ವಿಷಯಕ್ಕೆ ಹೋಗು

ಕಡ್ಡಾಯಿ-ಕೊರಗರ ಡೋಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊರಗರ ಕಡ್ಡಾಯಿ ಅಥಾವ ಕೊರಗರ ಡೋಲು

ಕರ್ನಾಟಕದಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿ ಜನಾಂಗದಲ್ಲಿ ಕೊರಗ ಒಂದು. ಕೊರಗ ಎಂಬುದು ಜಾತಿಸೂಚಕ ಹೆಸರು.ಈ ಜನವರ್ಗದವರು ನಡೆಸಿಕೊಡುವ ಕುಣಿತಕ್ಕೆ ಡೋಲು ಅಥವಾ 'ಕಡ್ಡಾಯಿ' ಅಗತ್ಯ. ಡೋಲು/ಕಡ್ಡಾಯಿ ವಾದ್ಯದಲ್ಲಿ ಮೂರು ಪ್ರಕಾರಗಳಿವೆ, ಕರಾವಳಿ ಕರ್ನಾಟಕದಲ್ಲಿ 'ಕೊರಗ ಸಮುದಾಯದವರು ಹೆಚ್ಚಾಗಿ 'ಡೋಲು/ಕಡ್ಡಾಯಿ' ವಾದ್ಯವನ್ನು ಧಾರ್ಮಿಕ ಹಾಗೂ ಸಾಮಾಜಿಕ ಸಂದರ್ಭಗಳಲ್ಲಿ ನುಡಿಸುವುದನ್ನು ಹೆಚ್ಚಾಗಿ ಕಾಣಬಹುದು.

ಪ್ರಕಾರಗಳು

[ಬದಲಾಯಿಸಿ]

1-ಕಂಚಿನ ಕಡ್ಡಾಯಿ : ಕಂಚಿನ ಲೋಹದ ಕವಚ ಹೊಂದಿದ್ದ ವಾದ್ಯ

2-ಮರತ ಕಡ್ಡಾಯಿ : ಮರದ ಹೊರ ಕವಚ ಹೊಂದಿದ್ದ ವಾದ್ಯ

3-ಬೈದೆರಲ್ ಕಡ್ಡಾಯಿ: ನಿರ್ದಿಷ್ಟ ಜನವರ್ಗದವರ (ಬಿಲ್ಲವ) ಗರೋಡಿಗಳಲ್ಲಿ ಆರಾಧನೆ ನಡೆಯುವಾಗ ಉಪಯೋಗಿಸುವ ವಾದ್ಯ.

ಭೂತಾರಧನೆ: ಗಗ್ಗರದೆಚ್ಚಿ ಡೋಲು ಹೊಡೆಯೊದು-ಧರ್ಮದೈವ ನೇಮ

[]

ಇತಿಹಾಸ

[ಬದಲಾಯಿಸಿ]

