ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
ಕಟೀಲ್ ಅಥವಾ ಕಟೀಲು (ತುಳು / ಕನ್ನಡ: ಕಟೀಲು) ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ದೇವಾಲಯ ಪಟ್ಟಣವಾಗಿದೆ. ಇದು ಮಂಗಳೂರಿನಿಂದ ಸುಮಾರು ೨೬ ಕಿ.ಮೀ ದೂರದಲ್ಲಿದೆ ಮತ್ತು ಹಿಂದೂ ಧರ್ಮದ ಪವಿತ್ರ ದೇವಾಲಯಗಳಲ್ಲೊಂದಾಗಿದೆ. ಇಲ್ಲಿಯ ಪ್ರಮುಖ ಆಕರ್ಷಣೆ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯವಾಗಿದೆ. ಪವಿತ್ರವಾದ ನಂದಿನಿ ನದಿಯ ಮಧ್ಯದಲ್ಲಿ, ಐತಿಹಾಸಿಕ ದೃಶ್ಯಾವಳಿಗಳ ಮತ್ತು ಆಕರ್ಷಣೀಯ ಹಚ್ಚ ಹಸಿರಿನ ವನಸಿರಿಯ ಮಧ್ಯೆ ಇರುವ ಪವಿತ್ರ ದೇವಾಲಯವಾಗಿದೆ. ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆಯಲು ಪ್ರತಿನಿತ್ಯ ಸಹಸ್ರಾರು ಭಕ್ತಾದಿಗಳು ಕಟೀಲಿಗೆ ಭೇಟಿ ನೀಡುತ್ತಾರೆ.
ಪ್ರಮುಖ ಉತ್ಸವಗಳು
[ಬದಲಾಯಿಸಿ]ವಾರ್ಷಿಕ ಜಾತ್ರಾ ಮಹೋತ್ಸವ
[ಬದಲಾಯಿಸಿ]ಈ ಹಬ್ಬವು ಏಪ್ರಿಲ್ ತಿಂಗಳಲ್ಲಿ ಬರುತ್ತದೆ ಮತ್ತು ೮ ದಿನಗಳವರೆಗೆ ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಆಚರಿಸಲಾಗುತ್ತದೆ. ಜಾತ್ರಾ ಮಹೋತ್ಸವವು ೮ ದಿನಗಳ ಕಾಲ ನಡೆಯುತ್ತದೆ.
- ಮೊದಲ ದಿನ ಕೋಡಿ ಧ್ವಜವನ್ನು ಏರಿಸಲಾಗುತ್ತದೆ.
- ಮೂರನೇ ದಿನ ದೇವರ ಮೂಡು ಸವಾರಿ (ಮೂಡಣದ ದಿಕ್ಕಿಗೆ) ನಡೆಯುತ್ತದೆ.
- ಐದನೇ ದಿನ ರಥಬೀದಿಯಲ್ಲಿ ಬೆಳ್ಳಿ ರಥೋತ್ಸವ ನಡೆಯುತ್ತದೆ.
- ಆರನೇ ದಿನ ಪಡು ಸವಾರಿ ( ಪಡುವಣದ ದಿಕ್ಕಿಗೆ) ನಡೆಯುತ್ತದೆ.
- ಏಳನೇ ದಿನ ಬ್ರಹ್ಮರಥೋತ್ಸವ ನಡೆಯುತ್ತದೆ.
- ಕೊನೆಯ ದಿನ ದೇವರ ಕಟೀಲು ಊರ ಸವಾರಿ ನಡೆಯುತ್ತದೆ. ಮರಳಿ ರಥಬೀದಿಗೆ ಬರುವಾಗ ಮಧ್ಯರಾತ್ರಿ ಸುಮಾರು ೨ ಘಂಟೆ ಆಗುತ್ತದೆ. ಅದೇ ಸಮಯಕ್ಕೆ ಶಿಬರೂರಿನ ಕೊಡಮಣಿತ್ತಾಯ ದೈವದ ಪ್ರವೇಶವೂ ಆಗಿರುತ್ತದೆ. ಮುಂದೆ ಅಲ್ಲಿ ಅವಭೃಥೋತ್ಸವ (ರಥೋತ್ಸವ) ನಡೆಯುತ್ತದೆ. ಬಳಿಕ ದೇವರು ಜಳಕಕ್ಕೆ ಹೋಗಿ ಅಲ್ಲಿಂದ ಮರಳಿ ಬರುವಾಗ ತೂತಾಟ (ಬೆಂಕಿಯ ಆಟ) ಶುರುವಾಗುತ್ತದೆ. ಹಿಂದಿನ ಕಾಲದಲ್ಲಿ ಕೊಡೆತ್ತೂರು ಮತ್ತು ಅತ್ತೂರು ಗ್ರಾಮದ ಜನತೆಯ ನಡುವೆ ಜಗಳವಾಗುತ್ತಿದ್ದರಿಂದ, ಅವರ ಕೋಪವನ್ನು ದೇವರ ಮುಂದೆಯೇ ನಿವಾರಣೆಯಾಗಲು ಈ ಆಚರಣೆಯನ್ನು ಜಾರಿಗೆ ತಂದಿದ್ದರು. ಅದು ಇಂದಿಗೂ ಜಾತ್ರಾ ಮಹೋತ್ಸವದ ಒಂದು ಭಾಗವಾಗಿ ಆಚರಿಸಲ್ಪಡುತ್ತದೆ.
ಇದಲ್ಲದೆ ಉತ್ಸವದ ಎಲ್ಲಾ ದಿನಗಳಲ್ಲಿ ಚಿನ್ನದ ರಥೋತ್ಸವ ನಡೆಯುತ್ತದೆ.
ನವರಾತ್ರಿ ಉತ್ಸವ
[ಬದಲಾಯಿಸಿ]ಪವಿತ್ರ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಆಲಯದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಉತ್ಸವದ ಭಾಗವಾಗಿ 'ಲಲಿತ ಪಂಚಮಿ', 'ಮಹಾನವಮಿ','ವಿಜಯದಶಮಿ' ಹಾಗೂ 'ಮಧ್ವ ಜಯಂತಿ'ಯನ್ನು ಆಚರಿಸಲಾಗುತ್ತದೆ.
ಲಕ್ಷದೀಪೋತ್ಸವ
[ಬದಲಾಯಿಸಿ]ಕಾರ್ತಿಕ ಮಾಸದ ಬಹುಲಾ ಪಂಚಮಿ ದಿನದಂದು ದೀಪಗಳ ಹಬ್ಬವನ್ನು ಆಚರಿಸಲಾಗುತ್ತದೆ.
ಅನ್ನದಾನ ಸೇವೆ
[ಬದಲಾಯಿಸಿ]ಭಕ್ತರಿಗೆ ದಿನಕ್ಕೆ ಎರಡು ಬಾರಿ ಅನ್ನ ಪ್ರಸಾದ ನೀಡಲಾಗುತ್ತದೆ. ವಿಸ್ತಾರವಾದ ಭೋಜನಶಾಲೆಯಲ್ಲಿ ಒಂದೇ ಸಮಯದಲ್ಲಿ ಸುಮಾರು ಒಂದು ಸಾವಿರ ಜನರಿಗೆ ಅವಕಾಶ ಕಲ್ಪಿಸುತ್ತದೆ. ಅಡುಗೆ ಕೋಣೆಯನ್ನೂ ಚೆನ್ನಾಗಿ ಕಟ್ಟಲಾಗಿದೆ ಮತ್ತು ಉತ್ತಮವಾಗಿ ನಿರ್ವಹಿಸಲಾಗುತ್ತದೆ. ಈ ಅಡುಗೆ ಕೋಣೆಯನ್ನೇ ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿಗಳು ನೇಮಕಗೊಳ್ಳುತ್ತಾರೆ ಮತ್ತು ಈ ವ್ಯವಸ್ಥೆಯನ್ನು ಅವರೇ ನೋಡಿಕೊಳ್ಳುತ್ತಾರೆ. ರಾಶಿಪುಜಾ ದಿನದಂದು, ಅಂದರೆ ಮೀನಾ ಸಂಕ್ರಮಣದಂದು ಮತ್ತು ವಾರ್ಷಿಕ ಉತ್ಸವದ ಆರಂಭವನ್ನು ಗುರುತಿಸುವ ದಿನದಂದು, ಅಂದರೆ ಮೆಷ ಸಂಕ್ರಮಣದಂದು, ಭಾರೀ ಪ್ರಮಾಣದ ಅಕ್ಕಿಯ ಮೇಲೆ ತೆಂಗಿನ ಎಲೆಗಳನ್ನಿಟ್ಟು, ಅದರ ಮೇಲೆ 'ಬಲಿಮೂರ್ತಿ', ಮೆರವಣಿಗೆಯ ಮೂರ್ತಿಯನ್ನು ಇಡಲಾಗುತ್ತದೆ ಮತ್ತು ಅದನ್ನು ಪೂಜಿಸಲಾಗುತ್ತದೆ. ಹೀಗೆ ಪವಿತ್ರವಾದ ಅಕ್ಕಿಯನ್ನು ಬಹಳಷ್ಟು ಸಂಖ್ಯೆಯ ಭಕ್ತರಲ್ಲಿ 'ಅನ್ನಪ್ರಸಾದ' ರೂಪದಲ್ಲಿ ವಿತರಿಸಲಾಗುತ್ತದೆ.[೧] ಸುಮಾರು ಹತ್ತು ಲಕ್ಷ ಭಕ್ತರು, ವಾರ್ಷಿಕವಾಗಿ ಅನ್ನಪ್ರಸಾದವನ್ನು ಪಡೆಯುತ್ತಾರೆ ಎಂದು ಅಂದಾಜಿಸಲಾಗಿದೆ. ಅನ್ನದಾನ ಮತ್ತು ಮಹಾ ಅನ್ನದಾನಾ ಎಂಬ ಎರಡು ಪ್ರತ್ಯೇಕ ಸೇವೆಗಳು ಇಲ್ಲಿ ಲಭ್ಯವಿದೆ. ಇದರ ಮೂಲಕ ಭಕ್ತರು ಅನ್ನದಾನ ಸೇವೆಯಲ್ಲಿ ಪೋಷಕರಾಗಿ ಭಾಗವಹಿಸಬಹುದು.
ವಿದ್ಯಾದಾನ ಸೇವೆ
[ಬದಲಾಯಿಸಿ]ದೇವಾಲಯವು ಐದು ಶಿಕ್ಷಣ ಸಂಸ್ಥೆಗಳನ್ನು ನಡೆಸಿ ಕೊಡುತ್ತದೆ : ಹಿರಿಯ ಪ್ರಾಥಮಿಕ ಪ್ರೌಢಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ. ಈ ದೇವಾಲಯವು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮಧ್ಯಾಹ್ನ ಊಟವನ್ನು ನೀಡುತ್ತದೆ; ಆದರೆ ಇದಕ್ಕೆ ಪ್ರತಿಯಾಗಿ ಏನನ್ನೂ ತೆಗೆದುಕೊಳ್ಳುವುದಿಲ್ಲ.
ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಹಿರಿಯ ಪ್ರಾಥಮಿಕ ಶಾಲೆ
[ಬದಲಾಯಿಸಿ]೧೯೧೬ ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಈ ಭಾಗದ ಸುಮಾರು ಸುಮಾರು ೭೦೦ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಶಿಕ್ಷಣವನ್ನು ಒದಗಿಸುತ್ತದೆ. ಆಸಕ್ತರಿಗೆ ಯಕ್ಷಗಾನವನ್ನು ಕಲಿಯುವ ಅವಕಾಶವೂ ಇದೆ. ಹಬ್ಬದ ದಿನಗಳಲ್ಲಿ ಈ ವಿದ್ಯಾರ್ಥಿಗಳು ಯಕ್ಷಗಾನವನ್ನು ನಡೆಸುತ್ತಾರೆ.
ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು
[ಬದಲಾಯಿಸಿ]೧೯೬೩ ರಲ್ಲಿ ಸ್ಥಾಪನೆಯಾದ ಶ್ರೀ ದುರ್ಗಾಪ್ರಮೇಶ್ವರಿ ಪ್ರೌಢಶಾಲೆಯು ೧೯೮೪ ರಲ್ಲಿ ಪದವಿ ಪೂರ್ವ ಕಾಲೇಜಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಸುಮಾರು ೧೦೦೦ ವಿದ್ಯಾರ್ಥಿಗಳು ವರ್ಷಂಪ್ರತಿ ಇಲ್ಲಿ ಅಧ್ಯಯನ ಮಾಡುತ್ತಾರೆ. ಅನೇಕರು ರಾಜ್ಯಮಟ್ಟದಲ್ಲಿ ಅನೇಕ ಶ್ರೇಯಾಂಕಗಳನ್ನು ಗಳಿಸಿದ್ದಾರೆ. ಜಿಲ್ಲೆಯಲ್ಲೇ ಮುಂಚೂಣಿಯಲ್ಲಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ಅನೇಕ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹವನ್ನು ನೀಡುತ್ತಾರೆ. ರಾಜ್ಯಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಇಲ್ಲಿಂದ ಹಲವರು ಹೊರಹೊಮ್ಮಿದ್ದಾರೆ. ಸಾಹಿತ್ಯ, ಸಂಗೀತ ಮತ್ತು ಇತರ ಲಲಿತಕಲೆಗಳಿಗೂ ನಿರಂತರ ಪ್ರೋತ್ಸಾಹವನ್ನು ನೀಡುತ್ತಾರೆ. ಅದಲ್ಲದೆ, ಇಲ್ಲಿನ ವಿದ್ಯಾರ್ಥಿಗಳು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಈ ರೀತಿಯಾಗಿ ದೇವಾಲಯವು ವಿದ್ಯಾರ್ಥಿಗಳ ಸಾಂಸ್ಕೃತಿಕ ಬೆಳವಣಿಗೆಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ.
ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜು
[ಬದಲಾಯಿಸಿ]ಇದನ್ನು ೧೯೮೮ರಲ್ಲಿ ಸ್ಥಾಪಿಸಲಾಯಿತು. ಸರ್ಕಾರದ ಅನುದಾನವನ್ನು ಪಡೆದುಕೊಳ್ಳದೆ, ಈ ಕಾಲೇಜು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಪ್ರಯೋಜನವನ್ನು ವಿಸ್ತರಿಸಲು ಸಹಕರಿಸುತ್ತಿದೆ. ವಿದ್ಯಾರ್ಥಿಗಳು ಯುನಿವರ್ಸಿಟಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನುಗಳಿಸುತ್ತಿರುವುದು, ಇವರ ಈ ಯೋಜನೆಯ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.
ಶ್ರೀ ದುರ್ಗಪರಮೇಶ್ವರಿ ಸಂಸ್ಕೃತ ಪ್ರತಿಷ್ಠಾನ
[ಬದಲಾಯಿಸಿ]ಈ ಪ್ರತಿಷ್ಠಾನದ ಅಡಿಪಾಯವನ್ನು ೧೯೯೨ ರಲ್ಲಿ ಸಂಸ್ಕೃತದಲ್ಲಿ ಉನ್ನತ ಅಧ್ಯಯನ ಮತ್ತು ಸಂಶೋಧನೆಗಾಗಿ, ಮುಂಬೈನ ಸಂಜೀವಿನಿ ಟ್ರಸ್ಟ್ ನಿಂದ ಉದಾರವಾಗಿ ದೊರಕಿದ ಹೊಸ ಕಟ್ಟಡದಲ್ಲಿ ನಿರ್ಮಿಸಲಾಯಿತು. ಈ ಸ್ನಾತಕೋತ್ತರ ಕೇಂದ್ರವು ಎಸ್.ಡಿ.ಪಿ.ಟಿ ಪ್ರಥಮ ದರ್ಜೆ ಕಾಲೇಜಿನ ಒಂದು ವಿಭಾಗವಾಗಿದೆ. ಒಂದು ಪ್ರಮಾಣಪತ್ರ ಕೋರ್ಸ್, ವೇದ ತಂತ್ರಾಗಮನದಲ್ಲಿ ಡಿಪ್ಲೊಮಾ ಕೋರ್ಸ್ ಮತ್ತು Ph.D. ಗೆ ಸೌಲಭ್ಯಗಳನ್ನೂ ಹೊಂದಿರುವ ಸಂಸ್ಕೃತ M.A. ಕೋರ್ಸ್ ಇಲ್ಲಿ ನೀಡಲಾಗುತ್ತದೆ. ಈ ಪ್ರತಿಷ್ಠಾನವು ಮಂಗಳೂರು ವಿಶ್ವವಿದ್ಯಾಲಯದಿಂದ ಮನ್ನಣೆ ಪಡೆದಿದೆ ಮತ್ತು ಅನೇಕ ಶ್ರೇಯಾಂಕಗಳನ್ನು ಪಡೆದುಕೊಂಡಿದೆ. ಇಲ್ಲಿ ಅಧ್ಯಯನ ಮತ್ತು ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಈ ಮೂಲಕ ಸಂಸ್ಕೃತ ಅಧ್ಯಯನಕ್ಕೆ ಪ್ರೋತ್ಸಾಹವನ್ನು ನೀಡುತ್ತಾರೆ. ಅದಲ್ಲದೆ ಈ ಪ್ರತಿಷ್ಠಾನವು ವೈದಿಕ ಮತ್ತು ಶಾಸ್ತ್ರೀಯ ಅಧ್ಯಯನಗಳಿಗೆ ಹೆಚ್ಚು ಮಹತ್ವವನ್ನು ಪಡೆದಿದೆ.
ಯಕ್ಷಗಾನ ಸೇವೆ
[ಬದಲಾಯಿಸಿ]ಶ್ರೀ ಕಟೀಲು ಯಕ್ಷಗಾನ ಮೇಳ ಒಂದು ಪ್ರಸಿದ್ಧ ಯಕ್ಷಗಾನ ತಂಡ. ಕಟೀಲು ಮೇಳ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಈ ಯಕ್ಷಗಾನ ತಂಡವು ಒಂದು ಪ್ರಮುಖ ‘ಹರಕೆ ಸೇವಾ’ ತಂಡವಾಗಿದೆ.
ಆಸೆ ಈಡೇರಿಸುವ ಸಲುವಾಗಿ ಅಥವಾ ಒಂದು ಸೇವೆಯಾಗಿ ಯಕ್ಷಗಾನದ ಪ್ರದರ್ಶನವನ್ನು, ಪ್ರತಿಜ್ಞೆ (ಹರಕೆ) ಮಾಡುವ ಭಕ್ತರ ಕೋರಿಕೆಯ ಮೇರೆಗೆ ಏರ್ಪಡಿಸಲಾಗುತ್ತದೆ. ಕಟೀಲಿನ ಅಧಿದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಸಂಗೀತ, ನೃತ್ಯ ಮತ್ತು ಯಕ್ಷಗಾನವನ್ನು ಬಹಳ ಇಷ್ಟಪಡುತ್ತಾರೆ. ಕಟೀಲು ಮೇಳವನ್ನು ೧೯ನೇ ಶತಮಾನದ ಮಧ್ಯದಲ್ಲಿ ಸ್ಥಾಪಿಸಲಾಯಿತು ಮತ್ತು ಭಕ್ತರ ಬೆಂಬಲದೊಂದಿಗೆ ಇನ್ನೂ ಉತ್ತಮವಾಗಿ ನಡೆಯುತ್ತಿದೆ. ಪ್ರದರ್ಶನಗಳಿಗೆ ಬೇಡಿಕೆ ಹೆಚ್ಚಾದಾಗ ೧೯೮೦ರಲ್ಲಿ ಹೊಸ ಎರಡು ತಂಡಗಳನ್ನು ಪ್ರಾರಂಭಿಸಲಾಯಿತು. ಈಗ ಕಟೀಲು ದೇವಸ್ಥಾನವು ಅದರ ಹೆಸರಿನಲ್ಲಿ ಆರು ಪೂರ್ಣ ಪ್ರಮಾಣದ ಯಕ್ಷಗಾನ ತಂಡಗಳನ್ನು ಹೊಂದಿದೆ! ಅದು ಪಡೆದಿರುವ ಜನಬೆಂಬಲ ಮತ್ತು ಜನಪ್ರಿಯತೆಯು ಅಂತಹದ್ದಾಗಿದೆ. ಜಿಲ್ಲೆಯ ಎಲ್ಲ ಪ್ರಸಿದ್ಧ ಯಕ್ಷಗಾನ ಕಲಾವಿದರು ಈ ತಂಡದಲ್ಲಿ ಸೇವೆ ಸಲ್ಲಿಸಿದ್ದಾರೆ. ಬಯಲಾಟ ಪ್ರದರ್ಶನಗಳಲ್ಲಿ ಶ್ರೀ ದೇವಿಯು ತನ್ನ ಒಂದು ಭಾಗವನ್ನು ಪ್ರದರ್ಶಿಸುತ್ತಾಳೆ ಎಂದು ಭಕ್ತರು ಆಳವಾಗಿ ನಂಬುತ್ತಾರೆ. ಅಂತಹ ಸೇವೆಯನ್ನು ಮಾಡುವ ಮೂಲಕ ಭಕ್ತರು ತಮ್ಮ ಎಲ್ಲಾ ಆಸೆಗಳನ್ನು ಈಡೇರಿಸುತ್ತಾರೆ. ತಂಡದ ಪ್ರವಾಸದ ಮುಖ್ಯ ಕ್ಷೇತ್ರಗಳೆಂದರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆ. ಸಾಮಾನ್ಯವಾಗಿ, ತಂಡವು ನವೆಂಬರ್ ಮಧ್ಯದಲ್ಲಿ ತನ್ನ ಸೇವಾ ಆಟದ ಪ್ರವಾಸವನ್ನು ಪ್ರಾರಂಭಿಸುತ್ತದೆ ಮತ್ತು ಪ್ರತಿ ವರ್ಷ ಮೇ ೨೫ ರಂದು ಕೊನೆಗೊಳ್ಳುತ್ತದೆ.
ಕಟೀಲೇಶ್ವರಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದೇವಾಲಯದ ಪ್ರಧಾನ ದೇವತೆಯಾದ ಶ್ರೀ ದೇವಿಯು ಸಂಗೀತ ಮತ್ತು ನೃತ್ಯದಂತಹ ಲಲಿತಕಲೆಗಳಲ್ಲಿ ಬಹಳ ಆಸಕ್ತಿ ಹೊಂದಿದವಳು. ಅದರಲ್ಲೂ ಯಕ್ಷಗನ ತಾಯಿಯ ಅಚ್ಚುಮೆಚ್ಚಿನದ್ದು. ಆರಂಭದಲ್ಲಿ ‘ಕಟೀಲು ಶ್ರೀ ದುರ್ಗಪರಮೇಶ್ವರಿ ಯಕ್ಷಗಾನ ಮಂಡಳಿ’ ಎಂಬ ಹೆಸರಿನ ಯಕ್ಷಗಾನ ತಂಡವಿತ್ತು. ಪವಿತ್ರ ಕ್ಷೇತ್ರದ ಮೇಲಿನ ನಂಬಿಕೆಯಿಂದ ಭಕ್ತರು ಯಕ್ಷಗಾನ ನಾಟಕದ ಪ್ರದರ್ಶನವನ್ನು ಪ್ರಾಯೋಜಿಸುತ್ತಿದ್ದರು. ಅವರು ತಂಡವನ್ನು ತಮ್ಮ ಸ್ಥಳಕ್ಕೆ ಕರೆತಂದು ರಾತ್ರಿಯ ಪ್ರದರ್ಶನಕ್ಕೆ ತಾಯಿಗಯ ಸೇವೆಯಾಗಿ ಒಳ್ಳೆಯ ವ್ಯವಸ್ಥೆ ಮಾಡುತ್ತಿದ್ದರು. ವರ್ಷಗಳು ಉರುಳಿದಂತೆ ಅಂತಹ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು ಮತ್ತು ಒಂದೇ ತಂಡಕ್ಕೆ ಈ ಹೆಚ್ಚುತ್ತಿರುವ ಸಂಖ್ಯೆಯ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹಾಗಾಗಿ ತಂಡಗಳ ಸಂಖ್ಯೆ ಪ್ರಸ್ತುತ ಆರಕ್ಕೆ ಹೆಚ್ಚಾಗಿದೆ. ಇನ್ನೂ, ಸುಮಾರು ಹತ್ತು ವರ್ಷಗಳ ಪ್ರದರ್ಶನಗಳು ಮುಂಚಿತವಾಗಿ ಕಾಯ್ದಿರಿಸಲ್ಪಟ್ಟಿವೆ. ಕ್ಷೇತ್ರವು ‘ಪೌರಾಣಿಕ’ ವಿಷಯಗಳನ್ನು ಮಾತ್ರ ಆಡಿ ತೋರಿಸುವ ಸಂಪ್ರದಾಯಕ್ಕೆ ಅಂಟಿಕೊಂಡಿದೆ. ಆ ಮೂಲಕ ಪುರಾಣ ಸಾಹಿತ್ಯ ಮತ್ತು ಭಾರತೀಯ ಸಂಸ್ಕೃತಿಯ ಜ್ಞಾನವನ್ನು ಪ್ರಸಾರ ಮಾಡಲು ಮತ್ತು ಭಕ್ತರನ್ನು ರಂಗ ನೃತ್ಯ ಮತ್ತು ಸಂಗೀತದಲ್ಲಿ ಆಸಕ್ತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
ಈ ದೇವಾಲಯವು ಭಾರತೀಯ ಸಂಸ್ಕೃತಿಯ ಪ್ರಚಾರದ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ತಂಡಗಳ ವಾರ್ಷಿಕ ಪ್ರವಾಸವು ದೇವಾಲಯದ ರಥಬೀದಿಯಲ್ಲಿ ನಿರ್ಮಿಸಲಾಗುವ ಆರು ವೇದಿಕೆಗಳಲ್ಲಿ ವರ್ಷದ ಮೊದಲ ಸೇವಾ-ಪ್ರದರ್ಶನದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಇದು ಬೇಸಿಗೆಯ ಅಂತ್ಯದಲ್ಲಿ ಕೊನೆಗೊಳ್ಳುತ್ತದೆ.
ಶ್ರೀ ದುರ್ಗಾ ಮಕ್ಕಳ ಮೇಳ
[ಬದಲಾಯಿಸಿ]ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯನ್ನು ಹಂಚಲು ದೇಗುಲದ ಅರ್ಚಕರಾದ ಹರಿ ಅಸ್ರಣ್ಣರ ನೇತೃತ್ವದಲ್ಲಿ ದುರ್ಗಾ ಮಕ್ಕಳ ಮೇಳವನ್ನು ೨೦೦೮ರಲ್ಲಿ ಗಾಲಾ ಪ್ರಾರಂಭಿಸಲಾಯಿತು.
ಯಕ್ಷಗಾನವು ವಿಶಿಷ್ಟ ಸಾಹಿತ್ಯ, ಸಂಗೀತ, ನೃತ್ಯ, ನಟನೆ, ವೇಷಭೂಷಣ ಮತ್ತು ಮುಖವರ್ಣಿಕೆಯ ಮೂಲಕ ಕರಾವಳಿಯ ಒಂದು ಹೆಮ್ಮೆಯ ಕಲೆಯಾಗಿದೆ. ಈ ವಿಶಿಷ್ಟ ಕಲೆಯ ವಿವಿಧ ಅಂಶಗಳನ್ನು ಒಂದು ವ್ಯವಸ್ಥಿತ ಮತ್ತು ಶಿಸ್ತಿನಿಂದ ಅಧ್ಯಯನವನ್ನು ಮಾಡುವ ಉದ್ದೇಶದಿಂದ ಮತ್ತು ಅದರಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡುವ ಸಲುವಾಗಿ ಶ್ರೀ ದುರ್ಗಾ ಮಕ್ಕಳ ಮೇಳವನ್ನು ಪ್ರಾರಂಭಿಸಲಾಯಿತು. ಭಾಗವತಿಕೆ (ಹಾಡುವುದು), ಚೆಂಡೆ , ಮದ್ದಳೆ (ಚರ್ಮದ ವಾದ್ಯಗಳು) ನೃತ್ಯ ಮತ್ತು ಮುಖವರ್ಣಿಕೆ ಇದೆಲ್ಲಾ ವಿಷಯದ ಬಗ್ಗೆ ಪ್ರತ್ಯೇಕವಾಗಿ ತರಬೇತಿಯನ್ನು ನೀಡಲಾಗುತ್ತದೆ. ಯಕ್ಷಗಾನ ಪ್ರಸಂಗದ ಬಗ್ಗೆ ಮಾಹಿತಿ, ಅದರ ನಿರೂಪಣೆ, ಪುರಾಣ ಮತ್ತು ಮಹಾಕಾವ್ಯಗಳ ಅಧ್ಯಯನವನ್ನೂ ಮಾಡಲಾಗುತ್ತದೆ. ಯಕ್ಷಗಾನದ ಪ್ರತ್ಯೇಕ ಗ್ರಂಥಾಲಯವು ಇಲ್ಲಿದೆ. ಸಾಂಪ್ರದಾಯಿಕ ವೇಷಭೂಷಣ ಮತ್ತು ಅಲಂಕಾರಿಕ ಲೇಖನಗಳ ಸಂಗ್ರಹವು ಈ ಪಾಠಶಾಲೆಯ ಹೆಮ್ಮೆಯಾಗಿದೆ. ವಿದ್ವಾಂಸರು ಮತ್ತು ಈ ಕ್ಷೇತ್ರದ ಅನುಭವಿಗಳಿಂದ ವಿಶೇಷ ಕಾರ್ಯಾಗಾರಗಳು, ಅನುಷ್ಠಾನದ ಕಲಾವಿದರಿಂದ ವಿಚಾರಗೋಷ್ಠಿಗಳು, ಉಪನ್ಯಾಸಗಳು ಮತ್ತು ಪ್ರದರ್ಶನಗಳೂ ಪಠ್ಯಕ್ರಮದ ಭಾಗವಾಗಿದೆ. ಯಕ್ಷಗಾನ ಕಲೆಯ ಎಲ್ಲ ಮೂಲಭೂತ ತರಬೇತಿ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶವಿದೆ.
ಮಾರ್ಗಸೂಚಿ
[ಬದಲಾಯಿಸಿ]- ಮಂಗಳೂರಿನಿಂದ ೨೯ ಕಿ.ಮೀ.
- ಉಡುಪಿಯಿಂದ ೪೫ ಕಿ.ಮೀ.
- ಧರ್ಮಸ್ಥಳದಿಂದ ೭೫ ಕಿ.ಮೀ.
- ಮೂಡುಬಿದಿರೆಯಿಂದ ೨೨ ಕಿ.ಮೀ.
- ನೆಲ್ಲಿತೀರ್ಥ ಗುಹಾದೇವಾಲಯದಿಂದ ೮ ಕಿ.ಮೀ.
- ಬಪ್ಪನಾಡಿನಿಂದ ೧೪ ಕಿ.ಮೀ.
- ಹತ್ತಿರದ ವಿಮಾನ ನಿಲ್ದಾಣ: ಬಜ್ಪೆ ವಿಮಾನ ನಿಲ್ದಾಣ (೧೫ ಕಿ.ಮೀ)
- ಹತ್ತಿರದ ರೈಲ್ವೆ ನಿಲ್ದಾಣ: ಮುಲ್ಕಿ ರೈಲ್ವೇ ನಿಲ್ದಾಣ (೯.೮ ಕಿ.ಮೀ)
ರಸ್ತೆ ಮಾರ್ಗ
[ಬದಲಾಯಿಸಿ]ಕಟೀಲು ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದೆ.[೨]
1. ಮಂಗಳೂರು - ಬಜ್ಪೆ - ಕಟೀಲು (೨೫ ಕಿ.ಮೀ)
2. ಉಡುಪಿ - ಮುಲ್ಕಿ - ಕಿನ್ನಿಗೋಳಿ - ಕಟೀಲು (೪೫ ಕಿ.ಮೀ)
3. ಮೂಡಬಿದಿರೆ - ಕಿನ್ನಿಗೋಳಿ - ಕಟೀಲು (೨೨ ಕಿ.ಮೀ)
4. ಬಿ ಸಿ ರೋಡ್ - ಕೈಕಂಬ - ಬಜ್ಪೆ - ಕಟೀಲು (೩೫ ಕಿಮೀ)
ಉಲ್ಲೇಖಗಳು
[ಬದಲಾಯಿಸಿ]