ವಿಷಯಕ್ಕೆ ಹೋಗು

ಆರೋಗ್ಯಶಿಕ್ಷಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸತ್ವಪುರ್ಣವಾಗಿ ತೃಪ್ತಿ ಸಮಾಧಾನಗಳಿಂದ ತುಂಬಿದ ಸಾರ್ಥಕ ಜೀವನ ನಡೆಸಲು ಅವಶ್ಯವಾದ ದೇಹಶಕ್ತಿಯನ್ನೂ ಬುದ್ಧಿಶಕ್ತಿಯನ್ನೂ ವೃದ್ಧಿಪಡಿಸಿಕೊಳ್ಳುವುದೇ ಆರೋಗ್ಯಶಿಕ್ಷಣದ ಗುರಿ. ಉತ್ತಮ ಆರೋಗ್ಯ ಸಾಧಕ ಅಭ್ಯಾಸಗಳನ್ನು ಬೆಳೆಸುವ ಉದ್ದೇಶದಿಂದ ಜನರ ಜ್ಞಾನದಲ್ಲೂ ಮನೋಭಾವದಲ್ಲೂ ಚರ್ಯೆಯಲ್ಲೂ ಪರಿವರ್ತನೆ ಮೂಡಿಸುವುದೇ ಸಾಮಾನ್ಯ ಶಿಕ್ಷಣದ ಉದ್ದೇಶವಷ್ಟೆ. ಆರೋಗ್ಯಶಿಕ್ಷಣದ ಮೂಲ ಉದ್ದೇಶವೂ ಅದೇ ಆಗಿದೆ. ಆರೋಗ್ಯಶಿಕ್ಷಣ ಇಬ್ಬಗೆಯಾಗಿದೆ:

  • ಜನಸಮುದಾಯದ ಹಿತಾರ್ಥವಾಗಿ ನಡೆಯುವ ಸಾರ್ವಜನಿಕ ಶಿಕ್ಷಣ.
  • ಮಕ್ಕಳ ಆರೋಗ್ಯ ರಕ್ಷಣೆಯ ಸಲುವಾಗಿ ನಡೆಯುವ ಶಾಲಾ ಆರೋಗ್ಯಶಿಕ್ಷಣ.

ವೈದ್ಯಶಾಸ್ತ್ರ ವಿಚಾರದಲ್ಲಿ ಪ್ರಯೋಗಶಾಲೆಗಳಲ್ಲಿ ನಡೆಸಿದ ಪ್ರಯೋಗ ಸಿದ್ಧಾಂತಗಳನ್ನು ಮಾನವಕೋಟಿಯ ದಿನ ದಿನದ ಬಾಳಿಗೆ ಅನ್ವಯಿಸಲು ಬಹು ದೀರ್ಘ ಕಾಲದಿಂದಲೂ ಮಹತ್ವದ ಕಾರ್ಯಕ್ರಮವೆಂದು ಒಪ್ಪಿಕೊಳ್ಳಲಾದ ಈ ಬಗೆಯ ಆಧುನಿಕ ಜನಾರೋಗ್ಯ ನೀತಿಶಿಕ್ಷಣ ಈಚೆಗೆ ಹೆಚ್ಚು ಹೆಚ್ಚು ಬಳಕೆಗೆ ಬರುತ್ತಿದೆ. ನಾನಾ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಂದ ಇನ್ನಷ್ಟು ಹೃತ್ಪೂರ್ವಕ ಸಹಕಾರ ಪಡೆಯಲು ಅದರಿಂದ ಅನುಕೂಲವಾದೀತೆಂಬ ನಿರೀಕ್ಷೆಯಿದೆ. ಆರೋಗ್ಯಶಿಕ್ಷಣಕ್ಕೆ ನಮ್ಮ ದಿನನಿತ್ಯದ ಜೀವನದಲ್ಲಿ ಮನೆ, ಆಸ್ಪತ್ರೆ, ಪಾಠಶಾಲೆ, ಉತ್ಸವ, ಜಾತ್ರೆಗಳು, ವ್ಯವಸ್ಥಿತವಾಗಿ ಏರ್ಪಟ್ಟ ಗೋಷ್ಠಿಗಳು ಇವೇ ಮೊದಲಾಗಿ ಎಷ್ಟೋ ಅವಕಾಶಗಳು ಇವೆ. ವೇತನ ಪಡೆಯುವ ಕಾರ್ಯಕರ್ತರಿಂದ ಹಿಡಿದು, ಸಮಾಜದ ಮುಂದಾಳುಗಳಂಥ ಸ್ವಯಂಸೇವಾಕರ್ತರವರೆಗಿನ ಸಕಲ ಕಲ್ಯಾಣ ಕಾರ್ಯಕರ್ತರೂ ಆರೋಗ್ಯ ಶಿಕ್ಷಕರೇ ಸರಿ. ಆರೋಗ್ಯಶಿಕ್ಷಣ ಕಾರ್ಯರೂಪಕ್ಕೆ ಬರಲು ಸೂಕ್ತ ಜ್ಞಾನಾರ್ಜನೆಯೂ, ಈ ವಿಚಾರದಲ್ಲಿ ಅತ್ಯಾಧುನಿಕ ಜ್ಞಾನವನ್ನು ಸಂಪಾದಿಸಿಕೊಂಡು ಅದನ್ನು ಬಳಕೆಗೆ ತರುವ ನೈಪುಣ್ಯವೂ ಬೇಕಾಗುವುದು. ಇದರ ಜೊತೆಗೆ, ಆರೋಗ್ಯಶಿಕ್ಷಣದ ವಿಧಾನಗಳನ್ನೂ ಅರಿತಿರಬೇಕು; ಶ್ರವಣ, ವೀಕ್ಷಣ ಸಾಧನಗಳಂಥ ಶಿಕ್ಷಣ ಮಾಧ್ಯಮಗಳನ್ನು ಬಳಸುವ ಕ್ರಮವನ್ನೂ ತಿಳಿದಿರಬೇಕು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ತರುವಾಯ, ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ಭಾರತ ಆರೋಗ್ಯ ಶಿಕ್ಷಣಕ್ಕೆ ವಿಶೇಷ ಮಹತ್ತ್ವ ನೀಡಿದೆ. ಸಾರ್ವಜನಿಕ ಆರೋಗ್ಯ ಇಲಾಖೆ, ಗ್ರಾಮಾಂತರ ಆರೋಗ್ಯ ಕೇಂದ್ರಗಳು, ಸರ್ಕಾರದ ಪ್ರಚಾರ ಇಲಾಖೆ, ರೆಡ್ಕ್ರಾಸ್ ಸಂಸ್ಥೆ-ಇವೇ ಮೊದಲಾದುವು ಈ ಬಗ್ಗೆ ಸಾಕಷ್ಟು ಕೆಲಸವನ್ನು ನಿರ್ವಹಿಸುತ್ತಿವೆ. ಅಂಗಸಾಧನೆ; ಕ್ರೀಡೆಗಳು; ದೈಹಿಕ ಚಟುವಟಿಕೆಗಳು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: