ವಿಷಯಕ್ಕೆ ಹೋಗು

ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವುಲ್ಫ್‍ಗ್ಯಾಂಗ್ ಮೊಟ್ಜಾರ್ಟ್ ಇಂದ ಪುನರ್ನಿರ್ದೇಶಿತ)
ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್

'ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಅಥವ ಯುರೋಪಿಯನ್ ಶಾಸ್ತ್ರೀಯ ಸಂಗೀತ ಶೈಲಿಯ ಒಬ್ಬ ಮೇಧಾವಿ, ಪ್ರಭಾವಿ ಮತ್ತು ಜನಪ್ರಿಯ ವಾಗ್ಗೇಯಕಾರ. ಇವರನ್ನು ಪ್ರಪಂಚ ಕಂಡ ಅತಿ ಶ್ರೇಷ್ಟ ಸಂಗೀತ ಸಂಯೋಜಕರಲ್ಲೊಬ್ಬರೆಂದು ಎಂದು ಸಂಗೀತ ವಿಮರ್ಶಕರು ಒಮ್ಮತದಿಂದ ಶ್ಲಾಘಿಸುತ್ತಾರೆ. ಮೊಟ್ಜಾರ್ಟ್‌ರ ಬೃಹತ್ ಕೃತಿ ಭಂಡಾರದಲ್ಲಿ ಪಿಯಾನೋ, ಚೇಂಬರ್ ಸಂಗೀತ, ಸಿಂಫೊನಿ ಸಂಗೀತ, ವೃಂದ ಗಾನ ಮತ್ತು ಆಪೇರಾ ಸಂಗೀತ ಶೈಲಿಗಳ ಮೇರು ಕೃತಿಗಳು ಸೇರಿವೆ. ಇವರ ಹಲವು ಮೇರುಕೃತಿಗಳು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಶಿಕ್ಷಣದ ಅವಿಭಾಜ್ಯ ಅಂಗವಾಗಿವೆ.

ಸಾಲ್ಜ್‌ಬರ್ಗ್‌ನಲ್ಲಿರುವ ಮೊಟ್ಜಾರ್ಟ್ ಜನ್ಮ ಸ್ಥಳ

ಜನನ ಮತ್ತು ಶೈಶವ

[ಬದಲಾಯಿಸಿ]

ಮೊಟ್ಜಾರ್ಟ್‌ರ ಜನ್ಮ ಜನವರಿ ೨೭, ೧೭೫೬ ರೊಂದು ಇಂದಿನ ಆಸ್ಟ್ರಿಯಾದಲ್ಲಿರುವ ಸಾಲ್ಜ್‌ಬರ್ಗ್ ಎಂಬ ಊರಿನಲ್ಲಾಯಿತು. ಲಿಯೊಪಾಲ್ಡ್ ಮೊಟ್ಜಾರ್ಟ್‌ ಇವರ ತಂದೆ ಮತ್ತು ಆನಾ ಮೇರಿ ಪರ್ಟಲ್ ಮೊಟ್ಜಾರ್ಟ್‌ ಇವರ ತಾಯಿ. ಜನ್ಮದ ಮರುದಿನವೆ ಸಾಲ್ಜ್‌ಬರ್ಗಿನ ಸಂತ ರುಪೆರ್ಟ್ ಇಗರ್ಜಿಯಲ್ಲಿ ಇವರ ನಾಮಕರಣ ನೆರವೇರಿತು. ಮೊಟ್ಜಾರ್ಟ್‌ ತಂದೆ ಲಿಯೊಪಾಲ್ಡ್ ಆಗಿನ ಕಾಲದ ಯುರೋಪಿನ ಒಬ್ಬ ಪ್ರಸಿದ್ದ ಸಂಗೀತ ಉಪಾಧ್ಯಾಯರಾಗಿದ್ದರು ಹಾಗು ಮೊಟ್ಜಾರ್ಟ್‌ ಹುಟ್ಟಿದ ವರ್ಷವೆ (೧೭೫೬) ಪಿಟೀಲು ವಾದನದ ಬಗ್ಗೆ ಪರಿಣಾಮಕಾರಿ ಎನ್ನಿಸಿಕೊಂಡ ಒಂದು ಸಂಗೀತ ಪಠ್ಯ ಪುಸ್ತಕವೊಂದನ್ನು ಮುದ್ರಿಸಿದ್ದರು. ಮೂರನೆ ವರ್ಷದಲ್ಲಿಯೆ ಅಪೂರ್ವ ಸಂಗೀತ ಪ್ರತಿಭೆ ಪ್ರದರ್ಶಿಸಿದ ಮಗ್ ಮೊಟ್ಜಾರ್ಟ್‌ನನ್ನು ಲಿಯೊಪಾಲ್ಡ್ ಮಾರ್ಗದರ್ಶನ ನೀಡಿ ಪಿಯಾನೋ ಮತ್ತು ಪಿಟೀಲು ವಾದನಗಳಲ್ಲಿ ಪ್ರಶಸ್ತ ಹಾಗು ಗಾಢ ಶಿಕ್ಷಣ ನೀಡಿದರು. ಶೀಘ್ರಗತಿಯಲ್ಲಿ ಬೆಳೆದ ಮೊಟ್ಜಾರ್ಟ್ ತಮ್ಮ ೫ನೆ ವಯಸ್ಸಿನಲ್ಲಿಯೆ ಸಂಗೀತ ಸಂಯೋಜಿಸಲು ಶುರುಮಾಡಿದರು.

ಪ್ರವಾಸದ ದಿನಗಳು

[ಬದಲಾಯಿಸಿ]

