ವಿಷಯಕ್ಕೆ ಹೋಗು

ಒಗ್ಗೂಡಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಗ್ಗೂಡಿಕೆ: ಒಂದು ಪದಾರ್ಥದ ಮಾರುಕಟ್ಟೆಯಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿರುವ ಬಹುತೇಕ ಎಲ್ಲ ಸರಕಿನ ಸರಬರಾಯಿಯನ್ನು ಒಬ್ಬ ವರ್ತಕ ಅಥವಾ ಕೆಲವು ವರ್ತಕರು ಕೂಡಿ ವಶಪಡಿಸಿಕೊಳ್ಳುವ ಕ್ರಮ (ಕಾರ್ನರಿಂಗ್). ಭಾವೀ ಮಾರುಕಟ್ಟೆಯಲ್ಲಿ ಅಲ್ಪಾವಧಿಯ ಮಾರಾಟಕ್ಕಿರುವ ಸರಕನ್ನೆಲ್ಲ ಕೊಂಡು, ಆ ವಾಯಿದೆ ತುಂಬಿದ ದಿನದಂದು ಅಥವಾ ಲೆಕ್ಕ ಚುಕ್ತ ಮಾಡುವ ದಿನದಂದು ಕೃತಕವಾಗಿ ಬೆಲೆ ಏರಿದಾಗ ಲಾಭಗಳಿಸುವ ಉದ್ದೇಶದಿಂದ ನಡೆಸುವ ಅಕ್ರಮ ಹಾಗೂ ಅನೀತಿಯುತ ವ್ಯವಹಾರವೂ ಇದರಲ್ಲಿ ಸೇರುತ್ತದೆ. ಒಗ್ಗೂಡಿಕೆ ಈಚೆಗೆ ಜಾರಿಗೆ ಬಂದ ವ್ಯವಹಾರವಲ್ಲ. ಪ್ರಾಚೀನಕಾಲದಿಂದಲೂ ಇದು ಪರಿಚಿತವಾದದ್ದೆ. ಕೆಲವರಾಗಲಿ, ಒಬ್ಬನೇ ಆಗಲಿ ಈ ಬಗೆಯ ವ್ಯವಹಾರದಲ್ಲಿ ತೊಡಗುತ್ತಿದ್ದುದನ್ನು ಕಾಣಬಹುದಿತ್ತು.

ಒಗ್ಗೂಡಿಕೆಯ ವ್ಯವಹಾರದಿಂದ ಸರಕುಗಳ ಕೃತಕ ಅಭಾವವೇರ್ಪಟ್ಟು ಬೆಲೆಗಳು ಕೃತಕವಾಗಿ ಏರುವುದರ ಫಲವಾಗಿ ಕೈಗಾರಿಕೆ ವಾಣಿಜ್ಯಗಳ ಬೆಳೆವಣಿಗೆ ಕುಂಠಿತವಾಗುವುದ ರಿಂದ ಇದನ್ನು ತಪ್ಪಿಸುವ ಉದ್ದೇಶದಿಂದ ಭಾರತದಲ್ಲಿ 1956ರ ಬಂಡವಾಳಪತ್ರ ಕರಾರು ನಿಯಂತ್ರಣ ಕಾಯಿದೆಯೂ (ಸೆಕ್ಯೂರಿಟೀಸ್ ಕಾಂಟ್ಟ್ರಾಕ್ಟ್‌ ರೆಗ್ಯುಲೇಷನ್ ಆಕ್ಟ್‌) ವಾಯಿದೆ ಕರಾರು ನಿಯಂತ್ರಣ ಕಾಯಿದೆಯೂ ಜಾರಿಗೆ ಬಂದಿವೆ. ಮಾರುಕಟ್ಟೆಯ ಸದಸ್ಯರು ತಮ್ಮ ಕೊಳ್ಳಿಕೆ ಹಾಗೂ ಮಾರಾಟಗಳನ್ನು ಕುರಿತ ದೈನಿಕ ವರದಿ ನೀಡಬೇಕು. ಷೇರುಕಟ್ಟೆಯ ನಿರ್ದೇಶಕ ಮಂಡಲಿಯೂ ಷೇರುಕಟ್ಟೆಯಲ್ಲಿನ ಇಂಥ ಅನೀತಿ ಪದ್ದತಿಗಳನ್ನು ತಡೆಗಟ್ಟಲು ಎಚ್ಚರಿಕೆಯಿಂದ ನಿರೀಕ್ಷಣಕಾರ್ಯ ನಡೆಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: