ವಿಷಯಕ್ಕೆ ಹೋಗು

ಭಾರತೀಸುತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭಾರತಿಸುತ ಇಂದ ಪುನರ್ನಿರ್ದೇಶಿತ)
ಭಾರತೀಸುತ
ಜನನಶಾನಭಾಗ ರಾಮಯ್ಯ ನಾರಾಯಣರಾವ್
ಮೇ ೧೫, ೧೯೧೫
ಮಡಿಕೇರಿ ಬಳಿಯ ಬಿಳಿಗೇರಿ
ಮರಣಏಪ್ರಿಲ್ ೪, ೧೯೭೬
ವೃತ್ತಿಕಥೆಗಾರರು. ಶಿಕ್ಷಕರು

ಭಾರತೀಸುತ ಇದು ಶಾನಭಾಗ ರಾಮಯ್ಯ ನಾರಾಯಣರಾವ್ (ಮೇ ೧೫, ೧೯೧೫ - ಏಪ್ರಿಲ್ ೪ ೧೯೭೬) ಇವರ ಕಾವ್ಯನಾಮ. ಭಾರತೀಸುತರು ಕನ್ನಡದ ಪ್ರಸಿದ್ಧ ಕಾದಂಬರಿಕಾರರೆನಿಸಿದ್ದಾರೆ.[]

ಗ್ರಾಮೀಣ ಪರಿಸರದ ಹಿನ್ನೆಲೆಯ ಎಸ್.ಆರ್. ನಾರಾಯಣರಾವ್ (ಭಾರತೀಸುತ) ಅವರು ಮಡಿಕೇರಿ ಬಳಿಯ ಬಿಳಿಗೇರಿ ಗ್ರಾಮದಲ್ಲಿ ಮೇ ೧೫, ೧೯೧೫ರಂದು ಹವ್ಯಕ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದರು. ತಂದೆ ರಾಮಯ್ಯ, ತಾಯಿ ಸುಬ್ಬಮ್ಮ . ಏಳನೆಯ ತರಗತಿ ಓದುತ್ತಿದ್ದಾಗಲೇ ತಂದೆಯ ಪ್ರೀತಿಯಿಂದ ವಂಚಿತರಾದರು. ಪ್ರೌಢಶಾಲೆ ವ್ಯಾಸಂಗ ಮಾಡುವಾಗ ಪಂಜೆಯವರ ಶಿಷ್ಯರಾಗಿ ಸಾಹಿತ್ಯ ಸಂಸ್ಕಾರ ಪಡೆದ ಭಾಗ್ಯ ಅವರದ್ದಾಗಿತ್ತು.

೧೫ನೇ ವಯಸ್ಸಿನಲ್ಲಿ ಶಾಲೆಬಿಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು. ಚಳುವಳಿಯ ಕಾವಿನಿಂದ ಓದಿಗೆ ತಿಲಾಂಜಲಿ ಕೊಟ್ಟ ಭಾರತೀಸುತರು ಕಣ್ಣಾನೂರು ಹಾಗೂ ತಿರುಚನಾಪಳ್ಳಿ ಸೆರೆಮನೆಗಳಲ್ಲಿದ್ದಾಗ ಗಾಂಧೀ ತತ್ತ್ವಗಳನ್ನು ಮೈಗೂಡಿಸಿಕೊಂಡರು. ಸತ್ಯಾಗ್ರಹಿಯಾದರೂ ಅವರು ರಾಜಕೀಯ ವ್ಯಕ್ತಿಯಾಗಲಿಲ್ಲ. ಬಿಡುಗಡೆಯ ನಂತರ ೧೯೩೬ರಿಂದ ೧೯೪೨ರ ವರೆಗೆ ಕಾಫಿ ಎಸ್ಟೇಟಿನಲ್ಲಿ ಗುಮಾಸ್ತೆ ಕೆಲಸ ಮಾಡಿದರು. ೧೯೪೧ರಲ್ಲಿ ನಾಗವೇಣಿಯವರನ್ನು ಮದುವೆಯಾದರು. 1942ರಲ್ಲಿ ಕುಶಾಲನಗರ ಸಮೀಪದ ರಾಮಸ್ವಾಮಿ ಕಣಿವೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡರು. ೧೯೪೫ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಕನ್ನಡ ವಿದ್ವಾನ್ ಪದವಿ ಪಡೆದರು. ವಿರಾಜಪೇಟೆಯ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕೆಲಸ ಪ್ರಾರಂಭಿಸಿ ೧೯೪೭ರಲ್ಲಿ ಮಂಗಳೂರಿನಲ್ಲಿ ಅಧ್ಯಾಪಕ ತರಬೇತಿ ಪಡೆದು ೧೯೬೨ರಿಂದ ೧೯೭೩ರವರೆಗೂ ಮಡಿಕೇರಿಯ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. ಈ ನಡುವೆ ಮಂಗಳೂರಿನ ’ರಾಷ್ಟ್ರಬಂಧು’ ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದರು.

ಸಾಹಿತ್ಯ ಲೋಕದಲ್ಲಿ

[ಬದಲಾಯಿಸಿ]
  • ೧೩ನೇ ವಯಸ್ಸಿನಲ್ಲಿದ್ದಾಗಲೇ ಇವರ ’ಬಂಗಾರದ ಬಳೆ’ ಎಂಬ ಕತೆ ಪ್ರಕಟವಾಯಿತು. ಇವರ ಮೊದಲ ಕಥಾ ಸಂಕಲನ ’ದೂರಹೋದಳು’. ಇವರು ೩೨ ಕಾದಂಬರಿ, ೮ ಕಥಾಸಂಕಲನ, ೧೯ ಮಕ್ಕಳ ಕತೆಪುಸ್ತಕಗಳು ಹಾಗೂ ನವಸಾಕ್ಷರರಿಗಾಗಿ ೩ ಕೃತಿಗಳನ್ನು ಬರೆದಿದ್ದಾರೆ.
  • ಇವರ ಪ್ರಸಿದ್ಧ ಕೃತಿ ’ಹುಲಿಯಹಾಲಿನ ಮೇವು’ ಮೈಸೂರು ವಿ.ವಿ.ದಲ್ಲಿ ಪಠ್ಯವಾಗಿತ್ತಲ್ಲದೇ ಇವರ ಅನೇಕ ಕತೆಗಳು ಪಠ್ಯಪುಸ್ತಕದಲ್ಲಿ ಸೇರ್ಪಡೆಯಾದವು.
  • ಭಾರತೀಸುತರ ಕಾದಂಬರಿಗಳಲ್ಲಿ ದಾಂಪತ್ಯ ಜೀವನದ ಸಮಸ್ಯೆಗಳ ಆಳವಾದ ವಿವೇಚನೆ, ಹೆಣ್ಣಿನ ಬಗೆಗಿನ ಸಹಾನುಭೂತಿಯುಳ್ಳ ದೃಷ್ಟಿಕೋನಗಳು ಪ್ರಮುಖ ಪಾತ್ರವಹಿಸಿವೆ. ಎಡಕಲ್ಲು ಗುಡ್ಡದ ಮೇಲೆ ಮತ್ತು ಸಂತಾನ ಭಿಕ್ಷೆ ಮಾನವೀಯ ದೃಷ್ಟಿಕೋನದ ಕಾದಂಬರಿಗಳೆನಿಸಿವೆ.
  • ಪರಂಪರೆ ಹಾಗೂ ಆಧುನಿಕತೆಯ ಮುಖಾಮುಖಿಗಳನ್ನು, ವರ್ಗ ಸಂಘರ್ಷಗಳನ್ನು ಸಾಮಾಜಿಕ ಆಯಾಮಗಳಲ್ಲಿ ಚಿತ್ರಿಸಿದ್ದಾರೆ.
  • ಹುಲಿಯ ಹಾಲಿನ ಮೇವು, ಗಿರಿಕನ್ನಿಕೆ, ಬಯಲುದಾರಿ, ಇಳಿದು ಬಾ ತಾಯಿ, ವಕ್ರರೇಖೆ, ಬೆಳಕಿನೆಡೆಗೆ, ಬೆಂಕಿಯ ಮಳೆ, ಅಮಾತ್ಯ ನಂದಿನಿ, ಗಿಳಿಯು ಪಂಜರದೊಳಿಲ್ಲ, ಸಾಧನ ಕುಟೀರ, ಹಾವಿನ ಹುತ್ತ, ದೊರೆ ಮಗಳು ಮುಂತಾದುವು ಭಾರತೀಸುತರ ಪ್ರಮುಖ ಕಾದಂಬರಿಗಳು.
  • ಹುಲಿಬೋನು, ಗಿರಿಕನ್ನಿಕೆ, ಗಿಳಿಯು ಪಂಜರದೊಳಿಲ್ಲ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕೃತ ಕಾದಂಬರಿಗಳು.
  • ಅವರ ಬಯಲು ದಾರಿ, ಹುಲಿಯ ಹಾಲಿನ ಮೇವು, ಎಡಕಲ್ಲು ಗುಡ್ಡದ ಮೇಲೆ ಕೃತಿಗಳು ಚಲನಚಿತ್ರಗಳಾಗಿ ಪ್ರಖ್ಯಾತಗೊಂಡಿವೆ.
  • ಇವರ ಮಿನಿಕಾದಂಬರಿ ‘ವಲ್ಮಿಕ’ ಬಹಳಷ್ಟು ಖ್ಯಾತಿ ಪಡೆದ ಕೃತಿ.
  • ಗೆಳೆಯರೊಡಗೂಡಿ ’ಶ್ರೀ ಕಾವೇರಿ ಪ್ರಕಾಶನ’ ಸಂಸ್ಥೆ ಹುಟ್ಟುಹಾಕಿದರು.