ಲಿಯೊಪಾಲ್ಡ್ ಮಗನ ಪ್ರಚಂಡ ಪ್ರತಿಭೆಯ ಪ್ರದರ್ಶನವನ್ನು ಯುರೋಪಿನ ರಾಜರ ದರ್ಬಾರಿನಲ್ಲಿ ಏರ್ಪಡಿಸಿದರೆ ಗಣನೀಯ ಆದಾಯಗಳಿಸಬಹುದೆಂದು ಎಣಿಸಿ, ಮಗನೊಂದಿಗೆ ಯುರೋಪ್ ಪ್ರವಾಸ ಕೈಗೊಂಡರು. ಅಸಮಾನ್ಯ ಪ್ರತಿಭೆಯ ಮೊಟ್ಜಾರ್ಟ್‌ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪಿಯನೋ ಮತ್ತುಪಿಟೀಲು ನುಡಿಸುವುದು, ಎಂದೂ ನೋಡದ ಕೃತಿಯನ್ನು ಒಮ್ಮೆ ನೋಡಿ ಅಥವ ಕೇಳಿ ಸುಲಲಿತವಾಗಿ ಬಾರಿಸುವುದು ಮತ್ತು ಅದನ್ನು ವಿಸ್ತಾರಿಸುವುದು, ಇತ್ಯಾದಿ ಸಾಧನೆಗಳನ್ನು ಮಾಡಿ ತೋರಿಸುತ್ತಾ ಯುರೋಪಿನಾದ್ಯಂತ ಪ್ರಸಿದ್ದಿಗೆ ಬಂದರು. ಮೊಟ್ಜಾರ್ಟ್‌ನ ಅಕ್ಕ ಮಾರಿಯಾ ಆನಾ ಕೂಡ ಪ್ರತಿಭಾವಂತ ಪಿಯಾನೋ ವಾದಕಿಯಾಗಿದ್ದರು.ಈಕೆ ಕೆಲಕಾಲ ತಮ್ಮನ ಒಟ್ಟಿಗೆ ಪ್ರದರ್ಶನ ನೀಡುತ್ತಿದ್ದರು. ಮೊಟ್ಜಾರ್ಟ್‌ರ ಹಲವಾರು ಯುಗಳ ವಾದನದ ರಚನೆಗಳನ್ನು ತಮ್ಮ ಅಕ್ಕನೊಂದಿಗೆ ನುಡಿಸಲು ರಚಿಸಲ್ಪಟ್ಟಿತು. ತಮ್ಮ ಬಾಲ್ಯದಲ್ಲಿ ಯುರೋಪಿನ ಚಳಿ ವಾತವರಣದಲ್ಲಿ ಸತತ ಪ್ರವಾಸ ಮಾಡಿದ ಮೊಟ್ಜಾರ್ಟ್‌ ನಂತರ ಜೀವನದಲ್ಲಿ ಇದರ ಪರಿಣಾಮಸ್ವರೂಪವಾಗಿ ತೀವ್ರ ಅನಾರೋಗ್ಯ ಎದುರಿಸಬೇಕಾಯಿತೆಂಬುದು ಸಾಮಾನ್ಯ ಅಭಿಪ್ರಾಯ. ಮೊಟ್ಜಾರ್ಟ್ ೧೭೬೨ರ ಮ್ಯುನಿಕ್‌ನಲ್ಲಿರುವ ಬವೇರಿಯಾದ ರಾಜ ಆಸ್ಥಾನದಿಂದ ತಮ್ಮ ಪ್ರವಾಸ ಶುರುಮಾಡಿ, ವಿಯನ್ನಾ, ಮ್ಯಾನ್‌ಹೈಮ್, ಪ್ಯಾರಿಸ್, ಲಂಡನ್, ದಿ ಹೇಗ್,ಜ್ಯುರಿಕ್ ಹೀಗೆ ಹಲವಾರು ರಾಜ ದರ್ಬಾರುಗಳಲ್ಲಿ ತಂದೆಯೊಡನೆ ಕಾಣಿಸಿಕೊಂಡು, ಅನೇಕ ಕಚೇರಿಗಳನ್ನು ನೀಡಿದರು. ೧೭೬೭-೬೮ ಅವಧಿಯನ್ನು ವಿಯನ್ನಾ ಪ್ರವಾಸದಲ್ಲಿಯೆ ಕಳೆದ ಮೊಟ್ಜಾರ್ಟ್, ತದನಂತರ ಕೆಲಕಾಲ ಸ್ವಗ್ರಾಮವಾದ ಸಾಲ್ಜ್‌ಬರ್ಗ್‌ನಲ್ಲಿ ಕಳೆದು ಪುನಃ ಪ್ರವಾಸ ಶುರು ಮಾಡಿದರು. ೧೭೬೯-೧೭೭೩ರ ಅವಧಿಯಲ್ಲಿ ಮೂರು ಬಾರಿ ಇಟಲಿ ಪ್ರವಾಸ ಕೈಗೊಂಡ ಮೊಟ್ಜಾರ್ಟ್, ತಮ್ಮ ಮೊದಲನೆ ಇಟಲಿ ಪ್ರವಾಸದಲ್ಲಿ ಅಲ್ಲಿನ ಪ್ರಸಿದ್ದ ಸಂಗೀತಕಾರರಾಗಿದ್ದ ಆಂಡ್ರಿಯಾ ಲುಚೆಸ್ಸಿಯವರನ್ನು ವೇನೀಸ್‌ನಲ್ಲಿ ಮತ್ತು ಜಿ ಬಿ ಮಾರ್ಟೀನಿಯವರನ್ನು ಬಲೋನಿಯದಲ್ಲಿ ಸಂಧಿಸಿದಲ್ಲದೆ, ಇಟಲಿಯ ಪ್ರತಿಷ್ಠಿತ ಅಕಡಮಿಯಾ ಫಿಲಾರ್ಮೋನಿಕಾ ಸದಸ್ಯತ್ವ ಕೂಡ ಪಡೆದರು. ೧೯೯೭ರಲ್ಲಿ ತಮ್ಮ ತಾಯಿಯೊಂದಿಗೆ ಮತ್ತೆ ಮೊಟ್ಜಾರ್ಟ್ ಮ್ಯುನಿಕ್, ಮ್ಯಾನ್‌ಹೈಮ್, ಪ್ಯಾರಿಸ್ ಒಳಗೊಂಡ ಯುರೋಪ್ ಪ್ರವಾಸ ಕೈಗೊಂಡರು. ಈ ಪ್ರವಾಸದ ಸಮಯದಲ್ಲಿಯೆ ಪ್ಯಾರಿಸ್‌ನಲ್ಲಿ ಮೊಟ್ಜಾರ್ಟ್ ಮಾತೃ ವಿಯೋಗ ಅನುಭವಿಸಿದರು. ತಮ್ಮ ಪ್ರವಾಸದ ಸಮಯದಲ್ಲಿ ಅನೇಕ ಪ್ರಭಾವಿ ಮತ್ತು ಪ್ರತಿಭಾವಂತ ಸಂಗೀತಗಾರ ಸಂಪರ್ಕಕ್ಕೆ ಬಂದ ಮೊಟ್ಜಾರ್ಟ್‌ಗೆ ಅನೇಕ ಶ್ರೇಷ್ಟ ವಾಗ್ಗೇಯಕಾರರ ಕ್ರುತಿಗಳ ಪರಿಚಯವಾಯಿತು. ಇವರ ಮೇಲೆ ಸ್ವಲ್ಪ ಹೆಚ್ಚು ಪ್ರಭಾವ ಬೀರಿದ ಸಂಗೀತಗಾರರೆಂದರೆ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಲೋಕದ ಇನ್ನೊಬ್ಬ ಮಹಾರಥಿಯಾದ ಜೊಹಾನ್ ಸೆಬಾಸ್ಟಿಯನ್ ಬಾಖ್‌ರ ೧೧ನೆ ಪುತ್ರರಾದ ಜೊಹಾನ್ ಕ್ರಿಶ್ಚಿಯನ್ ಬಾಖ್. ೧೭೬೪-೬೫ರ ಅವಧಿಯಲ್ಲಿ ಜೊಹಾನ್ ಕ್ರಿಶ್ಚಿಯನ್ ಬಾಖ್‌ರಸಂಪರ್ಕಕ್ಕೆ ಬಂದ ಬಾಲಕ ಮೊಟ್ಜಾರ್ಟ್, ಅವರ ಕ್ರುತಿಗಳ ವಿನ್ಯಾಸ ಮತ್ತು ನಾಟಕೀಯತೆಯನ್ನು ಹೊರತುಪಡಿಸಿ ಕೇವಲ ವಿಶಿಷ್ಟ ಮೈವಳಿಕೆಯಿಂದ ಪ್ರಭಾವಿತರಾದರೆಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಸಂಗೀತಕಾರರಲ್ಲದವರು ಕೆಲವರು ಮೊಟ್ಜಾರ್ಟ್ ಮೇಲೆ ಪ್ರಭಾವ ಬೀರಿದರು. ಅಮೇರಿಕಾದ ಬೆಂಜಮಿನ್ ಫ್ರಾಂಕ್ಲಿನ್‌ರ ಗ್ಲ್ಯಾಸ್ ಹಾರ್ಮೋನಿಕಾದ ಧ್ವನಿಯನ್ನು ಇಷ್ಟ ಪಟ್ಟ ಮೊಟ್ಜಾರ್ಟ್ ಆ ವಾದ್ಯಕ್ಕಾಗಿ ಹಲವು ಸಂಗೀತ ಕೃತಿಗಳನ್ನು ರಚಿಸಿದರು.

ವಿಯನ್ನಾ ಮತ್ತು ಮೊಟ್ಜಾರ್ಟ್

[ಬದಲಾಯಿಸಿ]

೧೭೮೧ರ ವಿಯನ್ನಾ ಪ್ರವಾಸದ ಸಮಯದಲ್ಲಿ ಮೊಟ್ಜಾರ್ಟ್ ಮತ್ತು ಅವರ ಆಶ್ರಯದಾತರಾದ ಹಿರೋನಿಮಸ್ ಕೊಲೊರೆಡೊ ನಡುವಿನ ಸಂಬಂಧ ಹದಗೆಟ್ಟು ಮೊಟ್ಜಾರ್ಟ್ ಆಶ್ರಯ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಒದಗಿತು. ಆದರೆ ಅಲ್ಲಿನ ರಾಜಮನೆತನ ಅವರಲ್ಲಿ ತೋರಿದ ಆಸಕ್ತಿಯಿಂದಾಗಿ ಮೊಟ್ಜಾರ್ಟ್ ವಿಯನ್ನಾ ನಗರದಲ್ಲಿ ನೆಲಸಿದರು.

ಆಗಸ್ಟ್ ೪ ೧೭೮೨ರೊಂದು ಮೊಟ್ಜಾರ್ಟ್ ತಮ್ಮ ತಂದೆಯ ಇಷ್ಟದ ವಿರುದ್ದವಾಗಿ ಕಾನ್ಸ್ಟಾನ್ಜಾ ವೆಬ್ಬರ್ ಎಂಬ ಮಹಿಳೆಯನ್ನು ವಿವಾಹವಾದರು. ಈ ದಂಪತಿಗಳಿಗೆ ಆರು ಮಕ್ಕಳಾದರೂ, ಎರಡು ಮಕ್ಕಳು ಮಾತ್ರ ಪ್ರೌಢಾವಸ್ಥೆ ತಲುಪಿದವು. ಇವರ ಹೆಚ್ಚು ಕಾಲ ಬದುಕುಳಿದ ಪುತ್ರರಾದ ಕಾರ್ಲ್ ಥಾಮಸ್ ಮೊಟ್ಜಾರ್ಟ್ ಮತ್ತು ಫ್ರಾಂಜ್ ಕ್ಸೇವಿಯರ್ ವುಲ್ಫ್‌ಗ್ಯಾಂಗ್ ಮೊಟ್ಜಾರ್ಟ್ ಮದುವೆಯಾಗದೆ ಅಥವ ಸಂತಾನವಿಲ್ಲದೆ ವಂಶ ಕೊನೆಗೊಳಿಸಿದರು.

೧೭೮೨ ಮೊಟ್ಜಾರ್ಟ್ ಪಾಲಿಗೆ ಮಹತ್ತರ ವರ್ಷವಾಗಿತ್ತು. ಆ ವರ್ಷ ಅವರ ಆಪೇರಾ ದಿ ಎನ್ಫ್ಯೂರನ್ಗ್ ಆಸ್ ದಿಮ್‌ ಸೆರಾಯ್ಲ್ (ಸೆರಾಲಿಯೊವಿನ ಅಪಹರಣ) ಪ್ರದರ್ಶನ ಕಂಡು ಅಪಾರ ಜನಪ್ರಿಯತೆ ಪಡೆಯಿತು ಮತ್ತು ಮೊಟ್ಜಾರ್ಟ್ ಆ ವರ್ಷ ಹಲವಾರು ಕಚೇರಿಗಳು ನೀಡಿ ತಮ್ಮ ಸಂಯೋಜನ, ನಿರ್ದೇಶನ ಮತ್ತು ಪಿಯಾನೋ ವಾದನದ ಪ್ರತಿಭೆಗಳನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದರು.

೧೭೮೨-೮೩ರ ಅವಧಿಯಲ್ಲಿ ಮೊಟ್ಜಾರ್ಟ್ [ಬಾರೋಕ್] ಯುಗದ ನಿಸ್ಸೀಮ ಸಂಗೀತಗಾರರಾದ ಜೊಹಾನ್ ಸೆಬಾಸ್ಟಿಯನ್ ಬಾಖ್ ಮತ್ತು ಜಾರ್ಜ್ ಫೆಡರಿಕ್ ಹ್ಯಂಡೆಲ್‌ರ ರಚನೆಗಳ ಗಾಢ ಅಧ್ಯಯನ ನೆಡಸಿದರು. ಇದರ ಪರಿಣಾಮವಾಗಿ ಮೊಟ್ಜಾರ್ಟ್ ಬರೋಕ್ ಶೈಲಿಯಲ್ಲಿ ಅನೇಕ ಕೃತಿಗಳನ್ನು ಹೊರತಂದರು. ಬರೋಕ್ ಛಾಪು ಇವರ ಸಿಂಫೋನಿ ೪೧ ಮತ್ತು ದಿ ಸಾಬರ್‌ಫ್ಲ್ಯೂಟ (ಮಾಯೆಯ ಕೊಳಲು ಅಥವ ಆಂಗ್ಲ ಭಾಷೆಯಲ್ಲಿ ದಿ ಮ್ಯಾಜಿಕ್ ಪ್ಲ್ಯೂಟ್) ಕೃತಿಗಳ ಭಾಗಗಳಲ್ಲಿ ಕಾಣಬಹುದು.

