ವಿಷಯಕ್ಕೆ ಹೋಗು

ಹವ್ಯಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಹವ್ಯಕ ಬ್ರಾಹ್ಮಣ ಇಂದ ಪುನರ್ನಿರ್ದೇಶಿತ)

ಹವ್ಯಕ, ಬ್ರಾಹ್ಮಣ ಜಾತಿಯ ಒಳ ಪಂಗಡ. ಹವ್ಯಕರು ಪ್ರಮುಖವಾಗಿ ನೆಲೆಸಿರುವುದು ಕರ್ನಾಟಕದ ಮಲೆನಾಡು ಹಾಗೂ ಸಮುದ್ರ ತೀರದ ಜಿಲ್ಲೆಗಳಲ್ಲಿ. ಬಹುತೇಕ ಹವ್ಯಕರ ಪೂರ್ವಜರು ಕರ್ನಾಟಕಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಕೇರಳಕಾಸರಗೋಡು ಜಿಲ್ಲೆಯವರು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಬಳಿಯಿರುವ ಶ್ರೀ ರಾಮಚಂದ್ರಾಪುರ ಮಠ[] ಮತ್ತು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿರುವ ಸೋಂದೆಯಲ್ಲಿರುವ ಸ್ವರ್ಣವಲ್ಲೀ ಮಠ ಇವರ ಪ್ರಮುಖ ಮಠಗಳು. ಮೂರನೇಯದಾದ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೋಕಿನ ಹೇರೂರಿನಲ್ಲಿರುವ ನೆಲೆಮಾವು ಪೀಠ ೨೦೦೨ರಿಂದ ಗುರುಗಳಿಲ್ಲದೆ ರಿಕ್ತವಾಗಿದೆ.[] ಹವ್ಯಕರು ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಅನುಯಾಯಿಗಳು. ಮೊದಲಿನಿಂದ ಮುಖ್ಯವಾಗಿ ವೈದಿಕರು ಮತ್ತು ಅಡಿಕೆ ಕೃಷಿಕರಾಗಿದ್ದು ಇತ್ತೀಚಿನ ದಶಕಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದಲ್ಲಿ ಹವ್ಯಕರ ಪಾತ್ರ ಗಣನೀಯವಾಗಿದೆ. ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿಗಳಲ್ಲಿ ಭಾಗವಹಿಸಿದ್ದರು.

ಹವ್ಯಕ ಎಂದರೇನು?

ಹವ್ಯಕ ಎಂಬ ಪದವು ಹವೀಗ (ಹವೀಕ) ಅಥವಾ ಹವ್ಯಗ ಎಂಬ ಪದದಿಂದ ಬಂದಿರಬಹುದೆಂದು ಅಂದಾಜಿಸಲಾಗಿದೆ. ಇದರ ಅರ್ಥ ಹವ್ಯ-ಕವ್ಯ. ಅಂದರೆ ದೇವತೆ ಮತ್ತು ಪಿತೃಗಳಿಗಾಗಿ ಹವನ ಹೋಮಗಳನ್ನು ಮಾಡುವವನು ಎಂದು. ಹಿಂದಿನ ಕಾಲದಿಂದಲೂ ರಾಜರಿಗೆ ಹವನ-ಹೋಮಗಳನ್ನು ಮಾಡಿಕೊಡುವುದು ಹವ್ಯಕರ ಕೆಲಸವಾಗಿತ್ತು. ಮೇಲೆ ಕೊಂಕಣ ಮತ್ತು ಕೆಳಗೆ ತುಳುವ ಗಡಿಯವರೆಗೆ ಈಗಿನ ಉತ್ತರ ಕನ್ನಡ ಜಿಲ್ಲೆ ಇರುವ ಪ್ರದೇಶಕ್ಕೆ ಹಿಂದೆ 'ಹೈವ' ಎಂಬ ಹೆಸರಿತ್ತು. ಇದರಿಂದ 'ಹೈಗ' ಎಂಬ ಪದ ಬಳಕೆಗೆ ಬಂದಿರಬಹುದು. ಈಗಲೂ ಹವ್ಯಕರನ್ನು ಹೈಗರು ಎಂದು ಕರೆಯುವ ರೂಢಿ ಇದೆ. ಹೈಗುಂದ ಎಂಬ ಊರಿನಿಂದ ಹವ್ಯಕರಿಗೆ ಈ ಹೆಸರು ಬಂದಿರಬಹುದು ಎಂಬ ವಿಚಾರವೂ ಇದೆ. ಹವ್ಯಕ ಅಥವಾ ಹವ್ಯಕ ಕನ್ನಡ ಎಂದರೆ ಹವ್ಯಕರು ಮಾತನಾಡುವ ಭಾಷೆ. ಇದು ಕನ್ನಡದ ಒಂದು ಉಪಭಾಷೆ.

