ಭಾರತೀಯ ವಿಜ್ಞಾನ ಸಂಸ್ಥೆ
ಗೋಚರ
(ಐ.ಐ.ಎಸ್.ಸಿ ಇಂದ ಪುನರ್ನಿರ್ದೇಶಿತ)
ಭಾರತೀಯ ವಿಜ್ಞಾನ ಸಂಸ್ಥೆ | |
ಪ್ರಕಾರ | Public university |
---|---|
ಸ್ಥಾಪನೆ | 1909 |
ಸಂಸ್ಥಾಪಕ | Jamsedji Tata :ಜೆಮ್‍ಶೆಡ್‍ಜಿ ಟಾಟಾ |
ಡೈರೆಕ್ಟರ್ | Anurag Kumar[೧] |
ಶೈಕ್ಷಣಿಕ ಸಿಬ್ಬಂಧಿ | 467][೨] |
ವಿದ್ಯಾರ್ಥಿಗಳು | 3743[೩] |
ಪದವಿ ಶಿಕ್ಷಣ | 418 |
ಸ್ನಾತಕೋತ್ತರ ಶಿಕ್ಷಣ | 3325 |
ಸ್ಥಳ | ಬೆಂಗಳೂರು, ಕರ್ನಾಟಕ, 560012, ಭಾರತ 13°01′11″N 77°33′58″E / 13.01978°N 77.56605°E |
ಆವರಣ | Main campus in Bangalore – urban, 160 ha (400 acres). Second campus in Challakere – 610 ha (1,500 acres).[೪] |
ಭಾಷೆ | English |
ಜಾಲತಾಣ | www |
ಐಐಎಸ್‍ಸಿ
[ಬದಲಾಯಿಸಿ]ಭಾರತೀಯ ವಿಜ್ಞಾನ ಸಂಸ್ಥೆಯು (Indian Institute of Science(IISc)) ಭಾರತದ ಪ್ರಮುಖ ಸ್ನಾತಕೋತ್ತರ, ಸಂಶೋಧನೆ ಹಾಗೂ ಉಚ್ಚ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿದ್ದು , ಬೆಂಗಳೂರಿನಲ್ಲಿದೆ. ಜಮ್ಷೇಟ್ಜಿ ಟಾಟಾ ಹಾಗೂ ಮೈಸೂರಿನ ಮಹಾರಾಜ ಎಚ್.ಎಚ್ ಶ್ರೀ ಕೃಷ್ಣರಾಜ ಒಡೆಯರ್ ರವರ ಸಕ್ರಿಯ ನೆರವಿನೊಂದಿಗೆ ೧೯೦೯ ರಲ್ಲಿ ಸ್ಥಾಪಿಸಲಾಯಿತು. ಕೃಷ್ಣರಾಜ ಒಡೆಯರ್ ೩೭೧ ಎಕರೆ (೧.೫೦ ಕಿಮೀ ಚದರಡಿ) ಭೂಮಿ ದಾನ ಮಾಡಿದರು. ಹಾಗೇ ಜೆಮ್ಷೇಟ್ಜೀ ಟಾಟಾರವರು ಐಐಎಸ್ಸಿ ಸೃಷ್ಟಿಗೆ ಹಲವಾರು ಕಟ್ಟಡಗಳ ಯೋಜನೆಯನ್ನು ನೀಡಿದರು. ಈ ಸಂಸ್ಥೆಯನ್ನು ಸ್ಥಳೀಯವಾಗಿ "ಟಾಟಾ ಇನ್ಸ್ಟಿಟ್ಯೂಟ್" ಎಂದು ಕರೆಯಲಾಗುತ್ತದೆ. ಸಂಸ್ಥೆಯ ೩೭ ಅಭಿಯಂತ್ರಿಕ/ವಿಜ್ಞಾನ ವಿಭಾಗಗಳಲ್ಲಿ ೨೦೦೦ಕ್ಕೂ ಹೆಚ್ಚು ಸಂಶೋಧಕ ವಿದ್ಯಾರ್ಥಿಗಳು ಸ್ನಾತಕೋತ್ತರ/ ಪಿ.ಎಚ್.ಡಿ ಪದವಿಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಕರೆಂಟ್ ಸೈನ್ಸ್ (Current Science) ಪತ್ರಿಕೆಯು ಸಂಸ್ಥೆಯ ಸಂಶೋಧನಾ ಕೆಲಸದ ಆಧಾರದ ಮೇರೆಗೆ IISc ಗೆ ಪ್ರಥಮ ಸ್ಥಾನ ನೀಡಿದೆ.
ವಿಶ್ವಪ್ರಸಿದ್ಧಿಯ ಹಾದಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ
[ಬದಲಾಯಿಸಿ]- 20 Mar, 2017;
- ಇತ್ತೀಚೆಗೆ ಟೈಮ್ಸ್ ಹೈಯರ್ ಎಜುಕೇಶನ್ ಸರ್ವೆ ನಡೆಸಿದ ಜಾಗತಿಕ ವಿಶ್ವವಿದ್ಯಾಲಯಗಳ ಸಮೀಕ್ಷೆಯಲ್ಲಿ – ಐದು ಸಾವಿರಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ – ಜಗತ್ತಿನ ಅತ್ಯಂತ ಶ್ರೇಷ್ಠ ಸಂಸ್ಥೆಗಳಲ್ಲಿ ಎಂಟನೆಯ ಸ್ಥಾನವನ್ನು ಪಡೆಯುವ ಮೂಲಕ ಸಮಸ್ತ ಭಾರತೀಯರಿಗೂ ಐ.ಐ.ಎಸ್‌ಸಿ.(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ - ಐ.ಐ.ಎಸ್‌ಸಿ. ಅಥವಾ ‘ಟಾಟಾ ಇನ್ಸ್‌ಟಿಟ್ಯೂಟ್’ ಎಂದೇ ಜಾಗತಿಕವಾಗಿ ಚಿರಪರಿಚಿತವಾಗಿರುವ ಸಂಶೋಧನಾ ಸಂಸ್ಥೆ) ಹೆಮ್ಮೆ ತಂದಿದೆ.
ಉನ್ನತ ಶಿಕ್ಷಣದ ರ್‍ಯಾಂಕಿಂಗ್ ಮತ್ತದರ ಲಾಭಗಳು
[ಬದಲಾಯಿಸಿ]- ವಿಜ್ಞಾನ-ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಮೂಲಕ ಮಾನವನ ಮತ್ತು ಜಗತ್ತಿನ ಕಲ್ಯಾಣದ ಸಾಧ್ಯತೆಗಳೇನೆಂಬುದನ್ನು ಇಪ್ಪತ್ತನೆಯ ಶತಮಾನದಲ್ಲಿ ನಾವು ಕಂಡುಕೊಂಡಿದ್ದೇವೆ. ಹಾಗಾಗಿಯೇ ಇಂದು ಜಗತ್ತಿನ ಎಲ್ಲಾ ದೇಶಗಳು ತಮ್ಮ ಅಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಬಹಳ ಪ್ರಮುಖವಾದ ಸಾಧನವೆಂದು ಗುರುತಿಸಿವೆ. ಜ್ಞಾನದ ಉತ್ಪತ್ತಿ ಮತ್ತು ಪ್ರಸರಣವನ್ನು ಹೆಚ್ಚು ಸಮರ್ಪಕವಾಗಿ ನಿರ್ವಹಿಸಲು ಜಗತ್ತಿನಾದ್ಯಂತ ಅನೇಕ ಸಂಸ್ಥೆಗಳು ಬೋಧನೆ, ಸಂಶೋಧನೆ, ಅದರ ಆನ್ವಯಿಕತೆ, ಮೂಲಭೂತ ವ್ಯವಸ್ಥೆಗಳು ಇತ್ಯಾದಿ ಅನೇಕ ಮಾನದಂಡಗಳನ್ನಿಟ್ಟುಕೊಂಡು ಜಗತ್ತಿನಾದ್ಯಂತ ಜ್ಞಾನ ಹೇಗೆ ಬೆಳೆಯುತ್ತಿದೆ ಎಂಬುದನ್ನು ಅಳತೆ ಮಾಡುತ್ತವೆ. ಉದಾಹರಣೆಗೆ ಅಕಾಡಮಿಕ್ ರ್‍ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್ (ಶಾಂಘೈ ರ್‍ಯಾಂಕಿಂಗ್), ಸೆಂಟರ್ ಫಾರ್ ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್್ಸ್, ಗ್ಲೋಬಲ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್, ಎಚ್‌ಇಇಎಸಿಟಿ, ಲೀಡೆನ್ ರ್‍ಯಾಂಕಿಂಗ್ಸ್, ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್, ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್್ಸ್ ಇತ್ಯಾದಿ ಅನೇಕ ಸಂಸ್ಥೆಗಳು ವಿಶ್ವವಿದ್ಯಾನಿಲಯಗಳ ಸಮೀಕ್ಷೆಯನ್ನು ಜಾಗತಿಕ ಮಟ್ಟದಲ್ಲಿ ನಡೆಸುತ್ತವೆ. ಈ ಸಮೀಕ್ಷೆಗಳ ವಿಶ್ಲೇಷಣೆ ಮೂಲಕ ನಿರ್ದಿಷ್ಟ ಸಂಸ್ಥೆಯೊಂದು ಯಾವ ಕ್ಷೇತ್ರದಲ್ಲಿ ತನ್ನ ಶಿಕ್ಷಣದ ಗುಣಮಟ್ಟಕ್ಕಾಗಿ ಯಾವ ರೀತಿಯ ಒತ್ತನ್ನು ನೀಡಬೇಕೆಂಬುದನ್ನು ಗುರುತಿಸಿಕೊಳ್ಳಬಹುದು. ಅಂದರೆ ಬೋಧನೆ, ಬೋಧನಾ ಕೌಶಲ, ನಿಯತಕಾಲಿಕೆಗಳಲ್ಲಿ ಪ್ರಕಟಣೆ, ಪೇಟೆಂಟ್ ಇತ್ಯಾದಿಗಳಲ್ಲಿ ಯಾವ ಕ್ಷೇತ್ರದಲ್ಲಿ ಸಂಸ್ಥೆಯೊಂದು ನಿರ್ದಿಷ್ಟವಾಗಿ ಇಂದು ಯಾವ ಸ್ಥಿತಿಯಲ್ಲಿದೆ ಮತ್ತು ಮುಂದೆ ಕ್ರಮಿಸಬೇಕಾದ ಹಾದಿಯೇನು ಎಂದು ಈ ಸಮೀಕ್ಷೆಗಳ ಮೂಲಕ ಸ್ಪಷ್ಟವಾಗುತ್ತದೆ. ಇಂತಹ ಮಾನದಂಡಗಳ ಕುರಿತಾದಂತೆ ತಕರಾರುಗಳೇನೇ ಇದ್ದರೂ ಈ ಸಮೀಕ್ಷೆಗಳು ವಿಶ್ವವಿದ್ಯಾನಿಯಗಳಿಗೆ ಗುಣಾತ್ಮಕವಾಗಿ ಸಂಶೋಧನೆ ಮತ್ತು ಜ್ಞಾನಪ್ರಸರಣೆಯ ಕಾರ್ಯಕ್ಕೆ ದಿಕ್ಸೂಚಿಯನ್ನು ನೀಡುತ್ತವೆ.
ಐ.ಐ.ಎಸ್‌ಸಿ.: ಶತಮಾನದ ಹಾದಿ
[ಬದಲಾಯಿಸಿ]- ಟೈಮ್ಸ್ ಸಮೀಕ್ಷೆಯ ಪ್ರಕಾರ ಜಾಗತಿಕವಾಗಿ ಸಣ್ಣ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಈ ವರ್ಷ ಎಂಟನೆಯ ಸ್ಥಾನಕ್ಕೇರಿರುವ ಐ.ಐ.ಎಸ್‌ಸಿ. ತನ್ನ ಅಸ್ತಿತ್ವದ ಶತಮಾನದ ನಂತರವೂ ನಿರಂತರವಾಗಿ ಸಂಶೋಧನೆಯಲ್ಲಿ ತೊಡಗಿದೆ. 19ನೆಯ ಶತಮಾನದ ಕೊನೆಯ ಭಾಗದಲ್ಲಿ ಸ್ವಾಮಿ ವಿವೇಕಾನಂದರ ಅಣತಿಯಂತೆ ಜೆ. ಎನ್. ಟಾಟಾರವರು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಸಹಕಾರದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗಾಗಿ ಐ.ಐ.ಎಸ್‌ಸಿ.ಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಖ್ಯಾತ ರಸಾಯನಶಾಸ್ತ್ರಜ್ಞ ಮೂರಿಸ್ ಟ್ರಾವರ್ಸ್ ಅವರ ನಿರ್ದೇಶನದಲ್ಲಿ 1909ರಲ್ಲಿ ಐ.ಐ.ಎಸ್‌ಸಿ. ಕೆಲಸ ಪ್ರಾರಂಭಿಸಿತು. ಸರ್ ಸಿ.ವಿ. ರಾಮನ್‌ರವರು ಇಲ್ಲಿಂದಲೇ ನೊಬೆಲ್ ಪಾರಿತೋಷಕವನ್ನು ಪಡೆದಿದ್ದಲ್ಲದೆ ಐ.ಐ.ಎಸ್‌ಸಿ.ಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದರು. ವಿಜ್ಞಾನಕ್ಷೇತ್ರದ ದಿಗ್ಗಜಗಳಾದ ಹೋಮಿ ಭಾಭಾ, ವಿಕ್ರಂ ಸಾರಾಭಾಯ್, ಸತೀಶ್ ಧನವ್, ಜೆ.ಸಿ. ಘೋಷ್, ಜಿ.ಎನ್. ರಾಮಚಂದ್ರನ್ – ಹೀಗೆ ಹಲವರು ಮೇಧಾವಿಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಖ್ಯಾತಿ ಈ ಸಂಸ್ಥೆಯದು.
ಐ.ಐ.ಎಸ್‌ಸಿ.ಯ ಸಾಧನೆಗಳು
[ಬದಲಾಯಿಸಿ]- ಶತಮಾನಕ್ಕೂ ಹೆಚ್ಚು ಕಾಲ ಸಂಶೋಧನೆಯಲ್ಲಿ ತೊಡಗಿರುವ ಐ.ಐ.ಎಸ್‌ಸಿ.ಯ ಸಾಧನೆಗಳನ್ನು ಪಟ್ಟಿ ಮಾಡಿದರೆ ಮುಗಿಯಲಾರದಷ್ಟು ದೊಡ್ಡದು. ಅದು ಸಾಮಾನ್ಯ ಹಳ್ಳಿಗನಿಗೂ ಹಿಂದೆ ಪರಿಚಿತವಿದ್ದ ಅಸ್ತ್ರ ಒಲೆಯಿಂದ ಹಿಡಿದು ಸೂಪರ್ ಕಂಪ್ಯೂಟರ್, ನ್ಯಾನೋ ಟೆಕ್ನಾಲಜಿವರೆಗಿನ ವಿಜ್ಞಾನದ ವಿವಿಧ ಕ್ಷೇತ್ರಗಳವರೆಗೆ ಹರಡಿದೆ. ಕೇವಲ ಉನ್ನತ ಶಿಕ್ಷಣದ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಐ.ಐ.ಎಸ್‌ಸಿ.ಯ ಇತ್ತೀಚಿನ ಕೆಲವೇ ವರ್ಷಗಳ ಸಾಧನೆಗಳನ್ನು ಉದಾಹರಣೆಗಾಗಿ ಪಟ್ಟಿ ಮಾಡಬಹುದು.
- 1) ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್ 2017: ಜಗತ್ತಿನ ಅಗ್ರಗಣ್ಯ ಸಣ್ಣ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಎಂಟನೆಯ ಸ್ಥಾನ.
- 2) ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್ ರ್‍ಯಾಂಕಿಂಗ್ಸ್ 2016: ನಿಯತಕಾಲಿಕೆಗಳಲ್ಲಿ ವೈಜ್ಞಾನಿಕ ಲೇಖನಗಳ ಪ್ರಕಟಣೆ - 11ನೆಯ ಸ್ಥಾನ.
- 3) ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್ 2015: ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ 147ನೆಯ ಸ್ಥಾನ.
- 4) ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್ ಫಾರ್ ಬ್ರಿಕ್ಸ್ ಆಂಡ್ ಎಮರ್ಜಿಂಗ್ ಇಕನಾಮಿಕ್ಸ್: ಆರನೆಯ ಸ್ಥಾನ.
- 5) ಗ್ಲೋಬಲ್ ಎಂಪ್ಲಾಯಬಲಿಟಿ ಯೂನಿವರ್ಸಿಟಿ ರ್‍ಯಾಂಕಿಂಗ್ಸ್, 2015: ಜಾಗತಿಕವಾಗಿ 20ನೇ ಸ್ಥಾನ.
- 6) ಅಕಾಡಮಿಕ್ ರ್‍ಯಾಂಕಿಂಗ್ಸ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್: 2011ರಲ್ಲಿ ಮೊದಲ ಬಾರಿಗೆ (ಶಾಂಘೈ ರ್‍ಯಾಂಕಿಂಗ್‌ನಲ್ಲಿ) ಜಾಗತಿಕ ಐದುನೂರು ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರಿದ ಮೊದಲ ಭಾರತೀಯ ಸಂಸ್ಥೆ.
- ನಮಗೆಲ್ಲರಿಗೂ ತಿಳಿದಂತೆ ಭಾರತದಲ್ಲಿ ಆಧುನಿಕ ವಿಜ್ಞಾನವನ್ನು ಅತ್ಯಂತ ಕ್ರಮಬದ್ಧವಾಗಿ ಕಲಿಸುವ ಮತ್ತು ನಿರಂತರ ಸಂಶೋಧನೆಯ ಮೂಲಕ ಮುಂದಿನ ತಲೆಮಾರಿಗೆ ಸಮಗ್ರವಾಗಿ ದಾಟಿಸುವ ಕೆಲಸವನ್ನು ಪ್ರಾರಂಭಿಸಿದ ಕೆಲವೇ ಸಂಸ್ಥೆಗಳಲ್ಲಿ ಐ.ಐ.ಎಸ್‌ಸಿ.ಯೂ ಒಂದು. ಒಂದರ್ಥದಲ್ಲಿ ಸಂಶೋಧನಾ ವಾತಾವರಣ ಮತ್ತು ಅದಕ್ಕೆ ಪೂರಕವಾಗಿ ಬೇಕಾಗಿರುವ ಎಲ್ಲ ಸಂಗತಿಗಳ ಕುರಿತು ಪ್ರಯೋಗ ಮಾಡಿ ಅದನ್ನು ಅಭಿವೃದ್ಧಿಗೊಳಿಸಿದ ಕೀರ್ತಿಯಲ್ಲೂ ಐ.ಐ.ಎಸ್‌ಸಿ.ಗೆ ಹೆಚ್ಚಿನ ಪಾಲು ಸಲ್ಲುತ್ತದೆ. ಐ.ಐ.ಎಸ್‌ಸಿ.ಯ ಕಾರ್ಯವ್ಯಾಪ್ತಿಯು ವಿಜ್ಞಾನದ ನಿಯತಕಾಲಿಕೆಗಳಿಂದ ಮೊದಲುಗೊಂಡು ಪ್ರಯೋಗಶಾಲೆಗಳವರೆಗೆ, ತರಬೇತಿಯಿಂದ ಹಿಡಿದು ಸಾಮಾನ್ಯ ಜನರ ಸಮಸ್ಯೆಯವರೆಗೆ, ಎಲ್ಲ ರೀತಿಯಲ್ಲೂ ಯೋಚಿಸಿ, ಅದಕ್ಕೆ ಪೂರಕ ಮೂಲಭೂತ ಸೌಕರ್ಯಗಳನ್ನು ಸಜ್ಜುಗೊಳಿಸುವವರೆಗೆ ಈ ಪ್ರಯತ್ನಗಳು ವಿಸ್ತರಿಸಿವೆ. ಆ ಕಾರಣಕ್ಕಾಗಿಯೇ ಒಂದರ್ಥದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ಭಾರತದಲ್ಲಿ ಸಂಶೋಧನೆ ಮಾಡುವ ಸಾಧ್ಯತೆಯ ಬಗ್ಗೆ ನಿರಂತರ ಆಶಾದಾಯಕ ಸ್ಥಿತಿಯನ್ನು ನಿರ್ಮಿಸಿದೆ. ಈಗ ಜಗತ್ತಿನ ಹತ್ತು ಶ್ರೇಷ್ಠ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಭಾರತೀಯರಿಗೆ ಹೊಸ ಸ್ಫೂರ್ತಿಯನ್ನು ಕೊಟ್ಟಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಸಾಧ್ಯತೆಗಳು ಮತ್ತು ಸವಾಲುಗಳು
[ಬದಲಾಯಿಸಿ]- ಒಂದೆಡೆ ಐ.ಐ.ಎಸ್.ಸಿ. ಮತ್ತು ಐ.ಐ.ಟಿ.ಯಂಥ ಸಂಸ್ಥೆಗಳ ಸಾಧನೆಗಳು ನಮಗೆ ಹುರುಪು ತಂದರೆ, ಇನ್ನೊಂದೆಡೆ ಅವು ಅನೇಕ ಪ್ರಶ್ನೆಗಳನ್ನೂ ಸೃಷ್ಟಿಸುತ್ತವೆ. ಇಷ್ಟೆಲ್ಲ ಸಂಸ್ಥೆಗಳಿದ್ದರೂ ಭಾರತದಲ್ಲಿ ಯುವ ಪ್ರತಿಭೆಗಳಿಗೆ ಸಂಶೋಧನೆಯನ್ನು ಒಂದು ವೃತ್ತಿಜೀವನವಾಗಿ ತೋರಿಸಿಕೊಡುವಲ್ಲಿ ವಿಫಲರಾಗಿದ್ದೇವೆ. ಐ.ಟಿ., ಬಿ.ಟಿ., ಕಾರ್ಪೊರೇಟ್ ಉದ್ಯೋಗ ಅಥವಾ ಸಿವಿಲ್ ಸರ್ವೀಸ್‌ಗಳಂತೆ ಸಂಶೋಧನೆಯನ್ನೂ ಆಯ್ಕೆ ಮಾಡಬಹುದಾದ ವೃತ್ತಿಯಾಗಿಸಲು ಇರುವ ತೊಂದರೆಗಳೇನು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲವೇಕೆ?
- ಭಾರತದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸಲು ಐ.ಐ.ಎಸ್‌ಸಿ.ಯಂಥದ್ದೇ ಸಂಸ್ಥೆಗಳನ್ನು ಕಟ್ಟುವಲ್ಲಿ ನಾವೇಕೆ ವಿಫಲರಾಗಿದ್ದೇವೆ ಎನ್ನುವುದು ಕೂಡ ಇಂದು ನಮ್ಮ ಮುಂದಿರುವ ಗಂಭೀರವಾದ ಪ್ರಶ್ನೆ. ಐ.ಐ.ಎಸ್‌ಸಿ.ಯ ಸುತ್ತಲೂ ಇರುವ ಕೆಲವು ಜಿಲ್ಲೆಗಳಲ್ಲಿನ ನಾಲ್ಕಾರು ವಿಶ್ವವಿದ್ಯಾಲಯಗಳಲ್ಲಿ ಹೊರಬರುವ ಸಂಶೋಧನೆಗೂ ಐ.ಐ.ಎಸ್‌ಸಿ.ಯ ಸಂಶೋಧನೆಗೂ ಗುಣಾತ್ಮಕವಾಗಿ ಅಜಗಜಾಂತರದಷ್ಟು ವ್ಯತ್ಯಾಸವಿದೆ.
- ಹಾಗಾದರೆ ಈ ರೀತಿ ಅಪ್ರತಿಮ ಜ್ಞಾನ ಪ್ರಸರಣೆ ಮತ್ತು ಸಂಶೋಧನಾ ಕೌಶಲವನ್ನು ಐ.ಐ.ಎಸ್‌ಸಿ.ಯಿಂದ ಬೇರೆ ಕಡೆಗೂ ಹರಡುವ ಕಾರ್ಯದಲ್ಲಿ ಇರಬಹುದಾದ ತೊಂದರೆ ಏನು ಎಂಬುದು ನಮಗೆ ಅರ್ಥವಾದಂತಿಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯ ನಂತರ ವಿಜ್ಞಾನಸಂಸ್ಥೆಗೆ ಬರುವುದು ಇದುವರೆಗೂ ವಾಡಿಕೆಯಾಗಿತ್ತು. ಈಗ ಐ.ಐ.ಎಸ್‌ಸಿ. ಸ್ವತಃ ಸ್ನಾತಕ ಪದವಿಗಳನ್ನು ಪ್ರಾರಂಭಿಸಿರುವುದು, ಐ.ಐ.ಎಸ್‌ಸಿ.ಗೂ ಇತರ ವಿಶ್ವವಿದ್ಯಾಲಯಗಳಿಗೂ ಇದ್ದ ಸಂಬಂಧವನ್ನು ಮತ್ತಷ್ಟು ಮೊಟಕುಗೊಳಿಸಿದೆ. ಇದಲ್ಲದೆ ಐ.ಐ.ಎಸ್‌ಸಿ. ಇಂದು ಒಂದು ಕಡೆ ಜಗತ್ತಿನ ವಿವಿಧ ಉನ್ನತ ಶಿಕ್ಷಣ ಪಡೆಯಲು ರಹದಾರಿಯಂತೆ ಕಂಡರೆ, ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಸಂಬಳವನ್ನು ಪಡೆಯುವ ಉದ್ಯೋಗದ ಮಾರ್ಗೋಪಾಯವಾಗಿಯೂ ಕಾಣುತ್ತಿದೆ.
- ಇದೊಂದು ಕಳವಳಕಾರಿ ಸಂಗತಿ ಎನ್ನುವುದು ವಿಜ್ಞಾನಕ್ಷೇತ್ರದ ಹಲವರು ಗಣ್ಯರ ಅಭಿಪ್ರಾಯವಾಗಿದೆ. ಮಾತ್ರವಲ್ಲ, ಈ ವಿಜ್ಞಾನಸಂಸ್ಥೆ ಮೂಲಭೂತ ವಿಜ್ಞಾನದ ಸಂಶೋಧನೆಗಳಿಂದ ದೂರ ಸರಿದು ಆನ್ವಯಿಕಗಳ ಕಡೆಗೆ ಮುಖ ಮಾಡಿರುವುದು ಕೂಡ ಅತ್ಯಂತ ಕಳವಳಕಾರಿ ಬೆಳವಣಿಗೆ. ಇದರ ಜೊತೆಗೆ, ಭಾರತದಲ್ಲಿ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟು ಮಹತ್ಸಾಧನೆ ಮಾಡುವುದು ಸಾಧ್ಯವಾಗಿರುವಾಗ ಇದೇ ರೀತಿಯಲ್ಲಿ ಸಮಾಜವಿಜ್ಞಾನ ಮತ್ತು ಮಾನವಿಕಗಳ ಅಧ್ಯಯನದಲ್ಲಿಯೂ ಇಂಥ ಸಾಧನೆ ಆಗದಿರುವುದಕ್ಕೆ ಕಾರಣಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಈ ಎಲ್ಲ ಪ್ರಶ್ನೆಗಳ ನಡುವೆಯೂ ಐ.ಐ.ಎಸ್‌ಸಿ.ಯ ಸಾಧನೆ ಅತ್ಯಂತ ಮಹತ್ತರ ಹಾಗೂ ಭಾರತೀಯರೆಲ್ಲರೂ ಸಂಭ್ರಮಿಸಬೇಕಾದ ಸಂಗತಿ.[೫]
ಐಐಎಸ್ಸಿ ದೇಶದ ನಂ1 ಶಿಕ್ಷಣ ಸಂಸ್ಥೆ
[ಬದಲಾಯಿಸಿ]- 3 Apr, 2017;
- ೨೦೧೬-೧೭ ರ ಶ್ರೇಯಾಂಕ ಪಟ್ಟಿ: ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸತತ ಎರಡನೇ ವರ್ಷವೂ ಪಾತ್ರವಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ವಾರ್ಷಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ಐಐಎಸ್‌ಸಿ ಮೊದಲ ಸ್ಥಾನಗಳಿಸಿದೆ.
- ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮೊದಲ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) 9ನೇ ಸ್ಥಾನ ಮತ್ತು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ 10ನೇ ಸ್ಥಾನ ಗಳಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಎರಡನೇ ಆವೃತ್ತಿಯ ರ್ಯಾಂಕಿಂಗ್ ಅನ್ನು ೨-೪-೨೦೧೭ ಸೋಮವಾರ ಪ್ರಕಟಿಸಿದ್ದಾರೆ.
- ಕಳೆದ ತಿಂಗಳು ಮಾರ್ಚಿ ೨೦೧೭ ರಲ್ಲಿ ಬಿಡುಗಡೆಯಾದ ಜಗತ್ತಿನ ಮೊದಲ ಹತ್ತು ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿಯೂ ಐಐಎಸ್‌ಸಿ ಸ್ಥಾನ ಪಡೆದಿತ್ತು. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುವ ‘ಟೈಮ್ಸ್ ಉನ್ನತ ಶಿಕ್ಷಣ ರ್‍ಯಾಂಕಿಂಗ್’ನಲ್ಲಿ ಐಐಎಸ್‌ಸಿ ಎಂಟನೇ ಸ್ಥಾನ ಗಳಿಸಿತ್ತು. ಆ ಮೂಲಕ, ಅಮೆರಿಕದ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆ, ದಕ್ಷಿಣ ಕೊರಿಯಾದ ಪೊಹಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿಗೆ ಅದು ಸೇರಿತ್ತು. ಹೆಚ್ಚು ಅನುದಾನ ಸ್ವಾಯತ್ತೆ: ವಾರ್ಷಿಕ ರ್‍ಯಾಂಕಿಂಗ್‌ನಲ್ಲಿ ಅತ್ಯುತ್ತಮ ಸ್ಥಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯವು ಹೆಚ್ಚು ಅನುದಾನ, ಹೆಚ್ಚಿನ ಸ್ವಾಯತ್ತೆ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಿದೆ.
ಆರು ವಿಭಾಗಗಳಲ್ಲಿ ರ‍್ಯಾಂಕ್
[ಬದಲಾಯಿಸಿ]- ೨೦೧೭ರ ಈ ವರ್ಷ ಆರು ವಿಭಾಗಗಳಲ್ಲಿ ರ‍್ಯಾಂಕ್ ನೀಡಲಾಗಿದೆ. ಸಮಗ್ರ, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಮ್ಯಾನೇಜ್‌ಮೆಂಟ್, ಎಂಜಿನಿಯರಿಂಗ್ ಮತ್ತು ಫಾರ್ಮಸಿ ವಿಭಾಗಗಳಲ್ಲಿ ರ‍್ಯಾಂಕ್ ನೀಡಲಾಗಿದೆ. ಐಐಎಸ್‌ಸಿಯು ಸಮಗ್ರ ಮತ್ತು ವಿಶ್ವವಿದ್ಯಾಲಯ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದೆ. ಕಳೆದ ವರ್ಷ ವಿವಿ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಎನ್‌ಯು ಈ ಬಾರಿ ಎರಡನೇ ಸ್ಥಾನಕ್ಕೆ ಏರಿದೆ. ಸಮಗ್ರ ವಿಭಾಗದಲ್ಲಿ ಆರನೇ ರ‍್ಯಾಂಕ್ ಗಳಿಸಿದೆ.
