ಒಣಫಲಗಳು
ಒಣಫಲಗಳು: ಅಂಡಾಶಯದ ಆವರಣ ರಸಭರಿತವಾಗಿರದೆ ಒಣಗಿ ಕಾಗದದಂತೆ ಆವರಿಸಿಕೊಂಡಿರುವ ಒಂದು ಫಲಪ್ರಭೇದ. ದೀರ್ಘಕಾಲ ಸುಲಭವಾಗಿ ಸಂಗ್ರಹಿಸಬಹುದಾದ ಈ ಫಲಗಳು ಪ್ರಾಣಿಗಳ ಮತ್ತು ಮಾನವರ ಆಹಾರದ ಪುರೈಕೆಯಲ್ಲಿ ಪ್ರಮುಖವೆನಿಸಿವೆ. ಆದ್ದರಿಂದ ಇವುಗಳಿಗೆ ವಿಶೇಷ ಆರ್ಥಿಕ ಪ್ರಾಮುಖ್ಯವಿದೆ.
ವಿಧಗಳು
[ಬದಲಾಯಿಸಿ]ಪರಾಗಾರ್ಪಣೆ ಇಲ್ಲವೆ ಗರ್ಭಾಂಕುರವಾದ ತರುವಾಯ ಅಂಡಾಶಯ ಬೆಳೆದು ಒಳಗಡೆ ಬೀಜಗಳು ರೂಪುಗೊಳ್ಳುತ್ತವಷ್ಟೆ. ಹೀಗೆ ಬೆಳೆದು ಪಕ್ವವಾದ ಅಂಡಾಶಯವೇ ಫಲ. ಕೆಲವು ಫಲಗಳಲ್ಲಿ ಅಂಡಾಶಯದ ಜೊತೆ ಹೂವಿನ ಇತರ ಭಾಗಗಳೂ ಬೆಳೆದು ಫಲದ ಭಾಗವಾಗುತ್ತವೆ. ಅಂಡಾಶಯದಿಂದ ಮಾತ್ರವೇ ರೂಪಗೊಂಡದ್ದು ನಿಜವಾದ ಫಲ. ಉಳಿದವು ಮಿಥ್ಯ ಫಲಗಳು. ಫಲಗಳಲ್ಲಿ ಒಂದೇ ಒಂದು ಬೀಜವಿರಬಹುದು. ಇಲ್ಲವೇ ಹೆಚ್ಚು ಬೀಜಗಳಿರಬಹುದು. ಫಲದಲ್ಲಿ ಬೀಜ ವಿನಾ ಉಳಿದ ಭಾಗ ಅಂಡಾಶಯದ ಗೋಡೆಯಂತಿರುವ ಆವರಣ. ಈ ಭಾಗಕ್ಕೆ ಪೆರಿಕಾರ್ಪ್ ಎಂದು ಹೆಸರು. ಕೆಲವು ಫಲಗಳಲ್ಲಿ ಪೆರಿಕಾರ್ಪ್ ಒಣಗಿ ಕಾಗದದಂತೆ ತೆಳುವಾಗಿರುತ್ತದೆ. ಇಲ್ಲವೇ ಮಂದವಾಗಿ ಗಡುಸಾಗಿರುತ್ತದೆ. ಇಂಥ ಪೆರಿಕಾರ್ಪ್ನ್ನುಳ್ಳ ಫಲಗಳೇ ಒಣಫಲಗಳು. ಪೆರಿಕಾರ್ಪ್ ರಸದಿಂದ ತುಂಬಿ ಕೊಂಡಿರುವವುಗಳಿಗೆ ರಸಭರಿತ ಫಲಗಳೆಂದು ಹೆಸರು. ಹೂವಿನಲ್ಲಿ ರೂಪುಗೊಳ್ಳುವ ಫಲದ ಸಂಖ್ಯೆಯ ಆಧಾರದ ಮೇಲೆ ಫಲವನ್ನು ಸರಳ ಫಲ, ಸಾಮೂಹಿಕ ಫಲ ಮತ್ತು ಸಂಯುಕ್ತ ಫಲಗಳೆಂದು ವಿಂಗಡಿಸಬಹುದು. ಒಂದು ಹೂವಿನಲ್ಲಿ ಒಂದೇ ಒಂದು ಫಲ ರೂಪುಗೊಂಡರೆ ಅದು ಸರಳ ಫಲ. ಉದಾಹರಣೆಗೆ ಮಾವಿನಹಣ್ಣು. ಅನೇಕ ಫಲಗಳು ರೂಪುಗೊಂಡರೆ ಅದು ಸಾಮೂಹಿಕ ಫಲ. ಉದಾಹರಣೆಗೆ ಸೀತಾಫಲ. ಈ ರೀತಿ ಸಾಮೂಹಿಕ ಫಲವಾಗಬೇಕಾದರೆ ಹೂವಿನ ಹಣ್ಣು ಭಾಗ ಅನೇಕ ಕಾರ್ಪೆಲ್ಲುಗಳಿಂದ ಕೂಡಿ ಅವು ಬಿಡಿ ಬಿಡಿಯಾಗಿರುತ್ತವೆ. ಇಡೀ ಹೂಗೊಂಚಲೇ ಒಂದು ಹಣ್ಣಾಗಿ ರೂಪುಗೊಂಡರೆ ಅದು ಸಂಯುಕ್ತಫಲ. ಉದಾಹರಣೆಗೆ ಹಲಸಿನ ಹಣ್ಣು, ಅನಾನಸ್.
ಒಣಫಲಗಳಲ್ಲಿ ಮೇಲೆ ತಿಳಿಸಿದ ಮೂರು ಬಗೆಯ ಫಲಗಳೂ ಉಂಟು. ಕೆಲವು ಒಣಫಲಗಳಲ್ಲಿ ಒಂದೇ ಒಂದು ಕಾಳಿರುತ್ತದೆ. ಇಂಥ ಫಲಗಳಲ್ಲಿ ಪೆರಿಕಾರ್ಪ್ ಬಿರಿಯುವುದಿಲ್ಲ. ಕಾಳನ್ನು ಸಿಪ್ಪೆ ಆವರಿಸಿರುತ್ತದೆ. ಇವಕ್ಕೆ ಒಡೆಯದ ಒಣಫಲಗಳೆಂದು ಹೆಸರು. ಹಲವು ಕಾಳುಗಳಿರುವ ಫಲಗಳಲ್ಲಿ, ಪೆರಿಕಾರ್ಪ್ ಒಡೆದು ಕಾಳುಹೊರಬರುತ್ತದೆ. ಇವು ಒಡೆಯುವ ಒಣಫಲಗಳು.
ಒಂದೇ ಬೀಜವಿರುವ ಒಣಫಲಗಳಲ್ಲಿ ಐದು ವಿಧವುಂಟು: ಎಖೀನ್, ಕ್ಯಾರಿಯಾಪ್ಸಿಸ್, ಸಿಪ್ಸೆಲ, ಸಮಾರ ಮತ್ತು ನಟ್. ಎಖೀನ್ ಹಣ್ಣು ಉಚ್ಚಸ್ಥಾನದ ಒಂದೇ ಕಾರ್ಪೆಲ್ಲಿನ ಅಂಡಾಶಯದಿಂದ ರೂಪಿತವಾಗಿದೆ. ಪೆರಿಕಾರ್ಪ್ ಮತ್ತು ಬೀಜದ ಹೊರ ಸಿಪ್ಪೆ ಪ್ರತ್ಯೇಕವಾಗಿರುತ್ತವೆ. ಸಾಮಾನ್ಯವಾಗಿ ಸಾಮೂಹಿಕ ಫಲಗಳಲ್ಲಿ ಈ ರೀತಿಯ ಹಣ್ಣುಗಳಿವೆ. ರೆನನ್ಕುಲಸ್, ಕ್ಲಿಮಾಟಿಸ್ ಗಿಡಗಳಲ್ಲಿ ಇವನ್ನು ನೋಡಬಹುದು. ಜೋಳ, ಗೋದಿ, ಅಕ್ಕಿ ಮತ್ತಿತ್ತರ ಆಹಾರ ಧಾನ್ಯಗಳ ಫಲಗಳಿಗೆ ಕ್ಯಾರಿಯಾಪ್ಸಿಸ್ ಎಂದು ಹೆಸರು. ಇದು ಎಖೀನ್ ಫಲದ ರಚನೆಯನ್ನೇ ಹೋಲಿದರೂ ಪೆರಿಕಾರ್ಪ್ ಬೀಜದ ಹೊರಸಿಪ್ಪೆಗೆ ಒಂದನ್ನೊಂದು ಪ್ರತ್ಯೇಕಿಸಲಾರದಷ್ಟು ಬಲವಾಗಿ ಅಂಟಿಕೊಂಡಿರುತ್ತದೆ. ಸೂರ್ಯಕಾಂತಿ, ಹುಚ್ಚೆಳ್ಳು, ಕುಸುಬೆ ಜಾತಿಯ ಗಿಡದ ಫಲಗಳಿಗೆ ಸಿಪ್ಸೆಲ ಎಂದು ಹೆಸರು. ಇದು ಒಂದೇ ಕೋಣೆಯುಳ್ಳ ಎರಡು ಕಾರ್ಪೆಲ್ಲುಗಳ ಸಂಯುಕ್ತ ಅಂಡಾಶಯದಿಂದ ರೂಪಗೊಂಡ ಏಕಬೀಜದ ಫಲ. ಪೆರಿಕಾರ್ಪ್ ಮತ್ತು ಬೀಜದ ಹೊರೆ ಸಿಪ್ಪೆ ಅಂಟಿಕೊಂಡಂತಿದ್ದರೂ ಇವನ್ನು ಪ್ರತ್ಯೇಕಿಸಬಹುದು. ಈ ಫಲಗಳಲ್ಲಿ ಕೇಲಿಕ್ಷ್ ವಿವಿಧವಾಗಿ ರೂಪಭೇದ ಹೊಂದಿ ಅವುಗಳ ಪ್ರಸಾರಕ್ಕೆ ಸಹಾಯಕವಾಗಿದೆ. ಮತ್ತಿಮರ, ಮಾಧವೀಲತೆ, ಟಿರೋಲೋಬಿಯಂ ಮೊದಲಾದ ಫಲಗಳಲ್ಲಿ ಒಂದೇ ಬೀಜವಿದ್ದರೂ ಅವು ಒಂದು ಕಾರ್ಪೆಲ್ಲಿನ ಅಥವಾ ಸಂಯುಕ್ತ ಕಾರ್ಪೆಲ್ಲಿನ, ಉಚ್ಚಸ್ಥಾನದ ಇಲ್ಲವೇ ನೀಚಸ್ಥಾನದ ಅಂಡಾಶಯದಿಂದ ರೂಪುಗೊಂಡಿವೆ, ಅದಕ್ಕೆ ಸಮಾರ ಎಂದು ಹೆಸರು. ಫಲದ ಪೆರಿಕಾರ್ಪ್ ಅಗಲವಾಗಿ ರೆಕ್ಕೆಯಂತಿದ್ದು ಬೀಜ ಪ್ರಸಾರಕ್ಕೆ ಅನುಕೂಲವಾಗಿದೆ.
ಚೆಸ್ಟ್‌ನಟ್, ಅಕ್ಷೋಟ (ವಾಲ್ನಟ್), ಗೇರು ಈ ಸಸ್ಯಗಳ ಫಲಗಳಿಗೆ ನಟ್ ಎಂದು ಹೆಸರು. ಈ ಫಲಗಳಲ್ಲಿ ಪೆರಿಕಾರ್ಪ್ ಗಡುಸಾಗಿ ಬೀಜವನ್ನಾವರಿಸಿ. ಕೊಂಡಿದೆ. ಕೆಲವು ಫಲಗಳಲ್ಲಿ ಪುಷ್ಪಪಾತ್ರೆ (ಕೇಲಿಕ್ಸ್) ಉಳಿದುಕೊಂಡು ಗಟ್ಟಿಯಾಗಿ ಬೀಜವನ್ನು ಮುಚ್ಚಿಕೊಂಡಿರುತ್ತದೆ. ಅನೇಕ ಬೀಜಗಳನ್ನುಳ್ಳ ಒಡೆಯುವ ಒಣಫಲಗಳನ್ನು ವಿವಿಧ ರೀತಿಯಾಗಿ ವಿಂಗಡಿಸಿದ್ದಾರೆ. ಹಣ್ಣು ರೂಪಿತವಾಗುವ ಅಂಡಾಶಯದ ರಚನೆ, ಒಡೆಯುವ ರೀತಿಗಳಿಗೆ ಅನುಗುಣವಾಗಿ ಅವುಗಳ ವರ್ಗೀಕರಣವನ್ನು ಮಾಡಲಾಗಿದೆ.
ಎಕ್ಕದ ಗಿಡದ ಫಲವನ್ನು ಫಾಲಿಕಲ್ ಎನ್ನುತ್ತಾರೆ. ಉಚ್ಚಸ್ಥಾನದ ಒಂದು ಕಾರ್ಪೆಲ್ಲಿನಿಂದ ರೂಪುಗೊಂಡ ಇದರ ಅಂಡಾಶಯದ ಒಳಗಡೆ ಅನೇಕ ಬೀಜಗಳಿರುತ್ತವೆ. ಈ ಫಲ ಕಾರ್ಪೆಲ್ಲಿನ ಅಂಚುಗಳು ಸೇರಿಕೊಂಡಿರುವ ಭಾಗದಲ್ಲಿ ಒಡೆಯುತ್ತದೆ. ಬೀಜಗಳು ಒಂದೊಂದಾಗಿ ಗಾಳಿಯಲ್ಲಿ ತೂರಿ ಹೋಗುತ್ತವೆ. ಸಂಪಿಗೆ ಮರದ ಫಲ ಸಾಮೂಹಿಕ ಫಾಲಿಕಲ್.
ಅವರೆ, ಉದ್ದು, ಹುರುಳಿ ಈ ಜಾತಿಯ ಗಿಡದ ಫಲಗಳು ರಚನೆಯಲ್ಲಿ ಫಾಲಿಕಲ್ಗಳಂತಿದ್ದರೂ ಅವುಗಳ ತಳ ಮತ್ತು ಮೇಲಿನ ಸೇರುವಿಕೆಯೆರಡರಲ್ಲೂ ಒಡೆದು ಬೀಜಗಳು ಸಿಡಿಯುತ್ತವೆ. ಇಂಥ ಫಲಗಳಿಗೆ ಲೆಗ್ಯೂಮ್ ಎಂದು ಹೆಸರು.
ಸಾಸುವೆ, ಕ್ಲಿಯೋಮ್, ಗೈನಾಂಡ್ರಾಪ್ಸಿಸ್ ಈ ಸಸ್ಯಗಳ ಫಲಕ್ಕೆ ಸಿಲಿಕ್ವ ಎಂದು ಹೆಸರು. ಈ ಫಲಗಳು ಉಚ್ಚಸ್ಥಾನದ ಎರಡು ಸಂಯುಕ್ತ ಕಾರ್ಪೆಲ್ಲುಗಳ ಅಂಡಾಶಯದಿಂದ ರಚಿತವಾಗಿರುತ್ತವೆ. ಪ್ರಾರಂಭದಲ್ಲಿ ಒಂದು ಕೋಣೆ ಇದ್ದು ಬೀಜಮೂಲಗಳು ಕಾರ್ಪೆಲ್ಲುಗಳು ಸಂಧಿಸದ ಎಡೆಯಲ್ಲಿರುತ್ತವೆ. ಅನಂತರ ಮಧ್ಯೆ ಒಂದು ಭಿತ್ತಿ ಬೆಳೆದು ಎರಡು ಕೋಣೆಗಳಾಗುತ್ತವೆ. ಈ ಭಿತ್ತಿಗೆ ರೆಪ್ಲೆಂ ಎಂದು ಹೆಸರು. ಕಾರ್ಪೆಲ್ಲುಗಳು ಅವು ಸೇರುವೆಡೆಯಲ್ಲಿ ತಳಭಾಗದಿಂದ ಒಡೆಯುತ್ತವೆ. ಬೀಜಗಳು ರೆಪ್ಲಂಗೆ ಅಂಟಿಕೊಂಡಿರುತ್ತವೆ. ಸಿಲಿಕ್ವ ಪುಟ್ಟದಾಗಿ ಚಪ್ಪಟೆಯಾಗಿದ್ದರೆ ಅದಕ್ಕೆ ಸಿಲಿಕುಲ ಎಂದು ಹೆಸರು.
ಬೆಂಡೆ, ಹತ್ತಿ, ಏಲಕ್ಕಿ ಈ ತರದ ಫಲಗಳಿಗೆ ಕ್ಯಾಪ್ಸ್ಯುಲ್ ಎಂದು ಹೆಸರು. ಈ ಫಲ ಉಚ್ಚ ಅಥವಾ ಕೆಳಗಿನ ಸ್ಥಾನದ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಂಯುಕ್ತ ಕಾರ್ಪೆಲ್ಲುಗಳ ಅಂಡಾಶಯದಿಂದ ರೂಪುಗೊಂಡು ಅನೇಕ ಬೀಜಗಳ್ಳುಳ್ಳದ್ದಾಗಿರುತ್ತದೆ. ಫಲ ಒಡೆದ ಬೀಜಗಳು ಹೊರಬರುತ್ತವೆ. ಒಡೆಯುವ ರೀತಿ ಬೇರೆ ಬೇರೆ. ಗಸಗಸೆ ಫಲದ ಅಗ್ರಭಾಗದಲ್ಲಿ ರಂಧ್ರಗಳುಂಟಾಗಿ ಆ ಮೂಲಕ ಬೀಜಗಳು ಹೊರಬರುತ್ತವೆ. ಹತ್ತಿ ಮತ್ತು ಬೆಂಡೆ ಫಲಗಳಲ್ಲಿ ಕಾರ್ಪೆಲ್ಲಿನ ಮಧ್ಯಭಾಗ ಒಡೆದು ಸೀಳುತ್ತದೆ. ಏಲಕ್ಕಿಯಲ್ಲಿ ಕೋಣೆಗಳನ್ನು ವಿಭಾಗಿಸುವ ಭಿತ್ತಿ ಸೀಳುತ್ತದೆ. ಸಂಯುಕ್ತ ಕಾರ್ಪೆಲ್ಲುಗಳಿಂದ ರೂಪುಗೊಂಡ ಕೆಲವು ಸರಳ ಫಲಗಳಲ್ಲಿ ಕಾರ್ಪೆಲ್ಲು ಒಂದೊಂದು ಬೀಜವನ್ನೊಳಗೊಂಡು ಪ್ರತ್ಯೇಕವಾಗುತ್ತದೆ. ಹೀಗೆ ಪ್ರತ್ಯೇಕವಾದ ಕಾರ್ಪೆಲ್ಲು ಎಖೀನ್ ಫಲವನ್ನು ಹೋಲುತ್ತದೆ. ಇಂಥ ಒಣ ಫಲಗಳಿಗೆ ಸ್ಕೀಜೊ಼ಕಾರ್ಪಿಕ್ ಫಲಗಳೆಂದು ಹೆಸರು. ವಿವಿಧ ರೀತಿಯ ಸ್ಕೀಜೊ಼ಕಾರ್ಪಿಕ್ ಫಲಗಳು ಈ ರೀತಿ ಇವೆ: ಕರಿಜಾಲಿ, ಸೀಗೆ ಈ ಸಸ್ಯಗಳ ಫಲಗಳಲ್ಲಿ ಬೀಜದ ಮಧ್ಯೆ ತಗ್ಗಿರುತ್ತದೆ. ಈ ತಗ್ಗಿರುವೆಡೆ ಫಲ ಒಡೆದು ಒಂದೊಂದು ಬೀಜವಿರುವ ಪ್ರತ್ಯೇಕ ಭಾಗಗಳಾಗುತ್ತವೆ. ಇಂಥ ಫಲವೇ ಲೊಮೆಂಟಮ್. ಇದು ಲೆಗ್ಯೂಮಿನ ರೂಪಭೇದವೆನ್ನಲೂಬಹುದು.
ಪುಳ್ಳಂಪಚ್ಚೆ, ಕೊತ್ತಂಬರಿ ಈ ಜಾತಿಯ ಫಲಗಳು ಸಂಯುಕ್ತ ಕಾರ್ಪೆಲ್ಲುಗಳಿಂದ ರೂಪುಗೊಂಡು, ಒಂದೊಂದು ಕಾರ್ಪೆಲ್ಲಿನ ಕೋಣೆಯಲ್ಲೂ ಒಂದೊಂದು ಬೀಜವನ್ನು ತಳೆದಿರುತ್ತವೆ. ಇದು ಒಡೆಯುವಾಗ ಪ್ರತಿಯೊಂದು ಕಾರ್ಪೆಲ್ಲೂ ಹಾಗೆಯೇ ಪ್ರತ್ಯೇಕವಾಗುತ್ತದೆ. ಇಂಥ ಪುರ್ಣಫಲಕ್ಕೆ ಕ್ರಿಮೋಕಾರ್ಪ್ ಎಂದೂ ಪ್ರತ್ಯೇಕವಾದ ಬಿಡಿ ಭಾಗಕ್ಕೆ ಮೆರಿಕಾರ್ಪ್ ಎಂದೂ ಹೆಸರು.
ಮೇಲೆ ನಮೂದಿಸಿರುವುವಲ್ಲದೆ ಕೆಲವು ರೀತಿಯ ರಸಭರಿತ ಒಣಫಲಗಳೂ ಉಂಟು-ಅವು ಸಕ್ಕರೆ ಬಾದಾಮಿ, ಬಾದಾಮಿ, ಅಂಜೂರ, ಉಪ್ಪುನೇರಳೆ, ಒಣದ್ರಾಕ್ಷಿ ಇತ್ಯಾದಿ. ಇವು ಮೇಲೆ ವರ್ಗೀಕರಿಸಿದ ಫಲಗಳಲ್ಲಿ ಸೇರುವುದಿಲ್ಲ. ಏಕೆಂದರೆ ಇವು ತಾವಾಗಿಯೆ ಒಣಗುವ ಫಲದ ಜಾತಿಯವಲ್ಲ. ಜನ ತಮ್ಮ ಅನುಕೂಲಕ್ಕಾಗಿ ಇವನ್ನು ಒಣಗಿಸಿ ಶೇಖರಿಸುತ್ತಾರೆ. ಆದರೂ ಸಾಮಾನ್ಯವಾಗಿ ಇವನ್ನೂ ಒಣಫಲಗಳೆಂದೇ ಕರೆಯುತ್ತಾರೆ.