ವಿಷಯಕ್ಕೆ ಹೋಗು

ಎಸ್.ನಾರಾಯಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಸ್. ನಾರಾಯಣ್
ಜನನಜೂನ್ ೪
ವೃತ್ತಿ(ಗಳು)ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಟ, ಚಿತ್ರ ಸಾಹಿತಿ

ಎಸ್. ನಾರಾಯಣ್ ಕನ್ನಡ ಚಿತ್ರರಂಗದ, ನಿರ್ದೇಶಕ, ನಿರ್ಮಾಪಕ, ನಟ ಹಾಗೂ ಚಿತ್ರ ಸಾಹಿತಿ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಚಿತ್ರರಂಗದಲ್ಲಿ ಗಣನೀಯ ಸಾಧನೆ ಮಾಡಿದವರು ನಿರ್ದೇಶಕ, ನಟ, ನಿರ್ಮಾಪಕ, ಚಿತ್ರಸಾಹಿತಿ ಹೀಗೆ ಬಹುಮುಖೀ ಪ್ರತಿಭೆ ಎಸ್. ನಾರಾಯಣ್. 1981ರ ವರ್ಷದಲ್ಲಿ ನಟನಾಗಬೇಕು ಎಂದುಕೊಂಡು ಬೆಂಗಳೂರಿಗೆ ಬಂದ ನಾರಾಯಣ್, ಅಂದು ಜನಪ್ರಿಯ ನಿರ್ದೇಶಕರಾಗಿದ್ದ ಭಾರ್ಗವ, ಎ.ಟಿ. ರಘು, ರಾಜ್‌ಕಿಶೋರ್ ಮುಂತಾದವರ ಬಳಿ ಸಹಾಯಕರಾಗಿ ಸೇರಿಕೊಂಡರು.

ಹೊಸ ಆಯಾಮ

[ಬದಲಾಯಿಸಿ]
  • ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ `ಶಬ್ದವೇದಿ`, ವಿಷ್ಣುವರ್ಧನ್ ಅಭಿನಯದ `ವೀರಪ್ಪ ನಾಯ್ಕ`, ಹೊಸತನದದಿಂದ ಭಾರೀ ಯಶಸ್ಸುಗಳಿಸಿದ `ಚೈತ್ರದ ಪ್ರೇಮಾಂಜಲಿ`, ‘ಚಂದ್ರ ಚಕೋರಿ’ ಮೊದಲಾದ ಚಿತ್ರಗಳ ಮೂಲಕ ಚಿತ್ರರಂಗಕ್ಕೊಂದು ಹೊಸ ಆಯಾಮ ಸೃಷ್ಟಿಸಿದ ಖ್ಯಾತಿ ನಾರಾಯಣ್‌ ಅವರದು. ರಾಜೇಂದ್ರ ಸಿಂಗ್ ಬಾಬು `ಕುರಿಗಳು ಸಾರ್ ಕುರಿಗಳು` ನಿರ್ಮಿಸಿದಾಗ ಹಾಸ್ಯ ನಟನಾಗಿ ನಟನಾ ಪ್ರತಿಭೆ ಪ್ರದರ್ಶಿಸಿ, ಸತತವಾಗಿ `ಸಾರ್ ಸರಣಿ ನಿರ್ಮಾಣಕ್ಕೆ ರಾಜೇಂದ್ರ ಸಿಂಗ್ ಬಾಬು ಅವರಿಗೆ ಪ್ರೇರಣೆ ನೀಡಿದವರು ನಾರಾಯಣ್.
  • ಸಿನಿಮಾ ಸೇರಬೇಕೆಂದು ನಾರಾಯಣ್ 1981ರಲ್ಲಿ ಬೆಂಗಳೂರಿಗೆ ಬಂದಾಗ ಹರಕಲು ಶರಟು, ಒಂದು ರೂಪಾಯಿ ಇತ್ತಂತೆ. ಮೊದಲ ಚಿತ್ರ `ಚೈತ್ರದ ಪ್ರೇಮಾಂಜಲಿ` ಮಾಡಿದಾಗ ಹಂಸಲೇಖ ಜೊತೆಯಲ್ಲಿದ್ದರು. ಎಲ್ಲರ ಮನದಲ್ಲಿ ಉಳಿದಿದ್ದ ಹಾಡುಗಳು ಚಿತ್ರಕ್ಕೂ, ನಿರ್ದೇಶಕ ನಾರಾಯಣ್ ಅವರಿಗೂ ಜನಮನ್ನಣೆ ತಂದುಕೊಟ್ಟಿತು.
  • ಮೊದಲನೆ ಚಿತ್ರದಲ್ಲೇ ನಾರಾಯಣ್‌ ಅವರಿಗೆ ಯಶಸ್ಸು ಕೂಡಿಬಂತು. ನಂತರ ಅವರದು ನೇರ ಹಾದಿ. ಈ ಹಾದಿಯಲ್ಲಿ ಸೋಲು, ಗೆಲುವು ಸಮಸಮನಾಗಿದೆ. ಇದುವರೆವಿಗೂ ಅವರು ಸುಮಾರು 45 ಚಿತ್ರಗಳನ್ನು ನಿರ್ದೇಶಿಸಿದ್ದು ಸುಮಾರು ಇಪ್ಪತ್ತು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಗೆಲುವಿನ ಹಾದಿ

