ವಿಷಯಕ್ಕೆ ಹೋಗು

ಅಂಧಕಾರಯುಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂಧಕಾರಯುಗ : ಮೆಡಿಟರೇನಿಯನ್ ಸಮುದ್ರದ ಸುತ್ತಲಿನ ದೇಶಗಳನ್ನೆಲ್ಲ ಆಕ್ರಮಿಸಿ ಸು. ೫ ಶತಮಾನಗಳ ಕಾಲ (೫ನೆಯ ಶತಮಾನದವರೆಗೂ) ಅತ್ಯಂತ ವೈಭವದಿಂದ ಮೆರೆದ ರೋಮನ್ ಸಾಮ್ರಾಜ್ಯದ ಪತನಾನಂತರದ ೫ ಶತಮಾನಗಳ ಕಾಲವನ್ನು (೫೦೦-೧೦೦೦) ಅಂಧಕಾರಯುಗವೆಂದು (ಡಾರ್ಕ್ ಏಜಸ್) ಇತಿಹಾಸಕಾರರು ಕರೆದಿದ್ದಾರೆ.[]

ರೋಮನರ ಚಾರಿತ್ರಿಕ ಹಿನ್ನೆಲೆ

ಯುರೋಪಿನ ಸಂಸ್ಕೃತಿ ಮೊದಲು ಬೆಳೆದದ್ದು ಗ್ರೀಸಿನಲ್ಲಿ; ಗ್ರೀಸಿನ ಪತನಾನಂತರ ರೋಮನರು ಅದನ್ನು ಪೋಷಿಸಿ ಬೆಳೆಸಿದರು. ೫ನೆಯ ಶತಮಾನದಲ್ಲಿ ವೈಭವ, ಸಮೃದ್ಧಿ, ಸುಖಲೋಲುಪತೆಗಳಿಂದ ಬಲಗುಂದಿದ್ದ ಆ ಸಾಮ್ರಾಜ್ಯದೊಳಕ್ಕೆ ಅನಾಗರಿಕರಾದರೂ ಬಲಿಷ್ಠರಾದ ಹೊರಜನರು ನುಗ್ಗಿದರು; ಅವರ ಧಾಳಿಯನ್ನೆದುರಿಸಲಾರದೆ ಸಾಮ್ರಾಜ್ಯ ಕುಸಿಯಿತು. ಈ ಜನರು ರೋಮನ್ ಸಾಮ್ರಾಜ್ಯದಲ್ಲಿ ನಿಂತು, ರಾಜ್ಯಗಳನ್ನು ಕಟ್ಟಿ, ದೇಶೀಯರೊಂದಿಗೆ ಬೆರೆತು, ಬಾಳಿದ ನಾಲ್ಕೈದು ಶತಮಾನಗಳನ್ನು ಅಂಧಕಾರ ಯುಗವೆಂದು ಕೆಲವು ಚರಿತ್ರಕಾರರು ಕರೆದಿದ್ದಾರೆ.[] ಆ ಕಾಲಕ್ಕೆ ಈ ಹೆಸರು ಉಚಿತವೆಂದು ಹೇಳಲಾಗುವುದಿಲ್ಲ. ಆಗಿನ ಪರಿಸ್ಥಿತಿಯನ್ನು ಗಮನಿಸಿದರೆ ಹಿಂದಿನಿಂದಲೂ ಬೆಳೆದು ಬಂದ ರೋಮನ್ ಸಂಸ್ಕೃತಿ ಅಳಿಯಿತೇನೋ ಎನ್ನುವಂತಿತ್ತು, ನಿಜ. ಆದರೆ ವ್ಯಾಪಕವಾಗಿ ಬೆಳೆದು ಜನರಲ್ಲಿ ಬೇರೂರಿದ್ದ ಯಾವ ಸಂಸ್ಕೃತಿಯೂ ಅಷ್ಟು ಸುಲಭವಾಗಿ ನಾಶ ಹೊಂದಲಾರದು. ಅದು ಕೆಲವು ಕಾಲ ಕಾಂತಿಮಾಲಿನ್ಯ ಹೊಂದಿತ್ತೇ ಹೊರತು ಅಳಿಯಲಿಲ್ಲ. ಅಲ್ಲದೆ ರೋಮನ್ ಸಾಮ್ರಾಜ್ಯ ಕ್ಷೀಣಿಸಿದಂತೆಲ್ಲ ಕ್ರೈಸ್ತಧರ್ಮ ಬೆಳೆಯುತ್ತ ಬಂದು, ಅದನ್ನು ಪರೋಕ್ಷವಾಗಿ ಪೋಷಿಸಿತು. ಊಳಿಗಮಾನ್ಯ ಪದ್ಧತಿ, ವ್ಯವಸಾಯದಲ್ಲಿ ಸಮುದ್ರಯಾನದಲ್ಲಿ ಸುಧಾರಣೆಗಳು-ಇವೆಲ್ಲ ಹಳೆಯ ಸಂಸ್ಕೃತಿ ಅಳಿಯಲವಕಾಶಕೊಡಲಿಲ್ಲ. ನಿಜವಾಗಿ ಆ ಯುಗ ಮುಂದೆ ಬಂದ ಮಧ್ಯಯುಗಕ್ಕೆ ಸುಭದ್ರ ತಳಹದಿಯನ್ನು ಹಾಕಿತು. ಈ ಕಾರಣಗಳಿಂದ, ಇತ್ತೀಚಿನ ಚರಿತ್ರಕಾರರು ಆ ಕಾಲವನ್ನು ಪೂರ್ವಮಧ್ಯಯುಗ (ಅರ್ಲಿ ಮಿಡ್ಲ್ ಏಜಸ್) ಎಂದು ಕರೆದಿದ್ದಾರೆ.[]