೧೭೮೩ರಲ್ಲಿ ವುಲ್ಫ್‌ಗ್ಯಾಂಗ್ ಮತ್ತು ಕಾನ್ಸ್ಟಾನ್ಜಾ ದಂಪತಿಗಳು ತಂದೆ ಲಿಯೊಪಾಲ್ಡ್ ಮತ್ತು ಅಕ್ಕ ಮಾರಿಯಾ ಆನಾರನ್ನು ಕಾಣಲು ಸಾಲ್ಜ್‌ಬರ್ಗ್‌ಗೆ ತೆರಳಿದರು. ಇವರ ಪರಿವಾರ ಮತ್ತು ಹೆಂಡತಿಯ ನಡುವೆ ಸಂಬಂಧ ಸುಧಾರಿಸದಿದ್ದರೂ, ಆ ಸಮಯದಲ್ಲಿ ಮೊಟ್ಜಾರ್ಟ್‌ ರಚಿಸಿದ ಅತ್ಯಂತ ಉತ್ಕೃಷ್ಟ ಧಾರ್ಮಿಕ ಸಮೂಹ ಗೀತೆ ಎಂದು ಪರಿಗಣಿಸಲಾಗುವ ಗ್ರಾಸ ಮೀಸು (ಶ್ರೇಷ್ಟ ಸಮೂಹ ಅಥವ ಆಂಗ್ಲ ಭಾಷೆಯಲ್ಲಿ ಗ್ರೇಟ್ ಮಾಸ್) ಸಾಲ್ಜ್‌ಬರ್ಗ್‌ನಲ್ಲಿ ಪ್ರದರ್ಶನ ಕಂಡಿತು.

ವಿಯನ್ನಾ ನಗರದಲ್ಲಿರುವಾಗಲೆ ಮೊಟ್ಜಾರ್ಟ್ ಸ್ನೇಹ ಇನ್ನೊಬ್ಬ ಪ್ರಸಿದ್ದ ಸಂಗೀತಕಾರರಾದ ಜೋಸೆಫ್ ಹೇಡನ್ ಜೊತೆ ಬೆಳಯಿತು. ಕೆಲವೊಮ್ಮೆ ಹೇಡನ್ ವಿಯನ್ನಾ ನಗರಕ್ಕೆ ಭೆಟಿಯಿತ್ತಾಗ ಇಬ್ಬರೂ ಸೇರಿ ಒಟ್ಟಿಗೆ ನುಡಿಸುತ್ತಿದ್ದರು. ೧೭೮೨-೧೭೮೫ರ ಅವಧಿಯಲ್ಲಿ ಮೊಟ್ಜಾರ್ಟ್ ೬ ಕ್ವಾರ್ಟೆಟ್(ನಾಲ್ಕು ವಾದ್ಯಗಳ ವೃಂದ) ಕೃತಿಗಳನ್ನು ಹೇಡನ್‌ಗೆ ಸಮರ್ಪಿಸಿದರು ಸಮಾನ್ಯವಾಗಿ ಇವುಗಳು ಹೇಡನ್ ವಿರಚಿತ ಓಪಸ್ ೩೩ ಕೃತಿಗೆ ಮೊಟ್ಜಾರ್ಟ್‌ರ ಪ್ರತ್ಯುತ್ತರ ಎಂದು ಪರಿಗಣಿಸಲಾಗುತ್ತದೆ. ಹೇಡನ್ ಕೂಡ ಮೊಟ್ಜಾರ್ಟ್‌ರ ದೊಡ್ಡ ಅಭಿಮಾನಿಯಾಗಿದ್ದರು. ಮೊಟ್ಜಾರ್ಟ್‌ರ ಕಚೇರಿ ಕೇಳಿ ಅವರ ತಂದೆ ಲಿಯೊಪಾಲ್ಡ್ ಕುರಿತು ಹೇಗೆ ಹೇಳಿದ್ದರಂತೆ "ದೇವರ ಮುಂದೆ ನಿಂತು ಒಬ್ಬ ಪ್ರಾಮಾಣಿಕ ಮನುಷ್ಯನಾಗಿ ನಾನು ಹೇಳುವುದೇನೆಂದರೆ ನಿಮ್ಮ ಮಗನಷ್ಟು ಶ್ರೇಷ್ಟ ಸಂಗೀತಗಾರನನ್ನು ನಾನು ಕಂಡಿಲ್ಲ ಮತ್ತು ಕೇಳೂ ಇಲ್ಲ. ಅವರಿಗೆ ಸಂಗೀತದಲ್ಲಿ ಸದಭಿರುಚಿಯಿದೆ ಮತ್ತು ಅದಕ್ಕಿಂತ ಹೆಚ್ಚಾಗಿ ಗಾಢ ಸಂಯೋಜನಾ ಜ್ಞಾನವಿದೆ"

೧೭೮೨-೧೭೮೫ರ ಅವಧಿಯಲ್ಲಿ ಮೊಟ್ಜಾರ್ಟ್ ಹಲವಾರು ಕಚೇರಿಗಳನ್ನು ಆಯೋಜಿಸಿ ಅವುಗಳಲ್ಲಿ ತಮ್ಮ ಉತ್ಕೃಷ್ಟ ಕೃತಿಗಳನ್ನು ಪ್ರದರ್ಶಿಸಿದರು. ಇವುಗಳಲ್ಲಿ ತಾವೆ ಸ್ವತಃ ಪಿಯಾನೋ ನುಡಿಸುತ್ತಿದ್ದರು. ಕಚೇರಿಗಳಿಂದ ಆರ್ಥಿಕ ವರಮಾನ ಹೆಚ್ಚಿದರೂ, ಸೇರಬೇಕಿದ್ದ ಹಣ ಕೈ ಸೇರದೆ ಮತ್ತು ಆಡಂಬರದ ಜೀವನ ಶೈಲಿಯಿಂದಾಗಿ ಮೊಟ್ಜಾರ್ಟ್ ಆಗಾಗ ಆರ್ಥಿಕ ಮುಗಟ್ಟು ಎದುರಿಸಿತ್ತಿದ್ದರು. ಮೊಟ್ಜಾರ್ಟ್ ವಿಯನ್ನಾದಲ್ಲಿ ವಾಸಿಸಿದ ಮನೆ ಇಂದಿಗೂ ಇದೆ ಮತ್ತು ಅವರ ಅಭಿಮಾನಿಗಳು ಇಂದಿಗೂ ಅಲ್ಲಿಗೆ ಭೇಟಿ ನೀಡುತ್ತಾರೆ. ಇದೆ ಮನೆಯಲ್ಲಿ ಇವರು ಶ್ರೇಷ್ಟ ಆಪೇರಾ ಕೃತಿಗಳಾದ ಲೆ ನಾಟ್ಜೆ ದಿ ಫಿಗಾರೊ(ಫಿಗಾರೊವಿನ ಮದುವೆ)೧೭೮೬ರಲ್ಲಿ ಮತ್ತು ಡಾನ್ ಜೋವ್ವಾನಿ ೧೭೮೭ರಲ್ಲಿ ರಚಿಸಿದರು

ಪ್ರಾಗ್ ಮತ್ತು ಮೊಟ್ಜಾರ್ಟ್

[ಬದಲಾಯಿಸಿ]

