ಎಲಿಜಿ
ಎಲಿಜಿ(ಶೋಕಗೀತೆ): - ಪ್ರಾಚೀನ ಗ್ರೀಕ್ ಸಾಹಿತ್ಯದಲ್ಲಿ ಕಾವ್ಯದ ಒಂದು ಛಂದೋರೂಪಕ್ಕೆ ಈ ಹೆಸರಿತ್ತು. 16ನೆಯ ಶತಮಾನದಲ್ಲಿ ಇಂಗ್ಲೆಂಡಿನ ಸಾಹಿತ್ಯಕ್ಕೆ ಈ ಪದ ಬಂದ ಅನಂತರ ಇದಕ್ಕೆ ಶೋಕಗೀತೆ ಎಂಬ ಅರ್ಥ ಬಂದು ಅದೇ ಅರ್ಥ ಈಗಲೂ ಉಳಿದುಕೊಂಡಿದೆ. ಬೇರೆ ಸಾಹಿತ್ಯಗಳಲ್ಲೂ ಅದೇ ಅರ್ಥದಲ್ಲಿ ಈ ಪದ ಬಳಕೆಯಾಗುತ್ತಿದೆ. ಎಲಿಜಿಯಕ್ ಛಂದಸ್ಸಿನಲ್ಲಿ ಬರೆದ ಯಾವ ಕವಿತೆಗಾದರೂ ಗ್ರೀಕರಲ್ಲಿ ಎಲಿಜಿ ಎಂಬ ಹೆಸರೇ ಸಲ್ಲುತ್ತಿತ್ತು. ಎಲಿಗಾಸ್ ಎಂದರೆ ಕೊಳಲುವಾದನದ ಜೊತೆಗೆ ಹಾಡುವ ಕರುಣರಸಭರಿತ ರಾಗವೆಂಬ ಅರ್ಥವಿತ್ತು. ಆದರೆ ಕರುಣರಸವಿಲ್ಲದಂಥ ಬೇರೆ ಬೇರೆ ಕಾವ್ಯಗಳಿಗೆ ಈ ಹೆಸರು ಪ್ರಾರಂಭಿಕ ಕಾಲದಲ್ಲೂ ಹೇಗೆ ಅಂಟಿಕೊಂಡಿತೆಂಬ ವಿಷಯ ಆಶ್ಚರ್ಯಕರವಾಗಿದೆಯಲ್ಲದೆ ಇಂದಿಗೂ ಬಗೆಹರಿಯದ್ದಾಗಿದೆ. ಹನ್ನೆರಡು ಮಾತ್ರೆಗಳ ಒಂದು ಸಾಲಿಗೆ ಹತ್ತು ಮಾತ್ರೆಗಳ ಒಂದು ಸಾಲು ಸೇರಿ ಎಲಿಜಿಯಕ್ ಛಂದಸ್ಸಾಗುತ್ತಿತ್ತು. ಈ ಛಂದಸ್ಸಿನ ಹಾಡುಗಳಿಗೆ, ಮೊದಮೊದಲಿನ ಕವಿತೆಗಳಿಗೆ ಕೊಳಲಿನ ಹಿನ್ನೆಲೆ ಇದ್ದುದರಿಂದ ಎಲಿಜಿಯೆಂಬ ಹೆಸರು ಪ್ರಚಲಿತವಾಗಿರಬೇಕೆಂದು ಊಹೆ. ಎಫಿಸಸ್ಸಿನ ಕ್ಯಾಲಿನಸ್ (ಪ್ರ.ಶ. ಪು. 700) ಇಂಥ ಪದ್ಯವನ್ನು ಮೊದಲ ಬಾರಿಗೆ ಬರೆದ. ಆದರೆ ಇದು ಎಲಿಜಿಯಕ್ ಛಂದಸ್ಸಿನಲ್ಲಿರುವ ವೀರಗಾಥೆ. ಅಟಕದ ಆಫಿಡ್ನೇಯ ಕವಿ ಟಿರ್ಟೇಯಸ್ ಎಂಬಾತ (ಪ್ರ.ಶ.ಪು.