ಪತ್ರಿಕೋದ್ಯಮದಲ್ಲಿ

[ಬದಲಾಯಿಸಿ]

ಪತ್ರಿಕೋದ್ಯಮದಲ್ಲೂ ತಮ್ಮ ಶ್ರಮ ನೀಡಿರುವ ಭಾರತೀಸುತರು ’ರಾಷ್ಟ್ರಬಂಧು’ ಪತ್ರಿಕೆಯಲ್ಲಿ ಕೆಲಸ ಮಾಡಿದರು. ’ಗುರುವಾಣಿ’ ಎಂಬ ಶಿಕ್ಷಕರಬಳಗದ ಮಾಸಪತ್ರಿಕೆಗೆ ಸಂಪಾದಕರಾಗಿದ್ದರು.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯು ೧೯೭೬ರಲ್ಲಿ ಭಾರತೀಸುತರಿಗೆ ಮರಣೋತ್ತರ ಗೌರವವನ್ನು ಘೋಷಿಸಿತು. ಭಾರತೀಸುತರ ಗೌರವಾರ್ಥವಾಗಿ ಸಾಹಿತ್ಯಾಭಿಮಾನಿಗಳು ‘ಬ್ರಹ್ಮಗಿರಿ’ ಎಂಬ ಸಂಸ್ಮರಣ ಗ್ರಂಥವನ್ನು ಹೊರತಂದರು.

ವಿದಾಯ

[ಬದಲಾಯಿಸಿ]

ಭಾರತೀಸುತರು ಏಪ್ರಿಲ್ ೪, ೧೯೭೬ರಲ್ಲಿ ಈ ಲೋಕವನ್ನಗಲಿದರು.

ಕೃತಿಗಳು

[ಬದಲಾಯಿಸಿ]

ಕಾದಂಬರಿ

[ಬದಲಾಯಿಸಿ]
  • ಅಮಾತ್ಯ ನಂದಿನಿ
  • ಅವಳ ದಾರಿ
  • ಇಳಿದು ಬಾ ತಾಯಿ
  • ಎಡಕಲ್ಲು ಗುಡ್ಡದ ಮೇಲೆ - ಇದೇ ಹೆಸರಿನಿಂದ ಚಲನಚಿತ್ರವಾಗಿದೆ.
  • ಗಿರಿಕನ್ನಿಕೆ
  • ಗಿಳಿಯು ಪಂಜರದೊಳಿಲ್ಲ
  • ದೊರೆ ಮಗಳು
  • ಪೃಥ್ವಿರಾಜ
  • ಬಯಲು ದಾರಿ - ಇದೇ ಹೆಸರಿನಿಂದ ಚಲನಚಿತ್ರವಾಗಿದೆ.
  • ಬೆಂಕಿಯ ಮಳೆ
  • ಬೆಳೆಕಿನೆಡೆಗೆ
  • ವಕ್ರರೇಖೆ
  • ಸಾಧನ ಕುಟೀರ
  • ಹಾವಿನ ಹುತ್ತ
  • ಹುಲಿಯ ಹಾಲಿನ ಮೇವು - ಇದೇ ಹೆಸರಿನಿಂದ ಚಲನಚಿತ್ರವಾಗಿದೆ.
  • ಬೆಳ್ಳಿ ಮೂಡಿತು

ಕಥಾಸಂಕಲನ

[ಬದಲಾಯಿಸಿ]
  • ಜಿಂಬ ಹಿಡಿದ ಮೀನು

ಮಕ್ಕಳ ಸಾಹಿತ್ಯ

[ಬದಲಾಯಿಸಿ]
  • ಅಕ್ಕ ತಂಗಿಯರು
  • ಕಳ್ಳರ ಫಜೀತಿ
  • ಕಾವೇರಿ
  • ಕಿನ್ನರರ ಕುಣಿತ
  • ಕಿಲಾಡಿ ಗವುಜಗ
  • ಕಿಲಾಡಿ ಮಂಗಣ್ಣ
  • ಕುಣಿಯುತ ಬಂದರು ಕುಂಬಾರನ ಮಕ್ಕಳು
  • ಗೆಳೆಯ ಮೊಲರಾಯ
  • ನಳ ದಮಯಂತಿ
  • ಬಚ್ಚಣ್ಣ ಬಹದೂರ್ (ಸಚಿತ್ರ)
  • ಬೇಸ್ತು ಬಿದ್ದ ನರಿ
  • ಮಂತ್ರದ ಕೊಳಲು
  • ಹನ್ನೊಂದು ಹಂಸಗಳು ( ಮೂಲ: ಹ್ಯಾನ್ಸ್ ಎಂಡರ್ಸನ್ )
  • ಹೊನ್ನು ಹೊಳೆಯ ಅರಸು
  • ಡಾ|ಜಕೀರ್ ಹುಸೇನ್
  • ಮಲ್ಲಿಗೆ ಹಳ್ಳಿಯ ಜಾಣರು
  • ಸೊಳ್ಳೆ ಹರಡುವ ರೋಗಗಳು

ಪುರಸ್ಕಾರ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]


ಹೊರಕೊಂಡಿಗಳು

[ಬದಲಾಯಿಸಿ]