ಒಂದು ಕಾಲದಲ್ಲಿ ಈ ಜನವರ್ಗದವರು ಲೋಹ ನಿರ್ಮಿತ ಕಡ್ಡಾಯಿ ಬಳಸುತ್ತಿದ್ದುದರ ಬಗ್ಗೆ ಮೌಖಿಕ ಇತಿಹಾಸಕ್ಕೆ ಪೂರಕವಾಗಿರುವ ಕಥೆಗಳಿವೆ. ಪಡ್ಡಂಬೂಡು (ಉಡುಪಿ ಜಿಲ್ಲೆ ಹಿರಿಯಡ್ಕ ಗ್ರಾಮ) ಇಲ್ಲಿನ ಜೈನ ಮನೆತನದವರ ವ್ಯಾಪ್ತಿಯಲ್ಲಿದ್ದ ಕೊರಗರಲ್ಲಿ ಕಂಚಿನ ಕಡ್ಡಾಯಿ ಹೊಂದಿದವರಾಗಿದ್ದರು. ಟಿಪ್ಪು ಸುಲ್ತಾನ-ನ ಕಾಲ (ಕ್ರಿ.ಶ. 1783-84 ರಲ್ಲಿ) ಸುಲ್ತಾನನ ಕಡೆಯವರು ಕರಾವಳಿ ಕರ್ನಾಟಕದತ್ತ ದಾಳಿ ನಡೆಸುತ್ತಿದ್ದ ಕಾಲವದು. ಒಮ್ಮೆ ಸುಲ್ತಾನನ ದಂಡು ಹಿರಿಯಡ್ಕ-ಭಾಗದತ್ತ ಬಂದಾಗ ಲೋಹದ ಮೂರ್ತಿ,ಲೋಹ ಸಂಬಂಧಿಯಾದ ಸರಂಜಾಮುಗಳನ್ನು ಮದ್ದು ಗುಂಡು ತಯಾರಿಸಲು ಬೆಳ್ತಂಗಡಿ ಸಮೀಪದ ಜಮಾಲಗಡ (ದ.ಕ.ಜಿಲ್ಲೆ) ಕೋಟೆಗೆ ಕೊಂಡೊಯುತ್ತಿದ್ದರು. ಇದನ್ನರಿತು ಜೈನ ಆಳ್ವಿಕೆಯ ಬೀಡಿನವರ ಕಂಚಿನ ಕಡ್ಡಾಯಿಯನ್ನು ಕೊಂಡೊಯ್ಯಹುದೆಂದು ಮುಂಜಾಗ್ರತೆಯಾಗಿ ಉಳಿಸಿಕೊಳ್ಳಲು ಜೈನರ ಬೀಡಿನ ಬಾವಿಗೆ ಹಾಕುವಂತೆ ಹೇಳಿದರು. ಕಡ್ಡಾಯಿ ನೀರ ಪಾಲಾಯ್ತು. ಅಂದು ಕಂಚಿನ ಡೋಲು ಕಳೆದುಕೊಂಡವರು ಮತ್ತೆ ದಕ್ಕಿಸಿಕೊಳ್ಳಲಿಲ್ಲ. ಇಂದು ಬಾಯ್ದೆರೆಯ ಕಥೆಯಾಗಿ ಕೊರಗ ಜನವರ್ಗದವರು ಕಂಚಿನ ಕಡ್ಡಾಯಿ ಬಗ್ಗೆ ನೆನಪಿಸಿಕೊಳ್ಳುತ್ತಾರೆ. 'ಕಡ್ಡಾಯಿ' ವಾದ್ಯದ ಮೂಲಕ ನುಡಿಸುವ ತಾಳಗಳಿಗೆ 'ಟಕ್ಕು'-ಗಳೆಂದು ಹೇಳುತ್ತಾರೆ. ಉದಾ:- 'ಮಾರಿ ನಡಪು ಟಕ್ಕು ',(ಮಾರಿ ಓಡಿಸುವಾಗ ನುಡಿಸುವ ತಾಳ) 'ಕಂಬಳದ ಟಕ್ಕು (ಕೋಣಗಳನ್ನು ಓಡಿಸುವ ಕ್ರೀಡೆ ಸಂದರ್ಭದ ತಾಳ)'ಸಾವುದ ಟಕ್ಕು ' (ಸಾವಿನ ಸಂದರ್ಭದಲ್ಲಿ ಬಳಸುವ ನುಡಿತ ). ಪ್ರಸ್ತುತ ಈ ಜನವರ್ಗದವರು ಇಂದು ಡೋಲು ಅಥವಾ 'ಕಡ್ಡಾಯಿ' ನುಡಿಸುವುದು ಕಾನೂನು ಬಾಹಿರವಾಗುತ್ತಿದೆ. ಒಂದರ್ಥದಲ್ಲಿ ಇವರ ಡೋಲು ನುಡಿಸುವ ಕಲೆ ಕ್ಷಯಿಸುತ್ತಿದೆ. []

ಕೊರಗ ಜನಾಂಗದ ಇತಿಹಾಸ

[ಬದಲಾಯಿಸಿ]

ಕೊರಗ ಜನವರ್ಗದ ಅರಸ-ನ ಹೆಸರು 'ಹುಬಶಿಕ' ಅಥವಾ 'ಹಬಶಿಕ'ಎಂಬುದು ಮಾನವಶಾಸ್ತ್ರಜ್ಞ ಇ-ಥರ್ಸಟನ್-ನ ಅಭಿಪ್ರಾಯ. ಬಹುಶಃ 'ಹಬಶಿ'-ಎನ್ನುವುದು ಅಬ್ಬಿಸೀನಿಯ-ದಿಂದ ಬಂದ ಜನವರ್ಗದವರಾಗಿರಬಹುದು, ಆಫ್ರಿಕನ್ ಭಾಷಾ ನೆಲೆಗಟ್ಟಿನಲ್ಲಿ 'ಅಬ್ಸಿ'-ಎಂದರೆ ಹೊರಗಿನವ ಎಂದರ್ಥವೂ ಇದೆ. ಈ ಹಿನ್ನೆಲೆಯಲ್ಲಿ ಕೊರಗರ ಅರಸನ ಕಥೆಯನ್ನು ಗಮನಿಸಿದರೆ ಈ ಜನವರ್ಗ ಹೊರಗಿನಿಂದ ಬಂದವರು ಎಂಬ ಅಭಿಪ್ರಾಯವೂ ಇದೆ. ಪ್ರತಿಯೊಂದು ಜನವರ್ಗದವರುಗಳಿಂದ ಈ ಭೂಮಿ ಹಾಗೂ ಮಾನವರ ಸೃಷ್ಠಿ ಹೇಗಾಯಿತು ಎನ್ನುವುದಕ್ಕೆ ಮೌಖಿಕ ಕಥೆಗಳಿವೆ. ಅದರಂತೆ ಕೊರಗರ ಪ್ರಕಾರ ಈ ಪ್ರಪಂಚದ ಎಲ್ಲಾ ಮಾನವರು ಕೊರಗ ದಂಪತಿಗಳಿಗೆ ಹುಟ್ಟಿದವರು ಎಂಬ ಕಥೆ ಪ್ರಚಲಿತದಲ್ಲಿದೆ. ಈ ಕಥೆಯ ಆಶಯದಂತೆ ಅಣ್ಣ-ತಂಗಿಯರನ್ನು ದೇವರು ಒಂದುಗೂಡಿಸಿ ಆ ಬಳಿಕ ತನಗೆ ಬೇಕಾದಂತೆ ಜನವರ್ಗವನ್ನು ಪಡೆದನೆಂಬುದು ವಿಶೇಷ. ಇದೇ ಕಥೆಯ ಆಶಯವನ್ನು ಮಧ್ಯ ಆಫ್ರಿಕ-ದ ನೈಜಾಂಬಿಯಾದಲ್ಲಿ ಕಡೆಗಣಿಸಲ್ಪಟ್ಟ ಜನವರ್ಗದ ಸಮುದಾಯವಿದೆ, ಅವರುಗಳೇ 'ಬೊರಾರೊ ಜನಾಂಗ. ಕರಾವಳಿ ಕರ್ನಾಟಕದಲ್ಲಿ ಕಾಣ ಸಿಗುವ ದೈವಾರಾಧನೆಯಂತೆ ಈ ಬೊರಾರೋ ಭೂತಾರಾಧನೆ ಎರಡು ವರ್ಷಗಳಿಗೊಮ್ಮೆ ಅಥವಾ ಅಪರೂಪವಾಗಿ ಆರಾಧನೆ ಮಾಡುತ್ತಾರೆ.[]

ಕೊರಗ ಸಮುದಾಯದ ಡೋಲು ಸಂಸ್ಕೃತಿ: ಸಂಕಷ್ಟ ಮತ್ತು ಉಳಿವಿನ ಹೋರಾಟ

[ಬದಲಾಯಿಸಿ]

ಕರಾವಳಿಯ ಮೂಲನಿವಾಸಿಗಳಾದ ಕೊರಗ ಸಮುದಾಯವು ತನ್ನ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳ ಮೂಲಕ ಹೆಸರುವಾಸಿಯಾಗಿದ್ದು, ಅದರ ಅವಿಭಾಜ್ಯ ಅಂಗವಾದ ಡೋಲು ತಯಾರಿಯು ಇಂದು ವಿರಳವಾಗುತ್ತಿದೆ. ಗೋಹತ್ಯೆ ನಿಷೇಧದ ಪರಿಣಾಮ, ಡೋಲು ತಯಾರಿಯ ಪ್ರಮುಖ ವಸ್ತುವಾದ ದನದ ಚರ್ಮವನ್ನು ಲಭ್ಯಪಡಿಸುವಲ್ಲಿ ತೊಂದರೆಯಾಗಿದೆ. ಇದರಿಂದಾಗಿ, ಕೊರಗ ಸಮುದಾಯದ ಈ ಪರಂಪರೆಯು ಸಂಕಷ್ಟಕ್ಕೀಡಾಗಿದೆ.ಅಜಲು ಪದ್ಧತಿಯ ನಿಷೇಧವು ಕೊರಗ ಸಮುದಾಯದ ಜನರ ಜೀವನಮಟ್ಟದ ಉನ್ನತಿಗೆ ಸಹಕಾರಿಯಾಗಿದೆ, ಈ ನಿಟ್ಟಿನಲ್ಲಿ ಮಕ್ಕಳು ಶಿಕ್ಷಣ ಪಡೆಯಲು ಮತ್ತು ಸಮಾಜದ ಮುಖ್ಯವಾಹಿನಿಗೆ ಸೇರಲು ಸಾಧ್ಯವಾಗಿದೆ. ಆದರೆ, ಗೋಹತ್ಯೆ ನಿಷೇಧದಿಂದಾಗಿ, ಸತ್ತ ಗೋವುಗಳ ಮಾಂಸವನ್ನು ಆಹಾರವಾಗಿ ಬಳಕೆ ಮಾಡುತ್ತಿದ್ದ ಕೊರಗ ಸಮುದಾಯದ ಆಹಾರ ಪದ್ಧತಿಯಲ್ಲಿ ಬದಲಾವಣೆ ಬಿದ್ದಿದೆ. ಸತ್ತ ಗೋವುಗಳನ್ನು ಪೂಜೆ ಮತ್ತು ದೈವಾರಾಧನೆಗೆ ಬಳಸುತ್ತಿದ್ದ ಸಂಪ್ರದಾಯ ಕೂಡ ಅಸ್ತಿತ್ವ ಕಳೆದುಕೊಂಡಿದೆ.ಉಡುಪಿ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಕಲಾ ತಂಡಗಳು ಡೋಲು ಸಂಸ್ಕೃತಿಯನ್ನು ಉಳಿಸಲು ಶ್ರಮಿಸುತ್ತಿವೆ. ಆದರೆ, ಡೋಲು ತಯಾರಿಗೆ ಬೇಕಾದ ಚರ್ಮಕ್ಕಾಗಿ ಕಸಾಯಿಖಾನೆಗೆ ಹೋಗುವ ಅನಿವಾರ್ಯತೆ ಇದೆ. ಚರ್ಮದ ದರವು ಇಂದು 5,000 ರೂ.ವರೆಗೆ ತಲುಪಿದ್ದು, ಚರ್ಮ ಒಣಗಿಸಿ ಹದ ಮಾಡಲು ನಾಲ್ಕು-ಐದು ದಿನಗಳು ಬೇಕಾಗುತ್ತದೆ. ಒಂದು ಡೋಲು ಚರ್ಮವು ಅತಿ ಹೆಚ್ಚು ಒಂದು ವರ್ಷ ಬಾಳಿಕೆ ಬರುವುದರಿಂದ, ಹೆಚ್ಚಿನ ಕೊರಗ ಕುಟುಂಬಗಳಲ್ಲಿ ಡೋಲುಗಳು ಈಗ ನಿರುಪಯುಕ್ತವಾಗಿವೆ.ಮದುವೆ, ಹೆಸರಿಡುವ ಕಾರ್ಯಕ್ರಮಗಳು ಮುಂತಾದ ಸಂದರ್ಭದಲ್ಲಿ, ಡೋಲು ಬಾರಿಸುವ ಸಂಪ್ರದಾಯ ಈಗಲೂ ಮೌಜು ಮಾಡುತ್ತದೆ. ಆದರೆ, ಡೋಲು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಂಪ್ರದಾಯ ಇಲ್ಲ. ಕಳೆದ ಏಳು-ಎಂಟು ವರ್ಷಗಳಿಂದ ಡೋಲು ತಯಾರಿಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಡೋಲು ತಯಾರಿಸಲು ಅಗತ್ಯವಿರುವ ಹೊನ್ನೆ, ಹೆಬ್ಬಲಸು ಮರಗಳ ಕೊರತೆ ಇದಕ್ಕೆ ಕಾರಣವಾಗಿದೆ. ಸಾಂಸ್ಕೃತಿಕ ಬಟ್ಟೆ, ವಾದ್ಯ ಖರೀದಿಗಾಗಿ ಸರ್ಕಾರದಿಂದ ಕಲಾ ತಂಡಗಳಿಗೆ ಅನುದಾನ ನೀಡಲಾಗುತ್ತಿದೆ. ಗಿರಿಜನ ಸಂಸ್ಕೃತಿ ಉಳಿಸಲು ಮತ್ತು ಉತ್ತಮ ಬದುಕು ನಡೆಸಲು ಅಗತ್ಯವಿರುವ ಯೋಜನೆಗಳನ್ನು ಸರ್ಕಾರವು ಜಾರಿಗೆ ತಂದಿದೆ. []

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ Ethngraphic Notes in Southern India.
  2. "ಡೋಲು ತಯಾರಿಗೆ ಚರ್ಮ ಕೊರತೆ: ಕೊರಗರ ಸಂಸ್ಕೃತಿ, ಸಂಪ್ರದಾಯದ ಅಂಗವಾದ ಡೋಲು ತಯಾರಿ ವಿರಳ". Vijay Karnataka.


  • Thurston, Edgar. 1907. Ethngraphic Notes in Southern India. 3 vols. Madras: Government Press.
  • Thurston, Edgar. 1909. Castes and Tribes of Southern India. 7 vols. Madras: Government Press.