ಐರೋಪ್ಯ ಆರ್ಥಿಕ ಸಮುದಾಯ
European Economic Community/European Community
| |||||||||||||||||
---|---|---|---|---|---|---|---|---|---|---|---|---|---|---|---|---|---|
1958–1993 | |||||||||||||||||
Anthem: "Ode to Joy" (orchestral)
| |||||||||||||||||
![]() EEC in 1993 | |||||||||||||||||
Status | Economic union | ||||||||||||||||
Institutional seats | |||||||||||||||||
Largest city | London | ||||||||||||||||
Official languages | |||||||||||||||||
Commission President | |||||||||||||||||
• 1958–1967 | Walter Hallstein | ||||||||||||||||
• 1967–1970 | Jean Rey | ||||||||||||||||
• 1970–1972 | Franco Maria Malfatti | ||||||||||||||||
• 1972–1973 | Sicco Mansholt | ||||||||||||||||
• 1973–1977 | François-Xavier Ortoli | ||||||||||||||||
• 1977–1981 | Roy Jenkins | ||||||||||||||||
• 1981–1985 | Gaston Thorn | ||||||||||||||||
• 1985–1993 | Jacques Delors | ||||||||||||||||
Legislature | |||||||||||||||||
Historical era | Cold War | ||||||||||||||||
25 March 1957 | |||||||||||||||||
1 January 1958 | |||||||||||||||||
1 July 1967 | |||||||||||||||||
1 January 1993 | |||||||||||||||||
1 November 1993 | |||||||||||||||||
1 December 2009 | |||||||||||||||||
Currency | |||||||||||||||||
| |||||||||||||||||
Today part of | European Union United Kingdom | ||||||||||||||||
¹ The information in this infobox covers the EEC's time as an independent organisation. It does not give details of post-1993 operation within the EU as that is explained in greater length in the European Union and European Communities articles. ² De facto only, these cities hosted the main institutions but were not titled as capitals. |
ಐರೋಪ್ಯ ಆರ್ಥಿಕ ಸಮುದಾಯಬೆಲ್ಜಿಯಂ, ಫ್ರಾನ್ಸ್, ಜರ್ಮನ್ ಗಣರಾಜ್ಯ, ಇಟಲಿ, ಲಕ್ಸೆಂಬರ್ಗ್, ನೆದರ್ಲೆಂಡ್ಸ್-ಈ ಆರು ರಾಷ್ಟ್ರಗಳ ನಡುವಣ ಒಪ್ಪಂದಕ್ಕನುಗುಣವಾಗಿ 1958ರ ಜನವರಿ 1 ರಂದು ಸ್ಥಾಪಿತವಾದ ಸಂಸ್ಥೆ (ಯುರೋಪಿಯನ್ ಎಕನಾಮಿಕ್ ಕಮ್ಯೂನಿಟಿ). ಐರೋಪ್ಯ ಸಾಮಾನ್ಯ ಮಾರುಕಟ್ಟೆ (ಕಾಮನ್ ಮಾರ್ಕೆಟ್) ಎಂಬ ಹೆಸರೂ ಇದಕ್ಕುಂಟು.
ಇತಿಹಾಸ
[ಬದಲಾಯಿಸಿ]ಸದಸ್ಯ ರಾಷ್ಟ್ರಗಳಿಗೆ ಸಾಮಾನ್ಯವಾದ ಮಾರುಕಟ್ಟೆಯೊಂದನ್ನು ಸ್ಥಾಪಿಸಿ ಅವುಗಳ ಆರ್ಥಿಕ ನೀತಿಗಳಲ್ಲಿ ಸಾಮರೂಪ್ಯವುಂಟಾಗುವಂತೆ ಮಾಡಿ, ತನ್ಮೂಲಕ ಆ ದೇಶಗಳ ಆರ್ಥಿಕ ಚಟುವಟಿಕೆಗಳ ಸಮರಸ ಬೆಳೆವಣಿಗೆಯನ್ನೂ ಸ್ಥಿರತೆಯನ್ನೂ ಉಂಟುಮಾಡುವುದೂ ಅಲ್ಲಿನ ಪ್ರಜೆಗಳ ಜೀವನಮಟ್ಟ ಹೆಚ್ಚಿಸುವುದೂ ದೇಶಗಳ ನಡುವೆ ನಿಕಟಸಂಬಂಧ ಬೆಳೆಸುವುದೂ ಸಂಸ್ಥೆಯ ಉದ್ದೇಶ. ಇದರ ಸಾಧನೆಗಾಗಿ ಸಂಸ್ಥೆ ಅನುಸರಿಸುವ ಮುಖ್ಯ ವಿಧಾನಗಳು ಇವು: 1 ಆಮದು-ರಫ್ತು ಸುಂಕಗಳ ಮತ್ತು ನಾನಾ ನಿರ್ಬಂಧಗಳ ರದ್ದು, 2 ಸಮಾನ ಸುಂಕ ವ್ಯವಸ್ಥೆಯ ಮತ್ತು ವಾಣಿಜ್ಯ ನೀತಿಯ ಸ್ಥಾಪನೆ, 3 ಜನ ಸೇವೆ ಮತ್ತು ಬಂಡವಾಳಗಳು ಸುಸೂತ್ರವಾಗಿ ಸಾಗುವಂತೆ ಏರ್ಪಾಡು, 4 ಕೃಷಿ ಮತ್ತು ಸಾರಿಗೆಗೆ ಸಂಬಂಧಿಸಿದಂತೆ ಏಕರೀತಿಯ ನೀತಿಯ, ಪ್ರತಿಷ್ಠಾಪನೆ, 5 ನ್ಯಾಯವಾದ ಸ್ಪರ್ಧೆಯ ವ್ಯವಸ್ಥೆಯ ಕಲ್ಪನೆ, 6 ನಾನಾ ಆರ್ಥಿಕ ನೀತಿಗಳನ್ನು ಸಂಯೋಜನೆಗೆ ಒಳಪಡಿಸಿ ವಿದೇಶೀ ವಿನಿಮಯ ಕ್ಷೇತ್ರದಲ್ಲಿ ಪಾವತಿ ಶಿಲ್ಕುಗಳ (ಬ್ಯಾಲೆನ್ಸಸ್ ಆಫ್ ಪೇಮೆಂಟ್ಸ್) ಸಮತೋಲನ, 7 ಸದಸ್ಯ ರಾಷ್ಟ್ರಗಳ ಪೌರಸಭಾ ಕಾನೂನುಗಳಲ್ಲಿ ಏಕರೂಪತೆಯ ಸಾಧನೆ, 8 ಸಾಮಾಜಿಕ ನಿಧಿಯ ಮತ್ತು ಐರೋಪ್ಯ ನಿಯೋಜನ ಬ್ಯಾಂಕಿನ (ಇನ್ವೆಸ್ಟ್‌ಮೆಂಟ್ ಬ್ಯಾಂಕ್) ರಚನೆ ಮತ್ತು 9 ಕೆಲವು ಸದಸ್ಯ ರಾಷ್ಟ್ರಗಳಿಗೆ ಸಂಬಂಧ ಹೊಂದಿರುವ ಸಾಗರಾಂತರ ದೇಶಗಳೂ ಪ್ರದೇಶಗಳೂ ಈ ಸಂಸ್ಥೆಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪನೆ.
