ವಿಷಯಕ್ಕೆ ಹೋಗು

ಉರೈಯೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉರೈಯೂರು ತಮಿಳುನಾಡಿನ ಮುಖ್ಯ ನಗರಗಳಲ್ಲಿ ಒಂದು. ತಿರುಚಿರಪಳ್ಳಿಯ ಎಲ್ಲೆಯೊಳಗೆ ಕಾವೇರಿ ನದಿದಕ್ಷಿಣ ದಡದಲ್ಲಿದೆ. ಕ್ರಿಸ್ತ ಶಕೆಯ ಮೊದಲ ಹಲವು ಶತಮಾನಗಳಲ್ಲಿ ಚೋಳರ ರಾಜಧಾನಿಯಾಗಿತ್ತು. ಉರಯೂರು, ಉರಗಪುರ, ಉರಂದೈ, ಕೋಳಿಯೂರು ಮುಂತಾದ ಹೆಸರುಗಳಿದ್ದುವೆಂದು ಪುರಾತನ ತಮಿಳು ಸಾಹಿತ್ಯದಿಂದ ತಿಳಿದು ಬರುತ್ತದೆ. ಕಾವೇರಿ ನದಿಯ ಪ್ರವಾಹದಿಂದ ಹಾಳಾದ ಈ ನಗರ ಕ್ರಿ.ಶ. ೫ನೆಯ ಶತಮಾನದ ಸುಮಾರಿನಲ್ಲಿ ಪುನರ್‍ನಿರ್ಮಿತವಾಯಿತು. ೬, ೭ನೆಯ ಶತಮಾನಗಳಲ್ಲಿ ಪಲ್ಲವರ ಅಧೀನರಾಗಿದ್ದ ಚೋಳರ ಮುಖ್ಯ ಪಟ್ಟಣವಾಗಿತ್ತು. ೮ನೆಯ ಶತಮಾನದಲ್ಲಿ ಪಾಂಡ್ಯರಿಂದ ಪುನಃ ನಾಶವಾಯಿತು. ಮತ್ತೆ ಮಧ್ಯಯುಗೀನ ಚೋಳ ಸಾಮ್ರಾಜ್ಯದ ಪ್ರಾಬಲ್ಯ ಪಡೆಯಿತು. ೧೩೧೦ರಲ್ಲಿ ಉರೈಯೂರಿನ ಸಮೀಪದ ಪ್ರದೇಶಗಳನ್ನು ಅಲ್ಲಾವುದ್ದೀನನ ಸರದಾರ ಮಲಿಕ್ ಕಾಫರ್[] ಗೆದ್ದುಕೊಂಡ.

ಕಾವ್ಯ

[ಬದಲಾಯಿಸಿ]

ಪ್ರಾಚೀನ ತಮಿಳು ಕಾವ್ಯಗಳಲ್ಲೂ ಈ ನಗರದ ಐತಿಹ್ಯ ಹಲವು ರೀತಿಯಲ್ಲಿ ವರ್ಣಿತವಾಗಿದೆ : ಶಿಲಪ್ಪದಿಗಾರಂ ಕಾವ್ಯದ ಪ್ರಕಾರ ತಮಿಳು ರಾಜ್ಯಗಳನ್ನು ಆಳುತ್ತಿದ್ದ ಹತ್ತು ಮಂದಿ ಅರಸರಲ್ಲಿ ಪ್ರಮುಖನಾದ ಆಯ್ ಉರೈಯೂರಿನ ಬ್ರಾಹ್ಮಣ ಕವಿಯೊಬ್ಬನಿಗೆ ಪ್ರೋತ್ಸಾಹ ಕೊಟ್ಟಿದ್ದನೆಂದೂ ಪೆರಿಪ್ಲೆಸ್ ಗ್ರಂಥದ ಪ್ರಕಾರ ಈ ನಗರ ಅರಳೆ ವ್ಯಾಪಾರದ ದೊಡ್ಡ ಕೇಂದ್ರವಾಗಿತ್ತೆಂದೂ ಸುಂದರವಾದ ಅತಿ ಸೂಕ್ಷ್ಮ ವಸ್ತ್ರಗಳು ತಯಾರಾಗುತ್ತಿದ್ದುವೆಂದೂ ತಿಳಿದುಬರುತ್ತದೆ. ೧೯೬೫ರಿಂದ ೧೯೬೮ರವರೆಗೆ ಇಲ್ಲಿ ನಡೆದ ಉತ್ಖನನಗಳಿಂದ ಅನೇಕ ಪುರಾತನ ಅವಶೇಷಗಳು ದೊರಕಿ ಈ ನಗರದ ಪ್ರಾಮುಖ್ಯವನ್ನು ಬೆಳಕಿಗೆ ತಂದಿವೆ. ದಕ್ಷಿಣ ಭಾರತದ ಇತಿಹಾಸದ ಪ್ರಾರಂಭದಲ್ಲೇ, ಎಂದರೆ ಕ್ರಿ.ಪೂ. ೪-೩ನೆಯ ಶತಮಾನದಲ್ಲೇ ಈ ಪ್ರದೇಶದಲ್ಲಿ ನಾಗರಿಕತೆ ಪ್ರಾರಂಭವಾಗಿತ್ತು. ವ್ಯವಸಾಯ ಜನರು ಮುಖ್ಯ ಕಸುಬಾಗಿತ್ತು. ಹುಲ್ಲು ತಡಿಕೆಗಳ ಗುಡಿಸಲುಗಳಲ್ಲಿ ಇವರ ವಾಸ. ಕೆಂಪುಬಣ್ಣದ ಮತ್ತು ವರ್ಣಚಿತ್ರಿತವಾದ ಮಡಕೆಗಳನ್ನೂ ಕಬ್ಬಿಣದ ಆಯುಧೋಪಕರಣಗಳನ್ನೂ ಬೆಲೆ ಬಾಳುವ ಕಲ್ಲು ಮತ್ತು ಶಂಖದ ಮಣಿಗಳನ್ನೂ ಇವರು ಬಳಸುತ್ತಿದ್ದರು. ಕ್ರಿ.ಶ. 1-2ನೆಯ ಶತಮಾನಗಳ ಸುಮಾರಿನಲ್ಲಿ ಚೋಳರ ರಾಜಧಾನಿಯಾಗಿದ್ದ ಈ ಪಟ್ಟಣದೊಡೆನೆ ರೋಮನರು ವ್ಯಾಪಾರ ಸಂಬಂಧ ಬೆಳೆಸಿದ್ದರು. ಆ ಕಾಲದಲ್ಲಿ ತಮಿಳು ಭಾಷೆಯನ್ನು ಬ್ರಾಹ್ಮೀಲಿಪಿಯಲ್ಲಿ ಬರೆಯುತ್ತಿದ್ದರೆಂಬುದಕ್ಕೆ ಪ್ರಮಾಣವಾಗಿ ಬ್ರಾಹ್ಮೀ ಅಕ್ಷರಗಳನ್ನು ಕೆತ್ತಿರುವ ಮಡಕೆ ಚೂರುಗಳು ದೊರಕಿವೆ. ರೋಮನರ ವ್ಯಾಪಾರ ವಸ್ತುಗಳಲ್ಲೊಂದಾದ ಬಟ್ಟೆಗಳ ತಯಾರಿಕೆ ಬಣ್ಣ ಹಾಕಲು ಉಪಯೋಗಿಸುತ್ತಿದ್ದ ಇಟ್ಟಿಗೆ ತೊಟ್ಟಿಯ ಅವಶೇಷಗಳೂ ಈ ಕಾಲಕ್ಕೆ ಸೇರಿದವು. ಚೋಳ-ವಿಜಯನಗರ ಸಾಮ್ರಾಜ್ಯ ಕಾಲಗಳಿಗೆ ಸೇರಿದ ನಾಚ್ಚಿಯಾರ್ ಮತ್ತು ಪಂಚವರ್ಣೇಶ್ವರ ದೇವಾಲಯಗಳು ಇಲ್ಲಿನ ಮಧ್ಯಯುಗೀನ ಮುಖ್ಯ ಕಟ್ಟಡಗಳು. (ಬಿ.ಕೆ.ಜಿ.) []

ಉಲ್ಲೇಖಗಳು

[ಬದಲಾಯಿಸಿ]
  1. http://www.aazad.com/leaders/alauddin-khilji-eunuch-army-chief-malik-kafur-rani-padmawati.html
  2. "ಆರ್ಕೈವ್ ನಕಲು". Archived from the original on 2016-08-27. Retrieved 2016-10-21.


"https://kn.wikipedia.org/w/index.php?title=ಉರೈಯೂರು&oldid=1249606" ಇಂದ ಪಡೆಯಲ್ಪಟ್ಟಿದೆ