ಹವ್ಯಕರ ಮೂಲ

ಹವ್ಯಕರ ಮೂಲದ ನಿಖರತೆಯ ಬಗ್ಗೆ ಇನ್ನೂ ಸಂದೇಹಗಳಿದ್ದರೂ ಸಹ ಸಂಶೋಧನೆಗಳ ಪ್ರಕಾರ ಹವ್ಯಕರು ಮೂಲತಃ ಬನವಾಸಿ ಪ್ರದೇಶದವರೇ ಆಗಿದ್ದು ಆ ಕಾಲದಲ್ಲಿ ಅವೈದಿಕ ಮತಗಳ ಹಾವಳಿಯಿಂದಾಗಿ ಅಹಿಚ್ಛತ್ರ ಎಂಬ ಸ್ಠಳಕ್ಕೆ (ಈಗಿನ ಉತ್ತರ ಪ್ರದೇಶ ರಾಜ್ಯದಲ್ಲಿದೆ) ವಲಸೆ ಹೋಗಿದ್ದರು. ಕ್ರಿ.ಶ. ಮೂರನೇ ಶತಮಾನದಲ್ಲಿ ಕನ್ನಡದ ಮೊದಲ ರಾಜಮನೆತನ ಸ್ಥಾಪಿಸಿದ ಕದಂಬರ ಮಯೂರವರ್ಮನಿಗೆ ಅಂದಿನ ದಿನಗಳಲ್ಲಿದ್ದ ಬ್ರಾಹ್ಮಣರ ಕೊರತೆಯಿಂದಾಗಿ ತನ್ನ ಧಾರ್ಮಿಕ ಆಚರಣೆಗಳನ್ನು ಸಾಗಿಸಲು ಕಷ್ಟವಾಗಿತ್ತಂತೆ, ಆತ ಹೋಮ-ಹವನಗಳನ್ನು ಮಾಡಿಸಲು ಹವ್ಯಕ ಕುಟುಂಬಗಳನ್ನು ಅಹಿಚ್ಛತ್ರದಿಂದ ಆಹ್ವಾನಿಸಿ ಕರೆತಂದು ರಾಜಾಶ್ರಯ ಕಲ್ಪಿಸಿ ಕೆಲವು ಹಳ್ಳಿಗಳನ್ನು ಅವರಿಗೆ ಉಂಬಳಿ ನೀಡಿ, ನೆಲೆ ನಿಲ್ಲುವಂತೆ ಅನುಕೂಲ ಕಲ್ಪಿಸಿಕೊಟ್ಟ ಎಂದು ಸಂಶೋಧನೆಗಳು ಹೇಳುತ್ತವೆ. ಸಾಗರ ತಾಲ್ಲೂಕಿನ ವರದಹಳ್ಳಿಯಲ್ಲಿರುವ ಶಿಲಾಶಾಸನದಲ್ಲಿ ಮಯೂರವರ್ಮನು ಹವ್ಯಕರನ್ನು ಕರೆತಂದ ಬಗ್ಗೆ ಉಲ್ಲೇಖವಿದೆ. ಕದಂಬರು ಕರೆತಂದ ಕುಟುಂಬಗಳು ಬನವಾಸಿಯಲ್ಲಿ ನೆಲೆಯೂರಿ ಅನಂತರ ಹರಡಿದರು.

ಹವ್ಯಕರು ಇಂದು

ಹವ್ಯಕರ ಜೀವನಾಧಾರ ಮೊದಲಿನಿಂದಲೂ ಕೃಷಿ ಚಟುವಟಿಕೆಗಳು. ಅಡಿಕೆ, ತೆಂಗು, ಭತ್ತ, ಏಲಕ್ಕಿ, ಕಾಳುಮೆಣಸು, ವೀಳ್ಯದೆಲೆ ಮುಂತಾದವುಗಳನ್ನು ಬೆಳೆಯುತ್ತಿದ್ದರು. ಇದರ ಜೊತೆ ಅನೇಕ ಕುಟುಂಬಗಳು ಪೌರೋಹಿತ್ಯವನ್ನು ಕೂಡ ವೃತ್ತಿಯಾಗಿರಿಸಿಕೊಂಡಿದ್ದವು. ಇವತ್ತಿಗೂ ಕೃಷಿಯೇ ಹವ್ಯಕರ ಮುಖ್ಯ ಉದ್ಯೋಗವಾಗಿದ್ದರೂ ಕೂಡ ಇತ್ತೀಚಿನ ಕೆಲದಶಕಗಳಿಂದ ಹವ್ಯಕರು ಬೇರೆ ಬೇರೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಕೊಂಡಿದ್ದಾರೆ. ಧಾರ್ಮಿಕವಾಗಿ ಹವ್ಯಕರು ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಸ್ವರ್ಣವಲ್ಲಿ ಮಠ ಮತ್ತು ರಾಮಚಂದ್ರಾಪುರ ಮಠಗಳ ಅನುಯಾಯಿಗಳಾಗಿದ್ದಾರೆ.

ಭೌಗೋಳಿಕ ವ್ಯಾಪ್ತಿ

ಹವ್ಯಕರು ಭಾರತದಲ್ಲಿ ಮುಖ್ಯವಾಗಿ ನೆಲೆಗೊಂಡಿರುವುದು ಕರ್ನಾಟಕ ರಾಜ್ಯದಲ್ಲಿ. ಕರ್ನಾಟಕಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮತ್ತು ಕೇರಳ ರಾಜ್ಯದ ಕಾಸರಗೋಡು ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಶತಮಾನಗಳಿಂದ ವಾಸವಾಗಿದ್ದಾರೆ. ಧಾರವಾಡ, ಹುಬ್ಬಳ್ಳಿ, ಮುಂಬಯಿ, ಬೆಂಗಳೂರು ಕಡೆಗೆ ಬೇರೆ ಬೇರೆ ಕಾರಣಗಳಿಂದ ವಲಸೆ ಹೋಗಿದ್ದಾರೆ. ಈಗಿನ ತಲೆಮಾರಿನಲ್ಲಿ ಬೆಂಗಳೂರಿಗೆ ವಲಸೆ ಬಂದವರ ಸಂಖ್ಯೆ ಹೆಚ್ಚಾಗಿದೆ. ಇದಲ್ಲದೇ ಭಾರತದ ಬೇರೆ ಬೇರೆ ನಗರಗಳಲ್ಲಿ ಉದ್ಯೋಗದ ಕಾರಣಕ್ಕಾಗಿ ಹವ್ಯಕರು ವಲಸೆ ಹೋಗಿ ನೆಲೆಗೊಂಡಿದ್ದಾರೆ. ಯು.ಎಸ್.ಎ., ಯು.ಕೆ, ಆಸ್ಟ್ರೇಲಿಯಾ, ಅರಬ್ ದೇಶಗಳು ಮೊದಲಾದ ಹೊರದೇಶಗಳಲ್ಲೂ ಸಹ ಹವ್ಯಕರು ಹೋಗಿ ನೆಲೆಸಿದ್ದಾರೆ. ಮುಂಬಯಿ ಮತ್ತು ಬೆಂಗಳೂರು ನಗರಗಳಲ್ಲಿ ಹವ್ಯಕರ ಸಂಖ್ಯೆ ಗಣನೀಯವಾಗಿದೆ. ವಲಸೆ ಬಂದ ಹವ್ಯಕರ ಬೇರುಗಳು ಮೇಲೆ ಹೇಳಿದ ಜಿಲ್ಲೆಗಳಲ್ಲಿದೆ.

ಜನಸಂಖ್ಯೆ

ವಿಶ್ವದಲ್ಲಿನ ಹವ್ಯಕರ ಜನಸಂಖ್ಯೆ ಸುಮಾರು ಆರು ಲಕ್ಷ [] ಎಂದು ಅಂದಾಜಿಸಲಾಗಿದೆ. ಹಳ್ಳಿಗಳಲ್ಲೇ ಹವ್ಯಕರ ಹೆಚ್ಚಿನ ಜನಸಂಖ್ಯೆ ಇದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ನಗರಗಳಿಗೆ ವಲಸೆ ಹೋಗುತ್ತಿರುವುದರಿಂದ ಹಳ್ಳಿಯಲ್ಲಿ ಹವ್ಯಕರ ಜನಸಂಖ್ಯೆ ಪ್ರಮಾಣ ಕುಸಿದಿದೆ.

ಅಡ್ಡಹೆಸರು/ಕುಟುಂಬದ ಹೆಸರು

ಹವ್ಯಕರಲ್ಲಿ ಅತಿ ಹೆಚ್ಚು ಕಂಡುಬರುವುದು ಭಟ್ಟ ಮತ್ತು ಹೆಗಡೆ ಎಂಬ ಅಡ್ಡ ಹೆಸರುಗಳು. ಇವಲ್ಲದೇ ದೀಕ್ಷಿತ, ಉಪಾಧ್ಯಾಯ, ಉಪಾಧ್ಯ, ಹೆಬ್ಬಾರ, ಶಾಸ್ತ್ರಿ, ಶರ್ಮಾ, ವೈದ್ಯ, ಭಾಗವತ, ರಾವ್, ಪಂಡಿತ, ಸಭಾಹಿತ, ಜೋಯ್ಸ, ಗಾಂವ್ಕರ್, ಪುರೋಹಿತ, ಪುರಾಣಿಕ, ಜೋಶಿ ಮುಂತಾದ ಅಡ್ಡ ಹೆಸರುಗಳು ಕೂಡ ಇವೆ. ಎಲ್ಲವೂ ಅವರು ಮಾಡುತ್ತಿದ್ದ ಉದ್ಯೋಗ ಮತ್ತು ಸಾಮಾಜಿಕ ಸ್ಥಾನದಿಂದ ಬಂದಿರುವಂತವು. ಕರ್ಕಿ, ದೊಡ್ಡೇರಿ, ನಡಹಳ್ಳಿ ಮುಂತಾದ ಮೂಲ ಊರಿನ ಹೆಸರಿನಿಂದ ಬಂದಿರುವ ಇನ್ನೂ ಕೆಲವು ಅಡ್ಡಹೆಸರುಗಳು ಕೂಡ ಇವೆ.

ಭಾಷೆ

ಹವ್ಯಕರು ಮಾತನಾಡುವ ಭಾಷೆ ಹವ್ಯಕ ಕನ್ನಡ ಅಥವಾ ಹವಿಗನ್ನಡ. ಇದು ಕನ್ನಡದ ಉಪಭಾಷೆಯಾಗಿದ್ದು ೬೦ -೭೦ % ಸಾಮಾನ್ಯ ಕನ್ನಡದಂತೆಯೇ ಇದ್ದು ಹಳೆಗನ್ನಡದ ಕೆಲವು ಪದಗಳನ್ನು ಒಳಗೊಂಡಿದೆ. ವಾಕ್ಯಗಳ ಕೊನೆಯಲ್ಲಿ ಬರುವ ಕ್ರಿಯಾಪದಗಳು ಬೇರೆ ರೀತಿ ಇರುತ್ತವೆ. ಸಿರ್ಸಿ, ಯಲ್ಲಾಪುರ, ಸಾಗರ, ಸೊರಬ, ಕುಮಟಾ-ಹೊನ್ನಾವರ, ಗೋಕರ್ಣ, ದಕ್ಷಿಣ ಕನ್ನಡ, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿನ ಹವ್ಯಕ ಭಾಷೆಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಹವ್ಯಕ ಕನ್ನಡದ ಲಿಪಿ ಕನ್ನಡ. ಹವ್ಯಕ ಭಾಷೆಯ ಹುಟ್ಟಿನ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ.

