ವಿಷಯಕ್ಕೆ ಹೋಗು

ಐತರೇಯ ಬ್ರಾಹ್ಮಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The first four pages of the Aitareya Brahmana

ಐತರೇಯ ಬ್ರಾಹ್ಮಣ: ಶ್ರುತಿ ಎಂದು ಪ್ರಸಿದ್ಧವಾಗಿರುವ ವೇದದ ಬ್ರಾಹ್ಮಣಭಾಗದಲ್ಲಿ ಋಗ್ವೇದಕ್ಕೆ ಸಂಬಂಧಪಟ್ಟಂತೆ ಉಪಲಬ್ಧವಾಗಿರುವ ಎರಡು ಬ್ರಾಹ್ಮಣಗ್ರಂಥಗಳಲ್ಲಿ ಒಂದು; ಮತ್ತೊಂದು ಕೌಷೀತಕಿ ಬ್ರಾಹ್ಮಣ. ಐತರೇಯ ಎಂಬುದು ಇತರಾ ಎಂಬ ಪದದಿಂದ ಬಂದಿದೆ; ಇತರಾ ಎಂಬ ಋಷಿಪತ್ನಿಯಲ್ಲಿ ಜನಿಸಿದ ಮಹೀದಾಸ ಐತರೇಯನ ಕರ್ತೃತ್ವಕ್ಕೆ ಸೇರಿಸಲ್ಪಟ್ಟಿದೆ. ಇದರ ನಲವತ್ತು ಅಧ್ಯಾಯಗಳು ಐದೈದು ಅಧ್ಯಾಯಗಳ ಎಂಟು ಪಂಚಿಕಗಳಾಗಿ ವಿಭಾಗಗೊಂಡಿವೆ; ಈ ಎಂಟನ್ನು ಅಷ್ಟಕಗಳೆಂದು ಕರೆದಿದ್ದಾರೆ. ಈ ಗ್ರಂಥವು ಯಜ್ಞಯಾಗಗಳನ್ನು ಕುರಿತ ವಿಚಾರಗಳನ್ನೊಳಗೊಂಡಿದೆ. ಇದರಲ್ಲಿ ಸೋಮಯಾಗದ ವಿವರಣೆ ಪ್ರಮುಖವಾಗಿರುವುದಲ್ಲದೆ, ಯಾಗಾದಿಗಳ ಮಹತ್ತ್ವದ ನಿರೂಪಣೆಯೂ ಗಮನಾರ್ಹವಾಗಿದೆ.

ಮೊದಲ ಹದಿಮೂರು ಅಧ್ಯಾಯಗಳಲ್ಲಿ ಐದು ದಿನ ನಡೆಯಬೇಕಾದ ಅಗ್ನಿಷ್ಟೋಮದ ದೀಕ್ಷೆ, ಪ್ರವಗರ್ಯ್‌, ಉಪಸದ್, ಅಗ್ನಿಪ್ರಣಯನ, ಸೋಮಪಾನ ಮುಂತಾದ ವಿಹಿತಕರ್ಮಗಳೂ ಇವಕ್ಕನ್ವಯಿಸುವಂತೆ ಹೋತೃ ಎಂಬ ಋತ್ವಿಕ್ಕಿನ ಕರ್ತವ್ಯಗಳೂ ಪ್ರತಿಪಾದಿತವಾಗಿವೆ. ಅಲ್ಲದೆ ಪ್ರಾತಃಕಾಲ ಮಧ್ಯಾಹ್ನ ಸಾಯಂಕಾಲಗಳ ಸೋಮಸೇವನಗಳಲ್ಲಿ ಹೋತೃ ಪಠಿಸಬೇಕಾದ ಪ್ರಶಂಸಾತ್ಮಕ ಮಂತ್ರಗಳಾದ ಶಸ್ತ್ರಗಳ ವಿವರಣೆಯೂ ಇದೆ. ಬಳಿಕ ನಾಲ್ಕು ಅಧ್ಯಾಯಗಳಲ್ಲಿ ಎಲ್ಲ ಸೋಮಯಾಗಗಳಿಗೂ ಮಾದರಿಯಾಗಿ ಅವುಗಳ ಪ್ರಕೃತಿ ಎನಿಸಿಕೊಂಡಿರುವ ಅಗ್ನಿಷ್ಟೋಮದ ವೈಶಿಷ್ಟ್ಯ ವಿಚಾರವೂ ಅದರ ಮುಖ್ಯವಿಧಗಳಾದ ಉಕ್ಥ್ಯ, ಷೋಡಶೀ, ಅತಿರಾತ್ರ-ಇವುಗಳ ವಿವರಣೆಯೂ ಕಂಡುಬರುತ್ತದೆ. ಅತಿರಾತ್ರಕ್ಕನ್ವಯಿಸುವಂತೆ ಸತ್ತ್ರಗಳೂ ಹೋತೃವಿನ ಕರ್ತವ್ಯಗಳೂ ಮುಂದಿನ ಒಂದು ಅಧ್ಯಾಯದ ವಿಷಯ. ಅನಂತರ ಆರು ಅಧ್ಯಾಯಗಳು ದ್ವಾದಶಾಹ ಎಂಬ ಯಾಗದ ಹತ್ತು ದಿನಗಳಲ್ಲಿ ಹೋತೃ ಮಾಡಬೇಕಾದ ಕೆಲಸಗಳನ್ನು ತಿಳಿಸುತ್ತವೆ. ಮುಂದಿನ ಒಂದು ಅಧ್ಯಾಯ ಅಗ್ನಿಹೋತ್ರಿ ಆಚರಿಸಬೇಕಾದ ಕೆಲವು ವ್ರತಗಳನ್ನೂ ಬ್ರಹ್ಮನೆಂಬ ಋತ್ವಿಕ್ಕಿನ ಕರ್ತವ್ಯಗಳನ್ನೂ ಕುರಿತಿದೆ. ಅಲ್ಲಿಂದ ಮುಂದೆ ಐದು ಅಧ್ಯಾಯಗಳಲ್ಲಿ, ಪ್ರಧಾನರಲ್ಲದ ಆರು ಜನ ಹೋತೃಗಳಿಗೆ ಸಂಬಂಧಪಟ್ಟ ಕರ್ತವ್ಯಗಳ ಮತ್ತು ಅವರು ಕೌಶಲದಿಂದ ಪಠಿಸಬೇಕಾದ ಶಿಲ್ಪಶಾಸ್ತ್ರಗಳ ವಿಚಾರವಿದೆ. ಈ ಐದು ಅಧ್ಯಾಯಗಳು ಅವುಗಳ ಹಿಂದಿನ ಹತ್ತಕ್ಕೆ ಪೂರಕಗಳಂತಿವೆ.

ಕಡೆಯ ಹತ್ತು ಅಧ್ಯಾಯಗಳು ಪ್ರಧಾನವಾಗಿ ಕ್ಷತ್ರಿಯರಿಂದ ಆಚರಿಸಲ್ಪಡಬೇಕಾಗಿರುವ ಯಜ್ಞಯಾಗಗಳಿಗೆ ಸಂಬಂಧಪಟ್ಟಿವೆ. ಇವು ಚಾರಿತ್ರಿಕ ದೃಷ್ಟಿಯಿಂದಲೂ ಮುಖ್ಯವಾದ ಅಧ್ಯಾಯಗಳಾಗಿವೆ. ರಾಜರುಗಳು ಮಾಡುವ ಯಾಗಾದಿಗಳ ಪ್ರಾರಂಭಕರ್ಮಗಳು ಕೆಳಕಂಡ ಪ್ರಸಿದ್ಧವಾದ ಶುನಃಶೇಫಾಖ್ಯಾನದ ಮೂಲಕ ಈ ಭಾಗದಲ್ಲಿ ಪ್ರತಿಪಾದಿತವಾಗಿವೆ. ಇಕ್ಷ್ವಾಕುವಂಶದ ರಾಜನಾದ ಹರಿಶ್ಚಂದ್ರನಿಗೆ ಪುತ್ರಸಂತಾನವಿರಲಿಲ್ಲವಾಗಿ ಆಸ್ಥಾನದಲ್ಲಿದ್ದ ನಾರದನೆಂಬ ಋಷಿಯ ಉಪದೇಶದ ಪ್ರಕಾರ ವರುಣದೇವತೆಯನ್ನು ಪ್ರಾರ್ಥಿಸಿ, ಪುತ್ರನೊಬ್ಬನನ್ನು ಅನುಗ್ರಹಿಸುವುದಾದರೆ ಅವನನ್ನು ಆ ದೇವತೆಗೇ ಅರ್ಪಿಸುವುದಾಗಿ ವಾಗ್ದಾನ ಮಾಡುತ್ತಾನೆ. ಅನಂತರ ರೋಹಿತನೆಂಬ ಒಬ್ಬ ಪುತ್ರನನ್ನು ಪಡೆಯುತ್ತಾನೆ. ಶಿಶು ಹುಟ್ಟಿದಂದಿನಿಂದ ಶಸ್ತ್ರೋಪೇತನಾಗುವವರೆಗಿನ ಬೆಳೆವಣಿಗೆಯ ಹಲವಾರು ಸ್ಥಿತಿಗಳಲ್ಲಿ ವರುಣ ಕೇಳಿದಾಗಲೆಲ್ಲ ಮುಂದುಮುಂದಿನ ಸ್ಥಿತಿ ಬರಲೆಂದು ನೆಪ ಹೇಳುತ್ತ ಹರಿಶ್ಚಂದ್ರ ಕಾಲ ತಳ್ಳುತ್ತಾನೆ. ಪುತ್ರ ಶಸ್ತ್ರೋಪೇತನಾಗಿದ್ದ ಸ್ಥಿತಿಯಲ್ಲಿ ಯಥಾಪ್ರಕಾರ ವರುಣನಿಂದ ತಗಾದೆ ಬರುತ್ತದೆ. ಆಗ ರಾಜ ತಾನು ವರುಣನಿಗೆ ಕೊಟ್ಟ ವಾಗ್ದಾನದ ವಿಚಾರವನ್ನು ಮಗನಿಗೆ ತಿಳಿಸಿ, ಅದರ ಈಡೇರಿಕೆಗೆ ಅವನ ಒಪ್ಪಿಗೆಯನ್ನು ಕೇಳುತ್ತಾನೆ. ಆದರೆ ಅವನು ಅದನ್ನು ಒಪ್ಪದೆ ಧನುಸ್ಸನ್ನು ಹಿಡಿದು ಕಾಡಿಗೆ ಹೋಗಿ ತಪ್ಪಿಸಿಕೊಳ್ಳುತ್ತಾನೆ.

ಈ ಮಧ್ಯೆ ವರುಣನ ಆಗ್ರಹದಿಂದ ಹರಿಶ್ಚಂದ್ರ ರೋಗಗ್ರಸ್ತನಾಗುತ್ತಾನೆ. ರೋಹಿತನಿಗೆ ಈ ವಿಚಾರ ತಿಳಿದು ಗ್ರಾಮವೊಂದಕ್ಕೆ ಬರುತ್ತಾನೆ. ಅಲ್ಲಿ ಇಂದ್ರ ಅವನಿಗೆ ಕಾಣಿಸಿಕೊಂಡು ಸಂಚಾರ ಬಹು ಸ್ವಾರಸ್ಯಕರವೆಂದು ತಿಳಿಸುವುದಲ್ಲದೆ ಮತ್ತೆ ಸಂಚಾರದಲ್ಲಿ ತೊಡಗಬೇಕೆಂದು ಅವನನ್ನು ಪ್ರೇರೇಪಿಸುತ್ತಾನೆ. ಅದರಂತೆ ರೋಹಿತ ಪುನಃ ಕೆಲವು ವರ್ಷಗಳ ಪರ್ಯಂತ ಸಂಚಾರ ಮಾಡುತ್ತಾನೆ. ಆರು ವರ್ಷಗಳ ಸಂಚಾರದ ಕಡೆಯಲ್ಲಿ ಉಪವಾಸದಿಂದ ತೊಳಲುತ್ತಿದ್ದ ಅಜೀಗರ್ತನೆಂಬ ಮುನಿಯನ್ನು ಸಂಧಿಸುತ್ತಾನೆ. ಆ ಮುನಿಗೆ ಶುನಃಪುಚ್ಛ, ಶುನಃಶೇಫ, ಶುನೋಲಾಂಗೂಲ ಎಂಬ ಮೂವರು ಪುತ್ರರು. ನೂರು ಹಸುಗಳನ್ನು ಕೊಟ್ಟು ರೋಹಿತ ಅಜೀಗರ್ತನಿಂದ ಅವನ ಮಧ್ಯಮ ಮಗನಾದ ಶುನಃಶೇಫನನ್ನು ವಹಿಸಿಕೊಂಡು ತಂದೆಯಾದ ಹರಿಶ್ಚಂದ್ರರಾಜನ ಬಳಿಗೆ ಕರೆತರುತ್ತಾನೆ. ರಾಜ ತನ್ನ ಮಗನ ಪರವಾಗಿ ಶುನಃಶೇಫನನ್ನೇ ಅರ್ಪಿಸುವುದಾಗಿ ವರುಣನಲ್ಲಿ ಬಿನ್ನವಿಸಿಕೊಳ್ಳುತ್ತಾನೆ. ಇದಕ್ಕೆ ವರುಣನ ಒಪ್ಪಿಗೆಯೂ ದೊರಕುತ್ತದೆ. ಆ ಸಂದರ್ಭದಲ್ಲಿ ರಾಜನಿಗೆ ರಾಜಸೂಯಯಾಗದ ಕರ್ಮಾದಿಗಳನ್ನು ವರುಣ ವಿವರಿಸುತ್ತಾನೆ. ಯಾಗದ ಪ್ರಾರಂಭದಲ್ಲಿ ನಡೆಯುವ ಅಭಿಷೇಚನೀಯದಲ್ಲಿ ಶುನಃಶೇಫನೇ ಯಜ್ಞಪಶುವಾಗಿ ಬಂಧಿಸಲ್ಪಡುತ್ತಾನೆ. ತನ್ನ ನಿಸ್ಸಹಾಯಕತೆಯನ್ನು ಮನಗಂಡ ಶುನಃಶೇಫ ಹಲವಾರು ದೇವತೆಗಳ ಶರಣುಹೋಗಿ, ಕಡೆಯಲ್ಲಿ ಉಷಸ್ಸಿನ ಪ್ರಾರ್ಥನೆ ಮಾಡುತ್ತಿರುವಾಗ ಅವನ ಬಂಧನ ನಿವಾರಣೆಯಾಗುವುದಲ್ಲದೆ ಹರಿಶ್ಚಂದ್ರನ ರೋಗವೂ ಪರಿಹಾರವಾಗುತ್ತದೆ.

ಮೇಲ್ಕಂಡ ಆಖ್ಯಾನ ಈ ಗ್ರಂಥದಲ್ಲಿ ರಾಜಸೂಯಯಾಗದ ಪೀಠಿಕೆಯನ್ನು ಒದಗಿಸಿಕೊಟ್ಟಿದೆ. ಶುನಃಶೇಫ ಯಜ್ಞಪಶುವಾಗಿರುವ ಅಲ್ಲಿನ ಪ್ರಸಂಗ ಕೇವಲ ಸಾಂಕೇತಿಕವೆಂದು ಚರಿತ್ರಕಾರರು ಅಭಿಪ್ರಾಯಪಟ್ಟಿದ್ದಾರೆ. ಈ ಗ್ರಂಥದ ಕಡೆಯ ಅಧ್ಯಾಯ ರಾಜ ತನ್ನ ಮನೆಯಲ್ಲಿ ಕರ್ಮಾದಿಗಳ ಮೇಲ್ವಿಚಾರಣೆಗೆ ಪುರೋಹಿತನನ್ನು ನೇಮಿಸಿಕೊಳ್ಳುವ ವಿಚಾರಕ್ಕೆ ಸಂಬಂಧಪಟ್ಟಿದೆ. ಗ್ರಂಥದಲ್ಲಿ ಕಂಡುಬರುವ ಪುನರುಕ್ತಿ. ಪ್ರಕ್ಷಿಪ್ತ ಮುಂತಾದವುಗಳ ದೃಷ್ಟಿಯಿಂದ ಅದು ಏಕಕರ್ತೃಕವೆಂಬ ವಿಚಾರದಲ್ಲಿ ಸಂಶಯವಿದೆ. ಶೈಲಿಯೇನೊ ಉದ್ದಕ್ಕೂ ಬಹುಮಟ್ಟಿಗೆ ಒಂದೇ ತರಹದ್ದಾಗಿದೆ. ಭಾಷೆ ಋಗ್ವೇದಾದಿ ಸಂಹಿತೆಗಳಿಗಿಂತ ಈಚಿನದು. ಆದರೆ ಅದು ಸಂಸ್ಕೃತಕಾವ್ಯಭಾಷೆಯಂತಿಲ್ಲ. ಅದರಲ್ಲಿ ವೈದಿಕ ಭಾಷೆಯ ಅನೇಕ ರೂಪಗಳು ಕಂಡುಬರುತ್ತವೆ. ಒಟ್ಟಿನಲ್ಲಿ ಗ್ರಂಥದ ಬಹುಭಾಗ ಒಬ್ಬನೇ ಕರ್ತೃವಿನಿಂದ ರಚಿತವಾಗಿದ್ದಿರಬೇಕು.

ಈ ಗ್ರಂಥದಲ್ಲಿ ಅಲ್ಲಲ್ಲೇ ಕಂಡುಬರುವ ‘ದೇವಾ ವೈ ಯಜ್ಞೇನ ಶ್ರಮೇಣ ತಪಸಾಹುತಿಭಿಃ ಸ್ವರ್ಗಂ ಲೋಕಮಾಯನ್’, ‘ಸಖಾ ಹಿ ಜಾಯಾ’, ‘ಶ್ರದ್ಧಾ ಪತ್ನೀ, ಸತ್ಯ ಯಜಮಾನಃ, ಶ್ರದ್ಧಾ-ಸತ್ಯ’ ಮುಂತಾದ ಆದರ್ಶವಾಕ್ಯಗಳು ಗಮನಾರ್ಹವಾಗಿವೆ.

ಹೀಗೆ ಮಂತ್ರಗಳು, ಗಾಥ, ಇತಿಹಾಸ, ಹೋತೃವಿನ ಕರ್ತವ್ಯಕ್ಕೆ ಸಂಬಂಧಪಟ್ಟ ವಿಧಿಗಳು, ವಿಹಿತಕರ್ಮಾದಿಗಳ ವಿವರಣೆಗಳು-ಇವೇ ಮುಂತಾದ ವಿಷಯಗಳ ಪ್ರತಿಪಾದನೆಯಿಂದ ಕೂಡಿರುವ ಈ ಗ್ರಂಥ ಅದರ ಶಾಖಾನುಯಾಯಿಗಳಿಗೆ ವಿಹಿತ ಕರ್ಮಗಳ ಒಂದು ಕೋಶದಂತಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: