ವಿಷಯಕ್ಕೆ ಹೋಗು

ಕಟ್ಟಡದ ಸಾಮಗ್ರಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Abhudabi 1.jpg
'ಶೇಖ್ ಜಾಯೆದ್ ಮಸೀದಿ'

ಕಟ್ಟಡದ ಸಾಮಗ್ರಿಗಳು : ಮಣ್ಣು, ಮರ, ಕಲ್ಲು, ಮರಳು ಇವು ಆದಿಕಾಲದಲ್ಲಿ ಬಳಸಿದ ವಸ್ತುಗಳು. ಸುಲಭ ಹಾಗೂ ಸಮೀಪ ಲಭ್ಯತೆಯೇ ಇದಕ್ಕೆ ಕಾರಣ. ಒಂದೊಂದು ಉದ್ದೇಶಕ್ಕಾಗಿ ಆರಿಸಿದ ಸಾಮಗ್ರಿಗಳೂ ಅವನ್ನು ಬಳಸುವ ಕ್ರಮವೂ ತಪ್ಪುಗಳನ್ನು ತಿದ್ದಿಕೊಂಡು ಕಾಲಕ್ರಮದಲ್ಲಿ ಸಾವಕಾಶವಾಗಿ ಬಳಕೆಗೆ ಬಂದಿವೆ. ಇದರಿಂದ ಕ್ರಮೇಣ ಸ್ಥಳೀಯ ಕೆಲಸಗಾರರ ಅನುಭವದ ಮೇಲೆ ಕೆಲವು ಸಾಂಪ್ರದಾಯಿಕ ಪದ್ಧತಿಗಳು ರೂಢಿಗೆ ಬಂದಿವೆ.

ಹೊಸ ಸಾಮಗ್ರಿಗಳು ಬಳಕೆ

[ಬದಲಾಯಿಸಿ]

ನಾಗರಿಕತೆ ಬೆಳೆದಂತೆ ವಿವಿಧ ನಮೂನೆಯ ಕಟ್ಟಡಗಳನ್ನು ತ್ವರೆಯಿಂದ ಕಟ್ಟಬೇಕಾಗಿ ಬಂದಾಗ ಅನೇಕ ಹೊಸ ಸಾಮಗ್ರಿಗಳು ಬಳಕೆಗೆ ಬಂದುವು. ಕೆಲವನ್ನು ಸ್ಥಳದಲ್ಲಿಯೇ ಸಿಕ್ಕುವ ಸಾಮಗ್ರಿಗಳಿಂದ ದೊಡ್ಡರೀತಿಯಲ್ಲಿ ಯಂತ್ರಗಳಲ್ಲಿ ತಯಾರಿಸಲಾಯಿತು. ಸಂಚಾರ ಸೌಕರ್ಯಗಳು ಹೆಚ್ಚಿದ ಹಾಗೆ ಒಂದು ಜಾಗದಲ್ಲಿ ಸಂಪ್ರದಾಯವಾಗಿ ಬಳಸದೆ ಇದ್ದ ಸಾಮಗ್ರಿಗಳನ್ನು ದೂರದೇಶಗಳಿಂದ ಸಾಗಿಸಿ ಬಳಸಿದ್ದಾಯಿತು. ಕಟ್ಟಡವನ್ನು ಸಾಂಪ್ರದಾಯಿಕ ರೀತಿಯಲ್ಲಿ ಕಟ್ಟುವಾಗ ಆಗುವ ಸಾವಕಾಶಕ್ಕೆ ಎಡೆಗೊಡಬಾರದೆಂದು ಎಲ್ಲಿಯೋ ಕಾರ್ಖಾನೆಗಳಲ್ಲಿ ತಯಾರಿಸಿದ ಕಟ್ಟಡದ ಭಾಗಗಳನ್ನು ಉಪಯೋಗಿಸಿದ್ದಾಯಿತು. ಸಂಶೋಧನಾಲಯಗಳಲ್ಲಿ ಶಾಸ್ತ್ರೀಯವಾಗಿ ಈ ಸಾಮಗ್ರಿಗಳನ್ನು ಪರೀಕ್ಷಿಸಿ ಇವುಗಳ ಉಪಯೋಗದ ವಿಚಾರದಲ್ಲಿ ಕೆಲವು ನಿರ್ದೇಶಗಳನ್ನು ತಯಾರಿಸಲಾಯಿತು. ಸಂವಿಧಾನದ ನಿಯಮಗಳ ಸ್ಥಾಪನೆಯಾಯಿತು. ನಗರಗಳಲ್ಲಿ ಹಳೆಯ ಪದ್ಧತಿಗಳು ಮಾಯವಾದುವು. ಹೊಸ ಸಾಮಗ್ರಿಗಳನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷಿಸುವುದು ಬಳಕೆಗೆ ಬಂತು. ಬೇಕಾಗುವ ಸಾಮಗ್ರಿಗಳನ್ನು ಧಾರಾಳವಾಗಿ ಎಲ್ಲೆಲ್ಲಿಯೂ ದೊರೆಯುವ ಸುಣ್ಣಕಲ್ಲು, ಮಣ್ಣು, ಮರಳು, ಲೋಹದ ಅದಿರುಗಳು ಮುಂತಾದ ಕಚ್ಚ ಮಾಲುಗಳಿಂದ ಈಗ ತಾಂತ್ರಿಕವಾಗಿ ತಯಾರಿಸುತ್ತಾರೆ.[]

ಉಪಯೋಗಿಸುವ ಸಾಮಗ್ರಿಗಳು

[ಬದಲಾಯಿಸಿ]

ಮರ, ಇಟ್ಟಿಗೆ, ಕಲ್ಲು, ಸುಣ್ಣ, ಮರಳು, ಸಿಮೆಂಟ್ ಹಂಚು, ಕಬ್ಬಿಣ-ಇವು ಸಾಮಾನ್ಯವಾಗಿ ಕಟ್ಟಡಗಳಲ್ಲಿ ಉಪಯೋಗಿಸುವ ಸಾಮಗ್ರಿಗಳು. ಒಂದೊಂದಕ್ಕೂ ಕೆಲವು ವಿಶೇಷ ಗುಣಗಳಿವೆ. ಮೇಲೆಬರುವ ತೂಕವನ್ನು ಒಂದೊಂದು ತಡೆಯುವ ಶಕ್ತಿಯೂ ಬೇರೆಬೇರೆಯಾಗಿರುತ್ತದೆ. ಒಂದು ಸಾಮಗ್ರಿಯ ಮೇಲೆ ಹೊರೆಬಿದ್ದಾಗ ಅದು ಮೂರು ವಿಧಗಳಲ್ಲಿ ಪ್ರತಿಕ್ರಿಯೆ ತೋರ್ಪಡಿಸಬಹುದು : 1 ಅರಚಬಹುದು (ಕಂಪ್ರೆಶನ್), 2 ಎಳೆದು ಸೀಳಬಹುದು (ಟೆಯನ್), 3 ಬಾಗಬಹುದು (ಬೆಂಡಿಂಗ್). ಆದರೆ ಸುಲಭವಾಗಿ ಬಳುಕುವ ಇಲ್ಲವೆ ಎಳೆತದಲ್ಲಿ ಸೀಳುವ ಸಾಮಗ್ರಿ ಹೆಚ್ಚು ಒತ್ತಡವನ್ನು ತಡೆಯಬಹುದು. ಹಾಗೆಯೇ ಕೇವಲ ಎಳೆತದಲ್ಲಿ ಸೀಳುವ ಸಾಮಗ್ರಿ ಬಳಕುವ ತ್ರಾಸವನ್ನು ತಡೆಯಬಹುದು. ಆದ್ದರಿಂದ ಕಟ್ಟಡದ ಯಾವ ಭಾಗದಲ್ಲಿ ಯಾವ ಸಾಮಗ್ರಿಯನ್ನು ಹೆಚ್ಚು ಅನುಕೂಲವಾಗುವಂತೆ ಉಪಯೋಗಿಸಬಹುದು ಎನ್ನುವುದು ಅದರ ಆಕಾರ ಮತ್ತು ಮೇಲೆ ಬರುವ ತ್ರಾಸದ ನಮೂನೆಯ ಮೇಲೆ ಹೋಗುತ್ತದೆ. ಒತ್ತಡವನ್ನೂ ಎಳೆತವನ್ನೂ ತಡೆಯಬಲ್ಲ ಮರ, ಉಕ್ಕು, ಪ್ರಬಲಿತ ಕಾಂಕ್ರೀಟ್-ಇವನ್ನು ಕಂಬಗಳು, ತೊಲೆಗಳು ಮತ್ತು ಗರ್ಡರುಗಳಲ್ಲಿ ಉಪಯೋಗಿಸಬೇಕು. ಎಷ್ಟು ಒತ್ತಡವನ್ನಾದರೂ ತಡೆದು ಎಳೆತವನ್ನು ತಡೆಯಲೇ ಆರದ ಕಲ್ಲುಗಾರೆ, ಇಟ್ಟಿಗೆ, ಕಾಂಕ್ರೀಟ್ ಇವನ್ನು ಗೋಡೆಗಳನ್ನೂ ಕಮಾನುಗಳನ್ನೂ ಕಟ್ಟುವುದಕ್ಕೆ ಉಪಯೋಗಿಸಬೇಕು.ಒಂದು ಕಟ್ಟಡದಲ್ಲಿ ಉಪಯೋಗಿಸುವ ಯಾವ ಸಾಮಗ್ರಿಯ ಮೇಲೂ ಅದು ಒಡೆದುಹೋಗುವಷ್ಟು ತೂಕವನ್ನು ಹೇರುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಎಲ್ಲ ಸಾಮಗ್ರಿಗಳ ಮೇಲೂ ತೂಕ ಮಿತಿಮೀರುತ್ತಿದ್ದಂತೆ ಅವು ಬಿರುಕುಬಿಡುತ್ತವೆ. ವಿರೂಪವಾಗುತ್ತವೆ. ಬಳುಕುತ್ತವೆ. ಅದಕ್ಕಾಗಿ ಸಾಮಗ್ರಿಗಳಲ್ಲಿರುವ ಗುಣಗಳಲ್ಲಿರುವ ವ್ಯತ್ಯಾಸಗಳಿಗೆ ತಕ್ಕಹಾಗೆ ತೂಕವನ್ನು ಬದಲಾಯಿಸಬೇಕಾಗುತ್ತದೆ.[]

ಈಗ ಸಾಮಾನ್ಯವಾಗಿ ಕಟ್ಟಡಗಳಲ್ಲಿ ಉಪಯೋಗಿಸುತ್ತಿರುವ ಕೆಲವು ಸಾಮಗ್ರಿಗಳನ್ನೂ ಅವುಗಳ ಗುಣಗಳನ್ನೂ ನೋಡಬಹುದು.

ಇದು ಎಲ್ಲೆಲ್ಲಿಯೂ ದೊರೆಯುವುದರಿಂದಲೂ ಇದರ ವಿಶೇಷ ಗುಣಗಳಿಂದಲೂ ಪ್ರಪಂಚದ ಕಟ್ಟಡದ ಸಾಮಗ್ರಿಗಳಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ಇದನ್ನು ಇತಿಹಾಸದ ಪ್ರಾರಂಭದಿಂದಲೂ ಮಾನವ ಉಪಯೋಗಿಸುತ್ತಿದ್ದಾನೆ. ಇದು ಹಗುರವಾಗಿದೆ. ತೇಗದ ಮರದ ತೂಕ ಒಂದು ಸಲೆ ಮೀ ಗೆ 20.25 ಕಿಗ್ರಾಂ ಎಳೆತದ ತ್ರಾಸವನ್ನು ಇದು ತಡೆಯಬಲ್ಲದು; ಮರಗೆಲಸ ಸುಲಭ. ಇದನ್ನು ಕಂಬ, ತೊಲೆ, ದೂಲ, ಚೌಕಟ್ಟು, ಉದ್ದಸರ, ಹಲಗೆ-ಇವುಗಳಿಗೆ ಉಪಯೋಗಿಸಬಹುದು. ಕಟ್ಟಡಗಳಲ್ಲಿ ಮರದ ಬಾಳಿಕೆಯೂ ಉಪಯೋಗವೂ ಬೇಕಾದ ಗುಣಗಳುಳ್ಳ ಮರವನ್ನು ಆಯ್ಕೆ ಮಾಡಿ ಹದಮಾಡುವುದರ ಮೇಲೂ ಕ್ರಿಮಿಗಳು ತಿನ್ನದ ಹಾಗೆ ಕಾಪಾಡುವುದರ ಮೇಲೂ ನಿಂತಿರುತ್ತವೆ. ತೇಗ, ಹಲಸು, ಬೇವು, ಮಾವು, ಬೀಟೆ, ಹೊನ್ನೆ, ನಂದಿ, ಮತ್ತಿ, ಹುಣಸೆ, ಜಾಂಬೆ ಮೊದಲಾದ ಮರಗಳನ್ನು ಕಟ್ಟಡಗಳಲ್ಲಿ ಉಪಯೋಗಿಸುತ್ತಾರೆ.

ಇಟ್ಟಿಗೆ

[ಬದಲಾಯಿಸಿ]

ನೀರಿನಲ್ಲಿ ಕಲಸಿದ ಒಳ್ಳೆಯ ಮಣ್ಣನ್ನು ಅಚ್ಚುಗಳಲ್ಲಿ ಹೊಯ್ದು, ಒಣಗಿಸಿ, ಭಟ್ಟಿಗಳಲ್ಲಿ ಸುಟ್ಟು ಇಟ್ಟಿಗೆಯನ್ನು ತಯಾರಿಸುತ್ತಾರೆ. ಬಲಿಷ್ಠವಾದ ಇಟ್ಟಿಗೆಗಳನ್ನು ಯಂತ್ರಗಳಲ್ಲಿ ಅಚ್ಚುಹೊಯ್ದು ಯಂತ್ರದ ಒಲೆಗಳಲ್ಲಿ ಸುಡುತ್ತಾರೆ. ಸಾಮಾನ್ಯವಾಗಿ ಇಟ್ಟಿಗೆ 229 ಮಿಮೀ ಉದ್ದ 111 ಮಿಮೀ ಅಗಲ 57 ಮಿಮೀ ಎತ್ತರವಾಗಿರುತ್ತದೆ. ಇಟ್ಟಿಗೆಗಳನ್ನು ಎಲ್ಲ ಬಗೆಯ ಕಟ್ಟಡಗಳಲ್ಲಿಯೂ ಉಪಯೋಗಿಸುತ್ತಾರೆ. ಸು. 38 ಮಿಮೀ ಅಳತೆಗೆ ಒಡೆದ ಇಟ್ಟಿಗೆಗೆ ಸೂರ್ಕಿ ಎನ್ನುತ್ತಾರೆ. ನಮ್ಮ ದೇಶದಲ್ಲಿ ಕೃಷ್ಣರಾಜಸಾಗರ ಮೊದಲಾದ ನೀರಾವರಿಯ ಕಟ್ಟೆಗಳನ್ನು ಸೂರ್ಕಿಯನ್ನು ಸುಟ್ಟ ಸುಣ್ಣದೊಂದಿಗೆ ನಯವಾಗಿ ಅರೆದು ತಯಾರಿಸಿದ ಸೂರ್ಕಿ ಗಾರೆಯಿಂದ ಕಟ್ಟಿದ್ದಾರೆ.

ಕಲ್ಲು

[ಬದಲಾಯಿಸಿ]

ಇದನ್ನು ಭೂಗರ್ಭದ ರಚನೆ ಮತ್ತು ರಾಸಾಯನಿಕ ಸಂಯೋಜನೆಯ ಪ್ರಕಾರ ವರ್ಗೀಕರಿಸುತ್ತಾರೆ. ಗ್ರ್ಯಾನೈಟ್ ಕಲ್ಲಿನಲ್ಲಿ ಸಿಲಿಕಾನ್ ಡೈ ಆಕ್ಸೈಡ್ ಹೆಚ್ಚಾಗಿದೆ. ಅಮೃತಶಿಲೆಯಲ್ಲಿ ಸುಣ್ಣ ಹೆಚ್ಚಾಗಿದೆ. ಲ್ಯಾಟರೈಟಿನಲ್ಲಿ ಮಣ್ಣು ಹೆಚ್ಚಾಗಿದೆ. ಒಳ್ಳೆಯ ಕಲ್ಲಿನ ಗುಣಗಳು ಮತ್ತು ಬಲವನ್ನು ಇಂಜಿನಿಯರು ತಿಳಿದಿರಬೇಕು. ಕಟ್ಟಡಗಳನ್ನು ಕಟ್ಟಲು ಗ್ರ್ಯಾನೈಟ್ (ಕಣಶಿಲೆ), ನೀಸ್, ಟ್ರ್ಯಾಪ್, ಬಸಾಲ್ಟ್‌, ಸುಣ್ಣಕಲ್ಲುಗಳು ಮತ್ತು ಮರಳುಕಲ್ಲುಗಳನ್ನು ಉಪಯೋಗಿಸುತ್ತಾರೆ. ಉಜ್ಜಿದಾಗ ಮೇಲ್ಮೈಗೆ ಹೊಳಪು ಬರುವ ಅಮೃತಶಿಲೆ, ಗ್ರ್ಯಾನೈಟ್ ಮತ್ತು ಕಪ್ಪು ಕಲ್ಲುಗಳನ್ನು ದೇವಾಲಯ ಮತ್ತು ಅರಮನೆಗಳನ್ನು ಕಟ್ಟಲು ಬಳಸುತ್ತಾರೆ. ನಯವಾದ ಕಂಬಗಳ ಪೀಠಗಳು, ಕಂಬಗಳು, ತಲೆಗಲ್ಲುಗಳು, ಕಟ್ಟಡದ ಮೂಲೆ ಕಲ್ಲುಗಳು, ಕಮಾನಿನ ಕಲ್ಲುಗಳು, ಇವನ್ನು ಹೆಚ್ಚಿನ ಶ್ರಮದಿಂದ ನುರಿತ ಕೆಲಸಗಾರರು ತಯಾರಿಸುತ್ತಾರೆ. ಕಟ್ಟಡಗಳ ಹೊರಭಾಗದಲ್ಲಿ ಉಪಯೋಗಿಸುವ ಕಲ್ಲುಗಳು ಬಿಸಿಲು, ಮಳೆ, ಗಾಳಿಗಳ ಹೊಡೆತದಿಂದ ಕಾಲಾನುಕ್ರಮದಲ್ಲಿ ಕ್ಷೀಣವಾಗುತ್ತವೆ.

ಸುಣ್ಣ

[ಬದಲಾಯಿಸಿ]

ಕ್ಯಾಲ್ಸಿಯಂ ಕಾರ್ಬೊನೇಟಿನೊಡನೆ ಕೊಂಚ ಮಣ್ಣು ಬೆರೆತು ಗೋಲಿಗಳಂತೆ ಇರುವ (ನಾಡ್ಯುಲ್ಸ್‌) ಸುಣ್ಣಕಲ್ಲು ನೈಸರ್ಗಿಕವಾಗಿ ನಮ್ಮ ದೇಶದಲ್ಲಿ ಹೊಲಗಳಲ್ಲಿ ಮಣ್ಣಿನೊಡನೆ ಬೆರೆತಿರುತ್ತದೆ. ಅದನ್ನು ಪಿಕಾಸಿಗಳಿಂದ ಸುಲಭವಾಗಿ ಅಗೆದು ತೆಗೆಯಬಹುದು. ನೀರಾವರಿಯ ಕೆಲಸಗಳಲ್ಲಿ ಇಂಜಿನಿಯರ್ ಉಪಯೋಗಿಸುವ ಸುಣ್ಣ ಇದರಿಂದ ಬರುತ್ತದೆ. ಕೆಲವು ಕಡೆಗಳಲ್ಲಿ ಸುಣ್ಣಕಲ್ಲು ದಿಮ್ಮಿಗಳ ರೂಪದಲ್ಲಿರುತ್ತದೆ. ಅದನ್ನೂ ಸುಲಭವಾಗಿ ಅಗೆದು ತೆಗೆಯಬಹುದು.

ಸುಣ್ಣದಲ್ಲಿ ಎರಡು ಬಗೆಗಳಿವೆ

[ಬದಲಾಯಿಸಿ]

ಒಂದು ಶುದ್ಧ ಸುಣ್ಣ, ಇನ್ನೊಂದು ಕೊಂಚ ಮಣ್ಣು ಬೆರೆತದ್ದು, ಶುದ್ಧ ಸುಣ್ಣವನ್ನು ಬಟ್ಟಿಯಿಂದ ತೆಗೆದು ನೀರಿನೊಂದಿಗೆ ಬೆರೆಸಿದರೆ ಅದು ಉಬ್ಬಿ ಗಾತ್ರದಲ್ಲಿ ಒಂದೂವರೆಯಷ್ಟಾಗುತ್ತದೆ. ಮಣ್ಣು ಬೆರೆತಿರುವ ಸುಣ್ಣಕ್ಕೆ ನೀರು ಬಿದ್ದಾಗ ರಾಸಾಯನಿಕವಾದ ಮಾರ್ಪಾಡಾಗುತ್ತದೆ. ಆಗ ಅದು ಗಟ್ಟಿಯಾಗುತ್ತದೆ. ಶುದ್ಧ ಸುಣ್ಣ ನೀರಿನಲ್ಲಿ ಹೀಗೆ ಗಟ್ಟಿಯಾಗುವುದಿಲ್ಲ. ಎರಡುಬಗೆಯ ಸುಣ್ಣಗಳಿಗೂ ಪ್ರತ್ಯೇಕವಾದ ಉಪಯೋಗಗಳಿವೆ.

ಸಮುದ್ರತೀರದ ವಸ್ತುಗಳು

[ಬದಲಾಯಿಸಿ]

ಸಮುದ್ರತೀರದಲ್ಲಿ ಹೇರಳವಾಗಿ ದೊರೆಯುವ ಕವಡೆ, ಶಂಖ, ಕಚ್ಚಾ ಹವಳ-ಇವನ್ನು ಸುಟ್ಟಾಗ ಅಚ್ಚಸುಣ್ಣ ದೊರೆಯುತ್ತದೆ. ಕರ್ನಾಟಕದ ಚನ್ನಪಟ್ಟಣ, ಬೀರೂರು ಮೊದಲಾದ ಅನೇಕ ಕಡೆಗಳಲ್ಲಿ ಕಟ್ಟಡಗಳಿಗೆ ಉಪಯೋಗಿಸುವ ಸುಣ್ಣ ವಿಶೇಷವಾಗಿ ಸಿಕ್ಕುತ್ತದೆ. ಕೆಲವು ಕಡೆಗಳಲ್ಲಿ ಸಿಕ್ಕುವ ಸುಣ್ಣದಲ್ಲಿ ಮರಳು, ಅಲ್ಯೂಮಿನಿಯಮ್ ಆಕ್ಸೈಡ್ ಮತ್ತು ಮ್ಯಾಗ್ನಿಸಿಯಂ ಕಾರ್ಬೊನೇಟ್ ಬೆರೆತಿರುತ್ತವೆ. ರಾಸಾಯನಿಕವಾಗಿ ಸೇರಿರದೆ ಇರುವ ಮರಳಿನ ಭಾಗ ಹೆಚ್ಚಾದರೆ ಅದನ್ನು ತೆಳುವಾದ ಸುಣ್ಣವೆನ್ನುತ್ತಾರೆ. ಮನೆಗಳಲ್ಲಿ ಗೋಡೆಗಳಿಗೆ ಬಳಿಯುವುದಕ್ಕೆ ಇದನ್ನು ಉಪಯೋಗಿಸಲಾಗುವುದಿಲ್ಲ.

ತಯಾರಿಸುವ ವಿಧಾನ

[ಬದಲಾಯಿಸಿ]