ಆಡಳಿತಾತ್ಮಕ ಹಿನ್ನೆಲೆ

ರೋಮನ್ ಚಕ್ರಾಧಿಪತ್ಯದೊಳಕ್ಕೆ ನುಗ್ಗಿ ಬಂದು ನೆಲೆಸಿದ ಆ ಹೊಸ ಜನರು ಆ ಚಕ್ರಾಧಿಪತ್ಯದ ಪ್ರಸಿದ್ಧ ಆಡಳಿತವ್ಯವಸ್ಥೆಯನ್ನು ಸಂಪುರ್ಣವಾಗಿ ಕೆಡಿಸಿಬಿಟ್ಟರು. ಈ ಅವಧಿಯಲ್ಲಿ ವ್ಯವಸ್ಥಿತ ಆಡಳಿತವಿರಲೇ ಇಲ್ಲ. ೮೦೦ರಿಂದ ೮೧೪ರವರೆಗೆ ಆಳಿದ ಚಾರ್ಲಮಾನ್ನ (ಚಾರಲ್ಸ್ ದಿ ಗ್ರೇಟ್) ಕಾಲದಲ್ಲಿ ಮಾತ್ರ ಮಧ್ಯ ಯುರೋಪು ಕ್ರಮವಾದ ಆಡಳಿತಕ್ಕೆ ಒಳಪಟ್ಟಿತ್ತು. ಚಕ್ರಾಧಿಪತ್ಯದಲ್ಲಿದ್ದ ಸಾರಿಗೆ ಸಂಪರ್ಕವ್ಯವಸ್ಥೆ ಕೆಟ್ಟು, ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಜನರ ಪ್ರಯಾಣ ನಿಂತಿತು. ಗುಂಪುಗಾರಿಕೆ ಬೆಳೆಯಿತು; ಇದರೊಂದಿಗೆ ಕಲಹಗಳೂ ಹೆಚ್ಚಿದುವು. ಗ್ರೀಕರ ಕಾಲದಿಂದ ಬಂದು, ರೋಮನರ ಕಾಲದಲ್ಲಿ ಭವ್ಯವಾಗಿ ಬೆಳೆದಿದ್ದ ಲಲಿತಕಲೆಗಳು ಅವನತಿ ಹೊಂದಿದವು. ಲ್ಯಾಟಿನ್ ಭಾಷೆ ಒಡೆದು ಫ್ರೆಂಚ್, ಇಟಾಲಿಯನ್, ಸ್ಪ್ಯಾನಿಷ್ ಮುಂತಾದ ದೇಶೀಯ ಭಾಷೆಗಳ ಉಗಮಕ್ಕೆ ಕಾರಣವಾಯಿತು. ಸಾಹಿತ್ಯ, ದರ್ಶನಶಾಸ್ತ್ರ ಮುಂತಾದುವು ಕಡೆಗಣಿಸಲ್ಪಟ್ಟವು; ಆಗಿನ ಅಲ್ಪಸ್ವಲ್ಪ ಬರೆಹಗಾರರು ಸಿಸಿರೊ, ವರ್ಜಿಲ್ ಮುಂತಾದ ಪ್ರೌಢಪ್ರಾಚೀನ ಸಾಹಿತಿಗಳನ್ನು ಅನುಸರಿಸಲು ಯತ್ನಿಸಿದರೇ ಹೊರತು ಸ್ವಂತ ಪ್ರೌಢಿಮೆಯನ್ನು ಹೊಂದಿರಲಿಲ್ಲ.

ಸಾಂಸ್ಕೃತಿಕ ಹಿನ್ನೆಲೆ

ಇಂಥ ಕ್ಷೋಭೆಗೊಂಡ ಕಾಲದಲ್ಲೂ ಅಲ್ಲಲ್ಲೇ ಹಿಂದಿನ ಸಂಸ್ಕೃತಿ ಸಂಪತ್ತನ್ನು ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯದೆ ಇರಲಿಲ್ಲ. ರೋಮನ್ ಸಾಮ್ರಾಜ್ಯ ಅಳಿದಿದ್ದರೂ ಅದರ ನೆನಪು ಅಳಿಯುವಂತಿರಲಿಲ್ಲ. ಹೊಸದಾಗಿ ಬಂದು ನೆಲೆಸಿದ ಆ ಅನಾಗರಿಕ ಜನರ ಮೇಲೂ ಅದು ತನ್ನ ಪ್ರಭಾವವನ್ನು ಬೀರಿತ್ತು. ಅವರೂ ಕಾಲಕ್ರಮೇಣ ರೋಮನರ ಆಡಳಿತಕ್ರಮ, ನ್ಯಾಯವ್ಯವಸ್ಥೆ ಮುಂತಾದುವನ್ನು ಜಾರಿಗೆ ತಂದರು. ರೋಮನ್ ಸಾಮ್ರಾಜ್ಯವೆಂದರೆ ವಿಶ್ವಸಾಮ್ರಾಜ್ಯ ಎಂಬ ಭಾವನೆ ಜನರಲ್ಲಿ ಬೇರೂರಿತ್ತು; ಅಂಥ ಸಾಮ್ರಾಜ್ಯದ ಪುನರುಜ್ಜೀವನವೇ ಸಮರ್ಥ ರಾಜರ ಗುರಿಯಾಯಿತು. ೯ನೆಯ ಶತಮಾನದ ಪ್ರಾರಂಭದಲ್ಲೇ ಚಾರ್ಲಮಾನ್ ಈ ಗುರಿಯನ್ನು ಸಾಧಿಸಲು ಯತ್ನಿಸಿದ. ಪೂರ್ವ ಏಷ್ಯದ ಪ್ರಾಚೀನ ನಾಗರಿಕತೆ, ಗ್ರೀಸ್ ಮತ್ತು ರೋಮ್ ಸಂಸ್ಕೃತಿ-ಇವುಗಳೂ ಅಲ್ಲಲ್ಲೇ ಉಳಿದುವು; ಆದರೆ ಅವು ಜನರಲ್ಲಿ ಹರಡಿ ವಿಕಾಸಗೊಳ್ಳುವ ಕಾಲ ಇನ್ನೂ ಬಂದಿರಲಿಲ್ಲ. ೭ನೆಯ ಶತಮಾನದಲ್ಲೇ ಪಶ್ಚಿಮ ಏಷ್ಯದಲ್ಲಿ ರಾಜ್ಯ ಸ್ಥಾಪಿಸಿದ ಮುಸ್ಲಿಮರೂ ಈ ಸಂಸ್ಕೃತಿಯನ್ನು ಮೆಚ್ಚಿ ಪೋಷಿಸಿದರು.

ರೋಮನ್ನರ ರಾಜತಾಂತ್ರಿಕ ಹಿನ್ನೆಲೆ

ರೋಮನ್ ಸಾಮ್ರಾಜ್ಯದ ಉತ್ತರಕ್ಕೆ, ಪೂರ್ವಕ್ಕೆ, ಅನಾಗರಿಕರಾದರೂ ಬಲಿಷ್ಠರು ಮತ್ತು ಧೈರ್ಯಶಾಲಿಗಳು ಆದ ಜನರು ಹಿಂದಿನಿಂದಲೂ ಸಾಮ್ರಾಜ್ಯದೊಳಗೆ ನುಗ್ಗಲು ಯತ್ನಿಸುತ್ತಲೇ ಇದ್ದರು. ರೋಮನರ ಇಳಿಗತಿ ಮೊದಲಾದಂದಿನಿಂದ (ಪ್ರ.ಶ. ೩ ಶತಮಾನ) ಅವರ ಹಾವಳಿ ಹೆಚ್ಚಿತು. ರೋಮನ್ ಸಾಮ್ರಾಜ್ಯದಲ್ಲೇ ಕೆಲವರು ನೆಲೆಸಿದ್ದರು; ಕೆಲವರು ರೋಮನ್ ಸೈನ್ಯಕ್ಕೂ ಸೇರಿದ್ದರು. ಇವರಲ್ಲಿ ಮುಖ್ಯರಾದವರು ಜರ್ಮನರು. ಹಿಂದಿನಿಂದ ಮಂಗೋಲ್ ಬುಡಕಟ್ಟಿಗೆ ಸೇರಿದ ಹೂಣರು ನೂಕತೊಡಗಿದುದರಿಂದ ಇವರು ಸಾಮ್ರಾಜ್ಯದೊಳಗೆ ನುಗ್ಗಲೇಬೇಕಾಯಿತು. ವಿಸಿಗಾತರು, ಆಸ್ಟ್ರೊಗಾತರು (ಗಾತ್ ಎಂಬ ಜನರ ಪಶ್ಚಿಮ ಮತ್ತು ಪುರ್ವ ಶಾಖೆಗಳು) ಇವರಲ್ಲಿ ಮುಖ್ಯರಾದವರು, ವಿಸಿಗಾತರ ಮುಖಂಡನಾಗಿದ್ದ ಅಲರಿಕ್ ಎಂಬವನು ೪೧೦ರಲ್ಲಿ ರೋಮ್ ನಗರವನ್ನು ಸ್ವಾಧೀನಪಡಿಸಿಕೊಂಡು ಕೊಳ್ಳೆ ಹೊಡೆದ. ಆಸ್ಟ್ರೊಗಾತರ ತಂಡವೊಂದು ೪೭೦ರಲ್ಲಿ ರೋಂ ನಗರಕ್ಕೆ ನುಗ್ಗಿತು; ಅದರ ಮುಖಂಡನಾದ ಥಿಯಾಡರಿಕ್ ಎಂಬವನು ಸ್ವಲ್ಪಕಾಲ ದೊರೆಯಾಗಿ ನಿಂತ. ವ್ಯಾಂಡಲರೆಂಬ ಜನರು ಹೆಚ್ಚಾಗಿ ಸ್ಪೇನ್ ಕಡೆ ನುಗ್ಗಿ, ಅದನ್ನು ಸ್ವಾಧೀನಪಡಿಸಿಕೊಂಡು ಉತ್ತರ ಆಫ್ರಿಕದ ದೇಶಗಳಿಗೂ ನುಗ್ಗಿದರು. ಆಗಲೇ ನುಚ್ಚುನೂರಾಗಿದ್ದ ರೋಮನ್ ಸಾಮ್ರಾಜ್ಯ ಹೂಣರ ಹಾವಳಿಗೆ ತುತ್ತಾಯಿತು. ಶಲಭಸದೃಶರಾದ ಇವರಿಗೆ ಮಾನವೀಯತೆಯೇ ಇರಲಿಲ್ಲ. ಹೋದೆಡೆಯಲ್ಲೆಲ್ಲ ಕೊಲೆ, ಕೊಳ್ಳೆ, ಲೂಟಿ ನಡೆಯುತ್ತಿತ್ತು. ಇಡೀ ಪ್ರಾಂತ್ಯವನ್ನು ಬೆಂಗಾಡು ಮಾಡಿ ಮುಂದೆ ಹೋಗುತ್ತಿದ್ದರು. ಇವರಲ್ಲದೆ ಬರ್ಗಂಡಿಯನ್ನರು, ಲಾಂಬಾರ್ಡರು ಮುಂತಾದ ಜರ್ಮನ್ ಶಾಖೆಗಳೂ ಧಾಳಿ ನಡೆಸಿದುವು; ಆದರೆ ಇವರು ಧಾಳಿ ಮುಗಿದ ಮೇಲೆ ನೆಲೆನಿಂತರು. ಆ ಪ್ರದೇಶಗಳು ಬರ್ಗಂಡಿ ಲಾಂಬರ್ಡಿ ಎಂಬ ಹೆಸರು ಪಡೆದುವು. ಆಂಗ್ಲೋ ಸ್ಯಾಕ್ಸನರು ಎಂಬ ಇನ್ನೊಂದು ಗುಂಪು ಬ್ರಿಟಿಷ್ ದ್ವೀಪಗಳಿಗೆ ನುಗ್ಗಿ ನೆಲೆಸಿತು; ಇದರ ಒಂದು ಶಾಖೆಯಾದ ಆಂಗ್ಲರು ಎಂಬ ಹೆಸರಿನಿಂದಲೇ ಇಂಗ್ಲೆಂಡ್ ಎಂಬ ಶಬ್ದ ಬಂದಿದೆ. ಫ್ರಾಂಕರು ಎಂಬ ಜನರೂ ಜರ್ಮನರ ಇನ್ನೊಂದು ಶಾಖೆ. ಇವರು ಮಾತ್ರ ಗಾಲ್ನಲ್ಲೇ ನಿಂತು ಈಗಿನ ಫ್ರಾನ್‍ಗೆ ತಮ್ಮ ಹೆಸರನ್ನು ಕೊಟ್ಟರು. ಇವರು ನೆಲೆಸಿದ ಸ್ವಲ್ಪ ಕಾಲದಲ್ಲೇ ಕ್ರೈಸ್ತಮತವನ್ನು ಸ್ವೀಕರಿಸಿ ಭದ್ರತೆ, ಮಾನ್ಯತೆಗಳನ್ನು ಪಡೆದರು. ಒಂಬತ್ತನೆಯ ಶತಮಾನದ ಮೊದಲಲ್ಲೇ ಸಾಮ್ರಾಜ್ಯ ಸ್ಥಾಪನೆಗೆ ಪ್ರಯತ್ನಿಸಿದ ಚಾರ್ಲಮಾನ್ನ ವಿಷಯ ಹಿಂದೆಯೇ ಬಂದಿದೆ.

