ವಿಷಯಕ್ಕೆ ಹೋಗು

ಮೂಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಸ್ಥಿ ಇಂದ ಪುನರ್ನಿರ್ದೇಶಿತ)
ಎಲುಬು
A bone dating from the Pleistocene Ice Age of an extinct species of elephant.
A scanning electronic micrograph of bone at 10,000x magnification.


ಮೂಳೆಯು ಕಶೇರು ಅಸ್ಥಿಪಂಜರದ ಭಾಗವನ್ನು ರೂಪಿಸುವ ಒಂದು ಗಡುಸಾದ ಅಂಗ. ಮೂಳೆಗಳು ಶರೀರದ ವಿವಿಧ ಅಂಗಗಳಿಗೆ ಆಧಾರ ಒದಗಿಸುತ್ತವೆ ಹಾಗೂ ರಕ್ಷಿಸುತ್ತವೆ, ಕೆಂಪು ಹಾಗೂ ಬಿಳಿ ರಕ್ತ ಕಣಗಳನ್ನು ಉತ್ಪಾದಿಸುತ್ತವೆ, ಖನಿಜಾಂಶಗಳನ್ನು ಸಂಗ್ರಹಿಸಿಡುತ್ತವೆ ಮತ್ತು ಚಲನಶೀಲತೆಯನ್ನೂ ಸಕ್ರಿಯಗೊಳಿಸುತ್ತವೆ. ಮೂಳೆ ಅಂಗಾಂಶವು ಒಂದು ಪ್ರಕಾರದ ದಟ್ಟವಾದ ಸಂಯೋಜಕ ಅಂಗಾಂಶ. ಮಾನವನ ಆಕೃತಿಗೆ ಮೂಲ ಆಧಾರ ಮೂಳೆಗಳು. ಗಟ್ಟಿಯಾಗಿರುವ, ಸುಣ್ಣದಾಂಶದೊಂದಿಗೆ ಖನಿಜೀಕೃತಗೊಂಡ ವಿಶೇಷ ಹಾಗೂ ವಿಶಿಷ್ಠವಾದ ಊತಕ (ಟಿಷ್ಸೂ) ವೆ ಎಲುಬು. ಶರೀರದ ಎಲ್ಲ ಎಲುಬುಗಳು ಸೇರಿ ಎಲುಗಟ್ಟು ರಚನೆಗೊಂಡಿದೆ. ಎರಡು ಎಲುಬುಗಳು ಸೇರುವಲ್ಲಿ ಕೀಲು ಇರುತ್ತದೆ. ಕೀಲಿನ ಚಲನೆಯಿಂದಾಗಿ ಕೂಡಲು, ಏಳಲು, ನಡೆಯಲು, ಹಿಡಿಯಲು ಹೀಗೆ ನಾನಾ ಕಾರ್ಯಗಳು ಸಾಧ್ಯವಾಗುತ್ತವೆ. ಎಲುಬಿಗೆ ಸ್ನಾಯುಗಳು, ಕಂಡರಗಳು, ಹುರಿಗಳು ಅಂಟಿಕೊಂಡಿದ್ದು ಕೀಲು ಚಲನೆಗೆ ಆಧಾರವಾಗಿವೆ.ಮಾನವನ ದೇಹದಲ್ಲಿ ಜನ್ಮದಲ್ಲಿ ಸುಮಾರು ೨೭೦[] ಎಲುಬುಗಳು ಇದ್ದು ಬೆಳೆದಂತೆಲ್ಲಾ ೨೦೬[] ಪ್ರತ್ಯೇಕ ಎಲುಬುಗಳಿರುತ್ತವೆ.

ಎಲುಬಿನ ಅಡ್ಡ ಕೊಯ್ತ

ಶರೀರದೊಳಗಿನ ಎಲುಬುಗಳೆಲ್ಲ ಒಂದಕ್ಕೊಂದು ಹೊಂದಿಕೊಂಡು ಮೈಕಟ್ಟಿನ ರೂಪ ರಚಿಸುತ್ತವೆ. ರಕ್ತ ತಯಾರಿಸುವ ಊತಕ ಎಲುಮಜ್ಜೆ (ಬೋನ್ ಮ್ಯಾರೊ) ಮೂಳೆಗಳ ಒಳ ಪೊಳ್ಳಿನಲ್ಲಿದೆ. ದೇಹದ ಜೀವಾಳದ ಅಂಗಗಳಾದ ಹೃದಯ, ಪುಪ್ಪುಸ, ಮಿದುಳು ಬೆನ್ನುಹುರಿಗಳು ಮೂಳೆಯ ಕವಚದಿಂದ ಸುರಕ್ಷಿತವಾಗಿವೆ. ಮೆತುವಾದ ಜೈವಿಕ ಹಾಸಿಗೆ (ಮ್ಯಾಟ್ರಿಕ್ಸ್‌)ಯೊಳಗೆ ಮುಖ್ಯವಾಗಿ ಕ್ಯಾಲ್ಸಿಯಂ ಫಾಸ್ಪೇಟ್, ಕಾರ್ಬೊನೇಟುಗಳಿರುವ ಸಮ್ಮಿಶ್ರ ಖನಿಜ ಸೇರಿಕೊಂಡು ಎಲುಬು ಬಿರುಸಾಗಿರಲಿಕ್ಕೆ ಕಾರಣವಾಗುತ್ತದೆ. ಬದುಕಿರುವ ಮೂಳೆಯಲ್ಲಿ ಜೀವವಿರುವುದರಿಂದ ಅವುಗಳಲ್ಲಿ ರಕ್ತ ನಾಳಗಳು, ಹಾಲರಸ ನಾಳಗಳು ಮತ್ತು ನರಗಳು ಇರುತ್ತವೆ.