ಆಯ್ಕೆ ಕ್ರಮ
[ಬದಲಾಯಿಸಿ]- ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಚೌಕಟ್ಟಿನ (ಎನ್‌ಐಆರ್‌ಎಫ್) ಅಡಿಯಲ್ಲಿ ರ‍್ಯಾಕಿಂಗ್ ನೀಡಲಾಗುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಚಿಸಿರುವ ಪ್ರಮುಖರ ಸಮಿತಿ ಮಾಡುವ ಶಿಫಾರಸುಗಳ ಮೇಲೆ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ.
ಐಐಎಂಬಿಗೆ 2ನೇ ಸ್ಥಾನ
[ಬದಲಾಯಿಸಿ]- ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಬಿ) ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಅಹಮದಾಬಾದ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮೊದಲ ಸ್ಥಾನ ಗಳಿಸಿದೆ. ಎಂಜಿನಿಯರಿಂಗ್ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ–ಮದ್ರಾಸ್ (ಐಐಟಿ–ಮದ್ರಾಸ್) ಈ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಮಾನದಂಡಗಳು
[ಬದಲಾಯಿಸಿ]- ಶಿಕ್ಷಣ ಸಂಸ್ಥೆಗಳಲ್ಲಿರುವ ಸಂಪನ್ಮೂಲ, ಬೋಧನಾ ವಿಧಾನ ಮತ್ತು ಕಲಿಕಾ ಪ್ರಕ್ರಿಯೆ
- ಅಧ್ಯಯನ ಮತ್ತು ವೃತ್ತಿಪರ ನಡಾವಳಿಗಳು
- ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ
- ಶಿಕ್ಷಣ ಸಂಸ್ಥೆಯ ವ್ಯಾಪ್ತಿ ಮತ್ತು ಒಳಗೊಳ್ಳುವಿಕೆ
- ಗ್ರಹಿಕೆ
ನೋಡಿ
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]Wikimedia Commons has media related to Indian Institute of Science.
- ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕೃತ ತಾಣ Archived 2020-11-06 ವೇಬ್ಯಾಕ್ ಮೆಷಿನ್ ನಲ್ಲಿ.
- ವಿವಾದಾಸ್ಪದ ವಿಷಯಗಳ ಚರ್ಚೆಗೆ ಸೈನ್ಸ್ ಕಾಂಗ್ರೆಸ್ ವೇದಿಕೆಯಾಗಿಯೇ ಇಲ್ಲ. ಸೈನ್ಸ್ ಕಾಂಗ್ರೆಸ್: ಬದಿಗಿಟ್ಟ ಚರ್ಚೆಗಳು; ಟಿ.ಆರ್. ಅನಂತರಾಮು;: 15 ಡಿಸೆಂಬರ್ 2018
ಉಲ್ಲೇಖ
[ಬದಲಾಯಿಸಿ]- ↑ [https://web.archive.org/web/20150908011759/http://www.iisc.ernet.in/administration/director.php Archived 2015-09-08 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "publisher=Indian Institute of Science ; accessdate=19 July 2016". Archived from the original on 26 ನವೆಂಬರ್ 2020. Retrieved 11 ಜನವರಿ 2017.
{{cite web}}
: Missing pipe in:|title=
(help) - ↑ "title=IISc in Numbers | publisher=Indian Institute of Science | accessdate=19 July 2016". Archived from the original on 26 ನವೆಂಬರ್ 2020. Retrieved 11 ಜನವರಿ 2017.
{{cite web}}
: Missing pipe in:|title=
(help) - ↑ title=IISc Challakere campus | publisher=Indian Institute of Science | accessdate=27 July 2016
- ↑ "ವಿಶ್ವಪ್ರಸಿದ್ಧಿಯ ಹಾದಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ;ಪ್ರಜಾವಾಣಿ ವಾರ್ತೆ;20 Mar, 2017;ಎಂ. ಎಸ್. ಚೈತ್ರ". Archived from the original on 2017-03-20. Retrieved 2017-03-21.
- ↑ ಐಐಎಸ್‌ಸಿ ದೇಶದ ನಂ.1 ಶಿಕ್ಷಣ ಸಂಸ್ಥೆ;ಪಿಟಿಐ;3 Apr, 2017