ಹೀಗೆ ೪, ೫, ೬ನೆಯ ಶತಮಾನಗಳಲ್ಲಿ ಹೊರ ಜನಾಂಗಗಳ ಧಾಳಿಯಿಂದಾಗಿ ರೋಮನ್ ಸಾಮ್ರಾಜ್ಯ ಕುಸಿದು, ಯುರೋಪಿನಲ್ಲಿ ಸಣ್ಣ ರಾಜ್ಯಗಳು ಏರ್ಪಡುವುದಕ್ಕೆ ದಾರಿ ಮಾಡಿಕೊಟ್ಟಿತು. ಆದರೆ ಪರಕೀಯರ ಧಾಳಿ ಇಲ್ಲಿಗೇ ಮುಗಿಯಲಿಲ್ಲ. ೯ ಮತ್ತು ೧೦ನೆಯ ಶತಮಾನಗಳಲ್ಲಿ ಉತ್ತರದ ಸ್ಕಾಂಡಿನೇವಿಯ ಪ್ರಾಂತ್ಯದಿಂದ ನಾರ್ಸ್ಮೆನ್ ಎಂಬ ಜನರು ಪಶ್ಚಿಮ ಯುರೋಪಿನ ದೇಶಗಳಿಗೆ ನುಗ್ಗಿ ಸಿಕ್ಕಿದುದನ್ನೆಲ್ಲ ದೋಚಿಕೊಂಡು ಹೋಗತೊಡಗಿದರು. ಎರಡು ಶತಮಾನಗಳ ಕಾಲ ಪಶ್ಚಿಮ ಯುರೋಪಿನ ತೀರಪ್ರಾಂತ್ಯಗಳಲ್ಲಿ ಇವರ ಧಾಳಿ ಅವಿಚ್ಛಿನ್ನವಾಗಿ ನಡೆಯಿತು. ಅಲ್ಪಸ್ವಲ್ಪ ಜನರು ಫ್ರಾನ್ಸ್ ಮತ್ತು ಬ್ರಿಟಿಷ್ ದ್ವೀಪಗಳಲ್ಲಿ ನೆಲೆಸಿದರು. ಇವರು ಅಧಿಕ ಸಂಖ್ಯೆಯಲ್ಲಿ ಒಂದೆಡೆ ನೆಲೆಸಲಿಲ್ಲ. ಏಳನೆಯ ಶತಮಾನದಲ್ಲಿ ಹುಟ್ಟಿದ್ದ ಇಸ್ಲಾಂ ಧರ್ಮಕ್ಕೆ ಸೇರಿದ ಮುಸ್ಲಿಮರ ಧಾಳಿ ಹೀಗಿರಲಿಲ್ಲ. ೭ನೆಯ ಶತಮಾನ ಮುಗಿಯುವುದರೊಳಗೆ ಅವರು ಪಶ್ಚಿಮ ಏಷ್ಯದ ಕೆಲವು ಪ್ರದೇಶಗಳು ಮತ್ತು ಉತ್ತರ ಆಫ್ರಿಕದ ತೀರಪ್ರದೇಶಗಳನ್ನೆಲ್ಲ ಆಕ್ರಮಿಸಿದ್ದರು; ಮುಂದಿನ ಶತಮಾನದಲ್ಲಿ ಅವರು ಸ್ಪೇನಿಗೂ ನುಗ್ಗಿದರು. ಸಿಸಿಲಿ ಮತ್ತು ದಕ್ಷಿಣ ಇಟಲಿಗಳ ಮೇಲೆ ಧಾಳಿ ನಡೆಸಿದರು. ಬಾಸ್ಪೊರಸ್ ಜಲಸಂಧಿಯನ್ನು ದಾಟಿ ಆಗ್ನೇಯ ಯುರೋಪನ್ನು ವಶಪಡಿಸಿಕೊಂಡಾರೆಂಬ ಭಯ ಹೆಚ್ಚುತ್ತ ಹೋಯಿತು.

ರೋಮನ್ನರ ಪತನ

ನಾನಾ ಜನಾಂಗಕ್ಕೆ ಸೇರಿದ, ನಾನಾ ಮಟ್ಟದ ನಾಗರಿಕತೆಯ ಹೊರಜನರು ಈ ರೀತಿ ಶಿಥಿಲಗೊಂಡಿದ್ದ ರೋಮನ್ ಸಾಮ್ರಾಜ್ಯಕ್ಕೆ ನುಗ್ಗಿ ಅದನ್ನು ಕೊನೆಗಾಣಿಸಿದರು. ಮೊದಲು ಈ ಗೊಂದಲದ ಪರಿಸ್ಥಿತಿಯಲ್ಲಿ ಯುರೋಪಿನ ಮುಂದಿನ ಗತಿಯೇನು ಎಂಬುದು ತಿಳಿಯದಂತಾಗಿತ್ತು. ಆದರೆ ಕಾಲಕ್ರಮೇಣ, ಈ ಗಲಿಬಿಲಿಯಲ್ಲೇ ಯುರೋಪಿನ ನಾನಾ ರಾಜ್ಯಗಳ ಉಗಮವಾಯಿತು; ಈ ರಾಜರಲ್ಲಿ ದಕ್ಷರೂ ಸಮರ್ಥರೂ ಆದ ಫ್ರಾನ್ಸಿನ ಚಾರ್ಲಮಾನ್ನಂಥ ದೊರೆಗಳು ರೋಮನ್ ಸಾಮ್ರಾಜ್ಯವನ್ನು ಪುನರುಜ್ಜೀವನಗೊಳಿಸುವ ಯತ್ನವನ್ನೂ ಮಾಡಿದರು; ಇಂಗ್ಲೆಂಡಿನ ಆಲ್ಫ್ರೆಡ್ ಮಹಾಶಯನಂಥವರು ಸುಭದ್ರವಾದ ಪ್ರಗತಿಪರ ರಾಷ್ಟ್ರ ನಿರ್ಮಾಣಕಾರ್ಯ ಯಾವ ರೀತಿ ನಡೆಯಬೇಕೆಂಬುದನ್ನು ತೋರಿಸಿಕೊಟ್ಟರು. 10ನೆಯ ಶತಮಾನ ಕಳೆಯುವ ಕಾಲಕ್ಕೆ, ಯುರೋಪಿನ ರಾಜಕೀಯ ಪರಿಸ್ಥಿತಿ ಒಂದು ನಿರ್ದಿಷ್ಟ ರೀತಿಯಲ್ಲಿ ಸಾಗತೊಡಗಿತು. ರೋಮನ್ ಕೆಥೊಲಿಕ್ ಧರ್ಮ ಯುರೋಪಿನಲ್ಲೆಲ್ಲ ವ್ಯಾಪಿಸಿತ್ತು; ಸ್ಪೇನಿನ ಬಹುಭಾಗ, ಸಿಸಿಲಿ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟಿದ್ದುವು; ಕ್ರೈಸ್ತ ಧರ್ಮೀಯರಲ್ಲಿ, ರೋಮಿನ ಪೋಪನ ಅಧೀನದಲ್ಲಿದ್ದ ರೋಮನ್ ಕೆಥೊಲಿಕರು, ಕಾನ್ಸ್ಟಾಂಟಿನೋಪಲ್ನ (ಬೈಜಾ಼ಂಟಿಯಂ) ಧರ್ಮಗುರುವಿನ ಅಧಿಕಾರಕ್ಕೆ ಒಳಪಟ್ಟಿದ್ದ ಪೂರ್ವಕ್ರೈಸ್ತ (ಈಸ್ಟರ್ನ್ ಚರ್ಚ್) ಧರ್ಮೀಯರು ಎಂದು ಎರಡು ಶಾಖೆಗಳು ಹುಟ್ಟಿದ್ದುವು; ಊಳಿಗಮಾನ್ಯ ಪದ್ಧತಿ ಬೆಳೆಯತೊಡಗಿದ್ದರಿಂದ ಒಂದು ರೀತಿಯ ಸಮಾಜ ವ್ಯವಸ್ಥೆಯೇರ್ಪಟ್ಟು, ಸಾಮಾನ್ಯ ಜನತೆ ಅಹನ್ಯಹನಿ ಕಾಲಕ್ಷೇಪ ಮಾಡುವ ಪರಿಸ್ಥಿತಿ ತಪ್ಪಿತು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ

  1. https://www.history.com/topics/middle-ages/middle-ages
  2. https://www.britannica.com/event/Dark-Ages
  3. https://www.historyhit.com/why-were-the-early-middle-ages-called-the-dark-ages/