ಆರ್ಥಿಕ ವ್ಯವಹಾರಗಳೂ
[ಬದಲಾಯಿಸಿ]ರಾಷ್ಟ್ರ-ರಾಷ್ಟ್ರಗಳ ಆರ್ಥಿಕ ವ್ಯವಹಾರಗಳಿಗೆ ರಾಜಕೀಯ ಪ್ರತ್ಯೇಕತೆಯಿಂದ ಪ್ರಾಪ್ತವಾಗುವ ಅನೇಕ ಬಗೆಯ ಅಡಚಣೆಗಳನ್ನು ತೊಡೆದು ಹಾಕಿ, ಹಲವಾರು ರಾಷ್ಟ್ರಗಳು ಒಟ್ಟಾಗಿ ಒಂದೇ ರೀತಿಯ ಆರ್ಥಿಕ ನೀತಿಗಳನ್ನು ಅನುಸರಿಸುವುದರ ಮೂಲಕ ಒಂದು ವಿಧದ ಅಂತಾರಾಷ್ಟ್ರೀಯ ಆರ್ಥಿಕ ಸಂಘಟನೆಯನ್ನು ಸಾಧಿಸುವ ಪ್ರಯತ್ನಗಳು ಎರಡನೆಯ ಮಹಾಯುದ್ಧದ ಕಾಲದಿಂದೀಚೆಗೆ ಎದ್ದು ಕಾಣುವ ಆರ್ಥಿಕ ಘಟನೆ. ಪಾಶ್ಚಾತ್ಯ ಯುರೋಪಿನ ರಾಷ್ಟ್ರಗಳು ತಮ್ಮ ಅರ್ಥವ್ಯವಸ್ಥೆಯನ್ನು ಪರಸ್ಪರವಾಗಿ ಸಂಘಟಿತಗೊಳಿಸುವ ಪ್ರಯತ್ನ ಈಚೆಗೆ ಪ್ರಾಮುಖ್ಯ ಗಳಿಸಿದೆ. 17 ಐರೋಪ್ಯ ರಾಷ್ಟ್ರಗಳ ಆರ್ಥಿಕ ಸಹಕಾರ ಸಂಸ್ಥೆ 1948ರ ಏಪ್ರಿಲ್ 16ರಂದು ಸ್ಥಾಪಿತವಾಯಿತು. ಅಂದಿನಿಂದ ಈ ಎಲ್ಲ ರಾಷ್ಟ್ರಗಳ ಪ್ರತಿನಿಧಿಗಳು ಶಾಶ್ವತವಾಗಿ ಪ್ಯಾರಿಸಿನಲ್ಲಿ ಇದ್ದು ಪ್ರತಿದಿನವೂ ಒಟ್ಟಾಗಿ ಅನೇಕ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತ ಬಂದಿದ್ದಾರೆ. ಹೀಗಾಗಿ ಒಂದು ರಾಷ್ಟ್ರ ಯಾವ ಒಂದು ನೀತಿ ಹಾಗೂ ಕ್ರಮವನ್ನು ಆಲೋಚಿಸುವಾಗಲೂ ಇತರ ಸದಸ್ಯ ರಾಷ್ಟ್ರಗಳ ಮೇಲೆ ಆಗಬಹುದಾದ ಪರಿಣಾಮವನ್ನು ಸ್ವಾಭಾವಿಕವಾಗಿಯೇ ಪರಿಗಣಿಸುವ ರೂಢಿ ಬೆಳೆದು ಬಂದು ಸರ್ವ ಐರೋಪ್ಯವೆಂದು ಹೇಳಬಹುದಾದ ದೃಷ್ಟಿ ಬೇರೂರಿ ಆರ್ಥಿಕ ಸಂಘಟನೆಗಳಿಗೆ ಮಾರ್ಗ ಮಾಡಿಕೊಟ್ಟಂತಾಗಿದೆ. ಬೆನೆಲಕ್ಸ್ ಒಕ್ಕೂಟ ಐರೋಪ್ಯ ಕಲ್ಲಿದ್ದಲು ಮತ್ತು ಉಕ್ಕು ಸಮುದಾಯ (ನೋಡಿ- ಐರೋಪ್ಯ-ಕಲ್ಲಿದ್ದಲು-ಮತ್ತು-ಉಕ್ಕು-ಸಮುದಾಯ) ಮುಂತಾದ ಸಂಘಟನ ಯೋಜನೆಗಳು ರೂಪುಗೊಂಡುವು. ಐರೋಪ್ಯ ಆರ್ಥಿಕ ಸಮುದಾಯದ ಸ್ಥಾಪನೆ ಇವೆಲ್ಲ ಯೋಜನೆಗಳಿಗಿಂತಲೂ ಮುಖ್ಯವಾದ ಆರ್ಥಿಕ ಸಂಘಟನೆಯ ಹೆಜ್ಜೆ.
ಬೆಳೆವಣಿಗೆ
[ಬದಲಾಯಿಸಿ]ಐರೋಪ್ಯ ಆರ್ಥಿಕ ಸಮುದಾಯ ಒಂದು ರೀತಿಯ ರಾಷ್ಟ್ರಾತೀತ ಸರ್ಕಾರವೇ ಆಗಿದೆ ಯೆಂದು ಹೇಳಬಹುದು. ಒಟ್ಟುಗೂಡಿರುವ ಆರು ರಾಷ್ಟ್ರಗಳು ಕೆಲವು ಆರ್ಥಿಕ ವಿಷಯ ಗಳಲ್ಲಿ ವೈಯಕ್ತಿಕ ರಾಷ್ಟ್ರೀಯ ಅಧಿಕಾರವನ್ನು ಸಮುದಾಯಕ್ಕೆ ಬಿಟ್ಟು ಕೊಟ್ಟಿವೆ. ಇದರಿಂದ ಈ ಆರು ರಾಷ್ಟ್ರಗಳ ಆರ್ಥಿಕ ಸಂಘಟನೆ ಸಾಧಿಸಲು ಸಮುದಾಯಕ್ಕೆ ಅವಕಾಶವುಂಟಾಗಿದೆ. ರಾಜಕೀಯವಾಗಿ ಒಂದಾಗದೆ ಸುಭದ್ರವಾದ ಮತ್ತು ಪರಿಪುರ್ಣವಾದ ಆರ್ಥಿಕ ಸಂಘಟನೆ ಸಾಧ್ಯವಿಲ್ಲವೆಂಬುದು ಪ್ರೊ. ಆರ್ಥರ್ ಲೂಯಿಸ್ ಅಭಿಪ್ರಾಯ. ರಾಜಕೀಯ ಸಂಘಟನೆಯ ಕ್ರಮಗಳನ್ನು ಕೈಕೊಳ್ಳುತ್ತಿರುವುದು ಈಚಿನ ಮಹತ್ವಪುರಿತ ಬೆಳೆವಣಿಗೆಗಳಲ್ಲಿ ಒಂದು.[೨]
ಐರೋಪ್ಯ ಆರ್ಥಿಕ ಸಮುದಾಯದ ಸ್ಥಾಪನೆಗೆ ರಾಜಕೀಯ, ಧ್ಯೇಯಾತ್ಮಕ ಮತ್ತು ಆರ್ಥಿಕ ಪ್ರೇರಕ ಶಕ್ತಿಗಳಿವೆ. ಯುರೋಪಿನ ರಾಷ್ಟ್ರಗಳೆಲ್ಲವೂ ಸೇರಿ ಒಕ್ಕೂಟ ಒಂದನ್ನು ಸ್ಥಾಪಿಸುವುದರ ಮೂಲಕ ಹೆಚ್ಚು ವಿಶಾಲವಾದ ರಾಜಕೀಯ ಸಂಸ್ಥಾನವಾಗಬೇಕೆಂಬುದು ಸರ್ ವಿನ್ಸ್ಟನ್ ಚರ್ಚಿಲ್ ಬಹಳ ಹಿಂದೆಯೇ ಮಾಡಿದ್ದ ಸೂಚನೆ. ಎರಡನೆಯ ಮಹಾಯುದ್ಧದ ತರುವಾಯ ಯುರೋಪಿನಲ್ಲಿ ಕಮ್ಯೂನಿಸ್ಟ್ ಮತ್ತು ಕಮ್ಯೂನಿಸ್ಟೇತರವೆಂಬ ಎರಡು ಬಣಗಳು ಒಡೆದು ಮೂಡಿದುವು. ಕಮ್ಯೂನಿಷ್ಟೇತರ ರಾಷ್ಟ್ರಗಳ ಸಂಘಟನೆಯ ಯತ್ನಗಳಲ್ಲಿ ಇದೂ ಒಂದು. ಉತ್ತರ ಅಟ್ಲಾಂಟಿಕ್ ಕೌಲು ಸಂಸ್ಥೆ (ನೋಡಿ- ಉತ್ತರ-ಅಟ್ಲಾಂಟಿಕ್-ಕೌಲು-ಸಂಸ್ಥೆ) ಪಶ್ಚಿಮ ಯುರೋಪಿನ ರಾಷ್ಟ್ರಗಳನ್ನೂ, ಕೆನಡ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನೂ ರಕ್ಷಣಾದೃಷ್ಟಿಯಿಂದ ಒಂದುಗೂಡಿಸಿದೆ. ಆರ್ಥಿಕ ಕ್ಷೇತ್ರದ ಸಂಘಟನೆಗಾಗಿ ಐರೋಪ್ಯ ಆರ್ಥಿಕ ಸಮುದಾಯದ ಉದಯವಾಯಿತು.
ಲಾಭ
[ಬದಲಾಯಿಸಿ]ಆರ್ಥಿಕ ಲಾಭದೃಷ್ಟಿ ಸಮುದಾಯದ ಇನ್ನೊಂದು ಮುಖ್ಯ ಪ್ರೇರಕ ಶಕ್ತಿ. ಆಧುನಿಕ ಆರ್ಥಿಕ ಪದ್ಧತಿಯಲ್ಲಿ ಅನೇಕ ಕೈಗಾರಿಕೆಗಳಲ್ಲಿ ಬೃಹದ್ಗಾತ್ರ ಉತ್ಪಾದನ ವ್ಯವಸ್ಥೆಯಿಂದ ಮಾತ್ರ ಆಂತರಿಕ ಆಡಳಿತ ಹಾಗೂ ಇತರ ಸುವ್ಯವಸ್ಥಾ ಕ್ರಮಗಳನ್ನೂ ಬಾಹ್ಯಪರಿಸ್ಥಿತಿಗಳಿಂದ ಪ್ರಯೋಜನ ಹೆಚ್ಚಿಸಿಕೊಳ್ಳುವ ಕ್ರಮಗಳನ್ನೂ ಅನುಸರಿಸುವುದು ಸಾಧ್ಯ. ಯುರೋಪಿನ ಸಣ್ಣಪುಟ್ಟ ರಾಷ್ಟ್ರಗಳು ತಮ್ಮ ತಮ್ಮ ದೇಶೀಯ ಉತ್ಪನ್ನ ಸಾಧನಗಳಿಗೂ ಆಂತರಿಕ ಮಾರುಕಟ್ಟೆಗಳಿಗೂ ಅನುಸಾರವಾಗಿ ಕೈಗಾರಿಕೆಗಳನ್ನು ಹೂಡುವುದಾದರೆ ಸಾಕಷ್ಟು ಪ್ರಮಾಣದ ವಿಸ್ತರಣೆ ಸಾಧ್ಯವಾಗಲಾರದು ಎಂಬ ಕಾರಣ ಒಕ್ಕೂಟಕ್ಕೆ ಪ್ರೇರಕವಾಯಿತು. ಹೀಗೆ ಮಾಡುವುದರಿಂದ ಅರ್ಥವ್ಯವಸ್ಥೆಯ ಕ್ಷೇತ್ರ ವಿಸ್ತಾರಗೊಂಡು ಶ್ರಮ ವಿಭಜನೆಗೂ ಆಂತರಿಕ ಹಾಗೂ ಬಾಹ್ಯ ಮಿತವ್ಯಯಗಳಿಗೂ ಹೆಚ್ಚು ಅವಕಾಶವಾಗುವುದೆಂಬ ಅರಿವು ಉಂಟಾದದ್ದೇ ಈ ಸಮುದಾಯ ಸ್ಥಾಪನೆಗೆ ಆರ್ಥಿಕ ಕಾರಣ.
ಈ ಪ್ರೇರಕ ಶಕ್ತಿಗಳು ಪ್ರಬಲವಾದುದಕ್ಕೆ ಕಾರಣ ಎರಡನೆಯ ಮಹಾಯುದ್ಧದ ತರುವಾಯ ಪ್ರಾಪ್ತವಾದ ಆರ್ಥಿಕ ದುಃಸ್ಥಿತಿ. ಮುರಿದು ಬಿದ್ದ ಅರ್ಥವ್ಯವಸ್ಥೆಗಳನ್ನು ಪುನವರ್ಯ್‌ವಸ್ಥೆಗೊಳಿಸುವ ಪ್ರಯತ್ನದಲ್ಲಿ ಐರೋಪ್ಯ ರಾಷ್ಟ್ರಗಳೆಲ್ಲ ಒಂದುಗೂಡಲೇಬೇಕಾದ ಅನಿವಾರ್ಯ ಉದ್ಭವಿಸಿತು.
ಈ ಆರ್ಥಿಕ ಸಮುದಾಯದ ಕೆಲವು ಮುಖ್ಯ ಲಕ್ಷಣಗಳನ್ನು ಸ್ಥೂಲವಾಗಿ ಹೀಗೆ ಹೇಳಬಹುದು : ಪರಸ್ಪರ ಸುಂಕ ಹಾಗೂ ವ್ಯಾಪಾರ ಪ್ರಮಾಣ ನಿರ್ಬಂಧಗಳ ನಿರ್ಮೂಲ, ಏಕರೀತಿಯ ಹೊರ ವ್ಯಾಪಾರ ಸುಂಕ, ನಿರಾತಂಕ ಬಂಡವಾಳ ಚಲನೆ, ವಿನಿಮಯ, ವ್ಯವಸಾಯ, ಯಾನವಾಹನ ಮತ್ತು ಇತರ ಆರ್ಥಿಕ ನೀತಿಗಳ ಬಗ್ಗೆ ಏಕರೀತಿಯ ಅನುಸರಣೆ ಇತ್ಯಾದಿ ಕ್ರಮಗಳ ಮೂಲಕ ಆರು ರಾಷ್ಟ್ರಗಳೂ ಸೇರಿ ಒಂದೇ ಆರ್ಥಿಕ ಕ್ಷೇತ್ರವಾಗುವಂತೆ ಮಾಡುವುದೇ ಸಮುದಾಯದ ಮುಖ್ಯ ಆಶಯ. ಇದೇ ಐರೋಪ್ಯ ಸಾಮಾನ್ಯ ಮಾರುಕಟ್ಟೆಯ ಯೋಜನೆ. ಐರೋಪ್ಯ ಆರ್ಥಿಕ ಸಮುದಾಯದ ಕಾರ್ಯಸಾಧನೆಗಾಗಿ ಅನೇಕ ಸಮಿತಿಗಳು ಸ್ಥಾಪಿತವಾಗಿವೆ. ಇವುಗಳ ಪೈಕಿ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯೂ ಒಂದು. ಇದರಲ್ಲಿ ಸಮುದಾಯದ ಆರು ಸದಸ್ಯ ರಾಷ್ಟ್ರಗಳ ನಾನಾ ಸಾಮಾಜಿಕ ಆರ್ಥಿಕ ಕ್ಷೇತ್ರಗಳನ್ನು ಪ್ರತಿನಿಧಿಸುವ 101 ಮಂದಿ ಸದಸ್ಯರಿದ್ದಾರೆ. ಇದೊಂದು ಸಮಾಲೋಚಕ ಸಮಿತಿ. ಹೆಚ್ಚಾಗಿ ಕೃಷಿ ಮತ್ತು ಸಾರಿಗೆಗೆ ಸಂಬಂಧಿಸಿದಂತೆ ಈ ಸಮಿತಿ ಸಲಹೆ ನೀಡುತ್ತದೆ.
ವಿವಿಧಗಳು
[ಬದಲಾಯಿಸಿ]ಈ ಸಮುದಾಯದ ಇತರ ಸಮಿತಿಗಳು ಇಂತಿವೆ : 1 ಹಣ ಸಮಿತಿ: ಸದಸ್ಯ ರಾಷ್ಟ್ರಗಳ ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಿ ಸಲಹೆ ನೀಡುವುದೂ ರಾಷ್ಟ್ರೀಯ ಹಣನೀತಿಗಳನ್ನು ಸಂಯೋಜಿಸುವುದೂ ಇದರ ಗುರಿ. 2 ಶೀಘ್ರಾವಧಿ ಆರ್ಥಿಕ ನೀತಿ ಸಮಿತಿ: ಸದಸ್ಯ ದೇಶಗಳ ದಿನದಿನದ ಆರ್ಥಿಕ ನೀತಿಗಳನ್ನು ಸಂಯೋಜಿಸಿ ಅವುಗಳ ಆರ್ಥಿಕ ವಿಸ್ತರಣೆ ಕ್ರಮಬದ್ಧವಾಗಿ ನಡೆಯುವ ಸಲಹೆ ನೀಡುವುದು ಈ ಸಮಿತಿಯ ಉದ್ದೇಶ. 3 ಮಧ್ಯಾವಧಿ ಆರ್ಥಿಕ ನೀತಿ ಸಮಿತಿ: ಸಮುದಾಯ ರಾಷ್ಟ್ರಗಳ ಅರ್ಥವ್ಯವಸ್ಥೆಯಲ್ಲಿ ತೋರಿಬರುತ್ತಿದ್ದ ನಾನಾ ಪ್ರವೃತ್ತಿಗಳನ್ನು ಗಮನಿಸಿ, ಅವುಗಳ ಅರ್ಥನೀತಿಗಳ ಹೊಂದಾಣಿಕೆಗಾಗಿ ಸೂಕ್ತ ಸಲಹೆ ನೀಡುವ ಉದ್ದೇಶದಿಂದ ಇದು ಸ್ಥಾಪಿತವಾಗಿದೆ. 4 ಆಯ-ವ್ಯಯ ನೀತಿ ಸಮಿತಿ, ಕೇಂದ್ರ ಬ್ಯಾಂಕ್ ಗವರ್ನರುಗಳ ಸಮಿತಿ. ಸಾರಿಗೆ ಸಮಿತಿ ಮತ್ತು ವಲಸೆ ಹೋಗುವ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಆಡಳಿತ ಆಯೋಗ-ಇವು ಇತರ ಕೆಲವು ಸಮಿತಿಗಳು.
ಸಾಮಾನ್ಯ ಮಾರುಕಟ್ಟೆಯ ರಾಷ್ಟ್ರಗಳಲ್ಲಿನ ಕಾರ್ಮಿಕರ ಉದ್ಯೋಗಾವಕಾಶಗಳನ್ನು ಉತ್ತಮಪಡಿಸಿ ಜೀವನಮಟ್ಟವನ್ನು ಏರಿಸುವ ಉದ್ದೇಶದಿಂದ 1960ರಲ್ಲಿ ಐರೋಪ್ಯ ಸಾಮಾಜಿಕ ನಿಧಿಯ ಸ್ಥಾಪನೆಯಾಯಿತು. ಸರ್ಕಾರಗಳ, ಕಾರ್ಮಿಕ ಸಂಘಗಳ ಮತ್ತು ನೇಮಕದಾರರ (ಎಂಪ್ಲಾಯರ್ಸ್) ಪ್ರತಿನಿಧಿಗಳು ಈ ನಿಧಿಯ ಆಡಳಿತ ಆಯೋಗದಲ್ಲಿರುತ್ತಾರೆ. ಉದ್ಯೋಗ ಪುನವರ್ಯ್‌ವಸ್ಥೆ ಪುನರ್ತರಬೇತಿಗಳಿಗಾಗಿ ಸದಸ್ಯ ರಾಷ್ಟ್ರ ಮಾಡುವ ಖರ್ಚಿನಲ್ಲಿ ಅರ್ಧವನ್ನು ಈ ನಿಧಿಯಿಂದ ಒದಗಿಸಲು ಅವಕಾಶವಿದೆ. ಒಂದು ಉತ್ಪಾದನೆಯಿಂದ ಇನ್ನೊಂದು ಉತ್ಪಾದನೆಗಾಗಿ ಉದ್ಯಮವನ್ನು ಪರಿವರ್ತನೆಗೊಳಿಸಿದ್ದರ ಫಲವಾಗಿ ಕಾರ್ಮಿಕರ ಕೂಲಿಯ ನಷ್ಟವನ್ನು ತುಂಬಿಕೊಡಲೂ ಈ ನಿಧಿಯನ್ನು ಬಳಸಬಹುದು. 1960-1968ರ ಅವಧಿಯಲ್ಲಿ ಈ ನಿಧಿಯಿಂದ 8.026 ಕೋಟಿ ಡಾಲರುಗಳನ್ನು 9,59,258 ಕಾರ್ಮಿಕರ ನೆರವಿಗಾಗಿ ನೀಡಲಾಗಿತ್ತು.
ಸಮುದಾಯ ರಾಷ್ಟ್ರಗಳ ಸಾಗರಾಂತರ ಪ್ರದೇಶಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿಗಾಗಿ ಒಂದು ಪ್ರತ್ಯೇಕ ನಿಧಿ ಸ್ಥಾಪಿತವಾಗಿದೆ. 1959ರಲ್ಲಿ ಇದನ್ನು ತೊಡಗಿಸಲಾಯಿತು. ಸಮುದಾಯ ಹಿತ ಸಾಧಿಸಬಲ್ಲ ಸಾಮಾನ್ಯ ಮಾರುಕಟ್ಟೆಯ ಸುಲಲಿತ ಸರ್ವತೋಮುಖ ಬೆಳೆವಣಿಗೆಯಾಗುವಂತೆ ಅಭಿವೃದ್ಧಿ ಕಾರ್ಯಗಳಿಗಾಗಿ ಸಾಲ ಕೊಡುವ ಮತ್ತು ಜಾಮೀನು ನೀಡುವ ಉದ್ದೇಶದಿಂದ ಸ್ಥಾಪಿತವಾಗಿರುವ ಐರೋಪ್ಯ ನಿಯೋಜನಾ ಬ್ಯಾಂಕಿನ ಬಂಡವಾಳ 100 ಕೋಟಿ ಡಾಲರ್. ಇದಕ್ಕೆ ಫ್ರಾನ್ಸ್ ಮತ್ತು ಜರ್ಮನ್ ಗಣರಾಜ್ಯ ತಲಾ 30 ಕೋಟಿ ಡಾಲರುಗಳನ್ನೂ ಇಟಲಿ 24 ಕೋಟಿಯನ್ನೂ ಬೆಲ್ಜಿಯಂ 8.65 ಕೋಟಿಯನ್ನೂ ನೆದರ್ಲೆಂಡ್ಸ್ 7.15 ಕೋಟಿಯನ್ನೂ ಲಕ್ಸೆಂಬರ್ಗ್ 20 ಲಕ್ಷವನ್ನೂ ಚಂದಾ ಸಲ್ಲಿಸಿವೆ.
15 ವರ್ಷಗಳೊಳಗೆ ಒಪ್ಪಂದದ ರಾಷ್ಟ್ರಗಳೊಳಗೆ ಆಮದು-ರಫ್ತು ಸುಂಕವಿಲ್ಲದೆ ವ್ಯಾಪಾರ ನಡೆಯುವಂತೆ ಮಾಡುವುದು ಸಮುದಾಯದ ಆಶಯ. ಸಮುದಾಯದ ರಾಷ್ಟ್ರಗಳು ಇತರ ರಾಷ್ಟ್ರಗಳೊಡನೆ ನಡೆಸುವ ವ್ಯಾಪಾರಕ್ಕೆ ಏಕರೀತಿಯ ಆಮದು-ರಫ್ತು ನೀತಿ ಹಾಗೂ ಸುಂಕ ದರಗಳ ಪಟ್ಟಿ ಅನುಸರಿಸಲಾಗುವುದು. ಆರಂಭದಲ್ಲಿ 1-1-57ರಲ್ಲಿ ಆರು ರಾಷ್ಟ್ರಗಳು ಅನುಸರಿಸುತ್ತಿದ್ದ ದರಗಳ ಸರಾಸರಿಯೇ. ಈ ಹೊಸ ಸುಂಕ ದರಗಳು; ಇವು ಮುಂದೆ ಕಾಣಿಸಿರುವ ಮಿತಿಗೆ ಹೆಚ್ಚಾಗದಿರಬೇಕೆಂದು ವಿಧಿಸಲಾಗಿದೆ: 1 ಕಚ್ಚಾ ಸಾಮಗ್ರಿಗಳಿಗೆ ಶೇ.3, 2 ಅರ್ಧ ತಯಾರಿಸಿದ ಸರಕುಗಳಿಗೆ ಶೇ.10, 3 ಕೆಲವು ರಾಸಾಯನಿಕ ಸರಕುಗಳಿಗೆ ಶೇ.15-ಶೇ.25, 4 ನಮೂದಿಸಲಾಗಿರುವ ಕೆಲವು ಸರಕುಗಳಿಗೆ ಪರಸ್ಪರ ಮಾತುಕತೆಗಳ ಮೇಲೆ ನಿರ್ಧಾರವಾಗುವ ದರಗಳು. ಹೀಗೆ ಸುಂಕದರಗಳ ಪರಮಾವಧಿ ಮಟ್ಟವನ್ನು ಗೊತ್ತುಮಾಡಿದಂತಾಗಿದೆ. ಈ ಏಕರೂಪದ ಹೊರ ಸುಂಕ ಪದ್ಧತಿ ಮೂರು ಹಂತಗಳಲ್ಲಿ ಜಾರಿಗೆ ಬರತಕ್ಕದ್ದು. ಒಂದು ಸಾರಿ ಸ್ಥಾಪನೆಯಾದ ಸುಂಕದ ಮಟ್ಟ ಬದಲಾವಣೆಯಾಗಬೇಕಾದರೆ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಆವಶ್ಯಕ. ವ್ಯವಸಾಯಗಳ ಮೇಲಿನ ಸುಂಕವನ್ನು ಸದಸ್ಯ ರಾಷ್ಟ್ರ ಸಭೆಯ ಅನುಮತಿಯಿಂದ ಕೆಲವು ಕಾಲದ ವರೆಗೆ ವಜಾ ಮಾಡಬಹುದು.
