸಂಯುಕ್ತ ಗಣರಾಜ್ಯ (ಪಾಕಿಸ್ತಾನ್ ಇಸ್ಲಾಂ ಗಣರಾಜ್ಯವೆಂಬ ಹೆಸರಿಗೆ ಬದಲಾಗಿ) ಎಂಬ ಹೆಸರು ನೀಡಲಾಯಿತು. ಈ ಸಂವಿಧಾನದಲ್ಲಿ ಸೇನಾಪಡೆಗಳ ನಾಯಕತ್ವ, ಸಚಿವ ಸಂಪುಟದ ನೇಮಕ, ಪ್ರಾಂತೀಯ ರಾಜ್ಯಪಾಲರ ನೇಮಕ ಹೀಗೆ ಸ್ಥೂಲವಾದ ಕಾರ್ಯಾಂಗಾಧಿಕಾರಗಳನ್ನು ಅಧ್ಯಕ್ಷನಿಗೆ ನೀಡಲಾಗಿತ್ತು. ಅಧ್ಯಕ್ಷ ಪಶ್ಚಿಮ ಪಾಕಿಸ್ತಾನದವನಾದರೆ ರಾಷ್ಟ್ರೀಯ ಸಭಾಪತಿ ಪೂರ್ವ ಪಾಕಿಸ್ತಾನದವನಾಗಿರಬೇಕು. ಇಲ್ಲವೇ ವಿಲೋಮವಾಗಿರಬಹುದು. ಸಂವಿಧಾನ ತಿದ್ದುಪಡಿಗೆ ರಾಷ್ಟ್ರೀಯ ಸಭೆಯ 2/3ರಷ್ಟು ಬಹುಮತ ಅಗತ್ಯ. ತಿದ್ದುಪಡಿಯನ್ನು ನಿರಾಕರಿಸುವ ಅಧಿಕಾರವನ್ನು ಅಧ್ಯಕ್ಷ ಚಲಾಯಿಸಿದರೆ ಅಸೆಂಬ್ಲಿ (3/4 ರಷ್ಟು ಬಹುಮತದಿಂದ) ಅಧ್ಯಕ್ಷನ ನಿರಾಕರಣೆಯನ್ನು ತಳ್ಳಿ ಹಾಕಬಹುದು. ಇದನ್ನು ಅಧ್ಯಕ್ಷ ಪ್ರಜಾ ನಿರ್ಧಾರಕ್ಕೆ ಒಪ್ಪಿಸಬಹುದು ಅಥವಾ ಅಸೆಂಬ್ಲಿಯನ್ನು ವಿಸರ್ಜಿಸಬಹುದು. ಆತ ಅಸೆಂಬ್ಲಿಯನ್ನು ವಿಸರ್ಜಿಸಿದರೆ, 120 ದಿನಗಳೊಳಗಾಗಿ ತಾನಾಗಿಯೇ ಪುನರ್‍ಚುನಾವಣೆಯನ್ನು ಕೋರಬೇಕು. ಇವು ಈ ಸಂವಿಧಾನದ ಕೆಲವು ಮುಖ್ಯ ಅಂಶಗಳು. ಹೊಸ ಸಂವಿಧಾನಕ್ಕೆ ಅನುಸಾರವಾಗಿ ಅಧ್ಯಕ್ಷ ಅಯೂಬ್ ಘೋಷಿಸಿದಂತೆ 1965ರ ಮಾರ್ಚ್ 23ರ ರಾಷ್ಟ್ರೀಯ ಸಭೆಯ ಚುನಾವಣೆಗಳಲ್ಲಿ ಪಾಕಿಸ್ತಾನ ಮುಸ್ಲಿಂಲೀಗ್ ನಿಚ್ಚಳ ಬಹುಮತ ಗಳಿಸಿತು. 1970ರ ಮಾರ್ಚ್ 23ರಂದು ನಡೆಯಬೇಕಾದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಇಚ್ಛಿಸುವುದಿಲ್ಲವೆಂದು ಅಧ್ಯಕ್ಷ ಅಯೂಬ್ ಪ್ರಕಟಿಸಿದ್ದರು. ಜನರಲ್ ಎ.ಎಮ್.ಯಹ್ಯಾ ಖಾನರು ತತ್‍ಕ್ಷಣದಲ್ಲೇ ಇಡೀ ದೇಶದಲ್ಲಿ ಲಷ್ಕರಿ ಶಾಸನ ಘೋಷಿಸಿ ಅಧ್ಯಕ್ಷರಾದರಲ್ಲದೆ ಮುಖ್ಯ ಆಡಳಿತಗಾರರೂ ಆದರು. ಪಾಕಿಸ್ತಾನದ ರಾಜ್ಯ ವ್ಯವಸ್ಥಾ ಸಭೆಗೆ 1970ರ ಡಿಸೆಂಬರ್ 7 ರಂದು ಮಹಾ ಚುನಾವಣೆಗಳು ನಡೆದುವು. ಒಬ್ಬ ವ್ಯಕ್ತಿಗೆ ಒಂದು ಮತ ಹಾಗೂ ಸಾರ್ವತ್ರಿಕ ವಯಸ್ಕ ಮತದಾನ ತತ್ವಗಳನ್ನು ಆಧರಿಸಿದ ಗುಪ್ತ ಮತದಾನವದು. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು 16 ಮಂದಿ ಸ್ವತಂತ್ರರು ರಾಜ್ಯ ವ್ಯವಸ್ಥಾ ಸಭೆಯಲ್ಲಿ ಸ್ಥಾನ ಗಳಿಸಿದರು. ಷೇಖ್ ಮುಜೀಬುರ್ ರಹಮಾನರ ಧುರೀಣತ್ವದಲ್ಲಿ ಅವಾಮಿ ಲೀಗ್ 167 ಸ್ಥಾನ ಗಳಿಸಿತು. eóÉಡ್.ಎ.ಭುಟ್ಟೋರ ನಾಯಕತ್ವದಲ್ಲಿ ಪೀಪಲ್ಸ್ ಪಕ್ಷ 90 ಸ್ಥಾನ ಗಳಿಸಿತು. 1970ರ ಅಧಿನಿಯಮದ ಚೌಕಟ್ಟಿನಲ್ಲೆ ರಾಷ್ಟ್ರೀಯ ಸಭೆ 12 ದಿನಗಳೊಳಗಾಗಿ ಸಂವಿಧಾನ ರೂಪಿಸಬೇಕಾಗಿತ್ತು. ಸಭೆ 1971ರ ಮಾರ್ಚ್ 30ರಂದು ಸಮಾವೇಶಗೊಳ್ಳಬೇಕೆಂದು ಅಧ್ಯಕ್ಷರಿಂದ ನಿರ್ಧಾರವಾಗಿತ್ತು. ಸಂವಿಧಾನ ರೂಪಣೆಗೆ ಸಂಬಂಧಿಸಿದಂತೆ ಸಾಮಾನ್ಯ ಒಪ್ಪಂದಕ್ಕೆ ಬರುವ ದೃಷ್ಟಿಯಿಂದ ನಡುಗಾಲದಲ್ಲಿ(1970ರ ಡಿಸೆಂಬರ್-1971ರ ಫೆಬ್ರವರಿ) ರಾಜಕೀಯ ಸಂಧಾನ ಸಭೆನಡೆಯಿತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳಲ್ಲಿ, ಮುಖ್ಯವಾಗಿ ಷೇಖ್ ಮುಜೀಬರ್ ರಹಮಾನ್ ಮತ್ತು ಭುಟ್ಟೋ ಇವರ ನಡುವೆ, ಮಾತುಕತೆ ನಡೆದರೂ ಪೂರ್ಣ ಬಿಕ್ಕಟ್ಟಿನ ಸ್ಥಿತಿ ಉಂಟಾಯಿತು. ಆದ್ದರಿಂದ ರಾಜಕೀಯ ನಾಯಕರು ಒಂದು ಒಪ್ಪಂದಕ್ಕೆ ಬರುವುದಕ್ಕಾಗಿ ಹೆಚ್ಚಿನ ಕಾಲಾವಕಾಶ ಮಾಡಿಕೊಡಲು 1971ರ ಮಾರ್ಚ್ 3ರಂದು ಸಮಾವೇಶಗೊಳ್ಳಬೇಕಾಗಿದ್ದ ರಾಷ್ಟ್ರೀಯ ಸಭೆಯ ಆರಂಭದ ಅಧಿವೇಶನವನ್ನು ಅಧ್ಯಕ್ಷರು ಮಾರ್ಚ್ 25ರ ವರೆಗೆ ಮುಂದೂಡಿದರು. ಇದಕ್ಕೆ ಪೂರ್ವ ಪಾಕಿಸ್ತಾನದಲ್ಲಿ (ಬಾಂಗ್ಲಾದೇಶ) ಪ್ರಚಂಡ ಪ್ರತಿಭಟನೆ ವ್ಯಕ್ತವಾಯಿತು. ಆಗಿನ ಪೂರ್ವ ಪಾಕಿಸ್ತಾನದ ಸ್ವಾತಂತ್ರ್ಯಕ್ಕಾಗಿ ಚಳುವಳಿ ಬಿರುಸಾದಾಗ ಮಾರ್ಚ್25-26ರ ರಾತ್ರಿಯಲ್ಲಿ ಆ ಪ್ರದೇಶದ ಮೇಲೆ ಪಾಕಿಸ್ತಾನಿ ಸೇನೆ ಕ್ರಮ ತೆಗೆದುಕೊಂಡಿತು. ವಿಷಮ ಪರಿಸ್ಥಿತಿ ಉಂಟಾಗಬಹುದೆಂದು ಅಧ್ಯಕ್ಷ ಯಹ್ಯಾ ಖಾನರು ರಾಜಕೀಯವಾಗಿ ಅವಾಮಿ ಪಕ್ಷವನ್ನು ನಿಷೇಧಿಸಿದರಾದರೂ, ಮಹಾಚುನಾವಣೆಗಳನ್ನು ರದ್ದುಗೊಳಿಸಲಿಲ್ಲ. 1971ರ ಡಿಸೆಂಬರ್‍ನಲ್ಲಿ ಭಾರತ ಸೇನೆ ಪೂರ್ವಪಾಕಿಸ್ತಾನದಲ್ಲಿ ಬಾಂಗ್ಲಾ ವಿಮೋಚನಾ ಸೈನಿಕರ ನೆರವಿಗೆ ಹೋಯಿತು. 1971ರ ಡಿಸೆಂಬರ್ 17ರಂದು ಭಾರತ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿತು. ಪೂರ್ವಪಾಕಿಸ್ತಾನದ ಎಲ್ಲ ಪ್ರದೇಶವನ್ನೂ ಒಳಗೊಂಡಂತೆ ಸ್ವತಂತ್ರ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದಿತ್ತು. 1971ರ ಡಿಸೆಂಬರ್ 20ರಂದು ಅಧ್ಯಕ್ಷ ಎ.ಎಂ ಯಹ್ಯಾ ಖಾನ್ ರಾಜೀನಾಮೆ ನೀಡಿದರು. ಜುಲ್ಫಿಕರ್ ಅಲಿ ಭುಟ್ಟೋ ಅಧ್ಯಕ್ಷರಾದರು; ಹಾಗೂ ಅಂದಿನಿಂದಲೇ ಲಷ್ಕರಿ ಶಾಸನದ ಆಡಳಿತಗಾರರೂ ಆದರು. 1972ರ ಏಪ್ರಿಲ್ 21ರಂದು ಲಷ್ಕರಿ ಶಾಸನವನ್ನು ತೆಗೆದುಹಾಕಿ ಅಧ್ಯಕ್ಷ ಭುಟ್ಟೋ ತಾತ್ಕಾಲಿಕ ಸಂವಿಧಾನದಂತೆ, ಅಂದಿನಿಂದ ಪ್ರಥಮ ನಾಗರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದರು. ಅಧ್ಯಕ್ಷ ಭುಟ್ಟೋ ತತ್‍ಕ್ಷಣದಲ್ಲಿಯೇ ಕೇಂದ್ರ ಹಾಗೂ ಪ್ರಾಂತ್ಯಗಳ ಮಟ್ಟದಲ್ಲಿ ಕೆಲವು ಮುಖ್ಯ ನೇಮಕಗಳನ್ನು ಮಾಡಿ ಅನಂತರ ತಮ್ಮ ಸಚಿವ ಸಂಪುಟವನ್ನು ಹೆಸರಿಸಿದರು. ಅವರ ಸಚಿವ ಸಂಪುಟವನ್ನು ಕೆಲವು ಸಂದರ್ಭಗಳಲ್ಲಿ ವಿಸ್ತಾರಗೊಳಿಸಲು ಅವಕಾಶ ಮಾಡಲಾಯಿತು. ಭುಟ್ಟೋ ಅಧಿಕಾರ ವಹಿಸಿಕೊಂಡ ಅನಂತರ ರಾಷ್ಟ್ರೀಯ ನೀತಿ, ವಿದೇಶಾಂಗ ನೀತಿ ಮತ್ತು ಸಾಮಾಜಿಕ ಸುಧಾರಣೆಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. 1973ರ ಮಾರ್ಚ್ 23ರ ಒಳಗೆ ಖಾಯಂ ಸಂವಿಧಾನ ಸಿದ್ಧವಾಗುವುದೆಂದು ಅವರು ಸೂಚನೆ ನೀಡಿದರು. 1972ರ ಜನವರಿ 30ರಂದು ಪಾಕಿಸ್ತಾನ ಕಾಮನ್‍ವೆಲ್ತಿನಿಂದ ಹೊರಬಂತು. ಅಧ್ಯಕ್ಷ ಭುಟ್ಟೋ ಅರ್ಥವತ್ತಾಗಿ ಪೂರ್ವ ಪಾಕಿಸ್ತಾನದ ಉಪಚುನಾವಣೆಗಳ ಫಲಿತಾಂಶಗಳನ್ನು ರದ್ದುಗೊಳಿಸಿದರು. ರಾಷ್ಟ್ರೀಯ ಅವಾಮಿ ಪಕ್ಷದ ಮೇಲಿನ ನಿಷೇಧವನ್ನು ತೆಗೆದು ಹಾಕಿದರು ಮತ್ತು ಗೃಹ ಬಂಧನದಲ್ಲಿದ್ದ ಷೇಖ್ ಮುಜಿಬುರ್ ರಹಮಾನರನ್ನು ಬೇಷರತ್ತಾಗಿ ಬಿಡುಗಡೆ ಮಾಡಿದರು. 1973ರ ಏಪ್ರಿಲ್ 10ರಂದು ರಾಷ್ಟ್ರೀಯ ಸಭೆಯ ಅಂಗೀಕಾರ ಪಡೆದಿದ್ದ ಹೊಸ ಸಂವಿಧಾನವನ್ನು 1973ರ ಆಗಸ್ಟ್ 14ರಂದು ಜಾರಿಗೆ ತರಲಾಯಿತು. ಈ ಸಂವಿಧಾನದಂತೆ ಪ್ರಧಾನ ಮಂತ್ರಿಯಾಗುವ ಸಲುವಾಗಿ ಭುಟ್ಟೋ ಅಧ್ಯಕ್ಷತೆಯ ಅಧಿಕಾರ ತ್ಯಜಿಸಿದರು. ಫಜûಲ್ ಇಲಾಹಿ ಚೌಧರಿಯನ್ನು ಪಾಕಿಸ್ತಾನದ ಅಧ್ಯಕ್ಷರಾಗಿ ಚುನಾಯಿಸಲಾಯಿತು. 1977ರಲ್ಲಿ ಚುನಾವಣೇ ನಡೆದು ಭುಟ್ಟೋ ಅಧಿಕಾರದಲ್ಲಿ ಮುಂದುವರಿದರಾದರೂ ಚುನಾವಣೆಗಳನ್ನು ನ್ಯಾಯವಾಗಿ ನಡೆಸಲಿಲ್ಲವೆಂಬ ಕಾರಣದಿಂದ ಪಾಕಿಸ್ತಾನದಲ್ಲಿ ಪ್ರಚಂಡ ವಿರೋಧ ಉಂಟಾಯಿತು. ಕ್ಷಿಪ್ರಾಕ್ರಮಣ ಜಿûಯಾಉಲ್ ರಹಮಾನ್ ಅಧಿಕಾರ ವಹಿಸಿಕೊಂಡರು. ಭುಟ್ಟೋ ಪದಚ್ಯುತರಾದರು. ಕೊಲೆಯ ಸಂಚಿನ ಆಪಾದನೆಯ ವಿಚಾರಣೆಯಲ್ಲಿ ಭುಟ್ಟೋ ತಪ್ಪಿತಸ್ಥರೆಂದು ಅವರನ್ನು ಅನಂತರ ಮರಣದಂಡನೆಗೆ ಗುರಿಪಡಿಸಲಾಯಿತು.

ಸಂವಿಧಾನ

[ಬದಲಾಯಿಸಿ]

ಪಾಕಿಸ್ತಾನದ ಸಂಸತ್ತಿನಲ್ಲಿ ಸೆನೆಟ್ ಮತ್ತು ರಾಷ್ಟ್ರೀಯ ಸಭೆ ಎಂಬ ಎರಡು ಸದನಗಳಿವೆ. ಸೆನೆಟ್‍ನಲ್ಲಿ 63 ಸದಸ್ಯರಿರುತ್ತಾರೆ. ಪಾಕಿಸ್ತಾನದಲ್ಲಿ 4 ಪ್ರಾಂತ್ಯಗಳಿವೆ. ಪ್ರತಿಯೊಂದು ಪ್ರಾಂತೀಯ ಸಭೆಯೂ ಸೆನೆಟ್‍ಗೆ 14 ಸದಸ್ಯರನ್ನು ಚುನಾಯಿಸುತ್ತದೆ. ಕೇಂದ್ರಾಡಳಿತ ಬುಡಕಟ್ಟಿನ ಪ್ರದೇಶಗಳಿಂದ ಆಯ್ಕೆಯಾಗುವ ಸದಸ್ಯರು 5 ಮಂದಿ. ಕೇಂದ್ರ ರಾಜಧಾನಿ ಪ್ರದೇಶದಿಂದ 2 ಸದಸ್ಯರನ್ನು ಆರಿಸಲಾಗುತ್ತದೆ. ಈ ಸದನದ ಸದಸ್ಯರ ಅಧಿಕಾರಾವಧಿ 4 ವರ್ಷಗಳು. ಅವರಲ್ಲಿ ಅರ್ಧದಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ. ಆದರೆ ಕೇಂದ್ರಾಡಳಿತ ಬುಡಕಟ್ಟಿನ ಪ್ರದೇಶದಿಂದ ಸಭೆಗೆ ಚುನಾಯಿತರಾದ ಸದಸ್ಯರಲ್ಲಿ ಮೊದಲ 3 ಸದಸ್ಯರು 2 ವರ್ಷಗಳ ಅನಂತರ ನಿವೃತ್ತರಾಗುತ್ತಾರೆ.

ರಾಷ್ಟ್ರೀಯ ಸಭೆಯಲ್ಲಿ ವಯಸ್ಕ ಮತದಾನ ಪದ್ಧತಿಯಿಂದ ಚುನಾಯಿಸಲಾದ 200 ಸದಸ್ಯರಿರುತ್ತಾರೆ. 10 ಅಧಿಕ ಸ್ಥಾನಗಳನ್ನು ಸ್ತ್ರೀಯರಿಗೆ ಕಾದಿರಿಸಲಾಗಿದೆ. 10 ವರ್ಷಗಳವರೆಗೆ ಇಲ್ಲವೇ ಮುಂದಿನ ಮಹಾಚುನಾವಣೆಯ ವರೆಗೆ(ಯಾವುದು ಅನಂತರವೋ ಅಲ್ಲಿಯವರೆಗೆ) ಈ ಸ್ಥಾನಗಳಲ್ಲಿ ಇರಲು ಅವಕಾಶವಿದೆ. ಕಾದಿರಿಸಲಿರುವ ಎಲ್ಲ ಸ್ಥಾನಗಳಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಸ್ತ್ರೀಯರೂ ಅರ್ಹರಾಗಿರುತ್ತಾರೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿನ ಸ್ಥಾನಗಳನ್ನು ಪ್ರಾಂತ್ಯಗಳು, ಕೇಂದ್ರಾಡಳಿತ ಬುಡಕಟ್ಟು ಪ್ರದೇಶಗಳು ಮತ್ತು ಕೇಂದ್ರರಾಜಧಾನಿ ಇವುಗಳ ನಡುವೆ ಜನಸಂಖ್ಯೆಯ ಆಧಾರದ ಮೇಲೆ ಹಂಚಲಾಗುತ್ತದೆ. ರಾಷ್ಟ್ರೀಯ ಅಸೆಂಬ್ಲಿಯ ಅವಧಿ 5 ವರ್ಷಗಳು.

ನ್ಯಾಯಾಂಗ

[ಬದಲಾಯಿಸಿ]

ಪಾಕಿಸ್ತಾನದ ನ್ಯಾಯಾಂತ ವ್ಯವಸ್ಥೆಗೆ ಬ್ರಿಟಿಷ್ ವ್ಯವಸ್ಥೆಯೇ ಮೂಲ. ಬ್ರಿಟಿಷ್ ಭಾರತದಲ್ಲಿ ಬಳಕೆಯಲ್ಲಿದ್ದ ವ್ಯವಸ್ಥೆಯಿಂದ ಅದು ನೇರವಾಗಿ ಆಚರಣೆಗೆ ಬಂದಿದೆ. ಸರ್ವೋಚ್ಛ ನ್ಯಾಯಾಲಯಕ್ಕೆ ಮೂಲ, ಮೇಲ್ಮನವಿ ಮತ್ತು ಸಲಹಾ ವ್ಯಾಪ್ತಿ ಇದೆ. ಈ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶನಲ್ಲದೆ 6 ಕಿರಿಯ ನ್ಯಾಯಾಧೀಶರಿರುತ್ತಾರೆ. ರಾಷ್ಟ್ರದ ಅಧ್ಯಕ್ಷರು ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ. ಪಾಕಿಸ್ತಾನದಲ್ಲಿ 3 ಉಚ್ಚ ನ್ಯಾಯಾಲಯಗಳಿವೆ. ಅಧ್ಯಕ್ಷರ ಒಪ್ಪಿಗೆಯಿಂದ 2 ಪ್ರಾಂತ್ಯಗಳಿಗೆ ಒಂದೇ ಶ್ರೇಷ್ಠ ನ್ಯಾಯಾಲಯ ಇರಲು ಕೂಡ ಅವಕಾಶವಿದೆ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು ಅಧ್ಯಕ್ಷರು ನೇಮಿಸುತ್ತಾರೆ.

ಉಚ್ಚ ನ್ಯಾಯಾಲಯಗಳ ಅಧೀನದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳಿವೆ. ಇವುಗಳ ಅಧೀನದಲ್ಲಿ ಅಧೀನ ನ್ಯಾಯಾಲಯಗಳು, ನಾಗರಿಕ ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಮ ನ್ಯಾಯಾಲಯಗಳು ಮತ್ತು ಅಪರಾಧ ವಿಷಯಗಳಿಗೆ ಸಂಬಂಧಿಸಿದಂತೆ ದಂಡಾಧೀಶರು ಇರುತ್ತಾರೆ. ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತ ನ್ಯಾಯಾಂಗಕ್ಕೆ ಸಂವಿಧಾನ ಅವಕಾಶ ಮಾಡಿಕೊಟ್ಟಿರುವುದಲ್ಲದೆ, ಪ್ರಜೆಗಳಲ್ಲಿಯ ನಾಗರಿಕ ಮತ್ತು ಅಪರಾಧಕ್ಕೆ ಸಂಬಂಧಿಸಿದ ವಾದಗಳನ್ನು ಬಗೆಹರಿಸಲು ರಾಜಿನ್ಯಾಯ ಸ್ಥಾನಗಳನ್ನು ಸ್ಥಾಪಿಸಲು ಸರ್ಕಾರ 1961ರ ಫೆಬ್ರವರಿಯಲ್ಲಿ ನಿರ್ಧರಿಸಿತು.

ನ್ಯಾಯಾಧೀಶರ ನಡತೆಯನ್ನು ಪ್ರಶ್ನಿಸಲು ಶ್ರೇಷ್ಠ ನ್ಯಾಯಿಕ ಸಮಿತಿಗೆ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಈ ಸಮಿತಿಯಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಅದೇ ನ್ಯಾಯಾಲಯದ ಜ್ಯೇಷ್ಠತಮರಾದ ಇಬ್ಬರು ನ್ಯಾಯಾಧೀಶರು ಮತ್ತು ಉಚ್ಚ ನ್ಯಾಯಾಲಯದ ಇಬ್ಬರು ಜ್ಯೇಷ್ಠತಮ ನ್ಯಾಯಾಧೀಶರು ಇರುತ್ತಾರೆ. ಅಧ್ಯಕ್ಷರಿಂದ ನೇಮಕಗೊಂಡ ಒಬ್ಬ ಅಟಾರ್ನಿ ಜನರಲ್ ಇರುತ್ತಾನೆ. ಅವನು ಪಾಕಿಸ್ತಾನದ ಎಲ್ಲ ನ್ಯಾಯಾಲಯಗಳಲ್ಲೂ ಹಾಜರಿರುವ ಹಕ್ಕನ್ನು ಪಡೆದಿರುತ್ತಾನೆ.

ಆಡಳಿತ

[ಬದಲಾಯಿಸಿ]

ಪಾಕಿಸ್ತಾನದಲ್ಲಿ ಪಂಜಾಬ್, ವಾಯವ್ಯ ಸರಹದ್ದು ಪ್ರಾಂತ್ಯ, ಸಿಂಧ್ ಮತ್ತು ಬಲೂಚಿಸ್ತಾನಗಳೆಂಬ ನಾಲ್ಕು ಪ್ರಾಂತ್ಯಗಳಿವೆ. ಇವು 1970ರ ಜುಲೈಗೆ ಮುಂಚಿತವಾಗಿ ಒಂದೇ ಆಡಳಿತ ಘಟಕದಲ್ಲಿ ಸೇರಿದ್ದುವು. ಬಹಾವಲ್ ಪುರ, ಡೇರಾ, ಇಸ್‍ಮೇಲ್ ಖಾನ್, ಹೈದರಾಬಾದ್, ಕರಾಚಿ, ಕಲಾಟ್, ಖೈರ್‍ಪುರ್, ಲಾಹೋರ್, ಮಲಕಂದ್, ಮುಲ್ತಾನ್, ಪೆಷಾವರ್, ರಾವಲ್ಪಿಂಡಿ, ಸರ್‍ಗೋಧ, ಕ್ವೆಟ್ಟ ಇವು ವಿಭಾಗಗಳು. ಒಟ್ಟು 51 ಜಿಲ್ಲೆಗಳಿವೆ.

