ವಿಷಯಕ್ಕೆ ಹೋಗು

ಔಡಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಏರಂಡ ಇಂದ ಪುನರ್ನಿರ್ದೇಶಿತ)
ಔಡಲ
Leaves and flowers (male flowers on top) of a Castor oil plant
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಉಪಪಂಗಡ:
Ricininae[]
ಕುಲ:
Ricinus

ಪ್ರಜಾತಿ:
R. communis
Binomial name
Ricinus communis
L.
Ricinus communis

ಔಡಲ ಯೂಫೋರ್ಬಿಯೇಸಿ ಕುಟುಂಬಕ್ಕೆ ಸೇರಿದ ಮಧ್ಯಮ ಎತ್ತರಕ್ಕೆ ಬೆಳೆಯುವ ವಾರ್ಷಿಕ ಗಿಡ. ಬಹುವಾರ್ಷಿಕ ಬಗೆಗಳೂ ಉಂಟು.

ವೈಜ್ಞಾನಿಕ ಹೆಸರು

[ಬದಲಾಯಿಸಿ]

ರಿಸಿನಸ್ ಕಮ್ಯೂನಿಸ್ ಎಂಬುದು ವೈಜ್ಞಾನಿಕ ಹೆಸರು. ಹರಳು ಪರ್ಯಾಯ ನಾಮ.

ಹರಡುವಿಕೆ

[ಬದಲಾಯಿಸಿ]

ಇದು ಮೂಲತಃ ಆಫ್ರಿಕದ್ದೆಂದು ಕೆಲವರೂ ಭಾರತದ್ದೆಂದು ಮತ್ತೆ ಕೆಲವರೂ ಅಭಿಪ್ರಾಯಪಡುತ್ತಾರೆ. ಈಚೆಗೆ ಉಷ್ಣ ಮತ್ತು ಸಮಶೀತೋಷ್ಣವಲಯದ ದೇಶಗಳಲ್ಲಿ ಇದನ್ನು ಹೇರಳವಾಗಿ ಬೆಳೆಸುತ್ತಾರೆ.

ಲಕ್ಷಣಗಳು

[ಬದಲಾಯಿಸಿ]
The green capsule dries and splits into three sections, forcibly ejecting seeds

ಇದು ಪೊದರು ಸಸ್ಯವಾಗಿಯೊ ಮರವಾಗಿಯೊ ಬೆಳೆಯುವುದು. ಉಷ್ಣವಲಯದಲ್ಲಿ ಅನೇಕ ಕಡೆ ಇದು 40´ಗಳಷ್ಟು ಎತ್ತರದ ಮರವಾಗಿ ಬೆಳೆಯುವುದೂ ಉಂಟು. ಸಾಮಾನ್ಯವಾಗಿ ಹೊಲಗಳಲ್ಲಿ ಬೆಳೆಸುವ ಔಡಲ ಸುಮಾರು 15´ಗಳಷ್ಟು ಎತ್ತರವಿರುತ್ತದೆ. ಕಾಂಡ ನಯ, ಬಣ್ಣ ನಸು ಊದಾ ಅಥವಾ ಹಸಿರು. ಕೆಲವು ತಳಿಗಳಲ್ಲಿ ಕಾಂಡದ ಮೇಲೆಲ್ಲ ಬಿಳಿಯ ಮೇಣದಂಥ ಲೇಪವಿರುತ್ತದೆ. ಗಿಡಕ್ಕೆ ವಯಸ್ಸಾದಂತೆಲ್ಲ ಕಾಂಡ ಟೊಳ್ಳಾಗುವುದು. ಎಲೆಗಳು ಅಗಲ, ಹಸ್ತಾಕಾರ; ಪರ್ಯಾಯವಾಗಿ ಜೋಡಣೆಗೊಂಡಿವೆ. ಅಂಚು ಗರಗಸದ ಹಲ್ಲಿನಂತೆ, ಹೂಗಳು ಏಕಲಿಂಗಗಳು. ಗಂಡು ಮತ್ತು ಹೆಣ್ಣು ಹೂಗಳೆರಡೂ ದೊಡ್ಡದಾದ ಒಂದೇ ಸಂಕೀರ್ಣ ಪುಷ್ಪಗುಚ್ಛದಲ್ಲಿ ಜೋಡಣೆಗೊಂಡಿವೆ. ಕೆಲವು ಬಗೆಗಳಲ್ಲಿ ಕೇವಲ ಹೆಣ್ಣು ಹೂಗಳನ್ನು ಮಾತ್ರ ಒಳಗೊಂಡ ಪುಷ್ಪಗುಚ್ಛವಿರುತ್ತದೆ. ಈ ಗುಣವನ್ನು ಅಡ್ಡತಳಿಯೆಬ್ಬಿಕೆ ಪ್ರಯೋಗಗಳಲ್ಲಿ ಬಳಸಿಕೊಳ್ಳುವರು. ಹೂಗಳಿಗೆ ದಳಗಳಿಲ್ಲ, ಬರಿಯ ಪುಷ್ಪಪತ್ರ ಮಾತ್ರ ಉಂಟು. ಗಂಡು ಹೂವಿನಲ್ಲಿ ಕವಲೊಡೆದು ಹಲವಾರು ಕೇಸರಗಳಿವೆ. ಹೆಣ್ಣು ಹೂವಿನಲ್ಲಿ ಉಚ್ಚಸ್ಥಾನದ ಮೂರು ಕಾರ್ಪೆಲ್ಲುಗಳನ್ನೊಳಗೊಂಡ ಅಂಡಾಶಯವಿದೆ. ಅಂಡಕೋಶದಲ್ಲಿ ಮೂರು ಕೋಣೆಗಳಿವೆಯಲ್ಲದೆ ಒಂದೊಂದು ಕೋಣೆಯಲ್ಲಿ ಒಂದೊಂದರಂತೆ ಅಂಡಕಗಳಿವೆ. ಕಾಯಿ ಸಂಪುಟ (ಕ್ಯಾಪ್ಸುಲ್) ಮಾದರಿಯದು. ಮೇಲೆಲ್ಲ ಮುಳ್ಳುಗಳು, ಒಳಗೆ ಮೂರು ಬೀಜಗಳು ಇವೆ. ಬೀಜಗಳ ಮೇಲೆ ನಯವಾದ ಸಿಪ್ಪೆಯೂ ಅದರ ಮೇಲೆ ವಿವಿಧ ವರ್ಣವಿನ್ಯಾಸಗಳೂ ಇವೆ. ಕಾಯಿ ಬಲಿತಾಗ ಫಟ್ಟನೆ ಸಿಡಿದು ಬೀಜಗಳನ್ನು ಹೊರಕ್ಕೆ ಚಿಮ್ಮಿಸುತ್ತದೆ. ಅಲ್ಲದೆ ಕಾಯಿಗಳು ಒಂದೇ ಬಾರಿಗೆ ಬಲಿಯದೆ ಒಂದಾದಮೇಲೊಂದರಂತೆ ನಿಧಾನವಾಗಿ ಬಲಿತು ಬೀಜಗಳನ್ನು ಸಿಡಿಸುತ್ತವೆ. ಇದರಿಂದ ಬೀಜಸಂಗ್ರಹಣೆ ಕಷ್ಟ. ಈ ತೊಂದರೆಯನ್ನು ನಿವಾರಿಸಲೋಸುಗ ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ತಾವಾಗಿಯೇ ಒಡೆಯದ ಕಾಯಿಗಳುಳ್ಳ, ಗಿಡದ ಎಲ್ಲ ಕಾಯಿಗಳೂ ಏಕಕಾಲದಲ್ಲಿ ಬಲಿಯುವಂಥ ಗುಣವುಳ್ಳ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುತ್ತಾರೆ.

ವಾಣಿಜ್ಯ ಬೆಳೆಯಾಗಿ

[ಬದಲಾಯಿಸಿ]

ಔಡಲ ಒಂದು ಮುಖ್ಯವಾದ ವಾಣಿಜ್ಯ ಬೆಳೆ. ಇದರ ಬೀಜದಲ್ಲಿರುವ ಎಣ್ಣೆಗೋಸ್ಕರ ಇದು ಕೈಗಾರಿಕೆಗಳ ದೃಷ್ಟಿಯಿಂದ ಮಹತ್ತ್ವ ಪಡೆದಿದೆ. ಅಮೆರಿಕದ ಸಂಯುಕ್ತಸಂಸ್ಥಾನಗಳು. ಈಜಿಪ್ಟ್‌, ಸೂಡಾನ್, ಮಧ್ಯ ಹಾಗೂ ಪುರ್ವ ಆಫ್ರಿಕ, ಭಾರತ, ಚೀನ, ಜಪಾನ್, ಬ್ರೆಜಿಲ್ ಮುಂತಾದ ದೇಶಗಳಲ್ಲಿ ಇದನ್ನು ವಿಸ್ತಾರವಾಗಿ ಬೆಳೆಸುತ್ತಿದ್ದಾರೆ. ಭಾರತದಲ್ಲಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಇದರ ವ್ಯವಸಾಯಕ್ಕೆ ಹೆಸರಾದುವು.ಪ್ರಪಂಚದ ಔಡಲ ಬೆಳೆಯ ವಾರ್ಷಿಕ ಪ್ರಮಾಣವನ್ನು ಇಲ್ಲಿ ಕೊಡಲಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಔಡಲ ಬೆಳೆಯುವ ಹತ್ತು ರಾಷ್ಟ್ರಗಳು – 2013
ದೇಶ ಉತ್ಪಾದನೆ (ಟನ್ನುಗಳಲ್ಲಿ) ಟಿಪ್ಪಣಿ
 ಭಾರತ 1,744,000
 People's Republic of China 60,000 *
 Mozambique 60,000 F
 Ethiopia 13,000 *
 Thailand 12,000 *
 ಬ್ರೆಜಿಲ್ 11,953
 Paraguay 11,000 *
 South Africa 6,200 F
 ಪಾಕಿಸ್ತಾನ 6,000 *
 Viet Nam 6,000 *
 World 1,854,775 A
No symbol = official figure, F = FAO estimate, * = Unofficial/Semi-official/mirror data, A = Aggregate (may include official, semi-official or estimates);

Source: Food And Agricultural Organization of United Nations: Economic And Social Department: The Statistical Division Archived 2012-06-19 ವೇಬ್ಯಾಕ್ ಮೆಷಿನ್ ನಲ್ಲಿ.

ಬೇಸಾಯ

[ಬದಲಾಯಿಸಿ]

ಔಡಲ ಒಂದು ಒರಟು ಸಸ್ಯ. ಇದು ವಿವಿಧ ಮಣ್ಣು ಮತ್ತು ವಾತಾವರಣಗಳಲ್ಲಿ ಬೆಳೆಯಬಲ್ಲುದು. ಬೇರೆ ಏನನ್ನೂ ಬೆಳೆಯಲು ಸಾಧ್ಯವಾಗದ ಕಡೆಗಳಲ್ಲೂ ತೀರ ನಿಕೃಷ್ಟವಾದ ಮರಳಿನಂಥ ಮಣ್ಣಿನಿಂದ ಹಿಡಿದು ಬಹಳ ಉತ್ಕೃಷ್ಟವಾದ ಮೆಕ್ಕಲು ಮಣ್ಣಿಲ್ಲಿಯೂ ಇದನ್ನು ಬೆಳೆಸಬಹುದು. ವಾರ್ಷಿಕ ಬೆಳೆಯಾದ ಇದು ಸಾಮಾನ್ಯವಾಗಿ 280 ದಿವಸಗಳ ಕಾಲ ಬದುಕಿರುತ್ತದೆ. ನೀರಾವರಿ ಸೌಕರ್ಯವಿದ್ದರೆ ಇದು ಬಹು ವಾರ್ಷಿಕ ಸಸ್ಯವಾಗಿ ಬೆಳೆಯುವುದೂ ಉಂಟು. ಸಾಧಾರಣವಾಗಿ ಇದನ್ನು ಹತ್ತಿ, ಕಡಲೆಕಾಯಿ ಮುಂತಾದುವುಗಳೊಡನೆ ಮಿಶ್ರ ಬೆಳೆಯಾಗಿ ಬೆಳೆಸುತ್ತಾರೆ. ಬೀಜದ ಇಳುವರಿ ಎಕರೆಗೆ 400-900 ಪೌಂಡುಗಳು. ಔಡಲ ಸಸ್ಯದಲ್ಲಿ ಹಲವಾರು ವಿಧಗಳಿವೆ. ಅವು ಬೀಜಗಳ ಗಾತ್ರ, ಬಣ್ಣ ಹಾಗೂ ಎಣ್ಣೆಯ ಪ್ರಮಾಣಗಳಲ್ಲಿ ವ್ಯತ್ಯಾಸವನ್ನು ತೋರುತ್ತವೆ. ಕೆಲವು ಬಗೆಗಳಲ್ಲಿ ಬೀಜದ ಗಾತ್ರ 3/16" ಇದ್ದರೆ ಇನ್ನು ಕೆಲವು ಬಗೆಗಳಲ್ಲಿ 1/2" ಅಥವಾ 7/8" ಇರುತ್ತದೆ. ಹಾಗೆಯೇ ಕೆಲವು ವಿಧಗಳ ಬೀಜಗಳಲ್ಲಿ 56% ರಷ್ಟು ಎಣ್ಣೆಯಿದ್ದರೆ ಉಳಿದವುಗಳಲ್ಲಿ 48%ರಷ್ಟು ಎಣ್ಣೆಯಿರುತ್ತದೆ. ಸಾಧಾರಣವಾಗಿ ಶುಷ್ಕಭೂಮಿಯಲ್ಲಿ ಬೆಳೆಯುವ ಔಡಲ ಗಿಡಗಳು ವಾರ್ಷಿಕ ಸಸ್ಯಗಳು. ಅವುಗಳ ಬೀಜ ಸಣ್ಣಗಿದ್ದರೂ ಎಣ್ಣೆಯ ಪ್ರಮಾಣ ಅಧಿಕ. ದೊಡ್ಡ ಗಾತ್ರದ ಬೀಜಗಳನ್ನುಳ್ಳ ಔಡಲ ಗಿಡಗಳಲ್ಲಿ ಎಣ್ಣೆಯ ಪ್ರಮಾಣ ಕಡಿಮೆ. ಸ್ವಾಭಾವಿಕವಾಗಿ ಕಾಣಬರುವ ಈ ಬಗೆಗಳಲ್ಲದೆ ಅಡ್ಡತಳಿಯೆಬ್ಬಿಸಿ ಪಡೆದಿರುವ ಉತ್ತಮ ತಳಿಗಳೂ ವ್ಯವಸಾಯದಲ್ಲಿವೆ. ಸಾಮಾನ್ಯವಾಗಿ ಇವೆಲ್ಲವೂ ಅನಾವೃಷ್ಟಿ ಪರಿಸ್ಥಿತಿಗೆ ಪ್ರತಿರೋಧಕ ಶಕ್ತಿಯನ್ನು ಪಡೆದಿದ್ದು ಹೆಚ್ಚು ಇಳುವರಿ ಕೊಡುತ್ತವೆ.

