ವಿಷಯಕ್ಕೆ ಹೋಗು

ಕಣ್ಣೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಣ್ಣೂರು

ಕಣ್ಣೂರು
ರಾಜ್ಯ
 - ಜಿಲ್ಲೆ
ಕೇರಳ
 - ಕಣ್ಣೂರು
ನಿರ್ದೇಶಾಂಕಗಳು 11.86° N 75.35° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
63,795
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 670 0xx
 - ++91 497
 - KL-13

ಕಣ್ಣೂರು(ಮಲಯಾಳಂ:കണ്ണൂര്‍) ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿರುವ ಒಂದು ನಗರ ಹಾಗೂ ಪುರಸಭೆ. ಇದು ಕಣ್ಣೂರು ಜಿಲ್ಲೆಯ ಕೇಂದ್ರ ಸ್ಥಳವೂ ಹೌದು. ೪,೯೮,೧೭೫ ಜನಸಂಖ್ಯೆಯನ್ನು ಹೊಂದಿರುವ ಈ ನಗರವು ಕೊಚ್ಚಿ,ತಿರುವನಂತಪುರಂ ಮತ್ತು ಕಲ್ಲಿಕೋಟೆಗಳ ನಂತರ ಕೇರಳದಲ್ಲಿ ೪ನೇ ಅತಿ ದೊಡ್ಡ ನಗರ ಸಮುಚ್ಛಯವಾಗಿದೆ. ಇಂಡಿಕಸ್ ಎನಲಿಟಿಕ್ಸ್(Indicus Analytics) ಎಂಬ ಸಂಸ್ಥೆಯು ಇಲ್ಲಿನ ವಸತಿ,ಆದಾಯ ಮತ್ತು ಬಂಡವಾಳ ಹೂಡಿಕೆ ಇವುಗಳ ಆಧಾರದ ಮೇಲೆ ಮಾಡಿದ ಸಂಶೋಧನೆಯ ಪ್ರಕಾರ ಕಣ್ಣೂರು ನೆಲೆಸಲು ಭಾರತದಲ್ಲಿಯೇ ೧೦ ಅತ್ಯುತ್ತಮ ನಗರಗಳಲ್ಲಿ ಒಂದಾಗಿದೆ. ಇಂಡಿಕಸ್ ಈ ಸಂಶೋಧನೆಯ ನಿವಾಸ ಸೂಚಿಯನ್ನು ತಯಾರಿಸಲು ೬ ಅಂಶಗಳನ್ನು ಪರಿಗಣಣೆಗೆ ತೆಗೆದುಕೊಂಡಿತ್ತು. ಅವುಗಳು - ಆರೋಗ್ಯ, ಶಿಕ್ಷಣ, ಪರಿಸರ, ಸುರಕ್ಷತೆ,ಸಾರ್ವಜನಿಕ ಸೌಲಭ್ಯಗಳು ಮತ್ತು ಮನರಂಜನೆ. ತೆಯ್ಯಂ ಇಲ್ಲಿನ ಪ್ರಸಿದ್ಧ ಕಲೆ. ಕಣ್ಣೂರು ಅಲ್ಲಿನ ಸುಂದರ ಕಡಲತೀರಗಳಿಗೂ ಪ್ರಸಿದ್ಧವಾಗಿದೆ. ಕೈಮಗ್ಗ ಕಣ್ಣೂರಿನ ಇನ್ನೊಂದು ಆಕರ್ಷಣೆ.

ಇತಿಹಾಸ

[ಬದಲಾಯಿಸಿ]

ಕಣ್ಣೂರು ಅರಬ್ಬೀ ಸಮುದ್ರದ ಒಂದು ಪ್ರಮುಖ ಬಂದರಾಗಿತ್ತು. ಹನ್ನೆರಡನೇ ಮತ್ತು ಹದಿಮೂರನೇ ಶತಮಾನಗಳಲ್ಲಿ ಪರ್ಶಿಯಾ ಮತ್ತು ಅರೇಬಿಯಾಗಳೊಂದಿಗೆ ವ್ಯಾಪಾರವನ್ನು ನಡೆಸುತ್ತಿದ್ದ ಇದು ೧೮೮೭ರ ವರೆಗೆ ಭಾರತದ ಪಶ್ಚಿಮ ಕರಾವಳಿಯಲ್ಲಿ ಬ್ರಿಟಿಷ್ ಸೇನೆಯ ಪ್ರಧಾನ ಕಾರ್ಯಾಲಯವಾಗಿತ್ತು. ತಲಶ್ಶೇರಿಯನ್ನು ಸೇರಿಸಿ ಇದು ಹದಿನೆಂಟನೆಯ ಶತಮಾನದಲ್ಲಿ ಬ್ರಿಟಿಷ್ ಭಾರತದ ಪಶ್ಚಿಮ ಕರಾವಳಿಯ ಮೂರನೇ(ಮುಂಬಯಿ ಮತ್ತು ಕರಾಚಿಯ ನಂತರ) ಅತಿ ದೊಡ್ಡ ನಗರವಾಗಿತ್ತು. ಸಂತ ಏಂಜಲೋಸ್ ಕೋಟೆಯು ೧೫೦೫ದಲ್ಲಿ ಭಾರತದ ಪ್ರಪ್ರಥಮ ಪೋರ್ಚುಗೀಸ್ ರಾಯಭಾರಿಯಾದ ಸರ್ ಫ್ರಾನ್ಸಿಸ್ಕೊ ಡೆ ಅಲ್ಮೇಡ ಅವರಿಂದ ನಿರ್ಮಿಸಲ್ಪಟ್ಟಿತು. ಈ ಕೋಟೆಯು ಹಲವು ಬಾರಿ ಇತರರ ಕೈವಶವಾಯಿತು. ೧೬೬೩ ರಲ್ಲಿ ಇದನ್ನು ಡಚ್ಚರು ವಶಪಡಿಸಿಕೊಂಡು ಅರಕ್ಕಲ್ ರಾಜ ಮನೆತನಕ್ಕೆ ಮಾರಿದರು. ೧೭೯೦ರಲ್ಲಿ ಇದನ್ನು ಬ್ರಿಟಿಷರು ಜಯಿಸಿ ಮಲಬಾರ್ ತೀರದಲ್ಲಿ ತಮ್ಮ ಪ್ರಧಾನ ಸೇನಾ ನೆಲೆಯನ್ನಾಗಿ ಪರಿವರ್ತಿಸಿಕೊಂಡರು. ಈ ಕೋಟೆಯನ್ನು ಭಾರತ ಪುರಾತತ್ವ ಇಲಾಖೆಯ ಸಮನ್ವಯ ಸಂರಕ್ಷಿಸಿ ಇಡಲಾಗಿದೆ. ಭಾರತದಲ್ಲಿ ಬ್ರಿಟಿಷ್ ಆಡಳಿತದ ಸಮಯದಲ್ಲಿ ಕಣ್ಣೂರು ಆಂಗ್ಲ ಭಾಷೆಯಲ್ಲಿ ಕ್ಯಾನನ್ನೋರ್ ಎಂದು ಕರೆಯಲ್ಪಡುತಿತ್ತು.

ಅಂಕಿ ಅಂಶಗಳು

[ಬದಲಾಯಿಸಿ]

೨೦೦೧ರ ಭಾರತದ ಜನಗಣತಿಯ ಪ್ರಕಾರ, ಕಣ್ಣೂರು ೬೩೭೯೫ ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ ೪೮ ಪ್ರತಿಶತ ಪುರುಷರಿದ್ದರೆ, ೫೨ ಪ್ರತಿಶತ ಸ್ತ್ರೀಯರಿದ್ದಾರೆ. ಕಣ್ಣೂರು ೮೩ ಪ್ರತಿಶತ ಸರಾಸರಿ ಸಾಕ್ಷರತಾ ಪ್ರಮಾಣವನ್ನು ಹೊಂದಿದ್ದು, ಇದು ರಾಷ್ಟ್ರೀಯ ಸರಾಸರಿಯಾದ ೫೯.೫ಕ್ಕಿಂತ ಹೆಚ್ಚಿದೆ. ಪುರುಷ ಸಾಕ್ಷರತೆಯು ೮೪ ಪ್ರತಿಶತವಿದ್ದು, ಸ್ತ್ರೀ ಸಾಕ್ಷರತೆಯು ೮೩ ಪ್ರತಿಶತವಿದೆ. ಇಲ್ಲಿನ ಜನಸಂಖ್ಯೆಯ ೧೨ ಪ್ರತಿಶತ ಭಾಗವು ೬ ವರ್ಷಕ್ಕಿಂತ ಕೆಳಗಿನವರಗಿದ್ದಾರೆ.

ನಗರದ ಸುತ್ತಮುತ್ತ

[ಬದಲಾಯಿಸಿ]
ಸಂತ ಏಂಜಲೋಸ್ ಕೋಟೆಯಲ್ಲಿರುವ ಒಂದು ಫಿರಂಗಿ, ದೂರದಲ್ಲಿರುವುದು ಮಾಪ್ಪಿಲಾ ಕೊಲ್ಲಿ
  • ಸಂತ ಏಂಜಲೋಸ್ ಕೋಟೆ ಯು ೧೫೦೫ದಲ್ಲಿ ಭಾರತದ ಪ್ರಪ್ರಥಮ ಪೋರ್ಚುಗೀಸ್ ರಾಯಭಾರಿಯಾದ ಸರ್ ಫ್ರಾನ್ಸಿಸ್ಕೊ ಡೆ ಅಲ್ಮೇಡ ಅವರಿಂದ ನಿರ್ಮಿಸಲ್ಪಟ್ಟಿತು. ಅರಬ್ಬೀ ಸಮುದ್ರ ತೀರದಲ್ಲಿರುವ ಇದು ಕಣ್ಣೂರು ನಗರದಿಂದ ೩ ಕಿಲೋ ಮೀಟರುಗಳ ದೂರದಲ್ಲಿದೆ. ಕೋಟೆಯ ಹಿಂಭಾಗದಲ್ಲಿ ಸಮುದ್ರದೊಳಗೆ ಚಾಚಿಕೊಂಡಂತೆ ಒಂದು ಅಥವಾ ಎರಡು ಕಿಲೋ ಮೀಟರುಗಳ ಕಡಲು ಹಾದಿಯಿದೆ.
  • ಪಯ್ಯಾಂಬಲಂ ಕಡಲುತೀರ
  • ಅರಕ್ಕಲ್ ವಸ್ತು ಸಂಗ್ರಹಾಲಯ
  • ಕ್ಯಾನನ್ನೋರ್ ದ್ವೀಪಸ್ಥಂಭ
  • ಕ್ಯಾನನ್ನೋರ್ ಕ್ಯಾಂಟೋನ್ಮೆಂಟ್
  • ಬೇಬಿ ಬೀಚ್
  • ಮೀನ್ ಕುನ್ನು ಬೀಚ್
  • ಮಾಪ್ಪಿಲ ಕೊಲ್ಲಿ
  • ಅಯಿಕ್ಕಲ್ ಫೆರಿ
  • ಕಣ್ಣೂರ್ ಸಿಟಿ ಸೆಂಟರ್
  • ಸೀ ವ್ಯೂ ಪಾರ್ಕ್

ಕಣ್ಣೂರು ಪಟ್ಟಣ ಮತ್ತು ಕಣ್ಣೂರು ನಗರ

[ಬದಲಾಯಿಸಿ]

ಕಣ್ಣೂರು ನಗರಸಭೆಯ ಸುತ್ತ ಮುತ್ತಲ ಪ್ರದೇಶಗಳು ಹೇಗೆ ವಿಕಸಿತವಾಗಿವೆಯೆಂದರೆ, ಅವುಗಳು ಸೇರಿ ಈಗ ಕಣ್ಣೂರು ನಗರವೆಂದು ಕರೆಯಲ್ಪಡುತ್ತದೆ.

  • ಕಣ್ಣೂರು ಪಟ್ಟಣ - ಇದು ನಿಜವಾದ ಕಣ್ಣೂರು ನಗರವಾಗಿದ್ದು, ಕಣ್ಣೂರು ಜಿಲ್ಲೆಯ ಆಡಳಿತ ಪ್ರಧಾನ ಕಾರ್ಯಾಲಯವಾಗಿದೆ. ಪ್ರಮುಖ ಉದ್ಯಮ ಸಂಸ್ಥೆಗಳು, ಸರಕಾರಿ ಕಛೇರಿಗಳು, ವ್ಯಾಪಾರಿ ಕೇಂದ್ರಗಳು, ಹೋಟೆಲ್ ಗಳು ಮತ್ತು ಪ್ರದರ್ಶನಾ ಮಳಿಗೆಗಳು ಕಣ್ಣೂರು ಪಟ್ಟಣದಲ್ಲಿದೆ.
  • ಕಣ್ಣೂರು ನಗರ - ನಗರ ಎಂಬ ಹೆಸರು ಪ್ರಚಲಿತವಿದ್ದರೂ ಕಣ್ಣೂರು ನಗರ ವಾಸ್ತವದಲ್ಲಿ ಹಳೆಯ ಪಟ್ಟಣ. ಇದು ಕಣ್ಣೂರು ಪಟ್ಟಣದಿಂದ ಕೆಲವು ಕಿಲೋ ಮೀಟರ್ ಗಳ ಅಂತರದಲ್ಲಿದೆ. ಕಣ್ಣೂರು ನಗರ ಮತ್ತು ಕಣ್ಣೂರು ಪಟ್ಟಣಗೆಳೆರಡೂ ಕಣ್ಣೂರು ನಗರಸಭೆಯ ಅಧೀನದಲ್ಲಿ ಬರುತ್ತವೆ. ಕಣ್ಣೂರು ನಗರವು ಅರಕ್ಕಲ್ ಅಧಿಪತ್ಯದ ಪುರಾತನ ರಾಜಧಾನಿಯಾಗಿತ್ತು. ಕಣ್ಣೂರು ಜಿಲ್ಲಾ ಪ್ರಧಾನ ಕಾರ್ಯಾಲಯ ಆಸ್ಪತ್ರೆ ಮತ್ತು ನಗರ ಬಸ್ ನಿಲ್ದಾಣ ಕಣ್ಣೂರು ನಗರದ ಸನಿಹದಲ್ಲಿದೆ.

ಸಾರಿಗೆ

[ಬದಲಾಯಿಸಿ]

ಕಣ್ಣೂರನ್ನು ರಸ್ತೆ, ರೈಲು, ಸಮುದ್ರಯಾನ ಮತ್ತು ವಿಮಾನಯಾನದಿಂದ ಸುಲಭವಾಗಿ ತಲುಪಬಹುದು. ಕಣ್ಣೂರು ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಮಾಹೆ ಮತ್ತು ತಲಪಾಡಿಯ ಮಧ್ಯದಲ್ಲಿದೆ. ನಗರದಲ್ಲಿ ರಸ್ತೆಗಳು ಸರಿಯಾಗಿ ನಿರ್ಮಿಸಲ್ಪಟ್ಟಿದ್ದರೂ, ಮಳೆಗಾಲದ ಸಮಯದಲ್ಲಿ ಇವುಗಳ ಸ್ಥಿತಿ ಹದಗೆಡುವುದು ಸಾಮಾನ್ಯ. ಉತ್ತರದಲ್ಲಿ ಮಂಗಳೂರು ಮತ್ತು ದಕ್ಷಿಣದಲ್ಲಿ ಕಲ್ಲಿಕೋಟೆಯಲ್ಲಿರುವ ವಿಮಾನ ನಿಲ್ದಾಣಗಳು ಕಣ್ಣೂರಿನಿಂದ ಸುಮಾರು ೧೨೫ ಕಿಲೋ ಮೀಟರ್ ದೂರದಲ್ಲಿದೆ. ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮತ್ತನೂರಿನಲ್ಲಿ ನಿರ್ಮಿಸಲ್ಪಡುತ್ತಿದ್ದು, ಕಾರ್ಯನಿರತವಾದ ನಂತರ ಕೇರಳದಲ್ಲೇ ಒಂದು ಬೃಹತ್ ವಿಮಾನ ನಿಲ್ದಾಣವಾಗಲಿದೆ. ಕಣ್ಣೂರು ಒಂದು ಪುರಾತನ ರೇವು ಪಟ್ಟಣವಾಗಿದೆ. ಮಂಗಳೂರು ಇದಕ್ಕೆ ಸನಿಹದಲ್ಲಿರುವ ಸುಸಜ್ಜಿತ ಬಂದರು. ಪೆರುಂಬ ಮತ್ತು ತಳಿಪರಂಬಗಳನ್ನು ಜೋಡಿಸುವ ಒಳಪ್ರದೇಶ ಜಲ ಸಾರಿಗೆ ವ್ಯವಸ್ಥೆಯು ೧೭೬೬ರಲ್ಲಿ ಕಣ್ಣೂರಿನ ಅಲಿ ರಾಜರವರಿಂದ ನಿರ್ಮಿಸಲ್ಪಟ್ಟಿತು. ೩.೮ ಕಿಲೋಮೀಟರ್ ಉದ್ದದ ಈ ಕಾಲುವೆ ಸುಲ್ತಾನ್ ಕಾಲುವೆ ಎಂದು ಕರೆಯಲ್ಪಡುತ್ತದೆ. ಪಶ್ಚಿಮಕ್ಕೆ ಹರಿಯುವ ನದಿಗಳನ್ನು ನೌಕಾಯಾನಕ್ಕಾಗಿ ಬಳಸಲಾಗುತ್ತದೆ.

ಶಿಕ್ಷಣ

[ಬದಲಾಯಿಸಿ]

ಕಣ್ಣೂರು ವಿಶ್ವವಿದ್ಯಾನಿಲಯವು ಮಗತ್ತುಪರಂಬದಲ್ಲಿದ್ದು, ಕಣ್ಣೂರು ಪಟ್ಟಣದಿಂದ ಸುಮಾರು ೧೦ ಕಿಲೋಮೀಟರ್ ದೂರದಲ್ಲಿದೆ. ಇದರ ಕೆಲವು ಅಂಗಸಂಸ್ಥೆಗಳು - ವಿಮಲ್ ಜ್ಯೋತಿ ಇಂಜಿನಿಯರಿಂಗ್ ಕಾಲೇಜ್, ಸರಕಾರಿ ಇಂಜಿನಿಯರಿಂಗ್ ಕಾಲೇಜ್, ಬ್ರೆನ್ನೆನ್ ಕಾಲೇಜ್ ತಲಶ್ಶೇರಿ, ಸರ್ ಸಯ್ಯದ್ ಕಾಲೇಜ್ ತಳಿಪರಂಬ, ಪಯ್ಯನ್ನೂರು ಕಾಲೇಜ್, ಶ್ರೀ ನಾರಾಯಣ ಕಾಲೇಜ್ ಕಣ್ಣೂರು, ಕೃಷ್ಣ ಮೆನನ್ ಕಾಲೇಜ್, ಎನ್. ಎ. ಎಮ್ ಕಾಲೇಜ್, ನಿರ್ಮಲಗಿರಿ ಕಾಲೇಜ್, ಎಮ್. ಜಿ. ಕಾಲೇಜ್ ಇರಿಟ್ಟಿ, ಶ್ರೀ ನಾರಾಯಣ ಗುರು ಇಂಜಿನಿಯರಿಂಗ್ ಕಾಲೇಜ್

ಮಾಧ್ಯಮ

[ಬದಲಾಯಿಸಿ]

ಖಾಸಗಿ ಎಫ್. ಎಮ್. ರೇಡಿಯೋ ಸ್ಟೇಷನ್ ಗಳು ರೇಡಿಯೋ ಮ್ಯಾಂಗೊ (ದ ಮಲಯಾಳ ಮನೋರಮ ಕೊ. ಲಿಮಿಟೆಡ್) - ೯೧.೯ ಕ್ಲಬ್ ಎಫ್. ಎಮ್. (ದ ಮಾತೃಭೂಮಿ ಪ್ರಿಂಟಿಂಗ್ ಆಂಡ್ ಪಬ್ಲಿಶಿಂಗ್ ಕೊ. ಲಿಮಿಟೆಡ್) - ೯೪.೩ ಎಸ್. ಎಫ್. ಎಮ್. (ಸನ್ ನೆಟ್ವರ್ಕ್) - ೯೩.೫ ಬೆಸ್ಟ್ ಎಫ್. ಎಮ್. (ಏಷಿಯಾನೆಟ್ ಕಮ್ಯೂನಿಕೇಷನ್ಸ್) - ೯೫.೦

ಆಕಾಶವಾಣಿ ಎಫ್. ಎಮ್. ರೇಡಿಯೋ ಸ್ಟೇಷನ್ ಕಣ್ಣೂರು - ೧೦೧.೫

ಇತರ ತಾಣಗಳು

[ಬದಲಾಯಿಸಿ]
"https://kn.wikipedia.org/w/index.php?title=ಕಣ್ಣೂರು&oldid=1163678" ಇಂದ ಪಡೆಯಲ್ಪಟ್ಟಿದೆ