ವಿಷಯಕ್ಕೆ ಹೋಗು

ಗ್ರಾಮಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಹಳ್ಳಿ ಇಂದ ಪುನರ್ನಿರ್ದೇಶಿತ)
ಬೆನಿನ್‌ನಲ್ಲಿರುವ ದೂರದ ಹಳ್ಳಿ

ಗ್ರಾಮ - ಹಳ್ಳಿ, ಪಳ್ಳಿ, ಊರು, ಗುಡಾ, ಗಾಂವ್, ಕಸಬಾ, ಖೇಡಾ ಎಂದು ಭಾರತದ ಬೇರೆ ಬೇರೆ ಕಡೆಗಳಲ್ಲಿ ಪರಿಚಿತವಾಗಿರುವ ಸಮುದಾಯ. ಭರತ ಇವನ್ನು ಬ್ರಾಹ್ಮಣಾದಿ ವರ್ಣಗಳಿಂದ ಕುಡಿದ, ಪ್ರಾಕಾರ ಕಂದಕಗಳಿಲ್ಲದ, ಬಹುಜನವಸತಿಗಳೆಂದು ಹೇಳಿದ್ದಾನೆ. ಇವನ್ನು ಸಾಮಾನ್ಯವಾಗಿ ಶಾಶ್ವತವಾದ, ಗಾತ್ರದಲ್ಲಿ ಚಿಕ್ಕದಾದ, ಮುಖ್ಯವಾಗಿ ಭೂವ್ಯವಸಾಯವುಳ್ಳ, ಹತ್ತಿರ ಹತ್ತಿರ ವಾಸಿಸುವ ಕೆಲವು ಕುಟುಂಬಗಳಿರುವ, ಪ್ರಾಥಮಿಕ ಸಂಬಂಧಗಳು ಪ್ರಧಾನವಾಗಿರುವ ನೆಲೆಗಳೆಂದು ಕರೆಯಬಹುದು. ಈ ಭೌತಿಕ ಹಾಗೂ ಸಾಮಾಜಿಕ ಆಧಾರಗಳ ಮೇಲಿಂದ ಗ್ರಾಮಗಳನ್ನು ಅಲೆಮಾರಿಗಳ ತಂಡಗಳಿಂದ, ಚದರಿದ ಕೊಪ್ಪಲು ಅಥವಾ ಪಾಳೆಯಗಳಿಂದ, ಉಪನಗರ ಹಾಗೂ ಮಹಾನಗರಗಳಿಂದ ವಿಂಗಡಿಸುವುದು ಸಾಧ್ಯ.

ಗ್ರಾಮಂತರ ಶಾಲೆ

ಉದ್ಯೋಗ

[ಬದಲಾಯಿಸಿ]

