ವಿಷಯಕ್ಕೆ ಹೋಗು

ಕಕ್ಷಿಗಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಕ್ಷಿಗಾರ : ಪ್ರಾಚೀನ ರೋಮಿನಲ್ಲಿ ವಾಸಿಸುತ್ತಿದ್ದು, ಸ್ವತಂತ್ರನಾದರೂ ರೋಮಿನ ಪ್ರಜೆಯಲ್ಲವೆಂಬ ಕಾರಣದಿಂದ, ರೋಮನ್ ರಕ್ತವಿರುವ ಶ್ರೀಮಂತನ ರಕ್ಷಣೆಯಲ್ಲಿರಬೇಕಾದ ಪ್ರಜೆಯೆಂಬುದು ಇದರ ಸಮಾನ ಇಂಗ್ಲಿಷ್ ಪದವಾದ ಕ್ಲೈಯೆಂಟ್ ಎಂಬುದರ ಹಳೆಯ ಅರ್ಥ. ಇವನೊಬ್ಬ ಆಶ್ರಿತ, ಅವಲಂಬಿ, ತನ್ನ ಸಹಾಯಕ್ಕಾಗಿ ನ್ಯಾಯವಾದಿಯನ್ನು ನೇಮಿಸಿಕೊಳ್ಳುವವನು-ಎಂಬುದು ಕಕ್ಷಿಗಾರ (ಕ್ಲೈಯೆಂಟ್) ಶಬ್ದದ ಇನ್ನೊಂದು ಅರ್ಥ. ಯಾವ ಕಸಬಿನವನನ್ನಾದರೂ ತನ್ನ ಸಹಾಯಕ್ಕಾಗಿ ಇಟ್ಟುಕೊಳ್ಳುವವನು, ಗಿರಾಕಿ, ಗ್ರಾಹಕ-ಎಂಬ ಅರ್ಥದಲ್ಲೂ ಕ್ಲೈಯೆಂಟ್ ಪದವನ್ನು ಬಳಸಲಾಗುತ್ತದೆ. ಪ್ರತಿಯೊಬ್ಬನೂ ತನ್ನ ದೇಶದ ಕಾನೂನನ್ನು ತಿಳಿದಿರುತ್ತಾನೆ ಎಂಬುದು ನ್ಯಾಯಶಾಸ್ತ್ರದ ಮೂಲತತ್ತ್ವಗಳಲ್ಲಿ ಒಂದು. ಆದರೆ ನ್ಯಾಯಶಾಸ್ತ್ರ ಅಗಾಧ ಸಮುದ್ರ. ಅದನ್ನು ಬಲ್ಲವರು ಬಹಳಿಲ್ಲ. ಬಹಳ ಬಲ್ಲವರಿಲ್ಲ. ಆದುದರಿಂದ ಸಾಮಾನ್ಯರು ಸಂದಿಗ್ಧ ಸಮಯದಲ್ಲಿ ನ್ಯಾಯಶಾಸ್ತ್ರ ಬಲ್ಲವರಲ್ಲಿ ಹೋಗುವುದು ಅನಿವಾರ್ಯ, ತನ್ನ ಸ್ಥಿರ ಚರ ಸ್ವತ್ತುಗಳ ಅಥವಾ ತನ್ನ ಹಕ್ಕುಬಾಧ್ಯತೆಗಳ ಸಂಬಂಧವಾಗಿ ಎದ್ದ ಸಮಸ್ಯೆಗಳನ್ನು ಅವನ ಮುಂದಿಟ್ಟು ಅವಕ್ಕೆ ಕಾನೂನು ರೀತ್ಯಾ ತಕ್ಕ ನಿವಾರಣೆಯನ್ನು ಅಪೇಕ್ಷಿಸುವವನು ಕಕ್ಷಿಗಾರ. ಈ ಅರ್ಥದಲ್ಲೇ ಈ ಲೇಖನವನ್ನು ಬರೆಯಲಾಗಿದೆ.

ನ್ಯಾಯಶಾಸ್ತ್ರದಲ್ಲಿ

[ಬದಲಾಯಿಸಿ]

ರೋಮಿನಲ್ಲಿ ನ್ಯಾಯಪಂಡಿತರೂ ಕಕ್ಷಿಗಾರನಿಗಾಗಿ ಅಗತ್ಯವಾದ ಕೆಲಸ ಮಾಡುತ್ತಿದ್ದವರೂ ಮಹತ್ತ್ವದ ಸ್ಥಾನ ಗಳಿಸಿದ್ದರು. ಅವರನ್ನು ವೆಟರ್ಸ್‌ ಎಂದು ಕರೆಯಲಾಗುತ್ತಿತ್ತು. ಅವರು ತಮ್ಮ ಕಕ್ಷಿಗಾರನಿಗಾಗಿ ಕಾನೂನು ರೀತ್ಯಾ ಅಗತ್ಯವುಳ್ಳ ದಸ್ತಾವೇಜುಗಳನ್ನು ಬರೆಯುವುದರೊಂದಿಗೆ, ತನ್ನ ಕಕ್ಷಿಗಾರನ ಪರವಾಗಿ ನ್ಯಾಯಾಲಯದ ಮುಂದೆ ವಾದಿಸಲು ವಾಕ್ಚತುರನಿಗೆ ಬೇಕಾದ ಆಧಾರ ಸಾಮಗ್ರಿಗಳನ್ನು ಸಂಗ್ರಹಿಸಿಕೊಡುತ್ತಿದ್ದರು. ಕ್ಲಿಷ್ಟ ಸಮಸ್ಯೆಗಳ ಬಗ್ಗೆ ತಮ್ಮನ್ನು ಕೇಳಲಾದ ಪ್ರಶ್ನೆಗಳನ್ನು ಉತ್ತರಿಸುತ್ತಿದ್ದರು. ಈ ನ್ಯಾಯಪಂಡಿತರು ಹಣದ ಮೋಹಕ್ಕೆ ಸಿಕ್ಕಿ ಕೆಲಸ ಮಾಡುವುದು ಅನೈತಿಕವೆಂದು ಭಾವಿಸಲಾಗಿತ್ತು. ಕಕ್ಷಿಗಾರ ಮತ್ತು ವಕೀಲ-ಇವರ ಸಂಬಂಧ ಇಂದಿಗೂ ಹೆಚ್ಚುಕಡಿಮೆ ಅದೇ ರೀತಿ ನಡೆದು ಬಂದಿದೆ. ಕಕ್ಷಿಗಾರನ ಸಮಸ್ಯೆಗಳನ್ನು ವಿಮರ್ಶಿಸಿ, ಸಂಬಂಧಪಟ್ಟ ನ್ಯಾಯಸೂತ್ರಗಳನ್ನು ಸರಿಯಾಗಿ ತಿಳಿದುಕೊಂಡು ಅವನಿಗೆ ಸೂಕ್ತ ಸಲಹೆ ಕೊಡುವುದು ವಕೀಲನ ಧರ್ಮ. ಅಮೆರಿಕದಲ್ಲಿ ಕಕ್ಷಿಗಾರ ಮತ್ತು ವಕೀಲರ ಸಂಬಂಧ ಇತರ ವ್ಯವಹಾರ ಸಂಬಂಧಗಳಂತೆಯೇ ಬೆಳೆದಿದೆ. ಅಲ್ಲಿ ಒಬ್ಬ ಕಕ್ಷಿಗಾರ ತನ್ನ ಸಮಸ್ಯೆಯ ನಿವೃತ್ತಿಗಾಗಿ ವಕೀಲನ ಬಳಿಗೆ ಬಂದರೆ ಅದನ್ನು ವಕೀಲ ತನ್ನಿಂದಾಗದೆಂದು ಬಿಟ್ಟುಬಿಡಬಹುದು. ಆದರೆ ಇಂಗ್ಲೆಂಡಿನಲ್ಲಿ ತನ್ನ ಬಳಿಗೆ ಬಂದ ಕಕ್ಷಿಗಾರ ನ್ಯಾಯವಾದ ಶುಲ್ಕ ಕೊಟ್ಟಲ್ಲಿ ಅವನ ಮೊಕದ್ದಮೆಯನ್ನು ಬ್ಯಾರಿಸ್ಟರ್ (ಉನ್ನತ ವಕೀಲ) ತೆಗೆದುಕೊಳ್ಳಲೇಬೇಕೆಂದು ಅಲ್ಲಿಯ ನ್ಯಾಯವಾದಿಗಳ ಸಂಘ (ಬಾರ್ ಅಸೋಸಿಯೇಷನ್) ನಿರ್ಣಯಿಸಿದೆ. ಜಸ್ಟಿಸ್ ಸುಂದರಂ ಐಯರ್ ಬರೆದಿರುವ ಪ್ರೊಫೆಷನಲ್ ಎಥಿಕ್ಸ್‌ ಎಂಬ ಪುಸ್ತಕದಲ್ಲಿ ಈ ಅಭಿಪ್ರಾಯವನ್ನೇ ಸಮರ್ಥಿಸಲಾಗಿದೆ. ಯಾರೇ ಆಗಲಿ ಆತ ತಪ್ಪಿತಸ್ಥನೆಂದೇ ವಕೀಲನಿಗೆ ಎನಿಸಿದ್ದರೂ ಕಾನೂನು ರೀತ್ಯಾ ತಪ್ಪಿತಸ್ಥನೆಂದು ರುಜುವಾತಾಗದೆ ಆತ ತಪ್ಪಿತಸ್ಥನೆಂದು ಹೇಳಲಾಗುವುದಿಲ್ಲ. ಅದರ ರುಜುವಾತಿನ ಬಗ್ಗೆ ಕಕ್ಷಿಗಾರ ಕಷ್ಟದಲ್ಲಿರುವಾಗ ವಕೀಲ ನುಣುಚಿಕೊಳ್ಳುವುದು ಸರಿಯಾಗಲಾರದು. ಇದಕ್ಕೆ ವಿರೋಧ ಅಭಿಪ್ರಾಯಗಳೂ ಇವೆ. ಕಕ್ಷಿಗಾರನ ಮೊಕದ್ದಮೆಯನ್ನು ತೆಗೆದುಕೊಂಡ ಬಳಿಕ ಅವನಿಗೆ ತಿಳಿಸದೆ ಅದರಿಂದ ಬಿಟ್ಟು ಹೋಗುವುದು ಸರಿಯಲ್ಲವೆಂದು ಉಚ್ಚ ನ್ಯಾಯಾಲಯ ತೀರ್ಮಾನ ಕೊಟ್ಟಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: