ವಿಷಯಕ್ಕೆ ಹೋಗು

ಉಜ್ವಲಾ ಮಜುಂದಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಜ್ವಲಾ ಮಜುಂದಾರ್
ಉಜ್ವಲಾ ಮಜುಂದಾರ್
Born(೧೯೧೪-೧೧-೨೧)೨೧ ನವೆಂಬರ್ ೧೯೧೪
DiedApril 25, 1992(1992-04-25) (aged 77)
Occupationಬಂಗಾಳಿ ಕ್ರಾಂತಿಕಾರಿ ಮತ್ತು "ಸ್ವಾತಂತ್ರ್ಯ ಹೋರಾಟಗಾರ್ತಿ"
Known forಬ್ರಿಟಿಷ್-ವಿರೋಧಿ ಭಾರತ ಚಳುವಳಿಗೆ ಸಹಾಯ

ಉಜ್ವಲಾ ಮಜುಂದಾರ್ (ನವೆಂಬರ್ ೨೧, ೧೯೧೪ - ಏಪ್ರಿಲ್ ೨೫, ೧೯೯೨) ಒಬ್ಬ ಬಂಗಾಳಿ ಸಶಸ್ತ್ರ ಕ್ರಾಂತಿಕಾರಿ ಮಹಿಳೆ, ತೀವ್ರ ಬಲಪಂಥೀಯ ನಾಯಕಿ ಮತ್ತು ಸಾಮಾಜಿಕ ಕಾರ್ಯಕರ್ತೆ.

ಆರಂಭಿಕ ಜೀವನ

[ಬದಲಾಯಿಸಿ]

ಉಜ್ವಲಾ ಮಜುಂದಾರ್ ಈಗಿನ ಬಾಂಗ್ಲಾದೇಶದಲ್ಲಿರುವ ಢಾಕಾದಲ್ಲಿ ಜನಿಸಿದರು. ಇವರ ತಂದೆ, ಸುರೇಶ್ ಚಂದ್ರ ಮಜುಂದಾರ್, ಬಂಗಾಳಿ ಕ್ರಾಂತಿಕಾರಿಗಳೊಂದಿಗೆ ತೊಡಗಿಸಿಕೊಂಡಿದ್ದರು. ಅವರು ೧೪ ವರ್ಷ ವಯಸ್ಸಿನವರಾಗಿದ್ದಾಗ ತಮ್ಮ ತಂದೆಗೆ ಕಲ್ಕತ್ತಾದಿಂದ ಬಂದೂಕುಗಳನ್ನು ಸಾಗಿಸಲು ಸಹಾಯ ಮಾಡಿದರು ಮತ್ತು ಅವುಗಳನ್ನು ತಮ್ಮ ಸೊಂಟದ ಸುತ್ತ ಹೊತ್ತುಕೊಂಡು ಕ್ರಾಂತಿಕಾರಿ ಕಾರ್ಯಕರ್ತರಿಗೆ ತಲುಪಿಸಿದರು. ಸುಕುಮಾರ್ ಘೋಷ್ ಮತ್ತು ಮನೋರಂಜನ್ ಬ್ಯಾನರ್ಜಿಯಂತಹ ಬಂಗಾಳಿ ಕಾರ್ಯಕರ್ತರಿಂದ ಇವರಿಗೆ ಮಾರ್ಗದರ್ಶನ ನೀಡಲಾಯಿತು. ಇವರ ಶಾಲಾ ಶಿಕ್ಷಣವು ಬಹಳ ತಡವಾಗಿ ಪ್ರಾರಂಭವಾದ ಕಾರಣ, ಮಜುಂದಾರ್ ೨೦ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್‌ನಲ್ಲಿ ತೇರ್ಗಡೆ ಹೊಂದಿದರು. []

ಸಂಸ್ಥೆಯ ಸದಸ್ಯತ್ವಗಳು

[ಬದಲಾಯಿಸಿ]