ಉದ್ದವಾದ ಎಲುಬಿನ ಅಡ್ಡ ಕೊಯ್ತದ ವಿವರಗಳು

ಎಲುಬಿನಲ್ಲಿ ಮುಖ್ಯವಾಗಿ ಎರಡು ಭಾಗಗಳು. ಕವಚರೂಪದ ಹೊರ ಭಾಗ ದಪ್ಪವಾಗಿ ಗಟ್ಟಿಯಾಗಿದ್ದು ಅದಕ್ಕೆ “ರಗಟೆಲುಬು” (ಕಾರ್ಟೆಕ್ಸ್‌) ಎನ್ನುತ್ತಾರೆ ಇದರ ಒಳ ಭಾಗದಲ್ಲಿ ಸ್ಪಂಜಿನಂತೆ ಸಡಿಲು ಸಡಿಲಾಗಿ ಎಲುವಿನೆಳೆಗಳು ಹರಡಿಕೊಂಡಿದ್ದು ಹಂದರೆಲುಬು (ಕ್ಯಾನ್ಸಲಸ್ ಬೋನ್) ಎನಿಸಿಕೊಳ್ಳುತ್ತದೆ. ರಗಟೆಲುಬನ್ನು ಒಂದು ತೆಳುವಾದ ಪೊರೆ ಸುತ್ತಿಕೊಂಡಿರುತ್ತದೆ ಇದಕ್ಕೆ ಎಲುಸುತ್ಪರೆ ಎನ್ನುತ್ತಾರೆ. ಹಂದರೆಲುವಿನ ಎಲುದೂಲ (ಲ್ಯಾಮೆಲ್ಲೆ) ಗಳು ಅಡ್ಡಾದಿಡ್ಡಿಯಾಗಿ ಹರಡಿಕೊಂಡಿದ್ದರೂ ಭಾರ, ಒತ್ತಡ ಬೀಳುವಲ್ಲಿ ದಟ್ಟವಾಗಿರುತ್ತವೆ. ರಗಟೆಲುಬಿನಲ್ಲಿ ಹ್ಯಾವರ್ಸಿಯನ್ ಮಂಡಲವಿದೆ. ಹ್ಯಾವರ್ಸಿಯನ್ ಇಲ್ಲವೆ ಎಲುಉರುಳೆ (ಆಸ್ಪಿಯೋನ್) ಮೂಳೆ ರಚನೆಯಲ್ಲಿ ಒಂದು ಘಟಕ. ಸಾಮಾನ್ಯವಾಗಿ ಇವು ಎಲುಬಿನಲ್ಲಿ ಉದ್ದುದ್ದವಾಗಿ ಉರುಳೆಯಾಕಾರವಾಗಿ, ಕವಲೊಡೆದು, ಕಿರುಗಾತ್ರದ ಒಂದು ಅಥವಾ ಹೆಚ್ಚಿನ ಸಣ್ಣ ರಕ್ತ ನಾಳಗಳನ್ನು ಸಾಗಿಸುವ ಇಕ್ಕಟ್ಟಿನ ಚಿಕ್ಕಕಾಲುವೆ ಹೊಂದಿರುತ್ತದೆ. ಎಲು ಉರುಳೆಗಳ ಗೋಡೆಗಳು ಸುರಳಿಸುತ್ತುವ ಪದರಗಳಂತಿರುತ್ತವೆ. ಈ ಘಟಕಕ್ಕೆ ಮೂಲ ಆಧಾರ ತಂತುಕ ಪ್ರೋಟಿನಾದ ಅಂಟುಜನಕ (ಕೊಲ್ಲೇಜನ). ಮೂಳೆಯ ತೂಕದ ತೊಂಬತ್ತು ಪ್ರತಿ ಶತಕ್ಕೂ ಹೆಚ್ಚಿನ ಭಾಗ ಅಂಟುಜನಕದ್ದಾಗಿದೆ. ಅಡ್ಡ ಕೊಯ್ದ ಎಲುಬಿನ ರಚನೆಯನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದಾಗ ಹ್ಯಾವರ್ಸಿಯನ್ ಘಟಕ ಅತ್ಯಂತ ಶಿಸ್ತಿನ ಅಂದದ ಚಿತ್ರವಾಗಿ ಕಾಣಿಸುತ್ತದೆ. ಮಧ್ಯದಲ್ಲಿ ರಕ್ತನಾಳದ ರಂಧ್ರ, ಅದರ ಸುತ್ತಲೂ ಕಿಗ್ಗುಳಿ (ಲ್ಯಾಕುನೆ), ಅದಕ್ಕೆ ಹೊಂದಿಕೊಂಡು ರೇಕುಪರೆ (ಲ್ಯಾಮೆಲ್ಲೆ) ಗಳು ಚಕ್ರವ್ಯೂಹದಂತೆ ಹರಡಿಕೊಂಡಿರುತ್ತವೆ. ಕುಳಿಗಳಿಂದ ಅಡ್ಡವಾಗಿ ಸಾಗುವ ಕಿರುಗಾಲುವೆಗಳಿರುತ್ತವೆ. ಎಲುಗುಳಿಗಳಲ್ಲಿ ಎಲುಕಣಗಳು ನೆಲೆಸಿರುತ್ತವೆ. ಕಿರುಗಾಲುವೆಗಳು ರಕ್ತ ಸಂಚಾರದ ಮಾರ್ಗಗಳಾಗಿರುತ್ತವೆ. ಇಂತಹ ಘಟಕಗಳು ಅಂಟುಜನಕ ಪರದೆಯಿಂದಾವೃತಗೊಂಡಿದ್ದು ತನ್ನ ಸುತ್ತಲಿನ ಇತರ ಘಟಕಗಳೊಂದಿಗೆ ಅಡ್ಡರಕ್ತ ನಾಳಗಳಿಂದ ಸಂಪರ್ಕ ಸಾಧಿಸುತ್ತವೆ. ಹ್ಯಾವರ್ಸಿಯನ್ ನಾಳಗಳು ಹೀಗೆ ರಗಟೆಲುಬಿನ ಹೊರ ಮೈಗೆ ಮತ್ತು ಒಳ ಮೈಗೆ ಹಾದು ಹೋಗುತ್ತವೆ.