ನಾಲ್ಕು ಪ್ರಾಂತ್ಯಗಳಲ್ಲಿನ ಪ್ರತಿಯೊಂದು ಪ್ರಾಂತ್ಯದಲ್ಲಿ ಮುಖ್ಯಮಂತ್ರಿ ಆಡಳಿತ ನಡೆಸುತ್ತಾನೆ. ಆತನಿಗೆ ಸಚಿವ ಸಂಪುಟ ಮತ್ತು ಒಬ್ಬ ಕಾರ್ಯದರ್ಶಿಯ ನೇತೃತ್ವದಲ್ಲಿನ ಪ್ರಾಂತೀಯ ಸಚಿವಾಲಯ ಸಹಾಯ ನೀಡುತ್ತವೆ. ಪ್ರಾಂತೀಯ ರಾಜ್ಯಪಾಲರು ಅಧ್ಯಕ್ಷನಿಂದ ನೇಮಕಗೊಳ್ಳುತ್ತಾರೆ. ಆತನ ವಿಶ್ವಾಸ ಇರುವವರೆಗೆ ಅಧಿಕಾರದಲ್ಲಿ ಉಳಿಯುತ್ತಾರೆ. ಅಧ್ಯಕ್ಷನಿಂದ ನೇಮಕಗೊಂಡ ಕಮಿಷನರ್‍ಗಳು ಸಂಬಂಧಿಸಿದ ವಿಭಾಗಗಳಲ್ಲಿ ಆಡಳಿತ ನಡೆಸುತ್ತಾರೆ. ಪ್ರಾಂತೀಯ ಸರ್ಕಾರಗಳಿಗೆ ಜವಾಬ್ದಾರಿ ಹೊಂದಿರುವ ಜಿಲ್ಲಾಧಿಕಾರಿ ಅಥವಾ ಕಲೆಕ್ಟರ್‍ಗಳ ಆಡಳಿತ ನಿಯಂತ್ರಣಕ್ಕೆ ಜಿಲ್ಲೆಗಳು ಒಳಪಡುತ್ತವೆ.

ಇತಿಹಾಸ

[ಬದಲಾಯಿಸಿ]

ಪ್ರಾಗಿತಿಹಾಸ

[ಬದಲಾಯಿಸಿ]

ಪಾಕಿಸ್ತಾನ ಒಂದು ಪ್ರತ್ಯೇಕ ರಾಷ್ಟ್ರವಾದ್ದು 1947ರಲ್ಲಾದರೂ ಈ ಪ್ರದೇಶದ ಇತಿಹಾಸ ಬಹಳ ಪ್ರಾಚೀನ ಕಾಲದಿಂದಲೂ ಗಮನಾರ್ಹವಾಗಿದೆ. ಆದರೂ ಇಲ್ಲಿ ವ್ಯವಸ್ಥಿತ ಪ್ರಾಕ್ತನ ಸಂಶೋಧನೆಗಳು ಹೆಚ್ಚಾಗಿ ನಡೆದಿಲ್ಲವಾದ್ದರಿಂದ ಇಲ್ಲಿ ಆದಿಮಾನವನ ಆಗಾಗಿನ ಚಟುವಟಿಕೆಗಳ ಸಮಗ್ರ ಚಿತ್ರ ದೊರೆಯದಾಗಿದೆ. ಭರತಖಂಡದ ಪ್ರಾಚೀನತಮ ಶಿಲಾಯುಗ ಸಂಸ್ಕøತಿಗಳ ಪಳೆಯುಳಿಕೆಗಳನ್ನು ಪಂಜಾಬಿನ ಸೋಹನ್ ನದಿ ಕಣಿವೆಯಲ್ಲಿ 1935ರ ವೇಳೆಗೆ ಡಾ.ಹೆಲ್ಮೆಟ್ ಡಿ ಟೆರ್ರಾ ನಾಯಕತ್ವದಲ್ಲಿ ಅಮೆರಿಕದಿಂದ ಬಂದ ಸಂಶೋಧನ ತಂಡ ಕಂಡುಹಿಡಿಯಿತು. ಅದರ ಪ್ರಕಾರ ಮಧ್ಯ ಹಿಮಯುಗದಲ್ಲಿ ಮಾನವ ಮೊದಲು ಇಲ್ಲಿ ನೆಲೆಸಿದ್ದ, ಅವನು ಬಹಳ ದೊಡ್ಡ ಒರಟಾದ ಚಕ್ಕೆಕಲ್ಲಿನ ಆಯುಧಗಳನ್ನು ಬಳಸುತ್ತಿದ್ದ. ಆದರೆ ಅವು ಮಾನವ ನಿರ್ಮಿತವಲ್ಲವೇನೋ ಎಂಬ ಸಂದೇಹವನ್ನು ವಿದ್ವಾಂಸರು ಈಚೆಗೆ ವ್ಯಕ್ತಪಡಿಸುತ್ತಾರೆ. ಅನಂತರಕಾಲದಲ್ಲಿ, ಸೋಹನ್ ಸಂಸ್ಕøತಿಯವೆಂದು ಹೇಳಲಾದ, ಉರಂಟು ಕಲ್ಲಿನಿಂದ ಏಕಮುಖವಾದ, ಚಕ್ಕೆಗಳನ್ನು ತೆಗೆದು ನಿರ್ಮಿಸಿದ. ಮಚ್ಚುಕತ್ತಿ ಮತ್ತು ತುಂಡುಕೊಡಲಿಗಳ ಬಗ್ಗೆ ಇಂಥ ಸಂದೇಹಕ್ಕೆ ಎಡೆಯಿಲ್ಲ. ವಿವಿಧ ಸಂಶೋಧಕ ಪಂಡಿತರ ಹೇಳಿಕೆಗಳಿಗೆ ಅನುಗುಣವಾಗಿ ಈ ಸಂಸ್ಕøತಿಗಳನ್ನು ಕ್ರಿ.ಪೂ1500000-200000 ಕಾಲಕ್ಕೆ ನಿರ್ದೇಶಿಸಬಹುದಾಗಿದೆ. ಈ ದೀರ್ಘಕಾಲದ ಉದ್ದಕ್ಕೂ ಆಯುಧ ತಯಾರಿಕೆಯಲ್ಲಿ ಸುಧಾರಣೆಗಳಾಗುತ್ತಿದ್ದುದರಿಂದ, ಈ ಸಂಸ್ಕøತಿಯ ಆಯುಧಗಳನ್ನು ಆದಿಕಾಲದ, ಅನಂತರ ಕಾಲದ ಮತ್ತು ಸುಧಾರಿತ ಸೋಹನ್ ಸಂಸ್ಕøತಿಗಳೆಂದು ಮೂರು ಗುಂಪುಗಳಾಗಿ ವಿಭಜಿಸಲಾಗಿದೆ. ಆದಿಕಾಲದಲ್ಲಿ ಉಂಡೆಕಲ್ಲುಗಳನ್ನು ಸೀಳಿ ಅವುಗಳ ಒಂದು ಪಾಶ್ರ್ವದಿಂದ ಚಕ್ಕೆಗಳನ್ನು ತೆಗೆದು ಆಯುಧಗಳನ್ನು ಮಾಡಲಾಗುತ್ತಿತ್ತು. ಅನಂತರದ ಕಾಲದಲ್ಲಿ ಸೀಳಿದ ಕಲ್ಲುಗಳ ಒಂದು ಅಥವಾ ಎರಡು ಮುಖಗಳಿಂದಲೂ ಚಕ್ಕೆಗಳನ್ನು ತೆಗೆದು ಉತ್ತಮ ಆಕೃತಿಯ ಮತ್ತು ಹೆಚ್ಚು ಉಪಯುಕ್ತವಾದ ಕೊಡಲಿಗಳನ್ನು ತಯಾರಿಸುತ್ತಿದ್ದುದಲ್ಲದೆ ಅವರು ಲೆವಾಲ್ವಾಷಿಯನ್ ವಿಧಾನದಲ್ಲಿ ಮಾಡಿದ ಚಕ್ಕೆಕಲ್ಲಿನ ಆಯುಧಗಳನ್ನೂ ಬಳಸುತ್ತಿದ್ದರು. ಅವರ ಆಯುಧಗಳಲ್ಲಿ ಅರ್ಧದಷ್ಟು ಇಂಥವು ಆಗಿದ್ದುವು. ಪಾಕಿಸ್ತಾನದ ಪಂಜಾಬ್ ಪ್ರದೇಶದಲ್ಲಿ ಜೌಂತ್ರ, ಅಡಿಯಾಲ್, ಬಲವಾಲ್ ಮತ್ತು ಘರಿಯಾಲ್ ಪ್ರದೇಶಗಳಲ್ಲಿ, ಆದಿ ಪೂರ್ವ ಶಿಲಾಯುಗಕ್ಕೆ ಸೇರಿದ, ಆದರೆ ಪರ್ಯಾಯ ದ್ವೀಪೀಯ ಭಾರತದಲ್ಲಿ ಪ್ರಬಲವಾಗಿರುವ, ಕೈಗೊಡಲಿ-ಕ್ಲೀವರ್ ಸಂಸ್ಕøತಿಯ ಕುರುಹುಗಳೂ ಕಂಡುಬಂದಿವೆ. ಸುಧಾರಿತ ಸೋಹನ್ ಸಂಸ್ಕøತಿಯಲ್ಲಿ ಉರುಟು ಕಲ್ಲಿನ ಆಯುಧಗಳು ಬಹಳ ಕಡಿಮೆಯಾದುವಲ್ಲದೆ ಸಣ್ಣವೂ ಉತ್ತಮವಾಗಿ ತಯಾರಿಸಿದವೂ ಆಗಿದ್ದುವು; ಆದರೆ ಚಕ್ಕೆ ಕಲ್ಲಿನ ಆಯುಧಗಳು ಅಧಿಕ ಸಂಖ್ಯೆಯಲ್ಲಿ ಕಂಡುಬಂದುವು. ಈ ಆಯುಧಗಳನ್ನು ಸಾಮಾನ್ಯವಾಗಿ ಮಧ್ಯ ಪೂರ್ವ ಶಿಲಾಯುಗ ಸಂಸ್ಕøತಿಗೆ (ಕ್ರಿ.ಪೂ 100000) ನಿರ್ದೇಶಿಸಲಾಗಿದೆ.

ಈಚಿನ ವರ್ಷಗಳಲ್ಲಿ ಎ.ಎಚ್.ದಾನಿಯವರು ಪೆಷಾವರ್ ಬಳಿಯ ಸಂಘಾವೊಗುಹೆಗಳಲ್ಲಿ ಮಧ್ಯ ಪೂರ್ವ ಶಿಲಾಯುಗ ಸಂಸ್ಕøತಿಯ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ. ಗುಹೆಗಳಲ್ಲಿ ನಡೆದ ಉತ್ಖನನದಿಂದ ಶಿಲಾಯುಗಕ್ಕೆ ಸೇರುವ ಮೂರು ಹಂತಗಳ ಆಯುಧಗಳು ದೊರೆತಿವೆ. ಮೊದಲಿನ ಎರಡು ಮೇಲಿನ ಸಂಸ್ಕøತಿಗೂ ಮೂರನೆಯದು ಕ್ರಮೇಣ ಸೂಕ್ಷ್ಮಶಿಲಾಯುಗದತ್ತ ಹೊರಳುತ್ತಿದ್ದ ಸಂಸ್ಕøತಿಗೂ ಸೇರುತ್ತವೆ. ಇವು ಸುಧಾರಿತ ಸೋಹನ್ ಸಂಸ್ಕøತಿಯಿಂದ ಕೆಲವು ಅಂಶಗಳಲ್ಲಿ ಭಿನ್ನವಾಗಿವೆ. ಇವು ಆಫ್ಘಾನಿಸ್ತಾನ ಮತ್ತು ಇರಾನಿನ ಅದೇ ಸಂಸ್ಕøತಿಯ ಆಯುಧ ರೀತಿಗಳನ್ನು ಹೋಲುತ್ತವೆ. ಆಗಿನ ಜನ ಹೆಚ್ಚಾಗಿ ಗುಹೆಗಳಲ್ಲಿ ವಾಸಿಸುತ್ತ, ಆಹಾರ ಸಂಗ್ರಹಣೆಯಿಂದ ಜೀವನ ಸಾಗಿಸುತ್ತಿದ್ದರು. ಈ ಸಂಸ್ಕøತಿಗಳ ಕಾಲವನ್ನು ಕ್ರಿ,ಪೂ 50000-10000 ಎಂದು ಹೇಳಬಹುದಾಗಿದೆ.

ಈವರೆಗೆ ಪರಿಶೀಲಿಸಿದ ಸಂಸ್ಕøತಿಗಳ ಆಯುಧೋಪಕರಣಗಳಿಂದ ಮಾತ್ರ ಆಗಿನ ಜನಜೀವನದ ರೀತಿ ಪದ್ಧತಿಗಳನ್ನು ಊಹಿಸಬೇಕಾಗಿದೆ. ಆ ಸಂಸ್ಕøತಿಗಳ ಕರ್ತೃಗಳಾದ ಮಾನವರ ದೇಹಾವಶೇಷಗಳು ಈವರೆಗೂ ದೊರೆತಿಲ್ಲವಾದ್ದರಿಂದ ಅವರ ಸಮಗ್ರ ಚಿತ್ರ ತಿಳಿದಿಲ್ಲ. ಚೀನ, ಇಂಡೊನೇಷ್ಯ ಮತ್ತು ಮಲೇಷಿಯಗಳಲ್ಲಿ ಇದನ್ನು ಹೋಲುವ ಸಂಸ್ಕøತಿಗಳಿದ್ದುದರಿಂದ ಇಲ್ಲಿಯ ಜನರು ಅವರಂತೆ ಇದ್ದಿರಬಹುದು. ಮಧ್ಯ ಪೂರ್ವ ಶಿಲಾಯುಗ ಕಾಲದಲ್ಲಿ ಬಹುಶಃ ಬೇರೆ ಗುಂಪಿನ ಜನರು ಪಶ್ಚಿಮ ಏಷ್ಯ ಪ್ರದೇಶಗಳಿಂದ ತಮ್ಮ ಸಂಸ್ಕøತಿಯ ಜೀವನಕ್ರಮವನ್ನು ಈ ಪ್ರದೇಶಕ್ಕೆ ಹರಡಲಾರಂಭಿಸಿದರು. ಮತ್ತು ಈ ಜನರು ಮುಂದಿನ ಐತಿಹಾಸಿಕ ಯುಗದ ಜನತೆಯ ಮೂಲಪುರುಷರೆಂದು ಹೇಳಬಹುದಾಗಿದೆ.

ಕ್ರಿ.ಪೂ.5000 ದಿಂದ ಈಚೆಗೆ ಬಲೂಚಿಸ್ತಾನ ಮತ್ತು ಸಿಂಧ್ ಪ್ರದೇಶಗಳಲ್ಲಿ ಪ್ರಾಚೀನ ಅಸಂಸ್ಕøತ ಜನರು ನೆಲೆಸಿ ಆಹಾರೋತ್ಪಾದನೆಯತ್ತ ಮೊದಲ ಹೆಜ್ಜೆಯನ್ನಿಟ್ಟರು. ಕ್ವೆಟ್ಟ, ಝೂಬ್, ಅಮ-ನಾಲ್, ಎಡಿತ್‍ಷಾಹರ್ ಪ್ರದೇಶಗಳಲ್ಲಿ ಈ ಜನರು ನವಶಿಲಾಯುಗದ ಅನಂತರ ತಾಮ್ರಶಿಲಾಯುಗದ ಹಂತದ ಸಂಸ್ಕøತಿಗಳನ್ನು ರೂಢಿಸಿಕೊಂಡರು. ಪಶುಪಾಲನೆ, ವ್ಯವಸಾಯ, ಮಣ್ಣಿನ ಪಾತ್ರೆಗಳ ಉಪಯೋಗ, ಸಣ್ಣ ಗ್ರಾಮಗಳಲ್ಲಿ ಗುಡಿಸಲುಗಳಲ್ಲಿ, ಮಣ್ಣಿನ ಅಥವಾ ಹಸಿ ಇಟ್ಟಿಗೆಗಳಿಂದ ನಿರ್ಮಿಸಿದ ಮನೆಗಳಲ್ಲಿ ವಸತಿ-ಇವು ಮೊದಮೊದಲು ಇವರ ಜೀವನದ ಮುಖ್ಯ ಲಕ್ಷಣಗಳಾಗಿದ್ದುವು. ಕ್ರಮೇಣ ಅಕ್ಕಪಕ್ಕದ ದೇಶಗಳೊಂದಿಗೆ ತಾಮ್ರ, ತವರ, ಅಬ್ಸಿಡಿಯನ್ ಮುಂತಾದ ಕಚ್ಚಾ ಸಾಮಗ್ರಿಗಳಿಗಾಗಿ ವ್ಯಾಪಾರಸಂಪರ್ಕ ಬೆಳೆದಾಗ ಪರಸ್ಪರ ಸಾಂಸ್ಕøತಿಕ ಪ್ರಭಾವಗಳು ತಲೆದೋರಲಾರಂಭಿಸಿದುವು. ಜನಸಂಖ್ಯೆ ಹೆಚ್ಚಿದಂತೆ ಹೊಸ ಪ್ರದೇಶಗಳಿಗೆ ವಸತಿಯ ವಿಸ್ತರಣೆಯಾಯಿತು. ತಾಮ್ರದ ಮೊದಲ ಉಪಯೋಗ ಬಹುಶಃ ಇರಾನಿನ ಪ್ರಭಾವದಿಂದ ಪ್ರಾರಂಭವಾಯಿತು. ವ್ಯಾಪಾರ ಬೆಳೆದಂತೆ ಅದರ ಸೌಲಭ್ಯಕ್ಕಾಗಿ ಮುದ್ರೆಗಳು ಮತ್ತು ಅವುಗಳ ಮೇಲೆ ಕೊರೆದ ಸಂಕೇತ ಲಿಪಿ ಬಳಕೆಗೆ ಬಂದುವು. ಈ ಮಧ್ಯೆ ಗ್ರಾಮಜೀವನದಲ್ಲಿ ಸುಧಾರಣೆಯಾಗಿ ವೃತ್ತಿ ಕುಶಲತೆ ಮತ್ತು ವೈವಿಧ್ಯಗಳು ಹುಟ್ಟಿಕೊಂಡವು. ಕ್ರಮೇಣ ಗ್ರಾಮಗಳ ಗಾತ್ರ ಬೆಳೆದು ಸಣ್ಣ ನಗರಗಳು, ಅವುಗಳ ಸುತ್ತ ಕೋಟೆ ಕೊತ್ತಲಗಳು, ನಗರಗಳಲ್ಲಿ ಅರಮನೆ, ದೇವಾಲಯ ಮತ್ತಿತರ ಸಾಮೂಹಿಕ ಭವನಗಳು ಅಸ್ತಿತ್ವಕ್ಕೆ ಬಂದುವು. ಅದೇ ಸುಮಾರಿನಲ್ಲಿ ದಕ್ಷಿಣ ಬಲೂಚಿಸ್ತಾನದಲ್ಲಿ ಕೃತಕ ನೀರಾವರಿ ಕಾರ್ಯಗಳು ಕಾಣಬರುತ್ತವೆ. ಹೀಗೆ ಕ್ರಿ.ಪೂ 3ನೆಯ ಸಹಸ್ರಮಾನದ ಮಧ್ಯಭಾಗದಲ್ಲಿ ನಾಗರಿಕತೆಯ ಪ್ರಾರಂಭದ ಹಂತವನ್ನು ಕಾಣಬಹುದಾಗಿದೆ.

ತರುವಾಯ ಭಾರತ ಉಪಖಂಡದಲ್ಲೇ ಅನ್ಯಾದೃಶವಾದ, ಅತ್ಯಂತ ಪ್ರಗತಿಯುತವಾದ ಹರಪ್ಪ ನಾಗರಿಕತೆ ಪಾಕಿಸ್ತಾನದಲ್ಲಿ ತಲೆದೋರಿತು. ಪಂಜಾಬಿನಲ್ಲಿ ರಾವಿ ನದಿಯ ದಂಡೆಯಲ್ಲಿರುವ ಹರಪ್ಪ, ಸಿಂಧ್‍ನಲ್ಲಿ ಸಿಂಧೂ ನದಿಯ ದಂಡೆಯಲ್ಲಿರುವ ಮೊಹೆಂಜೊದಾರೊ, ಚಾನ್ಹುದಾರೊ, ಮಕ್ರಾನ್, ಕಡಲುತೀರದಲ್ಲಿರುವ ಸೋಟ್ ಕೋಜಂಡಾರ್, ಸೋಟ್‍ಕೋಖೋ, ಬಾಲಕೋಟ, ಮತ್ತು ಒಳನಾಡಿನಲ್ಲಿರುವ ದಾಬರಕೋಟ್, ಕೋಟ್‍ದೀಜಿ ಮುಂತಾದ ಹತ್ತಾರು ನೆಲೆಗಳಲ್ಲಿ ಆ ನಾಗರಿಕತೆಯ ಅವಶೇಷಗಳನ್ನು ಶೋಧಿಸಲಾಗಿದೆ. ಇವುಗಳಲ್ಲಿ ಹರಪ್ಪಾ, ಮೊಹೆಂಜೊದಾರೊ ಇವು ಆ ಚಕ್ರಾಧಿಪತ್ಯದ ಅವಳಿ ರಾಜಧಾನಿಗಳೆಂದೂ ಚಾನ್ಹುದಾರೊ ಕೈಗಾರಿಕಾ ನಗರವೆಂದೂ ಸೋಟ್‍ಕೋಜಂಡಾರ, ಸೊಟ್ಕೋಖೋ ಮತ್ತು ಬಾಲಕ್ಕೋಟ್ ರೇವುಪಟ್ಟಣಗಳೆಂದೂ ಪರಿಗಣಿತವಾಗಿವೆ. ಮೊದಲ ಎರಡು ನಗರಗಳಲ್ಲಿ ನಡೆದ ಭೂಶೋಧನೆಗಳಿಂದ ಸುವ್ಯವಸ್ಥಿತ ನಗರಯೋಜನೆಯ ರೂಪುರೇಷೆಗಳು ತಿಳಿದುಬಂದಿವೆ. ನಗರವನ್ನು ರಾಜ, ಶ್ರೀಮಂತ ಮತ್ತು ಅಧಿಕಾರ ವರ್ಗವಾಸವಾಗಿದ್ದ ಉನ್ನತ ದುರ್ಗ ಪ್ರದೇಶ, ಜನಸಾಮಾನ್ಯರು ವಾಸಿಸುತ್ತಿದ್ದ ಪಟ್ಟಣ ಪ್ರದೇಶ ಎಂದು ವಿಭಾಗಿಸಲಾಗಿತ್ತು. ಆಡಳಿತ ವರ್ಗದ ಕಾರ್ಯಾಲಯಗಳು, ನಗರ ಜೀವನಕ್ಕೆ ಸಾಧಕವಾದ ಸಾಮೂಹಿಕ ನಿರ್ಮಾಣಗಳು, ರಾಜ್ಯದ ಸಂಪತ್ತನ್ನು ಸಂಗ್ರಹಿಸುತ್ತಿದ್ದ ಕಣಜಗಳು ಮುಂತಾದವು ದುರ್ಗದೊಳಗಿದ್ದುವು. ಜನಸಾಮಾನ್ಯರು ಕೆಳಗಣ ಪಟ್ಟಣ ಭಾಗದಲ್ಲಿ ವಾಸಿಸುತ್ತಿದ್ದರು. ಇಡೀ ನಗರಪ್ರದೇಶದಲ್ಲಿ ಅಗಲವೂ ನೇರವೂ ಆದ ರಸ್ತೆಗಳ ಇಕ್ಕೆಲಗಳಲ್ಲಿ ಸುಟ್ಟ ಇಟ್ಟಿಗೆಗಳಿಂದ ಕೆಲವು ವೇಳೆ ಎರಡಂತಸ್ತುಗಳ ವಾಸಗೃಹಗಳನ್ನು ಕಟ್ಟಲಾಗುತ್ತಿತ್ತು. ನೀರಿನ ಬಾವಿ, ಸ್ನಾನಗೃಹ, ಶೌಚಗೃಹ, ಪಾಕಶಾಲೆ, ಶಯ್ಯಾಗೃಹ ಮೊದಲಾದ ಕೋಣೆಗಳಿಂದ ಆವೃತವಾದ, ಮಧ್ಯದಲ್ಲಿ ಗಾಳಿ ಬೆಳಕುಗಳಿಗಾಗಿ ತೆರೆದ ಪ್ರಾಂಗಣವಿದ್ದ ಈ ಮನೆಗಳಿಗೆ ಸಾಮಾನ್ಯವಾಗಿ ಮುಖ್ಯ ರಸ್ತೆಗಳಿಂದ ಹೊರಟ ಅಡ್ಡರಸ್ತೆ ಅಥವಾ ಏಣಿಗಳಿಂದ ಪ್ರವೇಶವಿರುತ್ತಿತ್ತು. ಮಳೆಯ ಮತ್ತು ಮನೆಗಳಲ್ಲಿ ಬಳಸಿದ ನೀರನ್ನು ಹೊರಗೊಯ್ಯಲು ನೆಲದ ಅಡಿಯಲ್ಲಿ ಕೊಳವೆ ಮತ್ತು ಒಳಚರಂಡಿ ಮಾರ್ಗಗಳನ್ನು ನಿರ್ಮಿಸಲಾಗಿತ್ತು. ಸಾರ್ವಜನಿಕ ಸ್ನಾನಗೃಹ ಮತ್ತು ಈಜುಕೊಳಗಳನ್ನು ನಿರ್ಮಿಸಲಾಗಿತ್ತು. ವ್ಯಾಪಾರ ಸೌಲಭ್ಯಗಳಿಗೆ ಲಿಖಿತ-ಅಲಂಕೃತ ಮುದ್ರೆಗಳನ್ನು, ನಿರ್ದಿಷ್ಟ ತೂಕದ ಮತ್ತು ಅಳತೆಯ ಸಾಧನಗಳನ್ನು ಒದಗಿಸಲಾಗುತ್ತಿತ್ತು. ಜಲಮಾರ್ಗ ಮತ್ತು ರಸ್ತೆಸಾರಿಗೆ, ಭಾರ ಹೊರುವ ಪ್ರಾಣಿಗಳ ಸಂಪರ್ಕ ವ್ಯವಸ್ಥೆ ರೂಢಿಯಲ್ಲಿದ್ದುವು. ವಿವಿಧ ಬಗೆಯ ಚಿನ್ನ ತಾಮ್ರ, ಕಂಚು, ಶಂಕು, ಬೆಲೆಬಾಳುವ ಕಲ್ಲುಗಳು ಇವುಗಳ ಆಭರಣಗಳು ಬಳಕೆಯಲ್ಲಿದ್ದುವು. ದೂರ ಪ್ರದೇಶಗಳಿಗೆ ಸಮುದ್ರಸಂಚಾರ ನಡೆಯುತ್ತಿತ್ತು. ಅಲ್ಲಿ ವಸತಿಯಿತ್ತು. ಇವು ಸಂಪದಭಿವೃದ್ಧಿಗೆ ನೆರವಾಗಿದ್ದುವು. ಇನ್ನೂ ಹಲವು ಬಗೆಯ ಸೌಕರ್ಯ ಸಾಧನಗಳನ್ನು ಹೊಂದಿದ್ದ ಹರಪ್ಪ ನಾಗರಿಕತೆ ಇತರ ಸಮಕಾಲೀನ ನಾಗರಿಕತೆಗಳಿಗಿಂತ ಹೆಚ್ಚು ಪ್ರಗತಿಪರವಾದ್ದೆಂಬುದು ವಿದ್ವಾಂಸರ ಅಭಿಪ್ರಾಯ. ಈಚಿನ ಸಂಶೋಧನೆಗಳಿಂದ ಈ ನಾಗರಿಕತೆ ಇಡೀ ಉಪಖಂಡದ ಅರ್ಧದಷ್ಟು ಪ್ರದೇಶದಲ್ಲಿ ವಿಸ್ತರಿಸಿತ್ತೆಂದು ತಿಳಿದುಬಂದಿದೆ. ಅನಂತರಕಾಲದ ಭಾರತೀಯ (ಹಿಂದು) ಸಂಸ್ಕøತಿಗೆ ಇದು ಹಲವಾರು ಕೊಡುಗೆಗಳನ್ನು ನೀಡಿದೆ ಎಂಬುದು ಗಮನಾರ್ಹ. ಇದರ ಕಾಲ ಕ್ರಿ.ಪೂ 2500-1500. ಈ ಉನ್ನತ ಸಂಸ್ಕøತಿ ಕ್ರಮೇಣ ಆಂತರಿಕ ವಿರೋಧಾಭಾಸಗಳಿಂದ ಪ್ರವಾಹಗಳ ದಾಳಿಯಿಂದ, ಹವೆಯಿಂದ ಮತ್ತು ವರ್ಷಮಾರುತಗಳ ಪಥದ ಬದಲಾವಣೆಯಿಂದ ದುರ್ಬಲಗೊಳ್ಳುತ್ತಿತ್ತು. ಈ ದುರ್ದಶೆಯ ಕಾಲದಲ್ಲಿ ಹೊರಗಣ ಆಕ್ರಮಣ ಇದನ್ನು ಕೊನೆಗಾಣಿಸಿತೆಂದು ಕೆಲವು ವಿದ್ವಾಂಸರು ವಾದಿಸಿದ್ದಾರಾದರೂ ಈ ವಾದ ಚರ್ಚಾಸ್ಪದ.

ಹರಪ್ಪ ನಾಗರಿಕತೆ ಆಳಿದ ಸ್ವಲ್ಪ ಕಾಲದ ಮೇಲೆ, ಕ್ರಿ.ಪೂ 2ನೆಯ ಸಹಸ್ರಮಾನದ ಉತ್ತರಾರ್ಧದಲ್ಲಿ, ಪ್ರಾಯಶಃ ಕ್ರಿಪೂ 1200ರ ವೇಳೆಗೆ, ಈ ಪ್ರದೇಶದಲ್ಲಿ ಗ್ರಾಮಜೀವನದ ಹಂತದಲ್ಲಿದ್ದ ಪಶುಪಾಲನ ಆರ್ಯರು ಬಂದು ನೆಲೆಸಿದರು. ಈಚಿನವರೆಗೆ ಅವರನ್ನು ಕುರಿತ ಪಳಿಯುಳಿಕೆಗಳು ಹೆಚ್ಚಾಗಿ ದೊರೆತಿರಲಿಲ್ಲ. ಆದರೆ ಈಚಿನ ಸಂಶೋಧನೆಗಳಿಂದ ಮತ್ತು ವೈದಿಕ ಸಾಹಿತ್ಯದ ಆಧಾರಗಳ ಮೇಲೆ ಆರ್ಯರ ಸಂಗತಿಗಳನ್ನು ಸ್ಥೂಲವಾಗಿ ತಿಳಿಯಬಹುದಾಗಿದೆ. ಆರಂಭಿಕ ವ್ಯವಸಾಯಪದ್ಧತಿ, ಪಶು ಮತ್ತು ಕುರಿ ಮೇಕೆಗಳ ಸಂಗೋಪನೆ, ಗ್ರಾಮಜೀವನ ಇವನ್ನು ಅವರಿಗೆ ಆರೋಪಿಸಲಾಗಿದೆ. ಕುದುರೆ, ಎರಡು ಗಾಲಿಗಳಿದ್ದ ರಥ ಇವು-ಅವರ ಸಂಚಾರಸಾಧನಗಳು. ಬಿಲ್ಲುಬಾಣ ಕತ್ತಿ ಈಟಿಗಳು ಅವರ ಆಯುಧಗಳು. ಕ್ರಮೇಣ ಅವರಲ್ಲಿ ಸಣ್ಣಪುಟ್ಟ ರಾಜ್ಯ ಘಟಕಗಳು, ಗಣರಾಜ್ಯಗಳು ಅಸ್ತಿತ್ವಕ್ಕೆ ಬಂದಂತೆ ಕಾಣುತ್ತದೆ. ಅದೇ ಸಮಯದಲ್ಲಿ, ಅಥವಾ ಸ್ವಲ್ಪ ಮೊದಲು, ಪಶ್ಚಿಮ ಭಾಗದಲ್ಲಿ ಬಲೂಚಿಸ್ತಾನ ಮತ್ತು ಸಿಂಧ್ ಪ್ರದೇಶಗಳಲ್ಲಿ ಬೇರೊಂದು ಪಂಗಡದವರು ನೆಲಸಿದಂತೆ ಕಾಣುತ್ತದೆ. ಸೊಹರ್‍ಡಾಂಬ್, ನಾಲ್, ರಾಣಾಗುಂಡೈ, ಷಾಹಿತುಂಪ್, ಚಾನ್ಹುದಾರೊ ಮೊದಲಾದ ನೆಲೆಗಳಲ್ಲಿ ಅವರ ಮಾಹಿತಿಗಳು ಕಾಣಸಿಗುತ್ತವೆ. ಆ ಸುಮಾರಿನಲ್ಲಿ ಉತ್ತರ ಇರಾನ್ ಭಾಗದಿಂದ ಪ್ರಸರಿಸಿದ ಬೃಹತ್ ಶಿಲಾಸಮಾಧಿ ಸಂಸ್ಕøತಿಯ ಕುರುಹುಗಳು ಬಲೂಚಿಸ್ತಾನ ಮತ್ತು ಸಿಂಧ್ ಪ್ರದೇಶಗಳಲ್ಲಿ ಕಾಣುತ್ತವೆ. ಈ ಸಮಾಧಿಗಳನ್ನು ಅಗೆದು ಸಂಶೋಧನೆ ಮಾಡಿಲ್ಲವಾದರೂ ಇವು ಮೇಲೆ ಹೇಳಿದ ಕಬ್ಬಿಣ ಯುಗದ ಸಂಸ್ಕøತಿಯ ಅವಶೇಷಗಳೆಂಬುದರಲ್ಲಿ ಸಂದೇಹವಿಲ್ಲ. ಕಬ್ಬಿಣ ಯುಗದ ಸಂಸ್ಕøತಿಯ ಕಾಲವನ್ನು ಕ್ರಿ.ಪೂ ಒಂದನೆಯ ಸಹಸ್ರಮಾನದ ನಡುಗಾಲದವರೆಗೆ ನಿರ್ದೇಶಿಸಬಹುದು.

ಇತಿಹಾಸ

[ಬದಲಾಯಿಸಿ]

ಪಾಕಿಸ್ತಾನ ಪ್ರದೇಶದ ಪ್ರಾಚೀನ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರಕದಿದ್ದರೂ ಆ ಪ್ರದೇಶ ಮಹಾಕಾವ್ಯಗಳ ಕಾಲದಿಂದಲೂ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಮಹಾಭಾರತದ ಕೌರವರ ತಾಯಿ ಅ ಪ್ರದೇಶದ ಗಾಂಧಾರ ರಾಜ್ಯದ ರಾಜಕುಮಾರಿ, ಜನಮೇಜಯನ ಸರ್ಪಯಜ್ಞದ ಸಂಬಂಧದಲ್ಲಿ ತಕ್ಷಶಿಲೆಯ ಉಲ್ಲೇಖವಿದೆ. ಕ್ರಿ.ಪೂ 7-6ನೆಯ ಶತಮಾನಗಳಿಂದಲೂ ಅದು ಪ್ರಖ್ಯಾತ ವಿದ್ಯಾ ಕೇಂದ್ರವಾಗಿತ್ತು. ಕ್ರಿ.ಪೂ 5ನೆಯ ಶತಮಾನದಲ್ಲಿದ್ದ ಪಾಣಿನಿ ಆ ಪ್ರದೇಶದ ಸಾಲಾತುರದವನಾಗಿದ್ದು ತಕ್ಷಶಿಲೆಯಲ್ಲಿ ವಿದ್ಯಾಭ್ಯಾಸಪಡೆದ. ಅವನಿಗೂ ಮೊದಲಿನ ಶಾಕಾಟಾಯನ ಮತ್ತು ಶೌನಕರು ಅದೇ ಪ್ರಾಂತ್ಯದವರಾಗಿದ್ದರು. ಆ ಸುಮಾರಿನಲ್ಲಿ ತಕ್ಷಶಿಲೆ ಅಶ್ವಕ (ಅಸ್ಮಕ), ಗಾಂಧಾರ (ರಾಜಧಾನಿ; ಪುರುಷಪುರ-ಪೆಷಾವರ್) ಕಾಂಭೋಜ (ಹಜಾರಾ ಜಿಲ್ಲೆ) ಮುಂತಾದ ರಾಜ್ಯಗಳು, ಮತ್ತೆ ಕೆಲವು ಗಣರಾಜ್ಯಗಳು ಈ ಪ್ರದೇಶದಲ್ಲಿದ್ದುವೆಂದು ತಿಳಿದುಬರುತ್ತದೆ. ಆಗ ಪರ್ಷಿಯದ ಸಾರ್ವ ಭೌಮನಾದ, ಅಕೆಮಿನಿಡ್ ವಂಶದ ದರ್ಯಾವುಷ್ ಭಾರತದತ್ತ ಲಕ್ಷ್ಯಹರಿಸಿ ಗಾಂಧಾರ, ಮಕ್ರಾನ್ ಮತ್ತು ಸಿಂಧ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡ ತರುವಾಯ ಕ್ರಿ.ಪೂ 330ರಲ್ಲಿ ಅಲೆಗ್ಸಾಂಡರನ ದಾಳಿಯವರೆಗೂ ಈ ಪ್ರದೇಶ ಪರ್ಷಿಯನರ ಅಧೀನವಾಗಿತ್ತೆಂದು ಕಾಣುತ್ತದೆ. ಅನಂತರ ಕ್ರಿ.ಪೂ 326ರಲ್ಲಿ ಅಲೆಗ್ಸಾಂಡರ್ ಆ ಪ್ರದೇಶದ ಮೇಲೆ ದಾಳಿ ಮಾಡಿದಾಗ ಅಂಭಿಯ ತಕ್ಷಶಿಲಾ ರಾಜ್ಯ, ಝೀಲಂ ಮತ್ತು ರಾವಿ ನದಿಗಳ ನಡುವೆ ಇದ್ದ ಪುರೂರವನ ರಾಜ್ಯ, ಹಿಂದೂಕುಷ್ ಪರ್ವತ ಭಾಗದಲ್ಲಿ ಶಶಿಗುಪ್ತನ ರಾಜ್ಯ, ಅಷ್ಟಕ ರಾಜನ ಪುಷ್ಕಲಾವತಿ ಇವುಗಳಲ್ಲದೆ ಅಶ್ವಕಾಯನ, ಮಸ್ಸಗ, ವಾರಣ, ಕಠ, ಮಲ್ಲ (ಮಾಳವ), ಕ್ಷುದ್ರಕ, ಸಿಬಿ, ಅರ್ಜುನಾಯು, ಅಂಬಷ್ಟ, ಕ್ಷತ್ರಿಯ, ಮೂಷಿಕ, ಮುಂತಾದ ಗಣರಾಜ್ಯಗಳಜನರು ಸ್ವತಂತ್ರವಾಗಿ ಆಳುತ್ತಿದ್ದು ಗ್ರೀಕರನ್ನು ಎದುರಿಸಿದುದಾಗಿ ತಿಳಿದುಬರುತ್ತದೆ. ಆದರೆ ಅಂಭಿ, ಶಶಿಗುಪ್ತ, ಮುಂತಾದವರ ವಿದ್ರೋಹದಿಂದ ಗ್ರೀಕ್ ಸೈನ್ಯ ವಾಯವ್ಯಭಾರತವನ್ನು ಆಕ್ರಮಿಸಿತು. ಆದರೆ ಅಲೆಗ್ಸಾಂಡರನ ಹಿಂದಿರುಗುವಿಕೆಯೊಂದಿಗೆ ಗ್ರೀಕರ ಅಧಿಕಾರ ಕುಸಿಯತೊಡಗಿತು. ಅಲೆಗ್ಸಾಂಡರನ ಪ್ರಾಂತ್ಯಾಧಿಕಾರಿಗಳಾದ ಫಿಲಿಪ್ಸ್ ಪಂಜಾಬ್ ಪ್ರಾಂತ್ಯದಲ್ಲೂ ಪಿಥೋನ್ ಸಿಂಧ್ ಪ್ರಾಂತ್ಯದಲ್ಲೂ ಹಿಂದೂ ರಾಜರಾದ ಅಂಭಿ ತಕ್ಷಶಿಲೆಯಲ್ಲೂ ಪುರೂರವ ಝೀಲಂ ಪ್ರದೇಶದಲ್ಲೂ ಆಳುತ್ತಿದ್ದರು. ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಗ್ರೀಕ್ ರಾಜ್ಯಾಧಿಕಾರಿ ಸೆಲ್ಯೂಕಸ್ ನಿಕೇಟರನನ್ನು ಕ್ರಿ.ಪೂ 305ರಲ್ಲಿ ಸೋಲಿಸಿದಾಗ ಪಾಕಿಸ್ತಾನದ ಬಹುಭಾಗ ಮೌರ್ಯಸಾಮ್ರಾಜ್ಯದಲ್ಲಿ ಸೇರಿಹೋಯಿತು. ತಕ್ಷಶಿಲೆಯನ್ನು ಮುಖ್ಯ ನಗರವನ್ನಾಗಿ ಹೊಂದಿದ್ದ ಗಾಂಧಾರ ಪ್ರತ್ಯೇಕ ಆಡಳಿತ ಘಟಕವಾಗಿತ್ತು. ಬಿಂದುಸಾರನ ಕಾಲದಲ್ಲಿ ಇಲ್ಲುಂಟಾದ ದಂಗೆಯನ್ನು ಯುವರಾಜ ಅಶೋಕ ಅಡಗಿಸಿ ಪ್ರಾಂತ್ಯಾಧಿಕಾರಿಯಾಗಿದ್ದ. ಅಶೋಕನ ಕಾಲದಲ್ಲಿ ಈ ಪ್ರದೇಶದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಆದರೆ ಅವನ ಅಧಕ್ಷ ಉತ್ತರಾಧಿಕಾರಿಗಳ ಆಳ್ವಿಕೆಯಲ್ಲಿ ವಾಯವ್ಯ ಭಾರತ ಸ್ವತಂತ್ರವಾಗಿ, ಹಲವಾರು ಸಣ್ಣ ಪುಟ್ಟ ರಾಜ್ಯಗಳು ಹುಟ್ಟಿಕೊಂಡುವು.

ಪಾಟಲಿ ಪುತ್ರದಲ್ಲಿ ಪುಷ್ಯಮಿತ್ರ ಶುಂಗ ಆಳುತ್ತಿದ್ದಾಗ ಬ್ಯಾಕ್ಟ್ರಿಯದಲ್ಲಿ ಆಳುತ್ತಿದ್ದ ಗ್ರೀಕರು ವಾಯವ್ಯ ಭಾರತದ ಮೇಲೆ ದಾಳಿ ಮಾಡಿದರು. ಆಂಟಿಯೋಕಸನ ಅಳಿಯನಾದ ಡೆಮಿಟ್ರಿಯನ್ (ಕ್ರಿ.ಪೂ 190) ಪಂಜಾಬ್, ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯಗಳನ್ನು ಗೆದ್ದುಕೊಂಡಾಗ ಈ ಪ್ರದೇಶದಲ್ಲಿ ಬ್ಯಾಕ್ಟ್ರಿಯಾದ ಗ್ರೀಕರ ಆಡಳಿತ ಆರಂಭವಾಯಿತು. ಎರಡು ದಶಕಗಳ ಅನಂತರ ಮತ್ತೊಬ್ಬ ಗ್ರೀಕ್ ದಳಪತಿ ಯುಕ್ರಿಟೈಡಿಸ್ ಬ್ಯಾಕ್ಟ್ರಿಯ ಮತ್ತು ತಕ್ಷಶಿಲಾ ಪ್ರದೇಶಗಳನ್ನು ಆಕ್ರಮಿಸಿಕೊಂಡುದರಿಂದ ಪಾಕಿಸ್ತಾನ ಪ್ರದೇಶದಲ್ಲಿ ಎರಡು ಸ್ವತಂತ್ರ ಗ್ರೀಕ್ ಆಡಳಿತಗಳು ಅಸ್ತಿತ್ವಕ್ಕೆ ಬಂದುವು. ತಕ್ಷಶಿಲೆಯ ಅಪೋಲೊಡೋಟಸ್ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಆಂಟಿಯಾಲ್ಕಿಡಾಸ್ ಪ್ರಮುಖರು. ಕ್ರಿ.ಪೂ 80ರ ವೇಳೆಗೆ ಆರಕೋಸಿಯ ಪ್ರದೇಶದ ಶಕರು ತಕ್ಷಶಿಲೆಯನ್ನು ವಶಪಡಿಸಿಕೊಂಡರು. ಅವರಲ್ಲಿ ಪ್ರಮುಖರಾದ ಮಾವೆಸ್ ಮತ್ತು 1ನೆಯ ಅeóÉಸ್ ದೊರೆಗಳ ಅನಂತರ ಕ್ರಿ.ಶ.20-30ರಲ್ಲಿ ಪಾರ್ಥಿಯನರು ಗೊಂಡೋಫರೆಸ್‍ನ ನೇತೃತ್ವದಲ್ಲಿ ಶಕರನ್ನು ಸೋಲಿಸಿ ವಾಯವ್ಯ ಭಾರತವನ್ನು ವಶಪಡಿಸಿಕೊಂಡರು. ಪಾರ್ಥಿಯವರ ಆಳ್ವಿಕೆಯಲ್ಲಿ 44ರಲ್ಲಿ ತ್ಯಾನದ ಅಪೋಲಿನಿಯಸ್ ತಕ್ಷಶಿಲೆಗೆ ಭೇಟಿ ನೀಡಿದುದಾಗಿ ಹೇಳಲಾಗಿದೆ.

ಪಾರ್ಥಿಯನರ ತರುವಾಯ 60ರ ಸುಮಾರಿನಲ್ಲಿ ಕುಷಾಣರು ಪಾಕಿಸ್ತಾನ ಪ್ರದೇಶವನ್ನು ವಶಪಡಿಸಿಕೊಂಡರು. ಮೊದಲು ಕುಜುಲ ಕಡ್‍ಫೀಸಿಸನೂ ತರುವಾಯ ವಿಮ ಕಡ್‍ಫೀಸಿಸನೂ ಕುಷಾಣರ ಆಡಳಿತವನ್ನು ಬಲಗೊಳಿಸಿದರು. ಅನಂತರ ಬಹುಶಃ 78ರಲ್ಲಿ ಕುಷಾಣ ವಂಶದಲ್ಲಿ ಹೆಚ್ಚು ಪ್ರಸಿದ್ಧನಾದ 1ನೆಯ ಕುನಿಷ್ಕ ಸಿಂಹಾಸನಕ್ಕೆ ಬಂದಾಗ ಕುಷಾಣರಾಜ್ಯ ಇಡೀ ಪಾಕಿಸ್ತಾನ ಪ್ರದೇಶವನ್ನೂ ಈಗಿನ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಾಸ್ಥಾನ ಮತ್ತು ಗುಜರಾತಿನ ಕೆಲವು ಪ್ರದೇಶಗಳನ್ನೂ ಒಳಗೊಂಡಿತು. ಈ ಪ್ರದೇಶದ ಇತಿಹಾಸದಲ್ಲಿ ಕುಷಾಣ ಯುಗವನ್ನು ಸುವರ್ಣ ಯುಗವೆಂದು ಹೇಳಬಹುದು. ಕುಷಾಣರು ಹಿಂದೂ ಮತದ ಶೈವ ಸಂಪ್ರದಾಯವನ್ನೂ ಕನಿಷ್ಕನ ಕಾಲದಿಂದ ಬೌದ್ಧ ಮತವನ್ನೂ ಅನುಸರಿಸಿದರು. ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಬಹಳ ಪ್ರಗತಿ ಸಾಧಿಸಿದರು. ವಸುಬಂಧು, ಅಶ್ವಘೋಷ ಇವರು ಈ ಕಾಲದ ಪ್ರಖ್ಯಾತ ಬೌದ್ಧ ಸಾಹಿತಿಗಳು. ಈ ಕಾಲದಲ್ಲಿ ಗಾಂಧಾರ ಪ್ರದೇಶದಲ್ಲಿ ಗ್ರೀಕ್ ಮತ್ತು ಹಿಂದೂ ಪರಂಪರೆಗಳಿಂದ ಹುಟ್ಟಿದ ಗಾಂಧಾರ ಶಿಲ್ಪ ಕಲೆ ಭಾರತೀಯ ಕಲಾ ಸಂಪ್ರದಾಯದಲ್ಲಿ ಉನ್ನತವಾದ ಹೊಸ ಶೈಲಿಯನ್ನು ಬೆಳೆಸಿತು. ಮಹಾಯಾನ ಬೌದ್ಧಪಂಥ ಹುಟ್ಟಿಕೊಂಡು ಅದರ ಪ್ರಭಾವದಿಂದ ಬುದ್ಧನ ಮಾನವರೂಪದ ಶಿಲ್ಪಗಳು ಅಸ್ತಿತ್ವಕ್ಕೆ ಬಂದುವು. ಪುರುಷಪುರ (ಪೆಷಾವರ್) ಇವರ ರಾಜಧಾನಿ. ಅದರ ಸುತ್ತಮುತ್ತ ಅನೇಕ ಬೌದ್ಧಸ್ತೂಪಗಳೂ ವಿಹಾರಗಳೂ ನಿರ್ಮಿತವಾದುವು. ತಕ್ಷಶಿಲೆ, ಮಥುರಾ ಇವು ಧಾರ್ಮಿಕ ಮತ್ತು ರಾಜಕೀಯ ಕೇಂದ್ರಗಳಾಗಿದ್ದುವು. ಕನಿಷ್ಕನ ಉತ್ತರಾಧಿಕಾರಿಗಳಾಗಿದ್ದ ಹುವಿಷ್ಕ ಮತ್ತು ವಾಸುದೇವರ ಆಳ್ವಿಕೆಯಲ್ಲಿ ಉನ್ನತ ಸ್ಥಿತಿಯಲ್ಲಿದ್ದ ಕುಷಾಣ ರಾಜ್ಯ ಕ್ರಮೇಣ ಕುಸಿಯಲಾರಂಭಿಸಿತ್ತು. ವಾಸುದೇವನ ಮರಣದ ಅನಂತರ (225) ಕ್ರಮೇಣ ಕ್ಷೀಣಿಸಲಾರಂಭಿಸಿದ ಕುಷಾಣ ರಾಜ್ಯ 5ನೆಯ ಶತಮಾನದವರೆಗೂ ಉಳಿದು ಬಂತು. ಆ ವೇಳೆಗೆ 226ರಲ್ಲಿ ಪರ್ಷಿಯದಲ್ಲಿ ಸ್ಥಾಪಿತವಾದ ಸಸ್ಸೇನಿಯನ್ ಚಕ್ರಾಧಿಪತ್ಯ ಮತ್ತು ಮಗಧದಲ್ಲಿ ಸ್ಥಾಪಿತವಾದ ಗುಪ್ತ ಸಾಮ್ರಾಜ್ಯ ಬಹಳ ಪ್ರಬಲವಾಗಿದ್ದುವು. 400ರಲ್ಲಿ ತಕ್ಷಶಿಲೆಗೆ ಭೇಟಿಕೊಟ್ಟ ಚೀನಿ ಬೌದ್ಧಯಾತ್ರಿಕ ಫಾಹಿಯಾನ್ ಅದರ ಬಗ್ಗೆ ಕೆಲವು ಮಾಹಿತಿಗಳನ್ನೊದಗಿಸಿದ್ದಾನೆ.

ಚೀನದ ಗಡಿ ಪ್ರದೇಶದಿಂದ ಹೊರಟ ಹೂಣರು 450ರ ಸುಮಾರಿಗೆ ಪರ್ಷಿಯ ಮತ್ತು ಭಾರತದ ದಿಕ್ಕಿನಲ್ಲಿ ದಾಳಿಮಾಡಿದರು. ಪರ್ಷಿಯವನ್ನು ಗೆದ್ದು ಹಿಂದೂಕುಷ್ ಪರ್ವತಗಳನ್ನು ದಾಟಿ ಗಾಂಧಾರವನ್ನು ವಶಪಡಿಸಿಕೊಂಡರು. ಗುಪ್ತ ದೊರೆ ಸ್ಕಂದಗುಪ್ತ 460ರಲ್ಲಿ ಹೂಣರನ್ನು ಸೋಲಿಸಿ ಅವರು ಮುಂದುವರಿಯದಂತೆ ತಡೆದ. ಅವರ ನಾಯಕ ತೋರಮಾನ್ ಪಾಕಿಸ್ತಾನ ಪ್ರದೇಶವನ್ನೂ ಭಾರತದ ಹಲವು ಭಾಗಗಳನ್ನೂ ಆಕ್ರಮಿಸಿಕೊಂಡು ಪಂಜಾಬಿನಲ್ಲಿ ಚೀನಾಬ್ ದಂಡೆಯಲ್ಲಿದ್ದ ವೈಯಾದಿಂದ ಆಳುತ್ತಿದ್ದ. ಅವನ ಮಗ ಮಿಹಿರಕುಲ 515ರಲ್ಲಿ ಸಿಂಹಾಸನಕ್ಕೆ ಬಂದು ಸಿಯಾಲ್‍ಕೋಟ್‍ನಿಂದ ಆಳುತ್ತಿದ್ದ. ಅವನ ಪಂಗಡದ ಮತ್ತೊಂದು ಶಾಖೆ ಗಾಂಧಾರದಲ್ಲಿ ಆಳುತ್ತಿತ್ತು. ಈ ಮಧ್ಯೆ ತಕ್ಷಶಿಲೆಯ ಪ್ರಾಂತ್ಯದಿಂದ ಕಿದಾರ ಕುಷಾಣಶಾಹಿ ಮನೆತನದವರು ಆಳುತ್ತಿದ್ದರು. ಹೂಣ ರಾಜ್ಯ 563-67ರ ವೇಳೆಗೆ ಕಣ್ಮರೆಯಾಯಿತು. ಹರ್ಷನ ಕಾಲದಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಒಂದು ಸ್ವತಂತ್ರ ರಾಜ್ಯವಿತ್ತು. ಹರ್ಷ ಅದನ್ನು ಎದುರಿಸಿದನೆಂದು ಬಾಣ ಮತ್ತು ಹ್ಯೂಯೆನ್‍ತ್ಸಾಂಗ್ ತಿಳಿಸಿದ್ದಾರೆ. ಆ ಸಮಯದಲ್ಲಿ ಹಿಂದೂಕುಷ್ ಪರ್ವತಗಳ ದಕ್ಷಿಣದಲ್ಲಿ ಕ್ಷತ್ರಿಯ ರಾಜನ ವಶದಲ್ಲಿದ್ದ ಕಾಪಿಶ ಮತ್ತು ಸ್ವಾತ್ ಕಣಿವೆಯಲ್ಲಿ ಉದ್ಯಾನ ರಾಜ್ಯಗಳಿದ್ದುವು. ಪಂಜಾಬಿನಲ್ಲಿ ಹಲವಾರು ಸಣ್ಣ ರಾಜ್ಯಗಳಿದ್ದುವು. 7ನೆಯ ಶತಮಾನದ ಪೂರ್ವಾರ್ಧದಲ್ಲಿ ಅಸ್ತಿತ್ವಕ್ಕೆ ಬಂದ ಸಿಂಧೂ ರಾಜ್ಯ ಮುಲ್ತಾನದ ದಕ್ಷಿಣಕ್ಕೆ ಇಡೀ ಸಿಂಧ್ ಪ್ರದೇಶವನ್ನೊಳಗೊಂಡಿತ್ತು. ಬಹುಶಃ ಇಡೀ ಪಾಕಿಸ್ತಾನ ಪ್ರದೇಶ ಅದರ ವಶದಲ್ಲಿತ್ತು. ಆ ಪ್ರದೇಶದಲ್ಲಿ ರಚಿತವಾದ ಚಾಚ್‍ನಾಮಾ ಅದರ ಇತಿಹಾಸವನ್ನು ತಿಳಿಸುತ್ತದೆ. ಅಲ್ಲಿ ಮತ್ತೆ ಕೆಲವು ಸಣ್ಣ ರಾಜ್ಯಗಳಿದ್ದುವು. ಸಿಂಧೂ ರಾಜ್ಯದ ಪ್ರಬಲ ದೊರೆ ಚಾಚ್ ಸತ್ತ ಅನಂತರ ಅವನ ಮಗ ದಾಹರನ ಕಾಲದಲ್ಲಿ (700-708) ಅರಬರು ಸಿಂಧ್ ಪ್ರಾಂತ್ಯವನ್ನು ಎದುರಿಸಿದರು.

ಅರಬರು ಪ್ರಪ್ರಥಮವಾಗಿ ಸಿಂಧ್ ವಿರುದ್ಧ 643ರಲ್ಲಿ ನೌಕಾದಾಳಿ ನಡೆಸಿ ವಿಫಲರಾದರು. ಮತ್ತೆ 663ರಲ್ಲಿ ಅವರ ಭೂ ಸೈನ್ಯ ಸೋತಿತು. ಮೂರನೆಯ ಸಲ ಅರಬರ ದಾಳಿ 708ರಲ್ಲಿ ಪ್ರಾರಂಭವಾಗಿ 712ರ ವೇಳೆಗೆ ಮಹಮ್ಮದ್-ಇಬ್ನ್-ಕಾಸಿಮನ ನೇತೃತ್ವದಲ್ಲಿ ಜಯ ಗಳಿಸಿತು. ಆದರೆ 750ರ ವೇಳೆಗೆ ಅವರು ಶಕ್ತಿಗುಂದಿದರು. ಸಿಂಧ್‍ನ ಕೆಲವು ಪ್ರದೇಶಗಳ ಮೇಲೆ ಮಾತ್ರ ಅವರು ಹತೋಟಿ ಉಳಿಸಿಕೊಂಡಿದ್ದರು. ಆದರೂ ಬಲಾತ್ಕಾರ ಮತಾಂತರಗಳಿಂದ ಕ್ರಮೇಣ ಇಸ್ಲಾಮ್ ಮತ ಇಲ್ಲಿ ಪ್ರಬಲಗೊಳ್ಳತೊಡಗಿತು. ಆಗ ಆಫ್ಘಾನಿಸ್ತಾನ ಮತ್ತು ಬಲೂಚಿಸ್ತಾನ ಪ್ರದೇಶದಲ್ಲಿ, ಕಾಬುಲ್, ಕಾಬುಲ್ ಮತ್ತು ಸಿಂಧ್ ರಾಜ್ಯಗಳಲ್ಲಿ ಅರಬರು ನೆಲೆಸಿದ್ದರು. ಬಾಗ್ದಾದ್‍ನಲ್ಲಿ ಅಬ್ಬಾಸಿದ್ ಕಲೀಫರು 749ರಿಂದ ಪ್ರಬಲರಾಗತೊಡಗಿದಾಗ ಮತ್ತೆ ಪಾಕಿಸ್ತಾನ ಪ್ರದೇಶದಲ್ಲಿ ಇವರು ಬಲಗೊಳ್ಳತೊಡಗಿದರು. ಕಾಬುಲ್ ಮತ್ತು ಕಾಬುಲ್ ಸ್ವತಂತ್ರವಾಗಿದ್ದರೂ ಆಗಾಗ್ಗೆ ಕಲೀಫರಿಗೆ ಕಪ್ಪ ನೀಡಬೇಕಾಗಿತ್ತು. 870ರಲ್ಲಿ eóÁಬುಲ್ ಆಕ್ರಮಣಕ್ಕೊಳಗಾಯಿತು. ಅಲ್ಲೂ ಮುಸ್ಲಿಂ ಮತ ನೆಲೆಗೊಂಡಿತು. ಕಾಬುಲ್ ರಾಜ್ಯ ಹಿಂದೂಶಾಹಿ ರಾಜ್ಯದಲ್ಲಿ ಸೇರಿತು. ಆದರೆ ಕ್ರಮೇಣ ಸಿಂಧ್‍ನಲ್ಲಿ ಅರಬರು ಪ್ರಾಬಲ್ಯ ಗಳಿಸಿದರು. ಅವರ ರಾಜಧಾನಿ ಮನ್ಸುರಾ (ಈಗಿನ ಪಾಕಿಸ್ತಾನಿ ಹೈದರಾಬಾದಿನಿಂದ ಆಗ್ನೇಯಕ್ಕೆ ಸುಮಾರು 69ಕಿಮೀ.ದೂರ) ಇವರು ಗುರ್ಜರ-ಪ್ರತೀಹಾರ ಮತ್ತು ಪಾಲ ವಂಶದವರೊಂದಿಗೆ ಆಗಾಗ್ಗೆ ಹೋರಾಡಬೇಕಾಗಿತ್ತು. ಅಬ್ಬಾಸಿದರ ಪತನದ ಅನಂತರ (ಸು.830) ಅಲ್ ಮಮೂನ್ ಕಲೀಫನಾದಾಗ ಸಿಂಧ್ ಅವನ ಅಧಿಕಾರಿಯಾದ ಮೂಸನ ವಶವಾಯಿತು. ಸಫರಿದ್ ಕಲೀಫರ ಕಾಲದಲ್ಲಿ (872-903) ಸಿಂಧ್ ಪ್ರಾಂತ್ಯವನ್ನು ಮನ್ಸುರಾ ಮತ್ತು ಮುಲ್ತಾನ್‍ಗಳಾಗಿ ಒಡೆಯಲಾಯಿತು. ಈ ಎರಡು ರಾಜ್ಯಗಳೂ ಹಿಂದೂ ರಾಜರ ಭಯದಲ್ಲಿ ಬಾಳುತ್ತಿದ್ದವು.

ಆಕ್ಸಸ್ ನದಿಯ ದಕ್ಷಿಣ ಭಾಗದಲ್ಲಿ 999ರಲ್ಲಿ ಘಜಿû್ನ ಮನೆತನ ಅಧಿಕಾರಕ್ಕೆ ಬರುವ ವೇಳೆಗೆ ಈ ರಾಜ್ಯಗಳು ಬಲಗುಂದಿದ್ದುವು. ಆದರೆ ಭಾರತದ ಮೇಲೆ ಮಹಮ್ಮದನ ದಾಳಿಗಳಿಂದ ಪರಿಸ್ಥಿತಿ ಪೂರ್ಣವಾಗಿ ಬದಲಾಯಿತು. ಮಹಮ್ಮದನ ಮೊದಲನೆಯ ದಾಳಿ 1000 ರಲ್ಲಿ ನಡೆಯಿತು. ಅವನ ನಿರಂತರ ದಾಳಿಗಳ ಫಲವಾಗಿ ಪಾಕಿಸ್ತಾನ ಪ್ರದೇಶ ಅವನಿಗೆ ತಲೆಬಾಗಬೇಕಾಯಿತು. ಅದು 1200ರ ವರೆಗೂ ಮುಸ್ಲಿಮರ 1200ರ ವರೆಗೂ ಮುಸ್ಲಿಮರ ವಶದಲ್ಲಿ ಉಳಿಯಿತು. ಘೋರಿ ಮನೆತನ ಅಧಿಕಾರಕ್ಕೆ ಬಂದ ಮೇಲೆ 1178ರಲ್ಲಿ ಘೋರಿ ಮಹಮೂದ ವಾಯವ್ಯ ಭಾರತದ ಮೇಲೆ ಆಕ್ರಮಣ ನಡೆಸಿ ಚಾಳುಕ್ಯ ಇಮ್ಮಡಿ ಮೂಲರಾಜನಿಂದ ಸೋತು ಹಿಂದಿರುಗಿದರೂ 1192ರಲ್ಲಿ ಉತ್ತರಭಾರತ ಅವನ ವಶವಾಯಿತು. ಪಾಕಿಸ್ತಾನ ಪ್ರದೇಶ ಅವನ ರಾಜ್ಯದಲ್ಲಿ ಸೇರಿಹೋಯಿತು. ಮಂಗೋಲರು 1229ರಿಂದ ಸಿಂಧ್ ಪ್ರಾಂತ್ಯದ ಮೇಲೆ ಆಗಾಗ್ಗೆ ದಾಳಿ ಮಾಡುತ್ತಿದ್ದರು. 1247ರಿಂದ ಅದು ಅವರ ವಶವಾಯಿತು. ಅಲ್ಲಾವುದ್ದೀನ್ ಖಿಲ್ಜಿ ದೆಹಲಿಯ ಸುಲ್ತಾನನಾಗಿದ್ದಾಗ ಪಾಕಿಸ್ತಾನದ ಬಹುಭಾಗ ಖಿಲ್ಜಿ ರಾಜ್ಯದಲ್ಲಿ ಸೇರಿತ್ತು. 1303ರಲ್ಲಿ ಮಂಗೋಲರು ದೆಹಲಿಯ ಮೇಲೆ ದಾಳಿ ನಡೆಸಿದುದರ ಫಲವಾಗಿ ಜಾಗೃತನಾದ ಅಲ್ಲಾವುದ್ದೀನ್ ತನ್ನ ವಾಯವ್ಯಗಡಿ ಪ್ರದೇಶದತ್ತ ಗಮನಕೊಡಬೇಕಾಯಿತು. 1305ರಲ್ಲಿ ಮಂಗೋಲರು ಸಿಂಧ್ ಪ್ರಾಂತ್ಯದ ಮುಖಾಂತರ ಉತ್ತರ ಭಾರತದ ಕಡೆಗೆ ನುಗ್ಗಿದರು. ಆಗ ಪಂಜಾಬು ದೆಹಲಿ ಸುಲ್ತಾನರ ವಶದಲ್ಲಿತ್ತು. ಮಂಗೋಲರ ನಾಯಕರಾದ ಅಲಿ ಬೇಗ್ ಮತ್ತು ತರ್ತಾಖರನ್ನು ಸೆರೆಹಿಡಿದು ಕೊಲ್ಲಲಾಯಿತು. ಮರುವರ್ಷ ಮಂಗೋಲರ ಒಂದು ದಳ ಸಿಂಧ್ ಮುಲ್ತಾನ್ ಪ್ರದೇಶಗಳ ಮೂಲಕವೂ ಇನ್ನೊಂದು ದಳ ನಾಗೋರಿನ ಮೂಲಕವೂ ನುಗ್ಗಿದಾಗಲೂ ಅವರ ಪ್ರಯತ್ನ ವಿಫಲವಾಯಿತು. ಮತ್ತೆ 1327ರಲ್ಲಿ ತರ್ಮಾಷಿರೀನನ ನಾಯಕತ್ವದ ದಳ ಆ ಪ್ರದೇಶದ ಮೂಲಕ ದೆಹಲಿಯ ವರೆಗೂ ನುಗ್ಗಿ ತುಗಲಕ್ ಮಹಮ್ಮದನಿಂದ ವಿಪುಲೈಶ್ವರ್ಯವನ್ನು ಲೂಟಿ ಹೊಡೆದು ಹಿಂದಿರುಗಿತು. ಮಂಗೋಲರ ಉಪಟಳವನ್ನು ತಡೆಯುವ ಸಲುವಾಗಿ ತುಗಲಖ್ ಮುಹಮ್ಮದ್ ಅವರ ಪ್ರದೇಶದ ಮೇಲೆ 1337ರಲ್ಲಿ ದಾಳಿ ಮಾಡಿದರೂ ಪ್ರಯೋಜನವಾಗಲಿಲ್ಲ. ತರುವಾಯ ತೈಮೂರ 1398ರಲ್ಲಿ ಪಂಜಾಬ್, ಮುಲ್ತಾನ್ ಮುಖಾಂತರ ನುಗ್ಗಿ ದೆಹಲಿಯನ್ನು ಲೂಟಿ ಮಾಡಿದ. ಅನಂತರ ತುಗಲಕ್ ವಂಶ ಕೊನೆಗೊಂಡಿತು. ತೈಮೂರನ ಪ್ರತಿನಿಧಿ ಮಲ್ಲೂ ಸತ್ತ ಮೇಲೆ ಆಫ್ಘನ್ ಸರದಾರ ದೌಲತ್ ಖಾನ್ ಲೋದಿ ದೆಹಲಿಯಿಂದ ಆಳತೊಡಗಿದ. ಪಾಕಿಸ್ತಾನ ಪ್ರದೇಶ ಅವನ ವಶದಲ್ಲಿತ್ತು. ಖಜಿರ್‍ಖಾನ್ 1414ರಲ್ಲಿ ದೌಲತನನ್ನು ಸೆರೆಹಿಡಿದು ಸಯ್ಯಿದ್ ಮನೆತನದ ಆಳ್ವಿಕೆಯನ್ನು ಸ್ಥಾಪಿಸಿದ. ಪಾಕಿಸ್ತಾನ ಪ್ರದೇಶ ಅವನ ವಶವಾಯಿತು. ಆ ಮನೆತನದ ಕೊನೆಯ ಸುಲ್ತಾನನಾದ ಆಲಂ ಷಾನನ್ನು ಬಹಲೋಲ್ ಷಾ ಘಾಜಿ 1451ರಲ್ಲಿ ಸಿಂಹಾಸನದಿಂದ ತಳ್ಳಿದ. ಲೋದಿ ಮನೆತನ ಅಧಿಕಾರಕ್ಕೆ ಬಂತು. ಪಾಕಿಸ್ತಾನ ಪ್ರದೇಶ ಆ ಮನೆತನದ ವಶವಾಯಿತು.

ಹೀಗೆ ಸಾಮಾನ್ಯವಾಗಿ ಈ ಪ್ರದೇಶ ದೆಹಲಿ ಸುಲ್ತಾನರ ವಶದಲ್ಲಿದ್ದರೂ ಘಜ್ನಿಮಹಮ್ಮದನ ದಾಳಿಗಳ ತರುವಾಯ 1010ರ ಸುಮಾರಿಗೆ ಸಿಂಧ್ ಪ್ರಾಂತ್ಯದಲ್ಲಿ, ಸ್ವತಂತ್ರವಾದ, ಹಿಂದೂ ಮೂಲದವರಾದರೂ ಇಸ್ಲಾಮಿಗೆ ಮತಾಂತರಗೊಂಡಿದ್ದ, ಎರಡು ಮನೆತನಗಳು ಆಳುತ್ತಿದ್ದವು. ಇವುಗಳ ಪೈಕಿ ಮನ್ಸುರಾದಿಂದ ಆಳುತ್ತಿದ್ದದ್ದು ಸೂಮ್ರ ಮನೆತನ. ಈ ಮನೆತನದವರು ಮೊದಲು ಪರಮಾರ ರಜಪುತ ವಂಶದವರೆಂದು ಹೇಳಲಾಗಿದೆ. ಇವರು ಪ್ರಾಯಶಃ ಏರುಪೇರುಗಳನ್ನುಭವಿಸುತ್ತ 1335ರ ವರೆಗೂ ಆಳುತ್ತಿದ್ದರೆಂದು ಹೇಳಲಾಗಿದೆ. ತರುವಾಯ ಸಮ್ಮಾ ವಂಶದವರು ಅಧಿಕಾರಕ್ಕೆ ಬಂದರು. ಅವರು 1527ರ ವರೆಗೆ ಆಳಿದರು ಎಂದು ಹೇಳಲಾಗಿದೆ. ದೆಹಲಿಯ ಸುಲ್ತಾನರು ಮತ್ತು ಗುಜರಾತಿನ ನವಾಬರು ಇವರ ಮೇಲೆ ಅಧಿಕಾರ ಚಲಾಯಿಸುತ್ತಿದ್ದರು. ಅದೇ ಸಮಯದಲ್ಲಿ ಮುಲ್ತಾನ್ ಪ್ರದೇಶದಲ್ಲಿ ಮತ್ತೊಂದು ಮುಸ್ಲಿಮ್ ರಾಜ್ಯ ಅಸ್ತಿತ್ವದಲ್ಲಿತ್ತು. ಘಜ್ನಿ ಮುಹಮ್ಮದ್ ಈ ಪ್ರದೇಶದ ಷೇಕ್ ಹಮೀದ್ ಲೋದಿಯ ಆಡಳಿತವನ್ನು ಒಪ್ಪಿಕೊಂಡಿದ್ದರೂ ಅವನ ತರುವಾಯ ಈ ಪ್ರದೇಶ ಸ್ವತಂತ್ರವಾಯಿತು. ಈ ಮೊದಲು ಹೇಳಿದಂತೆ ಮುಲ್ತಾನ್ ಅನೇಕ ಸಲ ಮಂಗೋಲರ ದಾಳಿಗಳನ್ನು ಎದುರಿಸಿತು. ಆ ಮನೆತನದವರ ಅದೃಷ್ಟ ಏರಿಳಿಯುತ್ತಿತ್ತು. ಅವರು 1525ರ ವರೆಗೆ ಆಳಿ ಮೊಗಲ್ ಸಾಮ್ರಾಜ್ಯ ಸ್ಥಾಪಕನಾದ ಬಾಬರನ ಆಕ್ರಮಣದ ಫಲವಾಗಿ ಕಣ್ಮರೆಯಾದರು.

ಮೊಗಲ್ ಸಾಮ್ರಾಜ್ಯಕಾಲದ ಉದ್ದಕ್ಕೂ ಪಾಕಿಸ್ತಾನ ಪ್ರದೇಶ ಹೆಚ್ಚು ಕಡಿಮೆ ಅವರ ಆಳ್ವಿಕೆಗೊಳಪಟ್ಟಿತ್ತು. ಸಮರಕಂಡದಲ್ಲಿ ಮೊದಲು ಆಳುತ್ತಿದ್ದ ಬಾಬರ್ ಮುಲ್ತಾನ್ ಮೂಲಕ ಭಾರತವನ್ನು ಪ್ರವೇಶಿಸಿದಾಗ ಆ ಪ್ರದೇಶ ಅವನ ವಶವಾಯಿತು. ಆದರೂ ಬಾಬರ್ ಮತ್ತು ಹುಮಾಯೂನರ ಆಳ್ವಿಕೆ ಪ್ರಕ್ಷುಬ್ಧಮಯವಾಗಿತ್ತು. ಸಿಂಧ್ ಮತ್ತು ಮುಲ್ತಾನ್ ಪ್ರದೇಶಗಳು ಆಗಾಗ ಮೊಗಲರ ಅಧಿಕಾರವನ್ನು ಧಿಕ್ಕರಿಸುತ್ತಿದ್ದುವು. ಹುಮಾಯೂನ್ ಸಿಂಹಾಸನಚ್ಯುತನಾದಾಗ, ಸಿಂಧ್ ಪ್ರಾಂತ್ಯದಲ್ಲಿ ತಟ್ಟವನ್ನು ರಾಜಧಾನಿಯಾಗಿ ಹೊಂದಿದ್ದ ಮುಸ್ಲಿಮ್ ರಾಜ್ಯ ಹೆಚ್ಚು ಕಡಿಮೆ ಸ್ವತಂತ್ರವಾಗಿತ್ತು. ಅದು ಅವನಿಗೆ ಹೆಚ್ಚು ನೆರವು ನೀಡದಿದ್ದರೂ ಪೂರ್ಣವಾಗಿ ಅವನ ಕೈ ಬಿಡಲಿಲ್ಲ. ಅವನ ಅಧಿಕಾರದ ಪುನರ್ಗಳಿಕೆಯ ಪ್ರಯತ್ನದಲ್ಲೂ ಸಿಂಧ್ ಪ್ರಾಂತ್ಯ ಪ್ರಮುಖ ಪಾತ್ರವಹಿಸಿತ್ತು. ಅಕ್ಬರನ ಸಿಂಹಾಸನಾರೋಹಣ ಕಾಲದಿಂದ (1556) 1707ರ ವರೆಗೂ ಪಾಕಿಸ್ತಾನ ಪ್ರದೇಶ ಮೊಗಲರ ವಶದಲ್ಲಿತ್ತಾದರೂ ವಾಯವ್ಯ ಸರಹದ್ದಿನ ಬೆಟ್ಟ ಪ್ರದೇಶದಲ್ಲಿ ಕೆಲವು ಸ್ವತಂತ್ರ ಪಠಾಣ ಪಂಗಡಗಳು ನೆಲೆಸಿದ್ದು ಸಾಮ್ರಾಜ್ಯಕ್ಕೆ ತೊಂದರೆ ಕೊಡುತ್ತಿದ್ದುವು. ಅನಂತರ ಬಹವಾಲ್ ಪುರದಲ್ಲಿ ಒಂದು ಸ್ವತಂತ್ರ ಮುಸ್ಲಿಮ್ ರಾಜ್ಯವೂ ಪಂಜಾಬಿನಲ್ಲಿ ಸ್ವತಂತ್ರ ಸಿಖ್ ರಾಜ್ಯವೂ ಹುಟ್ಟಿಕೊಂಡುವು. ಉಳಿದ ಪ್ರದೇಶಗಳ ಬಗ್ಗೆ ಹೆಚ್ಚಿನ ಮಾಹಿತಿಗಳೇನೂ ಸಿಕ್ಕುವುದಿಲ್ಲ.