ಸುಟ್ಟ ಅಚ್ಚಸುಣ್ಣಕ್ಕೆ ನೀರನ್ನು ಬೆರೆಸಿದಾಗ ಅದು ಪುಡಿಯಾಗಿ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಆಗುತ್ತದೆ. ಅಚ್ಚಸುಣ್ಣಕ್ಕೆ ನೀರನ್ನು ಸೇರಿಸಿದಾಗ ವಿಶೇಷವಾದ ಶಾಖ ಉತ್ಪನ್ನವಾಗಿ ಬಿರುಕುಬಿಟ್ಟು ಸೀಳಿ ಶಬ್ದಮಾಡಿ ಗಾತ್ರದಲ್ಲಿ ಎರಡುಮೂರು ಪಟ್ಟು ಹೆಚ್ಚಿ ಪುಡಿಯಾಗಿ ನೀರಿನೊಂದಿಗೆ ಬೆರೆಯುತ್ತದೆ. ಇದು ಒಣಗಿದಾಗ ಕುಗ್ಗುತ್ತದೆ, ಬಿರಿಯುತ್ತದೆ, ಇದನ್ನು ತಪ್ಪಿಸಲು ಅದಕ್ಕೆ ಮೂರರಷ್ಟು ಮರಳನ್ನು ಬೆರೆಸಿ ಚರಕಿಗಳಲ್ಲಿ ಅರೆದು ಗಾರೆಯನ್ನು ತಯಾರಿಸುತ್ತಾರೆ. ಕಟ್ಟಡಗಳಲ್ಲಿ ಉಪಯೋಗಿಸುವ ಸುಣ್ಣಕ್ಕೆ ನೀರನ್ನು ಹೊಯ್ದು ಅದನ್ನು ಮೆತುವಾಗಿ ಮಾಡಿ ಗಾರೆಯ ಗೂಡಿಗೆ ಹಾಕಬೇಕು. ಮನೆಗಳಲ್ಲಿ ಇಟ್ಟಿಗೆ ಮತ್ತು ಕಲ್ಲಿನ ಗೋಡೆಗಳನ್ನು ಕಟ್ಟುವುದಕ್ಕೂ ಅವಕ್ಕೆ ಹೊರಗಡೆ ಗಿಲಾವು ಮಾಡುವುದಕ್ಕೂ ಈ ಗಾರೆಯನ್ನು ಬಳಸುತ್ತಾರೆ.ಗಾರೆಯನ್ನು ಗಿಲಾವಿಗೆ ಬಳಸುವಾಗ ಅದನ್ನು ರಾಶಿಹಾಕಿ ಮೇಲುಗಡೆ ಹೊಂಡ ಮಾಡಿ ನೀರನ್ನು ಕಟ್ಟಿ ಒಂದು ವಾರದವರೆಗೂ ಕೊಳೆಸಬೇಕು. ಇಲ್ಲವಾದರೆ ಗಿಲಾವಾದ ಗೋಡೆಗಳಲ್ಲಿ ಬೊಬ್ಬೆಗಳು ಬರುತ್ತವೆ. ಸುಣ್ಣದ ಗಾರೆ ನಿಧಾನವಾಗಿ ಗಾಳಿಯಿಂದ ಇಂಗಾಲಾಮ್ಲವನ್ನು ಹೀರಿ ಕ್ಯಾಲ್ಸಿಯಮ್ ಕಾರ್ಬೋನೇಟ್ ಆಗಿ ಗಟ್ಟಿಯಾಗುತ್ತದೆ. ಇದು ಸಾವಕಾಶವಾಗುವುದರಿಂದ ಕೆಲವು ಸಂದರ್ಭಗಳಲ್ಲಿ ಜೊತೆಗೆ ಕೊಂಚ ಸಿಮೆಂಟನ್ನು ಬೆರೆಸುತ್ತಾರೆ.ಜಿಪ್ಸಮ್ ಎಂಬ ಕ್ಯಾಲ್ಸಿಯಮ್ ಸಲ್ಫೇಟಿನಿಂದಲೂ ಅದು ಸಿಕ್ಕುವ ಕಡೆಗಳಲ್ಲಿ ಗಿಲಾವು ಮಾಡುತ್ತಾರೆ. ಇದನ್ನು ಕಾಯಿಸಿದಾಗ ಕೊಂಚ ನೀರನ್ನು ಕಳೆದುಕೊಂಡು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಆಗುತ್ತದೆ. ಇದಕ್ಕೆ ನೀರನ್ನು ಬೆರೆಸಿದರೆ ಬೇಗ ಗಟ್ಟಿಯಾಗಿ ಮತ್ತೆ ಜಿಪ್ಸಮ್ ಆಗುತ್ತದೆ. ಇಷ್ಟು ಬೇಗ ಗಟ್ಟಿಯಾಗುವ ಗಾರೆ ಕಟ್ಟಡದ ಕೆಲಸಕ್ಕೆ ಬೇಕಿಲ್ಲ. ಅದಕ್ಕಾಗಿ ಕೊಂಚ ಬೋರಾಕ್ಸನ್ನು ಬೆರೆಸಿ ನಿಧಾನವಾಗಿ ಗಟ್ಟಿಯಾಗುವಂತೆ ಮಾಡುತ್ತಾರೆ.ಕಲ್ಲುಗಾರೆ ಕಟ್ಟೆ ಮೊದಲಾದ ಕಡೆಗಳಲ್ಲಿ ಉಪಯೋಗಿಸುವ ಸುಣ್ಣದಲ್ಲಿ ಮರಳು, ದ್ರಾವಣವಾದ ಸಿಲಿಕ, ಶೇ. 10-ಶೇ. 30 ವರೆಗೆ ಅಲ್ಯೂಮಿನಿಯಂ ಆಕ್ಸೈಡ್, ಮ್ಯಾಗ್ನೀಸಿಯಂ ಕಾರ್ಬೊನೇಟ್ ಮತ್ತು ಜೇಡಿ ಮಣ್ಣು ಬೆರೆತಿರುತ್ತವೆ ನೀರಿನಲ್ಲಿದ್ದಾಗ ಗಟ್ಟಿಯಾಗುವ ಗುಣವನ್ನು ಸುಣ್ಣಕ್ಕೆ ಬೆರಕೆ ಪದಾರ್ಥಗಳು ಕೊಡುತ್ತವೆ. ಈ ಸುಣ್ಣಕ್ಕೆ ನೀರನ್ನು ಬೆರೆಸಿದಾಗ ಹೆಚ್ಚು ಶಾಖ ಉತ್ಪತ್ತಿಯಾಗುವುದಿಲ್ಲ. ಗಾತ್ರವೂ ಕೊಂಚವೇ ಹೆಚ್ಚಾಗುತ್ತದೆ. ಕುಗ್ಗುವುದಿಲ್ಲ, ಬಿರಿಯುವುದಿಲ್ಲ. ಇದು ಮಂಡ್ಯ, ಗಣಂಗೂರು, ಜೆಟ್ಟಿಹೊಂಡಿ ಮೊದಲಾದ ಕಡೆಗಳಲ್ಲಿ ಹೇರಳವಾಗಿ ದೊರೆಯುತ್ತದೆ. ಈ ಸುಣ್ಣಕಲ್ಲನ್ನು ಕೃಷ್ಣರಾಜಸಾಗರ ಮೊದಲಾದ ಕಟ್ಟೆಗಳ ಬಳಿ ವಿಶಿಷ್ಟವಾದ ಗೋಡೆಗಳನ್ನು ಕಟ್ಟಿ ಅವುಗಳ ನಡುವೆ 0.91ಮೀ ಅಂತರದಲ್ಲಿ 11ಕಿಗ್ರಾಂ ತೂಕದ ಕಂಬಿಗಳನ್ನು ಹರಡುತ್ತಾರೆ. ಬಟ್ಟಿ 6.06 ಮೀ ಉದ್ದ, 2ಮೀ ಅಗಲ, 0.91ಮೀ ಆಳವಾಗಿರುತ್ತದೆ. ಅದರ ಮೇಲಿನ ಮಟ್ಟದಲ್ಲಿ ಒಂದು ಬಟ್ಟಿಗೂ ಇನ್ನೊಂದಕ್ಕೂ ನಡುವೆ ಸುಣ್ಣ ಕಲ್ಲುಗಳನ್ನು ತುಂಬಲು 2ಮೀ ಜಗಲಿಯನ್ನು ಬಿಟ್ಟಿರುತ್ತಾರೆ. ಸುಣ್ಣಕಲ್ಲನ್ನು ಸುಡುವುದಕ್ಕೆ ಕಟ್ಟಿಗೆ, ಮರದ ಇದ್ದಲು ಮತ್ತು ಕೊಂಚ ಕಲ್ಲಿದ್ದಲು ಉಪಯೋಗಿಸುತ್ತಾರೆ. ಚೆನ್ನಾಗಿ ಸುಟ್ಟಮೇಲೆ ಆರುವುದಕ್ಕೆ ಬಿಟ್ಟು ಕೊಂಚ ಸುಣ್ಣವನ್ನು ತೆಗೆದು ನೀರಿನೊಳಕ್ಕೆ ಹಾಕಿ ಶೇ. 20ಕ್ಕಿಂತ ಹೆಚ್ಚಾಗಿ ಸಣ್ಣಗಂಟುಗಳು ಉಳಿಯದೆ ಹೋದರೆ ಸುಣ್ಣವನ್ನು ಕೂಡಿರುವ ಷೆಡ್ಡುಗಳಿಗೆ ಟ್ರಾಲಿಗಳ ಮೇಲೆ ರವಾನಿಸುತ್ತಾರೆ. ಗಂಟುಗಳು ಹೆಚ್ಚಾಗಿದ್ದರೆ ಸುಡದೆ ಇರುವ ಸುಣ್ಣವನ್ನು ಮತ್ತೆ ಸುಡಬೇಕಾಗುತ್ತದೆ. ಇಂದು ಸುಟ್ಟ ಸುಣ್ಣವನ್ನು 10 ದಿನಗಳೊಳಗೆ ಸಂಪುರ್ಣವಾಗಿ ಬಳಸಬೇಕು. ಸುಟ್ಟ ಸುಣ್ಣದ ಬಟ್ಟಿಗಳನ್ನು ಅವಶ್ಯವಾದಾಗ ಮಾತ್ರ ಇಳಿಸಿಕೊಳ್ಳಬೇಕು.

ಮರಳನ್ನು ವಿಶೇಷವಾಗಿ ಗಾರೆಯನ್ನೂ ಸಿಮೆಂಟ್ ಕಾಂಕ್ರೀಟನ್ನೂ ತಯಾರಿಸಲು ಉಪಯೋಗಿಸುತ್ತಾರೆ. ಮರಳಿನ ಕಣಗಳು ಚೂಪಾಗಿರಬಾರದು. ಅದರಲ್ಲಿ ಸುದ್ದೆಮಣ್ಣು ಬೆರೆತಿರಬಾರದು. ಸಮುದ್ರದ ಮರಳು ಹೇರಳವಾಗಿಯೂ ಗುಂಡಾಗಿಯೂ ಇದ್ದರೂ ಕ್ಷಾರದ ಉಪ್ಪುಗಳು ಇರುವುದರಿಂದ ಗಾಳಿಯಿಂದ ತೇವವನ್ನು ಹೀರುತ್ತದೆ. ಮರಳಿನಲ್ಲಿ ಸಸ್ಯ ಮತ್ತು ಪ್ರಾಣಿವರ್ಗದ ಕಸ ಸೇರಿರಬಾರದು. ಜೇಡಿಮಣ್ಣು ಮಿಶ್ರವಾಗಿದ್ದರೆ ಮರಳನ್ನು ನೀರಿನ ತೊಟ್ಟಿಯಲ್ಲಿ ತೊಳೆಯಬೇಕು.

ಸಿಮೆಂಟ್

[ಬದಲಾಯಿಸಿ]

ಸಿಮೆಂಟಿನಲ್ಲಿ ಮೂರು ಪಾಲು ಕ್ಯಾಲ್ಸಿಯಂ ಕಾರ್ಬೋನೇಟ್ ಹೆಚ್ಚಾಗಿರುವ ಸುಣ್ಣಕಲ್ಲು ಮತ್ತು ಒಂದು ಪಾಲು ಜೇಡಿಮಣ್ಣು ಸೇರಿವೆ. ಸಿಮೆಂಟ್ ಗಟ್ಟಿಯಾಗುವುದನ್ನು ಸಾವಕಾಶಮಾಡಲು ಕೊಂಚ ಜಿಪ್ಸಮ್ಮನ್ನು ಸೇರಿಸುತ್ತಾರೆ. ಸುಣ್ಣಕಲ್ಲು ಮತ್ತು ಜೇಡಿಮಣ್ಣಿನ ಮಿಶ್ರಣವನ್ನು ಕರಗುವ ಮಟ್ಟಿಗೆ ಕಾಯಿಸಿ ಬಂದ ಕಿಟ್ಟವನ್ನು ನುಣ್ಣಗೆ ಪುಡಿಮಾಡಿದರೆ ಸಿಮೆಂಟ್ ಬರುತ್ತದೆ. ನೀರಿನೊಂದಿಗೆ ಬೆರೆಸಿದಾಗ ಇದು ಗಟ್ಟಿಯಾಗುತ್ತದೆ. ಬೀಡುಕಬ್ಬಿಣವನ್ನು ತಯಾರಿಸುವ ಕುಲುಮೆಗಳಿರುವ ಕಡೆ ಅದರಿಂದ ಬರುವ ಕಿಟ್ಟವನ್ನು ಸುಣ್ಣಕಲ್ಲಿಗೆ ಬದಲಾಗಿ ಉಪಯೋಗಿಸುತ್ತಾರೆ. ಸಿಮೆಂಟನ್ನು (1) ಶುಷ್ಕ ಮತ್ತು (2) ತೇವ ವಿಧಾನಗಳಲ್ಲಿ ತಯಾರಿಸುತ್ತಾರೆ. 94 ಪೌಂಡ್ ತೂಕವಿರುವ ಒಂದು ಸಲೆ ಅಡಿ ಸಿಮೆಂಟನ್ನು ಚೀಲಗಳಲ್ಲಿ ತುಂಬಿ ಮಾರುತ್ತಾರೆ. ಒಂದು ಬ್ಯಾರಲಿನಲ್ಲಿ 4 ಮೂಟೆ ಸಿಮೆಂಟು ಹಿಡಿಯುತ್ತದೆ. ಇದನ್ನು ನೇರವಾಗಿ ಕೆಲಸಗಳಲ್ಲಿ ಉಪಯೋಗಿಸುತ್ತಾರೆ. ಕೆಲವು ಕಡೆಗಳಲ್ಲಿ ಮಣ್ಣು ಬೆರೆತ ಸುಣ್ಣಕಲ್ಲಿನ ಗುಡ್ಡೆಗಳು ನೈಸರ್ಗಿಕವಾಗಿ ದೊರೆಯುತ್ತವೆ. ಇದನ್ನು ಕಾಯಿಸಿದರೆ ಇಂಗಾಲಾಮ್ಲ ಹೋಗಿ ಕಿಟ್ಟ ಉಳಿಯುತ್ತದೆ. ಇದನ್ನು ನುಣ್ಣಗೆ ಅರೆದಾಗ ನೈಸರ್ಗಿಕ ಸಿಮೆಂಟ್ ಬರುತ್ತದೆ. ಇದು ಗಾಳಿಯಲ್ಲಿ ಗಟ್ಟಿಯಾಗುವುದಿಲ್ಲ. ನೀರನ್ನು ಬೆರೆಸಿದಾಗ ಮಾತ್ರ ಗಟ್ಟಿ ಆಗುತ್ತದೆ. ಕೆಲವು ದೇಶಗಳಲ್ಲಿ ಜ್ವಾಲಾಮುಖಿಯ ಬೂದಿಯ ರಾಶಿಗಳಿರುತ್ತವೆ. ಇವುಗಳಲ್ಲಿ ಮಣ್ಣಿನ ಭಾಗದೊಂದಿಗೆ ನೀರನ್ನು ಸೇರಿಸಿದ ಸುಣ್ಣವನ್ನು ಬೆರೆಸಿ ಪೊಜೋಲಾನ ಸಿಮೆಂಟನ್ನು ತಯಾರಿಸುತ್ತಾರೆ. ಹಿಂದೆ ರೋಮನ್ ಸಾಮ್ರಾಜ್ಯದಲ್ಲಿ ಬಳಸುತ್ತಿದ್ದ ಸಿಮೆಂಟ್ ಈ ನಮೂನೆಯದು. ಕಬ್ಬಿಣದ ಆಕ್ಸೈಡನ್ನು ಬಹಳ ಕಡಿಮೆಮಾಡುವುದರಿಂದ ಸಿಮೆಂಟಿಗೆ ಬಿಳಿಯ ಬಣ್ಣ ಬರುತ್ತದೆ. ಕಬ್ಬಿಣದ ಆಕ್ಸೈಡಿನಿಂದ ಸಿಮೆಂಟಿಗೆ ಕೆಂಪು, ಹಳದಿ ಮತ್ತು ಕಂದು ಬಣ್ಣಗಳು ಬರುತ್ತವೆ. ಮ್ಯಾಂಗನೀಸ್ ಡೈಆಕ್ಸೈಡ್ ಕಪ್ಪು ಬಣ್ಣವನ್ನೂ ಕ್ರೋಮಿಯಂ ಆಕ್ಸೈಡ್ ಹಸಿರುಬಣ್ಣವನ್ನೂ ಕೋಬಾಲ್ಟ್‌ ನೀಲಿ ಬಣ್ಣವನ್ನೂ ಕೊಡುತ್ತವೆ.