ಎಲುಬು ಜೀವಕಣಗಳು

[ಬದಲಾಯಿಸಿ]

ಮೂಳೆಯ ಒಂದೊಂದು ಜೀವಕಣಗಳಿಗೆ ವಿಶಿಷ್ಟವಾದ ಬೇರೆ ಕಾರ್ಯ ನಿರ್ವಹಿಸುವ ಶಕ್ತಿ ಇರುತ್ತದೆ. ಎಲುಬಿನ ಹೊರ ಮೈ (ಸರ್ಫೇಸ್) ಯ ದಟ್ಟ ರಗಟೆಲುಬಿನಲ್ಲಿರುವ ಎಲುನನೆಕಣಗಳು (ಆಸ್ಟಿಯೋಬ್ಲಾಸ್ಟ್‌) ಮೂಳೆಯನ್ನು ರಚಿಸುತ್ತವೆ. ಈ ಕಣಗಳು ಎಲುಸುತ್ಪರೆಯ ಒಳ ಮೈಯಲ್ಲಿರುವದು ಕಂಡು ಬಂದಿದೆ. ಎಲುಕುಳಿ (ಲ್ಯಾಕುನೆ) ಗಳಲ್ಲಿರುವ ಎಲುಕಣಗಳು (ಆಸ್ಪಿಯೋಸೈಟ್ಸ್‌) ಎಲುಬನ್ನು ಬದುಕಿಸಿಡುತ್ತವೆ. ಎಲುಸುತ್ಪರೆಯ ಒಳ ಭಾಗದಲ್ಲಿ ಹಾಗೂ ಹಂದರೆಲುಬಿನೊಳ ಮೈಯಲ್ಲಿ ಎಲುತವಕ (ಆಸ್ಟಿಯೋಕ್ಲಾಸ್ಟ್‌) ಗಳಿವೆ. ಇವು ಎಲುಬನ್ನು ಹಾಳುಗೆಡವಿ ಹೀರಿ ಕರಗಿಸುವ ಸಾಮರ್ಥ್ಯ ಪಡೆದಿವೆ. ಈ ಎಲ್ಲ ಜೀವಕಣಗಳು ಒಂದೆ ಮೂಲದಿಂದ ಹುಟ್ಟುವುದರಿಂದ ಒಂದಕ್ಕೊಂದು ಸಂಬಂಧಿಸಿವೆ. ಗಾಯದಿಂದಾಗಿ, ಪೆಟ್ಟಿನಿಂದಾಗಿ ಮುರಿದ ಎಲುಬು ಕೂಡಿಕೊಳ್ಳಲು ಹೊಸ ಎಲುಬಿನ ರಚನೆ ಬೇಕಾಗುತ್ತದೆ. ಎಲುಸುತ್ಪರೆಯ ಮತ್ತು ಎಲುಬೊಳು ಪೊರೆಯ ಜೀವಕಣಗಳಿಗೆ ಎಲುಬನ್ನು ತಯಾರಿಸುವ ಬಲವಿರುತ್ತದೆ. ಹೀಗಾಗಿ ಮುರಿದೆಲುಬು ನೈಸರ್ಗಿಕವಾಗಿ ಸರಿಹೊಂದಲು ಸಾಧ್ಯವಾಗುತ್ತದೆ.

ಊತಕಾಂತರದ ವಸ್ತು

[ಬದಲಾಯಿಸಿ]

ಎಲುಬಿನಲ್ಲಿಯ ಜೀವಕಣಗಳನಡುವಿನ ಊತಕಾಂತರದ (ಇಂಟರ್ಸ್ಪಿಷಿಯಲ್) ಭಾಗವೆಲ್ಲ ಸುಣ್ಣ ಗೂಡಿದ ಅಂಟುಜನಕ ಪದಾರ್ಥವಾಗಿದೆ. ಮೂಳೆಯ ಗಡಸುತನಕ್ಕೆ ಇದೇ ಮುಖ್ಯ ಕಾರಣ. ಊತಕಾಂತರದಲ್ಲಿ ಜೈವಿಕ ಹಾಸಿಗೆ, ಅಜೈವಿಕ ಖನಿಜಗಳು ಮತ್ತು ನೀರು ಇರುತ್ತವೆ. ಜೈವಿಕ ಹಾಸಿಗೆಯಲ್ಲಿ ಪ್ರಮುಖವಾಗಿ ಅಂಟುಜನಕ ತಂತುಗಳು ಆಧಾರ ವಸ್ತುವಾಗಿರುತ್ತದೆ. ಇದನ್ನು ಎಲೆಕ್ಪ್ರಾನ್ ದರ್ಶಕದಲ್ಲಿ ದೊಡ್ಡದು ಮಾಡಿ ನೋಡಿದರೆ ಅಂಟುಜನಕತಂತುಗಳ ಉದ್ದಕ್ಕೂ ಜೋಡಿ ಅಡ್ಡ ಪಟ್ಟಿಗಳು ಕ್ರಮವಾಗಿರುವುದು ಕಾಣಿಸುತ್ತದೆ. ಈ ತಂತುಗಳ ನಡುವೆ ಖನಿಜದ ಹರಳುಗಳು ಮತ್ತು ಅರೆದ್ರವವಾದ ಗಚ್ಚು (ಸಿಮೆಂಟ್) ತುಂಬಿರುತ್ತವೆ. ಎಲುಬಿನ ಲವಣಗಳಲ್ಲಿ ಮುಖ್ಯವಾದ್ದು ಕ್ಯಾಲ್ಸಿಯಂ ಫಾಸ್ಪೇಟ. ಇವು ಸರಳವಾಗಿ ಕರಗುವುದಿಲ್ಲ. ಇವು ಷಟ್ಮುಖಿಗಳಾಗಿರುತ್ತವೆ. ತಂತುಗಳ ನೇರ ದಿಕ್ಕಿನಲ್ಲಿ ಈ ಹರಳುಗಳು ಉದ್ದುದ್ದನಾಗಿ ಕ್ರಮವಾಗಿ ಜೋಡಿಸಿರುತ್ತವೆ. ಎಲುಬಿನ ಲವಣದ ಹರಳಿನ ರಸಾಯನಿಕಕ್ಕೆ ಹೈಡ್ರಾಕ್ಸಿ ಅಪಟೈಟ ಎನ್ನುತ್ತಾರೆ. ಎಲುಬು ಒಂದು ಗಟ್ಟಿಯಾದ (ಸಾಲಿಡ್) ವಸ್ತುವಾಗಿರದೆ ಇಟ್ಟಿಗೆ, ಗಾರೆಗಳಿಂದ ರಚನೆಗೊಂಡಂತಿದೆ. ಹೈಡ್ರಾಕ್ಸಿ ಅಪಟೈಟಿನ ಹರಳುಗಳು ಇಟ್ಟಿಗೆಗಳಾದರೆ, ಸಿಟ್ರೇಟು, ಕಾರ್ಬೋನೇಟುಗಳು ಗಾರೆ: ಇವುಗಳ ನಡುವೆ ಬೇರೆ ಬೇರೆ ಆಯಾನುಗಳು ಬೆರೆತಿರುತ್ತವೆ. ಹರಳುಗಳ ನಡುವೆ ಇರುವ ಅಂಟುಜನಕ ತಂತುಗಳು ಬಿಗುವು ನೀಡುವ ನಾರುಗಳಿಂತಿರುತ್ತವೆ.

ಮೂಳೆ ಬೆಳೆವ ಬಗೆ

[ಬದಲಾಯಿಸಿ]

ಪಿಂಡಗೂಸಿನಲ್ಲಿ (ಫೀಟಸ್) ಮೂಳೆ ಅಂಕುರಿಸುತ್ತದೆ, ಬೆಳೆಯುತ್ತದೆ, ಜನನದ ನಂತರ ಹದಿವಯಸ್ಸಿನವರೆಗೆ ಮೂಳೆ ಬೆಳೆಯುತ್ತದೆ. ಮೆಲ್ಲೆಲುಬಿನ (ಕಾರ್ಟಿಲೇಜ) ಇಲ್ಲವೆ ತಂತುಕ (ಪೈಬ್ರಸ್) ಹಾಸಿಗೆಯ ಮೇಲೆ ಎಲುಬು ಅಂಕುರಿಸಿ ಬೆಳೆಯುತ್ತದೆ. ಮೆಲ್ಲೆಲುಬಿನ ಮೇಲೆ ಮೂಳೆ ರಚನೆಗೊಂಡರೆ ಅದಕ್ಕೆ ಮೆಲ್ಲೆಲುಬೊಳಗಿನ ಎಲು ಮೊಳೆತ (ಕಾರ್ಟಿಲೇಜಿನಿಯಸ್ ಆಸಿಫಿಕೇಶನ್) ಎನ್ನುತ್ತಾರೆ; ತಂತುಗಳ ಮೇಲೆ ನೇರವಾಗಿ ಎಲುಬು ಮೊಳೆತರೆ ಅದಕ್ಕೆ ಪದರದೊಳಗಿನ ಎಲು ಮೊಳೆತ (ಫೈಬ್ರಸ್ ಆಸಿಫಿಕೇಶನ) ಎನ್ನುತ್ತಾರೆ. ಮಗುವಿನ ಮೂಳೆಗಳ ಬೆಳೆವಣಿಗೆಗಳಲ್ಲಿ ಮತ್ತು ಮುರಿತದೆಲುಬು ಮತ್ತೇ ಕೂಡಿಕೊಳ್ಳುವ ಕ್ರಿಯೆಯಲ್ಲಿ ಈ ಎರಡೂ ತರಹದ ಎಲುಮೊಳೆತ ಕಾಣಿಸುತ್ತದೆ. ಎಲುಬಿನ ಒಂದು ತುದಿಯ ಒಳ ಭಾಗದಲ್ಲಿ ಬೆಳೆವ ತಟ್ಟೆ ಇರುತ್ತದೆ. ಇದಕ್ಕೆ ಮೇಲೆಲು ಮೊಳೆವ ತಟ್ಟೆ (ಎಪಿಫೈüಸಿಯಲ್ ಗ್ರೊವೆಥ್ ಪ್ಲೇಟ್) ಎನ್ನುತ್ತಾರೆ. ಈ ತಟ್ಟೆ ಎಲುಬೊಂದರ ತುದಿಯ ಮೆಲ್ಲಲು (ಎಪಿಫೈಸಿಸ) ಮತ್ತು ಕಾವು/ದಿಂಡು (ಶ್ಯಾಪ್ಟ್‌)ಗಳ ಮಧ್ಯದಲ್ಲಿದೆ. ಎಲುಬು ತುದಿಯಲ್ಲಿ ಬೆಳೆಯುತ್ತ ಉದ್ದವಾಗುತ್ತದೆ. ಎಲುಸುತ್ಪರೆಯ ಒಳ ಮೈಯಿಂದ ಹಾಗೂ ಮೂಳೆಯೊಳ ಪರೆಯಿಂದ ಎಲುಬು ಗಾತ್ರದಲ್ಲಿ ಬೆಳೆಯುತ್ತದೆ. ಸಾಮಾನ್ಯವಾಗಿ ಬೆಳೆಯುವುದು 16-18 ವಯಸ್ಸಿಗೆ ಸೀಮಿತಗೊಂಡಿರುತ್ತದೆ. ಎಲುಬು ಬೆಳೆವುದು ಸ್ಥಗಿತಗೊಳ್ಳುತ್ತಿ ದ್ದಂತೆ ಬೆಳೆವತಟ್ಟೆ ಮಾಯವಾಗುತ್ತದೆ. ಎಲುಬು ಕರಗುವ, ಬೆಳೆವ ಕ್ರಿಯೆ, ಜೀವನ ಪರ್ಯಂತ ಎಲುಸುತ್ಪರೆ ಮತ್ತು ಮೂಳೆಯೊಳ ಪೊರೆಯಿಂದ ನಿರಂತರವಾಗಿ ನಡೆಯುತ್ತದೆ.