ಹವ್ಯಕ ಹಬ್ಬಗಳು

ಸಾಮಾನ್ಯವಾಗಿ ಹವ್ಯಕರು ನೆಲೆಗೊಂಡಿರುವ ಪ್ರದೇಶಗಳಲ್ಲಿನ ಹಿಂದೂಧರ್ಮದಲ್ಲಿ ಆಚರಣೆಯಲ್ಲಿರುವ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ. ಯುಗಾದಿ , ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ಹಬ್ಬಗಳು ಪ್ರಮುಖವಾದವು. ದೀಪಾವಳಿ ಹಬ್ಬ ಹವ್ಯಕರಲ್ಲಿ 'ದೊಡ್ಡಹಬ್ಬ'ವೆಂದು ಆಚರಿಸಲ್ಪಡುತ್ತದೆ.

ಕಲೆ, ಸಾಹಿತ್ಯ, ಸಂಸ್ಕೃತಿ

ಹವ್ಯಕರ ಜೀವನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಶ್ರೀಮಂತವಾಗಿದೆ. ಸಂಗೀತ, ವಾದ್ಯ, ನೃತ್ಯ, ಬರವಣಿಗೆಗಳು ಹವ್ಯಕರಿಗೆ ಕರಗತವಾಗಿದೆ. ಪ್ರಸಿದ್ಧ ಯಕ್ಷಗಾನ ಕಲೆಯಲ್ಲಿ ಹವ್ಯಕರು ಮೊದಲಿನಿಂದಲೂ ತೊಡಗಿಕೊಂಡಿದ್ದಾರೆ. ೧೮೮೭ರಲ್ಲಿ ಸೂರಿ ವೆಂಕಟರಮಣ ಶಾಸ್ತ್ರಿಗಳಿಂದ ರಚಿತವಾದ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ ಎಂಬ ನಾಟಕವು ಕನ್ನಡದ ಮೊದಲ ಸಾಮಾಜಿಕ ನಾಟಕವಾಗಿದೆ. ೧೯ನೇ ಶತಮಾನದ ಮಧ್ಯದಲ್ಲಿ ಕರ್ಕಿ ಯಕ್ಷಗಾನ ತಂಡದ ಮಹಾರಾಷ್ಟ್ರ ಪ್ರವಾಸ ಮತ್ತು ಪ್ರದರ್ಶನಗಳು ಮರಾಠಿ ನಾಟಕ ರಂಗಕ್ಕೆ ನಾಂದಿ ಹಾಡಿದವು. ಹವ್ಯಕ ಸಮುದಾಯದಲ್ಲಿ ಬಹಳಷ್ಟು ಜನ ಬರಹಗಾರರು, ಕಲಾವಿದರು ವಿವಿಧ ರಂಗಗಳಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕದ ಪತ್ರಿಕೆಗಳಲ್ಲಿ, ಟೀವಿ ಮಾಧ್ಯಮದಲ್ಲಿ ಹವ್ಯಕರು ಗಣನೀಯ ಸಂಖ್ಯೆಯಲ್ಲಿದ್ದಾರೆ.

ಹವ್ಯಕ ಆಹಾರ/ಅಡುಗೆ

ಹವ್ಯಕರು ಶುದ್ದ ಶಾಕಾಹಾರಿಗಳು. ಹವ್ಯಕರ ಆಹಾರ-ಅಡುಗೆಗಳು ಅವುಗಳ ರುಚಿ ಮತ್ತು ಔಷಧೀಯ ಗುಣಗಳಿಂದ ವಿಶಿಷ್ಟವಾಗಿವೆ. ಅಕ್ಕಿ ಮತ್ತು ಗೋಧಿ ಮುಖ್ಯವಾಗಿ ಬಳಸಲ್ಪಡುತ್ತವೆ. ಹವ್ಯಕರ ಮೂಲನೆಲೆ ಹಳ್ಳಿಗಳಾಗಿದ್ದರಿಂದ ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಸಿಗುವ ಹಲವು ಬಗೆಯ ಚಿಗುರು, ಎಲೆ, ಬೇರು, ಗಡ್ಡೆ, ಕಾಯಿ, ತೊಗಟೆ, ತರಕಾರಿ ಮುಂತಾದವುಗಳು ಅಡುಗೆಯಲ್ಲಿ ಬಳಸಲ್ಪಡುತ್ತವೆ. ಹಾಲು, ಮಜ್ಜಿಗೆ, ತುಪ್ಪ ಯಥೇಚ್ಛವಾಗಿ ಬಳಕೆಯಾಗುತ್ತವೆ. ಅನ್ನ ಮತ್ತು ಚಪಾತಿ, ಅಪ್ಪೆ ಹುಳಿ, ವಿವಿಧ ರೀತಿಯ ತಂಬುಳಿಗಳು, ಗೊಜ್ಜು, ಸಾಸ್ಮೆ, ಚಟ್ನಿ, ಮೆಣಸ್ಕಾಯಿ, ಕೊಚ್ಚಿಸಳ್ಳಿ, ಅವಿಲು, ಕಾಯ್ರಸ, ಹಶಿ, ಕರ್ಕ್ಲಿ, ಮಜ್ಜಿಗೆ ಹುಳಿ, ಪೊಳದ್ಯ, ಹುಳಿ(ಸಾಂಬಾರು), ಸಾರು, ಪಲ್ಯ ಮುಂತಾದವು ಹವ್ಯಕರ ಅಡುಗೆ ಪದಾರ್ಥಗಳು. ತೊಡದೇವು, ವಡಪ್ಪೆ, ಸುಕ್ರುಂಡೆ, ಮುಳಕ, ಶಿರಾ, ಮಣೆಬೆಲ್ಲ, ಕಡುಬು, ಹಲಸಿನಕಾಯಿ ಹುಳಿ, ಒಗ್ಗರಣೆ ಅವಲಕ್ಕಿ, ಕುಟ್ಟವಲಕ್ಕಿ,ಹಪ್ಪಳ, ಹೋಳಿಗೆ, ಸಂಡಿಗೆ, ಸುಟ್ಟೆವು, ಕೇಸರಿಅನ್ನ, ಅನೇಕ ರೀತಿಯ ಹಣ್ಣುಗಳ ರಸಾಯನ/ಸೀಕರಣೆ, ಚಟ್ನಿ ಪುಡಿಗಳು, ಉಪ್ಪಿನಕಾಯಿಗಳು ಇನ್ನೂ ಹತ್ತು ಹಲವು ಬಗೆಯ ಅಡುಗೆ/ಸಿಹಿತಿನಿಸುಗಳ ತಯಾರಿಕೆ ಕೂಡ ಹವ್ಯಕರ ವಿಶಿಷ್ಟತೆ.

ಹವ್ಯಕ ವೇದ, ಗೋತ್ರಗಳು

ಬಹುಸಂಖ್ಯೆಯ ಹವ್ಯಕರು ಯಜುರ್ವೇದಿಗಳು. ಜೊತೆಗೆ ಕಡಿಮೆ ಸಂಖ್ಯೆಯಲ್ಲಿ ಋಗ್ವೇದಿಗಳೂ, ಸಾಮವೇದಿಗಳೂ ಇದ್ದಾರೆ. ಎಲ್ಲಾ ಹವ್ಯಕರೂ ಒಂದೊಂದು ನಿರ್ದಿಷ್ಟ ಗೋತ್ರಕ್ಕೆ ಸೇರಿದವರಾಗಿದ್ದಾರೆ. ಗೋತ್ರವೆಂದರೆ ಆ ಋಷಿಗಳ ವಂಶದವರು ಎಂಬುದು ಸಾಮಾನ್ಯ ನಂಬಿಕೆ. ಯಾರು ಯಾವ ಋಷಿಯ ಬಳಿ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಕಳುಹಿಸುತ್ತಿದ್ದರೋ ಅಥವಾ/ಮತ್ತು ಗೋವುಗಳನ್ನು ಬಿಡುತ್ತಿದ್ದರೋ ಅದೇ ಋಷಿಯ ಪಂಗಡ ಅಥವಾ ಗೋತ್ರ ಎಂದು ಗುರುತಿಸಲ್ಪಡುತ್ತಿದ್ದರು ಎನ್ನುವ ನಂಬಿಕೆಯೂ ಇದೆ. ಒಂದೇ ಗೋತ್ರದಲ್ಲಿ ಮದುವೆ ನಿಷಿದ್ಧವಾಗಿದೆ. ಈ ಕೆಳಗಿನವು ಹವ್ಯಕರ ಗೋತ್ರಗಳು

  1. ಆಂಗೀರಸ
  2. ಭಾರದ್ವಾಜ
  3. ಭಾರ್ಗವ
  4. ಗೌತಮ ಮಹರ್ಷಿ
  5. ಜಮದಗ್ನಿ
  6. ಕಾಶ್ಯಪ
  7. ವಸಿಷ್ಠ ಮಹರ್ಷಿ
  8. ವಿಶ್ವಾಮಿತ್ರ

