ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ.ಬಹಳಷ್ಟು ವಿಶ್ವವಿದ್ಯಾಲಯಗಳು ಅತಿಥಿ ಉಪನ್ಯಾಸಕರ ಬಲದಲ್ಲಿಯೇ ನಡೆಯುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ತಜ್ಞ ಮತ್ತು ಕಾಯಂ ಪ್ರಾಧ್ಯಾಪಕರಿಲ್ಲ. ಬೋಧಕೇತರ ಸಿಬ್ಬಂದಿಗೂ ಕೊರತೆ ಇದೆ. ಮೈಸೂರು ವಿಶ್ವವಿದ್ಯಾಲಯ ಶತಮಾನೋತ್ಸವ ನಡೆಸುವ ಸಡಗರದಲ್ಲಿದೆ. ಆದರೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಧಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಮೂಲಭೂತಸೌಕರ್ಯಗಳ ಕೊರತೆ ಇದೆ. ಮೂಲಭೂತಸೌಕರ್ಯಗಳಿದ್ದರೂ ಅದನ್ನು ಉಪಯೋಗಿಸಲು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆ ಇದೆ.
580 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಕಾಯಂ ಬೋಧಕರಿಗಿಂತಲೂ ಇವರ ಸಂಖ್ಯೆಯೇ ಹೆಚ್ಚು ಇದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕಳೆದ ಹತ್ತು ವರ್ಷಗಳಿಂದ ಈ ಹುದ್ದೆಗಳಿಗೆ ನೇಮಕಾತಿಯೇ ನಡೆದಿಲ್ಲ.580 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಕಾಯಂ ಬೋಧಕರಿಗಿಂತಲೂ ಇವರ ಸಂಖ್ಯೆಯೇ ಹೆಚ್ಚು ಇದೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ 3 ಸ್ನಾತಕೋತ್ತರ ಕೇಂದ್ರಗಳು ಮತ್ತು 4 ಸಂಯೋಜಿತ ಕಾಲೇಜುಗಳು ವಿ.ವಿ ವ್ಯಾಪ್ತಿಗೆ ಒಳಪಟ್ಟಿವೆ. ಒಟ್ಟು 57 ಸ್ನಾತಕೋತ್ತರ ಅಧ್ಯಯನ ವಿಭಾಗಗಳಿವೆ. ಸುಮಾರು 20 ಸಾವಿರ ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ.
ವಿವಿಧ ಅಧ್ಯಯನ ವಿಭಾಗಗಳಲ್ಲಿ 2,886 ಸಂಶೋಧನಾ ವಿದ್ಯಾರ್ಥಿಗಳಿದ್ದಾರೆ. ಕೆಲ ವಿಭಾಗಗಳಲ್ಲಿ ಒಬ್ಬರೂ ಕಾಯಂ ಅಧ್ಯಾಪಕರಿಲ್ಲ. ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದಲ್ಲಿ ಮುಖ್ಯಸ್ಥರನ್ನು ಹೊರತು ಪಡಿಸಿದರೆ, ಉಳಿದೆಲ್ಲರೂ ಅತಿಥಿ ಉಪನ್ಯಾಸಕರೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ರಾಜ್ಯದಲ್ಲಿ ಆರಂಭಗೊಂಡ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿ ಕರ್ನಾಟಕ ವಿಶ್ವವಿದ್ಯಾಲಯದ್ದಾಗಿದೆ. ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಅವರ ಸಂಖ್ಯೆಗೆ ಅನುಗುಣವಾಗಿ ಬೋಧಕರು ಇಲ್ಲ. ಇಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸ್ನಾತಕೋತ್ತರ ಕೇಂದ್ರಗಳಿಗೆ 537 ಬೋಧಕ ಹುದ್ದೆಗಳನ್ನು ಉನ್ನತ ಶಿಕ್ಷಣ ಇಲಾಖೆ ಮಂಜೂರು ಮಾಡಿದೆ. ಆದರೆ 324 ಬೋಧಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು 213 ಹುದ್ದೆಗಳು ಖಾಲಿ ಉಳಿದಿವೆ. ವಿಶ್ವವಿದ್ಯಾಲಯದ ಅಧೀನದಲ್ಲಿರುವ ಕರ್ನಾಟಕ ಕಾಲೇಜು ಅತಿಥಿ ಉಪನ್ಯಾಸಕರಿಂದಲೇ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಗೆ ಒಟ್ಟು 191 ಹುದ್ದೆಗಳು ಮಂಜೂರಾಗಿವೆ. ಅವುಗಳಲ್ಲಿ 110 ಕಾಯಂ ಉಪನ್ಯಾಸಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಮಂಜೂರಾದ ಹುದ್ದೆ 273 ಇದ್ದರೆ ಅತಿಥಿ ಉಪನ್ಯಾಸಕರ ಸಂಖ್ಯೆಯೇ 249 ಇದೆ. ಇರುವ ಹುದ್ದೆಯ ಸುಮಾರು ಶೇ 90ಕ್ಕೂ ಹೆಚ್ಚು ಪ್ರಾಧ್ಯಾಪಕರ ಅಗತ್ಯ ವಿಶ್ವವಿದ್ಯಾಲಯಕ್ಕೆ ಇದೆ. ಮಂಜೂರಾದ ಹುದ್ದೆಗಳ ಪೈಕಿಯೂ ಭರ್ತಿ ಆಗಿರುವುದು 219 ಮಾತ್ರ. ಅಂದರೆ ಸರ್ಕಾರ ನೇಮಿಸಿದ ಉಪನ್ಯಾಸಕರಿಗಿಂತ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರೇ ವಿಶ್ವವಿದ್ಯಾಲಯದ ವಿವಿಧ ಕೋರ್ಸುಗಳಿಗೆ ಪಾಠ ಮಾಡುತ್ತಿದ್ದಾರೆ.
ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕೊಣಾಜೆಯಲ್ಲಿರುವ ವಿವಿ ಕ್ಯಾಂಪಸ್‌ನ ಸ್ನಾತಕೋತ್ತರ ಕೋರ್ಸುಗಳು, ಮಂಗಳೂರು ನಗರದಲ್ಲಿರುವ ವಿಶ್ವವಿದ್ಯಾಲಯ ಕಾಲೇಜು, ಮಡಿಕೇರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಕಾಲೇಜು ಹಾಗೂ ಚಿಕ್ಕಅಳುವಾರದ ಕಾಲೇಜು ಸೇರಿದೆ. ವಿವಿ ಕ್ಯಾಂಪಸ್‌ನಲ್ಲಿ 171 ಹುದ್ದೆ ಮಂಜೂರಾಗಿದ್ದರೆ ಭರ್ತಿಯಾಗಿರುವುದು 131 ಹುದ್ದೆ ಮಾತ್ರ. ನಗರದಲ್ಲಿರುವ ವಿವಿ ಕಾಲೇಜಿನಲ್ಲಿಯೂ ಮಂಜೂರಾದ 57 ಹುದ್ದೆಗಳಲ್ಲಿ 10 ಹುದ್ದೆಗಳು ಖಾಲಿ ಉಳಿದಿವೆ.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 248 ಬೋಧಕ ಮತ್ತು 706 ಬೋಧಕೇತರ ಹುದ್ದೆಗಳಿದ್ದು, ಈ ಪೈಕಿ 150 ಬೋಧಕ ಹಾಗೂ 374 ಬೋಧಕತೇರ ಹುದ್ದೆಗಳು ಖಾಲಿ ಇವೆ. 36 ಪ್ರಾಧ್ಯಾಪಕ, 67 ಸಹಾಯಕ ಪ್ರಾಧ್ಯಾಪಕ ಹಾಗೂ 145 ಸಹ ಪ್ರಾಧ್ಯಾಪಕರ ಹುದ್ದೆಗಳು ಮಂಜೂರಾಗಿವೆ.210ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಸಂಶೋಧನೆಯ ಆಶಯದಿಂದ ಸ್ಥಾಪನೆಯಾಗಿ ಎರಡೂವರೆ ದಶಕಗಳನ್ನು ಕಂಡಿರುವ ಕನ್ನಡ ವಿಶ್ವವಿದ್ಯಾಲಯವೂ ಖಾಲಿಮನೆಯಾಗಿದೆ.(ಕುಲಪತಿ: ಪ್ರೊ.ಮಲ್ಲಿಕಾ ಘಂಟಿ)
ಎಲ್ಲಾ ವಿಶ್ವವಿದ್ಯಾಲಯಗಳಲ್ಲಿಯೂ ಇದೇ ಸಮಸ್ಯೆ. ಸಿಬ್ಬಂದಿ ಕೊರತೆ ಕಾರಣಕ್ಕೆ ವಿವಿ ನಿವೃತ್ತ ಸಿಬ್ಬಂದಿಯನ್ನೇ ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿಕೊಳ್ಳುತ್ತಿದೆ. ವಿವಿಯಲ್ಲಿ ಇಂದಿಗೂ ಸಾಕಷ್ಟು ಸಿಬ್ಬಂದಿ ನಿವೃತ್ತಿ ನಂತರ ಮರುನೇಮಕಕಗೊಂಡಿದ್ದಾರೆ. ಪೂರ್ಣಾವಧಿ ಬೋಧಕರಿಲ್ಲದಿರುವುದರಿಂದ ಒಬ್ಬೊಬ್ಬ ಅಧ್ಯಾಪಕರು 7–8 ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.
ರಾಜ್ಯದಲ್ಲಿ ಸರ್ಕಾರಿ, ಡೀಮ್ಡ್, ಖಾಸಗಿ ಸೇರಿ 52 ವಿಶ್ವವಿದ್ಯಾಲಗಳಿವೆ. ಅದರಲ್ಲಿ 40 ವಿಶ್ವವಿದ್ಯಾಲಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 38 ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಅಂಕಪಟ್ಟಿ ಪ್ರಕಟಿಸಿದ್ದು, ಕರ್ನಾಟಕ ಮತ್ತು ಕುವೆಂಪು ವಿಶ್ವವಿದ್ಯಾಲಗಳ ವರದಿ ಇನ್ನಷ್ಟೇ ಸಿದ್ಧವಾಗಬೇಕಿದೆ. ‘ಐ ಕೇರ್ ರೇಟಿಂಗ್ಸ್’ ಎಂಬ ಖಾಸಗಿ ಸಂಸ್ಥೆ ಸಮೀಕ್ಷೆ ನಡೆಸಿದೆ.
ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆ, ಹೊಸ ಆವಿಷ್ಕಾರಗಳು, ಬೋಧನಾ ಗುಣಮಟ್ಟ ಮತ್ತು ಸಿಬ್ಬಂದಿ ಸಂಖ್ಯೆ, ಮೂಲಸೌಕರ್ಯ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಎಂಬ ವಿಷಯಗಳ ಕುರಿತು ಸಮೀಕ್ಷೆ ನಡೆಸಲಾಗಿದೆ. ಗರಿಷ್ಠ 5 ಸ್ಟಾರ್ ಮತ್ತು 1,000 ಅಂಕದ ಮಿತಿಯೊಳಗೆ ಆಯಾ ವಿಶ್ವವಿದ್ಯಾಲಯ ಎಷ್ಟು ಸ್ಟಾರ್ ಮತ್ತು ಅಂಕ ಗಳಿಸಿದೆ ಎಂಬುದನ್ನು ವಿವರಿಸಲಾಗಿದೆ.
ದೇಶದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳ ಗುಣಮಟ್ಟ ಅಳೆದು ಅಂಕ ನೀಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಅದರಂತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶ್ರೇಯಾಂಕ ಚೌಕಟ್ಟು’ (ಕೆಎಸ್‌ಯುಆರ್‌ಎಫ್) ಸಿದ್ಧಪಡಿಸಿದೆ.
ರಾಜ್ಯದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮತ್ತು ಮೂಲಸೌಕರ್ಯಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ ಅಂಕ ನೀಡಲಾಗಿದೆ. ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಸಾಮಾನ್ಯ ವಿಶ್ವವಿದ್ಯಾಲಯಗಳು ಈ ಕ್ಷೇತ್ರಗಳಲ್ಲಿ ಹಿಂದೆ ಬಿದ್ದಿವೆ.
10 ವರ್ಷಕ್ಕಿಂತ ಹಿಂದೆ ಆರಂಭವಾದ ಎಂಟು ವಿಶ್ವವಿದ್ಯಾಲಯಗಳಿದ್ದು, ಮಣಿಪಾಲ್ ವಿ.ವಿ 737 ಅಂಕ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಗುಲ್ಬರ್ಗಾ ವಿವಿ (557) ಮತ್ತು ಕೊನೆಯ ಸ್ಥಾನದಲ್ಲಿ ಮಂಗಳೂರು ವಿವಿ (428) ಇದೆ.
ಐದರಿಂದ ಹತ್ತು ವರ್ಷದೊಳಗೆ ಸ್ಥಾಪನೆಯಾದ ವಿ.ವಿಗಳ ಪಟ್ಟಿಯಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾಲಯ (711) ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಜೈನ್ ವಿಶ್ವವಿದ್ಯಾಲಯ (661) ಇದ್ದರೆ, ದಾವಣಗೆರೆ ವಿ.ವಿ ಕೊನೆಯ ಸ್ಥಾನ (279) ಪಡೆದಿದೆ. 5 ವರ್ಷದೊಳಗಿನ ವಿ.ವಿಗಳ ಪಟ್ಟಿಯಲ್ಲಿ ಪಿಇಎಸ್ ವಿಶ್ವವಿದ್ಯಾಲಯ ಪ್ರಥಮ (617) ಮತ್ತು ರೈ ಟೆಕ್ನಾಲಜಿ ವಿ.ವಿ ಕೊನೆಯ (305) ಸ್ಥಾನದಲ್ಲಿದೆ.
ವಿಷಯಾಧಾರಿತ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಧಾರವಾಡದ ಕೃಷಿ ವಿ.ವಿ ಪ್ರಥಮ (779), ಬೀದರ್‌ನ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ದ್ವಿತೀಯ (656) ಹಾಗೂ ಜಾನಪದ ವಿಶ್ವವಿದ್ಯಾಲಯ ಕೊನೆ (289) ಸ್ಥಾನದಲ್ಲಿದೆ.
ಸರ್ಕಾರ ಈಚೆಗೆ ವಿಷಯಾಧಾರಿತ ವಿಶ್ವವಿದ್ಯಾಲಯಗಳನ್ನು ಹೆಚ್ಚಿಗೆ ಆರಂಭಿಸಿದೆ. ಅದರಲ್ಲಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಬೋಧನೆ, ಮೂಲಸೌಕರ್ಯ, ಸಂಶೋಧನೆ ಮತ್ತು ಆವಿಷ್ಕಾರ ನಡೆಯದಿರುವುದು ಸಮೀಕ್ಷೆಯ ಮೂಲಕ ಕಂಡುಬಂದಿದೆ.
ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ಕನ್ನಡ ವಿಶ್ವವಿದ್ಯಾಲಯ, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮತ್ತು ಸಂಸ್ಕೃತ ವಿಶ್ವವಿದ್ಯಾಲಯಗಳು ಶೂನ್ಯ ಸಾಧನೆ ಮಾಡಿವೆ. ಮೂಲ ಸೌಕರ್ಯದಲ್ಲೂ ಸಂಸ್ಕೃತ ಮತ್ತು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಗಳು ‘0’ ಸ್ಟಾರ್ ಪಡೆದಿವೆ. ಜಾನಪದ ವಿಶ್ವವಿದ್ಯಾಲಯದಕ್ಕೆ ಬೋಧನೆ ಗುಣಮಟ್ಟ ಮತ್ತು ಆವಿಷ್ಕಾರಕ್ಕೆ ಕೇವಲ 1 ಸ್ಟಾರ್ ಬಂದಿದೆ.[೧]
3 Apr, 2017; ವರದಿ ಪ್ರಕಾರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ನಂ.1ಸ್ಥಾನ ಪಡೆದಿದೆಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಟಾಪ್ 1 ಸ್ಥಾನ ಪಡೆದಿದೆ.[೩]
ಶ್ರೆಷ್ಠ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ರ್ಯಾಂಕಿಂಗ್ ಪಟ್ಟಿಯನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಬಿಡುಗಡೆ ಮಾಡಿದರು.
ರಾಷ್ಟ್ರೀಯತೆ ಚರ್ಚೆ ಹಾಗೂ ಪ್ರತಿಭಟನೆಗಳ ಮೂಲಕ ದೇಶದ ಗಮನ ಸೆಳೆದಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ಎರಡನೇ ಸ್ಥಾನದಲ್ಲಿದೆ.
೨೦೧೬-೧೭ ರ ರ್ಯಾಂಕಿಂಗ್ ಪಟ್ಟಿ: ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸತತ ಎರಡನೇ ವರ್ಷವೂ ಪಾತ್ರವಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ವಾರ್ಷಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ಐಐಎಸ್‌ಸಿ ಮೊದಲ ಸ್ಥಾನಗಳಿಸಿದೆ.
ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮೊದಲ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) 9ನೇ ಸ್ಥಾನ ಮತ್ತು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ 10ನೇ ಸ್ಥಾನ ಗಳಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಎರಡನೇ ಆವೃತ್ತಿಯ ರ್ಯಾಂಕಿಂಗ್ ಅನ್ನು ೨-೪-೨೦೧೭ ಸೋಮವಾರ ಪ್ರಕಟಿಸಿದ್ದಾರೆ.
ಕಳೆದ ತಿಂಗಳು ಮಾರ್ಚಿ ೨೦೧೭ ರಲ್ಲಿ ಬಿಡುಗಡೆಯಾದ ಜಗತ್ತಿನ ಮೊದಲ ಹತ್ತು ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿಯೂ ಐಐಎಸ್‌ಸಿ ಸ್ಥಾನ ಪಡೆದಿತ್ತು. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುವ ‘ಟೈಮ್ಸ್ ಉನ್ನತ ಶಿಕ್ಷಣ ರ್ಯಾಂಕಿಂಗ್’ನಲ್ಲಿ ಐಐಎಸ್‌ಸಿ ಎಂಟನೇ ಸ್ಥಾನ ಗಳಿಸಿತ್ತು. ಆ ಮೂಲಕ, ಅಮೆರಿಕದ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆ, ದಕ್ಷಿಣ ಕೊರಿಯಾದ ಪೊಹಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿಗೆ ಅದು ಸೇರಿತ್ತು. ಹೆಚ್ಚು ಅನುದಾನ ಸ್ವಾಯತ್ತೆ: ವಾರ್ಷಿಕ ರ್ಯಾಂಕಿಂಗ್‌ನಲ್ಲಿ ಅತ್ಯುತ್ತಮ ಸ್ಥಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯವು ಹೆಚ್ಚು ಅನುದಾನ, ಹೆಚ್ಚಿನ ಸ್ವಾಯತ್ತೆ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಿದೆ.
೨೦೧೭ರ ಈ ವರ್ಷ ಆರು ವಿಭಾಗಗಳಲ್ಲಿ ರ್ಯಾಂಕ್ ನೀಡಲಾಗಿದೆ. ಸಮಗ್ರ, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಮ್ಯಾನೇಜ್‌ಮೆಂಟ್, ಎಂಜಿನಿಯರಿಂಗ್ ಮತ್ತು ಫಾರ್ಮಸಿ ವಿಭಾಗಗಳಲ್ಲಿ ರ್ಯಾಂಕ್ ನೀಡಲಾಗಿದೆ. ಐಐಎಸ್‌ಸಿಯು ಸಮಗ್ರ ಮತ್ತು ವಿಶ್ವವಿದ್ಯಾಲಯ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದೆ. ಕಳೆದ ವರ್ಷ ವಿವಿ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಎನ್‌ಯು ಈ ಬಾರಿ ಎರಡನೇ ಸ್ಥಾನಕ್ಕೆ ಏರಿದೆ. ಸಮಗ್ರ ವಿಭಾಗದಲ್ಲಿ ಆರನೇ ರ್ಯಾಂಕ್ ಗಳಿಸಿದೆ.
ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಚೌಕಟ್ಟಿನ (ಎನ್‌ಐಆರ್‌ಎಫ್) ಅಡಿಯಲ್ಲಿ ರ್ಯಾಕಿಂಗ್ ನೀಡಲಾಗುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಚಿಸಿರುವ ಪ್ರಮುಖರ ಸಮಿತಿ ಮಾಡುವ ಶಿಫಾರಸುಗಳ ಮೇಲೆ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ.
ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಬಿ) ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮೊದಲ ಸ್ಥಾನ ಗಳಿಸಿದೆ. ಎಂಜಿನಿಯರಿಂಗ್ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ–ಮದ್ರಾಸ್ (ಐಐಟಿ–ಮದ್ರಾಸ್) ಈ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.