ವಿಷಯಕ್ಕೆ ಹೋಗು

ಆಟಿ ಅಮಾವಾಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾಳೆಮರದ ತೊಗಟೆಯನ್ನು ಕಲ್ಲಲ್ಲಿ ಗುದ್ದಿ ತೆಗೆಯುವುದು.

ಆಟಿ ಅಮಾಸೆ ಆಟಿ ತಿಂಗಳಲ್ಲಿ ಬರುವ ದಿನವದು. ತುಳುನಾಡಿನವರಿಗೆ ಇದು ವಿಶೇಷ ದಿನ. ಈ ದಿನ ತುಳುವರು ಹಾಲೆ ಎಂಬ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತೆಗೆದು ಕಷಾಯ/ಔಷಧಿಯಾಗಿ ಮಾಡಿ ಕುಡಿಯುತ್ತಾರೆ. ಆಟಿ ಎಂಬುದು ತುಳುನಾಡಿನಲ್ಲಿ ಒಂದು ತಿಂಗಳ ಹೆಸರು. ಆಟಿಯನ್ನು ಅನಿಷ್ಟ ತಿಂಗಳು ಎಂದು ಕರೆಯಲಾಗುತ್ತದೆ.[೧] ಏಕೆಂದರೆ ಜುಲೈ-ಆಗಸ್ಟ್ ತಿಂಗಳಲ್ಲಿ ಕೀಟಗಳ ಕಾಟ ಹೆಚ್ಚು. ಅಥವಾ ಜೋರಾದ ಮಳೆ. ಅದರ ನಂತರ ಮನೆ ಬಿಡಲು ಆಗುವುದಿಲ್ಲ. ಹಾಗಾಗಿ ಆಟಿಯನ್ನು ಹಾಗೆ ಕರೆಯುತ್ತಾರೆ. ಅನಿಷ್ಟ ತೆಗೆದುಕೊಂಡು ಹೋಗಲು ಆಟಿ ತಿಂಗಳಲ್ಲಿ ಆಟಿಕಳೆಂಜೆ ಬರುತ್ತಾನೆ. ಆಟಿ ತಿಂಗಳ ಅಮವಾಸೆ ತುಳುವರಿಗೆ ವಿಶೇಷವಾದ ದಿನ[೨]

ಹಾಳೆ ಮರದ ತೊಗಟೆಯಿಂದ ಔಷಧ[ಬದಲಾಯಿಸಿ]

ಹಾಳೆ ಮರದ ಕಾಯಿ

ಹಾಲೆ ಮರವು ಹಾಲು ಬರುವ ಮರಗಳ ಜಾತಿಗೆ ಸೇರಿದೆ. ಇದನ್ನು ಬಲಿಯೇಂದ್ರ ಮರ ಎಂದೂ ಕರೆಯುತ್ತಾರೆ. ಆಟಿ ಅಮಾವಾಸ್ಯೆಯ ದಿನ ಮರದಲ್ಲಿ ಬಹುವಿಧದ ಔಷಧ ಗುಣ ಇರುತ್ತದೆಂದು ತುಳು ಜನರ ನಂಬಿಕೆ. ಆಟಿ ಅಮಾವಾಸೆಯ ದಿನದಂದು ಎಲ್ಲಾ ಪಕ್ಷಿಗಳು ಈ ಮರಕ್ಕೆ ಸೇರುತ್ತವೆ. ವಿಷಜಂತುಗಳು ಬಂದು ತಮ್ಮ ವಿಷವನ್ನು ಮರದ ಬೇರುಗಳಿಗೆ ಬಿಡುತ್ತವೆ ಎಂದು ನಂಬಲಾಗಿದೆ. ಇದು ಕಹಿಯ ಗುಣವನ್ನು ಹೊಂದಿದೆ. ಆಟಿ ಅಮಾಸೆಯ ದಿನ ಈ ಔಷಧಿ ಸೇವಿಸಿದರೆ ವರ್ಷಪೂರ್ತಿ ಬೇರೆ ಔಷಧಿ ಬೇಕಾಗಿಲ್ಲ. ಈ ಔಷಧಿಯು ದೇಹಕ್ಕೆ ಉಷ್ಣ. ಹಾಗಾಗಿ ಮೆಂತೆ ಗಂಜಿ ಮಾಡಿ ಊಟ ಮಾಡುತ್ತಾರೆ.[೩]

ಹಾಳೆಮರದ ತೊಗಟೆ ತೆಗೆಯುವ ಕ್ರಮ[ಬದಲಾಯಿಸಿ]

ಮನೆಯ ಯಜಮಾನನು ಅಮಾವಾಸೆಯ ಹಿಂದಿನ ದಿನ ಕಾಡಿಗೆ ಹೋಗಿ ಹಾಳೆ ಮರವನ್ನು ಕಂಡು ಮರದ ಗುರುತು ಇಟ್ಟು ಬರುತ್ತಾನೆ. ಮರುದಿನ ಬೆಳ್ಳಂಬೆಳಗ್ಗೆ ಎದ್ದು ಮರದ ಬುಡಕ್ಕೆ ಹೋಗುತ್ತಾನೆ. ನಂಬಿಕೆಯ ಪ್ರಕಾರ, ಅವನು ಅಥವಾ ಅವಳು ಬೆತ್ತಲೆ ಹೋಗಬೇಕೆಂದು ನಂಬಿಕೆ ಉಂಡು.[೪] ಕೈಯಲ್ಲಿ ಪೊರಕೆ ಹಿಡಿದು ಮರದ ಸುತ್ತಲೂ ಬಂದು ಮರಕ್ಕೆ ಪೊರಕೆಯಿಂದ ಮೂರು ಏಟುಗಳನ್ನು ಕೊಡುತ್ತಾರೆ. ನಂತರ ತೊಗಟೆಯನ್ನು ಕಲ್ಲಿನಲ್ಲಿ ಗುದ್ದಿ ಎಬ್ಬಿಸಿ ಒಯ್ಯಬೇಕು. ಹಾಳೆ ಮರವು ಹಾಲು ಬರುವ ಮರವಾಗಿದೆ. ಹಾಗಾಗಿ ಮರವನ್ನು ಕಲ್ಲಿನಿಂದ ಗುದ್ದಿದಾಗ ಮೈ ಬಟ್ಟೆ ಹಾಳಾಗುತ್ತದೆ.[೫] ಅದಕ್ಕಾಗಿಯೇ ಬೆತ್ತಲೆ ಹೋಗುತ್ತಿದ್ದಿರಬಹುದು. ಅವರು ಮರದ ಬುಡಕ್ಕೆ ಹೋಗಿ ಮರದ ಬುಡದಲ್ಲಿ ದಕ್ಷಿಣಕ್ಕೆ ಮುಖಮಾಡಿ ನಿಂತ ಮರದ ಬಡಗು ದಿಕ್ಕಿನ ತೊಗಟೆಯನ್ನು ಕೆತ್ತುವರು. ಹಾಗೆ ಹೊಡೆದಾಗ ಮೈಕೈಯೆಲ್ಲ ಮರದ ಹಾಲು ಅಂಟಿಕೊಳ್ಳುತ್ತದೆ. ಮರದ ತೊಗಟೆ ದಪ್ಪವಾಗಿ ಎದ್ದು ಬರುತ್ತದೆ. ಹಾಗೆ ಎದ್ದು ಬರುವುದಿಂದ ಆ ಮರಕ್ಕೆ ಹಾಳೆಮರವೆಂದು ಕರೆಯುವರು.

ಹಾಳೆ ಮರೆದ ತೊಗಟೆಯನ್ನು ಕಡಿವ ಕಲ್ಲಿನಿಂದ ಕಡೆದು ರಸ ತೆಗೆಯುವುದು.

ಹಾಳೆ ಮರದ ಮದ್ದು ಮಾಡುವ ಕ್ರಮ[ಬದಲಾಯಿಸಿ]

ಹಾಳೆ ಮರದ ತೊಗಟೆ

ಸೂರ್ಯೋದಯಕ್ಕೆ ಮುಂಚೆಯೇ ಬೆತ್ತಲೆ ಹೋಗಿ ಬೆಣಚುಕಲ್ಲಿಂದ ಗುದ್ದಿ ತೊಗಟೆ ತರಬೇಕು. ಅಲ್ಲದೆ, ತೊಗಟೆ ತೆಗೆವಾಗ ಕಬ್ಬಿಣವನ್ನು ಸ್ಪರ್ಶಿಸಬೇಡಿ. ತೊಗಟೆಯನ್ನು ಶುಚಿಗೊಳಿಸಿ ಓಮ, ಕರಿಮೆಣಸು, ಬೆಳ್ಳುಳ್ಳಿಯೊಂದಿಗೆ ಚೆನ್ನಾಗಿ ಗುದ್ದಿ ಪುಡಿಮಾಡಬೇಕು. ಅಥವಾ ಚೆನ್ನಾಗಿ ರುಬ್ಬಿ ಒಂದು ಪಾತ್ರೆಗೆ ಹಿಂಡಿ ಸೋಸಬೇಕು. ಅದಕ್ಕೆ ಬೆಣಚುಗಲ್ಲನ್ನು ಅಥವಾ ಕಬ್ಬಿಣವನ್ನು ಬಿಸಿಮಾಡಿ ಒಗ್ಗರಣೆ ಕೊಡಬೇಕು. ಹೀಗೆ ಹಾಳೆಯ ತೊಗಟೆಯ ಔಷಧಿ ತಯಾರಾಗುತ್ತದೆ. ಅದನ್ನು ಬರೇ ಹೊಟ್ಟೆಗೆ ಒಂದು ಔನ್ಸ್‌ನಷ್ಟು ಕುಡಿಯಬೇಕು. ಹೀಗೆ ಮದ್ದು ಕುಡಿದರೆ ಒಂದು ವರ್ಷಕ್ಕೆ ಬೇರೆ ಔಷಧಿ ಬೇಡವೆಂದು ಜನಪದರು ಹೇಳುತ್ತಾರೆ. ಔಷಧಿ ತುಂಬಾ ಉಷ್ಣವೆಂದು ಹೊಟ್ಟೆ ತಂಪು ಮಾಡಲು ಮೆಂತೆ ಗಂಜಿ ಮಾಡುತ್ತಾರೆ.

ಆಟಿ ಅಮಾವಾಸೆಯಂದು ದಾನ ಬಿಡುವುದು[ಬದಲಾಯಿಸಿ]

ಬೆಳಿಗ್ಗೆ ಔಷಧಿ ತಯಾರಿಸಿ ದಾನ ಬಿಡಲು ಹೋಗುತ್ತಾರೆ. ೫ ಬಗೆಯ ಹೂವು, ೩ ಬಗೆಯ ಧಾನ್ಯ, ೧ ತೆಂಗಿನಕಾಯಿ, ೫ ಪೈಸೆ, ೧ ವೀಳ್ಯದೆಲೆ, ೧ ಅಡಿಕೆ, ಗಂಧ, ಊದುಬತ್ತಿ ಇವೆಲ್ಲವನ್ನು ಜೊತೆ ಸೇರಿಸಿ, ಕದಳಿ ಬಾಳೆ ಎಲೆಯಲ್ಲಿ ಇಟ್ಟು, ತೋಡಬದಿಗೆ ಅಥವಾ ನದಿ ಬದಿಗೆ ಹೋಗುತ್ತಾರೆ. ಅಲ್ಲಿ ಹೋದವರೆಲ್ಲಾ ಸ್ನಾನಮಾಡಿ, ಕೊಂಡುಹೋದ ಎಲ್ಲ ವಸ್ತುಗಳನ್ನು ಎಲ್ಲರ ತಲೆಗೆ ಮೂರುಸುತ್ತು ನೇವರಿಸಿ ಸೂರ್ಯದೇವರಿಗೆ ಕೈ ಮುಗಿದು ದಾನ ಬಿಡುತ್ತಾರೆ. ದಾನ ಬಿಟ್ಟು ನೇರ ಮನೆಗೆ ಬರುತ್ತಾರೆ. ಮತ್ತೆ ತಿರುಗಿ ನೋಡಬಾರದೆಂದು ಜನಪದರ ನಂಬಿಕೆ.

ಆಟಿ ಅಮಾವಾಸೆಯಂದು ಗದ್ದೆಗೆ ಕಳ್ಳಿ ನೆಡುವುದು[ಬದಲಾಯಿಸಿ]

ಪ್ರತಿಯೊಬ್ಬ ಬೇಸಾಯಗಾರನೂ ಗದ್ದೆಗೆ ಕಳ್ಳಿ ಕಟ್ಟುವ ಕ್ರಮವಿದೆ. ಒಂದು ಗೂಟದ ತುದಿಗೆ ಒಂದು ಕಳ್ಳಿಯ ಗೆಲ್ಲನ್ನು ಮುಳಿಹುಲ್ಲು ಅಥವಾ ಬೈಹುಲ್ಲಲ್ಲಿ ಸುತ್ತಿ ಕಟ್ಟುವರು. ಏನೆಲ್‌ ಬೇಸಾಯದ ಗದ್ದೆಯಲ್ಲಿ ನೇಜಿ ನೆಡುವಾಗ ಹಸಿರಸಿರು ಕಾಣುವುದು. ಆ ಗದ್ದೆಗೆ ಕೆಟ್ಟ ಕಣ್ಣು ಮುಟ್ಟುವುದೆಂದು ಬೇಸಾಯಗಾರರಿಗೆ ಭಯ ಇರುತ್ತದೆ. ಹಾಗಾಗಿ ಬೇರೆಯವರ ಕಣ್ಣು ಬೀಳಬಾರದೆಂದು ಕಳ್ಳಿ ನೆಡುತ್ತಾರೆ. ಕಳ್ಳಿ ಹಾಲುಬರುವ ಬೇಲಿಯಲ್ಲಿ ನೆಡುವ ಗಿಡ. ಅದರ ಹಾಲು ಕಣ್ಣಿಗೆ ಬೀಳಬಾರದು, ಬಿದ್ದರೆ ಕಣ್ಣು ಒಡೆಯುವುದೆಂದು ಹೇಳುತ್ತಾರೆ. ಅದಕ್ಕಾಗಿ ಕಳ್ಳಿ ಗಿಡ ನೆಡುವರು.

ಉಲ್ಲೇಖ[ಬದಲಾಯಿಸಿ]

  1. "Udupi: Aati Amavasya – Facts on tradition of 'Paleda Kashaya' consumption". Daijiworld.com. 2019-08-01. Retrieved 2020-10-20.
  2. "Archive copy". Archived from the original on 2016-03-05. Retrieved 2014-06-06.{{cite web}}: CS1 maint: archived copy as title (link)
  3. Medicinal Plants of Karnataka, Dr. Magadi Auer. Gurudeva, Divyachandra Publishing, Bangalore, 1998
  4. "ಸಾವಿರದೊಂದು ಔಷಧಿ ಗುಣವಿರುವ ಆಟಿ ಮದ್ದು". Vijaya Karnataka.
  5. Kapikad, Sathish. "ಸರ್ವರೋಗ ನಿವಾರಕ, ರೋಗ ನಿರೋಧಕ ಶಕ್ತಿಯಿರುವ ಔಷಧಿ ಹಾಲೆ ಮರದ ಕಷಾಯದ ಬಗ್ಗೆ ನಿಮಗೇಷ್ಟು ಗೊತ್ತು…ಇದನ್ನು ನೀವು ತಿಳಿದುಕೊಳ್ಳಲೇ ಬೇಕು".