ವಿಷಯಕ್ಕೆ ಹೋಗು

ಇಂಗ್ಲೆಂಡಿನ ಬ್ಯಾಂಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬ್ಯಾಂಕ್ ಆಫ್ ಇಂಗ್ಲೆಂಡ್‌ ಇಂದ ಪುನರ್ನಿರ್ದೇಶಿತ)
Headquarters


ಬ್ರಿಟನ್ನಿ ಕೇಂದ್ರೀಯ ಬ್ಯಾಂಕು. (ದಿ ಬ್ಯಾಂಕ್ ಆಫ್ ಇಂಗ್ಲೆಂಡ್) ಇಂಗ್ಲೆಂಡಿನ ಮೂರನೆಯ ವಿಲಿಯಮ್ ದೊರೆಗೆ ಕೊಟ್ಟ ಹನ್ನೆರಡು ಲಕ್ಷ ಪೌಂಡ್ ಸಾಲಕ್ಕೆ ಪ್ರತಿಯಾಗಿ ಲಂಡನ್ ನಗರದ ಕೆಲವು ಮಂದಿ ವರ್ತಕರು ಆ ದೊರೆಯಿಂದ ಸನ್ನದು ಪಡೆದು ೧೬೯೪ ರಲ್ಲಿ ಇದನ್ನು ಸ್ಥಾಪಿಸಿದರು. ಥ್ರೆಡ್ ನೀಡ್ಲ್ ರಸ್ತೆಯ ವೃದ್ಧ ವನಿತೆಯೆಂದು ಪ್ರಸಿದ್ಧಿ ಹೊಂದಿರುವ ಈ ಬ್ಯಾಂಕು ಹುಟ್ಟಿದಾಗಲೇ ಕೇಂದ್ರೀಯ ಬ್ಯಾಂಕ್ ಎನಿಸಿಕೊಂಡಿರಲಿಲ್ಲ. ಕ್ರಮೇಣ ಅದಕ್ಕೆ ಈ ಕಾರ್ಯಭಾರ ಲಭ್ಯವಾಯಿತು.[೧]

ಇತಿಹಾಸ[ಬದಲಾಯಿಸಿ]

ಆಗಿನ ಕಾಲದ ಇತರ ಇಂಗ್ಲಿಷ್ ಬ್ಯಾಂಕುಗಳಿಗೂ ಈ ಬ್ಯಾಂಕಿಗೂ ಎರಡು ಮುಖ್ಯ ವ್ಯತ್ಯಾಸಗಳಿದ್ದವು. ಇದು ಸಂಯುಕ್ತ ಬಂಡವಾಳ ಸಂಸ್ಥೆಯಾಗಿ ಸ್ಥಾಪಿತವಾಯಿತು. ಅಲ್ಲದೆ ಇದರ ಬಾಧ್ಯತೆ ಸೀಮಿತವಾದದ್ದಾಗಿತ್ತು. ಇತರ ಬ್ಯಾಂಕುಗಳಂತೆಯೇ ವ್ಯವಹಾರ ನಡೆಸುತ್ತಿದ್ದಾಗ್ಯೂ ಒಂದು ವಿಚಾರದಲ್ಲಿ ಇದು ಅವಕ್ಕಿಂತ ಭಿನ್ನವಾಗಿತ್ತು. ಇದು ಸರ್ಕಾರದ ಬ್ಯಾಂಕಾಗಿತ್ತು. ಈಗಿನಂತೆ ಆಗಲೂ ಸರ್ಕಾರದ ಪರವಾಗಿ ಅದರ ವರಮಾನಗಳನ್ನು ಸ್ವೀಕರಿಸುವುದೂ ಸರ್ಕಾರದ ಆದೇಶದಂತೆ ಅದರ ಪರವಾಗಿ ಹಣ ಪಾವತಿ ಮಾಡುವುದೂ ಅಲ್ಲದೆ ಸರ್ಕಾರಕ್ಕೆ ನೇರವಾಗಿ ಸಾಲವನ್ನೂ ನೀಡುತ್ತಿತ್ತು. ಈ ವಿಶೇಷ ಸ್ಥಾನಮಾನಗಳ ಪರಿಣಾಮವಾಗಿ ಕ್ರಮೇಣ ಇದರ ಗೌರವ ಇತರ ಬ್ಯಾಂಕುಗಳದಕ್ಕಿಂತ ಅಧಿಕವಾಯಿತು. ಇದರ ಅಧಿಕಾರ ಬೆಳೆಯಿತು. ಇತರ ಬ್ಯಾಂಕುಗಳ ಮೇಲೆ ಪ್ರಭಾವ ಬೀರುವ ಹಾಗೂ ಅವುಗಳ ಮೇಲೆ ಹತೋಟಿ ಚಲಾಯಿಸುವ ಮಟ್ಟಿಗೆ ಇದರ ಶಕ್ತಿ ಬೆಳೆಯಿತೆನ್ನಬಹುದು. ಹೀಗೆ ಇದು ಕೇಂದ್ರೀಯ ಬ್ಯಾಂಕಾಗಿ ವಿಕಾಸಗೊಂಡಿತು.[೨]

ಸ್ಥಾಪನೆ[ಬದಲಾಯಿಸಿ]

ಈ ಬ್ಯಾಂಕಿನ ಸ್ಥಾಪನೆಗಾಗಿ ರಾಜರಿಂದ ಪಡೆದಿದ್ದ ಸನ್ನದಿಗೆ ಇದು ಆಗಿಂದಾಗ್ಗೆ ಜೀವದಾನ ಪಡೆಯಬೇಕಾಗಿತು. ಈ ಪುನರ್ನವೀಕರಣದ ಒಂದೊಂದು ಸಂದರ್ಭದಲ್ಲೂ ಇದು ರಾಜರಿಗೆ ಕೊಟ್ಟ ಹಣಕ್ಕೆ ಪ್ರತಿಯಾಗಿ ಆದಷ್ಟು ಹೆಚ್ಚು ರಿಯಾಯಿತಿಯನ್ನು ಗಿಟ್ಟಿಸಿಕೊಳ್ಳ್ಳುತ್ತಿತ್ತು. ೧೮೪೪ ರಲ್ಲಿ ಇದರ ಸನ್ನದನ್ನು ಮತ್ತೆ ನವೀಕರಿಸುವ ವೇಳೆಗೆ ಈ ಬ್ಯಾಂಕು ಬಹಳ ಮಟ್ಟಿಗೆ ತನ್ನ ಪ್ರಾಬಲ್ಯ ಗಳಿಸಿಕೊಂಡಿತು.ಈ ಬ್ಯಾಂಕಿಗೆ ನೂರು ವರ್ಷ ತುಂಬುವ ವೇಳೆಗೆ ಇದರ ಪ್ರಸಿದ್ಧಿಯೂ ಪ್ರತಾಪವೂ ಎಲ್ಲರ ಗಮನವನ್ನೂ ಸೆಳೆದುವು ಪಾಶ್ಚಾತ್ಯ ಅರ್ಥಶಾಸ್ತ್ರದ ಪಿತಾಮಹನೆನಿಸಿಕೊಂಡ ಆಡಮ್ ಸ್ಮಿತ್ ಕೂಡ ಈ ಸಂಸ್ಥೆಯನ್ನು ಬಾಯಿ ತುಂಬ ಹೊಗಳಿದ. ಈ ಬ್ಯಾಂಕು ಸಾಮಾನ್ಯವಲ್ಲ. ಇದು ಪ್ರಭುತ್ವದ ದೊಡ್ಡ ಚಾಲಕ ಶಕ್ತಿ - ಎಂದು ಅವನು ಬರೆದ. ಕೇಂದ್ರೀಯ ಬ್ಯಾಂಕಿನ ತತ್ತ್ವಸಿದ್ಧಾಂತಗಳನ್ನು ಕುರಿತು ಆಗಿನ ಕಾಲದಲ್ಲಿ ಇನ್ನೂ ಖಚಿತವಾದ ಭಾವನೆಗಳೇನೂ ಇರಲಿಲ್ಲ ೧೮೭೭ ರಲ್ಲಿ ಬೆಜ್ ಹಟ್ ಎಂಬುವನು ಬರೆದ ಲಂಬರ್ಡ್ ಸ್ಟ್ರೀಟ್ ಎಂಬ ಪುಸ್ತಕದಲ್ಲಿ ಮೊಟ್ಟ ಮೊದಲ ಬಾರಿಗೆ ಕೇಂದ್ರೀಯ ಬ್ಯಾಂಕಿನ ವಿಚಾರವಾಗಿ ಸಿದ್ಧಾಂತ ಸಂಹಿತೆಯೊಂದನ್ನು ರಚಿಸಿದ.

ಕಾರ್ಯಗಳು[ಬದಲಾಯಿಸಿ]

ಹದಿನೆಂಟನೆಯ ಶತಮಾನದಲ್ಲೂ ಈ ಬ್ಯಾಂಕು ಇತರ ಬ್ಯಾಂಕುಗಳಂತೆಯೇ ಮುಂದುವರಿಯಿತು. ಇದರ ಪ್ರಭಾವಾಧಿಕಾರಗಳೇನೋ ಅಧಿಕವಾಗಿದ್ದವು. ಬ್ಯಾಂಕುಗಳ ಕ್ಷೇತ್ರದಲ್ಲಿ ಆಗ ಹಲವಾರು ಬಿಕ್ಕಟ್ಟುಗಳು ಸಂಭವಿಸಿದುವು. ಆದರೆ ತಳಹದಿಯೆ ಅಲುಗಾಡಿತು. ಆಗ ಈ ಬ್ಯಾಂಕು ಹೆಚ್ಚು ಹೆಚ್ಚು ಹೊಣೆಗಾರಿಕೆಯಿಂದ ಆ ಕ್ಷೇತ್ರದ ನೆರವಿಗೆ ಬಂದು ಸ್ಥೈರ್ಯ ಸ್ಥಾಪನೆ ಮಾಡುವುದು ಅವಶ್ಯವಾಗಿತ್ತು. ಆಗ ಅನೇಕ ಬ್ಯಾಂಕುಗಳು ಅತಿಯಾಗಿ ಸಾಲನೀಡಿ ತಮ್ಮ ಮೈಮೇಲೆ ಕಷ್ಟ ತಂದುಕೊಂಡಿದ್ದುವು ಅನೇಕ ಬ್ಯಾಂಕುಗಳು ಮುಳುಗಿ ಹೋದುವು. ಆದರೂ ಈ ಬ್ಯಾಂಕು ಮೊದಮೊದಲು ಅವುಗಳ ರಕ್ಷಣೆಗಾಗಿ ಏನೂ ಕ್ರಮ ಕೈಕೊಳ್ಳಲಿಲ್ಲ. ೧೮೩೭ರ ವೇಳೆಗೆ ಇದಕ್ಕೆ ತನ್ನ ಹೊಣೆಗಾರಿಕೆಯ ಅರಿವು ಮೂಡಿತು. ಆಗ ಇದು ಸಣ್ಣಪುಟ್ಟ ಬ್ಯಾಂಕುಗಳಿಗೆ ಆಪದ್ಬಂಧುವಾಗಿ ಕಾರ್ಯ ನಿರ್ವಹಿಸಿತು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪದೇ ಪದೇ ಸಂಭವಿಸುತ್ತಿದ್ದ ಈ ಬಿಕ್ಕಟ್ಟುಗಳಿಂದ ಸರ್ಕಾರದ ಕಣ್ಣೂ ತೆರೆಯಿತು. ಈ ಬ್ಯಾಂಕುಗಳು ಹೊಂದಿದ್ದ ನೋಟು ಮುದ್ರಿಸಿ ಚಲಾವಣೆಗೆ ನೀಡುವ, ಹಕ್ಕುಗಳ ಮೇಲೆ ಹತೋಟಿ ಹೊಂದಲು ೧೮೪೪ ರಲ್ಲಿ ಒಂದು ಅಧಿನಿಯಮ ಜಾರಿಗೆ ಬಂತು. ಇಂಗ್ಲೆಂಡಿನ ಬ್ಯಾಂಕಿನ ಕಾರ್ಯಭಾರವನ್ನು ಎರಡು ಇಲಾಖೆಗಳಾಗಿ ವಿಂಗಡಿಸಲಾಯಿತು ದೇಶದ ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ನೀಡುವುದು ನೋಟು ನೀಡಿಕೆ ಇಲಾಖೆಯ ಕರ್ತವ್ಯವಾಯಿತು. ಬ್ಯಾಂಕಿನ ಇತರ ವ್ಯವಹಾರಗಳ ನಿರ್ವಹಣೆ ಬ್ಯಾಂಕಿಂಗ್ ಇಲಾಖೆಯ ಕರ್ತವ್ಯವಾಯಿತು. ಈ ಬ್ಯಾಂಕು ೧೪೦ ಲಕ್ಷ ಪೌಂಡುಗಳವರೆಗೆ ಯಾವ ನಿರ್ಬಂಧವೂ ಇಲ್ಲದೆ ನೋಟು ಪ್ರಚಾಲನ ಮಾಡಬಹುದಾಗಿತ್ತು. ಈ ಮಿತಿಗಿಂತ ಅಧಿಕವಾಗಿ ಪ್ರಚಾಲನ ಮಾಡುವ ಪ್ರತಿ ನೋಟಿನ ಹಿಂದೆಯೂ ಕೈಗಾವಲಾಗಿ ಚಿನ್ನ ಬೆಳ್ಳಿಗಳನ್ನಿಟ್ಟಿರಬೇಕಾಗಿತ್ತು. (ನೋಡಿ- ನೋಟು-ನೀಡಿಕೆ) ಆಗ ಇಂಗ್ಲೆಂಡ್ ಬ್ಯಾಂಕಲ್ಲದೆ ಇನ್ನೂ ಎಪ್ಪತ್ತೆರಡು ಬ್ಯಾಂಕುಗಳು ನೋಟು ಪ್ರಚಾಲನ ಮಾಡುತ್ತಿದ್ದುವು. ೧೮೪೪ ರ ಅಧಿನಿಯಮದಲ್ಲಿ ಇತರ ಬ್ಯಾಂಕುಗಳ ನೋಟು ಪ್ರಚಾಲನೆಯ ಅಧಿಕಾರವನ್ನೂ ತೀವ್ರ ಹತೋಟಿಗೆ ಒಳಪಡಿಸಲಾಯಿತು. ಇವು ಇನ್ನು ಮುಂದೆ ತಮ್ಮ ನೋಟು ಪ್ರಚಾಲನೆಯನ್ನು ಈ ಅಧಿನಿಯಮ ಜಾರಿಗೆ ಬಂದಾಗಿನಿಂದ ಹಿಂದಿನ ಹನ್ನೆರಡು ವಾರಗಳ ಸರಾಸರಿ ಪ್ರಮಾಣಕ್ಕಿಂತ ಹೆಚ್ಚಿಸುವಂತಿರಲಿಲ್ಲ. ಈ ಬ್ಯಾಂಕುಗಳಲ್ಲದೆ ಬೇರೆ ಯಾವ ಬ್ಯಾಂಕಿಗೂ ನೋಟು ನೀಡಿಕೆಯ ಅಧಿಕಾರ ದೊರಕುವಂತಿರಲಿಲ್ಲ. ಈ ಅಧಿಕಾರವಿರುವ ಬ್ಯಾಂಕುಗಳ ಪೈಕಿ ಯಾವುದಾದರೂ ಲಂಡನ್ನಿನಲ್ಲಿ ಒಂದು ಶಾಖೆ ತೆರೆದರಾಗಲಿ, ಇನ್ನೊಂದು ಬ್ಯಾಂಕಿನೊಂದಿಗೆ ಸಮ್ಮಿಲನ ಹೊಂದಿದರಾಗಲಿ ಅದು ತನ್ನ ನೋಟು ನೀಡಿಕೆಯ ಹಕ್ಕು ಕಳೆದುಕೊಳ್ಳುತ್ತಿತ್ತು. ಈ ಕ್ರಮಗಳ ಪರಿಣಾಮವಾಗಿ ಕಾಲಕ್ರಮೇಣ ಇಂಗ್ಲೆಂಡಿನ ಬ್ಯಾಂಕು ಆ ದೇಶದಲ್ಲಿ ಬ್ಯಾಂಕ್ ನೋಟು ನೀಡುವ ಏಕೈಕ ಸಂಸ್ಥೆಯಾಯಿತು. ಉಳಿದ ಬ್ಯಾಂಕುಗಳು ಇದಕ್ಕಿಂತ ಒಂದು ಮೆಟ್ಟಿಲು ಕೆಳಗೆ ನಿಂತುಕೊಂಡುವು. ಮುಂದಿನ ವರ್ಷಗಳಲ್ಲಿ ಈ ಬ್ಯಾಂಕು ಕೇಂದ್ರೀಯ ಬ್ಯಾಂಕಿನ ಕರ್ತವ್ಯ ಭಾರವನ್ನು ಯಶಸ್ವಿಯಾಗಿ ನಿರ್ವಹಿಸಿತು. ಬ್ಯಾಂಕ್ ದರವೇ ಮುಂತಾದ ನಾನಾ ಉಪಾಯಗಳ ಮೂಲಕ ಇದು ಇತರ ಬ್ಯಾಂಕುಗಳ ಮೇಲೂ ಲಂಡನ್ನಿನ ಹಣದ ಪೇಟೆಯ ಮೇಲೂ ಹೆಚ್ಚು ನಿಯಂತ್ರಣಾಧಿಕಾರ ಹೊಂದಿತು. ಇದರ ಹೊಣೆಯೂ ಬ್ಯಾಂಕುಗಳ ಬ್ಯಾಂಕಾಗಿ, ಬ್ಯಾಂಕುಗಳಾಗಿ ಅಂತಿಮವಾಗಿ ಸಾಲ ನೀಡುವ ಸಂಸ್ಥೆಯಾಗಿ ಇದರ ಸ್ವರೂಪ ಬೆಳೆಯಿತು. ಅಲ್ಲಿನ ಸರ್ಕಾರದ ಖಜಾನೆಯ ನಿಕಟ ಸಹವರ್ತಿಯಾಗಿ ಈ ಬ್ಯಾಂಕು ಕೆಲಸ ಮಾಡತೊಡಗಿತು. ಸರ್ಕಾರದ ಹಣಕಾಸಿನ ನೀತಿಗಳನ್ನು ಕಾರ್ಯರೂಪಕ್ಕೆ ತರಲು ನೆರವಾಯಿತು. ಈ ಉದ್ದೇಶದಿಂದ ಬ್ಯಾಂಕ್ ದರ ಹಾಗೂ ಪೇಟೆಯ ಬಹಿರಂಗ ವ್ಯವಹಾರಗಳೆಂಬ ಅವಳಿಜವಳಿ ಅಸ್ತ್ರಗಳನ್ನು ಪ್ರಯೋಗಿಸಿ ಪರಿಷ್ಕರಿಸಿತು. ದ್ವಿತೀಯ ಯುದ್ಧದ ನಂತರದ ಕಾಲದಲ್ಲಿ ಆ ದೇಶದ ಪೌಂಡ್ ಸ್ಟರ್ಲಿಂಗ್ ನಾಣ್ಯದ ವಿನಿಮಯ ಸ್ಥಿಮಿತಗೊಳಿಸುವ ಸಲುವಾಗಿ ಏರ್ಪಟ್ಟ ವಿದೇಶಿ ವಿನಿಮಯ ನಿಧಿಯನ್ನು ನಿರ್ವಹಿಸತೊಡಗಿತು. ಬ್ರಿಟನ್ನಿನ ಚಿನ್ನದ ಸಂಚಿತಿಯಿರುವುದು ಈ ಬ್ಯಾಂಕಿನಲ್ಲಿ. ಜೊತೆಗೆ ಸಾಮಾನ್ಯ ಬ್ಯಾಂಕಿಂಗ್ ವ್ಯವಹಾರವನ್ನೂ ಇದು ಅಲ್ಪ ಪ್ರಮಾಣದಲ್ಲಿ ನಿರ್ವಹಿಸುತ್ತಿದೆ. (ನೋಡಿ- ಕೇಂದ್ರೀಯ-ಬ್ಯಾಂಕು)

ದ್ವಿತೀಯ ಯುದ್ಧಾನಂತರದಲ್ಲಿ ಬ್ರಿಟನ್ನಿನಲ್ಲಿ ಲೇಬರ್ ಸರ್ಕಾರ ಏರ್ಪಟ್ಟಾಗ ಆ ಸರ್ಕಾರ ಕೈಗೊಂಡ ಮೊಟ್ಟಮೊದಲ ಕ್ರಮವೆಂದರೆ ಈ ಬ್ಯಾಂಕಿನ ರಾಷ್ಟ್ರೀಕರಣ. ಇದು ಆದದ್ದು ೧೯೪೬ ರ ಮಾರ್ಚ್ ೧ ರಂದು. ಆ ದೇಶದ ಕೇಂದ್ರೀಯ ಬ್ಯಾಂಕಾಗಿ ಬೆಳೆದು ಕೊಂಡು ಬಂದಿದ್ದ ಈ ಬ್ಯಾಂಕಿನ ಒಡೆತನ ಅಂದಿನಿಂದ ಸರ್ಕಾರಕ್ಕೆ ಹೋಯಿತು. ಆದರೆ ಇದು ಕೇವಲ ವಿಧಿವಿಹಿತ ಬದಲಾವಣೆ ಮಾತ್ರ. ಈ ಸಂಸ್ಥೆಯ ಆಗಿನ ರಚನೆಯಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಲಿಲ್ಲ. ಸರ್ಕಾರಿ ಒಡೆತನಕ್ಕೆ ಹೊಂದಿಕೊಳ್ಳದ ಲಕ್ಷಣಗಳ ವಿನಾ ಬೇರೆ ಯಾವುದನ್ನೂ ಬದಲಾಯಿಸಲಿಲ್ಲ. ಬ್ಯಾಂಕಿನ ನೀತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸರ್ಕಾರದ ಅಧಿಕಾರವೂ ಹತೋಟಿಯೂ ಇರುವುದಾದರೂ ಬ್ಯಾಂಕಿನ ದಿನವಹಿ ಆಡಳಿತದಲ್ಲಿ ಸರ್ಕಾರ ತಲೆ ಹಾಕುವುದಿಲ್ಲ. ಆದರೆ ೧೯೪೬ ರ ಬ್ಯಾಂಕ್ ಆಫ್ ಇಂಗ್ಲೆಂಡ್ ಕಾಯಿದೆಯ ೧ ಮತ್ತು ೨ ನೆಯ ಉಪನಿಬಂಧನೆಗಳಿಗನುಗುಣವಾಗಿ ಅದಕ್ಕೆ ವಿಶಾಲವಾದ ಅಧಿಕಾರ ಉಂಟು.