[ಬದಲಾಯಿಸಿ]

`ಅನುರಾಗದ ಅಲೆಗಳು`, `ಕ್ಯಾಪ್ಟನ್`, `ಮೇಘಮಾಲೆ` ಹೀಗೆ ತಮ್ಮ ಹಲವಾರು ಚಿತ್ರಗಳು ಸತತವಾಗಿ ಸೋಲನ್ನು ಕಂಡಾಗ ಕೂಡ ನಾರಾಯಣ್ ಧೃತಿಗೆಡಲಿಲ್ಲ. ಒಂದೆರೆಡು ವರ್ಷ ಮೌನವಾಗಿದ್ದು ಮತ್ತೆ ಸ್ವಂತ ನಿರ್ಮಾಣ ಆರಂಭಿಸಿದರು. ಕಡಿಮೆ ವೆಚ್ಚದಲ್ಲಿ `ನಿಘಾತ` ಪತ್ತೆದಾರಿ ಚಿತ್ರ ಮಾಡಿದರು. ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡರು. `ಭಾಮಾ, ಸತ್ಯಭಾಮಾ`, `ನನ್ನವಳು ನನ್ನವಳು`, `ಅಂಜಲಿ ಗೀತಾಂಜಲಿ` ಮೂಲಕ ಹೀರೋ ಆದರು. ರಾಜ್‌ಕುಮಾರ್ ಅವರ ಅಭಿನಯದ ಕೊನೆಯ ಚಿತ್ರ `ಶಬ್ದವೇದಿ`, ವಿಷ್ಣುವರ್ಧನ್ ಅಭಿನಯದ `ವೀರಪ್ಪನಾಯಕ`, `ಸೂರ್ಯವಂಶ`, ಸಿಂಹಾದ್ರಿಯ ಸಿಂಹ, ಶಿವರಾಜ್‌ಕುಮಾರ್ ಜತೆ `ಗಲಾಟೆ ಅಳಿಯಂದ್ರು..`, ಹೊಸ ನಟ ಮುರಳಿಯ ‘ಚಂದ್ರ ಚಕೋರಿ’, ಪುನೀತ್ ರಾಜ್ ಕುಮಾರ್ ನಟಿಸಿದ ‘ಮೌರ್ಯ’ ನಾರಾಯಣರ ಗೆಲುವಿನ ಹಾದಿ ಇದು.

