ವಿಷಯಕ್ಕೆ ಹೋಗು

ಅಲ್ಕಾ ಯಾಗ್ನಿಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲ್ಕಾ ಯಾಜ್ಞಿಕ್
Bornಮಾರ್ಚ್ ೨೦, ೧೯೬೬
ಕೋಲ್ಕತ
Occupationಚಲನಚಿತ್ರ ಹಿನ್ನಲೆ ಗಾಯಕಿ

ಅಲ್ಕಾ ಯಾಜ್ಞಿಕ್ (ಮಾರ್ಚ್ ೨೦, ೧೯೬೬) ಭಾರತೀಯ ಚಿತ್ರರಂಗದ ಪ್ರಸಿದ್ಧ ಹಿನ್ನಲೆ ಗಾಯಕಿ.

೧೯೬೬ರ ಮಾರ್ಚ್ ೨೦ರಂದು ಅಲ್ಕಾ ಯಾಜ್ಞಿಕ್ ಕೋಲ್ಕೊತದಲ್ಲಿ ಜನಿಸಿದರು. ಕೋಲ್ಕೊತದಲ್ಲಿ ಜನಿಸಿದವರಾದರೂ ಅಲ್ಕಾ ಯಾಜ್ಞಿಕ್ ಮೂಲತಃ ಗುಜರಾತಿ ಕುಟುಂಬಕ್ಕೆ ಸೇರಿದವರು. ಅಲ್ಕಾ ಯಾಜ್ಞಿಕ್ ಅವರ ತಾಯಿ ಶುಭಾ ಯಾಜ್ಞಿಕ್ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿದವರು.

ಬಾಲ್ಯದಲ್ಲೇ ಅರಳಿದ ಪ್ರತಿಭೆ

[ಬದಲಾಯಿಸಿ]

ತನ್ನ ಆರನೆಯ ವಯಸ್ಸಿನಲ್ಲೇ ಕಲ್ಕತ್ತಾ ಆಕಾಶವಾಣಿಯಲ್ಲಿ ಹಾಡಲು ಪ್ರಾರಂಭಿಸಿದ ಬಾಲಕಿ ಅಲ್ಕಾಳನ್ನು, ಆಕೆಯ ಹತ್ತನೇ ವಯಸ್ಸಿನಲ್ಲಿ ಮುಂಬಯಿಗೆ ಕರೆತಂದು ಹಾಡುಗಾರಿಕೆಗಾಗಿನ ಅವಕಾಶಗಳನ್ನು ಅರಸತೊಡಗಿದರು. ಬಹುತೇಕ ಸಂಗೀತ ನಿರ್ದೇಶಕರು ಹುಡುಗಿಯ ಧ್ವನಿ ಇನ್ನಷ್ಟು ಮಾಗಲಿ ಎಂದರು. ಕಲ್ಕತ್ತಾದಲ್ಲಿ ಅಲ್ಕಾಳ ಸಂಗೀತ ಧ್ವನಿಮುದ್ರಿಕೆಗಳನ್ನು ವಿತರಿಸುತ್ತಿದ್ದ ಒಬ್ಬ ಸಂಗೀತ ಪ್ರಿಯರು, ರಾಜ್ ಕಫೂರ್ ಅವರನ್ನು ಭೇಟಿ ಮಾಡುವ ಅವಕಾಶ ಒದಗಿಸಿಕೊಟ್ಟರು. ರಾಜ್ ಕಫೂರ್ ಅಲ್ಕಾಳ ಪ್ರತಿಭೆಯನ್ನು ಕಂಡು ಸಂತೋಷಪಟ್ಟು ಪ್ರಸಿದ್ಧ ಸಂಗೀತ ನಿರ್ದೇಶಕರಾದ ಲಕ್ಷ್ಮೀಕಾಂತ್ ಪ್ಯಾರೆಲಾಲ್ ಅವರ ಬಳಿ ಕಳುಹಿಸಿಕೊಟ್ಟರು. ಲಕ್ಷ್ಮೀಕಾಂತ್ ಪ್ಯಾರೇಲಾಲರು ಎರಡು ಆಯ್ಕೆಯನ್ನು ಬಾಲಕಿಯ ಮುಂದಿಟ್ಟರು. ತಕ್ಷಣವೇ ಬೇಕೆಂದರೆ ಡಬ್ಬಿಂಗ್ ಕಲಾವಿದೆಯಾಗಬಹುದು. ಸ್ವಲ್ಪ ದಿನ ಕಾಯುವುದಾದರೆ ಹಿನ್ನೆಲೆ ಗಾಯಕಿ ಅವಕಾಶ. ಅಲ್ಕಾ ಎರಡನೆಯದನ್ನೇ ಆಯ್ಕೆ ಮಾಡಿಕೊಂಡರು.

ಚಿತ್ರರಂಗದಲ್ಲಿ

[ಬದಲಾಯಿಸಿ]

ಅಲ್ಕಾ ಯಾಜ್ಞಿಕ್ ಮೊದಲು ಧ್ವನಿ ನೀಡಿದ್ದು 1979ರ ‘ಪಾಯಲ್ ಕಿ ಝೇಂಕಾರ್’ ಚಿತ್ರದಲ್ಲಿ. 1981ರ ಲಾವಾರಿಸ್ ಚಿತ್ರದ ‘ಮೇರೇ ಅಂಗೆನೇಮೆ’ ಅವರಿಗೆ ಪ್ರಸಿದ್ಧಿ ನೀಡಿತು. 1988ರ ತೇಜಾಬ್ ಚಿತ್ರದ ‘ಏಕ್ ದೋ ತೀನ್’ ಅವರಿಗೆ ಎಲ್ಲಾ ತರಹದ ಜನಪ್ರಿಯತೆಗಳನ್ನೂ, ಪ್ರಶಸ್ತಿಗಳನ್ನೂ ತಂದಿತು. ಅದೇ ಸಮಯದಲ್ಲಿ ಬಂದ ಖಯಾಮತ್ ಸೆ ಖಯಾಮತ್ ತಕ್ ಅಲ್ಕಾ ಅವರನ್ನೂ, ಆ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಹಾಡಿದ ಉದಿತ್ ನಾರಾಯಣ್ ಅವರನ್ನೂ ಚಿತ್ರರಂಗದ ಪ್ರಮುಖ ಗಾಯಕರನ್ನಾಗಿಸಿತು.

ಮಹತ್ವದ ಸಾಧನೆ

[ಬದಲಾಯಿಸಿ]

ಸಾವಿರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಾಡಿರುವುದಲ್ಲದೆ, ಇಪ್ಪತ್ತು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿರುವ ಸಾಧನೆ ಅಲ್ಕಾ ಅವರದು. ಆಶಾ ಭೋಂಸ್ಲೆ ಅವರಿಗೆ ಸರಿಸಮನಾಗಿ ಅತಿಹೆಚ್ಚು ಅಂದರೆ, ಇದುವರೆಗೆ ಏಳು ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದ ಗಾಯಕಿಯಾಗಿರುವ ಅಲ್ಕಾ ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಗಾಯನ ಪ್ರಶಸ್ತಿಯನ್ನು ಸಹಾ ಸ್ವೀಕರಿಸಿದ್ದಾರೆ. ಬಿ ಬಿ ಸಿ ಹೆಸರಿಸಿರುವ ನಲವತ್ತು ಜನಪ್ರಿಯ ಹಿಂದಿ ಹಾಡುಗಳಲ್ಲಿ ಇಪ್ಪತ್ತು ಹಾಡುಗಳಿಗೆ ಧ್ವನಿಯಾಗಿರುವ ಕೀರ್ತಿ ಸಹಾ ಅಲ್ಕಾ ಯಾಜ್ಞಿಕ್ ಅವರದು ಹಿಂದಿಯೇ ಅಲ್ಲದೆ ಇತರ ಬಹುತೇಕ ಭಾಷೆಗಳಿಗೂ ಅಲ್ಕಾ ಯಾಜ್ಞಿಕ್ ಧ್ವನಿ ನೀಡಿದ್ದಾರೆ. ಚಲನಚಿತ್ರ ಹಾಡುಗಳೇ ಅಲ್ಲದೆ ‘ತುಮ್ ಯಾದ್ ಆಯೇ’, ‘ತುಮ್ ಆಯೇ’, ‘ಶೈರಾನಾ’ ಮುಂತಾದ ಆಲ್ಬಂಗಳೂ ಅಸಂಖ್ಯಾತ ಭಕ್ತಿಗೀತೆ, ಲಘು ಸಂಗೀತದಂತಹ ಮುಂತಾದ ವಿವಿಧ ಪ್ರಕಾರದ ಹಾಡುಗಳು ಕೂಡಾ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿವೆ.

ಕೆಲವೊಂದು ಪ್ರಸಿದ್ಧ ಗೀತೆಗಳು

[ಬದಲಾಯಿಸಿ]

ತೇಜಾಬ್ ಚಿತ್ರದ ‘ಏಕ್ ದೋ ತೀನ್’, ಖಳನಾಯಕ್ ಚಿತ್ರದ ‘ಚೋಲಿ ಕೆ ಪೀಚೆ ಕ್ಯಾ ಹೈ’, ಪರದೇಶ್ ಚಿತ್ರದ ‘ಮೆರೀ ಮೆಹಬೂಬಾ’, ತಾಲ್ ಚಿತ್ರದ ‘ತಾಲ್ ಸೆ ತಾಲ್’, ದಡ್ಕನ್ ಚಿತ್ರದ ‘ದಿಲ್ ನೇ ಯೇ ಕಹಾ ಹೈ ದಿಲ್ ಸೆ’, ಲಗಾನ್ ಚಿತ್ರದ ‘ಓ ರೆ ಚೋರಿ’, ಹಮ್ ತುಮ್ ಚಿತ್ರದ ‘ಹಮ್ ತುಮ್’, ಹಮ್ ಹೆ ರಹಿ ಹೈ ಪ್ಯಾರ್ ಕೆ ಚಿತ್ರದ ‘ಘೂಂಗಟ್ ಕಿ ಆದ್ ಸೆ’, ಕುಚ್ ಕುಚ್ ಹೋತಾ ಹೈ ಚಿತ್ರದ ಶೀರ್ಷಿಕೆ ಹಾಡು ಮುಂತಾದ ಜನಪ್ರಿಯ ಹಾಡುಗಳೇ ಅಲ್ಲದೆ, ‘ಕಭಿ ಅಲ್ವಿದ ನ ಕೆಹೆನಾ’ ‘ಕಹೋ ನಾ ಪ್ಯಾರ್ ಹೈ’, ‘ಸಾಜನ್’, ‘ಉಮ್ರಾವ್ ಜಾನ್’, ‘ಸ್ವದೇಶ್’ ಮುಂತಾದ ಅನೇಕ ಚಿತ್ರಗಳಲ್ಲಿ ಅವರ ಹಾಡುಗಳು ಸುಶ್ರಾವ್ಯವಾಗಿವೆ.

ಕಿರುತೆರೆಯಲ್ಲಿ

[ಬದಲಾಯಿಸಿ]

ಹಲವು ದೂರದರ್ಶನ ಸಂಗೀತ ಕಾರ್ಯಕ್ರಮಗಳ ತೀರ್ಪುಗಾರರಾಗಿಯೂ ಅಲ್ಕಾ ಯಾಜ್ಞಿಕ್ ಕಾರ್ಯ ನಿರ್ವಹಿಸುತ್ತಿದ್ದಾರೆ.