ಕಂಬದಹಳ್ಳಿ
ಕಂಬದಹಳ್ಳಿ
ಕಂಬದಹಳ್ಳಿ | |
---|---|
village |
ಕಂಬದಹಳ್ಳಿಯು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಜೈನರ ಪ್ರಮುಖ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಾಚೀನ ಜಿನಾಲಯವಿದ್ದು, ಜೈನ ಮಠವೂ ಸಹ ಇದೆ. ಈಗಿನ ಪೀಠಾಧಿಪತಿಗಳು ಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು. ಕಂಬದಹಳ್ಳಿಯು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದೆ.
ಕಂಬದಹಳ್ಳಿಯನ್ನು ರಾಷ್ಟ್ರೀಯ ಹೆದ್ದಾರಿ ೪೮ (ಬೆಂಗಳೂರು-ಮಂಗಳೂರು) ರಲ್ಲಿ ಕದಬಹಳ್ಳಿಯ ಮೂಲಕ ತಲುಪಬಹುದು. ಜೈನರ ಪ್ರಮುಖ ಯಾತ್ರಾಸ್ಥಳ ಶ್ರವಣಬೆಳಗೊಳದಿಂದ ಕಂಬದಹಳ್ಳಿಯು ೧೮ ಕಿಮೀ ದೂರದಲ್ಲಿದೆ. ಕಂಬದಹಳ್ಳಿ : ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಒಂದು ಪುಣ್ಯಕ್ಷೇತ್ರ. ಇಲ್ಲಿನ ಪಂಚಕೂಟಬಸ್ತಿಯ ಉತ್ತರದಲ್ಲಿರುವ 15.24 ಮೀ ಎತ್ತರದ ಕರಿಕಲ್ಲಿನ ಬ್ರಹ್ಮದೇವರ ಕಂಬವೇ ಊರಿನ ಹೆಸರಿಗೆ ಕಾರಣ. ಈ ಕಂಬದ ತಳಭಾಗದ ಎಂಟು ಮುಖಗಳ ಮೇಲೂ ಅಷ್ಟದಿಕ್ಪಾಲಕರ ಶಿಲ್ಪಗಳಿದ್ದು ಈ ಕಂಬದ ಮೇಲೆ ಪುರ್ವಾಭಿಮುಖವಾದ ಬ್ರಹ್ಮದೇವರ ಶಿಲ್ಪವಿದೆ. ಸಮೀಪದಲ್ಲಿ ದ್ರಾವಿಡ ಶೈಲಿಯಲ್ಲಿ ಕಲ್ಲಿನಿಂದ ಕಟ್ಟಲಾದ ಏಳು ದೇವಾಲಯಗಳಿವೆ. ಪ್ರ.ಶ. 900ರ ಸುಮಾರಿನಲ್ಲಿ ಕಟ್ಟಲ್ಪಟ್ಟ ಪಂಚಕೂಟಬಸ್ತಿಯಲ್ಲಿ ನಡುವೆ ಇರುವುದೇ ತ್ರಿಕೂಟಾಚಲ ಆದಿನಾಥಬಸ್ತಿ. ಇದರಲ್ಲಿ ಪಲ್ಲವಶಿಲ್ಪದ ಪ್ರಭಾವ ಕಂಡುಬರುತ್ತದೆ. ದೇವಾಲಯದ ಕೆಳಭಾಗ ಅಷ್ಟಕೋಣಾಕಾರವಾಗಿದ್ದು ಗೋಡೆಯ ಮೇಲುಗಡೆ ಯಕ್ಷ, ಜಿನರ ಲತಾಪಟ್ಟಿಕೆಗಳಿವೆ. ಗೂಡುಗಳಿಗೆ ಪುಷ್ಪ ಅಥವಾ ಮಕರತೋರಣಗಳಿವೆ. ಇವುಗಳಲ್ಲಿ ಗಂಧರ್ವ, ಯಾಳಿ, ಮುಕ್ಕೊಡೆ, ಮಕರಗಳ ಅಲಂಕರಣಗಳಿವೆ. ಮೇಲ್ಚಾವಣಿಗಳು ಬಾಗಿದ್ದು ಲಾಳದ ಆಕಾರದ ಕಮಾನುಗಳಿಂದ ಅಲಂಕೃತವಾಗಿವೆ. ಕೈಪಿಡಿ ಗೋಡೆಯ ಮೇಲೆ ಸಿಂಹಮುಖದ ಮೀನು, ನೀರ್ಗುದುರೆಗಳಿವೆ. ಬಲಭಾಗದ ಗರ್ಭಗುಡಿಯಲ್ಲಿ ನೇಮಿನಾಥ ಮತ್ತು ಎಡಭಾಗದ ಗುಡಿಯಲ್ಲಿ ಶಾಂತಿನಾಥ ವಿಗ್ರಹಗಳು ಕುಳಿತಿರುವಂತೆ ನಿರ್ಮಿತವಾಗಿವೆ. ಈ ದೇವಾಲಯದ ಮೂರು ಶಿಖರಗಳು ಕಣಶಿಲೆಯಿಂದ ನಿರ್ಮಿತವಾಗಿವೆ. ಈ ಮೂರು ಶಿಖರಗಳೂ ಮೂರು ವಿಧವಾಗಿವೆ. ಪುರ್ವದ ಶಿಖರ ದುಂಡಾಗಿಯೂ ಉತ್ತರದ ಶಿಖರ ಚತುರಸ್ರವಾಗಿಯೂ ಪಶ್ಚಿಮದ ಶಿಖರ ಅಷ್ಟಾಸ್ರವಾಗಿಯೂ ಇವೆ. ಇವುಗಳ ಮೇಲೆ ಲತಾಪಟ್ಟಿಕೆಯೂ ಪೀಠದ ಮೇಲಿರುವ ಲಾಳದ ಆಕಾರದ ಕಮಾನಗಳೂ ಇವೆ. ಇವು ತಾಜ್ಮಹಲಿನ ಬುದ್ದುದಾಕಾರದ ಶಿಖರಗಳನ್ನು ನೆನಪಿಗೆ ತರುತ್ತವೆ. ಗ್ರೀವಾಕಾರದ ಅಂತಸ್ತುಗಳುಳ್ಳ ಇಲ್ಲಿನ ಗೋಪುರಗಳು ಸುಂದರವಾಗಿಯೂ ಎತ್ತರವಾಗಿಯೂ ಇದ್ದು ಸ್ತಂಭಿಕೆಗಳಿಂದ ಅಲಂಕೃತವಾಗಿವೆ. ಶಿಖರದ ಮೇಲೆ ಮಗುಚಿಹಾಕಿದ ಪದ್ಮ ಆಕರ್ಷಣೀಯವಾಗಿದೆ. ಆದರೆ ಈ ಶಿಖರಕ್ಕೆ ಕಳಶಗಳಿಲ್ಲ. ಪುರ್ವದಿಕ್ಕಿನ ಗೋಪುರದಲ್ಲಿರುವ ಅಂಡಾಕಾರದ ಗುಮ್ಮಟ ಮಹಾಬಲಿಪುರದ ಧರ್ಮರಾಜ ರಥ ಅಥವಾ ಎಲ್ಲೋರದ ಕೈಲಾಸ ದೇವಾಲಯದ ಗುಮ್ಮಟಗಳ ನೆನಪನ್ನುಂಟುಮಾಡುತ್ತದೆ. ಬಸ್ತಿಯಲ್ಲಿರುವ ವಾಹನಸ್ಥ ದಿಕ್ಪಾಲಕರಾದಿಯಾದ ಹಲವು ಪ್ರತಿಮೆಗಳು ಗಮನಾರ್ಹವಾಗಿವೆ.
ಈ ತ್ರಿಕೂಟಾಚಲದ ನವರಂಗದಲ್ಲಿ ಹೆಚ್ಚು ಕೆತ್ತನೆ ಕೆಲಸವಿಲ್ಲ. ಸ್ತಂಭಗಳು ಸಾಮಾನ್ಯವಾಗಿವೆ. ಮೇಲ್ಚಾವಣಿಯ ಕಲ್ಲುಗಳ ಮಧ್ಯದಿಂದ ಹರಡಿಕೊಂಡಿವೆ. ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರೂ ಬಲಗೈಯಲ್ಲಿ ಶಂಖವನ್ನೂ ಎಡಗೈಯಲ್ಲಿ ದಂಡವನ್ನೂ ಹಿಡಿದು ಐದು ಹೆಡೆಯ ಹಾವಿನ ಕೆಳಗಿರುವ ಧರಣೇಂದ್ರ, ಯಕ್ಷ, ಚಾಮರಧಾರಿಣಿಯರೂ ಇರುವುದು ಆಕರ್ಷಣೀಯ ದೃಶ್ಯವಾಗಿದೆ. ಬಳಿಯಲ್ಲಿ ಎರಡು ಮಂದಿರಗಳಿದ್ದು ಒಂದರಲ್ಲಿ ನಿಂತಿರುವ ಶಾಂತಿನಾಥನ ಮೂರ್ತಿಯಿದೆ. ಇಲ್ಲಿನ ಒಂದು ಶಾಂತಿನಾಥ ಬಸ್ತಿ 20 ಚದರಡಿಯ ವಿಸ್ತೀರ್ಣದ್ದಾಗಿದ್ದು, ಇದರ ಗರ್ಭಗೃಹದ ಮೇಲ್ಚಾವಣಿಯಲ್ಲಿ ಪದ್ಮಗಳೂ ನಾಲ್ಕು ಅಷ್ಟಕೋಣ ಸ್ತಂಭಗಳೂ ಇವೆ. ಅಷ್ಟಕೋಣದ ಪೀಠದಲ್ಲಿ ದಿಕ್ಪಾಲಕರಿರುವುದು ಕಾಣಿಸುತ್ತದೆ. ಪೀಠದ ಮೇಲೆ ಸು. 3.05 ಮೀ ಎತ್ತರದ ಶಾಂತಿನಾಥನ ಮೂರ್ತಿ ಕಂಗೊಳಿಸುತ್ತದೆ. ಇದಕ್ಕೆ ಆಮೇಲೆ ಸೇರಿಸಿದ ಒಂಬತ್ತಂಕಣಗಳ ನವರಂಗದಲ್ಲಿ ನಾಲ್ಕು ಹೊಯ್ಸಳ ರೀತಿಯ ಬಳಪದ ಕಲ್ಲಿನ ಕಂಬಗಳಿವೆ. ನವರಂಗದ ಆಗ್ನೇಯ ಮೂಲೆಯಲ್ಲಿ ಪದ್ಮ ಪರಶು ಅಕ್ಷಮಾಲಾ ಫಲಗಳನ್ನು ಹಿಡಿದ ಯಕ್ಷವಿಗ್ರಹ ಮಗುಚಿ ಹಾಕಿದ ವೃಷಭಪೀಠದ ಹತ್ತಿರ ಇದೆ. ಮತ್ತೊಂದರಲ್ಲಿ ಯಾವ ಪ್ರತಿಮೆಯೂ ಇಲ್ಲ. ಶಾಂತಿನಾಥ ಮಂದಿರದಲ್ಲಿರುವ ಶಾಸನದಿಂದ ಈ ಮಂದಿರವನ್ನು ಪ್ರ.ಶ.12ನೆಯ ಶತಮಾನದಲ್ಲಿ ಹೊಯ್ಸಳ ವಿಷ್ಣವರ್ಧನನ ದಂಡನಾಯಕ ಗಂಗರಾಜನ ಬೊಪ್ಪನು ದ್ರೋಹಘರಟ್ಟಾಚಾರಿ ಎಂಬ ಶಿಲ್ಪಿಯ ಸಹಾಯದಿಂದ ಕಟ್ಟಿಸಿದನೆಂದು ತಿಳಿದುಬರುತ್ತದೆ. ಇದರ ಹೊರವಲಯದ ಗೋಡೆಗಳ ಮೇಲಿರುವ ಆನೆ, ಕುದುರೆ, ಸಿಂಹ ಮತ್ತು ಯಾಳಿಗಳ ಚಿತ್ರಪಟ್ಟಿಕೆಗಳು ಅಮೋಘ ಕೆತ್ತನೆಗಳಾಗಿದ್ದು ಇತರ ಹೊಯ್ಸಳ ದೇವಾಲಯಗಳಲ್ಲಿರುವ ಕೆತ್ತನೆಗಳನ್ನು ಹೋಲುತ್ತವೆ. ಹಸನ್ಮುಖ ಶಾಂತಿನಾಥ ವಿಗ್ರಹ 3.05 ಮೀ ಗಳೆತ್ತರವಿದ್ದು ಇಲ್ಲಿನ ಬಹು ಸುಂದರ ಶಿಲ್ಪಕೃತಿಗಳಲ್ಲೊಂದಾಗಿದೆ. ಧ್ಯಾನಮಗ್ನ ನೇಮಿನಾಥ ಮತ್ತು ಜಿನಮೂರ್ತಿಗಳೂ ನವರಂಗದಲ್ಲಿರುವ ಯಕ್ಷಿಣಿ ಗೊಂಬೆಯೂ ಉತ್ತಮ ಕೃತಿಗಳು. ಉಬ್ಬು ಎದೆ, ತೆಳುವಾದ ಉದರ, ನೀಳವಾಗಿ ಜೋತಾಡುತ್ತಿರುವ ಕೂದಲು ಮತ್ತು ಅನೇಕ ಆಭರಣಯುಕ್ತವಾದ ಯಕ್ಷಿಣಿಶಿಲ್ಪ ಚೋಳಶೈಲಿಯ ಅತ್ಯುತ್ತಮ ಶಿಲ್ಪಗಳನ್ನು ಹೋಲುತ್ತದೆ. ನವರಂಗದ ಚಾವಣಿಯಲ್ಲಿನ ಇತರ ಕೆತ್ತನೆಗಳೂ ಉತ್ತಮ ಕಲಾಕೃತಿಗಳಾಗಿವೆ.
