ವಿಷಯಕ್ಕೆ ಹೋಗು

ಎಸೈಯಾಸ್ ಟೆಂಗ್ನಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಸೈಯಾಸ್ ಟೆಂಗ್ನಾರ್- (೧೭೮೨-೧೮೪೬). ಪ್ರಸಿದ್ಧ ಸ್ವೀಡಿಪ್ ಕವಿ.

ಬದುಕು ಮತ್ತು ಬರಹ

[ಬದಲಾಯಿಸಿ]

ಹುಟ್ಟಿದ್ದು ವಾರಮ್ ಲ್ಯಾಂಡಿನ ಕೈರ್ಕೆರೂಡ್‍ನಲ್ಲಿ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಈತ ತನ್ನ ಕಾಲಮೇಲೆ ನಿಂತು ಸ್ವಸಾಮರ್ಥ್ಯದಿಂದ ಬಾಳನ್ನು ರೂಪಿಸಿಕೊಂಡ. ೧೭೯೯ ರಲ್ಲಿ ಲುಂಡ್ ವಿಶ್ವವಿದ್ಯಾಲಯ ಸೇರಿ ೧೮೦೨ ರಲ್ಲಿ ಪದವಿ ಗಳಿಸಿದ. ೧೮೧೨ ರಲ್ಲಿ ಗ್ರೀಕ್ ಭಾಷೆಯ ಪ್ರಾಚಾರ್ಯನಾಗಿ ಹನ್ನೆರಡು ವರ್ಷ ಸೇವೆ ಸಲ್ಲಿಸಿದ. ಅನಂತರ ವ್ಯಾಕ್ಸ್ ಜೊ ಪ್ರಾಂತದ ಬಿಷಪ್ ಆಗಿ ನೇಮಕಗೊಂಡ. ಟೆಂಗ್‍ನಾರ್‍ಗೆ ಕೀರ್ತಿ ತಂದ ಮೊದಲ ಕವನ ಸ್ವಿಯಾ. ಇದು ಉಜ್ಜ್ವಲ ದೇಶಭಕ್ತಿಯಿಂದ ಕೂಡಿದೆ. ಈ ಕವನ ೧೮೧೧ ರಲ್ಲಿ ಸ್ವೀಡನ್ ಅಕಾಡಮಿಯ ಅತ್ಯುಚ್ಚ ಬಹುಮಾನ ಪಡೆಯಿತು. ಎರಿಕ್ ಗಸ್ಟಾಫ್ ಗೇಯ್‍ಜರ್ ಎಂಬ ಕವಿ ಸ್ಥಾಪಿಸಿದ ರೊಮ್ಯಾಂಟಿಕ್ ಆದರ್ಶಗಳುಳ್ಳ ರಾಷ್ಟ್ರೀಯ ಸಂಘವನ್ನು ಟೆಂಗ್‍ನಾರ್ ೧೮೧೨-೧೩ ರ ಅವಧಿಯಲ್ಲಿ ಸಂಘದ ಇಡೂನಾ ಎಂಬ ನಿಯತಕಾಲಿಕದಲ್ಲಿ ಕೆಲವು ಉತ್ತಮ ಕವಿತೆಗಳನ್ನು ಪ್ರಕಟಿಸಿದ. ಅವುಗಳ ಪೈಕಿ ಮುಖ್ಯವಾದುವು ಉದಾತ್ತ ಶೈಲಿಯಲ್ಲಿ ಬರೆದ ಸ್ಕಾಲ್ಡೆನ್ಸ್ ಮಾರ್ಗೊನಸಾಮ್ ಹಾಗೂ ಸ್ಯಾಂಗ್ ಟಿಲ್‍ಸೋಲೇನ್. ಟೆಂಗ್‍ನಾರ್ ರೋಮ್ಯಾಂಟಿಕ್ ಚಳವಳಿಯ ಆದರ್ಶಗಳಿಂದ ಆಕರ್ಷಿತನಾದರೂ ಅದರ ಅತಿಭಾವುಕತೆ ಹಾಗೂ ಅನುಭಾವದ ಬರೆವಣಿಗೆಗಳ ಪ್ರಭಾವಕ್ಕೆ ಒಳಗಾಗಲಿಲ್ಲ. ಓಜಸ್ಸು ಮತ್ತು ಸ್ಪಷ್ಟತೆ ಈತನ ಕಾವ್ಯದ ವಿಶಿಷ್ಟ ಲಕ್ಷಣಗಳಾಗಿವೆ. ಪುರಾತನ ಐಸ್‍ಲ್ಯಾಂಡಿನ ವೀರಕಥನದ ವಸ್ತುವನ್ನು ಆಧರಿಸಿ ಬರೆದ ವೀರ ಕಾವ್ಯ ಫ್ರಿತ್ ಯೋಪ್ಸ್ ಸಾಗ (೧೮೨೫) ಈತನ ಶ್ರೇಷ್ಠ ಕೃತಿ. ಇದು ಸ್ವೀಡನ್ನಿನ ರಾಷ್ಟ್ರೀಯ ಕವನವೆಂದೇ ಪುರಸ್ಕಾರ ಗಳಿಸಿತು. ಈ ಪುರಸ್ಕಾರ ಈತನ ಜೀವನಕ್ಕೆ ತಿರುವು ಕೊಟ್ಟಿತು. ಇದು ಯೂರೋಪೀಯ ಅನೇಕ ಭಾಷೆಗಳಿಗೂ ಅನುವಾದಗೊಂಡಿದೆ. ಈತನ ನಾಟ್‍ವಡ್ರ್ಸ್ ಬಾರನ್ ಮತ್ತು ಆಕ್ಸೆಲ್ ಎಂಬ ಕಥನ ಕವನಗಳೂ ಪ್ರಸಿದ್ಧವಾಗಿವೆ. ಟಿಂಗ್‍ನಾರ್ ಆ ವರ್ಷವೇ ಅನಾರೋಗ್ಯ ಪೀಡಿತನಾದ ಮತ್ತು ಒಂದು ಪ್ರಣಯ ಪ್ರಸಂಗಕ್ಕೆ ಸಿಕ್ಕು ನಿರಾಶೆಗೊಂಡು ಅತಿ ದುಃಖಪಟ್ಟ. ಅಂದಿನ ಮನಃಸ್ಥಿತಿಯನ್ನು ಮಿಜಾಲ್ಟನ್ ಜûುಕಾನ್ (ಮೆಲಂಕೊಲಿಯ) ಎಂಬ ಕವನದಲ್ಲಿ ಹೃದಯಸ್ಪರ್ಶಿಯಾಗಿ ವರ್ಣಿಸಿದ್ದಾನೆ. ೧೮೨೬ ರಲ್ಲಿ ಈತ ಬಿಷಪ್ ಆಗಿ ನೇಮಕಗೊಂಡಿದ್ದರಿಂದ ಅಲ್ಲಿಂದ ಅವನ ಕಾಲವೆಲ್ಲವೂ ಧಾರ್ಮಿಕ ಕರ್ತವ್ಯಗಳಿಗೆ ಮೀಸಲಾಯಿತು. ಗಾತಿಕ್ ಕಾಲದ ವೀರಸಾಹಿತ್ಯದ ಪುನರುಜ್ಜೀವನದಿಂದ ಜನತೆಯ ನೈತಿಕ, ಆಧ್ಯಾತ್ಮಿಕತೆಯಲ್ಲಿಯೂ ಅಡಗಿದ್ದ ಜೀವನದ ಚಿರಂತನ ಮಾದರಿಗಳು ಉತ್ತರ ಯೂರೋಪೀಯ ಪುರಾಣಗಳಲ್ಲಿಯೂ ದೊರಕುವುವೆಂಬ ವಿಶ್ವಾಸ ಈತನಿಗಿತ್ತು. ಈ ದೃಷ್ಟಿಯಿಂದ ಧರ್ಮ, ತತ್ತ್ವಶಾಸ್ತ್ರ ಹಾಗೂ ಕಾವ್ಯ ಎಲ್ಲವೂ ಒಂದೇ ಎಂದು ಈತ ಭಾವಿಸಿದ. ಯಾವುದೇ ಸಾಹಿತ್ಯ ಕೃತಿಯನ್ನು ಒರೆಹಚ್ಚಿ ನೋಡಲು ವಿಚಾರಸ್ಪಷ್ಟತೆ ಹಾಗೂ ರೂಪದ ಸೊಗಸು ಈ ಎರಡು ಪ್ರಮಾಣಗಳು ಅಗತ್ಯವೆಂಬುದು ಈತನ ವಿಮರ್ಶೆಯ ಮೂಲತತ್ತ್ವ. ರೊಮ್ಯಾಂಟಿಕ್ ಸಾಹಿತ್ಯದ ಅಸ್ಪಷ್ಟತೆಯೂ ನೂತನ ಪ್ರಯೋಗಗಳೂ ಈತನಿಗೆ ಸರಿಬೀಳಲಿಲ್ಲ. ಅವುಗಳ ವಿರುದ್ಧ ಅಂದಿನ ವಿದ್ವಾಂಸರು ಹೂಡಿದ ಹೋರಾಟಕ್ಕೆ ಅನೇಕವೇಳೆ ಟೆಂಗ್‍ನಾರ್ ಬೆಂಬಲ ನೀಡಿದ್ದು ಈ ಕಾರಣಕ್ಕಾಗಿಯೆ. ಒಟ್ಟಿನಲ್ಲಿ ತನ್ನ ತಾತ್ತ್ವಿಕ ಚಿಂತನೆಯ ಭಾವಗೀತೆಗಳಿಂದಲೂ ರಸಿಕೋಕ್ತಿಗಳಿಂದಲೂ ಟೆಂಗ್‍ನಾರ್ ಸ್ವೀಡನ್ನಿನ ಸಾಹಿತ್ಯದಲ್ಲಿ ಗಣ್ಯಸ್ಥಾನ ಪಡೆದ. ಟೆಂಗ್‍ನಾರ್ ಸ್ವೀಡನ್ನಿನ ಆಕಾಡಮಿಯ ಸದಸ್ಯನೂ (೧೮೧೯) ಆಗಿದ್ದ.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: