ಎತ್ತು
[೧]ಎತ್ತು ಒಂದು ಭಾರ ಎಳೆಯುವ ಪ್ರಾಣಿಯಾಗಿ ತರಬೇತಿ ನೀಡಲಾದ ಒಂದು ಗೋಜಾತಿಯ ಪ್ರಾಣಿ. ಎತ್ತುಗಳು ಸಾಮಾನ್ಯವಾಗಿ ನಿರ್ವೀರ್ಯಗೊಳಿಸಿದ ವಯಸ್ಕ ಪುರುಷ ದನ; ನಿರ್ವೀರ್ಯಗೊಳಿಸುವುದು ಪ್ರಾಣಿಗಳನ್ನು ನಿಯಂತ್ರಿಸುವುದು ಸುಲಭವಾಗಿಸುತ್ತದೆ. ಕೆಲವು ಪ್ರದೇಶಗಳಲ್ಲಿ ಹಸುಗಳು (ವಯಸ್ಕ ಹೆಣ್ಣುಗಳು) ಅಥವಾ ಗೂಳಿಗಳನ್ನು (ಅಖಂಡ ಗಂಡುಗಳು) ಬಳಸಬಹುದು. ಆರ್ಟಿಯೊಡ್ಯಾಕ್ಟೈಲ ವರ್ಗದ ಬೋವಿಡೆ ಕುಟುಂಬಕ್ಕೆ ಸೇರಿದ ಮೆಲುಕುಹಾಕುವ ಸಸ್ತನಿ (ಆಕ್ಸ್). ಮೂಲ ಸ್ಯಾಕ್ಸನ್ ಭಾಷೆಯಲ್ಲಿ ಪಳಗಿಸಿದ ಗಂಡು ದನಕ್ಕೆ ಮಾತ್ರ ಈ ಹೆಸರನ್ನು ಬಳಸಲಾಗುತ್ತಿತ್ತು. ಮೃಗಾಲಯದವರು ಎತ್ತು, ಎಮ್ಮೆ, ಕಾಡೆಮ್ಮೆ, ಕಾಡುದನ ಇವೆಲ್ಲದಕ್ಕೂ ಈ ಪದವನ್ನು ಬಳಸುವುದುಂಟು. ಕನ್ನಡ ಭಾಷೆಯಲ್ಲಿ ಎತ್ತು ಎಂಬ ಪದವನ್ನು ಹಿಡ ಬಡಿವ ಹೋರಿ ದನಕ್ಕೆ ಮಾತ್ರ ಬಳಸುವುದು ವಾಡಿಕೆ. ಹಿಡ ಬಡಿವ ಮುನ್ನ ಅದನ್ನು ಅನೇಕ ದೇಶಗಳಲ್ಲಿ ಹೋರಿ (ಬುಲ್) ಎಂಬ ಪ್ರತ್ಯೇಕ ಹೆಸರಿನಿಂದ ಕರೆಯುತ್ತಾರೆ. ಪ್ರಾಣಿಯನ್ನು ಸುಲಭವಾಗಿ ಪಳಗಿಸಿ ಹದ್ದುಬಸ್ತಿನಲ್ಲಿಟ್ಟುಕೊಂಡು ಕೆಲಸಕ್ಕೆ ಬಳಸಿಕೊಳ್ಳುವುದೂ ಚೆನ್ನಾಗಿ ಬೇಗ ಮೈಕಟ್ಟಿಕೊಳ್ಳುವಂತೆ ಮಾಡುವುದೂ ಹಿಡ ಬಡಿಯುವುದರ ಉದ್ದೇಶ.
ಉಪಯೋಗ
[ಬದಲಾಯಿಸಿ]ವ್ಯವಸಾಯದ ಕೆಲಸಕ್ಕೆ ಮಾನವ ಪಳಗಿಸಿಕೊಂಡ ಕಾಡುಪ್ರಾಣಿಗಳಲ್ಲಿ ಎತ್ತು ಮೊದಲ ಸುತ್ತಿಗೆ ಸೇರಿದ್ದೆಂದು ತಿಳಿದುಬಂದಿದೆ. ಹೀಗೆ ಪಳಗಿಸಿದ ಎತ್ತುಗಳ ಪಳೆಯುಳಿಕೆ ಯೂರೋಪಿನಲ್ಲಿ ನಿಯೋಲಿಥಿಕ್ ಯುಗದಲ್ಲಿ ಹೇರಳವಾಗಿ ದೊರೆತಿವೆ. 3,500 ವರ್ಷಗಳ ಹಿಂದಿನಿಂದಲೂ ಈಜಿಪ್ಟ್, ಬ್ಯಾಬಿಲೋನಿಯ, ಭಾರತ ಇತ್ಯಾದಿ ದೇಶಗಳಲ್ಲಿ ಮಾನವ ಎತ್ತನ್ನು ಪಳಗಿಸಿ ಕೆಲಸಕ್ಕೆ ಬಳಸಿಕೊಂಡಿರುವನೆಂದು ಹೇಳಲು ಸಾಕಷ್ಟು ಆಧಾರಗಳು ದೊರೆತಿವೆ. ಯೂರೋಪಿನಲ್ಲಿ ದೊರೆತಿರುವ ಪಳೆಯುಳಿಕೆಗಳ ಆಧಾರದ ಮೇಲೆ ಹೇಳುವುದಾದರೆ ಮಾನವ ಪಳಗಿಸಿದ ಅತ್ಯಂತ ಪ್ರಾಚೀನ ಕಾಲದ ಎತ್ತು, ಯೂರೋಪಿನಲ್ಲಿ ಇಂದಿನ ಪಳಗಿಸಿದ ಎತ್ತಿಗಿಂತ ಸಣ್ಣರೂಪಿನದು. ಅದಕ್ಕೆ ಕೊಂಬುಗಳು ತುಂಡವಾಗಿದ್ದವು. ಈ ವ್ಯತ್ಯಾಸವನ್ನು ಆಧಾರಮಾಡಿಕೊಂಡು ಮಾನವ ಪ್ರಪ್ರಥಮವಾಗಿ ಎತ್ತನ್ನು ಪಳಗಿಸಿದ್ದು ಯೂರೋಪಿನಲ್ಲಲ್ಲ. ಏಷ್ಯದಲ್ಲಿ ಎಂದು ವಾದಿಸುವುದುಂಟು. ಹಾಗೆ ಏಷ್ಯದಲ್ಲಿ ಪಳಗಿಸಿದ್ದ ಎತ್ತನ್ನು ನಿಯೋಲಿಥಿಕ್ ಮಾನವ ಯೂರೋಪಿಗೆ ವಲಸೆ ಹೋದಾಗ ತನ್ನೊಡನೆ ಕೊಂಡೊಯ್ದಿರುವುದು ಸಾಧ್ಯ. ಅನಂತರ ಕಂಚು ಬಳಕೆಗೆ ಬರುವ ಕಾಲಕ್ಕೆ ಯುರೋಪಿನಲ್ಲಿ ಬಹುಶಃ ಅಲ್ಲಿನ ಮತ್ತೊಂದು ತಳಿಯ ಕಾಡು ಎತ್ತುಗಳನ್ನು ತಂದು ಪಳಗಿಸಲಾರಂಭಿಸಿದಂತೆ ತೋರುತ್ತದೆ. ಭಾರತದ ಎತ್ತು ಯೂರೋಪಿನ ಎತ್ತಿಗಿಂತ ಭಿನ್ನವಾದ ವನ್ಯಪೂರ್ವಜರನ್ನು ಪಡೆದಿತ್ತೆ ಎಂಬುದು ಇನ್ನೂ ಇತ್ಯರ್ಥವಾಗಿಲ್ಲ.
ಭಾರತದಲ್ಲಿ ಎತ್ತು
[ಬದಲಾಯಿಸಿ]ಎತ್ತು ಭಾರತದಂಥ ವ್ಯವಸಾಯವೇ ಮುಖ್ಯವಾದ ದೇಶಗಳಲ್ಲಿ, ಬಹುಮುಖ್ಯ ಆರ್ಥಿಕ ಪ್ರಾಣಿ. ಸಾಧುವೆನಿಸಿರುವ ಈ ಪ್ರಾಣಿ ಸುಲಭವಾಗಿ ಕೆಲಸಕ್ಕೆ ಪಳಗುವುದರಿಂದ ಅದರಿಂದ ಬಗೆಬಗೆಯ ಕೆಲಸಗಳನ್ನು ಮಾಡಿಸುವುದು ಸುಲಭ. ಹೊಲದ ಉಳುಮೆ, ಸರಕುಸಾಗಣೆ, ಗಾಡಿಗೆ ಹೂಡುವುದು ಇತ್ಯಾದಿ ವ್ಯವಸಾಯದ ಮುಖ್ಯ ಕಾರ್ಯಗಳಿಗೆ ಎತ್ತನ್ನು ಬಳಸುವರು. ಎತ್ತುಗಳ ಸಂಖ್ಯೆ ಅಧಿಕವಾಗಿದ್ದಷ್ಟೂ ವ್ಯವಸಾಯದ ವಹಿವಾಟು ಹೆಚ್ಚೆಂದು ಭಾವಿಸುವುದುಂಟು. ಪ್ರತಿ 12 ಎಕರೆ ಸಾಗುವಳಿ ಭೂಮಿಗೂ ಮೈಸೂರು ರಾಜ್ಯದಲ್ಲಿ ಒಂದು ಜೊತೆ ಎತ್ತುಗಳಿರುವುದೆಂದು ದನಗಣತಿಯಿಂದ ತಿಳಿದುಬಂದಿದೆ. ಇದು ಸಾಲದು. ಸಮರ್ಪಕವಾಗಿ ವ್ಯವಸಾಯ ಮಾಡಿ ಆಹಾರೋತ್ಪತ್ತಿಯನ್ನು ಹೆಚ್ಚಿಸಲು ಪ್ರತಿ ಎಂಟು ಎಕರೆಗೆ ಒಂದು ಜೊತೆ ಎತ್ತು ಅಗತ್ಯ. ಮೈಸೂರು ರಾಜ್ಯದಲ್ಲಿ ಸಾಗುವಳಿಯಲ್ಲಿರುವ 63 ಲಕ್ಷ ಎಕರೆ ಭೂಮಿಯ ವ್ಯವಸಾಯಕ್ಕೆ ಕೇವಲ 31/2 ಲಕ್ಷ ಜೊತೆ ಎತ್ತುಗಳು ಮಾತ್ರ ಇದ್ದು ಸಮರ್ಪಕವಾಗಿ ವ್ಯವಸಾಯ ಮಾಡಲು ಅವುಗಳ ಸಂಖ್ಯೆ ಹೆಚ್ಚು ಬೇಕಾಗಿದೆ. (ನೋಡಿ- ಆರ್ಟಿಯೊಡ್ಯಾಕ್ಟೈಲ) (ನೋಡಿ- ದನಗಳು) (ಪಿ.ಎಸ್.ಆರ್.)
ಉಲ್ಲೇಖನಗಳು
[ಬದಲಾಯಿಸಿ]