ಬೇಟೆಯಾಡುವುದು, ಗಡ್ಡೆ ಗೆಣಸು ಸಂಗ್ರಹಿಸುವುದು, ಮೀನು ಹಿಡಿಯುವುದು ಮುಂತಾದ ಆಹಾರ ಸಂಪಾದನೆಯ ಮಾರ್ಗಗಳನ್ನು ಅನುಸರಿಸುತ್ತಿದ್ದ ಪ್ರಾಚೀನರು ಆಹಾರಾನ್ವೇಷನೆಯಲ್ಲಿ ದೂರದೂರ ಅಲೆಯುತ್ತಿದ್ದರು. ಪ್ರಾಣಿಗಳನ್ನು ಪಳಗಿಸಲು ಕಲಿತ ಅವರು ಮುಂದೆ ಕೃಷಿಯನ್ನು ಅವಲಂಬಿಸಿದಾಗ ಮಾನವವಿಕಾಸದಲ್ಲಿ ಒಂದು ದೊಡ್ಡ ಹೆಜ್ಜೆ ಇಟ್ಟಂತಾಯಿತು. ಈ ಕ್ರಾಂತಿ ನವ ಶಿಲಾಯುಗದಲ್ಲಿ, ಅಂದರೆ ಕ್ರಿ. ಪೂ. 10,000 ದ ಸುಮಾರಿಗೆ, ಆದಂತೆ ಕಾಣುತ್ತದೆ. ಮಣ್ಣನ್ನು ಅಗೆಯುವ ಕೋಲನ್ನೂ ಅನಂತರ ನೇಗಿಲನ್ನೂ ಬಳಸಿದಾಗ ಉಳುಮೆ ಪ್ರಾರಂಭವಾಯಿತೆನ್ನಬಹುದು. ಇದರಿಂದಾಗಿ ಒಂದೇ ಕಡೆ ನೆಲೆ ನಿಲ್ಲುವುದು ಸಾಧ್ಯವಾಯಿತು. ಸಾಗುವಳಿಯನ್ನು ನೋಡಿಕೊಳ್ಳಲು ಅದು ಅವಶ್ಯವೂ ಆಯಿತು. ಸುಮಾರು 3000 ವರ್ಷಗಳ ಅನಂತರ, ಅಂದರೆ ಕ್ರಿ. ಪೂ. 6500ರ ಸುಮಾರಿಗೆ, ಇರಾಕಿನಲ್ಲಿ ಸ್ಥಾಪಿತವಾದ ಗ್ರಾಮಗಳು ಸದ್ಯಕ್ಕೆ ನಮಗೆ ದೊರೆತಿರುವ ಪ್ರಾಚೀನ ಗ್ರಾಮಗಳು. ಭಾರತದಲ್ಲೂ ಆ ಸುಮಾರಿಗೇ ಗ್ರಾಮಗಳ ಉದಯವಾಗಿರಬೇಕು. ಋಗ್ವೇದದ ಕಾಲಕ್ಕಾಗಲೇ ಗ್ರಾಮಗಳು ಪೂರ್ಣವಾಗಿ ವಿಕಸಿತಗೊಂಡಿದ್ದವು. ಈ ಗ್ರಾಮದ ಹೊಸ್ತಿಲನ್ನು ಈಜಿಪ್ಟ್ ಕ್ರಿ. ಪೂ. ಸುಮಾರು 5000ದಲ್ಲೂ ಯೂರೋಪಿನ ಕೆಲವು ದೇಶಗಳು ಕ್ರಿ. ಪೂ. ಸುಮಾರು 4000ದಲ್ಲೂ ಚೀನ ಕ್ರಿ. ಪೂ. ಸುಮಾರು 2500 - 3000ರಲ್ಲೂ ದಾಟಿದಂತೆ ಕಾಣುತ್ತದೆ.

[]ಇತಿಹಾಸಕರರೂ ಸಮಾಜಶಾಸ್ತ್ರಜ್ಞರೂ ಗ್ರಾಮಗಳಲ್ಲಿ ಮೂರು ಪ್ರಕಾರಗಳನ್ನು ಗುರುತಿಸಿದ್ದಾರೆ. ಕೆಲವೇ ಕೆಲವು ತಿಂಗಳ ಕಾಲ ಕೃಷಿ ಮಾಡಲು ನೆಲೆ ನಿಲ್ಲುವ ತಾತ್ಕಾಲಿಕ ಹಾಗೂ ಸಂಚಾರಿ ಸಮುದಾಯಗಳು ಕೆಲವಿದೆ. ಇವನ್ನು ಗ್ರಾಮವೆನ್ನುವುದು ತಪ್ಪಾದೀತು. ಮತ್ತೆ ಕೆಲವು ಐದು ಹತ್ತು ವರ್ಷಗಳ ಕಾಲ ಒಂದೆಡೆ ನಿಂತು ಕೃಷಿ ಮಾಡುವ ಅರ್ಧ ಶಾಶ್ವತ ಸಮುದಾಯಗಳು. ಈಗಲೂ ಇಂಥ ಸಮುದಾಯಗಳು ಹಲವು ಇವೆ. ಮೂರನೆಯ ಪ್ರಕಾರವೆಂದರೆ ಶಾಶ್ವತವಾದ ಕೃಷಿಕ ಸಮುದಾಯಗಳು. ಇವೇ ನಿಜವಾದ ಗ್ರಾಮಗಳು. ಜಗತ್ತಿನ ಬಹುತೇಕ ಗ್ರಾಮವಾಸಿಗಳ ಮುಖ್ಯ ಉದ್ಯೋಗ ಕೃಷಿಯಾದರೂ ಬೆಸ್ತರಹಳ್ಳಿಗಳೂ ಗಣಿಗ್ರಾಮಗಳೂ ನೇಕಾರರ, ಬಡಿಗರ ಮತ್ತಿತರ ಕಸಬಿನವರ ಗ್ರಾಮಗಳೂ ಇವೆ.

ಸಣ್ಣ ಹಳ್ಳಿ

.[]ಗ್ರಾಮಗಳ ವೈಜ್ಞಾನಿಕ ಅಭ್ಯಾಸ ಪ್ರಾರಂಭವಾದುದು ಕಳೆದ ಶತಮಾನದ ಮಧ್ಯಭಾಗದಲ್ಲಿ ಎನ್ನಬಹುದು. ಒಲುಫ್‍ಸೆನ್ ಡೆನ್ಮಾರ್ಕಿನ ಗ್ರಾಮಗಳ ಬಗೆಗೂ ಮೌರರ್ ಜರ್ಮನಿಯ ಮಾರ್ಕುಗಳ ಬಗೆಗೂ ಹೆನ್ರಿ ಮೇನ್ ಪೌರಸ್ರ್ಯ ಮತ್ತು ಪಾಶ್ಚಾತ್ಯ ಗ್ರಾಮಸಮುದಾಯಗಳ ಬಗೆಗೂ ಬರೆದು ಸಮಾಜ ಶಾಸ್ತ್ರಜ್ಞರ ಕುತೂಹಲವನ್ನು ಕೆರಳಿಸಿದರು. ರಾಬರ್ಟ್ ರೆಡ್‍ಫೀಲ್ಡ್ 1930ರಲ್ಲಿ ಮೆಕ್ಸಿಕೊದ ಟಿಪೋಜ್ಟ್‍ಲಾನ್ ಗ್ರಾಮವನ್ನು ವರ್ಣಿಸಿ ಅತ್ಯಮೂಲ್ಯವಾದ ಗ್ರಂಥವೊಂದನ್ನು ಪ್ರಕಟಿಸಿದ ಅನಂತರ ವಿಶ್ವದ ಬೇರೆ ಬೇರೆ ಭಾಗಗಳ ಗ್ರಾಮಸಮುದಾಯಗಳ ಬಗ್ಗೆ ನೂರಾರು ಅಭ್ಯಾಸಗಳು ನಡೆದಿವೆ. ಭಾರತದ ಗ್ರಾಮ, ರಷ್ಯದ ಮಿರ್, ಜರ್ಮನಿಯ ಮಾರ್ಕ್, ಇಂಗ್ಲೆಂಡಿನ ವಿಲೆಜ್, ಡೆನ್ಮಾರ್ಕಿನ ಹಳ್ಳಿ, ಮೆಕ್ಸಿಕೊದ ಗ್ರಾಮ - ಇವುಗಳ ಹೋಲಿಕೆಗಳನ್ನೂ ಭೇದಗಳನ್ನೂ ಇಂದು ಗುರುತಿಸಬಹುದಾಗಿದೆ.