ಸುಣ್ಣ ಇಲ್ಲವೆ ಸಿಮೆಂಟಿನೊಡನೆ ಸೂರ್ಕಿ ಅಥವಾ ಮರಳನ್ನು ಬೇರೆ ಬೇರೆ ಪ್ರಮಾಣಗಳಲ್ಲಿ ಬೆರೆಸಿ ಗಾರೆಯನ್ನು ತಯಾರಿಸುತ್ತಾರೆ. ಇದನ್ನು ಮೂರು ಉದ್ದೇಶಗಳಿಗಾಗಿ ಕಟ್ಟಡಗಳಲ್ಲಿ ಬಳಸುತ್ತಾರೆ; (1) ಗೋಡೆ ಮತ್ತು ನೆಲಕ್ಕೆ ನಯವಾದ ರಕ್ಷಣೆಯ ಕವಚವನ್ನು ಕೊಡಲು. (2) ಇಟ್ಟಿಗೆ ಅಥವಾ ಕಲ್ಲುಗಳನ್ನು ಗೋಡೆಯಲ್ಲಿ ಕೂರಿಸಲು. (3) ಕಲ್ಲುಗಾರೆಯ ಕಟ್ಟೆಯಲ್ಲಿ ಕಲ್ಲುಗಳನ್ನು ಒಂದಕ್ಕೊಂದು ಬಿಗಿಯಲು. ಮೂರು ಬಗೆಯಾದ ಗಾರೆಗಳು ಬಳಕೆಯಲ್ಲಿವೆ; (1) ಸುಣ್ಣಕ್ಕೆ ಮರಳನ್ನು ಬೆರೆಸಿದ್ದು, (2) ಸುಣ್ಣಕ್ಕೆ ಸೂರ್ಕಿಯನ್ನು ಬೆರೆಸಿದ್ದು, (3) ಸಿಮೆಂಟಿಗೆ ಮರಳನ್ನು ಬೆರೆಸಿದ್ದು.ಗಾರೆಯ ಬಲ ಸುಣ್ಣ ಅಥವಾ ಸಿಮೆಂಟಿಗೆ ಬೆರೆತಿರುವ ಸೂರ್ಕಿ ಅಥವಾ ಮರಳಿನ ದಾಮಾಶೆಗೂ ಗಾರೆಯನ್ನು ಅರೆದಿರುವ ನಯಕ್ಕೂ ಅನುಗುಣವಾಗಿದೆ. ಸಾಮಾನ್ಯವಾಗಿ ಸುಣ್ಣಕ್ಕೂ ಸಿಮೆಂಟಿಗೂ ಮೂರುಪಾಲು ಮರಳನ್ನೂ ಸುಣ್ಣಕ್ಕೆ ನಾಲ್ಕು ಪಾಲು ಸೂರ್ಕಿಯನ್ನೂ ಬೆರೆಸಿ ಗಾರೆಯನ್ನು ತಯಾರಿಸುತ್ತಾರೆ.ಕೃಷ್ಣರಾಜಸಾಗರದಂಥ ಕಟ್ಟೆಗಳಲ್ಲಿ ಬಳಸಿರುವ ಗಾರೆಯನ್ನು 1 ಪಾಲು ಹೈಡ್ರಾಲಿಕ್ ಸುಣ್ಣದೊಂದಿಗೆ 4 ಪಾಲು ಸೂರ್ಕಿಯನ್ನು ವಿದ್ಯುತ್ತಿನಿಂದ ನಡೆಯುವ 8' ವ್ಯಾಸದ ಚರಕೆಗಳಲ್ಲಿ 35 ನಿಮಿಷ ಕಾಲ ಅರೆದು ಉಪಯೋಗಿಸುತ್ತಾರೆ. ಸೂರ್ಕಿ ಗಾರೆಯನ್ನು ಅರೆದ 8 ಗಂಟೆಗಳೊಳಗೆ ಬಳಸಬೇಕು.

ಕಾಂಕ್ರೀಟ್

[ಬದಲಾಯಿಸಿ]

ಕಾಂಕ್ರೀಟಿನಲ್ಲಿ ಮೂರು ಬಗೆಗಳಿವೆ (1) ಸುಣ್ಣದ ಕಾಂಕ್ರೀಟ್(2) ಸೂರ್ಕಿ ಕಾಂಕ್ರೀಟ್ (3) ಸಿಮೆಂಟ್ ಕಾಂಕ್ರೀಟ್. ಮರಳು ಮತ್ತು ಸುಣ್ಣ ಇವನ್ನು ಗಾರೆಯ ಗುಂಡಿಯಲ್ಲಿ ಬೆರೆಸಿ ಗಾರೆಯನ್ನು ತಯಾರಿಸಿ ಕಲ್ಲಿನ ಜಲ್ಲಿಯೊಂದಿಗೆ ಒಂದೇ ಸಮನಾಗಿ ಬೆರೆಸಿದರೆ ಸುಣ್ಣದ ಕಾಂಕ್ರೀಟು ಬರುತ್ತದೆ. ಚರಕೆಗಳಲ್ಲಿ ಸೂರ್ಕಿ ಗಾರೆಯನ್ನು ಅರೆದು ಅದನ್ನು ಕಲ್ಲಿನ ಜಲ್ಲಿಯೊಂದಿಗೆ ಬೆರೆಸಿ ಸೂರ್ಕಿ ಕಾಂಕ್ರೀಟನ್ನು ತಯಾರಿಸುತ್ತಾರೆ. ಸಿಮೆಂಟ್ ಮತ್ತು ಮರಳನ್ನು ಬೆರೆಸಿ ಸಿಮೆಂಟ್ ಗಾರೆಯನ್ನು ಮಾಡಿ ಅದನ್ನು ಕಲ್ಲಿನ ಜಲ್ಲಿಯೊಂದಿಗೆ ಕೈಯಿಂದಲೇ ಸೇರಿಸಿ ಹಿಂದೆ ಸಿಮೆಂಟ್ ಕಾಂಕ್ರೀಟನ್ನು ತಯಾರಿಸುತ್ತಿದ್ದರು. ಈಗ ಎಲ್ಲಿಗೆ ಬೇಕಾದರೂ ಸಾಗಿಸಬಹುದಾದ ಕಾಂಕ್ರೀಟ್ ಮಿಕ್ಸರ್ ಎಂಬ ಯಂತ್ರದಲ್ಲಿ ಸಿಮೆಂಟ್, ಜಲ್ಲಿ ಮತ್ತು ನೀರನ್ನು ಅಳತೆಮಾಡಿ ಬೆರೆಸಿ ಒಳ್ಳೆಯ ಸಿಮೆಂಟ್ ಕಾಂಕ್ರೀಟನ್ನು ತಯಾರಿಸಬಹುದು. ಇದಕ್ಕೆ ಬೆರೆಸುವ ನೀರು ಕ್ಲುಪ್ತವಾಗಿಯೂ ಶುದ್ಧವಾಗಿಯೂ ಇರಬೇಕು. ಕಾಂಕ್ರೀಟನ್ನು ಅಡಿಪಾಯದಲ್ಲಿ ಹಾಕಬೇಕಾದಾಗ ತಳವನ್ನು ನೀರಿನಿಂದ ತೊಳೆದು ಅದರ ಮೇಲೆ 6" ಮೀರಿದ ದಪ್ಪದಲ್ಲಿ ಒಂದು ಕಡೆಯಿಂದ ಇನ್ನೊಂದರವರೆಗೂ ಸುರಿದು, ಹಿಡಿಯಿರುವ ಭಾರವಾದ ಮರದ ಹಲಗೆಯಿಂದ ಗಾರೆಯ ರಸ ಮೇಲೆಕ್ಕೆ ಉಕ್ಕುವಹಾಗೆ ದಮ್ಮಸ್ಸುಮಾಡಬೇಕು. ಹಾಕಿದ ಕಾಂಕ್ರೀಟು ಮಾಗಲು ನೀರು ಕಟ್ಟಬೇಕು. ಅಳತೆಯಿಂದ 1 ಪಾಲು ಸಿಮೆಂಟ್, 2 ಪಾಲು ಮರಳು ಮತ್ತು 4 ಪಾಲು ಕಲ್ಲಿನ ಜಲ್ಲಿಯನ್ನು ಮಿಕ್ಸರಿನಲ್ಲಿ ಬೆರೆಸಿ ಸಿಮೆಂಟ್ ಕಾಂಕ್ರೀಟನ್ನು ತಯಾರಿಸುತ್ತಾರೆ. ಈ ಕಾಂಕ್ರೀಟನ್ನು ಅದುಮುವ ತ್ರಾಸವನ್ನು ತಡೆಯಬೇಕಾದ ಅಡಿಪಾಯ, ಗೋಡೆ, ಜಲಾಶಯದ ಕಟ್ಟೆ, ಕಮಾನು, ಕಂಬ, ಮೊದಲಾದ ಕಡೆಗಳಲ್ಲಿ ಉಪಯೋಗಿಸುತ್ತಾರೆ.

ಪ್ರಬಲಿತಕಾಂಕ್ರೀಟ್ (ರೀಇನ್ಫೋಸ್ರ್ಡ್‌ಕಾಂಕ್ರೀಟ್)

[ಬದಲಾಯಿಸಿ]

