ಋತುಚಕ್ರ
ಋತುಚಕ್ರ | |
---|---|
ಋತುಚಕ್ರ ಪ್ರತಿ ತಿಂಗಳು ಗರ್ಭಕೋಶದ ಒಳಪದರು ಗರ್ಭದಾರಣೆಗೆ ಸಿದ್ಧವಾಗುತ್ತದೆ. ಪ್ರಜನನ ಸಾಮರ್ಥ್ಯ ಹೊಂದಿದ ಕಾಲದಾದ್ಯಂತ ಎಂದರೆ ಸ್ತ್ರೀ ಋತುಮತಿಯಾದ ಕಾಲದಿಂದ ಋತುಬಂಧದ ವರೆಗೆ-ಗರ್ಭವತಿಯಾದಾಗ ಮತ್ತು ಹೆರಿಗೆಯಾದ ಕೆಲವು ತೊಂಗಳನ್ನು ಹೊರತುಪಡಿಸಿ ಪ್ರತಿ ತಿಂಗಳು ರಜಸ್ರಾವವನ್ನು ತೋರ್ಪಡಿಸುತ್ತಾಳೆ. ಗರ್ಭ ತೆಳೆಯದ್ದಿದ್ದರೆ ಬರಲಿರುವ ಸಂತಾನಕ್ಕಾಗಿ ನೆಲೆಯೊದಗಿಸಲು ರೂಪುಗೊಂಡ ಈ ಪದರು ಕಳಚಿ ಬಿದ್ದು ಈ ಕಾರ್ಯವನ್ನು ಪುನರಾರಂಭಿಸುತ್ತದೆ. ಹೀಗೆ ಚಕ್ರದಂತೆ ಜರುಗುವ ಈ ಕಾರ್ಯ ಪಿಟ್ಯುಟರಿ ಮತ್ತು ಅಂಡಾಶಯ ಹೊರಹಾಕುವ ರಸದೂತಗಳ ಅಧೀನವರ್ತಿಯಾಗಿದೆ. ಹುಡುಗಿ ೧೨ರಿಂದ ೧೪ ವರುಷ ವಯಸ್ಕಳಾದಾಗ ಮೊದಲ ಬಾರಿ ರಜಸ್ರಾವವನ್ನು ತೋರಿಸಿ ಮೈನೆರೆತು ದೊಡ್ಡವಳಾಗುತ್ತಾಳೆ. ಆಕೆಯ ದೈಹಿಕ ತೂಕ, ದೇಹ ಪುಷ್ಟಿ, ಆನುವಂಶಿಕತೆ ಮತ್ತು ಆರೋಗ್ಯ - ಈ ಎಲ್ಲ ಅಂಶಗಳು ಆಕೆ ಪುಷ್ಪವತಿಯಾಗುವುದರ ಮೇಲೆ ಪ್ರಭಾವ ಬೀರುತ್ತವೆ.[೧] ಚಕ್ರವು ೪೫-೫೦ ವರುಷಗಳ ವಯೋಮಾನದವರೆಗೂ ಜರುಗುತ್ತ ಸಾಗುತ್ತದೆ. ಸಾಮಾನ್ಯವಾಗಿ ಋತುಚಕ್ರ ೨೮ ದಿನಗಳದ್ದಾಗಿದ್ದರೂ ಕೆಲವರು ಮಾತ್ರ ಕರಾರುವಾಕ್ಕಾಗಿ ಅದನ್ನು ತೋರಿಸಬಲ್ಲರು. ಅನೇಕರಲ್ಲಿ ೨೮ ದಿನಗಳ ಚಕ್ರದಲ್ಲಿ ಕೆಲವು ದಿನಗಳು ಹೆಚ್ಚು ಕಡಿಮೆಯಾಗಿರುತ್ತವೆ.[೨] ಋತುಚಕ್ರವು ಮೂರು ಘಟ್ಟಗಳ ಮೂಲಕ ಸಾಗಿ ಬರುತ್ತದೆ. ಮೊದಲನ್ಘಟ್ಟ ರಜಸ್ರಾವದ್ದು. ಅದರ ಅವಧಿ ಒಂದು ವಾರದ್ದು. ಎರಡನೇ ಘಟ್ಟ ಬೆಳವಣಿಗೆಯದ್ದು. ಅದರ ಕಾಲಾವಧಿ ಒಂದು ವಾರ. ಮೂರನೇ ಘಟ್ಟ ಸ್ರವಿಕೆಯ ಘಟ್ಟ. ಅದು ಎರಡು ವಾರಗಳ ಕಾಲಾವಧಿಯದ್ದು.
ಹಂತಗಳು
[ಬದಲಾಯಿಸಿ]ರಕ್ತ ಕಾಣಿಸಿಕೊಂಡ ಅಥವಾ ರಜಸ್ರಾವದ ಮೊದಲ ದಿನದಿಂದ ರಜಚಕ್ರ ಪ್ರಾರಂಭವಾಗುತ್ತದೆ. ರಜಸ್ರಾವದ ಈ ಘಟ್ಟ ಆಕೆ ಗರ್ಭದಾರಣೆ ಮಾಡಿಲ್ಲ ಎಂಬ ಅಂಶವನ್ನು ಸೂಚಿಸುತ್ತದೆ. ಅದರಿಂದ ಗರ್ಭಕೋಶದ ಒಳಪದರು ಭಗ್ನಗೊಂಡು ಕಳಚಿ ಬೀಳುತ್ತದೆ. ೫ರಿಂದ ೭ ದಿನಗಳ ಕಾಲಾವಧಿಯಲ್ಲಿ - ಆ ಕಾಲಾವಧಿ ಇನ್ನೂ ಕಡಿಮೆಯಾಗಿರಬಹುದು - ಕಾಲು ಅಥವಾ ಅರ್ಧ ಕಪ್ಪಿನಷ್ಟು ರಕ್ತ ಮತ್ತು ಗರ್ಭಕೋಶದ ಒಳಪದರಿನ ಊತಕದಂಶಗಳನ್ನು ಯೋನೆದ್ವಾರದ ಮೂಲಕ ಹೊರಹಾಕುತ್ತದೆ. ಈ ಘಟ್ಟದ ಪ್ರಾರಂಭಿಕ ದಿನಗಳಲ್ಲಿ ರಜಸ್ರಾವದ ಪ್ರಮಾಣ ಹೆಚ್ಚು. ಈ ಊತಕಗಳನ್ನು ಹೊರಹಾಕಲು ಗರ್ಭಕೋಶದ ಸ್ನಾಯು ಸಂಕುಚನಗೊಳ್ಳಬೇಕಾಗುತ್ತದೆ. ಆದುದರಿಂದ ಕೆಲ ಸ್ತ್ರೀಯರು ನೋವಿನ ಅನುಭವ ಹೊಂದುತ್ತಾರೆ. ರಜಸ್ರಾವ ಪ್ರಾರಂಭವಾಗುವ ಮುನ್ನಾ ದಿನಗಳಲ್ಲಿ ಉದ್ವೇಗ, ಕಾತರತೆ, ಕಳವಳ ರೂಪದಲ್ಲಿ ಅದು ತೋರಿಬರಬಹುದು. ರಜಸ್ರಾವ ಒಳ್ಳೆಯ ಆರೋಗ್ಯದ ಲಕ್ಷಣವಾದುದರಿಂದ ಅವರ ದೈನಂದಿನ ಕಾರ್ಯ ಚಟುವಟಿಕೆಗಳ ಮೇಲೆ ಪ್ರಭಾವ ಬೀರದು. ಎರಡನೆಯದು ಬೆಳವಣಿಗೆಯ ಘಟ್ಟ. ಅದು ಪ್ರಾರಂಭವಾಗುವುದು ರಜಸ್ರಾವ ನಿಂತ ಮೇಲೆ. ಈ ಘಟ್ಟಾ ಒಂದು ವಾರದ ಕಾಲ ಜರುಗುತ್ತದೆ. ಪಿಟ್ಯುಟರಿ ಗ್ರಂಥಿಯಿಂದ ಬಂದ ಕೋಶಿಕೋತ್ತೇಜಕ ಹಾರ್ಮೋನು ರಕ್ತದ ಮೂಲಕ ಬಂದು ಅಂಡಕೋಶಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಅಂಡಕೋಶದಲ್ಲಿಂದ ಪ್ರತಿ ಸಲ ೨೦ ಅಂಡಕೋಶಕಗಳು ಪಕ್ವಗೊಳ್ಳಲು ಆರಂಭಿಸುತ್ತದೆ. ಇದರ ಜೊತೆ ಸ್ತ್ರೀ ರಸದೂತ ಈಸ್ಟ್ರೊಜೆನ್ ಹೊರಬರುತ್ತದೆ. ಈ ಹಾರ್ಮೋನು ಗರ್ಭಕೋಶದ ಒಳಪದರಿನ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಅದರ ಪ್ರಭಾವದಡಿಯಲ್ಲಿ ಗರ್ಭಕೋಶದ ಒಳಪದರಿನಲ್ಲಿ ಹೊಸ ಕೋಶಗಳ ಸಂಖ್ಯಾಭಿವೃದ್ಧಿ ತೀವ್ರಗತಿಯಿಂದ ಜರುಗುತ್ತದೆ. ಆ ಪ್ರದೇಶದಲ್ಲಿನ ರಕ್ತನಾಳಗಳ ಕುಡಿಗಳು ಕೊನರುತ್ತವೆ. ಅವುಗಳ ಬೆಳವಣಿಗೆಯ ಫಲವಾಗಿ ಗರ್ಭಕೋಶದ ಒಳಪದರು ಮೆತ್ತನೆಯ ಸ್ಪಂಜಿನಂತಾಗುತ್ತದೆ. ಅಂಡ ಬಿಡುಗಡೆಯ ಕಾಲಕ್ಕೆ ಅದು ಎರಡು-ಮೂರು ಸೆಂಟಿಮೀಟರಿನಷ್ಟು ದಪ್ಪನಾಗಿರುತ್ತದೆ. ಈಸ್ಟ್ರೊಜೆನ್ ಸ್ರವಿಕೆ ಹೆಚ್ಚಿದಂತೆ ಪಿಟ್ಯುಟರಿಯ ಕೋಶಿಕೋತ್ತೇಜಕ ರಸದೂತದ ಪ್ರಮಾಣ ಕುಗ್ಗುತ್ತದೆ. ಅಂಡಾಶಯದಲ್ಲಿ ಒಂದು ಅಂಡಕೋಶಿಕೆ ಬಲಿತು ಅಂಡಾಶಯದ ಮೇಲ್ಮೈಯತ್ತ ಸಾಗಿ ಬರುತ್ತದೆ. ಪಕ್ವಗೊಳಿಕೆಯನ್ನು ತೋರಿಸತೊಡಗಿದ್ದ ಉಳಿದ ಕೋಶಿಕೆಗಳು ಅನುವಳಿಕೆ ಹೊಂದಿ ನಾಶ ಹೊಂದಿತ್ತವೆ. ಬಲಿತ ಅಂಡಕೋಶಿಕೆಯ ಮೇಲ್ಮೈಗೆ ಬಂದು ಅಂಡ ಹೊರಹಾಕಲ್ಪಡುತ್ತಿದ್ದಂತೆ, ಅದನ್ನು ಬೆರಳಿನಂತಹ ಚಾಚಿಕೆಗಳನ್ನು ಹೊಂದಿದ ಅಂಡನಾಳ ಕಚ್ಚಿ ಹಿಡಿದು ಅದನ್ನು ಅಂಡನಾಳದೊಳಕ್ಕೆ ಸಾಗಿಸುತ್ತದೆ. ಅದಾದ ೨೪ರಿಂದ ೪೮ ಗಂಟೆಗಳ ಅವಧಿಯಲ್ಲಿ ಅಂಡ ವೀರ್ಯಾಣುವಿನಿಂದ ಫಲೀಕರಣಗೊಳ್ಳಬೇಕು. ಇಲ್ಲವಾದರೆ ಅದು ಅನುವಳಿಕೆ ಹೊಂದಿ ನಾಶವಾಗುವುದು. ಅಂಡ ಬಿಡುಗಡೆ ಪಿಟ್ಯುಟರಿ ಸ್ರವಿಸುವ ಹಳದಿಂಡುಗೊಳಿಕೆ ರಸದೂತದ ಫಲ. ಅಂಡ ಬಿಡುಗಡೆ ಮುಂದಿನ ರಜಸ್ರಾವಸ ೧೪ ದಿನಗಳ ಹಿಂದೆ ಜರುಗುತ್ತದೆ. ಅಂಡ ಬಿಡುಗಡೆಯ ನಂತರ ಅಂಡಕೋಶದಲ್ಲಿ ಅಳಿದುಳಿದ ಕೋಶಿಕೆಯು ಪುನರರ್ಚನೆಗೊಂಡು ಪೀತಗ್ರಂಥಿಯಾಗುತ್ತದೆ. ಅದುಗರ್ಭದ ಎಂದರೆ ಪ್ರೊಜೆಸ್ಟಿರೊನ್ ರಸದೂತವನ್ನು ಸ್ರವಿಸುತ್ತದೆ. ಅದರ ಫಲವಾಗಿ ಗರ್ಭಕೋಶದ ಒಳಪದರಿನಲ್ಲಿ ಗ್ರಂಥಿಗಳು ಬೆಳೆದು ಅಲ್ಲಿನ ರಕ್ತಪೂರೈಕೆ ಪ್ರಮಾಣವನ್ನು ಹೆಚ್ಚಿಸುತ್ತವೆ. ಎರಡು ವಾರಗಳಲ್ಲಿ ಒಳಪದರು ನಾಲ್ಕಾರು ಮಿಲಿ ಮೀಟರಿನಷ್ಟು ದಪ್ಪನಾಗುತ್ತದೆ. ಅಂಡಾಶಯ ಈಸ್ಟ್ರೋಜೆನ್ನನ್ನು ಅಲ್ಪ ಪ್ರಮಾಣದಲ್ಲಿ ಸದಾ ಸ್ರವಿಸುತ್ತಿರುತ್ತದೆ.ಫಲೀಕರಣಗೊಂಡ ಅಂಡ ಗರ್ಭಕೋಶದಲ್ಲಿ ಬೇರೂರು ಬೆಳೆಯಲು ಬೇಕಾದ ಹಾಸಿಗೆ ಗರ್ಭಕೋಶದಲ್ಲಿ ಸಿದ್ಧವಾಗಿರುತ್ತದೆ. ಅಂಡದ ಫಲೀಕರಣವಾಗದ್ದಿದ್ದರೆ ಏರಿಕೆ ತೋರಿಸುತ್ತಿದ್ದ ಪ್ರೊಜೆಸ್ಟಿರಾನ್ ಪಿಟ್ಯುಟರಿ ಗ್ರಂಥಿಗೆ ಸೂಚನೆ ನೀಡಿ ಹಳದಿಂಡುಗೊಳಿಕೆ ರಸದೂತದ ಬಿಡುಗಡೆಯನ್ನು ನಿಲ್ಲಿಸುವಂತೆ ಮಾಡುತ್ತದೆ. ಆ ವೇಳೆಗೆ ರಜಚಕ್ರದ ೨೮ ದಿನಗಳು ಕಳೆದು ಹೋಗಿರುತ್ತವೆ. ಪೀತಗ್ರಂಥಿ ಅನುವಳಿಕೆ ಹೊಂದತೊಡಗುತ್ತದೆ. ಅದರ ಫಲವಾಗಿ ಪ್ರೊಜೆಸ್ಟಿರಾನ್ ಪ್ರಮಾಣ ಮುಂದಿನ ನಾಲ್ಕು ದಿನಗಳಲ್ಲಿ ಗಣನೀಯವಾಗಿ ಕೆಳಕ್ಕಿಳಿದು ಹೋಗುತ್ತದೆ. ಪ್ರೊಜೆಸ್ಟಿರಾನ್ ಹಾರ್ಮೋನಿನ ಬೆಂಬಲವನ್ನು ಅವಲಂಬಿಸಿದ್ದ ಗರ್ಭಕೋಶದ ಒಳಪದರು ಅನುವಳಿಕೆ ಹೊಂದಿ ೨೮ನೇ ದಿನ ಕಳಚಿ ಬಿದ್ದು ಯೋನಿಮುಖವಾಗಿ ಹೊರಬಂದು ರಜಚಕ್ರದ ಮುಕ್ತಾಯವನ್ನು, ಮತ್ತು ಹೊಸ ರಜಚಕ್ರದ ಪ್ರಾರಂಭವನ್ನು ಸೂಚಿಸುತ್ತದೆ.
ಗರ್ಭಧಾರಣೆ
[ಬದಲಾಯಿಸಿ]ರಜಚಕ್ರದಲ್ಲಿ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳು ತೋರಿ ಬರುತ್ತವೆ. ಸ್ತ್ರೀಯ ದೇಹದಲ್ಲಿನ ರಸದೂತಗಳು ಅಂಡಾಶಯದಲ್ಲಿ ಕೆಲವು ಅಂಶಗಳ ಬೆಳವಣಿಗೆಗೆ ಪ್ರಚೋದನೆ ನೀಡುತ್ತವೆ. ಅದರ ಫಲವಾಗಿ ಒಂದು ಅಂಡ ಪಕ್ವಗೊಂಡು ಚಕ್ರದ ಮಧ್ಯಂತರ ಅವಧಿಯಲ್ಲಿ ಹೊರಬೀಳುತ್ತದೆ. ಈ ಅಂಡವನ್ನು ಗರ್ಭಕೋಶದ ಪಕ್ಕಕ್ಕೆ ಅಂಟಿಕೊಂಡ ಗರ್ಭನಾಳ (ಅಂಡವಾಹಿನಿ) ತನ್ನತ್ತ್ತ ಸೆಳೆದುಕೊಂಡು ಅಂಡ ಆ ನಾಳದ ಮೂಲಕ ಗರ್ಭಕೋಶದತ್ತ ಸಾಗಿ ಹೋಗುವ ಅವಕಾಶ ಮಾಡಿಕೊಡುತ್ತದೆ. ಈ ಅವಧಿಯಲ್ಲಿ ಗರ್ಭಕೋಶದ ಒಳಹಾಸು ರಕ್ತನಾಳಗಳಿಂದ ಸಮೃದ್ಧಗೊಂಡು ಅದನ್ನು ಹಾಸಿಗೆಯಂತೆ ದಪ್ಪನಾಗಿ ಬೆಳೆಸುತ್ತದೆ. ಒಂದು ವೇಳೆ ಅಂಡ, ಸಂಭೋಗದ ನಂತರ ಯೋನಿಯ ಮೂಲಕ ಗರ್ಭಕೋಶದ ಮೇಲಕ್ಕೆ ಗರ್ಭನಾಳದತ್ತ ಸಾಗಿಬಂದ ವೀರ್ಯಾಣು ಒಂದರಿಂದ ನಿಷೇಚನೆಗೊಂಡಲ್ಲಿ ರೂಪುಗೊಳ್ಳುವ ಯುಗ್ಮಜ ನೆಲೆಗೊಳ್ಳುವುದಕ್ಕೆ ಈ ಎಲ್ಲ ಸಿದ್ಧತೆ. ವೀರ್ಯಾಣು ಗರ್ಭನಾಳವನ್ನು ಸರಿಯಾದ ಸಮಯಕ್ಕೆ ತಲುಪಿ ಅದೇ ಸಮಯದಲ್ಲಿ ಅಲ್ಲಿರುವ ಅಂಡದೊಡನೆ ಸಂಯೋಗಗೊಂಡಲ್ಲಿ ಅಂಡದ ನಿಷೇಚನೆಯಾದಂತೆ. ಆಗ ರೂಪುಗೊಳ್ಳುವ ಯುಗ್ಮಜ ಗರ್ಭಕೋಶದಲ್ಲಿ ಬೇರೂರಿದಲ್ಲಿ ಆಕೆ ಗರ್ಭ ತಳೆದಂತೆ. ಅಂಡವೇನಾದರೂ ವೀರ್ಯಾಣುವಿನಿಂದ ನಿಷೇಚನೆಗೊಳ್ಳದಿದ್ದಲ್ಲಿ ಅಂಡ ಭಗ್ನಗೊಳ್ಳುವುದು. ಗರ್ಭಕೋಶ ತನ್ನೊಳಗೆ ದಪ್ಪನಾಗಿ ಬೆಳೆದ ಒಳಹಾಸನ್ನು ವ್ವ್ ತಿಂಗಳು ಅದರ ಆವಶ್ಯಕತೆಯಿಲ್ಲದ ಕಾರಣ ಕಳಚಿಕೊಳ್ಳುವಂತೆ ಮಾಡುತ್ತದೆ. ಅದು ದೇಹದಿಂದ ಯೋನಿಯ ಮೂಲಕ ಹೊರ ಹೋಗುತ್ತದೆ. ಅಂಡವು ಎರಡು ರಜಸ್ರಾವ ಕಾಲಾವಧಿ ಮಧ್ಯಂತರದಲ್ಲಿ ಬಿಡುಗಡೆ ಆಗುವುದು. ಅದರ ನಿರ್ದಿಷ್ಟ ಸಮಯವನ್ನು ಕರಾರುವಾಕ್ಕಾಗಿ ಹೇಳಲಾಗದಿದ್ದರೂ, ೨೮ ದಿನಗಳ ಚಕ್ರ ಹೊಂದಿದ ಸ್ತ್ರೀ ಪ್ರತಿ ಚಕ್ರದ ೮ರಿಂದ ೧೫ ದಿನಗಳ ಮಧ್ಯಂತರದಲ್ಲಿ ಹೆಚ್ಚಿನ ಫಲವಂತಿಕೆಯನ್ನು ತೋರ್ಪಡಿಸುತ್ತಾಳೆ.
ನೋಡಿ
[ಬದಲಾಯಿಸಿ]- ಗರ್ಭಧಾರಣೆ
- ಮಗುವಿನ ಬೆಳವಣಿಗೆಯ ಹಂತಗಳು
- ಗರ್ಭಪಾತ
- ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಮಾಲೋಚನೆ
- ಋತುಚಕ್ರ
- ಸಂಭೋಗ
- ಮೆನೋಪಾಸ್
- ಮುಟ್ಟು
ಉಲ್ಲೇಖಗಳು
[ಬದಲಾಯಿಸಿ]
ಹೊರಗಿನ ಸಂಪರ್ಕ
[ಬದಲಾಯಿಸಿ]- ಅಕಾಲಿಕ ಋತುಪ್ರಾಪ್ತಿ;ಡಾ. ವೀಣಾ ಭಟ್ ಭದ್ರಾವತಿ;28 Jan, 2017 Archived 2017-02-04 ವೇಬ್ಯಾಕ್ ಮೆಷಿನ್ ನಲ್ಲಿ.
- http://in.clearblue.com/menstrual-cycles-and-ovulation*
- http://www.womenshealth.gov/publications/our-publications/fact-sheet/menstruation.html* Archived 2012-11-20 ವೇಬ್ಯಾಕ್ ಮೆಷಿನ್ ನಲ್ಲಿ.