ಮೊಟ್ಜಾರ್ಟ್ ಪ್ರಾಗ್ ನಗರ ಮತ್ತು ಅದರ ನಿವಾಸಿಗಳೊಡನೆ ದ ಜೊತೆ ವಿಶೇಷ ಸಂಬಂಧ ಬೆಳಸಿಕೊಂಡಿದ್ದರು. ಮೊಟ್ಜಾರ್ಟ್‌ ಆಪೇರಾ ಕೃತಿ ಲೆ ನಾಟ್ಜೆ ದಿ ಫಿಗಾರೊಗೆ ವಿಯನ್ನಾ ನಗರದಲ್ಲಿ ಹೆಚ್ಚು ಮುನ್ನಣೆ ಸಿಗದಿದ್ದರೂ, ಪ್ರಾಗ್‌ನ ಜನತೆ ಈ ಕೃತಿಯನ್ನು ಬಹಳ ಮೆಚ್ಚಿಕೊಂಡು ಅ ಕೃತಿಗೆ ಸಲ್ಲಬೇಕಾದ ಗೌರವ ಸಲ್ಲಿಸಿತು. ಮೊಟ್ಜಾರ್ಟ್‌‌ರ ಹೇಳಿಕೆ "ನನ್ನ ಚೆಕ್ ಮಿತ್ರರು ನನ್ನ ಬಲ್ಲರು" ಚೆಕ್ ಪ್ರದೇಶದಲ್ಲಿ ಬಹಳ ಜನಪ್ರಿಯವಾಯಿತು. ಇಂದಿಗೂ ಅನೇಕ ಮೊಟ್ಜಾರ್ಟ್ ಅಭಿಮಾನಿಗಳು ಪ್ರಾಗ್‌ನ ವಿಲ್ಲಾ ಬರ್ಟ್ರ್‌ರಾಮ್ಕಾದಲ್ಲಿರುವ ಮೊಟ್ಜಾರ್ಟ್ ಸ್ಮಾರಕ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ಚೇಂಬರ್ ಸಂಗೀತ ಶೈಲಿ ಸವಿಯುತ್ತಾರೆ. ಪ್ರಾಗ್ ನಗರದಲ್ಲಿ ಅಕ್ಟೋಬರ್ ೨೯ ೧೭೮೭ರೊಂದು ಮೊಟ್ಜಾರ್ಟ್‌ರ ಆಪೇರಾ ಕೃತಿ ಡಾನ್ ಜೊವ್ವಾನಿ ನ್ಯಾಷನಲ್ ಥಿಯೇಟರ್‌ನಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಪ್ರಾಗ್ ನಗರದ ಜನತೆ ಮೊಟ್ಜಾರ್ಟ್‌ಗೆ ಧನಸಹಾಯ ಮತ್ತು ವರಮಾನ ನೀಡಿ ಪೋಷಿಸಿದ ದಾಖಲೆ ಇದೆ.

ಅನಾರೋಗ್ಯ ಮತ್ತು ಸಾವು

[ಬದಲಾಯಿಸಿ]

ಮೊಟ್ಜಾರ್ಟ್ ಅನಾರೋಗ್ಯ ಮತ್ತು ಸಾವಿನ ಸುತ್ತ ಹಲವಾರು ದಂತಕಥೆಗಳು, ವಾದ ಪ್ರತಿವಾದಗಳು ಮತ್ತು ವಿದ್ವಾಂಸರ ಸಿದ್ದಾಂತಗಳು ಎದ್ದಿವೆ. ಮೊಟ್ಜಾರ್ಟ್ ಆರೋಗ್ಯ ಹಂತ ಹಂತವಾಗಿ ಇಳಿಮುಖವಾಗುತ್ತಿತ್ತು, ಮೊಟ್ಜಾರ್ಟ್‌ಗೆ ತನ್ನ ಸಾವಿನ ಬಗ್ಗೆ ಪೂರ್ವಸೂಚನೆ ಇತ್ತು ಮತ್ತು ಈ ಅರಿವು ಅವರ ಕೊನೆಗಾಲದ ಕೃತಿಗಳಲ್ಲಿ ವ್ಯಕ್ತವಾಗುತ್ತದೆ ಎಂಬ ವಾದ ಕೆಲವರದ್ದು. ಆದರೆ ವಿದ್ವಾಂಸರು, ಮೊಟ್ಜಾರ್ಟ್ ಕೊನೆ ದಿನಗಳಲ್ಲಿ ಬರೆದ ಪತ್ರಗಳನ್ನು ಪರಿಶೀಲಿಸಿ, ಮೊಟ್ಜಾರ್ಟ್ ಕೊನೆ ದಿನಗಳಲ್ಲಿ ಸ್ವಾಸ್ಥ್ಯದಲ್ಲಿದ್ದು, ಅವರ ಧಿಡೀರ್ ಸಾವು ಅವರ ಪರಿವಾರದವ ಮತ್ತು ಬಂಧು ಮಿತ್ರರಿಗೆ ಆಘಾತ ತಂದಿತ್ತು ಎಂದು ವಾದಿಸಿತ್ತಾರೆ.

ಮೊಟ್ಜಾರ್ಟ್ ಡಿಸೆಂಬರ್ ೫ ೧೭೯೧ರೊಂದು ರಾತ್ರಿ ಸುಮಾರು ೧ ಘಂಟೆ ಸಮಯದಲ್ಲಿ ತೀವ್ರ ಜ್ವರದಿಂದ ನಿಧನರಾದರೆಂದು ಆಗಿನ ಕಾಲದ ವೈದ್ಯಕೀಯ ದಾಖಲೆಗಳು ತಿಳಿಸುತ್ತವೆ. ಇವರ ಸಾವಿನ ಬಗ್ಗೆಯೂ ಹಲವಾರು ಊಹಾಪೋಹಗಳಿದ್ದು ಪಾದರಸ(ಮರ್ಕ್ಯುರಿ) ವಿಷಪ್ರಾಶನ, ವಾತ, ಜಂತು ರೋಗ ಇತ್ಯಾದಿ ಕಾರಣಗಳೂ ತಿಳಿಸುವಂತ ಹಲವು ವಾದಗಳು ಮತ್ತು ಸಿದ್ದಾಂತಗಳಿವೆ. ಆಗಿನ ಕಾಲದಲ್ಲಿ ಚಾಲ್ತಿಯಲ್ಲಿದ್ದ ರಕ್ತಸ್ರಾವ ಚಿಕಿತ್ಸೆ (ದೇಹದಿಂದ ಕೆಟ್ಟ ರಕ್ತ ತೆಗೆಯುವುದು) ಕೂಡ ಇವರ ಸಾವಿಗೆ ಕಾರಣವಿರಬಹುದೆಂಬ ಅಭಿಪ್ರಾಯವಿದೆ.

