ಉತ್ಖನನ
ಉತ್ಖನನ ಭೂಮಿಯಲ್ಲಿ ಹುದುಗಿಹೋಗಿರುವ ಮಾನವ ನಾಗರಿಕತೆಗೆ ಸಂಬಂಧಿಸಿದ ಅವಶೇಷಗಳನ್ನು ಭೂಮಿಯಿಂದ ಅಗೆಯುವುದಕ್ಕೆ ಪುರಾತತ್ತ್ವ ಶೋಧನೆಯಲ್ಲಿ ಬಳಸುವ ಪದ (ಎಕ್ಸ್‌ಕವೇಷನ್). ಉತ್ಖನನವೂ ಪುರಾತತ್ತ್ವಶೋಧನೆಯಷ್ಟೇ ಹಳೆಯದು. ಆದರೆ ವೈಜ್ಞಾನಿಕ ಉತ್ಖನನ ಪ್ರಾರಂಭವಾದದ್ದು ಈ ಶತಮಾನದಲ್ಲಿ ಮಾತ್ರ. ಅದಕ್ಕೆ ಮುಂಚೆ ಪುರಾತತ್ತ್ವಶೋಧನೆಯೇ ಇನ್ನೂ ವೈಜ್ಞಾನಿಕವಾಗಿರಲಿಲ್ಲ. ಸಾಹಿತ್ಯಗ್ರಂಥಗಳ ಆಧಾರದಿಂದ ರಾಜ ಮಹಾರಾಜರ ಅರಮನೆಯ ನಿವೇಶನಗಳನ್ನು ಪತ್ತೆ ಹಚ್ಚಿ, ಅವುಗಳಲ್ಲಿ ದೊರಕಬಹುದಾದ ಚಿನ್ನ, ಬೆಳ್ಳಿ ಮುಂತಾದವುಗಳಿಂದ ಮಾಡಿದ ಅಮೂಲ್ಯ ವಸ್ತುಗಳನ್ನು ಯಾವ ವಿಧಾನದಿಂದಲಾದರೂ ಕೊಳ್ಳೆ ಹೊಡೆಯುವ ಹವ್ಯಾಸವೇ ಇತ್ತು. 19ನೆಯ ಶತಮಾನದ ಇಂಗ್ಲೆಂಡಿನಲ್ಲೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿಯಿತ್ತು. ಪ್ರಾಚೀನ ಅವಶೇಷಗಳನ್ನು ಅಡ್ಡಾದಿಡ್ಡಿ ಅಗೆದು ಹೊರತೆಗೆದು ಸಂಗ್ರಹಮಾಡುವ ಮನೋಭಾವ ಬೆಳೆದು ಬಂದಿತ್ತು. ಈ ಶತಮಾನದ ಪ್ರಾರಂಭದಲ್ಲಿ ಈ ಭಾವನೆ ಕಡಿಮೆಯಾಗಲಾರಂಭಿಸಿತು. ಉತ್ಖನನ ನಿರ್ಜೀವ ಅವಶೇಷಗಳಿಗಾಗಲ್ಲ, ಅವುಗಳ ಕರ್ತೃವಾದ ಮಾನವನನ್ನು ತಿಳಿಯುವುದಕ್ಕಾಗಿ ಎಂಬ ಭಾವನೆ ಬೆಳೆದು ಬಂತು. ಅಷ್ಟೇ ಅಲ್ಲದೆ ಉತ್ಖನನದಿಂದ ಮಾಹಿತಿಯ ನಾಶವಾಗುವುದೆಂದು ಕೆಲವರು ಭಾವಿಸಿದರು. ಭೂಮಿಯಲ್ಲಿ ಅಡಗಿರುವ ಅವಶೇಷಗಳು ಹಾಗೆಯೇ ಇನ್ನೂ ಸ್ಪಲ್ಪಕಾಲ ಉಳಿದರೆ ಯಾವ ನಷ್ಟವೂ ಆಗುವುದಿಲ್ಲ. ಅವುಗಳನ್ನು ಭೂಮಿಯಿಂದ ಹೊರತೆಗೆಯುವಾಗ ಸಾಕಷ್ಟು ಗಮನ ಕೊಡದೇ ಇದ್ದರೆ, ಅವು ನಾಶವಾದಂತೆಯೇ ಸರಿ. ಏಕೆಂದರೆ ಅವನ್ನು ಮೊದಲಿದ್ದಂತೆ ಕೂಡಿಸಲು ಯಾರಿಂದಲೂ ಸಾಧ್ಯವಿಲ್ಲ. ಭಾರತದಲ್ಲಿ ಪ್ರಚಲಿತವಾಗಿರುವ ಕಾನೂನಿನ ಪ್ರಕಾರ ಉತ್ಖನನಗಳನ್ನು ನಡೆಸಲು ಸರ್ಕಾರದಿಂದ ಅನುಮತಿ ಪಡೆಯಬೇಕು. ಉತ್ಖನನದ ನಿರ್ದೇಶಕರ ಅರ್ಹತೆ, ಅವರಲ್ಲಿರುವ ವೈಜ್ಞಾನಿಕ ಸಾಮಗ್ರಿಗಳು, ಹಣ, ಉತ್ಖನನ ಮಾಡುವ ಸ್ಥಳದ ಪ್ರಾಮುಖ್ಯ - ಇವುಗಳ ಆಧಾರದ ಮೇಲೆ ಮಾತ್ರ ಅನುಮತಿ ಸಿಕ್ಕುತ್ತದೆ. ಪುರಾತತ್ತ್ವ ಶೋಧನೆಯಲ್ಲಿ ಉತ್ಖನನಕ್ಕೆ ಇಷ್ಟೊಂದು ಪ್ರಾಮುಖ್ಯವಿದೆ.
ಸಿದ್ಧತೆಗಳು
[ಬದಲಾಯಿಸಿ]ಉತ್ಖನನಕ್ಕೆ ಪೂರ್ವಭಾವಿಯಾಗಿ ನಿವೇಶನಾನ್ವೇಷಣೆ, ನಿವೇಶನ ನಿಶ್ಚಯಗಳಾಗಬೇಕು. ಪ್ರಾಚೀನ ಕಾಲದ ಅವಶೇಷಗಳು ನೆಲದಲ್ಲಿ ಹೂತುಹೋಗಿದ್ದರೂ ಕೆಲವು ಲಕ್ಷಣಗಳಿಂದ ಅವನ್ನು ಪತ್ತೆ ಹಚ್ಚಬಹುದು. ಭೂಮಿಯ ಮೇಲ್ಮೈಲಕ್ಷಣಗಳಿಂದ ನಿವೇಶನಗಳನ್ನು ಕಂಡುಹಿಡಿಯಬಹುದು. ಸಾಮಾನ್ಯವಾಗಿ ಅವಶೇಷಗಳು ಇರುವ ಸ್ಥಳಗಳು ಸಣ್ಣ ಸಣ್ಣ ದಿಬ್ಬಗಳಾಗಿರುತ್ತವೆ. ಈ ದಿಬ್ಬಗಳ ಮೇಲೆ ಬಿದ್ದ ಮಳೆಯ ನೀರು ಅಲ್ಲಿಂದ ಕೆಳಕ್ಕೆ ಹರಿಯುವಾಗ ದಿಬ್ಬದ ಮೇಲ್ಮೈಯನ್ನು ಕೊರೆದು, ಒಳಗಿರುವ ಅವಶೇಷಗಳನ್ನು ನಮ್ಮ ಗಮನಕ್ಕೆ ತರುತ್ತದೆ. ಇಲ್ಲವೇ ಇನ್ನಾವ ರೀತಿಯಿಂದಲಾದರೂ ದಿಬ್ಬ ನಾಶವಾದಾಗ, ಅದರ ಒಳಗಿನ ಅವಶೇಷಗಳು, ಮಣ್ಣಿನ ಮಡಕೆಯ ಚೂರುಗಳು ಸುತ್ತಮುತ್ತಲೂ ಬಿದ್ದಿರುತ್ತವೆ. ಇವುಗಳಿಂದ ನಿವೇಶನವನ್ನು ಗುರುತಿಸಬಹುದು. ಇತ್ತೀಚೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಿವೇಶನಗಳನ್ನು ಗುರುತಿಸಲು ವೈಜ್ಞಾನಿಕ ಉಪಕರಣಗಳನ್ನು ಬಳಸಲಾಗುತ್ತಿದೆ. ಚೂಪಾದ ಕಬ್ಬಿಣದ ಆಯುಧಗಳನ್ನು ಭೂಮಿಯೊಳಕ್ಕೆ ಚುಚ್ಚಿ ಅದರಿಂದ ಭೂಮಿಯೊಳಗಿರುವ ಗೋಡೆಗಳು, ಮನೆಗಳು, ಕಲ್ಲಿನ ಕಟ್ಟಡಗಳು ಮುಂತಾದವನ್ನು ಗುರುತಿಸಬಹುದು. ಕಲ್ಲಿನಿಂದ ಆವೃತವಾದ ಕಡೆಗಳಲ್ಲಿ ಮೇಲ್ಭಾಗದಲ್ಲಿ ಸುತ್ತಿಗೆಯಿಂದ ಕುಟ್ಟುವುದರಿಂದ, ಅವಶೇಷಗಳಿರುವ ಮತ್ತು ಇಲ್ಲದೇ ಇರುವ ಸ್ಥಳಗಳಲ್ಲಿ ಭಿನ್ನ ಶಬ್ದಗಳು ಬರುತ್ತವೆ. ಲೋಹದ ಆಯುಧ, ಉಪಕರಣ, ನಾಣ್ಯ ಮುಂತಾದುವು ಇರುವ ಸ್ಥಳಗಳನ್ನು ವಿದ್ಯುತ್ ಸಾಧನಗಳಿಂದ ಗುರುತಿಸಬಹುದು. ಚಾರಿತ್ರಿಕ ಗ್ರಂಥಗಳಲ್ಲಿ ದೊರಕುವ ವರ್ಣನೆಗಳಿಂದಲೂ ಪುರಾತನ ನಿವೇಶನಗಳನ್ನು ಪತ್ತೆ ಹಚ್ಚಬಹುದು. ಟ್ರಾಯ್, ಮೈಸಿನಿ, ಬ್ಯಾಬಿಲೋನ್ ಮುಂತಾದವು ಪ್ರಾಚೀನಗ್ರಂಥಗಳಲ್ಲಿ ದೊರಕಿರುವ ಮಾಹಿತಿಗಳಿಂದ ಪತ್ತೆಹಚ್ಚಲಾದವು. ಇದೇ ರೀತಿ ಭಾರತದಲ್ಲಿ ರಾಮಾಯಣ, ಮಹಾಭಾರತ ಮತ್ತು ಬೌದ್ಧ ಸಾಹಿತ್ಯ ಗ್ರಂಥಗಳಿಂದ ಅನೇಕ ಪುರಾತನ ನಿವೇಶನಗಳನ್ನು ಕನಿಂಗ್ ಹ್ಯಾಮ್ ಗುರುತಿಸಿದ್ದಾನೆ. ಇತ್ತೀಚೆಗೆ ಬಳಕೆಗೆ ಬಂದಿರುವ ಆಕಾಶಛಾಯಾ ಚಿತ್ರಗ್ರಹಣ ಪುರಾತನ ನಿವೇಶನಗಳನ್ನು ಗುರುತಿಸಿವುದರಲ್ಲಿ ಬಹು ಸಹಕಾರಿಯಾಗಿದೆ. ಸಮತಲದಿಂದ ಕಾಣದೆ ಇರುವ ಮೇಲ್ಮೈಲಕ್ಷಣ ಗಳು ಆಕಾಶದಿಂದ ಬಹು ಚೆನ್ನಾಗಿ ಕಾಣುವುದರಿಂದ, ಈ ಪದ್ಧತಿ ಅನುಕೂಲವಾಗಿದೆ. ಆಕಸ್ಮಿಕವಾಗಿ ಪ್ರಾಚೀನ ನಿವೇಶನಗಳು ಬೆಳಕಿಗೆ ಬರುತ್ತಿರುತ್ತವೆ. ಅಯಸ್ಕಾಂತದ ಆಕರ್ಷಣೆಯ ತತ್ತ್ವದ ಆಧಾರದ ಮೇಲೆ ರೂಪಿತವಾಗಿರುವ ಪ್ರೋಟಾನ್ ಮ್ಯಾಗ್ನೆಟೋಮೀಟರ್ ಯಂತ್ರದ ಸಹಾಯದಿಂದ ಭೂಮಿಯೊಳಗೆ ಹುದುಗಿರುವ ಕಟ್ಟಡ ಮುಂತಾದ ಯಂತ್ರದ ಸಹಾಯದಿಂದ ಘನವಸ್ತುಗಳ ಇರುವಿಕೆಯನ್ನು ಗುರುತಿಸಿ ಪುರಾತನ ನೆಲೆಗಳನ್ನು ಶೋಧಿಸಬಹುದು. ಲೋಹಗಳಿಗಾಗಿ ಗಣಿಯನ್ನು ತೋಡುವಾಗ, ರೈಲು ಹಳಿಯನ್ನು ಹಾಕಲು ಅಗೆಯುತ್ತಿರುವಾಗ, ಭೂಮಿಯನ್ನು ವ್ಯವಸಾಯಕ್ಕೋಸ್ಕರ ಅಗೆಯುವಾಗ, ಇಲ್ಲವೆ ಕಟ್ಟಡಗಳನ್ನು ಕಟ್ಟಲು ಭೂಮಿಯನ್ನು ಅಗೆಯುವಾಗ ಅವಶೇಷಗಳು ಬೆಳಕಿಗೆ ಬಂದ ಸಂದರ್ಭಗಳು ಬೇಕಾದಷ್ಟಿವೆ. ಇಷ್ಟಾದರೂ ಅವಶೇಷಗಳನ್ನು ಗುರುತಿಸಲು ಮೂರನೆಯ ಕಣ್ಣೊಂದು ಬಹಳ ಆವಶ್ಯಕವಾದದ್ದೆಂದು ಎಲ್ಲ ಪುರಾತತ್ತ್ವ ಶಾಸ್ತ್ರಜ್ಞರೂ ಒಪ್ಪಿಕೊಂಡಿದ್ದಾರೆ. ಸಮರ್ಪಕವಾದ ಮತ್ತು ತೀಕ್ಷ್ಣವಾದ ಅವಲೋಕನ ಅಥವಾ ಸಮೀಕ್ಷಣ ಶಕ್ತಿ ಅತ್ಯವಶ್ಯಕವೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಸಲಕರಣೆಗಳು
[ಬದಲಾಯಿಸಿ]ಉತ್ಖನನಕ್ಕೆ ಬೇಕಾದ ಸಲಕರಣೆಗಳಿಗೆ ಗಮನ ಕೊಡಬೇಕಾದದ್ದು ಅತ್ಯಾವಶ್ಯಕ. ವೀಲರ್ ಹೇಳುವಂತೆ ಸಮರ್ಪಕವಾದ ಸಲಕರಣೆಗಳಿಲ್ಲದೆ ಉತ್ಖನನವನ್ನು ಪ್ರಾರಂಭಿಸುವುದು ಬೇಜವಾಬ್ದಾರಿಯ ಕೆಲಸ. ಮೋಜಣಿ ಕೆಲಸದಲ್ಲಿ ಉಪಯೋಗಿಸಬೇಕಾದ ಅಂತರಕೋನ ಮಾಪಕ (ಥಿಯೋಡೊಲೈಟ್), ಪ್ಲೇನ್ ಟೇಬಲ್, ಅಳೆಯುವ ಪಟ್ಟಿಗಳು, ಪ್ರಿಸ್ಮ್ಯಾಟಿಕ್ ಕಂಪಾಸ್, ತೂಗು ಗುಂಡು, ಮಟ್ಟಗೋಲು, ಕೋನಮಾಪಕ ಮುಂತಾದವು ಅತ್ಯಾವಶ್ಯಕವಾಗಿರುವ ಸಲಕರಣೆಗಳು. ಅಗೆತದಲ್ಲಿ ಬಳಸಲು ಪಿಕಾಸಿ, ಗುದ್ದಲಿ, ಸಲಿಕೆ, ಚಾಕು, ಹಾರೆ, ಮಂಕರಿ, ಮೊರ, ವಿವಿಧ ರೀತಿಯ ಕುಚ್ಚುಮೊಟ್ಟೆ, ಎರಡು ಅಥವಾ ಮೂರು ಚಕ್ರಗಳ ನೂಕುವ ಗಾಡಿಗಳು ಮುಂತಾದವು ಧಾರಾಳ ಪ್ರಮಾಣದಲ್ಲಿರಬೇಕು. ಇಷ್ಟೇ ಅಲ್ಲದೆ, ಅಗೆಯುವ ಸ್ಥಳಕ್ಕೆ ಪ್ರತ್ಯೇಕವಾಗಿ ಬೇಕಾದ ಇನ್ನಿತರ ಸಲಕರಣೆಗಳೂ ಬೇಕಾಗಬಹುದು.
ಉತ್ಖನನದ ವಿಧಾನಗಳು
[ಬದಲಾಯಿಸಿ]ಭೂಮಿಯಲ್ಲಿರುವ ಪದರಗಳ ಆಧಾರದ ಮೇಲೆ ಉತ್ಖನನ ನಡೆಸುವುದು ಅತ್ಯಂತ ಮುಖ್ಯವಾದ ವಿಧಾನ. ಪುರಾತತ್ತ್ವ ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ ಈ ವಿಧಾನ ತಿಳಿದಿರಲಿಲ್ಲ. ಆಗ ಬೆಂಚ್ ಲೆವೆಲ್ ಆಧಾರದ ಮೇಲೆ ಉತ್ಖನನಗಳು ನಡೆಯುತ್ತಿದ್ದುವು. ಮಾರ್ಷಲ್ ಮ್ಯಾಕೆ ಎಂಬ ಪುರಾತತ್ತ್ವಜ್ಞ ಸಹ ಈ ವಿಧಾನದಿಂದಲೇ ಭಾರತದಲ್ಲಿ ಉತ್ಖನನಗಳನ್ನು ನಡೆಸಿದ. ಈ ವಿಧಾನ ಅವೈಜ್ಞಾನಿಕವಾದದ್ದೆಂದೂ ಅನೇಕ ಲೋಪದೋಷಗಳಿಂದ ಕೂಡಿದ್ದೆಂದೂ ಪುರಾತತ್ತ್ವಜ್ಞರು ತೀರ್ಮಾನಿಸಿ ಕ್ರಮೇಣ ಯುರೋಪಿನಲ್ಲಿ ಬಳಕೆಯಲ್ಲಿದ್ದ ಪದರವಿನ್ಯಾಸ ವಿಧಾನವನ್ನು ಭಾರತದಲ್ಲೂ ಬಳಕೆಗೆ ತಂದರು. ಬೆಂಚ್ ಲೆವೆಲ್ ವಿಧಾನದಲ್ಲಿ ಸಮುದ್ರಮಟ್ಟವನ್ನು ಆಧಾರವಾಗಿಟ್ಟುಕೊಂಡು ಉತ್ಖನನವನ್ನು ನಡೆಸಲಾಗುತ್ತಿತ್ತು. ಉತ್ಖನನವನ್ನು ನಡೆಸಬೇಕಾದ ದಿಬ್ಬದಲ್ಲಿ ಯಾವುದಾದರೂ ಒಂದು ಮಟ್ಟವನ್ನು ನಿರ್ಧರಿಸಿಕೊಂಡು ಆ ಮಟ್ಟದ ಮೇಲಿಂದ ಮತ್ತೊಂದು ಮಟ್ಟದವರೆಗೆ ದೊರಕುವ ಅವಶೇಷಗಳನ್ನೆಲ್ಲ ಯಾವುದಾದರೂ ಒಂದು ಕಾಲಕ್ಕೆ ಸೇರಿಸುವುದು ಇದರ ಕ್ರಮ. ಪದರವಿನ್ಯಾಸ ವಿಧಾನವನ್ನು ಬಳಕೆಗೆ ತಂದದ್ದು ಭಾರತೀಯ ಪುರಾತತ್ತ್ವದಲ್ಲಿ ಅತ್ಯಂತ ಪ್ರಮುಖ ಘಟ್ಟ. ಪ್ರಾಚೀನಕಾಲದ ಒಂದು ನಗರ ಕಾಲಕ್ರಮೇಣ ಯಾವುದೋ ಕಾರಣದಿಂದಾಗಿ ನಾಶವಾದಾಗ ಆ ಕಾಲದ ಮನೆಗಳು, ಇತರ ಸಲಕರಣೆಗಳು, ಮಡಕೆಗಳು, ಪಾತ್ರಗಳು ಮೊದಲಾದುವೆಲ್ಲವೂ ಹಾಗೆಯೇ ಇದ್ದು ನೆಲಸಮವಾಗುತ್ತವೆ. ಇದಾದ ಅನಂತರ ಇದೇ ಸ್ಥಳದಲ್ಲಿ ಮತ್ತೊಂದು ಹೊಸ ನಗರ ಬೆಳೆಯುತ್ತದೆ. ಇದೂ ಇದೇ ರೀತಿ ನಾಶವಾದಾಗ ಈ ಕಾಲದ ವಸ್ತುಗಳು ಮೊದಲಿನ ಪದರದ ಮೇಲೆ ನಿಲ್ಲುತ್ತವೆ. ಇದೇ ರೀತಿ ಪ್ರತಿಯೊಂದು ಕಾಲಕ್ಕೂ ಸೇರಿದಂತೆ ಮಣ್ಣಿನ ಪದರಗಳು ಉಂಟಾಗಿ ಭೂಮಿಯ ಮೇಲೆ ಒಂದು ಸಣ್ಣ ದಿಬ್ಬ ಬೆಳೆಯುತ್ತದೆ. ಅಂದರೆ ಮೇಲ್ಗಡೆಯ ಪದರ ಇತ್ತೀಚಿನದಾಗಿಯೂ ಅದರ ಕೆಳಗಿನದು ಅದಕ್ಕಿಂತ ಹಿಂದನದಾಗಿಯೂ ಅದಕ್ಕೂ ಕೆಳಗಿನ ಪದರ ಇನ್ನೂ ಪ್ರಾಚೀನವಾಗಿಯೂ ಅತ್ಯಂತ ಕೆಳಗಿನ ಪದರ ಪ್ರಾಚೀನತಮವಾಗಿಯೂ ಇರುತ್ತವೆ. ಒಂದು ಕಾಲದಲ್ಲಿ ಕಟ್ಟಡಗಳನ್ನು ಬಹಳ ಶೀಘ್ರವಾಗಿ ಕಟ್ಟಿದ್ದರೆ ಅದರಿಂದ ಉಂಟಾದ ಪದರ ಹೆಚ್ಚು ದಪ್ಪವಾಗಿರುತ್ತದೆ. ಅಂದರೆ ಪದರದ ದಪ್ಪ ಕಾಲಸೂಚಕವಲ್ಲವೆಂದೂ ಅದು ಆ ಕಾಲದ ನಾಗರಿಕತೆಯ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆಯೆಂದೂ ಇದರಿಂದ ಹೇಳಬಹುದು. ಪದರಗಳು ಉಂಟಾಗುವಾಗ ಅನೇಕ ಆಂತರಿಕ ಬದಲಾವಣೆಗಳೂ ಆಗುವುದುಂಟು. ಅವುಗಳಲ್ಲಿ ಹಳ್ಳಗಳು ಅಥವಾ ಕುಳಿಗಳು ಬಹು ಮುಖ್ಯ. ಒಂದು ಪದರದಲ್ಲಿ ಮರದ ಅಗಲವಾದ ಬೇರಿದ್ದರೆ ಕಾಲಕ್ರಮದಲ್ಲಿ ಆ ಬೇರು ನಾಶವಾಗಿ ಅಲ್ಲಿ ಪೊಟರೆಯಾಗುತ್ತದೆ. ಕಾರಣಾಂತರಗಳಿಂದ ಆ ಕಾಲದ ಜನರೂ ನಿವೇಶನದಲ್ಲಿ ಹಳ್ಳಗಳನ್ನು ತೋಡಿದ್ದಿರಬಹುದು. ಉದಾಹರಣೆಗೆ, ಕಸದ ತೊಟ್ಟಿ, ಗಿಡನೆಡಲು ಮಾಡಿದ ಹಳ್ಳ. ಕಾಲಕ್ರಮೇಣ ಅಂಥ ಹಳ್ಳಗಳಲ್ಲಿ ಅನಂತರ ಕಾಲದ ಅವಶೇಷಗಳು ಬೀಳುವುದರಿಂದ ಅವು ತಮ್ಮ ಕಾಲದ್ದಕ್ಕಿಂತ ಹೆಚ್ಚಿನ ಆಳದಲ್ಲಿ ಹೂತು ಹೋಗುತ್ತವೆ. ಈ ಹಳ್ಳ ಪ್ರಾರಂಭವಾಗುವ ಪದರದ ಅವಶೇಷಗಳು, ಆ ಹಳ್ಳದೊಳಕ್ಕೆ ಬೀಳುತ್ತವೆ. ಹಳ್ಳದ ಕೆಳಭಾಗ ಇತರ ಪದರಗಳಿಗಿಂತ ಕೆಳಗಿದ್ದರೂ ಅಲ್ಲಿ ಆಮೇಲಿನ ಮಟ್ಟದ ಅವಶೇಷಗಳು ದೊರಕುವುದಿಲ್ಲ. ಏಕೆಂದರೆ ಅಲ್ಲಿ ದೊರಕುವ ಅವಶೇಷಗಳು ಮೇಲಿನ ಪದರಕ್ಕೆ ಸೇರಿದವು. ಆದ್ದರಿಂದ ಪದರಗಳನ್ನು ಮತ್ತು ಹಳ್ಳಗಳನ್ನು ಅವುಗಳ ಆಕಾರರೇಖೆಯಿಂದ ಗುರುತಿಸಿ ಬೇರ್ಪಡಿಸಬೇಕು. ಸಾಮಾನ್ಯವಾಗಿ ಒಂದು ಪದರ ಮತ್ತೊಂದು ಪದರದಿಂದ ಭಿನ್ನವಾಗಿರುವುದರಿಂದ, ಅಲ್ಲಿರುವ ಮಣ್ಣಿನ ಗುಣ, ಬಣ್ಣ, ಅವಶೇಷ ಮುಂತಾದವುಗಳಿಗನುಗುಣವಾಗಿ ಪದರಗಳನ್ನು ಬೇರ್ಪಡಿಸಬಹುದು. ಹಾಗೆ ಬೇರ್ಪಡಿಸಿದ ಪ್ರತಿಯೊಂದು ಪದರವೂ ಭಿನ್ನಸಂಸ್ಕೃತಿಗೆ ಸೇರಿದ್ದಾಗಿರುತ್ತದೆ. ಈ ಕೆಳಗಿನ ಚಿತ್ರಗಳಿಂದ ಬೆಂಚ್ ಲೆವೆಲ್ ಮತ್ತು ಪದರವಿನ್ಯಾಸ ವಿಧಾನಗಳಿಗಿರುವ ವ್ಯತ್ತಾಸಗಳು ವ್ಯಕ್ತವಾಗುತ್ತದೆ. ಬೆಂಚ್ ಲೆವೆಲ್ ವಿಧಾನವನ್ನು ತೋರಿಸುವ ಚಿತ್ರದಲ್ಲಿ ಒಂದೇ ಮಟ್ಟದಲ್ಲಿ ಪ್ರ.