ಪರಿಸ್ಥಿತಿ ಹೀಗೆ ಕ್ಲಿಷ್ಟವಾಗಿದ್ದಾಗ ವಾಯವ್ಯ ಭಾರತ ಮತ್ತೊಮ್ಮೆ ವಿದೇಶಿ ದಾಳಿಗೆ ತುತ್ತಾಯಿತು. ಪರ್ಷಿಯದಲ್ಲಿ ಆಳುತ್ತಿದ್ದ ನಾದಿರ್ ಷಾ ಪಂಜಾಬ್, ಮುಲ್ತಾನ್ ಪ್ರದೇಶಗಳನ್ನು ವಶಪಡಿಸಿಕೊಂಡು 1739ರ ಮಾರ್ಚ್‍ನಲ್ಲಿ ದೆಹಲಿಯವರೆಗೂ ನುಗ್ಗಿ ಬಂದ. ದೆಹಲಿ ಅವನ ವಶವಾಯಿತು. ಪಂಜಾಬ್ ಮತ್ತು ದೆಹಲಿ ಪ್ರದೇಶಗಳು ಕೊಳ್ಳೆಗೆ ಒಳಗಾದುವು. ನಾದಿರ್ ಷಾನ ಮರಣಾನಂತರ ಪರ್ಷಿಯಾದ ಅಧಿಕಾರವನ್ನು ಕಸಿದುಕೊಂಡ ಅಹ್ಮದ್ ಷಾ ಅಬ್ದಾಲಿ ಪೆಷಾವರ್ ಪ್ರದೇಶವನ್ನು ಆಕ್ರಮಿಸಿ ಲಾಹೋರ್‍ವರೆಗೂ ಮುನ್ನುಗ್ಗಿ 1747ರಿಂದ 1767ರ ವರೆಗೆ ಏಳು ಬಾರಿ ಲೂಟಿ ಮಾಡಿದ. ಅಬ್ದಾಲಿ 1752ರಲ್ಲಿ ಮೀರ್ ಮನ್ನು ಎಂಬವನನ್ನು ಪಂಜಾಬಿನ ಪ್ರಾಂತ್ಯಾಧಿಕಾರಿಯಾಗಿ ನೇಮಿಸಿದ. ಆ ದಾಳಿಗಳ ಫಲವಾಗಿ ವಾಯವ್ಯ ಭಾರತದಲ್ಲಿ ಮೊಗಲರ ಅಧಿಕಾರ ಬಲಗುಂದಿ ಸಿಖ್ ರಾಜ್ಯ ಬಲಗೊಳ್ಳಲು ಸಾಧ್ಯವಾಯಿತು. ಈ ಮಧ್ಯೆ 1785ರಲ್ಲಿ ವಾಯವ್ಯ ಭಾರತದಲ್ಲಿ ಪ್ರಬಲವಾಗುತ್ತಿದ್ದ ಸಿಕ್ಕರಿಗೂ ದೆಹಲಿಯ ವರೆಗೆ ಪ್ರಭಾವ ಬೀರಿದ್ದ ಮರಾಠರಿಗೂ ಒಂದು ಶಾಂತಿ ಒಪ್ಪಂದವಾಗಿತ್ತು. 1797ರೊಳಗೆ ಅವರು ಮತ್ತೆ ಕಚ್ಚಾಡತೊಡಗಿದ್ದರು. ಆದರೆ ಸಿಂಧ್ ಮತ್ತು ಬಲೂಚಿಸ್ತಾನ್ ಪ್ರದೇಶಗಳು ಅತಂತ್ರವಾಗಿ ಅಡಿಗಡಿಗೂ ಬೇರೆಯವರ ದಾಸ್ಯಕ್ಕೊಳಗಾಗುತ್ತಿದ್ದುವು. ಆಫ್ಘಾನಿಸ್ತಾನದಲ್ಲಿ ಕಾಬೂಲ್ ರಾಜ್ಯ ಬಲಗೊಂಡಿದ್ದು, ವಾಯವ್ಯ ಗಡಿ ಪ್ರದೇಶ ಮತ್ತು ಬಲೂಚಿಸ್ತಾನ ಅದರ ವಶದಲ್ಲಿತ್ತು. ಈ ವೇಳೆಗೆ ಸಿಂಧ್ ಪ್ರಾಂತ್ಯ ಹೆಸರಿಗೆ ಕಾಬೂಲಿನ ವಶದಲ್ಲಿದ್ದರೂ ಹೆಚ್ಚುಕಡಿಮೆ ಸ್ವತಂತ್ರವಾಗಿತ್ತು. ಆ ಪ್ರದೇಶದಲ್ಲಿ ಮೊದಲು ನಾಲ್ಕು, ಅನಂತರ ಮೂರು ರಾಜ್ಯಗಳು ಅಸ್ತಿತ್ವದಲ್ಲಿದ್ದುವು. ಖೈರ್‍ಪುರ (ಉತ್ತರಸಿಂಧ್), ಹೈದರಾಬಾದ್ (ದಕ್ಷಿಣ ಸಿಂಧ್) ಮತ್ತು ಮೀರ್‍ಪುರ ಇವು ಅನುಕ್ರಮವಾಗಿ ಆ ರಾಜ್ಯಗಳ ರಾಜಧಾನಿಗಳಾಗಿದ್ದುವು. ಅವುಗಳ ಅಮೀನರು ಪೂರ್ವದಲ್ಲಿ ಬ್ರಿಟಿಷರ, ವಾಯವ್ಯ ಭಾಗದಲ್ಲಿ ಪರ್ಷಿಯನರ, ಉತ್ತರದಲ್ಲಿ ಆಫ್ಘನ್ನರ ಮತ್ತು ರಷ್ಯನರ ಸಾಮ್ರಾಜ್ಯದಾಹದ ಫಲವಾಗಿ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದರು. ಪಂಜಾಬಿನಲ್ಲಿ ಸಿಕ್ಖರ ದೊರೆ ರಣಜಿತ್ ಸಿಂಗ್ ಪ್ರಬಲನಾಗಿ ಸಿಂಧ್‍ನ ಮೇಲೆ ಕಣ್ಣು ಹಾಕಿದ್ದ. ಇಂಥ ಪರಿಸ್ಥಿತಿಯಲ್ಲಿ 1843ರಲ್ಲಿ ಬ್ರಿಟಿಷ್ ಗವರ್ನರ್-ಜನರಲ್ ಆಗಿದ್ದ ಎಲ್‍ನ್‍ಬರೋ ಮತ್ತು ದಳಪತಿ ಚಾಲ್ರ್ಸ್ ನೇಪಿಯರ್ ಇವರು ಸಿಂಧನ್ನು ಆಕ್ರಮಿಸಿಕೊಂಡರು. 1839ರಲ್ಲಿ ರಣಜಿತ್‍ಸಿಂಗ್ ಸತ್ತಮೇಲೆ ಗೊಂದಲಮಯ ಸ್ಥಿತಿಯಲ್ಲಿದ್ದ ಪಂಜಾಬ್ 1841ರಲ್ಲಿ ಬ್ರಿಟಿಷರ ವಶವಾಯಿತು. ಇಷ್ಟಾದರೂ ಬ್ರಿಟಿಷರ ಆಳ್ವಿಕೆಗೆ ಈ ಪ್ರದೇಶದಲ್ಲಿ ವಿರೋಧ ಮುಂದುವರಿಯಿತು. ವಾಯವ್ಯ ಸರಹದ್ದಿನಲ್ಲಿದ್ದ ಪಠಾಣ ಬುಡಕಟ್ಟಿನ ಜನರು ಆಗಾಗ್ಗೆ ದಂಗೆಯೆದ್ದು ಲೂಟಿ ನಡೆಸುತ್ತಿದ್ದರು. ಆಫ್ಘನರೊಂದಿಗೆ ಎರಡು ಬಾರಿ ಯುದ್ಧ ನಡೆಸಿದ ಅನಂತರ ಬ್ರಿಟಿಷರು ಅವರೊಂದಿಗೆ ಒಪ್ಪಂದ ಮಾಡಿಕೊಂಡು ಡ್ಯೂರಾಂಡ್ ರೇಖೆಯನ್ನು ಗಡಿಯೆಂದು ನಿರ್ಧರಿಸಿದರು. ಆದರೂ ಆ ಪ್ರದೇಶ ಬ್ರಿಟಿಷರ ಆಳ್ವಿಕೆಗೆ ಸುಲಭವಾಗಿ ಒಳಪಡಲಿಲ್ಲ. ಅನಂತರ ಸ್ವಲ್ಪ ಕಾಲ ಶಾಂತಿ ಮುಂದುವರಿದರೂ 1919, 1925, 1930-31, 1933 ಮತ್ತು 1936-37ರಲ್ಲಿ ಮತ್ತೆ ಮತ್ತೆ ದಂಗೆಗಳಾದುವು. 1915ರಲ್ಲಿ ಅಮೀರ್ ಹಬೀಬುಲ್ಲ ಮತ್ತು ಬ್ರಿಟಿಷರ ನಡುವೆ ವೈಮನಸ್ಯವುಂಟಾಯಿತು. ಅವನ ಮಗ ಅಮಾನುಲ್ಲಾನ ಕಾಲದಲ್ಲಿ 1919ರಲ್ಲಿ ಮೂರನೆಯ ಆಫ್ಘನ್ ಯುದ್ಧ ನಡೆದು ಅಮಾನುಲ್ಲಾ ಸೋತ. ತರುವಾಯ ಈ ಪ್ರದೇಶದಲ್ಲಿ ಹೆಚ್ಚಿನ ತೊಂದರೆ ಉಂಟಾಗಲಿಲ್ಲ.

ಈ ವೇಳೆಗೆ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಬಿರುಸಿನಿಂದ ನಡೆದಿತ್ತು. ಮೊದಲು ಹಿಂದೂ ಮುಸ್ಲಿಮರು ಒಟ್ಟಾಗಿ ಹೋರಾಡಿದರೂ 1930ರ ಸುಮಾರಿನಿಂದ ಮಹಮ್ಮದ್ ಆಲಿ ಜಿನ್ನಾರ ನೇತೃತ್ವದಲ್ಲಿ ಮುಸ್ಲಿಮರು ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನಿಟ್ಟರು. ಬ್ರಿಟಿಷರ ಮತಭೇದ ನೀತಿಯ ಫಲವಾಗಿ ಪ್ರತ್ಯೇಕತಾವಾದಿಗಳ ಕೈಬಲಗೊಂಡಿತು. ಮೊದಲು ಭಾರತೀಯ ನಾಯಕರು ದೇಶದ ವಿಭಜನೆಯನ್ನು ವಿರೋಧಿಸಿದರಾದರೂ ಅಂತಿಮವಾಗಿ ಅಖಂಡ ಭಾರತದ ವಿಭಜನೆಯಾಗಿ, 1947ರಲ್ಲಿ ಪ್ರತ್ಯೇಕ ಪಾಕಿಸ್ತಾನ ಅಸ್ತಿತ್ವಕ್ಕೆ ಬಂತು.

ಅನಂತರದ ಸುಮಾರು ಮೂರು ದಶಕಗಳ ಕಾಲದಲ್ಲಿ ಪಾಕಿಸ್ತಾನ ಬಹುಮಟ್ಟಿಗೆ ಮಿಲಿಟರಿ ಆಡಳಿತಕ್ಕೇ ಒಳಪಟ್ಟಿದೆ. 1971ರಲ್ಲಿ ಪೂರ್ವ ಪಾಕಿಸ್ತಾನ ಪ್ರತ್ಯೇಕಗೊಂಡು ಸ್ವತಂತ್ರ ಬಾಂಗ್ಲಾ ದೇಶವಾಯಿತು.

ವಾಸ್ತು ಮತ್ತು ಮೂರ್ತಿ ಶಿಲ್ಪ

[ಬದಲಾಯಿಸಿ]

ಪಾಕಿಸ್ತಾನ ಪ್ರದೇಶದ ಕಲೆಯ ಇತಿಹಾಸ ಕ್ರಿ.ಪೂ 2500ರ ಸುಮಾರಿನಲ್ಲಿ ಇಲ್ಲಿ ನೆಲಸಿದ್ದ ಹರಪ್ಪ ನಾಗರಿಕತೆಯ ಕಾಲದಲ್ಲಿ ಆರಂಭವಾಯಿತು. ಪ್ರಮುಖ ನಗರಗಳಾದ ಹರಪ್ಪ ಮತ್ತು ಮೊಹೆಂಜೊದಾರೊ ನೆಲೆಗಳಲ್ಲಿ ನಡೆದ ಉತ್ಖನನಗಳು ಆಗಿನವರ ನಗರ ಯೋಜನೆಯ ಬಗ್ಗೆ ಸ್ಪಷ್ಟವಾದ ಮಾಹಿತಿಗಳನ್ನು ನೀಡಿವೆ. ಆಯಾಕಾರದ ನಗರದ ಸುತ್ತ ಸಂರಕ್ಷಕ ಕೋಟೆ ಗೋಡೆಗಳನ್ನೂ ಬತೇರಿಗಳನ್ನೂ ನಿರ್ಮಿಸಲಾಗಿತ್ತು. ನಗರದೊಳಗೆ ಅಗಲವಾದ ನೇರ ರಸ್ತೆಗಳು, ಅವನ್ನು ಸಂಧಿಸುವ ಅಡ್ಡರಸ್ತೆ. ಓಣಿಗಳು ಇವು ನಗರ ಪ್ರದೇಶವನ್ನು ಆಯಾಕಾರದ ವಠಾರಗಳಾಗಿ ವಿಭಜಿಸಿದ್ದುವು. ಸುಟ್ಟ ಇಟ್ಟಿಗೆಗಳಿಂದ ಕಟ್ಟಿದ ಒಂದೋ ಎರಡೋ ಅಂತಸ್ತುಗಳಿದ್ದ ಮನೆಗಳ ಮಧ್ಯ ಭಾಗದಲ್ಲಿದ್ದ ತೆರೆದ ವಿಶಾಲವಾದ ಅಂಗಣಗಳಿಂದ ನಿವಾಸಿಗಳಿಗೆ ಗಾಳಿ ಬೆಳಕುಗಳು ಒದಗುತ್ತಿದ್ದುವು. ಪ್ರತಿ ಮನೆಯಲ್ಲೂ ನೀರಿನ ಬಾವಿ, ಸ್ನಾನಗೃಹ, ಶೌಚಗೃಹ, ಅಡುಗೆಮನೆ, ಮೇಲಂತಸ್ತಿಗೆ ಹೋಗಲು ಸೋಪಾನ ಪಂಕ್ತಿಗಳು ಮನೆಯಲ್ಲಿ ಬಳಸಿದ ಮತ್ತು ಮಳೆಯ ನೀರನ್ನು ಹೊರಗೊಯ್ಯಲು ಕೊಳವೆ ಚರಂಡಿಗಳು, ರಸ್ತೆಗಳಲ್ಲಿ ಒಳ ಚರಂಡಿಗಳು ಇದ್ದುವು. ನಗರದ ರಸ್ತೆಗಳ ತಿರುವುಗಳಲ್ಲಿ ಕಾವಲುಗಾರರ ಕೊಠಡಿಗಳಿದ್ದುವು. ಚರಂಡಿಗಳನ್ನು ಆಗಾಗ ಸ್ವಚ್ಛಮಾಡಲು ಅಲ್ಲಲ್ಲಿ ದೊಡ್ಡ ಆಳುಗುಂಡಿಗಳನ್ನು ನಿರ್ಮಿಸಿದ್ದುದಲ್ಲದೆ ಅಲ್ಲಿ ಸಂಗ್ರಹವಾದ ಮತ್ತು ರಸ್ತೆಯ ಕಸವನ್ನು ಹೊರಸಾಗಿಸುವ ವ್ಯವಸ್ಥೆ ಇತ್ತು.

ರಾಜವಂಶದವರ, ಅಧಿಕಾರಿಗಳ ಮತ್ತು ಶ್ರೀಮಂತರ ವಸತಿಗಳಿಗಾಗಿ ಮತ್ತು ಆಡಳಿತ ಕಚೇರಿಗಳಿಗಾಗಿ ಪ್ರತ್ಯೇಕವಾದ ಒಳಕೋಟೆ ಆವರಣವನ್ನು ಎತ್ತರವಾದ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಅಲ್ಲಿ ಉನ್ನತ ವರ್ಗದವರ ನಿವಾಸಗಳಲ್ಲದೆ ಹಲವು ರೀತಿಯ ಸಾರ್ವಜನಿಕ ಭವನಗಳನ್ನು ಕಟ್ಟಲಾಗಿತ್ತು. ಅವುಗಳ ಪೈಕಿ ಅರಮನೆ, ಧಾರ್ಮಿಕ ನಾಯಕರ ವಿಹಾರಗೃಹ, ಸ್ನಾನದ ಕೊಳ, ಧಾನ್ಯಗಳ ಕಣಜ ಮೊದಲಾದವು ಗಮನಾರ್ಹ.

ಅವರು ಮೂರ್ತಿಶಿಲ್ಪಕಲೆಯಲ್ಲೂ ಪ್ರವೀಣರಾಗಿದ್ದರೂ ಹೆಚ್ಚು ಶಿಲ್ಪಗಳು ಉಳಿದು ಬಂದಿಲ್ಲದಿರುವುದು ದುರದೃಷ್ಟಕರ, ದೊರೆತಿರುವ ಕೆಲವು ಶಿಲಾಮೂರ್ತಿಗಳ ಪೈಕಿ ಗಡ್ಡಧಾರಿ ಪುರೋಹಿತ ಮೂರ್ತಿ, ಮತ್ತೊಬ್ಬ ಮಾನವನ ತಲೆ ಇವು ಉತ್ತಮ ಕೃತಿಗಳು, ಹರಪ್ಪದಲ್ಲಿ ಸಿಕ್ಕಿದ ರುಂಡವಿಲ್ಲದ ಶಿಲ್ಪಗಳು ಮಾನವದೇಹದ ನಿರೂಪಣೆಯಲ್ಲಿ ಅದ್ಭುತ ಕೃತಿಗಳು. ಕಂಚಿನ ನರ್ತಕಿಯ ಮೂರ್ತಿ ಅತ್ಯಂತ ಸಹಜ ನಿರೂಪಣೆ. ಜೇಡಿಮಣ್ಣಿನ ಮನುಷ್ಯ, ಪ್ರಾಣಿಗಳ ಮತ್ತು ಪಕ್ಷಿಗಳ ಗೊಂಬೆಗಳು ಉತ್ತಮ ಕಲಾವಂತಿಕೆಯನ್ನು ಬೀರುತ್ತವೆ. ಇವೆಲ್ಲಕ್ಕಿಂತಲೂ ಹೆಚ್ಚಿನ ಪ್ರತಿಭೆಯನ್ನು ಸೂಸುವ ಅವರ ಕಲಾ ನಿರ್ಮಾಣವನ್ನು ಅವರ ಮೇದಶ್ಶಿಲಾ ಮುದ್ರಿಕೆಗಳ ಮೇಲೆ ಕಾಣಬಹುದು. ಅವುಗಳ ಮೇಲಿನ ಪ್ರಾಣಿಗಳ ಚಿತ್ರಣ ಜೀವಂತ ಸತ್ವಪೂರ್ಣ ನಿರೂಪಣೆಯ ಉತ್ತಮ ನಿದರ್ಶನ.

ಕ್ರಿಸ್ತಶಕದ ಮೊದಲ ಶತಮಾನಗಳಲ್ಲಿ ಕುಷಾಣರ ಆಶ್ರಯದಲ್ಲಿ ಬೆಳೆದು ಬಂದ ಗಾಂಧಾರ ಶಿಲ್ಪದ ವರೆಗೂ ನಮಗೆ ಹೆಚ್ಚಿನ ಮಾಹಿತಿಗಳು ದೊರಕಿಲ್ಲ. ಕ್ರಿ.ಪೂ 5ನೆಯ ಶತಮಾನದ ಹೊತ್ತಿಗೆ ತಕ್ಷಶಿಲೆ ಪ್ರಮುಖ ರಾಜಕೀಯ ಮತ್ತು ಸಾಂಸ್ಕøತಿಕ ಕೇಂದ್ರವಾಗಿತ್ತು. ಪರ್ಷಿಯ ಸಾಮ್ರಾಜ್ಯದಲ್ಲಿ ಗಾಂಧಾರ ಪ್ರಾಂತ್ಯದ ಮುಖ್ಯ ನಗರವಾದ ತಕ್ಷಶಿಲೆಯ ನಗರ ಭಾಗವನ್ನು ಸಂಶೋಧಿಸಿದಾಗ ಕೆಲವು ವಿಶಾಲವಾದ ಸಾರ್ವಜನಿಕ ಕಟ್ಟಡಗಳೂ ಅರಮನೆ, ದೇವಾಲಯ, ಒಳಚರಂಡಿ ವ್ಯವಸ್ಥೆಗಳನ್ನೊಳಗೊಂಡ ಮತ್ತು ಕೋಟೆ ಕೊತ್ತಲ ಕಂದಕಗಳನ್ನು ಹೊಂದಿದ ನಗರ ವ್ಯವಸ್ಥೆ ಇವೂ ಕಂಡುಬಂದವು. ಆದರೆ ಕ್ರಿ.ಪೂ 2ನೆಯ ಶತಮಾನಕ್ಕೆ ಸೇರಿದ ಗ್ರೀಕ್ ನಗರದಲ್ಲಿ ಹಲವು ಪ್ರಮುಖ ಸುಧಾರಣೆಗಳನ್ನು ಮಾಡಲಾಯಿತು. ಕೋಟೆಯ ಕಲ್ಲಿನ ಗೋಡೆ 6.4 ಮೀ ಅಗಲವಾಗಿದೆ. ಆದರೆ ಮಧ್ಯಂತರದಲ್ಲಿ ಅರ್ಧ ಆಯಾಕಾರದ ಕೊತ್ತಲಗಳನ್ನು ನಿರ್ಮಿಸಲಾಗಿತ್ತು. ಕೋಟೆಯ ಒಳಭಾಗವನ್ನು ಉದ್ದ ಅಡ್ಡದ ರಸ್ತೆಗಳಿಂದ ಆಯಾಕಾರದ ವಠಾರಗಳಾಗಿ ವಿಂಗಡಿಸಿ ಅವುಗಳಲ್ಲಿ ವಿಶಾಲಗೃಹಗಳನ್ನು ನಿರ್ಮಿಸಲಾಗಿತ್ತು. ಈ ನಗರ ಯೋಜನೆ ಹೆಚ್ಚು ಕಡಿಮೆ ಹರಪ್ಪ ನಾಗರಿಕತೆಯ ನಗರ ವ್ಯವಸ್ಥೆಯನ್ನು ಹೋಲುತ್ತಿತ್ತು. ತಕ್ಷಶಿಲೆಯ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ತಪ್ಪಲುಗಳಲ್ಲಿ, ಕಣಿವೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಬೌದ್ಧಸ್ತೂಪ, ಚೈತ್ಯ ಮತ್ತು ವಿಹಾರಗಳು ಕುಷಾಣರ ಆಳ್ವಿಕೆಯಲ್ಲಿ ನಿರ್ಮಾಣವಾದವು. ಈ ಶಾಂತ, ನಿಸರ್ಗ ಸುಂದರ ಪ್ರದೇಶ ಬೌದ್ಧ ಭಿಕ್ಷುಗಳನ್ನು ಅಧಿಕ ಸಂಖ್ಯೆಯಲ್ಲಿ ಆಕರ್ಷಿಸಿದುದರಲ್ಲಿ ಆಶ್ಚರ್ಯವಿಲ್ಲ. ಇಂಥ ಬೌದ್ಧ ನಿರ್ಮಾಣಗಳ ಪೈಕಿ ತಕ್ಷಶಿಲೆಯ ಬಳಿ ಇರುವ ಧರ್ಮರಾಜಿಕ ಸ್ತೂಪ ಮತ್ತು ವಿಹಾರಗಳು ಪ್ರಧಾನವಾದವು. ಅಶೋಕನಿಗಿಂತ ಮೊದಲು ನಿರ್ಮಿತವಾಯಿತೆಂದು ಹೇಳಲಾದ ಈ ಕಟ್ಟಡ ಸಮೂಹ ಕುಷಾಣರ ಕಾಲದಲ್ಲಿ ಬಹಳ ದೊಡ್ಡದಾಗಿ ಬೆಳೆಯಿತು. ಮಧ್ಯದ ಅಂಗಣದಲ್ಲಿ ಬೃಹತ್‍ಸ್ತೂಪ, ಸುತ್ತ ಸಣ್ಣ ಸ್ತೂಪಗಳ ಸಾಲುಗಳು ಚೈತ್ಯಗೃಹಗಳು ಮತ್ತು ಒಂದು ಭಾಗದಲ್ಲಿ ಬಹುಸಂಖ್ಯೆಯ ಕೋಣೆಗಳಿದ್ದ ವಿಹಾರ ಅಥವಾ ಭಿಕ್ಷು ವಸತಿಗಳು ಇದ್ದುವು. 5-6ನೆಯ ಶತಮಾನಗಳಲ್ಲಿ ಹೂಣರ ದಾಳಿಗೆ ಆಹುತಿಯಾಗುವವರೆಗೂ ಈ ಬೌದ್ಧ ಕಟ್ಟಡಗಳು ಧಾರ್ಮಿಕ ಮತ್ತು ವಿದ್ಯಾಕೇಂದ್ರಗಳಾಗಿ ಮುಂದುವರಿದುವು. ಈ ಬೌದ್ಧ ನಿರ್ಮಾಣಗಳು ಪಾಕಿಸ್ತಾನದ ಇತಿಹಾಸಕಾಲದ ಮೊದಲ ವಾಸ್ತು ನಿರ್ಮಾಣಗಳು.

ಇವಕ್ಕಿಂತಲೂ ಗಮನಾರ್ಹ ಕೊಡುಗೆಯೆಂದರೆ ಮೂರ್ತಿಶಿಲ್ಪ ರಂಗದಲ್ಲಿ ಆ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಗಾಂಧಾರ ಶಿಲ್ಪಕಲೆ, ಕುಷಾಣ ದೊರೆಗಳ ಆಶ್ರಯದಲ್ಲಿ ಭಾರತೀಯ ವಸ್ತುಗಳಿಗೆ ಗ್ರೀಕ್ ಕಲಾ ನೈಪುಣ್ಯವನ್ನು ಅನ್ವಯಿಸಿ ಸೃಷ್ಟಿಸಿದ ನೂರಾರು ಬುದ್ಧ, ಬೋಧಿಸತ್ವ ಮತ್ತು ಇತರ ಬೌದ್ಧ ಶಿಲ್ಪಗಳು ಗಾಂಧಾರ ಶಿಲ್ಪ ಶೈಲಿಯವೆಂದು ಪರಿಗಣಿತವಾಗಿವೆ. ಇವುಗಳ ಪೈಕಿ ಚುನಾರಿನ, ಅಮೃತಶಿಲೆಯಲ್ಲಿ ಅಥವಾ ಮರಳುಗಲ್ಲಿನಲ್ಲಿ ಮಾಡಿದ ಮೂರ್ತಿಗಳು, ಗಚ್ಚಿನಲ್ಲಿ ನಿರ್ಮಿಸಿದ ವಿಗ್ರಹಗಳು ಮತ್ತು ಜೇಡಿಮಣ್ಣಿನ ಪ್ರತಿಮೆಗಳು ಅಧಿಕ ಸಂಖ್ಯೆಯಲ್ಲಿ ದೊರೆತಿವೆ. ಈ ಕಲೆ ಆಫ್ಘಾನಿಸ್ತಾನ ಪ್ರದೇಶದಲ್ಲಿ ಹರಡಿತ್ತು. ಪಾಕಿಸ್ತಾನದಲ್ಲಿ ತಕ್ಷಶಿಲೆಯ ಪ್ರದೇಶದಲ್ಲಿ ನಡೆಸಿದ ದೀರ್ಘಕಾಲದ ಉತ್ಖನನಗಳಲ್ಲಿ ಅಧಿಕಸಂಖ್ಯೆಯ ಶಿಲ್ಪಗಳು, ಮುಖ್ಯವಾಗಿ ಗಚ್ಚಿನಲ್ಲಿ ಮಾಡಿದ ಮೂರ್ತಿಗಳು, ದೊರೆತಿವೆ. ಕಲ್ಲಿನ ಮೂರ್ತಿಗಳಿಗಿಂತಲೂ ಗಚ್ಚಿನ ಮೂರ್ತಿಗಳು ಹೆಚ್ಚು ಅಂದವಾಗಿವೆ. ಗಚ್ಚಿನಲ್ಲಿ ಮತ್ತು ಜೇಡಿಮಣ್ಣಿನಲ್ಲಿ ಶಿಲ್ಪಗಳನ್ನು ಸುಲಭವಾಗಿ ರೂಪಿಸಬಹುದಾಗಿದ್ದುದರಿಂದ ಕ್ರಮೇಣ ಕಲ್ಲಿನ ಶಿಲ್ಪಗಳು ವಿರಳವಾದುವು. ಈ ಶಿಲ್ಪಕಲೆ ಮಹಾಯಾನ ಬೌದ್ಧಪಂಥದಿಂದ ಉತ್ತೇಜನ ಪಡೆದವಾದ್ದರಿಂದ ಇವನ್ನು 150-450ರ ಅವಧಿಗೆ ನಿರ್ದೇಶಿಸಬಹುದಾಗಿದೆ. ಇವುಗಳಲ್ಲಿ ಪೌರಸ್ತ್ಯ-ಪಾಶ್ಚಾತ್ಯ ಪರಂಪರೆಗಳ ಸಮ್ಮಿಲನವನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಆದರೆ ಸಿಂಧ್ ಪ್ರದೇಶದಲ್ಲಿ ಈ ಕಲೆ ಎಂಟನೆಯ ಶತಮಾನದವರೆಗೂ ಉಳಿದು ಬಂದ ವಿಷಯ ಮೀರಪುರ ಖಾಸ್ ಎಂಬಲ್ಲಿಯ ಇಟ್ಟಿಗೆ ಸ್ತೂಪದ ಮೂರ್ತಿಗಳಿಂದ ಖಚಿತವಾಗುತ್ತದೆ.

ಅನಂತರ ಕಾಲದ ಅವಶೇಷಗಳೆಂದರೆ ಉತ್ತರ ಸಿಂಧ್‍ನಲ್ಲಿರುವ ಹಿಂದೂ ವಾಸ್ತು ಶಿಲ್ಪಗಳು, ಇವುಗಳ ಕಾಲ ನಿರ್ಣಯ ಕಠಿಣವಾದರೂ ಇವುಗಳ ಇಸ್ಲಾಮೀ ವಾಸ್ತು ಶೈಲಿಯ ಲಕ್ಷಣಗಳಿಂದ ಇವನ್ನು ಸ್ಥೂಲವಾಗಿ 8-10ನೆಯ ಶತಮಾನಗಳಿಗೆ ನಿರ್ದೇಶಿಸಲಾಗಿದೆ. ದಕ್ಷಿಣ ಸಿಂಧ್‍ನಲ್ಲಿರುವ ಹಿಂದು ಕಟ್ಟಡಗಳ ಮತ್ತೊಂದು ಗುಂಪು 12-14ನೆಯ ಶತಮಾನಗಳಿಗೆ ಸೇರುತ್ತದೆ. ಉತ್ತರದ ಕಟ್ಟಡಗಳನ್ನು ಕಾಶ್ಮೀರ ವಾಸ್ತುಶಿಲ್ಪದ ಸಂಬಂಧವನ್ನು ಸೂಚಿಸುವ ಝೀಲಂ ದಂಡೆಯ ಪೂರ್ವದ ಗುಂಪು ಮತ್ತು ಸಿಂಧೂ ನದಿದಡದ ಪಶ್ಚಿಮದ ಗುಂಪು ಎಂದು ಎರಡು ಗುಂಪುಗಳಾಗಿ ಮಾಡಲಾಗಿದೆ. ಪೂರ್ವದ ಗುಂಪಿನ ಪ್ರಮುಖ ಕಟ್ಟಡ ಹ್ಯೂಯೆನ್‍ತ್ಸಾಂಗನ ಸಿಂಘಪುರ ಅಥವಾ ಈಗಿನ ಮಲ್ಲೋಟ್ ನಲ್ಲಿರುವ ಪಾಳುದೇವಾಲಯ. ಇಬ್ಬದಿಗಳಲ್ಲೂ ಹಿಂದೆ ಸರಿದ ಚಾಚುಭಾಗಗಳು, ಗಾಡಿಗಳಿಂದ ಅಲಂಕೃತವಾದ ಕಂಬಗಳು ಮತ್ತು ತ್ರಿಪತ್ರಕ ಕಮಾನು ಇರುವ ಕಾಶ್ಮೀರಿ ಶೈಲಿಯ ನಾಲ್ಕು ಚದುರಗಳ ಕಟ್ಟಡ ಇದು. ಇದರ ಮೆಟ್ಟಿಲುಮೆಟ್ಟಿಲಾದ ಮತ್ತು ಪಿರಿಮಿಡಾಕೃತಿಯ ಶಿಖರ ಬಿದ್ದುಹೋಗಿದೆ. ಇದು ಪಾಶ್ಚಾತ್ಯ ಗ್ರೀಕ್-ರೋಮನ್, ಬೌದ್ಧ ಮತ್ತು ಹಿಮಾಲಯ ಪ್ರದೇಶದ ಮರದ ಕಟ್ಟಡಗಳ-ಹೀಗೆ ತ್ರಿವಿಧ ಪ್ರಭಾವಗಳ-ಸಂಗಮವಾಗಿದೆ. ಕಾಶ್ಮೀರದ ಲಲಿತಾದಿತ್ಯ ಸಿಂಧ್ ಪ್ರಾಂತವನ್ನು ಆಕ್ರಮಿಸಿಕೊಂಡಾಗ ಬಹುಶಃ ಇದನ್ನು ಕಟ್ಟಲಾಯಿತು.

ಪಶ್ಚಿಮದ ಗುಂಪಿಗೆ ಅಟಕ್ ಜಿಲ್ಲೆಯ ಕಲ್ಲರ್ ದೇವಾಲಯ ಮತ್ತು ಡೇರಾ ಇಸ್ಮೈಲ್‍ಖಾನ್ ಜಿಲ್ಲೆಯ ಬಿಲಾಟ್‍ನಲ್ಲಿರುವ ದಕ್ಷಿಣ ಕಾಫಿರ ಕೋಟೆಯಲ್ಲಿರುವ ದೇವಾಲಯಗಳು ಸೇರುತ್ತವೆ. ಇವು ಮಧ್ಯ ಕಾಲೀನ ಉತ್ತರ ಭಾರತದ ನಾಗರ ಶೈಲಿಯ ದೇವಾಲಯಗಳನ್ನು ಹೋಲುತ್ತವೆ. ಇವುಗಳ ಜೇನುಗೂಡಿನಾಕಾರದ ಶಿಖರದ ಮೇಲೆ ಅನೇಕ ರೀತಿಯ ಸೂಕ್ಷ್ಮ ಅಲಂಕರಣಗಳನ್ನು ಮಾಡಲಾಗಿದೆ. ಪ್ರಾಚೀನ ಗುಪ್ತಶೈಲಿಯ ದೇವಾಲಯಗಳಲ್ಲಿರುವಂತೆ ಅರಗಂಬಗಳು, ಅವುಗಳ ಮೇಲೆ ಕುಂಭಕಾರ್ಯದ ಬೋದಿಗೆಗಳು, ಜೋತಾಡುವ ಲತಾಗುಲ್ಮಗಳು ಕಂಡುಬರುತ್ತವೆ ಸುತ್ತಲ ಪ್ರದೇಶದಲ್ಲಿ ಉತ್ತಮ ಮರಳ್ಗಲ್ಲು ಸಿಕ್ಕುತ್ತಿದ್ದರೂ ಸುಟ್ಟ ಇಟ್ಟಿಗೆ ಅಥವಾ ಮೃದುವಾದ ಕಂಜೂರ್ ಶಿಲೆಯಲ್ಲಿ ಆ ಕಟ್ಟಡಗಳನ್ನು ಕಟ್ಟಲಾಗಿದೆ. ಗಂಗಾ-ಯಮುನಾ ಬಯಲು ಪ್ರದೇಶದ ಕಟ್ಟಡ ಶೈಲಿ ಈ ವಾಯವ್ಯ ಪ್ರದೇಶಕ್ಕೆ ವಿಸ್ತರಿಸಿ ಸ್ವಲ್ಪ ಮಟ್ಟಿಗೆ ಈ ಪ್ರದೇಶದ ಬೌದ್ಧ ವಾಸ್ತುಶೈಲಿಯ ಪ್ರಭಾವಕ್ಕೊಳಗಾಗಿದೆಯೆಂದು ಹೇಳಲಡ್ಡಿಯಿಲ್ಲ. ದಕ್ಷಿಣ ಕಾಫಿರ ಕೋಟೆಯಲ್ಲಿ ಈ ಶೈಲಿಯ ಒಂಬತ್ತು, ಮತ್ತು 38 ಕಿಮೀ ದೂರದಲ್ಲಿ ಇರುವ ಉತ್ತರ ಕಾಫಿರ ಕೋಟೆಯಲ್ಲಿ ಐದು ದೇವಾಲಯಗಳಿವೆ. ಮೇಲಿನ ಶಿಖರದ ಭಾರವನ್ನು ಹೊರಲು ಚದರ ಗರ್ಭಗುಡಿಯ ಚಾವಣಿಯ ನಾಲ್ಕು ಮೂಲೆಗಳಲ್ಲಿ ಮರದ ದೊಡ್ಡ ದೊಡ್ಡ ಅಡ್ಡ ದಿಮ್ಮಿಗಳನ್ನು ಸೇರಿಸಿರುವುದರಿಂದ ಆ ಭಾಗಕ್ಕೆ ಅಷ್ಟ ಪಾಶ್ರ್ವಗಳಿರುವಂತೆ ಭಾಸವಾಗುತ್ತದೆ.

ದಕ್ಷಿಣ ಸಿಂಧ್ ಪ್ರದೇಶದ ದೇವಾಲಯಗಳ ಉತ್ತಮ ಮಾದರಿಯನ್ನು ವಿರಾವಾದದಿಂದ ವಾಯವ್ಯಕ್ಕೆ ಸುಮಾರು 22 ಕಿಮೀ. ದೂರದಲ್ಲಿರುವ ಗೋರಿ ಎಂಬಲ್ಲಿಯ ಜೈನ ದೇವಾಲಯದಲ್ಲಿ ಕಾಣಬಹುದು. ಆ ಪ್ರದೇಶದಲ್ಲಿ ದೊರಕುವ ಶಿಲೆಯಲ್ಲಿ ಕಟ್ಟಲಾದ ಈ ದೇವಾಲಯದ ಕಂಬಗಳಿಗೆ ಮತ್ತು ಅಲಂಕರಣ ಕೆತ್ತನೆಗಳಿಗೆ ರಾಜಸ್ಥಾನದ ಸ್ಫಟಿಕ ಶಿಲೆಯನ್ನು ಬಳಸಲಾಗಿದೆ. ಮಂದಿರಗಳಲ್ಲಿ ಸ್ಫಟಿಕ ಶಿಲೆಯನ್ನು ಬಳಸಲಾಗಿದೆ. ಈ ಮಂದಿರಗಳಲ್ಲಿ ಸ್ಫಟಿಕ ಶಿಲೆಯ ಕಂಬಗಳು ಮತ್ತು ಹೊರಚಾಚಿದಂತಿರುವ ಗುಮ್ಮಟಗಳಿರುವ ಹೊರ ಮಂಟಪ, ಸಣ್ಣ ಶಿಖರಗಳಿಂದ ಕೂಡಿದ ಭೂಮಿಜ ಶೈಲಿಯ ಶಿಖರಗಳು ಇವೆ. ಹೊರ ಮಂಟಪದಲ್ಲಿ ಗೋಡೆಗಳ ಮೇಲೆ, ಅಲ್ಲಿರುವ ಶಾಸನ ತಿಳಿಸುವಂತೆ, 1715ರಲ್ಲಿ ಜೀರ್ಣೋದ್ಧಾರ ಮಾಡಿದಾಗ ರೂಪಿಸಲಾದ ವರ್ಣಚಿತ್ರಗಳಿವೆ.

ಈ ದೇವಾಲಯಗಳಲ್ಲದೆ ಮೇಲೆ ಹೇಳಿದ ಎರಡು ಕಾಫಿರ ಕೋಟೆಗಳ ಸುತ್ತಲಿರುವ ರಕ್ಷಣಾ ಕೋಟೆಗಳು ಗಮನಾರ್ಹ. ಸುಭದ್ರವಾಗಿ ಕಟ್ಟಿರುವ ಈ ಕೋಟೆಗಳು ಬಹುಶಃ ಮುಸ್ಲಿಮ್ ಆಕ್ರಮಣ ಕಾಲಕ್ಕೂ ಹಿಂದಿನವೆಂದು ಹೇಳಬಹುದಾಗಿದೆ.

ಇಸ್ಲಾಮಿ ವಾಸ್ತು ಕಟ್ಟಡಗಳನ್ನು ಪರದೆಯಂತಿರುವ ಗೋಡೆಯಲ್ಲಿರುವ ಮಿಹ್ರಾಬ್ ಪ್ರಾರ್ಥನ ಹಜಾರ ಮತ್ತು ವಿಶಾಲಪ್ರಾಂಗಣಗಳಿರುವ ಮಸೀದಿ, ಜನರ ವಿಹಾರಕ್ಕೆ ಬಳಸುವ ಆವರಣ ಅಥವಾ ಮೃತರ ಸಮಾಧಿ ಎಂದು ವರ್ಗೀಕರಿಸಬಹುದು. 8ನೆಯ ಶತಮಾನದಲ್ಲಿ ಅರಬರು ಸಿಂಧ್‍ನಲ್ಲಿ ಮೊದಲಿಗೆ ಇಸ್ಲಾಮೀ ವಾಸ್ತುಶಿಲ್ಪವನ್ನು ತಂದರೆಂಬುದು ಚರ್ಚಾಸ್ಪದವಾದ ವಿಷಯ. ಆದರೆ 1000ದಿಂದ ಕ್ರಮೇಣ ಪರ್ಷಿಯದ ಪ್ರಭಾವದಿಂದ ಪಾಕಿಸ್ತಾನ ಪ್ರದೇಶದಲ್ಲಿ ಆ ಶೈಲಿಯ ಕಟ್ಟಡಗಳು ತಲೆದೋರಿದುವೆಂದು ಹೇಳಬಹುದಾದರೂ ಆ ಕಾಲದವು ಹೆಚ್ಚಾಗಿ ಉಳಿದುಬಂದಿಲ್ಲ. ಒಂದು ಗಮನಾರ್ಹ ಸಂಗತಿ ಎಂದರೆ, ಅರಬ್ಬಿ ಮರಳ್ಗಾಡಿನಲ್ಲಿ ಆ ಪರಿಸರಕ್ಕೆ ಸೂಕ್ತವಾದ ರೀತಿಯಲ್ಲಿ ಹುಟ್ಟಿದ ವಾಸ್ತುಶೈಲಿ ಇಲ್ಲಿಯ ಬೆಟ್ಟಗಾಡು ಪ್ರದೇಶದಲ್ಲಿ ಸಮಂಜಸ ಮಾರ್ಪಾಡುಗಳೊಂದಿಗೆ ಬೆಳೆದು ಬಂದಿರುವುದು. ಭಾರತ ಉಪಖಂಡದಲ್ಲಿ ಇದರ ಬೆಳೆವಣಿಗೆಯ ಪರಾಕಾಷ್ಠೆಯನ್ನು ಅಕ್ಬರನ ರಾಜಧಾನಿ ಫತೇಪುರ ಸಿಕ್ರಿಯಲ್ಲಿ(1570) ಕಾಣಬಹುದು.

ಮುಸ್ಲಿಂ ಪ್ರವೇಶಕಾಲದಿಂದ (1001) ಮೊಗಲರ ಪ್ರಾರಂಭಕಾಲದವರೆಗಿನ (1526) ಕಟ್ಟಡಗಳ ಅವಶೇಷಗಳು ಪಾಕಿಸ್ತಾನ ಪ್ರದೇಶದಲ್ಲಿ ಹೆಚ್ಚಾಗಿ ಉಳಿದು ಬಂದಿಲ್ಲ. ಆ ಕಾಲದವಾಗಿರಬಹುದಾದ ಕೆಲವು ಕಟ್ಟಡಗಳನ್ನು ಈಚಿನ ವರ್ಷಗಳಲ್ಲಿ ಜೀರ್ಣೋದ್ದಾರಗೊಳಿಸಿರುವುದರಿಂದ ಅವುಗಳ ಮೂಲರೂಪವನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟಸಾಧ್ಯ. ಆದಾಗ್ಯೂ ಮುಲ್ತಾನಿನಲ್ಲಿ ಆಗಿನ ಕೆಲವು ಕಟ್ಟಡಗಳನ್ನು ಗುರ್ತಿಸಲಾಗಿದೆ. ಅವುಗಳಲ್ಲಿ ಪ್ರಾಚೀನತಮವಾದ ಷಾ ಯೂಸುಫ್ ಗರ್ದಿಜಿಯ ಸಮಾಧಿ (1152) ಆಯಾಕಾರದ ಇಟ್ಟಿಗೆ ಕಟ್ಟಡ. ಅದರ ಹೊರಭಾಗವನ್ನು ಜ್ಯಾಮಿರೀಯ ಚಿತ್ರಗಳಿದ್ದ ಗಾಜಿನ ಹೆಂಚುಗಳಿಂದ ಅಲಂಕರಿಸಲಾಗಿತ್ತು. ಅದರ ಒಂದು ತುದಿಯಲ್ಲಿ ಮಿಹ್ರಾಬ್ ಇತ್ತು. ಸುಮಾರು 1320-24ರ ನಡುವೆ ನಿರ್ಮಿತವಾದ ರುಕ್ನಿ ಅಲಮ್‍ನ ಸಮಾಧಿ ಘಿಯಾಸುದ್ದೀನನ ಆದೇಶದ ಮೇರೆ ನಿರ್ಮಿತವಾದ ಕಟ್ಟಡ. ಆಗಿನ ಕಾಲಕ್ಕೆ ಆ ಪ್ರದೇಶದಲ್ಲಿ ಅದು ಬಹಳ ಅಂದವಾದ ವಾಸ್ತುನಿರ್ಮಾಣವೆನಿಸಿತ್ತು. ಕೋಟೆಯ ದಿಬ್ಬದ ವಾಯವ್ಯ ಮೂಲೆಯಲ್ಲಿ 35 ಕಿಮೀ. ಎತ್ತರದ ಆ ಕಟ್ಟಡಭವ್ಯವಾಗಿತ್ತು. ಎಂಟು ಪಾಶ್ರ್ವಗಳ ಕಟ್ಟಡದ ಪ್ರತಿ ಮೂಲೆಯಲ್ಲೂ ಮಿನಾರತುಗಳಿದ್ದುವು. ಗಾಜಿನ ಹೆಂಚುಗಳು ಮತ್ತು ಕೆತ್ತಿದ ಮರದ ಭಾಗಗಳು ಅದನ್ನು ಅಂದಗೊಳಿಸಿದ್ದುವು. ಅನಂತರದ ಕಾಲದ ದೆಹಲಿಯ ಸಮಾಧಿಗಳ ಮುನ್ನೋಟವನ್ನು ಒದಗಿಸುವ ಈ ಭಾರತೀಯ ಇಸ್ಲಾಮಿ ನಿರ್ಮಾಣ ನಿಲುನೋಟದಲ್ಲಿ ಮೂರು ಹಂತಗಳನ್ನು ಒಳಗೊಂಡ ಗಮನಾರ್ಹ ಕಟ್ಟಡವಾಗಿತ್ತು. ಈ ಮಧ್ಯ ಯುಗ ಮತ್ತು ಮೊಗಲರ ಕಾಲದಲ್ಲಿ ಸಿಂಧ್‍ನಲ್ಲಿ ಇಸ್ಲಾಮಿ ಕಟ್ಟಡ ಕಲೆ ಪ್ರತ್ಯೇಕ ದಾರಿಯಲ್ಲಿ ಬೆಳೆದುಬಂತು. ಅವುಗಳಲ್ಲಿ ಅತ್ಯಂತ ಪ್ರಾಚೀನವಾದ್ದು ತಟ್ಟದಲ್ಲಿರುವ ಮಸೀದಿ (1588). ಪ್ರಾರ್ಥನಮಂದಿರ, ಪ್ರಾಂಗಣ, ಮಂದಿರದ ಮೇಲೆ ಗುಮ್ಮಟಗಳು ಇವುಗಳಿಂದ ಕೂಡಿದ ಈ ಇಟ್ಟಿಗೆಯ ಕಟ್ಟಡಗಳಲ್ಲಿ ಗಾಜಿನ ಹೆಂಚುಗಳ ಅಲಂಕಾರ ಮನೋಹರವಾಗಿತ್ತು. ಷಹಜಹಾನನ ಆದೇಶದ ಮೇರೆಗೆ 1644ರಲ್ಲಿ ಕಟ್ಟಿಸಿದ ಜಾಮಿ ಮಸೀದಿಯನ್ನು ಕಲ್ಲಿನ ತಳಪಾಯದ ಮೇಲೆ ಇಟ್ಟಿಗೆಯಲ್ಲಿ ನಿರ್ಮಿಸಲಾಗಿದೆ. ಪ್ರಾರ್ಥನಮಂದಿರದ ಮೇಲಿನ ಗುಮ್ಮಟ ಬಹಳ ದೊಡ್ಡದಾಗಿದೆ. ಪ್ರವೇಶದ್ವಾರದ ಇಕ್ಕೆಲಗಳಲ್ಲಿರುವ ಗುಮ್ಮಟಗಳು ಸಣ್ಣವು. ಅದರ ಚಾವಣಿಯಲ್ಲಿ ಒಟ್ಟು 93 ಗುಮ್ಮಟಗಳಿವೆ. ಅದರ ಮುಂಭಾಗದಲ್ಲಿ ಗೋಡೆಗಳಿಗೆ ಹೆಂಚುಗಳನ್ನು ಹೊಂದಿಸಲಾಗಿದೆ. ಉಳಿದ ಗೋಡೆಗಳ ಹೊರ ಮತ್ತು ಒಳಭಾಗಗಳಲ್ಲಿ ಕೆಲವು ವರ್ಣಚಿತ್ರಗಳಿವೆ. ಇದು ಭಾರತ ಉಪಖಂಡದಲ್ಲಿ ಪರ್ಷಿಯನ್ ಕಲೆಯ ಅತ್ಯುತ್ತಮ ಪ್ರತೀಕವಾಗಿದೆ. ತಟ್ಟದ ವಾಯವ್ಯಕ್ಕೆ ಸುಮಾರು 5 ಕಿಮೀ. ದೂರದಲ್ಲಿರುವ ಸಮ್ಮಾ ನಗರದಲ್ಲಿ (ಸಾಮೂರ) 15ನೆಯ ಶತಮಾನದ ತಟ್ಟದ ರಜವಂಶೀಯರ ಮತ್ತು ಮುಸ್ಲಿಮ್ ಸಂತರ ಸಾವಿರಾರು ಸಮಾಧಿಗಳಿವೆ. ಕಲ್ಲಿನಲ್ಲಿ ಕಟ್ಟಿದ ಅಥವಾ ಇಟ್ಟಿಗೆ ಮತ್ತು ಗಾಜಿನ ಹೆಂಚುಗಳಿಂದ ನಿರ್ಮಿಸಿದ ಈ ಸಮಾಧಿಗಳನ್ನು 16-17ನೆಯ ಶತಮಾನಗಳ ಸುಮಾರಿಗೆ ನಿರ್ದೇಶಿಸಲಾಗಿದೆ. ಜಾಮ್ ನಿಜಾಮುದ್ದೀನನ ಸಮಾಧಿ(1508) ಇವುಗಳಲ್ಲೊಂದು. ಇದು ಚದರ ಕಟ್ಟಡ. ಇದನ್ನು ಮೊದಲಿನ ಹಿಂದೂ ದೇವಾಲಯಗಳ ಕಟ್ಟಡಗಳ ಕಲ್ಲುಗಳಿಂದ ನಿರ್ಮಿಸಲಾಗಿದೆ. ಇಲ್ಲಿಯ ಸಮಾಧಿಗಳ ಕಲ್ಲುಗೋಡೆಗಳ ಮೇಲೆ ಗಾಜಿನ ಹೆಂಚುಗಳ ಮೇಲಿನ ಅಲಂಕಾರದ ಅನುಕರಣೆಯಿದೆ. ಇಲ್ಲಿರುವ ಬಹಳ ದೊಡ್ಡ ಕಟ್ಟಡವೆಂದರೆ ಮಿರ್ಜಾ ಈಸಾ ಟರ್ಖಾನನ ಸಮಾಧಿ (1644). ಇದು ಅಷ್ಟು ಅಂದವಾದ ಕಟ್ಟಡವೇನಲ್ಲ. ಇಲ್ಲಿಯ ಸಮಾಧಿಗಳು ಪ್ರಾದೇಶಿಕ ವಾಸ್ತುಶೈಲಿಯ ಪ್ರತೀಕಗಳು. ಇರಾನಿನ ಪ್ರಭಾವಕ್ಕೊಳಗಾದ ಆ ಪ್ರದೇಶದ ಸಂಪ್ರದಾಯವನ್ನು ಇವು ಪ್ರತಿಬಿಂಬಿಸುತ್ತವೆ.

ಮೊಗಲರ ಕಾಲದ ಕಟ್ಟಡಗಳ ಪೈಕಿ ಲಾಹೋರಿನಲ್ಲಿರುವವು ಪ್ರಧಾನವಾಗಿದೆ. ಅಲ್ಲಿರುವ ಹಲವಾರು ಕಟ್ಟಡಗಳು ಮೊಗಲ್ ವಾಸ್ತುಶೈಲಿಯ ಉತ್ತಮ ಪ್ರತೀಕಗಳು. ಆ ಶೈಲಿಯ ಲಕ್ಷಣಗಳೆಂದರೆ ದುಂಡಾದ ಜೋಡು ಗುಮ್ಮಟಗಳು, ಹಿಂದು ಸಂಪ್ರದಾಯಕ್ಕೆ ಅನುಗುಣವಾಗಿ ಅನೇಕ ಪ್ರಾಂಗಣಗಳ ಬಳಕೆ, ಹಿಂದು ಸಂಪ್ರದಾಯದ ಚಾಚು ಕಿಟಕಿಗಳ ಬಳಕೆ, ಮತ್ತು ಮಥುರಾ ಪ್ರದೇಶದ ಕೆಂಪು ಮರಳ್ಗಲ್ಲಿನ ಬಳಕೆ. ಅದರ ಗೋಡೆಗಳ ಮೇಲೆ ಬಿಳಿ ಮತ್ತು ಕಪ್ಪು ಸ್ಫಟಿಕ ಶಿಲೆಯ ಅಲಂಕರಣವಿದೆ. ಪರ್ಷಿಯದ ಹಲವು ಬಣ್ಣದ ಗಾಜಿನ ಹೆಂಚುಗಳಿಂದ ಮಾಡುತ್ತಿದ್ದ ಅಲಂಕರಣವನ್ನು ಈ ಮೂಲಕ ಭಾರತ ಉಪಖಂಡದಲ್ಲಿ ಸಾಧಿಸಲಾಯಿತು. ಷಹಜಹಾನನ ಕಾಲದಲ್ಲಿ ಹಿಂದೂ ಸಂಪ್ರದಾಯದ ಪ್ರಾಬಲ್ಯವನ್ನು ಸ್ವಲ್ಪ ಮಟ್ಟಿಗೆ ನಿರೋಧಿಸಿ ಅಮೃತಶಿಲೆಯ ಹಗುರವಾದ ಕಟ್ಟಡಗಳನ್ನು ನಿರ್ಮಿಸಲಾಯಿತು. ಅನೇಕ ಕೋಡುಗಳಿರುವ ಕಮಾನುಗಳು, ಚಿತ್ರ ಕೊರೆತ ಕಲೆಯಿಂದ ನಿರ್ಮಿಸಿದ ಹೂಬಳ್ಳಿಗಳ ಮಾದರಿಗಳು ಮತ್ತು ಪರ್ಷಿಯನ್ ಮೂಲದ ಬಣ್ಣದ ಹೆಂಚುಗಳ ಅಲಂಕರಣ ಇವು ಅಂಥ ಕಟ್ಟಡಗಳಲ್ಲಿ ಪ್ರಧಾನವಾಗಿದ್ದುವು. ಆಗ್ರದ ತಾಜ್‍ಮಹಲ್ ಈ ಶೈಲಿಯ ಉತ್ತಮ ನಿದರ್ಶನ.

ಪಾಕಿಸ್ತಾನ ಪ್ರದೇಶದಲ್ಲಿ ಮೊಗಲರ ಪ್ರಾಚೀನತಮ ನಿರ್ಮಾಣ ರೋಹ್ತಾಸ್ ಕೋಟೆ(1539). ಅದರ ಸುತ್ತಳತೆ 3.2 ಕಿಮೀ ಗೋಡೆಗಳು ಬುಡದಲ್ಲಿ ಸುಮಾರು 3 ಮೀ ದಪ್ಪವಾಗಿವೆ. ಇವುಗಳಲ್ಲಿ ಬಂದೂಕು ಮತ್ತು ಫಿರಂಗಿಗಳಿಗಾಗಿ ಮತ್ತು ಕಾದ ಸೀಸವನ್ನು ಸುರಿಯಲು ರಂಧ್ರಗಳಿವೆ. ಕೋಟೆಯ ಉತ್ತರಭಾಗವನ್ನು ಗೋಡೆಯಿಂದ ವಿಭಾಗಿಸಿ ಪ್ರತ್ಯೇಕ ಒಳಕೋಟೆಯನ್ನು ನಿರ್ಮಿಸಲಾಗಿದೆ. ಅದರೊಳಗೆ ಒಂದು ದೊಡ್ಡ ಭವನ ಮತ್ತು ಸೋಪಾನಗಳಿಂದ ಕೂಡಿದ ಎರಡು ಬಾವಿಗಳಿವೆ.

ಲಾಹೋರಿನ ಕೋಟೆ ಮತ್ತೊಂದು ಗಮನಾರ್ಹ ಕಟ್ಟಡ. ಅಕ್ಬರನ ಪೂರ್ವಕಾಲದ ನಿರ್ಮಾಣಗಳು ಇಲ್ಲಿದ್ದಿರಬಹುದಾದರೂ ಅವುಗಳ ಮೇಲೆ ಅವನು ಕಟ್ಟಿಸಿದ ಕೋಟೆ ಗೋಡೆಗಳು ಈಗ ಕಾಣುತ್ತವೆ. ರಣಜಿತ್ ಸಿಂಗ್ ಅವನ್ನು 1812ರಲ್ಲಿ ನವೀಕರಿಸಿದನೆಂದು ಹೇಳಲಾಗಿದೆ. ಅದರ ವಿಸ್ತೀರ್ಣ ಪೂರ್ವ-ಪಶ್ಚಿಮವಾಗಿ 2 ಕಿಮೀ. ಮತ್ತು ಉತ್ತರ ದಕ್ಷಿಣವಾಗಿ 1.2 ಕಿಮೀ ಅದರಲ್ಲಿ 13 ಹೆಬ್ಬಾಗಿಲುಗಳಿವೆ. ಕೋಟೆಯೊಳಗೆ ವಾಯವ್ಯ ಮೂಲೆಯಲ್ಲಿ ಬಾದಶಾಹಿ ಮಸೀದಿ ಮತ್ತು ಒಳಕೋಟೆ, ಮತ್ತು ಎರಡು ಮಸೀದಿಗಳು, ಒಬ್ಬ ಶ್ರೀಮಂತನ ನಿವಾಸ- ಇವು ಮುಖ್ಯ ನಿರ್ಮಾಣಗಳು. ಮೊಗಲರ ಕಟ್ಟಡಗಳಲ್ಲಿ ಬಹುಭಾಗ ಅಕ್ಬರ್-ಜಹಾಂಗೀರರ ಮತ್ತು ಷಹಜಹಾನ್-ಔರಂಗ್eóÉೀಬರ ಕಾಲಕ್ಕೆ ಸೇರುತ್ತವೆ.

ಕೋಟೆಯ ಹೊರಭಾಗದಲ್ಲಿರುವ ಷೇಖ್ ಮುಸಾ ಅಹಂಗರನ ಸಮಾಧಿ(16ನೆಯ ಶತಮಾನ) 7.6 ಮೀ ಚದರದ ಇಟ್ಟಿಗೆ ಕಟ್ಟಡ. ಅದರ ಹೆಂಚಿನ ಅಲಂಕರಣ ಈ ಪ್ರದೇಶದಲ್ಲಿ ಬಹಳ ಹಳೆಯದು. ಒಳಕೋಟೆಯ ಪೂರ್ವಕ್ಕಿರುವ ಮರಿಯಂ ಜûಮಾನಿ ಮಸೀದಿ (1614) ಜಹಾಂಗೀರನ ಕಾಲದ ಸರಳ ಕಟ್ಟಡ. ಅದರ ನಾಲ್ಕು ಮೂಲೆಗಳಲ್ಲಿ ಅಷ್ಟಕೋನ ಗುಮ್ಮಟಗಳಿವೆ. ಅದರ ಒಳಗೋಡೆಗಳ ಮೇಲಿರುವ ವರ್ಣ ಚಿತ್ರಗಳು ಸೂಕ್ಷ್ಮ ಹಾಗೂ ನೈಜವಾಗಿ ಇವೆ.

ಲಾಹೋರಿನ ಆಗ್ನೇಯದಲ್ಲಿ 5.6 ಕಿಮೀ. ದೂರದಲ್ಲಿರುವ ಶಾಲಿಮಾರ್ ಉದ್ಯಾನವನ್ನು 1637ರಲ್ಲಿ ಷಹಜಹಾನ್ ನಿರ್ಮಿಸಿದನೆಂದು ಊಹಿಸಲಾಗಿದೆ. ಇದೊಂದು ಸುಂದರವಾದ ವಿಹಾರ ಸ್ಥಳವಾಗಿತ್ತು. ಈಗ ಇದು ಭಗ್ನಾವಸ್ಥೆಯಲ್ಲಿದೆ.

ಒಳಕೋಟೆಯ ಪಶ್ಚಿಮಕ್ಕಿರುವ ಬಾದ್‍ಶಾಹಿ ಮಸೀದಿ (1673-74) ಔರಂಗ್eóÉೀಬನ ಕಾಲದ ಪ್ರಧಾನ ಕಟ್ಟಡ. ಇದು ಅಂಥ ಗಮನಾರ್ಹ ಕಟ್ಟಡವಲ್ಲದಿದ್ದರೂ ಪ್ರಮಾಣಬದ್ಧವಾಗಿದೆ. ಇದು 161.5 ಮೀ ಚದರವಾಗಿದೆ. ಇದು ಎತ್ತರವಾದ ಜಗತಿಯ ಮೇಲೆ ನಿರ್ಮಿಸಲಾದ ಸುಂದರ ಅಲಂಕರಣಗಳಿಂದ ಕೂಡಿದ ಮಧ್ಯಮ ವರ್ಗದ ಪ್ರಾರ್ಥನ ಗೃಹವೆನಿಸಿಕೊಂಡಿದೆ. ಇನ್ನೂ ಹಲವು ಮಸೀದಿಗಳು, ಸಮಾದಿಗಳು, ಗೋಪುರ-ಮಿನಾರತುಗಳು ಲಾಹೋರಿನ ಸುತ್ತಮುತ್ತಲೂ ಮೊಗಲರ ವಾಸ್ತುಕಲೆಗೆ ಸಾಕ್ಷಿಗಳಾಗಿ ನಿಂತಿವೆ.

ಶಿಕ್ಷಣ

[ಬದಲಾಯಿಸಿ]

1947 ವಿಭಜನೆಗೆ ಮುಂಚೆ ಅಸ್ತಿತ್ವದಲ್ಲಿದ್ದ ಇಂಗ್ಲಿಷ್ ಶಿಕ್ಷಣ ಪದ್ಧತಿಯೇ ಇಂದೂ ಪಾಕಿಸ್ತಾನದಲ್ಲಿ ಅಷ್ಟಾಗಿ ಬದಲಾವಣೆಯಾಗದೆ ನಡೆದುಬರುತ್ತಿದೆ. ಅಲ್ಲಿ ಅಂದಿಗಂದಿಗೆ ಸರ್ಕಾರಗಳು ಬದಲಾಗುತ್ತ ಲಷ್ಕರೀ ಆಡಳಿತ ಅನುಷ್ಠಾನಕ್ಕೆ ಬಂದು ದೀರ್ಘ ಕಾಲ ಉಳಿದುಕೊಂಡದ್ದರ ಫಲವಾಗಿ ಸಾಮಾಜಿಕ ಕಲ್ಯಾಣಕಾರ್ಯ ಪೋಷಕವಾಗಬಲ್ಲ ಶಿಕ್ಷಣ ಅಷ್ಟಾಗಿ ಪ್ರಗತಿ ಸಾಧಿಸಿಲ್ಲ. ವೈವಿಧ್ಯದಲ್ಲಾಗಲಿ ವಿಸ್ತರಣೆಯಲ್ಲಾಗಲಿ ಮೂವತ್ತು ವರ್ಷಗಳ ದೀರ್ಘಾವಧಿಯಲ್ಲಿ ಆಗಬೇಕಾದಷ್ಟು ಆಗಿಲ್ಲ. ಪೂರ್ವ ಪಾಕಿಸ್ತಾನ ಪ್ರತ್ಯೇಕವಾದ ಮೇಲಂತು ಆರ್ಥಿಕ ಅಡಚಣೆಗಳಿಂದ ಶಿಕ್ಷಣ ಪ್ರಗತಿ ಕುಂಠಿತವಾಯಿತೆಂದೇ ಹೇಳಬೇಕು. ಪಾಕಿಸ್ತಾನದಲ್ಲಿ ಶಿಕ್ಷಣ 4 ಅಂತಸ್ತುಗಳಲ್ಲಿ ವ್ಯವಸ್ಥೆಗೊಂಡಿದೆ. 5 ವರ್ಷದ ಪ್ರಾಥಮಿಕ ಶಿಕ್ಷಣ, 5 ವರ್ಷದ ಸೆಕೆಂಡರಿ ಶಿಕ್ಷಣ, 2 ವರ್ಷದ ಇಂಟರ್‍ಮೀಡಿಯೇಟ್ ಶಿಕ್ಷಣ ಮತ್ತು ವಿಶ್ವವಿದ್ಯಾಲಯದ ಶಿಕ್ಷಣ, ಸೆಕೆಂಡರಿ ಹಾಗೂ ಇಂಟರ್‍ಮೀಡಿಯೇಟ್ ಹಂತದ ತಾಂತ್ರಿಕ ಶಿಕ್ಷಣವೂ ಪದವೀ ಮಟ್ಟದ ವೃತ್ತಿಶಿಕ್ಷಣವೂ ಅಸ್ತಿತ್ವದಲ್ಲಿವೆ. ಸಾಮಾನ್ಯವಾಗಿ ಹತ್ತು ವರ್ಷದ ಶಾಲಾ ಶಿಕ್ಷಣದ ಅನಂತರ ಆರಂಭವಾಗುವ ತಾಂತ್ರಿಕ ಶಿಕ್ಷಣ ಕೈಗಾರಿಕಾ ಶಾಲೆ ಮತ್ತು ಪಾಲಿಟೆಕ್ನಿಕ್‍ಗಳಲ್ಲಿ ಉಂಟು. ಇವನ್ನು ಸರ್ಕಾರದ ತಾಂತ್ರಿಕ ಇಲಾಖೆ, ರೈಲ್ವೆ, ಕಾರ್ಮಿಕ ಸೈನಿಕ ಇಲಾಖೆಗಳೂ ಕೆಲವು ಖಾಸಗಿ ಸಂಸ್ಥೆಗಳೂ ನಡೆಸುತ್ತವೆ. ವಿಶ್ವವಿದ್ಯಾಲಯ ಅಂತಸ್ತಿನ ಎಂಜಿನಿಯರಿಂಗ್, ನ್ಯಾಯ, ವೈದ್ಯ, ವಾಣಿಜ್ಯ, ಕೃಷಿ- ಈ ವೃತ್ತಿ ಶಿಕ್ಷಣವನ್ನು ವಿಶಿಷ್ಟ ಸಂಸ್ಥೆಗಳಲ್ಲೂ ವಿಶ್ವ ವಿದ್ಯಾಲಯದ ಕಾಲೇಜುಗಳಲ್ಲೂ ಉಂಟು.

ಪ್ರಾಥಮಿಕ ಶಿಕ್ಷಣದ ಆಡಳಿತವನ್ನು ನಾಲ್ಕು ಪ್ರಾಂತ್ಯಗಳೂ ಪ್ರತ್ಯೇಕವಾಗಿ ನಡೆಸುತ್ತವೆ. ಶಿಕ್ಷಣ ಶಾಖೆಯ ಅಧಿಕಾರಿಗಳೂ ತನಿಖಾಧಿಕಾರಿಗಳೂ ಪ್ರಾಥಮಿಕ ಶಿಕ್ಷಣದ ಆಡಳಿತವನ್ನು ನಡೆಸುತ್ತಾರೆ. ಸೆಕೆಂಡರಿ ಮತ್ತು ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಜಿಲ್ಲಾ ಬೋರ್ಡಿನವರು ಅದಕ್ಕಾಗಿ ರಚಿಸಿರುವ ಸಮಿತಿಗಳ ಮೂಲಕ ನಡೆಸುತ್ತಾರೆ. ನಿರ್ದೇಶಕರುಗಳು ಸಾರ್ವಜನಿಕ ಶಿಕ್ಷಣಶಾಖೆಯ ನಿರ್ದೇಶಕರಿಗೆ ಹೊಣೆಗಾರರಾಗಿರುತ್ತಾರೆ. ಸರ್ಕಾರದ ಹಾಗೂ ಸರ್ಕಾರದ ಧನ ಸಹಾಯ ಪಡೆಯುವ ಖಾಸಗಿ ಸೆಕೆಂಡರಿ ಶಾಲೆಗಳ ಆಡಳಿತಕ್ಕಾಗಿ ಸಲಹಾ ಸಮಿತಿಗಳನ್ನು ಏರ್ಪಡಿಸಿದೆ.

ವಿಶ್ವವಿದ್ಯಾಲಯಗಳು ರಾಜ್ಯಶಾಸನಗಳಿಂದ ಸ್ಥಾಪನೆಯಾಗಿ ಅದಕ್ಕಾಗಿ ರೂಪಿಸಿರುವ ಕಾನೂನಿನಂತೆ ಕೆಲಸಮಾಡುತ್ತವೆ. ಅಯಾಪ್ರಾಂತ್ಯದ ಗವರ್ನರು ಕುಲಾಧಿಪತಿಯಾಗಿರುತ್ತಾನೆ. ಕುಲಪತಿಗಳನ್ನು ಆತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನಾಗಿ ನೇಮಿಸುತ್ತಾನೆ. ಅವರ ಸಹಾಯಕ್ಕಾಗಿ ಸಿಂಡಿಕೇಟ್ ಮತ್ತು ಅಕಾಡಮಿಕ್ ಕೌನ್ಸಿಲ್‍ಗಳು ಇವೆ. 1965ರಲ್ಲಿ ಸರ್ಕಾರ ವಿಶ್ವವಿದ್ಯಾಲಯದ ಕಾರ್ಯಕ್ರಮಗಳಲ್ಲಿ ಸಮನ್ವಯವನ್ನು ಸಾಧಿಸಲು ಮಂಡಲಿಯೊಂದನ್ನು ರಚಿಸಿತು. ಈಚೆಗೆ ಇಸ್ಲಾಮಾಬಾದ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

ಪ್ರಾಥಮಿಕ ಮತ್ತು ಸೆಕೆಂಡರಿ ಶಿಕ್ಷಣದ ವೆಚ್ಚವನ್ನು ಆಯಾ ಪ್ರಾಂತ್ಯವೇ ವಹಿಸುತ್ತಿದೆ. ಶಾಲೆಗಳು ಶುಲ್ಕವನ್ನು ವಿಧಿಸುತ್ತವೆ, ಖಾಸಗಿ ಶಾಲೆಗಳಲ್ಲಿ ಶುಲ್ಕ ಸರ್ಕಾರದ ಶಾಲೆಗಳಿಗಿಂತ ಹೆಚ್ಚಾಗಿರುತ್ತದೆ. ಸರ್ಕಾರದ ನಿಯಮಾವಳಿಯನ್ನು ಅವು ಅನುಸರಿಸಿದರೆ ಮಾತ್ರ ಸರ್ಕಾರದ ಅನುದಾನ ದೊರಕುತ್ತದೆ. ವಿಶ್ವವಿದ್ಯಾಲಯದ ಹಾಗೂ ಸರ್ಕಾರಿ ಕಾಲೇಜುಗಳ ವೆಚ್ಚವನ್ನು ಶುಲ್ಕದಿಂದಲೂ ಸರ್ಕಾರದ ಬೊಕ್ಕಸದಿಂದಲೂ ನಿರ್ವಹಿಸಲಾಗುತ್ತಿದೆ. ಇಡೀ ವೆಚ್ಚದಲ್ಲಿ ವಿದ್ಯಾರ್ಥಿಗಳು ಕೊಡುವ ಶುಲ್ಕ ಸುಮಾರು 7% ಆಗುತ್ತದೆ. ತಾಂತ್ರಿಕಶಾಲೆಗಳಲ್ಲೂ ಅಧ್ಯಾಪಕರ ಪ್ರಶಿಕ್ಷಣ ಸಂಸ್ಥೆಗಳಲ್ಲೂ ಶುಲ್ಕ ಕಡಿಮೆಯಿರುವುದಲ್ಲದೆ ವಿದ್ಯಾರ್ಥಿಗಳಿಗೆ ವೇತನವನ್ನೂ ನೀಡಲಾಗುತ್ತದೆ.

ಪಾಕಿಸ್ತಾನದ ರಾಷ್ಟ್ರೀಯ ಶಿಕ್ಷಣ ಆಯೋಗ 1960ರಲಿ ವಿದ್ಯಾವಂತ ಜನ ಓದು ಬರಹ, ಲೆಕ್ಕಾಚಾರಗಳನ್ನು ಕಲಿತಿರಬೇಕು; ತನ್ನ ಹೊರಪ್ರಪಂಚದ ಪರಿಜ್ಞಾನ ಪಡೆದಿರಬೇಕು; ತನ್ನ ನಿತ್ಯವ್ಯವಹಾರಗಳನ್ನು ನಡೆಸುತ್ತ ನಿತ್ಯದ ಸಮಸ್ಯೆಗಳನ್ನು ಜಾಣತನದಿಂದ ವಿವೇಚಿಸುವ ಶಕ್ತಿ ಪಡೆದಿರಬೇಕು; ತಮ್ಮ ದೈಹಿಕ ಮಾನಸಿಕ ಹಾಗೂ ನೈತಿಕ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರಬೇಕು; ಆರ್ಥಿಕ ಜೀವನಕ್ಕೆ ಅಗತ್ಯವಾದ ವೃತ್ತಿ ಕೌಶಲವನ್ನೂ ಜ್ಞಾನಾರ್ಜನೆಗೆ ಅಗತ್ಯವಾದ ಆಸಕ್ತಿ ಕುತೂಹಲಗಳನ್ನೂ ಪಡೆದಿರಬೇಕು ಎಂದೂ ಈ ಗೊತ್ತು ಗುರಿಗಳನ್ನು ಸಾಧಿಸಲು ನೆರವಾಗುವಂತೆ ಶಿಕ್ಷಣ ಪದ್ಧತಿ ವ್ಯವಸ್ಥೆಗೊಳ್ಳಬೇಕೆಂದೂ ಸೂಚಿಸಿದೆ.

ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ಉರ್ದು ಶಿಕ್ಷಣಮಾಧ್ಯಮವಾಗಿದೆ. ಪೂರ್ವ ಪಾಕಿಸ್ತಾನ ಪ್ರತ್ಯೇಕವಾಗುವಮುಂಚೆ ಕೆಲವು ಮುಖ್ಯ ನಗರಗಳಲ್ಲಿ ಬಂಗಾಳಿ ಭಾಷೆಯ ಮಾಧ್ಯಮವೂ ಅಸ್ತಿತ್ವದಲ್ಲಿತ್ತು. ಈಚೆಗೆ ಅದು ಬಹುಮಟ್ಟಿಗೆ ಕೊನೆಗೊಂಡಿದೆ. ವಿಶ್ವವಿದ್ಯಾಲಯದ ಅಂತಸ್ತಿನಲ್ಲಿ ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಗಿದೆ. ಆದರೆ ಉರ್ದುವನ್ನು ಶಿಕ್ಷಣಮಾಧ್ಯಮವನ್ನಾಗಿ ಮಾಡಬೇಕೆಂಬ ಬಯಕೆ ಎಲ್ಲೆಲ್ಲೂ ಇದ್ದರೂ ಅಗತ್ಯವೆನಿಸುವ ಪಠ್ಯಪುಸ್ತಕಾದಿ ಸಲಕರಣೆಗಳು ಇನ್ನೂ ಸಿದ್ಧವಾಗಿಲ್ಲ. ಕೆಲವು ಸೆಕೆಂಡರಿ ಶಾಲೆಗಳಲ್ಲೂ ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಗಿದೆ.

ಪ್ರಾಥಮಿಕ ಶಾಲೆಯ ಶಿಕ್ಷಣದ ಅನಂತರ ನಡೆಯುವ ಸಾರ್ವತ್ರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸೆಕೆಂಡರಿ ಶಾಲೆಗೆ ಸೇರಿಸಿಕೊಳ್ಳುವರು. ಕೆಲವು ಶಾಲೆಗಳು ತಾವೇ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ರ್ತಿರ್ಣರಾದವರನ್ನು ಸೇರಿಸಿಕೊಳ್ಳುವುದುಂಟು. ಹತ್ತನೆಯ ತರಗತಿಯ ಅನಂತರ ನಡೆಯುವ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಸುಮಾರು 2/3ರಷ್ಟು ವಿದ್ಯಾರ್ಥಿಗಳು ಪ್ರಥಮ ಅಥವಾ ದ್ವಿತೀಯ ತರಗತಿಯಲ್ಲಿ ಉತ್ತೀರ್ಣರಾಗುವರು. ಅವರು ಮಾತ್ರ ಕಾಲೇಜಿಗೆ ಸೇರುವ ಅರ್ಹತೆ ಪಡೆಯುತ್ತಾರೆ. ಮಿಕ್ಕವರು ಉದ್ಯೋಗ ಅಥವಾ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಸೇರಿಕೊಂಡು ಶಿಕ್ಷಣ ಪಡೆದು ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಧ್ಯಾಪಕರ ಪ್ರಶಿಕ್ಷಣಕ್ಕೆ ಬರತಕ್ಕವರೂ ಈ ವರ್ಗಕ್ಕೆ ಸೇರಿರುತ್ತಾರೆ.