ಸೇವೆಗಳು[ಬದಲಾಯಿಸಿ]

ಬ್ಯಾಂಕಿನ ನಿರ್ದೇಶಕ ಮಂಡಲಿಯ (ಕೋರ್ಟ್ ಆಫ್ ಡೈರೆಕ್ಟರ್ಸ್) ರಚನೆಯಲ್ಲಿ ಹಲವು ಬದಲಾವಣೆಗಳಾಗಿವೆ. ಸದಸ್ಯಸಂಖ್ಯೆ ಇಳಿದಿದೆ. ನಿರ್ದೇ ಶಕರು ಸಾಮಾನ್ಯವಾಗಿ ನಾಲ್ಕು ವರ್ಷಕಾಲ ಅಧಿಕಾರದಲ್ಲಿರುತ್ತಾರೆ. ಅವರ ಪೈಕಿ ನಾಲ್ಕನೆಯ ಒಂದರಷ್ಟು ಸಂಖ್ಯೆಯ ಸದಸ್ಯರು ಸರದಿಯ ಪ್ರಕಾರವಾಗಿ ವರ್ಷ ವರ್ಷ ನಿವೃತ್ತಿ ಹೊಂದುತ್ತಾರೆ. ಯಾವುದೇ ಕಾಲದಲ್ಲಾಗಲಿ ಸರ್ಕಾರ ಎಲ್ಲ ನಿರ್ದೇಶಕರನ್ನು ಒಟ್ಟಿಗೆ ವಜಾ ಮಾಡಿ ಅವರ ಸ್ಥಾನಗಳಲ್ಲಿ ಹೊಸಬರನ್ನು ನೇಮಿಸುವಂತಿಲ್ಲ. ಬ್ಯಾಂಕಿನ ಆಡಳಿತ ತಡೆಯಿಲ್ಲದೆ ಮುಂದುವರಿಯುವುದು ಸಾಧ್ಯವಾಗುವಂತೆ ಗೌರ್ನರ್ ಮತ್ತು ಡೆಪ್ಯುಟಿ ಗೌರ್ನರುಗಳ ಅಧಿಕಾರಾವಧಿಯನ್ನು ಎರಡು ವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸಿದೆ.ದೇಶದ ಕೈಗಾರಿಕೆಗಳ ಪುನರುದ್ಧಾರ ಹಾಗೂ ಪುನರ್ರಚನೆಯ ಉದ್ದೇಶದಿಂದ ಬ್ಯಾಂಕು ಯುದ್ಧಾನಂತರದ ಕಾಲದಲ್ಲಿ ತನ್ನ ಹಳೆಯ ದೃಷ್ಟಿಯನ್ನು ತ್ಯಜಿಸಿತು. ಲಂಡನ್ ನಗರದ ಹಣಕಾಸಿನ ವ್ಯವಸ್ಥೆಯ ಬಲವನ್ನೂ ಪ್ರಯತ್ನಗಳನ್ನೂ ಒಟ್ಟುಗೂಡಿಸಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಹರಿಯುವಂತೆ ವಿಶಿಷ್ಟವಾದ ಸಂಸ್ಥೆಗಳನ್ನು ನಿರ್ಮಾಣ ಮಾಡಿತು. ಎಲ್ಲ ವರ್ಗಗಳ ಹಿತಗಳನ್ನೂ ಅನುಲಕ್ಷಿಸಿ ಸಾಮಾಜಿಕ ಸುರಕ್ಷತೆ ಸ್ಥಾಪಿಸುವ ಹೊಣೆ ಹೊತ್ತ ಸರ್ಕಾರಕ್ಕೆ ಇದು ಗೆಳೆಯ, ದಾರ್ಶನಿಕ ಹಾಗೂ ಮಾರ್ಗದರ್ಶಿಯಾಗಿ ವರ್ತಿಸುತ್ತದೆ. ಇಂಗ್ಲೆಂಡಿನ ಈ ಸಂಸ್ಥೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಂತ ಶ್ರೇಷ್ಠ ಸಂಪ್ರದಾಯಗಳನ್ನು ಸ್ಥಾಪಿಸಿದೆ ಪ್ರಪಂಚದ ಅತ್ಯಂತ ಹಿರಿಯ ಕೇಂದ್ರೀಯ ಬ್ಯಾಂಕೆಂದರೆ ಇಂಗ್ಲೆಂಡಿನ ಬ್ಯಾಂಕು. ಇತರ ದೇಶಗಳು ಈ ಸಂಸ್ಥೆಯ ಸಂವಿಧಾನವನ್ನೇ ಬಹುಮಟ್ಟಿಗೆ ಅನುಸರಿಸಿ ತಂತಮ್ಮ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಸುಭದ್ರವಾದ ಅಸ್ತಿಭಾರದ ಮೇಲೆ ರಚಿಸಿಕೊಂಡಿವೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]