ಮೊಟ್ಜಾರ್ಟ್‌ರ ಅಂತಿಮ ಹಾಗು ಅಪೂರ್ಣ ಕೃತಿಯದ ರೆಕ್ವಿಯಮ್ ತದನಂತರ ಪತ್ನಿ ಕಾನ್ಸ್ಟಾನ್ಜಾ ಇಚ್ಚೆಯಂತೆ ಫ್ರಾನ್ಜ್ ಕ್ಷೇವಿಯರ್ ಸೌಸಮೇರ್ ಮತ್ತು ಇತರರು ಸಂಪೂರ್ಣಗೊಳಿಸಿದರು.

ಕೆಲವು ದಂತಕಥೆಗಳು ಹೇಳುವಂತೆ, ಮೊಟ್ಜಾರ್ಟ್ ತಮ್ಮ ಕೊನೆಗಾಲದಲ್ಲಿ ಕೈಯಲ್ಲಿ ಬಿಡುಗಾಸಿಲ್ಲದೆ ತೀವ್ರ ಬಡತನದಲ್ಲಿ ಸತ್ತರು. ಆದರೆ ವಿದ್ವಾಂಸರು ವಿಯನ್ನಾದಲ್ಲಿದ್ದ ದೊರೆಯ ರಾಜಾಶ್ರಯ ಹೊಂದಿದ ಮತ್ತು ಪ್ರಾಗ್ ಸೇರಿದಂತೆ ಯುರೋಪಿನ ಇತರ ಭಾಗಗಳಲ್ಲಿದ್ದ ಕಲಾಪೋಷಕರಿಂದ ವೇತನ ಪಡೆಯುತ್ತಿದ್ದ ಮೊಟ್ಜಾರ್ಟ್‌ರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು ಎಂದು ವಾದಿಸುತ್ತಾರೆ. ಮೊಟ್ಜಾರ್ಟ್ ಸಾಲ ಕೋರಿ ಬರೆದ ಪತ್ರಗಳೂ ಸಿಕ್ಕಿವೆ ಆದರೆ ಅವು ಅವರ ಬಡತನಕ್ಕೆ ಪುರಾವೆಯಾಗದಿದ್ದಾರೂ ಅವರ ಡುಡಿಮೆಗಿಂತ ಹೆಚ್ಚು ಖರ್ಚಿರುವ ಆಡಂಬರದ ಜೀವನ ಶೈಲಿಯನ್ನು ಸೂಚಿಸುತ್ತವೆ. ಮೊಟ್ಜಾರ್ಟ್ ಶವವನ್ನು ವಿಯನ್ನಾದ ಸಂತ ಮಾರ್ಕ್ಸ್ ಸ್ಮಶಾನದಲ್ಲಿ ಹೂಳಲಾಯಿತು. ೧೮೦೯ರಲ್ಲಿ ಮೊಟ್ಜಾರ್ಟ್ ವಿಧವೆ ಕಾನ್ಸ್ಟಾನ್ಜಾ ಡೆನ್ಮಾರ್ಕಿನ ರಾಯಭಾರಿಯಾದ ಜಾರ್ಜ್ ನಿಕಲಸ್ ವಾನ್ ನಿಸ್ಸೇನ್‌ರನ್ನು ವರಿಸಿದರು. ಮೊಟ್ಜಾರ್ಟ್ ದೊಡ್ಡ ಅಭಿಮಾನಿಯಾಗಿದ್ದ ಇವರು, ಮೊಟ್ಜಾರ್ಟ್ ಬರೆದ ಹಲವಾರು ಪತ್ರಗಳನ್ನು ಸಂಪಾದಿಸಿ ಮೊಟ್ಜಾರ್ಟ್ ಜೀವನಚರಿತ್ರೆ ಬರೆದರು.

ಕೃತಿಗಳು

[ಬದಲಾಯಿಸಿ]

ಕೃತಿಗಳು

[ಬದಲಾಯಿಸಿ]

ಮೊಟ್ಜಾರ್ಟ್‌ರದ್ದು ಬಹುಮುಖ ಪ್ರತಿಭೆ. ಸುಮಾರು ಪ್ರಕಾರದ ಸಂಗೀತ ಶೈಲಿಗಳಲ್ಲಿ ಅಗಾಧ ಸಂಖ್ಯೆಯ ಕೃತಿಗಳನ್ನು ರಚಿಸಿದರು. ಇವರು ಒಟ್ಟಾರೆ ೪೧ ಸಿಂಫೊನಿ, ೨೭ ಪಿಯಾನೋ ಕಾನ್ಸರ್ಟೋಗಳು, ೧೬ ಆಪೇರಾ, ೧೯ ಪಿಯಾನೋ ಸೊನಾಟಗಳು ಮತ್ತು ೨೩ ತಂತಿ ಕ್ವಾರ್ಟೆಟ್ (ನಾಲ್ಕು ವಾದ್ಯಗಳ ವೃಂದ) ಕಚೇರಿ ಸೇರಿದಂತೆ ೬೦೦ಕ್ಕೂ ಹೆಚ್ಚು ಸಂಗೀತ ಕೃತಿಗಳನ್ನು ರಚಿಸಿದರು. ಮೊಟ್ಜಾರ್ಟ್ ಯಾವುದೆ ಹೊಸ ಪ್ರಕಾರದ ಸಂಗೀತ ಹುಟ್ಟುಹಾಕದಿದ್ದರೂ ಪಿಯಾನೋ ಕಾನ್ಸರ್ಟೋ ಶೈಲಿಯ ಸಂಗೀತವನ್ನು ಬೆಳಸಿ ಜನಪ್ರಿಯಗೊಳಿಸುವಲ್ಲಿ ಅವರ ಕೊಡುಗೆ ಅಪಾರ. ಮೊಟ್ಜಾರ್ಟ್ ಅನೇಕ ಧಾರ್ಮಿಕ ಸಂಗೀತ ಕೃತಿಗಳನ್ನು ರಚಿಸಿದಲ್ಲದೆ ಅನೇಕ ನೃತ್ಯಗಾನ ಮತ್ತು ಇತರ ಲಘು ಸಂಗೀತ ಕೃತಿಗಳನ್ನು ಕೂಡ ರಚಿಸಿದರು.

ಮೊಟ್ಜಾರ್ಟ್ ಮತ್ತು ಜನಪ್ರಿಯ ಸಂಗೀತ

[ಬದಲಾಯಿಸಿ]

ಚಲನಚಿತ್ರಗಳು ಮತ್ತು ಜಾಹಿರಾತುಗಳಲ್ಲಿ ಮೊಟ್ಜಾರ್ಟ್ ವಿರಚಿತ ಕೃತಿಗಳು ಅಥವಾ ಅವ ಕೃತಿಗಳನ್ನಾಧರಿಸಿದ ಸಂಗೀತ ವಿಶ್ವಾದ್ಯಂತ ಧಾರಾಳವಾಗಿ ಬಳಸಲಾಗಿದೆ. ಮೊಬೈಲ್ ಪೋನ್ ಕರೆಗಂಟೆಯಾಗಿ ಮೊಟ್ಜಾರ್ಟ್‌ರ ಕೃತಿಗಳು ಭಾಗಗಳನ್ನು ಬಳಸಲಾಗಿದೆ. ಭಾರತದಲ್ಲಿ ಪ್ರಚಲಿತದಲ್ಲಿರುವ ಕೆಲವು ಪ್ರಸಿದ್ದ ಮೊಟ್ಜಾರ್ಟ್ ಕೃತಿ ಆಧಾರಿತ ಜನಪ್ರಿಯ ಸಂಗೀತ

  • ಟೈಟನ್ ಗಡಿಯಾರದ ಜಾಹಿರಾತಿನಲ್ಲಿ ಬರುವ ಸಂಗೀತ, ಮೊಟ್ಜಾರ್ಟ್‌ರ ೨೫ನೆ ಸಿಂಫೊನಿಯ ಒಂದು ಭಾಗ.
  • ಸಲೀಲ್ ಚೌಧರಿ ಸಂಗೀತ ನಿರ್ದೇಶನದ "ಛಾಯ"ಎಂಬ ಹಳೆ ಚಲನಚಿತ್ರದ "ಇತನಾ ನ ಮುಜುಸೆ ತು ಪ್ಯಾರ್ ಬಡಾ" ಮೊಟ್ಜಾರ್ಟ್‌ರ ೪೦ನೆ ಸಿಂಫೊನಿಯ ಒಂದು ಭಾಗ.
  • ಮೊಟ್ಜಾರ್ಟ್‌ರ ಅಲಾ ಟರ್ಕಾ ಮೊಬೈಲ್ ಫೊನ್ ಕರೆಗಂಟೆಯಾಗಿ ಜನಪ್ರಿಯವಾಗಿದೆ

ಕೊಕೆಲ್ ವರ್ಗೀಕರಣ

[ಬದಲಾಯಿಸಿ]

ಮೊಟ್ಜಾರ್ಟ್ ಕಾಲವಾದ ನಂತರ ಅವರ ಕೃತಿಗಳ ಒಂದು ಸಂಗ್ರಹವಾಗಿ ಕಲೆ ಹಾಕಲು ಹಲವು ಪ್ರಯತ್ನ ನೆಡಯಿತುಆದರೆ ಅವು ಯಾವೂ ಯಶಸ್ಸು ಕಾಣಲಿಲ್ಲ. ಪ್ರಪ್ರಥಮವಾಗಿ ೧೮೬೨ರಲ್ಲಿ ಲುಡ್ವಿಗ್ ವಾನ್ ಕೊಕೆಲ್ ಮೊಟ್ಜಾರ್ಟ್ ಕೃತಿಗಳ ಸಂಗ್ರಹ ಹೊರತಂದರು. ಕೊಕೆಲ್ ಕಲಾನುಸಾರವಾಗಿ ಮೊಟ್ಜಾರ್ಟ್ ಕೃತಿಗಳನ್ನು ಅಂಕೆಗಳ ಸಹಾಯದಿಂದ ವರ್ಗೀಕರಣ ಮಾಡಿದರು. ಮೊಟ್ಜಾರ್ಟ್‌ರ ಹಲವು ಮೇರು ಕೃತಿಗಳು ಇಂದು ಕೊಕೆಲ್ ವರ್ಗೀಕರಣ ಸಂಖ್ಯೆಯಿಂದ ಸಾರ್ವಜನಿಕರಿಗೆ ಪರಿಚಿತವಾಗಿದೆ. ಉದಾ. ಮೊಟ್ಜಾರ್ಟ್‌ರ ಎ ಮೆಜರ್‌ನಲ್ಲಿರುವ ಪಿಯಾನೋ ಕಾನ್ಸರ್ಟೊ "ಕೆ೪೮೮" ಅಥವಾ "ಕೆವಿ೪೮೮" ಎಂದು ಸಾರ್ವತ್ರಿಕವಾಗಿ ಕರೆಯಲ್ಪಡುತ್ತದೆ. ಈ ಸಂಗ್ರಹ ಈಗಾಗಲೆ ಆರು ಪರಿಷ್ಕರಣೆಯನ್ನು ಕಂಡಿದೆ.

ದಂತಕಥೆಗಳು ಮತ್ತು ವಿವಾದಗಳು

[ಬದಲಾಯಿಸಿ]

ಮೊಟ್ಜಾರ್ಟ್ ಸುತ್ತ ದಂತಕೆಥೆಗಳು ಮತ್ತು ವಿವಾದಗಳು ದಟ್ಟವಾಗಿ ಹರಡಿವೆ ಅದರಲ್ಲೂ ಅವರ ಸಾವಿನ ಕುರುತಿರುವ ವದಂತಿಗಳು ಸಾಹಿತ್ಯ ಕೃತಿಗಳಾಗಿ ಕೂಡ ಮಾರ್ಪಟ್ಟಿವೆ. ಒಂದು ಜನಪ್ರಿಯ ವದಂತಿಯೆಂದರೆ ಮೊಟ್ಜಾರ್ಟ್ ಮತ್ತು ಇನ್ನೊಬ್ಬ ಸಂಗೀತಗಾರ ಆಂಟೊನಿಯೊ ಸ್ಯಾಲಿಯೇರಿ ನಡುವಿನ ಪೈಪೋಟಿ. ಕೆಲವರು ಮೊಟ್ಜಾರ್ಟ್ ಸಾವಿನ ಹಿಂದೆ ಸ್ಯಾಲಿಯೇರಿಯ ಕೈವಾಡ ಇದೆ ಎಂದು ಶಂಕಿಸಿ ಬರೆದಿರುವರು. ಮೊಟ್ಜಾರ್ಟ್ ವಿಷ ಸೇವನೆಯಿಂದ ಸತ್ತರೂ ಮತ್ತು ಸ್ಯಾಲಿಯೇರಿಯೆ ಮೊಟ್ಜಾರ್ಟ್ ಹತ್ಯೆಯ ಸಂಚು ಮಾಡಿದರೆಂಬ ವಾದ ಕೂಡ ಇತ್ತು. ಇದೆ ವಿಷಯವನ್ನು ಆಧಾರಿಸಿ ಅಲೆಕ್ಸಾಂಡರ್ ಪುಷ್ಕಿನ್‌ರ ಮೊಟ್ಜಾರ್ಟ್ ಆಂಡ್ ಸ್ಯಾಲಿಯೇರಿ ಎಂಬ ನಾಟಕ, ನಿಕೊಲಾಯ್ ರಿಮ್ಸ್ಕಿ-ಕೊರ್ಸಕೊವ್ ಆಪೇರಾ ಮೊಟ್ಜಾರ್ಟ್ ಎಟ್ ಸ್ಯಾಲಿಯೇರಿ ಮತ್ತು ಪೀಟರ್ ಶಾಫರ್‌ರ ಅಮೇಡಿಯುಸ್ ನಾಟಕ ಹೊರಬಂದವು. ಪೀಟರ್ ಶಾಫರ್‌ರ ನಾಟಕ ಅಮೇಡಿಯುಸ್ ತದನಂತರ ಚಲನಚಿತ್ರವಾಗಿ ಮಾಡಲಾಯಿತು. ಈ ಚಿತ್ರ ೧೯೮೫ರಲ್ಲಿ ೮ ಆಸ್ಕರ್ ಪ್ರಶಸ್ತಿಗಳಿಸಿತು ಪ್ರಶಸ್ತಿಗಳಿಸಿತು. ವಿದ್ವಾಂಸರು ಮೊಟ್ಜಾರ್ಟ್-ಸ್ಯಾಲಿಯೇರಿ ಪೈಪೋಟಿಯನ್ನು ಸುಚಿಸುವ ಯಾವುದೆ ಪುರಾವೆಯಿಲ್ಲ ಎಂದು ಸ್ಪಷ್ಟವಾಗಿ ತಳ್ಳಿಹಾಕಿರುವರು. ಮೊಟ್ಜಾರ್ಟ್ಗಾಗಿ ಸ್ಯಾಲಿಯೇರಿ ರಾಜದರ್ಬಾರಿನಿಂದ ಸಂಗೀತ ಕೃತಿಗಳ ಪ್ರತಿ ತೆಗೆದುಕೊಟ್ಟಿರುವುದು ಮತ್ತು ಮೊಟ್ಜಾರ್ಟ್ ತನ್ನ ಮಗನಾದ ಫ್ರಾಂಜ್ ಕ್ಷೇವಿಯರನ್ನು ಸ್ಯಾಲಿಯೇರಿ ಬಳಿ ಸಂಗೀತ ಅಭ್ಯಾಸಕ್ಕಾಗಿ ಕಳುಹಿಸಿದ ಬಗ್ಗೆ ಸ್ಪಷ್ಟ ದಾಖಲೆಗಳಿವೆ. ಇನ್ನೊಂದು ಪ್ರಸಿದ್ದ ವಿವಾದ ಮೊಟ್ಜಾರ್ಟ್ ಪತಿಭೆ ಕುರಿತು. ಕೆಲವರು ಮೊಟ್ಜಾರ್ಟ್‌ರ ಬಾಲ್ಯದ ಕೃತಿಗಳು ಅವರ ಪ್ರೌಡಾವಸ್ಥೆಯ ಕೃತಿಗಳಿಗೆ ಹೋಲಿಸಿದರೆ ತೀರ ಸರಳ ಹಾಗು ಅಪಕ್ವ ಎಂದು ವಾದಿಸುತ್ತಾರೆ. ಆದರೆ ಹಲವರು ಈ ವಾದವನ್ನು ನಂಬದೆ ಮೊಟ್ಜಾರ್ಟ್ ಬಾಲ್ಯದ ಕೃತಿಗಳನ್ನೂ ಮೆಚ್ಚುತ್ತಾರೆ. ಅಮೇಡಿಯುಸ್ ಚಿತ್ರವು ಜಾಹೀರು ಪಡಿಸಿದಂತೆ ಮೊಟ್ಜಾರ್ಟ್ ಯಾವುದೆ ಪ್ರಯಾಸವಿಲ್ಲದೆ ಸಂಗೀತ ಕೃತಿಗೆಳನ್ನು ರಚಿಸುತ್ತಿದ್ದರೆಂಬುದು ಒಂದು ಉತ್ಪ್ರೇಕ್ಷೆ ಎಂದು ವಿದ್ವಾಂಸರ ಅಂಬೋಣ. ಸತತ ಪ್ರಯಾಸ, ದುಡಿಮೆ, ಜ್ಞಾನಾರ್ಜನೆ ಮತ್ತು ಶ್ರಮದಿಂದ ಮೊಟ್ಜಾರ್ಟ್ ಪ್ರಸಿದ್ದಿಗೆ ಬಂದದ್ದು ಹಾಗು ದೈವದತ್ತ ವಿಶೇಷ ನೈಪುಣ್ಯದಿಂದಲ್ಲ ಎಂದು ವಿದ್ವಾಂಸರ ನಂಬಿಕೆ.

ಮಾಧ್ಯಮಗಳು

[ಬದಲಾಯಿಸಿ]
(audio)
ದಿ ಹೊಲ ರಾಷ್‌(ಕೇಳಿ Archived 2006-02-20 ವೇಬ್ಯಾಕ್ ಮೆಷಿನ್ ನಲ್ಲಿ.)
ದಿ ಸಾಬರ್‌ಫ್ಲ್ಯೂಟ ಭಾಗವಾದ ದಿ ಹೊಲ ರಾಷ್‌.
ಕೆ೩೧೪(ಕೇಳಿ)
ಎ ಮೆಜರ್‌ನಲ್ಲಿರುವ ಪಿಯಾನೋ ಸೊನಾಟ ೧೧ನೆಯ ಕೊನೆ ಭಾಗ.
ಕೆ೬೨೨(ಕೇಳಿ)
ಎ ಮೇಜರ್‌ನಲ್ಲಿರುವ ಕ್ಲಾರಿನೆಟ್ ಸೊನಾಟ, ಮೊದಲನೆ ಭಾಗ
ಕೆ೬೨೨(ಕೇಳಿ)
ಈ ಮೇಜರ್‌ನಲ್ಲಿರುವ ಕ್ಲಾರಿನೆಟ್ ಸೊನಾಟ, ಎರಡನೆ ಭಾಗ
ಕೆ೬೨೨(ಕೇಳಿ)
ಎ ಮೇಜರ್‌ನಲ್ಲಿರುವ ಕ್ಲಾರಿನೆಟ್ ಸೊನಾಟ, ಮೂರನೆ ಭಾಗ
ಕೆ೫೫೦(ಕೇಳಿ)
೪೦ನೆ ಸಿಂಫೊನಿಯ ಮೊದಲನೆ ಭಾಗ
ಕೆ೫೫೦(ಕೇಳಿ)
೪೦ನೆ ಸಿಂಫೊನಿಯ ಎರಡನೆ ಭಾಗ
ಕೆ೫೫೦(ಕೇಳಿ)
೪೦ನೆ ಸಿಂಫೊನಿಯ ಮೂರನೆ ಭಾಗ
ಕೆ೫೫೦(ಕೇಳಿ)
೪೦ನೆ ಸಿಂಫೊನಿಯ ನಾಲ್ಕನೆ ಭಾಗ
ಕೆ೫೦೩(ಕೇಳಿ)
ಡಾನ್ ಜೊವ್ವಾನ್ನಿ ಆಪೆರದ ಪ್ರಸ್ತಾಪ ಭಾಗ
ಕೆ೩೬೪ (ಕೇಳಿ)
ಈ ಫ್ಲಾಟ್‌ನಲ್ಲಿರುವ ಸಿಂಪೊನಿ

ಬಾಹ್ಯ ಸಂಪರ್ಕ ಕೊಂಡಿಗಳು

[ಬದಲಾಯಿಸಿ]