ಎಲುಬುಗಳ ಕಾರ್ಯ

[ಬದಲಾಯಿಸಿ]

ದೇಹದೊಳಗಿನ ಕಾಲ್ಸಿಯಂನ 60 ಪ್ರತಿಶತ ಮೂಳೆಗಳಲ್ಲಿದೆ. ಉಳಿದದ್ದು ರಕ್ತ ರಸ (ಪ್ಲಾಸ್ಮಾ) ದಲ್ಲಿ ಹಾಗೂ ಇತರ ಕಣಗಳಲ್ಲಿ. ಹೃದಯ, ನರ, ಸ್ನಾಯುಗಳು ಸರಿಯಾಗಿ ತಮ್ಮ ತಮ್ಮ ಕೆಲಸ ನಿರ್ವಹಿಸಲು, ರಕ್ತ ಗರಣೆಕಟ್ಟಲು ಕಾಲ್ಸಿಯಂನ ಆವಶ್ಯಕತೆ ಇದೆ. ರಕ್ತ ರಸದಲ್ಲಿ ಇದರ ಸಾಂದ್ರತೆ ಒಂದೇ ಸಮನಾಗಿ ಉಳಿಯುವುದು ಅತ್ಯಾವಶ್ಯಕ. ಎಲುಬೊಳಗಿನ ಲವಣ ಸುಲಭವಾಗಿ ಕರಗುವುದಿಲ್ಲ. ಎಲುಬೊಳಗಣ ಕಾಲ್ಸಿಯಂ ಮತ್ತು ಫಾಸ್ಫರಸ್ ಮಟ್ಟ ಒಂದೇ ಸಮನಾಗಿರುವುದು ಸಹ ಅತೀ ಮುಖ್ಯವಾದದ್ದೆ. ಈ ಒಂದು ಸಮಾನತೆಯನ್ನು ಗುರಾಣಿಕ(ತೈರಾಯ್ಡ್‌) ಗ್ರಂಥಿಯ ಹಿಂಬದಿಯಲ್ಲಿ ಅಡಗಿ ಕುಳಿತಂತಿರುವ ನಾಲ್ಕು ಪುಟಾಣಿ ಗಾತ್ರದ ಬದಿಗುರಾಣಿಕ (ಪ್ಯಾರಾ ತೈರಾಯ್ಡ್‌) ಗ್ರಂಥಿಗಳು ನಿಯಂತ್ರಿಸುತ್ತವೆ. ಜೀವನದುದ್ದಕ್ಕೂ ನಡೆಯುವ ಹ್ಯಾವರ್ಸಿಯನ್ ಮಂಡಲಗಳ ಮರುರೂಪಿಕೆಗೂ, ರಕ್ತ-ಮೂಳೆಗಳ ನಡುವೆ ನಡೆಯುವ ಸುಣ್ಣಾಂಶದ ವಿನಿಮಯದ ಹತೋಟಿಗೂ ನಿಕಟ ಸಂಬಂಧವಿದೆ. ಮೂಳೆ ಬೆಳೆಯುತ್ತಿರುವ ಸಮಯದಲ್ಲಿ ರಕ್ತದಿಂದ ಖನಿಜಾಂಶಗಳನ್ನು ಪಡೆಯುತ್ತದೆ. ರಕ್ತದೊಳಗೆ ಖನಿಜಾಂಶಗಳ ಪ್ರಮಾಣ ಕಡಿಮೆ ಬೀಳದಂತೆ ತನ್ನೊಳಗಿನದನ್ನು ನೀಡುತ್ತದೆ. ಬಹುಕಾಲದವರೆಗೆ ರಕ್ತರಸದ ಖನಿಜಾಂಶಗಳ ಪ್ರಮಾಣದಲ್ಲಿ ಇಳಿತ ಉಂಟಾದರೆ ಎಲುಬು ತನ್ನೊಳಗಿನ ಖನಿಜಾಂಶಗಳನ್ನು ಕಳಕೊಂಡು ಮೆತ್ತಗಾಗುವ ಸಂಭವವಿರುತ್ತದೆ. ಇಂತಹದ್ದು ಮಕ್ಕಳಲ್ಲಿ ಕಂಡರೆ ‘ರಿಕೆಟ್ಸ್‌ ಎನ್ನುತ್ತಾರೆ ದೊಡ್ಡವರಲ್ಲಾದರೆ ‘ಆಸ್ಪಿಯೋ ಮಲೇಶಿಯಾ’ ಎನ್ನುತ್ತಾರೆ. ವಯಸ್ಸಾದಂತೆ, ಮಹಿಳೆಯರಲ್ಲಿ ಮುಟ್ಟು ಸ್ಥಗಿತಗೊಂಡಾದ ಮೇಲೆ, ಆಹಾರದಲ್ಲಿಯ ಪೌಷ್ಠಿಕಾಂಶದ ಕೊರತೆಯಾದರೆ, ಮದ್ಯ ಸೇವನೆ ಮಿತಿ ಮೀರಿದರೆ, ಸ್ಟಿರಾಯ್ಡ ಔಷದ ಸೇವನೆ ನಿರಂತರವಾಗಿ ಸಾಗಿದರೆ. ಎಲುಬಿನೊಳಗಣ ಅಂಟುತಂತುಗಳ ಸೊರಗುವಿಕೆ ಫಲಿಸುತ್ತದೆ. ಇದಕ್ಕೆ ಪೊಳ್ಳೆಲು (ಆಸ್ಪ್ಪಿಯೋಫೋರೋಸಿಸ್) ಎನ್ನುತ್ತಾರೆ.

ವಿಕಿರಣ ಶಕ್ತ ಧಾತುಗಳು

[ಬದಲಾಯಿಸಿ]

ರೇಡಿಯಂ, ಸ್ಪ್ರಾಂಷಿಯಂ ತೆರನ ವಿಕಿರಣ ಶಕ್ತಧಾತುಗಳು (ರೆಡಿಯೋ ಅಕ್ಟಿವ ಎಲಿಮೆಂಟ್ಸ್‌)ಯಾವುದೇ ಕಾರಣಕ್ಕೆ (ಚಿಕಿತ್ಸೆಗಾಗಿ ಬಳಸಿದರೂ) ಶರೀರದ ಒಳ ಸೇರಿದರೆ ಅವು ಹೆಚ್ಚಾಗಿ ಎಲುಬುಗಳಲ್ಲಿ ನೆಲೆಸುತ್ತವೆ. ಅನೇಕ ವರ್ಷಗಳವರೆಗೆ ಅವು ಅಲ್ಲೇ ಬೀಡು ಬಿಟ್ಟರೆ ಮೂಳೆಗೂ, ಮೂಳೆಯೊಳಗಿನ ಮಜ್ಜೆಗೂ ಹಾನಿಕಾರಕವಾಗುತ್ತವೆ. ಎಲುಬಿನೊಳಗೆ ರೇಡಿಯಂ ಬಹುಕಾಲ ಉಳಿದರೆ ಅದರಿಂದ ಉತ್ಪತ್ತಿಯಾಗುವ ವಿಕಿರಣತೆ ಮೂಳೆಯ ಮಾಂಸಗಂತಿ(ಸಾರ್ಕೋಮಾ)ಯನ್ನುಂಟು ಮಾಡಬಹುದು.

ಎಲುಬು ಮಜ್ಜೆ

[ಬದಲಾಯಿಸಿ]
One way to classify bones is by their shape or appearance.
One way to classify bones is by their shape or appearance.
A simplified illustration of cells in bone marrow

ರಕ್ತದಲ್ಲಿ ಎರಡು ಭಾಗಗಳು. ಒಂದು ದ್ರವದ್ದು ಇನ್ನೊಂದು ಕಣಗಳದ್ದು. ದ್ರವ ಭಾಗಕ್ಕೆ ರಕ್ತರಸ (ಪ್ಲಾಸ್ಮಾ) ಎಂದು ಹೆಸರು. ರಕ್ತಕಣಗಳಲ್ಲಿ ಅನೇಕ ವಿಧದ ಕಣಗಳಿವೆ. ಹಾಲ್ರಸಕಣ (ಲಿಂಫೋಸೈಟ್) ಒಂದನ್ನು ಬಿಟ್ಟು ಉಳಿದ ಎಲ್ಲ ಬಗೆಯ ರಕ್ತಕಣಗಳು, ಚಪ್ಪಟಿಕಗಳು ಮೂಳೆಗಳ ಒಳಗಿನ ಪೊಳ್ಳುಗಳಲ್ಲಿರುವ ಮಜ್ಜೆ (ಮ್ಯಾರೋ)ಯಿಂದ ಜನಿಸುತ್ತವೆ. ಎಲುಮಜ್ಜೆಯು ಮೃದುವಾದ ಮೆತುವಾದ ಊತಕ. ಹಸುಗೂಸಿನ ತೂಕದಲ್ಲಿ ಸು. ಶೇ. 2.3 ರಷ್ಟು ‘ಎಲುಮಜ್ಜೆ’ ಇರುತ್ತದೆ. ಬೆಳೆದಿರುವವರಲ್ಲಿ ಇದು ಎರಡು ಪಟ್ಟು ಹೆಚ್ಚಾಗುತ್ತದೆ. ಮಗುವಿನಲ್ಲಿ ಎಲುಮಜ್ಜೆಯ ಘನ ಅಳತೆ 65 ಮಿ.ಲೀ. ನಷ್ಟಿದ್ದು ದೊಡ್ಡವರಲ್ಲಿ 1.6 ರಿಂದ 3.2 ಲೀಟರುಗಳಷ್ಟಾಗುತ್ತದೆ. ಮಜ್ಜೆಯಲ್ಲಿ ಕೊಬ್ಬಿನ ಊತಕ ಹೆಚ್ಚಾಗಿದ್ದರೆ ಹಳದಿಯಾಗಿ, ರಕ್ತ ಉತ್ಪಾದಿಸುವ ಊತಕ ಹೆಚ್ಚಾಗಿದ್ದರೆ ಕೆಂಪಾಗಿ ತೋರುವುದು. ಸುಮಾರು ಏಳನೆಯ ವಯಸ್ಸಿನ ತನಕ ದೇಹದೊಳಗಿನ ಮಜ್ಜೆ ಕೆಂಪಗೆ ಇರುತ್ತದೆ. ನಂತರ ಮಗು ಬೆಳೆದು ದೊಡ್ಡದಾದಂತೆ ಮಜ್ಜೆ ಕೊಬ್ಬುಗೂಡುವುದು ಹೆಚ್ಚಾಗುತ್ತ ಸಾಗುತ್ತದೆ. ಹೀಗಾಗಿ ಬೆಳೆದವರ ತಲೆಬುರುಡೆ, ಎದೆ ಚಕ್ಕೆ, ಪಕ್ಕೆಲುಬುಗಳು, ಕೊರಳೆಲುಬುಗಳು, ಬೆನ್ನುಗಂಬ ತೊಡೆಮೂಳೆ ಅಲ್ಲದೆ ತೋಳಿನ ಮೇಲ್ಕೊನೆಗಳಲ್ಲಿ ಮಾತ್ರ ಕೆಂಪು ಮಜ್ಜೆ ಉಳಿಯುತ್ತದೆ. ಆವಶ್ಯಕತೆಯ ಹಲವು ತುರ್ತಿನ ಸಮಯಗಳಲ್ಲಿ ಮಾತ್ರ ಹಳದಿ ಮಜ್ಜೆ ಕೆಂಪಾಗುತ್ತದೆ. ಯಾವುದೇ ಕಾರಣದಿಂದಾಗಿ ರಕ್ತ ಉತ್ಪಾದನೆಯ ಚಟುವಟಿಕೆ ಹೆಚ್ಚಿದಾಗಲೂ ಹಳದಿ ಮಜ್ಜೆ ಕೆಂಪಾಗುತ್ತದೆ. ನವಿರ್ಜಾಲಕ (ರೆಟಿಕ್ಯುಲಾರ್) ತಂತುಗಳು ಬಲೆ ಹೆಣೆದಂತೆ ಹರಡಿರುತ್ತವೆ. ನವಿರ್ಜಾಲಕ ಜೀವಕಣಗಳು ಆ ತಂತುಗಳಿಗೆ ಅಡ್ಡ ಚಾಚಿಕೊಂಡು ಸ್ಪಂಜಿನಂತೆ ಕಾಣುತ್ತವೆ. ಎಲುಮಜ್ಜೆಯ ತುಂಬೆಲ್ಲ ಇವೆರಡರ ರಚನೆಗಳು ಕಂಡು ಬರುತ್ತದೆ. ನವಿರ್ಜಾಲ ಜೀವಕಣಗಳಲ್ಲಿ ಎರಡು ಬಗೆಯ ಕಣಗಳಿವೆ 1) ನೆಲೆಸಿದ ನಿಡುತೀನಿ ಕಣಗಳು (ಮ್ಯಾಕ್ರೋಫಾಜ್) ಮತ್ತು 2) ಮೂಲರೂಪದ ನವಿರ್ಜಾಲಕ ಕಣಗಳು. ನೆಲೆಸಿದ ನಿಡುತೀನಿಕಣಗಳು ರಕ್ತದ ಹರಿವಿನಿಂದ ಸಣ್ಣಪುಟ್ಟ ಚೂರುವಸ್ತುಗಳನ್ನು ಎತ್ತಿಕೊಂಡು ಕಬಳಿಸುತ್ತವೆ. ಮೂಲರೂಪದ ನವಿರ್ಜಾಲಕ ಕಣಗಳು ನಡುತೀನಿಕ ಕಣಗಳಾಗಿ ಬದಲಾಗಬಲ್ಲವು. ಇಲ್ಲವೆ ಸಾಧಾರಣ ರಕ್ತದ ಕಣಗಳಾಗಿ ಬೆಳೆಯಬಲ್ಲವು. ಬಲಿತ ಕೆಂಪುರಕ್ತಣಗಳು, ಹರಳುಗೂಡಿದ ಬಿಳಿ ರಕ್ತದ ಕಣಗಳಾಗಿ ಬೆಳೆಯಬಲ್ಲವು. ಬಲಿತ ಕೆಂಪು ರಕ್ತಕಣಗಳು, ಹರಳುಗೂಡಿದ ಬಿಳಿರಕ್ತ ಕಣಗಳಾದ “ಹರಳು ಕಣಗಳು” (ಗ್ರಾನ್ಯುಲೋಸೈಟ್ಸ್‌) ತಂತುಗಳ ಜೀವಕಣಗಳ ಬಲೆಯಲ್ಲಿ ಇರುತ್ತವೆ. ಮಜ್ಜೆಮೊಳೆಕಣ (ಮಯಲೋಬ್ಲಾಸ್ಟ್‌) ಮತ್ತು ಹಾಲುರಸಮೊಳೆಕಣ (ಲಿಂಫೊಬ್ಲಾಸ್ಟ್‌) ಒಂದೇ ತಾಯಿ ಕಣದಿಂದ ಜನಿಸಿದವೆಂಬ ವಾದ ಕೆಲವರು ಒಪ್ಪಿದರೆ ಇತರರು ಒಪ್ಪುವುದಿಲ್ಲ. ಎಲುಮಜ್ಜೆ ಮೂಲಕಣವು, ಹಾಲುರಸಕಣಗಳ ರೂಪದಲ್ಲಿ, ನಿಜಗೆಲಸದಲ್ಲಿ ಬೇರೆ ಬೇರೆ ಆಗಿರುವುದು ಇನ್ನೂವರೆಗೆ ಯಾರೂ ಸ್ಥಿರಪಡಿಸಿಲ್ಲ. ಹಾಲುರಸಮೊಳೆಕಣ ಮತ್ತು ಹಾಲುಕಣಗಳಲ್ಲಿ ಹೆಚ್ಚಿನ ವ್ಯತ್ಯಾಸಗಳು ಇಲ್ಲ. ಹೀಗಾಗಿ ಮೂಲಕಣಗಳಿಗೆ ರಕ್ತಮೊಳೆಕಣ (ಹೀಮೋಸೈಟೋಬ್ಲಾಸ್ಟ್‌) ಎಂದು ಕರೆದರೆ ಸಾಕು. ಎಲುಬುಮಜ್ಜೆ ಮೂಲಕಣ ಕೆಂಪು ರಕ್ತಕಣವಾಗಿ ಬೆಳೆದಂತೆಲ್ಲ ಅದರ ಕಣರಸದಲ್ಲಿ (ಸೈಟೋಪ್ಲಾಸ್ಮ್‌) ರಕ್ತ ಬಣ್ಣಕ (ಹೀಮೋಗ್ಲಾಬಿನ್) ಕೂಡಿಕೊಳ್ಳುತ್ತದೆ. ಕೆಲವು ರಕ್ತಕಣದ ತಾಯಿಕಣದಲ್ಲಿ ನ್ಯೂಕ್ಲೀಯಿಕ್ಆಮ್ಲ, ರಕ್ತ ಬಣ್ಣಕಗಳಿರುತ್ತವೆ. ಆದರೆ ಬರುಬರುತ್ತ ನ್ಯೂಕ್ಲಿಯಕಾಮ್ಲದ ಬದಲಾಗಿ ರಕ್ತ ಬಣ್ಣಕವೇ ತುಂಬಿಕೊಳ್ಳುತ್ತದೆ. ಆಗ ನಡುಬೀಜದ (ನ್ಯೂಕ್ಲಿಯಸ್) ಬಣ್ಣವೇರಿ ದುಂಡಾಗಿ ಸಮೆನಕಣ (ನಾರ್ಮೊಬ್ಲಾಸ್ಟ್‌) ವಾಗುತ್ತದೆ. ಇದರೊಳಗಿರುವ ನಡುಬೀಜ ಕರಗಿ ಸಹಜವಾದ ನಡುಬೀಜವಿರದ ಕೆಂಪು ರಕ್ತಕಣವಾಗುತ್ತದೆ. ಎಲುಬುಮಜ್ಜೆಯ ಮೂಲಕಣದ ಕಣರಸದಲ್ಲಿ ಹರಳುಗಳು ಹುಟ್ಟಿಕೊಂಡು ನಡುಬೀಜದಲ್ಲೂ ಒಂದಿಷ್ಟು ಬದಲಾವಣೆಗಳಾಗಿ ಹರಳುಕಣಗಳು ಜನ್ಮ ತಾಳುತ್ತದೆ. ಅಂತ್ಯದಲ್ಲಿ ತಯಾರಾಗುವ ರಕ್ತದ ಬಿಳಿಕಣದ ಗುಣಲಕ್ಷಣಗಳಿಗೆ ತಕ್ಕಂತೆ ಅದರ ಹರಳುಗಳು ಕೆಂಪಾನುರಾಗಿಕ (ಇಯೋಸಿನೊಫಿಲ್); ಮಾರಾಮ್ಲಾನುರಾಗಿಕ (ಬೇಸೋಫಿಲ್) ಕಣಗಳಾಗುವವು. ಇವೆರಡೂ ಕಣಗಳು ಮಜ್ಜೆಕಣ (ಮಯಲೋಸೈಟ) ಗಳಿಂದ ರಚನೆಗೊಂಡಿರುತ್ತವೆ. ರಕ್ತದ ಜೀವಕಣಗಳ ಮತ್ತು ಕೊಬ್ಬಿನ ಜೀವಕಣಗಳ ನಡುವೆ ‘ತೋರನಡುಬೀಜಕಣ’ (ಮೆಗಾಕ್ಯಾರಿಯೋಸೈಟ್ಸ್‌) ಗಳಿವೆ. ಬಹಳ ದೊಡ್ಡಗಾತ್ರದ ಈ ಜೀವಕಣಗಳ ಜೀವರಸ (ಪ್ರೋಟೊಪ್ಲಾಸ್ಮ)ದ ಸಣ್ಣ ಸಣ್ಣ ತುಣುಕುಗಳೇ ರಕ್ತದ ಚಪ್ಪಟಿಕಗಳಾಗುತ್ತವೆಂದು ನಂಬಿಕೆ ಇದೆ. ಹೊಸದಾಗಿ ತಯಾರಾದ ಜೀವಕಣಗಳುಳ್ಳ ರಕ್ತಧಮನಿಗಳ ಮೂಲಕ ಎಲುಬುಮಜ್ಜೆ ಸೇರುತ್ತದೆ. ಅಲ್ಲಿಂದ ಮುಂದೆ ತೆಳುಗೋಡೆ ಹೊಂದಿದ ದೊಡ್ಡ ನಾಳಗುಳಿಗಳ (ಸೈನುಸಾಯ್ಡ್‌ಸ್) ಮೂಲಕ ಸಿರಗಳೊಳಕ್ಕೆ (ವೇನ್ಸ) ರಕ್ತ ಹರಿಯುತ್ತದೆ. ಈ ನಾಳಗುಳಿಗಳ ಒಳಪೊರೆಯಲ್ಲಿ ನಿಡುತೀನಿಕಣದಂತೆ ಕಬಳಿಸುವ ನವಿರುಜಾಲಕಕಣಗಳಿರುತ್ತವೆ. ಈ ಜೀವಕಣಗಳು ಇಲ್ಲಿಂದ ದುಂಡಾಗಿ, ಬಿಡಿಯಾದ ನಿಡುತೀನಿಕಣಗಳಾಗಿ ನಾಳಗುಳಿ ಯೊಳಗೆ ಸೇರಿಕೊಳ್ಳಬಲ್ಲವು. ಪರ್ವತಗಳ ಎತ್ತರದ ಏರಿನಲ್ಲಿ ಆಗುವಂತೆ ಉಸಿರಲ್ಲಿ ಆಮ್ಲಜನಕದ ಪ್ರಮಾಣ ತಗ್ಗಿದರೆ ಕೆಂಪುರಕ್ತ ಕಣಗಳು ಹೆಚ್ಚು ಹೆಚ್ಚಾಗಿ ತಯಾರಾಗುತ್ತವೆ. ಕೋಬಾಲ್ಟ್‌ ತೆರನ ಕೆಲವು ರಸಾಯನಿಕಗಳಿಂದಲೂ ಹೀಗಾಗುವುದು. ಕೆಲವು ರೋಗಗಳಲ್ಲಿ ಎಲುಬುಮಜ್ಜೆಯಲ್ಲಿ ವಿಶಿಷ್ಟ ಬದಲಾವಣೆಗಳಾಗುವುದು. ಇದನ್ನು ಕಂಡುಕೊಳ್ಳಲು ಎದೆ ಚಕ್ಕೆಯಲ್ಲಿ (ಸ್ಟರ್ನಂ) ತೂತಿಟ್ಟು ಸೂಜಿಯಿಂದ ಎಲುಬೊಳಗಿರುವ ಮಜ್ಜೆ ಹೀರಿ ತೆಗೆದು ಪರೀಕ್ಷಿಸುತ್ತಾರೆ. ಎಕ್ಸ್‌ ಕಿರಣಗಳು, ಪರಮಾಣು ಬಾಂಬ್ ಸಿಡಿತದಿಂದಾಗುವ ವಿಕಿರಣತೆಯಿಂದ ಎಲುಬುಮಜ್ಜೆಗೆ ಹಾನಿಯಾಗುತ್ತದೆ. ರಕ್ತದ ಜೀವಕಣಗಳ ಉತ್ಪತ್ತಿ ಕುಂಠಿತಗೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಎಲುಬುಮಜ್ಜೆ ಪುರಣ (ಬೋನ್ ಮ್ಯಾರೊ ಟ್ರಾಸ್ಸ್‌ಪ್ಲಾಂಟ್) ಮಾಡಿದರೆ ಮಜ್ಜೆ ಚೇತರಿಸಿಕೊಂಡು ಮೊದಲಿನಂತಾಗುತ್ತದೆ. ಎಲುಬುಮಜ್ಜೆಯಲ್ಲಿ ಕಾಣುವ ಕಾಂಡಕಣ(ಸ್ಟೆಮ್ ಸೆಲ್ಸ್‌)ಗಳನ್ನು ದಾನಿಗಳಿಂದ ಪಡೆದು ಸಂರಕ್ಷಿಸಿ ಶೇಖರಿಸಿಟ್ಟು ನಂತರ ಕೆಲವು ವಿಶಿಷ್ಟ ಚಿಕಿತ್ಸೆಯಲ್ಲಿ ಪುರಣ ಮಾಡಿ ಸಂತಸದಾಯಕ ಫಲಪಡೆಯುವಲ್ಲಿ ವಿಜ್ಞಾನಿಗಳು ಯಶಸ್ಸು ಪಡೆದಿದ್ದಾರೆ,

ಉಲ್ಲೇಖಗಳು

[ಬದಲಾಯಿಸಿ]
  1. Steele, D. Gentry; Claud A. Bramblett (1988). The Anatomy and Biology of the Human Skeleton. Texas A&M University Press. p. 4. ISBN 0-89096-300-2.{{cite book}}: CS1 maint: multiple names: authors list (link)
  2. Mammal anatomy : an illustrated guide. New York: Marshall Cavendish. 2010. p. 129. ISBN 9780761478829.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೂಳೆ&oldid=1227648" ಇಂದ ಪಡೆಯಲ್ಪಟ್ಟಿದೆ