ವಿಷಯಕ್ಕೆ ಹೋಗು

ಓಫಿಯೋಗ್ಲಾಸಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓಫಿಯೋಗ್ಲಾಸಮ್: ಓಫಿಯೋಗ್ಲಾಸೇಲಿಸ್ ಗಣದ ಓಫಿಯೋಗ್ಲಾಸೇಸಿ ಕುಟುಂಬಕ್ಕೆ ಸೇರಿದ ಒಂದು ಸಣ್ಣ ಜರಿಸಸ್ಯ. ಇದನ್ನು ಹಾವಿನ ನಾಲಿಗೆ ಜರಿಸಸ್ಯ ಎಂದು ಕರೆಯುವುದು ವಾಡಿಕೆ. ಸು. ೪೦ ಪ್ರಭೇದಗಳಿರುವ ಈ ಸಸ್ಯ ಹೆಚ್ಚಾಗಿ ಉಷ್ಣವಲಯದ ಕಾಡುಗಳಲ್ಲಿ ಬೆಳೆಯುತ್ತದೆ. ಆದರೆ ಸಮಶೀತೋಷ್ಣವಲಯದಲ್ಲಿ ಬೆಳೆಯುವ ಪ್ರಭೇದಗಳು ಇಲ್ಲದಿಲ್ಲ. ಕೆಲವನ್ನು ಬಿಟ್ಟು ಮಿಕ್ಕ ಎಲ್ಲ ಪ್ರಭೇದÀಗಳು ಸಸ್ಯಸಂಬಂಧವಾದ ಗೊಬ್ಬರ ಹೆಚ್ಚಾಗಿರುವ ನೆಲದಲ್ಲಿ ಬೆಳೆಯುತ್ತವೆ. ಓಪೆಂಡುಲಮ್ ಪ್ರಭೇದ ಅಪ್ಪುಸಸ್ಯವಾಗಿ ಮರಗಳ ಕಾಂಡ ಮತ್ತು ಕೊಂಬೆಗಳ ಮೇಲೆ ಬೆಳೆಯುತ್ತದೆ. ಓ ಪಾಮೇಟಮ್ ಎಂಬ ಪ್ರಭೇದ ಬೇರು ಬಿಟ್ಟಿರುವ ಮರದ ಕಾಂಡಗಳ ಮೇಲೆ ಬೆಳೆಯುತ್ತದೆ. ಓಫಿಯೋಗ್ಲಾಸಮ್ ಸಸ್ಯದ ಜೀವನದಲ್ಲಿ ಎಲ್ಲ ಜರಿಗಿಡಗಳಲ್ಲಿರುವಂತೆ ಸ್ಪೋರೋಫೈಟ್ ಮತ್ತು ಗ್ಯಾಮಿಟೊಫೈಟ್ ಎಂಬ ಎರಡು ಅವಸ್ಥೆಗಳುಂಟು. ನಮಗೆ ಕಾಣಬರುವ ಅವಸ್ಥೆಗೆ ಸ್ಪೋರೋಫೈಟ್ ಎಂದು ಹೆಸರು. ಇದರಲ್ಲಿ ಕವಲೊಡೆಯದ, ಚಿಕ್ಕದಾಗಿರುವ, ನೆಲದೊಳಗೆ ಬೆಳೆಯುವ ಪ್ರಕಂದವಿದೆ (ರೈಜೋ಼ಮ್). ಇದು ಅಪರೂಪವಾಗಿ ಕವಲೊಡೆದಿರುವುದುಂಟು. ಇದರ ಮೇಲೆ ಬೇರುರೋಮಗಳಿಲ್ಲದ ಹಲವು ಬೇರುಗಳಿವೆ.

ಪ್ರಕಂದದಿಂದ ಸಾಮಾನ್ಯವಾಗಿ ಒಂದು ಬೆಳೆವಣಿಗೆಯ ಋತುವಿನಲ್ಲಿ ಒಂದೇ ಒಂದು ಎಲೆ ಮೂಡುತ್ತವೆ. ಪುರ್ತಿ ಬೆಳೆದ ಎಲೆಯಲ್ಲಿ ಅಲಗು ಮತ್ತು ತೊಟ್ಟುಗಳಿವೆ. ಎಲೆಯ ಅಲುಗು ಅಗಲವಾಗಿ, ಸರಳವಾಗಿ (ಓ.ಪೆಂಡುಲಮ್ ಹೊರತು) ದೀರ್ಘವೃತ್ತಾಕಾರವಾಗಿದೆ. ಎಲೆಯ ನಾಳವಿನ್ಯಾಸ ದ್ವಿದಳಧಾನ್ಯ ಸಸ್ಯಗಳದ್ದನ್ನು ಹೋಲುತ್ತದೆ.

ಎಲೆಯ ಅಲುಗು ಮತ್ತು ತೊಟ್ಟು ಸೇರುವ ಜಾಗದಲ್ಲಿ ಒಂದು ಸಣ್ಣದಾದ ಫಲವಂತಿಕೆ ಗೊಂಚಲು ಇದೆ (ಫರ್ಟೈಲ್ ಸ್ಪೈಕ್). ಇದರ ಎರಡೂ ಪಾಶರ್ವ್‌ದಲ್ಲಿ ಹಲವು ಬೀಜಕೋಶದಿಂದ ಪ್ರಸಾರವಾದ ಬೀಜಕಣಗಳು ಸೂಕ್ತ ಪರಿಸರದಲ್ಲಿ ಮೊಳೆತು ಗ್ಯಾಮಿಟೊಟುಗಳಾಗುತ್ತವೆ. ಗ್ಯಾಮಿಟೋಫೈಟುಗಳಿಗೆ ಬಣ್ಣವಿಲ್ಲ. ನೆಲದೊಳಗೆ ಪುತಿಜನ್ಯ ಸಸ್ಯಗಳಂತೆ ಬೆಳೆಯುವ ಇವುಗಳಲ್ಲಿ ಹೆಣ್ಣು ಮತ್ತು ಗಂಡು ಜನನೇಂದ್ರಿಯಗಳಿರುತ್ತವೆ. ಇವುಗಳಿಂದ ಬಂದ ಗಂಡು ಮತ್ತು ಹೆಣ್ಣು ಜೀವಾಣುಗಳು ಪರಸ್ಪರ ಕೂಡಿ ಮುಂದೆ ಸ್ಪೋರೋಫೈಟುಗಳನ್ನು ಉತ್ಪತ್ತಿಮಾಡುತ್ತವೆ. ಹೀಗೆ ಜೀವಚಕ್ರ ಪುರ್ತಿಯಾಗುತ್ತದೆ.

ಭಾರತದಲ್ಲಿ ಓಫಿಯೋಗ್ಲಾಸಮ್ಮಿನ ಏಳು ಪ್ರಭೇದಗಳಿವೆ. ಅವುಗಳಲ್ಲಿ ಓ.ವಲ್ಗೇಟಮ್, ಓ.ಪೆಂಡುಲಮ್ ಮತ್ತು ಓ.ರೆಟಿಕ್ಯುಲೇಟಮ್ ಮುಖ್ಯವಾದುವು.

ಓ. ವಲ್ಗೇಟಮ್: ಹಿಮಾಲಯ, ಬಿಹಾರ, ಅಸ್ಸಾಂ ಮತ್ತು ಅಣ್ಣಾಮಲೈ ಬೆಟ್ಟಗಳಲ್ಲಿ ೨,೭೦೦ ಮೀಟರಗಳರವರೆಗೆ ಹರಡಿದೆ. ಈ ಗಿಡ ಪುತಿನಾಶಕ, ಶುದ್ಧಿಕಾರಕ, ರಕ್ತಬಂಧಕ (ಸ್ಟಿಪ್ಟಿಕ್). ಅಲ್ಲದೆ ಗಾಯ ವಾಸಿಮಾಡುವ ಗುಣಗಳನ್ನೂ ಹೊಂದಿದೆ. ಈ ಸಸ್ಯದಿಂದ ಒಂದು ಬಗೆಯ ಅಂಟಾದ ಕಷಾಯವನ್ನು ತಯಾರಿಸಬಹುದು. ಅದನ್ನು ಗಂಟಲ ಊತ, ಎದೆಸೆಳವುಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಕಷಾಯವನ್ನು ಬಿಸಿ ಮಾಡಿ ದಕ್ಷಿಣ ಆಫ್ರಿಕದ ಸೂಟೊ ಜನಾಂಗದವರು ಹುಣ್ಣುಗಳಿಗೆ ಹಚ್ಚುತ್ತಾರೆ. ಓ. ಪೆಂಡುಲಮ್ ಎಂಬುದು ಮುಖ್ಯವಾಗಿ ಅಸ್ಸಾಮಿನ ಕಾಡುಗಳಲ್ಲಿ ಬೆಳೆಯುತ್ತದೆ. ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಮಾಡಿ ತಯಾರಿಸಿದ ಎಲೆಯ ಮುಲಾಮು ಕೂದಲು ಬೆಳೆಯಲು ಸಹಕಾರಿ.

ಓ.ರೆಟಿಕ್ಯುಲೇಟಮ್ ಪ್ರಭೇದ ಮಸ್ಸೂರಿ, ಬಿಹಾರ, ಬಂಗಾಳ, ಅಸ್ಸಾಂ ಮತ್ತು ದಕ್ಷಿಣ ಭಾರತದಲ್ಲಿ ಬೆಳೆಯುತ್ತದೆ. ಇಂಡೋನೇಷಿಯದಲ್ಲಿ ಈ ಪ್ರಭೇದವನ್ನು ತರಕಾರಿಯಾಗಿ ಉಪಯೋಗಿಸುವುದುಂಟು. ಮೈಸೂರು ರಾಜ್ಯದಲ್ಲಿ, ರಂಗನತಿಟ್ಟು ಪಕ್ಷಿಧಾಮ ಮತ್ತು ಮಲೆನಾಡುಗಳಲ್ಲಿ ಓಫಿಯೋಗ್ಲಾಸಮ್ಮಿನ ಕೆಲವು ಪ್ರಭೇದಗಳು ಕಾಣಬರುತ್ತವೆ. (ಎಸ್.ಆರ್.ಜಿ.)

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖನ

[ಬದಲಾಯಿಸಿ]

[] [] []

ಉಲ್ಲೇಖಗಳು

[ಬದಲಾಯಿಸಿ]
  1. http://www.biologydiscussion.com/botany/pteridophyta/ophioglossum-structure-and-reproduction/45964
  2. https://plants.usda.gov/java/ClassificationServlet?source=display&classid=OPHIO
  3. "ಆರ್ಕೈವ್ ನಕಲು". Archived from the original on 2020-08-08. Retrieved 2018-08-27.