ಅರ್ಕಾವತಿ ನದಿ
ಅರ್ಕಾವತಿ ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ. ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಮೂಲಕ ಹರಿದು ಇದು ಕನಕಪುರದಿಂದ ಸುಮಾರು ೪೫ ಕಿ.ಮೀ ದೂರವಿರುವ ಸಂಗಮದಲ್ಲಿ ಕಾವೇರಿ ನದಿಯನ್ನು ಸಂಗಮಿಸುತ್ತದೆ.
- ಅರ್ಕಾವತಿ : ಕಾವೇರಿಯ ಮುಖ್ಯ ಉಪನದಿಗಳಲ್ಲೊಂದು. ಚಿಕ್ಕಬಳ್ಳಾಪುರ ಸಮೀಪದ ನಂದಿದುರ್ಗದಲ್ಲಿ
ಹುಟ್ಟಿ ಬೆಂಗಳೂರು ಜಿಲ್ಲೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. ೧೬೧ ಕಿಮೀ ಉದ್ದವಿದೆ. ಜಲಾನಯನ ಪ್ರದೇಶ ೪,೩೫೯ ಚ.ಕಿಮೀ. ನೆಲಮಂಗಲದ ದಕ್ಷಿಣದ ಕಡೆಯಿಂದ ಬರುವ ಕುಮುದಾವತಿ, ಬೆಂಗಳೂರಿನ ಕಡೆಯಿಂದ ಬರುವ ವೃಷಭಾವತಿ, ಬನ್ನೇರುಘಟ್ಟ ಕಡೆಯಿಂದ ಬರುವ ಸುವರ್ಣಮುಖಿ, ಆನೇಕಲ್ ಕಡೆಯಿಂದ ಬರುವ ಅಂತರಮುಖಿ, ದೇವರಬೆಟ್ಟ ಕಡೆಯಿಂದ ಬರುವ ದೇವಮುಖಿ ಇದರ ಉಪನದಿಗಳು. ಸಾವನದುರ್ಗ, ರಾಮಗಿರಿ, ಶಿವಗಿರಿ ಮೊದಲಾದ ಬೆಟ್ಟಗುಡ್ಡ ಪ್ರದೇಶ ಮತ್ತು ಸಾಧಾರಣ ಕಾಡುಪ್ರದೇಶಗಳ ಮೂಲಕ ದಕ್ಷಿಣಕ್ಕೆ ಹರಿಯುವುದರಿಂದ ನೀರಾವರಿಗೆ ಹೆಚ್ಚು ಪ್ರಯೋಜನಕಾರಿಯಾಗಿಲ್ಲ. ಆದರೂ ಮೇಲ್ಕಣಿವೆಯಲ್ಲಿ ಹೆಸರುಘಟ್ಟ ಮೊದಲಾದ ದೊಡ್ಡ ಕೆರೆಗಳಿಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ದೊಡ್ಡಬಳ್ಳಾಪುರ, ಕಾಕೋಳು ಮುಂತಾದ ಕೆರೆಗಳಿಗೂ ನೀರನ್ನೊದಗಿಸುತ್ತದೆ. ಮುಂದುವರಿದು ನೆಲಮಂಗಲ, ಮಾಗಡಿ, ರಾಮನಗರ ಮತ್ತು ಕನಕಪುರ ತಾಲ್ಲೂಕುಗಳ ಮೂಲಕ ಹರಿದು ಕನಕಪುರದ ಹತ್ತಿರ ಕಾವೇರಿವನ್ನು ಸಂಗಮದ ಬಳಿ ಸೇರುತ್ತದೆ. ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿರುವುದ ರಿಂದ ಬೇಸಗೆಯಲ್ಲಿ ಬಹುಮಟ್ಟಿಗೆ ಇದರ ಪಾತ್ರ ಒಣ ಮರಳಿನಿಂದ ತುಂಬಿರುತ್ತದೆ. ಆದರೂ ಸಂಪೂರ್ಣವಾಗಿ ಬತ್ತಿಹೋಗದೆ ನೀರು ಸಣ್ಣ ಪ್ರಮಾಣದಲ್ಲಿ ಹರಿಯುತ್ತಿರುತ್ತದೆ. ಮಳೆಗಾಲದಲ್ಲಿ ಅನೇಕ ಉಪನದಿಗಳ ನೀರು ಒದಗುವುದರಿಂದ ತುಂಬಿ ಹರಿಯುತ್ತದೆ. ಒಮ್ಮೊಮ್ಮೆ ಪ್ರವಾಹಗಳೂ ಕಾಣಿಸಿಕೊಳ್ಳುತ್ತವೆ. ಪ್ರವಾಹದ ಚಲನೆ ೩೫೦೦ ರಿಂದ ೫೦೦೦ ಕ್ಯೂಸೆಕ್ಸ್ ವರೆಗಿರುವುದು. ನೆಲಮಂಗಲ, ಮಾಗಡಿ ಮತ್ತು ರಾಮನಗರಗಳಿಂದ ಬೆಂಗಳೂರಿಗೆ ಹೋಗುವ ಮಾರ್ಗಗಳಲ್ಲಿ ನದಿಗೆ ಅಡ್ಡಲಾಗಿ ದೊಡ್ಡ ಸೇತುವೆಗಳನ್ನು ನಿರ್ಮಿಸಿದ್ದಾರೆ. ನದಿಯ ನೀರನ್ನು ನೀರಾವರಿಗೆ ಉಪಯೋಗಿಸಿಕೊಳ್ಳಲು ಯೋಜನಾರೂಪವಾದ ಪ್ರಯತ್ನ ನಡೆಯುತ್ತಿದೆ.[೧]
ಆರ್ಕಾವತಿ ನದಿಯ ಉಪನದಿಗಳು
[ಬದಲಾಯಿಸಿ]- ಕುಮುದ್ವತಿ ನದಿ - ಶಿವಗಂಗೆ ಉಗಮಸ್ಥಾನ
- ವೃಷಭಾವತಿ ನದಿ - ಬಸವನಗುಡಿ ಉಗಮಸ್ಥಾನ
- ಸುವರ್ಣಮುಖಿ ನದಿ - ಬನ್ನೇರುಘಟ್ಟ ಉಗಮಸ್ಥಾನ
- ಅಂತರಮುಖಿ ನದಿ - ಬನ್ನೇರುಘಟ್ಟ ಉಗಮಸ್ಥಾನ
- ದೇವಮುಖಿ ನದಿ - ದೇವರಬೆಟ್ಟ ಉಗಮಸ್ಥಾನ (ತಮಿಳುನಾಡು)
- ಚಿಕ್ಕತೊರೆ ಹಳ್ಳ - ಉಗಮಸ್ಥಾನ
- ಬಂಡ ಹಳ್ಳ - ಉಗಮಸ್ಥಾನ
ಉಲ್ಲೇಖಗಳು
[ಬದಲಾಯಿಸಿ]
- ↑ https://www.tripadvisor.in/ShowUserReviews-g8138613-d3530377-r544762712-Manchanabele_Dam Manchanabele_Bangalore_Rural_District_Karnataka.html
- ↑ https://www.tripadvisor.in/ShowUserReviews-g8153697-d1221021-r487844385-Nandi_Hills-Chikkaballapur_Chikkaballapura_District_Karnataka.html
- ↑ https://wikivisually.com/wiki/Arkavati