ಪ್ರಮುಖ/ಪ್ರಸಿದ್ಧ/ಐತಿಹಾಸಿಕ ವ್ಯಕ್ತಿಗಳು

  1. ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು - ರಾಮಚಂದ್ರಾಪುರ ಮಠ ಪೀಠಾರೂಢರು.
  2. ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು - ಸ್ವರ್ಣವಲ್ಲೀ ಮಠ ಪೀಠಾರೂಢರು.
  3. ವಿದ್ಯಾರಣ್ಯ ಮಹರ್ಷಿಗಳು - ಹಕ್ಕ-ಬುಕ್ಕರ ಮೂಲಕ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದವರು[]
  4. ರಾಮಕೃಷ್ಣ ಹೆಗಡೆ- ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ೧೦ನೇ ಯೋಜನಾ ಆಯೋಗದ ಡೆಪ್ಯುಟಿ ಚೇರ್ ಮನ್.
  5. ಕೆ.ರಾಮಭಟ್ ಉರಿಮಜಲು - ಮಾಜಿ ಶಾಸಕರು, ರಾಜಕೀಯ ಮುಖಂಡರು (ಜನಸಂಘ, ಭಾ.ಜ.ಪ).
  6. ಕಾಗೇರಿ ವಿಶ್ವೇಶ್ವರ ಹೆಗಡೆ - ಸಿರ್ಸಿ/ಅಂಕೋಲಾ ಕ್ಷೇತ್ರದ ಶಾಸಕರು, ಕರ್ನಾಟಕ ವಿಧಾನ ಸಭೆ
  7. ಅನಂತ ಕುಮಾರ ಹೆಗಡೆ- ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರು, ಭಾರತೀಯ ಜನತಾ ಪಕ್ಷದ ನಾಯಕರಲ್ಲಿ ಒಬ್ಬರು.
  8. ಎಲ್.ಟಿ.ತಿಮ್ಮಪ್ಪ ಹೆಗಡೆ ಮಾಜಿ ವಿಧಾನ ಸಭಾ ಸದಸ್ಯರು ಸಾಗರ ಮತ್ತು ಸಮಾಜ ಸೇವಕರು
  9. ಕಲ್ಲಡ್ಕ ಪ್ರಭಾಕರ ಭಟ್ಟ - ದಕ್ಷಿಣ ಕನ್ನಡ ಪ್ರದೇಶದ ಹಿಂದೂ ಮುಖಂಡರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ಸಾಮಾಜಿಕ ಕಾರ್ಯಕರ್ತರು.
  10. ದೊಡ್ಮನೆ ಮಹಾದೇವಿ ಹೆಗಡೆ ಅಥವಾ ಮಹಾದೇವಿತಾಯಿ- ಸಾಮಾಜಿಕ ಕಾರ್ಯಕರ್ತೆ, ಸರ್ವೋದಯ ಚಳುವಳಿಯ ಮುಂದಾಳು, ಸ್ವಾತಂತ್ರ್ಯ ಹೋರಾಟಗಾರರು.
  11. ಕಡವೆ ಶ್ರೀಪಾದ ಹೆಗಡೆ- ತೋಟಗಾರರ ಸೊಸೈಟಿ (ಟಿ.ಎಸ್.ಎಸ್) ಸಂಸ್ಥೆಯ ಜನಕ.
  12. ವಾರಣಾಸಿ ಸುಬ್ರಾಯ ಭಟ್ಟ - ಕ್ಯಾಂಪ್ಕೋ ಸ್ಥಾಪಕ ಅಧ್ಯಕ್ಷರು.[]
  13. ವಿ.ಜಿ.ಸಭಾಹಿತ - ನ್ಯಾಯಮೂರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯ.
  14. ಟಿ.ಮಡಿಯಾಳ(ತಿಮ್ಮಪ್ಪ ಮಡಿಯಾಳ)- ನಿವೃತ್ತ IPS ಅಧಿಕಾರಿ, ಮಾಜಿ ಪೋಲೀಸ್ ಕಮೀಷನರ್, ಮಾಜಿ DGP.
  15. ಅಪ್ಪಿಕೊ ಪಾಂಡುರಂಗ ಹೆಗಡೆ -ಅಪ್ಪಿಕೊ ಚಳುವಳಿಯ ಸಕ್ರಿಯ ಕಾರ್ಯಕರ್ತರು
  16. ಕೆ.ವಿ.ಸುಬ್ಬಣ್ಣ- ಕನ್ನಡ ಬರಹಗಾರ, ನಾಟಕಕಾರ, ಮ್ಯಾಗ್ಸೆಸೆ ಪ್ರಶಸ್ತಿ ಪಡೆದವರು.
  17. ಸೇಡಿಯಾಪು ಕೃಷ್ಣಭಟ್ಟ - ಕವಿ, ಕಥೆಗಾರ, ಭಾಷಾಶಾಸ್ತ್ರಜ್ಞ, ನಿಘಂಟುಕಾರ, ವಿದ್ವಾಂಸ.
  18. ಡಿ. ಎನ್. ಶಂಕರ ಭಟ್ಟ - ಅಚ್ಚಕನ್ನಡ ಖ್ಯಾತಿಯ ಬರಹಗಾರರು, ಭಾಷಾತಜ್ಞರು, ನಿಘಂಟುಕಾರರು.
  19. ವಿದ್ವಾನ್ ರಂಗನಾಥ ಶರ್ಮಾ - ಸಂಸ್ಕೃತ ಮತ್ತು ಕನ್ನಡ ವಿದ್ವಾಂಸರು , ಲೇಖಕರು.
  20. ಎಂ ಎಸ್ ತಿಮ್ಮಪ್ಪ - ಬೆಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ.
  21. ತಿಮ್ಮಪ್ಪ ಭಟ್ - ಪತ್ರಕರ್ತ, ಸಂಪಾದಕ
  22. ಶಿವಸುಬ್ರಮಣ್ಯ - ಪತ್ರಕರ್ತ, ಸಂಪಾದಕ
  23. ವಿಶ್ವೇಶ್ವರ ಭಟ್ - ಪತ್ರಕರ್ತ, ಬರಹಗಾರ, ಸಂಪಾದಕ
  24. ಕೆ.ವಿ.ಅಕ್ಷರ- ಕನ್ನಡ ಬರಹಗಾರ, ನಾಟಕಕಾರ.
  25. ನಾಗೇಶ ಹೆಗಡೆ - ಕನ್ನಡ ವಿಜ್ಞಾನ ಬರಹಗಾರ, ಪತ್ರಕರ್ತ, ಪರಿಸರವಾದಿ.
  26. ದಿವಸ್ಪತಿ ಹೆಗಡೆ - ಕನ್ನಡ ಬರಹಗಾರ.
  27. ಗಜಾನನ ಶರ್ಮಾ - ಕನ್ನಡ ಬರಹಗಾರ.
  28. ಪ. ಗೋಪಾಲಕೃಷ್ಣ (ಪ.ಗೋ)- ಪತ್ರಕರ್ತ ಹಾಗೂ ಅಂಕಣಕಾರ.[]
  29. ಅಡ್ಯನಡ್ಕ ಕೃಷ್ಣಭಟ್ಟ - ವಿಜ್ಞಾನ ಬರಹಗಾರ, ರಾಷ್ಟ್ರಪ್ರಶಸ್ತಿ ವಿಜೇತ.[]
  30. ಪ್ರೊ.ಎಂ.ಎ.ಹೆಗಡೆ - ಸಂಸ್ಕೃತ ವಿದ್ವಾಂಸರು ಮತ್ತು ಗ್ರಂಥಕರ್ತರು , ಭಾಷಾಶಾಸ್ತ್ರಜ್ಞ, ನಿವೃತ್ತ ಪ್ರಾಂಶುಪಾಲರು.
  31. ಡಾ.ದೊಡ್ಡೇರಿ ವೆಂಕಟಗಿರಿರಾವ್ -ವೈದ್ಯರು, ಸಾಹಿತಿಗಳು, ಬರಹಗಾರರು, ಛಾಯಾ ಚಿತ್ರಕಾರರು
  32. ಡಾ.ಯು.ಬಿ.ಪವನಜ - ವಿಜ್ಞಾನಿ, ವಿಜ್ಞಾನ ಮತ್ತು ತಂತ್ರಜ್ಞಾನ ಲೇಖಕ, ಕನ್ನಡ ಮತ್ತು ಗಣಕ ತಂತ್ರಜ್ಞ, ಕನ್ನಡದ ಪ್ರಥಮ ಅಂತರಜಾಲ ತಾಣ ನಿರ್ಮಾಪಕ
  33. ದಿಗಂತ್ ಮಂಚಾಲೆ - ಕನ್ನಡ ಸಿನೆಮಾ ನಟ.
  34. ನೀರ್ನಳ್ಳಿ ರಾಮಕೃಷ್ಣ - ಕನ್ನಡ ಸಿನೆಮಾ ನಟ.
  35. ಹೇಮಂತ ಹೆಗಡೆ - ಕನ್ನಡ ಕಿರುತೆರೆ/ಸಿನೆಮಾ ನಟ ಮತ್ತು ನಿರ್ದೇಶಕ.
  36. ಅನುರಾಧಾ ಭಟ್ - ಕನ್ನಡ ಚಲನಚಿತ್ರ ಹಿನ್ನೆಲೆ ಗಾಯಕಿ.
  37. ವಿಜಯ್ ಕಾಶಿ - ಕನ್ನಡ ಕಿರುತೆರೆ/ಸಿನೆಮಾ ನಟಿ
  38. ಮ೦ಜುನಾಥ ಹೆಗಡೆ- ಕನ್ನಡ ಕಿರುತೆರೆ ನಟ
  39. ಚಿಟ್ಟಾಣಿ ರಾಮಚಂದ್ರ ಹೆಗಡೆ - ಪದ್ಮಶ್ರೀ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ.
  40. ಕೆರೆಮನೆ ಶಂಭು ಹೆಗಡೆ - ಯಕ್ಷಗಾನ ಕಲಾವಿದ , ಕೇಂದ್ರ ನಾಟಕ ಅಕಾಡೆಮಿ ಪುರಸ್ಕ್ರುತ
  41. ಕೆರೆಮನೆ ಶಿವರಾಮ ಹೆಗಡೆ - ಯಕ್ಷಗಾನ ಕಲಾವಿದ.
  42. ಹೊಸ್ತೋಟ ಮಂಜುನಾಥ ಭಾಗವತರು - ಯಕ್ಷಗಾನ ಕವಿ, ಕೇಂದ್ರ ಸಂಗೀತ ನಾಟಕ ಪ್ರಶಸ್ತಿ ಪುರಸ್ಕೃತರು.
  43. ಕೆರೆಕೈ ಕೃಷ್ಣ ಭಟ್ - ತಾಳ ಮದ್ದಲೆ ಕಲಾವಿದ.
  44. ಪಂ. ಗಣಪತಿ ಭಟ್ ,ಹಾಸಣಗಿ. - ಹಿಂದುಸ್ತಾನಿ ಸಂಗೀತಗಾರ.
  45. ಧನಂಜಯ ಹೆಗಡೆ - ಹಿಂದೂಸ್ತಾನಿ ಸಂಗೀತಗಾರ.
  46. ಪಂ.ಪರಮೇಶ್ವರ ಹೆಗಡೆ - ಹಿಂದುಸ್ತಾನಿ ಗಾಯಕರು
  47. ಶೇಣಿ ಗೋಪಾಲಕೃಷ್ಣ ಭಟ್- ಯಕ್ಷಗಾನ ಕಲಾವಿದರು
  48. ನೆಬ್ಬೂರು ನಾರಾಯಣ ಭಾಗವತ- ಯಕ್ಷಗಾನ ಹಿಮ್ಮೇಳ ಕಲಾವಿದರು
  49. ಹೆಚ್. ಎ. ಪ್ರಭಾಕರ ರಾವ್ ಹೊಸಬಾಳೆ ಸೊರಬ ತಾಲ್ಲೂಕು ಶಿವಮೊಗ್ಗ ಜಿಲ್ಲೆ.ಸಮಾಜ ಸೇವಕರು
  50. ಹೊಸಬಾಳೆ ಸುಬ್ಬರಾಯರು ರಾಮಚಂದ್ರಾಪುರ ಮಠದ ಪ್ರಸಿದ್ಧ ದಂತ ಸಿಂಹಾಸನ ನಿರ್ಮಾಣಕ್ಕೆ ಕಾರಣಕರ್ತರು, ಸಮಾಜಸೇವಕರು
  51. ಮನೆಘಟ್ಟದ ಟಿ.ಸುಬ್ಬರಾಯರು ಗಮಕ ಕಲಾವಿದರು, ರಾಜ್ಯ ಪ್ರಶಸ್ತಿ ವಿಜೇತರು ಹವ್ಯಾಸಿ ನಾಟಕ ಕಲಾವಿದರು ಮತ್ತು ಸಮಾಜ ಸೇವಕರು
  52. ರಘುರಾಮ ಭಟ್ - ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ಎಡಗೈ ಸ್ಪಿನ್ ಬೌಲರ್.
  53. ಆರ್. ವಿ.ಶಾಸ್ತ್ರಿ, ಕಕಿ‌‌೯, ಕರ್ಣಾಟಕ ಬ್ಯಾಂಕ್ ನಿದೇ‍೯ಶಕರು, ಹಿಂದಿನ ಕೆನರಾ ಬ್ಯಾಂಕ್ ಚೇರಮನ್
  54. ನೀರ್ನಳ್ಳಿ ಗಣಪತಿ - ಖ್ಯಾತ ಕಲಾವಿದರು, ವ್ಯಂಗ್ಯಚಿತ್ರಕಾರರು
  55. ಶ್ಯಾಮಸುಂದರ ನೆತ್ರಕೆರೆ - ಖ್ಯಾತ ಕಲಾವಿದರು, ವ್ಯಂಗ್ಯಚಿತ್ರಕಾರರು
  56. ಕೆ.ಪರಮೇಶ್ವರ.ಹೆಗಡೆ- ಖ್ಯಾತ ಪತ್ರಕರ್ತರು, ಬರಹಗಾರರು
  57. ಕೆರೆಮನೆ ಮಹಾಬಲ ಹೆಗಡೆ - ಯಕ್ಷಗಾನ ಕಲಾವಿದ, ಭಾಗವತ, ಸಂಗೀತಗಾರ
  58. ವಿ. ತಿ. ಶೀಗೇಹಳ್ಳಿ - ಸಾಹಿತಿ, ಕಾದಂಬರಿಕಾರ, ನಾಟಕಕಾರ, ನಟ, ನಿರ್ದೇಶಕ
  59. ಶಿವಾನಂದ ಕಳವೆ - ಪತ್ರಕರ್ತರು, ಪರಿಸರ ತಜ್ಞರು, ಅಂಕಣಕಾರರು
  60. ಜಯಪ್ರಕಾಶ ಮಾವಿನಕುಳಿ - ಸಾಹಿತಿ, ಕಾದಂಬರಿಕಾರ, ನಾಟಕಕಾರ, ರಂಗ ನಿರ್ದೇಶಕ, ರಂಗ ಮತ್ತು ಚಲನಚಿತ್ರ ನಟ,

ಉಲ್ಲೇಖಗಳು

  1. "ರಾಮಚಂದ್ರಪುರಮಠದ ಜಾಲತಾಣ".
  2. 'ಹವ್ಯಕರ ಇತಿಹಾಸ ದರ್ಶನ'-ಗ್ರಂಥಕರ್ತ: ಹೆಚ್.ಎಂ.ತಿಮ್ಮಪ್ಪ ಕಲಸಿ, 2012, ಪ್ರಕಾಶನ: ಹವ್ಯಕ ಅಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ), ಮಲ್ಲೇಶ್ವರಂ, ಬೆಂಗಳೂರು-560 003.
  3. 'ಹವ್ಯಕರ ಇತಿಹಾಸ ದರ್ಶನ' ಪುಸ್ತಕ, ಪುಟ ಸಂಖ್ಯೆ: ೩೯- ಗ್ರಂಥಕರ್ತ: ಹೆಚ್.ಎಂ.ತಿಮ್ಮಪ್ಪ ಕಲಸಿ, ೨೦೧೨, ಪ್ರಕಾಶನ: ಹವ್ಯಕ ಅಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ)
  4. 'ಹವ್ಯಕರ ಇತಿಹಾಸ ದರ್ಶನ' ಪುಸ್ತಕ - ಗ್ರಂಥಕರ್ತ: ಹೆಚ್.ಎಂ.ತಿಮ್ಮಪ್ಪ ಕಲಸಿ, ೨೦೧೨, ಪ್ರಕಾಶನ: ಹವ್ಯಕ ಅಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ)
  5. http://www.hindu.com/2007/07/10/stories/2007071051220300.htm
  6. "ಆರ್ಕೈವ್ ನಕಲು". Archived from the original on 2010-10-06. Retrieved 2010-10-19. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  7. "ಆರ್ಕೈವ್ ನಕಲು". Archived from the original on 2009-12-31. Retrieved 2010-01-07.


ಆಧಾರಗಳು/ಆಕರಗಳು

'ಹವ್ಯಕರ ಇತಿಹಾಸ ದರ್ಶನ'-ಗ್ರಂಥಕರ್ತ:ಹೆಚ್.ಎಂ.ತಿಮ್ಮಪ್ಪ,ಕಲಸಿ, 2012, ಪ್ರಕಾಶನ: ಹವ್ಯಕ ಅಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ), ಮಲ್ಲೇಶ್ವರಂ, ಬೆಂಗಳೂರು-560 003.

ಹೊರಗಿನ ಕೊಂಡಿಗಳು

ಇವುಗಳನ್ನೂ ನೋಡಿ