ಶ.ಪು. 3000 ವರ್ಷಗಳ ಹರಪ್ಪ ಸಂಸ್ಕೃತಿಯ ಮಡಕೆಯೂ ಅಕ್ಬರನ ನಾಣ್ಯವೂ 20ನೆಯ ಶತಮಾನದ ನಾಣ್ಯವೂ ದೊರಕಿರುವುದು ತಿಳಿದುಬರುತ್ತದೆ. ಇದು ಅಸಂಭವವೆನಿಸುತ್ತದೆ. ಎರಡನೆಯ ಚಿತ್ರವನ್ನು ಗಮನಿಸಿದರೆ ಒಂದನೆಯ ಪದರದಲ್ಲಿ ಒಂದು ಹಳ್ಳವಿದ್ದುದರಿಂದ 20ನೆಯ ಶತಮಾನದ ನಾಣ್ಯವೊಂದು ಜಾರಿ 6ನೆಯ ಪದರಕ್ಕೆ ಅಂದರೆ ಹರಪ್ಪ ಸಂಸ್ಕೃತಿಯ ಪದರಕ್ಕೆ ಸೇರಿತೆಂದು ಗೊತ್ತಾಗುತ್ತದೆ. ಅದೇ ರೀತಿ 3ನೆಯ ಪದರದಲ್ಲಿ ಇನ್ನೊಂದು ಹಳ್ಳವಿದ್ದದ್ದರಿಂದ ಅಕ್ಬರನ ಕಾಲದ ನಾಣ್ಯವೊಂದು 6ನೆಯ ಪದರಕ್ಕೆ ಸೇರಿತೆಂದು ಗೊತ್ತಾಗುತ್ತದೆ. ಆದ್ದರಿಂದ ಈ ಮೂರು ಅವಶೇಷಗಳೂ ಒಂದೇ ಪದರದಲ್ಲಿ ಮತ್ತು ಒಂದೇ ಮಟ್ಟದಲ್ಲಿ ದೊರಕಿದರೂ ಅವು ಬೇರೆ ಬೇರೆ ಸಂಸ್ಕೃತಿಗಳಿಗೆ ಸೇರಿದವು ಎಂದೂ ಪದರವಿನ್ಯಾಸ ವಿಧಾನ ಎಷ್ಟೊಂದು ಉಪಯುಕ್ತವಾಗಿದೆಯೆಂದೂ ತಿಳಿಯಬಹುದು. ಉತ್ಖನನಗಳನ್ನು ಸಾಮಾನ್ಯವಾಗಿ ಎರಡು ರೀತಿಯಲ್ಲಿ ಮಾಡಬಹುದು. ಲಂಬಮಾನ ಉತ್ಖನನ ಮತ್ತು ಸಮತಲ ಉತ್ಖನನ. ಅವಶೇಷರಹಿತ ಪದರದಿಂದ ಅಥವಾ ಭೂಮಿಯ ಬರಡು ಪದರದಿಂದ ಹಿಡಿದು, ದಿಬ್ಬದ ಈಗಿನ ಮೇಲ್ಮೈವರೆಗೆ ಇರುವ ಪದರಗಳನ್ನು ಉದ್ದುದ್ದವಾಗಿ ಬೇರ್ಪಡಿಸುವುದೇ ಲಂಬಮಾನ ಉತ್ಖನನ. ಒಂದು ನಿವೇಶನದ ಸಾಂಸ್ಕೃತಿಕ ಪರಿಚಯವನ್ನು ಮಾಡಿಕೊಳ್ಳಬೇಕಾದರೆ ಲಂಬಮಾನ ಉತ್ಖನನವನ್ನು ನಡೆಸಬೇಕು. ಇದರಿಂದ ಆ ಸ್ಥಳ ಯಾವ ಕಾಲಗಳಲ್ಲಿ ಯಾವ ಯಾವ ರೀತಿಯ ಸಂಸ್ಕೃತಿ ಹೊಂದಿತ್ತೆಂಬುದರ ಪರಿಚಯವಾಗುತ್ತದೆ: ಅದು ಒಂದು ಸಾಂಸ್ಕೃತಿಕ ನಮೂನೆಯನ್ನು ಒದಗಿಸುತ್ತದೆ. ಅದರಲ್ಲೂ ನದೀ ತೀರದಲ್ಲಿ ನಮಗೆ ಬೇಕಾದ ಸಾಂಸ್ಕೃತಿಕ ನಮೂನೆಯನ್ನು ತಿಳಿಯಲು ಲಂಬಮಾನ ಉತ್ಖನನ ಉತ್ತಮವಾದ ಮಾರ್ಗ. ಉತ್ಖನನ ನಡೆಸಬೇಕಾದ ನಿವೇಶನ ಬಹಳ ವಿಸ್ತಾರವಾಗಿದ್ದು, ನಿವೇಶನದಲ್ಲಿ ಅನೇಕಾನೇಕ ದೇವಾಲಯಗಳು, ಗೋಡೆಗಳು, ಕಟ್ಟಡಗಳು ಮುಂತಾದುವಿದ್ದರೆ, ಆಗ ಸಮತಲ ಉತ್ಖನನವನ್ನು ಮಾಡಬೇಕು. ಅಡ್ಡಕೊಯ್ತದಿಂದ ಈ ಕಟ್ಟಡಗಳು ಪೂರ್ಣವಾಗಿ ನಮಗೆ ಗೋಚರವಾಗುವುದಿಲ್ಲ. ಅವುಗಳ ಪೂರ್ಣಸ್ವರೂಪವನ್ನು ತಿಳಿಯಬೇಕಾದರೆ, ಅವನ್ನು ಭೂಮಿಯಲ್ಲಿದ್ದ ಹಾಗೆಯೇ ಮಣ್ಣಿನಿಂದ ಬೇರ್ಪಡಿಸಬೇಕು. ಇಂಥ ಸಮತಲ ಉತ್ಖನನಗಳನ್ನು ಪ್ರಾರಂಭಿಸುವುದಕ್ಕೆ ಮೊದಲು, ಅವಶೇಷಗಳ ಸ್ವರೂಪ, ಪದರಗಳ ಸ್ವರೂಪ, ಅವಶೇಷಯುತ ಪದರಗಳ ಆಳ ಮುಂತಾದವನ್ನು ತಿಳಿಯಲು ಲಂಬಮಾನ ಉತ್ಖನನ ಮಾಡಬೇಕಾಗುತ್ತದೆ. ಸಮತಲ ಉತ್ಖನನವನ್ನು