ವಿಷಯಕ್ಕೆ ಹೋಗು

ಶಿಮ್ಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಿಮ್ಲಾ ಇಂದ ಪುನರ್ನಿರ್ದೇಶಿತ)
ಶಿಮ್ಲಾ
शिमला
"ಪರ್ವತ ರಾಣಿ"
ರಾಜಧಾನಿ
Southern side of Shimla
Southern side of Shimla
Languages
 • Officialಹಿಂದಿ
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
PIN
171 001
Telephone code91 177 XXX XXXX
ISO 3166 code[[ISO 3166-2:IN|]]
ವಾಹನ ನೋಂದಣಿHP-03, HP-51, HP-52
ClimateCwb (Köppen)
Precipitation1,577 millimetres (62.1 in)
Avg. annual temperature21 °C (70 °F)
Avg. summer temperature32 °C (90 °F)
Avg. winter temperature10 °C (50 °F)
ಜಾಲತಾಣhpshimla.gov.in

ಹಿಮಾಚಲ ಪ್ರದೇಶ ರಾಜ್ಯದ ರಾಜಧಾನಿ, ಹಸಿರು ವನರಾಜಿ, ಬೆಟ್ಟಗಳ ಸಾಲು ಸಾಲು, ತಣ್ಣಗೆ ಮೈಕೊರೆವ ಚಳಿ, ಇಬ್ಬನಿಯ ಭಾರಕ್ಕೆ ಬಾಗಿದ ಹಸಿರೆಲೆಗಳು, ಬಣ್ಣಬಣ್ಣದ ಹೂಗಳು, ಶಾಂತವಾಗಿ ಇವನ್ನೆಲ್ಲ ವೀಕ್ಷಿಸುತ್ತಿರುವ ಹಕ್ಕಿಗಳು, ಬೆಟ್ಟಗಳ ಮೇಲಿನ ತಿರುವು ಹಾದಿಗಳು. ಇವಾವುದರ ಪರಿವೆ ಇಲ್ಲದೆ ಹಳಿಯ ಮೇಲೆ ತೆವಳುತ್ತಾ ಸುರಂಗಗಳಲ್ಲಿ ನುಸುಳುತ್ತಾ ಸಾಗುವ ಮಂದಗತಿಯ ರೈಲುಗಾಡಿ. ಆಜುಬಾಜಿನಲ್ಲೆಲ್ಲ ಹೆಸರಿಲ್ಲದ ವಾಸನೆಯಿಲ್ಲದ ಸುಂದರ ಆರ್ಕಿಡ್ ಪುಷ್ಪಗಳು, ಹಸಿರು ಮೈಯ ಬೆಟ್ಟಗಳ ಮೇಲೆಲ್ಲ ಮೇಘರಾಜನ ಆಳ್ವಿಕೆ, ಸೂಜಿಯೆಲೆಗಳಿಂದ ತೊಟ್ಟಿಕ್ಕುವ ಇಬ್ಬನಿ ಇವೆಲ್ಲ ಶಿಮ್ಲಾ ಎಂಬ ದೃಶ್ಯಕಾವ್ಯದ ಮೊದಲ ಪುಟಗಳು.

ಎರಡೂವರೆ ಅಡಿ ಅಂತರದ ಹಳಿಗಳ ಮೇಲೆ ವಿರಾಜಮಾನವಾಗಿದ್ದ ಆರು ಬೋಗಿಗಳ ಪುಟಾಣಿ ನ್ಯಾರೋಗೇಜ್ ರೈಲು ಕಾಲ್ಕಾ ರೈಲುನಿಲ್ದಾಣದಿಂದ ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಟು ಬೆಳಕು ಹರಿಯುವ ಮುನ್ನ ಅದು ಹಲವಾರು ಸುರಂಗಗಳನ್ನು ಹಾದು ತಿರುವುಗಳನ್ನು ಬಳಸಿ ಆರು ಗಂಟೆ ವೇಳೆಗೆ ಒಂದು ಬಾರೋಗ್ ಎಂಬ ಆ ನಿಲ್ದಾಣದಲ್ಲಿ ಬಂದು ನಿಂತಾಗ ಅಲ್ಲಿನ ಒಂದು ಫಲಕವು ೩೭೫೭ ಅಡಿಗಳ ಅತಿ ಉದ್ದನೆಯ ಸುರಂಗವನ್ನು ಹಾದು ಬಂದಿರುವುದನ್ನು ಸಾರುತ್ತದೆ.

ಅಡ್ಡಡ್ಡ ಮಲಗಿದರೆ ಕೈಕಾಲುಗಳಿಂದ ಎರಡೂ ಪಾರ್ಶ್ವಗಳನ್ನು ಸ್ಪರ್ಶಿಸಬಹುದಾದ ಕೇವಲ ಇಪ್ಪತ್ತು ಜನರಷ್ಟೇ ಕೂಡಬಹುದಾಗಿದ್ದ ಪುಟ್ಟ ಬೋಗಿಯೊಳಗೆ ಕುಳಿತು ೧೦೨ ಸುರಂಗಗಳು, ೮೪೫ ಸೇತುವೆಗಳು ಹಾಗೂ ೯೧೯ ತಿರುವುಗಳನ್ನು ಹಾದು ಬರುವ ಈ ರೈಲಿನಲ್ಲಿನ ಪ್ರಯಾಣ ಶಿಮ್ಲಾ ಪ್ರವಾಸದ ಅತಿ ಮುಖ್ಯಭಾಗ.

ಇಂಗ್ಲಿಷರ ಕಾಲದ ಇಂಡಿಯಾದ ಬೇಸಿಗೆ ರಾಜಧಾನಿ ಶಿಮ್ಲಾ. ಹಿಮಾಲಯದ ಅಂಚಿನಲ್ಲಿರುವ ಆದರೆ ಹಿಮಾಲಯದ ಗುಣಗಳನ್ನೇ ಹೊಂದಿರುವ ಪ್ರಕೃತಿ ಸೌಂದರ್ಯದಿಂದ ಶ್ರೀಮಂತವಾಗಿರುವ ಶಿಮ್ಲಾ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ಸೂಜಿಗಲ್ಲು.

ಶಿಮ್ಲಾದಲ್ಲಿ ಪ್ರವಾಸ ಎಂದರೆ ಬೆಟ್ಟವನ್ನು ಏರುತ್ತಾ ಏರುತ್ತಾ ಏರುತ್ತಾ ಹೋಗುವುದು. ಹೇಳಿಕೇಳಿ ಇದು ಬಯಲು ಪ್ರದೇಶ ಅಲ್ಲವಲ್ಲ! ಸಮುದ್ರ ಮಟ್ಟದಿಂದ ಸುಮಾರು ೭೫೦೦ ಅಡಿಗಳ ಮೇಲೆ ಇರುವ ಫಾಗು ಎಂಬ ಸ್ಥಳದಿಂದ ಹಿಮಾಲಯದ ಹಿಮಾಚ್ಛಾದಿತ ಶಿಖರಗಳನ್ನು ವೀಕ್ಷಿಸಬಹುದು. ಇನ್ನೂ ೫೦೦ ಅಡಿಗಳ ಮೇಲೆ ಹೋದಲ್ಲಿ ಕುಫ್ರಿ ಎಂಬ ಸ್ಥಳ ಸಿಗುತ್ತದೆ. ಇಲ್ಲಿ ಹಿಮಾಲಯದ ವನ್ಯಜೀವಿಗಳ ಅಭಯಧಾಮ, ಪ್ರವಾಸೋದ್ಯಮ ಇಲಾಖೆಯ ಉದ್ಯಾನವನ, ಚಾರಣಕ್ಕೆ ಹೇಳಿ ಮಾಡಿಸಿದ ಶಿಖರಗಳೂ ಕೊರಕಲುಗಳೂ ಇವೆ. ವಾಹನಗಳು ಚಲಿಸಲಾಗದ ಉರುಟು ಕಲ್ಲು ಕೊರಕಲುಗಳಿಂದ ಕೆಲವೊಮ್ಮೆ ಹಿಮದಿಂದ ತುಂಬಿದ ಹಾದಿಯಲ್ಲಿ ಕುದುರೆಯ ಮೇಲೆ ಕುಳಿತು ಏರುತ್ತಾ ಇಳಿಯುತ್ತಾ ಮುಗ್ಗರಿಸುತ್ತಾ ಅಳುಕಿನಿಂದ ಸಾಗುವುದೇ ಒಂದು ಸಾಹಸದ ಅನುಭವ. ಅದಕ್ಕೆಂದೇ ಅಲ್ಲಿ ಕುದುರೆಗಳು ಬಾಡಿಗೆಗೆ ಸಿಗುತ್ತವೆ.

ಸುಂದರವಾದತುಪ್ಪಳವುಳ್ಳ ಯಾಕ್ (ಹಿಮಾಲಯದ ಎಮ್ಮೆ) ಪ್ರಾಣಿಗಳು, ಹಿಮಾಲಯನ್ ಲಂಗೂರ್‍ ಎಂಬ ಕಪ್ಪು ಮುಖದ ಕೋತಿಗಳು, ಹಿಮಾಚಲದ ಸಾಂಪ್ರದಾಯಿಕ ಉಡುಗೆ ತೊಟ್ಟ ಗುಡ್ಡಗಾಡು ಜನರ ವೇಷಭೂಷಣಗಳು, ಪರಿಕರಗಳು ಮತ್ತು ಆಹ್ಲಾದಕರ ಪ್ರಕೃತಿ ದರ್ಶನದ ಅನಂತರ ಶಿಮ್ಲಾ ಪಟ್ಟಣಕ್ಕೆ ಬಂದರೆ ಅಲ್ಲಿ ಮಾಲ್ ಎಂಬ ನೋಡಲೇಬೇಕಾದ ಸ್ಥಳವೊಂದಿದೆ. ಇಂಗ್ಲಿಷರು ಕಟ್ಟಿದ ಸುಂದರವಾದ ಚರ್ಚ್ ಇಲ್ಲಿದೆ. ಇದರ ಆಜುಬಾಜೂ ಇರುವ ಸಂತೆಯಲ್ಲಿ ಹಿಮಾಚಲಪ್ರದೇಶದ ಎಲ್ಲ ವಿಶಿಷ್ಟ ವಸ್ತುಗಳ ಬಿಕರಿಯಾಗುತ್ತದೆ. ಮುಖ್ಯವಾದ ಸ್ಥಳದಲ್ಲಿ ಲಾಲಾ ಲಜಪತರಾಯ್‌ರವರ ಪ್ರತಿಮೆಯಿದೆ. ರಾತ್ರಿ ಹೊತ್ತಿನಲ್ಲಿ ಶಿಮ್ಲಾ ನಗರವನ್ನು ನೋಡುವುದೇ ಒಂದು ಚೆಂದ. ಬೆಟ್ಟಗುಡ್ಡಗಳೆಲ್ಲ ಝಗಮಗಿಸುವ ವಿದ್ಯುದ್ದೀಪಗಳಿಂದ ಕಂಗೊಳಿಸುವಾಗ ನೋಡಲು ಎರಡು ಕಣ್ಣು ಸಾಲವು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಶಿಮ್ಲಾ&oldid=1058493" ಇಂದ ಪಡೆಯಲ್ಪಟ್ಟಿದೆ