ಗ್ರಾಮದ ಉದಯ ಸಾಮಾಜಿಕ ವಿಕಾಸದ ಒಂದು ಮಹತ್ತ್ವದ ಹಂತ. ಅನಾಗರಿಕ ಮಾನವರು ನಾಗರಿಕತೆಯೆಡೆಗೆ ಮುನ್ನೆಡೆದ ಹೆಜ್ಜೆಯನ್ನದು ಗುರುತಿಸುತ್ತದೆ. ಸಂಸ್ಕೃತಿಯ ವೃದ್ಧಿಯೂ ಘೋಷಣೆಯೂ ಗ್ರಾಮವ್ಯವಸ್ಥೆಯಿಂದ ಸಾಧ್ಯವಾಯಿತೆನ್ನಬಹುದು. ಭಾರತ, ಚೀನದೇಶಗಳ ಸಂಸ್ಕøತಿ ಗ್ರಾಮಗಳಲ್ಲಿ ಪಾಲನೆ, ಪೋಷಣೆ ಪಡೆಯಿತು. ಇಂದಿಗೂ ಪ್ರಪಂಚದ ಮುಕ್ಕಾಲುಪಾಲು ಜನರನ್ನು ಗ್ರಾಮಗಳು ಪೋಷಿಸುತ್ತಿವೆ. ಅಲ್ಲದೆ, ಉಳಿದ ಮತ್ತೊಂದು ಪಾಲಿನವರಿಗೆ ಆಹಾರವನ್ನೂ ಕಚ್ಚಾ ಸಾಮಗ್ರಿಯನ್ನೂ ಒದಗಿಸುತ್ತವೆ. 1971ರ ಜನಗಣತಿಯಂತೆ ಭಾರತದಲ್ಲಿನ ಗ್ರಾಮಗಳ ಸಂಖ್ಯೆ ಐದೂವರೆ ಲಕ್ಷ. ಅಂದರೆ ದೇಶದ ಜನಸಂಖ್ಯೆಯ 80.13% ಭಾಗ ಗ್ರಾಮಗಳಲ್ಲಿ ವಾಸವಾಗಿದ್ದಾರೆ. ಇದಕ್ಕೆಂದೇ ಭಾರತವನ್ನು ಹಳ್ಳಿಗಳ ದೇಶವೆಂದು ವರ್ಣಿಸಲಾಗುತ್ತದೆ. ಭಾರತದ ಗ್ರಾಮವ್ಯವಸ್ಥೆಗೆ ಜಾತಿ ಪದ್ಧತಿ, ಕುಟುಂಬ ವ್ಯವಸ್ಥೆಗಳಷ್ಟೇ ಮಹತ್ತ್ವ ಉಂಟು. ಮತ್ತು ಗ್ರಾಮಗಳು ಪರಸ್ಪರ ಸಹಕಾರ ಹಾಗೂ ಸ್ವಯಂಪೂರ್ಣತೆಯ ಪಾಠವನ್ನು ಕಲಿಸಿದವು. ಯುದ್ಧ ಮತ್ತು ಆಕ್ರಮಣಗಳ ಹೊಡೆತಗಳಿಂದ ಉಳಿಸಿದವು. ಚಾಲ್ರ್ಸ್ ಮೆಟ್‍ಕಾಫ್ ಎಂಬಾತ ಗ್ರಾಮೀಣ ಸಮುದಾಯಗಳನ್ನು ಇತರರಿಂದ ಪೂರ್ಣವಾಗಿ ಸ್ವತಂತ್ರವಾದ, ತಮಗೆ ಬೇಕಾದ ಎಲ್ಲವನ್ನೂ ಪಡೆದುಕೊಂಡಿರುವ, ಪುಟ್ಟ ಗಣರಾಜ್ಯಗಳೆಂದು ಕರೆದಿದ್ದಾನೆ. ಯಾವುದೂ ಶಾಶ್ವತವಲ್ಲದ ಕಡೆಯಲ್ಲಿ ಅವು ಶಾಶ್ವತವೆನಿಸಿವೆ. ಅರಸೊತ್ತಿಗೆಗಳು ಉರುಳುವುವು. ಕ್ರಾಂತಿಗಳು ಸಂಭವಿಸುವುವು. ಹಿಂದೂ, ಪಠಾಣ, ಮೊಗಲ, ಮರಾಠ, ಸಿಕ್ಖ್, ಇಂಗ್ಲಿಷರಾದಿಯಾಗಿ ಎಲ್ಲರಿಗೂ ಅಳಿವು ಇದೆ ; ಆದರೆ ಈ ಗ್ರಾಮಗಳು ಮಾತ್ರ ಉಳಿಯುವುವು. ಅವು ಭಾರತೀಯರನ್ನೂ ಅವರ ಸಂಸ್ಕøತಿಯನ್ನೂ ಉಳಿಸಿದ ಬಗೆ ಪ್ರಶಂಸನೀಯ. ರಾಧಾಕಮಲ ಮುಖರ್ಜಿಯವರು ಗ್ರಾಮಗಳನ್ನು ಪೌರಸ್ತ್ಯರ ಪ್ರಜಾಸತ್ತೆಗಳೆಂದು ವರ್ಣಿಸಿದ್ದಾರೆ. ಈ ಉದ್ಗಾರಗಳಲ್ಲಿ ಹಳೆಯದರ ಬಗ್ಗೆ ಇರುವ ಭಕ್ತಿಯ ಮನೋಭಾವ ಕಾಣುವುದು ನಿಜವಾದರೂ ಗ್ರಾಮ ಭಾರತೀಯ ಸಮಾಜದ ಬೆನ್ನೆಲುಬು ಎಂಬುದನ್ನು ಅಲ್ಲಗೆಳೆಯಲಾಗದು.

ಭಾರತದಲ್ಲಿ ಗ್ರಾಮ

[ಬದಲಾಯಿಸಿ]

[] ವೈದಿಕ ವಾಙ್ಮಯದಲ್ಲಿ ಗ್ರಾಮ ಶಬ್ದದ ಬಳಿಕ ಹೇರಳವಾಗಿ ಬಂದಿದೆ. ರಾಮಾಯಣ ಮಹಾಭಾರತಗಳಲ್ಲಿ ಘೋಷ ಮತ್ತು ಗ್ರಾಮಗಳ ಉಲ್ಲೇಖಗಳಿವೆ. ಮನುಸ್ಮತಿ ಅರ್ಥಶಾಸ್ತ್ರ, ಬೌಧಾಯನನ ಗೃಹ್ಯ ಸೂತ್ರ, ಶುಕ್ರನೀತಿಸಾರ ಮೊದಲದ ಶಾಸ್ತ್ರ ಗ್ರಂಥಗಳಲ್ಲಿ ಗ್ರಾಮಗಳ ವಿವಿಧ ಪ್ರಕಾರಗಳು ಹಾಗೂ ಲಕ್ಷಣಗಳು, ಗ್ರಾಮಣಿ ಮೊದಲಾದ ಗ್ರಾಮಾಧಿಕಾರಿಗಳ ಕರ್ತವ್ಯಗಳು, ಕರಸಂಗ್ರಹ ಮುಂತಾದ ವಿಷಯಗಳ ಬಗ್ಗೆ ಹೇಳಲಾಗಿದೆ. ಕ್ರಿ. ಪೂ. 5ನೆಯ ಶತಮಾನದ ಈಚೆಗಿನ ಜೈನ, ಬೌದ್ಧಗ್ರಂಥಗಳಲ್ಲಿ ವಿವಿಧ ಗ್ರಾಮ ಪ್ರಕಾರಗಳ ವರ್ಣನೆ ಉಂಟು. ಈ ಎಲ್ಲ ಮೂಲಗಳಿಂದ ಭಾರತೀಯ ಗ್ರಾಮಗಳ ಸಾಮಾನ್ಯ ಲಕ್ಷಣಗಳನ್ನು ಹೇಳುವುದು ಸಾಧ್ಯವಾದೀತು. ಆದರೆ ಈ ಲಕ್ಷಣಗಳು ಪ್ರಾಚೀನ ಕಾಲಕ್ಕೆ ಹೆಚ್ಚಾಗಿ ಅನ್ವಯಿಸುತ್ತವೆ ಎಂಬುದನ್ನೂ ಕಾಲ ಕಾಲಕ್ಕೆ ಅನೇಕ ಪ್ರಭಾವಗಳಿಗೆ ಸಿಲುಕಿ ಗ್ರಾಮಗಳು ಅಷ್ಟಿಷ್ಟಾದರೂ ಬದಲಾಗುತ್ತಿದ್ದವೆಂಬುದನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ಪ್ರಾದೇಶಿಕ ವಿಭೇದಗಳು ಇದ್ದುವೆಂಬುದನ್ನು ಮರೆಯಬಾರದು.

