ಕರ್ನಾಟಕ ಸಾಹಿತ್ಯ ಅಕಾಡೆಮಿ
ಸಂಕ್ಷಿಪ್ತ ಹೆಸರು | ಕ.ಸಾ.ಅ |
---|---|
ಸ್ಥಾಪನೆ | 1961 |
ಪ್ರಧಾನ ಕಚೇರಿ | ಕನ್ನಡ ಭವನ, ಬೆಂಗಳೂರು |
ಸ್ಥಳ | |
ಪ್ರದೇಶ served | ಕರ್ನಾಟಕ |
ಅಧಿಕೃತ ಭಾಷೆ | ಕನ್ನಡ |
ಅಧ್ಯಕ್ಷರು | ಬಿ.ವಿ.ವಸಂತಕುಮಾರ್ |
ಪೋಷಕ ಸಂಸ್ಥೆಗಳು | ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ |
ಅಧಿಕೃತ ಜಾಲತಾಣ | ಸಾಹಿತ್ಯ ಅಕಾಡೆಮಿ |
ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಸಾಹಿತ್ಯವನ್ನು ಉತ್ತೇಜಿಸಲು ಕರ್ನಾಟಕ ಸರಕಾರ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕನ್ನಡ ಸಾಹಿತ್ಯವನ್ನು ಉತ್ತೇಜಿಸಲು ಅನೇಕ ಕಾರ್ಯ ಚಟುವಟಿಕೆಗಳನ್ನು ನಡೆಸುವುದು. ಇವುಗಳಲ್ಲಿ, ಪ್ರಶಸ್ತಿಗಳನ್ನು ನೀಡುವ ಮೂಲಕ ಸಾಹಿತ್ಯದ ಅರ್ಹತೆಯನ್ನು ಗುರುತಿಸುವುದು, ಒಂದು ಮುಖ್ಯವಾದ ಕಾರ್ಯವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಮತ್ತು ಕರ್ನಾಟಕ ಸರ್ಕಾರದಿಂದ ಸಂಪೂರ್ಣವಾಗಿ ಹಣವನ್ನು ಪಡೆದುಕೊಳ್ಳುತ್ತದೆ.
ಹಿನ್ನೆಲೆ
[ಬದಲಾಯಿಸಿ]ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ರೂಪುಗೊಂಡ ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ ಜನಪ್ರಿಯ ಗ್ರಂಥಗಳನ್ನು ಪ್ರಕಟಿಸಿತು. ಕೆಲವು ವರ್ಷಗಳ ನಂತರ ಮೈಸೂರು ರಾಜ್ಯ ಸಾಹಿತ್ಯ ಅಕಾಡೆಮಿಯು 1961ರಲ್ಲಿ ಅಸ್ತಿತ್ವಕ್ಕೆ ಬಂದಿತು. ಮೊದಲಿಗೆ ರಾಜ್ಯ ಶಿಕ್ಷಣ ಸಚಿವರೇ ಅಕಾಡೆಮಿಯ ಅಧ್ಯಕ್ಷರಾಗಿರುತ್ತಿದ್ದರು. ನಂತರ ಖ್ಯಾತ ಸಾಹಿತಿಗಳಾದ ಶ್ರೀ ಎ ಎನ್ ಮೂರ್ತಿರಾವ್, ಪ್ರೊ. ಸಿ ಕೆ ವೆಂಕಟರಾಮಯ್ಯ, ಖ್ಯಾತ ಶಿಕ್ಷಣ ತಜ್ಞ ಪ್ರೊ. ಕೆ ಎಸ್ ಧರಣೇಂದ್ರಯ್ಯ ಮುಂತಾದವರು ನಿರ್ದೇಶಕರಾಗಿ ಅಕಾಡೆಮಿಯ ಕಾರ್ಯ ನಿರ್ವಹಿಸಿದರು. ಮೈಸೂರು ರಾಜ್ಯದ ಹೆಸರು 1973ರಲ್ಲಿ “ಕರ್ನಾಟಕ” ಎಂದು ನಾಮಕರಣವಾದ ಮೇಲೆ ‘ಮೈಸೂರು ರಾಜ್ಯ ಸಾಹಿತ್ಯ ಅಕಾಡೆಮಿ’ಯು `ಕರ್ನಾಟಕ ಸಾಹಿತ್ಯ ಅಕಾಡೆಮಿ’ ಎಂಬ ಹೆಸರನ್ನು ಪಡೆಯಿತು. ಅಕಾಡೆಮಿಯ ಸ್ವರೂಪವು ಕಾಲದಿಂದ ಕಾಲಕ್ಕೆ ಬದಲಾವಣೆಯನ್ನು ಹೊಂದುತ್ತಾ ಬಂದಿದೆ. ಪ್ರಾರಂಭದಲ್ಲಿ ಅಕಾಡೆಮಿಯ ಕಾರ್ಯವನ್ನು ಸರ್ಕಾರವೇ ನಿರ್ವಹಿಸುತ್ತಿತ್ತು. ರಾಜ್ಯದ ಶಿಕ್ಷಣ ಸಚಿವರು ಅಕಾಡೆಮಿಯ ಅಧ್ಯಕ್ಷರಾಗಿಯೂ ಉಪ ಶಿಕ್ಷಣ ಸಚಿವರು ಉಪಾಧ್ಯಕ್ಷರಾಗಿಯೂ ಇರುತ್ತಿದ್ದರು. ಆನಂತರ ನಾಡಿನ ಹಿರಿಯ ಸಾಹಿತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಅಕಾಡೆಮಿ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಒಂದು ಭಾಗವಾಗಿದ್ದರೂ ಅದಕ್ಕೆ ಆಂತರಿಕ ಸ್ವಾಯತ್ತತೆಯನ್ನು ಕೊಟ್ಟು, ನವೆಂಬರ್ 1977ರಲ್ಲಿ ಕರ್ನಾಟಕ ಸರ್ಕಾರ ಅದರ ಸಂವಿಧಾನದಲ್ಲಿ ಅನೇಕ ತಿದ್ದುಪಡಿಯನ್ನ್ಲು ಮಾಡಿ ಅಕಾಡೆಮಿಗಳ ಸನ್ನದನ್ನು (ಚಾರ್ಟರ್) ಪ್ರಕಟಿಸಿದೆ. ಅದರ ಪ್ರಕಾರ ಅಕಾಡೆಮಿಯ ಅಧ್ಯಕ್ಷ ಹಾಗೂ ಸದಸ್ಯರನ್ನು ಸರ್ಕಾರವೇ ನಾಮಕರಣ ಮಾಡುತ್ತದೆ. ಈ ನಾಮನಿರ್ದೇಶಿತ ಮಂಡಳಿಯು ಸಹ-ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಅಕಾಡೆಮಿಯ ನಿಯತ ಕಾರ್ಯನಿರ್ವಹಣೆಗೆ ಒಂದು ಕಾರ್ಯ ನಿರ್ವಾಹಕ ಸಮಿತಿಯನ್ನು ರೂಪಿಸಿಕೊಳ್ಳಬಹುದಾಗಿದೆ. ಅಲ್ಲದೆ, ಅಗತ್ಯಕ್ಕೆ ತಕ್ಕಂತೆ ಉಪ-ಸಮಿತಿಗಳನ್ನು ರಚಿಸಿಕೊಳ್ಳುವ ಅಧಿಕಾರ ಅಕಾಡೆಮಿಗೆ ಇದೆ. ಅಕಾಡೆಮಿಯ ಅಧ್ಯಕ್ಷರು, ರಿಜಿಸ್ಟ್ರಾರರು ಮತ್ತು ಅರ್ಥ ಸದಸ್ಯರು ಅಕಾಡೆಮಿಯ ಪದಾಧಿಕಾರಿಗಳಾಗಿರುತ್ತಾರೆ. ರಿಜಿಸ್ಟ್ರಾರ್ ಮತ್ತು ಅರ್ಥ ಸದಸ್ಯರಾದ ಲೆಕ್ಕಾಧಿಕಾರಿಗಳು ಸರ್ಕಾರಿ ಅಧಿಕಾರಿಗಳಾಗಿರುತ್ತಾರೆ. ರಿಜಿಸ್ಟ್ರಾರರು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೂ ಆಗಿರುತ್ತಾರೆ.
ಧ್ಯೇಯೋದ್ದೇಶಗಳು
[ಬದಲಾಯಿಸಿ]1977ರ ಅಕಾಡೆಮಿಯ ಚಾರ್ಟರ್ ಪ್ರಕಾರ ಸಾಹಿತ್ಯ ಅಕಾಡೆಮಿಯ ಕೆಲವು ಮುಖ್ಯ ಧ್ಯೇಯೋದ್ದೇಶಗಳು ಈ ರೀತಿ ಇವೆ:
- ಸಾಹಿತ್ಯ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆಗಳಿಗೆ ಪ್ರೋತ್ಸಾಹ ಮತ್ತು ಈ ಉದ್ದೇಶಗಳಿಗಾಗಿ ಸಂಸ್ಥೆಗಳ ಗ್ರಂಥಾಲಯ ಸ್ಥಾಪನೆ.
- ಸಾಹಿತ್ಯದ ಅಭಿವೃದ್ಧಿ ಹಾಗೂ ಅಂಥ ಉದ್ದೇಶಗಳ ಈಡೇರಿಕೆಯ ದೃಷ್ಟಿಯಿಂದ ಸಮಾನೋದ್ದೇಶ ಹೊಂದಿದ ರಾಜ್ಯದಲ್ಲಿನ ಇತರ ಸಂಘಗಳೊಡನೆ ಸಹಕರಿಸುವುದು.
- ವಿವಿಧ ಪ್ರದೇಶಗಳ ನಡುವೆ ಸಾಹಿತ್ಯ ವಿಚಾರ ವಿನಿಮಯ ನಡೆಸುವುದು.
- ದೇಣಿಗೆಗಳ ಮೂಲಕ ತನ್ನ ಕಾರ್ಯೋದ್ದೇಶಗಳಿಗೆ ಹಣವನ್ನು ಸಂಗ್ರಹಿಸುವುದು.
- ಗ್ರಂಥಗಳ ಸಂಗ್ರಹ ಮತ್ತು ಪ್ರಕಟಣೆ
- ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಅಥವಾ ಕೇಂದ್ರ ಸಾಹಿತ್ಯ ಅಕಾಡೆಮಿಯಾಗಲಿ ಕೇಳಿದಾಗ ಸಲಹೆ ನೀಡುವುದು.
- ಸಾಹಿತ್ಯೋತ್ಸವಗಳನ್ನು ನಡೆಸುವುದು.
- ಉನ್ನತ ಶಿಕ್ಷಣಕ್ಕೆ, ಸಂಶೋಧನ ವೇತನಗಳಿಗೆ ಶಿಫಾರಸು ಮಾಡುವುದು.
- ಅಸಹಾಯಕರಾದ, ವೃದ್ಧರಾದ ಲೇಖಕರಿಗೆ ಅವರು ಸಲ್ಲಿಸಿರುವ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಆರ್ಥಿಕ ಸಹಾಯಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡುವುದು.
- ತನ್ನ ಧ್ಯೇಯೋದ್ದೇಶಗಳನ್ನು ಸಾಧಿಸಲು ಅಗತ್ಯವಿರುವ ಎಲ್ಲ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.
ಅಕಾಡೆಮಿಯ ಕಾರ್ಯಚಟುವಟಿಕೆ
[ಬದಲಾಯಿಸಿ]ಸಾಹಿತ್ಯ ಅಕಾಡೆಮಿಯ ಕೆಲವು ಕಾರ್ಯಕ್ರಮಗಳು ನಿಶ್ಚಿತ ಹಾಗೂ ಆವರ್ತಕ ಸ್ವರೂಪದವುಗಳು. ಕಮ್ಮಟಗಳನ್ನು ಏರ್ಪಡಿಸುವುದು. ವಿಚಾರ ಸಂಕಿರಣಗಳನ್ನು ವ್ಯವಸ್ಥೆಗೊಳಿಸುವುದು. ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಮಾಡುವುದು. ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸೇರಿದ ಪುಸ್ತಕಗಳಿಗೆ ಬಹುಮಾನಗಳನ್ನು ನೀಡುವುದು. ಪ್ರತಿಷ್ಠಿತ ಸಾಹಿತಿಗಳಿಗೆ ಪ್ರಶಸ್ತಿಗಳನ್ನು ನೀಡುವುದು. ತ್ರೈಮಾಸಿಕ ಪತ್ರಿಕೆ ಹಾಗೂ ವಿವಿಧ ವಾರ್ಷಿಕ ಸಂಕಲನ, ಇತರ ಪುಸ್ತಕಗಳನ್ನು ಪ್ರಕಟಿಸುವುದು. ಇದೆಲ್ಲದರ ಜೊತೆಗೆ ಅಕಾಡೆಮಿಯ ಕಾರ್ಯನಿರ್ವಹಣೆಗಾಗಿ ಉಪನಿಬಂಧನೆ (ಬೈಲಾ)ಗಳನ್ನು ರೂಪಿಸಿದ್ದು, ಅಕಾಡೆಮಿಯ ಪ್ರತಿಯೊಂದು ಕಾರ್ಯಕ್ರಮ, ಪ್ರಕಟಣೆ ಮತ್ತಿತರ ಕಾರ್ಯವಿಧಾನಗಳಲ್ಲಿ ಅಕಾಡೆಮಿ ಅನುಸರಿಸಬೇಕಾದ ಆರ್ಥಿಕ ನೀತಿಯನ್ನು ಈ ಬೈಲಾಗಳಲ್ಲಿ ಖಚಿತವಾಗಿ ಉಲ್ಲೇಖಿಸಲಾಗಿದೆÉ. ಇದರಿಂದಾಗಿ ಅಕಾಡೆಮಿಯ ಕಾರ್ಯನಿರ್ವಹಣೆಗೆ ಒಂದು ನಿರ್ದಿಷ್ಟ ಚೌಕಟ್ಟು ದೊರಕಿದೆ. ಪ್ರವಾಸ ಅನುದಾನ: ಕನ್ನಡ ಲೇಖಕರು ಕರ್ನಾಟಕದ ಹೊರಗಿನ ಭಾರತದ ಇತರ ಭಾಷಾವಲಯಗಳಿಗೆ ಹೋಗಿ ಅಲ್ಲಿನ ಲೇಖಕರನ್ನು, ಸಾಹಿತ್ಯ ಸಂಸ್ಥೆಗಳನ್ನು ಪರಿಚಯ ಮಾಡಿಕೊಳ್ಳುವ ಸಾಹಿತ್ಯದ ಸಾಂಸ್ಕøತಿಕ ಪ್ರವಾಸವನ್ನು ಕೈಗೊಳ್ಳಲು ಅನುದಾನ ನೀಡುವುದು. ಹೀಗೆ ಪ್ರವಾಸ ಹೋಗಿಬಂದ ಲೇಖಕರು ನೀಡುವ ಸೃಜನಾತ್ಮಕ ಸ್ವರೂಪದ ಬರಹಗಳನ್ನು ಪ್ರವಾಸ ಸಾಹಿತ್ಯ ಮಾಲೆ ಎಂಬ ಹೆಸರಿನಲ್ಲಿ ಪ್ರಕಟಿಸಲಾಗುತ್ತದೆ. ವಿಚಾರ ಸಂಕಿರಣ: ಅಕಾಡೆಮಿ ತಾನೆ ನೇರವಾಗಿ ವಿಚಾರ ಸಂಕಿರಣಗಳನ್ನು ಸಂಘಟಿಸುವುದರ ಜೊತೆಗೆ ವಿವಿಧ ಸಾಹಿತ್ಯ ಸಂಘ-ಸಂಸ್ಥೆಗಳ ಸಹಯೋಗದೊಡನೆ ವಿಚಾರ ಸಂಕಿರಣಗಳನ್ನು ನಡೆಸುತ್ತದೆ. ಕಮ್ಮಟಗಳು: ಉದಯೋನ್ಮುಖ ಲೇಖಕರಿಗಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವರ್ಷಕ್ಕೆ ಎರಡು ಕಮ್ಮಟಗಳನ್ನು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ. ಪ್ರತಿಯೊಂದು ಕಮ್ಮಟದಲ್ಲಿ ಸುಮಾರು 30 ಜನ ಉದಯೋನ್ಮುಖ ಲೇಖಕರು ಭಾಗವಹಿಸುತ್ತಾರೆ. ಆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ವಿದ್ವಾಂಸರುಗಳಿಂದ ಪ್ರವಚನ, ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ಯುವಕವಿ ಸಮ್ಮೇಳನ: 30ವರ್ಷ ವಯಸ್ಸಿನ ಒಳಗಿರುವ ಕನ್ನಡ ಕವಿಗಳಿಂದ ತಲಾ 3 ರಂತೆ ಕವಿತೆಗಳನ್ನು ಬರಮಾಡಿಕೊಂಡು, ಹಾಗೆ ಬಂದ ಕವಿತೆಗಳ ಪೈಕಿ ಪರಿಶೀಲನಾ ಸಮಿತಿಯು ಆಯ್ಕೆ ಮಾಡಿದ ಕವಿತೆಗಳನ್ನು ರಚಿಸಿದ ಕವಿಗಳ ಸಮ್ಮೇಳನವನ್ನು “ಯುವಕವಿ ಸಮ್ಮೇಳನ” ಎಂಬ ಹೆಸರಿನಲ್ಲಿ ಪ್ರತಿವರ್ಷ ನಡೆಸಲಾಗುತ್ತದೆ. ಈ ಕವಿಸಮ್ಮೇಳನದಲ್ಲಿ ಮಂಡಿತವಾದ ಕವಿತೆಗಳನ್ನು “ಯುವಕಾವ್ಯ” ಎಂಬ ಹೆಸರಿನ ಸಂಕಲನವಾಗಿ ಅಕಾಡೆಮಿ ಪ್ರಕಟಿಸುತ್ತಿದೆ. ಪುಸ್ತಕಗಳ ಕೊಡುಗೆ: ಇತರ ಭಾಷಾವಲಯಗಳಲ್ಲಿರುವ ಕನ್ನಡಿಗರಿಗೆ ಕನ್ನಡ ಸಾಹಿತ್ಯದ ಸಂಬಂಧ ಕಡಿದು ಹೋಗಬಾರದೆಂಬ ಉದ್ದೇಶದಿಂದ ಅಲ್ಲಿನ ಗ್ರಂಥ ಭಂಡಾರವನ್ನು ಬೆಳೆಸುವ ಸಲುವಾಗಿ ಕರ್ನಾಟಕದ ಹೊರಗಿನ ಸಂಘ-ಸಂಸ್ಥೆಗಳಿಗೆ ಅಕಾಡೆಮಿ ಪ್ರಕಟಣೆಗಳ ಜೊತೆಗೆ ಎರಡು ಸಾವಿರ ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರಕಟಣೆಗಳು: ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ಸಣ್ಣಕತೆ, ಕವಿತೆ, ವಿಮರ್ಶೆ, ಪ್ರಬಂಧ, ಮಕ್ಕಳ ಸಾಹಿತ್ಯ, ವಿನೋದ ಸಾಹಿತ್ಯ, ಈ ಲೇಖನಗಳಲ್ಲಿ ಉತ್ತಮವಾದುದನ್ನು ಆಯ್ದು ಪ್ರತಿವರ್ಷ ಪ್ರಕಟಿಸಲಾಗುತ್ತದೆ. ಅಕಾಡೆಮಿಯ ಈ ವಾರ್ಷಿಕ ಸಂಕಲನಗಳ ಜೊತೆಗೆ ಅಕಾಡೆಮಿ ನೇರವಾಗಿ ನಡೆಸಿದ ವಿಚಾರ ಸಂಕಿರಣಗಳ ಪ್ರಬಂಧಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಹೊರತರಲಾಗುತ್ತಿದೆ. ಅಕಾಡೆಮಿಯ ಕಾರ್ಯಕ್ರಮಗಳನ್ನು ಸಾಹಿತ್ಯಾಸಕ್ತರಿಗೆ ತಿಳಿಯಪಡಿಸಲು ದ್ವೈಮಾಸಿಕ ವಾರ್ತಾಪತ್ರವೊಂದನ್ನು ಅಕಾಡೆಮಿ ಹೊರತರುತ್ತಿದೆ. ಕನ್ನಡೇತರ ಹಾಗೂ ಜಾಗತಿಕ ಸಾಹಿತ್ಯದ ಪರಿಚಯವನ್ನು ಕನ್ನಡಿಗರಿಗೆ ಅನುವಾದಗಳ ಮೂಲಕ ಮಾಡಿಕೊಡುವ ಉದ್ದೇಶಕ್ಕೆ ಬದ್ಧವಾಗಿ ಕನ್ನಡ ‘ಅನಿಕೇತನ’ ಪತ್ರಿಕೆಯನ್ನು, ಕನ್ನಡೇತರರಿಗೆ ಕನ್ನಡ ಸಾಹಿತ್ಯವನ್ನು ಪರಿಚಯ ಮಾಡಿಕೊಡುವ ದೃಷ್ಟಿಯಿಂದ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‍ಗೆ ಅನುವಾದಿಸಿ ‘ಇಂಗ್ಲಿಷ್ ಅನಿಕೇತನ’ವನ್ನು ಹೊರತರುತ್ತಿದೆ. ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ಅನಿಕೇತನ (ಕನ್ನಡ ಹಾಗೂ ಇಂಗ್ಲಿಷ್) ಸಂಪೂರ್ಣ ಅನುವಾದಕ್ಕೆ ಮೀಸಲಾಗಿರುವುದು ವಿಶೇಷದ ಸಂಗತಿ. ಸಾಹಿತ್ಯ ಅಕಾಡೆಮಿಯ ಬೆಳ್ಳಿಹಬ್ಬದ ಅಂಗವಾಗಿ ‘ಭಾರತೀಯ ಸಾಹಿತ್ಯ ಸಮೀಕ್ಷೆ’ ಹಾಗೂ ‘ಸಾಹಿತ್ಯ ಪಾರಿಭಾಷಿಕ’ಗಳ ಪ್ರಕಟಣೆಯನ್ನು ಮಾಡಲಾಗಿದೆ. ಹೊಸಗನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿರುವ ಸಾಹಿತಿಗಳ ಜೀವನ ಮತ್ತು ಕೃತಿಗಳನ್ನು ಪರಿಚಯ ಮಾಡಿಕೊಡುವ ‘ಸಾಲು ದೀಪಗಳು’ ಎಂಬ ಗ್ರಂಥವನ್ನು ಪ್ರಕಟಿಸಲಾಗಿದೆ. ಇಷ್ಟರಲ್ಲಿಯೇ ಇದರ ಪರಿಷ್ಕøತ ವಿಸ್ತರಿತ ಆವೃತ್ತಿ ಹೊರಬರುತ್ತಿದೆ. ಪುಸ್ತಕ ಬಹುಮಾನ: ಅಕಾಡೆಮಿಯು ಪ್ರತಿವರ್ಷ ಕನ್ನಡದಲ್ಲಿ ಪ್ರಥಮಾವೃತ್ತಿಯಾಗಿ ಪ್ರಕಟವಾಗುವ 18 ಸಾಹಿತ್ಯ ಪ್ರಕಾರಗಳಲ್ಲಿನ ಉತ್ತಮ ಪುಸ್ತಕಗಳಿಗೆ ಬಹುಮಾನವನ್ನು ನೀಡುತ್ತಿದೆ. ಇದಲ್ಲದೆ, ಸೃಜನಶೀಲ ಹಾಗೂ ಸೃಜನೇತರ ವಿಭಾಗದಲ್ಲಿ ಆ ವರ್ಷ ಅತ್ಯುತ್ತಮವೆಂದು ಕಂಡುಬಂದ ಕೃತಿಗಳಿಗೂ ಬಹುಮಾನವನ್ನು ನೀಡುತ್ತಿದೆ. ‘ಅಮೆರಿಕನ್ನಡ’ ಸಂಘಗಳ ಹಾಗೂ ಕನ್ನಡಿಗರ ಕೊಡುಗೆಯಿಂದಾಗಿ ಸಾಹಿತ್ಯ ಅಕಾಡೆಮಿಯು ಕನ್ನಡದಿಂದ ಇಂಗ್ಲಿಷ್‍ಗೆ ಅನುವಾದಿತವಾಗಿರುವ ಸೃಜನಶೀಲ ಕೃತಿಯೊಂದಕ್ಕೆ ಬಹುಮಾನವನ್ನು ನೀಡುತ್ತಿದೆ. ಗೌರವ ಪ್ರಶಸ್ತಿ: ಕನ್ನಡ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿರುವ ಕನ್ನಡದ ಐದು ಜನ ಸಾಹಿತಿಗಳಿಗೆ ಪ್ರತಿವರ್ಷ ಗೌರವ ಪ್ರಶಸ್ತಿಯನ್ನು ನೀಡುವ ಮೂಲಕ ಸನ್ಮಾನಿಸಲಾಗುವುದು. ಅಂತರಜಾಲ ತಾಣ: ಕನ್ನಡ ಸಾಹಿತ್ಯ ಅಕಾಡೆಮಿಯ ಚಟುವಟಿಕೆಗಳು ಹಾಗೂ ಕನ್ನಡ ಸಾಹಿತ್ಯದ ಇತರ ಮಾಹಿತಿಯನ್ನು ವಿಶ್ವದ ಎಲ್ಲೆಡೆ ಇರುವ ಕನ್ನಡಿಗರಿಗೆ ಒದಗಿಸಲು ಅಕಾಡೆಮಿಯ ಅಂತರಜಾಲ ತಾಣವನ್ನು ರೂಪಿಸಿದೆ.
ಈವರೆಗಿನ ಅಧ್ಯಕ್ಷರು
[ಬದಲಾಯಿಸಿ]# | ಅಧ್ಯಕ್ಷರು | ಅವಧಿ |
---|---|---|
01 | ಎಸ್. ಆರ್. ಕಂಠಿ | 1961–1966 |
02 | ಕೆ. ವಿ. ಶಂಕರೇಗೌಡ | 1968–1970 |
03 | ಅ. ನ. ಕೃಷ್ಣರಾವ್ | 1970–1971 |
04 | ಆದ್ಯ ರಂಗಾಚಾರ್ಯ | 1971–1972 |
05 | ಎ. ಆರ್. ಬದರೀನಾರಾಯಣ್ | 1973–1974 |
06 | ಎಂ. ಮಲ್ಲಿಕಾರ್ಜುನಸ್ವಾಮಿ | 1974–1975 |
07 | ಆರ್. ಗುಂಡೂರಾವ್ | 1976–1976 |
08 | ಕೆ. ಎಚ್. ಶ್ರೀನಿವಾಸ್ | 1976–1976 |
09 | ಎಂ. ಶಿವರಾಂ | 1978–1980 |
10 | ಹಾ. ಮಾ. ನಾಯಕ | 1980–1984 |
11 | ಕೆ. ಎಸ್. ನಿಸಾರ್ ಅಹಮದ್ | 1984–1987 |
12 | ಜಿ. ಎಸ್. ಶಿವರುದ್ರಪ್ಪ | 1987–1990 |
13 | ಬರಗೂರು ರಾಮಚಂದ್ರಪ್ಪ | 1991–1995 |
14 | ಶಾಂತರಸ | 1995–1998 |
15 | ಗಿರಡ್ಡಿ ಗೋವಿಂದರಾಜ | 1998–2001 |
16 | ಗುರುಲಿಂಗ ಕಾಪಸೆ | 2001–2004 |
17 | ಗೀತಾ ನಾಗಭೂಷಣ | 2005–2008 |
18 | ಎಂ. ಎಚ್. ಕೃಷ್ಣಯ್ಯ | 2008–2011 |
19 | ಮಾಲತಿ ಪಟ್ಟಣಶೆಟ್ಟಿ | 2014–2017 |
20 | ಅರವಿಂದ ಮಾಲಗತ್ತಿ | 2017–2019 |
21 | ಬಿ. ವಿ. ವಸಂತಕುಮಾರ್ | 2019– |