ವಿಷಯಕ್ಕೆ ಹೋಗು

ವಿ. ಕೆ. ಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶ್ರೀ.ವಿ.ಕೆ.ಮೂರ್ತಿ ಇಂದ ಪುನರ್ನಿರ್ದೇಶಿತ)
ವೆಂಕಟರಾಮ ಪಂಡಿತ ಕೃಷ್ಣಮೂರ್ತಿ
೨೦೧೦ ರಲ್ಲಿ ವಿ.ಕೆ.ಮೂರ್ತಿಯವರು.
Bornನವೆಂಬರ್ ೨೬, ೧೯೨೩.
ಮೈಸೂರು
Diedಎಪ್ರಿಲ್ ೦೭, ೨೦೧೪
Nationalityಭಾರತೀಯ
Occupationಚಲನಚಿತ್ರ ಛಾಯಾಗ್ರಾಹಕರು
Years active೧೯೫೧-೨೦೦೧
Known for'೫೬ ನೆಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಪ್ರಥಮ ತಂತ್ರಜ್ಞರು'. ಭಾರತದ ಪ್ರಪ್ರಥಮ ಕಪ್ಪು-ಬಿಳುಪಿನ, ೭೫ ಮಿ.ಮೀ ಚಿತ್ರ 'ಕಾಗಜ್ ಕೆ ಫೂಲ್ ನ ಛಾಯಾಗ್ರಾಹಕ'.

ವಿ. ಕೆ. ಮೂರ್ತಿ, (ನವೆಂಬರ್ ೨೬, ೧೯೨೩- ಎಪ್ರಿಲ್ ೦೭, ೨೦೧೪) ಎಂದು ಜನಪ್ರಿಯರಾಗಿರುವ 'ವೆಂಕಟರಾಮ ಪಂಡಿತ ಕೃಷ್ಣಮೂರ್ತಿ ಅವರ' ಸಿನೆಮಾ ರಂಗದಲ್ಲಿನ ಆಪ್ತ- ಗೆಳೆಯರಿಗೆಲ್ಲಾ ಕುಟ್ಟಿ, ಎಂದೂ ಹೆಸರುವಾಸಿಯಾಗಿದ್ದರು. ಬಾಲಿವುಡ್ ಚಲನಚಿತ್ರರಂಗದಲ್ಲಿ 'ಶ್ರೇಷ್ಠ ಚಲನಚಿತ್ರ ಛಾಯಾಗ್ರಾಹಕ'ರೆಂದು ಹೆಸರಾಗಿದ್ದು, ಒಬ್ಬ'ತಂತ್ರಜ್ಞರಾಗಿ ಪ್ರತಿಷ್ಠಿತ ದಾದಾ ಫಾಲ್ಕೆ ಪ್ರಶಸ್ತಿ' ಪಡೆದ ಪ್ರಪ್ರಥಮರು. 