ಗ್ರಾಮಗಳು ಸಾಮಾನ್ಯವಾಗಿ 100 ಕುಟುಂಬಗಳಿಂದ 1,000 ಕುಟುಂಬಗಳನ್ನು ಒಳಗೊಂಡಿದ್ದುವು. ಒಮ್ಮೊಮ್ಮೆ ಮಲೆನಾಡಿನಲ್ಲಿರುವಂತೆ ಒಂದೇ ಮನೆಯ ಹಳ್ಳಿಗಳೂ ನಾಲ್ಕೆಂಟು ಕುಟುಂಬಗಳು ಒತ್ತೊತ್ತಿಗೆ ಇರುವ ಆದಿವಾಸಿ ಗ್ರಾಮಗಳೂ ಒಂದೇ ಜಾತಿಗೆ ಅಥವಾ ವಂಶಕ್ಕೆ ಸೇರಿದ ಜನರೇ ತುಂಬಿರುವ ಅಥವಾ ಒಂದೇ ಆದರೆ ಹೆಚ್ಚಾಗಿ ಅವು ಅನೇಕ ಜಾತಿಗಳೂ ಕಸಬುಗಳೂ ಇರುವ ನೆಲೆಗಳು. ಗ್ರಾಮದವರ ಮುಖ್ಯವಾದ ಉದ್ಯೋಗ ಒಕ್ಕಲುತನ. ಭೂಮಿ ರಾಜನಿಗೆ ಸೇರಿದ್ದು. ಕೆಲಮ್ಮೊಮ್ಮೆ ಅದನ್ನು ರಾಜ ಸ್ವಸಂತೋಷದಿಂದ ಬೇರೆಯವರಿಗೆ ಉಪಭೋಗಕ್ಕೆಂದು ಕೊಡಬಹುದು. ಸಾಗುವಳಿಯ ಭೂಮಿಯನ್ನು ಕುಟುಂಬದ ಅವಶ್ಯಕತೆಯನ್ನು ನೋಡಿ ಹಂಚಲಾಗುತ್ತಿತ್ತು. ಸಾಮಾನ್ಯವಾಗಿ ಮನೆಗಳು ಹೊಲದ ಮಧ್ಯದಲ್ಲಿ ಇರುತ್ತಿದ್ದವು. ಗಡಿಯಲ್ಲಿ ಮಾವು, ನಟ ಶಿರೀಷ ಮೊದಲಾದ ಮರಗಳು ಹಳ್ಳಗಳು ಕೆರೆ, ಒಡ್ಡು ಗುಡ್ಡಗಳು, ಸೀಮೆಯನ್ನು ಗುರುತಿಸುತ್ತಿದ್ದವು. ಹೊಸ ಗ್ರಾಮಗಳನ್ನು ರಾಜನ ಅನುಮತಿ ಪಡೆದು ಯೋಜನಾಬದ್ಧವಾಗಿ ಕಟ್ಟಲಾಗುತ್ತಿತ್ತು. ದಂಡಕ, ಸರ್ವತೋಭದ್ರ, ಪದ್ಮಕ, ಸ್ವಸ್ತಿಕ ಮುಂತಾದ ಎಂಟು ಆಕಾರಗಳ ನಿವೇಶನಗಳನ್ನು ಶಾಸ್ತ್ರಗ್ರಂಥಗಳು, ಹೇಳಿವೆ. ಮಹಾರಾಷ್ಟ್ರದಲ್ಲಿ ಮುಖ್ಯವಾಗಿ ಮೂರು ಪ್ರಕಾರದ ಹಳ್ಳಿಗಳಿವೆ ಎಂದು ಇರಾವತಿ ಕರ್ವೆ ತಿಳಿಸಿದ್ದಾರೆ. ದಕ್ಷಿಣ ಮೈದಾನದ ಹೊಲಗಳ ಮಧ್ಯೆ ಕೇಂದ್ರಿಕೃತವಾದ ಮನೆಗಳಿರುವ ಹಳ್ಳಿಗಳಿವೆ. ಕೊಂಕಣದ ಗ್ರಾಮಗಳಲ್ಲಿ ರಸ್ತೆಯ ಇಕ್ಕೆಲದಲ್ಲಿ ಮನೆಗಳಿದ್ದು ಅವುಗಳಿಗೆ ಹೊಂದಿದಂತೆ ಹಿಂಬದಿಯಲ್ಲಿ ತೆಂಗು ಅಡಕೆ ತೋಟಗಳಿವೆ. ಬೆಟ್ಟ ಪ್ರದೇಶದ ಗ್ರಾಮಗಳಲ್ಲಿ ವಸತಿಗಳು ಚದರಿದಂತೆ ಇದ್ದು ಸುತ್ತ ಹೊಲಗಳಿವೆ. ಮೊನ್ನೆ ಮೊನ್ನೆಯವರೆಗೆ ಅಸ್ಪೈಶ್ಯರೆನಿಸಿಕೊಳ್ಳುತ್ತಿದ್ದ ಜನ ಊರ ಗಡಿಯಿಂದಾಚೆ ಇರುತ್ತಿದ್ದರು. ಬೇರೆ ಬೇರೆ ಜಾತಿಗಳ ವಸತಿಗೆ ಬೇರೆ ಬೇರೆ ಕೇರಿಗಳೂ ದೇವಾಲಯಗಳೂ ಇರುವುದು ವಾಡಿಕೆ.

ಗ್ರಾಮ ಪ್ರಾಚೀನ ಭಾರತದಲ್ಲಿ ಸಮಾಜದ ಮೂಲಘಟಕವಾಗಿತ್ತು. ರಾಜಕೀಯ ಮತ್ತು ಕಾನೂನಿನ ದೃಷ್ಟಿಯಿಂದ ರಾಜನೇ ಪ್ರಭು ಹಾಗೂ ಶಾಸಕ, ಗ್ರಾಮಣಿ ಮೊದಲಾದ ಅಧಿಕಾರಿಗಳು ಗ್ರಾಮಗಳ ವಿವಿಧ ಸಂಚಯಗಳಿಗೆ ರಾಜನಿಂದ ನೇಮಕಗೊಳ್ಳುತ್ತಿದ್ದರು. ಬೇರೆ ಬೇರೆ ವರ್ಣಗಳಿಗೆ ಸೇರಿದ ಅಧಿಕಾರಿಗಳು ವಿವಿಧ ಹುದ್ದೆಗಳಲ್ಲಿ ಇರುತ್ತಿದ್ದರು. ಸಹಕಾರ ಮತ್ತು ಸ್ವಯಂಪೂರ್ಣತೆ ಪ್ರಭಾವಗಳು, ಯಂತ್ರ ತಂತ್ರದ ಆಗಮನ, ಬ್ರಿಟಿಷ್ ಆಡಳಿತ, ಅಂತರರಾಷ್ಟ್ರೀಯ ಮಾರುಕಟ್ಟೆ, ನಗರೀಕರಣ ಮೊದಲಾದ ಪ್ರಭಾವಗಳಿಗೆ ಸಿಕ್ಕು ಬದಲಾಗುತ್ತಿವೆ

ಉಲ್ಲೇಖನಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2014-02-25. Retrieved 2016-10-21.
  2. ೨.೦ ೨.೧ "ಆರ್ಕೈವ್ ನಕಲು" (PDF). Archived from the original (PDF) on 2020-02-02. Retrieved 2016-10-21.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಇದನ್ನು ನೋಡಿ

[ಬದಲಾಯಿಸಿ]

ಚಲಗೇರಾ ಗ್ರಾಮ ನಿಂಬಾಳ ಗ್ರಾಮ