ಆಮದು ಪ್ರಮಾಣ ಮಿತಿಗೊಳಿಸುವ ಹಸುಗೆ (ಕೋಟ) ಪದ್ಧತಿ ರದ್ಧಾಗುತ್ತದೆ. ಮೊದಲ ವರ್ಷದಲ್ಲೇ ಉಭಯ ಪಕ್ಷೀಯ ಹಸುಗೆಗಳು ಕ್ಷೇತ್ರೀಯ ಹಸುಗೆಗಳಾಗಿ ಮಾರ್ಪಟ್ಟುವು. ಅಂದರೆ ನಿಗದಿಯಾದ ಆಮದಿನ ಪರಿಮಾಣವನ್ನು ಇನ್ನೊಂದು ರಾಷ್ಟ್ರದಿಂದ ಮಾತ್ರ ಪಡೆಯುವುದಕ್ಕೆ ಬದಲಾಗಿ ಉಳಿದ 5 ರಾಷ್ಟ್ರಗಳಲ್ಲಿ ಯಾವುದರಿಂದ ಬೇಕಾದರೂ ಪಡೆಯ ಬಹುದು. ಕಾಲಕ್ರಮದಲ್ಲಿ ಹಸುಗೆಯ ಮೂಲಕವಾಗಲಿ ಇತರ ವಿಧದಲ್ಲಾಗಲಿ ಆಮದು ಪ್ರಮಾಣವನ್ನು ನಿರ್ಬಂಧಿಸುವ ಕಟ್ಟುಪಾಡುಗಳನ್ನು ಕ್ಷೇತ್ರದೊಳಗೆ ಪುರ್ಣವಾಗಿ ರದ್ದುಗೊಳಿಸಿ ವ್ಯಾಪಾರ ಸ್ವಾಭಾವಿಕ ಮಾರ್ಗಗಳಲ್ಲಿ ಬೆಳೆಯುವ ಅವಕಾಶವನ್ನು ಸಮುದಾಯ ಕಲ್ಪಿಸಲಿದೆ.
ವಿದೇಶೀ ವಿನಿಮಯ ಮತ್ತು ವ್ಯಾಪಾರ ನೀತಿಗಳ ಬಗ್ಗೆ ಸಾಮಾನ್ಯ ಮಾರುಕಟ್ಟೆಯ ಆವಶ್ಯಕತೆಗಳಿಗೆ ಅನುಸಾರವಾದ ಕೆಲವು ನಿಯಮಗಳನ್ನು ಒಪ್ಪಂದರಲ್ಲಿ ಸೂಚಿಸಿದೆ. ಸಮುದಾಯದ ಸದಸ್ಯ ರಾಷ್ಟ್ರಗಳೂ ಅಂತಾರಾಷ್ಟ್ರೀಯ ದ್ರವ್ಯನಿಧಿಯ ಸದಸ್ಯತ್ವ ಹೊಂದಿರುವುದರಿಂದ ಅವು ವಿದೇಶೀ ವಿನಿಮಯ ಕ್ಷೇತ್ರದಲ್ಲಿ ಸೂಕ್ತ ಕಟ್ಟುಪಾಡುಗಳಿಗೆ ಒಳಗಾಗಿವೆ. ರಫ್ತು ವ್ಯಾಪಾರಕ್ಕೆ ಸಹಾಯದ್ರವ್ಯ (ಎಕ್ಸ್‌ಫೋರ್ಟ್ ಸಬ್ಸಿಡಿ) ನೀಡಿಕೆ, ವ್ಯವಹಾರ ಕೂಟಗಳ (ಕಾರ್ಟೆಲ್ಸ್) ಮೂಲಕ ಬೆಲೆ ನಿಗದಿ ಪದ್ಧತಿ, ಸರ್ಕಾರಿ ವ್ಯಾಪಾರ ಕಾರ್ಪೊರೇಷನ್ಗಳ ಮೂಲಕ ಅನುಚಿತ ಸ್ಪರ್ಧೆಯಲ್ಲಿ ನಿರತವಾಗುವುದು-ಇಂಥ ನೀತಿಗಳನ್ನು ತಪ್ಪಿಸಲು ಒಪ್ಪಂದದಲ್ಲಿ ಸೂಚಿತವಾಗಿರುವ ಪ್ರಕಾರ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಾರ್ವತ್ರಿಕ ಮಾರುಕಟ್ಟೆಯ ನಿಯಮಗಳ ಪ್ರಕಾರ ಸದಸ್ಯರಾಷ್ಟ್ರಗಳ ರೈಲು, ರಸ್ತೆ, ಹಡಗು, ವಿಮಾನ ಇತ್ಯಾದಿ ಸಾರಿಗೆ ಪದ್ಧತಿಗಳಲ್ಲಿ ಆದಷ್ಟುಮಟ್ಟಿಗೆ ಏಕರೂಪದ ರೀತಿನೀತಿಗಳನ್ನು ಜಾರಿಗೆ ತರಲಾಗುವುದು. ಬಂಡವಾಳವನ್ನು ಈ ಆರು ರಾಷ್ಟ್ರಗಳೊಳಗೆ ಜನ ಸುಸೂತ್ರವಾಗಿ ಎಲ್ಲಿ ಬೇಕಾದರೂ ನಿಯೋಜಿಸುವ ಅವಕಾಶ ಉಂಟಾಗುವಂತೆ ಕಟ್ಟುಪಾಡುಗಳನ್ನೆಲ್ಲ ಸಂಪುರ್ಣವಾಗಿ ವಿಸರ್ಜಿಸುವ ಯತ್ನ ನಡೆದಿದೆ.
ಹಿಂದುಳಿದಿರುವ ಸಮುದಾಯ ರಾಷ್ಟ್ರಗಳ ಆರ್ಥಿಕಾಭಿವೃದ್ಧಿ, ಉತ್ಪನ್ನ ವಿಧಾನದ ಆಧುನೀಕರಣ, ಕೈಗಾರಿಕೆಗಳ ವೈಜ್ಞಾನಿಕ ಪರಿಷ್ಕರಣ (ರ್ಯಾಷನಲೈಸೇಷನ್) ಇತ್ಯಾದಿ ಕಾರ್ಯಗಳಿಗೆ ಆವಶ್ಯಕವಾದ ಹಣಕಾಸನ್ನು ಐರೋಪ್ಯ ನಿಯೋಜನ ಬ್ಯಾಂಕು ಒದಗಿಸುತ್ತದೆ.
ಸದಸ್ಯ ರಾಷ್ಟ್ರಗಳ ವ್ಯವಸಾಯ ನೀತಿಗಳ ಸಮನ್ವಯ, ವ್ಯವಸಾಯ ಉತ್ಪನ್ನಗಳ ವಿಚಾರದಲ್ಲೂ ಸಮುದಾಯ ಕ್ಷೇತ್ರಕ್ಕೆಲ್ಲ ಒಂದೇ ಮಾರುಕಟ್ಟೆಯ ನಿರ್ಮಾಣ-ಇವೂ ಸಮುದಾಯದ ಸಹಜವಾಗಿ ಗುರಿಗಳಾಗಿದ್ದಾಗ್ಯೂ ಈ ಭಾಗದಲ್ಲಿ ಕೆಲವು ರಿಯಾಯಿತಿಗಳನ್ನು ತೋರಿಸಲಾಗಿದೆ. ಕೆಲವು ವ್ಯವಸಾಯ ಉತ್ಪನ್ನಗಳ ಮೇಲೆ ಹತೋಟಿ ಸ್ಥಾಪಿಸುವುದಕ್ಕೂ ಅವುಗಳಿಗೆ ರಕ್ಷಣೆ ನೀಡುವುದಕ್ಕೂ ಆಯಾ ರಾಷ್ಟ್ರಗಳ ಸರ್ಕಾರಗಳಿಗೆ ಸ್ವಲ್ಪ ಅವಕಾಶವಿದೆ. ಮಾರಾಟ ಮಂಡಲಿಗಳ ಸ್ಥಾಪನೆ, ಕನಿಷ್ಠ ಬೆಲೆ ನಿಗದಿ, ಕನಿಷ್ಠ ಮಟ್ಟಕ್ಕಿಂತ ಕೆಳಗೆ ಬೆಲೆ ಇಳಿದಾಗ ಆಮದು ನಿಷೇಧ, ವಿಶೇಷ ಧನಸಹಾಯ-ಇವುಗಳ ಮೂಲಕ ಒಂದೊಂದು ರಾಷ್ಟ್ರವೂ ಅದರ ವ್ಯವಸಾಯ ಸ್ಥಿತಿಗಳಿಗೆ ತಕ್ಕಂತೆ ಪ್ರತ್ಯೇಕ ನೀತಿಯನ್ನು ತಾತ್ಕಾಲಿಕವಾಗಿ ಅನುಸರಿಸಬಹುದು. ಹೀಗೆ ವ್ಯವಸಾಯದ ವಿಷಯವಾಗಿ ಕಟ್ಟುಪಾಡುಗಳು ಸ್ವಲ್ಪ ಸಡಿಲವಾಗಿವೆ.
ಮಾರುಕಟ್ಟೆಯ ಏಕತೆಯಿಂದ ಸದಸ್ಯರಾಷ್ಟ್ರಗಳ ಕೈಗಾರಿಕಾ ರಚನೆಯಲ್ಲಿ ಆಗುವ ಬದಲಾವಣೆಗಳು, ಕೆಲಸಗಾರರಿಗೆ ಒಂದು ಸದಸ್ಯರಾಷ್ಟ್ರದಿಂದ ಇನ್ನೊಂದು ಸದಸ್ಯ ರಾಷ್ಟ್ರಕ್ಕೆ ಹೋಗಲು ಇರುವ ಸರಳ ಅವಕಾಶ, ಕ್ಷೇತ್ರಾದ್ಯಂತವೂ ಒಂದು ಬಗೆಯ ಕೆಲಸಕ್ಕೆ ಒಂದೇ ದರದ ಕೂಲಿ ನಿಗದಿ-ಇಂಥ ತೀವ್ರ ಬದಲಾವಣೆಗಳು ಅನೇಕ ಸಾಮಾಜಿಕ ಪರಿಣಾಮಗಳನ್ನೂ ಸಮಸ್ಯೆಗಳನ್ನೂ ಉಂಟುಮಾಡುವುದು ಸ್ವಾಭಾವಿಕ. ಇವನ್ನು ಎದುರಿಸಲು ಸಹಾಯ ನೀಡುವ ಸಲುವಾಗಿ ಐರೋಪ್ಯ, ಸಾಮಾಜಿಕ ನಿಧಿಯೊಂದನ್ನು ಸ್ಥಾಪಿಸಲಾಗಿದೆ. ಈ ಎಲ್ಲ ರೀತಿನೀತಿಗಳ ಮೂಲಕ ಆರ್ಥಿಕ ಸಮುದಾಯ ಒಪ್ಪಂದ ಆರು ಪಾಶ್ಚಾತ್ಯ ಐರೋಪ್ಯ ರಾಷ್ಟ್ರಗಳೊಡನೆ ನಿಕಟ ಆರ್ಥಿಕ ಸಂಘಟನೆ ಸಾಧಿಸುತ್ತಿರುವುದು ಮಹತ್ವದ ಘಟನೆ. ಆರ್ಥಿಕ ಸಂಘಟನೆಯ ಜೊತೆಗೆ ರಾಜಕೀಯ ಸಂಘಟನೆಯನ್ನೂ ಸಾಧಿಸುವ ಯತ್ನಗಳು ನಡೆಯುತ್ತಿವೆ.
ಆರು ರಾಷ್ಟ್ರಗಳು ಮಾತ್ರವೇ ಕೂಡಿಕೊಂಡು ಸಂಘಟನೆ ಬೆಳೆಸಲುದ್ಯಮಿಸಿರುವುದು ಇತರ ಐರೋಪ್ಯ ರಾಷ್ಟ್ರಗಳಿಗೇ ಅಲ್ಲದೆ ಹೊರಗಿನ ರಾಷ್ಟ್ರಗಳಿಗೂ ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲೂ ಇಂಥ ಸಾಮಾನ್ಯ ಮಾರುಕಟ್ಟೆಯ ಸ್ಥಾಪನೆಗೆ ಇದರಿಂದ ಪ್ರೇರಣೆಯುಂಟಾಗಿದೆ.
ಸಾಮಾನ್ಯ ಮಾರುಕಟ್ಟೆಯ ವ್ಯವಸ್ಥೆಯಷ್ಟು ನಿಕಟ ಆರ್ಥಿಕ ಸಂಘಟನೆಗೆ ತಯಾರಾಗಿಲ್ಲದ ಇತರ ಪಾಶ್ಚಾತ್ಯ ಐರೋಪ್ಯ ರಾಷ್ಟ್ರಗಳ ಪೈಕಿ 7 ರಾಷ್ಟಗಳು ಬ್ರಿಟನಿನ ಮುಂದಾಳುತನದಲ್ಲಿ ನವೆಂಬರ್ 1959ರಲ್ಲಿ ಸಹಿ ಆದ ಸ್ಟಾಕ್ ಹೋಂ ಒಡಂಬಡಿಕೆಯ ಆಧಾರದ ಮೇಲೆ ಐರೋಪ್ಯ ನಿರಾತಂಕ ವ್ಯಾಪಾರ ಸಂಘವೊಂದನ್ನು ಸ್ಥಾಪಿಸಿದುವು. 1961ರಲ್ಲಿ ಬ್ರಿಟನ್ ಐರೋಪ್ಯ ಆರ್ಥಿಕ ಸಮುದಾಯಕ್ಕೆ ಸೇರಲು ಸಂಧಾನಗಳನ್ನು ನಡೆಸಲಾರಂಭಿಸಿತು. ಇದು ಒಂದು ಮುಖ್ಯ ಘಟನೆ.
ಬ್ರಿಟನ್ ಮಾರುಕಟ್ಟೆ ಸೇರ್ಪಡೆ
[ಬದಲಾಯಿಸಿ]ಬ್ರಿಟನ್ ಐರೋಪ್ಯ ಸಾಮಾನ್ಯ ಮಾರುಕಟ್ಟೆಗೆ ಸೇರುವ ನಿರ್ಧಾರ ಅನೇಕ ಸಮಸ್ಯೆಗಳನ್ನೆಬ್ಬಿಸಿದೆ. ಮುಖ್ಯವಾಗಿ ಬ್ರಿಟನ್ನಿನ ಹೊರ ವ್ಯಾಪಾರದ ಶೇಕಡಾ 50 ರಷ್ಟು ಭಾಗ ಕಾಮನ್ವೆಲ್ತ್ ರಾಷ್ಟ್ರಗಳೊಡನೆ ನಡೆಯುತ್ತಿದ್ದು ಇವುಗಳ ವ್ಯಾಪಾರಕ್ಕೆ ವಿಶೇಷ ಸುಂಕ ರಿಯಾಯಿತಿಗಳು ಬಹುಕಾಲದಿಂದಲೂ ಜಾರಿಯಲ್ಲಿವೆ. ಈಗ ಈ ಆರ್ಥಿಕ ಬಾಂಧವ್ಯಗಳನ್ನು ಕಡಿದುಹಾಕುವುದು ಕಷ್ಟಕರ. ಭಾರತ ಮತ್ತು ಇತರ ಕಾಮನ್ವೆಲ್ತ್ ರಾಷ್ಟ್ರಗಳು ತಮಗೆ ಸಂಭವಿಸುವ ನಷ್ಟದ ಬಗ್ಗೆ ಬ್ರಿಟನಿಗೆ ಹೇಳಿಕೊಂಡಿವೆ. ಇಂಥ ಪರಿಣಾಮಗಳಾಗದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬ್ರಿಟನ್ ಭರವಸೆ ನೀಡಿದೆ. ಬ್ರಿಟನ್ನಿನ ದೃಷ್ಟಿಯಿಂದ ಐರೋಪ್ಯ ರಾಷ್ಟ್ರಗಳೊಡನೆ ನಿಕಟ ಸಂಘಟನೆ ಅವಶ್ಯ. ಅಂತೆಯೇ ಕಾಮನ್ವೆಲ್ತ್ ರಾಷ್ಟ್ರಗಳ ಸಂಪರ್ಕ ತ್ಯಜಿಸುವುದೂ ಅನುಚಿತ. ಅಂತಿಮವಾಗಿ ಯಾವ ಷರತ್ತುಗಳ ಮೇಲೆ ಬ್ರಿಟನ್ ಸಾಮಾನ್ಯ ಮಾರುಕಟ್ಟೆ ಸೇರುವುದೆಂಬುದನ್ನು ಕಾದು ನೋಡಬೇಕಾಗಿದೆ. ಐರೋಪ್ಯ ಸಾಮಾನ್ಯ ಮಾರುಕಟ್ಟೆಯ ಮಾದರಿಯ ಆರ್ಥಿಕ ಒಕ್ಕೂಟಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಸ್ಥಾಪಿತವಾಗುತ್ತಿವೆ. ನಾರ್ಡಿಕ್ ಸಾಮಾನ್ಯ ಮಾರುಕಟ್ಟೆ ಯೋಜನೆ (1959), ಮಧ್ಯ ಅಮೆರಿಕನ್ ನಿರಾತಂಕ ವ್ಯಾಪಾರ ಕ್ಷೇತ್ರ (1958). ಲ್ಯಾಟಿನ್ ಅಮೆರಿಕನ್ ನಿರಾತಂಕ ವ್ಯಾಪಾರ ಕ್ಷೇತ್ರ (1960), ಪಶ್ಚಿಮ ಆಫ್ರಿಕನ್ ಸಂಘದ ಕೇಂದ್ರ (1950), ಆಫ್ರಿಕನ್ ಸಾಮಾನ್ಯ ಮಾರುಕಟ್ಟೆ, ವೆಸ್ಟ್ ಇಂಡೀಸ್ ಫೆಡರೇಷನಿನ ಸುಂಕ, ಸಂಘ, ಅರಬ್ ಸಾಮಾನ್ಯ ಮಾರುಕಟ್ಟೆ, ಏಷ್ಯ ಮತ್ತು ದೂರಪ್ರಾಚ್ಯ ಆರ್ಥಿಕ ಸಂಸ್ಥೆ ಇವು ಕೆಲವು ಉದಾಹರಣೆಗಳು. ಇವುಗಳಲ್ಲಿ ಕೆಲವು ಕಾರ್ಯಗತವಾಗಿವೆ; ಉಳಿದವು ರೂಪುಗೊಳ್ಳುತ್ತಿವೆ. ಒಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೀಗೆ ಬೆಳೆಯುತ್ತಿರುವ ಪ್ರಾದೇಶಿಕ ಆರ್ಥಿಕ ಕೂಟಗಳು ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳನ್ನು ಬಲುಮಟ್ಟಿಗೆ ಮಾರ್ಪಾಟು ಮಾಡುತ್ತಿರುವುದಂತೂ ನಿಜ. ವಿಶ್ವ ವ್ಯಾಪಾರವನ್ನು ಸ್ವಾಭಾವಿಕ ಮಾರ್ಗಗಳಲ್ಲಿ ವಿಸ್ತರಿಸುವ ಧ್ಯೇಯವುಳ್ಳ, ಸುಂಕಗಳ ಮತ್ತು ವ್ಯಾಪಾರದ ಸಾಮಾನ್ಯ ಒಪ್ಪಂದದಂಥ (ಜನರಲ್ ಅಗ್ರಿಮೆಂಟ್ ಆನ್ ಟಾರಿಫ್ಸ್ ಅಂಡ್ ಟ್ರೇಡ್) ವಿಶಾಲವಾದ ಅಂತಾರಾಷ್ಟ್ರೀಯ ವಾಣಿಜ್ಯ ಒಪ್ಪಂದದ ಚೌಕಟ್ಟಿನೊಳಗೇ ಈ ವ್ಯವಸ್ಥೆಗಳೆಲ್ಲ ರಚಿತವಾಗುತ್ತಿರುವುದರಿಂದ ಅಂತಾರಾಷ್ಟ್ರೀಯ ಅರ್ಥವ್ಯವಸ್ಥೆ ಸರಿಯಾದ ಪಥದಲ್ಲಿ ನಡೆಯುತ್ತಿದೆಯೆಂದು ಒಟ್ಟಿನಲ್ಲಿ ಹೇಳಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ ಉಲ್ಲೇಖ ದೋಷ: Invalid
<ref>
tag; no text was provided for refs namedemblem
- ↑ "ಆರ್ಕೈವ್ ನಕಲು". Archived from the original on 2016-10-05. Retrieved 2016-10-20.

- Pages with reference errors
- Pages using the JsonConfig extension
- Orphaned articles from ಮಾರ್ಚ್ ೨೦೧೯
- All orphaned articles
- Articles containing Danish-language text
- Articles containing Dutch-language text
- Articles containing French-language text
- Articles containing German-language text
- Articles containing Greek-language text
- Articles containing Italian-language text
- Articles containing Portuguese-language text
- Articles containing Spanish-language text
- Pages using infobox country or infobox former country with the flag caption or type parameters
- ಆರ್ಥಿಕ ವ್ಯವಸ್ಥೆ
- ಯುರೋಪ್
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