ವೆಂಕಟರಾಮ ಪಂಡಿತ ಕೃಷ್ಣಮೂರ್ತಿ, ೨೬ನೇ ನವೆಂಬರ್ ೧೯೨೩ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ವೆಂಕಟರಾಮ ಪಂಡಿತರು ಆಯುರ್ವೇದ ಪಂಡಿತರು. ಮೈಸೂರಿನ ಅರಮನೆಯಲ್ಲಿ ಆಯುರ್ವೇದ ಪಂಡಿತರೆಂದು ಗುರುತಿಸಲ್ಪಟ್ಟಿದ್ದರು. ತಾಯಿ ಹೆಸರು ನಾಗಮ್ಮ. ಈ ದಂಪತಿಗಳಿಗೆ ೫ ಜನ ಮಕ್ಕಳು. ಮೂರ್ತಿಯವರು ೮-೯ ವರ್ಷದವರಿದ್ದಾಗಲೇ ತಾಯಿಯವರು ಗತಿಸಿದರು. ವಿ. ಕೆ. ಮೂರ್ತಿ ಅವರು ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನ ಛಾಯಾಗ್ರಹಣ ವಿಭಾಗದ ಮೊದಲ ತಂಡದ (೧೯೪೩-೪೬) ವಿದ್ಯಾರ್ಥಿಗಳಲ್ಲಿ ಒಬ್ಬರು. ಮುಂದೆ ಮುಂಬೈಗೆ ಬಂದಿಳಿದ ಮೂರ್ತಿಯವರಿಗೆ ಅಲ್ಲಿನ ಮೈಸೂರು ಅಸೋಸಿಯೇಷನ್ ತುಂಬಾ ಪ್ರಿಯವಾಗಿತ್ತು. ಅಲ್ಲಿ ಒಂದು ನಾಟಕಕಾರರ ಗುಂಪನ್ನು ಕಟ್ಟಿ, ಅನೇಕ ನಾಟಕಗಳನ್ನು ನಿರ್ದೇಶಿಸಿ, ರಂಗಪ್ರದರ್ಶನ ಮಾಡಿದ್ದರು. ಮೂರ್ತಿಯವರಿಗೆ ಪಿಟೀಲು ವಾದನದಲ್ಲಿ ಕೂಡ ಉತ್ತಮ ಪರಿಶ್ರಮವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಅವರು ೧೯೪೩ರ ವರ್ಷದಲ್ಲಿ ಸೆರೆವಾಸವನ್ನನುಭವಿಸಿದರು.

ಮೈಸೂರು ಅಸೋಸಿಯೇಷನ್ ನ ಹಿರಿಯ ಸದಸ್ಯ, ಡಾ.ಬಿ.ಆರ್.ಮಂಜುನಾಥರು ಅತಿಥಿಗಳನ್ನು ಸಭಾಗೃಹಕ್ಕೆ ಪರಿಚಯಿಸುತ್ತಿರುವುದು
ಪ್ರತಿಷ್ಠಿತ ೫೬ ನೆಯ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿವಿಜೇತ ವಿ.ಕೆ.ಮೂರ್ತಿಯವರನ್ನು ಮುಂಬಯಿನಲ್ಲಿ ಸನ್ಮಾನಿಸಲಾಯಿತು

ಹಿಂದಿ ಚಲನಚಿತ್ರಲೋಕದಲ್ಲಿ

[ಬದಲಾಯಿಸಿ]

ಭಾರತದ ಪ್ರಪ್ರಥಮ ಸಿನಿಮಾಸ್ಕೋಪ್ ಚಿತ್ರ ‘ಕಾಗಜ್ ಕಿ ಫೂಲ್’ ಮತ್ತು ‘ಸಾಹಿಬ್, ಬೀಬಿ ಔರ್ ಗುಲಾಂ’ ಚಿತ್ರದ ಛಾಯಾಗ್ರಹಣಕ್ಕಾಗಿ ಮೂರ್ತಿ ಅವರು ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದರು. ಅತ್ಯಂತ ಸೂಕ್ಷ್ಮ ವಿಧಾನಗಳ ಮೂಲಕ ಛಾಯಾಗ್ರಹಣಕ್ಕೆ ಶ್ರೀಮಂತ ಹಾಗೂ ಕಲಾತ್ಮಕ ಮೆರುಗನ್ನು ತಂದುಕೊಟ್ಟ ಹಿರಿಮೆ ವಿ.ಕೆ.ಮೂರ್ತಿ ಅವರದ್ದು. ‘ಚಾದ್ವಿನ್ ಕಾ ಚಾಂದ್’, ‘ಬಾಜಿ’, ‘ಜಾಲ್’, ‘ಪ್ಯಾಸಾ’, ‘12 ಒ ಕ್ಲಾಕ್’, ‘ಜಿದ್ದಿ’, ‘ಲವ್ ಇನ್ ಟೋಕಿಯೋ’, ಇತ್ಯಾದಿ ಚಿತ್ರಗಳಲ್ಲಿ ಮೂಡಿಬಂದ ದೃಶ್ಯ ಕಾವ್ಯಗಳು ಮೂರ್ತಿ ಅವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿ ನಿಂತಿವೆ. ಮಹಾನ್ ಕಲಾವಿದ ಮತ್ತು ನಿರ್ದೇಶಕ ಗುರುದತ್ ಅವರು ಜೀವಿಸಿರುವವರೆಗೆ ಅವರ ಎಲ್ಲಾ ಚಿತ್ರಗಳಿಗೂ ಕಣ್ಣಾಗಿದ್ದ ಮೂರ್ತಿಯವರು, ಅವರ ನಿಧನಾನಂತರದಲ್ಲಿ ಇತರ ಪ್ರಮುಖ ನಿರ್ದೇಶಕರ ಜೊತೆಯಲ್ಲಿ ಕೂಡ ಕೆಲಸ ಮಾಡಿದರು. ಚಲನಚಿತ್ರಗಳಲ್ಲದೆ ಶ್ಯಾಂ ಬೆನೆಗಲ್ ಅವರ ‘ಭಾರತ್ ಏಕ್ ಖೋಜ್’ ಮತ್ತು ಗೋವಿಂದ ನಿಹಲಾನಿ ಅವರ ‘ತಮಸ್’ ಧಾರಾವಾಹಿಗಳಿಗೂ ಪ್ರಧಾನ ಛಾಯಾಗ್ರಾಹಕರಾಗಿ ದುಡಿದ ಮೂರ್ತಿಯವರ ಕೆಲಸ ಬಹುಕಾಲ ನೆನೆಪಿನಲ್ಲಿ ಉಳಿಯುವಂತದ್ದಾಗಿದೆ. ವಿಶ್ವಖ್ಯಾತಿಯ ಈ ಕನ್ನಡಿಗರು ಕನ್ನಡದಲ್ಲಿ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರ ‘ಹೂವು ಹಣ್ಣು’ ಚಿತ್ರದಲ್ಲಿ ಕೂಡ ಛಾಯಾಗ್ರಹಣ ಮಾಡಿದ್ದಾರೆ.

ಸಿನಿಮಾರಂಗದ ಛಾಯಾಗ್ರಾಹಕರಾಗಿ ಮಾಡಿದ ಮಹತ್ವದ ಕೆಲಸಗಳು

[ಬದಲಾಯಿಸಿ]

‘ವಕ್ತ್ ನೇ ಕಿಯಾ ಕ್ಯಾ ಹಸೀನ್ ಸಿತಮ್, ತುಮ್ ರಹೇ ನ ತುಮ್, ಹಮ್ ರಹೇ ನ ಹಮ್’ ಗುರುದತ್ ನಿರ್ದೇಶನದ ‘ಕಾಗಜ್ ಕಾ ಪೂಲ್’ ಚಿತ್ರದ ಪ್ರಖ್ಯಾತ ಹಾಡು. ಕೈಫಿ ಆಜ್ಮಿ ಅವರ ಗೀತೆ, ಎಸ್.ಡಿ. ಬರ್ಮನ್ ಸಂಗೀತ, ಗೀತಾ ದತ್ ಅವರ ಕಂಠದಲ್ಲಿ ಮೂಡಿ ಬಂದ ಹೃದಯ ಕಲುಕುವಂಥ ಆ ಗೀತೆಗೆ ಅಷ್ಟೇ ಪರಿಣಾಮಕಾರಿಯಾಗಿ, ಮನೋಜ್ಞವಾಗಿ, ಅರ್ಥಗರ್ಭಿತವಾಗಿ ಛಾಯಾಗ್ರಹಣ ಮಾಡಿದ ಕೀರ್ತಿ ವಿ.ಕೆ. ಮೂರ್ತಿಯವರದು.

ಅವನೊಬ್ಬ ಚಿತ್ರ ನಿರ್ದೇಶಕ. ಶ್ರೀಮಂತ ಕುಟುಂಬವೊಂದರ ಹೆಣ್ಣಿನೊಂದಿಗೆ ಅವನ ವಿವಾಹ ಆಗಿರುತ್ತದೆ. ಆದರೆ, ಆ ಮನೆಯವರು ಇವನ ನಿರ್ದೇಶಕ ವೃತ್ತಿಯನ್ನು ಇಷ್ಟಪಟ್ಟಿರುವುದಿಲ್ಲ. ಹೀಗಾಗಿ ಕುಟುಂಬದಲ್ಲಿ ಸಾಮರಸ್ಯ ಇರುವುದಿಲ್ಲ. ಒಂದು ಮಳೆಗಾಲದ ರಾತ್ರಿ ಶಾಂತಿ ಎಂಬಾಕೆಯನ್ನು ನಿರ್ದೇಶಕ ಸಂಧಿಸುತ್ತಾನೆ. ಅವಳಿಗೆ ತನ್ನ ಕೋಟ್ ಕೊಡುತ್ತಾನೆ. ಅದನ್ನು ಹಿಂದಿರುಗಿಸಲು ಆಕೆ ಅವನು ಚಿತ್ರೀಕರಿಸುತ್ತಿದ್ದ ಸ್ಟುಡಿಯೋಗೆ ಬರುತ್ತಾಳೆ. ಅಲ್ಲಿ ಸ್ಪಾಟ್ ಲೈಟ್ ಬಿಟ್ಟು ಉಳಿದೆಲ್ಲ ಕಡೆ ಕತ್ತಲು. ನಿರ್ದೇಶಕ ತಾನು ತೆಗೆದ ಚಿತ್ರದ ರಷಸ್ ನೋಡುತ್ತಿರುತ್ತಾನೆ. ಇಲ್ಲಿ ಚಿತ್ರೀಕರಣ ನಡೆಯುತ್ತಿದೆ ಎನ್ನುವುದರ ಪರಿವೇ ಇಲ್ಲದೆ ಶಾಂತಿ ಮೆಲ್ಲಗೆ ಕೋಟ್‌ನೊಂದಿಗೆ ಕ್ಯಾಮೆರಾಗೆ ಇದಿರಾಗಿ ಬರುತ್ತಾಳೆ. ಆಗ, ಹಿನ್ನೆಲೆಯಲ್ಲಿ ‘ವಕ್ತ್ ನೇ ಕಿಯಾ’ ಹಾಡು ಕೇಳಿ ಬರುತ್ತದೆ - ಕೇಳುವುದಕ್ಕೆ ತೀರಾ ಮಾಮೂಲಿ ಎನ್ನುವಂತಿರುವ ಈ ಸನ್ನಿವೇಶವನ್ನು ಮನೋಜ್ಞವಾಗಿ ಚಿತ್ರೀಕರಿಸಿದ್ದು ವಿ.ಕೆ.ಮೂರ್ತಿಯವರು.

ಕಾಗಜ್ ಕೆ ಫೂಲ್

[ಬದಲಾಯಿಸಿ]

೧೯೫೯ರಲ್ಲಿ ತೆರೆ ಕಂಡ ‘ಕಾಗಜ್ ಕೆ ಪೂಲ್’ ಭಾರತದಲ್ಲೇ ಮೊದಲ ಬಾರಿಗೆ ಕಪ್ಪು ಬಿಳಿಪಿನಲ್ಲಿ ತಯಾರಾದ ೭೦ ಎಂಎಂ ಸಿನಿಮಾ ಸ್ಕೋಪ್ ಚಿತ್ರ. ಆದರೂ ಆಗ ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಇನ್ನಿಲ್ಲದಂತೆ ನೆಲ ಕಚ್ಚಿತ್ತು. ಆದರೆ, ಅದೇ ಚಿತ್ರ ೧೯೮೪ರಲ್ಲಿ ಮರು ತೆರೆ ಕಂಡಾಗ ಅದನ್ನೊಂದು ಕ್ಲಾಸಿಕ್ ಚಿತ್ರವೆಂದು ಚಿತ್ರ ಪ್ರಪಂಚ ಹಾಡಿ ಹೊಗಳಿತು. ಸರ್ವ ಕಾಲಕ್ಕೂ ಸಲ್ಲುವ ಶ್ರೇಷ್ಠ ಚಿತ್ರ ಎನ್ನುವ ಹೆಗ್ಗಳಿಕೆಗೆ ‘ಕಾಗಜ್ ಕಾ ಪೂಲ್’ ಪಾತ್ರವಾಯಿತು. ೨೦೦೨ ರಲ್ಲಿ ಸೈಟ್ ಅಂಡ್ ಸೌಂಡ್ ನಡೆಸಿದ ಕ್ರಿಟಿಕ್ಸ್ ಅಂಡ್ ಡೈರೆಕ್ಟರ್ಸ್ ಪೋಲ್‌ನಲ್ಲಿ ‘ಕಾಗಜ್ ಕಾ ಪೂಲ್’ ೧೬೦ನೇ ಸ್ಥಾನವನ್ನು ಪಡೆದುಕೊಂಡಿತು. ಹಿಂದಿಯ ಶ್ರೇಷ್ಠ ಹತ್ತು ಚಿತ್ರಗಳ ಪಟ್ಟಿಯಲ್ಲಿ ‘ಕಾಗಜ್ ಕಾ ಪೂಲ್’ ಶಾಶ್ವತವಾದ ಸ್ಥಾನವನ್ನು ಗಿಟ್ಟಿಸಿಕೊಂಡಿತು. ಇದಕ್ಕೆ ಪ್ರಮುಖ ಕಾರಣ ವಿ.ಕೆ.ಮೂರ್ತಿ ಅವರ ಕ್ಯಾಮೆರಾ ಕೈಚಳಕವೆಂಬುದು ಚಿತ್ರವಿದ್ವಾಂಸರೆಲ್ಲರ ಅಭಿಪ್ರಾಯ.

ಪ್ರಶಸ್ತಿಗಳಿಸಿದ ಚಿತ್ರ,'ಪ್ಯಾಸಾ'

[ಬದಲಾಯಿಸಿ]

ಗುರುದತ್ ಅವರ ಬಹುತೇಕ ಚಿತ್ರಗಳಿಗೆ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ ಮೂರ್ತಿ ಅವರದ್ದು ಅಸಾಧಾರಣ ಪ್ರತಿಭೆ. ‘ಪ್ಯಾಸಾ’ ಚಿತ್ರದಲ್ಲಿ ನಾಯಕ ಹತಾಶೆಯಿಂದ ಬಾಗಿಲಿಗೆ ಕೈಯ್ಯೊಡ್ಡಿ ನಿಲ್ಲುವ ಒಂದು ಅಪೂರ್ವ ದೃಶ್ಯವಿದೆ. ಆ ದೃಶ್ಯವನ್ನು ಮೂರ್ತಿ ಅವರು ತೆಗೆದಿರುವ ರೀತಿ ಅನನ್ಯವಾದದ್ದು. ಆ ಸಂದರ್ಭದಲ್ಲೂ ಒಂದು ದುಃಖದ ಗೀತೆ ಕೇಳಿ ಬರುತ್ತದೆ. ‘ಎ ದುನಿಯಾ ಅಗರ್ ಮಿಲ್ ಭಿ ಜಾಯೇ ತೊ ಕ್ಯಾ ಹೇ’ ರಫಿ ಅವರ ಕಂಠದಲ್ಲಿ ಮೂಡಿ ಬಂದ ಈ ಗೀತೆಯೂ ಕೂಡ ಬರಹಗಾರನೊಬ್ಬನ ಬದುಕಿನ ಹೃದಯ ವಿದ್ರಾವಕ ಚಿತ್ರಣವನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ೧೯೫೭ರಲ್ಲಿ ಕಪ್ಪು ಬಿಳುಪಿನಲ್ಲಿ ತಯಾರಾದ ಈ ಚಿತ್ರದಲ್ಲಿಯೂ ಕ್ಯಾಮೆರಾ ಕೈಚಳಕವೇ ಪ್ರಧಾನ ಭೂಮಿಕೆಯನ್ನು ಪಡೆದುಕೊಂಡಿದೆ. ಗುರುದತ್ ಅವರ ಚಿತ್ರಗಳಿಗೆ ಕಲಾತ್ಮಕತೆ, ಕಾವ್ಯ ಗುಣ ಲಭ್ಯವಾಗುವಲ್ಲಿ ಮೂರ್ತಿಯವರ ಕೊಡುಗೆ ಅನುಪಮವಾದದ್ದು.

ಮೂರ್ತಿ ಅವರು ಉಳಿದೆಲ್ಲ ಕ್ಯಾಮೆರಾಮನ್‌ಗಳಿಗಿಂತ ಭಿನ್ನವಾಗಿ ಕಾಣುವುದಕ್ಕೆ ಪ್ರಮುಖ ಕಾರಣ ಅವರು ದೃಶ್ಯವನ್ನು ಚಿತ್ರೀಕರಿಸುವಲ್ಲಿ ಹೊರಹೊಮ್ಮಿಸಿದ ಪ್ರತಿಭಾವಂತಿಕೆ. ದೂರದರ್ಶನದಲ್ಲಿ ಮೂಡಿ ಬರುತ್ತಿದ್ದ ‘ತಮಸ್’ ಧಾರಾವಾಹಿಯನ್ನು ನೋಡಿದವರಿಗೆ ಇದು ಮತ್ತಷ್ಟು ಮನದಟ್ಟಾಗುತ್ತದೆ. ಮಸೀದಿಯ ಪ್ರವೇಶ ದ್ವಾರದಲ್ಲಿ ಯಾರೋ ಕಿಡಿಗೇಡಿಗಳು ಹಂದಿಯ ಮಾಂಸದ ತುಂಡನ್ನು ಎಸೆದಿರುತ್ತಾರೆ. ಅದನ್ನು ನೋಡಿದ ವ್ಯಕ್ತಿ ಥರಥರ ನಡುಗಿ ಹೋಗುತ್ತಾನೆ. ಈ ಎರಡನ್ನೂ ಎಷ್ಟು ಪರಿಣಾಮಕಾರಿಯಾಗಿ ಮೂರ್ತಿಯವರು ಚಿತ್ರಿಸಿದ್ದಾರೆಂದರೆ, ನೋಡುಗನ ಮನಸ್ಸಿನ ಮೇಲೆ ಮುಂದಿನ ಘಟನೆಯ ಚಿತ್ರ ಅನಾವರಣಗೊಳ್ಳಬೇಕು. ಆ ರೀತಿಯ ಅನನ್ಯತೆ ಅವರ ಛಾಯಾಗ್ರಹಣದಲ್ಲಿದೆ.

ಚಿತ್ರ:Shetty.jpg
'ಮುಂಬೈನ ಮೈಸೂರ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ತಮ್ಮಗೆಳೆಯರ ಜೊತೆ'

ಬೆಂಗಳೂರಿನ ಅವರ ಶಂಕರಪುರಂ ನಿವಾಸದಲ್ಲಿ ವಾಸಿಸುತ್ತಿದ್ದ, ೯೧ ವರ್ಷ ಪ್ರಾಯದ ಮೂರ್ತಿಯವರು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ೨೦೧೪ ರ, ಏಪ್ರಿಲ್ ೭, ಸೋಮವಾರದಂದು, ಕೊನೆಯುಸಿರೆಳೆದರು.[][][] ಪುತ್ರಿ ಛಾಯಾರನ್ನು ಅಗಲಿದ್ದಾರೆ. ಇವರ ಬಗ್ಗೆ 'ಬಿಸಿಲುಕೋಲು' ಎಂಬ ಪುಸ್ತಕವನ್ನು ಶ್ರೀಮತಿ ಉಮಾ ರಾವ್ ಬರೆದಿದ್ದಾರೆ.(ಪ್ರಿಸಂ ಪ್ರಸ್ತುತಿ-೨೦೦೫)

ಚಿತ್ರಗಳು

[ಬದಲಾಯಿಸಿ]

ಹಿಂದಿಯಲ್ಲಿ

[ಬದಲಾಯಿಸಿ]
  • ಬಾಜೀ (೧೯೫೧)
  • ಜಾಲ್ (೧೯೫೨)
  • ಆರ್ ಪಾರ್ (೧೯೫೪)
  • ಮಿಸ್ಟರ್ ಆಂಡ್ ಮಿಸ್ಸೆಸ್ '೫೫ (೧೯೫೫)
  • ಸಿ.ಐ.ಡಿ (೧೯೫೬)
  • ಪ್ಯಾಸಾ (೧೯೫೭)
  • ೧೨'ಓ ಕ್ಲಾಕ್ (೧೯೫೮)
  • ಕಾಗಝ್ ಕೇ ಫೂಲ್ (೧೯೫೯)
  • ಚೌದ್ವೀ ಕಾ ಚಾಂದ್ (೧೯೬೦)
  • ಸಾಹಿಬ್ ಬೀವಿ ಔರ್ ಗುಲಾಮ್ (೧೯೬೨)
  • ಜಿದ್ದಿ (೧೯೬೪)
  • ಸೂರಜ್ (೧೯೬೬)
  • ಲವ್ ಇನ್ ಟೋಕಿಯೋ (೧೯೬೬)
  • ನಯಾ ಜಮಾನಾ (೧೯೭೧)
  • ಜುಗ್ನು (೧೯೭೩)
  • ನಾಸ್ತಿಕ್ (೧೯೮೩)
  • ಕಲಿಯುಗ್ ಔರ್ ರಾಮಾಯಣ್ (೧೯೮೭)
  • ಅಂತರ್ನಾದ್ (೧೯೯೧)
  • ದೀದಾರ್ (೧೯೯೨)
  • ಖುಲೇ ಆಮ್ (೧೯೯೨)

ಕನ್ನಡದಲ್ಲಿ

[ಬದಲಾಯಿಸಿ]
  • ಹೂವು ಹಣ್ಣು (೧೯೯೩)

ದೂರದರ್ಶನಕ್ಕಾಗಿ

[ಬದಲಾಯಿಸಿ]
  • ತಮಸ್ (೧೯೮೬)
  • ಡಿಸ್ಕವರಿ ಆಫ್ ಇಂಡಿಯಾ / ಭಾರತ್ ಏಕ್ ಖೋಜ್ (೧೯೮೮)

ಪ್ರಶಸ್ತಿಗಳು

[ಬದಲಾಯಿಸಿ]

ಮಾಹಿತಿ ಆಧಾರ/ಆಕರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ರೂಪಕಗಳ ಚಕ್ರವರ್ತಿ ಕಣ್ಮರೆ
  2. ಖ್ಯಾತ ಸಿನಿಮಾಟೋಗ್ರಾಫರ್‌ ವಿ.ಕೆ ಮೂರ್ತಿ ಇನ್ನಿಲ್ಲ - ವಿಜಯಕರ್ನಾಟಕ ವಾರ್ತೆ 08 Apr 2014
  3. "ಖ್ಯಾತ ಛಾಯಾಗ್ರಹಕ ವಿ.ಕೆ.ಮೂರ್ತಿ ಇನ್ನಿಲ್ಲ - ಉದಯವಾಣಿ ವಾರ್ತೆ 08 Apr 2014". Archived from the original on 8 ಏಪ್ರಿಲ್ 2014. Retrieved 8 ಏಪ್ರಿಲ್ 2014.

ಹೊರಗಿನ ಕೊಂಡಿಗಳು

[ಬದಲಾಯಿಸಿ]
  1. ಕನ್ನಡ ಪ್ರಭ-ವಿ.ಕೆ.ಮೂತಿಯವರ ಅಪರೂಪದ ಚಿತ್ರಗಳು Archived 2014-07-27 ವೇಬ್ಯಾಕ್ ಮೆಷಿನ್ ನಲ್ಲಿ.
  2. ವಿ.ಕೆ.ಮೂರ್ತಿ‘ನೆರಳು-ಬೆಳಕಿನ’ ಪಯಣ