ಎಂ. ಎಸ್. ಶೀಲಾ
ಎಂ. ಎಸ್. ಶೀಲಾ | |
---|---|
Born | ಮಾರ್ಚ್ ೧೬, ೧೯೫೨ |
Occupation(s) | ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರು, ಭರತನಾಟ್ಯ ತಜ್ಞರು ಮತ್ತು ಸುಗಮ ಸಂಗೀತಗಾರರು |
ವಿದುಷಿ ಎಂ. ಎಸ್. ಶೀಲಾ (ಮಾರ್ಚ್ ೧೬, ೧೯೫೨) ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ ಮತ್ತು ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಪ್ರಖ್ಯಾತ ಗಾಯಕರು.
ಜೀವನ
[ಬದಲಾಯಿಸಿ]ಶೀಲಾ ಅವರು ಮಾರ್ಚ್ 16, 1952ರಂದು ಜನಿಸಿದರು. ತಾಯಿ ಎಂ.ಎನ್. ರತ್ನ ಜನಪ್ರಿಯ ಸಂಗೀತ ವಿದುಷಿಯಾಗಿದ್ದವರು. ತಾಯಿಯಿಂದಲೇ ಪ್ರಾರಂಭಿಕ ಶಿಕ್ಷಣ ಪಡೆದ ಶೀಲಾ, ನಂತರ ಡಾ. ಆರ್. ಕೆ. ಶ್ರೀಕಂಠನ್ ಅವರ ಬಳಿ ಕಲಿತರು. ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಗೀತ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಗಳಿಸಿದರು.
ಸಂಗೀತ, ನೃತ್ಯ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲಿ
[ಬದಲಾಯಿಸಿ]ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತಗಳೆರಡರಲ್ಲೂ ಆಕಾಶವಾಣಿಯ ‘ಪ್ರಥಮ ಶ್ರೇಣಿಯ’ ಕಲಾವಿದೆಯಾಗಿ ಶೀಲಾ ಗುರುತಿಸಿಕೊಂಡಿದ್ದಾರೆ. ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಸಮ್ಮೇಳನಗಳೂ ಸೇರಿದಂತೆ ದೇಶದಾದ್ಯಂತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜೊತೆಗೆ ಅಮೆರಿಕಾ, ಕೆನಡಾ, ಲಂಡನ್, ಆಸ್ಟ್ರೇಲಿಯಾ ಮತ್ತು ಮಧ್ಯಪೂರ್ವ ದೇಶಗಳಲ್ಲಿಯೂ ಕರ್ನಾಟಕ ಸಂಗೀತ ಪ್ರಕಾರದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಶೀಲಾ ಅವರು 90ರ ದಶಕದವರೆಗೂ ಭರತನಾಟ್ಯ ಕಲಾವಿದೆಯಾಗಿಯೂ ಪ್ರದರ್ಶನಗಳನ್ನು ನೀಡಿದ್ದರು.
- ಧ್ವನಿಸುರುಳಿಗಳು
ಶೀಲಾ ಅವರು ಹೊರತಂದಿರುವ ಲಲಿತಾ ಸಹಸ್ರನಾಮ, ಶ್ರೀ ಶಾರದಾ ಸುಪ್ರಭಾತ, ಗಾನ ಸುಶೀಲಂ, ಆಡಿಸಿದಳು ಯಶೋಧಾ, ಪಾಲಿಂಚು ಕಾಮಾಕ್ಷಿ, ಹರಿದಾಸ ನಮನ, ಸೌಂದರ್ಯ ಲಹರಿ, ಶಿವಾನಂದ ಲಹರಿ, ವಚನಾಮೃತ ಮುಂತಾದ ಕ್ಯಾಸೆಟ್ ಮತ್ತು ಸಿಡಿಗಳು ಜನಪ್ರಿಯತೆ ಪಡೆದಿವೆ.
- ಹಂಸಧ್ವನಿ ಸಂಸ್ಥೆ
ತಮ್ಮ ಪತಿ ಬಿ.ಕೆ. ರಾಮಸ್ವಾಮಿವರೊಂದಿಗೆ ‘ಹಂಸಧ್ವನಿ ಕ್ರಿಯೇಷನ್ಸ್’ ಸಂಸ್ಥೆ ಸ್ಥಾಪಿಸಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಕುರಿತ ಹಲವಾರು ಕಾರ್ಯಕ್ರಮಗಳನ್ನು ಶೀಲಾ ನಡೆಸುತ್ತಿದ್ದಾರೆ. ಅವುಗಳಲ್ಲಿ ಹರಿದಾಸ ನಮನ ಸರಣಿ, ವಾದ್ಯ ವೈಭವ ಸರಣಿ, ನುಡಿ ನಮನ, ಕರ್ನಾಟಕದ ವಾಗ್ಗೇಯಕಾರರನ್ನು ಕುರಿತ ವಾಗ್ಗೇಯ ವೈಭವ ಪ್ರಮುಖವಾದವು. ವಾಗ್ಗೇಯ ವೈಭವ ಮಾಲಿಕೆಯಲ್ಲಿ ಇತ್ತೀಚೆಗೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕೃತಿಗಳ ಸಿ.ಡಿ.ಯನ್ನು ಹೊರತಂದಿದ್ದಾರೆ. ತಮ್ಮ ಸಂಸ್ಥೆಯ ಮುಖಾಂತರ ಪ್ರತಿವರ್ಷ ಸಂಗೀತ ಕಲಾಸಾಧಕರನ್ನು ಗುರುತಿಸಿ, ಅವರಿಗೆ ‘ಹಂಸಧ್ವನಿ ಪುರಸ್ಕಾರ’ವನ್ನು ನೀಡಿ ಗೌರವಿಸುತ್ತಿದ್ದಾರೆ.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಶ್ರೀಮತಿ ಎಂ.ಎಸ್. ಶೀಲಾ ಅವರ ಸಂಗೀತ ಸಾಧನೆಯನ್ನು ಗುರುತಿಸಿ ಸರ್ಕಾರ, ಸಂಘ ಸಂಸ್ಥೆಗಳು ಮತ್ತು ವಿವಿಧ ವೇದಿಕೆಗಳು ಅನೇಕ ಸ್ತರದಲ್ಲಿ ಅವರನ್ನು ಗೌರವಿಸಿವೆ. ಮದ್ರಾಸ್ ಮ್ಯೂಸಿಕ್ ಅಕಾಡೆಮಿ 1997ರಲ್ಲಿ ಶೀಲಾ ಅವರನ್ನು ಅತ್ಯುತ್ತಮ ಹಿರಿಯ ಗಾಯಕಿ ಎಂದು ಗೌರವಿಸಿವೆ. ಕರ್ನಾಟಕ ಸರ್ಕಾರ ತನ್ನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. 1997-98ರ ಸಾಲಿನಲ್ಲಿ ಕನ್ನಡ ಚಲನಚಿತ್ರದ ಹಿನ್ನೆಲೆ ಗಾಯನಕ್ಕೆ ಶ್ರೀಮತಿ ಶೀಲಾ ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಗಾನಕಲಾ ಪರಿಷತ್ತಿನ 2000ವರ್ಷದ ಸಾಲಿನ ಸಂಗೀತ ಸಮ್ಮೇಳನದಲ್ಲಿ ಸಮ್ಮೇಳನದ ಉತ್ತಮ ಸಂಗೀತ ವಿದುಷಿ ಎನ್ನುವ ಗೌರವದ ಜೊತೆಗೆ, ಅನನ್ಯ ಕಲ್ಚರಲ್ ಅಕಾಡೆಮಿಯ ‘ಅನನ್ಯ ಪುರಸ್ಕಾರ’ ಪಡೆದ ಹೆಗ್ಗಳಿಕೆ ಶೀಲಾ ಅವರದು. ಶೃಂಗೇರಿಯ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ಶಾರದಾ ಪೀಠದ ‘ಆಸ್ಥಾನ ವಿದುಷಿ’ಯಾಗಿ ಶೀಲಾ ಗೌರವಿಸಲ್ಪಟ್ಟಿದ್ದಾರೆ. ಇವುಗಳಲ್ಲದೆ ಬೇರೆ ಬೇರೆ ಸಂಗೀತ ಸಂಸ್ಥೆಗಳು ಶೀಲಾ ಅವರನ್ನು ಗಾನಕಲಾಶ್ರೀ, ಗಾನ ವಾರಿಧಿ, ಸುಮಧುರ ಸಂಗೀತ ಧ್ರುವತಾರೆ, ಗುರು ಗೌರವಕಾರಿಣಿ, ಸಂಗೀತ ರಾಗ ಅಮೃತವರ್ಷಿಣಿ, ಸಂಗೀತ ಗಾನ ಕಲಾನಿಧಿ, ಸಂಗೀತ ಸಹ್ಯಾದ್ರಿ ಶಿಖರಿಣಿ, ಸಂಗೀತ ಸರಸ್ವತಿ, ಸಂಗೀತ ವಾಗ್ದೇವಿ ಮುಂತಾದ ಬಿರುದುಗಳೊಂದಿಗೆ ಸನ್ಮಾನಿಸಿವೆ. ಶ್ರೀಮತಿ ಎಂ.ಎಸ್. ಶೀಲಾ ಅವರ ಸಂಗೀತ ಸಾಧನೆಯನ್ನು ಗುರುತಿಸಿ 2007-08ನೇ ಸಾಲಿನ ಗೌರವ ಪ್ರಶಸ್ತಿಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡಿ ಗೌರವಿಸಿದೆ. ಈ ಮಹಾನ್ ಕಲಾವಿದರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು. ಅವರ ಸಂಗೀತ ಮಾಧುರ್ಯ ನಮ್ಮ ಕಿವಿ, ಮನಗಳನ್ನು ನಿರಂತರವಾಗಿ ತಣಿಸುತ್ತಿರಲಿ. ಅವರಿಗೆ ಸಕಲ ರೀತಿಯ ಗೌರವಗಳು ಸಲ್ಲಲಿ.
ಮಾಹಿತಿ ಕೃಪೆ
[ಬದಲಾಯಿಸಿ]ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಕಟಣೆ ಮತ್ತು ಎಂ. ಎಸ್. ಶೀಲಾ ಅವರ ಅಂತರಜಾಲ ತಾಣ Archived 2021-01-19 ವೇಬ್ಯಾಕ್ ಮೆಷಿನ್ ನಲ್ಲಿ.