ಶಿಸ್ತಿನ ಸಿಪಾಯಿ

[ಬದಲಾಯಿಸಿ]
  • `ಅನುರಾಗದ ಅಲೆಗಳು` ಚಿತ್ರೀಕರಣ ಸಮಯದಲ್ಲಿ ರಾಜಕುಮಾರ್ ಅವರು, ನಾರಾಯಣ್ ಅವರ ಶಿಸ್ತು, ಚಿತ್ರೀಕರಣದ ಕೆಲಸದಲ್ಲಿ ತೊಡಗಿಕೊಳ್ಳುವ ತಲ್ಲೀನತೆಯನ್ನು ಕಂಡು ನನ್ನ ಮುಂದಿನ ಚಿತ್ರ ನೀವೇ ಮಾಡಿ ಎಂದು ಹೇಳಿದ್ದರಂತೆ. ಅದೇ ರೀತಿ `ಶಬ್ಧವೇದಿ`ಗೆ ನಾರಾಯಣ್ ನಿರ್ದೇಶಕರಾದರು. `ರಾಜ್, ವಿಷ್ಣು, ಅಂಬರೀಷ್ ಮುಂತಾದವರು ಕೂಡಾ ಬೆಳಿಗ್ಗೆ 7 ಗಂಟೆಗೆ ನನ್ನ ಚಿತ್ರದ ಸೆಟ್‌ಗೆ ಆಗಮಿಸಿ ಕೆಲಸಮಾಡಿದ್ದಾರೆ.” ಎನ್ನುವ ನಾರಾಯಣ್ ಅವರಿಗೆ ‘ಇಂದಿನ ನಾಯಕರು ಅಂತಹ ಶಿಸ್ತನ್ನು ಇಟ್ಟುಕೊಂಡಿಲ್ಲ” ಎಂಬ ಕುರಿತು ಅತೃಪ್ತಿಯಿದೆ. *“ಕೆಲಸವನ್ನು ನಾನು ಪ್ರೀತಿಸ್ತೀನಿ. ಆದರೆ ಇವತ್ತು ಚಿತ್ರರಂಗದಲ್ಲಿ ಅಂತಹ ಶಿಸ್ತು ಹೋಗಿಬಿಟ್ಟಿದೆ. ನಿರ್ದೇಶಕರ ಮೇಲೆ ನಟರು, ನಿರ್ಮಾಪಕರು ಸವಾರಿ ಮಾಡ್ತಾ ಇದ್ದಾರೆ” ಎಂದು ಬೇಸರಗೊಂಡಿದ್ದ ನಾರಾಯಣ್ ಅವರು ಚಿತ್ರರಂಗ ಬಿಟ್ಟು ನಿವೃತ್ತಿ ಘೋಷಿಸಿದ್ದರು. ಆದರೆ ಅವರ ಸಾಮರ್ಥ್ಯವನ್ನು ಬಲ್ಲ ಕೆಲವು ಆಪ್ತ ಮಂದಿ ಅವರ ಮನವೊಲಿಸಿ ಪುನಃ ಅವರನ್ನು ಚಿತ್ರರಂಗಕ್ಕೆ ಕರೆದುತಂದರು. ನಾರಾಯಣ್ ಇನ್ನೇನು ಉಪೇಂದ್ರರ ಚಿತ್ರ ಕೂಡಾ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ಧಿಯೂ ಇದೆ.

ಒಂದೆಡೆ ಛತ್ರಿ ಮತ್ತೊಂದೆಡೆ ಸಾಮ್ರಾಟ್

[ಬದಲಾಯಿಸಿ]

ಇತ್ತೀಚಿನ ಹಾಸ್ಯ ಚಿತ್ರವಾದ ‘ಛತ್ರಿಗಳು ಸಾರ್...’ ಚಿತ್ರದಲ್ಲಿ ಒಬ್ಬ ಛತ್ರಿಯಾಗಿದ್ದಾರೆ. ಆದರೆ ಚಿತ್ರಲೋಕದಲ್ಲಿ ಅವರು ‘ಕಲಾ ಸಾಮ್ರಾಟ್’ ಎಂದು ಗೌರವ ಪಡೆದವರು.

ಪ್ರಶಸ್ತಿ

[ಬದಲಾಯಿಸಿ]

ನಾರಾಯಣ್ ಅವರ ಶಬ್ಧವೇದಿ, ವೀರಪ್ಪ ನಾಯ್ಕ, ಚಂದ್ರ ಚಕೋರಿ ರಾಜ್ಯ ಪ್ರಶಸ್ತಿ ಪಡೆದಿವೆ.

ಕಿರುತೆರೆಯಲ್ಲಿ

[ಬದಲಾಯಿಸಿ]

ಕಿರುತೆರೆಯಲ್ಲೂ ಅವರ ಸುಮತಿ, ಭಾಗೀರತಿ, ಅಂಬಿಕಾ, ದುರ್ಗ, ಪಾರ್ವತಿ, ಚಂದ್ರಿಕಾ, ಸೂರ್ಯವಂಶ, ವೈಶಾಲಿ, ಮುಂತಾದವು ಧಾರವಾಹಿಗಳಾಗಿ ಮೂಡಿಬಂದಿವೆ.