ಸುಮಾರು 600) ರಾಜಕೀಯಕ್ಕೆ ಮತ್ತು ಸಂಗ್ರಾಮಕ್ಕೆ ಸಂಬಂಧಿಸಿದ ಕವಿತೆಗಳಿಗೆ ಎಲಿಜಿ ಎಂಬ ಹೆಸರು ಕೊಟ್ಟ ಸೋಲನ್ (ಪ್ರ.ಶ.ಪು.640-559) ಮತ್ತು ಮೆಗಾರಾದ ಥಿಯೋಗ್ನಿಸ್ (ಪ್ರ.ಶ.ಪು.540) ಬರೆದ ಪ್ರೇಮಗೀತೆಗಳಿಗೂ ರಾಜಕೀಯ ಮತ್ತು ವ್ಯಂಗ್ಯ ಕವಿತೆಗಳಿಗೂ ಎಲಿಜಿ ಎಂಬ ಹೆಸರನ್ನೇ ಕೊಟ್ಟಿದ್ದರು. ಮೊತ್ತಮೊದಲ ಬಾರಿಗೆ ಎಲಿಜಿಯಲ್ಲಿ ಶೋಕ ರಸವನ್ನು ತುಂಬಿದವ ಸಿಯೋಸಿನ ಸೈಮನೈಡೀಸ್ (ಪ್ರ.ಶ.ಪು.469). ಆದರೂ ಈ ಛಂದಸ್ಸಿನಲ್ಲಿ ಪ್ರೇಮ, ರಾಜಕೀಯ, ಯುದ್ಧ, ವ್ಯಕ್ತಿದ್ವೇಷ, ಪಾಂಡಿತ್ಯ, ವಿರಕ್ತಿ ಮುಂತಾದ ಎಲ್ಲ ವಿಷಯಗಳ ಬಗ್ಗೆಯೂ ಕವಿತೆಗಳು ಹುಟ್ಟಿಕೊಂಡಿದ್ದು, ಅವೆಲ್ಲಕ್ಕೂ ಎಲಿಜಿ ಎಂಬ ಹೆಸರೇ ಅಂಟಿಕೊಂಡಿದೆ. ರೋಮನ್ ಕವಿ ಮಾಂಟಯೇನಸ್ (ಪ್ರ.ಶ.416) ತಾನು ರೋಮಿನಿಂದ ಫ್ರಾನ್ಸಿಗೆ ಬಂದ ಪ್ರಯಾಣದ ವರ್ಣನೆಯನ್ನು ಎಲಜಿಯೆಂದೇ ಕರೆದಿದ್ದಾನೆ. ಆದ್ದರಿಂದ ಪ್ರಾರಂಭದಿಂದಲ್ಲೂ ಎಲಿಜಿಗೂ ಶೋಕಭಾವಕ್ಕೂ ಯಾವ ಸಂಬಂಧವೂ ಇರಲಿಲ್ಲ ವೆಂಬುದು ಸ್ಪಷ್ಟ. ಪ್ರ.ಶ.ಪು. 7ನೆಯ ಶತಮಾನದಿಂದ ಪ್ರ.ಶ. 10ನೆಯ ಶತಮಾನದವರೆಗೆ ಸುಮಾರು 16 ಶತಮಾನಗಳ ಕಾಲದಲ್ಲಿ ಚಾಟೂಕ್ತಿಗಳು, ಪ್ರೇಮಗೀತೆಗಳು, ವೀರಗಾಥೆಗಳು, ಒಗಟುಗಳು, ವ್ಯಕ್ತಿನಿಂದೆ ಮುಂತಾದ ಎಲ್ಲ ವಿಷಯಗಳನ್ನೂ ಒಳಗೊಂಡಿದ್ದು ಎಲಿಜಿ ಬಹಳ ಜನಪ್ರಿಯವಾಗಿತ್ತು. ಓವಿಡ್ (ಪ್ರ.ಶ.ಪು.43-ಪ್ರ.ಶ. 18) ಎಲಿಜಿಯಲ್ಲಿ ಹಾಸ್ಯ, ವ್ಯಂಗ್ಯೋಕ್ತಿ ಮತ್ತು ವಿಡಂಬನವನ್ನು ಸಕ್ರಿಯವಾಗಿ ಬಳಸಿದ. ಶೋಕಗೀತೆಯಾಗಿ ಮೊದಲಬಾರಿ ಬಂದದ್ದೆಂದರೆ ಪ್ರ.ಶ.ಪು.100ರ ಸುಮಾರಿನಲ್ಲಿ ಸಿಸಿಲಿಯಲ್ಲಿದ್ದ ಬಿಯಾನ್ ಎಂಬ ಗ್ರೀಕ್ ಕವಿ ಬರೆದ ಅಡೋನಿಸ್ (ಲ್ಯಾಮೆಂಟ್ ಫಾರ್ ಅಡೋನಿಸ್). ಇಲ್ಲಿ ಪ್ಯಾಸ್ಟೋರಲ್ ಎಲಿಜಿ (ನಿಸರ್ಗ ಶೋಕಗೀತೆ) ಎಂಬ ಹೊಸ ರೀತಿಯ ಸಂಪ್ರದಾಯ ಪ್ರಾರಂಭವಾಯಿತು. ಮೊದಲಿಗೆ ಸಾವಿನ ಬಗ್ಗೆ ದುಃಖ. ದೇಶಮಾತೆ, ದೇವತೆಗಳು, ಸತ್ತವನ ಸ್ನೇಹಿತರು, ಅವನ ವಿಚಾರಗಳು-ಇವೆಲ್ಲವೂ ಮೆರವಣಿಗೆಯಾಗಿ ಬಂದು ದುಃಖ ಪ್ರದರ್ಶಿತವಾಗುತ್ತದೆ. ಅನಂತರ ಸತ್ತವನ ಗೆಳೆಯನಾದ ಕವಿ ತನ್ನ ವೈಯಕ್ತಿಕ ಸಂಕಟವನ್ನು ತೋಡಿಕೊಳ್ಳುತ್ತಾನೆ. ಆದರೆ ಕೊನೆಯಲ್ಲಿ ಸಾವು ಸೋಲುತ್ತದೆ, ಬದುಕೇ ಗೆಲ್ಲುತ್ತದೆ ಎಂಬ ಆಶಾವಾದವನ್ನು ಪ್ರಕಟಿಸಿ, ಮನಸ್ಸಿಗೆ ಸಮಾಧಾನ ತಂದು ಕೊಳ್ಳುತ್ತಾನೆ. ಇದು ಈ ರೀತಿಯ ಕವಿತೆಯ ಚೌಕಟ್ಟು. ಬಂiÀiÁನ್ ಸತ್ತ ಅನಂತರ ಆತನ ಬಗ್ಗೆ ಅವನ ಸ್ನೇಹಿತ ಮಾಸ್ಕಸ್ ಇಂಥ ಪ್ಯಾಸ್ಟೋರಲ್ ಎಲಿಜಿಯನ್ನು ರಚಿಸಿದ. ಇಂಗ್ಲೆಂಡಿಗೆ ಎಲಿಜಿ 16ನೆಯ ಶತಮಾನದಲ್ಲಿ ಮೊದಲು ಕಾಲಿಟ್ಟಿತು. ಆಗಲೇ ಅದಕ್ಕೆ ಚರಮಗೀತೆ, ಮರಣಗೀತೆ ಅಥವಾ ಶೋಕಗೀತೆ ಎಂಬ ತಪ್ಪು ಅರ್ಥ ಕಲ್ಪನೆಯಾಯಿತು. 1576ರಲ್ಲಿ ಗ್ಯಾಸ್ಕಾಯಿನ್ ಕವಿ ಫಿಲೋಮಿನಳ ಗೋಳಾಟ ಎಂಬ ಪದ್ಯ ಬರೆದುದೇ ಮೊದಲ ಇಂಗ್ಲಿಷ್ ಎಲಿಜಿ. ಇಂಗ್ಲಿಷ್ ಭಾಷೆಯಲ್ಲಿ ಅತ್ಯಂತ ಪ್ರಖ್ಯಾತವಾದ ಎಲಿಜಿಗಳು: ಮಿಲ್ಟನನ ಲಿಸಿಡಾಸ್ (17ನೆಯ ಶತಮಾನ), ಗ್ರೇ ಕವಿಯ ಹಳ್ಳಿಯ ಶ್ಮಶಾನದಲ್ಲಿ ಬರೆದ ಎಲಿಜಿ (ಎಲಿಜಿ ರಿಟನ್ ಇನ್ ಎ ಕಂಟ್ರಿ ಚರ್ಚ್ಯಾರ್ಡ್, 18ನೆಯ ಶತಮಾನ), ಷೆಲ್ಲಿಯ ಆಡೊನೇಯಿಸ್ (19ನೆಯ ಶತಮಾನ), ಆರ್ನಲ್ಡನ ಥಿರ್ಸಿಸ್ (19ನೆಯ ಶತಮಾನ), ಟೆನಿಸನ್ನನ ‘ಇನ್ ಮೆಮೋರಿಯಮ್’ ಪ್ಯಾಸ್ಟೋರಲ್ ಎಲಿಜಿಯಲ್ಲ; ಅವನ ಗೆಳೆಯ ಆರ್ಥರ್ ಹೆನ್ರಿ ಹ್ಯಾಲಮ್ ತೀರಿಕೊಂಡಾಗ ಬರೆದ ಶೋಕ ಗೀತೆ. ರಾಬರ್ಟ್ ಬ್ರಿಜ್ಜಸ್ ಕವಿಯ ಎಲಿಜಿ (20ನೆಯ ಶತಮಾನ). ಡಬ್ಲ್ಯೂ.ಬಿ.ಯೇಟ್ಸನನ್ನು ಕುರಿತು ಡಬ್ಲ್ಯೂ ಎಚ್ ಆಡೆನ್ನನ ಕವನ (20ನೆಯ ಶತಮಾನ). ಫ್ರೆಂಚ್ ಭಾಷೆಯಲ್ಲಿ ರಾನ್ಸರ್ಡ್ ಲಾಮಾರ್ಲಿನ್, ರಷ್ಯನ್ ಭಾಷೆಯಲ್ಲಿ ಪುಷ್ಕಿನ್, ಮಾಯಾಕೋವ್ಸ್ಕಿ ಮುಂತಾದವರೂ ಇಂಥ ಎಲಿಜಿಗಳನ್ನು ಬರೆದಿದ್ದಾರೆ. (ಎಸ್.ಎ.ಎನ್.) ಈಚೆಗೆ ಆಂಗ್ಲಭಾಷೆಯಲ್ಲಿ ಪ್ಯಾಸ್ಟೋರಲ್ ಎಲಿಜಿಗಳು ಬಂದಿಲ್ಲ, ಆದರೆ ಎಲಿಜಿಗಳು ರಚಿತವಾಗುತ್ತಿವೆ. ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡ ತನ್ನ ಹೆಂಡತಿಯ ನೆನಪಿಗಾಗಿ ಡಗ್ಲಸ್ ಡನ್ ಬರೆದ ಮೂವತ್ತೊಂಬತ್ತು ಕವನಗಳು (1985) ಈ ಪ್ರಕಾರದಲ್ಲಿ ಹೆಸರಿಸಬೇಕಾದ ಕೃತಿಗಳು. ಕನ್ನಡದಲ್ಲಿ ಇಂಥ ಶೋಕಗೀತೆಗಳು ಬಹಳ ಕಡಿಮೆ. ಗಾಂಧೀಜಿಯವರಂಥ ಹಿರಿಯರು ತೀರಿಕೊಂಡಾಗ ಅನೇಕ ಕವಿಗಳು ಶೋಕಗೀತೆಗಳನ್ನು ಬರೆದಿದ್ದಾರೆ. ಹತ್ತಿರದವರು ತೀರಿಕೊಂಡಾಗ ಬರೆದ ಶೋಕಗೀತೆಗಳ ಸಂಖ್ಯೆ ಹೆಚ್ಚಿಲ್ಲ. ಕನ್ನಡ ಸಾಹಿತ್ಯದ ಮೊಟ್ಟಮೊದಲ ಎಲಿಜಿಗೆ/ಶೋಕಗೀತೆ - ಪಂಜೆ ಮಂಗೇಶರಾಯರ ಅಣ್ಣನ ವಿಲಾಪ (೧೮೯೬), ಸಾಲಿ ರಾಮಚಂದ್ರರಾಯರ 'ತಿಲಾಂಜಲಿ' (1932). ದ.ರಾ.ಬೇಂದ್ರೆಯವರ ‘ಹಾಡು ಪಾಡು’ (1946), ಎಸ್.ಅನಂತನಾರಾಯಣ ಅವರ ‘ಬಾಡದ ಹೂವು’ (1946). ಪುತಿನ ಅವರ ‘ತೀನಂಶ್ರೀಯವರನ್ನು ನೆನೆದು’ ಮತ್ತು ‘ಆಪ್ತ ಗೆಳೆಯನಿಗೆ ಕಂಬನಿ’. ಗಂಗಾಧರ ಚಿತ್ತಾಲರ ‘ದುಃಖಗೀತ’, ಇಂಥ ಕೆಲಸವನ್ನು ಹೆಸರಿಸಬಹುದು. ಚಿತ್ತಾಲರ ಕವನ ಬದುಕಿನ ಭಾಗವಾದ ಯಾತನೆಯೊಡನೆ ಮುಖಾಮುಖಿಯಾಗುತ್ತವೆ. ಯಾತನೆಯ ಮುಖಾಮುಖಿಯೊಂದಿಗೆ ಎಲ್ಲವನ್ನೂ ಹಲ್ಲು ಕಚ್ಚಿ ಸಹಿಸಬೇಕು. ಬದುಕಬೇಕು ಎನ್ನುವ ‘ಸ್ಟೋಯಿಸಿನಂ’ ಅಭಿವ್ಯಕ್ತವಾಗಿದೆ. ‘ಅಲಿಸಿಡಾಸ್’ ನಲ್ಲಿ ವ್ಯಕ್ತಿಯ ಸಾವಿನ ಸಂದರ್ಭದಲ್ಲಿ ಸಮಾಜಕ್ಕೆ ಸಂಬಂಧಿಸಿದ ಒಂದು ವಿಷಯವನ್ನು (ಚರ್ಚ್ನಲ್ಲಿ ಭ್ರಷ್ಟಾಚಾರ) ಪರಾಮರ್ಶಿಸುವ ಪದ್ಧತಿ ಪ್ರಾರಂಭವಾಯಿತು. ಗ್ರೇನ ‘ಎಲಿಜಿ’ ವಿಶಿಷ್ಟವಾದ ಕವನ; ಇದು ಯಾವ ಒಬ್ಬ ವ್ಯಕ್ತಿಯ ಸಾವನ್ನು ಕುರಿತದ್ದಲ್ಲ, ಹಳ್ಳಿಯ ಚರ್ಚ್ಯಾರ್ಡ್ನಲ್ಲಿ ಹೂತಿರುವ ಎಲ್ಲ ಜನರ ಸಾವನ್ನು ಕುರಿತ ಕವನವು ಹಳ್ಳಿಯವರ ಬದುಕು, ಅವರ ಬದುಕಿನೊಂದಿಗೆ ಶ್ರೀಮಂತರ ಮತ್ತು ಪ್ರತಿಷ್ಠಿತರ ಬದುಕಿನ ಹೋಲಿಕೆ ಈ ಚಿಂತನೆಗಳಿಗೆ ವಿಶಾಲಗೊಳ್ಳುತ್ತದೆ. ಶ್ರೇಷ್ಠ ಶೋಕಗೀತೆಗಳಲ್ಲಿ ತೀರಿಕೊಂಡ ಆಪ್ತನಿಗಾಗಿ ದುಃಖ ವ್ಯಕ್ತವಾಗುತ್ತದೆ. ಆದರೆ ದುಃಖ, ವೈಯಕ್ತಿಕ ಅನುಭವವಷ್ಟೇ ಆಗದೇ ಬದುಕನ್ನು ಕುರಿತ ಚಿಂತನೆಗೆ ಒಯ್ಯುತ್ತದೆ. ದುಃಖದಲ್ಲಿಯೂ ಬದುಕಿನ ಸ್ವೀಕಾರವನ್ನು ಕವನ ಮುಟ್ಟುತ್ತದೆ. (ಎಸ್.ಎ.ಎನ್.)