ಮಜುಂದಾರ್ ಚಿಕ್ಕ ವಯಸ್ಸಿನಲ್ಲೇ ಬಂಗಾಳದ ಸ್ವಯಂಸೇವಕರ ತಂಡವನ್ನು ಸೇರಿದರು. ನಂತರ ಅವರು ಆದಿಪಾಲಿ ಸಂಘ ಎಂಬ ಮತ್ತೊಂದು ಸ್ವಾತಂತ್ರ್ಯ-ಪರ ಸಂಸ್ಥೆ ಮತ್ತು ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಯುಗಂತರ್ ದಳಕ್ಕೆ ಸೇರಿದರು. ನಂತರ ಅವರು ಫಾರ್ವರ್ಡ್ ಬ್ಲಾಕ್ ಕೋರ್ ತಂಡದ ನಾಯಕಿಯಾದರು. []

ಜಾನ್ ಆಂಡರ್ಸನ್ ಹತ್ಯೆಯ ಯತ್ನ ಮತ್ತು ಸೆರೆವಾಸ

[ಬದಲಾಯಿಸಿ]

ಮಜುಂದಾರ್ ಅವರು ಗವರ್ನರ್ ಜಾನ್ ಆಂಡರ್ಸನ್ ಅವರನ್ನು ಹತ್ಯೆ ಮಾಡಲು ಭವಾನಿ ಪ್ರಸಾದ್ ಭಟ್ಟಾಚಾರ್ಯ, ಸುಕುಮಾರ್ ಘೋಷ್, ರವಿ ಬ್ಯಾನರ್ಜಿ ಮತ್ತು ಇತರ ಕೆಲವು ಕ್ರಾಂತಿಕಾರಿ ಕಾರ್ಯಕರ್ತರೊಂದಿಗೆ ಡಾರ್ಜಿಲಿಂಗ್‌ಗೆ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಅವರು ತಮ್ಮ ಆಯುಧವನ್ನು ಹಾರ್ಮೋನಿಯಂನಲ್ಲಿ ಬಚ್ಚಿಟ್ಟರು. ಅವರು ಹೋಟೆಲ್ ಪ್ರವೇಶಿಸಿ ಮನೋರಂಜನ್ ಬ್ಯಾನರ್ಜಿಯೊಂದಿಗೆ ವಿವಾಹಿತ ಜೋಡಿಯಂತೆ ತೋರ್ಪಡಿಸಿಕೊಂಡರು. ಮೇ ೬, ೧೯೩೪ ರಂದು, ಭಟ್ಟಾಚಾರ್ಯರು ಡಾರ್ಜಿಲಿಂಗ್ ಲೆಬಾಂಗ್ ರೇಸ್‌ಕೋರ್ಸ್‌ನಲ್ಲಿ ಗವರ್ನರ್‌ಗೆ ಗುಂಡು ಹಾರಿಸಿದರು, ಆದರೆ ಸಣ್ಣ ಗಾಯಗಳನ್ನು ಮಾತ್ರ ಉಂಟುಮಾಡಿದರು. ಭಟ್ಟಾಚಾರ್ಯ ಸಿಕ್ಕಿಬಿದ್ದು ನಂತರ ಗಲ್ಲಿಗೇರಿಸಲಾಯಿತು. ಮಜುಂದಾರ್ ಮತ್ತು ಮನೋರಂಜನ್ ಬ್ಯಾನರ್ಜಿ ಮಾರುವೇಷದಲ್ಲಿ ಕಲ್ಕತ್ತಾಗೆ ಓಡಿಹೋಗಿ ಸೋವರಾಣಿ ದತ್ ಅವರ ಮನೆಯಲ್ಲಿ ಆಶ್ರಯ ಪಡೆದರು. [] ಪೊಲೀಸರು ಅವರನ್ನು ಮೇ ೧೮, ೧೯೩೪ ರಂದು ಬಂಧಿಸಿದರು. [] ವಿಶೇಷ ನ್ಯಾಯಮಂಡಳಿಯು ಮಜುಂದಾರ್‌ ಅವರಿಗೆ ೧೪ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿತು. [] ೧೯೩೯ರ ಏಪ್ರಿಲ್‌ನಲ್ಲಿ ಮಹಾತ್ಮಾ ಗಾಂಧಿಯವರ ಮನವಿಯ ಮೇರೆಗೆ ಅವರನ್ನು ಢಾಕಾ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಅವರು ೧೯೪೨ ರಲ್ಲಿ ಕಲ್ಕತ್ತಾದಲ್ಲಿ ಕ್ವಿಟ್ ಇಂಡಿಯಾ ಚಳುವಳಿಗೆ ಸೇರಿದರು, ಇದು ಮತ್ತೆ ಅವರ ಜೈಲುವಾಸಕ್ಕೆ ಕಾರಣವಾಯಿತು. [] ಪ್ರೆಸಿಡೆನ್ಸಿ ಕರೆಕ್ಷನ್ ಹೋಮ್‌ನಲ್ಲಿ ನಾಲ್ಕು ವರ್ಷಗಳನ್ನು ಕಳೆದ ನಂತರ ಅವರನ್ನು ೧೯೪೭ ರಲ್ಲಿ ಬಿಡುಗಡೆ ಮಾಡಲಾಯಿತು.

ಸಾಮಾಜಿಕ ಚಟುವಟಿಕೆಗಳು

[ಬದಲಾಯಿಸಿ]

ಮಜುಂದಾರ್ ಜೈಲಿನಲ್ಲೇ ಓದಿ ಬಿಎ ಪದವಿ ಪಡೆದರು. ಬಿಡುಗಡೆಯ ನಂತರ, ಅವರು ಹಲವಾರು ಸಾಮಾಜ ಕಲ್ಯಾಣ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಅವರು ನೊವಾಖಾಲಿ ಗಲಭೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಪರಿಹಾರ ಕಾರ್ಯಕ್ಕೆ ಕೊಡುಗೆ ನೀಡಿದರು. ಮಜುಂದಾರ್ ಅವರು ಬರಾಸತ್ ಬಳಿ ವಂಚಿತ ವರ್ಗಗಳ ಅಭಿವೃದ್ಧಿಗಾಗಿ ಪಲ್ಲಿ ನಿಕೇತನ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ರಾಜರಹತ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಲವಾರು ಹಳ್ಳಿಗಳಲ್ಲಿ ಅವರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ೧೯೪೭ ರಲ್ಲಿ, ಅವರು ಕ್ರಾಂತಿಕಾರಿ ಮತ್ತು ಸಾಹಿತ್ಯಿಕ ವ್ಯಕ್ತಿಯಾದ ರಕ್ಷಿತಾ ರಾಯ್ ಅವರನ್ನು ವಿವಾಹವಾದರು. []

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ Dasgupta, Kamala (1963). Svādhīnatā-saṃgrāme Bāṃiāra nārī (in Bengali). Basudhārā Prakāśanī. pp. 139–143.
  2. Ghosh, Durba (2017-07-20). Gentlemanly Terrorists: Political Violence and the Colonial State in India, 1919–1947 (in ಇಂಗ್ಲಿಷ್). Cambridge University Press. p. 173. ISBN 978-1-107-18666-8.
  3. Guha, Arun Chandra. Indias Struggle Quarter of Century 1921 to 1946 Part I (in ಇಂಗ್ಲಿಷ್). Publications Division Ministry of Information & Broadcasting. ISBN 978-81-230-2274-1.
  4. Chowdhury, Chinmoy (1958). Swadhinata Andolone Sashastra Biplabi Nari [স্বাধীনতা আন্দোলনে সশস্ত্র বিপ্লবী নারী] (in Bengali). Kolkata: Dey's Publishing. p. 105.
  5. Satyabrata Majumdar. "নেতাজীর হোমফ্রন্ট- ৭" (in Bengali)