ಸಾಮಾನ್ಯವಾಗಿ ತೋಡು ಅಥವಾ ಕಂದಕ (ಟ್ರೆಂಚ್) ವಿಧಾನದಿಂದ ಮಾಡುವುದೇ ಹೆಚ್ಚು ಸುಲಭವೂ ವೈಜ್ಞಾನಿಕವೂ ಆಗಿದೆ. ಉತ್ಖನನವನ್ನು ನಡೆಸಬೇಕಾದ ನಿವೇಶನದಲ್ಲಿ ಪ್ರಾಯೋಗಿಕ ಲಂಬಮಾನ ಉತ್ಖನನದಿಂದ ಪದರಗಳ ವಿನ್ಯಾಸವನ್ನು ತಿಳಿದ ಅನಂತರ, ಎಲ್ಲಿ ಅವಶೇಷಗಳು ಸಿಕ್ಕುವ ಸೂಚನೆಗಳು ಇರುತ್ತವೆಯೊ ಅಲ್ಲಿ ಸಾಮಾನ್ಯವಾಗಿ 1.8 x 1.2ಮೀ ಅಳತೆಯ ತೋಡುಗಳನ್ನು ಅಗೆಯಬೇಕು. ಅದಕ್ಕೆ ಮುಂಚೆ ನೆಲದ ಮೇಲೆ ಅಳತೆಯನ್ನು ಗುರುತಿಸಿಕೊಂಡು, ಅನಂತರ ಕಂದಕದ ಎರಡು ಕಡೆಗಳಲ್ಲೂ ಗುಳಿಯ ಹೊರ ಅಳತೆಗಿಂತ ಸ್ವಲ್ಪ ದೂರದಲ್ಲಿ ಗೂಟಗಳನ್ನು ಸಮಾನಾಂತರದಲ್ಲಿ ಭೂಮಿಯೊಳಗೆ ನೆಡಬೇಕು. ಈ ಕಂದಕದಲ್ಲಿ ಅಗೆತ ಮುಗಿದ ಅನಂತರ ಅದರ ಪಕ್ಕದಲ್ಲಿ ಇದೇ ರೀತಿ ಗುಳಿಯನ್ನು ತೋಡಿ ಉತ್ಖನನವನ್ನು ಮುಂದುವರಿಸಿಕೊಂಡು ಹೋಗಬೇಕು. ನಿವೇಶನದ ಎಲ್ಲ ಕಡೆಯಲ್ಲೂ ಅಲ್ಲಲ್ಲಿ ಈ ರೀತಿ ತೋಡುಗಳನ್ನು ತೆಗೆಯುವುದರಿಂದ ಎಲ್ಲಿಯಾದರೂ ಅವಶೇಷಗಳಲ್ಲಿ ಬದಲಾವಣೆಯಿದ್ದರೆ ಅದು ಒಂದಲ್ಲ ಒಂದು ಗುಳಿಯಿಂದ ಹೊರಬರುತ್ತದೆ. ಸಾಮಾನ್ಯವಾಗಿ ಒಂದೊಂದು ತೋಡಿಗೆ ಒಬ್ಬೊಬ್ಬ ಉತ್ಖನನ ಸಹಾಯಕಾಧಿಕಾರಿಯಿರಬೇಕು. ಪ್ರತಿಯೊಂದು ತೋಡನ್ನು ಗುರುತಿಸುವುದಕ್ಕೂ ಅದಕ್ಕೆ ಒಂದು ಸಂಖ್ಯೆ ಕೊಡಬೇಕು. ಪ್ರತಿಯೊಂದು ತೋಡಿನಲ್ಲಿ ದೊರಕುವ ಅವಶೇಷಗಳನ್ನು ಪ್ರತ್ಯೇಕವಾಗಿ ಪಟ್ಟಿಮಾಡಬೇಕು. ಉತ್ಖನನದಲ್ಲಿ ಅಗೆಯುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಅವಶೇಷಗಳ ಕರಾರುವಾಕ್ಕು ದಾಖಲೆ. ಒಂದು ಅವಶೇಷವನ್ನು ಮಣ್ಣಿನ ಪದರದಿಂದ ಹೊರತೆಗೆದ ಮೇಲೆ ಆ ದಾಖಲೆ ಎಲ್ಲಿ, ಹೇಗೆ, ಎಷ್ಟು ಆಳದಲ್ಲಿತ್ತು ಎಂಬುದು ಮರೆತುಹೋಗುತ್ತದೆ. ವೈಜ್ಞಾನಿಕವಾಗಿ ತ್ರಿವಿ ಮಿತೀಯ (ಗಾತ್ರ) ದಾಖಲೆಗಳು ಈಗ ಹೆಚ್ಚಾಗಿ ಬಳಕೆಯಲ್ಲಿವೆ. ಒಂದು ಅವಶೇಷ ಖಚಿತವಾಗಿ ಎಲ್ಲಿ ದೊರೆಯಿತು ಎಂಬುದನ್ನು ತಿಳಿಯಲು ಇದು ಅತ್ಯಂತ ಉಪಯುಕ್ತವಾಗುತ್ತದೆ. ಕಂದಕಗಳ ಎರಡು ಭಾಗಗಳಲ್ಲಿ ಗೂಟಗಳನ್ನು ನೆಟ್ಟಿರಬೇಕೆಂದು ಆಗಲೇ ಸೂಚಿಸಿದ್ದಾಗಿದೆ. ಒಂದು ಅವಶೇಷ ದೊರಕಿದ ಸ್ಥಳದಿಂದ, ಯಾವುದಾದರೂ ಒಂದು ಗೂಟಕ್ಕೆ ಇರುವ ಉದ್ದ ಮತ್ತು ಅಗಲಗಳೆಷ್ಟು ಎಂಬುದನ್ನು ಅಳೆಯಬೇಕು. ಅನಂತರ ಆ ತೋಡಿನ ಒಳಕ್ಕೆ ತೂಗುಗುಂಡನ್ನು ಬಿಟ್ಟು, ಅದರ ಮೇಲ್ಭಾಗದಿಂದ ವಸ್ತು ಎಷ್ಟು ಆಳದಲ್ಲಿದೆಯೆಂಬುದನ್ನು ನೋಡಬೇಕು. ಇದಕ್ಕೆ ಕೋನಮಾಪಕವನ್ನು ಬಳಸಬೇಕು. ಇದರಿಂದ ಉದ್ದ ಅಗಲ ಮತ್ತು ಆಳ ಈ ಮೂರು ಅಳತೆಗಳೂ ದೊರಕುತ್ತವೆ. ದಾಖಲೆಗಳಲ್ಲಿ ಪ್ರತಿಯೊಂದು ವಸ್ತುವಿಗೂ ಒಂದು ಕ್ರಮ, ತ್ರಿಗಾತ್ರ ಅಳತೆಗಳು, ಮಣ್ಣಿನ ಪದರ, ಅನಂತರ ವಸ್ತುವಿನ ವರ್ಣನೆ, ಕೊನೆಯದಾಗಿ ನಕ್ಷೆಗಳು - ಇವಿಷ್ಟನ್ನೂ ಬರೆದಿಡಬೇಕು.
ದಾಖಲೀಕರಣ
[ಬದಲಾಯಿಸಿ]ಉತ್ಖನನಗಳಲ್ಲಿ ಸಾಮಾನ್ಯವಾಗಿ ಮಡಕೆಯ ಚೂರುಗಳು ಹೇರಳವಾಗಿ ದೊರೆಯುತ್ತವೆ. ಇವುಗಳನ್ನು ಅವುಗಳ ಪದರಕ್ರಮದಂತೆ ಸರಿಯಾಗಿ ಜೋಡಿಸಿ, ಚೆನ್ನಾಗಿ ತೊಳೆದು, ಅವುಗಳ ಮೇಲೆ ಗುರುತು ಮಾಡಿ ಅನಂತರ ಚೀಲಗಳಲ್ಲಿ ಹಾಕಿಡಬೇಕು. ನಾಣ್ಯ, ಮೂಳೆ ಮುಂತಾದ ಬಹಳ ಸೂಕ್ಷ್ಮವಸ್ತುಗಳು ದೊರಕಿದ ಕೂಡಲೆ ನಾಣ್ಯಗಳನ್ನು ಉತ್ಖನನ ಸ್ಥಳದ ಪ್ರಯೋಗಶಾಲೆಯಲ್ಲಿ ರಾಸಾಯನಿಕ ವಸ್ತುಗಳಿಂದ ಶುಚಿಮಾಡಿ ಅನಂತರ ಕಾಗದದ ಚೀಲಗಳಲ್ಲಿ ಹಾಕಿ, ಅವು ದೊರಕಿದ ಸ್ಥಳ ಮುಂತಾದ ವಿವರಗಳನ್ನು ಬರೆಯಬೇಕು. ಬಹು ಪ್ರಾಚೀನಕಾಲದ ಮೂಳೆಗಳು ಬಹು ಸೂಕ್ಷ್ಮ: ಗಾಳಿ ಸೋಕಿದರೆ ಪುಡಿಯಾಗುವ ಸಂಭವವುಂಟು. ಅಂಥ ಮೂಳೆಗಳಿಗೆ ಮೇಣದ ದ್ರವ ಹಚ್ಚಿ ಗಾಳಿ ಸೋಕದಂತೆ ಮಾಡಿ, ಅನಂತರ ಭದ್ರವಾಗಿಟ್ಟು. ರಾಸಾಯನಿಕವಿಧಾನದಿಂದ ಶುಚಿಮಾಡಬೇಕು. ಇದೇ ರೀತಿ ಪ್ರತಿಯೊಂದು ವಸ್ತುವನ್ನೂ ಬಹು ಜಾಗ್ರತೆಯಿಂದ ಹೊರತೆಗೆಯಬೇಕು. ಉತ್ಖನನದಲ್ಲಿ ಛಾಯಾಗ್ರಹಣದ ಪಾತ್ರ ಅತ್ಯಂತ ಮಹತ್ತ್ವದ್ದು. ಸಾಧ್ಯವಾದಷ್ಟು ಧಾರಾಳವಾಗಿ ಛಾಯಾಚಿತ್ರಗಳನ್ನು ತೆಗೆಯಬೇಕಾದುದು ಬಹು ಮುಖ್ಯ. ಮೊದಲೇ ಸೂಚಿಸಿದಂತೆ ಉತ್ಖನನ ಭೂಮಿಯೊಳಗಿರುವ ಪದರವನ್ನು ಅಸ್ತವ್ಯಸ್ತಗೊಳಿಸುತ್ತದೆ. ಉತ್ಖನನಪೂರ್ವ ಪರಿಸ್ಥಿತಿಯನ್ನು ಮತ್ತೆ ನೋಡಲು ಅವಕಾಶವೇ ಇರುವುದಿಲ್ಲ. ವಸ್ತುಗಳು ಮಣ್ಣಿನ ಪದರಗಳಲ್ಲಿ ಅಂಟಿಕೊಂಡಂತೆ ಚಿತ್ರಗಳನ್ನು ತೆಗೆಯುವುದರಿಂದ ಅನೇಕ ವಿಷಯಗಳು ಹೊರಬೀಳುತ್ತವೆ. ಪದರವಿನ್ಯಾಸಗಳು, ಕಂದಕಗಳು ಮುಂತಾದವನ್ನು ವಿವರವಾಗಿ ಅಧ್ಯಯನಮಾಡಲು ಛಾಯಾಚಿತ್ರಗಳು ಸಹಾಯಕವಾಗುತ್ತವೆ. ಅದರಲ್ಲೂ ಸ್ಮಶಾನದಲ್ಲಿ ಹೆಣಗಳನ್ನು ಹೂಳುವ ದಿಕ್ಕು, ಸುತ್ತಮುತ್ತಲೂ ಇಡುವ ಪದಾರ್ಥಗಳ ದಿಕ್ಕು ಮುಂತಾದವನ್ನು ಅಧ್ಯಯನ ಮಾಡಲು ಛಾಯಾಚಿತ್ರಗಳು ಬಹು ಆವಶ್ಯಕವಾದುವು. ಪುರಾತತ್ತ್ವ ಛಾಯಾಗ್ರಹಣ ಒಂದು ವಿಶಿಷ್ಟ ಕಲೆ. ಇದು ಕೇವಲ ಛಾಯಾಗ್ರಹಣ ಮಾತ್ರವಲ್ಲ. ಆದ್ದರಿಂದ ಅವಶೇಷಗಳು, ಪದರಗಳು ಮುಂತಾದುವು ಸಮರ್ಪಕವಾಗಿ ದಾಖಲೆಯಾಗಲು ಬೇಕಾದ ಎಲ್ಲ ಗುಣಗಳಿಂದಲೂ ಕೂಡಿರುವ ಛಾಯಾಚಿತ್ರಗಳು ಪುರಾತತ್ತ್ವಕ್ಕೆ ಆವಶ್ಯಕ. ಅಳತೆಕೋಲಿಲ್ಲದೆ ಛಾಯಾಚಿತ್ರವನ್ನು ತೆಗೆಯಲೇಬಾರದು ಎಂಬ ನಿಯಮವನ್ನು ಗಮನಿಸಬೇಕು. ಒಂದು ವಸ್ತು ಎಷ್ಟು ದೊಡ್ಡದಾಗಿದೆಯೆಂಬುದು ಆ ವಸ್ತುವಿನ ಪಕ್ಕದಲ್ಲಿ ಅಳತೆಕೋಲನ್ನು ಇಟ್ಟು ಛಾಯಾಚಿತ್ರ ತೆಗೆಯುವುದರಿಂದ ಗೊತ್ತಾಗುತ್ತದೆ. ಛಾಯಾಚಿತ್ರಕ್ಕೆ ಪ್ರತ್ಯೇಕವಾಗಿ ಒಂದು ದಾಖಲೆಯನ್ನು ಬರೆದಿಡಬೇಕು. ಅಲ್ಲಿ ಚಿತ್ರ ತೆಗೆದ ವಸ್ತುವಿನ ಪ್ರತಿಯೊಂದು ವಿಚಾರವನ್ನೂ ದಿಕ್ಕುಗಳನ್ನೂ ಬರೆದಿಡಬೇಕು. ಇತ್ತೀಚೆಗೆ ಉತ್ಖನನಗಳಲ್ಲಿ ಛಾಯಾಚಿತ್ರಗ್ರಹಣದ ಉಪಯೋಗ ಗಳು ವಿಶೇಷವಾಗುತ್ತಿವೆ. ಉತ್ಖನನದ ವರದಿಯನ್ನು ಪ್ರಕಾಶಪಡಿಸಿದ ದಿನವೇ ಉತ್ಖನನದ ಕಾಲ ಎಂದು ಶ್ರೇಷ್ಠ ಪುರಾತತ್ತ್ವಜ್ಞ ಪಿಟ್ ರಿವರ್ಸ್ ಹೇಳಿದ್ದಾನೆ. ವರದಿಯ ಪ್ರಕಾಶನ ಎಷ್ಟು ಮುಖ್ಯವಾದ ದ್ದೆಂಬುದನ್ನು ಇದರಿಂದ ತಿಳಿದುಕೊಳ್ಳಬಹುದು. ಉತ್ಖನನ ಮಾಡಿದವರಿಗೆ ಮಾತ್ರ ಅದರ ವಿವರ ತಿಳಿಯುತ್ತದೆ. ಮಿಕ್ಕ ಚರಿತ್ರಕಾರರಿಗೆ ಅದರ ವಿಚಾರವೇ ತಿಳಿದಿರುವುದಿಲ್ಲ. ಅಧಿಕೃತ ವರದಿಯಿಂದ ಮಾತ್ರ ಅದನ್ನು ತಿಳಿಯಲು ಇತರರಿಗೆ ಸಾಧ್ಯ. ಉತ್ಖನನದ ಮುಖ್ಯ ಉದ್ದೇಶ ಮಾನವನ ಚರಿತ್ರೆಯನ್ನು ತಿಳಿಯುವುದಾದ್ದರಿಂದ ಉತ್ಖನನವನ್ನು ಮಾಡಿ ಅದರ ವರದಿಯನ್ನು ಪ್ರಕಾಶಪಡಿಸದೆ ಇದ್ದರೆ ಚರಿತ್ರೆಗೆ ನಷ್ಟ ಮಾತ್ರವಲ್ಲ, ಅಪಚಾರ ಮಾಡಿದಂತೆಯೂ ಆಗುತ್ತದೆ. ಆದ್ದರಿಂದ ಪ್ರಕಾಶನದ ವ್ಯವಸ್ಥೆಯನ್ನು ಮೊದಲು ಕೈಗೊಂಡು, ಅನಂತರ ಉತ್ಖನನ ನಡೆಸಬೇಕೆಂದು ವೀಲರ್ ಹೇಳಿದ್ದಾನೆ. ವರದಿಯ ಪ್ರಕಟಣೆಯಲ್ಲಿ ಅವಶೇಷಗಳೂ ಇತರ ವಸ್ತುಗಳ, ದಾಖಲೆಗಳ ಪೂರ್ಣವಿವರಗಳೂ ಇರಬೇಕು. ಚಿತ್ರಗಳೂ ರೇಖಾಚಿತ್ರಗಳೂ ವಿಶೇಷವಾಗಿರಬೇಕು. ಒಟ್ಟಿನಲ್ಲಿ ಉತ್ಖನನದಿಂದ ಬಯಲಾದ ಸಂಗತಿಗಳಿಗೂ ಚರಿತ್ರಕಾರನಿಗೂ ಅಧಿಕೃತ ವರದಿಯೇ ಸಂಪರ್ಕ ಮಾಧ್ಯಮವಾಗಿರುವುದರಿಂದ ಅದರ ರಚನೆಯಲ್ಲಿ ವಿಶೇಷ ಶ್ರದ್ಧೆಯನ್ನು ವಹಿಸಬೇಕು. ಉತ್ಖನನಗಳನ್ನು ಇದೇ ರೀತಿ ನಡೆಸಬೇಕೆಂಬ ಖಚಿತವಾದ ನಿರ್ಣಯಗಳನ್ನು ಮಾಡಲಾಗುವುದಿಲ್ಲ. ಏಕೆಂದರೆ ಅದು ಪರಿಸ್ಥಿತಿಗನುಗುಣವಾಗಿ ನಡೆಸಬೇಕಾದ ಕೆಲಸ. ಸ್ಮಶಾನದ ಉತ್ಖನನ ವಿಧಾನದಿಂದ ಕೋಟೆಯನ್ನು ಅಗೆಯಲಾಗುವುದಿಲ್ಲ. ಮರಳಿನಲ್ಲಿ ಅನುಸರಿಸಬೇಕಾದ ವಿಧಾನಗಳನ್ನು ಗಟ್ಟಿಮಣ್ಣಿನ ಪ್ರದೇಶದಲ್ಲಿ ಅನುಸರಿಸಲಾಗುವುದಿಲ್ಲ. ಪ್ರತಿಯೊಂದು ಸನ್ನಿವೇಶಕ್ಕೂ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಆದ್ದರಿಂದ ಉತ್ಖನನ ಮಾಡುವ ನಿರ್ದೇಶಕನ ಜವಾಬ್ದಾರಿ ಅತಿ ಹೆಚ್ಚಿನದು. ಈ ವಿಷಯದಲ್ಲಿ ಅವನ ಜ್ಞಾನದ ಜೊತೆಗೆ ಉತ್ಖನನದ ಅನುಭವ ಜ್ಞಾನವೂ ಬಹು ಮುಖ್ಯವಾದದ್ದು. ಇದನ್ನು ಎಷ್ಟು ಒತ್ತಿ ಹೇಳಿದರೂ ಸಾಲದು. ಇವೆರಡೂ ಕೂಡಿದಾಗ ಮಾತ್ರ ಉತ್ಖನನಗಳು ಚರಿತ್ರೆಯ ಸಾಧನಗಳಾಗುತ್ತವೆ. ಭಾರತದ ಅನೇಕ ಸ್ಥಳಗಳಲ್ಲಿ ಸರ್ಕಾರದ ಪುರಾತತ್ತ್ವ ಶಾಖೆ, ವಿವಿಧ ರಾಜ್ಯಗಳ ಪುರಾತತ್ತ್ವ ಇಲಾಖೆಗಳು ಮತ್ತು ವಿಶ್ವವಿದ್ಯಾನಿಲಯಗಳಿಂದ ಉತ್ಖನನಗಳು ನಡೆದಿವೆ. ಈ ವಿಶ್ವಕೋಶದಲ್ಲಿ ಆಯಾ ಖಂಡ ಮತ್ತು ದೇಶಗಳಿಗೆ ಸಂಬಂಧಪಟ್ಟ ಪುರಾತತ್ತ್ವ ವಿವರಗಳು ಆಯಾ ಶೀರ್ಷಿಕೆಗಳಲ್ಲಿ ಬಂದಿವೆ. ಇವಲ್ಲದೆ ಉತ್ಖನನಗಳಿಂದ ಪ್ರಸಿದ್ಧವೆನಿಸಿರುವ ಅರ್, ಅರಿಕಮೇಡು, ಹಸ್ತಿನಾಪುರ, ಚಂದ್ರವಳ್ಳಿ ಮೊದಲಾದ ಸ್ಥಳಗಳ ಬಗ್ಗೆ ವಿಶೇಷ ಲೇಖನಗಳು ಆಯಾ ಶೀರ್ಷಿಕೆಗಳಲ್ಲಿ ಬಂದಿವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Adrian Chadwick - Archaeology at the Edge of Chaos: Further Towards Reflexive Excavation Methodologies
- for Free copies of Principles of Archaeological Stratigraphy and Practices of Archaeological Stratigraphy as PDF
- [೧] Reuben Thorpe - Which way is up? Context formation and transformation: The life and deaths of a hot bath in Beirut]
- [೨] Record Checking Guidance for Anglo-Lebanese Excavations in Beirut]
- [೩] Site Phasing and Higher order grouping guidelines for Anglo-Lebanese Excavations in Beirut]
- Hammer, F. - Post Excavation Manual
- NIOSH Safety and Health Topic: Trenching and Excavation.
- Excavations at the Roman city of Sanisera, Menorca, Spain Archived 2012-02-05 ವೇಬ್ಯಾಕ್ ಮೆಷಿನ್ ನಲ್ಲಿ.