ಪ್ರಾಥಮಿಕ ಶಾಲೆಯಲ್ಲಿ ಉರ್ದು, ಅಂಕಗಣಿತ, ಸಮಾಜಪಾಠ, ಸಾಮಾನ್ಯ ವಿಜ್ಞಾನ, ಇಂಗ್ಲಿಷ್ (4, 5 ನೆಯ ತರಗತಿಗಳಿಂದ), ಧಾರ್ಮಿಕ ಶಿಕ್ಷಣ, ಸಾಹಿತ್ಯ ಮತ್ತು ಕೈಕೆಲಸ ಮುಂತಾದವನ್ನು ಬೋಧಿಸುವರು.

ಸೆಕೆಂಡರಿ ಶಾಲೆಯಲ್ಲಿ ಉರ್ದು, ಇಂಗ್ಲಿಷ್, ಗಣಿತ, ಚರಿತ್ರೆ, ಭೂಗೋಳ ಪೌರ ನೀತಿ, ವಿಜ್ಞಾನ, ದೈಹಿಕ ಶಿಕ್ಷಣ, ಧಾರ್ಮಿಕ ಶಿಕ್ಷಣ ಮುಂತಾದವುಗಳು ಜೊತೆಗೆ ಐಚ್ಛಿಕ ವಿಷಯಗಳನ್ನೂ ಬೋಧಿಸುವರು. 9,10ನೆಯ ತರಗತಿಗಳಲ್ಲಿ ಮಾನವಿಕಗಳು ವಿಜ್ಞಾನ, ವಾಣಿಜ್ಯ, ಗೃಹವಿಜ್ಞಾನ, ಔದ್ಯೋಗಿಕ ಕಲೆ, ಕೃಷಿ ಮುಂತಾದವನ್ನು ಐಚ್ಛಿಕವಿಷಯಗಳನ್ನಾಗಿ ಬೋಧಿಸಲಾಗುವುದು. ಈ ಕ್ಷೇತ್ರಗಳನ್ನು ಆಯ್ದುಕೊಂಡವರು ವ್ಯಾಸಂಗ ಮಾಡಬೇಕಾದ ವಿಷಯ ವಿಭಾಗಗಳನ್ನೂ ನಿಗದಿ ಮಾಡಿರುವರು. ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 10-12 ವಿಷಯಗಳಲ್ಲಿ ಉತ್ತರಿಸಬೇಕಾಗುತ್ತದೆ. ಕಾಲೇಜಿಗೆ ಸೇರಲು ಬಯಸುವವರು ವಿಜ್ಞಾನ, ಮಾನವಿಕ, ವಾಣಿಜ್ಯ ಮುಂತಾದ ಐಚ್ಛಿಕವನ್ನು ಆರಿಸಿಕೊಳ್ಳುವರು. ಈ ಹಂತದಲ್ಲಿ ಶಿಕ್ಷಣವನ್ನು ಉದ್ಯೋಗಮುಖವಾಗಿಸುವ ಯತ್ನ ನಡೆದಿದ್ದರೂ ಬಹುಮಟ್ಟಿಗೆ ಅದು ಗ್ರಾಂಥಿಕವಾಗಿಯೇ ಇದೆ. ಪರೀಕ್ಷೆಗೆ ಸಿದ್ಧವಾಗುವ ಹಿರಿಯ ಉದ್ದೇಶದಿಂದ ಇಲ್ಲಿನ ಶಿಕ್ಷಣ ಕೇವಲ ಉರುಹಚ್ಚುವ ಕಾರ್ಯವಾಗಿದೆಯೆಂದು ಟೀಕಿಸಲಾಗುತ್ತಿದೆ.

1960ರ ಪಾಕಿಸ್ತಾನದ ಶಿಕ್ಷಣ ಆಯೋಗ ಇಂಟರ್‍ಮೀಡಿಯೆಟ್ ತರಗತಿಗಳನ್ನು ಸೆಕೆಂಡರಿ ಶಾಲೆಗಳಿಗೆ ಸೇರಿಸಬೇಕೆಂದು ಸಲಹೆ ಮಾಡಿತು. ಆ ಹಂತದಲ್ಲಿ ವೈಯಕ್ತಿಕ ಅಭಿರುಚಿ ಆಸಕ್ತಿಗಳಿಗೆ ತಕ್ಕಂಥ ಶಿಕ್ಷಣ ದೊರಕಲೆಂದು ಆಶಿಸಲಾಗಿತ್ತು. ಉದ್ಯೋಗ, ಕಲೆ, ವಾಣಿಜ್ಯ, ಉಪಚಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯಲೆಂದು ಪ್ರತಿಪ್ರಾಂತ್ಯದಲ್ಲೂ ಸೆಕೆಂಡರಿ ಶಿಕ್ಷಣ ಮಟ್ಟದ ಔದ್ಯೋಗಿಕ ಮತ್ತು ತಾಂತ್ರಿಕ ಶಾಲೆಗಳನ್ನು ಆರಂಭಿಸಲಾಯಿತು.

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕಾಲೇಜುಗಳೂ ವಿಶ್ವವಿದ್ಯಾಲಯಗಳೂ ವಿವಿಧ ವಿಷಯ ವಿಭಾಗಗಳನ್ನು ಆರಂಭಿಸಿ ಪದವಿ ಮಟ್ಟದ ಕಾರ್ಯಕ್ರಮವನ್ನು ಅಳವಡಿಸಿಕೊಂಡಿವೆ. ಪ್ರವೇಶದ ಬೇಡಿಕೆ ಹೆಚ್ಚಿದಂತೆ ಪ್ರತಿ ಪ್ರಾಂತ್ಯದಲ್ಲೂ ಹೊಸದಾಗಿ ಕೃಷಿ, ಎಂಜಿನಿಯರಿಂಗ್ ಕಲೆ ಮತ್ತು ವಿಜ್ಞಾನ-ಈ ಕ್ಷೇತ್ರಗಳ ಶಿಕ್ಷಣಕ್ಕಾಗಿ ಒಂದೊಂದು ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ. ವಿಜ್ಞಾನ, ಸಂಶೋಧನೆ, ಅರಣ್ಯ ವಿಜ್ಞಾನ, ಸಾರ್ವಜನಿಕ ಆಡಳಿತ, ವ್ಯವಹಾರೋದ್ಯಮ ಶಿಕ್ಷಣಶಾಸ್ತ್ರ ಈ ವಿಷಯಗಳ ಶಿಕ್ಷಣಕ್ಕೆ ನೂತನ ಕಾಲೇಜುಗಳನ್ನೂ ಅಧ್ಯಯನ ಸಂಸ್ಥೆಗಳನ್ನೂ ಆರಂಭಿಸಲಾಗಿದೆ.

ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಪದವಿ ಶಿಕ್ಷಣಕ್ಕೆ 12 ನೆಯ ತರಗತಿಯ ಅನಂತರ ನಡೆಯುವ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ತರಗತಿಯಲ್ಲಿ ಉತ್ತೀರ್ಣರಾದವರು ಸೇರಲು ಅರ್ಹತೆ ಪಡೆಯುತ್ತಾರೆ. ಎರಡು ವರ್ಷದ ಬ್ಯಾಚುಲರ್ ಪದವಿ ಶಿಕ್ಷಣವೂ ಅನಂತರ ಎರಡು ವರ್ಷದ ಮಾಸ್ಟರ್ ಪದವಿ ಶಿಕ್ಷಣವೂ ಅಸ್ತಿತ್ವದಲ್ಲಿವೆ. ಬ್ಯಾಚಲರ್ ಆನರ್ಸ್ ಪದವಿ ಮೂರು ವರ್ಷದ್ದು, ಅದರಲ್ಲಿ ಉತ್ತೀರ್ಣರಾದವರು ಎರಡನೆಯ ವರ್ಷದ ಮಾಸ್ಟರ್ ಪದವಿಗೆ ಸೇರಬಹುದು. ಪ್ರತಿಭಾವಂತ ವಿದ್ಯಾರ್ಥಿಗಳು ಪಿ.ಎಚ್.ಡಿ ತರಗತಿಗೆ ವ್ಯಾಸಂಗ ಮಾಡಬಹುದು.

ಉನ್ನತ ಶಿಕ್ಷಣ ಬಹುಮಟ್ಟಿಗೆ ಜ್ಞಾನ ಪ್ರಸರಣಕ್ಕೆ ಮಾತ್ರ ಮೀಸಲಾಗಿದೆ. ಸಂಶೋಧನೆಯ ಮೂಲಕ ಜ್ಞಾನದ ವಿಸ್ತರಣಕಾರ್ಯ ಅಷ್ಟಾಗಿ ನಡೆದಿಲ್ಲವೆಂದೇ ಹೇಳಬೇಕು. ಪರಮಾಣು ಶಕ್ತಿಯೇ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಪ್ರತ್ಯೇಕ ಸಂಸ್ಥೆಗಳೇನೋ ಅಸ್ತಿತ್ವದಲ್ಲಿವೆ. ಉನ್ನತ ಶಿಕ್ಷಣದಲ್ಲಿ ಮುಖ್ಯವಾಗಿ ಉರ್ದು, ಬಂಗಾಳಿ, ಇಂಗ್ಲಿಷ್, ಇತಿಹಾಸ, ಪರ್ಷಿಯನ್, ಅರ್ಯಾಬಿಕ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇಸ್ಲಾಂ ಧರ್ಮಶಾಸ್ತ್ರ, ಗಣಿತವಿಜ್ಞಾನ, ತತ್ವಶಾಸ್ತ್ರ, ಮನಶಾಸ್ತ್ರ, ವಾಣಿಜ್ಯಶಾಸ್ತ್ರ-ಇವು ಪ್ರಮುಖ ವ್ಯಾಸಂಗ ವಿಷಯಗಳು. ವೃತ್ತಿಶಿಕ್ಷಣ ಶಾಲೆಗಳಲ್ಲಿ ವೈದ್ಯಶಾಸ್ತ್ರ, ಔಷಧ ನಿರ್ಮಾಣಶಾಸ್ತ್ರ, ಉಪಚಾರಿಕೆ, ಎಂಜಿನಿಯರಿಂಗ್, ಕೃಷಿ, ವಾಸ್ತು, ಸಂಗೀತ ಮುಂತಾದವನ್ನು ಬೋಧಿಸಲಾಗುತ್ತಿದೆ.

ಉದ್ಯೋಗ ಕಸಬು ಕಲೆಗಳಲ್ಲಿ ಶಿಕ್ಷಣ ಪಡೆದು ವಿವಿಧ ಉದ್ಯೋಗಗಳಲ್ಲಿ ಕೆಲಸಕ್ಕೆ ಸೇರಿ ರಾಷ್ಟ್ರದ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲೆಂಬ ಉದ್ದೇಶದಿಂದ ಈಚೆಗೆ ಪ್ರಾಥಮಿಕ ಹಾಗೂ ಸೆಕೆಂಡರಿ ಶಿಕ್ಷಣ ಪಡೆದವರಿಗಾಗಿ ತಾಂತ್ರಿಕ ಹಾಗೂ ಕೈಗಾರಿಕಾ ಶಾಲೆಗಳನ್ನು, ಪಾಲಿಟೆಕ್ನಿಕ್‍ಗಳನ್ನು ಅಧಿಕವಾಗಿ ಸ್ಥಾಪಿಸಲಾಗುತ್ತಿದೆ. ಅಲ್ಲಿ ವಿದ್ಯುದ್ವಾಹಕ ತಂತಿಗಳ ಅಳವಡಿಕೆಯ ಕೆಲಸ (ವೈರಿಂಗ್) ಮರಗೆಲಸ, ಕಬ್ಬಿಣದ ಕೆಲಸ, ಮೆಕ್ಯಾನಿಕ್ ಕೆಲಸ, ಬೆಸುಗೆಯ ಕೆಲಸ ಕಾರ್ಯಾಲಯದ ಕೆಲಸ ಮತ್ತು ಇತರ ಕೈಗಾರಿಕಾ ಕಸಬು ಕಲೆಗಳ ಶಿಕ್ಷಣಕ್ಕೆ ಏರ್ಪಾಟು ಮಾಡಲಾಗಿದೆ.

ಅಧ್ಯಾಪಕರ ಶಿಕ್ಷಣ ಮೂರು ಅಂತಸ್ತುಗಳಲ್ಲಿ ಏರ್ಪಟ್ಟಿದೆ ಮೊದಲನೆಯ ಹಂತದ ಒಂದು ವರ್ಷದ ಪ್ರಶಿಕ್ಷಣ ಪ್ರಾಥಮಿಕ ಶಾಲೆಯ ಉಪಾಧ್ಯಾಯ ವೃತ್ತಿಗೆ ಮೀಸಲು. ಅಲ್ಲಿ ಬೋಧನ ಕ್ರಮ, ಶಿಕ್ಷಣ ತತ್ವ, ಮನಶ್ಯಾಸ್ತ್ರ ಮತ್ತು ಅಭ್ಯಾಸ ಪಾಠ ಮುಂತಾದವನ್ನು ಸೇರಿಸಿದೆ. ಎರಡನೆಯ ಹಂತದ ಶಿಕ್ಷಣ ಅಧ್ಯಾಪಕರ ಕಾಲೇಜಿನಲ್ಲಿ ಏರ್ಪಟ್ಟಿದೆ. ಅಲ್ಲಿ ಬೋಧನ ಕ್ರಮ. ಶಿಕ್ಷಣ, ತತ್ವಶಾಸ್ತ್ರ, ಮನಶ್ಯಾಸ್ತ್ರ, ಶಿಕ್ಷಣದ ಇತಿಹಾಸ, ಆರೋಗ್ಯಶಾಸ್ತ್ರ ಮತ್ತು ಅಭ್ಯಾಸ ಬೋಧನೆ ಇವನ್ನು ಅಳವಡಿಸಲಾಗಿದೆ. ಬಿ.ಎ, ಬಿ.ಎಸ್.ಸಿ., ಬಿ.ಕಾಮ್. ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಈ ಶಿಕ್ಷಣ ಪಡೆದು ಸೆಕೆಂಡರಿ ಶಾಲೆಗಳಲ್ಲಿ ಅಧ್ಯಾಪಕರಾಗಲು ಅರ್ಹತೆ ಪಡೆಯುವರು. ದೈಹಿಕ ಶಿಕ್ಷಣ, ಸಂಗೀತ ಶಿಕ್ಷಣ, ತಾಂತ್ರಿಕ ಶಿಕ್ಷಣ ಮುಂತಾದ ವಿಷಯಗಳನ್ನು ಬೋಧಿಸುವ ಅಧ್ಯಾಪಕರಿಗೆ ವಿಶೇಷ ರೀತಿಯ ತರಬೇತಿ ಸಂಸ್ಥೆಗಳು ಏರ್ಪಟ್ಟಿವೆ. ಮಾಸ್ಟರ್ಸ್ ಮತ್ತು ಡಾಕ್ಟರ್ಸ್ ಪದವಿ ಶಿಕ್ಷಣ ಈಚೆಗೆ ಆರಂಭವಾಗಿದೆ. ಅವು ಔದ್ಯೋಗಿಕ ಮಾರ್ಗದರ್ಶನ, ಪಠ್ಯವಸ್ತುವಿನ ನಿರ್ಮಾಣ, ವಿಜ್ಞಾನ ಶಿಕ್ಷಣ, ಸಂಶೋಧನೆ ಮುಂತಾದ ಕ್ಷೇತ್ರಗಳನ್ನೂ ತಜ್ಞರು ರೂಪಿಸುತ್ತಿದ್ದಾರೆ.

ಸಾಮಾನ್ಯ ಪಾಠಶಾಲೆಗಳಂತೆ ದೇಶಾದ್ಯಂತ ಇಸ್ಲಾಂ ಪಾಠಶಾಲೆಗಳೂ ಅಸ್ತಿತ್ವದಲ್ಲಿವೆ. ಸರ್ಕಾರ ಅವಕ್ಕೆ ಮನ್ನಣೆ ನೀಡಿದ್ದರೂ ಅಷ್ಟಾಗಿ ಧನ ಸಹಾಯ ನೀಡುತ್ತಿಲ್ಲ. ಪ್ರಾಥಮಿಕ ಮಟ್ಟದ ಆ ಶಾಲೆಗಳಲ್ಲಿ ಕುರಾನು ಪಠನ ಮುಖ್ಯ ಬೋಧನ ವಿಷಯ. ಇಂಥ ಶಾಲೆಗಳು ಮಸೀದಿಗಳಲ್ಲಿ ನಡೆಯುತ್ತವೆ. ಪ್ರಾಥಮಿಕ ಮಟ್ಟಕ್ಕಿಂತ ಮೇಲಿನ ಶಿಕ್ಷಣಕ್ಕಾಗಿ ಮಕ್ತಾಬ್, ಮದ್ರಸಾ ಮತ್ತು ದವುಲ್‍ಉಲೂಮ್ ಎಂಬ ಸಂಸ್ಥೆಗಳೂ ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಕೊನೆಯ ಎರಡು ಸಂಸ್ಥೆಗಳು ವಿಶ್ವವಿದ್ಯಾಲಯದ ಮಟ್ಟದವು. ಇವು ಇಸ್ಲಾಮಿಕ್ ನ್ಯಾಯಶಾಸ್ತ್ರ, ಅರಬ್ಬೀ ಭಾಷೆಯ ಕುರಾನ್ ಮುಂತಾದವನ್ನು ಪಠ್ಯಕ್ರಮದಲ್ಲಿ ಸೇರಿಸಿವೆ. ಆಧುನಿಕ ವಿಷಯಗಳಾವುವನ್ನೂ ಅಲ್ಲಿ ಬೋಧಿಸದಿದ್ದರೂ ಗ್ರಾಮಾಂತರ ಜನತೆಗೆ ಈ ಸಂಸ್ಥೆಗಳು ತುಂಬ ಪ್ರಿಯವೆನಿಸಿವೆ.

ಸಾರ್ವತ್ರಿಕ ಕಡ್ಡಾಯ ಶಿಕ್ಷಣ 1960ರಲ್ಲಿ ಸರ್ಕಾರ ಕಡ್ಡಾಯ ಸಾರ್ವತ್ರಿಕ ಶಿಕ್ಷಣದ ಯೋಜನೆಯನ್ನು ಆರಂಭಿಸಿ 1975ರ ವೇಳೆಗೆ ವರ್ಷದ ಕಡ್ಡಾಯ ಶಿಕ್ಷಣವನ್ನೂ 1980ರ ವೇಳೆಗೆ 8 ವರ್ಷದ ಕಡ್ಡಾಯ ಶಿಕ್ಷಣವನ್ನೂ ಆಚರಣೆಗೆ ತರಲು ನಿರ್ಧರಿಸಿತು. ಅದಕ್ಕಾಗಿ ಪ್ರಾಥಮಿಕ ಶಾಲೆಗಳನ್ನೂ ಸೆಕೆಂಡರಿ ಶಾಲೆಗಳ ಕಿರಿಯ ವಿಭಾಗಗಳನ್ನೂ ಹೊಸದಾಗಿ ಲಕ್ಷಗಟ್ಟಲೆ ಆರಂಭಿಸಬೇಕಾಯಿತು. ಹಣದ ಅಭಾವ, ಜನತೆಯ ಬಡತನ, ವಿದ್ಯಾರ್ಥಿಗಳ ನಿರಾಸಕ್ತಿ, ಅಧ್ಯಾಪಕರ ನಿರಾಕರ್ಷಕ ಬೋಧನ ವಿಧಾನ- ಇವೇ ಮುಂತಾದ ಕಾರಣಗಳಿಂದ ಈ ಯೋಜನೆ ಅಷ್ಟಾಗಿ ಯಶಸ್ಸು ಸಾಧಿಸಿಲ್ಲ. 8ನೆಯ ತರಗತಿ ಮುಗಿಸುವ ಮುನ್ನವೇ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಗಿಸುವುದರಿಂದ ಶಿಕ್ಷಣಕ್ಷೇತ್ರದಲ್ಲಿ ಅಗಾಧವಾದ ಶೈಕ್ಷಣಿಕ ಅಪಸರಣವೂ ವ್ಯರ್ಥವ್ಯಯವೂ ಸಂಭವಿಸುತ್ತಿವೆ. ಶಿಕ್ಷಣ ಉದ್ದೇಶಪೂರ್ವಕವೂ ಪರಿಣಾಮಕಾರಿಯೂ ಆಗುವಂತೆ ಮಾಡಲು ಅಂದಿಗಂದಿಗೆ ಶಿಕ್ಷಣದ ಗೊತ್ತುಗುರಿಗಳನ್ನು ನವೀಕರಿಸುವ ಯತ್ನವೂ ಶಿಕ್ಷಣಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸಲು ಹಣ ಒದಗಿಸುವುದೂ ಕಂಡುಬರುತ್ತಿದೆ. ಶಾಲಾಜೀವನ ಆಕರ್ಷಕವಾಗುವಂತೆ ಮಾಡಲು ನೂತನ ರೀತಿ ಪಠ್ಯಕ್ರಮ, ಪಠ್ಯ ಪುಸ್ತಕ ಮುಂತಾದವನ್ನು ಸಿದ್ಧಪಡಿಸಲಾಗುತ್ತಿದೆ. ಪರೀಕ್ಷಾವಿಧಾನದಲ್ಲೂ ಸುಧಾರಣೆಗಳು ಆರಂಭವಾಗಿವೆ. 1966-1970ರ 3ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಎಲ್ಲ ಮಟ್ಟಗಳಲ್ಲಿ ಶಿಕ್ಷಣ ಸೌಲಭ್ಯಗಳನ್ನು ಹೆಚ್ಚಿಸಲೂ ತಕ್ಕಷ್ಟು ಹಣವನ್ನು ಒದಗಿಸಲಾಗಿತ್ತು. 1971-75ರ ವರೆಗೆ ವಿಸ್ತರಿಸಲೆಳಸಿದ್ದ 4ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಕೊನೆಗಾಣಿಸಲು ಆಲೋಚಿಸಲಾಗಿತ್ತು. ಜೊತೆಗೆ ವಯಸ್ಕರ ಶಿಕ್ಷಣವನ್ನು ಅನುಷ್ಠಾನಕ್ಕೆ ತರಲು ಯುವಜನ ಸೇನೆಯೊಂದನ್ನು ನಿರ್ಮಿಸುವ ಸಲಹೆಯೂ ಸರ್ಕಾರದ ಮುಂದಿತ್ತು. ಕ್ರೈಸ್ತಪಾದ್ರಿಗಳು ನಡೆಸುತ್ತಿರುವ ಶಾಲೆಗಳ ರಾಷ್ಟ್ರೀಕರಣ ಮಾಡುವ ಯೋಜನೆಯೂ ಸರ್ಕಾರದ ಮುಂದಿತ್ತು.

ರಾಷ್ಟ್ರದ ತಾಂತ್ರಿಕ ಸಿಬ್ಬಂದಿಯ ಸಂಖ್ಯಾಬಲವನ್ನು ಹೆಚ್ಚಿಸಲು ಮೂಲ ವಿಜ್ಞಾನಗಳ ಬೋಧನೆಗೆ ಇಸ್ಲಾಮಾಬಾದ್ ವಿಶ್ವವಿದ್ಯಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಸುತ್ತಿವೆ. ಇವೆಲ್ಲ ಕಾರ್ಯಕ್ರಮಗಳಿಗೂ ನೆರವಾಗಲೆಂಬ ಉದ್ದೇಶದಿಂದ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ವಿಜ್ಞಾನ ಬೋಧನೆಯ ಕಡೆ ವಿಶೇಷ ಗಮನ ಕೊಡಲಾಗುತ್ತಿದೆ. ಇಂದು ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಸೇ. 45.7 ಮಂದಿ ಓದುಬರಹ ಬಲ್ಲವರಾಗಿದ್ದಾರೆ. 2003ರ ಅಂಕಿ ಅಂಶಗಳ ಪ್ರಕಾರ ಸೇ. 59.8 ಮಂದಿ ಗಂಡಸರು, ಸೇ. 30.6 ರಷ್ಟು ಮಹಿಳೆಯರು ಶಿಕ್ಷಿತರಾಗಿದ್ದಾರೆ. []

National symbols of Pākistan
Father of the Nation Muhammad Ali Jinnah
Mother of the Nation Fatima Jinnah ಚಿತ್ರ:Fatima jinnah1.jpg
National poet Sir. Allama Muhammad Iqbal
National hero Muhammad bin Qasim
National animal Alpine Markhor
National bird Chukar pheasant
National predatory heritage State animal Snow leopard
National predatory heritage State bird Shaheen falcon
National aquatic marine mammal Indus dolphin
National reptile Indus crocodile
National amphibian Indus Valley toad
National fish Golden Mahaseer
National tree Himalayan Deodar Cedar
National flower Common Poet’s Jasmine
National fruit Mango
National vegetable Okra
National crop Sugarcane
National dish Pākistani Beef Biryani
National beverage Sugarcane Juice
National dress Shalwar Qameez
National dance Kathak folk traditional dance ಚಿತ್ರ:Arushi Nishank 2011.jpg
National Instrument Daf/Dafli
National sport Field Hockey (PHF)
National mosque Shah Faisal Masjid
National memorial tower Minar-e-Lahore
National mausoleum Mazar-e-Quaid
National monument Islamabad Monument
National mountain K2
National river Indus River

ಉಲ್ಲೇಖಗಳು

[ಬದಲಾಯಿಸಿ]
  1. "World Gazetteer population estimate for 2006". Archived from the original on 2012-12-08. Retrieved 2006-09-05.
  2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾಕಿಸ್ತಾನ


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: