ಕನ್ನಡ ವಿಕಿಪೀಡಿಯ.
ತೆರೆಚಿತ್ರ | |
ಜಾಲತಾಣದ ವಿಳಾಸ | kn |
---|---|
ವಾಣಿಜ್ಯ ತಾಣ | ಇದು ವಾಣಿಜ್ಯ ತಾಣವಲ್ಲ |
ತಾಣದ ಪ್ರಕಾರ | ಇಂಟರ್ನೆಟ್ ಎನ್ಸೈಕ್ಲೋಪೀಡಿಯಾ ಯೋಜನೆ |
ನೊಂದಾವಣಿ | ಐಚ್ಛಿಕ |
ಲಭ್ಯವಿರುವ ಭಾಷೆ | ಕನ್ನಡ |
ಒಡೆಯ | ವಿಕಿಮೀಡಿಯ ಫೌಂಡೇಶನ್ |
ಕನ್ನಡ ವಿಶ್ವಕೋಶವು ಮೀಡಿಯಾವಿಕಿಯನ್ನು ಬಳಸಿ ಕಟ್ಟಿರುವ ಸ್ವತಂತ್ರ ವಿಶ್ವಕೋಶ. ಈ ವಿಶ್ವಕೋಶ ಅನೇಕ ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ಜೂನ್ ೨೦೦೩ ರಲ್ಲಿ ಪ್ರಾರಂಭವಾಯಿತು. ಅನುವಾದಿಸಲು ಉತ್ಸಾಹವಿರುವವರು ಈ ಉಲ್ಲೇಖವನ್ನು ಓದಿಕೊಳ್ಳುವುದಾಗಿ ವಿನಂತಿ. ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ವಿಕಿಪೀಡಿಯಾದಲ್ಲಿ ಸಂಪಾದನೆ ಕಲಿಯಲು ಬಳಸಿಕೊಳ್ಳಬಹುದು.
ಪೀಠಿಕೆ
[ಬದಲಾಯಿಸಿ]ಆಧುನಿಕ ಬದುಕಿನ ಜ್ಞಾನ-ವಿಜ್ಞಾನ ಕ್ಷೇತ್ರದಲ್ಲಿನ ಅದ್ಭುತ ಅವಿಷ್ಕಾರಗಳಲ್ಲೊಂದಾದ ಮಾಹಿತಿ ತಂತ್ರಜ್ಞಾನದ ಒಂದು ವಿನೂತನ ಪರಿಕಲ್ಪನೆ -ವಿಕಿಪೀಡಿಯಾ. ಹವಾಮಿ ಭಾಷೆಯಲ್ಲಿ ವಿಕಿ(wiki) ಎಂದರೆ ಶೀಘ್ರ ಅಥವಾ ತ್ವರಿತಗತಿ ಎಂದರ್ಥ. ಇಂಗ್ಲೀಷಿನಲ್ಲಿ ಎನ್ ಸೈಕ್ಲೊಪೀಡಿಯಾ (Encyclopedia) ಎಂದರೆ ವಿಶ್ವಕೋಶ ಎಂದರ್ಥ. ಇವೆರಡೂ ಶಬ್ದಗಳನ್ನು ಸಂಯೋಜಿಸಿ ವಿಕಿಪೀಡಿಯಾ (wikipedia) ಎಂಬ ಗಣಕೀಕೃತ ವಿಶ್ವಕೋಶದ ಮಾದರಿಯಲ್ಲಿ ಇದನ್ನು ಅಭಿವೃದ್ಧಿಗೊಳಿಸಲಾಗಿದೆ. ಕನ್ನಡದಲ್ಲಿ ಇದನ್ನು 'ತ್ವರಿತ ವಿಶ್ವಕೋಶ' ಎಂದು ಹೆಸರಿಸ ಬಹುದು. ಇದೊಂದು ಬಹುಭಾಷೀಯ ಹಾಗೂ ಅಂತರಜಾಲ ಆಧಾರಿತ ವಿಶ್ವಕೋಶವಾಗಿದ್ದು,ನಿರಂತರವಾಗಿ ಪರಿಷ್ಕರಣಗೂಳ್ಳಬಲ್ಲ ಮಾಹಿತಿ ವಿತರಣ ಸಾಧನವಾಗಿದೆ.
ಕ್ರಿ.ಶ್ ೨೦೦೧ರಲ್ಲಿ ಆಯೋಜಿಸಲ್ಪಟ್ಟ ಈ ವಿಶ್ವಕೋಶವು ಅತ್ಯಂತ ಶೀಘ್ರವಾಗಿ ಬೆಳವಣಿಗೆಯನ್ನು ಹೊಂದಿ ಇಂದು ಅತ್ಯಂತ ಬೃಹತ್ತಾದ ಮತ್ತು ಅಸಂಖ್ಯಾತ ಆಕರಗಳನ್ನು ಹೊಂದಿರುವ ಅಂತರಜಾಲ ತಾಣವಾಗಿ ಅಭಿವೃದ್ಧಿಗೊಂಡಿದೆ. ಈ ತಾಣವನ್ನು ವಿಶ್ವದಾದ್ಯಂತ ಪ್ರತಿ ತಿಂಗಳು ಸುಮಾರು ೪೦೦ ದಶಲಕ್ಷ ಮಂದಿ ಸಂದರ್ಶಿಸುತ್ತಾರೆಂದು ಹೇಳಲಾಗಿದೆ. ಅನೇಕ ವೈವಿಧ್ಯಮಯ ಕ್ಷೇತ್ರಗಳಲ್ಲಿನ ಸುಮಾರು ೮೨೦೦೦ ಮಂದಿ ೧೭ ದಶಲಕ್ಷ ಲೇಖನಗಳನ್ನು ಈ ತಾಣಕ್ಕೆ ಕಳುಹಿಸುತ್ತಾರೆ. ಯಾವುದೇ ರೀತಿಯ ಸಾಮಾಜಿಕ, ಸಾಂಸ್ಕೃತಿಕ, ಅಥವಾ ಜನಾಂಗೀಯ ನಿರ್ಬಂಧಗಳಿಲ್ಲದೆ ಯಾರು ಬೇಕಾದರೂ ವಿವಿಧ ರೀತಿಯ ಲೇಖನಗಳು, ಆಕರಗಳು, ಚಿತ್ರಗಳು ಮತ್ತಿತರ ಮಾಧ್ಯಮ ಪ್ರಕಾರಗಳ ಬಗೆಗಿನ ಮಾಹಿತಿಗಳನ್ನು ಈ ತಾಣಕ್ಕೆ ಕಳುಹಿಸಬಹುದು.
ಮುಕ್ತ ಬಳಕೆಗೆ ಅವಕಾಶ
[ಬದಲಾಯಿಸಿ]ಕೊಡುಗೆದಾರರ ಪರಿಣತಿಯಾಗಲೀ ವಿದ್ಯಾರ್ಹತೆಯಾಗಲೀ ಅಥವಾ ಮತ್ತಾವುದೇ ಅಂಶವಾಗಲೀ ಇಲ್ಲಿ ಗಣನೆಗೆ ಬರುವುದಿಲ್ಲ. ಆದರೆ ಹಾಗೆ ನೀಡಲ್ಪಟ್ಟ ಮಾಹಿತಿಗಳು ನಂಬಲರ್ಹವಾದ ಮೂಲಗಳ ಮೂಲಕ ಖಚಿತಗೊಳ್ಳಲ್ಪಡಲು ಸಮರ್ಥವಾಗಿರಬೇಕು.
ಅಂತರಜಾಲ ಸಂಪರ್ಕವನ್ನು ಹೊಂದಿರುವ ಯಾರೇ ಆದರೂ ಇಲ್ಲಿ ಲಭ್ಯವಿರುವ ಮಾಹಿತಿಗಳನ್ನು ಪರಿಷ್ಕರಿಸಬಹುದು ಅಥವಾ ವೃದ್ಧಿಗೊಳಿಸಬಹುದು. ಈ ರೀತಿಯ ಬಹಿರಂಗ ವ್ಯವಸ್ಥೆಯ ಕಾರಣದಿಂದಾಗಿ ಈ ತಾಣದಲ್ಲಿ ಬೃಹತ್ ಪ್ರಮಾಣದ ಮಾಹಿತಿಗಳು ಲಭ್ಯವಾಗಲು ಸಾಧ್ಯವಾಗಿದೆ. ವಿಕಿಪೀಡಿಯಾ ತಾಣವನ್ನು ಸಂದರ್ಶಿಸುವ ಮಂದಿಯಲ್ಲಿ ಅನೇಕರು ತಮಗೆ ಆಸಕ್ತಿ ಇರುವ ಮಾಹಿತಿಗಳನ್ನು ಪಡೆದುಕೂಳ್ಳಲು ಬಯಸಿದರೆ ಮತ್ತೆ ಕೆಲವರು ತಮ್ಮಲ್ಲಿಯ ಮಾಹಿತಿಗಳನ್ನು ಇತರರೊಂದಿಗೆ ವಿನಿಮಯ ಮಾಡಿಕೂಳ್ಳಲು ಉತ್ಸುಕರಾಗಿರುತ್ತಾರೆ.
ಈ ತಾಣದಲ್ಲಿ ಲಭ್ಯವಿರುವ ಮಾಹಿತಿಗಳನ್ನು ನಿರಂತರವಾಗಿ ಸುಧಾರಣೆಗೆ ಮತ್ತು ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ . ಮಾಹಿತಿಗಳನ್ನು ಹಲವಾರು ಶೀರ್ಷಿಕೆಗಳಿಗೆ ಅನುಗುಣವಾಗಿ ವರ್ಗೀಕರಿಸಲಾಗುತ್ತದೆ. ಈ ವಿಕಿಪೀಡಿಯ ತಾಣವು ಹಲವಾರು ಪ್ರವೇಶದ್ವಾರ (Portal)ಗಳನ್ನು ಹೊಂದಿದೆ. ಈ ದ್ವಾರಗಳ ಸುತ್ತ ಒಂದು ನಿರ್ದಿಷ್ಟ ವಿಷಯದ ಬಗೆಗಿನ ಪಠ್ಯಗಳನ್ನು ಅಳವಡಿಸಲಾಗಿರುತ್ತದೆ. ಗಣಕಯಂತ್ರದ ಪರದೆಯ ಬಲ ಮೇಲುಭಾಗದಲ್ಲಿನ ಶೋಧ ಸಂಪುಟ (Search Box)ವನ್ನು ಬಳಸಿ ನಮೆಗೆ ಬೇಕಾದ ಲೇಖನಗಳು ಅಥವಾ ಮಾಹಿತಿಯನ್ನು ಪಡೆಯಬಹುದು. ವಿಕಿಪೀಡಿಯಾ ಸುಮಾರು ಇನ್ನೂರು ಭಾಷಾವಿಭಾಗಗಳಲ್ಲಿ ಲಭ್ಯವಿದೆ. ಸರಳ ಇಂಗ್ಲೀಷ ಅವತರಣೆಕೆಗಳಲ್ಲದೆ. ಶಬ್ದಕೋಶ (Dictionary) ನುಡಿಮುತ್ತುಗಳು (Quotations), ಗ್ರಂಥಗಳು (Books), ಕೈಪಿಡಿಗಳು (Manuals) ವೈಜ್ಞಾನಿಕ ಆಕರಗಳು (Scientific References) ಹಾಗೂ ಮಾಧ್ಯಮ ಸೇವೆಗಳು (News Services) ಹಾಗೂ ಇತರ ಸಂಬಂಧಿತ ಮಾಹಿತಿಗಳನ್ನು ಇಲ್ಲಿ ಪಡೆಯಬಹುದು. ಈ ಎಲ್ಲ ಮಾಹಿತಿ ಪ್ರಾಕಾರಗಳನ್ನು ಪ್ರತ್ಯೇಕ ತಜ್ಞ ಸಮುದಾಯಗಳು ನಿರ್ವಹಿಸಿ ಸುಧಾರಿಸುತ್ತಿರುತ್ತವೆ. ಇತರ ಮೂಲಗಳಿಂದ ಪಡೆಯಲು ದುರ್ಲಭವಾಗಿರುವಂತಹ ಅನೇಕ ಮಾಹಿತಿಪ್ರಾಕಾರಗಳು ಮತ್ತು ಲೇಖನಗಳನ್ನು ಇಲ್ಲಿ ಕಾಣಲು ಸಾಧ್ಯವಿದೆ.
ವಿಕಿಪೀಡಿಯಾದಲ್ಲಿನ ಲೇಖನಗಳು ಮತ್ತು ಮಾಹಿತಿಗಳು ಒಂದಕ್ಕೊಂದು ಬೆಸುಗೆಗೊಂಡಿದ್ದು ಅವು ಪಾರಸ್ಪರಿಕ- ಆಕರಗಳನ್ನು ಹೊಂದಿರುತ್ತವೆ. ಗಣಕಯಂತ್ರದ ಮೂಷಿಕವನ್ನು ಯಾವುದಾದರೂ ಬೆಸುಗೆ (Link)ಯ ಮೇಲೆ ಇರಿಸಿದಾಗ ಆ ಬೆಸುಗೆಯು ಯಾವ ಲೇಖನದ ಬಗ್ಗೆ ಮಾಹಿತಿಗಳನ್ನು ನೀಡಬಲ್ಲದೆಂದು ಸೂಚಿಸುತ್ತದೆ. ಪ್ರತಿಯೊಂದು ಲೇಖನದ ಅಂತ್ಯದಲ್ಲಿಯೂ ಹಲವಾರು ಪ್ರತ್ಯೇಕ ಬೆಸುಗೆಗಳಿದ್ದು ಅವು ಇತರ ಕುತೂಹಲಕಾರಿ ಲೇಖನಗಳು ಅಥವಾ ಪ್ರಸ್ತುತ ಬಾಹ್ಯ ಜಾಲತಾಣಗಳು (Relevant External Websites) ಮತ್ತು ಪುಟಗಳು, ಆಕರ ವಿಷಯಗಳು ಆಥವಾ ನಿರ್ದಿಷ್ಟ ಜ್ಞಾನಕ್ಷೇತ್ರದ ವ್ಯವಸ್ಥಿತ ವಿಭಾಗಗಳ ಬಗ್ಗೆ ಮಾಹಿತಿಯನ್ನು ನೀಡಬಲ್ಲವು. ಇತರ ಕೆಲವು ಲೇಖನಗಳು, ಶಬ್ದಕೋಶದಲ್ಲಿನ ಖಚಿತ ವಿವರಣೆಗಳು, ಶ್ರಾವ್ಯ ಗ್ರಂಥಗಳ ಆಲಿಕೆ ಮತ್ತು ವಾಚನ, ಉದ್ಧೃತ ವಾಕ್ಯಗಳು ಇತರ ಭಾಷೆಗಳಲ್ಲಿರಬಹುದಾದ ಅದೇ ಲೇಖನ ಅಥವಾ ವಿಕಿಪೀಡಿಯಾದ ಸಹ-ಪ್ರಕಟನೆಗಳಲ್ಲಿ ದೂರೆಯಬಹುದಾದ ಇನ್ನಷ್ಟು ವಿವರಗಳು, ಇವೇ ಮುಂತಾದುವುಗಳ ಬಗ್ಗೆ ಮಾಹಿತಿಯನ್ನು ನೀಡಬಲ್ಲವು. ಯಾವುದಾದರೂ ಕೆಲವು ನಿರ್ದಿಷ್ಟ ಬೆಸುಗೆಗಳು ಅಲಭ್ಯವಾಗಿದ್ದಲ್ಲಿ ಅವುಗಳನ್ನು ಸೇರಿಸಲೂ ಸಹ ಅವಕಾಶವಿದೆ. ಇದು ಆಸಕ್ತರು ವಿಕಿಪೀಡಿಯಾಗೆ ನೀಡಬಹುದಾದ ಮತ್ತೊಂದು ಕೊಡುಗೆ.
ಬದಲಾವಣೆ ಅನಿವಾರ್ಯ
[ಬದಲಾಯಿಸಿ]ವಿಕಿಪೀಡಿಯಾದಲ್ಲಿನ ದಾಖಲೆಗಳು ಮತ್ತು ಮಾಹಿತಿಗಳನ್ನು ಅವು ಸ್ವಯಂ ಪರಿಪೂರ್ಣವೆಂದು ಭಾವಿಸಬಾರದು. ವಿಶ್ವದಲ್ಲಿ ಮಾಹಿತಿ ತಂತ್ರಜ್ಞಾನ, ವಿಜ್ಞಾನ, ಮತ್ತು ಅನ್ವೇಷಣೆಗಳು ನಿರಂತರವಾಗಿ ಜರುಗುತ್ತಿರುವುದರಿಂದ, ಹೀಗೆ ದೊರೆತ ತಧ್ಯಗಳನ್ನು ನಿರಂತರವಾಗಿ ಪರಿಷ್ಕರಣೆ ಹಾಗೂ ಸುಧಾರಣೆಗೆ ಒಳಪಡಿಸಲಾಗುತ್ತಿರುತ್ತದೆ. ಇದರಿಂದ ಕ್ರಮೇಣ ಅವುಗಳ ದರ್ಜೆ, ಕೆಲವುಸಮಯದಲ್ಲಿ ಹಳೆಯದನ್ನು ಒತ್ತಟ್ಟಿಗಿಟ್ಟು ಹೊಸದನ್ನು ಪ್ರತಿಪಾದಿಸುವ ಒಂದು ದೃಷ್ಟಿಕೋನ ಮತ್ತೆ ಗುಣಮಟ್ಟಗಳ ಮೌಲ್ಯವರ್ಧನೆಗೆ ಸಹಾಯವಾಗುತ್ತದೆ. ಇಲ್ಲಿನ ಎಲ್ಲ ಮಾಹಿತಿಗಳೂ ಪ್ರಾರಂಭದಲ್ಲಿಯೇ ವಿಶ್ವಕೋಶೀಯ ದರ್ಜೆಯವೆಂದು ಬಳಕೆದಾರರು ಭಾವಿಸಬಾರದು. ಇಲ್ಲಿ ದೊರೆಯುವ ಹಲವಾರು ಮಾಹಿತಿಗಳು ಸತ್ಯದೂರ ಅಥವಾ ಚರ್ಚಾಸ್ಪದ ವಿಷಯಗಳಾಗಿರುವ ಸಾಧ್ಯತೆಗಳಿವೆ. ವಾಸ್ತವವಾಗಿ ಅನೇಕ ಮಾಹಿತಿಗಳು ಕೇವಲ ಒಂದು ದೃಷ್ಟಿಕೋನವನ್ನು ಮಾತ್ರ ಪ್ರತಿನಿಧಿಸಬಹುದು. ವಾದ ವಿವಾದಗಳು ಮತ್ತು ಚರ್ಚೆಗಳಿಂದ ಕೂಡಿದ ಸುದೀರ್ಘ ವೈಚಾರಿಕ ಪ್ರಕ್ರಿಯೆಯ ನಂತರವೇ ಒಂದು ಒಮ್ಮತದ ಮತ್ತು ಅಲಿಪ್ತ ದೃಷ್ಟಿಕೋನವನ್ನು ನಿರ್ಧರಿಸಲಾಗುವುದು. ಅಲ್ಲದೆ ತಜ್ಞ ಪರಿಷ್ಕರಣಕಾರರು ಯಾವುದೇ ಒಂದು ಲೇಖನದ ವಿಷಯ ಅಥವಾ ವಿಧಾನಗಳ ಬಗ್ಗೆ ಅಭಿಪ್ರಾಯ ಭೇದವನ್ನು ತೋರಿದರೆ ಅಂತಹ ಸಂದರ್ಭಗಳಲ್ಲಿ ಅವರು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅವರಿಗೆ ನೆರವಾಗಲು ವಿಕಿಪೀಡಿಯಾ ಹಲವಾರು ಆಂತರಿಕ ವಿವಾದ ನಿವಾರಣಾ ಪ್ರಕ್ರಿಯೆಗಳನ್ನು ವ್ಯವಸ್ಥೆಗೂಳಿಸಿದೆ.
ಸಮಯೋಜಿತ ಬಳಕೆ ಅನಿವಾರ್ಯ
[ಬದಲಾಯಿಸಿ]ವಿಕಿಪೀಡಿಯಾದಲ್ಲಿನ ಲೇಖನಗಳು ಕೆಲವು ಆದರ್ಶ ಲಕ್ಷಣಗಳನ್ನು ಹೊಂದಿರುತ್ತವೆ. ಅವು ಉತ್ತಮ ಶಬ್ದ ಸಂಪತ್ತಿನಿಂದ ಕೂಡಿದ್ದು ಸಮತೋಲಿತ, ತಟಸ್ಥ ಹಾಗೂ ವಿಶ್ವಕೋಶೀಯ ದರ್ಜೆಯ ಮಾಹಿತಿಗಳನ್ನು ಹೊಂದಿರುತ್ತವಲ್ಲದೆ ಅವು ವ್ಯಾಪಕ ಹಾಗೂ ಪುರಾವೆಗಳನ್ನು ಒದಗಿಸಲು ಸಮರ್ಥವಾದ ದಾಖಲೆಗಳಾಗಿರುತ್ತವೆ.
ವಿಕಿಪೀಡಿಯಾದಲ್ಲಿ ಕಂಡು ಬರುವ ಮಾಹಿತಿಗಳನ್ನು ಸಂಶೋಧನ ಆಕರಗಳನ್ನಾಗಿ ಬಳಸಬೇಕಾದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದುದು ಅವಶ್ಯಕ ಏಕೆಂದರೆ ಇಲ್ಲಿನ ಹಲವಾರು ಲೇಖನಗಳು ಸ್ವಾಭಾವಿಕವಾಗಿ ತಮ್ಮ ಪ್ರಬುದ್ಧತೆ ಮತ್ತು ಬೌದ್ಧಿಕ ದರ್ಜೆಗಳಲ್ಲಿ ಗಣನೀಯ ಪ್ರಮಾಣದ ಏರುಪೇರುಗಳನ್ನು ತೋರಿಸಬಹುದು. ಸಂಶೋಧಕರು ಈ ಬಗ್ಗೆ ಜಾಗೃತರಾಗುವಂತೆ ನೆರವಾಗಲು ಹಲವಾರು ಮಾರ್ಗಸೂಚಿಗಳು ಮತ್ತು ಸೂಚನಾಪುಟಗಳನ್ನು ವ್ಯವಸ್ಥೆಗೂಳಿಸಲಾಗಿದೆ.
ಸಾಂಪ್ರದಾಯಿಕವಾದ ಮುದ್ರಿತ ವಿಶ್ವಕೋಶಗಳಿಗಿಂತ ವಿಕಿಪೀಡಿಯಾ ಕೆಲವು ಹೆಚ್ಚಿನ ಸೌಲಭ್ಯಗಳನ್ನು ಹೂಂದಿದೆ. ವಿಕಿಪೀಡಿಯಾದಲ್ಲಿನ ಮಾಹಿತಿ ಸಂಗ್ರಹಣೆ ತುಂಬಾ ಅಗ್ಗ. ಈ ಮಾಹಿತಿಗಳನ್ನು ಮುದ್ರಿಸಬೇಕಾದ ಅಗತ್ಯವಿಲ್ಲದೆ ಇರುವುದರಿಂದ ಪರಿಸರ ಹಾನಿ ಗಣನೀಯವಾಗಿ ತಗ್ಗುವುದು . ವಿಕಿಪೀಡಿಯಾದ ಪ್ರತಿಯೊಂದು ಮಾಹಿತಿಯೂ ಬೆಸುಗೆಗಳನ್ನು (Links) ಹೊಂದಿರುವುದರಿಂದ ಮುದ್ರಿತ ಗ್ರಂಥಗಳಲ್ಲಿರುವಂತೆ ಸಾಲು ಸಾಲಿಗೂ ಸೂಕ್ತ ವಿವರಣೆಗಳನ್ನು ನೀಡಬೇಕಾದ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ವಿಕಿಪೀಡಿಯಾದ ಸಂಪಾದಕೀಯ ಚಕ್ರ ಅಲ್ಪಪ್ರಮಾಣದ್ದು. ಮುದ್ರಿತ ವಿಶ್ವಕೋಶಗಳು ಮುಂದಿನ ಪರಿಷ್ಕೃತ ಆವೃತ್ತಿ ಪ್ರಕಟಗೊಳ್ಳುವವರೆಗೂ ಬದಲಾವಣೆ ಹೊಂದದೆ ಇರಬೇಕಾಗುತ್ತದೆ. ಅಲ್ಲದೆ ಬಳಕೆದಾರರು ಪ್ರತಿ ಪರಿಷ್ಕೃತ ಆವೃತ್ತಿಗೂ ಹೆಚ್ಚಿನ ಹಣವನ್ನು ವೆಚ್ಚಮಾಡಬೇಕಾಗುತ್ತದೆ. ಆದರೆ ವಿಕಿಪೀಡಿಯಾದಲ್ಲಿ ಪರಿಷ್ಕರಣಕಾರರು ಯಾವುದೇ ಕ್ಷಣದಲ್ಲಿ ಮಾಹಿತಿಗಳನ್ನು ಪರಿಷ್ಕರಿಸಿ ಅವುಗಳ ಉತ್ಕೃ಼ಷ್ಟತೆಯನ್ನು ಹೆಚ್ಚಿಸಬಹುದು. ಇದರಿಂದಾಗಿ ಇತ್ತೀಚಿನ ವಿದ್ಯಮಾನಗಳು ಮತ್ತು ವಿದ್ವತ್ ಪ್ರಗತಿಗಳನ್ನು ಸಹ ತಕ್ಷಣವೇ ದಾಖಲಿಸಿ ಮಾಹಿತಿಗಳು ಪ್ರಸ್ತುತತೆಯನ್ನು ವೃದ್ಧಿಗೊಳಿಸಬಹುದು.
ವಿಕಿಪೀಡಿಯಾ ಎಂಬ ಬೌದ್ಧಿಕ ಆಯಾಮದಲ್ಲಿ ಪಾತ್ರ ವಹಿಸಲು ಎಲ್ಲರಿಗೂ ಮುಕ್ತ ಅವಕಾಶವುಂಟು. ಅದರಲ್ಲಿನ ಮಾಹಿತಿ ಸಂಗ್ರಹಕಾರರ ವ್ಯಾಪ್ತಿ ತುಂಬಾ ವಿಸ್ತಾರವಾದುದು. ಅಲ್ಲದೆ, ವಿಕಿಪೀಡಿಯಾದ ಸಂಪಾದಕೀಯ ಮಾರ್ಗಸೂಚಿ ಹಾಗೂ ಧೋರಣೆಗಳಿಗೆ ಒಳಪಟ್ಟು ಮತ್ತು ಬಹುಮತದ ಒಪ್ಪಿಗೆಯಿಂದ ಅಲ್ಲಿನ ಲೇಖನಗಳು ಬರೆಯಲ್ಪಡುತ್ತವೆ. ಇದು ವಿಕಿಪೀಡಿಯಾದ ಅಗಾಧ ಸಾಮರ್ಥ್ಯವೂ ಹೌದು ಮತ್ತು ಕೆಲವೊಮ್ಮೆ ಇದರ ದೌರ್ಬಲ್ಯ ಮತ್ತು ವೈವಿಧ್ಯತೆಗಳೂ ಹೌದು.
ಮಾಹಿತಿಗಳನ್ನು ಜವಾಬ್ದಾರಿಯುತವಾಗಿ ಬದಲಾಯಿಸಬೇಕು
[ಬದಲಾಯಿಸಿ]ವಿಕಿಪೀಡಿಯಾದಲ್ಲಿನ ಮಾಹಿತಿಗಳನ್ನು ಯಾರು ಬೇಕಾದರೂ ಪರಿಷ್ಕರಿಸಲು ಸಾಧ್ಯವಿರುವುದರಿಂದ ಅವು ಬೌದ್ಧಿಕ ರೂಕ್ಷತೆಗೆ ಗುರಿಯಾಗುವ ಸಂಭವವುಂಟು. ಇಂತಹ ಅನಪೇಕ್ಷಿತ ಮಾಹಿತಿಗಳು ಸೇರ್ಪಡೆಯಾಗುವ ಸಾಧ್ಯತೆಗಳೂ ಉಂಟು. ಇಂತಹ ಅನಪೇಕ್ಷಿತ ಮಾಹಿತಿಗಳನ್ನು ವಿಸರ್ಜಿಸಬೇಕಾದ ಅಗತ್ಯತೆಗಳೂ ಉಂಟಾಗುತ್ತವೆ. ಸಾಂಪ್ರದಾಯಿಕ ಆಕರಗಳಲ್ಲಿ ಪೂರ್ವಾಗ್ರಹದಿಂದ ಕೂಡಿದ ಅಥವಾ ಏಕಪಕ್ಷೀಯವಾದ ಮಾಹಿತಿಗಳ ಬಗ್ಗೆ ಆಕ್ಷೇಪಗಳನ್ನೆತ್ತುವುದು ಸುಲಭವಲ್ಲ. ಆದರೆ ವಿಕಿಪೀಡಿಯಾದಲ್ಲಿ ಇಂತಹ ಆಕ್ಷೇಪಣೆಗಳನ್ನು ಕೂಡಲೇ ಪ್ರಸ್ತಾಪಿಸಿ ಮಾಹಿತಿ ಸಂಗ್ರಹಕಾರರಿಗೆ ತಕರಾರುಗಳನ್ನು ನೀಡಬಹುದು. ಅನೇಕ ಮಾಹಿತಿದಾರರು ವಿಕಿಪೀಡಿಯಾದ ಸಂಪಾದಕೀಯ ಧೋರಣೆಗಳನ್ನು ಸಂಪೂರ್ಣವಾಗಿ ಪರಿಪಾಲಿಸದೆ ಇರಬಹುದು ಅಥವಾ ಉಲ್ಲೇಖಾರ್ಹ ಮೂಲಗಳಿಲ್ಲದೆ ಮಾಹಿತಿಗಳನ್ನು ಒದಗಿಸಬಹುದು. ವಿಕಿಪೀಡಿಯಾದ ಬಿಚ್ಚು ಧೋರಣೆಯಿಂದಾಗಿ ಯಾವುದೇ ಸತ್ಯಬಾಹಿರವಾದ ಅಥವಾ ತಪ್ಪುದಾರಿಗೆಳೆಯುವ ಮಾಹಿತಿಗಳನ್ನು ತಕ್ಷಣವೇ ಸರಿಪಡಿಸುವ ಸಾಧ್ಯತೆಗಳು ಅಧಿಕಗೊಂಡಿವೆ.
ವಿಕಿಪೀಡಿಯಾಗೆ ಮಾಹಿತಿಗಳನ್ನು ನೀಡುವ ವ್ಯಕ್ತಿಗಳು ಸೌಜನ್ಯಶೀಲರೂ, ತಟಸ್ಥರೂ ಆಗಿರಬೇಕೆಂಬುದನ್ನು ನಿರೀಕ್ಷಿಸಲಾಗುತ್ತದೆ. ಅವರು ಮಾಹಿತಿಗಳನ್ನು ಕಳುಹಿಸಿವ ಮುನ್ನ ವಿಕಿಪೀಡಿಯಾದ ಸ್ವಾಗತ ಪುಟಗಳನ್ನು ಮತ್ತು ಇತರ ಸಹಾಯಕ ಉಪಕರಣಗಳನ್ನೂ ನೋಡಿ ಮನದಟ್ಟುಮಾಡಿಕೊಳ್ಳುವುದು ಒಳ್ಳೆಯದು.
ವಿಕಿಪೀಡಿಯಾ ಸಮುದಾಯವು ಬಹುಪಾಲು ಒಂದು ಸ್ವ-ವ್ಯವಸ್ಥೆಗೂಂಡ ಸಂಘಟನೆ. ಈ ಕಾರಣದಿಂದ ಯಾವುದೇ ವ್ಯಕ್ತಿಯಾದರೂ ಒಬ್ಬ ಸಮರ್ಥ ಪರಿಷ್ಕರಣಕಾರನೆಂಬ ಹೆಗ್ಗಳಿಕೆಯನ್ನು ಗಳಿಸಿಕೊಳ್ಳುವುದು ಸಾಧ್ಯವಾಗಿದೆ. ಯಾವುದೇ ವ್ಯಕ್ತಿಯು ತಾನು ಬಯಸಿದ ಯಾವುದೇ ಪಾತ್ರದಲ್ಲಿ ತೂಡಗಿಸಿಕೊಳ್ಳಲು ಸಾಧ್ಯ. ಬಹುತೇಕ ವ್ಯಕ್ತಿಗಳು ಕೆಲವು ಪರಿಣತ ಕೆಲಸಗಳಲ್ಲಿ ಪ್ರವೃತ್ತರಾಗಲು ಬಯಸುತ್ತಾರೆ. ಇತರರ ಪ್ರಾರ್ಥನೆಯ ಮೇರೆಗೆ ಲೇಖನಗಳ ವಿಮರ್ಶೆ, ಬೌದ್ಧಿಕ ರೂಕ್ಷತೆಗಾಗಿ ಪ್ರಸ್ತುತ ಲೇಖನಗಳ ಮೇಲೆ ಕಣ್ಣಿಡುವುದು. ಗುಣನಿಯಂತ್ರಣದ ಉದ್ದೇಶಕ್ಕಾಗಿ ನೂತನವಾಗಿ ಸೇರ್ಪಡೆಗೊಂಡ ಲೇಖನಗಳ ಬಗ್ಗೆ ಜಾಗರೂಕರಾಗಿರುವುದು ಮತ್ತಿತರ ಅಂತಹ ಕಾರ್ಯಗಳಲ್ಲಿ ಅವರು ಪ್ರವೃತ್ತರಾಗ ಬಯಸುತ್ತಾರೆ.
ದುರ್ಬಳಕೆ ಹಾಗೂ ವಿವಾದರಹಿತವಾಗಿರಲಿ
[ಬದಲಾಯಿಸಿ]ಆಗಾಗ್ಗೆ ತಲೆದೋರಬಹುದಾದ ದುರ್ಬಳಿಕೆ ಅಥವಾ ವಿವಾದಗಳನ್ನು ಪರಿಹರಿಸಲು ವಿಕಿಪೀಡಿಯಾ ಸಮೃದ್ಧವಾದ ವಿಧಾನಗಳನ್ನು ಹೂಂದಿದೆ. ಈ ವಿದಾನಗಳನ್ನು ತೀವ್ರ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು ಅವುಗಳ ವಿಶ್ವಾಸಾರ್ಹತೆ ಅತಿ ಉನ್ನತ ಮಟ್ಟದ್ದಾಗಿದೆ.
ಜ್ಞಾನ ಭಂಡಾರ ವೃದ್ಧಿಸಲಿ
[ಬದಲಾಯಿಸಿ]ಕ್ರಿ.ಶ. ೨೦೦೧ರಲ್ಲಿ ಪ್ರಾರಂಭವಾದ ಇಂಗ್ಲೀಷ ವಿಕಿಪೀಡಿಯಾದಲ್ಲಿ ಇಂದು ಸುಮಾರು ೪೬ ಲಕ್ಷ ಲೇಖನಗಳು ಲಭ್ಯವಿದೆ. ಇಂಗ್ಲೀಷ್ ವಿಕಿಪೀಡಿಯಾ ಅಲ್ಲದೆ ಜಗತ್ತಿನ ಸುಮಾರು ೨೮೬ ಭಾಷೆಗಳಲ್ಲಿ ವಿಕಿಪೀಡಿಯಾ ಲಭ್ಯವಿದೆ. ಪ್ರತಿನಿತ್ಯ ಜಗತ್ತಿನ ವಿವಿಧ ಭಾಗಗಳಿಂದ ನೂರಾರು ಸಾವಿರ ಮಂದಿ ಹತ್ತಾರು ಸಾವಿರ ಮಾಹಿತಿಗಳನ್ನು ಒದಗಿಸುತ್ತಾರಲ್ಲದೆ ಸಾವಿರಾರು ಲೇಖನಗಳನ್ನು ಸಿದ್ಧಪಡಿಸಿ ವಿಕಿಪೀಡಿಯಾದ ಜ್ಞಾನ ಭಂಡಾರವನ್ನು ಮತ್ತಷ್ಟು ಸಮೃದ್ಧಗೂಳಿಸಲು ನೆರವಾಗುತ್ತಲಿದ್ದಾರೆ.
ಕನ್ನಡ ವಿಕಿಪೀಡಿಯ ಅಂಕಿ ಅಂಶಗಳು
[ಬದಲಾಯಿಸಿ]ಬಳಕೆದಾರ ಖಾತೆಗಳ ಸಂಖ್ಯೆ | ಲೇಖನಗಳ ಸಂಖ್ಯೆ | ಕಡತಗಳ ಸಂಖ್ಯೆ | ಆಡಳಿತಗಾರರ ಸಂಖ್ಯೆ |
---|---|---|---|
೯೦,೨೧೮ | ೩೩,೨೨೯ | ೨,೪೭೧ | ೪ |
ಸಂಪಾದನೋತ್ಸವಗಳು
[ಬದಲಾಯಿಸಿ]ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಹೆಚ್ಚಿಸಲು ಅಲ್ಲಲ್ಲಿ ಆಗಾಗ ಸಂಪಾದನೋತ್ಸವಗಳನ್ನು (edit-a-thon) ಆಚರಿಸಲಾಗುತ್ತದೆ. ಅವುಗಳ ಬಗೆಗಿನ ವಿವರಣಾತ್ಮಕ ಪುಟಗಳನ್ನು ಇಲ್ಲಿವೆ.