ಸಾದಾ ಕಾಂಕ್ರೀಟಿನ ಒತ್ತಡದ ಬಲ ಎಳೆತದ ಬಲದ ಹತ್ತರಷ್ಟು ಹೆಚ್ಚಾಗಿರುತ್ತದೆ. ಪ್ರಬಲಿತ ಕಾಂಕ್ರೀಟನಲ್ಲಿ ಅದರ ಮೇಲೆ ಬರುವ ಎಳೆತದ (ಟನ್ಸೈಲ್) ಮತ್ತು ಜಾರುವ (ಶಿಯರಿಂಗ್) ತ್ರಾಸಗಳನ್ನು ಮಾತ್ರ ತಡೆಯಲು ಉಕ್ಕನ್ನು ಗರ್ಭೀಕರಿಸಿದ್ದರೆ ಅದನ್ನು ಏಕಮುಖ ಪ್ರಬಲಿತವಾದ (ಸಿಂಗ್ಲಿ ರೀಇನ್ಫೋಸ್ರ್ಡ್‌) ತೊಲೆಯೆನ್ನುತ್ತಾರೆ. ಜೊತೆಗೆ ಅದುಮುವ ತ್ರಾಸದ ಭಾಗವನ್ನು ತಡೆಯಲು ಉಕ್ಕನ್ನು ಇಟ್ಟಿದ್ದರೆ ಅದು ದ್ವಿಮುಖವಾಗಿ ಪ್ರಬಲಿತವಾದ ತೊಲೆಯಾಗುತ್ತದೆ. ತೊಲೆಯ ಮೇಲುಭಾಗದಲ್ಲಿ ಒಂದು ತೊಲೆಯಿದ್ದರೆ ಅದನ್ನು ತಒಲೆ ಎನ್ನುತ್ತಾರೆ. ಕಂಬಿಗಳು ಕಾಂಕ್ರೀಟಿನಲ್ಲಿ ಜಾರದಹಾಗೆ ಕೊನೆಗಳನ್ನು ಕೊಕ್ಕೆಗಳ ಹಾಗೆ ಬಗ್ಗಿಸುತ್ತಾರೆ. ಜಾರುವ ಒತ್ತಡವನ್ನು ಎದುರಿಸಲು ಅಲ್ಲಲ್ಲಿ ರಿಕಾಪು ಕಂಬಿಗಳನ್ನು (ಸ್ಟಿರ್ರಪ್ಸ್‌) ಇಟ್ಟಿರುತ್ತಾರೆ. ಏಕಮುಖವಾಗಿ ಕಂಬಿಗಳಿರುವ ಕಡೆ ಅವಕ್ಕೆ ಸಮಕೋಣವಾಗಿ ದೂರವಾಗಿ ತೂಕವನ್ನು ಹರಡಿರುವ ಕಂಬಿಗಳಿರುತ್ತವೆ.ಪ್ರಬಲಿತಕಾಂಕ್ರೀಟಿನಲ್ಲಿ ಉಪಯೋಗಿಸುವ ಸಿಮೆಂಟ್ ನಿಧಾನವಾಗಿ ಗಟ್ಟಿಯಾಗುವ ಪೋರ್ಟ್ಲೆಂಡ್ ಸಿಮೆಂಟಿನ ಮಟ್ಟಕ್ಕೆ ಬರಬೇಕು. ರಸ್ತೆಗಳಿಗೆ ಹಾಕುವ ಸಿಮೆಂಟ್ ಬಾಳಿಕೆ ಬರಬೇಕು. ಬಲಿಷ್ಟವಾಗಿರಬೇಕು. ಮೊದಲೇ ತ್ರಾಸವನ್ನು ಹೊರಿಸಿರುವ (ಪ್ರೀಸ್ಟ್ರೆಸ್ಡ್‌) ಕಾಂಕ್ರೀಟ್ ಈಚೆಗೆ ಬಳಕೆಗೆ ಬಂದಿದೆ. ಈ ಕ್ರಮದಲ್ಲಿ ಕಾಂಕ್ರೀಟಿನ ಒತ್ತಡದ ಬಲವನ್ನು ಸಂಪುರ್ಣವಾಗಿ ಬಳಸಿಕೊಳ್ಳುವುದು ಸಾಧ್ಯವಾಗಿದೆ. ಇದರಲ್ಲಿ ಕಟ್ಟಡದ ಒಂದು ಭಾಗ ಅದು ಹೊರಬೇಕಾದ ತೂಕದ ಪರಿಣಾಮವಾಗಿ ಯಾವ ತ್ರಾಸವನ್ನು ಪಡೆಯುವುದೋ ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ತ್ರಾಸವನ್ನು ಅದರ ಮೇಲೆ ಪುರ್ವಭಾವಿಯಾಗಿ ಹೊರಿಸಿರುತ್ತಾರೆ. ಪ್ರಬಲಿತಕಾಂಕ್ರೀಟಿನಲ್ಲಿ ಇಲ್ಲದೆ ಇರುವ ಕೆಲವು ಗುಣಗಳು ಇದರಲ್ಲಿವೆ. (1) ತೂಕ ಬಿದ್ದಾಗ ಕಾಂಕ್ರೀಟ್ ಬಿರುಕು ಬಿಡುವುದಿಲ್ಲ, (2) ತೊಲೆಗಳು ಮಧ್ಯದಲ್ಲಿ ಬಾಗುವುದು ಕಡಿಮೆಯಾಗುತ್ತದೆ, (3) ಅದೇ ಬಲವುಳ್ಳ ಉಕ್ಕಿನ ಕಟ್ಟಡಕ್ಕಿಂತ ಇದು ಹಗುರವಾಗಿದೆ, (4) ಉಪಯೋಗಿಸುವ ಉಕ್ಕಿನಲ್ಲಿ 80%ರ ವರೆಗೂ ಕಾಂಕ್ರೀಟಿನಲ್ಲಿ ಉಳಿತಾಯ ಸಾಧ್ಯ, (5) ಇದನ್ನು ಮುಂಚೆಯೇ ಪರೀಕ್ಷಿಸಿದ್ದಾಗಿರುತ್ತದೆ.

ಸ್ಪಂದಿಸಿದ ಕಾಂಕ್ರೀಟ್ (ವೈಬ್ರೇಟೆಡ್ ಕಾಂಕ್ರೀಟ್

[ಬದಲಾಯಿಸಿ]

ಇದು ಒಂದು ಯಾಂತ್ರಿಕ ಕ್ರಮ, ಮೂರು ವಿಧವಾದ ಸ್ಪಂದಕಗಳು ಅಥವಾ ಕಂಪನಕಾರಿಗಳೂ ರೂಢಿಯಲ್ಲಿವೆ-(1) ಪೆಟ್ರೋಲಿನ ಯಂತ್ರ, (2) ಸಂಕೋಚಿಸಿದ ಗಾಳಿಯ ಯಂತ್ರ, (3) ವಿದ್ಯುತ್ತಿನ ಯಂತ್ರ, ಸ್ಪಂದನವನ್ನು ಮರು ಬಗೆಗಳಲ್ಲಿ ಮಾಡಬಹುದು-(1) ಸ್ಪಂದಕವನ್ನು ಕಾಂಕ್ರೀಟಿನೊಳಗೇ ಇಡಬಹುದು, (2) ಕಾಂಕ್ರೀಟಿನ ರಸ್ತೆಯ ಮೇಲ್ಮೈಯ ಮೇಲೆ ಸ್ಪಂದಿಸುವ ಭಾಗಗಳನ್ನು ಇಡಬಹುದು. (3) ಸೆಂಟ್ರಿಂಗುಗಳನ್ನೇ ಸ್ಪಂದನ ಮಾಡಬಹುದು. (ನೋಡಿ- ಕಂಪನಕಾರಿ-(ಕಂಪಕ))

ಗನ್ನೈಟ್

[ಬದಲಾಯಿಸಿ]

ಎತ್ತರವಾದ ಕಲ್ಲುಗಾರೆಯ ಕಟ್ಟೆಗಳಲ್ಲಿ ಕಲ್ಲಿನ ತಳಪಾಯದಲ್ಲಿ ಬಿರುಕುಗಳಿದ್ದರೆ ತೆಳುವಾದ ಸಿಮೆಂಟಿನಿಂದ ತುಂಬುವುದು ಉಪಯೋಗವಾಗದೆ ಇದ್ದಾಗ ಸಿಮೆಂಟ್ ಮತ್ತು ಮರಳಿನ ಮಿಶ್ರಣವನ್ನು ಒತ್ತಡದಿಂದ ತುಂಬುವುದಕ್ಕೆ ಗನ್ನೈಟಿಂಗ್ ಎನ್ನುತ್ತಾರೆ. ನೀರನ್ನು ತುಂಬುವ ಕೊಳಗಳಲ್ಲಿ ಸೋರುವುದನ್ನು ತಪ್ಪಿಸುವುದಕ್ಕೂ ಇದನ್ನು ಉಪಯೋಗಿಸುತ್ತಾರೆ.

ಕಬ್ಬಿಣ, ಉಕ್ಕು

[ಬದಲಾಯಿಸಿ]

ಕಬ್ಬಿಣದ ಉಪಯೋಗ ಯಂತ್ರ ಇಂಜಿನಿಯರಿಂಗ್ನಲ್ಲಿ ಸಾರ್ವತ್ರಿಕವಾಗಿದೆ. ತಾಂಡವಾಳವಲ್ಲದೆ (ಕ್ಯಾಸ್ಟ್‌ ಐರನ್) ಇದರಲ್ಲಿ ಮೆದು ಕಬ್ಬಿಣ (ರಾಟ್ ಐರನ್) ಮತ್ತು ಉಕ್ಕು ಎಂಬ ನಮೂನೆಗಳಿವೆ. ಮೆದು ಕಬ್ಬಿಣದಲ್ಲಿ ಶೇ. 15ಕ್ಕಿಂತ ಹೆಚ್ಚು ಇಂಗಾಲವಿರುವುದಿಲ್ಲ. ಇದು ಮೆದುವಾಗಿಯೂ ಜಿಗಟಾಗಿಯೂ ಇದೆ. ಇದನ್ನು 815ಂ ಸೆಂ. ಉಷ್ಣತೆಯಲ್ಲಿ ವೆಲ್ಡ್‌ ಮಾಡಬಹುದು. ಮಾಡುಗಳು ಗರ್ಡರುಗಳು ಮತ್ತು ಕಂಬಗಳನ್ನು ಮಾಡಲು ಇದನ್ನು ಬಳಸುತ್ತಿದ್ದರು. ಈಗ ಈ ಉದ್ದೇಶಗಳಿಗೆ ಉಕ್ಕನ್ನು ಬಳಸುತ್ತಾರೆ.ಉಕ್ಕು ಎಳೆದರೆ ಹಿಗ್ಗುತ್ತದೆ. ಇದರಿಂದ ತಗಡುಗಳನ್ನು ಬಡಿಯಬಹುದು., ತಂತಿಗಳನ್ನು ಎಳೆಯಬಹುದು, ವೆಲ್ಡಿಸಬಹುದು, ಹದಮಾಡಿ ಎಷ್ಟು ಗಟ್ಟಿಯಾಗಿ ಬೇಕಾದರೂ ಮಾಡಬಹುದು. ಉಕ್ಕನ್ನು ತೊಲೆಗಳು, ಗರ್ಡರಗಳು, ಗುಂಡು ಮತ್ತು ಚೌಕದ ಸರಳುಗಳೂ, ತಗಡುಗಳನ್ನು ಮಾಡಲು ಬಳಸುತ್ತಾರೆ. ಕತ್ತರಿಸುವ ಹತಾರಗಳನ್ನು ಮಾಡಲು ಗಟ್ಟಿಯಾದ ಎರಕದ ಉಕ್ಕನ್ನು ಉಪಯೋಗಿಸುತ್ತಾರೆ. ತಾಂಡವಾಳದ ಇಂಗಾಲ, ಗಂಧಕ ಮತ್ತು ರಂಜಕ-ಇವು ಬೆರೆತಿರುತ್ತವೆ. ಇದರಿಂದ 152.4 ಮಿಮೀ ವ್ಯಾಸದಿಂದ ಹಿಡಿದು 1066 ಮಿಮೀ ವ್ಯಾಸದವರೆಗೂ ನೀರನ್ನು ಸಾಗಿಸುವ ಕೊಳಾಯಿಗಳನ್ನು ತಯಾರಿಸುತ್ತಾರೆ. ಇದರಿಂದ ಉಕ್ಕನ್ನು ತಯಾರಿಸಲು ಕಬ್ಬಿಣದ ಅದುರನ್ನು ಬೆರೆಸಿ ಇಂಗಾಲದ ಪ್ರಮಾಣವನ್ನು ತಗ್ಗಿಸುತ್ತಾರೆ. ಇನ್ನೊಂದು ಕ್ರಮದಲ್ಲಿ ಕರಗಿ ನೀರಾದ ಕಬ್ಬಿಣದ ಮೂಲಕ ಗಾಳಿಯನ್ನು ಒತ್ತಡದಲ್ಲಿ ಊದಿ ಇಂಗಾಲವನ್ನು ಕಡಿಮೆ ಮಾಡುತ್ತಾರೆ. (ನೋಡಿ-ಉಕ್ಕು)

ತಾಮ್ರ

[ಬದಲಾಯಿಸಿ]

ತಾಮ್ರವನ್ನು ಪ್ರಾಚೀನ ನಾಗರಿಕತೆಗಳ ಕಾಲದಿಂದಲೂ ಮಾನವ ಬಳಸುತ್ತಿದ್ದಾನೆ. ಇದು ಶ್ರೇಷ್ಠವಾದ ವಿದ್ಯುದ್ವಾಹಕ ವಸ್ತು. ಇದಕ್ಕೆ ತುಕ್ಕು ಹಿಡಿಯುವುದಿಲ್ಲ. ಕಾಂತಗುಣವಿಲ್ಲ, ಇದರಿಂದ ತಗಡುಗಳನ್ನು ಬಡಿಯಬಹುದು. ಕ್ಯಾಡ್ಮಿಯಂ ಕೊಂಚವೇ ಬೆರೆತಿರುವ ಮಿಶ್ರ ಲೋಹವನ್ನು ವಿದ್ಯುತ್ತನ್ನು ಸಾಗಿಸುವ ತಂತಿ ಸಾಲುಗಳಲ್ಲಿ ಉಪಯೋಗಿಸುತ್ತಾರೆ.ಹಿತ್ತಾಳೆಯಲ್ಲಿ ಸತು ತಾಮ್ರದೊಂದಿಗೆ ಸೇರಿದೆ. ಸತು ಹೆಚ್ಚಾದ ಹಾಗೆ ಬಲ, ಗಡಸು ಹೆಚ್ಚಾಗುತ್ತವೆ, ಆದರೆ ವಿದ್ಯುದ್ವಾಹಕತ್ವ ಇಳಿಯುತ್ತದೆ. ಹಿತ್ತಾಳೆಗೆ ನಿಕ್ಕಲ್ಲನ್ನು ಸೇರಿಸಿದರೆ ಬೆಳ್ಳಿಯ ಬಣ್ಣದ ನಿಕ್ಕಲ್-ಸಿಲ್ವರ್ ಬರುತ್ತದೆ.ಕಂಚು, ತಾಮ್ರ ಮತ್ತು ತವರದ ಮಿಶ್ರಲೋಹ-ಇದರ ಎಳೆತದ ಬಲ ಹೆಚ್ಚು. ಆದರೆ ವಿದ್ಯುತ್ ಮತ್ತು ಉಷ್ಣವಾಹಕ ಶಕ್ತಿ ಕಡಿಮೆ ಶೇ. 7.5ಯವರೆಗೆ ಅಲ್ಯೂಮಿನಿಯಮ್ ಇರುವ ಕಂಚಿನಿಂದ ತಂತಿಗಳನ್ನು ಎಳೆಯಬಹುದು. ತಾಮ್ರ ಮತ್ತು ನಿಕ್ಕಲ್ಲಿನ ಮಿಶ್ರಲೋಹಗಳನ್ನು ಕೈಗಾರಿಕೆಗಳಲ್ಲಿ ಬಳಸುತ್ತಾರೆ.ಚಿನ್ನ, ಬೆಳ್ಳಿ, ಪ್ಲ್ಯಾಟಿನಮ್-ಇವನ್ನು ಘನಲೋಹಗಳೆನ್ನುತ್ತಾರೆ. ಸಂಶ್ಲೇಷಿತ ದಾರಗಳನ್ನು ತೆಗೆಯುವ ತಂತುಕಗಳನ್ನು (ಸ್ಪಿನ್ನರೆಟ್ಸ್‌) ಮಾಡುವುದಕ್ಕೆ ಈ ಗುಂಪಿನ ಮಿಶ್ರಲೋಹಗಳನ್ನು ಬಳಸುತ್ತಾರೆ.ಈಗ ಎಲ್ಲೆಲ್ಲಿಯೂ ಬಳಕೆಯಲ್ಲಿರುವ ಅಲ್ಯೂಮಿನಿಯಮ್ಮನ್ನು 1825ರ ವರೆಗೆ ಯಾರೂ ಕಂಡಿರಲಿಲ್ಲ. ಇದಕ್ಕೆ ಸಣ್ಣ ಪ್ರಮಾಣಗಳಲ್ಲಿ ಕೆಲವು ಲೋಹಗಳನ್ನು ಬೆರೆಸಿ ಕಟ್ಟಡಗಳಲ್ಲಿ ಉಪಯೋಗಿಸುತ್ತಾರೆ. ಅಲ್ಯೂಮಿನಿಯಮ್ ಹಗುರವಾದ ಲೋಹ. ಆದರೆ ಡ್ಯುರಾಲ್ಮಿನ್, ಹಿಡ್ಯಮಿನಿಯಂ ಮೊದಲಾದ ಇದರ ಮಿಶ್ರ ಲೋಹಗಳು ಉಕ್ಕಿನಷ್ಟು ಬಲಿಷ್ಠವಾಗಿವೆ.

ಇದು ಬಹುವಿಧಗಳಲ್ಲಿ ಯಂತ್ರ ಇಂಜಿನಿಯರಿಂಗ್ನಲ್ಲಿ ಉಪಯೋಗಕ್ಕೆ ಬರುತ್ತದೆ. ರಸಾಯನವಿಜ್ಞಾನದ ಪ್ರಯೋಗಶಾಲೆಯಲ್ಲಂತೂ ಇದನ್ನು ಬಿಟ್ಟು ಯಾವ ಕೆಲಸವೂ ನಡೆಯುವುದಿಲ್ಲ. ಹೆಚ್ಚಿನ ವಿದ್ಯುದ್ಬಲದಲ್ಲಿಯೂ ಇದು ಅವಾಹಕವಾಗಿ ಉಳಿದಿರುತ್ತದೆ. ಇದು ಉಷ್ಣಕ್ಕೂ ಉಣ್ಣೆಯ ರೂಪದಲ್ಲಿ ಅವಾಹಕ, ದೃಗ್ವಿಜ್ಞಾನದ (ಆಪ್ಟಕಲ್) ವಿಶೇಷ ಗುಣಗಳಿಂದ ಇದನ್ನು ವಿಜ್ಞಾನದ ಸಮಸ್ತಭಾಗಗಳಲ್ಲಿಯೂ ಬಳಸುತ್ತಾರೆ. ಇಂದು ಗಾಜಿನ ಕಾರ್ಖಾನೆಯಲ್ಲಿ ಪವಾಡಗಳೇ ನಡೆಯುತ್ತಿವೆ. ನೀರಿನ ತೂಕದ ಆರರಲ್ಲಿ ಒಂದು ಪಾಲು ವಿಶಿಷ್ಟ ತೂಕವುಳ್ಳ ಗಾಜಿನ ನೊರೆಯನ್ನು ಗಾಳಿ ಊದಿ ಮಾಡುತ್ತಾರೆ. ಉಕ್ಕಿಗಿಂತ ಗಡುಸಾದ ಮಾಪಕಗಳನ್ನು ಮಾಡುತ್ತಾರೆ. ರೇಷ್ಮೆಯಷ್ಟು ನುಣುಪಾದ ದಾರಗಳನ್ನು ಎಳೆಯುತ್ತಾರೆ. ಬೇರೆ ಬೇರೆ ಆಕ್ಸೈಡಿದ್ದರೆ ಹಸಿರುನೀಲಿ ಮಿಶ್ರಬಣ್ಣವೂ, ಕೊಂಚವೇ ಕೋಬಾಲ್ಟ್‌ ಇದ್ದರೆ ಪಪ್ರ್ಲ್‌ ಬಣ್ಣವೂ ಕ್ರೋಮಿಯಮ್ ಇದ್ದರೆ ಹಸಿರಿನಿಂದ ಹಿಡಿದು ಕಿತ್ತಲೆ ಹಣ್ಣಿನ ಬಣ್ಣವೂ ನಿಕ್ಕಲಿನಿಂದ ಕೆಂಪು ಮಿಶ್ರವಾದ ನೇರಳೆ ಬಣ್ಣವೂ ಬರುತ್ತವೆ. ಉತ್ಕೃಷ್ಟವಾದ ಗಾಜನ್ನು ಮಾಡಲು ಉಪಯೋಗಿಸುವ ಮರಳಿನಲ್ಲಿ ಹತ್ತು ಸಾವಿರದಲ್ಲಿ ಒಂದು ಪಾಲಿನಷ್ಟೂ ಕಬ್ಬಿಣದ ಆಕ್ಸೈಡ್ ಇರಬಾರದು. ಶುದ್ಧವಾದ ಗಾಜನ್ನು ಈಜಿಪ್ಟಿನಲ್ಲಿ ಪ್ರ.ಶ.ಪು 5000ರಲ್ಲಿ ತಯಾರು ಮಾಡಿದ್ದರಂತೆ ! ಎರಡು ಗಾಜಿನ ಪದರಗಳ ಮಧ್ಯೆ ಸಂಶ್ಲೇಷಿತ ರಾಳವಿದ್ದರೆ ಒಡೆದಾಗ ಗಾಜು ಚೂರು ಚೂರಾಗುವುದಿಲ್ಲ. ಕೈಗಾರಿಕಾ ಕೇಂದ್ರಗಳಲ್ಲಿ ಯಂತ್ರಾಗಾರಗಳ ಕೆಳಗಿನ ಅಂತಸ್ತುಗಳಿಗೆ ಬೆಳಕು ಬರುವ ಹಾಗೆ ಮುಪ್ಪಟ್ಟಿಯ ಗಾಜುಗಳನ್ನು (ಪ್ರಿಸ್ಮ್‌್ಸ) ಬಳಸುತ್ತಾರೆ. ಗಾಜಿನ ದಾರದಿಂದ ಹೆಣೆದ ನೇಯ್ಗೆಯನ್ನು ಹಾಳೆ ಹಾಳೆಯಾದ ಫಲಕ ಗಾಜುಗಳಲ್ಲಿ ವಿಮಾನಗಳ ಕೈಗಾರಿಕೆಗಳಲ್ಲಿಯೂ ಮೋಟಾರಿನ ಮೇಲುಭಾಗದಲ್ಲಿಯೂ ಉಪಯೋಗಿಸುತ್ತಾರೆ.

ಮಣ್ಣು

[ಬದಲಾಯಿಸಿ]

ಕುಂಬಾರನ ಕಲೆ ನಾಗರಿಕತೆಯ ಮುಂಜಾವದಷ್ಟು ಪುರಾತನವಾದುದು. ಮಣ್ಣಿನ ಮಡಕೆಗಳೂ ಕುಡಿಕೆಗಳೂ ಈಗಲೂ ಬಳಕೆಯಲ್ಲಿವೆ. ಆದರೆ ಈಗಿನ ಯಂತ್ರಯುಗದಲ್ಲಿ ಹಳೆಯ ಸಾಮಗ್ರಿಗಳಿಗೆ ಹೊಸ ಉಪಯೋಗ ಬಂದಿದೆ. ಮಾಡನ್ನು ಮುಚ್ಚಲು ಸುಟ್ಟು ಮಣ್ಣಿನ ಹಂಚುಗಳನ್ನು ಮೊದಲೂ ಮಾಡುತ್ತಿದ್ದರು. ಈಗ ಮಂಗಳೂರು ಹಂಚುಗಳನ್ನು ಪ್ರತ್ಯೇಕವಾದ ಒಲೆಗಳಲ್ಲಿ ಸುಟ್ಟು ಮಾಡಿಗೆ ಹೊದೆಸುವುದಕ್ಕೂ ನೆಲಕ್ಕೆ ಹಾಸುವುದಕ್ಕೂ ಬಳಸುತ್ತಾರೆ.

ಯಂತ್ರ ಇಂಜಿನಿಯರಿಂಗ್ನಲ್ಲಿ ಬಳಸುವ ಮಣ್ಣುಗಳಲ್ಲಿ ಅನೇಕ ವಿಧಗಳಿವೆ

[ಬದಲಾಯಿಸಿ]

(1) ಮುದ್ದೆಯಾದ ಜೇಡಿಮಣ್ಣು, (2) ಕೆಂಪುಮಣ್ಣು, (3) ಚೀನಮಣ್ಣು ಅಥವಾ ಸುದ್ದೆಮಣ್ಣು (ಕೆಯೊಲಿನ್), (4) ಬೆಂಕಿಗೆ ಜಗ್ಗದ ಮಣ್ಣು, ಇವಕ್ಕೆ ಚಕಮುಕಿ ಕಲ್ಲು, ಎಲುಬು ಮೊದಲಾದ ಕಚ್ಚಮಾಲುಗಳನ್ನು ಬೆರೆಸುತ್ತಾರೆ. ತಯಾರಾಗುತ್ತಿರುವ ಸಾಮಾನುಗಳಲ್ಲಿಯೂ ವೈವಿಧ್ಯ ಹೆಚ್ಚಾಗುತ್ತಿದೆ. ಮೊದಲು ಜೇಡಿಮಣ್ಣಿನ ಪಾತ್ರೆಗಳು, ಬಗೆಬಗೆಯ ಹಂಚುಗಳು, ಗ್ರಾಮಸಾರವನ್ನು ಸಾಗಿಸುವ ಕೊಳಾಯಿಗಳು, ಇಟ್ಟಿಗೆ, ಕಾವಿಟ್ಟಿಗೆ, ಟೆರಕಾಟ, ಬೆಂಕಿಯ ಶಾಖವನ್ನು ತಡೆಯುವ ಕುಲುಮೆ ಭಾಗಗಳು, ಪಿಂಗಾಣಿಯ ಬಟ್ಟಲು, ತಟ್ಟೆ-ಇವನ್ನು ಮಾಡುತ್ತಿದ್ದರು. ಅರವತ್ತು ವರ್ಷಗಳಿಂದ ಈಚೆಗೆ ವಿದ್ಯುತ್ತಿನ ಕೈಗಾರಿಕೆಯಲ್ಲಿ ವಿದ್ಯುದ್ವಾಹಕಗಳ (ಇನ್ಸುಲೇಟರ್ಸ್) ತಯಾರಿಯಲ್ಲಿ ಪಿಂಗಾಣಿಯ ಉಪಯೋಗ ವಿಶೇಷವಾಗಿದೆ ಪಿಂಗಾಣಿಯನ್ನು ಸುಡುವುದಕ್ಕೆ ಸುದ್ದೆಮಣ್ಣ, ಬೆಣಚುಕಲ್ಲು, ಫೆಲ್ಡ್‌ಸ್ಟಾರ್, ಜಿಪ್ಸಂ, ಬಳಪದ ಕಲ್ಲು, ಬೆರಿಲ್, ಸಿರ್ಕನ್, ಅಲ್ಯೂಮಿನಿಯಮ್ ಮತ್ತು ಸಿಲಿಕನ್ನಿನ ಆಕ್ಸೈಡುಗಳನ್ನು ಉಪಯೋಗಿಸುತ್ತಾರೆ. ಅಚ್ಚ ಬಿಳುಪಾದ ಪಿಂಗಾಣಿಯ ಉಪಯೋಗ ಕಾಫಿಯ ಲೋಟದಿಂದ ಹಿಡಿದು ಸರಂಧ್ರವಾದ ವಿದ್ಯುತ್ತಿನ ಸ್ವಿಚ್ಚಿನ ವರೆಗೆ ಹರಡಿದೆ. ಇದರ ವಿಶಿಷ್ಟ ತೂಕ 2.4, ಇದು ನೀರನ್ನು ಹೀರುವುದಿಲ್ಲ. ಬಿಳೀಪಿಂಗಾಣಿಯನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನ ಅಚ್ಚುಗಳಲ್ಲಿ ಸಂಸ್ಕಾರಮಾಡಿದ ಮಣ್ಣನ್ನು ಎರಕ ಹೊಯ್ದು ಒಣಗಿಸಿ 12000 ಸೆಂ. ಉಷ್ಣತೆಯ ಒಲೆಗಳಲ್ಲಿ ಸುಡುತ್ತಾರೆ.

ಜಲವಿದ್ಯುತ್ತನ್ನು ಉತ್ಪಾದನೆ ಮಾಡುವ ಯೋಜನೆ

[ಬದಲಾಯಿಸಿ]

ಭಾರತದ ಪಂಚವಾರ್ಷಿಕ ಯೋಜನೆಗಳಲ್ಲಿ ಜಲವಿದ್ಯುತ್ತನ್ನು ಉತ್ಪಾದನೆ ಮಾಡುವ ಯೋಜನೆಗಳಿಗೆ ಪ್ರಾಮುಖ್ಯ ಕೊಡಲಾಗಿದೆ ವಿದ್ಯುಜ್ಜನಕಗಳಿಂದ ವಿದ್ಯುತ್ ಬಳಕೆಯಾಗುವ ಕ್ಷೇತ್ರಗಳಿಗೆ ಹೆಚ್ಚಿನ ವೋಲ್ಟತೆಯಲ್ಲಿ ನೂರಾರು ಮೈಲಿಗಳವರೆಗೆ ಸಾಗಿಸಬೇಕಾಗುತ್ತದೆ. ಅದಕ್ಕಾಗಿ 110 ವೋಲ್ಟಿನ ತಂತಿಸಾಲಿನಿಂದ ಹಿಡಿದು ಉಕ್ಕಿನ ಗೋಪುರಗಳ ಮೇಲಿನ ವೋಲ್ಟಿನ ತಂತಿಸಾಲಿನವರೆಗೂ ವಿದ್ಯುದ್ವಾಹಕ ಪಿಂಗಾಣಿಯನ್ನು ಉಪಯೋಗಿಸುತ್ತಾರೆ. ಹೀಗಾಗಿ ಪಿಂಗಾಣಿ ತಯಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯ ಬರುತ್ತಿದೆ.ಹೆಚ್ಚಿನ ಆವರ್ತಸಂಖ್ಯೆಯ (ಹೈ ಫ್ರೀಕ್ಚೆನ್ಸಿ) ವಿದ್ಯುತ್ಪ್ರವಾಹಗಳನ್ನು ತಡೆಯಬಲ್ಲ ವಿಶಿಷ್ಟವಾದ ಪಿಂಗಾಣಿ ತಯಾರಾದ ಮೇಲೆ ಪುಟ್ಟ (ಮಿಡ್ಜೆಟ್) ರೇಡಿಯೊ ಸೆಟ್ಟುಗಳನ್ನು ಮಾಡುವುದು ಸಾಧ್ಯವಾಯಿತು, ಮೋಟಾರ್ ಕಾರುಗಳಲ್ಲಿ ಸ್ಪಾರ್ಕಿಂಗ್ ಪ್ಲಗ್ ಮುಂತಾದ ಸಲಕರಣೆಗಳನ್ನು ಪಿಂಗಾಣಿಯಿಂದ ಮಾಡುತ್ತಾರೆ.ಹೆಚ್ಚಿನ ಕಾವನ್ನು ತಡೆಯುವ ಕಾವಿಟ್ಟಿಗೆಗಳನ್ನು (ಫೈರ್ ಬ್ರಿಕ್ಸ್‌) (1) ಆಮ್ಲ,(2) ಕ್ಷಾರ, (3) ಎರಡೂ ಅಲ್ಲದ್ದು-ಎಂದು ವಿಭಾಗಿಸಬಹುದು. ಆಮ್ಲದ ಉಕ್ಕಿನ ಕುಲುಮೆಗಳಿಗೆ ಅಂಚುಕಟ್ಟಾಗಿ ಉಪಯೋಗಿಸುವ ಮಣ್ಣಿಗೆ ಮರಳು ಮತ್ತು ಸುಣ್ಣವನ್ನು ಬೆರೆಸಿ ಹೆಚ್ಚಿನ ಉಷ್ಣತೆಯಲ್ಲಿ ಸುಡುತ್ತಾರೆ. ಆದರೆ ಕ್ಷಾರದ ಕುಲುಮೆಗಳಲ್ಲಿ ಬಳಸುವ ಮಣ್ಣಿಗೆ ಮ್ಯಾಗ್ನೀಸಿಯಂ ಇಲ್ಲವೆ ಅಲ್ಯೂಮಿನಿಯಂ ಆಕ್ಸೈಡನ್ನು ಬೆರೆಸಿ ಹೆಚ್ಚಿನ ಉಷ್ಣತೆಯಲ್ಲಿ ಸುಡುತ್ತಾರೆ. ಗಟ್ಟಿಯಾದ ಟೆರಕಾಟವನ್ನು ಬಹಳ ಹೆಚ್ಚಿನ ಉಷ್ಣತೆಯಲ್ಲಿ ಮಣ್ಣನ್ನು ಸುಟ್ಟು ತಯಾರಿಸುತ್ತಾರೆ.

ಪ್ರಬಲಿತಪಡಿಸಿದ ಇಟ್ಟಿಗೆಗಾರೆ (ರೀಇನ್ಫೋಸ್ರ್ಡ್‌ ಬ್ರಿಕ್ವರ್ಕ್)

[ಬದಲಾಯಿಸಿ]

ಈ ಸಾಮಗ್ರಿಯನ್ನು ಇಂಗ್ಲೆಂಡಿನ ವಿಖ್ಯಾತ ಶಿಲ್ಪಿ ಬ್ರುನೆಲ್ 1825ರಲ್ಲಿ ಥೇಮ್ಸ್‌ ನದಿಯ ಕೆಳಗೆ ಸುರಂಗವನ್ನು ತೋಡುವಾಗ ಮೊದಲು ಉಪಯೋಗಿಸಿದ. ಇಲ್ಲಿ ಬಳಸುವ ಇಟ್ಟಿಗೆಗಳ ಅದುಮುವ ಶಕ್ತಿ ಹೆಚ್ಚಾಗಿರಬೆಕು. ಅವು ಹೆಚ್ಚಾಗಿ ನೀರನ್ನು ಹೀರಬಾರದು. ಇಟ್ಟಿಗೆಗಳನ್ನು ನೀರಿನಲ್ಲಿ ಅದ್ದಿ ಉಪಯೋಗಿಸಬೇಕು. ಇಟ್ಟಿಗೆ ಗಾರೆಯ ಸಂದುಗಳಲ್ಲಿ ಒಂದೇ ದಿಕ್ಕಿನಲ್ಲಿ ಕಬ್ಬಿಣದ ಕಂಬಿಗಳನ್ನು ಸಿಮೆಂಟ್ ಗಾರೆಯಲ್ಲಿ ಕೂರಿಸುತ್ತಾರೆ. ಇದರ ಸಂವಿಧಾನವನ್ನು ಪ್ರಬಲಿತ ಕಾಂಕ್ರೀಟಿನ ಹಾಗೆಯೇ ಮಾಡಬಹುದು. ಉದ್ದವಾಗಿ ಹೋಗುವ ಕಂಬಿಗಳಲ್ಲಿಯೂ ಚಪ್ಪಟೆಯಾದ ಭಾಗದ (ವೆಬ್) ಕಂಬಿಗಳಲ್ಲಿಯೂ ಎಳೆತದ ತ್ರಾಸ ಚದರ ಸೆಂಮೀಗೆ 18,000 ಪೌಂಡುಗಳಿರಬಹುದು.ಬಣ್ಣಗಳು, ಮೆರುಗೆಣ್ಣೆಗಳು (ಪೇಂಟ್ಸ್‌ ಅಂಡ್ ವಾರ್ನಿಷಸ್) : ಕಟ್ಟಡದ ಸಾಮಗ್ರಿಗಳನ್ನು ಗಾಳಿ, ಬಿಸಿಲು ಮತ್ತು ಮಳೆಗಳಿಂದ ಕಾಪಾಡಲೂ ಅಲಂಕಾರಕ್ಕಾಗಿಯೂ ಅವಕ್ಕೆ ಬಣ್ಣಗಳನ್ನ ಮೆರುಗೆಣ್ಣೆಯನ್ನೂ ಬಳಿಯುತ್ತಾರೆ.

ತೈಲವರ್ಣಗಳಲ್ಲಿ ಈ ಭಾಗಗಳಿವೆ

[ಬದಲಾಯಿಸಿ]

(1) ವರ್ಣದ್ರವ್ಯ: ಬಿಳಿ ಸೀಸ, ಕೆಂಪು ಸೀಸ, ಬಿಳಿ ಸತು, ಲೋಹಗಳ ಆಕ್ಸೈಡುಗಳು. (2) ವರ್ಣದ್ರವ್ಯಗಳೊಂದಿಗೆ ಕೆಲವು ಜಟಪದಾರ್ಥಗಳನ್ನು ಬೆರೆಸಿ ಗಾತ್ರವನ್ನು ಹೆಚ್ಚಿಸುತ್ತಾರೆ. (3) ಬಣ್ಣದ ವಾಹಕ (ಕ್ಯಾರಿಯರ್) ವರ್ಣದ್ರವ್ಯಗಳನ್ನು ಕರಗಿಸುತ್ತದೆ. ಉದಾಹರಣೆಗೆ ಅಗಸೆ ಎಣ್ಣೆ. (4) ಟರ್ಪೆಂಟೈನ್ ಮುಖ್ಯವಾದ ದ್ರಾವಕ (ಸಾಲ್ವೆಂಟ್). (5) ತೇವವನ್ನು ಆರಿಸುವ ವಸ್ತುಗಳಲ್ಲಿ ಮುಖ್ಯವಾದದ್ದು ಅಗಸೆ ಎಣ್ಣೆ.ರಾಳವನ್ನು ಅಗಸೆ ಎಣ್ಣೆಯಲ್ಲಿಯೋ ಸ್ಪಿರಿಟ್ಟಿನಲ್ಲಿಯೋ ದ್ರಾವಣಮಾಡಿ ಮೆರು ಗೆಣ್ಣೆಯನ್ನು ತಯಾರಿಸುತ್ತಾರೆ. ಇದು ಪಾರದರ್ಶಕವಾಗಿದೆ. ತೇಗದ ಮರದ ಮೇಲೆ ಬಳಿದರೆ ಎಳೆಗಳ ರಚನೆ ಲಕ್ಷಣವಾಗಿ ಎದ್ದುಕಾಣುತ್ತದೆ. ಜೇನುಮೇಣವನ್ನು ಮರದ ರಂಧ್ರಗಳಿಗೆ ತೂರಿ ಉಜ್ಜಿದರೆ ಹೆಚ್ಚು ಕಾಲ ಉಳಿಯುವ ಮೆರುಗು ಬರುತ್ತದೆ.

ಪದರ ಹಲಗೆ (ಪ್ಲೈವುಡ್)

[ಬದಲಾಯಿಸಿ]

ಈಚೆಗೆ ನೇರ ಮರದ ಉಪಯೋಗ ಮುಂದುವರಿದ ದೇಶಗಳಲ್ಲಿ ಕಡಿಮೆಯಾಗುತ್ತಿದೆ. ಇದಕ್ಕೆ ಮರದ ಅಭಾವವೂ ಮುಖ್ಯವಾದ ಒಂದು ಕಾರಣ. ಮರದ ಬದಲು ಈಗ ಸಂಶ್ಲೇಷಿತ ಅಂಟುಗಳಿಂದ ಜೋಡಿಸಿದ ಪದರದ ಹಲಗೆಯ ಉಪಯೋಗ ಹೆಚ್ಚುತ್ತಿದೆ. ಈ ಹಲಗೆಯಲ್ಲಿ ಒಂದು ಪದರವನ್ನು ಎಳೆಗಳ (ಗ್ರೇನ್ಸ್‌) ದಿಕ್ಕಿನಲ್ಲಿಯೂ ಇನ್ನೊಂದನ್ನು ಅದಕ್ಕೆ ಸಮಕೋನವಾಗಿಯೂ ಇಟ್ಟು ಒಂದು ಹಲಗೆಯಲ್ಲಿ ಇಂಥ ಮೂರೋ ಐದೋ ಜೊತೆಗಳನ್ನು ಅಂಟಿನಿಂದ ಅಂಟಿಸುತ್ತಾರೆ. ಇದರಿಂದ ಮರದ ಒಂದು ದಿಕ್ಕಿನ ಗುಣಗಳು ಸಮಕೋನವಾದ ದಿಕ್ಕಿನ ಗುಣಗಳೊಂದಿಗೆ ಬೆರೆತುಹೋಗುತ್ತವೆ. ನೀರನ್ನು ತಡೆಯತಕ್ಕ ಅಂಟುಗಳು ಬರುವವರೆಗೂ ಮನೆಯ ಒಳಗೇ ಇವನ್ನು ಉಪಯೋಗಿಬೇಕಾಗಿತ್ತು. ಇಂದಿನ ಪದರದ ಹಲಗೆಗಳನ್ನು ಮರಕ್ಕೆ ಬದಲಾಗಿ ಒಳಗೂ ಹೊರಗೂ ಬಳಸಬಹುದು. ರಚನಾವೈಶಿಷ್ಟ್ಯದಿಂದ ಅಗಲದಲ್ಲಿ ಇದು ಕುಗ್ಗುವುದು ಬಹು ಕಡಿಮೆ, ಮರವಾದರೆ ಇದರ ಹತ್ತು ಪಟ್ಟು ಕುಗ್ಗುತ್ತದೆ. ಆದರೆ ಉದ್ದದಲ್ಲಿ ಮಾತ್ರ ಇದು ಮರಕ್ಕಿಂತ ಮೂರು ಪಟ್ಟು ಹಿಗ್ಗುತ್ತದೆ.ಪದರ ಹಲಗೆ ಈಜಿಪ್ಟಿನವರಿಗೆ 3,500 ವರ್ಷಗಳ ಹಿಂದೆಯೇ ತಿಳಿದಿತ್ತು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಮರದ ಕೊರತೆಯ ಸಲುವಾಗಿ ಹಲಗೆಯ ಉಪಯೋಗ ಹೆಚ್ಚಿತು. ಸಂಶ್ಲೇಷಿತ ಅಂಟುಗಳು ತಯಾರಾದದ್ದು 1930ರಲ್ಲಿ, ಮರದ ತೆಳುವಾದ ಪದರಗಳ ಬಲವನ್ನು ಈ ಅಂಟು ಹೆಚ್ಚಿಸುತ್ತದೆ. ಪದರಗಳನ್ನು (ವಿನಿಯರ್ಸ್‌) ಗರಗಸದಿಂದ ಮರವನ್ನು ಕೊಯ್ದು ಮಾಡುತ್ತಾರೆ. ಅಂಟಿನಿಂದ ಮರದ ಗಡಸು (ಸ್ಟಫ್ನೆಸ್) ಹೆಚ್ಚಾಗುತ್ತದೆ. ಮರವನ್ನು ದುರ್ಬಲಗೊಳಿಸುವ ತೇವ, ಬೂಷ್ಟು, ಕ್ರಿಮಿಗಳು, ಬ್ಯಾಕ್ಟಿರಿಯ-ಇವುಗಳಿಂದ ಆಗುವ ತೊಂದರೆ ತಪ್ಪುತ್ತದೆ.ಅಂಟುಗಳಲ್ಲಿ ಉಷ್ಣದಿಂದ ಗಟ್ಟಿಯಾಗತಕ್ಕವು (ಥರ್ಮೋಸೆಟ್ಟಿಂಗ್) ಮತ್ತು ಉಷ್ಣದಿಂದ ಜಿಗಟಾಗತಕ್ಕವು (ಥರ್ಮೋಪ್ಲಾಸ್ಟಿಕ್) ಎಂಬ ಎರಡು ಬಗೆಗಳಿವೆ. ಮೊದಲನೆಯ ನಮೂನೆಯ ಫಿನಾಲಿನ ರಾಳದಿಂದ ಮಾಡುವ ಅಂಟನ್ನು ತೆಳುವಾದ ಬಲಿಷ್ಠವಾದ ಪದರಗಳನ್ನು ಮಾಡಲು ಬಳಸುತ್ತಾರೆ. ಇದರ ಬೆಲೆ ಕಡಿಮೆ, ಎರಡನೆಯ ನಮೂನೆಯಲ್ಲಿ ಹೆಚ್ಚಿನ ಸ್ಥಿತಿಸ್ಥಾಪಕತ್ವವುಳ್ಳ ಬಂಧನ (ಬಾಂಡ್) ದೊರೆಯುತ್ತದೆ.

ಪದರ ಹಲಗೆಯ ವಿವಿಧ ಬಳಕೆ

[ಬದಲಾಯಿಸಿ]

ವಿಮಾನಗಳಲ್ಲಿ ಬಳಸುವ ಮೂರು ಪದರದ ಹಲಗೆಗೆ ನೇರವಾಗಿ ಚದರ ಸೆಂಮೀಗೆ 8482 ಕಿಗ್ರಾಂಗಳಷ್ಟೂ ಅಡ್ಡಲಾಗಿ 10676 ಕಿಗ್ರಾಂಗಳಷ್ಟೂ ಬಿಗುವಿನ ಸಾಮಥರ್ಯ್‌ವಿದೆ. ಪದರಗಳನ್ನು ಹೀಗೆ ಹಾಗೆ ಜೋಡಿಸಿ ಅಂಟನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಹಲಗೆಯ ಶಕ್ತಿಯನ್ನು ಅವಶ್ಯಕತೆಗೆ ತಕ್ಕಂತೆ ಬದಲಾಯಿಸಬಹುದು. ಇದು ನೀರು ಬಿದ್ದರೂ ಕೆಡುವುದಿಲ್ಲ. 0.45 ಕಿಗ್ರಾಂ ತೂಕ ಉಕ್ಕಿಗಿಂತ 0.45 ಕಿಗ್ರಾಂ ಪದರದ ಹಲಗೆಯ ಬಲ ಹೆಚ್ಚು. ಹುಳುಗಳು ಇದನ್ನು ತಿನ್ನುವುದಿಲ್ಲ. ಇದು ಸೀಳುವುದಿಲ್ಲ. ಉಬ್ಬುವುದಿಲ್ಲ, ಬಿರುಕು ಬಿಡುವುದಿಲ್ಲ; ಉಷ್ಣವನ್ನು ನಿರೋಧಿಸುತ್ತದೆ. ಹಗುರವಾಗಿದೆ. ಅಗಲವಾದ ನಯವಾದ ಹಲಗೆಗಳಾಗಿ ದೊರೆಯುತ್ತವೆ.ಪದರ ಹಲಗೆಗಳಿಂದ ಪುರ್ವಭಾವಿಯಾಗಿ ಜೋಡಿಸಿದ ಮನೆಗಳನ್ನು ಹೂಡುವುದು ಸಾಧ್ಯ. ಇವನ್ನು ಸುಲಭವಾಗಿ ಬೇಗ ಕಟ್ಟಬಹುದು. ಬೆಲೆ ಮಾತ್ರ ಹೆಚ್ಚಾಗುತ್ತದೆ. ಯುದ್ಧಕಾಲದಲ್ಲಿ ತಾತ್ಕಾಲಿಕವಾದ ಕಚೇರಿಗಳಿಗೆ ಇಂಥ ಷೆಡ್ಡುಗಳನ್ನು ಉಪಯೋಗಿಸುತ್ತಿದ್ದರು. ರೈಲ್ವೆ ಗಾಡಿಗಳಲ್ಲಿಯೂ ಮೋಟಾರ್ ಲಾರಿಗಳಲ್ಲಿಯೂ ಈ ಹಲಗೆಗಳನ್ನು ಧಾರಾಳವಾಗಿ ಉಪಯೋಗಿಸುತ್ತಾರೆ.ಮೆದುವಾದ ಮರದ ಹಲಗೆಗಳಿಗೆ ಸಂಶ್ಲೇಷಿತ ಅಂಟನ್ನು ಹಚ್ಚಿ ಮೇಲೆ ಪದರಗಳನ್ನು ಜೋಡಿಸಿ ಸಾಧಾರಣವಾದ ಪದರದ ಹಲಗೆಗಳನ್ನು ಶೇ. 10ಕ್ಕಿಂತ ಹೆಚ್ಚು ಸಂಕೋಚನ (ಕಂಪ್ರೆಶನ್) ಆಗದ ಹಾಗೆ ಮಾಡುತ್ತಾರೆ.

ತಯಾರಿಕೆ ವಿಧಾನ

[ಬದಲಾಯಿಸಿ]

ತೆಳುವಾದ 0.71ಮಿಮೀ ಗಟ್ಟಿಮರದ ಪದರಗಳನ್ನು ರಾಸಾಯನಿಕ ಅಂಟಿನಿಂದ ಜೋಡಿಸಿ ನೂರಾರು ಟನ್ನುಗಳ ಒತ್ತಡದಲ್ಲಿ ಅಂಟು ಕರಗಿ ನೀರಾಗುವ ಕಾವಿನಲ್ಲಿ ತಯಾರಿಸಿದರೆ ಅದರ ತೂಕ ಸಲೆ ಮೀ ಗೆ 33.10 ಕಿಗ್ರಾಂ ವರೆಗೂ ಏರುತ್ತದೆ. ಬೀಚ್ ಮರದ ತೂಕ ಸಲೆ 21.21 ಕಿಗ್ರಾಂ ಫಾರ್ಮ್ಲಿಗ್ನಮ್ ಎಂಬ ಪದರದ ಹಲಗೆಯ ಬಿಗುವಿನ ಸಾಮಥರ್ಯ್‌ ಚದರ ಅಂಗುಲಕ್ಕೆ 20320 ಮೆಟ್ರಿಕ್ ಟನ್. ಇದನ್ನು ವಿಮಾನದ ತಿರುಪಿನ ಚಾಲಕಗಳಲ್ಲಿ ಉಪಯೋಗಿಸುತ್ತಾರೆ. ಕಾಯಿಸಿದ ಗಟ್ಟಿಯಾದ ಯೂರಿಯದ ದ್ರಾವಣದಲ್ಲಿ ತೋಯಿಸಿದ ಸಾಧಾರಣ ಮರವನ್ನು ಯೂರಲ್ಲಾಯ್ ಎನ್ನುತ್ತಾರೆ. ತೋಯಿಸಿದ ಕೂಡಲೆ ಈ ಮರವನ್ನು ಯಾವ ಆಕಾರಕ್ಕೆ ಬೇಕಾದರೂ ತಿರುಗಿಸಬಹುದು. ಗಟ್ಟಿಯಾದ ಮೇಲೆ ಇದು ಆಯಾ ಆಕಾರವನ್ನು ಉಳಿಸಿಕೊಳ್ಳುತ್ತದೆ. ಈ ಕ್ರಮದಲ್ಲಿ ಒಂದು ಹೊಸ ರೀತಿಯ ಸಾಮಗ್ರಿಯೇ ಉತ್ಪತ್ತಿಯಾಗುತ್ತದೆ.

ಕಟ್ಟಡದ ಹಲಗೆಗಳು

[ಬದಲಾಯಿಸಿ]

ಗೋಡೆಗಳು, ತಡಿಕೆಗಳು ಮತ್ತು ಒಳಮಾಳಿಗೆಗಳಿಗೆ ಹಗುರವಾಗಿರುವುದರಿಂದ ಎತ್ತಿ ಇಡುವುದು ಸುಲಭ, ಕೆಲವು ಹಲಗೆಗಳು ಉಷ್ಣವನ್ನೂ ಧ್ವನಿಯನ್ನೂ ತಡೆಯುತ್ತವೆ. ಮುಖ್ಯವಾದ ನಮೂನೆಗಳನ್ನು ಪುಟ 575ರಲ್ಲಿ ಕೊಟ್ಟಿದೆ. ಂ ಅವಾಹಕ ಹಲಗೆಗಳು ಧ್ವನಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಿಡದ ಹಾಗೆ ತಡೆಯುತ್ತವೆ. ಇವನ್ನು ಗೋಡೆ ಮತ್ತು ಒಳಮಾಳಿಗೆಯಲ್ಲಿ ಉಪಯೋಗಿಸುತ್ತಾರೆ. ಬಿಟ್ಯುಮಿನ್ಪುರಿತ ಹಲಗೆಗಳು ತೇವವನ್ನು ಒಳಗೆ ಬಿಡುವುದಿಲ್ಲ. ಪದರದ ಹಲಗೆಗಳನ್ನು ಪುಟೀಪುಗಳು, ತಡಿಕೆ ಮತ್ತು ಕೆಳಗೋಡೆಗಳಲ್ಲಿ ಬಳಸುತ್ತಾರೆ. ಗಟ್ಟಿಯಾದ ಹಲಗೆಗಳಿಂದ ಬೀರುಗಳು ಮತ್ತು ಅಂಗಡಿಯ ಬಾಗಿಲುಗಳನ್ನು ಮಾಡುತ್ತಾರೆ. ಬಹಳ ಗಟ್ಟಿಯಾದವನ್ನು ನೆಲಕ್ಕೆ ಹಾಸುತ್ತಾರೆ.

ಪರ್ಯಾಯ (ಆಲ್ಟರ್ನೇಟಿವ್) ಮತ್ತು ಬದಲಿ (ಸಬ್ಸ್ಟಿಟ್ಯೂಟ್) ಸಾಮಗ್ರಿಗಳು

[ಬದಲಾಯಿಸಿ]

ಭಾರತದಲ್ಲಿ ಎರಡನೆಯ ಮಹಾಯುದ್ಧದ ಕಾಲದಿಂದಲೂ ಕಟ್ಟಡದ ಸಾಮಗ್ರಿಗಳಿಗೆ ತೊಂದರೆಯಾಗಿದೆ. ಆಳುಗಳು ಸಿಕ್ಕುವುದಿಲ್ಲ. ಪದಾರ್ಥಗಳ ಬೆಲೆ ಮಿತಿಮೀರಿದೆ. ಅದಕ್ಕಾಗಿ ಸಾಕಷ್ಟು ಸಿಕ್ಕದೆ ಇರುವ ಆವಶ್ಯವಾದ ಸಾಮಗ್ರಿಗಳಿಗೆ ಬದಲಾಗಿ ಸಂಶೋಧನಾಲಯದಲ್ಲಿ ಬೇರೆ ಸಾಮಗ್ರಿಗಳ ನಿರ್ಮಾಣವಾಗಿ ಅವು ಮಾರುಕಟ್ಟೆಗೆ ಬಂದಿವೆ. ಇದರಿಂದ ಕಟ್ಟಡದ ಕೈಗಾರಿಕೆಗೆ ತುಂಬ ಸಹಾಯವಾಗಿದೆ. ಆದರೆ ಈ ಮಾನವನಿರ್ಮಿತ ಸಾಮಗ್ರಿಗಳ ಮಿತಿಯನ್ನು ಹುಷಾರಾಗಿ ತಿಳಿದು ಉಪಯೋಗಿಸಬೇಕು. ಮರ, ಕಲ್ಲು, ಇವುಗಳ ಹಾಗೆ ಈ ಸಾಮಗ್ರಿಗಳ ಉಪಯೋಗ ಸಾರ್ವತ್ರಿಕವಲ್ಲ, ಒಂದು ಉದ್ದೇಶಕ್ಕಾಗಿ ತಯಾರಾದ ಸಾಮಗ್ರಿಯನ್ನು ಇನ್ನೊಂದಕ್ಕೆ ಉಪಯೋಗಿಸಲಾಗುವುದಿಲ್ಲ.

ಉಲ್ಲೇಖಗಳು=

[ಬದಲಾಯಿಸಿ]