ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ
ಕರ್ನಾಟಕದಲ್ಲಿ ಪುರಾಣ ಕಾಲದಿಂದ ರಜತ ಪೀಠಪುರವೆಂದು ಹೆಸರಾದ ಉಡುಪಿ ನಗರದ ಪೂರ್ವ ದಿಕ್ಕಿನಲ್ಲಿರುವ ಕಡಿಯಾಳಿ ಗ್ರಾಮದಲ್ಲಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ದೇವಸ್ಥಾನವಿದೆ.[೧] ಉಡುಪಿಯ ಬಸ್ ನಿಲ್ದಾಣದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಈ ದೇಗುಲವಿದೆ.
ಇತಿಹಾಸ
[ಬದಲಾಯಿಸಿ]ತೌಳವ ರಾಜಮನೆತನದ ರಾಜನಾಗಿದ್ದ ರಾಮಭೋಜನು ತನಗೆ ಸಂತಾನವಾಗಬೇಕೆಂದು ಪುತ್ರಕಾಮೇಷ್ಥಿಯಾಗ ಮಾಡಿಸಿದ. ಯಾಗಭೂಮಿಯನ್ನು ನೇಗಿಲಿನಿಂದ ಉಳುವಾಗ ಒಂದು ಸರ್ಪವು ನೇಗಿಲಿಗೆ ಸಿಕ್ಕಿ ಸತ್ತುಹೋದುದರಿಂದ ಇದರ ಹತ್ಯೆಯ ಪ್ರಾಯಶ್ಚಿತಕ್ಕಾಗಿ ನಾರಾಯಣನ ದೇವಾಲಯವನ್ನು ಪ್ರತಿಷ್ಥಾಪನೆ ಮಾಡಿದರು. ಅದು ಅನಂತೇಶ್ವರ ದೇವಾಲಯ, ಅಲ್ಲದೆ ಈ ದೇವಾಲಯದ ಸುತ್ತಮುತ್ತ ನಾಲ್ಕು ದುರ್ಗೆಯ ದೇವಾಲಯಗಳಿವೆ. ಅದರಲ್ಲಿ ಒಂದು ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನವಾಗಿದೆ ಎಂಬುವುದು ಪ್ರತೀತಿ. ಉಳಿದ ಮೂರು ದೇವಾಲಯಗಳೆಂದರೆ ಉಡುಪಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಬೈಲೂರು ಮಹಿಷಮರ್ದಿನಿ ದೇವಾಲಯ, ಕನ್ನರ್ಪಾಡಿಯ ಜಯದುರ್ಗೆ[೨] ಮತ್ತು ಪುತ್ತೂರು ದುರ್ಗಾಪರಮೇಶ್ವರಿ ದೇವಾಲಯ.
ವಿಶೇಷತೆ
[ಬದಲಾಯಿಸಿ]ಉಡುಪಿ ಶ್ರೀ ಕೃಷ್ಣ ಮಠಕ್ಕೂ ಕಡಿಯಾಳಿ ದೇವಾಲಯಕ್ಕೂ ನಿಕಟವಾದ ಸಂಬಂಧವಿದೆ. ಉಡುಪಿ ಪರ್ಯಾಯ ಪೀಠವನ್ನೇರುವ ಮೊದಲು ಸ್ವಾಮಿಗಳು ದೇವಿಯ ಬಳಿ ಬಂದು ಪ್ರಾರ್ಥಿಸುವುದು ಸಂಪ್ರದಾಯವಾಗಿದೆ. ಮುಖ ಮಂಟಪದ ಕಂಬದಲ್ಲಿ ಕೊರೆದ ಗಣಪತಿ ಹಾಗೂ ಇನ್ನೊಂದು ಕಂಬದಲ್ಲಿ ಮುಖ್ಯಪ್ರಾಣ ದೇವರ ಕೊರೆದ ವಿಗ್ರಹವಿದೆ. ಹಾಗೆ ಈ ದೇವಾಲಯದಲ್ಲಿ ಒಂದು ಕಡೆಯಲ್ಲಿ ಧೂಮಾವತಿ ದೈವದ ಮಣೆಯಿದೆ, ಹೊರಗಡೆ ಮರದ ನಂದಿ, ವಾಯುವ್ಯ ದಿಕ್ಕಿನಲ್ಲಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಮತ್ತು ಈಶಾನ್ಯ ದಿಕ್ಕಿನ ಮೂಲೆಯಲ್ಲಿ ವ್ಯಾಘ್ರಚಾಮುಂಡಿ ಗುಡಿಯಿದೆ. ಈ ದೇವಾಲಯದಲ್ಲಿ ರಾಜ್ಯದ ಪ್ರಥಮ ತಿರುಗುವ ಮರದ ಮುಚ್ಚಿಗೆಯಿದೆ.[೩] ಶುಕ್ರವಾರವು ಕ್ಷೇತ್ರದ ದೇವತೆಗೆ ವಿಶೇಷ. ಪ್ರತಿ ಶುಕ್ರವಾರ ೧೨ ಸುವಾಸಿನಿಯರ ಸಮಾರಾಧನೆಯನ್ನು ಇಲ್ಲಿ ನಡೆಸಿಕೊಂಡು ಬಂದಿದ್ದಾರೆ.
ಶಿಲ್ಪಕಲೆಯ ಸೊಬಗು
[ಬದಲಾಯಿಸಿ]ಕಡಿಯಾಳಿಯ ಮಹಿಷಮರ್ದಿನಿ ದೇವಿಯ ವಿಗ್ರಹವು ಕ್ರಿ.ಶ. ೬೦೦-೭೫೦ರವರೆಗಿನ ಶಿಲ್ಪದ ಶೈಲಿಯಲ್ಲಿ ಹೊಂದಿದೆ. ಬಾದಮಿ ಚಾಲುಕ್ಯರ ಶಿಲ್ಪ ಲಕ್ಷಣವು ವಿಗ್ರಹದಲ್ಲಿ ಕಾಣಸಿಗುತ್ತದೆ. ದೇವಳವು ತೌಳವ ಶೈಲಿಯಲ್ಲಿ ನಿರ್ಮಿತವಾಗಿದೆ. ೧೪೦೦/೧೫೦೦ ವರ್ಷಗಳ ಇತಿಹಾಸವಿದೆ.ಈ ವಿಗ್ರಹ ಸುಮಾರು ೩೦ ಇಂಚು ಎತ್ತರವಿದ್ದು, ಮೇಲಿನ ಎರಡು ಕೈಯಲ್ಲಿ ಶಂಖ, ಚಕ್ರ, ಕೆಳಗಿನ ಬಲಗೈಯಲ್ಲಿ ತ್ರಿಶೂಲವಿದ್ದು ಅದರ ಕೆಳಗೆ ದೇವಿಯ ಕಾಲಬುಡದಲ್ಲಿ ಸತ್ತು ಬಿದ್ದಿರುವ ಮಹಿಷಾಸುರನ ತಲೆಯನ್ನು ಒತ್ತಿ ಹಿಡಿದಿದೆ. ಹಿಂಗಾಲು ಎತ್ತಿ ಕೆಳಗೆ ಬಿದ್ದ ಮಹಿಷನ ಬಾಲವು ದೇವಿಯ ಎಡಗೈಯಲ್ಲಿದೆ. ದೇವಿಗೆ ಕಿರೀಟ,ಕುಂಡಲ, ಕೊರಳಲ್ಲಿ ತಾಳಿ ಮತ್ತು ಸೊಂಟದಲ್ಲಿ ಒಂದು ಉಡ್ಯಾಣವಿದೆ.
ದೇವಾಲಯದ ರಚನೆ
[ಬದಲಾಯಿಸಿ]ಮಹಿಷಮರ್ದಿನಿ ದೇವಾಲಯವು ೨೦೨೨ ಜೂನ್ ನಲ್ಲಿ ಜೀರ್ಣೋದ್ಡಾರಗೊಂಡ ಮೂಲಕ ಸುಮಾರು ೧೨೦೦೦ ಚದರ ಅಡಿ ದೇಗುಲದ ಒಳಾಂಗಣ,ಸುತ್ತು ಪೌಳಿ,ಹೊರಾಂಗಣವು ಶಿಲೆಯಿಂದ ನಿರ್ಮಿತವಾಗಿದೆ.ಹಾಗೆ ಪಿಲಿಚಂಡಿ ಹಾಗೂ ಪರಿವಾರ ದೈವಗಳ ಗುಡಿಗಳಿವೆ.
ವಿಶೇಷ ಸೇವೆಗಳು
[ಬದಲಾಯಿಸಿ]ವಿವಾಹ ಸೇರಿದಂತೆ ಎಲ್ಲಾ ಶುಭಕಾರ್ಯಗಳಿಗೆ ಪುಷ್ಪಪ್ರಸಾದ, ಚಂಡಿಕಾ ಹೋಮ,ಅನ್ನದಾನಗಳು,ಹೂವಿನ ಪೂಜೆ, ರಂಗ ಪೂಜೆ, ಕುಂಕುಮಾರ್ಚನೆ, ತುಲಾಭಾರ ಸೇವೆ, ದೇವಿ ಪಾರಾಯಣ.