ಈ ಬಸ್ತಿಯ ಗರ್ಭಗುಡಿಯ ತೊಲೆಯ ಮೇಲೆ ವೀರರಾಜೇಂದ್ರನ ಶಾಸನವಿದೆ. ಆಗ್ನೇಯ ಸ್ತಂಭದ ಮೇಲೆ 14ನೆಯ ಶತಮಾನದ ಶಾಸನವಿದೆ. ಮೊದಲಿನ ಸುಕನಾಸಿದ್ವಾರದ ಹತ್ತಿರ ಅಷ್ಟಕೋಣಪೀಠ, ಎರಡು ದ್ವಾರಪಾಲ ವಿಗ್ರಹಗಳೂ ಇವೆ.
ಶಾಂತಿನಾಥ ಬಸ್ತಿಯ ಪುರ್ವದಲ್ಲಿ ಮತ್ತೊಂದು ಬಸ್ತಿಯಿದೆ. ಇದರ ನವರಂಗದಲ್ಲಿ ಹಳೆಯ ರೀತಿಯ ಸ್ತಂಭಗಳಿವೆ. ಇದರ ಹಿಂಭಾಗದ ಗೋಡೆಯನ್ನು ತೆಗೆದು ಪುರ್ವದ್ವಾರವನ್ನು ನಿಲ್ಲಿಸಲಾಗಿದೆ. ನವರಂಗದ ಮಧ್ಯದಲ್ಲಿರುವ ಭುವನೇಶ್ವರಿ ಆಕರ್ಷಣೀಯವಾಗಿದೆ. ಅಷ್ಟದಿಕ್ಪಾಲಕರು ಮತ್ತು ತೊಲೆಗಳು ಸಂಧಿಸುವ ಜಾಗದಲ್ಲಿ ಪುಷ್ಪಮಾಲಿಕೆಗಳನ್ನು ಹಿಡಿದಿರುವ ನಾಲ್ವರು ಗಂಧರ್ವರ ವಿಗ್ರಹಗಳಿವೆ. ಮಧ್ಯಫಲಕದಲ್ಲಿ ಯಕ್ಷ-ಯಕ್ಷಿ ಗಂಧರ್ವರ ನಡುವೆ ಸಿಂಹಪೀಠವಿದ್ದು ಅದರ ಹಿಂದೆ ಆನೆಗಳಿವೆ. ಸಿಂಹಪೀಠದ ಮೇಲೆ ಪ್ರಭಾವಳಿ, ಮುಕ್ಕೊಡೆಗಳಿಂದಲಂಕೃತವಾದ ಜಿನವಿಗ್ರಹವಿದೆ. ಈ ವಿಗ್ರಹಕ್ಕೆ ಬುದ್ಧನಿಗಿರುವಂತೆ ಊರ್ಣಕೇಶವಿದೆ. (ಬಿ.ಕೆ.ಜಿ.)
ನಾಗಮಂಗಲ ತಾಲ್ಲೂಕಿನಲ್ಲಿ ಎರಡು ಸ್ತಂಭ ಶಾಸನಗಳಿವೆ. ಅದರಲ್ಲಿ ಒಂದು ಕೆಳೆಗೆರೆಯ ಸ್ತಂಭ ಶಾಸನ. ಮತ್ತೂಂದು ಕಂಬದಹಳ್ಳಿಯ ಮಾನಸ್ತಂಭ. ಮಾನಸ್ತಂಭವಿರುವುದು ಅಲ್ಲಿಯ ಇತಿಹಾಸ ಪ್ರಸಿದ್ಧವಾದ ಪಂಚಕೂಟ ಬಸದಿಯ ಮುಂಭಾಗದಲ್ಲಿ. ಎತ್ತರವಾದ ಆಯತಾಕಾರದ ಜಗುತಿಯ ಆಧಾರದಲ್ಲಿ ಸ್ಥಿರವಾಗಿ ನಿಂತಿರುವ ಈ ಸ್ತಂಭವು ಸುಮಾರು 50 ಅಡಿ ಎತ್ತರವಾಗಿದೆ. ಈ ಸ್ತಂಭದ ದಂಡ ಹಾಗು ಬೋದಿಗೆಗಳು ಅಷ್ಟ ಕೋನಾಕೃತಿಯಲ್ಲಿವೆ. ಇದರ ಚೌಕಟ್ಟಿನ ಮೇಲೆ ಆಸನ ರೂಢ ದ್ವಿಭುಜಯಕ್ಷ ಸಿದ್ಧಾಯಿಕನ ಮೂರ್ತಿ ಇದೆ. ಈ ಭವ್ಯವಾದ ಮಾನಸ್ತಂಭದ ಕಾರಣದಿಂದಲೇ ಈ ಗ್ರಾಮವನ್ನು ಕಂಬದಹಳ್ಳಿ ಎಂದು ಕರೆಯುತ್ತಾರೆ.
ಕಂಬದ ಮೇಲಿನ ಶಾಸನ
ಜಗುತಿಯನ್ನು ಏರಿ ಹೋದರೆ ಕಂಬದ ಬುಡದಲ್ಲಿ ನಾಲ್ಕು ಆಯತಾಕಾರದ ಶಿಲಾ ಹಲಗೆಗಳಲ್ಲಿ ಶಾಸನಗಳನ್ನು ಕೆತ್ತಲಾಗಿದೆ. ಕಂಬದ ಉತ್ತರ, ದಕ್ಷಿಣ ಮತ್ತು ಪೂರ್ವ ಮುಖದ ಹಲಗೆಗಳಲ್ಲಿ ಜೈನ ಯತಿಗಳ ವಿವರ ಗಳನ್ನು ಕೆತ್ತಲಾಗಿದೆ. ಪಶ್ಚಿಮ ದಿಕ್ಕಿನಲ್ಲಿರುವ ಹಲಗೆಯಲ್ಲಿ ಅತಿಮುಖ್ಯವಾದ ದತ್ತಿ ಶಾಸನವನ್ನು ಕೆತ್ತಲಾಗಿದೆ.
ಶಾಸನದ ಮೂರು ದಿಕ್ಕುಗಳಲ್ಲಿ ಜೈನ ಪರಂಪರೆಯ ಮಹಾ ಮುನಿಗಳಾದ ಅನಂತ ವೀರ್ಯ, ಬಾಲಚಂದ್ರ, ಕಳನೆಲೆ ದೇವ, ಆಶೊ¤àಪವಸಿ, ಹೇಮ ನಂದಿ ಮುನೀಶ್ವರ, ವಿನಯಾನಂದಯತಿ ಅಥವಾ ವಿನಯನಂದಿ ದೇವ, ಹಾಗು ಪಲ್ಲ ಪಂಡಿತ ಯತಿಗಳ ಹೆಸರುಗಳನ್ನು ಕೆತ್ತಲಾಗಿದೆ. ಪಲ್ಲಪಂಡಿತ ಯತಿಗಳು ವಿದ್ವಾಂಸರಾಗಿದ್ದು ವ್ಯಾಕರಣ ಶಾಸ್ತ್ರದಲ್ಲಿ ಪಾಂಡಿತ್ಯವನ್ನು ಪಡೆದಿದ್ದರು ಎಂಬ ಅಂಶ ಶಾಸನದಿಂದ ತಿಳಿದುಬರುತ್ತದೆ. ಈ ಶಾಸನದಲ್ಲಿ ಇವರನ್ನು ಅಭಿಮಾನಧನಿ, ಚಿಂತಾಮಣಿ, ಕಾಮಧೇನು, ಕಲ್ಪವೃಕ್ಷ ಹಾಗು ಮಹಾದಾನಿ ಎಂದು ವರ್ಣಿಸಲಾಗಿದೆ.
ಪಶ್ಚಿಮ ಮುಖದ ಶಾಸನ
ಈ ಶಾಸನದಲ್ಲಿ ಹೊಯ್ಸಳ ವಿಷ್ಣುವರ್ಧನನು ತನ್ನ ದಂಡನಾಯಕನಾಗಿದ್ದ ಗಂಗರಾಜನಿಗೆ ನೀಡಿದ್ದ ದತ್ತಿಯ ವಿವರವಿದೆ. ಚೋಳರಿಂದ ತಲಕಾಡನ್ನು ಗೆದ್ದ ಸಂದರ್ಭದಲ್ಲಿ, ಆ ವಿಜಯಕ್ಕೆ ಕಾರಣನಾದ ಮಹಾಪ್ರಧಾನಿ ಗಂಗರಾಜನನ್ನು ಕರೆದು, ನಿನಗೆ ಏನು ಬೇಕು ಕೇಳಿಕೋ ಎಂದನಂತೆ. ಆಗ ಗಂಗರಾಜನು, ಬಿಂಡಿಗನವಿಲೆಯ ತೀರ್ಥಕ್ಕೆಂದು ಭೂಮಿ ಕೇಳುತ್ತಾನೆ. ಆಗ ದೊರಕಿದ್ದೇ ಕಂಬದಹಳ್ಳಿಯ ಜಮೀನು. ಗಂಗರಾಜ ಅದನ್ನು ತನ್ನ ಗುರುಗಳಾದ ಶುಭಚಂದ್ರ ಸಿದ್ಧಾಂತ ದೇವನಿಗೆ ನೀಡುತ್ತಾನೆ. ಇವಿಷ್ಟು ಈ ಕಂಬದಲ್ಲಿರುವ ಶಾಸನದ ವಿವರ.
ಕಂಬದಹಳ್ಳಿಯ ಪಂಚಕೂಟ ಬಸದಿ
ಕಂಬದಹಳ್ಳಿಯ ಪಂಚಕೂಟ ಬಸದಿಗೆ ಸಾವಿರ ವರ್ಷಗಳ ಇತಿಹಾಸವಿದೆ. ಶ್ರವಣಬೆಳಗೂಳದಿಂದ ಕೇವಲ 12 ಕಿ.ಮಿ. ದೂರದಲ್ಲಿರುವ ಈ ಬಸದಿ, ಗಂಗರ ಕೊಡುಗೆ. ಕೇಂದ್ರ ಪುರಾತತ್ವ ಇಲಾಖೆಯ ವತಿಯಿಂದ ಜೀರ್ಣೋದ್ಧಾರವಾಗಿರುವ ಈ ಬಸದಿ ನಯನಮನೋಹರವಾಗಿದೆ. ಹತ್ತು ವರ್ಷಗಳ ಹಿಂದೆ ಇದೇ ಬಸದಿ ಕುಸಿಯುವ ಹಂತದಲ್ಲಿತ್ತು. ಈ ಬಸದಿಯನ್ನು ಬುನಾದಿ ಇಲ್ಲದೆ ನಿರ್ಮಿಸಿರುವುದು ಇದಕ್ಕೆ ಪ್ರಮುಖ ಕಾರಣವಿರಬಹುದು. 2003-04 ರಲ್ಲಿ ನಡೆದ ತೀರ್ಥಂಕರ ಮಹಾವೀರರ 2600 ನೆಯ ಜಯಂತಿಯ ಉತ್ಸವದ ಸಂದರ್ಭದಲ್ಲಿ ಅನೇಕ ಜೈನಮಂದಿರಗಳ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ ಕಂಬದಹಳ್ಳಿಯ ಬಸದಿಯ ಅದೃಷ್ಟವೂ ಖುಲಾಯಿಸಿತು. ಬಸದಿಯು ತನ್ನ ಗತವೈಭವವನ್ನು ಮರಳಿ ಪಡೆಯಿತು. ಒಂದು ಅಡಿಯಷ್ಟು ವಾಲಿದ್ದ ಶಾಸನವಿರುವ ಕಂಬವನ್ನು ನೇರವಾಗಿ ನಿಲ್ಲಿಸಿ ತಳದಲ್ಲಿ ಭದ್ರವಾದ ಜಗುತಿಯನ್ನು ನಿರ್ಮಿಸಲಾಯಿತು.
ಅಭಿವೃದ್ಧಿಯೇ ಮುಳುವಾಗಿದೆ
ಈಗ ಜೈನ ಸಮುದಾಯವು ಇಲ್ಲಿ ಒಂದು ಮಠವನ್ನು ಪ್ರತಿಷ್ಠಾಪಿಸಿ ಅದರ ಮೇಲ್ವಿಚಾರಣೆಗೆ ಒಬ್ಬರು ಗುರುಗಳನ್ನು ನೇಮಿಸಿದೆ. ಈ ಮಠದ ಆಶ್ರಯದಲ್ಲಿ ಒಂದು ಪ್ರೌಢಶಾಲೆ ಇದೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿಯ ಸೌಕರ್ಯವನ್ನು ಕಲ್ಪಿಸಲಾಗಿದೆ. ಆದರೆ ಅಭಿವೃದ್ಧಿಯ ಮತ್ತು ಶ್ರದ್ಧಾ ಭಕ್ತಿಯ ಕಾರಣಗಳಿಂದ ಕಂಬದಹಳ್ಳಿಯ ಕಂಬಕ್ಕೆ ಮತ್ತೆ ಗಂಡಾಂತರ ಬಂದಿದೆ. ಈ ಮಾನಸ್ತಂಭ ದ ಮೇಲು¤ದಿಯಲ್ಲಿ ಬ್ರಹ್ಮಯಕ್ಷ ವಿಗ್ರಹವಿದೆ. ನೂರಾರು ವರ್ಷಗಳಿಂದ ಸ್ತಂಭವು ವಾಲಿತ್ತು. ಈಗ ಪುರಾತತ್ವ ಇಲಾಖೆಯವರು ಶ್ರಮವಹಿಸಿ ಅದನ್ನು ಸುಸ್ಥಿತಿಗೆ ತಂದನಂತರ ಸ್ತಂಭದ ಮೇಲಿರುವ ವಿಗ್ರಹಕ್ಕೆ ಪೂಜೆ ಸಲ್ಲಿಸಬೇಕೆಂಬ ಆಲೋಚನೆ ಸ್ಥಳೀಯರಿಗೆ ಬಂದಿತು. ಅದಕ್ಕಾಗಿ ಕಂಬದ ಸುತ್ತ ಕಬ್ಬಿಣದ ಮೆಟ್ಟಲುಗಳುಳ್ಳ ಒಂದು ಅಟ್ಟವನ್ನು ನಿರ್ಮಿಸಲಾಯಿತು. ಕಂಬಕ್ಕೆ ಕಬ್ಬಿಣದ ಅನೇಕ ಕ್ಲಾಂಪ್‌ಗ್ಳನ್ನು ಹಾಕಿ ಬಿಗಿಗೊಳಿಸಲಾಯಿತು. ಕಂಬದಮೇಲೆ ಒಂದು ಅಮೂಲ್ಯ ಶಾಸನವಿದೆ ಎಂಬ ಅಂಶವನ್ನು ಜನ ಮರೆತರು. ಕಂಬದಮೇಲೆ ಜನ ಹತ್ತಿ ಮೋಜು ಮಾಡಿದರು. ಭಕ್ತರ ಭಾವಾವೇಶವನ್ನು ತಡೆಯಲು ಯಾರಿಂದ ಸಾಧ್ಯ? ಸ್ಮಾರಕ ಹಾಳಾದಾಗ ಮಾತ್ರ ಸರ್ಕಾರವನ್ನು ದೂರುವುದು. ಇದೇ ನಮ್ಮ ಜನರ ಮನೋಭಾವ. ಸುಮಾರು ಒಂದು ಸಾವಿರ ವರ್ಷಗಳಿಂದ ನಿರಾತಂಕವಾಗಿದ್ದ ಶಾಸನಕ್ಕೆ ಅದರ ಅಭಿವೃದ್ಧಿಯೇ ಈಗ ಮುಳುವಾಗಿದೆ.
ಕಂಬದಹಳ್ಳಿಯ ಮಾರ್ಗ
ಬೆಂಗಳೂರಿನಿಂದ ಹಾಸನಕ್ಕೆ ಹೋಗುವ ಹೆದ್ದಾರಿಯಲ್ಲಿ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿದೆ. ಅಲ್ಲಿಂದ ಮುಂದೆ ಹೋದರೆ ಕದಬಹಳ್ಳಿ ಎಂಬ ಗ್ರಾಮ ಸಿಗುತ್ತದೆ. ಕದಬದಹಳ್ಳಿಯಿಂದ ಕಂಬದ ಹಳ್ಳಿಗೆ ಹೋಗಲು ಉತ್ತಮ ರಸ್ತೆ ಸೌಲಭ್ಯವಿದೆ.
ಯುದ್ಧ ಗೆದ್ದಿದ್ದಕ್ಕೆ ಉಡುಗೊರೆ
ವಿಷ್ಣುವರ್ಧನ ಚೋಳರನ್ನು ತಲಕಾಡಿನಲ್ಲಿ ಗೆದ್ದ ಬಗ್ಗೆ ಹಾಗೂ ಈ ಸಂದರ್ಭದಲ್ಲಿ ತನ್ನ ಸೇನಾನಿ ಗಂಗರಾಜನಿಗೆ ಉಂಬಳಿ ಕೊಟ್ಟ ವಿಚಾರವಾಗಿ ಮತ್ತೂಂದು ಶಾಸನವು ಮಂಡ್ಯಜಿಲ್ಲೆ, ಮದ್ದೂರು ತಾಲ್ಲೂಕಿನ ತಿಪ್ಪೂರು ಗ್ರಾಮದ ಜಿನಗುಡ್ಡದ ಮೇಲಿದೆ. ಈ ಶಾಸನದ ಪ್ರಕಾರ ಹೊಯ್ಸಳರ ದಂಡನಾಯಕ ಗಂಗರಾಜನು ಚೋಳರ ದಂಡನಾಯಕ ಅದಮನಿಗೆ ಶರಣಾಗುವಂತೆ ಹೇಳಿಕಳುಹಿಸುತ್ತಾನೆ. ಅದಮನು ಇದಕ್ಕೆ ಉತ್ತರವಾಗಿ ಶರಣಾಗುವುದಿಲ್ಲ. ಬೇಕಿದ್ದರೆ ಯುದ್ಧಮಾಡಿ ಗೆದ್ದುಕೋ ಎನ್ನುತ್ತಾನೆ. ಆಗ, ಚೋಳರ ಅದಿಯಮ (ಅದಿಮ) ದಾಮೋದರ, ನರಸಿಂಗವರ್ಮ ಹಾಗೂ ಹೊಯ್ಸಳರ ದೊರೆ ವಿಷ್ಣುವರ್ಧನನ ನಡುವೆ ಭೀಕರ ಯುದ್ಧ ನಡೆಯುತ್ತದೆ.
ದಂಡನಾಯಕ ಗಂಗರಾಜನು ಅದಿಯಮನ ನಿವಾಸವನ್ನು ಹೊಕ್ಕು ಅವನನ್ನು ಇರಿದು ಕೊಲ್ಲುತ್ತಾನೆ. ಚೋಳರ ಸೇನೆ ಕಂಗಾಲಾಗಿ ದಿಕ್ಕಾಪಾಲಾಗಿ ಓಡುತ್ತದೆ. ಈ ವಿಜಯದಿಂದ ಸಂಪ್ರೀತನಾದ ದೊರೆ ವಿಷ್ಣುವರ್ಧನ, ಗಂಗರಾಜನಿಗೆ "ನಿನಗೆ ಏನು ಬೇಕು ಕೇಳಿಕೊ 'ಎನ್ನುತ್ತಾನೆ. ಗಂಗರಾಜನು, ಭುವನದಲ್ಲೇ ಶ್ರೇಷ್ಠವಾದ ತಿಪ್ಪೂರನ್ನು ಕೊಡಬೇಕೆಂದು ಕೇಳಿಕೊಳ್ಳುತ್ತಾನೆ. ದೊರೆಯು ಸಂತೋಷವಾಗಿ ತಿಪ್ಪೂರು ಮತ್ತು ಅದರ ಉಪಗ್ರಾಮಗಳಾದ ಗಾಜಲೂರು ಮುಂತಾದ ಗ್ರಾಮಗಳನ್ನು ಕೊಡುಗೆಯಾಗಿ ನಿಡುತ್ತಾನೆ. ಗಂಗರಾಜ ಈ ಗ್ರಾಮಗಳನ್ನು ತನ್ನ ಗುರುಗಳಾದ ಮೇಘಚಂದ್ರ ಸಿದ್ಧಾಂತ ದೇವನಿಗೆ ಕಾಣಿಕೆಯಾಗಿ ನೀಡುತ್ತಾನೆ.
- Short description is different from Wikidata
- Articles using infobox templates with no data rows
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Commons category link is on Wikidata
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
- ಮಂಡ್ಯ ಜಿಲ್ಲೆ
- ಜೈನ ಧರ್ಮದ ಪುಣ್ಯ ಕ್ಷೇತ್ರಗಳು