ಉಪಯೋಗಗಳು

[ಬದಲಾಯಿಸಿ]
Seeds

ಔಡಲ ತನ್ನ ಬೀಜದಲ್ಲಿರುವ ಎಣ್ಣೆಯಿಂದಾಗಿ ಬಹಳ ಉಪಯುಕ್ತ ಬೆಳೆಯೆನಿಸಿದೆ. ಹಸಿಬೀಜಗಳನ್ನು ನೆಗ್ಗಿ ಅಥವಾ ಗಾಣಕ್ಕೆ ಕೊಟ್ಟು ಎಣ್ಣೆ ತೆಗೆಯುವುದು. ಹರಳುಬೀಜಗಳನ್ನು ಕುಟ್ಟಿ ಬೇಯಿಸಿ ಎಣ್ಣೆ ತೆಗೆಯುವುದೂ ಹಿಂದಿನಿಂದ ರೂಢಿಯಲ್ಲಿರುವ ಗೃಹಕೈಗಾರಿಕೆ. ಹಸಿಬೀಜಗಳಿಂದ ತೆಗೆದ ಎಣ್ಣೆ ಬಣ್ಣರಹಿತ ಅಥವಾ ನಸುಹಳದಿ ಬಣ್ಣದ್ದಾಗಿರುತ್ತದೆ. ವಾಸನೆಯೂ ಕಡಿಮೆ. ಔಷಧಿ ರೂಪದಲ್ಲಿ ಬಳಸುವುದಕ್ಕೆ ಹಸಿಬೀಜದ ಎಣ್ಣೆಯೇ ಉತ್ತಮ. ಈಚೆಗೆ ಯಂತ್ರಗಳಿಂದ ಹಸಿ ಎಣ್ಣೆಯನ್ನು ಹಿಂಡಿ, ಶುದ್ಧೀಕರಿಸಿ, ಸ್ನಿಗ್ಧತೆಯನ್ನು ಕಡಿಮೆ ಮಾಡಿ, ಸುಗಂಧಗಳನ್ನೂ ಬಣ್ಣಗಳನ್ನೂ ಕೂಡಿಸಿ ಮನೋಹರವಾದ ಕೇಶತೈಲಗಳನ್ನು ಸಿದ್ಧಪಡಿಸುವ ಉದ್ಯಮ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಬೇಯಿಸಿ ತೆಗೆದ ಎಣ್ಣೆ ಸ್ವಲ್ಪ ಕೆಂಪಾಗಿರುತ್ತದೆ. ಔಡಲ ಎಣ್ಣೆಗೆ ಓಕರಿಕೆ ತರುವ ವಿಶಿಷ್ಟ ರುಚಿ ಉಂಟು. ಇದರ ಉಪಯೋಗಗಳು ಹಲವಾರು. ಆಯುರ್ವೇದ, ಸಿದ್ಧ ಹಾಗೂ ಯುನಾನಿ ಔಷಧಿ ಪದ್ಧತಿಗಳಲ್ಲೆಲ್ಲ ಹರಳೆಣ್ಣೆಯ ಉಪಯೋಗ ಇದ್ದೇ ಇದೆ. ಎಣ್ಣೆಯನ್ನು ಮೈಗೆ, ತಲೆಗೆ ಹಚ್ಚಿಕೊಂಡು ಅಭ್ಯಂಜನ ಸ್ನಾನ ಮಾಡುವುದು ಎಲ್ಲರಿಗೂ ತಿಳಿದದ್ದೇ. ಹಿಂದಿನ ಕಾಲದಲ್ಲಿಯೂ ಹರಳೆಣ್ಣೆ ಸುಖರೇಚಕವೆಂದು ಹೆಸರಾಗಿದೆ. ಎಳೆಯ ಮಕ್ಕಳಾಗಲಿ, ಮುದುಕರಾಗಲಿ ಇದನ್ನು ತೆಗೆದುಕೊಂಡರೆ ದೇಹದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮವಾಗದು. ಹರಳೆಣ್ಣೆ ಜಠರರಸದೊಡನೆ ವರ್ತಿಸಿದಾಗ ರಿಸಿನೋಲಿಯಿಕ್ ಆಮ್ಲವೆಂಬ ಚುರುಗುಟ್ಟಿಸುವ ವಸ್ತು ಉತ್ಪತ್ತಿಯಾಗಿ ಕರುಳಿನ ಗೋಡೆ ಇರುಕಿಸುವಂತೆ ಮಾಡಿ ಭೇದಿಯುಂಟಾಗುತ್ತದೆ. ಎಣ್ಣೆ ಸೇವಿಸಿದ ನಾಲ್ಕು ಐದು ಗಂಟೆಗಳ ಅನಂತರ ವಿರೇಚನಕಾರ್ಯ ಆರಂಭವಾಗುತ್ತದೆ. ಗ್ಲಿಸರೀನಿನೊಂದಿಗೆ ಹರಳೆಣ್ಣೆ ಮಿಶ್ರಮಾಡಿ ಸೇವಿಸಿದರೆ ಪರಿಣಾಮ ಹೆಚ್ಚು. ಎಣ್ಣೆಯನ್ನು ಅತಿಸಾರ, ಮೂಲವ್ಯಾಧಿ, ಸಂಧಿವಾತ, ಕಟಿವಾಯು, ಹೊಟ್ಟೆನುಲಿತ ಮುಂತಾದ ರೋಗಗಳಿಗೂ ಬಳಸುತ್ತಾರೆ. ಕೆಲವು ಬಗೆಯ ಕಣ್ಣಿನ ಊತಗಳಿಗೆ (ಕಂಜಂಕ್ಟಿವಿಟಿಸ್) ಹರಳೆಣ್ಣೆಯ ಬಳಕೆಯಿಂದ ತಾತ್ಕಾಲಿಕ ಪರಿಹಾರ ಸಿಗುತ್ತದೆ. ಎಣ್ಣೆಯಿಂದರಲ್ಲೇ ಅಲ್ಲದೆ ಬೇರು, ಬೀಜ, ಎಲೆ ಇವುಗಳಲ್ಲೂ ಔಷಧೀಯ ಗುಣಗಳಿವೆ. ಬೇರು ಮತ್ತು ಬೀಜಗಳಿಂದ ತಯಾರಿಸಿದ ಕಷಾಯವನ್ನು ಸಂಧಿವಾತ, ಕಟಿವಾಯುಗಳ ರೋಗನಿವಾರಣೆಗೆ ಉಪಯೋಗಿಸುತ್ತಾರೆ. ಹರಳೆಣ್ಣೆಯಿಂದ ಹಲವಾರು ಉತ್ಪನ್ನಗಳನ್ನು ಪಡೆಯಬಹುದು. ಎಣ್ಣೆಯನ್ನು ಆಮ್ಲಜನಕದೊಡನೆ 800-1300 ಸೆಂ. ಉಷ್ಣತೆಯಲ್ಲಿ ವರ್ತಿಸುವಂತೆಮಾಡಿ ಉತ್ಕರ್ಷಿತ ತೈಲ (ಬ್ಲಾನ್ ಆಯಿಲ್) ತಯಾರಿಸುವರು. ಹರಳೆಣ್ಣೆಯನ್ನು ಕಾಯಿಸಿ, ವಿಭಜಿಸಿ, ಕ್ಷಾರಗಳಿಗೆ ಒಡ್ಡಿ ಸುಗಂಧದ್ರವ್ಯಗಳಿಗೆ ಬೇಕಾಗುವ ವಸ್ತುಗಳನ್ನೂ ಕೃತಕ ಗೋಂದಿನ ತಯಾರಿಕೆಗೆ ಬೇಕಾಗುವ ಡೈಬೇಸಿಕ್ ಆಮ್ಲವನ್ನೂ ಪಡೆಯಬಹುದು. ಮೆರುಗೆಣ್ಣೆ (ವಾರ್ನಿಷ್), ಮುದ್ರಣ ಬಣ್ಣ, ನೈಲಾನ್ ದಾರ ಮುಂತಾದುವುಗಳ ತಯಾರಿಕೆಯಲ್ಲಿ ಬಳಸುವರು. ಸಾಮಾನ್ಯವಾಗಿ ದ್ರವರೂಪದಲ್ಲಿರವ ಹರಳೆಣ್ಣೆ ಉಚ್ಚ ಉಷ್ಣತೆಯಲ್ಲೂ ತನ್ನ ಸ್ನಿಗ್ಧತೆಯನ್ನೂ ಉಳಿಸಿಕೊಳ್ಳುವುದರಿಂದ ಬಹಳ ಉತ್ತಮವಾದ ಮೃದುಚಾಲಕವೆಂದು ಹೆಸರಾಗಿದೆ. ಇದನ್ನು ಮೃದು ಚಾಲಕಗಳ (ಲೂಬ್ರಿಕೆಂಟ್ಸ್‌) ತಯಾರಿಕೆಯಲ್ಲಿ ಬಹಳವಾಗಿ ಉಪಯೋಗಿಸುತ್ತಾರೆ. ಇದರಲ್ಲಿ ಟೋಕೊಫೆರಾಲ್ ಪ್ರತಿಉತ್ಕರ್ಷಕಗಳು (ಆಂಟಿ ಆಕ್ಸಿಡೆಂಟ್ಸ್‌) ಇರುವುದರಿಂದ ಮತ್ತು ಇದರಲ್ಲಿನ ಗ್ಲಿಸರೈಡುಗಳಿಗೆ ಉತ್ಕರ್ಷಕ ಪ್ರತಿರೋಧಕ ಶಕ್ತಿಯಿರುವುದರಿಂದ (ರೆಸಿಸ್ಟೆನ್ಸ್‌ಟು ಆಟೋಆಕ್ಸಿಡೇಷನ್) ಹರಳೆಣ್ಣೆಗೆ ಅತಿಹೆಚ್ಚಿನ ಸ್ಥಿರತೆ ಇದೆ. ಬೀಜದ ತಿರುಳಿನಲ್ಲಲ್ಲದೆ ಅದರ ಸಿಪ್ಪೆಯಲ್ಲಿಯೂ ಕೊಂಚ ಪ್ರಮಾಣದಲ್ಲಿ ಎಣ್ಣೆಯಿದೆ. ಈ ಎಣ್ಣೆಯಲ್ಲಿ ತಿರುಳಿನ ಎಣ್ಣೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಓಲಿಯಕ್ ಮತ್ತು ಲಿನೋಲಿಯಿಕ್ ಆಮ್ಲಗಳೂ ಸ್ವಲ್ಪ ಪ್ರಮಾಣದಲ್ಲಿ ರಿಸಿನೋಲಿಯಿಕ್ ಆಮ್ಲವೂ ಇವೆ. ಎಣ್ಣೆ ತೆಗೆದ ಮೇಲೆ ಉಳಿಯುವ ಔಡಲ ಹಿಂಡಿ (ಮಡ್ಡಿ) ಗೊಬ್ಬರವಾಗಿ ಬಳಕೆಯಾಗುತ್ತದೆ. ಇದರಲ್ಲಿ ರಿಸಿನ್ ಎಂಬ ರಕ್ತ ಹೆಪ್ಪುಗಟ್ಟಿಸುವಂಥ ವಿಷವಸ್ತುವಿರುವುದರಿಂದ ದನಗಳಿಗೆ ಮೇವಾಗಿ ಇದನ್ನು ಉಪಯೋಗಿಸುವುದಕ್ಕಾಗುವುದಿಲ್ಲ. ಕಾಂಡದಿಂದ ಕಾಗದ ತಯಾರಿಕೆಗೆ ಬೇಕಾದ ಮೂಲ ವಸ್ತುವನ್ನು ತಯಾರಿಸಬಹುದು. ಎಲೆಗಳನ್ನು ಎರಿ ರೇಷ್ಮೆ ಹುಳುಗಳಿಗೆ ಆಹಾರವಾಗಿ ಹಾಕುತ್ತಾರೆ.

ರೋಗಗಳು

[ಬದಲಾಯಿಸಿ]

ಔಡಲ ಸಸ್ಯಕ್ಕೆ ಹಲವಾರು ಬಗೆಯ ರೋಗಗಳೂ ಪೀಡೆಗಳೂ ಅಂಟುವುದುಂಟು. ಮೆಲಾಂಸ್ಪೊರೆಲ್ಲಾ ರಿಸಿನಿ ಎಂಬ ಬೂಷ್ಟಿನಿಂದ ಬರುವ ಅರಿಸಿನ ರೋಗವೂ ಸರ್ಕೊಸ್ಪೊರಿನ ರಿಸಿನೆಲ್ಲ ಎಂಬುವುದರಿಂದ ಉಂಟಾಗುವ ಎಲೆರೋಗವೂ ಡಿಪ್ಲೋಡಿಯ ರಿಸಿನೆಲ್ಲ ಎಂಬ ಬ್ಯಾಕ್ಟೀರಿಯದಿಂದ ಬರುವ ಕೊಳೆರೋಗವೂ ಮುಖ್ಯವಾದುವು. ಇವಾವುವೂ ಅಂಥ ಹೆಚ್ಚಿನ ಪ್ರಮಾಣದಲ್ಲಿ ನಷ್ಟವನ್ನುಂಟುಮಾಡುವುದಿಲ್ಲ. ಕೀಟಗಳಲ್ಲಿ ಮುಖ್ಯವಾದುವು ಎಲೆ ತಿನ್ನುವ ಅಕೊಯಿಯ ಜೇನೇಟ ಮತ್ತು ಕಾಂಡ ಹಾಗೂ ಕಾಯಿಗಳನ್ನು ಕೊರೆಯುವ ಡೈಕೊಕ್ರೋಸಿಸ್ ಪಂಕ್ಟಿಫೆರಾಲಿಸ್ ಎಂಬುವು. ಕ್ಯಾಲ್ಸಿಯಂ ಆರ್ಸಿನೇಟ್ ಮತ್ತು ಗ್ಯಾಮೆಕ್ಸೇನ್ ಡಿ.025 ಔಷಧಿಗಳನ್ನು ಸಿಂಪಡಿಸುವುದರಿಂದ ಇವನ್ನು ತಡೆಗಟ್ಟಬಹುದು. ಅದಲ್ಲದೆ ಔಡಲ ಬೆಳೆಯುವ ಭೂಮಿಯನ್ನು ಅಗೆದು ಈ ಹುಳುಗಳ ಡಿಂಭಗಳನ್ನು ಹೊರತೆಗೆದು ನಾಶಪಡಿಸುವುದರಿಂದಲೂ ಕೀಟರೋಗಗಳನ್ನು ತಡೆಗಟ್ಟಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Rizzardo, RA; Milfont, MO; Silva, EM; Freitas, BM (December 2012). "Apis mellifera pollination improves agronomic productivity of anemophilous castor bean (Ricinus communis)". Anais da Academia Brasileira de Ciencias. 84 (4): 1137–45. doi:10.1590/s0001-37652012005000057. PMID 22990600.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಔಡಲ&oldid=1227318" ಇಂದ ಪಡೆಯಲ್ಪಟ್ಟಿದೆ