ಕಮ್ಯುನಿಸ್ಟ್ ಪಕ್ಷಗಳು, ಭಾರತದಲ್ಲಿ
ಕಮ್ಯುನಿಸ್ಟ್ ಪಕ್ಷಗಳು, ಭಾರತದಲ್ಲಿ : ಭಾರತದ ರಾಜಕೀಯ ಇತಿಹಾಸದಲ್ಲಿ 70ರ ದಶಕವನ್ನು ಅನೇಕ ಮಹತ್ತರ ಘಟನೆಗಳಿಂದ ಕೂಡಿದ ಕಾಲ ಎಂದು ಕರೆಯಬಹುದಾಗಿದೆ.
ಆಂತರಿಕ ಭಿನ್ನಾಭಿಪ್ರಾಯಗಳು
[ಬದಲಾಯಿಸಿ]ಆಂತರಿಕ ಭಿನ್ನಾಭಿಪ್ರಾಯಗಳು ಉಲ್ಬಣಗೊಂಡು 1969ರಲ್ಲಿ ಕಾಂಗ್ರೆಸ್ ಪಕ್ಷವು ಒಡೆದು ಇಬ್ಭಾಗವಾಗಿ ಕಾಂಗ್ರೆಸ್ (ಇಂದಿರಾ) ಮತ್ತು ಸಂಸ್ಥಾ ಕಾಂಗ್ರೆಸ್ ಎಂಬ ಎರಡು ಪ್ರತ್ಯೇಕ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ಈ ಬೆಳೆÀಣಿಗೆಯಿಂದಾಗಿ ಇಂದಿರಾ ಗಾಂಧಿಯವರು ರಾಷ್ಟ್ರ ರಾಜಕಾರಣದಲ್ಲಿ ಪ್ರಬಲ ನಾಯಕಿಯಾಗಿ ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಯಿತು. ಅಂದಿನ ಕಾಲಘಟ್ಟದ ಹಲವು ರಾಜಕೀಯ ಅನಿವಾರ್ಯತೆಗಳಿಂದಾಗಿ ಇಂದಿರಾ ಗಾಂಧಿಯವರು ಕೆಲವು ಜನಪರ ಯೋಜನೆಗಳನ್ನು ಮುಂದಿಟ್ಟು ಅಪಾರ ಜನಪ್ರಿಯತೆ ಗಳಿಸಿದರು. ದಿಟ್ಟ ಹಾಗೂ ಪ್ರಗತಿಶೀಲ ಚಿಂತನೆಗಳುಳ್ಳ ರಾಜಕೀಯ ಧುರೀಣೆ ಎಂಬ ಜ್ಯಾತಿಗೆ ಪಾತ್ರರಾದರು. ಅವರನ್ನು ವಿರೋಧಿಸಿದ ಇತರೆ ಹಿರಿಯ ಕಿರಿಯ ಕಾಂಗ್ರೆಸ್ ನಾಯಕರನ್ನು ಬಲಪಂಥೀಯರು ಎಂಬುದಾಗಿ ಗುರುತಿಸಲಾಯಿತು.[೧]
ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಮಾಕ್ರ್ಸ್‌ವಾದಿ ಕಮ್ಯುನಿಸ್ಟ್
[ಬದಲಾಯಿಸಿ]ಈ ಸಂದರ್ಭದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಮಾಕ್ರ್ಸ್‌ವಾದಿ ಕಮ್ಯುನಿಸ್ಟ್ ಪಕ್ಷಗಳೆರಡೂ ಇಂದಿರಾಗಾಂಧಿಯವರ ಪರ ನಿಲುವು ತಾಳಿದವು. ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದವು. ಬಂಡವಾಳಶಾಹಿ ಮತ್ತು ಭೂಮಾಲಿಕ ವರ್ಗಗಳಿಂದ ದೂರವಾಗಿ ಕ್ರಿಯಾತ್ಮಕ ಸ್ವರೂಪವುಳ್ಳ ಹೊಸ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೊಳಿಸುತ್ತದೆಂಬ ನಂಬಿಕೆ ಕೆಲವೆಡೆ ಮೂಡಿದ್ದಿತು. ಅದು ಹಾಗಾಗಲಿಲ್ಲ. ಆ ನಂತರ 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧ ಮತ್ತು ಆ ಸಂದರ್ಭದಲ್ಲೇ ಪುರ್ವ ಪಾಕಿಸ್ತಾನ ಪ್ರತ್ಯೇಕಗೊಂಡು ಬಾಂಗ್ಲಾದೇಶವು ರಚನೆಗೊಂಡ ಹಿನ್ನೆಲೆಯಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ದೊರಕಿದ ಪ್ರಚಂಡ ವಿಜಯ, ಗರೀಬಿ ಹಟಾವೋ ಘೋಷಣೆ ಮತ್ತು ಇಪ್ಪತ್ತು ಅಂಶಗಳ ಕಾರ್ಯಕ್ರಮ, ಇವು ಆ ಪಕ್ಷವನ್ನು ಒಂದು ಪ್ರಗತಿಶೀಲ ರಾಜಕೀಯ ಶಕ್ತಿ ಎಂಬುದಾಗಿ ಬಿಂಬಿಸಿದವು. ಈ ಕಾಲಾವಧಿಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷವು ಇಂದಿರಾ ಕಾಂಗ್ರೆಸ್ನೊಂದಿಗೆ ಚುನಾವಣಾ ಹೊಂದಾಣಿಕೆ ಏರ್ಪಡಿಸಿಕೊಂಡಿತು. ಮಾಕಿರ್ಸ್‌ಸ್ಟ್ ಪಕ್ಷವು ಈ ಕುರಿತು ತದ್ವಿರುದ್ಧ ನಿಲುವನ್ನು ತಾಳಿತು.[೨]
ಕಮ್ಯುನಿಸ್ಟ್ ಚಳವಳಿ
[ಬದಲಾಯಿಸಿ]ಕಮ್ಯುನಿಸ್ಟ್ ಚಳವಳಿಯಲ್ಲಿ ಒಂದು ಪ್ರಶ್ನೆ ಪ್ರಮುಖವಾಗಿ ಮುಂದೆಬಂದು ಚಳವಳಿಯು ಹಲವು ವಿಭಾಗಗಳಾಗಿ ಒಡೆಯಲು ಕಾರಣವಾಗಿದೆ. ಅದು ರಾಷ್ಟ್ರದ ಪ್ರಭುತ್ವವು ಯಾವ ವರ್ಗದ್ದೆಂದು ಅರ್ಥೈಸುವುದಕ್ಕೆ ಸಂಬಂಧಿಸಿದೆ. ರಾಷ್ಟ್ರೀಯ ಬಂಡವಾಳಶಾಹಿ ಯೆಂಬುದೊಂದಿದೆ ಮತ್ತು ಅದು ಪ್ರಸ್ತುತ ಆಳುವ ವರ್ಗದಲ್ಲಿ ಸೇರ್ಪಡೆ ಹೊಂದಿದೆಯೆಂದು ಭಾವಿಸಿದ ಭಾರತೀಯ ಕಮ್ಯುನಿಸ್ಟ್ ಪಕ್ಷವು ಸಾಮ್ರಾಜ್ಯಶಾಹಿ ವಿರೋಧದ ಕಾರ್ಯಚರಣೆಯಲ್ಲಿ ಇದಕ್ಕೆ ನಿರ್ದಿಷ್ಟ ಪಾತ್ರವಿದೆಯೆಂದು ವ್ಯಾಖ್ಯಾನಿಸುತ್ತದೆ. ಅದಕ್ಕೆ ಪ್ರತಿಯಾಗಿ ಮಾಕ್ರ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವು ಪ್ರಭುತ್ವವಿರುವುದು ಸಾಮ್ರಾಜ್ಯಶಾಹಿಗೆ ಶರಣುಹೋಗುವ ಭಾರಿ ಬಂಡವಾಳಿಗ ಮತ್ತು ಭೂಮಾಲಿಕ ವರ್ಗಗಳ ಕೈಯಲ್ಲಿ ಎಂದು ತನ್ನ ಪ್ರಣಾಳಿಕೆಯಲ್ಲಿ ಒತ್ತಿ ಹೇಳುತ್ತದೆ. ಆದಾಗ್ಯೂ ಕೆಲವು ಜಂಟಿ ಕಾರ್ಯಕ್ರಮಗಳಲ್ಲಿ ಅವು ಭಾಗಿಗಳಾಗಿವೆ.1974ರ ಹೊತ್ತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರಿದ ತೈಲ ಬೆಲೆಗೆ ತತ್ತರಿಸಿದ ಭಾರತ, ಅನೇಕ ಜನಾಂದೋಳನಗಳ ಬೀಡಾಯಿತು. ಬೆಲೆ ಏರಿಕೆ, ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧದÀ ಬಿಹಾರ್ ರಾಜ್ಯದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಪ್ರಾರಂಭವಾದ ಸಾಮಾಜಿಕ ಚಳವಳಿ ದೇಶವಿಡೀ ವ್ಯಾಪಕವಾಗಿ ಹರಡಿತು. ರೈಲ್ವೇ ಕಾರ್ಮಿಕರ ಮುಷ್ಕರವು ಇಡೀ ರಾಷ್ಟ್ರವನ್ನೇ ನಿಷ್ಕ್ರಿಯಗೊಳಿಸಿತು. ಕಮ್ಯುನಿಸ್ಟ್ ಪಕ್ಷಗಳು ಈ ಮುಷ್ಕರಕ್ಕೆ ಬೆಂಬಲ ನೀಡಿದವು. ದೇಶದಾದ್ಯಂತ ಬೃಹತ್ ಅಲೆಗಳೋಪಾದಿ ಯಲ್ಲಿ ಗಲಭೆ, ಪ್ರತಿಭಟನೆ ಮತ್ತು ಮುಷ್ಕರಗಳನ್ನು ದೇಶದ ಮೂಲೆಮೂಲೆಗಳಲ್ಲಿ ಸಂಘಟಿಸಲಾಯಿತು. ಈ ಸಂದರ್ಭದಲ್ಲೇ ಇಂದಿರಾಗಾಂಧಿಯವರು ಲೋಕಸಭೆಗೆ ಆಯ್ಕೆಯಾದದ್ದನ್ನು ಅಸಿಂಧುವೆಂದು ಅಲಹಾಬಾದ್ ಉಚ್ಛನ್ಯಾಯಾಲಯ ತೀರ್ಪಿತ್ತಿತು.
ಕಾಂಗ್ರೆಸ್ ಪಕ್ಷ
[ಬದಲಾಯಿಸಿ]ಈ ಅನಿರೀಕ್ಷಿತ, ಬೆಳೆವಣಿಗೆಗಳಿಂದಾಗಿ ಇಂದಿರಾ ಗಾಂಧಿಯವರೇ ಅಲ್ಲದೆ ಕಾಂಗ್ರೆಸ್ ಪಕ್ಷವೂ ತತ್ತರಿಸಿತು. ಕೆಲವು ಶಕ್ತಿಗಳು ಇಡೀ ಆಡಳಿತ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಸಂಚು ಹರಡುತ್ತಿದ್ದರೆಂದು ಆರೋಪಿಸಿ ಅಂದಿನ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ದೇಶದಾದ್ಯಂತ ತುರ್ತುಪರಿಸ್ಥಿತಿ ಘೋಷಿಸಿತು. ಪತ್ರಿಕಾ ಸ್ವಾತಂತ್ರ್ಯ, ಕಾರ್ಮಿಕರ ಮುಷ್ಕರದ ಹಕ್ಕು ಮತ್ತು ಸಂವಿಧಾನದತ್ತ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಯಿತು. ತುರ್ತುಪರಿಸ್ಥಿತಿಯನ್ನು ವಿರೋಧಿಸಿದವರು ಸೆರೆಮನೆ ಸೇರಿದರು. ನ್ಯಾಷನಲ್ ಸೆಕ್ಯೂರಿಟಿ ಕಾಯಿದೆ, ವೀಸಾ ಇತ್ಯಾದಿ ಕರಾಳ ಶಾಸನಗಳನ್ನು ಜಾರಿಗೆ ತಂದು ಚಳವಳಿಕಾರರ ವಿರುದ್ಧ ಬಳಸಲಾಯಿತು. ಇದೇ ಸಂದರ್ಭದಲ್ಲಿ ಸಂವಿಧಾನದ ಮುನ್ನುಡಿಯಲ್ಲಿ ‘ಸಮಾಜವಾದ’ದ ಪರಿಕಲ್ಪನೆಯಲ್ಲಿ ಅಳವಡಿಸಿ, ಅದಕ್ಕೆ ಹೊಸ ಆಯಾಮ ಮತ್ತು ಆಶಯಗಳನ್ನು ನೀಡಲಾಯಿತು. ಅನೇಕ ಕಾನೂನು ಕಾಯಿದೆಗಳನ್ನು ಪರಿಷ್ಕರಿಸಿ ಉದ್ಯಮಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹೇರಲಾಯಿತು. ಒಟ್ಟಾರೆಯಾಗಿ, 1975-76ರ ಹದಿನೆಂಟು ತಿಂಗಳ ಅವಧಿಯ ತುರ್ತುಪರಿಸ್ಥಿತಿಯನ್ನು ಭಾರತದ ರಾಜಕಾರಣದಲ್ಲಿ ಸಂಭವಿಸಿದ ಒಂದು ತಲ್ಲಣದ ಅಧ್ಯಾಯ ಎಂಬುದಾಗಿ ಗುರುತಿಸಬಹುದಾಗಿದೆ. ಭಾರತ ಕಮ್ಯುನಿಸ್ಟ್ ಪಕ್ಷವು ತನ್ನದೇ ಅದ ಸೈದ್ಧಾಂತಿಕ ಕಾರಣಗಳಿಂದಾಗಿ ಈ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದು ಗಮನಾರ್ಹ. ಆ ಬಗೆಯ ಕಾರಣಗಳಿಂದಾಗಿ ಮಾರ್ಕಿಸ್ಟ್ ಪಕ್ಷವು ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಆ ಪಕ್ಷದ ಸಾವಿರಾರು ಕಾರ್ಯಕರ್ತರು, ಹಿರಿಯನಾಯಕರು ಬಂಧನಕ್ಕೊಳಗಾದರು. ಜನತೆಯ ತೀವ್ರ ಪ್ರತಿರೋಧ, ಆಕ್ರೋಶಗಳಿಗೆ ಮಣಿದು 1977ರಲ್ಲಿ ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸಿ ಚುನಾವಣೆ ಘೋಷಿಸಿದ ಕಾಂಗ್ರೆಸ್ ಪಕ್ಷಕ್ಕೆ ಮತಗಟ್ಟೆಯಲ್ಲಿ ತೀವ್ರ ಮುಖಭಂಗವಾಯಿತು. ಸರಕಾರ ಎಷ್ಟೇ ಜನಪರ ಕಾರ್ಯಕ್ರಮಗಳನ್ನು ಘೋಷಿಸಿತಾದರೂ ಮತದಾರರು ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಪ್ರತಿಭಟಿಸಿ ತಕ್ಕ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ನೊಂದಿಗೆ ಚುನಾವಣಾ ಮೈತ್ರಿ ಹೊಂದಿದ ಭಾರತ ಕಮ್ಯುನಿಸ್ಟ್ ಪಕ್ಷವೂ ಭಾರಿ ಸೋಲು ಅನುಭವಿಸಿತು; ಆದರೆ ಜನತಾ ಪಕ್ಷವನ್ನು ಬೆಂಬಲಿಸಿದ್ದ ಮಾಕ್ರ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವು ತನ್ನ ಬಲವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿಕೊಂಡಿತು. ಆನಂತರ ಗದ್ದುಗೆಯೇರಿದ ಜನತಾಪಕ್ಷವು ವ್ಯಕ್ತಿ ಪ್ರತಿಷ್ಠೆ ವ್ಯೆಯಕ್ತಿಕ ಭಿನ್ನಾಭಿಪ್ರಾಯಗಳು ಹಾಗೂ ಆಂತರಿಕ ಮತ್ತು ಸೈದ್ಧಾಂತಿಕ ವಿರೋಧಾಭಾಸಗಳಿಂದ ಕೂಡಿದ ಒಂದು ಅಸಹಜ ರಾಜಕೀಯ ಒಕ್ಕೂಟವಾಗಿತ್ತು. ಕೈಗಾರಿಕಾ ಬಂಡವಾಳದ ಪ್ರತಿನಿಧಿಗಳಾಗಿದ್ದ ಹಳೆಯ ಕಾಂಗ್ರೆಸ್ ನಾಯಕರು, ವ್ಯಾಪಾರಿ ವರ್ಗದ ಪ್ರತಿನಿಧಿಗಳಾಗಿದ್ದ ಜನಸಂಘ, ಶ್ರೀಮಂತ ಭೂಮಾಲೀಕರ ರಾಜಕೀಯ ಧ್ವನಿಯಾಗಿದ್ದ ಲೋಕದಳ ಇವು ನಿರಂತರ ಕಚ್ಚಾಟ ಮತ್ತು ಪರಸ್ಪರ ಮೂದಲಿಕೆಗಳಲ್ಲೇ ತೊಡಗಿಕೊಂಡು ಆಡಳಿತ ನಡೆಸಲು ಸಾಧ್ಯವಾಗದೆ ಜನತಾ ಪಕ್ಷ ಅಧಿಕಾರ ಕಳೆದುಕೊಂಡಿತು.
ಭಂಟಿಡಾ ಅಧಿವೇಶನ
[ಬದಲಾಯಿಸಿ]ಈ ಮಧ್ಯೆ 1978ರಲ್ಲಿ ಜರುಗಿದ ಭಂಟಿಡಾ ಅಧಿವೇಶನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷವು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಕಾಂಗ್ರೆಸ್ಗೆ ತಾನು ಬೆಂಬಲ ನೀಡಿ ತಪ್ಪು ಎಸಗಿತು ಎಂದು ಹೇಳಿಕೆ ನೀಡಿತು. ಆ ಪಕ್ಷದ ಹಿರಿಯ ನಾಯಕರೊಲ್ಲಬ್ಬರಾಗಿದ್ದ ಶ್ರೀಪಾದ ಆಮೃತ್ ಡಾಂಗೆಯವರು ಆ ನಿಲುವನ್ನು ಸಮರ್ಥಿಸಲಿಲ್ಲ. ಕಾಂಗ್ರೆಸ್ ಪಕ್ಷವನ್ನು ದೂರವಿರಿಸಿದ್ದೇ ಆದರೆ ಬಲಪಂಥೀಯ ಹಾಗೂ ಮತೀಯ ಶಕ್ತಿಗಳು ಬೆಳೆಯಲು ಅವಕಾಶ ಮಾಡಿಕೊಟ್ಟಂತಾಗುವುದು ಎಂಬ ತಮ್ಮದೇ ರಾಜಕೀಯ ವಿಮರ್ಶೆಯನ್ನು ಮುಂದಿಟ್ಟರು. ಪಕ್ಷವು ಅವರ ವಾದವನ್ನು ತಿರಸ್ಕರಿಸಿತು. ಮತ್ತು ಕ್ರಮೇಣ ಅವರು ಪಕ್ಷದಿಂದ ಹೊರಗುಳಿಯುವಂತಾಯಿತು. ಜನತಾ ಪಕ್ಷದಲ್ಲಿ ಲೀನವಾಗಿದ್ದ ಭಾರತೀಯ ಜನಸಂಘವು ಕೆಲಕಾಲದಲ್ಲೇ ಹೊರಸಿಡಿದು ಭಾರತೀಯ ಜನತಾ ಪಕ್ಷವೆಂಬ ಹೆಸರಿನಡಿಯಲ್ಲಿ ಮತೀಯ ರಾಜಕೀಯಕ್ಕೆ ಹೊಸ ಆಯಾಮ ರಚಿಸಿಕೊಡಲು ಮುಂದಾದದ್ದು ಈಗ ಇತಿಹಾಸ. ಇದರಿಂದಾಗಿ ಭಾರತದ ಕಮ್ಯುನಿಸ್ಟ್ ಚಳವಳಿಗೆ ವರ್ಗ ಹೋರಾಟ ಮತ್ತು ಮತೀಯ ಶಕ್ತಿಗಳ ವಿರುದ್ಧದ ಹೋರಾಟ ಎರಡೂ ನಿರ್ಧಾರಕ ಆಂಶಗಳಾಗಿ ಪರಿಣಮಿಸಿವೆ.
ರಾಜ್ಯಮಟ್ಟದ ವಿಧಾನಸಭಾ ಚುನಾವಣೆಗಳು
[ಬದಲಾಯಿಸಿ]ಈ ಹೊತ್ತಿಗೆ 1979ರಲ್ಲಿ ರಾಜ್ಯಮಟ್ಟದ ವಿಧಾನಸಭಾ ಚುನಾವಣೆಗಳು ಜರುಗಿ, ಪಶ್ಚಿಮ ಬಂಗಾಲದಲ್ಲಿ ಎಡರಂಗವು ಭಾರಿ ಜಯಗಳಿಸಿ ಅಲ್ಲಿನ ರಾಜಕಾರಣದಲ್ಲಿ ಒಂದು ಬೃಹತ್ ಶಕ್ತಿಕೇಂದ್ರವಾಗಿ ರೂಪುಗೊಳ್ಳಲು ಸಾಧ್ಯವಾಯಿತು. ಮಾರ್ಕಿಸ್ಟ್ ಕಮ್ಯುನಿಸ್ಟ್ ಪಕ್ಷ, ಭಾರತ ಕಮ್ಯುನಿಸ್ಟ್ ಪಕ್ಷ ಕ್ರ್ರಾಂತಿಕಾರಿ ಸಮಾಜವಾದಿ ಪಕ್ಷ ಮತ್ತು ಫಾರ್ವಡ್ ಬ್ಲಾಕ್ ಪಕ್ಷ ಎಲ್ಲವೂ ಜೊತೆಗೂಡಿ ರಚಿಸಿಕೊಂಡ ಈ ಎಡರಂಗವು ಒಂದು ಸಮರ್ಥ ಜನಪರ ವೇದಿಕೆಯಾಗಿ ಇಂದಿಗೂ ಮತ್ತೆ ಮತ್ತೆ ಚುನಾವಣೆಗಳಲ್ಲಿ ಗೆದ್ದುಬರುತ್ತಿದೆ. ಭೂಸುಧಾರಣೆ ಯಂತಹ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಎಡರಂಗದ ಸರ್ಕಾರವನ್ನು ಅಲ್ಲಿನ ಜನತೆಯ ಮನ್ನಣೆ ಗಳಿಸಿದೆ. ಅಂದಿನಿಂದ ಇಂದಿನವರೆಗೂ ಪ್ರತಿ ಚುನಾವಣೆಯಲ್ಲೂ ಎಡರಂಗವೂ ಗೆದ್ದುಬರುತ್ತಿರುವುದು ಇಡೀ ಜಗತ್ತಿನ ರಾಜಕೀಯ ವಿದ್ಯಮಾನಗಳಲ್ಲಿ ಒಂದು ದಾಖಲೆಯೆನಿಸಿದೆ. ಕೇರಳ, ತ್ರಿಪುರ ರಾಜ್ಯಗಳಲ್ಲೂ ಎಡಪಕ್ಷಗಳ ಸರ್ಕಾರಗಳನ್ನು ರಚಿಸಲು ಸಾಧ್ಯವಾಗಿರುವುದು 1979-80ರ ಅನಂತರದ ಪ್ರಮುಖ ಬೆಳೆವಣಿಗೆಗಳಲ್ಲಿ ಒಂದು ಎನ್ನಬಹುದು.
ಇಂದಿರಾ ಕಾಂಗ್ರೆಸ್
[ಬದಲಾಯಿಸಿ]1980ರಲ್ಲಿ ಪುನಃ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಇಂದಿರಾ ಕಾಂಗ್ರೆಸ್ನ್ನು ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಮಾಕ್ರ್ಸ್‌ವಾದಿ ಕಮ್ಯುನಿಸ್ಟ್ ಪಕ್ಷಗಳು ಬೆಂಬಲಿಸಲಿಲ್ಲ. ಇಂದಿರಾಗಾಂಧಿ ಹತ್ಯೆಯ ನಂತರ ಪ್ರಧಾನಿಯಾದ ರಾಜೀವ ಗಾಂಧಿಯವರ ಸರ್ಕಾರವನ್ನೂ ಕಮ್ಯುನಿಸ್ಟ್ ಪಕ್ಷಗಳು ಬೆಂಬಲಿಸಲಿಲ್ಲ. ಒಟ್ಟಾರೆಯಾಗಿ, ರಾಷ್ಟ್ರದ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಸಖ್ಯವನ್ನು ಬಂiÀÄಸದೆ ಅದನ್ನು ದೂರವಿಡುವ ರಾಜಕೀಯ ಪಕ್ಷಗಳ ಮನೋವೃತ್ತಿ ಈ ಅವಧಿಯಲ್ಲಿನ ಗಮನಾರ್ಹವಾದ ಬೆಳೆವಣಿಗೆ.
ಸಾರ್ವತ್ರಿಕ ಚುನಾವಣೆ
[ಬದಲಾಯಿಸಿ]1989ರಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದ ರಾಜೀವಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಅಧಿಕಾರ ಕಳೆದುಕೊಂಡಿತು. ವಿಶ್ವನಾಥ್ ಪ್ರತಾಪ್ ಸಿಂಗ್ರವರ ನೇತೃತ್ವದಲ್ಲಿ ರಾಷ್ಟ್ರೀಯ ರಂಗ ಬಿ.ಜೆ.ಪಿ.ಯ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿತು. ಆದರೆ ಕೆಲವೇ ತಿಂಗಳ ಅವಧಿಯಲ್ಲಿ ಅವರ ಸರಕಾರ ಅಧಿಕಾರ ಕಳೆದುಕೊಂಡಿತು. ಆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿತು. ಈ ಅವಧಿಯಲ್ಲಿ ಬಲಪಂಥೀಯ ಮತ್ತು ಮತೀಯ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ತಲೆಯೆತ್ತಿದ್ದನ್ನು ಕಾಣಬಹುದು. ಹೊಸ ಆರ್ಥಿಕ ನೀತಿಯ ಹುಟ್ಟಿನ ಮೂಲಗಳನ್ನು ಈ ಅವಧಿಯಲ್ಲಿನ ಆಗುಹೋಗುಗಳಲ್ಲಿ ಗುರುತಿಸಬಹುದಾಗಿದೆ. ಇದೇ ಸಂದÀರ್ಭದಲ್ಲಿ ಮತೀಯ ಶಕ್ತಿಗಳು ಕೋಮು ಸೌಹಾರ್ದವನ್ನು ನಾಶಗೊಳಿಸಿ ತಮ್ಮ ಅಟ್ಟಹಾಸವನ್ನು ಮೆರೆದವು. ಕಾಂಗ್ರೆಸ್ ಪಕ್ಷವೂ ಹಿಂದುತ್ವದ ಪ್ರತಿಪಾದಕರನ್ನು ವಿರೋಧಿಸುವುದಿರಲಿ, ಅವರನ್ನು ನಿಯಂತ್ರಿಸುವ ಗೋಜಿಗೂ ಹೋಗಲಿಲ್ಲ. ಕಮ್ಯುನಿಸ್ಟ್ ಪಕ್ಷಗಳು ಮಾತ್ರ ಹೊಸ ಆರ್ಥಿಕ ನೀತಿಯನ್ನು ಎಂದರೆ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳನ್ನು ಪ್ರಬಲವಾಗಿ ವಿರೋಧಿಸಿದ್ದವು. ಅಲ್ಲದೆ ಕೋಮುವಾದದ ವಿರುದ್ಧದ ಹೋರಾಟಗಳಲ್ಲಿಯು ಪ್ರಮುಖ ಪಾತ್ರ ವಹಿಸುತ್ತಲಿವೆ. ಇತ್ತೀಚಿನ ದಿನಗಳಲ್ಲಿ ಈ ನೀತಿಗಳಿಗೆ ಹೊಂದಿಕೊಳ್ಳುತ್ತಿದೆ.
ಸಮ್ಮಿಶ್ರ ಸರಕಾರ
[ಬದಲಾಯಿಸಿ]1996ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರ ಕಳೆದುಕೊಂಡು, ಆ ಸ್ಥಾನದಲ್ಲಿ ತೃತೀಯ ರಂಗವೆಂಬ ಹೊಸ ಸಮ್ಮಿಶ್ರ ಸರಕಾರ ರಚನೆಯಾಯಿತು. ಭಾರತ ಕಮ್ಯುನಿಸ್ಟ್ ಪಕ್ಷದ ಇಬ್ಬರು ನಾಯಕರು ಕೇಂದ್ರದಲ್ಲಿ ಮಂತ್ರಿಗಳಾದರು. ಅದರಿಂದ ಕಮ್ಯುನಿಸ್ಟ್ ಚಳವಳಿಗೆ ಹೊಸ ತಿರುವೇನೂ ಮೂಡಿಬರಲಿಲ್ಲ. ಮಾರ್ಕಿಸ್ಟ್ ಕಮ್ಯುನಿಸ್ಟ್ ಪಕ್ಷದ ಜ್ಯೋತಿಬಸು ಅವರು ಪ್ರಧಾನ ಮಂತ್ರಿಯಾಗಬಹುದಾಗಿದ್ದ ಅವಕಾಶವನ್ನು ಪಕ್ಷವು ಸೈದ್ಧಾಂತಿಕ ಕಾರಣಗಳನ್ನು ಮುಂದೊಡ್ಡಿ ನಿರಾಕರಿಸಿತು. ಆ ನಿರ್ಧಾರವು ಒಂದು ಚಾರಿತ್ರಿಕ ಪ್ರಮಾದ ಎಂಬುದಾಗಿ ಪಕ್ಷದ ಕೆಲವು ಧುರೀಣರು ವ್ಯಾಖ್ಯಾನಿಸಿದ್ದಾರೆ.
ಸೋವಿಯೆತ್ ಒಕ್ಕೂಟ
[ಬದಲಾಯಿಸಿ]1989-90ರ ವೇಳೆಗೆ ಸೋವಿಯೆತ್ ಒಕ್ಕೂಟದಲ್ಲಿ ಮತ್ತು ಪುರ್ವ ಯುರೋಪ್ ರಾಷ್ಟ್ರಗಳಲ್ಲಿ ಜರುಗಿದ ವಿದ್ಯಮಾನಗಳು ಹಾಗೂ ಅಲ್ಲಿನ ಸಮಾಜವಾದಿ ವ್ಯವಸ್ಥೆಯ ಪತನವು ಅಂತಾರಾಷ್ಟ್ರೀಯ ರಾಜಕೀಯ ಮತ್ತು ಭಾರತದಲ್ಲಿನ ಕಮ್ಯುನಿಸ್ಟ್ ಚಳವಳಿಯ ಮೇಲೆ ಆಗಾಧವಾದ ಪರಿಣಾಮವನ್ನು ಬೀರಿತು. ಭಾರತ ಕಮ್ಯುನಿಸ್ಟ್ ಪಕ್ಷ ಇದರಿಂದ ತಲ್ಲಣಗೊಂಡರೂ ತನ್ನ ಹೋರಾಟಗಳನ್ನು ಮುಂದುವರೆಸಿಕೊಂಡು ಬಂದಿರುವುದು ವಿಶೇಷ ಸಂಗತಿ. ಚೀನದ ಕಮ್ಯುನಿಸ್ಟ್ ಪಕ್ಷದ ಆರ್ಥಿಕ ಮತ್ತು ಅಂತಾರಾಷ್ಟ್ರೀಯ ನೀತಿ ನಿಲುವುಗಳು ಎಂದಿಗೂ ಅದರ ಪರವಾಗಿರುವ ಮಾಕ್ರ್ಸ್‌ವಾದಿ ಕಮ್ಯುನಿಸ್ಟ್ ಪಕ್ಷಕ್ಕೆ ಬಹುಮಟ್ಟಿಗೆ ಮುಜುಗರ ಉಂಟುಮಾಡಿದೆಯೆಂಬ ಅಂಶವನ್ನು ತಳ್ಳಿಹಾಕಲಾಗದು. ಎರಡೂ ಪಕ್ಷಗಳು ಜನತೆಯ ಮುಂದಿಟ್ಟಿರುವ ತಮ್ಮ ಕಾರ್ಯಕ್ರಮಗಳನ್ನು ತುಲನೆಮಾಡಿ ನೋಡಿದರೆ ಅವರಿಬ್ಬರ ನಡುವೆ ಇದೆಯೆನ್ನಲಾಗಿದ್ದ ಎಷ್ಟೋ ತಾತ್ತ್ವಿಕ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಈಗ ಇರುವಂತಿಲ್ಲ. ರಾಷ್ಟ್ರದ ಮತ್ತು ದುಡಿವ ಜನತೆಯ ಹಿತದೃಷ್ಟಿಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಮಾಕ್ರ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಎರಡೂ ಪಕ್ಷಗಳು ಐಕಮತ್ಯ ಸಾಧಿಸುವಂತಾದರೆ ಭಾರತದ ರಾಜಕಾರಣ ಒಂದು ಹೊಸ ದಿಕ್ಕಿನತ್ತ ಸಾಗಬಹುದಾಗಿದೆ. ಇಲ್ಲಿನ ಪ್ರಭುತ್ವದ ವರ್ಗಸ್ವರೂಪ, ಹೋರಾಟದ ಮಾರ್ಗಗಳು ಮತ್ತು ಕ್ರಾಂತಿಯನ್ನು ಸಾಧಿಸುವ ನಿಟ್ಟಿನಲ್ಲಿ ರೂಪಿಸಬೇಕಾದ ತಂತ್ರಗಳು, ಇವೇ ಕುರಿತಂತೆ ವಿಭಿನ್ನ ವ್ಯಾಖ್ಯಾನ ಮತ್ತು ತಿಳಿವಳಿಕೆಗಳಿಂದಾಗಿ ಕಮ್ಯುನಿಸ್ಟ್ ಚಳವಳಿಯಿಂದ, ಅದರಲ್ಲೂ ಹೆಚ್ಚಿನ ಮಟ್ಟದಲ್ಲಿ ಮಾಕ್ರ್ಸ್‌ವಾದಿ ಪಕ್ಷದಿಂದ ಸಿಡಿದುಹೋದ ಹಾಗೂ ಸಂವಿಧಾನ ಬಾಹಿರ ಮತ್ತು ಹಿಂಸಾತ್ಮಕ ಹೋರಾಟಗಳಲ್ಲಿ ನಿರತರಾಗಿರುವ ನಕ್ಸಲ್ ಬಾರಿ, ಪೀಪಲ್ಸ್‌ವಾರ್ ಗ್ರೂಪ್ನಂತಹ ಹಲವು ತೀವ್ರಗಾಮಿ ಬಣಗಳು ಜನಸಾಮಾನ್ಯರ, ಕಾರ್ಮಿಕರ, ರೈತ ಸಮುದಾಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಪ್ರಗತಿಪರ ಹೋರಾಟಗಳ ಮುಖ್ಯವಾಹಿನಿಗೆ ಹಿಂತಿರುಗಿಬಂದು ಪ್ರಭುತ್ವದ ಬದಲಾವಣೆಗಾಗಿ ಸಂಘಟಿಸಲಾಗುತ್ತಿರುವ ಸಂಘರ್ಷದಲ್ಲಿ ಭಾಗವಹಿಸುವುದಾದರೆ ಕಮ್ಯುನಿಸ್ಟ್ ಚಳವಳಿಯು ಭಾರತದಲ್ಲಿ ಒಂದು ಪ್ರಬಲ ಹಾಗೂ ನಿರ್ಣಾಯಕ ಶಕ್ತಿಯಾಗಿ ರೂಪುಗೊಳ್ಳುವು ಕಾಲ ದೂರ ಉಳಿದಿಲ್ಲ.
ಉಲ್ಲೇಖಗಳು
[ಬದಲಾಯಿಸಿ]